ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w04 12/15 ಪು. 12-17
  • ಯೆಹೋವನು ನಮ್ಮ ಸಹಾಯಕನು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನು ನಮ್ಮ ಸಹಾಯಕನು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ವಿಫಲಗೊಳ್ಳದ ಸಹಾಯದ ಮೂಲನು
  • ದೇವದೂತರಿಂದ ಸಹಾಯ
  • ಪವಿತ್ರಾತ್ಮದ ಮೂಲಕ ಸಹಾಯ
  • ದೇವರ ವಾಕ್ಯದಿಂದ ಸಹಾಯ
  • ಜೊತೆವಿಶ್ವಾಸಿಗಳಿಂದ ಸಹಾಯ
  • ಯೆಹೋವನ ಸಹಾಯವನ್ನು ನೀವು ಅಂಗೀಕರಿಸುತ್ತೀರೊ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ದೇವದೂತರ ಸಹಾಯ
    ಮಹಾ ಬೋಧಕನಿಂದ ಕಲಿಯೋಣ
  • ದೇವದೂತರು ನಿಮಗೆ ಹೇಗೆ ಸಹಾಯಮಾಡಬಲ್ಲರು?
    ಕಾವಲಿನಬುರುಜು—1998
  • ದೇವದೂತರು ನಮ್ಮ ಮೇಲೆ ಪರಿಣಾಮಬೀರುವ ವಿಧ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
w04 12/15 ಪು. 12-17

ಯೆಹೋವನು ನಮ್ಮ ಸಹಾಯಕನು

“ಭೂಮ್ಯಾಕಾಶಗಳನ್ನು ನಿರ್ಮಿಸಿದ ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ.”​—ಕೀರ್ತನೆ 121:2.

1, 2. (ಎ) ನಮಗೆಲ್ಲರಿಗೂ ಆಗಾಗ್ಗೆ ಸಹಾಯದ ಅಗತ್ಯವಿರುತ್ತದೆಂದು ಏಕೆ ಹೇಳಸಾಧ್ಯವಿದೆ? (ಬಿ) ಯೆಹೋವನು ಯಾವ ವಿಧದ ಸಹಾಯಕನು?

ನಮ್ಮಲ್ಲಿ ಸಹಾಯದ ಅಗತ್ಯವೇ ಇಲ್ಲದವರು ಯಾರಿದ್ದಾರೆ? ಆಗಾಗ್ಗೆ ನಮಗೆಲ್ಲರಿಗೂ ಸಹಾಯದ ಅಗತ್ಯವಿರುತ್ತದೆ ಎಂಬುದು ಸತ್ಯಾಂಶ. ದೊಡ್ಡ ಹೊರೆಯಂತಿರುವ ಸಮಸ್ಯೆಯೊಂದನ್ನು ನಿಭಾಯಿಸಲು, ಸಂಕಟಮಯ ನಷ್ಟವನ್ನು ತಾಳಿಕೊಳ್ಳಲು, ಕಷ್ಟಕರವಾದ ಪರೀಕ್ಷೆಯನ್ನು ಸಹಿಸಿಕೊಳ್ಳಲು ಸಹಾಯವು ಅತ್ಯಗತ್ಯ. ಸಹಾಯದ ಅಗತ್ಯವಿರುವಾಗ, ಜನರು ಅನೇಕವೇಳೆ ಕಾಳಜಿವಹಿಸುವಂಥ ಸ್ನೇಹಿತನೊಬ್ಬನ ಕಡೆಗೆ ತಿರುಗುತ್ತಾರೆ. ಅಂತಹ ಸ್ನೇಹಿತನೊಬ್ಬನು ಹೊರೆಯಲ್ಲಿ ಭಾಗಿಯಾಗುವಾಗ ಅದನ್ನು ಹೊತ್ತುಕೊಳ್ಳುವುದು ಹೆಚ್ಚು ಸುಲಭವಾಗಬಹುದು. ಆದರೆ ಜೊತೆಮಾನವರು ಕೊಡಸಾಧ್ಯವಿರುವ ಸಹಾಯಕ್ಕೆ ಒಂದು ಮಿತಿಯಿರುತ್ತದೆ. ಅಷ್ಟುಮಾತ್ರವಲ್ಲದೆ, ಸಹಾಯ ಬೇಕಾಗಿರುವಾಗ ಇತರರು ಅದನ್ನು ಕೊಡುವ ಸ್ಥಾನದಲ್ಲಿ ಯಾವಾಗಲೂ ಇರುವುದಿಲ್ಲ.

2 ಆದರೂ, ಅಪರಿಮಿತ ಶಕ್ತಿಯೂ ಸಹಾಯಸಾಧನಗಳೂ ಇರುವ ಸಹಾಯಕನೊಬ್ಬನಿದ್ದಾನೆ. ಅಲ್ಲದೆ ಆತನು ನಮ್ಮನ್ನೆಂದಿಗೂ ತೊರೆಯದಿರುವ ಆಶ್ವಾಸನೆಯನ್ನೂ ಕೊಡುತ್ತಾನೆ. ಕೀರ್ತನೆಗಾರನು ಈತನನ್ನೇ ಗುರುತಿಸಿ, ಪೂರ್ಣ ಆಶ್ವಾಸನೆಯಿಂದ ಪ್ರಕಟಿಸಿದ್ದು: “ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ.” (ಕೀರ್ತನೆ 121:2) ಯೆಹೋವನು ತನಗೆ ಸಹಾಯ ನೀಡುವನೆಂಬ ದೃಢಭರವಸೆ ಏಕೆ ಈ ಕೀರ್ತನೆಗಾರನಲ್ಲಿತ್ತು? ಆ ಪ್ರಶ್ನೆಗೆ ಉತ್ತರವನ್ನು ಪಡೆಯಲು ನಾವು ಕೀರ್ತನೆ 121ನ್ನು ಪರೀಕ್ಷಿಸೋಣ. ಹೀಗೆ ಮಾಡುವುದರಿಂದ, ನಾವು ಸಹ ದೃಢಭರವಸೆಯಿಂದ ಯೆಹೋವನನ್ನು ನಮ್ಮ ಸಹಾಯಕನನ್ನಾಗಿ ಏಕೆ ಪರಿಗಣಿಸಬಲ್ಲೆವೆಂಬುದನ್ನು ಗ್ರಹಿಸಲು ಶಕ್ತರಾಗುವೆವು.

ವಿಫಲಗೊಳ್ಳದ ಸಹಾಯದ ಮೂಲನು

3. ಕೀರ್ತನೆಗಾರನು ಯಾವ ಪರ್ವತಗಳ ಕಡೆಗೆ ಕಣ್ಣೆತ್ತಿ ನೋಡುತ್ತಿದ್ದಿರಬಹುದು, ಮತ್ತು ಏಕೆ?

3 ಕೀರ್ತನೆಗಾರನು ಯೆಹೋವನ ಸೃಷ್ಟಿಕರ್ತೃತ್ವವನ್ನು ಈ ಭರವಸೆಗೆ ಒಂದು ಆಧಾರವಾಗಿ ತೋರಿಸುತ್ತಾ ಆರಂಭಿಸುತ್ತಾನೆ: “ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ; ನನ್ನ ಸಹಾಯವು ಎಲ್ಲಿಂದ ಬರುವದು? ಭೂಮ್ಯಾಕಾಶಗಳನ್ನು ನಿರ್ಮಿಸಿದ ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ.” (ಕೀರ್ತನೆ 121:​1, 2) ಕೀರ್ತನೆಗಾರನು ಯಾವುದೋ ಒಂದು ಪರ್ವತವನ್ನು ಕಣ್ಣೆತ್ತಿ ನೋಡಲಿಲ್ಲ. ಈ ಮಾತುಗಳು ಬರೆಯಲ್ಪಟ್ಟಾಗ, ಯೆಹೋವನ ದೇವಾಲಯವು ಯೆರೂಸಲೇಮಿನಲ್ಲಿತ್ತು. ಯೆಹೂದದ ಪರ್ವತಗಳಲ್ಲಿ ಎತ್ತರದಲ್ಲಿ ನೆಲೆಸಿದ್ದ ಆ ಪಟ್ಟಣವು ಯೆಹೋವನ ಸಾಂಕೇತಿಕ ವಾಸಸ್ಥಾನವಾಗಿತ್ತು. (ಕೀರ್ತನೆ 135:21) ಕೀರ್ತನೆಗಾರನು ಯೆಹೋವನ ಆಲಯವು ಕಟ್ಟಲ್ಪಟ್ಟಿದ್ದ ಆ ಪರ್ವತಗಳ ಕಡೆಗೆ, ಯೆಹೋವನ ಸಹಾಯಕ್ಕಾಗಿ ಭರವಸೆಯಿಂದ ಕಣ್ಣೆತ್ತಿ ನೋಡಿದ್ದಿರಬಹುದು. ಯೆಹೋವನು ಸಹಾಯಮಾಡಶಕ್ತನೆಂಬ ವಿಷಯದಲ್ಲಿ ಕೀರ್ತನೆಗಾರನು ಅಷ್ಟು ಖಾತ್ರಿಯಿಂದದ್ದೇಕೆ? ಏಕೆಂದರೆ ಆತನು “ಭೂಮ್ಯಾಕಾಶಗಳನ್ನು ನಿರ್ಮಿಸಿದ”ವನಾಗಿದ್ದಾನೆ. ಕೀರ್ತನೆಗಾರನು ಕಾರ್ಯತಃ, ‘ನನಗೆ ಸಹಾಯಮಾಡುವ ವಿಷಯದಲ್ಲಿ ಸರ್ವಶಕ್ತನಾದ ಸೃಷ್ಟಿಕರ್ತನನ್ನು ಯಾವುದೂ ತಡೆದು ಹಿಡಿಯಸಾಧ್ಯವಿಲ್ಲ!’ ಎಂದು ಹೇಳುತ್ತಿದ್ದನು.​—ಯೆಶಾಯ 40:26.

4. ಯೆಹೋವನು ತನ್ನ ಜನರ ಆವಶ್ಯಕತೆಗಳ ಕುರಿತು ಸದಾ ಎಚ್ಚರವಾಗಿದ್ದಾನೆಂದು ಕೀರ್ತನೆಗಾರನು ಹೇಗೆ ತೋರಿಸಿದನು, ಮತ್ತು ಅದು ಒಂದು ಸಾಂತ್ವನದಾಯಕ ವಿಚಾರವಾಗಿದೆಯೇಕೆ?

4 ಯೆಹೋವನು ತನ್ನ ಸೇವಕರ ಆವಶ್ಯಕತೆಗಳ ವಿಷಯದಲ್ಲಿ ಸದಾ ಎಚ್ಚರವಾಗಿರುತ್ತಾನೆಂದು ಕೀರ್ತನೆಗಾರನು ಮುಂದಕ್ಕೆ ವಿವರಿಸಿದನು: “ಆತನು ನಿನ್ನ ಪಾದಗಳನ್ನು ಕದಲಗೊಡಿಸದಿರಲಿ; ನಿನ್ನನ್ನು ಕಾಯುವವನು ತೂಕಡಿಸದಿರಲಿ. ಇಗೋ, ಇಸ್ರಾಯೇಲ್ಯರನ್ನು ಕಾಯುವಾತನು ತೂಕಡಿಸುವದಿಲ್ಲ, ನಿದ್ರಿಸುವದಿಲ್ಲ.” (ಕೀರ್ತನೆ 121:3, 4) ತನ್ನಲ್ಲಿ ಭರವಸೆಯಿಡುವವರು ‘ಕದಲಿಹೋಗುವಂತೆ’ ಇಲ್ಲವೆ ಚೇತರಿಸಿಕೊಳ್ಳಲಾಗದಂಥ ರೀತಿಯಲ್ಲಿ ಬಿದ್ದುಹೋಗುವಂತೆ ದೇವರು ಅನುಮತಿಸುವುದು ಅಸಾಧ್ಯ. (ಜ್ಞಾನೋಕ್ತಿ 24:16) ಏಕೆ ಅಸಾಧ್ಯ? ಏಕೆಂದರೆ ಯೆಹೋವನು, ಪೂರ್ತಿ ಎಚ್ಚರವಾಗಿದ್ದು ತನ್ನ ಕುರಿಗಳನ್ನು ಕಾಯುವ ಒಬ್ಬ ಕುರುಬನಂತಿದ್ದಾನೆ. ಇದು ಅತಿ ಸಾಂತ್ವನದಾಯಕವಾದ ವಿಚಾರವಾಗಿದೆಯಲ್ಲವೆ? ಆತನು ತನ್ನ ಜನರ ಆವಶ್ಯಕತೆಗಳ ಕಡೆಗೆ ಒಂದು ಕ್ಷಣವೂ ಕಣ್ಣುಮುಚ್ಚಿಕೊಂಡಿರುವುದಿಲ್ಲ. ಅಹೋರಾತ್ರಿ ಅವರು ಆತನ ಕಟ್ಟೆಚ್ಚರಿಕೆಯ ಕಾವಲಿನಲ್ಲಿರುತ್ತಾರೆ.

5. ಯೆಹೋವನು “ಬಲಗಡೆಯ”ಲ್ಲಿದ್ದಾನೆಂದು ಹೇಳಲಾಗಿರುವುದೇಕೆ?

5 ಯೆಹೋವನು ತನ್ನ ಜನರ ನಿಷ್ಠಾವಂತ ಸಂರಕ್ಷಕನಾಗಿದ್ದಾನೆಂಬ ಭರವಸೆಯಿಂದ ಕೀರ್ತನೆಗಾರನು ಬರೆದುದು: “ನಿನ್ನನ್ನು ಕಾಯುವವನು ಯೆಹೋವನೇ; ನಿನ್ನ ಬಲಗಡೆಯಲ್ಲಿ ನೆರಳಿನಂತೆ ನಿಂತಿರುವಾತನು ಯೆಹೋವನೇ. ಹಗಲಲ್ಲಿ ಸೂರ್ಯನೂ ಇರುಳಲ್ಲಿ ಚಂದ್ರನೂ ನಿನ್ನನ್ನು ಬಾಧಿಸುವದಿಲ್ಲ.” (ಕೀರ್ತನೆ 121:5, 6) ಮಧ್ಯಪೂರ್ವ ದೇಶಗಳಲ್ಲಿ ಕಾಲ್ನಡಿಗೆಯಲ್ಲೇ ಪ್ರಯಾಣಿಸುವ ಒಬ್ಬ ವ್ಯಕ್ತಿಗೆ ಒಂದು ನೆರಳಿನ ಮರೆಯು ಸೂರ್ಯಝಳದಿಂದ ಅವನು ಬಹಳವಾಗಿ ಅಪೇಕ್ಷಿಸುವಂಥ ರಕ್ಷಣೆಯನ್ನು ಒದಗಿಸುತ್ತಿತ್ತು. ಯೆಹೋವನು ತನ್ನ ಜನರಿಗೆ ನೆರಳಿನಂತಿದ್ದು ವಿಪತ್ತೆಂಬ ಸುಡುವ ಶಾಖದಿಂದ ಅವರನ್ನು ರಕ್ಷಿಸುತ್ತಾನೆ. ಯೆಹೋವನು “ಬಲಗಡೆಯಲ್ಲಿ” ಇದ್ದಾನೆಂದು ಹೇಳಲಾಗಿರುವುದನ್ನು ಗಮನಿಸಿ. ಪುರಾತನಕಾಲದ ಯುದ್ಧಗಳಲ್ಲಿ, ಸೈನಿಕನು ತನ್ನ ಎಡಗೈಯಲ್ಲಿ ಹಿಡಿಯುತ್ತಿದ್ದ ಗುರಾಣಿಯು ಅವನ ಬಲಗೈಯನ್ನು ಪೂರ್ತಿಯಾಗಿ ರಕ್ಷಿಸುತ್ತಿರಲಿಲ್ಲ. ಆಗ ನಿಷ್ಠಾವಂತ ಸ್ನೇಹಿತನೊಬ್ಬನು ಆ ಸೈನಿಕನ ಬಲಗಡೆಯಲ್ಲಿ ನಿಂತು ಹೋರಾಡುವ ಮೂಲಕ ರಕ್ಷಣೆಯನ್ನು ಒದಗಿಸಬಹುದಾಗಿತ್ತು. ಯೆಹೋವನು ಅಂತಹ ಸ್ನೇಹಿತನೋಪಾದಿ ನಿಷ್ಠೆಯಿಂದ ತನ್ನ ಆರಾಧಕರ ಪಕ್ಕದಲ್ಲಿ ನಿಂತು ಅವರಿಗೆ ಸಹಾಯ ನೀಡಲು ಸದಾ ಸಿದ್ಧನಾಗಿರುತ್ತಾನೆ.

6, 7. (ಎ) ಯೆಹೋವನು ತನ್ನ ಜನರಿಗೆ ಸಹಾಯ ನೀಡುವುದನ್ನು ಎಂದಿಗೂ ನಿಲ್ಲಿಸುವುದಿಲ್ಲವೆಂಬ ಆಶ್ವಾಸನೆಯನ್ನು ಕೀರ್ತನೆಗಾರನು ನಮಗೆ ಹೇಗೆ ಕೊಡುತ್ತಾನೆ? (ಬಿ) ನಾವು ಕೀರ್ತನೆಗಾರನ ಭರವಸೆಯಲ್ಲಿ ಏಕೆ ಭಾಗಿಗಳಾಗಬಲ್ಲೆವು?

6 ಆದರೆ ಯೆಹೋವನು ತನ್ನ ಜನರಿಗೆ ಸಹಾಯ ನೀಡುವುದನ್ನು ಎಂದಾದರೂ ನಿಲ್ಲಿಸುವನೊ? ಅದು ಕಲ್ಪನಾತೀತ ವಿಚಾರವೇ ಸರಿ. ಕೀರ್ತನೆಗಾರನು ಹೀಗೆ ಬರೆದು ಮುಗಿಸುತ್ತಾನೆ: “ಯೆಹೋವನು ನಿನ್ನನ್ನು ಎಲ್ಲಾ ಕೇಡಿನಿಂದ ತಪ್ಪಿಸುವನು; ನಿನ್ನ ಪ್ರಾಣವನ್ನು ಕಾಯುವನು. ನೀನು ಹೋಗುವಾಗಲೂ ಬರುವಾಗಲೂ ಇಂದಿನಿಂದ ಸದಾಕಾಲವೂ ಯೆಹೋವನು ನಿನ್ನನ್ನು ಕಾಪಾಡುವನು.” (ಕೀರ್ತನೆ 121:7, 8) ಇಲ್ಲಿ ಲೇಖಕನು ತನ್ನ ಒತ್ತನ್ನು ವರ್ತಮಾನ ಕಾಲದಿಂದ ಭವಿಷ್ಯತ್ಕಾಲಕ್ಕೆ ಸರಿಸಿದ್ದನ್ನು ಗಮನಿಸಿ. ವಚನ 5ರಲ್ಲಿ, ಕೀರ್ತನೆಗಾರನು ಹೇಳಿದ್ದು: “ನಿನ್ನನ್ನು ಕಾಯುವವನು ಯೆಹೋವನೇ.” ಆದರೆ ಈ ವಚನಗಳಲ್ಲಿ ಕೀರ್ತನೆಗಾರನು, ಯೆಹೋವನು ನಿನ್ನನ್ನು “ಕಾಯುವನು” ಎಂದು ಬರೆದನು. ಹೀಗೆ ಯೆಹೋವನ ಸಹಾಯವು ಭವಿಷ್ಯತ್ತಿನಲ್ಲೂ ಮುಂದುವರಿಯುವುದೆಂಬ ಆಶ್ವಾಸನೆ ಸತ್ಯಾರಾಧಕರಿಗೆ ಕೊಡಲ್ಪಟ್ಟಿದೆ. ಅವರು ಎಲ್ಲಿಯೇ ಹೋಗಲಿ, ಯಾವ ವಿಪತ್ತನ್ನೇ ಎದುರಿಸಲಿ, ಅವರು ಎಂದಿಗೂ ಆತನ ಸಹಾಯಹಸ್ತದ ಎಟುಕಿನಾಚೆ ಇರರು.​—ಜ್ಞಾನೋಕ್ತಿ 12:21.

7 ಹೌದು, ಸರ್ವಶಕ್ತನಾದ ಸೃಷ್ಟಿಕರ್ತನು ತನ್ನ ಸೇವಕರನ್ನು, ಪರಾಮರಿಸುವ ಕುರುಬನೊಬ್ಬನು ತೋರಿಸುವ ಕೋಮಲತೆಯ ಜೊತೆಗೆ ಜಾಗೃತ ಪಹರೆಯವನ ಎಡೆಬಿಡದ ಲಕ್ಷ್ಯದಿಂದ ಕಾಯುತ್ತಾನೆಂಬ ಭರವಸೆ ಕೀರ್ತನೆ 121ರ ಲೇಖಕನಿಗಿತ್ತು. ಆ ಕೀರ್ತನೆಗಾರನ ಭರವಸೆಯಲ್ಲಿ ಭಾಗಿಗಳಾಗಲು ನಮಗೆ ಸಕಲ ಕಾರಣಗಳೂ ಇವೆ, ಏಕೆಂದರೆ ಯೆಹೋವನು ಬದಲಾಗುವಾತನಲ್ಲ. (ಮಲಾಕಿಯ 3:6) ನಮಗೆ ಸದಾ ಶಾರೀರಿಕ ಸಂರಕ್ಷಣೆ ದೊರೆಯುವುದೆಂದು ಇದರ ಅರ್ಥವೊ? ಇಲ್ಲ, ಆದರೆ ನಾವು ಆತನನ್ನು ನಮ್ಮ ಸಹಾಯಕನೋಪಾದಿ ನೋಡುವಲ್ಲಿ ನಮಗೆ ಆಧ್ಯಾತ್ಮಿಕ ಹಾನಿಯನ್ನು ತರಬಲ್ಲ ಸಕಲ ವಿಷಯಗಳಿಂದ ಆತನು ನಮ್ಮನ್ನು ಸಂರಕ್ಷಿಸುವನು. ಹಾಗಾದರೆ ‘ಯೆಹೋವನು ನಮಗೆ ಹೇಗೆ ಸಹಾಯಮಾಡುತ್ತಾನೆ?’ ಎಂದು ಕೇಳುವುದು ಸ್ವಾಭಾವಿಕ. ಆತನು ಇದನ್ನು ಮಾಡುವ ನಾಲ್ಕು ವಿಧಗಳನ್ನು ನಾವು ಪರೀಕ್ಷಿಸೋಣ. ಈ ಲೇಖನದಲ್ಲಿ, ಆತನು ಬೈಬಲ್‌ ಸಮಯಗಳಲ್ಲಿ ತನ್ನ ಸೇವಕರಿಗೆ ಹೇಗೆ ಸಹಾಯ ಮಾಡಿದನೆಂಬುದನ್ನು ಚರ್ಚಿಸುವೆವು. ಮುಂದಿನ ಲೇಖನದಲ್ಲಿ, ಆತನು ಇಂದು ತನ್ನ ಜನರಿಗೆ ಹೇಗೆ ಸಹಾಯ ಮಾಡುತ್ತಾನೆಂದು ಪರಿಗಣಿಸುವೆವು.

ದೇವದೂತರಿಂದ ಸಹಾಯ

8. ದೇವದೂತರಿಗೆ ದೇವರ ಭೂಸೇವಕರ ಕುರಿತು ತೀವ್ರ ಹಿತಾಸಕ್ತಿಯಿರುವುದು ಏಕೆ ಆಶ್ಚರ್ಯಕರವಲ್ಲ?

8 ಯೆಹೋವನ ಆಧಿಪತ್ಯದಲ್ಲಿ ಕೋಟ್ಯಂತರ ಮಂದಿ ದೇವದೂತರಿದ್ದಾರೆ. (ದಾನಿಯೇಲ 7:​9, 10) ಈ ಆತ್ಮಜೀವಿ ಪುತ್ರರು ಆತನ ಚಿತ್ತವನ್ನು ನಂಬಿಗಸ್ತಿಕೆಯಿಂದ ಪೂರೈಸುತ್ತಾರೆ. (ಕೀರ್ತನೆ 103:20) ತನ್ನ ಮಾನವಾರಾಧಕರ ಮೇಲೆ ಯೆಹೋವನಿಗೆ ಅಪಾರ ಪ್ರೀತಿಯಿದೆ ಮತ್ತು ಅವರಿಗೆ ಸಹಾಯಮಾಡಲು ಆತನು ಬಯಸುತ್ತಾನೆ ಎಂಬುದನ್ನು ದೇವದೂತರು ಚೆನ್ನಾಗಿ ಬಲ್ಲರು. ಆದುದರಿಂದ ಅವರಿಗೆ ದೇವರ ಭೂಸೇವಕರ ಕುರಿತು ತೀವ್ರ ಹಿತಾಸಕ್ತಿಯಿರುವುದು ಆಶ್ಚರ್ಯಕರವಲ್ಲ. (ಲೂಕ 15:10) ಆದುದರಿಂದ ಮನುಷ್ಯರಿಗೆ ಸಹಾಯಮಾಡಲು ಯೆಹೋವನಿಂದ ಉಪಯೋಗಿಸಲ್ಪಡುವುದರಲ್ಲಿ ದೇವದೂತರು ಹರ್ಷಿಸುತ್ತಿರಲೇಬೇಕೆಂಬ ತೀರ್ಮಾನಕ್ಕೆ ಬರುವುದು ನ್ಯಾಯಸಮ್ಮತ. ಪುರಾತನ ಕಾಲಗಳಲ್ಲಿ ಯೆಹೋವನು ತನ್ನ ಮಾನವ ಸೇವಕರಿಗೆ ಸಹಾಯಮಾಡಲು ದೇವದೂತರನ್ನು ಯಾವ ವಿಧಗಳಲ್ಲಿ ಉಪಯೋಗಿಸಿದನು?

9. ನಂಬಿಗಸ್ತ ಮಾನವರನ್ನು ಸಂರಕ್ಷಿಸಲು ದೇವರು ತನ್ನ ದೂತರನ್ನು ಶಕ್ತರನ್ನಾಗಿ ಮಾಡಿದ್ದುದ್ದರ ಒಂದು ಉದಾಹರಣೆಯನ್ನು ಕೊಡಿರಿ.

9 ದೇವರು ನಂಬಿಗಸ್ತ ಮಾನವರನ್ನು ಸಂರಕ್ಷಿಸುವ ಮತ್ತು ವಿಮೋಚಿಸುವ ಅಧಿಕಾರ ಹಾಗೂ ಶಕ್ತಿಯನ್ನು ದೇವದೂತರಿಗೆ ಕೊಟ್ಟಿದ್ದನು. ಇಬ್ಬರು ದೇವದೂತರು ಲೋಟನೂ ಅವನ ಪುತ್ರಿಯರೂ ಸೊದೋಮ್‌ ಗೊಮೋರಗಳ ನಾಶನದಿಂದ ತಪ್ಪಿಸಿಕೊಳ್ಳುವಂತೆ ಸಹಾಯಮಾಡಿದರು. (ಆದಿಕಾಂಡ 19:​1, 15-17) ಯೆರೂಸಲೇಮನ್ನು ವಶಪಡಿಸಿಕೊಳ್ಳಲು ತೊಡಗಿದ್ದ 1,85,000 ಮಂದಿ ಅಶ್ಶೂರ ಸೈನಿಕರನ್ನು ಒಬ್ಬನೇ ಒಬ್ಬ ದೇವದೂತನು ಹತಿಸಿದನು. (2 ಅರಸುಗಳು 19:35) ದಾನಿಯೇಲನನ್ನು ಸಿಂಹಗಳ ಗವಿಗೆ ಎಸೆಯಲಾದಾಗ, ಯೆಹೋವನು “ತನ್ನ ದೂತನನ್ನು ಕಳುಹಿಸಿ ಸಿಂಹಗಳ ಬಾಯಿಗಳನ್ನು ಬಂಧಿಸಿದನು.” (ದಾನಿಯೇಲ 6:21, 22) ಒಬ್ಬ ದೇವದೂತನು ಅಪೊಸ್ತಲ ಪೇತ್ರನನ್ನು ಸೆರೆಮನೆಯಿಂದ ಬಿಡಿಸಿದನು. (ಅ. ಕೃತ್ಯಗಳು 12:​6-11) ದೇವದೂತರು ಕೊಟ್ಟ ಸಂರಕ್ಷಣೆಯ ಕುರಿತು ಇನ್ನೂ ಇತರ ಉದಾಹರಣೆಗಳನ್ನು ಬೈಬಲು ತಿಳಿಸುತ್ತದೆ. ಇದು ಕೀರ್ತನೆ 34:7ರಲ್ಲಿ ಹೇಳಿರುವ ವಿಷಯವನ್ನು ದೃಢಪಡಿಸುತ್ತದೆ: “ಯೆಹೋವನ ಭಯಭಕ್ತಿಯುಳ್ಳವರ ಸುತ್ತಲು ಆತನ ದೂತನು ದಂಡಿಳಿಸಿ ಕಾವಲಾಗಿದ್ದು ಕಾಪಾಡುತ್ತಾನೆ.”

10. ಯೆಹೋವನು ಪ್ರವಾದಿಯಾದ ದಾನಿಯೇಲನನ್ನು ಪ್ರೋತ್ಸಾಹಿಸಲು ಒಬ್ಬ ದೇವದೂತನನ್ನು ಹೇಗೆ ಉಪಯೋಗಿಸಿದನು?

10 ಕೆಲವೊಮ್ಮೆ ಯೆಹೋವನು ದೇವದೂತರನ್ನು, ನಂಬಿಗಸ್ತ ಮಾನವರನ್ನು ಪ್ರೋತ್ಸಾಹಿಸಲಿಕ್ಕಾಗಿ ಮತ್ತು ಬಲಪಡಿಸಲಿಕ್ಕಾಗಿ ಉಪಯೋಗಿಸಿದನು. ಇದರ ಮನಮುಟ್ಟುವ ಒಂದು ದೃಷ್ಟಾಂತವು ದಾನಿಯೇಲ 10ನೆಯ ಅಧ್ಯಾಯದಲ್ಲಿದೆ. ಆ ಸಮಯದಲ್ಲಿ ದಾನಿಯೇಲನು ಪ್ರಾಯಶಃ 100 ವರ್ಷ ಪ್ರಾಯಕ್ಕೆ ಹತ್ತಿರವಾಗಿದ್ದನು. ಆ ಪ್ರವಾದಿಯು ಅತಿ ನಿರಾಶೆಯ ಸ್ಥಿತಿಯಲ್ಲಿದ್ದನು. ಯೆರೂಸಲೇಮಿನ ಹಾಳುಬಿದ್ದಿದ್ದ ಸ್ಥಿತಿ ಮತ್ತು ದೇವಾಲಯದ ಪುನರ್ರಚನೆಯಲ್ಲಿ ಆಗಿದ್ದ ವಿಳಂಬವೇ ಇದಕ್ಕೆ ಕಾರಣವಾಗಿತ್ತೆಂಬುದು ವ್ಯಕ್ತ. ಒಂದು ಭಯಹುಟ್ಟಿಸುವ ದರ್ಶನವನ್ನು ನೋಡಿಯೂ ಅವನು ಗಾಬರಿಗೊಂಡನು. (ದಾನಿಯೇಲ 10:​2, 3, 8) ಆಗ ಅವನಿಗೆ ಪ್ರೋತ್ಸಾಹ ನೀಡಲು ದೇವರು ಪ್ರೀತಿಯಿಂದ ಒಬ್ಬ ದೇವದೂತನನ್ನು ಕಳುಹಿಸಿದನು. ದಾನಿಯೇಲನು ದೇವರ ದೃಷ್ಟಿಯಲ್ಲಿ ‘ಅತಿಪ್ರಿಯನು’ ಆಗಿದ್ದಾನೆಂದು ಆ ದೇವದೂತನು ಒಂದಕ್ಕಿಂತಲೂ ಹೆಚ್ಚು ಬಾರಿ ಜ್ಞಾಪಕ ಹುಟ್ಟಿಸಿದನು. ಇದರ ಫಲಿತಾಂಶವೇನಾಯಿತು? ಆ ವೃದ್ಧ ಪ್ರವಾದಿಯು ದೇವದೂತನಿಗೆ, “ನನ್ನನ್ನು ಬಲಗೊಳಿಸಿದ್ದೀ” ಎಂದು ಹೇಳಿದನು.​—ದಾನಿಯೇಲ 10:​11, 19.

11. ಸುವಾರ್ತೆಯನ್ನು ಸಾರುವ ಕೆಲಸವನ್ನು ನಿರ್ದೇಶಿಸಲು ದೇವದೂತರು ಉಪಯೋಗಿಸಲ್ಪಟ್ಟ ಒಂದು ಉದಾಹರಣೆ ಯಾವುದು?

11 ಸುವಾರ್ತೆಯನ್ನು ಸಾರುವ ಕೆಲಸವನ್ನು ನಿರ್ದೇಶಿಸಲು ಕೂಡ ಯೆಹೋವನು ದೇವದೂತರನ್ನು ಉಪಯೋಗಿಸಿದನು. ಫಿಲಿಪ್ಪನು ಐಥಿಯೋಪ್ಯದ ಕಂಚುಕಿಗೆ ಕ್ರಿಸ್ತನ ಕುರಿತು ಸಾರುವಂತೆ ಒಬ್ಬ ದೇವದೂತನು ನಿರ್ದೇಶಿಸಿದನು. ಆ ಕಂಚುಕಿ ಅನಂತರ ದೀಕ್ಷಾಸ್ನಾನ ಹೊಂದಿದನು. (ಅ. ಕೃತ್ಯಗಳು 8:​26, 27, 36, 38) ಸ್ವಲ್ಪ ಸಮಯಾನಂತರ, ಸುನ್ನತಿಯಿಲ್ಲದ ಅನ್ಯರಿಗೆ ಸುವಾರ್ತೆಯನ್ನು ಸಾರುವುದು ದೇವರ ಚಿತ್ತವಾಗಿತ್ತು. ದೈವಭಕ್ತಿಯುಳ್ಳ ಅನ್ಯನಾಗಿದ್ದ ಕೊರ್ನೇಲ್ಯನಿಗೆ ದರ್ಶನವೊಂದರಲ್ಲಿ ಒಬ್ಬ ದೇವದೂತನು ಕಾಣಿಸಿಕೊಂಡು, ಅವನು ಅಪೊಸ್ತಲ ಪೇತ್ರನನ್ನು ಕರೆಯಿಸುವಂತೆ ನಿರ್ದೇಶಿಸಿದನು. ಕೊರ್ನೇಲ್ಯನ ಪರಿಚಾರಕರು ಪೇತ್ರನನ್ನು ಕಂಡುಹಿಡಿದಾಗ, “ಅವನು [ಕೊರ್ನೇಲ್ಯನು] ನಿನ್ನನ್ನು ತನ್ನ ಮನೆಗೆ ಕರೇಕಳುಹಿಸಿಕೊಂಡು ನಿನ್ನಿಂದ ಬೋಧನೆಯನ್ನು ಕೇಳಬೇಕೆಂದು ದೇವದೂತನ ಮುಖಾಂತರವಾಗಿ ಅಪ್ಪಣೆ ಹೊಂದಿದನು,” ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆಯಲ್ಲಿ ಪೇತ್ರನು ಅಲ್ಲಿಗೆ ಹೋದನು ಮತ್ತು ಸುನ್ನತಿ ಹೊಂದಿರದ ಅನ್ಯರು ಪ್ರಪ್ರಥಮ ಬಾರಿ ಕ್ರೈಸ್ತ ಸಭೆಯ ಭಾಗವಾದರು. (ಅ. ಕೃತ್ಯಗಳು 10:​22, 44-48) ಯೋಗ್ಯ ಪ್ರವೃತ್ತಿಯುಳ್ಳ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬರಲು ಒಬ್ಬ ದೇವದೂತನು ನಿಮಗೆ ಸಹಾಯಮಾಡಿದನೆಂದು ನಿಮಗೆ ಅರಿವಾಗುವಾಗ ಹೇಗನಿಸುವುದೆಂಬುದನ್ನು ಭಾವಿಸಿರಿ!

ಪವಿತ್ರಾತ್ಮದ ಮೂಲಕ ಸಹಾಯ

12, 13. (ಎ) ಪವಿತ್ರಾತ್ಮವು ತಮಗೆ ಸಹಾಯಮಾಡಬಲ್ಲದೆಂದು ನಂಬಲು ಯೇಸುವಿನ ಅಪೊಸ್ತಲರಿಗೆ ಏಕೆ ಸಕಾರಣವಿತ್ತು? (ಬಿ) ಒಂದನೆಯ ಶತಮಾನದ ಕ್ರೈಸ್ತರನ್ನು ಪವಿತ್ರಾತ್ಮವು ಏನನ್ನು ಮಾಡುವಂತೆ ಶಕ್ತರನ್ನಾಗಿಮಾಡಿತು?

12 ತಾನು ಸಾಯುವುದಕ್ಕೆ ತುಸು ಮುಂಚೆ ಯೇಸು, ತನ್ನ ಅಪೊಸ್ತಲರು ನಿಸ್ಸಹಾಯಕರಾಗಿ ಬಿಡಲ್ಪಡುವುದಿಲ್ಲ ಎಂಬ ಆಶ್ವಾಸನೆಯನ್ನು ಕೊಟ್ಟನು. ತಂದೆಯು ಅವರಿಗೆ ಒಬ್ಬ ‘ಸಹಾಯಕನು ಅಂದರೆ ಪವಿತ್ರಾತ್ಮವನ್ನು’ ಕಳುಹಿಸಿಕೊಡಲಿದ್ದನು. (ಯೋಹಾನ 14:26) ಈ ಪವಿತ್ರಾತ್ಮ ತಮಗೆ ಸಹಾಯಮಾಡಬಲ್ಲದೆಂದು ನಂಬಲು ಆ ಅಪೊಸ್ತಲರಿಗೆ ಸಕಾರಣವಿತ್ತು. ಏಕೆಂದರೆ ಪ್ರೇರಿತ ಶಾಸ್ತ್ರವು, ಯೆಹೋವನು ಪವಿತ್ರಾತ್ಮವನ್ನು, ಅಂದರೆ ಲಭ್ಯವಿರುವುದರಲ್ಲೇ ಅತ್ಯಂತ ಬಲಾಢ್ಯವಾದ ಶಕ್ತಿಯನ್ನು ತನ್ನ ಜನರ ಸಹಾಯಾರ್ಥವಾಗಿ ಉಪಯೋಗಿಸಿರುವುದರ ಉದಾಹರಣೆಗಳಿಂದ ತುಂಬಿಕೊಂಡಿದೆ.

13 ಅನೇಕ ಸಂದರ್ಭಗಳಲ್ಲಿ, ಮನುಷ್ಯರು ಯೆಹೋವನ ಚಿತ್ತವನ್ನು ಮಾಡುವಂತೆ ಶಕ್ತಗೊಳಿಸಲು ಪವಿತ್ರಾತ್ಮವನ್ನು ಉಪಯೋಗಿಸಲಾಯಿತು. ಇಸ್ರಾಯೇಲನ್ನು ವಿಮೋಚಿಸುವಂತೆ ಪವಿತ್ರಾತ್ಮವು ನ್ಯಾಯಸ್ಥಾಪಕರನ್ನು ಶಕ್ತರನ್ನಾಗಿಮಾಡಿತು. (ನ್ಯಾಯಸ್ಥಾಪಕರು 3:​9, 10; 6:34) ಅದೇ ಆತ್ಮವು, ಒಂದನೆಯ ಶತಮಾನದ ಕ್ರೈಸ್ತರು ಸಕಲ ವಿಧವಾದ ವಿರೋಧದ ಎದುರಿನಲ್ಲಿಯೂ ಧೈರ್ಯದಿಂದ ಸಾರುತ್ತಾ ಹೋಗುವಂತೆ ಶಕ್ತರನ್ನಾಗಿಮಾಡಿತು. (ಅ. ಕೃತ್ಯಗಳು 1:8; 4:31) ತಮ್ಮ ಶುಶ್ರೂಷೆಯನ್ನು ನೆರವೇರಿಸುವುದರಲ್ಲಿ ಅವರು ಪಡೆದ ಕಾರ್ಯಸಿದ್ಧಿ, ಪವಿತ್ರಾತ್ಮದ ಕಾರ್ಯಾಚರಣೆಗೆ ಬಲವಾದ ಪುರಾವೆಯನ್ನು ಒದಗಿಸಿತು. ಇಲ್ಲದಿದ್ದಲ್ಲಿ, ‘ಶಾಸ್ತ್ರಾಭ್ಯಾಸ ಮಾಡದ ಸಾಧಾರಣರು’ ಅಂದಿನ ಜ್ಞಾತ ಜಗತ್ತಿನಲ್ಲೆಲ್ಲ ರಾಜ್ಯ ಸಂದೇಶವನ್ನು ಹಬ್ಬಿಸಿದ್ದನ್ನು ಇನ್ನಾವುದು ತಾನೇ ವಿವರಿಸಸಾಧ್ಯವಿದೆ?​—ಅ. ಕೃತ್ಯಗಳು 4:13; ಕೊಲೊಸ್ಸೆ 1:23.

14. ತನ್ನ ಜನರಿಗೆ ಹೆಚ್ಚಿನ ತಿಳಿವಳಿಕೆಯನ್ನು ನೀಡಲು ಯೆಹೋವನು ತನ್ನ ಪವಿತ್ರಾತ್ಮವನ್ನು ಹೇಗೆ ಉಪಯೋಗಿಸಿದ್ದಾನೆ?

14 ತನ್ನ ಜನರಿಗೆ ಹೆಚ್ಚಿನ ತಿಳಿವಳಿಕೆಯನ್ನು ನೀಡಲಿಕ್ಕಾಗಿಯೂ ಯೆಹೋವನು ತನ್ನ ಪವಿತ್ರಾತ್ಮವನ್ನು ಉಪಯೋಗಿಸಿದನು. ಯೋಸೇಫನು ದೇವರಾತ್ಮದ ಸಹಾಯದಿಂದ ಫರೋಹನ ಪ್ರವಾದನಾತ್ಮಕ ಕನಸುಗಳ ಅರ್ಥವನ್ನು ಬಿಡಿಸಲು ಶಕ್ತನಾದನು. (ಆದಿಕಾಂಡ 41:​16, 38, 39) ಯೆಹೋವನು ತನ್ನ ಆತ್ಮದ ಮೂಲಕವಾಗಿಯೇ ನಮ್ರರು ತನ್ನ ಉದ್ದೇಶಗಳನ್ನು ತಿಳಿಯುವಂತೆಯೂ ಆದರೆ ಅಹಂಕಾರಿಗಳಿಗೆ ಅದು ಮರೆಯಾಗಿರುವಂತೆಯೂ ಮಾಡಿದನು. (ಮತ್ತಾಯ 11:25) ಹೀಗೆ, “ದೇವರು ತನ್ನನ್ನು ಪ್ರೀತಿಸುವವರಿಗಾಗಿ” ಒದಗಿಸುವ ವಿಷಯಗಳ ಬಗ್ಗೆ ಅಪೊಸ್ತಲ ಪೌಲನು ಹೇಳಿದ್ದು: “ನಮಗಾದರೋ ದೇವರು ತನ್ನ ಆತ್ಮನ ಮೂಲಕ ಅದನ್ನು ಪ್ರಕಟಿಸಿದನು.” (1 ಕೊರಿಂಥ 2:​7-10) ಒಬ್ಬನು ದೇವರ ಚಿತ್ತವನ್ನು ನಿಜವಾಗಿಯೂ ತಿಳಿದುಕೊಳ್ಳಲು ಶಕ್ತನಾಗುವುದು ದೇವರಾತ್ಮದ ಸಹಾಯದಿಂದ ಮಾತ್ರ.

ದೇವರ ವಾಕ್ಯದಿಂದ ಸಹಾಯ

15, 16. ವಿವೇಕದಿಂದ ವರ್ತಿಸಲಿಕ್ಕಾಗಿ ಏನು ಮಾಡಬೇಕೆಂದು ಯೆಹೋಶುವನಿಗೆ ಹೇಳಲಾಯಿತು?

15 ಯೆಹೋವನ ಪ್ರೇರಿತ ವಾಕ್ಯವು ‘ಉಪದೇಶಕ್ಕೆ ಉಪಯುಕ್ತವಾಗಿದೆ.’ ಮತ್ತು ಅದು, ದೇವರ ಸೇವಕರನ್ನು ‘ಪ್ರವೀಣರಾಗಿ ಸಕಲ ಸತ್ಕಾರ್ಯಕ್ಕೆ ಸನ್ನದ್ಧರಾಗುವಂತೆ’ ಮಾಡುತ್ತದೆ. (2 ತಿಮೊಥೆಯ 3:​16, 17) ಪುರಾತನಕಾಲದ ದೇವಜನರು, ಆಗಲೇ ಬರೆದಿಡಲ್ಪಟ್ಟಿದ್ದ ದೇವರ ವಾಕ್ಯದ ಭಾಗಗಳಿಂದ ಹೇಗೆ ಸಹಾಯವನ್ನು ಪಡೆದರೆಂಬ ಅನೇಕ ಉದಾಹರಣೆಗಳು ಬೈಬಲಿನಲ್ಲಿವೆ.

16 ಶಾಸ್ತ್ರವಚನಗಳು ದೇವರ ಆರಾಧಕರಿಗೆ ಸ್ವಸ್ಥ ಮಾರ್ಗದರ್ಶನವನ್ನು ಒದಗಿಸಲು ಸಹಾಯ ನೀಡಿತು. ಇಸ್ರಾಯೇಲನ್ನು ಮುನ್ನಡೆಸುವ ಜವಾಬ್ದಾರಿಯು ಯೆಹೋಶುವನಿಗೆ ವಹಿಸಲ್ಪಟ್ಟಾಗ ಅವನಿಗೆ ಹೀಗೆ ಹೇಳಲಾಯಿತು: “ಈ ಧರ್ಮಶಾಸ್ತ್ರವು [ಮೋಶೆಯಿಂದ ದಾಖಲಿಸಲ್ಪಟ್ಟದ್ದು] ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿ ಬರೆದಿರುವದನ್ನೆಲ್ಲಾ ಕೈಕೊಂಡು ನಡಿ. ಆಗ ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ, ಕೃತಾರ್ಥನಾಗುವಿ.” ದೇವರು ಯೆಹೋಶುವನಿಗೆ, ತಾನು ಯಾವುದೊ ಚಮತ್ಕಾರದಿಂದ ವಿವೇಕವನ್ನು ಅವನೊಳಗೆ ನೆಡುವೆನೆಂದು ವಚನಕೊಡಲಿಲ್ಲ ಎಂಬುದನ್ನು ಗಮನಿಸಿ. ಬದಲಿಗೆ, ಯೆಹೋಶುವನು “ಧರ್ಮಶಾಸ್ತ್ರ”ವನ್ನು ಓದಿ, ಧ್ಯಾನಿಸುವಲ್ಲಿ, ಆಗ ಅವನು ವಿವೇಕದಿಂದ ವರ್ತಿಸಲಿದ್ದನು.​—ಯೆಹೋಶುವ 1:8; ಕೀರ್ತನೆ 1:​1-3.

17. ದಾನಿಯೇಲನಿಗೂ ಅರಸನಾದ ಯೋಷೀಯನಿಗೂ ಆಗ ಲಭ್ಯವಿದ್ದ ಶಾಸ್ತ್ರಭಾಗಗಳಿಂದ ಸಹಾಯ ದೊರಕಿದ್ದು ಹೇಗೆ?

17 ದೇವರ ಲಿಖಿತ ವಾಕ್ಯವು ಆತನ ಚಿತ್ತ ಮತ್ತು ಉದ್ದೇಶವನ್ನು ತಿಳಿಯಪಡಿಸಲು ಸಹ ಸಹಾಯಮಾಡಿತು. ಉದಾಹರಣೆಗೆ, ದಾನಿಯೇಲನು ಯೆರೆಮೀಯನ ಬರಹಗಳಿಂದ ಯೆರೂಸಲೇಮು ಎಷ್ಟು ಕಾಲ ಹಾಳುಬೀಳಲಿತ್ತೆಂದು ಗ್ರಹಿಸಿಕೊಂಡನು. (ಯೆರೆಮೀಯ 25:​11, 12; ದಾನಿಯೇಲ 9:2) ಯೆಹೂದದ ಅರಸನಾದ ಯೋಷೀಯನ ಆಳ್ವಿಕೆಯಲ್ಲಿ ಏನಾಯಿತೆಂಬುದನ್ನೂ ಪರಿಗಣಿಸಿ. ಆ ಸಮಯದಷ್ಟಕ್ಕೆ ಆ ಜನಾಂಗವು ಯೆಹೋವನಿಂದ ದೂರ ತೊಲಗಿತ್ತು, ಮತ್ತು ಅರಸರು ಧರ್ಮಶಾಸ್ತ್ರದ ಸ್ವಂತ ಪ್ರತಿಯನ್ನು ಮಾಡಿಕೊಂಡು ಅದನ್ನು ಅನುಸರಿಸಲು ತಪ್ಪಿದ್ದರೆಂದು ವ್ಯಕ್ತವಾಗುತ್ತದೆ. (ಧರ್ಮೋಪದೇಶಕಾಂಡ 17:​18-20) ಆದರೆ ದೇವಾಲಯವನ್ನು ಜೀರ್ಣೋದ್ಧಾರ ಮಾಡುತ್ತಿದ್ದಾಗ, ಪ್ರಾಯಶಃ ಮೋಶೆಯು ತಾನೇ ಬರೆದಿದ್ದ “ಧರ್ಮೋಪದೇಶಗ್ರಂಥವು” ಸಿಕ್ಕಿತು. ಇದು ಪ್ರಾಯಶಃ ಸುಮಾರು 800 ವರುಷಗಳಿಗೆ ಹಿಂದೆ ಬರೆದು ಮುಗಿಸಲಾಗಿದ್ದ ಮೂಲ ಗ್ರಂಥಪಾಠವಾಗಿತ್ತು. ಅದರಲ್ಲಿದ್ದ ವಿಷಯಗಳನ್ನು ಓದಿಸಿ ಕೇಳಿದ ಮೇಲೆ, ಆ ಜನಾಂಗವು ಯೆಹೋವನ ಚಿತ್ತದಿಂದ ಎಷ್ಟು ದೂರ ಸರಿದಿತ್ತೆಂಬುದನ್ನು ಯೋಷೀಯನು ಗ್ರಹಿಸಿಕೊಂಡನು. ಮತ್ತು ಗ್ರಂಥದಲ್ಲಿ ಬರೆಯಲ್ಪಟ್ಟಿದ್ದುದ್ದನ್ನು ಮಾಡಲು ಅರಸನು ದೃಢವಾದ ಕ್ರಮಗಳನ್ನು ಕೈಕೊಂಡನು. (2 ಅರಸುಗಳು 22:8; 23:​1-7) ಪುರಾತನ ಕಾಲಗಳ ದೇವಜನರಿಗೆ ಆಗ ಲಭ್ಯವಿದ್ದ ಪವಿತ್ರಶಾಸ್ತ್ರದ ಭಾಗಗಳಿಂದ ಸಹಾಯ ದೊರಕಿತೆಂಬುದು ಇದರಿಂದ ಸ್ಪಷ್ಟವಾಗುವುದಿಲ್ಲವೆ?

ಜೊತೆವಿಶ್ವಾಸಿಗಳಿಂದ ಸಹಾಯ

18. ಒಬ್ಬ ಸತ್ಯಾರಾಧಕನು ಇನ್ನೊಬ್ಬನಿಗೆ ಸಹಾಯಮಾಡುವಾಗೆಲ್ಲ ಅದಕ್ಕೆ ಯೆಹೋವನೇ ಕಾರಣನೆಂದು ನಾವೇಕೆ ಹೇಳಬಲ್ಲೆವು?

18 ಅನೇಕವೇಳೆ, ಯೆಹೋವನು ಒದಗಿಸುವ ಸಹಾಯವು ಜೊತೆವಿಶ್ವಾಸಿಗಳ ಮೂಲಕ ಬರುತ್ತದೆ. ನಿಜವಾಗಿಯೂ, ಒಬ್ಬ ಸತ್ಯಾರಾಧಕನು ಇನ್ನೊಬ್ಬನಿಗೆ ಸಹಾಯಮಾಡುವಾಗೆಲ್ಲ ಈ ಸಹಾಯಕ್ಕೆ ಕಾರಣನು ದೇವರೇ. ನಾವು ಹಾಗೇಕೆ ಹೇಳಬಲ್ಲೆವು? ಎರಡು ಕಾರಣಗಳಿಗಾಗಿ. ಪ್ರಥಮವಾಗಿ, ಇದರಲ್ಲಿ ದೇವರ ಪವಿತ್ರಾತ್ಮವು ಸೇರಿಕೊಂಡಿರುತ್ತದೆ. ಆ ಆತ್ಮವು ಅದರ ಪ್ರಭಾವವನ್ನು ಪಡೆಯಲು ಪ್ರಯತ್ನಿಸುವವರಲ್ಲಿ ಪ್ರೀತಿ ಮತ್ತು ಒಳ್ಳೇತನಗಳು ಸೇರಿರುವ ಫಲವನ್ನು ಉತ್ಪಾದಿಸುತ್ತದೆ. (ಗಲಾತ್ಯ 5:​22, 23) ಹೀಗೆ, ದೇವರ ಸೇವಕರಲ್ಲೊಬ್ಬನು ಇನ್ನೊಬ್ಬ ಸೇವಕನಿಗೆ ಸಹಾಯಮಾಡುವಂತೆ ಪ್ರಚೋದಿಸಲ್ಪಡುವಾಗ, ಇದು ಯೆಹೋವನ ಆತ್ಮದ ಕಾರ್ಯಾಚರಣೆಯ ರುಜುವಾತಾಗಿದೆ. ಎರಡನೆಯದಾಗಿ, ನಾವು ದೇವರ ಸ್ವರೂಪದಲ್ಲಿ ನಿರ್ಮಿಸಲ್ಪಟ್ಟಿದ್ದೇವೆ. (ಆದಿಕಾಂಡ 1:26) ಅಂದರೆ ನಮಗೆ, ದಯೆ, ಕನಿಕರಗಳು ಸೇರಿರುವ ಆತನ ಗುಣಲಕ್ಷಣಗಳನ್ನು ಪ್ರತಿಬಿಂಬಿಸುವ ಸಾಮರ್ಥ್ಯವಿದೆಯೆಂದು ಅರ್ಥ. ಹೀಗೆ, ಯೆಹೋವನ ಸೇವಕನೊಬ್ಬನು ಇನ್ನೊಬ್ಬನಿಗೆ ಸಹಾಯ ನೀಡುವಾಗೆಲ್ಲ ನಿಜವಾಗಿಯೂ ಅಂಥ ಸಹಾಯದ ಮೂಲನು, ಯಾರ ಸ್ವರೂಪವು ಪ್ರತಿಬಿಂಬಿಸಲ್ಪಡುತ್ತಿದೆಯೊ ಆತನೇ ಆಗಿದ್ದಾನೆ.

19. ಬೈಬಲಿನ ದಾಖಲೆಗನುಸಾರ, ಯೆಹೋವನು ಜೊತೆವಿಶ್ವಾಸಿಗಳ ಮೂಲಕ ಹೇಗೆ ಸಹಾಯವನ್ನು ಒದಗಿಸಿದನು?

19 ಬೈಬಲ್‌ ಸಮಯಗಳಲ್ಲಿ, ಯೆಹೋವನು ಜೊತೆವಿಶ್ವಾಸಿಗಳ ಮೂಲಕ ಹೇಗೆ ಸಹಾಯವನ್ನು ಒದಗಿಸಿದನು? ಯೆರೆಮೀಯನು ಬಾರೂಕನಿಗೆ ಜೀವರಕ್ಷಕ ಸಲಹೆಯನ್ನು ಕೊಟ್ಟಂತೆಯೇ, ಯೆಹೋವನು ಅನೇಕವೇಳೆ ತನ್ನ ಸೇವಕರಲ್ಲೊಬ್ಬನು ಇನ್ನೊಬ್ಬನಿಗೆ ಸಲಹೆ ನೀಡುವಂತೆ ಮಾಡಿದನು. (ಯೆರೆಮೀಯ 45:​1-5) ಕೆಲವು ಸಂದರ್ಭಗಳಲ್ಲಿ, ಸತ್ಯಾರಾಧಕರು ಜೊತೆವಿಶ್ವಾಸಿಗಳಿಗೆ ಐಹಿಕ ಸಹಾಯವನ್ನು ಒದಗಿಸುವಂತೆ ಪ್ರಚೋದಿಸಲ್ಪಟ್ಟರು. ಉದಾಹರಣೆಗೆ, ಮಕೆದೋನ್ಯ ಮತ್ತು ಅಖಾಯದ ಕ್ರೈಸ್ತರು ಯೆರೂಸಲೇಮಿನಲ್ಲಿ ಕೊರತೆಯನ್ನು ಅನುಭವಿಸುತ್ತಿದ್ದ ಸಹೋದರರಿಗೆ ಸಹಾಯಮಾಡಲು ಉತ್ಸುಕತೆಯನ್ನು ತೋರಿಸಿದರು. ಇಂತಹ ಉದಾರಭಾವವು ಸಮಂಜಸವಾಗಿಯೇ “ದೇವರಿಗೆ ಕೃತಜ್ಞತಾಸ್ತುತಿಯನ್ನು” ಉಂಟುಮಾಡಿತು.​—2 ಕೊರಿಂಥ 9:11.

20, 21. ಅಪೊಸ್ತಲ ಪೌಲನು ಎಂಥ ಪರಿಸ್ಥಿತಿಗಳಲ್ಲಿ ರೋಮಿನ ಸಹೋದರರಿಂದ ಬಲಗೊಳಿಸಲ್ಪಟ್ಟನು?

20 ಯೆಹೋವನ ಸೇವಕರು ಒಬ್ಬರಿಗೊಬ್ಬರು ಸಹಾಯ ಮತ್ತು ಪ್ರೋತ್ಸಾಹವನ್ನು ಕೊಡಲು ಹೇಗೆ ಶ್ರಮಪಟ್ಟರು ಎಂಬ ವೃತ್ತಾಂತಗಳು ವಿಶೇಷವಾಗಿ ಮನಮುಟ್ಟುವಂಥವುಗಳು. ಅಪೊಸ್ತಲ ಪೌಲನನ್ನು ಒಳಗೂಡಿರುವ ಒಂದು ದೃಷ್ಟಾಂತವನ್ನು ಪರಿಗಣಿಸಿ. ಪೌಲನು ಬಂದಿಯಾಗಿ ರೋಮಿಗೆ ಪ್ರಯಾಣಮಾಡುತ್ತಿದ್ದಾಗ ಅಪ್ಪಿಯ ಹೆದ್ದಾರಿ ಎಂದು ಪ್ರಸಿದ್ಧವಾಗಿರುವ ರೋಮನ್‌ ರಾಜಮಾರ್ಗವಾಗಿ ಹೋದನು. ಆ ಪ್ರಯಾಣದ ಕೊನೆಯ ಭಾಗವು ವಿಶೇಷವಾಗಿ ಅಹಿತಕರವಾಗಿತ್ತು, ಏಕೆಂದರೆ ಪ್ರಯಾಣಿಕರು ಸದಾ ನೀರಿರುವ ಜೌಗು ಮತ್ತು ತಗ್ಗು ಪ್ರದೇಶವನ್ನು ದಾಟಿ ಹೋಗಬೇಕಾಗುತ್ತಿತ್ತು.a ಪೌಲನು ಬರುತ್ತಿದ್ದಾನೆಂಬುದು ರೋಮಿನಲ್ಲಿದ್ದ ಸಭೆಯ ಸಹೋದರರಿಗೆ ತಿಳಿದಿತ್ತು. ಅವರೇನು ಮಾಡಲಿದ್ದರು? ಪೌಲನು ಬಂದು ತಲಪುವ ವರೆಗೆ ನಗರದಲ್ಲಿದ್ದ ತಮ್ಮ ಮನೆಗಳ ಸುಖದಲ್ಲಿ ಕಾಯುತ್ತಾ, ಆ ಬಳಿಕ ಬಂದು ಅವನನ್ನು ವಂದಿಸುವರೊ?

21 ಆ ಪ್ರಯಾಣದಲ್ಲಿ ಪೌಲನ ಜೊತೆಗಿದ್ದ ಬೈಬಲ್‌ ಲೇಖಕ ಲೂಕನು, ಆಗ ನಡೆದುದನ್ನು ನಮಗೆ ತಿಳಿಸುತ್ತಾನೆ: “ಅಲ್ಲಿದ್ದ [ರೋಮ್‌ನಲ್ಲಿದ್ದ] ಸಹೋದರರು . . . ನಮ್ಮನ್ನು ಎದುರುಗೊಳ್ಳುವದಕ್ಕಾಗಿ ಕೆಲವರು ಅಪ್ಪಿಯ ಪೇಟೆಯ ವರೆಗೂ ಕೆಲವರು ತ್ರಿಛತ್ರವೆಂಬ ಸ್ಥಳದ ವರೆಗೂ ಬಂದರು.” ಆ ದೃಶ್ಯವನ್ನು ನೀವು ಮನಸ್ಸಿನಲ್ಲೇ ನೋಡಬಲ್ಲಿರಾ? ಪೌಲನು ಬರುತ್ತಾನೆಂದು ಕೇಳಿದಾಗ ಸಹೋದರರ ಒಂದು ಪ್ರತಿನಿಧಿ ಗುಂಪು ಅವನನ್ನು ಸಂಧಿಸಲು ರೋಮಿನಿಂದ ಪ್ರಯಾಣ ಬೆಳೆಸಿತು. ಆ ಗುಂಪಿನ ಕೆಲವು ಸಹೋದರರು ಸವಾರಿ ಕುದುರೆ ಬದಲಾಯಿಸುವ ಪ್ರಸಿದ್ಧ ಸ್ಥಳವಾಗಿದ್ದ ಮತ್ತು ರೋಮಿನ ಹೊರಗೆ 74 ಕಿಲೊಮೀಟರ್‌ ದೂರದಲ್ಲಿದ್ದ ಅಪ್ಪಿಯ ಪೇಟೆಯಲ್ಲಿ ಕಾದುನಿಂತರು. ಸಹೋದರರಲ್ಲಿ ಮಿಕ್ಕವರು ನಗರದ ಹೊರಗೆ 58 ಕಿಲೋಮೀಟರ್‌ ದೂರದಲ್ಲಿದ್ದ ವಿಶ್ರಾಂತಿ ಸ್ಥಳವಾದ ತ್ರಿಛಕ್ರದಲ್ಲಿ ಕಾಯುತ್ತಿದ್ದರು. ಇದಕ್ಕೆ ಪೌಲನ ಪ್ರತಿವರ್ತನೆ ಏನಾಗಿತ್ತು? ಲೂಕನು ವರದಿಮಾಡಿದ್ದು: “ಪೌಲನು ಅವರನ್ನು ನೋಡಿ ದೇವರ ಸ್ತೋತ್ರವನ್ನು ಮಾಡಿ [“ದೇವರಿಗೆ ಕೃತಜ್ಞತೆ ಹೇಳಿದನು,” NW] ಧೈರ್ಯಗೊಂಡನು.” (ಅ. ಕೃತ್ಯಗಳು 28:15) ಭಾವಿಸಿರಿ​—ಶ್ರಮಪಟ್ಟು ಅಷ್ಟು ದೂರ ಪ್ರಯಾಣಿಸಿದ್ದ ಸಹೋದರರನ್ನು ಕೇವಲ ನೋಡಿದ್ದೇ ಪೌಲನಿಗೆ ಬಲ ಮತ್ತು ಸಾಂತ್ವನದ ಮೂಲವಾಗಿತ್ತು! ಮತ್ತು ಪೌಲನು ಈ ಸಹಾಯಕರ ಬೆಂಬಲಕ್ಕಾಗಿ ಯಾರಿಗೆ ಕೃತಜ್ಞತೆಯನ್ನು ಹೇಳಿದನು? ಇದಕ್ಕೆ ಕಾರಣನಾಗಿದ್ದ ಯೆಹೋವ ದೇವರಿಗೇ.

22. ನಮ್ಮ 2005ರ ವಾರ್ಷಿಕವಚನ ಯಾವುದು, ಮತ್ತು ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?

22 ದೇವರ ವ್ಯವಹಾರಗಳ ಪ್ರೇರಿತ ದಾಖಲೆಯು ಯೆಹೋವನು ಸಹಾಯಕನೆಂದು ಸ್ಪಷ್ಟವಾಗಿ ತೋರಿಸುತ್ತದೆ. ಸಹಾಯಕರಲ್ಲಿ ಆತನಿಗೆ ಸರಿಸಮಾನರಾದವರೇ ಇಲ್ಲ. ಸೂಕ್ತವಾಗಿ, ಕೀರ್ತನೆ 121:2ರ ಮಾತುಗಳೇ ಯೆಹೋವನ ಸಾಕ್ಷಿಗಳಿಗೆ 2005ರ ವಾರ್ಷಿಕವಚನವಾಗಿರುವವು: “ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ.” ಆದರೆ ಯೆಹೋವನು ನಮಗೆ ಇಂದು ಹೇಗೆ ಸಹಾಯಮಾಡುತ್ತಾನೆ? ಇದನ್ನು ಮುಂದಿನ ಲೇಖನವು ಚರ್ಚಿಸುವುದು.

[ಪಾದಟಿಪ್ಪಣಿ]

a ಅದೇ ರೀತಿಯ ಪ್ರಯಾಣವನ್ನು ಮಾಡಿದ ರೋಮನ್‌ ಕವಿ ಹಾರೆಸ್‌ (ಸಾ.ಶ.ಪೂ. 65-8) ಈ ವಿಭಾಗದಲ್ಲಿ ಪ್ರಯಾಣಿಸುವುದರ ತೊಂದರೆಗಳ ಕುರಿತು ಮಾತಾಡಿದನು. ಅಪ್ಪಿಯ ಪೇಟೆಯು “ದೋಣಿಗರಿಂದಲೂ ಜಿಪುಣರಾದ ಹೆಂಡ ವ್ಯಾಪಾರಸ್ಥರಿಂದಲೂ ಕಿಕ್ಕಿರಿದಿತ್ತು” ಎಂದು ಹಾರೆಸ್‌ ವರ್ಣಿಸಿದನು. “ಆ ಅನಿಷ್ಟವಾದ ಗುಂಗರೆಗಳು ಮತ್ತು ಕಪ್ಪೆಗಳು” ಹಾಗೂ “ರುಚಿ ಕೆಟ್ಟಿರುವ ನೀರು” ಇವುಗಳ ಕುರಿತು ಅವನು ಗೊಣಗಿದನು.

ನಿಮಗೆ ಜ್ಞಾಪಕವಿದೆಯೆ?

ಯೆಹೋವನು ಯಾವ ವಿಧಗಳಲ್ಲಿ

• ದೇವದೂತರ ಮೂಲಕ

• ಪವಿತ್ರಾತ್ಮದ ಮೂಲಕ

• ತನ್ನ ಪ್ರೇರಿತ ವಾಕ್ಯದ ಮೂಲಕ

• ಜೊತೆವಿಶ್ವಾಸಿಗಳ ಮೂಲಕ ಸಹಾಯವನ್ನು ಒದಗಿಸಿದನು?

[ಪುಟ 15ರಲ್ಲಿರುವ ಸಂಕ್ಷಿಪ್ತ ವಿವರಣೆ]

ಇಸವಿ 2005ರ ವಾರ್ಷಿಕವಚನ: “ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ.” ​—ಕೀರ್ತನೆ 121:2.

[ಪುಟ 16ರಲ್ಲಿರುವ ಚಿತ್ರ]

ರೋಮ್‌ನ ಸಹೋದರರಿಂದ ಪಡೆದ ಸಹಾಯಕ್ಕಾಗಿ ಪೌಲನು ದೇವರಿಗೆ ಕೃತಜ್ಞತೆ ಸಲ್ಲಿಸಿದನು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ