ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w04 11/1 ಪು. 13-18
  • ಹಿಂಸಿಸಲ್ಪಟ್ಟರೂ ಸಂತೋಷಿತರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹಿಂಸಿಸಲ್ಪಟ್ಟರೂ ಸಂತೋಷಿತರು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನೀತಿಯ ನಿಮಿತ್ತವಾಗಿ ಕಷ್ಟಾನುಭವಿಸುವುದು
  • ಕ್ರಿಸ್ತನ ನಿಮಿತ್ತ ನಿಂದಿಸಲ್ಪಡುವುದು
  • ಪ್ರವಾದಿಗಳಂತೆ ಹಿಂಸೆಯನ್ನು ಅನುಭವಿಸಲು ಸಂತೋಷಿತರು
  • ಸಂತೋಷಭರಿತರಾಗಿರಲು ಬಲವಾದ ಕಾರಣಗಳು
  • ಸಿಗುವ ಪ್ರತಿಫಲಕ್ಕಾಗಿ ಉಲ್ಲಾಸಪಡಿರಿ
  • ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಟ್ಟವರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಸಂತೋಷದಿಂದಿರಲು ನಿಜವಾಗಿಯೂ ಯಾವುದರ ಅಗತ್ಯವಿದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ಹಿಂಸೆ ಬಂದಾಗಲೂ ಖುಷಿಯಾಗಿರಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಹಿಂಸೆಯನ್ನ ತಾಳಿಕೊಳ್ಳೋಕೆ ನಿಮ್ಮಿಂದ ಖಂಡಿತ ಆಗುತ್ತೆ!
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
w04 11/1 ಪು. 13-18

ಹಿಂಸಿಸಲ್ಪಟ್ಟರೂ ಸಂತೋಷಿತರು

“ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು [ಸಂತೋಷಿತರು].”​—ಮತ್ತಾಯ 5:11.

1. ಸಂತೋಷ ಮತ್ತು ಹಿಂಸೆಯ ವಿಷಯದಲ್ಲಿ ಯೇಸು ತನ್ನ ಶಿಷ್ಯರಿಗೆ ಯಾವ ಆಶ್ವಾಸನೆಯನ್ನು ಕೊಟ್ಟನು?

ಯೇಸು ಪ್ರಥಮವಾಗಿ ತನ್ನ ಅಪೊಸ್ತಲರನ್ನು ರಾಜ್ಯದ ಕುರಿತು ಸಾರಲಿಕ್ಕಾಗಿ ಕಳುಹಿಸುವಾಗ, ಅವರು ವಿರೋಧವನ್ನು ಎದುರಿಸಬೇಕಾಗುವುದು ಎಂಬ ಎಚ್ಚರಿಕೆಯನ್ನು ಕೊಟ್ಟನು. ಅವನು ಅವರಿಗೆ ಹೇಳಿದ್ದು: “ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು.” (ಮತ್ತಾಯ 10:5-18, 22) ಆದರೂ, ಇದಕ್ಕೆ ಮುಂಚೆ ತನ್ನ ಪರ್ವತಪ್ರಸಂಗದಲ್ಲಿ, ಇಂಥ ವಿರೋಧವು ಅವರ ಆಳವಾದ ಸಂತೋಷವನ್ನು ಅಗತ್ಯವಾಗಿ ಹಾಳುಮಾಡಲಾರದು ಎಂಬ ಆಶ್ವಾಸನೆಯನ್ನು ಅವನು ತನ್ನ ಅಪೊಸ್ತಲರಿಗೆ ಮತ್ತು ಇನ್ನಿತರರಿಗೆ ನೀಡಿದ್ದನು. ವಾಸ್ತವದಲ್ಲಿ, ಸಂತೋಷಭರಿತರಾಗಿರುವುದನ್ನು ಯೇಸು ಕ್ರೈಸ್ತರೋಪಾದಿ ಹಿಂಸಿಸಲ್ಪಡುವುದಕ್ಕೂ ಸಂಬಂಧಿಸಿ ಮಾತಾಡಿದ್ದನು! ಹಾಗಾದರೆ ಹಿಂಸೆಯು ಹೇಗೆ ಸಂತೋಷವನ್ನು ಬರಮಾಡಸಾಧ್ಯವಿದೆ?

ನೀತಿಯ ನಿಮಿತ್ತವಾಗಿ ಕಷ್ಟಾನುಭವಿಸುವುದು

2. ಯೇಸು ಮತ್ತು ಅಪೊಸ್ತಲ ಪೇತ್ರನಿಗನುಸಾರ ಯಾವ ರೀತಿಯ ಕಷ್ಟಾನುಭವವು ಸಂತೋಷವನ್ನು ತರುತ್ತದೆ?

2 ಯೇಸು ತಿಳಿಸಿದ ಸಂತೋಷಕ್ಕಾಗಿರುವ ಎಂಟನೆಯ ಕಾರಣವು ಹೀಗಿದೆ: “ನೀತಿಯ ನಿಮಿತ್ತವಾಗಿ ಹಿಂಸೆಯನ್ನು ತಾಳಿಕೊಳ್ಳುವವರು ಧನ್ಯರು [ಸಂತೋಷಿತರು]; ಪರಲೋಕರಾಜ್ಯವು ಅವರದು.” (ಮತ್ತಾಯ 5:10) ಕೇವಲ ಕಷ್ಟಾನುಭವಿಸುವುದು ತಾನೇ ಪ್ರಶಂಸಾರ್ಹವಾದುದೇನಲ್ಲ. ಅಪೊಸ್ತಲ ಪೇತ್ರನು ಬರೆದುದು: “ತಪ್ಪುಮಾಡಿ ಗುದ್ದು ತಿನ್ನುವದರಲ್ಲಿ ನೀವು ತಾಳ್ಮೆಯಿಂದಿದ್ದರೆ ಅದರಿಂದೇನು ಕೀರ್ತಿ? ಆದರೆ ಒಳ್ಳೇದನ್ನು ಮಾಡಿ ಬಾಧೆಪಡುವದರಲ್ಲಿ ನೀವು ತಾಳ್ಮೆಯಿಂದಿದ್ದರೆ ಅದು ದೇವರ ಮುಂದೆ ಶ್ಲಾಘ್ಯವಾಗಿದೆ.” ಅವನು ಇನ್ನೂ ಮುಂದುವರಿಸುತ್ತಾ ಹೇಳಿದ್ದು: “ನಿಮ್ಮಲ್ಲಿ ಯಾವನಾದರೂ ಕೊಲೆಗಾರನು ಕಳ್ಳನು ದುಷ್ಟನು ಪರಕಾರ್ಯಗಳಲ್ಲಿ ತಲೆಹಾಕುವವನು ಆಗಿದ್ದು ಶಿಕ್ಷಾಪಾತ್ರನಾಗಬಾರದು. ಆದರೆ ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆಪಡದೆ ಆ ಹೆಸರಿನಿಂದಲೇ ದೇವರನ್ನು ಘನಪಡಿಸಲಿ.” (1 ಪೇತ್ರ 2:20; 4:15, 16) ಯೇಸುವಿನ ಮಾತುಗಳಿಗನುಸಾರ, ನೀತಿಯ ನಿಮಿತ್ತವಾಗಿ ಕಷ್ಟವನ್ನು ತಾಳಿಕೊಳ್ಳುವುದು ಸಂತೋಷವನ್ನು ತರುತ್ತದೆ.

3. (ಎ) ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಡುವುದು ಏನನ್ನು ಅರ್ಥೈಸುತ್ತದೆ? (ಬಿ) ಆರಂಭದ ಕ್ರೈಸ್ತರ ಮೇಲೆ ಹಿಂಸೆಯು ಯಾವ ಪರಿಣಾಮವನ್ನು ಬೀರಿತು?

3 ದೇವರ ಚಿತ್ತಕ್ಕೆ ಹಾಗೂ ಆತನ ಆಜ್ಞೆಗಳಿಗೆ ವಿಧೇಯರಾಗುವ ಮೂಲಕ ನಿಜವಾದ ನೀತಿಯು ನಿಷ್ಕರ್ಷಿಸಲ್ಪಡುತ್ತದೆ. ಆದುದರಿಂದ, ನೀತಿಯ ನಿಮಿತ್ತವಾಗಿ ಕಷ್ಟಾನುಭವಿಸುವುದು, ದೇವರ ಮಟ್ಟಗಳನ್ನು ಅಥವಾ ಆವಶ್ಯಕತೆಗಳನ್ನು ಉಲ್ಲಂಘಿಸುವ ಒತ್ತಡವನ್ನು ಪ್ರತಿರೋಧಿಸಿದ್ದರ ಕಾರಣದಿಂದ ಕಷ್ಟಾನುಭವಿಸುವುದನ್ನು ಅರ್ಥೈಸುತ್ತದೆ. ಅಪೊಸ್ತಲರು ಯೇಸುವಿನ ಹೆಸರಿನಲ್ಲಿ ಸಾರುವುದನ್ನು ನಿಲ್ಲಿಸಲು ನಿರಾಕರಿಸಿದ್ದಕ್ಕಾಗಿ ಯೆಹೂದಿ ಮುಖಂಡರಿಂದ ಹಿಂಸೆಗೊಳಗಾದರು. (ಅ. ಕೃತ್ಯಗಳು 4:18-20; 5:27-29, 40) ಇದು ಅವರ ಆನಂದವನ್ನು ಕಸಿದುಕೊಂಡಿತೋ ಅಥವಾ ಅವರ ಸಾರುವಿಕೆಯನ್ನು ನಿಲ್ಲಿಸಿತೋ? ಖಂಡಿತವಾಗಿಯೂ ಇಲ್ಲ! “ಅಪೊಸ್ತಲರು ತಾವು ಆ ಹೆಸರಿನ ನಿಮಿತ್ತವಾಗಿ ಅವಮಾನಪಡುವದಕ್ಕೆ ಯೋಗ್ಯರೆನಿಸಿಕೊಂಡೆವೆಂದು ಸಂತೋಷಿಸುತ್ತಾ ಹಿರೀಸಭೆಯ ಎದುರಿನಿಂದ ಹೊರಟುಹೋಗಿ ಪ್ರತಿದಿನ ಎಡೆಬಿಡದೆ ದೇವಾಲಯದಲ್ಲಿಯೂ ಮನೆಮನೆಯಲ್ಲಿಯೂ ಉಪದೇಶ ಮಾಡುತ್ತಾ ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ ಇದ್ದರು.” (ಅ. ಕೃತ್ಯಗಳು 5:41, 42) ಈ ಹಿಂಸೆಯು ಅವರಿಗೆ ಆನಂದವನ್ನು ತಂದಿತು ಮತ್ತು ಸಾರುವ ಕೆಲಸದಲ್ಲಿನ ಅವರ ಹುರುಪನ್ನು ನವೀಕರಿಸಿತು. ಸಮಯಾನಂತರ, ಚಕ್ರವರ್ತಿಯ ಆರಾಧನೆಯಲ್ಲಿ ಒಳಗೂಡಲು ನಿರಾಕರಿಸಿದ ಕಾರಣ ಆರಂಭದ ಕ್ರೈಸ್ತರು ರೋಮನರಿಂದ ಹಿಂಸಿಸಲ್ಪಟ್ಟರು.

4. ಕ್ರೈಸ್ತರ ಹಿಂಸೆಗೆ ಕೆಲವು ಕಾರಣಗಳು ಯಾವುವು?

4 ಆಧುನಿಕ ಸಮಯಗಳಲ್ಲಿ, ಯೆಹೋವನ ಸಾಕ್ಷಿಗಳು ‘ರಾಜ್ಯದ ಸುವಾರ್ತೆಯನ್ನು’ ಸಾರುವುದನ್ನು ನಿಲ್ಲಿಸಲು ನಿರಾಕರಿಸಿದ ಕಾರಣ ಹಿಂಸಿಸಲ್ಪಟ್ಟಿದ್ದಾರೆ. (ಮತ್ತಾಯ 24:14) ಅವರ ಕ್ರೈಸ್ತ ಕೂಟಗಳ ಮೇಲೆ ನಿಷೇಧವು ಒಡ್ಡಲ್ಪಡುವಾಗ, ಬೈಬಲ್‌ ಆಜ್ಞಾಪಿಸುವಂತೆ, ಸಭೆಯಾಗಿ ಕೂಡಿಕೊಳ್ಳುವುದನ್ನು ಬಿಟ್ಟುಬಿಡುವುದಕ್ಕೆ ಬದಲಾಗಿ ಅವರು ಕಷ್ಟಾನುಭವಿಸಲು ಸಿದ್ಧರಿದ್ದಾರೆ. (ಇಬ್ರಿಯ 10:​24, 25) ಅವರ ಕ್ರೈಸ್ತ ತಾಟಸ್ಥ್ಯದ ಕಾರಣ ಅಥವಾ ಅವರು ರಕ್ತವನ್ನು ದುರುಪಯೋಗಿಸಲು ನಿರಾಕರಿಸಿದ ಕಾರಣಕ್ಕಾಗಿಯೂ ಹಿಂಸಿಸಲ್ಪಟ್ಟಿದ್ದಾರೆ. (ಯೋಹಾನ 17:14; ಅ. ಕೃತ್ಯಗಳು 15:28, 29) ಆದರೂ, ನೀತಿಗಾಗಿರುವ ಈ ನಿಲುವು ದೇವಜನರಿಗೆ ಇಂದು ಅತ್ಯಧಿಕ ಆಂತರಿಕ ಶಾಂತಿಯನ್ನು ಹಾಗೂ ಸಂತೋಷವನ್ನು ತರುತ್ತದೆ.​—1 ಪೇತ್ರ 3:14.

ಕ್ರಿಸ್ತನ ನಿಮಿತ್ತ ನಿಂದಿಸಲ್ಪಡುವುದು

5. ಯಾವ ಮೂಲಭೂತ ಕಾರಣಕ್ಕಾಗಿ ಯೆಹೋವನ ಜನರು ಇಂದು ಹಿಂಸಿಸಲ್ಪಡುತ್ತಾರೆ?

5 ಯೇಸು ತನ್ನ ಪರ್ವತಪ್ರಸಂಗದಲ್ಲಿ ಪರಿಗಣಿಸಿದ ಸಂತೋಷಕ್ಕಾಗಿರುವ ಒಂಬತ್ತನೆಯ ಕಾರಣವು ಸಹ ಹಿಂಸೆಯ ವಿಷಯಕ್ಕೇ ಸಂಬಂಧಿಸಿದ್ದಾಗಿದೆ. ಅವನಂದದ್ದು: “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು [ಸಂತೋಷಿತರು].” (ಮತ್ತಾಯ 5:11) ಯೆಹೋವನ ಜನರು ಹಿಂಸಿಸಲ್ಪಡಲು ಮೂಲಭೂತ ಕಾರಣವು, ಅವರು ಸದ್ಯದ ವಿಷಯಗಳ ವ್ಯವಸ್ಥೆಯ ಭಾಗವಾಗಿಲ್ಲದಿರುವುದೇ ಆಗಿದೆ. ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನೀವು ಲೋಕದ ಕಡೆಯವರಾಗಿರುತ್ತಿದ್ದರೆ ಲೋಕವು ನಿಮ್ಮ ಮೇಲೆ ತನ್ನವರೆಂದು ಮಮತೆ ಇಡುತ್ತಿತ್ತು; ಆದರೆ ನೀವು ಲೋಕದ ಕಡೆಯವರಲ್ಲದೆ ಇರುವದರಿಂದಲೂ ನಾನು ನಿಮ್ಮನ್ನು ಲೋಕದೊಳಗಿಂದ ಆರಿಸಿ ತೆಗೆದುಕೊಂಡಿರುವದರಿಂದಲೂ ಲೋಕವು ನಿಮ್ಮ ಮೇಲೆ ದ್ವೇಷಮಾಡುತ್ತದೆ.” (ಯೋಹಾನ 15:19) ತದ್ರೀತಿಯಲ್ಲಿ ಅಪೊಸ್ತಲ ಪೇತ್ರನು ಹೇಳಿದ್ದು: “ತಾವು ಮಾಡುವ ಅಪರಿಮಿತವಾದ ಪಟಿಂಗತನದಲ್ಲಿ ನೀವು ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯಪಟ್ಟು ನಿಮ್ಮನ್ನು ದೂಷಿಸುತ್ತಾರೆ.”​—1 ಪೇತ್ರ 4:4.

6. (ಎ) ಉಳಿಕೆಯವರು ಮತ್ತು ಅವರ ಸಂಗಡಿಗರು ಏಕೆ ನಿಂದಿಸಲ್ಪಡುತ್ತಾರೆ ಮತ್ತು ಹಿಂಸಿಸಲ್ಪಡುತ್ತಾರೆ? (ಬಿ) ಅಂಥ ನಿಂದೆಯು ನಮ್ಮ ಸಂತೋಷವನ್ನು ಕಡಿಮೆಮಾಡುತ್ತದೋ?

6 ಯೇಸುವಿನ ಹೆಸರಿನಲ್ಲಿ ಸಾರುವುದನ್ನು ನಿಲ್ಲಿಸಲು ನಿರಾಕರಿಸಿದ ಕಾರಣ ಆರಂಭದ ಕ್ರೈಸ್ತರು ಹಿಂಸಿಸಲ್ಪಟ್ಟರು ಎಂಬುದನ್ನು ನಾವೀಗಾಗಲೇ ನೋಡಿದ್ದೇವೆ. ಕ್ರಿಸ್ತನು ತನ್ನ ಹಿಂಬಾಲಕರಿಗೆ ಈ ನೇಮಕವನ್ನು ನೀಡಿದ್ದಾನೆ: “ನೀವು . . . ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರಬೇಕು.” (ಅ. ಕೃತ್ಯಗಳು 1:8) “ಮಹಾ ಸಮೂಹ”ದ ತಮ್ಮ ನಿಷ್ಠಾವಂತ ಸಂಗಡಿಗರ ಸಹಾಯದಿಂದ ಕ್ರಿಸ್ತನ ಅಭಿಷಿಕ್ತ ಸಹೋದರರ ನಂಬಿಗಸ್ತ ಉಳಿಕೆಯವರು ಈ ನೇಮಕವನ್ನು ಅತ್ಯುತ್ಸಾಹದಿಂದ ಪೂರೈಸುತ್ತಿದ್ದಾರೆ. (ಪ್ರಕಟನೆ 7:9) ಆದುದರಿಂದ, ಸೈತಾನನು “ಆಕೆಯ ಸಂತಾನದವರಲ್ಲಿ [“ಸ್ತ್ರೀಯ” ಸಂತಾನ, ದೇವರ ಸಂಸ್ಥೆಯ ಸ್ವರ್ಗೀಯ ಭಾಗ] ಉಳಿದವರ ಮೇಲೆ ಅಂದರೆ ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳಿರುವವರ ಮೇಲೆ” ಯುದ್ಧಮಾಡುತ್ತಾನೆ. (ಪ್ರಕಟನೆ 12:9, 17) ಯೆಹೋವನ ಸಾಕ್ಷಿಗಳೋಪಾದಿ ನಾವು, ದೇವರ ನೀತಿಯ ನೂತನ ಲೋಕದ ಹಾದಿಯಲ್ಲಿ ಅಡ್ಡನಿಂತಿರುವ ಮಾನವ ಸರಕಾರಗಳನ್ನು ಯಾವುದು ನಾಶಮಾಡಲಿದೆಯೋ ಆ ರಾಜ್ಯ ಸರಕಾರದ ಈಗ ಆಳುತ್ತಿರುವ ಅರಸನಾದ ಯೇಸುವಿನ ವಿಷಯದಲ್ಲಿ ಸಾಕ್ಷಿ ನೀಡುತ್ತೇವೆ. (ದಾನಿಯೇಲ 2:44; 2 ಪೇತ್ರ 3:13) ಈ ಕಾರಣದಿಂದಲೇ ನಾವು ನಿಂದಿಸಲ್ಪಡುತ್ತೇವೆ ಮತ್ತು ಹಿಂಸಿಸಲ್ಪಡುತ್ತೇವಾದರೂ ಕ್ರಿಸ್ತನ ಹೆಸರಿನ ನಿಮಿತ್ತವಾಗಿ ಕಷ್ಟಾನುಭವಿಸಲು ನಾವು ಸಂತೋಷಿಸುತ್ತೇವೆ.​—1 ಪೇತ್ರ 4:14.

7, 8. ವಿರೋಧಿಗಳು ಆರಂಭದ ಕ್ರೈಸ್ತರ ವಿರುದ್ಧ ಯಾವ ಸುಳ್ಳಾರೋಪವನ್ನು ಹೊರಿಸಿದರು?

7 ಜನರು ಯೇಸುವಿನ ನಿಮಿತ್ತವಾಗಿ ಅವನ ಹಿಂಬಾಲಕರ ವಿರುದ್ಧ “ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ” ಆಡುವಾಗಲೂ ಅವರು ತಮ್ಮನ್ನು ಸಂತೋಷಿತರನ್ನಾಗಿ ಪರಿಗಣಿಸಿಕೊಳ್ಳಬೇಕು ಎಂದು ಅವನು ಅವರಿಗೆ ತಿಳಿಸಿದನು. (ಓರೆ ಅಕ್ಷರಗಳು ನಮ್ಮವು.) (ಮತ್ತಾಯ 5:​11) ಆರಂಭದ ಕ್ರೈಸ್ತರ ವಿಷಯದಲ್ಲಿ ಇದು ನಿಶ್ಚಯವಾಗಿಯೂ ಸತ್ಯವಾಗಿತ್ತು. ಸಾ.ಶ. 59-61ರ ಸುಮಾರಿಗೆ ಅಪೊಸ್ತಲ ಪೌಲನು ರೋಮ್‌ನಲ್ಲಿ ಬಂಧನದಲ್ಲಿದ್ದಾಗ, ಅಲ್ಲಿನ ಯೆಹೂದಿ ಮುಖಂಡರು ಕ್ರೈಸ್ತರ ಕುರಿತು ಹೇಳಿದ್ದು: “ಆ ಮತದ ವಿಷಯದಲ್ಲಿ ಜನರು ಎಲ್ಲೆಲ್ಲಿಯೂ ವಿರುದ್ಧವಾಗಿ ಮಾತಾಡುತ್ತಾರೆಂಬದೊಂದೇ ನಮಗೆ ಗೊತ್ತದೆ.” (ಅ. ಕೃತ್ಯಗಳು 28:22) ಪೌಲ ಮತ್ತು ಸೀಲರು “ಚಕ್ರವರ್ತಿಯ ಆಜ್ಞೆಗಳಿಗೆ ವಿರುದ್ಧವಾಗಿ” ಕ್ರಿಯೆಗೈಯುವ ಮೂಲಕ “ಲೋಕವನ್ನು ಅಲ್ಲಕಲ್ಲೋಲ ಮಾಡಿ”ದ್ದಾರೆ ಎಂಬ ಆಪಾದನೆಯನ್ನು ಅವರ ಮೇಲೆ ಹೊರಿಸಲಾಯಿತು.​—ಅ. ಕೃತ್ಯಗಳು 17:6, 7.

8 ರೋಮನ್‌ ಚಕ್ರಾಧಿಪತ್ಯದ ಸಮಯದಲ್ಲಿದ್ದ ಕ್ರೈಸ್ತರ ಕುರಿತು ಬರೆಯುತ್ತಾ, ಇತಿಹಾಸಗಾರನಾದ ಕೆ. ಎಸ್‌. ಲಾಟೂರೆಟ್‌ ತಿಳಿಸಿದ್ದು: “ಬೇರೆ ಬೇರೆ ರೀತಿಯ ಸುಳ್ಳು ಆಪಾದನೆಗಳಿದ್ದವು. ಕ್ರೈಸ್ತರು ವಿಧರ್ಮಿ ಆಚರಣೆಗಳಲ್ಲಿ ಭಾಗವಹಿಸಲು ನಿರಾಕರಿಸಿದ್ದರಿಂದ, ಅವರನ್ನು ನಾಸ್ತಿಕರೆಂದು ಆಪಾದಿಸಲಾಯಿತು. ಅವರು ಸಮುದಾಯ ಜೀವನದ​—ವಿಧರ್ಮಿ ಹಬ್ಬಗಳು, ಸಾರ್ವಜನಿಕ ಮನೋರಂಜನೆ . . .​—ಬಹುತೇಕ ವಿಷಯಗಳಲ್ಲಿ ತಟಸ್ಥರಾಗಿದ್ದರಿಂದ, ಅವರು ಮಾನವಕುಲವನ್ನು ದ್ವೇಷಿಸುವವರಾಗಿದ್ದಾರೆಂದು ಅವರನ್ನು ತುಚ್ಛೀಕರಿಸಲಾಯಿತು. . . . ಎರಡೂ ಲಿಂಗಜಾತಿಯ ವ್ಯಕ್ತಿಗಳು ರಾತ್ರಿ ಸಮಯದಲ್ಲಿ ಒಟ್ಟುಗೂಡುತ್ತಿದ್ದರು . . . ಅನಂತರ ಅವರ ಮಧ್ಯೆ ಸ್ವಚ್ಛಂದವಾದ ಸಂಭೋಗವು ನಡೆಯುತ್ತಿತ್ತು ಎಂದು ಹೇಳಲಾಯಿತು. . . . [ಕ್ರಿಸ್ತನ ಮರಣದ ಜ್ಞಾಪಕಾಚರಣೆಯು] ಕೇವಲ ವಿಶ್ವಾಸಿಗಳ ಸಮಕ್ಷಮದಲ್ಲಿ ಆಚರಿಸಲ್ಪಡುತ್ತಿದ್ದ ನಿಜತ್ವದಿಂದಾಗಿ, ಕ್ರೈಸ್ತರು ಕ್ರಮವಾಗಿ ಒಂದು ಶಿಶುವನ್ನು ಬಲಿಕೊಟ್ಟು, ಅದರ ರಕ್ತ ಮತ್ತು ಮಾಂಸವನ್ನು ತಿಂದರು ಎಂಬ ವದಂತಿಗಳು ಆರಂಭಗೊಂಡವು.” ಅಷ್ಟುಮಾತ್ರವಲ್ಲ, ಆರಂಭದ ಕ್ರೈಸ್ತರು ಚಕ್ರವರ್ತಿಯ ಆರಾಧನೆಯಲ್ಲಿ ಒಳಗೂಡಲು ನಿರಾಕರಿಸಿದ ಕಾರಣ, ಅವರು ಸರಕಾರದ ಶತ್ರುಗಳಾಗಿದ್ದಾರೆ ಎಂದು ಸಹ ನಿಂದಿಸಲ್ಪಟ್ಟರು.

9. ಪ್ರಥಮ ಶತಮಾನದ ಕ್ರೈಸ್ತರು ತಮ್ಮ ವಿರುದ್ಧ ಹೊರಿಸಲ್ಪಟ್ಟ ಸುಳ್ಳಾರೋಪಗಳಿಗೆ ಹೇಗೆ ಪ್ರತಿಕ್ರಿಯಿಸಿದರು, ಮತ್ತು ಇಂದಿನ ಸನ್ನಿವೇಶವು ಹೇಗಿದೆ?

9 ಈ ಸುಳ್ಳಾರೋಪಗಳು, ರಾಜ್ಯದ ಸುವಾರ್ತೆಯನ್ನು ಸಾರುವ ತಮ್ಮ ನೇಮಕವನ್ನು ಪೂರೈಸುವುದರಿಂದ ಆರಂಭದ ಕ್ರೈಸ್ತರನ್ನು ಎಂದಿಗೂ ತಡೆಗಟ್ಟಲಿಲ್ಲ. ಸಾ.ಶ. 60-61ರಲ್ಲಿ ಪೌಲನು, “ಫಲಕೊಟ್ಟು” ಲೋಕದಾದ್ಯಂತ “ವೃದ್ಧಿಯಾಗುತ್ತಾ” ಇದ್ದಂಥ ಮತ್ತು “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪಟ್ಟಂಥ” “ಸುವಾರ್ತೆ”ಯ ಕುರಿತು ಮಾತಾಡಲು ಶಕ್ತನಾಗಿದ್ದನು. (ಕೊಲೊಸ್ಸೆ 1:​3-6, 23) ಇಂದು ಸಹ ಹೀಗೆಯೇ ನಡೆಯುತ್ತಿದೆ. ಪ್ರಥಮ ಶತಮಾನದ ಕ್ರೈಸ್ತರಂತೆಯೇ ಯೆಹೋವನ ಸಾಕ್ಷಿಗಳ ಮೇಲೂ ಸುಳ್ಳಾರೋಪಗಳನ್ನು ಹೊರಿಸಲಾಗುತ್ತಿದೆ. ಆದರೂ, ರಾಜ್ಯದ ಸಂದೇಶವನ್ನು ಸಾರುವ ಕೆಲಸವು ಇಂದು ಅತ್ಯಧಿಕವಾಗಿ ಅಭಿವೃದ್ಧಿಹೊಂದುತ್ತಿದೆ ಮತ್ತು ಈ ಕೆಲಸದಲ್ಲಿ ಯಾರು ಪಾಲ್ಗೊಳ್ಳುತ್ತಾರೋ ಅವರಿಗೆ ಹೆಚ್ಚೆಚ್ಚು ಸಂತೋಷವು ದೊರಕುತ್ತಿದೆ.

ಪ್ರವಾದಿಗಳಂತೆ ಹಿಂಸೆಯನ್ನು ಅನುಭವಿಸಲು ಸಂತೋಷಿತರು

10, 11. (ಎ) ಸಂತೋಷಕ್ಕಾಗಿರುವ ಒಂಬತ್ತನೆಯ ಕಾರಣದ ತನ್ನ ಪರಿಗಣನೆಯನ್ನು ಯೇಸು ಹೇಗೆ ಕೊನೆಗೊಳಿಸಿದನು? (ಬಿ) ಪ್ರವಾದಿಗಳು ಏಕೆ ಹಿಂಸಿಸಲ್ಪಟ್ಟರು? ಉದಾಹರಣೆಗಳನ್ನು ಕೊಡಿ.

10 “ಸಂತೋಷಪಡಿರಿ, . . . ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನೂ ಹೀಗೆಯೇ ಹಿಂಸೆಪಡಿಸಿದರಲ್ಲಾ” ಎಂದು ಹೇಳುವ ಮೂಲಕ ಯೇಸು, ಸಂತೋಷಕ್ಕಾಗಿರುವ ಒಂಬತ್ತನೆಯ ಕಾರಣದ ಪರಿಗಣನೆಯನ್ನು ಕೊನೆಗೊಳಿಸಿದನು. (ಮತ್ತಾಯ 5:12) ಅಪನಂಬಿಗಸ್ತ ಇಸ್ರಾಯೇಲ್ಯರನ್ನು ಎಚ್ಚರಿಸಲಿಕ್ಕಾಗಿ ಯೆಹೋವನು ಕಳುಹಿಸಿದ ಪ್ರವಾದಿಗಳನ್ನು ಜನರು ಯೋಗ್ಯವಾಗಿ ಅಂಗೀಕರಿಸಲಿಲ್ಲ ಮತ್ತು ಅನೇಕವೇಳೆ ಅವರು ಹಿಂಸಿಸಲ್ಪಟ್ಟರು. (ಯೆರೆಮೀಯ 7:​25, 26) ಈ ವಾಸ್ತವಾಂಶಕ್ಕೆ ಅಪೊಸ್ತಲ ಪೌಲನೇ ಸಾಕ್ಷ್ಯ ನೀಡಿದನು. ಅವನು ಬರೆದುದು: “ಇನ್ನೂ ಏನು ಹೇಳಬೇಕು? . . . ಪ್ರವಾದಿಗಳ ವೃತ್ತಾಂತವನ್ನೂ ವಿವರವಾಗಿ ಹೇಳಬೇಕಾದರೆ ನನಗೆ ಸಮಯ ಸಾಲದು. ನಂಬಿಕೆಯ ಮೂಲಕ ಅವರು . . . ಅಪಹಾಸ್ಯ ಕೊರಡೆಯ ಪೆಟ್ಟು ಬೇಡಿ ಸೆರೆಮನೆ ಇವುಗಳನ್ನು ಅನುಭವಿಸಿದರು.”​—ಇಬ್ರಿಯ 11:32-38.

11 ದುಷ್ಟ ಅರಸನಾಗಿದ್ದ ಅಹಾಬ ಮತ್ತು ಅವನ ಪತ್ನಿಯಾಗಿದ್ದ ಈಜೆಬೆಲಳ ಆಳ್ವಿಕೆಯ ಸಮಯದಲ್ಲಿ ಯೆಹೋವನ ಪ್ರವಾದಿಗಳು ಕತ್ತಿಯಿಂದ ಸಂಹರಿಸಲ್ಪಟ್ಟರು. (1 ಅರಸುಗಳು 18:4, 13; 19:10) ಪ್ರವಾದಿಯಾದ ಯೆರೆಮೀಯನನ್ನು ಕೋಳಕ್ಕೆ ಹಾಕಲಾಯಿತು ಮತ್ತು ಸಮಯಾನಂತರ ಅವನು ಕೆಸರಿನ ಬಾವಿಯೊಳಗೆ ಹಾಕಲ್ಪಟ್ಟನು. (ಯೆರೆಮೀಯ 20:​1, 2; 38:6) ಪ್ರವಾದಿಯಾದ ದಾನಿಯೇಲನು ಸಿಂಹಗಳ ಗವಿಯಲ್ಲಿ ಹಾಕಲ್ಪಟ್ಟನು. (ದಾನಿಯೇಲ 6:​16, 17) ಈ ಎಲ್ಲಾ ಕ್ರೈಸ್ತಪೂರ್ವ ಪ್ರವಾದಿಗಳು ಯೆಹೋವನ ಶುದ್ಧಾರಾಧನೆಯನ್ನು ಸಮರ್ಥಿಸಿದ್ದರಿಂದಲೇ ಹಿಂಸೆಗೊಳಗಾದರು. ಅನೇಕ ಪ್ರವಾದಿಗಳು ಯೆಹೂದಿ ಧಾರ್ಮಿಕ ಮುಖಂಡರಿಂದ ಹಿಂಸಿಸಲ್ಪಟ್ಟರು. ಯೇಸು ಶಾಸ್ತ್ರಿಗಳು ಮತ್ತು ಫರಿಸಾಯರನ್ನು “ಪ್ರವಾದಿಗಳನ್ನು ಕೊಂದವರ ಮಕ್ಕಳೇ” ಎಂದು ಕರೆದನು.​—ಮತ್ತಾಯ 23:31.

12. ಯೆಹೋವನ ಸಾಕ್ಷಿಗಳಾಗಿರುವ ನಾವು, ಪುರಾತನ ಕಾಲದ ಪ್ರವಾದಿಗಳಂತೆ ಹಿಂಸೆಯನ್ನು ಅನುಭವಿಸುವುದನ್ನು ಏಕೆ ಒಂದು ಸುಯೋಗವಾಗಿ ಪರಿಗಣಿಸುತ್ತೇವೆ?

12 ಇಂದು, ಯೆಹೋವನ ಸಾಕ್ಷಿಗಳಾಗಿರುವ ನಾವು ಅನೇಕವೇಳೆ ಹಿಂಸಿಸಲ್ಪಡಲು ಕಾರಣ, ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ನಾವು ಹುರುಪುಳ್ಳವರಾಗಿರುವುದೇ ಆಗಿದೆ. ನಮ್ಮ ಶತ್ರುಗಳು ನಮ್ಮ ಮೇಲೆ “ಆಕ್ರಮಣಶೀಲ ಮತಾಂತರಿಸುವಿಕೆ”ಯ ಆರೋಪ ಹೊರಿಸುತ್ತಾರೆ, ಆದರೆ ನಮಗಿಂತಲೂ ಮುಂಚೆ ಇದ್ದ ಯೆಹೋವನ ನಂಬಿಗಸ್ತ ಆರಾಧಕರು ತದ್ರೀತಿಯ ಟೀಕೆಯನ್ನು ಎದುರಿಸಿದರು ಎಂಬುದು ನಮಗೆ ಗೊತ್ತಿದೆ. (ಯೆರೆಮೀಯ 11:21; 20:8, 11) ಪುರಾತನ ಕಾಲದ ನಂಬಿಗಸ್ತ ಪ್ರವಾದಿಗಳು ಯಾವ ಕಾರಣಕ್ಕಾಗಿ ಕಷ್ಟಾನುಭವಿಸಿದರೋ ಅದೇ ಕಾರಣಕ್ಕಾಗಿ ಕಷ್ಟಾನುಭವಿಸುವುದನ್ನು ನಾವು ಒಂದು ಸುಯೋಗವಾಗಿ ಪರಿಗಣಿಸುತ್ತೇವೆ. ಶಿಷ್ಯನಾದ ಯಾಕೋಬನು ಬರೆದುದು: “ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯದಲ್ಲಿ ಕರ್ತನ ಹೆಸರಿನಿಂದ ಮಾತಾಡಿದ ಪ್ರವಾದಿಗಳನ್ನೇ ಮಾದರಿಮಾಡಿಕೊಳ್ಳಿರಿ. ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ.”​—ಯಾಕೋಬ 5:10, 11.

ಸಂತೋಷಭರಿತರಾಗಿರಲು ಬಲವಾದ ಕಾರಣಗಳು

13. (ಎ) ನಾವು ಹಿಂಸೆಯಿಂದ ನಿರುತ್ತೇಜನಗೊಳ್ಳುವುದಿಲ್ಲವೇಕೆ? (ಬಿ) ಯಾವುದು ನಮ್ಮನ್ನು ದೃಢರಾಗಿ ನಿಲ್ಲಶಕ್ತರಾಗುವಂತೆ ಮಾಡುತ್ತದೆ, ಮತ್ತು ಇದು ಏನನ್ನು ರುಜುಪಡಿಸುತ್ತದೆ?

13 ನಾವು ಹಿಂಸೆಯಿಂದ ನಿರುತ್ತೇಜನಗೊಳ್ಳುವುದಕ್ಕೆ ಬದಲಾಗಿ, ಪ್ರವಾದಿಗಳ, ಆರಂಭದ ಕ್ರೈಸ್ತರ ಮತ್ತು ಸ್ವತಃ ಯೇಸು ಕ್ರಿಸ್ತನ ಹೆಜ್ಜೆಜಾಡಿನಲ್ಲಿ ನಡೆಯುತ್ತಿದ್ದೇವೆ ಎಂಬ ವಿಚಾರದಿಂದ ಸಾಂತ್ವನವನ್ನು ಪಡೆದುಕೊಳ್ಳುತ್ತೇವೆ. (1 ಪೇತ್ರ 2:21) ನಾವು ಶಾಸ್ತ್ರವಚನಗಳಿಂದ ಆಳವಾದ ಸಂತೃಪ್ತಿಯನ್ನು ಪಡೆದುಕೊಳ್ಳುತ್ತೇವೆ; ಅಪೊಸ್ತಲ ಪೇತ್ರನ ಈ ಮುಂದಿನ ಮಾತುಗಳು ಇದನ್ನು ರುಜುಪಡಿಸುತ್ತವೆ: “ಪ್ರಿಯರೇ, ನೀವು ಪರಿಶೋಧನೆಗಾಗಿ ಪುಟಕ್ಕೆ ಹಾಕಲ್ಪಟ್ಟದ್ದಕ್ಕೆ ಆಶ್ಚರ್ಯಪಡಬೇಡಿರಿ; ವಿಪರೀತವಾದ ಸಂಗತಿ ಸಂಭವಿಸಿತೆಂದು ಯೋಚಿಸಬೇಡಿರಿ. ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರೇ; ತೇಜೋಮಯವಾದ ಆತ್ಮನಾಗಿರುವ ದೇವರಾತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನಲ್ಲಾ.” (1 ಪೇತ್ರ 4:12, 14) ಯೆಹೋವನ ಆತ್ಮವು ನಮ್ಮ ಮೇಲಿರುವುದರಿಂದ ಮತ್ತು ಅದು ನಮ್ಮನ್ನು ಬಲಪಡಿಸುವುದರಿಂದಲೇ ಹಿಂಸೆಯ ಕೆಳಗೆ ನಾವು ದೃಢರಾಗಿ ನಿಲ್ಲಶಕ್ತರಾಗಿದ್ದೇವೆ ಎಂಬುದನ್ನು ನಾವು ಅನುಭವದಿಂದ ತಿಳಿದುಕೊಂಡಿದ್ದೇವೆ. ಪವಿತ್ರಾತ್ಮದ ಬೆಂಬಲವು ತಾನೇ ಯೆಹೋವನ ಆಶೀರ್ವಾದವು ನಮ್ಮ ಮೇಲಿದೆ ಎಂಬುದಕ್ಕೆ ರುಜುವಾತಾಗಿದೆ, ಮತ್ತು ಇದು ನಮಗೆ ಮಹಾನ್‌ ಸಂತೋಷವನ್ನು ತರುತ್ತದೆ.​—ಕೀರ್ತನೆ 5:12; ಫಿಲಿಪ್ಪಿ 1:27-29.

14. ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಡುವಾಗ ಸಂತೋಷಪಡಲು ನಮಗೆ ಯಾವ ಕಾರಣಗಳಿವೆ?

14 ನೀತಿಯ ನಿಮಿತ್ತ ವಿರೋಧವನ್ನು ಮತ್ತು ಹಿಂಸೆಯನ್ನು ಸಹಿಸಿಕೊಳ್ಳುವುದು ನಮಗೆ ಸಂತೋಷವನ್ನು ನೀಡಲು ಇನ್ನೊಂದು ಕಾರಣವೂ ಇದೆ. ಅದೇನೆಂದರೆ, ನಾವು ದೈವಿಕ ಭಕ್ತಿಯಿರುವ ನಿಜ ಕ್ರೈಸ್ತರೋಪಾದಿ ಜೀವಿಸುತ್ತಿದ್ದೇವೆ ಎಂಬುದನ್ನು ಇದರಿಂದ ರುಜುಪಡಿಸುತ್ತೇವೆ. ಅಪೊಸ್ತಲ ಪೌಲನು ಬರೆದುದು: “ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.” (2 ತಿಮೊಥೆಯ 3:12) ಪರೀಕ್ಷೆಯ ಕೆಳಗೆ ನಾವು ಸಮಗ್ರತೆಯನ್ನು ಕಾಪಾಡಿಕೊಳ್ಳುವುದು, ಯೆಹೋವನ ಸೃಷ್ಟಿಜೀವಿಗಳೆಲ್ಲರೂ ಸ್ವಾರ್ಥ ಆಸಕ್ತಿಯಿಂದ ಆತನ ಸೇವೆಮಾಡುತ್ತಾರೆ ಎಂಬ ಸೈತಾನನ ಪಂಥಾಹ್ವಾನಕ್ಕೆ ಇನ್ನೂ ಹೆಚ್ಚಿನ ಉತ್ತರವನ್ನು ಒದಗಿಸುತ್ತದೆ ಎಂಬ ಆಲೋಚನೆಯೇ ನಮಗೆ ಅತ್ಯಧಿಕ ಸಂತೋಷವನ್ನು ಉಂಟುಮಾಡುತ್ತದೆ. (ಯೋಬ 1:9-11; 2:3, 4) ಯೆಹೋವನ ನೀತಿಯ ಪರಮಾಧಿಕಾರದ ನಿರ್ದೋಷೀಕರಣದಲ್ಲಿ, ಚಿಕ್ಕಪುಟ್ಟ ರೀತಿಯಲ್ಲಾದರೂ ಪಾಲ್ಗೊಳ್ಳುವ ಅವಕಾಶ ನಮಗೆ ಸಿಕ್ಕಿರುವುದಕ್ಕಾಗಿ ನಾವು ಸಂತೋಷಪಡುತ್ತೇವೆ.​—ಜ್ಞಾನೋಕ್ತಿ 27:11.

ಸಿಗುವ ಪ್ರತಿಫಲಕ್ಕಾಗಿ ಉಲ್ಲಾಸಪಡಿರಿ

15, 16. (ಎ) ನಾವು ‘ಸಂತೋಷಪಡಲು ಮತ್ತು ಉಲ್ಲಾಸಪಡಲು’ ಯೇಸು ಯಾವ ಕಾರಣವನ್ನು ಕೊಟ್ಟನು? (ಬಿ) ಅಭಿಷಿಕ್ತ ಕ್ರೈಸ್ತರಿಗಾಗಿ ಪರಲೋಕದಲ್ಲಿ ಯಾವ ಪ್ರತಿಫಲವು ಕಾದಿರಿಸಲ್ಪಟ್ಟಿದೆ, ಮತ್ತು “ಬೇರೆ ಕುರಿ”ಗಳ ವರ್ಗಕ್ಕೆ ಸೇರಿರುವ ಅವರ ಸಂಗಡಿಗರು ಸಹ ಹೇಗೆ ಪ್ರತಿಫಲವನ್ನು ಪಡೆದುಕೊಳ್ಳುವರು?

15 ಪುರಾತನ ಕಾಲದ ಪ್ರವಾದಿಗಳಂತೆ ದೂಷಿಸಲ್ಪಡುವಾಗ ಮತ್ತು ಹಿಂಸಿಸಲ್ಪಡುವಾಗ ಅತ್ಯಾನಂದಪಡಲಿಕ್ಕಾಗಿ ಯೇಸು ಇನ್ನೊಂದು ಕಾರಣವನ್ನು ಕೊಟ್ಟನು. ಸಂತೋಷಕ್ಕಾಗಿರುವ ಒಂಬತ್ತನೆಯ ಕಾರಣದ ಕೊನೆಯಲ್ಲಿ ಅವನು ಹೇಳಿದ್ದು: “ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ [ಪ್ರತಿಫಲ] ಸಿಕ್ಕುವದು.” (ಮತ್ತಾಯ 5:12) ಅಪೊಸ್ತಲ ಪೌಲನು ಬರೆದುದು: “ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.” (ರೋಮಾಪುರ 6:23) ಹೌದು, ಆ ‘ಬಹಳ ಪ್ರತಿಫಲವು’ ಜೀವವೇ ಆಗಿದೆ, ಮತ್ತು ಇದು ನಾವು ಸಂಪಾದಿಸಸಾಧ್ಯವಿರುವ ಸಂಬಳವಾಗಿರುವುದಿಲ್ಲ. ಇದು ಒಂದು ಉಚಿತಾರ್ಥ ವರವಾಗಿದೆ. ಆ ಪ್ರತಿಫಲವು ಯೆಹೋವನಿಂದ ಬರುವುದರಿಂದಲೇ ಇದು “ಪರಲೋಕದಲ್ಲಿ”ದೆ ಎಂದು ಯೇಸು ಹೇಳಿದನು.

16 ಅಭಿಷಿಕ್ತರು “ಜೀವವೆಂಬ ಜಯಮಾಲೆಯನ್ನು” ಪಡೆದುಕೊಳ್ಳುವರು; ಅವರ ವಿಷಯದಲ್ಲಾದರೋ ಇದು ಪರಲೋಕದಲ್ಲಿ ಕ್ರಿಸ್ತನೊಂದಿಗೆ ಅಮರ ಜೀವನವನ್ನು ನಡೆಸುವುದೇ ಆಗಿದೆ. (ಯಾಕೋಬ 1:​12, 17) ಭೂನಿರೀಕ್ಷೆಯಿರುವ “ಬೇರೆ ಕುರಿಗಳು,” ಒಂದು ಭೂಪರದೈಸಿನಲ್ಲಿ ನಿತ್ಯಜೀವವನ್ನು ಬಾಧ್ಯತೆಯಾಗಿ ಪಡೆಯಲು ಎದುರುನೋಡುತ್ತಾರೆ. (ಯೋಹಾನ 10:16; ಪ್ರಕಟನೆ 21:3-5) ಎರಡೂ ವರ್ಗಗಳ ಜನರಿಗೆ ಕೊಡಲ್ಪಡುವ “ಪ್ರತಿಫಲ”ವು, ಅವರೆಂದೂ ಸಂಪಾದಿಸಿಕೊಳ್ಳಲು ಸಾಧ್ಯವಿರದಂಥದ್ದಾಗಿದೆ. ಅಭಿಷಿಕ್ತರು ಮತ್ತು “ಬೇರೆ ಕುರಿಗಳು” ಯೆಹೋವನ “ಅತಿಶಯವಾದ ಕೃಪೆ”ಯಿಂದ ತಮ್ಮ ಪ್ರತಿಫಲವನ್ನು ಪಡೆದುಕೊಳ್ಳುತ್ತಾರೆ; ಇದು ತಾನೇ ಅಪೊಸ್ತಲ ಪೌಲನು ಹೀಗೆ ಹೇಳುವಂತೆ ಪ್ರಚೋದಿಸಿತು: “ವರ್ಣಿಸಲಶಕ್ಯವಾದ ದೇವರವರಕ್ಕಾಗಿ ಆತನಿಗೆ ಸ್ತೋತ್ರ.”​—2 ಕೊರಿಂಥ 9:14, 15.

17. ಹಿಂಸಿಸಲ್ಪಡುವಾಗ ನಾವು ಏಕೆ ಸಂತೋಷದಿಂದಿರಸಾಧ್ಯವಿದೆ ಮತ್ತು ಸಾಂಕೇತಿಕವಾಗಿ ‘ಉಲ್ಲಾಸಪಡ’ಸಾಧ್ಯವಿದೆ?

17 ಚಕ್ರವರ್ತಿಯಾದ ನೀರೋನಿಂದ ಕ್ರೂರವಾಗಿ ಹಿಂಸಿಸಲ್ಪಡಲಿದ್ದ ಕೆಲವು ಕ್ರೈಸ್ತರಿಗೆ ಅಪೊಸ್ತಲ ಪೌಲನು ಬರೆದುದು: “ನಮಗೆ ಉಂಟಾಗುವ ಉಪದ್ರವಗಳಲ್ಲಿಯೂ ಉಲ್ಲಾಸವಾಗಿದ್ದೇವೆ. ಯಾಕಂದರೆ ಉಪದ್ರವದಿಂದ ತಾಳ್ಮೆ ಹುಟ್ಟುತ್ತದೆ, ತಾಳ್ಮೆಯಿಂದ ಅನುಭವಸಿದ್ಧಿ ಹುಟ್ಟುತ್ತದೆ, ಅನುಭವದಿಂದ ನಿರೀಕ್ಷಣ ಹುಟ್ಟುತ್ತದೆಂದು ಬಲ್ಲೆವು. ಈ ನಿರೀಕ್ಷೆಯು ನಮ್ಮ ಆಶೆಯನ್ನು ಭಂಗಪಡಿಸುವದಿಲ್ಲ.” ಅವನು ಇನ್ನೂ ಹೇಳಿದ್ದು: “ಕ್ರೈಸ್ತರು ನಿರೀಕ್ಷಿಸುವ ಮಹಾಪದವಿಯನ್ನು ನೆನಸಿ ಉಲ್ಲಾಸವಾಗಿರ್ರಿ. ಉಪದ್ರವದಲ್ಲಿ ಸೈರಣೆಯುಳ್ಳವರಾಗಿರ್ರಿ.” (ರೋಮಾಪುರ 5:3-5; 12:12) ನಮಗೆ ಸ್ವರ್ಗೀಯ ನಿರೀಕ್ಷೆಯಿರಲಿ ಅಥವಾ ಭೂನಿರೀಕ್ಷೆಯಿರಲಿ, ಪರೀಕ್ಷೆಯ ಕೆಳಗೆ ನಂಬಿಗಸ್ತರಾಗಿ ಉಳಿಯುವಾಗ ಸಿಗುವ ಪ್ರತಿಫಲವು, ನಾವು ಪಡೆಯಲು ಅರ್ಹರಾಗಿರುವ ಯಾವುದೇ ವಿಚಾರಕ್ಕಿಂತ ಎಷ್ಟೋ ಹೆಚ್ಚು ಅತ್ಯಮೂಲ್ಯವಾಗಿದೆ. ನಮ್ಮ ಅರಸನಾದ ಯೇಸು ಕ್ರಿಸ್ತನ ಕೆಳಗೆ, ನಮ್ಮ ಪ್ರೀತಿಯ ತಂದೆಯಾಗಿರುವ ಯೆಹೋವನ ಸೇವೆಮಾಡಲಿಕ್ಕಾಗಿ ಮತ್ತು ಆತನನ್ನು ಸ್ತುತಿಸಲಿಕ್ಕಾಗಿ ನಾವು ನಿತ್ಯಕ್ಕೂ ಜೀವಿಸುವ ಪ್ರತೀಕ್ಷೆಯ ಕುರಿತಾದ ನಮ್ಮ ಆನಂದವು ನಿಜವಾಗಿಯೂ ಅಮಿತವಾದದ್ದಾಗಿದೆ. ಸಾಂಕೇತಿಕವಾಗಿ ನಾವು ‘ಉಲ್ಲಾಸಪಡುತ್ತೇವೆ.’

18. ಅಂತ್ಯವು ಸಮೀಪಿಸುತ್ತಿರುವಾಗ ರಾಷ್ಟ್ರಗಳಿಂದ ಏನನ್ನು ನಿರೀಕ್ಷಿಸಸಾಧ್ಯವಿದೆ, ಮತ್ತು ಯೆಹೋವನು ಏನು ಮಾಡುವನು?

18 ಕೆಲವು ದೇಶಗಳಲ್ಲಿ ಯೆಹೋವನ ಸಾಕ್ಷಿಗಳು ಹಿಂಸಿಸಲ್ಪಟ್ಟಿದ್ದಾರೆ ಮತ್ತು ಈಗಲೂ ಹಿಂಸಿಸಲ್ಪಡುತ್ತಿದ್ದಾರೆ. ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಕುರಿತಾದ ತನ್ನ ಪ್ರವಾದನೆಯಲ್ಲಿ ಯೇಸು ನಿಜ ಕ್ರೈಸ್ತರಿಗೆ ಹೀಗೆ ಎಚ್ಚರಿಕೆ ನೀಡಿದನು: “ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲಾ ಜನಾಂಗಗಳವರು ಹಗೆಮಾಡುವರು.” (ಓರೆ ಅಕ್ಷರಗಳು ನಮ್ಮವು.) (ಮತ್ತಾಯ 24:​9) ಅಂತ್ಯವು ಸಮೀಪಿಸುತ್ತಿರುವಾಗ, ರಾಷ್ಟ್ರಗಳು ಯೆಹೋವನ ಜನರ ವಿರುದ್ಧ ತಮ್ಮ ದ್ವೇಷವನ್ನು ತೋರಿಸುವಂತೆ ಸೈತಾನನು ಮಾಡುತ್ತಾನೆ. (ಯೆಹೆಜ್ಕೇಲ 38:10-12, 14-16) ಇದು ಯೆಹೋವನು ಕ್ರಿಯೆಗೈಯಲಿರುವ ಸಮಯವು ಬಂದಿದೆ ಎಂಬ ಸೂಚನೆಯನ್ನು ನೀಡುವುದು. “ನಾನು ನನ್ನ ಮಹಿಮೆಯನ್ನು ತೋರ್ಪಡಿಸಿ ನನ್ನ ಗೌರವವನ್ನು ಕಾಪಾಡಿಕೊಂಡು ಬಹು ಜನಾಂಗಗಳು ನಾನೇ ಯೆಹೋವನು ಎಂದು ತಿಳಿದುಕೊಳ್ಳುವಂತೆ ಅವುಗಳ ಕಣ್ಣೆದುರಿಗೆ ವ್ಯಕ್ತನಾಗುವೆನು.” (ಯೆಹೆಜ್ಕೇಲ 38:23) ಹೀಗೆ ಯೆಹೋವನು ತನ್ನ ಮಹಾನ್‌ ಹೆಸರನ್ನು ಪವಿತ್ರೀಕರಿಸುವನು ಮತ್ತು ತನ್ನ ಜನರನ್ನು ಹಿಂಸೆಯಿಂದ ವಿಮೋಚಿಸುವನು. ಆದುದರಿಂದ, “ಸಹಿಸಿಕೊಳ್ಳುತ್ತಾ ಇರುವಂಥವನು ಸಂತೋಷಿತನು.”​—ಯಾಕೋಬ 1:​12, NW.

19. “ದೇವರ” ಮಹಾ “ದಿನ”ಕ್ಕಾಗಿ ಕಾಯುತ್ತಿರುವಾಗ ನಾವೇನು ಮಾಡತಕ್ಕದ್ದು?

19 “ದೇವರ” ಮಹಾ “ದಿನ”ವು ಇನ್ನಷ್ಟು ಸಮೀಪಿಸುವಾಗ ನಾವು ಉಲ್ಲಾಸಪಡೋಣ, ಏಕೆಂದರೆ ನಾವು ಯೇಸುವಿನ ಹೆಸರಿನ ನಿಮಿತ್ತವಾಗಿ “ಅವಮಾನಪಡುವದಕ್ಕೆ ಯೋಗ್ಯರೆನಿಸಿ”ಕೊಂಡಿದ್ದೇವೆ. (2 ಪೇತ್ರ 3:10-13; ಅ. ಕೃತ್ಯಗಳು 5:41) ಯೆಹೋವನ ನೀತಿಯ ನೂತನ ಲೋಕದಲ್ಲಿ ನಮ್ಮ ಪ್ರತಿಫಲಕ್ಕಾಗಿ ಕಾಯುತ್ತಿರುವಾಗ, ಆರಂಭದ ಕ್ರೈಸ್ತರಂತೆಯೇ ನಾವು “ಎಡೆಬಿಡದೆ . . . ಉಪದೇಶಮಾಡುತ್ತಾ ಕ್ರಿಸ್ತನಾದ ಯೇಸುವಿನ” ಮತ್ತು ಆತನ ರಾಜ್ಯ ಸರಕಾರದ “ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ” ಇರೋಣ.​—ಅ. ಕೃತ್ಯಗಳು 5:42; ಯಾಕೋಬ 5:11.

ಪುನರ್ವಿಮರ್ಶೆಗಾಗಿ

• ನೀತಿಯ ನಿಮಿತ್ತವಾಗಿ ಕಷ್ಟಾನುಭವಿಸುವುದು ಏನನ್ನು ಅರ್ಥೈಸುತ್ತದೆ?

• ಹಿಂಸೆಯು ಆರಂಭದ ಕ್ರೈಸ್ತರ ಮೇಲೆ ಯಾವ ಪರಿಣಾಮವನ್ನು ಬೀರಿತು?

• ಯೆಹೋವನ ಸಾಕ್ಷಿಗಳು ಪುರಾತನ ಕಾಲದ ಪ್ರವಾದಿಗಳಂತೆ ಹಿಂಸಿಸಲ್ಪಡುತ್ತಾರೆ ಎಂದು ಏಕೆ ಹೇಳಸಾಧ್ಯವಿದೆ?

• ನಾವು ಹಿಂಸಿಸಲ್ಪಡುವಾಗ ಹೇಗೆ ‘ಸಂತೋಷ ಮತ್ತು ಉಲ್ಲಾಸವನ್ನು’ ಅನುಭವಿಸಸಾಧ್ಯವಿದೆ?

[ಪುಟ 16, 17ರಲ್ಲಿರುವ ಚಿತ್ರಗಳು]

‘ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿದರೆ ನೀವು ಸಂತೋಷಿತರು’

[ಕೃಪೆ]

ಸೆರೆಮನೆಯಲ್ಲಿನ ಗುಂಪು: Chicago Herald-American

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ