“ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ”
ಸ್ವತ್ಯಾಗವು ಯೆಹೋವನ ಆಶೀರ್ವಾದವನ್ನು ತರುತ್ತದೆ
ಕ್ಯಾಮರೂನ್ನ ದಟ್ಟವಾದ ಅರಣ್ಯದಲ್ಲಿ ಒಬ್ಬ ಮನುಷ್ಯನು ಸೈಕಲಿನಲ್ಲಿ ಪ್ರಯಾಣಿಸುತ್ತಾನೆ. ಇತರರನ್ನು ಬಲಪಡಿಸುವ ಸಲುವಾಗಿ ಅವನು ಅನೇಕ ಗಂಡಾಂತರಗಳನ್ನು ಎದುರಿಸುತ್ತಾ, ನೀರು ತುಂಬಿದ ದಾರಿಗಳಲ್ಲಿ ಮತ್ತು ಕೆಸರಿನಲ್ಲಿ ತಾಸುಗಟ್ಟಲೆ ಸಮಯ ಸೈಕಲ್ ಸವಾರಿಮಾಡುತ್ತಾನೆ. ಸಿಂಬಾಬ್ವೆಯಲ್ಲಿ ಇಬ್ಬರು ಸಹೋದರರು ದೂರದಲ್ಲಿರುವ ಒಂದು ಪ್ರತ್ಯೇಕ ಗುಂಪಿಗೆ ಕಲಿಸುವ ಸಲುವಾಗಿ ನೀರು ಉಕ್ಕಿಹರಿಯುತ್ತಿರುವ ನದಿಗಳ ಮಧ್ಯದಲ್ಲಿ 15 ಕಿಲೋಮೀಟರ್ ನಡೆದು ಹೋಗುತ್ತಾರೆ. ಅವರು ತಮ್ಮ ಬಟ್ಟೆಬರೆಗಳು ಮತ್ತು ಷೂಗಳು ಒದ್ದೆಯಾಗದಂತೆ ಅವನ್ನು ತಲೆಯ ಮೇಲೆ ಇಟ್ಟುಕೊಂಡು ನದಿಯನ್ನು ದಾಟುತ್ತಾರೆ. ಇನ್ನೊಂದು ಸ್ಥಳದಲ್ಲಿ, ಕೇವಲ ಮುಂಜಾನೆ ಒಂದು ತಾಸನ್ನು ಬೈಬಲ್ ಅಧ್ಯಯನಕ್ಕಾಗಿ ನೀಡಶಕ್ತಳಾಗಿದ್ದ ಒಬ್ಬ ನರ್ಸ್ ಅನ್ನು ಭೇಟಿಯಾಗಿ ಅವಳಿಗೆ ಕಲಿಸುವ ಸಲುವಾಗಿ ಒಬ್ಬಾಕೆ ಸ್ತ್ರೀಯು ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಹೋಗುತ್ತಾಳೆ.
ಇಂಥ ಪ್ರಯತ್ನಗಳನ್ನು ಮಾಡುವ ಈ ಎಲ್ಲ ವ್ಯಕ್ತಿಗಳಲ್ಲಿ ಯಾವ ವಿಷಯವು ಸಾಮಾನ್ಯವಾಗಿದೆ? ಇವರೆಲ್ಲರು, ಬೈಬಲ್ ಸತ್ಯವನ್ನು ಕಲಿಸುವ ಕೆಲಸದಲ್ಲಿ ಕಾರ್ಯನಿರತರಾಗಿರುವ ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕರಾಗಿದ್ದಾರೆ. ಅವರಲ್ಲಿ, ರೆಗ್ಯುಲರ್ ಮತ್ತು ಸ್ಪೆಷಲ್ ಪಯನೀಯರರು, ಮಿಷನೆರಿಗಳು, ಸಂಚರಣ ಮೇಲ್ವಿಚಾರಕರು ಹಾಗೂ ಲೋಕಾದ್ಯಂತ ಬೆತೆಲ್ ಗೃಹಗಳಲ್ಲಿರುವ ಸಾವಿರಾರು ಸ್ವಯಂಸೇವಕರು ಒಳಗೂಡಿದ್ದಾರೆ. ಸ್ವತ್ಯಾಗವು ಅವರ ಗುರುತು ಚಿಹ್ನೆಯಾಗಿದೆ.a
ಯೋಗ್ಯವಾದ ಪ್ರಚೋದನೆ
ಅಪೊಸ್ತಲ ಪೌಲನು ತಿಮೊಥೆಯನಿಗೆ ನೀಡಿದ ಸಲಹೆಯನ್ನು ಯೆಹೋವನ ಸಾಕ್ಷಿಗಳು ಪಾಲಿಸುತ್ತಿದ್ದಾರೆ: “ನೀನು ದೇವರ ದೃಷ್ಟಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು.” (2 ತಿಮೊಥೆಯ 2:15) ಆದರೆ ಪೂರ್ಣ ಸಮಯದ ಶುಶ್ರೂಷಕರಾಗಿ ಸೇವೆಸಲ್ಲಿಸುವಂತೆ ಲಕ್ಷಾಂತರ ಮಂದಿ ಸಾಕ್ಷಿಗಳನ್ನು ಯಾವುದು ಪ್ರಚೋದಿಸುತ್ತದೆ?
ಯೆಹೋವನ ಸೇವೆಯಲ್ಲಿ ನೀವೇಕೆ ಇಷ್ಟು ಪ್ರಯಾಸಪಡುತ್ತಿದ್ದೀರಿ ಎಂಬುದಾಗಿ ಪೂರ್ಣ ಸಮಯದ ಶುಶ್ರೂಷಕರನ್ನು ಕೇಳುವಾಗ, ದೇವರ ಮತ್ತು ಜೊತೆ ಮಾನವರ ಮೇಲಣ ಪ್ರೀತಿಯೇ ಇದಕ್ಕೆ ಕಾರಣ ಎಂಬುದು ಅವರ ಉತ್ತರದಲ್ಲಿನ ಒಂದು ವಿಷಯವಾಗಿರುತ್ತದೆ. (ಮತ್ತಾಯ 22:37-39) ಇದು ಅತಿ ಸೂಕ್ತವಾಗಿದೆ, ಏಕೆಂದರೆ ಪ್ರೀತಿಯಿಂದ ಪ್ರಚೋದಿಸಲ್ಪಡದೆ ಇದ್ದರೆ, ಎಷ್ಟೇ ಪ್ರಯತ್ನವನ್ನು ಮಾಡುವುದಾದರೂ ಅದು ವ್ಯರ್ಥವಾಗಿರುತ್ತದೆ.—1 ಕೊರಿಂಥ 13:1-3.
ಸ್ವತ್ಯಾಗದ ಸೇವೆ
ಎಲ್ಲ ಸಮರ್ಪಿತ ಕ್ರೈಸ್ತರು ಯೇಸುವಿನ ಕರೆಯನ್ನು ಸ್ವೀಕರಿಸಿದ್ದಾರೆ: “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು [“ಯಾತನಾ ಕಂಬವನ್ನು,” NW] ಹೊತ್ತುಕೊಂಡು ನನ್ನ ಹಿಂದೆ ಬರಲಿ.” (ಮತ್ತಾಯ 16:24) ನಮ್ಮನ್ನು ನಿರಾಕರಿಸುವುದು ಎಂದರೆ, ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಸ್ವತ್ತಾಗಲು ಹಾಗೂ ಅವರ ಮಾರ್ಗದರ್ಶನಕ್ಕೆ ಅನುಸಾರ ನಡೆಯಲು ಇಚ್ಛಾಪೂರ್ವಕವಾಗಿ ನೀಡಿಕೊಳ್ಳುವುದು ಎಂದಾಗಿದೆ. ಇದು ಅನೇಕರನ್ನು ಪೂರ್ಣ ಸಮಯದ ಶುಶ್ರೂಷೆಯಲ್ಲಿನ ಸ್ವತ್ಯಾಗದ ಸೇವೆಗೆ ನಡೆಸಿದೆ.
ಅನೇಕ ಸಾಕ್ಷಿಗಳು ಯೆಹೋವನಿಗಾಗಿನ ತಮ್ಮ ಸೇವೆಯನ್ನು ವಿಸ್ತರಿಸಲು ಬಹಳ ಪ್ರಯತ್ನವನ್ನು ಮಾಡುತ್ತಾರೆ. ಬ್ರಸಿಲ್ನ ಸಾವ್ ಪೌಲೂವಿನಲ್ಲಿರುವ 56 ವರುಷ ಪ್ರಾಯದ ಜೂಲ್ಯಾ ಎಂಬ ರೆಗ್ಯುಲರ್ ಪಯನೀಯರ್ ಸಹೋದರಿಯನ್ನು ಪರಿಗಣಿಸಿರಿ. ಅವರು ತಿಳಿಸುವುದು: “ಒಬ್ಬ ಚೈನೀಸ್ ಸಹೋದರರು ನನಗೆ ಫೋನ್ ಮಾಡಿ, ನಾನು ಚೈನೀಸ್ ಭಾಷೆಯನ್ನು ಕಲಿಯಲು ಸಿದ್ಧಳಿದ್ದೇನೊ ಎಂದು ಕೇಳಿದರು. ನನ್ನ ವಯಸ್ಸಿನ ಕಾರಣ ಹೊಸ ಭಾಷೆಯನ್ನು ಕಲಿಯುವುದು ನನಗೆ ಅಸಾಧ್ಯ ಎಂದು ನೆನಸಿದೆ. ಆದರೆ ಕೆಲವು ದಿವಸಗಳ ಅನಂತರ ನಾನು ಆ ಪಂಥಾಹ್ವಾನವನ್ನು ಸ್ವೀಕರಿಸಿದೆ. ಇಂದು ನಾನು ಚೈನೀಸ್ ಭಾಷೆಯಲ್ಲಿ ಶಾಸ್ತ್ರೀಯ ನಿರೂಪಣೆಗಳನ್ನು ನೀಡಲು ಶಕ್ತಳಾಗಿದ್ದೇನೆ.”
ಪೆರೂವಿನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸ್ ವರದಿಸುವುದು: “ಇತ್ತೀಚಿನ ವರುಷಗಳಲ್ಲಿ, ನೂರಾರು ರೆಗ್ಯುಲರ್ ಪಯನೀಯರರು ಅನೇಮಿತ ಟೆರಿಟೊರಿಗಳಿಗೆ ಸ್ಥಳಾಂತರಿಸಿದ್ದಾರೆ. ಈ ಮೂಲಕ ಅವರು ಧೈರ್ಯದ ಮತ್ತು ಸ್ವತ್ಯಾಗದ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ಆಧುನಿಕ ಸೌಕರ್ಯಗಳಿಲ್ಲದ ಮತ್ತು ಉದ್ಯೋಗದ ಅವಕಾಶಗಳು ತೀರ ಕಡಿಮೆಯಿರುವ ದೂರದ ಪಟ್ಟಣಗಳಿಗೆ ಅವರು ಸ್ಥಳಾಂತರಿಸಿದ್ದಾರೆ. ಈ ಸಹೋದರ ಸಹೋದರಿಯರು ತಮ್ಮ ನೇಮಕಗಳಲ್ಲಿ ಉಳಿಯಲು ಯಾವುದೇ ತ್ಯಾಗವನ್ನು ಮಾಡಲು ಸಿದ್ಧರಿದ್ದಾರೆ. ಆದರೆ ಅತಿ ಪ್ರಾಮುಖ್ಯವಾದ ವಿಷಯವೇನೆಂದರೆ, ಅವರ ಶುಶ್ರೂಷಾ ಚಟುವಟಿಕೆಯು ಅನೇಕ ಸ್ಥಳಗಳಲ್ಲಿ ಉತ್ತಮ ಫಲಿತಾಂಶಗಳನ್ನು ತರುತ್ತಿದೆ. ಈ ಸ್ವತ್ಯಾಗದ ರೆಗ್ಯುಲರ್ ಪಯನೀಯರರ ಸಹಾಯದಿಂದಾಗಿ ಹೊಸ ಗುಂಪುಗಳು ಸ್ಥಾಪಿಸಲ್ಪಡುತ್ತಿವೆ ಎಂದು ಸಂಚರಣ ಮೇಲ್ವಿಚಾರಕರು ವರದಿಸುತ್ತಾರೆ.”
ಕೆಲವು ಕ್ರೈಸ್ತರು ತಮ್ಮ ಜೊತೆ ವಿಶ್ವಾಸಿಗಳಿಗೆ ಸಹಾಯಮಾಡಲು ತಮ್ಮ ಜೀವವನ್ನೇ ಗಂಡಾಂತರಕ್ಕೆ ಒಡ್ಡಿದ್ದಾರೆ. (ರೋಮಾಪುರ 16:3, 4) ಆಫ್ರಿಕದ ಒಂದು ಯುದ್ಧಪೀಡಿತ ಕ್ಷೇತದಲ್ಲಿರುವ ಒಬ್ಬ ಸಂಚರಣ ಮೇಲ್ವಿಚಾರಕನು ವರದಿಸುವುದು: “ದಂಗೆಕೋರರು ನೆಲೆಸಿದ್ದ ಕ್ಷೇತ್ರ ಮತ್ತು ಸರಕಾರಿ ನಿಯಂತ್ರಿತ ಕ್ಷೇತ್ರ ಈ ಎರಡರ ಮಧ್ಯೆಯಿದ್ದ ಕೊನೆಯ ರಸ್ತೆತಡೆಗಟ್ಟನ್ನು ತಲಪುವ ಮುಂಚೆ ನನ್ನನ್ನು ಮತ್ತು ನನ್ನ ಪತ್ನಿಯನ್ನು ನಾಲ್ಕು ಮಂದಿ ದಂಗೆಕೋರ ಸೇನಾಪತಿಗಳು ಹಾಗೂ ಅವರ ಕಾವಲುಗಾರರು ಸುತ್ತುವರಿದು ನಮ್ಮ ಗುರುತನ್ನು ವಿಚಾರಿಸಿದರು. ನಮ್ಮ ಗುರುತು ಚೀಟಿಯನ್ನು ಪರೀಕ್ಷಿಸುತ್ತಿದ್ದಾಗ, ನಾವು ಸರಕಾರಿ ನಿಯಂತ್ರಿತ ಕ್ಷೇತ್ರದಿಂದ ಬಂದಿದ್ದೇವೆ ಎಂದು ತಿಳಿದು ಬಹಳ ಸಂಶಯಪಟ್ಟರು. ನಾನೊಬ್ಬ ಗೂಢಚಾರನೆಂದು ಆರೋಪಹಾಕಿದರು. ಆದುದರಿಂದ, ನನ್ನನ್ನು ಒಂದು ಹೊಂಡಕ್ಕೆ ತಳ್ಳುವುದಾಗಿ ನಿರ್ಣಯಿಸಿದರು. ಆದರೆ ನಾವು ಯಾರೆಂಬುದನ್ನು ನಾನು ಅವರಿಗೆ ವಿವರಿಸಿದೆ, ಅನಂತರ ಅವರು ನಮ್ಮನ್ನು ಹೋಗಗೊಡಿಸಿದರು.” ಈ ಸ್ವತ್ಯಾಗದ ದಂಪತಿಯು ತಮ್ಮನ್ನು ಭೇಟಿನೀಡುವುದರಲ್ಲಿ ಯಶಸ್ಸನ್ನು ಕಂಡುಕೊಂಡದ್ದಕ್ಕಾಗಿ ಸಭೆಗಳು ತುಂಬ ಸಂತೋಷಪಟ್ಟವು!
ಪೂರ್ಣ ಸಮಯದ ಶುಶ್ರೂಷಕರು ಎದುರಿಸುತ್ತಿರುವ ಕಷ್ಟಗಳ ಹೊರತಾಗಿಯೂ, ಲೋಕಾದ್ಯಂತ ಅವರ ಸಂಖ್ಯೆಯು ಹೆಚ್ಚಾಗುತ್ತಾ ಇದೆ. (ಯೆಶಾಯ 6:8) ಯೆಹೋವನನ್ನು ಸೇವಿಸುವ ತಮ್ಮ ಸುಯೋಗವನ್ನು ಈ ಶ್ರದ್ಧಾಪೂರ್ವಕ ಕೆಲಸಗಾರರು ಅತಿ ಮೌಲ್ಯವುಳ್ಳದ್ದಾಗಿ ಪರಿಗಣಿಸುತ್ತಾರೆ. ಇದೇ ರೀತಿಯ ಸ್ವತ್ಯಾಗದ ಮನೋಭಾವದೊಂದಿಗೆ, ಲಕ್ಷಾಂತರ ಜನರು ಇಂದು ಯೆಹೋವನನ್ನು ಸ್ತುತಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಯೆಹೋವನು ಅವರನ್ನು ಹೇರಳವಾಗಿ ಆಶೀರ್ವದಿಸುತ್ತಿದ್ದಾನೆ. (ಜ್ಞಾನೋಕ್ತಿ 10:22) ಶ್ರಮಪಟ್ಟು ಕೆಲಸಮಾಡುವ ಇವರು ಯೆಹೋವನ ನಿರಂತರ ಆಶೀರ್ವಾದ ಮತ್ತು ಬೆಂಬಲದ ದೃಢಭರವಸೆಯುಳ್ಳವರಾಗಿ “ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ” ಎಂದು ಹಾಡಿದ ಕೀರ್ತನೆಗಾರನ ಮನೋಭಾವವನ್ನು ಪ್ರತಿಬಿಂಬಿಸುತ್ತಾರೆ.—ಕೀರ್ತನೆ 121:2.
[ಪಾದಟಿಪ್ಪಣಿ]
a ಯೆಹೋವನ ಸಾಕ್ಷಿಗಳ 2005ರ ಕ್ಯಾಲೆಂಡರ್ನ (ಇಂಗ್ಲಿಷ್) ನವೆಂಬರ್/ಡಿಸೆಂಬರ್ ತಿಂಗಳುಗಳನ್ನು ನೋಡಿ.
[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]
“ನೀನು ಸೈನ್ಯವನ್ನು ಕೂಡಿಸುವ ದಿನದಲ್ಲಿ ನಿನ್ನ ಪ್ರಜೆಗಳು ಸಂತೋಷದಿಂದ ತಾವಾಗಿಯೇ ಸೇರಿಕೊಳ್ಳುವರು.”—ಕೀರ್ತನೆ 110:3
[ಪುಟ 8ರಲ್ಲಿರುವ ಚೌಕ]
ಯೆಹೋವನು ತನ್ನ ಶ್ರದ್ಧಾಳು ಸೇವಕರನ್ನು ಪೋಷಿಸುತ್ತಾನೆ
“ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ.” —1 ಕೊರಿಂಥ 15:58.
“ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.” —ಇಬ್ರಿಯ 6:10.