ನಿಷ್ಠಾವಂತರಾಗಿರುವುದರಿಂದ ಏನಾದರೂ ಪ್ರಯೋಜನವಿದೆಯೋ?
“ನೀವು ನಿಮ್ಮ ಆರೋಗ್ಯದ ವಿಮೆಗಾಗಿ ಹೆಚ್ಚು ಹಣವನ್ನು ಕೊಡುತ್ತಿದ್ದೀರಿ. ನಿಮ್ಮ ವಿಮೆಯನ್ನು ನನ್ನ ಕಂಪೆನಿಗೆ ಬದಲಾಯಿಸುವುದಾದರೆ, ನೀವು ತಿಂಗಳಿಗೆ ಹತ್ತೋ ಇಪ್ಪತ್ತೋ ಅಲ್ಲ, 900 ರೂಪಾಯಿಗಳನ್ನು ಉಳಿತಾಯಮಾಡುವಿರಿ” ಎಂದು ಕಾರ್ಲ್ ಎಂಬ ವಿಮಾ ಪ್ರತಿನಿಧಿ ಹೇಳಿದನು.a
ಯೆನ್ಸ್ ಉತ್ತರ ಕೊಟ್ಟದ್ದು: “ಅದು ಸತ್ಯ ಆಗಿರಬಹುದು. ಆದರೆ ನಾನು ನನ್ನ ಆರೋಗ್ಯದ ವಿಮೆಯನ್ನು ಈ ಕಂಪೆನಿಯೊಂದಿಗೆ ಎಷ್ಟೋ ವರ್ಷಗಳಿಂದ ಹೊಂದಿದ್ದೇನೆ. ಹಿಂದೆ ಅವರು ನನಗೆ ತುಂಬ ಸಹಾಯಮಾಡಿದ್ದಾರೆ. ನಾನು ಅವರಿಗೆ ನಿಷ್ಠಾವಂತನಾಗಿ ಉಳಿಯಲು ಬಯಸುತ್ತೇನೆ.”
ಅದಕ್ಕೆ ಕಾರ್ಲ್ ಪ್ರತಿಕ್ರಿಯಿಸಿದ್ದು: “ನಿಷ್ಠೆ ಎಂಬುದು ಒಳ್ಳೆಯ ಗುಣವೇ. ಆದರೆ ನಿಷ್ಠೆಯನ್ನು ತೋರಿಸಬೇಕೆಂಬ ನಿಮ್ಮ ಬಯಕೆಯು ನಿಮ್ಮ ಜೇಬಿಗೆ ಕತ್ತರಿ ಹಾಕುತ್ತಿದೆ!”
ಕಾರ್ಲ್ ಹೇಳಿದ್ದು ಸರಿ. ಬೇರೊಬ್ಬರಿಗೆ ನಿಷ್ಠಾವಂತರಾಗಿರಲು ಅಥವಾ ನಂಬಿಗಸ್ತರಾಗಿರಲು ಬಯಸುವುದು ಸ್ವಲ್ಪ ಹಣವನ್ನು ಕಳೆದುಕೊಳ್ಳುವಂತೆ ಮಾಡಬಹುದು.b ಅದು ಸಮಯ ಮತ್ತು ಶಕ್ತಿಯನ್ನು ಕೇಳಿಕೊಳ್ಳುತ್ತದೆ ಹಾಗೂ ಸದಾ ಭಾವನಾತ್ಮಕ ನೆರವನ್ನು ನೀಡುವುದನ್ನೂ ಅವಶ್ಯಪಡಿಸುತ್ತದೆ. ಹಾಗಾದರೆ ನಿಷ್ಠೆಯಿಂದ ಏನಾದರೂ ಪ್ರಯೋಜನವಿದೆಯೋ?
ಅನೇಕರು ಹಾಡಿಹೊಗಳುವುದಾದರೂ ಕ್ರಿಯೆಯಲ್ಲಿ ತೋರಿಸುವುದು ವಿರಳ
ಜರ್ಮನಿಯಲ್ಲಿ ‘ಆಲ್ಲೆನ್ಸ್ಬಾಕ್ ಅಭಿಪ್ರಾಯ ಸಂಶೋಧನಾ ಸಂಸ್ಥೆ’ಯಿಂದ ನಡೆಸಲ್ಪಟ್ಟ ಒಂದು ಸಮೀಕ್ಷೆಗೆ ಪ್ರತಿಕ್ರಿಯಿಸಿದ 96 ಪ್ರತಿಶತ ಮಂದಿ, ನಂಬಿಗಸ್ತಿಕೆಯನ್ನು ಒಂದು ಅಪೇಕ್ಷಣೀಯ ಗುಣವಾಗಿ ವೀಕ್ಷಿಸಿದರು. 18-24ರ ವಯೋಮಿತಿಯಲ್ಲಿರುವವರ ಮಧ್ಯೆ ನಡೆಸಲ್ಪಟ್ಟ ಮತ್ತೊಂದು ಆಲ್ಲೆನ್ಸ್ಬಾಕ್ ಸಮೀಕ್ಷೆಗೆ ಪ್ರತಿಕ್ರಿಯಿಸಿದ ಮೂವರಲ್ಲಿ ಇಬ್ಬರು ನಂಬಿಗಸ್ತಿಕೆಯು ಆವಶ್ಯಕವಾದದ್ದು ಎಂದು ಅಭಿಪ್ರಾಯಪಟ್ಟರು.
ನಿಷ್ಠೆ ಅಥವಾ ನಂಬಿಗಸ್ತಿಕೆಯನ್ನು ಹಾಡಿಹೊಗಳುವ ಜನ ಹೆಚ್ಚಾಗಿರುವುದಾದರೂ, ಅದನ್ನು ತೋರಿಸುವ ವಿಷಯಕ್ಕೆ ಬರುವಾಗ ಸಂಗತಿ ಬೇರೆಯೇ ಆಗಿರುತ್ತದೆ. ಉದಾಹರಣೆಗೆ, ಅನೇಕ ಐರೋಪ್ಯ ದೇಶಗಳಲ್ಲಿ ವಿವಾಹಿತ ದಂಪತಿಗಳು ಅಥವಾ ಕುಟುಂಬದ ಸದಸ್ಯರು ಒಬ್ಬರಿಗೊಬ್ಬರು ಸಂಪೂರ್ಣ ನಿಷ್ಠೆಯನ್ನು ತೋರಿಸುವುದು ತೀರ ವಿರಳ. ಸ್ನೇಹಿತರು ಸಹ ಅನೇಕ ಸಲ ಒಬ್ಬರಿಗೊಬ್ಬರು ಅಪನಂಬಿಗಸ್ತಿಕೆಯನ್ನು ತೋರಿಸುತ್ತಾರೆ. ಹಿಂದಿನ ಕಾಲಗಳಲ್ಲಿ ಆಳುಯಜಮಾನ, ವ್ಯಾಪಾರ ಮತ್ತು ಗಿರಾಕಿಗಳನ್ನು ಐಕ್ಯಗೊಳಿಸಿದ ನಿಷ್ಠೆಯು ಇಂದು ಕಣ್ಮರೆಯಾಗಿದೆ. ಏಕೆ?
ಇಂದಿನ ತ್ವರಿತಗತಿಯ ಜೀವನವು, ನಿಷ್ಠೆಯನ್ನು ಕೇಳಿಕೊಳ್ಳುವ ಒಪ್ಪಂದಗಳಿಗೆ ವ್ಯಯಿಸಬೇಕಾದ ಸಮಯ ಅಥವಾ ಭಾವನಾತ್ಮಕ ಶಕ್ತಿಯನ್ನು ಕಬಳಿಸಿಬಿಡುತ್ತದೆ. ಮಾನವರೊಂದಿಗಿನ ಸ್ನೇಹಸಂಬಂಧಗಳಲ್ಲಿ ನಂಬಿಕೆಯನ್ನು ಕಳೆದುಕೊಂಡಿರುವ ಜನರು, ನಿಷ್ಠೆಯನ್ನು ತೋರಿಸಲು ಹಿಂಜರಿಯಬಹುದು. ಇತರರು, ‘ನಿನ್ನೆ ಇದ್ದವನು ಇಂದು ಇಲ್ಲ’ ಎಂಬ ನಿಷ್ಠೆಯನ್ನು ಅವಶ್ಯಪಡಿಸದ ಜೀವನರೀತಿಯನ್ನು ಆರಿಸಿಕೊಳ್ಳಬಹುದು.
ಕಾರಣವು ಏನೇ ಆಗಿರಲಿ, ನಿಷ್ಠೆಯೆಂಬ ಸದ್ಗುಣವನ್ನು ಜನರು ಅನೇಕವೇಳೆ ಹೊಗಳುವುದಾದರೂ ಕ್ರಿಯೆಯಲ್ಲಿ ತೋರಿಸುವುದು ವಿರಳ. ಆದುದರಿಂದ, ನಾವು ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳೋಣ: ನಿಷ್ಠಾವಂತರಾಗಿರುವುದರಿಂದ ಏನಾದರೂ ಪ್ರಯೋಜನವಿದೆಯೋ? ಪ್ರಯೋಜನವಿರುವುದಾದರೆ, ಅದನ್ನು ನಾವು ಯಾರಿಗೆ ಮತ್ತು ಯಾವ ವಿಧಗಳಲ್ಲಿ ತೋರಿಸತಕ್ಕದ್ದು? ನಿಷ್ಠಾವಂತರಾಗಿರುವುದರಿಂದ ಯಾವ ಪ್ರಯೋಜನಗಳು ಸಿಗುತ್ತವೆ?
[ಪಾದಟಿಪ್ಪಣಿಗಳು]
a ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.
b “ನಿಷ್ಠೆ” ಮತ್ತು “ನಂಬಿಗಸ್ತಿಕೆ”ಯನ್ನು ಯಾವಾಗಲೂ ಒಂದೇ ಪೂರ್ವಾಪರದಲ್ಲಿ ಉಪಯೋಗಿಸಲ್ಪಡುವುದಿಲ್ಲವಾದರೂ, ಈ ಲೇಖನಗಳಲ್ಲಿ ಅವೆರಡನ್ನೂ ಕೆಲವು ಕಡೆ ಒಂದೇ ಅರ್ಥದಲ್ಲಿ ಉಪಯೋಗಿಸಲಾಗಿದೆ.
[ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]
ನಿಷ್ಠೆಯೆಂಬ ಸದ್ಗುಣವನ್ನು ಜನರು ಅನೇಕವೇಳೆ ಹಾಡಿಹೊಗಳುವುದಾದರೂ ಕ್ರಿಯೆಯಲ್ಲಿ ತೋರಿಸುವುದು ವಿರಳ