ಯೆಹೋವನ ಸಹಾಯವನ್ನು ನೀವು ಅಂಗೀಕರಿಸುತ್ತೀರೊ?
“ಕರ್ತನು [“ಯೆಹೋವನು,” NW] ನನ್ನ ಸಹಾಯಕನು, ಭಯಪಡೆನು.”—ಇಬ್ರಿಯ 13:6.
1, 2. ಜೀವನದಲ್ಲಿ ಯೆಹೋವನ ಸಹಾಯವನ್ನೂ ಮಾರ್ಗದರ್ಶನವನ್ನೂ ನಾವು ಅಂಗೀಕರಿಸುವುದು ಪ್ರಾಮುಖ್ಯವೇಕೆ?
ನೀವು ಒಂದು ಪರ್ವತ ಪಥದಲ್ಲಿ ಪಾದಯಾನ ಮಾಡುತ್ತ ಇದ್ದೀರೆಂದು ಭಾವಿಸಿ. ನೀವು ಒಬ್ಬರೇ ಇಲ್ಲ, ಏಕೆಂದರೆ ಒಬ್ಬ ಮಾರ್ಗದರ್ಶಕನು ನಿಮ್ಮ ಜೊತೆಯಲ್ಲಿ ಹೋಗುತ್ತಿದ್ದಾನೆ. ಅವನು ಲಭ್ಯವಿರುವವರಲ್ಲೇ ಅತ್ಯುತ್ತಮ ಮಾರ್ಗದರ್ಶಕನೂ ಹೌದು. ನಿಮಗಿರುವುದಕ್ಕಿಂಥ ಎಷ್ಟೋ ಹೆಚ್ಚು ಅನುಭವವೂ ತಾಕತ್ತೂ ಅವನಲ್ಲಿದ್ದರೂ ಅವನು ತಾಳ್ಮೆಯಿಂದ ನಿಮ್ಮ ಹತ್ತಿರದಲ್ಲೇ ನಡೆಯುತ್ತಾನೆ. ನೀವು ಆಗಾಗ ಮುಗ್ಗರಿಸುವುದನ್ನು ಅವನು ಗಮನಿಸುತ್ತಾನೆ. ನಿಮ್ಮ ಸುರಕ್ಷತೆಯ ಚಿಂತೆಯಿಂದ ವಿಶೇಷವಾಗಿ ಅಪಾಯಕರವಾಗಿರುವ ಎಡೆಗಳಲ್ಲಿ ಅವನು ನಿಮಗೆ ಸಹಾಯ ನೀಡಲು ಕೈಚಾಚುತ್ತಾನೆ. ಆಗ ನೀವು ಅವನ ಸಹಾಯವನ್ನು ನಿರಾಕರಿಸುವಿರಾ? ಇಲ್ಲವೆಂಬುದು ನಿಶ್ಚಯ! ಏಕೆಂದರೆ ನಿಮ್ಮ ಸುರಕ್ಷತೆ ಅಪಾಯದಲ್ಲಿದೆ.
2 ಕ್ರೈಸ್ತರಾಗಿರುವ ನಾವು ನಡೆದುಹೋಗಬೇಕಾದ ಪಥವು ಕಷ್ಟಕರವಾದದ್ದು. ಆ ಇಕ್ಕಟ್ಟಾದ ದಾರಿಯಲ್ಲಿ ನಾವು ಒಬ್ಬರಾಗಿಯೇ ನಡೆಯಬೇಕೊ? (ಮತ್ತಾಯ 7:14) ಇಲ್ಲ, ಏಕೆಂದರೆ ಲಭ್ಯವಿರುವವರಲ್ಲಿ ಅತ್ಯುತ್ತಮ ಮಾರ್ಗದರ್ಶಕನಾಗಿರುವ ಯೆಹೋವ ದೇವರು, ಮಾನವರು ಆತನೊಂದಿಗೆ ನಡೆಯುವಂತೆ ಅನುಮತಿಸುತ್ತಾನೆಂದು ಬೈಬಲು ತೋರಿಸುತ್ತದೆ. (ಆದಿಕಾಂಡ 5:24; 6:9) ಅವರು ಹೀಗೆ ನಡೆಯುತ್ತಿರುವಾಗ ಯೆಹೋವನು ಅವರಿಗೆ ಸಹಾಯಮಾಡುತ್ತಾನೊ? ಆತನು ಹೇಳುವುದು: “ಭಯಪಡಬೇಡ, ನಿನಗೆ ಸಹಾಯಮಾಡುತ್ತೇನೆ ಎಂದು ನಿನಗೆ ಹೇಳುವ ನಿನ್ನ ದೇವರಾದ ಯೆಹೋವನೆಂಬ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ.” (ಯೆಶಾಯ 41:13) ನಮ್ಮ ದೃಷ್ಟಾಂತದ ಮಾರ್ಗದರ್ಶಕನಂತೆ, ಯೆಹೋವನು ತನ್ನ ಸಹಾಯಹಸ್ತವನ್ನೂ ಮಿತ್ರತ್ವವನ್ನೂ ಆತನೊಂದಿಗೆ ನಡೆದಾಡಲು ಪ್ರಯತ್ನಿಸುವವರ ಕಡೆಗೆ ದಯೆಯಿಂದ ಚಾಚುತ್ತಾನೆ. ಆತನ ಆ ಸಹಾಯವನ್ನು ನಮ್ಮಲ್ಲಿ ಯಾವನೂ ನಿರಾಕರಿಸಬಯಸುವುದಿಲ್ಲ ನಿಶ್ಚಯ!
3. ಈ ಚರ್ಚೆಯ ಸಮಯದಲ್ಲಿ ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?
3 ಹಿಂದಿನ ಲೇಖನದಲ್ಲಿ ಯೆಹೋವನು ಪುರಾತನ ಕಾಲದಲ್ಲಿ ತನ್ನ ಜನರಿಗೆ ಸಹಾಯಮಾಡಿದ ನಾಲ್ಕು ವಿಧಗಳ ಕುರಿತು ನಾವು ಚರ್ಚಿಸಿದೆವು. ಇಂದು ಸಹ ಆತನು ತನ್ನ ಜನರಿಗೆ ಅದೇ ವಿಧಗಳಲ್ಲಿ ಸಹಾಯಮಾಡುತ್ತಾನೊ? ಮತ್ತು ಅಂಥ ಸಹಾಯವನ್ನು ನಾವು ಅಂಗೀಕರಿಸುವುದನ್ನು ಹೇಗೆ ಖಚಿತಪಡಿಸಿಕೊಳ್ಳಬಹುದು? ಈ ಪ್ರಶ್ನೆಗಳನ್ನು ನಾವು ಪರಿಗಣಿಸೋಣ. ಹಾಗೆ ಮಾಡುವಲ್ಲಿ, ಯೆಹೋವನು ನಿಜವಾಗಿಯೂ ನಮ್ಮ ಸಹಾಯಕನೆಂಬ ವಿಷಯದಲ್ಲಿ ನಾವು ಹೆಚ್ಚು ಭರವಸೆಯುಳ್ಳವರಾಗಬಲ್ಲೆವು.—ಇಬ್ರಿಯ 13:6.
ದೇವದೂತರಿಂದ ಸಹಾಯ
4. ಇಂದು ತಮಗೆ ದೇವದೂತರ ಬೆಂಬಲವಿದೆ ಎಂಬ ವಿಷಯದಲ್ಲಿ ದೇವರ ಸೇವಕರು ಏಕೆ ಭರವಸೆಯಿಂದಿರಬಹುದು?
4 ಯೆಹೋವನ ಇಂದಿನ ಸೇವಕರಿಗೆ ದೇವದೂತರು ಸಹಾಯಮಾಡುತ್ತಾರೊ? ಹೌದು, ನಿಶ್ಚಯ. ಆದರೆ ಇಂದು ಸತ್ಯಾರಾಧಕರನ್ನು ಅಪಾಯದಿಂದ ಬಿಡಿಸಲು ಅವರು ದೃಶ್ಯವಾಗಿ ತೋರಿಬರುವುದಿಲ್ಲವೆಂಬುದು ಒಪ್ಪತಕ್ಕ ಮಾತು. ಬೈಬಲ್ ಸಮಯಗಳಲ್ಲೂ ದೇವದೂತರು ಹಾಗೆ ಹಸ್ತಕ್ಷೇಪಮಾಡಿದ್ದು ವಿರಳ. ಅವರು ಮಾಡಿದ ಕೆಲಸಗಳಲ್ಲಿ ಹೆಚ್ಚಿನವು, ಇಂದು ನಡೆಯುವ ಹಾಗೆಯೇ, ಮಾನವದೃಷ್ಟಿಗೆ ಅದೃಶ್ಯವಾಗಿದ್ದವು. ಆದರೂ, ದೇವದೂತರು ತಮ್ಮ ಬೆಂಬಲಕ್ಕಾಗಿ ಇದ್ದಾರೆ ಎಂಬುದನ್ನು ಗ್ರಹಿಸಿದ ದೇವರ ಸೇವಕರಿಗೆ ಅದು ತುಂಬ ಪ್ರೋತ್ಸಾಹನೀಯವಾಗಿತ್ತು. (2 ಅರಸುಗಳು 6:14-17) ನಮಗೂ ತದ್ರೀತಿಯ ಅನಿಸಿಕೆಯಿರಲು ಸಕಾರಣವಿದೆ.
5. ಇಂದು ಸಾರುವ ಕೆಲಸದಲ್ಲಿ ದೇವದೂತರು ಭಾಗಿಗಳಾಗಿದ್ದಾರೆಂದು ಬೈಬಲು ಹೇಗೆ ತಿಳಿಸುತ್ತದೆ?
5 ನಾವು ಒಳಗೂಡಿರುವ ಒಂದು ವಿಶೇಷ ಕೆಲಸದಲ್ಲಿ ಯೆಹೋವನ ದೂತರಿಗೆ ವಿಶಿಷ್ಟವಾದ ಆಸಕ್ತಿಯಿದೆ. ಅದು ಯಾವ ಕೆಲಸ? ಇದಕ್ಕೆ ಉತ್ತರವನ್ನು ನಾವು ಪ್ರಕಟನೆ 14:6ರಲ್ಲಿ ಕಂಡುಕೊಳ್ಳಬಲ್ಲೆವು: “ಮತ್ತೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರಿಹೋಗುವದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ ಸಾರಿಹೇಳುವದಕ್ಕೆ ನಿತ್ಯವಾದ ಶುಭವರ್ತಮಾನವು ಅವನಲ್ಲಿತ್ತು.” ಈ “ನಿತ್ಯವಾದ ಶುಭವರ್ತಮಾನವು” ನಿಸ್ಸಂದೇಹವಾಗಿ ‘ರಾಜ್ಯದ ಸುವಾರ್ತೆಗೆ’ ಸಂಬಂಧಿತವಾಗಿದೆ, ಮತ್ತು ಯೇಸು ಮುಂತಿಳಿಸಿದಂತೆ, ಇದನ್ನು ಈ ವಿಷಯಗಳ ವ್ಯವಸ್ಥೆ ಅಂತ್ಯಗೊಳ್ಳುವ ಮೊದಲು “ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು.” (ಮತ್ತಾಯ 24:14) ದೇವದೂತರು ಇದನ್ನು ಪ್ರತ್ಯಕ್ಷವಾಗಿ ಸಾರುವುದಿಲ್ಲ ನಿಜ. ಈ ಪ್ರಮುಖ ಆದೇಶವನ್ನು ಯೇಸು ಮಾನವರಿಗೆ ಕೊಟ್ಟನು. (ಮತ್ತಾಯ 28:19, 20) ನಾವು ಈ ಆದೇಶವನ್ನು ನೆರವೇರಿಸುತ್ತಿರುವಾಗ ನಮಗೆ ಈ ವಿವೇಕಿಗಳೂ ಬಲಾಢ್ಯರೂ ಆದ ಆತ್ಮಜೀವಿಗಳಾಗಿರುವ ಪವಿತ್ರ ದೇವದೂತರ ಸಹಾಯವಿದೆಯೆಂದು ತಿಳಿಯುವುದು ಪ್ರೋತ್ಸಾಹದಾಯಕವಲ್ಲವೆ?
6, 7. (ಎ) ದೇವದೂತರು ನಮ್ಮ ಸಾರುವ ಕೆಲಸವನ್ನು ಬೆಂಬಲಿಸುತ್ತಾರೆಂದು ಯಾವುದು ಸೂಚಿಸುತ್ತದೆ? (ಬಿ) ಯೆಹೋವನ ದೂತರ ಬೆಂಬಲವನ್ನು ಪಡೆಯುವ ವಿಷಯದಲ್ಲಿ ನಾವು ಹೇಗೆ ಖಾತ್ರಿಯಿಂದಿರಬಹುದು?
6 ನಮ್ಮ ಕೆಲಸಕ್ಕೆ ದೇವದೂತರ ಬೆಂಬಲವಿದೆಯೆಂಬುದಕ್ಕೆ ಗಣನೀಯ ಸಾಕ್ಷ್ಯವಿದೆ. ಉದಾಹರಣೆಗೆ, ಯೆಹೋವನ ಸಾಕ್ಷಿಗಳು ತಮ್ಮ ಶುಶ್ರೂಷೆಯಲ್ಲಿ ತೊಡಗಿರುವಾಗ, ಕೇವಲ ಸ್ವಲ್ಪ ಸಮಯಕ್ಕೆ ಮೊದಲು ಸತ್ಯವನ್ನು ಕಂಡುಹಿಡಿಯಲಿಕ್ಕಾಗಿ ದೇವರಿಗೆ ಪ್ರಾರ್ಥಿಸಿದ ಒಬ್ಬ ವ್ಯಕ್ತಿಯನ್ನು ಭೇಟಿಯಾಗುವ ವಿಷಯವನ್ನು ಅನೇಕವೇಳೆ ಕೇಳಿಸಿಕೊಳ್ಳುತ್ತೇವೆ. ಇಂತಹ ಅನುಭವಗಳು ಪುನರಾವರ್ತಿಸಿ ಸಂಭವಿಸುವುದರಿಂದ ಅವು ಕೇವಲ ಆಕಸ್ಮಿಕ ಘಟನೆಗಳೆಂದು ಹೇಳಿ ನಿರ್ಲಕ್ಷಿಸಿಬಿಡಲು ಸಾಧ್ಯವಿಲ್ಲ. ಇಂತಹ ದೇವದೂತರ ಸಹಾಯದ ಪರಿಣಾಮವಾಗಿ ಹೆಚ್ಚೆಚ್ಚು ಜನರು ‘ಆಕಾಶಮಧ್ಯದಲ್ಲಿ ಹಾರಿಹೋಗುತ್ತಿರುವ ಆ ದೇವದೂತನು’ ಹೇಳಿದಂತೆ, “ದೇವರಿಗೆ ಭಯಪಟ್ಟು ಆತನನ್ನು ಘನ”ಪಡಿಸಲು ಕಲಿಯುತ್ತಿದ್ದಾರೆ.—ಪ್ರಕಟನೆ 14:7.
7 ಯೆಹೋವನ ಬಲಿಷ್ಠ ದೇವದೂತರ ಸಹಾಯವನ್ನು ಪಡೆಯಲು ನೀವು ಹಾತೊರೆಯುತ್ತೀರೊ? ಹಾಗಿರುವಲ್ಲಿ, ನಿಮ್ಮ ಶುಶ್ರೂಷೆಯಲ್ಲಿ ತಲ್ಲೀನರಾಗಿರಲು ಸರ್ವಪ್ರಯತ್ನವನ್ನೂ ಮಾಡಿರಿ. (1 ಕೊರಿಂಥ 15:58) ಯೆಹೋವನಿಂದ ಬಂದಿರುವ ಈ ವಿಶೇಷ ನೇಮಕದಲ್ಲಿ ನಾವು ಉದಾರವಾಗಿ ನಮ್ಮನ್ನು ವ್ಯಯಿಸಿಕೊಳ್ಳುವಾಗ ಆತನ ದೇವದೂತರ ಸಹಾಯವನ್ನು ನಾವು ಪಡೆಯುವೆವು ಎಂಬುದು ನಿಶ್ಚಯ.
ದೇವದೂತರಲ್ಲಿ ಪ್ರಧಾನನಿಂದ ಸಹಾಯ
8. ಯೇಸುವಿಗೆ ಸ್ವರ್ಗದಲ್ಲಿ ಯಾವ ಉನ್ನತ ಸ್ಥಾನವಿದೆ, ಮತ್ತು ಅದೇಕೆ ನಮಗೆ ಆಶ್ವಾಸನದಾಯಕವಾಗಿದೆ?
8 ಯೆಹೋವನು ನಮಗೆ ಇನ್ನೊಂದು ವಿಧದ ದೂತ ಸಹಾಯವನ್ನೂ ಒದಗಿಸುತ್ತಾನೆ. ಪ್ರಕಟನೆ 10:1, “ಮುಖವು ಸೂರ್ಯನೋಪಾದಿ” ಇದ್ದ ಮತ್ತು ಭಯಗೌರವ ಹುಟ್ಟಿಸುವ “ಬಲಿಷ್ಠನಾದ . . . ದೇವದೂತ”ನೊಬ್ಬನ ಕುರಿತು ವರ್ಣಿಸುತ್ತದೆ. ಈ ದಾರ್ಶನಿಕ ದೇವದೂತನು ಸ್ವರ್ಗೀಯ ಅಧಿಕಾರದಲ್ಲಿರುವ ಮಹಿಮಾಭರಿತನಾದ ಯೇಸು ಕ್ರಿಸ್ತನನ್ನು ಚಿತ್ರಿಸುತ್ತದೆಂಬುದು ಸ್ಪಷ್ಟ. (ಪ್ರಕಟನೆ 1:13, 16) ಯೇಸು ನಿಜವಾಗಿಯೂ ಒಬ್ಬ ದೇವದೂತನಾಗಿದ್ದಾನೆಯೆ? ಒಂದು ವಿಧದಲ್ಲಿ, ಹೌದು, ಏಕೆಂದರೆ ಅವನೊಬ್ಬ ಪ್ರಧಾನ ದೇವದೂತನಾಗಿದ್ದಾನೆ. (1 ಥೆಸಲೋನಿಕ 4:16) ಯೆಹೋವನ ಆತ್ಮಜೀವಿ ಪುತ್ರರಲ್ಲಿ ಯೇಸು ಅತ್ಯಂತ ಬಲಿಷ್ಠನು. ಯೆಹೋವನು ಅವನಿಗೆ ತನ್ನ ಸಕಲ ದೇವದೂತ ಸೈನ್ಯಗಳ ಅಧಿಕಾರವನ್ನು ವಹಿಸಿದ್ದಾನೆ. ಈ ಪ್ರಧಾನ ದೇವದೂತನು ಖಂಡಿತವಾಗಿಯೂ ಸಹಾಯದ ಶಕ್ತಿಶಾಲಿ ಮೂಲನಾಗಿದ್ದಾನೆ. ಯಾವ ವಿಧಗಳಲ್ಲಿ?
9, 10. (ಎ) ನಾವು ಪಾಪಮಾಡುವಾಗ ಯೇಸು ನಮ್ಮ “ಸಹಾಯಕನು” ಆಗಿರುವುದು ಹೇಗೆ? (ಬಿ) ಯೇಸುವಿನ ಮಾದರಿಯಿಂದ ನಾವು ಯಾವ ಸಹಾಯವನ್ನು ಕಂಡುಕೊಳ್ಳಬಹುದು?
9 ವೃದ್ಧನಾಗಿದ್ದ ಅಪೊಸ್ತಲ ಯೋಹಾನನು ಬರೆದುದು: “ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ.” (1 ಯೋಹಾನ 2:1) ವಿಶೇಷವಾಗಿ, ನಾವು “ಪಾಪಮಾಡಿ”ದಾಗ ಯೇಸು ನಮ್ಮ “ಸಹಾಯಕನು” ಎಂದು ಯೋಹಾನನು ಸೂಚಿಸಿದ್ದೇಕೆ? ನಾವು ದಿನಾಲೂ ಪಾಪಮಾಡುತ್ತೇವೆ, ಮತ್ತು ಪಾಪವು ಮರಣಕ್ಕೆ ನಡೆಸುತ್ತದೆ. (ಪ್ರಸಂಗಿ 7:20; ರೋಮಾಪುರ 6:23) ಆದರೂ, ಯೇಸು ನಮ್ಮ ಪಾಪಗಳಿಗಾಗಿ ತನ್ನ ಜೀವವನ್ನು ಯಜ್ಞವಾಗಿ ಅರ್ಪಿಸಿದನು. ಮತ್ತು ನಮ್ಮ ಪರವಾಗಿ ಬೇಡಿಕೊಳ್ಳಲು ಅವನು ನಮ್ಮ ಕರುಣಾಳು ತಂದೆಯ ಪಕ್ಕದಲ್ಲಿದ್ದಾನೆ. ನಮ್ಮಲ್ಲಿ ಪ್ರತಿಯೊಬ್ಬನಿಗೂ ಅಂತಹ ಸಹಾಯ ಆವಶ್ಯಕ. ನಾವು ಅದನ್ನು ಹೇಗೆ ಪಡೆಯಬಹುದು? ನಾವು ನಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ಯೇಸುವಿನ ಯಜ್ಞದ ಆಧಾರದ ಮೇರೆಗೆ ಕ್ಷಮೆಯನ್ನು ಯಾಚಿಸುವುದು ಆವಶ್ಯಕ. ನಾವು ನಮ್ಮ ಪಾಪಗಳನ್ನು ಪುನರಾವರ್ತಿಸುವುದರಿಂದ ದೂರವಿರುವುದೂ ಆವಶ್ಯಕ.
10 ಯೇಸು ನಮ್ಮ ಪರವಾಗಿ ಸತ್ತನು ಮಾತ್ರವಲ್ಲ, ಅವನು ನಮಗಾಗಿ ಪರಿಪೂರ್ಣ ಮಾದರಿಯನ್ನೂ ಇಟ್ಟನು. (1 ಪೇತ್ರ 2:21) ಅವನ ಮಾದರಿಯು ನಮ್ಮನ್ನು ಮಾರ್ಗದರ್ಶಿಸುತ್ತಾ, ನಾವು ಗಂಭೀರ ಪಾಪಗಳಿಂದ ದೂರವಿರುವಂತೆ ಮತ್ತು ಯೆಹೋವ ದೇವರನ್ನು ಮೆಚ್ಚಿಸಲಾಗುವಂತೆ ನಮಗೆ ದಾರಿತೋರಿಸಲು ಸಹಾಯಮಾಡುತ್ತದೆ. ನಮಗೆ ಅಂತಹ ಸಹಾಯವಿರುವುದಕ್ಕೆ ನಾವು ಸಂತೋಷಪಡುವುದಿಲ್ಲವೆ? ಇನ್ನೊಂದು ಸಹಾಯಕ ಒದಗಿಸಲ್ಪಡುವುದೆಂದು ಯೇಸು ವಚನಕೊಟ್ಟಿದ್ದನು.
ಪವಿತ್ರಾತ್ಮದ ಸಹಾಯ
11, 12. ಯೆಹೋವನ ಆತ್ಮವೆಂದರೇನು, ಅದೆಷ್ಟು ಶಕ್ತಿಶಾಲಿ ಮತ್ತು ಅದು ಇಂದು ನಮಗೇಕೆ ಬೇಕಾಗಿದೆ?
11 ಯೇಸು ವಚನಕೊಟ್ಟದ್ದು: “ನಾನು ತಂದೆಯನ್ನು ಕೇಳಿಕೊಳ್ಳುವೆನು; ಆತನು ನಿಮಗೆ ಬೇರೊಬ್ಬ ಸಹಾಯಕನನ್ನು ಸದಾಕಾಲ ನಿಮ್ಮ ಸಂಗಡ ಇರುವದಕ್ಕೆ ಕೊಡುವನು. ಆ ಸಹಾಯಕನು ಯಾರಂದರೆ ಸತ್ಯದ ಆತ್ಮನೇ. ಲೋಕವು . . . ಆತನನ್ನು ಹೊಂದಲಾರದು.” (ಯೋಹಾನ 14:16, 17) ಈ “ಸತ್ಯದ ಆತ್ಮ” ಇಲ್ಲವೆ ಪವಿತ್ರಾತ್ಮವು, ಒಬ್ಬ ವ್ಯಕ್ತಿಯಲ್ಲ ಬದಲಾಗಿ ಶಕ್ತಿ—ಯೆಹೋವನ ಸ್ವಂತ ಕಾರ್ಯಕಾರಿ ಶಕ್ತಿಯಾಗಿದೆ. ಅದರ ಶಕ್ತಿ ಅಮಿತ. ವಿಶ್ವದ ಸೃಷ್ಟಿಯಲ್ಲಿ, ಪ್ರೇಕ್ಷಣೀಯ ಅದ್ಭುತಗಳನ್ನು ಮಾಡುವುದರಲ್ಲಿ ಮತ್ತು ತನ್ನ ಚಿತ್ತದ ದಾರ್ಶನಿಕ ಪ್ರಕಟನೆಗಳನ್ನು ಒದಗಿಸುವುದರಲ್ಲಿ ಯೆಹೋವನಿಂದ ಉಪಯೋಗಿಸಲ್ಪಟ್ಟ ಶಕ್ತಿಯು ಇದೇ. ಯೆಹೋವನು ಇಂದು ಆ ರೀತಿಯ ನಿರ್ದಿಷ್ಟ ವಿಧಗಳಲ್ಲಿ ತನ್ನ ಆತ್ಮವನ್ನು ಉಪಯೋಗಿಸದೆ ಇರುವುದರಿಂದ, ಅದು ನಮಗೆ ಆವಶ್ಯಕವಲ್ಲವೆಂದು ಇದರ ಅರ್ಥವೊ?
12 ಇಲ್ಲ! ಈ “ಕಠಿನ ಕಾಲ”ಗಳಲ್ಲಿ ನಮಗೆ ಯೆಹೋವನ ಆತ್ಮವು ಹಿಂದೆಂದಿಗಿಂತಲೂ ಹೆಚ್ಚಾಗಿ ಬೇಕಾಗಿದೆ. (2 ತಿಮೊಥೆಯ 3:1) ಕಷ್ಟಪರೀಕ್ಷೆಗಳನ್ನು ಸಹಿಸಿಕೊಳ್ಳಲು ಅದು ನಮಗೆ ಬಲವನ್ನೀಯುತ್ತದೆ. ನಮ್ಮನ್ನು ಯೆಹೋವನ ಹಾಗೂ ನಮ್ಮ ಆಧ್ಯಾತ್ಮಿಕ ಸೋದರಸೋದರಿಯರ ಹೆಚ್ಚು ಸಮೀಪಕ್ಕೆ ಸೆಳೆಯಬಲ್ಲ ಶ್ರೇಷ್ಠ ಗುಣಗಳನ್ನು ಬೆಳೆಸುವಂತೆ ಅದು ನಮಗೆ ಸಹಾಯಮಾಡುತ್ತದೆ. (ಗಲಾತ್ಯ 5:22, 23) ಹಾಗಾದರೆ ನಾವು ಯೆಹೋವನ ಈ ಆಶ್ಚರ್ಯಕರವಾದ ಸಹಾಯದಿಂದ ಹೇಗೆ ಪ್ರಯೋಜನಪಡೆಯಬಲ್ಲೆವು?
13, 14. (ಎ) ಯೆಹೋವನು ತನ್ನ ಪವಿತ್ರಾತ್ಮವನ್ನು ತನ್ನ ಜನರಿಗೆ ಸಿದ್ಧಮನಸ್ಸಿನಿಂದ ಒದಗಿಸುತ್ತಾನೆಂದು ನಾವೇಕೆ ಖಾತ್ರಿಯಿಂದಿರಬಹುದು? (ಬಿ) ಪವಿತ್ರಾತ್ಮದ ಕೊಡುಗೆಯನ್ನು ನಾವು ನಿಜವಾಗಿಯೂ ಸ್ವೀಕರಿಸುವುದಿಲ್ಲವೆಂಬುದನ್ನು ಯಾವ ವಿಧದ ವರ್ತನೆಯ ಮೂಲಕ ತೋರಿಸುತ್ತಿರಬಹುದು?
13 ಪ್ರಥಮವಾಗಿ, ನಾವು ಈ ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸುವುದು ಆವಶ್ಯಕ. ಯೇಸು ಹೇಳಿದ್ದು: “ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ.” (ಲೂಕ 11:13) ಹೌದು, ಯೆಹೋವನು ನಾವು ಕಲ್ಪಿಸಲಾಗದಷ್ಟು ಅತಿ ಉತ್ತಮ ತಂದೆಯಾಗಿದ್ದಾನೆ. ನಾವು ನಂಬಿಕೆಯಿಂದ ಪವಿತ್ರಾತ್ಮಕ್ಕಾಗಿ ಆತನನ್ನು ಮನಃಪೂರ್ವಕವಾಗಿ ಕೇಳಿಕೊಳ್ಳುವಲ್ಲಿ, ಆತನು ಈ ಕೊಡುಗೆಯನ್ನು ನಮಗೆ ಕೊಡದಿರುವನೆಂಬ ವಿಷಯವು ಅಚಿಂತ್ಯ. ಹಾಗಾದರೆ ಪ್ರಶ್ನೆಯು, ನಾವು ಅದಕ್ಕಾಗಿ ಕೇಳಿಕೊಳ್ಳುತ್ತೇವೊ? ಎಂದಾಗಿದೆ. ಪ್ರತಿದಿನದ ನಮ್ಮ ಪ್ರಾರ್ಥನೆಗಳಲ್ಲಿ ಈ ಬಿನ್ನಹವನ್ನು ಮಾಡಲು ನಮಗೆ ಸಕಾರಣವಿದೆ.
14 ಎರಡನೆಯದಾಗಿ, ನಾವು ಅದಕ್ಕೆ ಹೊಂದಿಕೆಯಾಗಿ ಕೆಲಸ ಮಾಡುವ ಮೂಲಕ ಆ ಕೊಡುಗೆಯನ್ನು ಅಂಗೀಕರಿಸುತ್ತೇವೆ. ದೃಷ್ಟಾಂತಕ್ಕಾಗಿ: ಒಬ್ಬ ಕ್ರೈಸ್ತನು ಅಶ್ಲೀಲ ಸಾಹಿತ್ಯವನ್ನು ನೋಡುವ ಪ್ರವೃತ್ತಿಯ ವಿರುದ್ಧ ಹೋರಾಡುತ್ತಿದ್ದಾನೆ ಎಂದಿಟ್ಟುಕೊಳ್ಳಿ. ಈ ಅಸಹ್ಯ ಚಟವನ್ನು ಪ್ರತಿರೋಧಿಸಲು ಅವನು ಪವಿತ್ರಾತ್ಮದ ಸಹಾಯಕ್ಕಾಗಿ ಪ್ರಾರ್ಥಿಸಿರುತ್ತಾನೆ. ಕ್ರೈಸ್ತ ಹಿರಿಯರಿಂದ ಸಲಹೆಯನ್ನು ಕೋರಿದಾಗ ಅವರು ಅವನಿಗೆ ನಿರ್ಣಾಯಕ ಕ್ರಮವನ್ನು ಕೈಕೊಳ್ಳಬೇಕೆಂದೂ, ಅಂತಹ ಕೀಳ್ಮಟ್ಟದ ಸಾಹಿತ್ಯದ ಹತ್ತಿರ ಹೋಗುವುದನ್ನೂ ನಿಲ್ಲಿಸಬೇಕೆಂದು ಸಲಹೆ ಕೊಟ್ಟಿದ್ದಾರೆ. (ಮತ್ತಾಯ 5:29) ಆದರೆ ಅವನು ಈ ಸಲಹೆಯನ್ನು ಅಲಕ್ಷಿಸಿ, ಅಂಥ ಪ್ರಲೋಭನೆಗಳಿಗೆ ಇನ್ನೂ ತನ್ನನ್ನು ಒಡ್ಡಿಕೊಳ್ಳುವುದಾದರೆ ಆಗೇನು? ಪವಿತ್ರಾತ್ಮವು ತನಗೆ ಸಹಾಯಮಾಡುವಂತೆ ಅವನು ಮಾಡಿದ ಪ್ರಾರ್ಥನೆಗೆ ಹೊಂದಿಕೆಯಲ್ಲಿ ಅವನು ಕೆಲಸ ಮಾಡುತ್ತಿದ್ದಾನೆಯೆ? ಇಲ್ಲವೆ ಅವನು ದೇವರಾತ್ಮವನ್ನು ದುಃಖಪಡಿಸುವ ಮತ್ತು ಹೀಗೆ ಆ ಕೊಡುಗೆಯನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾನೆಯೆ? (ಎಫೆಸ 4:30) ಯೆಹೋವನಿಂದ ಈ ಅದ್ಭುತಕರವಾದ ಸಹಾಯವನ್ನು ಪಡೆಯುತ್ತ ಇರುವುದನ್ನು ಖಚಿತಪಡಿಸಿಕೊಳ್ಳಲು ನಾವೆಲ್ಲರೂ ನಮ್ಮಿಂದ ಸಾಧ್ಯವಿರುವುದೆಲ್ಲವನ್ನು ಮಾಡುವುದು ನಿಜವಾಗಿಯೂ ಆವಶ್ಯಕ.
ದೇವರ ವಾಕ್ಯದಿಂದ ಸಹಾಯ
15. ಬೈಬಲನ್ನು ನಾವು ಒಂದು ಸಾಮಾನ್ಯ ಗ್ರಂಥವಾಗಿ ಭಾವಿಸುವುದಿಲ್ಲವೆಂದು ಹೇಗೆ ತೋರಿಸಬಲ್ಲೆವು?
15 ಯೆಹೋವನ ನಂಬಿಗಸ್ತ ಸೇವಕರಿಗೆ ಬೈಬಲು ಅನೇಕ ಶತಮಾನಗಳಿಂದ ಸಹಾಯದ ಉಗಮವಾಗಿ ಪರಿಣಮಿಸಿದೆ. ಆದರೆ ಪವಿತ್ರ ಶಾಸ್ತ್ರವನ್ನು ಕೇವಲ ಒಂದು ಸಾಮಾನ್ಯ ಗ್ರಂಥವಾಗಿ ಭಾವಿಸುವ ಬದಲು ಅದು ಸಹಾಯದ ಎಷ್ಟು ಶಕ್ತಿಶಾಲಿಯಾದ ಮೂಲವಾಗಿದೆ ಎಂಬುದನ್ನು ನಾವು ಮನಸ್ಸಿನಲ್ಲಿಡುವುದು ಆವಶ್ಯಕ. ಆ ಸಹಾಯವನ್ನು ಪಡೆಯಲು ಪ್ರಯತ್ನವು ಅಗತ್ಯ. ನಾವು ಬೈಬಲ್ ವಾಚನವನ್ನು ನಮ್ಮ ನಿಯತ ದಿನಚರಿಯ ಭಾಗವಾಗಿ ಮಾಡುವುದು ಆವಶ್ಯಕ.
16, 17. (ಎ) ದೇವರ ಧರ್ಮಶಾಸ್ತ್ರವನ್ನು ಓದುವುದರ ಪ್ರತಿಫಲಗಳನ್ನು ಕೀರ್ತನೆ 1:2, 3 ಹೇಗೆ ವರ್ಣಿಸುತ್ತದೆ? (ಬಿ) ಕೀರ್ತನೆ 1:3 ಶ್ರಮಭರಿತ ಕೆಲಸವನ್ನು ಹೇಗೆ ವರ್ಣಿಸುತ್ತದೆ?
16 ದೈವಭಕ್ತಿಯ ಪುರುಷನ ಕುರಿತು ಕೀರ್ತನೆ 1:1-3 ಹೇಳುವುದು: “ಯಾವನು . . . ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು. ಅವನು ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ [“ನೆಡಲ್ಪಟ್ಟಿರುವ,” NW] ಮರದ ಹಾಗಿರುವನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ, ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು.” ಆ ಭಾಗದ ಮುಖ್ಯ ವಿಚಾರ ನಿಮಗೆ ಹೊಳೆಯಿತೊ? ಆ ಮಾತುಗಳನ್ನು ಓದಿ, ಅದು ಪ್ರಶಾಂತವಾದ ಹಿನ್ನೆಲೆಯಿರುವ ಒಂದು ರಮಣೀಯ ದೃಶ್ಯವನ್ನು—ನದಿಯ ಪಕ್ಕದಲ್ಲಿ ಬೆಳೆಯುತ್ತಿರುವ ನೆರಳುಕೊಡುವ ಮರದ ದೃಶ್ಯವನ್ನು ಚಿತ್ರಿಸುತ್ತದೆಂದು ನೆನಸುವುದು ಸುಲಭ. ಅಂತಹ ಒಂದು ಸ್ಥಳದಲ್ಲಿ ಅಪರಾಹ್ನದ ನಸುನಿದ್ದೆ ಎಷ್ಟು ಆಹ್ಲಾದಕರವಾಗಿರುವುದು! ಆದರೆ ಈ ಕೀರ್ತನೆಯು ನಾವು ವಿಶ್ರಾಂತಿಯ ಕುರಿತು ಯೋಚಿಸುವಂತೆ ಕರೆ ಕೊಡುತ್ತಿಲ್ಲ. ಇದು ಒಂದು ತೀರ ಭಿನ್ನವಾದ ಚಿತ್ರವನ್ನು, ಶ್ರಮಭರಿತ ಕೆಲಸವನ್ನು ವರ್ಣಿಸುತ್ತದೆ. ಅದು ಹೇಗೆ?
17 ಇಲ್ಲಿ ಹೇಳಲ್ಪಟ್ಟಿರುವ ಮರವು ನದಿಯ ಪಕ್ಕದಲ್ಲಿ ಕೇವಲ ತನ್ನಷ್ಟಕ್ಕೆ ಅಕಸ್ಮಾತ್ತಾಗಿ ಬೆಳೆದು ಬಂದಿರುವ ಮರವಲ್ಲವೆಂಬುದನ್ನು ಗಮನಿಸಿ. ಇದು ಫಲಬಿಡುವ ಒಂದು ಮರವಾಗಿದ್ದು, ಆರಿಸಲ್ಪಟ್ಟಿರುವ ಸ್ಥಳವಾದ “ನೀರಿನ ಕಾಲಿವೆಗಳ ಬಳಿಯಲ್ಲಿ” ಉದ್ದೇಶಪೂರ್ವಕವಾಗಿ “ನೆಡಲ್ಪಟ್ಟಿರುವ” ಮರವಾಗಿದೆ. ಆದರೆ ಬೆಳೆಯುತ್ತಿರುವ ಒಂದು ಮರದ ಬಳಿಯಲ್ಲಿ ಹೇಗೆ ಒಂದಕ್ಕಿಂತ ಹೆಚ್ಚು ಕಾಲಿವೆಗಳಿರಲು ಸಾಧ್ಯ? ಫಲಬಿಡುವ ಮರಗಳ ಒಂದು ತೋಟದಲ್ಲಿ ತನ್ನ ಬೆಲೆಬಾಳುವ ಮರಗಳ ಬೇರುಗಳಿಗೆ ನೀರುಣಿಸಲು ಧಣಿಯು ನೀರಾವರಿ ಹಳ್ಳಗಳನ್ನು ತೋಡಸಾಧ್ಯವಿದೆ. ಹಾ! ಈಗ ವಿಷಯ ಸ್ಪಷ್ಟವಾಗುತ್ತದೆ! ನಾವು ಆಧ್ಯಾತ್ಮಿಕ ಅರ್ಥದಲ್ಲಿ ಆ ಮರದಂತೆ ಹುಲುಸಾಗಿ ಬೆಳೆಯುತ್ತಿರುವುದಾದರೆ, ಇದು ನಮಗೋಸ್ಕರ ಮಾಡಲ್ಪಟ್ಟಿರುವ ಬಹಳಷ್ಟು ಕೆಲಸದ ಕಾರಣವೇ ಆಗಿದೆ. ಸತ್ಯದ ಶುದ್ಧ ನೀರನ್ನು ನಮ್ಮ ಬಳಿಗೇ ತಂದುಕೊಡುವ ಒಂದು ಸಂಘಟನೆಯೊಂದಿಗಿನ ಸಹವಾಸದಲ್ಲಿ ನಾವಿದ್ದೇವೆ. ಆದರೆ ನಾವು ನಮ್ಮ ಪಾತ್ರವನ್ನೂ ಆಡಬೇಕು. ಈ ಅಮೂಲ್ಯ ಜಲವನ್ನು ಹೀರಿಕೊಳ್ಳುವಂಥ ಸ್ಥಾನದಲ್ಲಿ ನಾವು ನಮ್ಮನ್ನು ಇಟ್ಟುಕೊಳ್ಳಬೇಕು, ಹೌದು ದೇವರ ವಾಕ್ಯದ ಸತ್ಯಗಳನ್ನು ನಮ್ಮ ಹೃದಮನಗಳಿಗೆ ಸೇರಿಸಿಕೊಳ್ಳಲಿಕ್ಕಾಗಿ ಅಗತ್ಯವಿರುವ ಧ್ಯಾನ ಮತ್ತು ಸಂಶೋಧನೆಗಳನ್ನು ಮಾಡಬೇಕಾಗಿದೆ. ಹಾಗೆ ಮಾಡುವಲ್ಲಿ, ನಾವು ಕೂಡ ಒಳ್ಳೆಯ ಫಲವನ್ನು ಫಲಿಸುವೆವು.
18. ನಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರಗಳನ್ನು ಹುಡುಕಲು ಯಾವುದರ ಅಗತ್ಯವಿದೆ?
18 ತೆರೆಯಲ್ಪಡದೆ ಕಪಾಟಿನೊಳಗೆ ಇಡಲ್ಪಟ್ಟಿರುವ ಬೈಬಲಿನಿಂದ ಯಾವುದೇ ಪ್ರಯೋಜನ ಬರುವುದಿಲ್ಲ. ಅದೊಂದು ತಾಯಿತವೂ ಅಲ್ಲ, ರಕ್ಷಾಯಂತ್ರವೂ ಅಲ್ಲ. ನಾವು ಕಣ್ಮುಚ್ಚಿ ಬೈಬಲನ್ನು ತೆರೆದಾಗ ನಮ್ಮ ಮುಂದೆ ತೋರಿಬರುವ ಪುಟದಲ್ಲಿ ನಮ್ಮ ಪ್ರಶ್ನೆಗೆ ಉತ್ತರವನ್ನು ನಿರೀಕ್ಷಿಸಸಾಧ್ಯವಿಲ್ಲ. ನಾವು ನಿರ್ಣಯಗಳನ್ನು ಮಾಡುವಾಗ, “ದೈವಜ್ಞಾನವನ್ನು” ಪಡೆಯಲು ಹೂಣಿಡಲ್ಪಟ್ಟಿರುವ ನಿಕ್ಷೇಪಕ್ಕೆ ಹೇಗೊ ಹಾಗೆ ಅಗೆಯುವುದು ಆವಶ್ಯಕ. (ಜ್ಞಾನೋಕ್ತಿ 2:1-5) ಅನೇಕವೇಳೆ, ನಮ್ಮ ನಿರ್ದಿಷ್ಟ ಆವಶ್ಯಕತೆಗಳನ್ನು ಸಂಬೋಧಿಸುವ ಶಾಸ್ತ್ರೀಯ ಸಲಹೆಯನ್ನು ಕಂಡುಕೊಳ್ಳಲು ಶ್ರದ್ಧಾಪೂರ್ವಕವೂ ಜಾಗರೂಕವೂ ಆದ ಸಂಶೋಧನೆ ಅಗತ್ಯ. ಸಂಶೋಧನೆಯಲ್ಲಿ ನಮಗೆ ಸಹಾಯಮಾಡಲಿಕ್ಕಾಗಿ ನಮ್ಮಲ್ಲಿ ಅನೇಕ ಬೈಬಲಾಧಾರಿತ ಪ್ರಕಾಶನಗಳಿವೆ. ದೇವರ ವಾಕ್ಯದಲ್ಲಿರುವ ವಿವೇಕದ ನುಡಿಮುತ್ತುಗಳನ್ನು ಅಗೆದು ತೆಗೆಯಲಿಕ್ಕಾಗಿ ನಾವು ಈ ಪ್ರಕಾಶನಗಳನ್ನು ಉಪಯೋಗಿಸುವಾಗ, ನಾವು ನಿಜವಾಗಿಯೂ ಯೆಹೋವನು ನೀಡುತ್ತಿರುವ ಸಹಾಯದಿಂದ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದೇವೆ.
ಜೊತೆವಿಶ್ವಾಸಿಗಳಿಂದ ಸಹಾಯ
19. (ಎ) ಕಾವಲಿನಬುರುಜು ಮತ್ತು ಎಚ್ಚರ!ದಲ್ಲಿರುವ ಲೇಖನಗಳನ್ನು ಜೊತೆವಿಶ್ವಾಸಿಗಳ ಮೂಲಕ ಒದಗಿಸಲಾದ ಸಹಾಯವೆಂದು ಏಕೆ ವೀಕ್ಷಿಸಬಹುದು? (ಬಿ) ನಮ್ಮ ಪತ್ರಿಕೆಗಳಲ್ಲಿ ಒಂದು ನಿರ್ದಿಷ್ಟ ಲೇಖನದಿಂದ ನಿಮಗೆ ಸಹಾಯವು ಹೇಗೆ ದೊರಕಿದೆ?
19 ಯೆಹೋವನ ಮಾನವ ಸೇವಕರು ಒಬ್ಬರಿಗೊಬ್ಬರು ಸದಾ ಸಹಾಯದ ಮೂಲವಾಗಿದ್ದರು. ಹಾಗಿರುವಾಗ, ಈಗ ಯೆಹೋವನು ಈ ವಿಷಯದಲ್ಲಿ ಬದಲಾಗಿದ್ದಾನೊ? ನಿಶ್ಚಯವಾಗಿಯೂ ಇಲ್ಲ. ನಮಗೆ ಬೇಕಾಗಿದ್ದ ಸಹಾಯವನ್ನು ನಮ್ಮ ಜೊತೆವಿಶ್ವಾಸಿಗಳಿಂದ ತಕ್ಕ ಸಮಯದಲ್ಲಿ ಪಡೆದ ಸಂದರ್ಭಗಳು ನಮ್ಮಲ್ಲಿ ಪ್ರತಿಯೊಬ್ಬನಿಗೂ ನೆನಪಿದೆಯೆಂಬುದರಲ್ಲಿ ಸಂಶಯವಿಲ್ಲ. ದೃಷ್ಟಾಂತಕ್ಕಾಗಿ, ನಿಮಗೆ ಅಗತ್ಯವಿದ್ದಾಗ ಸಾಂತ್ವನ ಕೊಟ್ಟ ಅಥವಾ ಒಂದು ಸಮಸ್ಯೆಯನ್ನು ಬಗೆಹರಿಸಲು ನಿಮಗೆ ಸಹಾಯಮಾಡಿದ ಇಲ್ಲವೆ ನಿಮ್ಮ ನಂಬಿಕೆಯ ವಿರುದ್ಧ ಬಂದ ಒಂದು ಪಂಥಾಹ್ವಾನವನ್ನು ಎದುರಿಸಲು ಸಹಾಯಮಾಡಿದ ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಯ ಯಾವುದೊ ಒಂದು ಲೇಖನವನ್ನು ನೀವು ನೆನಪಿಸಿಕೊಳ್ಳಬಲ್ಲಿರಾ? ಆ ಸಹಾಯವನ್ನು “ಹೊತ್ತು ಹೊತ್ತಿಗೆ ಆಹಾರ”ವನ್ನು ಒದಗಿಸಲು ನೇಮಿಸಲ್ಪಟ್ಟ ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ನಿಮಗೆ ಒದಗಿಸಿದವನು ಯೆಹೋವನು.—ಮತ್ತಾಯ 24:45-47.
20. ಕ್ರೈಸ್ತ ಹಿರಿಯರು ಯಾವ ವಿಧಗಳಲ್ಲಿ “ಪುರುಷರಲ್ಲಿ ದಾನಗಳು” ಆಗಿ ಪರಿಣಮಿಸುತ್ತಾರೆ?
20 ಆದರೆ ಅನೇಕವೇಳೆ ನಮಗೆ ಜೊತೆವಿಶ್ವಾಸಿಗಳಿಂದ ಹೆಚ್ಚು ನೇರವಾದ ಸಹಾಯವು ಸಿಗುತ್ತದೆ. ನಮ್ಮ ಹೃದಯವನ್ನು ತಟ್ಟುವ ಒಂದು ಭಾಷಣವನ್ನು ಒಬ್ಬ ಕ್ರೈಸ್ತ ಹಿರಿಯನು ಕೊಟ್ಟಿರಬಹುದು, ಇಲ್ಲವೆ ಅವನು ಮಾಡುವ ಕುರಿಪಾಲನಾ ಭೇಟಿ ನಮ್ಮ ಕಷ್ಟಕಾಲದಲ್ಲಿ ನಮಗೆ ಸಹಾಯ ನೀಡುತ್ತದೆ, ಇಲ್ಲವೆ ನಮ್ಮಲ್ಲಿರುವ ಬಲಹೀನತೆಯನ್ನು ನೋಡಿ ಅದನ್ನು ಜಯಿಸಲು ಸಹಾಯಮಾಡುವ ದಯಾಪೂರ್ವಕವಾದ ಸಲಹೆಯನ್ನು ಅವನು ಕೊಡುತ್ತಾನೆ. ಒಬ್ಬಾಕೆ ಕ್ರೈಸ್ತಳಿಗೆ ಹಿರಿಯನೊಬ್ಬನಿಂದ ದೊರೆತ ಸಹಾಯದ ಕುರಿತು ಆಕೆ ಕೃತಜ್ಞತೆಯಿಂದ ಬರೆದುದು: “ನಾವು ಕ್ಷೇತ್ರ ಸೇವೆಯಲ್ಲಿದ್ದ ಸಮಯದಲ್ಲಿ ಆ ಹಿರಿಯನು, ನನ್ನ ಮನಸ್ಸಿನಲ್ಲಿದ್ದ ವಿಚಾರಗಳನ್ನು ಹೊರತರಲು ಸಮಯ ಮಾಡಿದನು. ಅದಕ್ಕೆ ಹಿಂದಿನ ರಾತ್ರಿಯೇ, ಯಾರೊಂದಿಗಾದರೂ ಮಾತಾಡುವ ಸಂದರ್ಭವು ದೊರೆಯುವಂತೆ ನಾನು ಯೆಹೋವನಿಗೆ ಪ್ರಾರ್ಥಿಸಿದ್ದೆ. ಮರುದಿನವೇ, ಈ ಸಹೋದರನು ಕನಿಕರಭಾವದಿಂದ ನನ್ನೊಂದಿಗೆ ಮಾತಾಡಿದನು. ಯೆಹೋವನು ಅನೇಕ ವರುಷಗಳಿಂದ ನನಗೆ ಹೇಗೆ ಸಹಾಯಮಾಡುತ್ತಾ ಬಂದಿದ್ದನೆಂಬುದನ್ನು ನೋಡುವಂತೆ ಅವನು ಸಹಾಯಮಾಡಿದನು. ಈ ಹಿರಿಯನನ್ನು ನನ್ನ ಬಳಿ ಕಳುಹಿಸಿದ್ದಕ್ಕಾಗಿ ನಾನು ಯೆಹೋವನಿಗೆ ಕೃತಜ್ಞಳು.” ಈ ಎಲ್ಲಾ ವಿಧಗಳಲ್ಲಿ, ಜೀವದ ಮಾರ್ಗದಲ್ಲಿ ತಾಳಿಕೊಂಡು ಮುಂದುವರಿಯುವಂತೆ ಸಹಾಯಮಾಡಲು ಯೆಹೋವನು ಯೇಸು ಕ್ರಿಸ್ತನ ಮೂಲಕ ಒದಗಿಸಿರುವ “ಪುರುಷರಲ್ಲಿ ದಾನಗಳು” ತಾವಾಗಿದ್ದೇವೆಂದು ಕ್ರೈಸ್ತ ಹಿರಿಯರು ತೋರಿಸುತ್ತಾರೆ.—ಎಫೆಸ 4:8, NW.
21, 22. (ಎ) ಸಭೆಯಲ್ಲಿರುವವರು ಫಿಲಿಪ್ಪಿ 2:4ರ ಸಲಹೆಯನ್ನು ಅನ್ವಯಿಸಿಕೊಳ್ಳುವಾಗ ಏನು ಪರಿಣಮಿಸುತ್ತದೆ? (ಬಿ) ದಯೆಯ ಚಿಕ್ಕದಾದ ಕೃತ್ಯಗಳು ಸಹ ಪ್ರಾಮುಖ್ಯವಾಗಿರುತ್ತವೆ ಏಕೆ?
21 ಹಿರಿಯರು ಮಾತ್ರವಲ್ಲ, ಪ್ರತಿಯೊಬ್ಬ ನಂಬಿಗಸ್ತ ಕ್ರೈಸ್ತನು, “ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ” ಎಂಬ ಪ್ರೇರಿತ ಆಜ್ಞೆಯನ್ನು ಅನ್ವಯಿಸಿಕೊಳ್ಳಲು ಬಯಸುತ್ತಾನೆ. (ಫಿಲಿಪ್ಪಿ 2:4) ಕ್ರೈಸ್ತ ಸಭೆಯಲ್ಲಿರುವವರು ಆ ಸಲಹೆಯನ್ನು ಅನ್ವಯಿಸಿಕೊಳ್ಳುವಾಗ ಮನತಟ್ಟುವಂಥ ದಯಾಪರ ಕೃತ್ಯಗಳು ಫಲಿಸುತ್ತವೆ. ದೃಷ್ಟಾಂತಕ್ಕಾಗಿ, ಒಂದು ಕುಟುಂಬವು ತಟ್ಟನೆ, ಇಮ್ಮಡಿ ದುರಂತಕ್ಕೊಳಗಾಯಿತು. ತಂದೆಯು ತನ್ನ ಚಿಕ್ಕ ಮಗಳನ್ನು ಅಂಗಡಿಗೆ ಕರೆದುಕೊಂಡು ಹೋಗಿದ್ದನು. ಮನೆಗೆ ಹಿಂದಿರುಗುವಾಗ ಅವರು ಒಂದು ವಾಹನ ಅಪಘಾತಕ್ಕೆ ತುತ್ತಾದರು. ಮಗಳು ಅಲ್ಲೇ ಆಸುನೀಗಿದಳು, ತಂದೆ ತೀವ್ರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲ್ಪಟ್ಟನು. ಆಸ್ಪತ್ರೆಯಿಂದ ಹೊರಬಂದಾಗ, ಮೊದಲಲ್ಲಿ ಅವನು ಎಷ್ಟು ನಿಶ್ಶಕ್ತನಾಗಿದ್ದನೆಂದರೆ ತನ್ನ ಸ್ವಂತ ದೇಹಾರೈಕೆಯನ್ನು ಮಾಡಲು ಅವನು ಶಕ್ತನಾಗಿರಲಿಲ್ಲ. ಅವನ ಹೆಂಡತಿಯು ಭಾವಾತ್ಮಕವಾಗಿ ಜರ್ಜರಿತಳಾಗಿ, ಒಬ್ಬಳೇ ಅವನ ಆರೈಕೆಮಾಡಲು ಅಶಕ್ತಳಾಗಿದ್ದಳು. ಆಗ ಈ ದುಃಖಿತ ದಂಪತಿಯನ್ನು ಸಭೆಯಲ್ಲಿದ್ದ ಇನ್ನೊಬ್ಬ ದಂಪತಿಯು ತಮ್ಮ ಮನೆಗೆ ಕರೆದುಕೊಂಡು ಹೋಗಿ ಅನೇಕ ವಾರಗಳ ತನಕ ಅವರನ್ನು ಪರಾಮರಿಸಿದರು.
22 ಮಾಡಲ್ಪಡುವ ಎಲ್ಲಾ ದಯಾಪರ ಕೃತ್ಯಗಳಲ್ಲಿ ಇಂತಹ ದುರಂತ ಮತ್ತು ವ್ಯಕ್ತಿಪರ ತ್ಯಾಗಗಳು ಒಳಗೊಂಡಿರುವುದಿಲ್ಲ ನಿಜ. ನಾವು ಪಡೆಯುವ ಕೆಲವು ಸಹಾಯ ಎಷ್ಟೋ ಚಿಕ್ಕ ರೀತಿಯದ್ದಾಗಿದೆ. ಆದರೆ ಒಂದು ದಯಾಪರ ಕೃತ್ಯವು ಎಷ್ಟೇ ಚಿಕ್ಕದಾಗಿದ್ದರೂ ನಾವು ಅದಕ್ಕೆ ಕೃತಜ್ಞರಾಗಿರುತ್ತೇವೆ ಅಲ್ಲವೆ? ನಿಮಗೆ ಸಹಾಯದ ಅಗತ್ಯವಿದ್ದ ಸಮಯದಲ್ಲಿ ಒಬ್ಬ ಸಹೋದರನೊ ಸಹೋದರಿಯೊ ಒಂದು ದಯೆಯ ಮಾತನ್ನೊ ಚಿಂತನೆಯ ಕ್ರಿಯೆಯನ್ನೊ ಮಾಡಿ ತಕ್ಕ ಸಹಾಯವನ್ನು ಕೊಟ್ಟ ಸಮಯಗಳು ನಿಮ್ಮ ಜ್ಞಾಪಕಕ್ಕೆ ಬರುತ್ತವೊ? ಯೆಹೋವನು ಅನೇಕವೇಳೆ ಇಂತಹ ರೀತಿಗಳಲ್ಲಿ ನಮ್ಮನ್ನು ಪರಾಮರಿಸುತ್ತಾನೆ.—ಜ್ಞಾನೋಕ್ತಿ 17:17; 18:24.
23. ನಾವು ಒಬ್ಬರಿಗೊಬ್ಬರು ಸಹಾಯಮಾಡಲು ಪ್ರಯತ್ನಿಸುವುದನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ?
23 ಇತರರಿಗೆ ಸಹಾಯಮಾಡುವ ಸಾಧನವಾಗಿ ಯೆಹೋವನು ನಿಮ್ಮನ್ನು ಉಪಯೋಗಿಸುವುದು ನಿಮಗೆ ಇಷ್ಟವೊ? ಈ ಸದವಕಾಶ ನಿಮಗೆ ತೆರೆದಿದೆ. ವಾಸ್ತವದಲ್ಲಿ, ನೀವು ಆ ಕುರಿತು ಮಾಡುವ ಪ್ರಯತ್ನವನ್ನು ಯೆಹೋವನು ಮಾನ್ಯಮಾಡುತ್ತಾನೆ. ಆತನ ವಾಕ್ಯ ಹೇಳುವುದು: “ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು; ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರಮಾಡುವನು.” (ಜ್ಞಾನೋಕ್ತಿ 19:17) ನಮ್ಮ ಸೋದರಸೋದರಿಯರಿಗಾಗಿ ನಮ್ಮನ್ನು ವ್ಯಯಿಸಿಕೊಳ್ಳುವುದರಿಂದ ಮಹದಾನಂದವು ನಮ್ಮದಾಗುತ್ತದೆ. (ಅ. ಕೃತ್ಯಗಳು 20:35) ಆದರೆ ಯಾರು ತಮ್ಮನ್ನು ಬೇಕುಬೇಕೆಂದು ಎಲ್ಲರಿಂದ ಬೇರ್ಪಡಿಸಿಕೊಳ್ಳುತ್ತಾರೊ ಅವರಿಗೆ ಅಂತಹ ಸಹಾಯ ನೀಡುವುದರಿಂದ ಬರುವ ಆನಂದವಾಗಲಿ ಅದನ್ನು ಪಡೆಯುವುದರಿಂದ ಬರುವ ಪ್ರೋತ್ಸಾಹವಾಗಲಿ ದೊರೆಯುವುದಿಲ್ಲ. (ಜ್ಞಾನೋಕ್ತಿ 18:1) ಆದಕಾರಣ, ನಾವು ಒಬ್ಬರನ್ನೊಬ್ಬರು ಪ್ರೋತ್ಸಾಹಿಸುವಂತೆ ಕ್ರೈಸ್ತ ಕೂಟಗಳಲ್ಲಿ ಕೂಡಿಬರುವುದರಲ್ಲಿ ನಂಬಿಗಸ್ತರಾಗಿರೋಣ.—ಇಬ್ರಿಯ 10:24, 25.
24. ಯೆಹೋವನ ಹಿಂದಿನ ಕಾಲಗಳ ಪ್ರೇಕ್ಷಣೀಯ ಅದ್ಭುತಗಳನ್ನು ನಾವು ನೋಡಿಲ್ಲದ ಕಾರಣ ಅವುಗಳಿಂದ ವಂಚಿತರಾಗಿದ್ದೇವೆಂದು ನಾವೇಕೆ ಭಾವಿಸಬಾರದು?
24 ಯೆಹೋವನು ನಮಗೆ ಸಹಾಯಮಾಡುವ ವಿಧಗಳ ಕುರಿತು ಚಿಂತಿಸುವುದು ಆನಂದಕರವಾಗಿರುವುದಿಲ್ಲವೆ? ಯೆಹೋವನು ತನ್ನ ಉದ್ದೇಶಗಳನ್ನು ನೆರವೇರಿಸಲಿಕ್ಕಾಗಿ ಪ್ರೇಕ್ಷಣೀಯ ಅದ್ಭುತಗಳನ್ನು ಮಾಡುವ ಸಮಯದಲ್ಲಿ ನಾವು ಜೀವಿಸುತ್ತಿಲ್ಲವಾದರೂ, ನಾವು ಆ ಸಂದರ್ಭಗಳಿಂದ ವಂಚಿತರೆಂದು ಭಾವಿಸಬೇಕಾಗಿಲ್ಲ. ನಿಜವಾಗಿಯೂ ಪ್ರಮುಖವಾದ ವಿಚಾರವೇನಂದರೆ, ನಾವು ನಂಬಿಗಸ್ತರಾಗಿ ಉಳಿಯಲು ಬೇಕಾಗಿರುವ ಸಹಾಯವನ್ನೆಲ್ಲ ಯೆಹೋವನು ಒದಗಿಸುತ್ತಾನೆ. ಮತ್ತು ನಾವು ನಂಬಿಕೆಯಿಂದ ಒಟ್ಟುಗೂಡಿ ತಾಳಿಕೊಳ್ಳುವಲ್ಲಿ, ಇತಿಹಾಸದಾದ್ಯಂತ ಯೆಹೋವನು ಮಾಡಿರುವ ಕ್ರಿಯೆಗಳಲ್ಲೇ ಅತ್ಯಂತ ಶೋಭಾಯಮಾನವೂ ಮಹಿಮಾಭರಿತವೂ ಆದ ಕ್ರಿಯೆಯನ್ನು ನೋಡಲು ಜೀವಿಸುವೆವು! ಆದುದರಿಂದ ನಮ್ಮ 2005ನೆಯ ವಾರ್ಷಿಕವಚನವಾದ, “ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ” ಎಂಬ ಮಾತುಗಳನ್ನು ನಾವು ಪ್ರತಿಧ್ವನಿಸುವಂತೆ ಯೆಹೋವನ ಪ್ರೀತಿಪೂರ್ವಕವಾದ ಸಹಾಯವನ್ನು ಅಂಗೀಕರಿಸಿ ಅದನ್ನು ಪೂರ್ಣವಾಗಿ ಉಪಯೋಗಿಸಲು ನಿರ್ಧರಿಸೋಣ.—ಕೀರ್ತನೆ 121:2.
ನೀವೇನು ನೆನಸುತ್ತೀರಿ?
ಯೆಹೋವನು ಇಂದು ನಮಗೆ ಅಗತ್ಯವಿರುವ ಸಹಾಯವನ್ನು
• ದೇವದೂತರ ಮೂಲಕ
• ತನ್ನ ಪವಿತ್ರಾತ್ಮದ ಮೂಲಕ
• ತನ್ನ ಪ್ರೇರಿತ ವಾಕ್ಯದ ಮೂಲಕ
• ಜೊತೆವಿಶ್ವಾಸಿಗಳ ಮೂಲಕ ಹೇಗೆ ಒದಗಿಸುತ್ತಾನೆ?
[ಪುಟ 18ರಲ್ಲಿರುವ ಚಿತ್ರ]
ದೇವದೂತರು ನಮ್ಮ ಸಾರುವ ಕೆಲಸವನ್ನು ಬೆಂಬಲಿಸುತ್ತಿದ್ದಾರೆಂದು ತಿಳಿಯುವುದು ಪ್ರೋತ್ಸಾಹದಾಯಕ
[ಪುಟ 21ರಲ್ಲಿರುವ ಚಿತ್ರ]
ಯೆಹೋವನು ನಮ್ಮ ಜೊತೆವಿಶ್ವಾಸಿಗಳಲ್ಲಿ ಒಬ್ಬರನ್ನು ನಮಗೆ ಬೇಕಾಗಿರುವ ಸಾಂತ್ವನವನ್ನು ಕೊಡಲಿಕ್ಕಾಗಿ ಉಪಯೋಗಿಸಬಹುದು