“ಯೆಹೋವನ ಮಾರ್ಗಗಳು ನೇರವಾದವುಗಳು”
“ಯೆಹೋವನ ಮಾರ್ಗಗಳು ರುಜುವಾದವುಗಳು [ನೇರವಾದವುಗಳು]; ಅವುಗಳಲ್ಲಿ ಸನ್ಮಾರ್ಗಿಗಳು ನಡೆಯುವರು.”—ಹೋಶೇಯ 14:9.
1, 2. ಯೆಹೋವನು ಇಸ್ರಾಯೇಲ್ಯರಿಗೆ ಯಾವ ರೀತಿಯ ಪ್ರಾರಂಭವನ್ನು ಕೊಟ್ಟನು, ಆದರೆ ಅವರಿಗೆ ಏನು ಸಂಭವಿಸಿತು?
ಪ್ರವಾದಿಯಾದ ಮೋಶೆಯ ದಿನಗಳಲ್ಲಿ ಯೆಹೋವನು ಇಸ್ರಾಯೇಲ್ಯರಿಗೆ ಒಂದು ನೀತಿಯುತ ಪ್ರಾರಂಭವನ್ನು ಕೊಟ್ಟನು. ಆದರೆ, ಸಾ.ಶ.ಪೂ. ಎಂಟನೆಯ ಶತಮಾನದ ಆರಂಭದಷ್ಟಕ್ಕೆ ಅವರ ಸನ್ನಿವೇಶವು ಎಷ್ಟು ಹದಗೆಟ್ಟಿತ್ತೆಂದರೆ, ದೇವರ ದೃಷ್ಟಿಯಲ್ಲಿ ಅವರು ತುಂಬ ಘೋರವಾದ ತಪ್ಪುಗಳನ್ನು ಮಾಡುವವರಾಗಿ ಕಂಡುಬಂದರು. ಹೋಶೇಯ 10-14ನೇ ಅಧ್ಯಾಯಗಳಿಂದ ಇದು ಸ್ಪಷ್ಟವಾಗುತ್ತದೆ.
2 ಇಸ್ರಾಯೇಲ್ಯರ ಹೃದಯವು ಕಪಟತನದಿಂದ ತುಂಬಿತ್ತು. ಹತ್ತು ಕುಲಗಳ ಆ ರಾಜ್ಯದ ಜನರು ‘ದುಷ್ಟತನದ ವ್ಯವಸಾಯವನ್ನು ಮಾಡಿದ್ದರು’ ಮತ್ತು ಅನೀತಿಯನ್ನು ಕೊಯ್ದರು. (ಹೋಶೇಯ 10:1, 13) ಯೆಹೋವನು ಹೇಳಿದ್ದು: “ಇಸ್ರಾಯೇಲು ಕೇವಲ ಬಾಲ್ಯದಲ್ಲಿದ್ದಾಗ ನಾನು ಅದರ ಮೇಲೆ ಪ್ರೀತಿಯಿಟ್ಟು ಆ ನನ್ನ ಮಗನನ್ನು ಐಗುಪ್ತದೇಶದಿಂದ ಕರೆದೆನು.” (ಹೋಶೇಯ 11:1) ದೇವರು ಇಸ್ರಾಯೇಲ್ಯರನ್ನು ಐಗುಪ್ತದ ದಾಸತ್ವದಿಂದ ಬಿಡಿಸಿದ್ದರೂ, ಅವರು ಆತನಿಗೆ ಹಿಂದಿರುಗಿಸಿದ್ದು ಸುಳ್ಳು ಮತ್ತು ಮೋಸವನ್ನೇ. (ಹೋಶೇಯ 11:12) ಆದುದರಿಂದ ಯೆಹೋವನು ಅವರಿಗೆ ಈ ಸಲಹೆಯನ್ನು ಕೊಟ್ಟನು: ‘ನೀನು ನಿನ್ನ ದೇವರ ಸಹಾಯದಿಂದ ತಿರುಗಿಕೋ; ನೀತಿಪ್ರೀತಿ [“ಪ್ರೀತಿಪೂರ್ವಕ ದಯೆ ಮತ್ತು ನ್ಯಾಯ,” NW]ಗಳನ್ನು ಅನುಸರಿಸು.’—ಹೋಶೇಯ 12:6.
3. ದಂಗೆಕೋರ ಸ್ವಭಾವದ ಸಮಾರ್ಯಕ್ಕೆ ಏನು ಸಂಭವಿಸಲಿಕ್ಕಿತ್ತು, ಆದರೆ ಇಸ್ರಾಯೇಲ್ಯರು ಹೇಗೆ ಕರುಣೆಯನ್ನು ಪಡೆದುಕೊಳ್ಳಸಾಧ್ಯವಿತ್ತು?
3 ದಂಗೆಕೋರ ಸ್ವಭಾವದ ಸಮಾರ್ಯ ಮತ್ತು ಅದರ ಅರಸನು ವಿಪತ್ಕಾರಕ ರೀತಿಯ ಅಂತ್ಯವನ್ನು ಅನುಭವಿಸಲಿಕ್ಕಿದ್ದರು. (ಹೋಶೇಯ 13:11, 16) ಆದರೆ ಹೋಶೇಯನ ಪ್ರವಾದನೆಯ ಕೊನೆಯ ಅಧ್ಯಾಯವು ಈ ವಿಜ್ಞಾಪನೆಯಿಂದ ಆರಂಭಗೊಳ್ಳುತ್ತದೆ: “ಇಸ್ರಾಯೇಲೇ, ನೀನು ಹಿಂದಿರುಗಿ ನಿನ್ನ ದೇವರಾದ ಯೆಹೋವನನ್ನು ಸೇರಿಕೋ.” ಇಸ್ರಾಯೇಲ್ಯರು ಪಶ್ಚಾತ್ತಾಪದಿಂದ ಕ್ಷಮೆಯಾಚಿಸುವಲ್ಲಿ ದೇವರು ಕರುಣೆ ತೋರಿಸಲಿದ್ದನು. “ಯೆಹೋವನ ಮಾರ್ಗಗಳು ರುಜುವಾದವುಗಳು [ನೇರವಾದವುಗಳು]” ಎಂಬುದನ್ನು ಅವರು ಅಂಗೀಕರಿಸಿ ಆ ಮಾರ್ಗಗಳಲ್ಲಿ ನಡೆಯಬೇಕಾಗಿತ್ತು ನಿಶ್ಚಯ.—ಹೋಶೇಯ 14:1-6, 9.
4. ಹೋಶೇಯನ ಪ್ರವಾದನೆಯಿಂದ ನಾವು ಯಾವ ಮೂಲತತ್ತ್ವಗಳನ್ನು ಪರಿಗಣಿಸುವೆವು?
4 ಹೋಶೇಯನ ಪ್ರವಾದನೆಯ ಈ ವಿಭಾಗವು, ದೇವರೊಂದಿಗೆ ನಡೆಯಲು ನಮಗೆ ಸಹಾಯಮಾಡಸಾಧ್ಯವಿರುವ ಅನೇಕ ಮೂಲತತ್ತ್ವಗಳನ್ನು ಒಳಗೂಡಿದೆ. ನಾವು ಈ ಮೂಲತತ್ತ್ವಗಳನ್ನು ಪರಿಗಣಿಸುವೆವು: (1) ಯೆಹೋವನು ನಿಷ್ಕಪಟವಾದ ಆರಾಧನೆಯನ್ನು ಅಪೇಕ್ಷಿಸುತ್ತಾನೆ, (2) ದೇವರು ತನ್ನ ಜನರಿಗೆ ನಿಷ್ಠಾವಂತ ಪ್ರೀತಿಯನ್ನು ತೋರಿಸುತ್ತಾನೆ, (3) ನಾವು ಯಾವಾಗಲೂ ಯೆಹೋವನಲ್ಲಿ ನಿರೀಕ್ಷೆಯುಳ್ಳವರಾಗಿರಬೇಕು, (4) ಯೆಹೋವನ ಮಾರ್ಗಗಳು ಯಾವಾಗಲೂ ನೇರವಾದವುಗಳು, ಮತ್ತು (5) ಪಾಪಿಗಳು ಯೆಹೋವನ ಬಳಿಗೆ ಹಿಂದಿರುಗಸಾಧ್ಯವಿದೆ.
ಯೆಹೋವನು ನಿಷ್ಕಪಟವಾದ ಆರಾಧನೆಯನ್ನು ಅಪೇಕ್ಷಿಸುತ್ತಾನೆ
5. ದೇವರು ನಮ್ಮಿಂದ ಯಾವ ರೀತಿಯ ಸೇವೆಯನ್ನು ಅಪೇಕ್ಷಿಸುತ್ತಾನೆ?
5 ನಾವು ಶುದ್ಧವೂ ನಿಷ್ಕಪಟವೂ ಆದ ರೀತಿಯಲ್ಲಿ ಸೇವೆಸಲ್ಲಿಸಬೇಕೆಂದು ಯೆಹೋವನು ನಮ್ಮಿಂದ ಅಪೇಕ್ಷಿಸುತ್ತಾನೆ. ಆದರೆ ಇಸ್ರಾಯೇಲ್ ಜನಾಂಗವು ಫಲರಹಿತವಾಗಿದ್ದು “ಅವನತಿಹೊಂದುತ್ತಿರುವ ದ್ರಾಕ್ಷಾಲತೆಯಾಗಿ” (NW) ಪರಿಣಮಿಸಿತ್ತು. ಇಸ್ರಾಯೇಲಿನ ನಿವಾಸಿಗಳು ಸುಳ್ಳು ಆರಾಧನೆಯಲ್ಲಿ ಉಪಯೋಗಿಸಲಿಕ್ಕಾಗಿ ‘ಯಜ್ಞವೇದಿಗಳನ್ನು ಹೆಚ್ಚಿಸಿಕೊಂಡಿದ್ದರು.’ ಈ ಧರ್ಮಭ್ರಷ್ಟರು ವಿಗ್ರಹಸ್ತಂಭಗಳನ್ನು, ಅಶುದ್ಧ ಆರಾಧನೆಯಲ್ಲಿ ಉಪಯೋಗಿಸಲಿಕ್ಕಾಗಿ ರಚಿಸಲ್ಪಟ್ಟಿದ್ದ ಬಹುಶಃ ಚೌಕಾಕಾರದ ನಿಲುಗಂಬಗಳನ್ನು ಸ್ಥಾಪಿಸಿದ್ದರು. ಯೆಹೋವನು ಈ ಯಜ್ಞವೇದಿಗಳನ್ನು ಮುರಿದುಹಾಕಲಿದ್ದನು ಮತ್ತು ಅಂಥ ವಿಗ್ರಹಸ್ತಂಭಗಳನ್ನು ನಾಶಮಾಡಲಿದ್ದನು.—ಹೋಶೇಯ 10:1, 2.
6. ನಾವು ದೇವರೊಂದಿಗೆ ನಡೆಯಬೇಕಾದರೆ, ಯಾವ ಗುಣವನ್ನು ನಮ್ಮಿಂದ ತೆಗೆದುಹಾಕಬೇಕು?
6 ಯೆಹೋವನ ಸೇವಕರ ನಡುವೆ ಕಪಟತನಕ್ಕೆ ಯಾವುದೇ ಅವಕಾಶವಿಲ್ಲ. ಆದರೆ ಇಸ್ರಾಯೇಲ್ಯರಿಗೆ ಏನು ಸಂಭವಿಸಿತ್ತು? “ಅವರ ಹೃದಯವು ಕಪಟಭರಿತವಾಗಿ ಪರಿಣಮಿಸಿತ್ತು.” (NW) ಈ ಮುಂಚೆ ಅವರು ಯೆಹೋವನಿಗೆ ಸಮರ್ಪಿತರಾಗಿದ್ದ ಜನರಾಗಿ ಆತನೊಂದಿಗೆ ಒಂದು ಒಡಂಬಡಿಕೆಯ ಸಂಬಂಧವನ್ನು ಪ್ರವೇಶಿಸಿದ್ದರಾದರೂ, ಆತನು ಅವರನ್ನು ಕಪಟತನದ ದೋಷಾಪರಾಧಿಗಳಾಗಿ ಕಂಡುಕೊಂಡನು. ಇದರಿಂದ ನಾವೇನನ್ನು ಕಲಿಯಬಲ್ಲೆವು? ಒಂದುವೇಳೆ ನಾವು ನಮ್ಮನ್ನು ದೇವರಿಗೆ ಸಮರ್ಪಿಸಿಕೊಂಡಿರುವುದಾದರೆ, ನಾವು ಕಪಟಿಗಳಾಗಿರಬಾರದು. ಜ್ಞಾನೋಕ್ತಿ 3:32 ಎಚ್ಚರಿಕೆ ನೀಡುವುದು: “ವಕ್ರಬುದ್ಧಿಯವನು ಯೆಹೋವನಿಗೆ ಅಸಹ್ಯನು, ಯಥಾರ್ಥರಿಗೆ ಆತನ ಸ್ನೇಹವು ದೊರೆಯುವದು.” ಆದುದರಿಂದ ನಾವು ದೇವರೊಂದಿಗೆ ನಡೆಯಬೇಕಾಗಿರುವಲ್ಲಿ, “ಶುದ್ಧಹೃದಯ ಒಳ್ಳೇಮನಸ್ಸಾಕ್ಷಿ ನಿಷ್ಕಪಟವಾದ ನಂಬಿಕೆ ಎಂಬಿವುಗಳಿಂದ ಹುಟ್ಟಿದ” ಪ್ರೀತಿಯನ್ನು ಪ್ರದರ್ಶಿಸಬೇಕು.—1 ತಿಮೊಥೆಯ 1:5.
ದೇವರು ತನ್ನ ಜನರಿಗೆ ನಿಷ್ಠಾವಂತ ಪ್ರೀತಿಯನ್ನು ತೋರಿಸುತ್ತಾನೆ
7, 8. (ಎ) ಯಾವ ಸನ್ನಿವೇಶಗಳ ಕೆಳಗೆ ನಾವು ದೇವರ ನಿಷ್ಠಾವಂತ ಪ್ರೀತಿಯನ್ನು ಪಡೆದುಕೊಳ್ಳಸಾಧ್ಯವಿದೆ? (ಬಿ) ನಾವು ಗಂಭೀರವಾದ ಪಾಪವನ್ನು ಮಾಡಿರುವುದಾದರೆ ಏನು ಮಾಡತಕ್ಕದ್ದು?
7 ನಾವು ಕಪಟರಹಿತವಾದ ಮತ್ತು ನೇರವಾದ ರೀತಿಯಲ್ಲಿ ಯೆಹೋವನನ್ನು ಆರಾಧಿಸುವುದಾದರೆ, ನಮಗೆ ಆತನು ಪ್ರೀತಿಪೂರ್ವಕ ದಯೆ ಅಥವಾ ನಿಷ್ಠಾವಂತ ಪ್ರೀತಿಯನ್ನು ದಯಪಾಲಿಸುವನು. ಹಟಮಾರಿಗಳಾದ ಇಸ್ರಾಯೇಲ್ಯರಿಗೆ ಹೀಗೆ ಹೇಳಲಾಗಿತ್ತು: “ನೀತಿಯ ಬೀಜವನ್ನು ಬಿತ್ತಿರಿ, ಪ್ರೀತಿಯ [ಪ್ರೀತಿಪೂರ್ವಕ ದಯೆಯ] ಫಲವನ್ನು ಕೊಯ್ಯಿರಿ, ಗೆಯ್ಯದ ನಿಮ್ಮ ಭೂಮಿಯನ್ನು ಗೆಯ್ಯಿರಿ; ಯೆಹೋವನು ಬಂದು ನಮ್ಮ ಮೇಲೆ ನೀತಿಯನ್ನು ವರ್ಷಿಸಲೆಂದು ಆತನನ್ನು ಶರಣುಹೋಗುವ ಸಮಯವು ಒದಗಿದೆ.”—ಹೋಶೇಯ 10:12.
8 ಇಸ್ರಾಯೇಲ್ಯರು ಒಂದುವೇಳೆ ಪಶ್ಚಾತ್ತಾಪದ ಮನಸ್ಸಿನಿಂದ ಯೆಹೋವನನ್ನು ಹುಡುಕುತ್ತಿದ್ದರೆ ಅವರ ಸನ್ನಿವೇಶವು ಎಷ್ಟು ಒಳ್ಳೇದಾಗಿರುತ್ತಿತ್ತು! ಆಗ ಆತನು ಸಂತೋಷದಿಂದ ಅವರಿಗೆ ‘ನೀತಿಯ’ ಉಪದೇಶವನ್ನು ನೀಡುತ್ತಿದ್ದನು. ಒಂದುವೇಳೆ ನಾವು ವೈಯಕ್ತಿಕವಾಗಿ ಗಂಭೀರವಾದ ಪಾಪವನ್ನು ಮಾಡಿರುವುದಾದರೆ, ಯೆಹೋವನನ್ನು ಶರಣುಹೋಗುತ್ತಾ, ಪ್ರಾರ್ಥನೆಯಲ್ಲಿ ಆತನ ಬಳಿ ಕ್ಷಮೆಯನ್ನು ಯಾಚಿಸುತ್ತಾ, ಕ್ರೈಸ್ತ ಹಿರಿಯರಿಂದ ಆಧ್ಯಾತ್ಮಿಕ ಸಹಾಯವನ್ನು ಪಡೆದುಕೊಳ್ಳಲು ಪ್ರಯತ್ನಿಸೋಣ. (ಯಾಕೋಬ 5:13-16) ನಾವು ದೇವರ ಪವಿತ್ರಾತ್ಮದ ಮಾರ್ಗದರ್ಶನವನ್ನೂ ಪಡೆದುಕೊಳ್ಳಲು ಪ್ರಯತ್ನಿಸೋಣ, ಏಕೆಂದರೆ “ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶನವನ್ನು ಕೊಯ್ಯುವನು. ಆತ್ಮನನ್ನು ಕುರಿತು ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು.” (ಗಲಾತ್ಯ 6:7, 8) ನಾವು ‘ಆತ್ಮದ ಕುರಿತು ಬಿತ್ತುವಲ್ಲಿ’ ನಾವು ದೇವರ ನಿಷ್ಠಾವಂತ ಪ್ರೀತಿಯನ್ನು ಪಡೆದುಕೊಳ್ಳುತ್ತಾ ಇರುವೆವು.
9, 10. ಹೋಶೇಯ 11:1-4 ಹೇಗೆ ಇಸ್ರಾಯೇಲಿಗೆ ಅನ್ವಯವಾಗುತ್ತದೆ?
9 ಯೆಹೋವನು ತನ್ನ ಜನರೊಂದಿಗೆ ಸದಾ ಪ್ರೀತಿಪೂರ್ವಕವಾದ ರೀತಿಯಲ್ಲಿ ವ್ಯವಹರಿಸುತ್ತಾನೆ ಎಂಬ ದೃಢಭರವಸೆ ನಮಗಿರಸಾಧ್ಯವಿದೆ. ಇದರ ಕುರಿತಾದ ಪುರಾವೆಯು ಹೋಶೇಯ 11:1-4ರಲ್ಲಿ ಕಂಡುಬರುತ್ತದೆ. ಅಲ್ಲಿ ನಾವು ಓದುವುದು: “ಇಸ್ರಾಯೇಲು ಕೇವಲ ಬಾಲ್ಯದಲ್ಲಿದ್ದಾಗ ನಾನು ಅದರ ಮೇಲೆ ಪ್ರೀತಿಯಿಟ್ಟು ಆ ನನ್ನ ಮಗನನ್ನು ಐಗುಪ್ತದೇಶದಿಂದ ಕರೆದೆನು. . . . [ಅವರು] ಬಾಳ್‌ದೇವತೆಗಳಿಗೆ ಯಜ್ಞಮಾಡಿ ಬೊಂಬೆಗಳಿಗೆ ಧೂಪಹಾಕಿದರು. ನಾನೇ ಎಫ್ರಾಯೀಮಿಗೆ [ಇಸ್ರಾಯೇಲ್ಯರಿಗೆ] ನಡೆದಾಟವನ್ನು ಕಲಿಸಿದೆನು; ಅದನ್ನು ಕೈಯಲ್ಲಿ ಎತ್ತಿಕೊಂಡೆನು; ತನ್ನನ್ನು ಸ್ವಸ್ಥಮಾಡಿದವನು ನಾನೇ ಎಂದು ಅದಕ್ಕೆ ತಿಳಿಯಲಿಲ್ಲ. ನಾನು ನನ್ನ ಜನರನ್ನು ಮಾನವರಿಗೆ ತಕ್ಕ ಮೂಗುದಾರದಿಂದ, ಅಂದರೆ ಮಮತೆಯ ಹಗ್ಗದಿಂದ ಸೆಳೆದುಕೊಂಡೆನು; ನೊಗವನ್ನು ತಲೆಯ ಈಚೆಗೆ ತೆಗೆಯುವವರಂತೆ ನಾನು ಅವರನ್ನು ಸುದಾರಿಸಿ ಅವರಿಗೆ ತೀನಿಯನ್ನು ನಯದಿಂದ ಇಕ್ಕಿದೆನು.”
10 ಇಲ್ಲಿ ಇಸ್ರಾಯೇಲನ್ನು ಒಂದು ಚಿಕ್ಕ ಮಗುವಿಗೆ ಹೋಲಿಸಲಾಗಿದೆ. ಯೆಹೋವನು ಪ್ರೀತಿಯಿಂದ ಇಸ್ರಾಯೇಲ್ಯರಿಗೆ ನಡೆಯಲು ಕಲಿಸಿದನು, ಅವರನ್ನು ಕೈಗಳಲ್ಲಿ ಎತ್ತಿಕೊಂಡನು. ಮತ್ತು ಆತನು “ಮಮತೆಯ ಹಗ್ಗದಿಂದ” ಅವರನ್ನು ಎಳೆಯುತ್ತಿದ್ದನು. ಎಂಥ ಹೃದಯಸ್ಪರ್ಶಿ ಚಿತ್ರಣವಿದು! ನೀವು ಒಬ್ಬ ಹೆತ್ತವರಾಗಿದ್ದು, ನಿಮ್ಮ ಮಗುವು ತನ್ನ ಮೊದಲ ಹೆಜ್ಜೆಗಳನ್ನು ಇಡುವಂತೆ ನೀವು ಸಹಾಯಮಾಡುತ್ತಿರುವುದನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿರಿ. ನಿಮ್ಮ ಕೈಗಳು ಚಾಚಿಕೊಂಡಿವೆ. ನಿಮ್ಮ ಪುಟ್ಟ ಕಂದನು ಹಿಡಿದುಕೊಳ್ಳುವಂತೆ ಮತ್ತು ಅವನು ಬೀಳದಿರುವಂತೆ ಮಾಡಲಿಕ್ಕಾಗಿ ನೀವು ಹಗ್ಗಗಳನ್ನೂ ಉಪಯೋಗಿಸಿರಬಹುದು. ತದ್ರೀತಿಯಲ್ಲಿ, ನಿಮ್ಮ ಮೇಲೆ ಯೆಹೋವನಿಗಿರುವ ಪ್ರೀತಿಯು ಅಷ್ಟೇ ಕೋಮಲವಾದದ್ದಾಗಿದೆ. ಆತನು ನಿಮ್ಮನ್ನು “ಮಮತೆಯ ಹಗ್ಗದಿಂದ” ಮುನ್ನಡಿಸಲು ಹರ್ಷಿಸುತ್ತಾನೆ.
11. ಯಾವ ರೀತಿಯಲ್ಲಿ ದೇವರು ‘ನೊಗವನ್ನು ತಲೆಯ ಈಚೆಗೆ ತೆಗೆಯುವವನಾದನು’?
11 ಇಸ್ರಾಯೇಲ್ಯರೊಂದಿಗಿನ ತನ್ನ ವ್ಯವಹಾರದಲ್ಲಿ ಯೆಹೋವನು, ‘ನೊಗವನ್ನು ತಲೆಯ ಈಚೆಗೆ ತೆಗೆಯುವವರಂತೆ ಅವರನ್ನು ಸುದಾರಿಸಿ ಅವರಿಗೆ ತೀನಿಯನ್ನು ನಯದಿಂದ ಇಕ್ಕಿದನು.’ ಒಂದು ಪ್ರಾಣಿಯು ಯಾವುದೇ ಅಡಚಣೆಯಿಲ್ಲದೆ ತಿನ್ನಲು ಶಕ್ತವಾಗುವಂತೆ ಅದರ ನೊಗವನ್ನು ತೆಗೆಯುವವನಾಗಿ ಅಥವಾ ಅದನ್ನು ಹಿಂದಕ್ಕೆ ಸರಿಸುವವನಾಗಿ ದೇವರು ಕ್ರಿಯೆಗೈದನು. ಯೆಹೋವನಿಗೆ ಅಧೀನರಾಗುವ ತಮ್ಮ ನೊಗವನ್ನು ಇಸ್ರಾಯೇಲ್ಯರು ಮುರಿದ ಬಳಿಕವೇ ಅವರು ತಮ್ಮ ಶತ್ರುಗಳ ದಬ್ಬಾಳಿಕೆಯ ನೊಗದಡಿ ಬಂದರು. (ಧರ್ಮೋಪದೇಶಕಾಂಡ 28:45, 48; ಯೆರೆಮೀಯ 28:14) ನಾವೆಂದಿಗೂ ನಮ್ಮ ಪ್ರಧಾನ ವೈರಿಯಾದ ಸೈತಾನನ ಹಿಡಿತದೊಳಗೆ ಬೀಳದಿರೋಣ ಮತ್ತು ಅವನ ದಬ್ಬಾಳಿಕೆಯ ನೊಗದಡಿ ಸಂಕಟವನ್ನು ಅನುಭವಿಸದಿರೋಣ. ಅದಕ್ಕೆ ಬದಲಾಗಿ, ನಾವು ನಿಷ್ಠೆಯಿಂದ ನಮ್ಮ ಪ್ರೀತಿಯ ದೇವರೊಂದಿಗೆ ನಡೆಯುವುದನ್ನು ಮುಂದುವರಿಸೋಣ.
ಯಾವಾಗಲೂ ಯೆಹೋವನಲ್ಲಿ ನಿರೀಕ್ಷೆಯನ್ನಿಡಿರಿ
12. ಹೋಶೇಯ 12:6ಕ್ಕನುಸಾರ, ನಾವು ದೇವರೊಂದಿಗೆ ನಡೆಯುತ್ತಾ ಇರಬೇಕಾದರೆ ಏನು ಆವಶ್ಯಕ?
12 ದೇವರೊಂದಿಗೆ ನಡೆಯುತ್ತಾ ಇರಬೇಕಾದರೆ ನಾವು ಯಾವಾಗಲೂ ಆತನಲ್ಲಿ ನಿರೀಕ್ಷೆಯಿಡಬೇಕು. ಇಸ್ರಾಯೇಲ್ಯರಿಗೆ ಹೀಗೆ ಹೇಳಲಾಗಿತ್ತು: “[ಇಸ್ರಾಯೇಲೇ,] ನೀನು ನಿನ್ನ ದೇವರ ಸಹಾಯದಿಂದ ತಿರುಗಿಕೋ; ನೀತಿಪ್ರೀತಿ [“ಪ್ರೀತಿಪೂರ್ವಕ ದಯೆ ಮತ್ತು ನ್ಯಾಯ,” NW]ಗಳನ್ನನುಸರಿಸಿ ನಿನ್ನ ದೇವರನ್ನು ಎಡೆಬಿಡದೆ ನಿರೀಕ್ಷಿಸಿಕೊಂಡಿರು.” (ಹೋಶೇಯ 12:6) ಇಸ್ರಾಯೇಲಿನ ನಿವಾಸಿಗಳು ಪ್ರೀತಿಪೂರ್ವಕ ದಯೆಯನ್ನು ತೋರಿಸುವ ಮೂಲಕ, ನೀತಿನ್ಯಾಯಗಳನ್ನು ಅನುಸರಿಸುವ ಮೂಲಕ ಮತ್ತು ‘ದೇವರನ್ನು ಎಡೆಬಿಡದೆ ನಿರೀಕ್ಷಿಸುವ’ ಮೂಲಕ, ತಾವು ಯೆಹೋವನ ಬಳಿ ಹಿಂದಿರುಗಿದ್ದೇವೆಂಬುದರ ಪುರಾವೆಯನ್ನು ನೀಡಸಾಧ್ಯವಿತ್ತು. ನಾವು ದೇವರೊಂದಿಗೆ ಎಷ್ಟೇ ದೀರ್ಘ ಸಮಯದಿಂದ ನಡೆದಿರುವುದಾದರೂ, ಪ್ರೀತಿಪೂರ್ವಕ ದಯೆಯನ್ನು ತೋರಿಸಲು, ನ್ಯಾಯವನ್ನು ಅನುಸರಿಸಲು ಮತ್ತು ಎಡೆಬಿಡದೆ ದೇವರನ್ನು ನಿರೀಕ್ಷಿಸುವುದನ್ನು ಮುಂದುವರಿಸಲು ದೃಢನಿರ್ಧಾರವುಳ್ಳವರಾಗಿರಬೇಕು.—ಕೀರ್ತನೆ 27:14.
13, 14. ಹೋಶೇಯ 13:14ನ್ನು ಪೌಲನು ಹೇಗೆ ಅನ್ವಯಿಸಿದನು, ಮತ್ತು ಯೆಹೋವನಲ್ಲಿ ನಿರೀಕ್ಷೆಯಿಡಲು ಇದು ನಮಗೆ ಯಾವ ಕಾರಣವನ್ನು ಕೊಡುತ್ತದೆ?
13 ಇಸ್ರಾಯೇಲ್ಯರನ್ನು ಒಳಗೂಡಿದ್ದ ಹೋಶೇಯನ ಪ್ರವಾದನೆಯು, ಯೆಹೋವನಲ್ಲಿ ನಿರೀಕ್ಷೆಯಿಡಲು ನಮಗೆ ಒಂದು ವಿಶೇಷ ಕಾರಣವನ್ನು ಕೊಡುತ್ತದೆ. ಯೆಹೋವನು ಹೇಳಿದ್ದು: “ನಾನು ಅದನ್ನು ಪಾತಾಳದ ಅಧಿಕಾರದಿಂದ ಬಿಡಿಸಲೋ? ಮರಣದಿಂದ ಉದ್ಧರಿಸಲೋ? ಮರಣವೇ, ನಿನ್ನ ಉಪದ್ರವಗಳೆಲ್ಲಿ? ಪಾತಾಳವೇ, ನೀನು ಮಾಡುವ ನಾಶನವೆಲ್ಲಿ?” (ಹೋಶೇಯ 13:14) ಆ ಸಮಯದಲ್ಲಿ ಯೆಹೋವನು ಇಸ್ರಾಯೇಲ್ಯರನ್ನು ಶಾರೀರಿಕ ಮರಣದಿಂದ ಕಾಪಾಡಲು ಉದ್ದೇಶಿಸಲಿಲ್ಲವಾದರೂ, ಆತನು ಅಂತಿಮವಾಗಿ ಮರಣವನ್ನು ನಿತ್ಯಕ್ಕೂ ಅಳಿಸಿಹಾಕಿ ಅದರ ವಿಜಯವನ್ನು ರದ್ದುಪಡಿಸಲಿಕ್ಕಿದ್ದನು.
14 ಜೊತೆ ಅಭಿಷಿಕ್ತ ಕ್ರೈಸ್ತರನ್ನು ಸಂಬೋಧಿಸುತ್ತಾ ಪೌಲನು ಹೋಶೇಯನ ಪ್ರವಾದನೆಯಿಂದ ಉಲ್ಲೇಖಿಸಿ ಬರೆದುದು: “ಲಯವಾಗುವ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಂಡಾಗ ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಂಡಾಗ ಬರೆದಿರುವ ಮಾತು ನೆರವೇರುವದು. ಆ ಮಾತು ಏನಂದರೆ—ಮರಣವು ನುಂಗಿಯೇ ಹೋಯಿತು, ಜಯವಾಯಿತು ಎಂಬದೇ. ಮರಣವೇ, ನಿನ್ನ ಜಯವೆಲ್ಲಿ? ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ? ಮರಣದ ಕೊಂಡಿ ಪಾಪವೇ; ಮತ್ತು ಪಾಪದ ಬಲಕ್ಕೆ ಆಧಾರವು ಧರ್ಮಶಾಸ್ತ್ರವೇ. ಆದರೆ ದೇವರು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಟ್ಟಿದ್ದಾನೆ; ಆತನಿಗೆ ಸ್ತೋತ್ರ.” (1 ಕೊರಿಂಥ 15:54-57) ಯೆಹೋವನು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸುವ ಮೂಲಕ, ತನ್ನ ಸ್ಮರಣೆಯಲ್ಲಿರುವವರು ರಾಜ್ಯದಾಳಿಕೆಯ ಸಮಯದಲ್ಲಿ ಪುನರುತ್ಥಾನಗೊಳಿಸಲ್ಪಡುವರೆಂಬ ಸಾಂತ್ವನದಾಯಕ ಖಾತ್ರಿಯನ್ನು ಕೊಟ್ಟನು. (ಯೋಹಾನ 5:28, 29) ಯೆಹೋವನಲ್ಲಿ ನಿರೀಕ್ಷೆಯಿಡಲು ಎಂಥ ಆನಂದದಾಯಕ ಕಾರಣವಿದು! ಆದರೂ, ಈ ಪುನರುತ್ಥಾನದ ನಿರೀಕ್ಷೆಯ ಜೊತೆಯಲ್ಲಿ ಮತ್ತೊಂದು ವಿಷಯವು ನಾವು ದೇವರೊಂದಿಗೆ ನಡೆಯುವಂತೆ ನಮ್ಮನ್ನು ಪ್ರಚೋದಿಸುತ್ತದೆ.
ಯೆಹೋವನ ಮಾರ್ಗಗಳು ಯಾವಾಗಲೂ ನೇರವಾದವುಗಳು
15, 16. ಸಮಾರ್ಯದ ವಿಷಯದಲ್ಲಿ ಏನನ್ನು ಮುಂತಿಳಿಸಲಾಗಿತ್ತು, ಮತ್ತು ಆ ಪ್ರವಾದನೆಯು ಹೇಗೆ ನೆರವೇರಿಸಲ್ಪಟ್ಟಿತು?
15 “ಯೆಹೋವನ ಮಾರ್ಗಗಳು ರುಜುವಾದವುಗಳು [ನೇರವಾದವುಗಳು]” ಎಂದು ನಮಗಿರುವ ನಿಶ್ಚಿತಾಭಿಪ್ರಾಯವು, ನಾವು ದೇವರೊಂದಿಗೆ ನಡೆಯುವುದನ್ನು ಮುಂದುವರಿಸುವಂತೆ ಸಹಾಯಮಾಡುತ್ತದೆ. ಸಮಾರ್ಯದ ನಿವಾಸಿಗಳು ದೇವರ ನೀತಿಯ ಮಾರ್ಗಗಳಲ್ಲಿ ನಡೆಯಲಿಲ್ಲ. ಇದರ ಪರಿಣಾಮವಾಗಿ, ತಮ್ಮ ಪಾಪ ಮತ್ತು ಯೆಹೋವನಲ್ಲಿನ ನಂಬಿಕೆಯ ಕೊರತೆಗಾಗಿ ಅವರು ಬೆಲೆಯನ್ನು ತೆರಬೇಕಾಗಿತ್ತು. ಈ ವಿಷಯದಲ್ಲಿ ಹೀಗೆ ಮುಂತಿಳಿಸಲಾಗಿತ್ತು: “ಸಮಾರ್ಯವು ತನ್ನ ದೇವರಿಗೆ ತಿರುಗಿಬಿದ್ದದರಿಂದ ತನ್ನ ದೋಷಫಲವನ್ನು ಅನುಭವಿಸಲೇ ಬೇಕು; ಅದರ ಜನರು ಖಡ್ಗಹತರಾಗುವರು; ವೈರಿಗಳು ಅಲ್ಲಿನ ಮಕ್ಕಳನ್ನು ಬಂಡೆಗೆ ಅಪ್ಪಳಿಸುವರು. ಗರ್ಭಿಣಿಯರ ಹೊಟ್ಟೆಯನ್ನು ಸೀಳುವರು.” (ಹೋಶೇಯ 13:16) ಸಮಾರ್ಯವನ್ನು ವಶಪಡಿಸಿಕೊಂಡ ಅಶ್ಶೂರರು ಇಂಥ ಭಯಂಕರ ದುಷ್ಕೃತ್ಯಗಳನ್ನು ಮಾಡುವ ಸಾಮರ್ಥ್ಯವುಳ್ಳವರಾಗಿದ್ದರು ಎಂಬುದನ್ನು ಐತಿಹಾಸಿಕ ದಾಖಲೆಗಳು ತೋರಿಸುತ್ತವೆ.
16 ಸಮಾರ್ಯವು ಹತ್ತು ಕುಲಗಳ ಇಸ್ರಾಯೇಲ್ ರಾಜ್ಯದ ರಾಜಧಾನಿ ನಗರವಾಗಿತ್ತು. ಆದರೂ, ಇಲ್ಲಿ ಸಮಾರ್ಯ ಎಂಬ ಹೆಸರು ಆ ರಾಜ್ಯದ ಇಡೀ ಕ್ಷೇತ್ರಕ್ಕೆ ಅನ್ವಯವಾಗಬಹುದು. (1 ಅರಸುಗಳು 21:1) ಅಶ್ಶೂರದ ಅರಸನಾದ ಐದನೆಯ ಶಲ್ಮನೆಸೆರನು ಸಾ.ಶ.ಪೂ. 742ರಲ್ಲಿ ಸಮಾರ್ಯ ನಗರಕ್ಕೆ ಮುತ್ತಿಗೆಹಾಕಿದನು. ಆದರೆ ಕೊನೆಗೂ ಸಮಾರ್ಯವು ಸಾ.ಶ.ಪೂ. 740ರಲ್ಲಿ ಪತನಗೊಂಡಾಗ, ಅದರ ಅನೇಕ ಪ್ರಮುಖ ನಿವಾಸಿಗಳನ್ನು ಮೆಸೊಪೊತಾಮ್ಯ ಮತ್ತು ಮೇದ್ಯ ಪಟ್ಟಣಗಳಿಗೆ ಸೆರೆಯಾಳುಗಳಾಗಿ ಕೊಂಡೊಯ್ಯಲಾಯಿತು. ಸಮಾರ್ಯವು ವಶಪಡಿಸಿಕೊಳ್ಳಲ್ಪಟ್ಟದ್ದು ಐದನೆಯ ಶಲ್ಮನೆಸೆರನಿಂದಲೋ ಅಥವಾ ಅವನ ಉತ್ತರಾಧಿಕಾರಿಯಾದ ಎರಡನೆಯ ಸರ್ಗೋನನಿಂದಲೋ ಎಂಬುದು ಅನಿಶ್ಚಿತವಾಗಿಯೇ ಉಳಿದಿದೆ. (2 ಅರಸುಗಳು 17:1-6, 22, 23; 18:9-12) ಆದರೂ, ಸರ್ಗೋನನ ದಾಖಲೆಗಳು 27,290 ಮಂದಿ ಇಸ್ರಾಯೇಲ್ಯರನ್ನು ಯೂಫ್ರೇಟೀಸ್ ಮೇಲ್ಪ್ರದೇಶಕ್ಕೆ ಮತ್ತು ಮೇದ್ಯಕ್ಕೆ ಗಡೀಪಾರು ಮಾಡಲಾಯಿತೆಂದು ತಿಳಿಸುತ್ತವೆ.
17. ದೇವರ ಮಟ್ಟಗಳನ್ನು ತಿರಸ್ಕಾರಭಾವದಿಂದ ನೋಡುವುದಕ್ಕೆ ಬದಲಾಗಿ ನಾವೇನು ಮಾಡತಕ್ಕದ್ದು?
17 ಸಮಾರ್ಯದ ನಿವಾಸಿಗಳು ಯೆಹೋವನ ನೇರವಾದ ಮಾರ್ಗಗಳಿಗನುಸಾರ ನಡೆಯಲು ವಿಫಲರಾಗಿದ್ದರಿಂದ ದುರಂತಮಯ ಪರಿಣಾಮಗಳನ್ನು ಅನುಭವಿಸಿದರು. ಸಮರ್ಪಿತ ಕ್ರೈಸ್ತರಾಗಿರುವ ನಾವು ಪಾಪವನ್ನು ಮಾಡುತ್ತಾ ಮುಂದುವರಿಯುವಲ್ಲಿ ಮತ್ತು ದೇವರ ನೀತಿಯ ಮಟ್ಟಗಳನ್ನು ತಿರಸ್ಕಾರಭಾವದಿಂದ ನೋಡುವಲ್ಲಿ, ನಾವು ಸಹ ದುರಂತಮಯ ಪರಿಣಾಮಗಳನ್ನು ಅನುಭವಿಸುವೆವು. ಆದುದರಿಂದ ನಾವೆಂದಿಗೂ ಅಂಥ ದುಷ್ಟ ಮಾರ್ಗವನ್ನು ಬೆನ್ನಟ್ಟದಿರೋಣ! ಅದಕ್ಕೆ ಬದಲಾಗಿ ನಮ್ಮಲ್ಲಿ ಪ್ರತಿಯೊಬ್ಬರೂ ಅಪೊಸ್ತಲ ಪೇತ್ರನ ಈ ಸಲಹೆಯನ್ನು ಅನ್ವಯಿಸೋಣ: “ನಿಮ್ಮಲ್ಲಿ ಯಾವನಾದರೂ ಕೊಲೆಗಾರನು ಕಳ್ಳನು ದುಷ್ಟನು ಪರಕಾರ್ಯಗಳಲ್ಲಿ ತಲೆಹಾಕುವವನು ಆಗಿದ್ದು ಶಿಕ್ಷಾಪಾತ್ರನಾಗಬಾರದು. ಆದರೆ ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆಪಡದೆ ಆ ಹೆಸರಿನಿಂದಲೇ ದೇವರನ್ನು ಘನಪಡಿಸಲಿ.”—1 ಪೇತ್ರ 4:15, 16.
18. ನಾವು ಹೇಗೆ ‘ದೇವರನ್ನು ಘನಪಡಿಸುತ್ತಾ ಇರಸಾಧ್ಯವಿದೆ?’
18 ನಮ್ಮ ಇಷ್ಟಾನುಸಾರ ನಡೆಯುವ ಬದಲಿಗೆ, ದೇವರ ನೇರವಾದ ಮಾರ್ಗಗಳಲ್ಲಿ ನಡೆಯುವ ಮೂಲಕ ನಾವು ‘ದೇವರನ್ನು ಘನಪಡಿಸುತ್ತಾ ಇರುತ್ತೇವೆ.’ ಕಾಯಿನನು ತನ್ನ ಸ್ವಂತ ಇಚ್ಛೆಯ ಪ್ರಕಾರ ನಡೆದ ಕಾರಣ ಮತ್ತು ಪಾಪವು ಅವನನ್ನು ಹಿಡಿಯಲು ಹೊಂಚುಹಾಕುತ್ತಿದೆ ಎಂಬ ಯೆಹೋವನ ಎಚ್ಚರಿಕೆಗೆ ಕಿವಿಗೊಡದಿದ್ದ ಕಾರಣ ಕೊಲೆಪಾತಕನಾದನು. (ಆದಿಕಾಂಡ 4:1-8) ಬಿಳಾಮನು ಮೋವಾಬಿನ ರಾಜನಿಂದ ಕಾಣಿಕೆಯನ್ನು ಪಡೆದು ಇಸ್ರಾಯೇಲನ್ನು ಶಪಿಸಲು ಪ್ರಯತ್ನಿಸಿದರೂ ಅಸಫಲನಾದನು. (ಅರಣ್ಯಕಾಂಡ 24:10) ಮತ್ತು ಮೋಶೆ ಆರೋನರ ಅಧಿಕಾರದ ವಿರುದ್ಧ ದಂಗೆಯೆದ್ದದ್ದಕ್ಕಾಗಿ ದೇವರು ಲೇವ್ಯನಾಗಿದ್ದ ಕೋರಹನನ್ನು ಹಾಗೂ ಇತರರನ್ನು ಸಂಹರಿಸಿದನು. (ಅರಣ್ಯಕಾಂಡ 16:1-3, 31-33) ನಿಶ್ಚಯವಾಗಿಯೂ ನಾವು ಕೊಲೆಪಾತಕನಾದ “ಕಾಯಿನನ ಮಾರ್ಗವನ್ನು ಹಿಡಿದವರೂ . . . ಬಿಳಾಮನ ಭ್ರಾಂತಿಯಲ್ಲಿ ಪೂರ್ಣವಾಗಿ ಮುಣುಗಿದವರೂ ಕೋರಹನಂತೆ ಎದುರುಮಾತುಗಳನ್ನಾಡಿ ನಾಶವಾಗಿಹೋಗತಕ್ಕವರೂ” ಆಗಿರಲು ಬಯಸುವುದಿಲ್ಲ. (ಯೂದ 11) ಆದರೆ ಒಂದುವೇಳೆ ನಾವು ಪಾಪವನ್ನು ಮಾಡುವುದಾದರೆ, ಹೋಶೇಯನ ಪ್ರವಾದನೆಯು ನಮಗೆ ಸಾಂತ್ವನವನ್ನು ನೀಡುತ್ತದೆ.
ಪಾಪಿಗಳು ಯೆಹೋವನ ಬಳಿ ಹಿಂದಿರುಗಸಾಧ್ಯವಿದೆ
19, 20. ಪಶ್ಚಾತ್ತಾಪಪಟ್ಟ ಇಸ್ರಾಯೇಲ್ಯರು ಯಾವ ಯಜ್ಞಗಳನ್ನು ಅರ್ಪಿಸಲು ಶಕ್ತರಾಗಿದ್ದರು?
19 ಗಂಭೀರವಾದ ಪಾಪವನ್ನು ಮಾಡುವ ಮೂಲಕ ಮುಗ್ಗರಿಸಿ ಬಿದ್ದವರು ಸಹ ಯೆಹೋವನ ಬಳಿ ಹಿಂದಿರುಗಸಾಧ್ಯವಿದೆ. ಹೋಶೇಯ 14:1-3ರಲ್ಲಿ ನಾವು ಈ ವಿಜ್ಞಾಪನೆಯನ್ನು ಕಾಣುತ್ತೇವೆ: “ಇಸ್ರಾಯೇಲೇ, ನೀನು ಹಿಂದಿರುಗಿ ನಿನ್ನ ದೇವರಾದ ಯೆಹೋವನನ್ನು ಸೇರಿಕೋ; ನಿನ್ನ ಅಪರಾಧದಿಂದಲೇ, ನೀನು ಮುಗ್ಗರಿಸಿ ಬಿದ್ದಿ. [ಪಶ್ಚಾತ್ತಾಪದ] ಮಾತುಗಳನ್ನು ತೆಗೆದುಕೊಂಡು ಯೆಹೋವನ ಬಳಿಗೆ ಹಿಂದಿರುಗಿ ಆತನಿಗೆ—ನಮ್ಮ ಅಪರಾಧವನ್ನು ಸಂಪೂರ್ಣವಾಗಿ ನಿವಾರಣೆಮಾಡಿ [ನಮ್ಮಲ್ಲಿನ] ಒಳ್ಳೆಯದನ್ನು ಅಂಗೀಕರಿಸು; ನಮ್ಮ ಸ್ತೋತ್ರಗಳೆಂಬ ಹೋರಿಗಳನ್ನು ಅರ್ಪಿಸುವೆವು . . . ಎಂಬದಾಗಿ ಅರಿಕೆ ಮಾಡಿಕೊಳ್ಳಿರಿ.”
20 ಪಶ್ಚಾತ್ತಾಪಪಟ್ಟ ಇಸ್ರಾಯೇಲ್ಯರು ದೇವರಿಗೆ “ಸ್ತೋತ್ರಗಳೆಂಬ ಹೋರಿಗಳನ್ನು” ಅರ್ಪಿಸಲು ಶಕ್ತರಾಗಿದ್ದರು. ಇವು ಯಥಾರ್ಥವಾದ ಸ್ತುತಿಯಜ್ಞಗಳೇ ಆಗಿದ್ದವು. “ದೇವರಿಗೆ ಸ್ತೋತ್ರಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ. ಆತನು ಕರ್ತನೆಂದು ಬಾಯಿಂದ ಪ್ರತಿಜ್ಞೆಮಾಡುವದೇ ನಾವು ಅರ್ಪಿಸುವ ಯಜ್ಞವಾಗಿದೆ” ಎಂದು ಪೌಲನು ಕ್ರೈಸ್ತರನ್ನು ಪ್ರೋತ್ಸಾಹಿಸಿದಾಗ, ಅವನು ಸೂಚಿಸಿ ಮಾತಾಡಿದ್ದು ಈ ಪ್ರವಾದನೆಯ ಕುರಿತಾಗಿಯೇ. (ಇಬ್ರಿಯ 13:15) ಇಂದು ದೇವರೊಂದಿಗೆ ನಡೆಯುವುದು ಮತ್ತು ಇಂಥ ಯಜ್ಞಗಳನ್ನು ಅರ್ಪಿಸುವುದು ಎಂಥ ಒಂದು ಸುಯೋಗವಾಗಿದೆ!
21, 22. ಪಶ್ಚಾತ್ತಾಪಪಟ್ಟ ಇಸ್ರಾಯೇಲ್ಯರು ಯಾವ ಪುನಸ್ಸ್ಥಾಪನೆಯನ್ನು ಅನುಭವಿಸಲಿದ್ದರು?
21 ತಮ್ಮ ಹಟಮಾರಿ ಜೀವನ ರೀತಿಯನ್ನು ತೊರೆದು ದೇವರ ಬಳಿ ಹಿಂದಿರುಗಿದಂಥ ಇಸ್ರಾಯೇಲ್ಯರು ಆತನಿಗೆ “ಸ್ತೋತ್ರಗಳೆಂಬ ಹೋರಿಗಳನ್ನು” ಅರ್ಪಿಸಿದರು. ಹೀಗೆ ಅವರು ದೇವರು ವಾಗ್ದಾನಿಸಿದಂತೆಯೇ ಆಧ್ಯಾತ್ಮಿಕ ಪುನಸ್ಸ್ಥಾಪನೆಯನ್ನು ಅನುಭವಿಸಿದರು. ಹೋಶೇಯ 14:4-7 ಹೀಗನ್ನುತ್ತದೆ: “ನಾನು [ಯೆಹೋವನು] ನನ್ನ ಜನರ ಭ್ರಷ್ಟತ್ವವನ್ನು ಪರಿಹರಿಸಿ ಅವರನ್ನು ಮನಃಪೂರ್ವಕವಾಗಿ ಪ್ರೀತಿಸುವೆನು; ನನ್ನ ಕೋಪವು ಅವರ ಕಡೆಯಿಂದ ತೊಲಗಿಹೋಯಿತು. ನಾನು ಇಸ್ರಾಯೇಲಿಗೆ ಇಬ್ಬನಿಯಂತಾಗುವೆನು; ಅದು ತಾವರೆಯಂತೆ ಒಡೆಯುವದು; ಲೆಬನೋನಿನ [ದೇವದಾರುಗಳ] ಹಾಗೆ ಬೇರುಬಿಟ್ಟುಕೊಳ್ಳುವದು. ಅದರ ರೆಂಬೆಗಳು ಹರಡುವವು, ಅದರ ಅಂದವು ಒಲೀವ ಮರದಂತೆ ಕಂಗೊಳಿಸುವದು, ಅದರ ಪರಿಮಳವು ಲೆಬನೋನಿನ ಹಾಗೆ ಮನೋಹರವಾಗಿರುವದು. ಅದರ ನೆರಳನ್ನು ಆಶ್ರಯಿಸಿರುವವರು ಹಿಂದಿರುಗಿ ಬೆಳೆಯನ್ನು ಬೆಳೆದು ದ್ರಾಕ್ಷೆಯಂತೆ ಪಲ್ಲವಿಸುವರು; ಅದರ ಕೀರ್ತಿಯು ಲೆಬನೋನಿನ ದ್ರಾಕ್ಷಾರಸದ ಹಾಗೆ ಸ್ವಾರಸ್ಯವಾಗಿರುವದು.”
22 ಪಶ್ಚಾತ್ತಾಪಪಟ್ಟ ಇಸ್ರಾಯೇಲ್ಯರು ಆಧ್ಯಾತ್ಮಿಕವಾಗಿ ಗುಣಹೊಂದಿ, ದೇವರ ಪ್ರೀತಿಯನ್ನು ಪುನಃ ಅನುಭವಿಸಲಿದ್ದರು. ಯೆಹೋವನು ಅವರಿಗೆ ಚೈತನ್ಯದಾಯಕವಾದ ಇಬ್ಬನಿಯಂತಿರಲಿದ್ದನು, ಅಂದರೆ ಆತನು ಅವರನ್ನು ಸಮೃದ್ಧವಾಗಿ ಆಶೀರ್ವದಿಸಲಿದ್ದನು. ಆತನ ಪುನಸ್ಸ್ಥಾಪಿಸಲ್ಪಟ್ಟ ಜನರು ‘ಒಲೀವ ಮರದಂತೆ ಕಂಗೊಳಿಸಲಿದ್ದರು’ ಮತ್ತು ಅವರು ದೇವರ ಮಾರ್ಗಗಳಲ್ಲಿ ನಡೆಯಲಿದ್ದರು. ಸ್ವತಃ ನಾವು ದೇವರ ಮಾರ್ಗಗಳಲ್ಲಿ ನಡೆಯಲು ದೃಢವಾಗಿ ನಿಶ್ಚಯಿಸಿರುವುದರಿಂದ, ನಮ್ಮಿಂದ ಏನನ್ನು ಅಪೇಕ್ಷಿಸಲಾಗುತ್ತದೆ?
ಯೆಹೋವನ ನೇರವಾದ ಮಾರ್ಗಗಳಲ್ಲಿ ನಡೆಯುತ್ತಾ ಇರಿ
23, 24. ಹೋಶೇಯನ ಪುಸ್ತಕವು ಯಾವ ಉತ್ತೇಜನದಾಯಕ ಪ್ರವಾದನೆಯೊಂದಿಗೆ ಕೊನೆಗೊಳ್ಳುತ್ತದೆ, ಮತ್ತು ಇದು ನಮ್ಮ ಮೇಲೆ ಹೇಗೆ ಪ್ರಭಾವಬೀರುತ್ತದೆ?
23 ನಾವು ದೇವರೊಂದಿಗೆ ನಡೆಯುತ್ತಾ ಇರಬೇಕಾದರೆ, ‘ಮೇಲಣಿಂದ ಬರುವ ವಿವೇಕವನ್ನು’ ರೂಢಿಸಿಕೊಳ್ಳಬೇಕು ಮತ್ತು ಸದಾ ಆತನ ನೇರವಾದ ಮಾರ್ಗಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯಬೇಕು. (ಯಾಕೋಬ 3:17, 18) ಹೋಶೇಯ ಪ್ರವಾದನೆಯ ಕೊನೆಯ ವಚನವು ಹೀಗೆ ಓದಲ್ಪಡುತ್ತದೆ: “ಜ್ಞಾನಿಗಳು ಈ ಸಂಗತಿಗಳನ್ನು ಗ್ರಹಿಸುವರು; ವಿವೇಕಿಗಳು ಅವುಗಳನ್ನು ತಿಳಿದುಕೊಳ್ಳುವರು; ಯೆಹೋವನ ಮಾರ್ಗಗಳು ರುಜುವಾದವುಗಳು [ನೇರವಾದವುಗಳು]; ಅವುಗಳಲ್ಲಿ ಸನ್ಮಾರ್ಗಿಗಳು ನಡೆಯುವರು, ದುರ್ಮಾರ್ಗಿಗಳು ಎಡವಿಬೀಳುವರು.”—ಹೋಶೇಯ 14:9.
24 ಈ ಲೋಕದ ವಿವೇಕ ಮತ್ತು ಮಟ್ಟಗಳಿಂದ ಮಾರ್ಗದರ್ಶಿಸಲ್ಪಡುವುದಕ್ಕೆ ಬದಲಾಗಿ, ನಾವು ದೇವರ ನೇರವಾದ ಮಾರ್ಗಗಳಲ್ಲಿ ನಡೆಯಲು ದೃಢನಿರ್ಧಾರವನ್ನು ಮಾಡೋಣ. (ಧರ್ಮೋಪದೇಶಕಾಂಡ 32:4) ಹೋಶೇಯನು 59 ವರ್ಷಗಳು ಅಥವಾ ಅದಕ್ಕಿಂತಲೂ ಹೆಚ್ಚು ಕಾಲಾವಧಿಯ ವರೆಗೆ ಇಂಥ ಮಾರ್ಗದಲ್ಲಿ ನಡೆದನು. ಜ್ಞಾನಿಗಳೂ ವಿವೇಕಿಗಳೂ ಆಗಿರುವವರು ಇಂಥ ಮಾತುಗಳನ್ನು ಅರ್ಥಮಾಡಿಕೊಳ್ಳುವರೆಂಬುದನ್ನು ತಿಳಿದಿದ್ದ ಅವನು, ದೈವಿಕ ಸಂದೇಶಗಳನ್ನು ನಂಬಿಗಸ್ತಿಕೆಯಿಂದ ಪ್ರಕಟಿಸಿದನು. ನಮ್ಮ ಕುರಿತಾಗಿ ಏನು? ನಾವು ಎಷ್ಟರ ತನಕ ಸಾಕ್ಷಿನೀಡುವಂತೆ ಯೆಹೋವನು ಅನುಮತಿಸುತ್ತಾನೋ ಅಷ್ಟರ ತನಕ, ಯಾರು ಆತನ ಅಪಾತ್ರ ಕೃಪೆಯನ್ನು ವಿವೇಕಯುತವಾಗಿ ಅಂಗೀಕರಿಸುವರೋ ಅವರನ್ನು ಹುಡುಕುತ್ತಿರುವೆವು. ಮತ್ತು ನಾವು ಇದನ್ನು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗದೊಂದಿಗಿನ ಪೂರ್ಣ ಸಹಕಾರದೊಂದಿಗೆ ಮಾಡಲು ಸಂತೋಷಪಡುತ್ತೇವೆ.—ಮತ್ತಾಯ 24:45-47.
25. ಹೋಶೇಯನ ಪ್ರವಾದನೆಯ ಕುರಿತಾದ ನಮ್ಮ ಚರ್ಚೆಯು ನಾವು ಏನು ಮಾಡುವಂತೆ ನಮಗೆ ಸಹಾಯಮಾಡಬೇಕು?
25 ಹೋಶೇಯನ ಪ್ರವಾದನೆಯ ಕುರಿತಾದ ನಮ್ಮ ಚರ್ಚೆಯು, ನಾವು ದೇವರ ವಾಗ್ದತ್ತ ನೂತನ ಲೋಕದಲ್ಲಿ ನಿತ್ಯಜೀವದ ನಿರೀಕ್ಷೆಯುಳ್ಳವರಾಗಿ ಆತನೊಂದಿಗೆ ನಡೆಯುತ್ತಾ ಇರುವಂತೆ ನಮಗೆ ಸಹಾಯಮಾಡಬೇಕು. (2 ಪೇತ್ರ 3:13; ಯೂದ 20, 21) ಎಷ್ಟು ಅತ್ಯುತ್ಕೃಷ್ಟವಾದ ನಿರೀಕ್ಷೆಯಿದು! “ಯೆಹೋವನ ಮಾರ್ಗಗಳು ರುಜುವಾದವುಗಳು [ನೇರವಾದವುಗಳು]” ಎಂದು ನಾವು ಹೇಳುವಾಗ, ಅದನ್ನು ನಿಜವಾದ ಅರ್ಥದಲ್ಲಿ ಹೇಳುತ್ತೇವೆ ಎಂದು ನಮ್ಮ ನಡೆನುಡಿಗಳಲ್ಲಿ ರುಜುಪಡಿಸುತ್ತಾ ಹೋಗುವುದಾದರೆ, ಆ ನಿರೀಕ್ಷೆಯು ನಮಗೆ ವಾಸ್ತವಿಕತೆಯಾಗಿ ಪರಿಣಮಿಸುವುದು.
ನೀವು ಹೇಗೆ ಉತ್ತರಿಸುವಿರಿ?
• ನಾವು ದೇವರಿಗೆ ಶುದ್ಧವಾದ ಆರಾಧನೆಯನ್ನು ಸಲ್ಲಿಸುವುದಾದರೆ, ಆತನು ನಮ್ಮೊಂದಿಗೆ ಹೇಗೆ ವ್ಯವಹರಿಸುವನು?
• ನಾವು ಯಾವಾಗಲೂ ಯೆಹೋವನಲ್ಲಿ ನಿರೀಕ್ಷೆಯಿಡಬೇಕು ಏಕೆ?
• ಯೆಹೋವನ ಮಾರ್ಗಗಳು ನೇರವಾದವುಗಳು ಎಂಬುದು ನಿಮಗೆ ಮನದಟ್ಟಾಗಿದೆ ಏಕೆ?
• ಯೆಹೋವನ ನೇರವಾದ ಮಾರ್ಗಗಳಲ್ಲಿ ನಾವು ಹೇಗೆ ನಡೆಯುತ್ತಾ ಇರಸಾಧ್ಯವಿದೆ?
[ಪುಟ 28ರಲ್ಲಿರುವ ಚಿತ್ರ]
ಕ್ರೈಸ್ತ ಹಿರಿಯರಿಂದ ಆಧ್ಯಾತ್ಮಿಕ ಸಹಾಯವನ್ನು ಪಡೆದುಕೊಳ್ಳಿರಿ
[ಪುಟ 29ರಲ್ಲಿರುವ ಚಿತ್ರ]
ಪುನರುತ್ಥಾನದ ಕುರಿತಾದ ಯೆಹೋವನ ವಾಗ್ದಾನಗಳಲ್ಲಿ ನಿರೀಕ್ಷೆಯಿಡಲು ಹೋಶೇಯನ ಪ್ರವಾದನೆಯು ನಮಗೆ ಕಾರಣವನ್ನು ಕೊಡುತ್ತದೆ
[ಪುಟ 31ರಲ್ಲಿರುವ ಚಿತ್ರಗಳು]
ನಿತ್ಯಜೀವವನ್ನು ದೃಷ್ಟಿಯಲ್ಲಿಟ್ಟವರಾಗಿ ದೇವರೊಂದಿಗೆ ನಡೆಯುತ್ತಾ ಇರಿ