ನೀವು ನಿಮ್ಮನ್ನು ಇತರರೊಂದಿಗೆ ಹೋಲಿಸಿನೋಡುತ್ತೀರೊ?
ನಮಗಿಂತ ಸುಂದರವಾಗಿ ಕಾಣುವ, ನಮಗಿಂತ ಹೆಚ್ಚು ಜನಪ್ರಿಯವಾಗಿರುವ, ವಿಷಯಗಳನ್ನು ನಮಗಿಂತ ಶೀಘ್ರವಾಗಿ ಗ್ರಹಿಸಬಲ್ಲ, ಅಥವಾ ಶಾಲೆಯಲ್ಲಿ ನಮಗಿಂತ ಉತ್ತಮ ಅಂಕೆಯನ್ನು ಗಳಿಸುವ ವ್ಯಕ್ತಿಯನ್ನು ನಮ್ಮಲ್ಲಿ ಯಾರು ತಾನೇ ಭೇಟಿಯಾಗಿರುವುದಿಲ್ಲ? ಒಂದುವೇಳೆ ಇತರರಿಗೆ ನಮಗಿಂತ ಹೆಚ್ಚು ಉತ್ತಮವಾದ ಆರೋಗ್ಯ ಅಥವಾ ಉದ್ಯೋಗವಿರಬಹುದು, ಅವರು ನಮಗಿಂತ ಹೆಚ್ಚು ಸಫಲರಾಗಿರಬಹುದು, ಇಲ್ಲವೆ ಅವರಿಗೆ ನಮಗಿಂತ ಹೆಚ್ಚು ಸ್ನೇಹಿತರಿರಬಹುದು. ಅವರಿಗೆ ಹೆಚ್ಚು ಸೊತ್ತುಗಳು, ಹೆಚ್ಚು ಹಣ, ಒಂದು ನವೀನ ಕಾರು ಇರಬಹುದು ಅಥವಾ ನಮಗಿಂತ ಹೆಚ್ಚು ಸಂತೋಷಕರವಾಗಿ ಅವರು ಕಾಣಬಹುದು. ಈ ವಿಷಯಗಳನ್ನು ಉಲ್ಲೇಖಿಸಿ ಮಾತಾಡುವ ಮೂಲಕ ನಾವು ನಮ್ಮನ್ನು ಇತರರೊಂದಿಗೆ ಹೋಲಿಸಿನೋಡುತ್ತೇವೊ? ಹೋಲಿಸಿನೋಡುವುದನ್ನು ತಡೆಗಟ್ಟಲು ಸಾಧ್ಯವಿಲ್ಲವೊ? ಕ್ರೈಸ್ತನೊಬ್ಬನು ಈ ವಿಷಯವನ್ನು ತ್ಯಜಿಸಲು ಏಕೆ ಮನಸ್ಸು ಮಾಡಬೇಕಾಗಬಹುದು? ಇತರರೊಂದಿಗೆ ನಮ್ಮನ್ನು ಹೋಲಿಸದೆ, ನಮ್ಮಲ್ಲಿರುವುದರಲ್ಲಿಯೇ ನಾವು ಹೇಗೆ ತೃಪ್ತರಾಗಿರಬಲ್ಲೆವು?
ನಾವು ಯಾಕೆ ಮತ್ತು ಯಾವಾಗ ಹೋಲಿಸಿನೋಡಬಹುದು
ಜನರು ತಮ್ಮನ್ನು ಇತರರೊಂದಿಗೆ ಯಾಕೆ ಹೋಲಿಸುತ್ತಾರೆಂದರೆ ಅದು ಅವರ ಸ್ವಪ್ರತಿಷ್ಠೆಯನ್ನು ಕಾಪಾಡಲು ಅಥವಾ ಹೆಚ್ಚಿಸಲು ಅವರಿಗೆ ಸಹಾಯಮಾಡುತ್ತದೆ ಎಂದು ಅವರು ಭಾವಿಸುವುದರಿಂದಲೇ. ತಮ್ಮ ಸಮಾನಸ್ಥರಂತೆಯೇ ತಾವೂ ಸಫಲರಾಗಿದ್ದೇವೆ ಎಂದು ಕಂಡುಕೊಳ್ಳುವುದು ತಾನೇ ಜನರಿಗೆ ಅನೇಕವೇಳೆ ಸಂತೃಪ್ತಿಯನ್ನು ನೀಡುತ್ತದೆ. ಇತರರೊಂದಿಗೆ ಹೋಲಿಸಿನೋಡಲಿಕ್ಕಾಗಿರುವ ಇನ್ನೊಂದು ಕಾರಣವು ನಮಗಿರುವ ಅನಿಶ್ಚಿತ ಭಾವನೆಯನ್ನು ಕಡಿಮೆಗೊಳಿಸಲಿಕ್ಕಾಗಿದೆ ಮತ್ತು ನಾವು ಏನನ್ನು ಮಾಡಶಕ್ತರು ಹಾಗೂ ನಮ್ಮ ಇತಿಮಿತಿಗಳೇನು ಎಂಬುದನ್ನು ಅರ್ಥಮಾಡಿಕೊಳ್ಳಲಿಕ್ಕಾಗಿದೆ. ಇದಕ್ಕಾಗಿ ನಾವು ಇತರರು ಏನನ್ನು ಸಾಧಿಸಿದ್ದಾರೋ ಅದನ್ನು ಗಮನಿಸುತ್ತೇವೆ. ಹೀಗೆ, ಅನೇಕ ವಿಷಯಗಳಲ್ಲಿ ಅವರು ನಮ್ಮಂತಿರುವಲ್ಲಿ ಮತ್ತು ಅವರು ನಿರ್ದಿಷ್ಟ ಗುರಿಗಳನ್ನು ತಲಪಿರುವಲ್ಲಿ ಅದೇ ರೀತಿಯ ಗುರಿಗಳನ್ನು ನಾವು ಸಹ ತಲಪಬಲ್ಲೆವು ಎಂದು ನಮಗನಿಸಬಹುದು.
ಹೋಲಿಕೆಯು ಅನೇಕವೇಳೆ ಒಂದೇ ರೀತಿಯ ಎರಡು ವ್ಯಕ್ತಿಗಳ ಮಧ್ಯೆ ಮಾಡಲ್ಪಡುತ್ತವೆ. ಒಂದೇ ಲಿಂಗಜಾತಿಯ, ಸಮಾನ ವಯಸ್ಸಿನ, ಒಂದೇ ರೀತಿಯ ಅಂತಸ್ತಿನ ಮತ್ತು ಯಾರು ಒಬ್ಬರನ್ನೊಬ್ಬರು ತಿಳಿದಿದ್ದಾರೊ ಅವರ ಮಧ್ಯೆ ಹೋಲಿಕೆಯು ಮಾಡಲ್ಪಡುತ್ತದೆ. ನಮ್ಮ ಮತ್ತು ಇನ್ನೊಬ್ಬ ವ್ಯಕ್ತಿಯ ಮಧ್ಯೆ ಬಹಳಷ್ಟು ಅಂತರವಿದೆ ಎಂದು ತಿಳಿದರೆ ನಾವು ಅವರೊಂದಿಗೆ ನಮ್ಮನ್ನು ಹೋಲಿಸುವುದಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಸಾಧಾರಣ ರೀತಿಯ ಹದಿವಯಸ್ಕ ಹುಡುಗಿಯು ತನ್ನನ್ನು ಶಾಲಾ ಸಂಗಾತಿಗಳೊಂದಿಗೆ ಹೋಲಿಸುವ ಬದಲಿಗೆ ಒಬ್ಬ ರೂಪದರ್ಶಿಯೊಂದಿಗೆ ಹೋಲಿಸಿನೋಡುವ ಸಂಭಾವ್ಯತೆಯು ಕಡಿಮೆ. ಅಂತೆಯೇ, ಒಬ್ಬ ರೂಪದರ್ಶಿ ತನ್ನನ್ನು ಒಬ್ಬ ಸಾಧಾರಣ ರೀತಿಯ ಹದಿವಯಸ್ಕ ಹುಡುಗಿಯೊಂದಿಗೆ ಹೋಲಿಸುವುದು ಅಸಂಭವ.
ಯಾವ ಕ್ಷೇತ್ರಗಳಲ್ಲಿ ಹೋಲಿಕೆಯನ್ನು ಮಾಡಲಾಗುತ್ತದೆ? ಸಮುದಾಯದಲ್ಲಿ ಅಮೂಲ್ಯವೆಂದೆಣಿಸಲ್ಪಡುವ ಯಾವುದೇ ಸೊತ್ತು ಅಥವಾ ಗುಣಲಕ್ಷಣವು—ಉದಾಹರಣೆಗೆ, ಬುದ್ಧಿವಂತಿಕೆ, ಸೌಂದರ್ಯ, ಐಶ್ವರ್ಯ, ಉಡಿಗೆತೊಡಿಗೆ—ಹೋಲಿಕೆಗೆ ಮೂಲವಾಗಿರಬಹುದು. ಮುಖ್ಯವಾಗಿ ನಮಗೆ ಯಾವುದು ಆಸಕ್ತಿಯ ವಿಷಯವಾಗಿದೆಯೊ ಅದನ್ನು ನಾವು ಹೋಲಿಸಿನೋಡುತ್ತೇವೆ. ಉದಾಹರಣೆಗೆ, ನಮಗೆ ಸ್ಟ್ಯಾಂಪ್ ಸಂಗ್ರಹದಲ್ಲಿ ಆಸಕ್ತಿಯಿದ್ದರೆ, ಆಗ ಮಾತ್ರ ನಾವು ನಮ್ಮ ಪರಿಚಯಸ್ಥರ ಬಳಿಯಿರುವ ಸ್ಟ್ಯಾಂಪ್ ಸಂಗ್ರಹದ ಮೊತ್ತದ ಕುರಿತು ಒಂದುವೇಳೆ ಅಸೂಯೆಪಡಬಹುದು.
ಹೋಲಿಕೆಯು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ಹೊರಗೆಡವುತ್ತದೆ. ಈ ಪ್ರತಿಕ್ರಿಯೆಗಳು, ಸಂತೃಪ್ತಿಯಿಂದ ಖಿನ್ನತೆಯ ವರೆಗೆ, ಹೊಗಳಿಕೆ ಮತ್ತು ಅನುಕರಣಾ ಇಚ್ಛೆಯಿಂದ ಕಳವಳ ಅಥವಾ ವಿರೋಧದ ವರೆಗೆ ವಿಭಿನ್ನವಾಗಿರುತ್ತವೆ. ಇಂಥ ಭಾವನೆಗಳಲ್ಲಿ ಕೆಲವೊಂದು ಹಾನಿಕಾರಕವೂ ಕ್ರೈಸ್ತ ಗುಣಗಳೊಂದಿಗೆ ಅಸಮಂಜಸವೂ ಆಗಿರುತ್ತವೆ.
ಸ್ಪರ್ಧಾತ್ಮಕ ಹೋಲಿಕೆಗಳು
ಹೋಲಿಕೆಗಳಲ್ಲಿ ತಾವು “ಜಯಶಾಲಿಗಳಾಗಬೇಕು” ಎಂಬ ಇಚ್ಛೆಯಿಂದ ಕೆಲವರು ಸ್ಪರ್ಧಾತ್ಮಕ ಮನೋಭಾವವನ್ನು ತೋರಿಸುತ್ತಾರೆ. ಇತರರಿಗಿಂತ ತಾವು ಉತ್ತಮರೆನಿಸಿಕೊಳ್ಳಬೇಕು ಎಂದು ಅವರು ಬಯಸುತ್ತಾರೆ, ಮತ್ತು ತಾವು ಉತ್ತಮರು ಎಂದು ಅನಿಸಿಕೊಳ್ಳುವ ವರೆಗೆ ಅವರಿಗೆ ತೃಪ್ತಿಯಿರುವುದಿಲ್ಲ. ಅಂಥ ವ್ಯಕ್ತಿಗಳ ಮಧ್ಯೆ ಇರುವುದು ಸಂತೋಷವನ್ನು ನೀಡುವುದಿಲ್ಲ. ಅಂಥವರೊಂದಿಗಿನ ಸ್ನೇಹವು ಅಸಮಾಧಾನಕ್ಕೆ ನಡೆಸುತ್ತದೆ, ಸಂಬಂಧವು ವಿಷಮವಾದದ್ದಾಗಿರುತ್ತದೆ. ಅಂಥವರಲ್ಲಿ ದೀನತೆಯ ಕೊರತೆ ಮಾತ್ರವಲ್ಲ, ತಮ್ಮ ಜೊತೆಮಾನವರನ್ನು ಪ್ರೀತಿಸಬೇಕೆಂಬ ಬೈಬಲ್ ಸಲಹೆಯನ್ನು ಸಹ ಅವರು ಅನ್ವಯಿಸಲು ಸಾಮಾನ್ಯವಾಗಿ ತಪ್ಪಿಬೀಳುತ್ತಾರೆ. ಹೀಗೆ, ಅವರ ಮನೋಭಾವವು ಇತರರಲ್ಲಿ ಕೀಳರಿಮೆಯ ಮತ್ತು ಅಪಮಾನದ ಭಾವನೆಯನ್ನು ಉಂಟುಮಾಡುತ್ತದೆ.—ಮತ್ತಾಯ 18:1-5; ಯೋಹಾನ 13:34, 35.
“ಸೋತವರು” ಎಂಬ ಭಾವನೆಯನ್ನು ಮೂಡಿಸುವುದು ಜನರಿಗೆ ನೋವನ್ನು ಉಂಟುಮಾಡುತ್ತದೆ. ಒಬ್ಬ ಬರಹಗಾರ್ತಿಗನುಸಾರ, “ನಮ್ಮಂಥದ್ದೇ ಪರಿಸ್ಥಿತಿಯಲ್ಲಿರುವ ಇತರರು ನಾವು ಬಯಸಿದ ಸೊತ್ತುಗಳನ್ನು ಗಳಿಸಿದ್ದಾರೆಂದು ತಿಳಿಯುವಾಗ ನಮ್ಮ ಸೋಲು ಇನ್ನಷ್ಟು ಹೆಚ್ಚು ದುಃಖಕರವಾಗಿರುತ್ತದೆ.” ಸ್ಪರ್ಧಾತ್ಮಕ ಮನೋಭಾವವು ಇನ್ನೊಬ್ಬನಲ್ಲಿರುವ ಸೊತ್ತು, ಏಳಿಗೆ, ಸ್ಥಾನಮಾನ, ಖ್ಯಾತಿ, ಸೌಕರ್ಯ ಮತ್ತು ಇತರ ವಿಷಯಗಳಿಗಾಗಿ ಅವನ ಕಡೆಗೆ ಹೊಟ್ಟೆಕಿಚ್ಚು, ಕೋಪ ಮತ್ತು ಅಸಮ್ಮತಿಯನ್ನು ತೋರಿಸುವಂತೆ ಮಾಡುತ್ತದೆ. ಇದು ಇನ್ನಷ್ಟು ಹೆಚ್ಚು ಹೊಟ್ಟೆಕಿಚ್ಚಿಗೆ ನಡೆಸುತ್ತದೆ. ಈ ರೀತಿಯಲ್ಲಿ ಇದು ಒಂದು ವಿಷಮಚಕ್ರವನ್ನು ಉಂಟುಮಾಡುತ್ತದೆ. ಆದರೆ ಬೈಬಲ್ “ಮತ್ಸರವುಳ್ಳವ”ರಾಗಿರುವುದನ್ನು ಖಂಡಿಸುತ್ತದೆ.—ಗಲಾತ್ಯ 5:26.
ಪ್ರತಿಸ್ಪರ್ಧಿಯ ಸಾಧನೆಗಳ ಕುರಿತು ಅವಹೇಳನಮಾಡುವ ಮೂಲಕ ಹೊಟ್ಟೆಕಿಚ್ಚಿನ ವ್ಯಕ್ತಿಯು ಘಾಸಿಗೊಂಡ ತನ್ನ ಸ್ವಪ್ರತಿಷ್ಠೆಯನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತಾನೆ. ಅಂಥ ಪ್ರತಿಕ್ರಿಯೆಯು ಕ್ಷಲ್ಲಕವಾಗಿ ತೋರಬಹುದು, ಆದರೆ ಅದನ್ನು ಅರಿತುಕೊಂಡು ಹತೋಟಿಯಲ್ಲಿಟ್ಟುಕೊಳ್ಳದೆ ಹೋದರೆ ಅದು ಹಾನಿಕಾರಕವಾದ ತಪ್ಪುಕೃತ್ಯಗಳಿಗೆ ನಡೆಸಬಲ್ಲದು. ಹೊಟ್ಟೆಕಿಚ್ಚು ತಾನೇ ಮುಖ್ಯ ಕಾರಣವಾಗಿದ್ದ ಎರಡು ಬೈಬಲ್ ವೃತ್ತಾಂತಗಳನ್ನು ಪರಿಗಣಿಸಿರಿ.
ಫಿಲಿಷ್ಟಿಯರ ಮಧ್ಯೆ ವಾಸಿಸುತ್ತಿದ್ದಾಗ ಇಸಾಕನಿಗೆ “ದನಕುರಿಗಳ ಸಂಪತ್ತೂ ಅನೇಕ ಸೇವಕಜನವೂ ಇದ್ದವು. ಇದನ್ನು ನೋಡಿ ಫಿಲಿಷ್ಟಿಯರು ಹೊಟ್ಟೆಕಿಚ್ಚುಪಟ್ಟರು.” ಆದುದರಿಂದ ಅವರು, ಇಸಾಕನ ತಂದೆಯಾದ ಅಬ್ರಹಾಮನು ತೋಡಿದ್ದ ಬಾವಿಗಳನ್ನು ಮಣ್ಣುಹಾಕಿ ಮುಚ್ಚಿದರು ಮತ್ತು ಅವರ ಅರಸನು ಇಸಾಕನಿಗೆ ಆ ಕ್ಷೇತ್ರವನ್ನು ಬಿಟ್ಟುಹೋಗುವಂತೆ ಹೇಳಿದನು. (ಆದಿಕಾಂಡ 26:1-3, 12-17) ಅವರ ಹೊಟ್ಟೆಕಿಚ್ಚು ಹಾನಿಕಾರಕವೂ ನಾಶಕಾರಕವೂ ಆಗಿತ್ತು. ತಮ್ಮ ಮಧ್ಯದಲ್ಲಿ ಇಸಾಕನು ಅನುಭವಿಸುವ ಏಳಿಗೆಯನ್ನು ಅವರೆಂದೂ ಸಹಿಸಶಕ್ತರಾಗಿರಲಿಲ್ಲ.
ಶತಮಾನಗಳ ಅನಂತರ, ದಾವೀದನು ಯುದ್ಧರಂಗದಲ್ಲಿ ಶ್ರೇಷ್ಠ ಹೆಸರನ್ನು ಗಳಿಸಿದನು. ಅವನ ಸಾಹಸ ಕಾರ್ಯವನ್ನು ಇಸ್ರಾಯೇಲ್ಯ ಸ್ತ್ರೀಯರು ಈ ರೀತಿಯಾಗಿ ಹಾಡುವ ಮೂಲಕ ಹೊಗಳಿದರು: “ಸೌಲನು ಸಾವಿರಗಟ್ಟಳೆಯಾಗಿ ಕೊಂದನು; ದಾವೀದನು ಹತ್ತುಸಾವಿರಗಟ್ಟಳೆಯಾಗಿ ಕೊಂದನು.” ಸೌಲನಿಗೂ ತಕ್ಕಮಟ್ಟಿನ ಹೊಗಳುವಿಕೆಯು ದೊರಕುತ್ತಿದ್ದರೂ ಈ ಹೋಲಿಕೆಯನ್ನು ಅವನು ಅಪಮಾನವಾಗಿ ವೀಕ್ಷಿಸಿದನು ಮತ್ತು ಇದು ಅವನ ಹೃದಯದಲ್ಲಿ ಹೊಟ್ಟೆಕಿಚ್ಚನ್ನು ಉಂಟುಮಾಡಿತು. ಅಂದಿನಿಂದ ಸೌಲನು ದಾವೀದನ ವಿರುದ್ಧ ವೈರತ್ವವನ್ನು ಬೆಳೆಸಿಕೊಂಡನು. ಸ್ವಲ್ಪ ಸಮಯದಲ್ಲಿಯೇ ಅವನು ದಾವೀದನನ್ನು ಕೊಲ್ಲಲು ಮೊದಲ ಪ್ರಯತ್ನವನ್ನು ಮಾಡಿದನು. ಹೊಟ್ಟೆಕಿಚ್ಚಿನಿಂದ ಎಂಥ ದುಷ್ಕೃತ್ಯವು ಮೊಳಕೆಯೊಡೆಯಬಲ್ಲದು!—1 ಸಮುವೇಲ 18:6-11.
ಆದುದರಿಂದ ಇತರರ ಸಾಹಸಕಾರ್ಯ ಅಥವಾ ಅನುಕೂಲತೆಗಳೊಂದಿಗೆ ನಮ್ಮನ್ನು ಹೋಲಿಸಿನೋಡುವಾಗ, ಅದು ನಮ್ಮಲ್ಲಿ ಹೊಟ್ಟೆಕಿಚ್ಚು ಅಥವಾ ಸ್ಪರ್ಧಾತ್ಮಕ ಮನೋಭಾವವನ್ನು ಉಂಟುಮಾಡುವುದಾದರೆ ಎಚ್ಚರದಿಂದಿರಿ! ಈ ಭಾವನೆಗಳು ದೇವರ ಆಲೋಚನೆಯೊಂದಿಗೆ ಸರಿಹೊಂದದ ನಕಾರಾತ್ಮಕ ಭಾವನೆಗಳಾಗಿವೆ. ಇಂಥ ಮನೋಭಾವಗಳನ್ನು ಹೇಗೆ ತಡೆಗಟ್ಟಬಲ್ಲೆವು ಎಂಬುದನ್ನು ಪರೀಕ್ಷಿಸುವ ಮುನ್ನ, ಇತರರೊಂದಿಗೆ ನಾವು ನಮ್ಮನ್ನು ಹೋಲಿಸುವಂತೆ ಮಾಡಬಲ್ಲ ಇನ್ನೊಂದು ವಿಷಯವನ್ನು ಪರಿಗಣಿಸುವ.
ಸ್ವಾಭಿಮಾನ ಮತ್ತು ಸಂತೃಪ್ತಿ
‘ನಾನು ಬುದ್ಧಿವಂತನೂ ಆಕರ್ಷಕನೂ ಸಮರ್ಥನೂ ಆರೋಗ್ಯವಂತನೂ ಅಧಿಕಾರಯುಕ್ತನೂ ಪ್ರೀತಿಪರನೂ ಆಗಿದ್ದೇನೋ? ಆಗಿರುವಲ್ಲಿ ಎಷ್ಟರ ಮಟ್ಟಿಗೆ?’ ನಾವು ದರ್ಪಣದ ಮುಂದೆ ನಿಂತು ಈ ಪ್ರಶ್ನೆಗಳನ್ನು ಕೇಳಿಕೊಳ್ಳುವುದಿಲ್ಲ. ಆದರೆ, ಒಬ್ಬ ಬರಹಗಾರ್ತಿಗನುಸಾರ “ಇಂಥ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಬರುತ್ತವೆ ಮತ್ತು ಇದಕ್ಕೆ ಮೌನವಾಗಿಯೇ ಉತ್ತರಗಳೂ ದೊರಕುತ್ತವೆ. ಆ ಉತ್ತರಗಳು ಹೆಚ್ಚುಕಡಿಮೆ ನಮಗೆ ತೃಪ್ತಿದಾಯಕವಾಗಿರುತ್ತವೆ.” ತಾನು ಏನನ್ನು ಸಾಧಿಸಬಲ್ಲೆ ಎಂಬುದರ ಕುರಿತು ತಿಳಿಯದಿರುವ ಒಬ್ಬ ವ್ಯಕ್ತಿಯು, ಯಾವುದೇ ಸ್ಪರ್ಧಾತ್ಮಕ ಹೇತು ಇಲ್ಲದೆ ಅಥವಾ ಹೊಟ್ಟೆಕಿಚ್ಚಿನ ಭಾವನೆಯಿಲ್ಲದೆ ಇಂಥ ವಿಷಯಗಳ ಕುರಿತು ಆಲೋಚಿಸಬಹುದು. ಇದು ಕೇವಲ ಅವನು ತನ್ನ ಸಾಮರ್ಥ್ಯವನ್ನು ಅಳೆಯುವ ಸಲುವಾಗಿ ಆಲೋಚಿಸುತ್ತಾನೆ. ಇದರಲ್ಲಿ ಯಾವುದೇ ಹಾನಿಯಿಲ್ಲ. ಆದರೂ, ನಮ್ಮ ಸಾಮರ್ಥ್ಯವನ್ನು ಅಳೆಯುವ ಸಲುವಾಗಿ ಇತರರೊಂದಿಗೆ ನಮ್ಮನ್ನು ಹೋಲಿಸಿನೋಡುವುದು ಸರಿಯಾದ ಮಾರ್ಗವಲ್ಲ.
ನಮ್ಮೆಲ್ಲರಲ್ಲಿ ವಿಭಿನ್ನವಾದ ಸಾಮರ್ಥ್ಯಗಳಿವೆ. ಇದಕ್ಕೆ ವಿವಿಧ ಸಂಗತಿಗಳು ಕಾರಣವಾಗಿವೆ. ಒಂದು ವಿಷಯವನ್ನು ನಾವು ನಿರ್ವಹಿಸುವುದಕ್ಕಿಂತ ಹೆಚ್ಚು ಉತ್ತಮವಾಗಿ ನಿರ್ವಹಿಸಬಲ್ಲ ಯಾರಾದರೂ ಒಬ್ಬರು ಇದ್ದೇ ಇರುತ್ತಾರೆ. ಆದುದರಿಂದ, ಅವರನ್ನು ಹೊಟ್ಟೆಕಿಚ್ಚಿನ ದೃಷ್ಟಿಯಿಂದ ನೋಡುವ ಬದಲು, ನಾವು ನಮ್ಮ ಸಾಧನೆಯನ್ನು ದೇವರ ನೀತಿಯ ಮಟ್ಟಗಳಿಗೆ ಅನುಸಾರವಾಗಿ ಹೋಲಿಸಿನೋಡಬೇಕು. ಏಕೆಂದರೆ ಅದು ತಾನೇ ಸರಿ ಮತ್ತು ತಪ್ಪಿನ ಕುರಿತು ಸರಿಯಾದ ಮಟ್ಟವನ್ನು ನೀಡಬಲ್ಲದು. ನಾವು ವೈಯಕ್ತಿಕವಾಗಿ ಏನಾಗಿದ್ದೇವೊ ಅದರಲ್ಲಿ ಯೆಹೋವನು ಆಸಕ್ತನಾಗಿದ್ದಾನೆ. ಅವನು ನಮ್ಮನ್ನು ಇತರರೊಂದಿಗೆ ಹೋಲಿಸಿನೋಡುವುದಿಲ್ಲ. ಅಪೊಸ್ತಲ ಪೌಲನು ನಮಗೆ ಸಲಹೆ ನೀಡುವುದು: “ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರಿಶೋಧಿಸಲಿ; ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬರ ನಿಮಿತ್ತದಿಂದಾಗುವದಿಲ್ಲ.”—ಗಲಾತ್ಯ 6:4.
ಹೊಟ್ಟೆಕಿಚ್ಚನ್ನು ತಡೆಗಟ್ಟುವುದು
ಎಲ್ಲ ಮನುಷ್ಯರು ಅಪರಿಪೂರ್ಣರಾಗಿರುವ ಕಾರಣ, ಹೊಟ್ಟೆಕಿಚ್ಚನ್ನು ತಡೆಗಟ್ಟಲು ಸತತವಾದ ಮತ್ತು ದೀರ್ಘಕಾಲದ ಪ್ರಯತ್ನಗಳು ಅಗತ್ಯವಿರಬಹುದು. “ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ” ಎಂದು ಶಾಸ್ತ್ರವಚನವು ಹೇಳುತ್ತದೆ ಎಂಬುದನ್ನು ತಿಳಿದಿರುವುದು ಒಂದು ವಿಷಯವಾದರೆ, ಅದನ್ನು ಮಾಡುವುದು ಇನ್ನೊಂದು ವಿಷಯವಾಗಿದೆ. ತನ್ನ ಸ್ವಂತ ಪಾಪಪ್ರವೃತ್ತಿಯನ್ನು ಪೌಲನು ತಿಳಿದಿದ್ದನು. ಅದರ ವಿರುದ್ಧ ಹೋರಾಡಲು, ಅವನಿಗೆ ‘ತನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳಬೇಕಿತ್ತು.’ (ರೋಮಾಪುರ 12:10; 1 ಕೊರಿಂಥ 9:27) ನಮ್ಮ ವಿಷಯದಲ್ಲಿ ಅದು, ಸ್ಪರ್ಧಾತ್ಮಕ ಆಲೋಚನೆಗಳನ್ನು ಸಕಾರಾತ್ಮಕ ಆಲೋಚನೆಗಳಿಂದ ಸ್ಥಾನಪಲ್ಲಟಗೊಳಿಸುವ ಅರ್ಥದಲ್ಲಿರಬಹುದು. “ಯೋಗ್ಯತೆಗೆ ಮೀರಿ [ನಮ್ಮನ್ನು] ಭಾವಿಸಿಕೊಳ್ಳದೆ” ಇರುವಂತೆ ನಾವು ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಬೇಕು.—ರೋಮಾಪುರ 12:3.
ಬೈಬಲ್ ಅಧ್ಯಯನ ಮತ್ತು ಧ್ಯಾನವು ಸಹ ಸಹಾಯಮಾಡುತ್ತದೆ. ಉದಾಹರಣೆಗೆ, ದೇವರು ವಾಗ್ದಾನಿಸಿರುವ ಭಾವೀ ಪರದೈಸಿನ ಕುರಿತು ಆಲೋಚಿಸಿರಿ. ಅಲ್ಲಿ ಎಲ್ಲರಿಗೂ ಶಾಂತಿ, ಉತ್ತಮ ಆರೋಗ್ಯ, ಹೇರಳವಾದ ಆಹಾರ, ಸುಖಸೌಕರ್ಯಗಳಿಂದ ಕೂಡಿದ ಮನೆಗಳು ಮತ್ತು ಸಂತೃಪ್ತಿದಾಯಕ ಕೆಲಸವಿರುವುದು. (ಕೀರ್ತನೆ 46:8, 9; 72:7, 8, 16; ಯೆಶಾಯ 65:21-23) ಹಾಗಿರುವಾಗ ಯಾರಿಗಾದರೂ ಸ್ಪರ್ಧಾತ್ಮಕ ಮನೋಭಾವವು ಉಂಟಾಗುತ್ತದೋ? ಖಂಡಿತವಾಗಿಯೂ ಇಲ್ಲ. ಹಾಗೆ ಮಾಡುವುದಕ್ಕೆ ಯಾವ ಕಾರಣವೂ ಅಲ್ಲಿರುವುದಿಲ್ಲ. ಪರದೈಸಿನಲ್ಲಿನ ಜೀವನವು ಹೇಗಿರುತ್ತದೆಂಬುದರ ಕುರಿತಾಗಿ ಪ್ರತಿಯೊಂದು ವಿವರಣೆಯನ್ನು ಯೆಹೋವನು ನೀಡಲಿಲ್ಲ ಎಂಬುದು ನಿಜವಾದರೂ, ಪ್ರತಿಯೊಬ್ಬರೂ ತಮ್ಮ ಆಸಕ್ತಿಗಳನ್ನು ಮತ್ತು ಕೌಶಲಗಳನ್ನು ಬೆನ್ನಟ್ಟಲು ಶಕ್ತರಾಗುವರು ಎಂಬುದರಲ್ಲಿ ನಾವು ತಕ್ಕಮಟ್ಟಿಗೆ ನಿಶ್ಚಿತರಾಗಿರಬಲ್ಲೆವು. ಒಬ್ಬನು ಖಗೋಳಶಾಸ್ತ್ರದ ಕುರಿತು ಅಧ್ಯಯನಮಾಡಬಹುದು, ಇನ್ನೊಬ್ಬನು ಸುಂದರವಾದ ಬಟ್ಟೆಗಳನ್ನು ವಿನ್ಯಾಸಿಸಬಹುದು. ಒಬ್ಬನು ಇನ್ನೊಬ್ಬನ ಕುರಿತು ಏಕೆ ಹೊಟ್ಟೆಕಿಚ್ಚುಪಡಬೇಕು? ನಮ್ಮ ಜೊತೆಮಾನವರ ಚಟುವಟಿಕೆಗಳು ನಮ್ಮಲ್ಲಿ ಕೋಪವನ್ನು ಎಬ್ಬಿಸದೆ, ಇನ್ನಷ್ಟು ಸಾಧನೆಗಳನ್ನು ಮಾಡಲು ಉತ್ತೇಜನವನ್ನು ನೀಡುವವು. ಸ್ಪರ್ಧಾತ್ಮಕ ಭಾವನೆಗಳು ಗತಕಾಲದ ವಿಷಯಗಳಾಗಿರುವವು.
ಈ ರೀತಿಯ ಜೀವನಕ್ಕಾಗಿ ನಾವು ಹಂಬಲಿಸುವುದಾದರೆ, ಅಂಥ ಮನೋಭಾವವನ್ನು ನಾವು ಈಗಲೇ ಬೆಳೆಸಲು ಪ್ರಯತ್ನಿಸಬಾರದೋ? ನಾವು ಈಗಾಗಲೇ, ನಮ್ಮ ಸುತ್ತಲಿನ ಲೋಕದ ಅನೇಕ ಸಮಸ್ಯೆಗಳಿಂದ ವಿಮುಕ್ತವಾಗಿರುವ ಆಧ್ಯಾತ್ಮಿಕ ಪರದೈಸಿನಲ್ಲಿ ಆನಂದಿಸುತ್ತಿದ್ದೇವೆ. ದೇವರ ನೂತನ ಲೋಕದಲ್ಲಿ ಸ್ಪರ್ಧಾತ್ಮಕ ಮನೋಭಾವವು ಇರುವುದಿಲ್ಲವಾದ ಕಾರಣ, ಈಗಲೇ ಅದನ್ನು ತಡೆಗಟ್ಟಲು ಸಕಾರಣವಿದೆ.
ಹಾಗಾದರೆ, ನಮ್ಮನ್ನು ಇತರರೊಂದಿಗೆ ಹೋಲಿಸುವುದು ತಪ್ಪೋ? ಅಥವಾ ಹಾಗೆ ಮಾಡಲು ಸೂಕ್ತವಾದ ಸಮಯವಿದೆಯೋ?
ಸೂಕ್ತವಾದ ಹೋಲಿಕೆ
ಅನೇಕ ಹೋಲಿಕೆಗಳು ಕಹಿಯಾದ ಅಥವಾ ಖಿನ್ನತೆಗೆ ನಡೆಸುವ ಪ್ರತಿಕ್ರಿಯೆಯನ್ನು ಉಂಟುಮಾಡಿವೆ, ಆದರೆ ಯಾವಾಗಲೂ ಹೀಗಿರುವ ಅಗತ್ಯವಿಲ್ಲ. ಈ ವಿಷಯದಲ್ಲಿ ಅಪೊಸ್ತಲ ಪೌಲನ ಬುದ್ಧಿವಾದವನ್ನು ಗಮನಿಸಿರಿ: ‘ಯಾರು ವಾಗ್ದಾನಗಳನ್ನು ನಂಬಿ ಅವುಗಳ ಫಲಕ್ಕೋಸ್ಕರ ಬಹು ದಿವಸಗಳವರೆಗೂ ಕಾದಿದ್ದು ಆ ಫಲವನ್ನು ಹೊಂದುತ್ತಾರೋ ಅವರನ್ನು ಅನುಸರಿಸಿರಿ.’ (ಇಬ್ರಿಯ 6:12) ಯೆಹೋವನ ಪುರಾತನ ಕಾಲದ ನಂಬಿಗಸ್ತ ಸೇವಕರ ಗುಣಗಳನ್ನು ನಾವು ಬೆಳೆಸಿಕೊಳ್ಳಲು ಪ್ರಯತ್ನಿಸುವುದು ಫಲದಾಯಕವಾಗಿರುತ್ತದೆ. ಇದರಲ್ಲಿ ಕೆಲವು ಹೋಲಿಕೆಗಳು ಒಳಗೂಡಿರಬಹುದು ಎಂಬುದು ನಿಜ. ಆದರೆ ಇದು, ನಾವು ಅನುಕರಿಸಬಲ್ಲ ಮಾದರಿಗಳನ್ನು ಗಮನಿಸುವಂತೆ ಮತ್ತು ನಾವು ಯಾವ ಕ್ಷೇತ್ರದಲ್ಲಿ ಪ್ರಗತಿಯನ್ನು ಮಾಡಬೇಕೆಂದು ತಿಳಿದುಕೊಳ್ಳುವಂತೆ ನಮಗೆ ಸಹಾಯಮಾಡಬಲ್ಲದು.
ಯೋನಾತಾನನನ್ನು ಪರಿಗಣಿಸಿರಿ. ಹೊಟ್ಟೆಕಿಚ್ಚುಪಡಲು ಅವನಿಗೆ ಸಕಾರಣವಿತ್ತೆಂದು ಒಬ್ಬನು ಹೇಳಸಾಧ್ಯವಿದೆ. ಇಸ್ರಾಯೇಲಿನ ರಾಜ ಸೌಲನ ಹಿರಿಯ ಮಗನಾದ ಯೋನಾತಾನನು ತಾನು ಮುಂದಕ್ಕೆ ರಾಜನಾಗಲಿದ್ದೇನೆಂದು ಒಂದೊಮ್ಮೆ ನೆನಸಿದ್ದಿರಬಹುದು, ಆದರೆ ಯೆಹೋವನು ಅವನಿಗಿಂತ ಹೆಚ್ಚುಕಡಿಮೆ 30 ವರುಷ ಚಿಕ್ಕವನಾದ ಯುವ ದಾವೀದನನ್ನು ಆಯ್ಕೆಮಾಡಿದನು. ದಾವೀದನ ವಿರುದ್ಧ ಹಗೆತನವನ್ನು ಬೆಳೆಸಿಕೊಳ್ಳುವ ಬದಲಿಗೆ ಯೋನಾತಾನನು ಅವನೊಂದಿಗೆ ನಿಸ್ವಾರ್ಥ ಮಿತ್ರತ್ವವನ್ನು ಬೆಳೆಸಿಕೊಂಡನು ಮತ್ತು ಯೆಹೋವನಿಂದ ರಾಜನಾಗಿ ನೇಮಕಗೊಂಡ ದಾವೀದನನ್ನು ಬೆಂಬಲಿಸಿದನು. ಯೋನಾತಾನನು ನಿಜವಾಗಿಯೂ ಆಧ್ಯಾತ್ಮಿಕ ವ್ಯಕ್ತಿಯಾಗಿದ್ದನು. (1 ಸಮುವೇಲ 19:1-4) ದಾವೀದನನ್ನು ತನ್ನ ಎದುರಾಳಿಯಾಗಿ ವೀಕ್ಷಿಸುತ್ತಿದ್ದ ಅವನ ತಂದೆಯಂತೆ ಯೋನಾತಾನನಿರಲಿಲ್ಲ. ಯೆಹೋವನು ಈ ಎಲ್ಲ ವಿಷಯಗಳನ್ನು ಮಾರ್ಗದರ್ಶಿಸುತ್ತಿದ್ದಾನೆ ಎಂಬುದನ್ನು ಅವನು ಗ್ರಹಿಸಿದನು ಮತ್ತು ಆತನ ಚಿತ್ತಕ್ಕೆ ವಿಧೇಯನಾದನು; “ದಾವೀದನು ಏಕೆ ಆಯ್ಕೆಮಾಡಲ್ಪಟ್ಟನು, ನನ್ನನ್ನು ಏಕೆ ಮಾಡಲಿಲ್ಲ?” ಎಂದು ಕೇಳಿ ತನ್ನನ್ನು ದಾವೀದನೊಂದಿಗೆ ಹೋಲಿಸಿನೋಡಲಿಲ್ಲ.
ನಮ್ಮ ಜೊತೆ ಕ್ರೈಸ್ತರ ಮಧ್ಯದಲ್ಲಿ ನಮಗೆ ಬೆದರಿಕೆಯ ಅನಿಸಿಕೆಯಾಗಬಾರದು. ಅವರು ನಮಗಿಂತ ಹೆಚ್ಚಿನ ಕೆಲಸವನ್ನು ಮಾಡಬಹುದು ಅಥವಾ ನಮ್ಮ ಸ್ಥಾನವನ್ನು ತೆಗೆದುಕೊಳ್ಳಬಹುದು ಎಂಬಂಥ ಅನಿಸಿಕೆ ನಮಗಾಗಬಾರದು. ಪ್ರತಿಸ್ಪರ್ಧೆಯು ಸೂಕ್ತವಲ್ಲ. ಸಹಕಾರ, ಏಕತೆ ಮತ್ತು ಪ್ರೀತಿಯಿಂದ ಪ್ರೌಢ ಕ್ರೈಸ್ತರು ಗುರುತಿಸಲ್ಪಡುತ್ತಾರೆ, ಸ್ಪರ್ಧಾತ್ಮಕ ಮನೋಭಾವದಿಂದಲ್ಲ. “ಪ್ರೀತಿಯು ಹೊಟ್ಟೆಕಿಚ್ಚಿನ ವೈರಿಯಾಗಿದೆ. ನಾವು ಒಬ್ಬರನ್ನು ಪ್ರೀತಿಸುವುದಾದರೆ, ಅವರಿಗೆ ಒಳ್ಳೇದನ್ನೇ ನಾವು ಬಯಸುತ್ತೇವೆ ಮತ್ತು ಅವರು ಯಶಸ್ವಿ ಹೊಂದುವಾಗ ಹಾಗೂ ಸಂತೋಷದಿಂದಿರುವಾಗ ನಾವೂ ಸಂತೋಷಿಸುತ್ತೇವೆ” ಎಂದು ಸಮಾಜ ಶಾಸ್ತ್ರಜ್ಞ ಫ್ರಾನ್ಚೇಸ್ಕೋ ಆಲ್ಬರೋನೀ ತಿಳಿಸುತ್ತಾರೆ. ಆದುದರಿಂದ, ಕ್ರೈಸ್ತ ಸಭೆಯಲ್ಲಿ ಬೇರೆ ಯಾರಾದರೂ ಒಂದು ಸುಯೋಗಕ್ಕಾಗಿ ಆಯ್ಕೆಮಾಡಲ್ಪಟ್ಟಲ್ಲಿ, ಪ್ರೀತಿಪೂರ್ವಕ ವಿಷಯವೇನೆಂದರೆ ನಮಗಿರುವುದರಲ್ಲಿ ತೃಪ್ತರಾಗಿರುವುದೇ ಆಗಿದೆ. ಯೋನಾತಾನನು ಇದನ್ನೇ ಮಾಡಿದನು. ಅವನಂತೆ, ಯೆಹೋವನ ಸಂಘಟನೆಯಲ್ಲಿ ಜವಾಬ್ದಾರಿಯ ಸ್ಥಾನದಲ್ಲಿ ನಂಬಿಗಸ್ತಿಕೆಯಿಂದ ಸೇವೆಸಲ್ಲಿಸುವವರನ್ನು ನಾವು ಬೆಂಬಲಿಸುವುದಾದರೆ ಆಶೀರ್ವದಿಸಲ್ಪಡುವೆವು.
ಜೊತೆ ಕ್ರೈಸ್ತರು ಇಡುವಂಥ ಅತ್ಯುತ್ತಮ ಮಾದರಿಯನ್ನು ನಾವು ಶ್ಲಾಘಿಸುವುದು ಸೂಕ್ತವಾಗಿದೆ. ಅವರೊಂದಿಗೆ ಸಮತೂಕವಾಗಿ ನಾವು ನಮ್ಮನ್ನು ಹೋಲಿಸುವಾಗ ಅವರ ನಂಬಿಕೆಯನ್ನು ಉತ್ತಮ ರೀತಿಯಲ್ಲಿ ಅನುಕರಿಸುವಂತೆ ಅದು ನಮ್ಮನ್ನು ಪ್ರೇರೇಪಿಸುತ್ತದೆ. (ಇಬ್ರಿಯ 13:7) ಆದರೆ ನಾವು ಜಾಗರೂಕರಾಗಿರದಿದ್ದಲ್ಲಿ, ಅನುಕರಣೆಯು ಸ್ಪರ್ಧೆಯಾಗಿ ಬದಲಾಗಬಲ್ಲದು. ನಾವು ಮೆಚ್ಚುವಂತಹ ಯಾರಾದರು ನಮ್ಮಗಿಂತಲೂ ಹೆಚ್ಚು ಉತ್ತಮರಾಗಿದ್ದಾರೆ ಎಂದು ನಮಗನಿಸುವುದಾರೆ ಮತ್ತು ಅವರನ್ನು ಹೀನೈಸಲು ಇಲ್ಲವೆ ಹಂಗಿಸಲು ನಾವು ಪ್ರಯತ್ನಿಸುವುದಾದರೆ ನಾವವರನ್ನು ಅನುಕರಿಸುತ್ತಿಲ್ಲ ಬದಲಾಗಿ ಅವರ ಕಡೆಗೆ ಹೊಟ್ಟೆಕಿಚ್ಚನ್ನು ಪ್ರದರ್ಶಿಸುತ್ತಿದ್ದೇವೆ.
ಯಾವನೇ ಅಪರಿಪೂರ್ಣ ಮಾನವನು ಒಂದು ಉತ್ತಮ ಮಾದರಿಯಾಗಿರಲಾರನು. ಆದುದರಿಂದ ಶಾಸ್ತ್ರವಚನವು ತಿಳಿಸುವುದು: “ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವರಾಗಿರಿ.” ಅಷ್ಟುಮಾತ್ರವಲ್ಲದೆ, “ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು.” (ಎಫೆಸ 5:1, 2; 1 ಪೇತ್ರ 2:21) ಪ್ರೀತಿ, ಬೆಚ್ಚಗಿನ ಭಾವ, ಅನುಕಂಪ ಮತ್ತು ದೀನತೆ ಈ ಮುಂತಾದ ಯೆಹೋವನ ಮತ್ತು ಯೇಸುವಿನ ಗುಣಲಕ್ಷಣಗಳನ್ನು ನಾವು ಅನುಕರಿಸಲು ಪ್ರಯತ್ನಿಸಬೇಕು. ಅವರ ಗುಣಗಳು, ಉದ್ದೇಶಗಳು ಮತ್ತು ವಿಷಯಗಳನ್ನು ನಿರ್ವಹಿಸುವ ರೀತಿಯೊಂದಿಗೆ ನಾವು ನಮ್ಮನ್ನು ಹೋಲಿಸಿನೋಡಲು ಸಮಯವನ್ನು ತೆಗೆದುಕೊಳ್ಳಬೇಕು. ಅಂಥ ಹೋಲಿಕೆಯು ನಮ್ಮ ಜೀವನವನ್ನು ಉತ್ತಮಗೊಳಿಸಬಲ್ಲದು. ಅದು ನಮಗೆ ಸರಿಯಾದ ಮಾರ್ಗದರ್ಶನ, ಸ್ಥಿರತೆ ಮತ್ತು ಭದ್ರತೆಯನ್ನು ಒದಗಿಸುತ್ತದೆ ಮತ್ತು ನಾವು ಪ್ರೌಢ ಕ್ರೈಸ್ತ ಸ್ತ್ರೀಪುರುಷರಾಗುವಂತೆ ಸಹಾಯಮಾಡಬಲ್ಲದು. (ಎಫೆಸ 4:12) ನಾವು ಅವರ ಪರಿಪೂರ್ಣ ಮಾದರಿಯನ್ನು ಅನುಕರಿಸಲು ನಮ್ಮಿಂದಾದದ್ದನ್ನು ಮಾಡುವುದರ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವಲ್ಲಿ, ನಮ್ಮ ಜೊತೆಮಾನವರೊಂದಿಗೆ ಹೋಲಿಸಿನೋಡಲು ನಾವು ಪ್ರೇರೇಪಿಸಲ್ಪಡುವುದಿಲ್ಲ ಎಂಬುದು ನಿಶ್ಚಯ.
[ಪುಟ 28, 29ರಲ್ಲಿರುವ ಚಿತ್ರ]
ರಾಜ ಸೌಲನು ದಾವೀದನ ವಿರುದ್ಧ ಹೊಟ್ಟೆಕಿಚ್ಚುಪಟ್ಟನು
[ಪುಟ 31ರಲ್ಲಿರುವ ಚಿತ್ರ]
ಯೋನಾತಾನನು ಎಂದಿಗೂ ಯುವ ದಾವೀದನನ್ನು ತನ್ನ ಎದುರಾಳಿಯಾಗಿ ವೀಕ್ಷಿಸಲಿಲ್ಲ