ಹೆಚ್ಚುತ್ತಾ ಬರುವ ಬೆಳಕಿನ ಮಾರ್ಗದಲ್ಲಿ ನಡೆಯುವುದು
“ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.”—ಜ್ಞಾನೋಕ್ತಿ 4:18.
1, 2. ಯೆಹೋವನಿಂದ ಒದಗಿಸಲ್ಪಟ್ಟಿರುವ ಹೆಚ್ಚಿನ ಆಧ್ಯಾತ್ಮಿಕ ಬೆಳಕಿನ ಫಲಿತಾಂಶವಾಗಿ ದೇವಜನರು ಏನನ್ನು ಅನುಭವಿಸಿದ್ದಾರೆ?
ರಾತ್ರಿಯ ಅಂಧಕಾರದ ಮೇಲೆ ಉದಯಿಸುತ್ತಿರುವ ಸೂರ್ಯನು ಯಾವ ಪರಿಣಾಮವನ್ನು ಬೀರುತ್ತಾನೆ ಎಂಬುದನ್ನು, ಬೆಳಕಿನ ಮೂಲನಾಗಿರುವ ಯೆಹೋವ ದೇವರನ್ನು ಬಿಟ್ಟು ಬೇರೆ ಯಾರು ತಾನೇ ಹೆಚ್ಚು ಉತ್ತಮವಾಗಿ ವರ್ಣಿಸಬಲ್ಲರು? (ಕೀರ್ತನೆ 36:9) ‘ಬೆಳಗಿನ ಬೆಳಕು ಭೂಮಿಯ ಅಂಚುಗಳನ್ನು ಹಿಡಿದು, ಮುದ್ರೆ ಒತ್ತಿದ ಜೇಡಿಮಣ್ಣಿನಂತೆ [ಬೆಳಗಾಗುವಾಗ] ಭೂಮಿಯು ರೂಪಗಾಣುವದು. [ಎಲ್ಲಾ ವಸ್ತುಗಳು] ಮುಂಗೊಂಡು ಹೊದಿಕೆಯೋಪಾದಿಯಲ್ಲಿ ಕಾಣಿಸುವವು’ ಎಂದು ದೇವರು ಹೇಳುತ್ತಾನೆ. (ಯೋಬ 38:12-14) ಮೃದುವಾದ ಜೇಡಿಮಣ್ಣಿನ ಮೇಲೆ ಒಂದು ಮುದ್ರೆಯಿಂದ ಅಚ್ಚೊತ್ತಿದಾಗ, ಆ ಮುದ್ರೆಯ ಮೇಲಿರುವ ಚಿಹ್ನೆಯಿಂದ ಜೇಡಿಮಣ್ಣು ರೂಪಾಂತರಹೊಂದುವಂತೆಯೇ, ಸೂರ್ಯನಿಂದ ಹೆಚ್ಚೆಚ್ಚು ಬೆಳಕು ಪ್ರಕಾಶಿಸತೊಡಗಿದಂತೆ ಭೂಮಿಯ ತೋರಿಕೆಯು ಹೆಚ್ಚು ಸ್ಪಷ್ಟವಾಗುತ್ತದೆ ಮತ್ತು ಹೆಚ್ಚು ವಿಶಿಷ್ಟವಾಗಿ ಕಂಡುಬರುತ್ತದೆ.
2 ಯೆಹೋವನು ಆಧ್ಯಾತ್ಮಿಕ ಬೆಳಕಿನ ಮೂಲನೂ ಆಗಿದ್ದಾನೆ. (ಕೀರ್ತನೆ 43:3) ಲೋಕವು ಕಗ್ಗತ್ತಲೆಯಲ್ಲಿ ಉಳಿದಿರುವಾಗ, ಸತ್ಯ ದೇವರು ತನ್ನ ಜನರ ಮೇಲೆ ಬೆಳಕು ಬೀರುವುದನ್ನು ಮುಂದುವರಿಸುತ್ತಾನೆ. ಇದರ ಫಲಿತಾಂಶವೇನು? ಬೈಬಲ್ ಉತ್ತರಿಸುವುದು: “ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.” (ಜ್ಞಾನೋಕ್ತಿ 4:18) ಯೆಹೋವನಿಂದ ಒದಗಿಸಲ್ಪಡುವ ಹೆಚ್ಚಿನ ಬೆಳಕು ಆತನ ಜನರ ಮಾರ್ಗವನ್ನು ಪ್ರಕಾಶಿಸುತ್ತಾ ಇರುತ್ತದೆ. ಇದು ಅವರನ್ನು ಸಂಘಟನಾತ್ಮಕವಾಗಿ, ಸೈದ್ಧಾಂತಿಕವಾಗಿ ಮತ್ತು ನೈತಿಕವಾಗಿ ಪರಿಷ್ಕರಿಸುತ್ತದೆ.
ಹೆಚ್ಚಿನ ಆಧ್ಯಾತ್ಮಿಕ ಬೆಳಕು ಸಂಘಟನಾತ್ಮಕ ಹೊಂದಾಣಿಕೆಗಳಿಗೆ ನಡಿಸುತ್ತದೆ
3. ಯೆಶಾಯ 60:17ರಲ್ಲಿ ಏನನ್ನು ವಾಗ್ದಾನಿಸಲಾಗಿದೆ?
3 ಪ್ರವಾದಿಯಾದ ಯೆಶಾಯನ ಮೂಲಕ ಯೆಹೋವನು ಮುಂತಿಳಿಸಿದ್ದು: “ತಾಮ್ರಕ್ಕೆ ಬದಲಾಗಿ ಚಿನ್ನವನ್ನು, ಕಬ್ಬಿಣಕ್ಕೆ ಪ್ರತಿಯಾಗಿ ಬೆಳ್ಳಿಯನ್ನು, ಮರವಿದ್ದಲ್ಲಿ ತಾಮ್ರವನ್ನು, ಕಲ್ಲುಗಳ ಸ್ಥಾನದಲ್ಲಿ ಕಬ್ಬಿಣವನ್ನು ಒದಗಿಸುವೆನು.” (ಯೆಶಾಯ 60:17) ಕಡಿಮೆ ಗುಣಮಟ್ಟದ ವಸ್ತುವಿಗೆ ಬದಲಾಗಿ ಉತ್ತಮ ಗುಣಮಟ್ಟದ ವಸ್ತುವನ್ನು ಉಪಯೋಗಿಸುವುದು ಸುಧಾರಣೆಯನ್ನು ಸೂಚಿಸುವಂತೆಯೇ, “ವಿಷಯಗಳ ವ್ಯವಸ್ಥೆಯ ಅಂತ್ಯ” (NW) ಅಥವಾ “ಕಡೇ ದಿವಸಗಳ” ಆದ್ಯಂತ ಯೆಹೋವನ ಸಾಕ್ಷಿಗಳು ತಮ್ಮ ಸಂಘಟನಾತ್ಮಕ ಏರ್ಪಾಡುಗಳಲ್ಲಿ ಸುಧಾರಣೆಗಳನ್ನು ಅನುಭವಿಸಿದ್ದಾರೆ.—ಮತ್ತಾಯ 24:3; 2 ತಿಮೊಥೆಯ 3:1.
4. ಇಸವಿ 1919ರಲ್ಲಿ ಯಾವ ಏರ್ಪಾಡು ಕಾರ್ಯರೂಪಕ್ಕೆ ತರಲ್ಪಟ್ಟಿತು, ಮತ್ತು ಇದು ಹೇಗೆ ಪ್ರಯೋಜನದಾಯಕವಾಗಿತ್ತು?
4 ಕಡೇ ದಿವಸಗಳ ಆರಂಭದ ಭಾಗದಲ್ಲಿ, ಬೈಬಲ್ ವಿದ್ಯಾರ್ಥಿಗಳ—ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳು ಈ ಹೆಸರಿನಿಂದ ಪ್ರಸಿದ್ಧರಾಗಿದ್ದರು—ಸಭೆಗಳು ತಮ್ಮ ಹಿರಿಯರನ್ನು ಮತ್ತು ಡೀಕನರನ್ನು ಪ್ರಜಾಪ್ರಭುತ್ವಾತ್ಮಕವಾಗಿ ಚುನಾಯಿಸುತ್ತಿದ್ದವು. ಆದರೆ ಕೆಲವು ಹಿರಿಯರಿಗೆ ಯಥಾರ್ಥವಾದ ಸೌವಾರ್ತಿಕ ಮನೋಭಾವವಿರಲಿಲ್ಲ. ಕೆಲವರು ಸಾರುವ ಕೆಲಸದಲ್ಲಿ ಭಾಗವಹಿಸಲು ಸ್ವತಃ ಹಿಂಜರಿಯುತ್ತಿದ್ದರು ಮಾತ್ರವಲ್ಲ ಅದರಲ್ಲಿ ಪಾಲ್ಗೊಳ್ಳುವುದರಿಂದ ಇತರರನ್ನೂ ನಿರುತ್ತೇಜಿಸುತ್ತಿದ್ದರು. ಆದುದರಿಂದ, 1919ರಲ್ಲಿ ಪ್ರತಿಯೊಂದು ಸಭೆಯಲ್ಲಿ ಒಂದು ಹೊಸ ಜವಾಬ್ದಾರಿಯುತ ಸ್ಥಾನವು ಆರಂಭಿಸಲ್ಪಟ್ಟಿತು. ಇದು ಒಬ್ಬ ಸರ್ವಿಸ್ ಡೈರೆಕ್ಟರನ ಸ್ಥಾನವಾಗಿತ್ತು. ಈ ಸರ್ವಿಸ್ ಡೈರೆಕ್ಟರನು ಸಭೆಯಿಂದ ಚುನಾಯಿಸಲ್ಪಡುತ್ತಿರಲಿಲ್ಲ, ಬದಲಾಗಿ ದೇವಜನರ ಬ್ರಾಂಚ್ ಆಫೀಸ್ನಿಂದ ಈ ಸ್ಥಾನಕ್ಕೆ ದೇವಪ್ರಭುತ್ವಾತ್ಮಕವಾಗಿ ನೇಮಿಸಲ್ಪಡುತ್ತಿದ್ದನು. ಅವನ ಜವಾಬ್ದಾರಿಗಳಲ್ಲಿ, ಸಾರುವ ಕೆಲಸವನ್ನು ಸಂಘಟಿಸುವುದು, ಟೆರಿಟೊರಿಗಳನ್ನು ನೇಮಿಸುವುದು ಮತ್ತು ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವುದನ್ನು ಉತ್ತೇಜಿಸುವುದು ಒಳಗೂಡಿತ್ತು. ತದನಂತರದ ವರ್ಷಗಳಲ್ಲಿ ರಾಜ್ಯ ಸಾರುವಿಕೆಯ ಕೆಲಸಕ್ಕೆ ಭಾರೀ ಪ್ರಚೋದನೆಯು ದೊರಕಿತು.
5. ಯಾವ ಹೊಂದಾಣಿಕೆಯು 1920ರ ದಶಕದಲ್ಲಿ ಕಾರ್ಯರೂಪಕ್ಕೆ ತರಲ್ಪಟ್ಟಿತು?
5 ಇಸವಿ 1922ರಲ್ಲಿ ಯು.ಎಸ್.ಎ., ಒಹಾಯೋದ ಸೀಡರ್ ಪಾಯಿಂಟ್ನಲ್ಲಿ ನಡೆದ ಬೈಬಲ್ ವಿದ್ಯಾರ್ಥಿಗಳ ಅಧಿವೇಶನದಲ್ಲಿ ಕೊಡಲ್ಪಟ್ಟ “ರಾಜನನ್ನೂ ಅವನ ರಾಜ್ಯವನ್ನೂ ಪ್ರಕಟಿಸಿರಿ, ಪ್ರಕಟಿಸಿರಿ, ಪ್ರಕಟಿಸಿರಿ” ಎಂಬ ಉತ್ತೇಜನದಿಂದಾಗಿ ಸಭೆಯಲ್ಲಿರುವವರೆಲ್ಲರು ಇನ್ನಷ್ಟು ಪುನಶ್ಚೈತನ್ಯವನ್ನು ಪಡೆದುಕೊಂಡರು. 1927ರಷ್ಟಕ್ಕೆ ಕ್ಷೇತ್ರ ಸೇವೆಯು ಎಷ್ಟರ ಮಟ್ಟಿಗೆ ಸಂಘಟಿಸಲ್ಪಟ್ಟಿತ್ತೆಂದರೆ, ಮನೆಯಿಂದ ಮನೆಗೆ ಸಾರುವ ಕೆಲಸದಲ್ಲಿ ಭಾಗವಹಿಸಲಿಕ್ಕಾಗಿ ಭಾನುವಾರವು ಅತಿ ಹೆಚ್ಚು ಅನುಕೂಲಕರವಾದ ದಿನವಾಗಿ ಪರಿಗಣಿಸಲ್ಪಟ್ಟಿತ್ತು. ಅದೇ ದಿನವೇಕೆ? ಏಕೆಂದರೆ ಭಾನುವಾರದಂದು ಅಧಿಕಾಂಶ ಜನರಿಗೆ ಕೆಲಸದ ರಜೆಯಿರುತ್ತಿತ್ತು. ಇಂದು ಸಹ, ಜನರು ಹೆಚ್ಚಾಗಿ ಮನೆಯಲ್ಲಿ ಇರಬಹುದಾದಂಥ ಸಮಯಗಳಲ್ಲಿ ಅಂದರೆ ವಾರಾಂತ್ಯಗಳಲ್ಲಿ ಮತ್ತು ಸಾಯಂಕಾಲಗಳಲ್ಲಿ ಅವರನ್ನು ಭೇಟಿಯಾಗಲು ಪ್ರಯತ್ನಿಸುವ ಮೂಲಕ ಯೆಹೋವನ ಸಾಕ್ಷಿಗಳು ಇದೇ ಮನೋಭಾವವನ್ನು ತೋರಿಸುತ್ತಾರೆ.
6. ಇಸವಿ 1931ರಲ್ಲಿ ಯಾವ ಠರಾವನ್ನು ಅಂಗೀಕರಿಸಲಾಯಿತು, ಮತ್ತು ಇದು ರಾಜ್ಯ ಸಾರುವಿಕೆಯ ಕೆಲಸದ ಮೇಲೆ ಹೇಗೆ ಪರಿಣಾಮ ಬೀರಿತು?
6 ಇಸವಿ 1931, ಜುಲೈ 26ರ ಭಾನುವಾರ ಮಧ್ಯಾಹ್ನ, ಪ್ರಥಮವಾಗಿ ಯು.ಎಸ್.ಎ., ಒಹಾಯೋದ ಕೊಲಂಬಸ್ನಲ್ಲಿ ನಡೆದ ಅಧಿವೇಶನವೊಂದರಲ್ಲಿ ಮತ್ತು ತದನಂತರ ಲೋಕವ್ಯಾಪಕವಾಗಿ ಒಂದು ಠರಾವು ಅಂಗೀಕರಿಸಲ್ಪಟ್ಟಾಗ, ರಾಜ್ಯ ಸಾರುವಿಕೆಯ ಕೆಲಸಕ್ಕೆ ಇನ್ನೂ ಹೆಚ್ಚಿನ ಪ್ರಚೋದನೆಯು ಸಿಕ್ಕಿತು. ಆ ಠರಾವಿನ ಒಂದು ಭಾಗವು ಹೀಗೆ ತಿಳಿಸುತ್ತದೆ: “ನಾವು ಯೆಹೋವ ದೇವರ ಸೇವಕರಾಗಿದ್ದೇವೆ, ಆತನ ಹೆಸರಿನಲ್ಲಿ ಮತ್ತು ಆತನ ಆಜ್ಞೆಗೆ ವಿಧೇಯತೆಯಲ್ಲಿ ಒಂದು ಕೆಲಸವನ್ನು ಮಾಡುವಂತೆ ಆಜ್ಞಾಪಿಸಲ್ಪಟ್ಟಿದ್ದೇವೆ; ಅದು ಯೇಸು ಕ್ರಿಸ್ತನ ಕುರಿತಾದ ಸಾಕ್ಷ್ಯವನ್ನು ನೀಡುವುದು ಹಾಗೂ ಯೆಹೋವನು ಸತ್ಯವಂತನಾದ ಮತ್ತು ಸರ್ವಶಕ್ತನಾದ ದೇವರಾಗಿದ್ದಾನೆ ಎಂಬುದನ್ನು ಜನರಿಗೆ ತಿಳಿಯಪಡಿಸುವುದೇ ಆಗಿದೆ; ಆದುದರಿಂದ ಕರ್ತನಾದ ದೇವರೇ ತಿಳಿಸಿರುವಂಥ ಹೆಸರನ್ನು ನಾವು ಆನಂದದಿಂದ ಸ್ವೀಕರಿಸುತ್ತೇವೆ ಮತ್ತು ಅಂಗೀಕರಿಸುತ್ತೇವೆ, ಹಾಗೂ ಅದೇ ಹೆಸರಿನಿಂದ ಪ್ರಸಿದ್ಧರಾಗಬೇಕು ಮತ್ತು ಅದೇ ಹೆಸರಿನಿಂದ ಕರೆಯಲ್ಪಡಬೇಕು ಎಂಬುದು ನಮ್ಮ ಬಯಕೆಯಾಗಿದೆ. ಯೆಹೋವನ ಸಾಕ್ಷಿಗಳು ಎಂಬುದೇ ಆ ಹೆಸರಾಗಿದೆ.” (ಯೆಶಾಯ 43:10) ಆ ಹೊಸ ಹೆಸರು, ಈ ಹೆಸರನ್ನು ಹೊಂದಿರುವವರೆಲ್ಲರ ಮೂಲಭೂತ ಚಟುವಟಿಕೆಯನ್ನು ಎಷ್ಟು ಸ್ಪಷ್ಟವಾಗಿ ನಿರೂಪಿಸಿತು! ಹೌದು, ತನ್ನ ಎಲ್ಲ ಸೇವಕರು ಪಾಲ್ಗೊಳ್ಳಲಿಕ್ಕಾಗಿ ಯೆಹೋವನು ಒಂದು ಕೆಲಸವನ್ನು ವಹಿಸಿಕೊಟ್ಟನು. ಒಟ್ಟಿನಲ್ಲಿ ಹೇಳುವುದಾದರೆ, ನಿಜವಾಗಿಯೂ ಈ ಠರಾವಿಗೆ ಅತ್ಯುತ್ಸಾಹದ ಪ್ರತಿಕ್ರಿಯೆಯು ದೊರಕಿತು!
7. ಇಸವಿ 1932ರಲ್ಲಿ ಯಾವ ಬದಲಾವಣೆಯು ಜಾರಿಗೆ ಬಂತು, ಮತ್ತು ಏಕೆ?
7 ಅನೇಕ ಹಿರಿಯರು ದೀನಭಾವದಿಂದ ಸಾರುವ ಕೆಲಸಕ್ಕೆ ತಮ್ಮನ್ನು ಸಂಪೂರ್ಣ ರೀತಿಯಲ್ಲಿ ನೀಡಿಕೊಂಡರು. ಆದರೂ ಕೆಲವು ಸ್ಥಳಗಳಲ್ಲಿ, ಸಭೆಯಲ್ಲಿರುವ ಪ್ರತಿಯೊಬ್ಬರೂ ಸಾರ್ವಜನಿಕ ಶುಶ್ರೂಷೆಯಲ್ಲಿ ಭಾಗವಹಿಸಬೇಕು ಎಂಬ ವಿಚಾರವನ್ನು ಚುನಾಯಿತ ಹಿರಿಯರು ಗಮನಾರ್ಹ ರೀತಿಯಲ್ಲಿ ವಿರೋಧಿಸಿದರು. ಆದರೆ, ಸ್ವಲ್ಪದರಲ್ಲೇ ಇನ್ನೂ ಹೆಚ್ಚಿನ ಸುಧಾರಣೆಗಳು ಸಂಭವಿಸಲಿದ್ದವು. 1932ರಲ್ಲಿ, ಹಿರಿಯರನ್ನು ಮತ್ತು ಡೀಕನರನ್ನು ಚುನಾಯಿಸುವುದನ್ನು ನಿಲ್ಲಿಸುವಂತೆ ಕಾವಲಿನಬುರುಜು ಪತ್ರಿಕೆಯ ಮೂಲಕ ಸಭೆಗಳಿಗೆ ಸಲಹೆ ನೀಡಲಾಯಿತು. ಅದಕ್ಕೆ ಬದಲಾಗಿ, ಸಾರ್ವಜನಿಕ ಸಾರುವ ಕೆಲಸದಲ್ಲಿ ಭಾಗವಹಿಸುವಂಥ ಆಧ್ಯಾತ್ಮಿಕ ಪುರುಷರಿಂದ ರಚಿತವಾದ ಒಂದು ಸೇವಾ ಕಮಿಟಿಯನ್ನು ಅವರು ಚುನಾಯಿಸಬೇಕಾಗಿತ್ತು. ಹೀಗೆ, ಶುಶ್ರೂಷೆಯಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಳ್ಳುತ್ತಿದ್ದಂಥ ವ್ಯಕ್ತಿಗಳಿಗೆ ಮೇಲ್ವಿಚಾರಣೆಯ ಕೆಲಸವು ವಹಿಸಿಕೊಡಲ್ಪಟ್ಟಿತು ಮತ್ತು ಈ ಕೆಲಸವು ಮುಂದುವರಿಯಿತು.
ಹೆಚ್ಚಾದ ಬೆಳಕಿನಿಂದಾಗಿ ಇನ್ನೂ ಹೆಚ್ಚು ಸುಧಾರಣೆಗಳು
8. ಇಸವಿ 1938ರಲ್ಲಿ ಯಾವ ಹೊಂದಾಣಿಕೆಯು ಜಾರಿಗೆ ತರಲ್ಪಟ್ಟಿತು?
8 ಬೆಳಕು ಇನ್ನಷ್ಟು “ಹೆಚ್ಚುತ್ತಾ” ಬರುತ್ತಿತ್ತು. 1938ರಲ್ಲಿ ಚುನಾವಣೆಗಳ ಉಪಯೋಗವನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು. ಸಭೆಯಲ್ಲಿರುವ ಎಲ್ಲ ಸೇವಕರು, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೇಲ್ವಿಚಾರಣೆಯ ಕೆಳಗೆ ದೇವಪ್ರಭುತ್ವಾತ್ಮಕವಾಗಿ ನೇಮಿಸಲ್ಪಡಬೇಕಾಗಿತ್ತು. (ಮತ್ತಾಯ 24:45-47) ಈ ಬದಲಾವಣೆಯು ಹೆಚ್ಚುಕಡಿಮೆ ಯೆಹೋವನ ಸಾಕ್ಷಿಗಳ ಎಲ್ಲ ಸಭೆಗಳಿಂದ ಸುಲಭವಾಗಿಯೇ ಸ್ವೀಕರಿಸಲ್ಪಟ್ಟಿತು, ಮತ್ತು ಸಾಕ್ಷಿಕಾರ್ಯವು ಫಲಭರಿತವಾಗಿ ಮುಂದುವರಿಯಿತು.
9. ಇಸವಿ 1972ರಲ್ಲಿ ಯಾವ ಏರ್ಪಾಡು ಆರಂಭಿಸಲ್ಪಟ್ಟಿತು, ಮತ್ತು ಇದು ಒಂದು ಸುಧಾರಣೆಯಾಗಿತ್ತೇಕೆ?
9 ಇಸವಿ 1972, ಅಕ್ಟೋಬರ್ 1ರ ಆರಂಭದಿಂದ, ಸಭೆಯ ಮೇಲ್ವಿಚಾರಣೆಯಲ್ಲಿ ಇನ್ನೊಂದು ಹೊಂದಾಣಿಕೆಯನ್ನು ಕಾರ್ಯರೂಪಕ್ಕೆ ತರಲಾಯಿತು. ಸಭೆಯಲ್ಲಿ ಕೇವಲ ಒಬ್ಬ ಸಭಾ ಸೇವಕನು ಅಥವಾ ಮೇಲ್ವಿಚಾರಕನು ಮೇಲ್ವಿಚಾರಣೆ ಮಾಡುವುದಕ್ಕೆ ಬದಲಾಗಿ, ಹಿರಿಯರ ಒಂದು ಮಂಡಲಿಯು ಮೇಲ್ವಿಚಾರಣೆ ನಡೆಸುವ ಏರ್ಪಾಡನ್ನು ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಆರಂಭಿಸಲಾಯಿತು. ಈ ಹೊಸ ಏರ್ಪಾಡು, ಸಭೆಯಲ್ಲಿ ಮುಂದಾಳುತ್ವ ವಹಿಸಲು ಅರ್ಹರಾಗುವಂತೆ ಪ್ರೌಢ ಪುರುಷರಿಗೆ ಭಾರೀ ಪ್ರಚೋದನೆಯನ್ನು ನೀಡಿದೆ. (1 ತಿಮೊಥೆಯ 3:1-7) ಇದರ ಫಲಿತಾಂಶವಾಗಿ, ಅನೇಕ ಸಹೋದರರು ಸಭಾ ಜವಾಬ್ದಾರಿಗಳನ್ನು ನಿರ್ವಹಿಸುವುದರಲ್ಲಿ ಅನುಭವವನ್ನು ಪಡೆದುಕೊಂಡಿದ್ದಾರೆ. ಅವರು, ಬೈಬಲ್ ಸತ್ಯವನ್ನು ಅಂಗೀಕರಿಸಿರುವ ಅನೇಕ ಹೊಸಬರನ್ನು ಪರಿಪಾಲಿಸುವುದರಲ್ಲಿ ಎಷ್ಟು ಅಮೂಲ್ಯರಾಗಿ ಪರಿಣಮಿಸಿದ್ದಾರೆ!
10. ಇಸವಿ 1976ರಲ್ಲಿ ಯಾವ ಏರ್ಪಾಡು ಜಾರಿಗೆ ತರಲ್ಪಟ್ಟಿತು?
10 ಆಡಳಿತ ಮಂಡಲಿಯ ಸದಸ್ಯರು ಆರು ಕಮಿಟಿಗಳಾಗಿ ಸಂಘಟಿಸಲ್ಪಟ್ಟರು ಮತ್ತು 1976ರ ಜನವರಿ 1ರಿಂದ ಆರಂಭಿಸಿ, ಭೂವ್ಯಾಪಕವಾಗಿರುವ ಸಂಘಟನೆಯ ಮತ್ತು ಸಭೆಗಳ ಎಲ್ಲ ಚಟುವಟಿಕೆಗಳು ಈ ಕಮಿಟಿಗಳ ಮೇಲ್ವಿಚಾರಣೆಯ ಕೆಳಗೆ ಬಂದವು. ರಾಜ್ಯ ಕೆಲಸದ ಎಲ್ಲ ಅಂಶಗಳು ‘ಬಹು ಮಂದಿ ಆಲೋಚನಾಪರರಿಂದ’ ನಿರ್ದೇಶಿಸಲ್ಪಡುವುದು ಎಂಥ ಒಂದು ಆಶೀರ್ವಾದವಾಗಿ ರುಜುವಾಗಿದೆ!—ಜ್ಞಾನೋಕ್ತಿ 15:22; 24:6.
11. ಇಸವಿ 1992ರಲ್ಲಿ ಯಾವ ಹೊಂದಾಣಿಕೆಯು ಮಾಡಲ್ಪಟ್ಟಿತು, ಮತ್ತು ಏಕೆ?
11 ಇಸವಿ 1992ರಲ್ಲಿ ಇನ್ನೊಂದು ಹೊಂದಾಣಿಕೆಯು ಮಾಡಲ್ಪಟ್ಟಿತು. ಇದು ಇಸ್ರಾಯೇಲ್ಯರು ಹಾಗೂ ಇತರರು ಬಾಬೆಲಿನ ಬಂಧಿವಾಸದಿಂದ ಹಿಂದಿರುಗಿದ ಬಳಿಕ ಏನು ಸಂಭವಿಸಿತೋ ಅದಕ್ಕೆ ತುಲನಾತ್ಮಕವಾಗಿದೆ. ಹಿಂದೆ ಆ ಸಮಯದಲ್ಲಿ, ದೇವಾಲಯದ ಸೇವೆಯನ್ನು ನೋಡಿಕೊಳ್ಳಲಿಕ್ಕಾಗಿ ಸಾಕಷ್ಟು ಸಂಖ್ಯೆಯ ಲೇವಿಯರು ಇರಲಿಲ್ಲ. ಆದುದರಿಂದ ಲೇವಿಯರಿಗೆ ಸಹಾಯಮಾಡುವುದರಲ್ಲಿ ಇಸ್ರಾಯೇಲ್ಯರಲ್ಲದ ನೆತಿನಿಮರಿಗೆ ಹೆಚ್ಚಿನ ಕೆಲಸವು ಕೊಡಲ್ಪಟ್ಟಿತ್ತು. ತದ್ರೀತಿಯಲ್ಲಿ, ಭೂಮಿಯ ಕೆಲಸದ ಕಡೆಗೆ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗಕ್ಕಿರುವ ಹೆಚ್ಚಿನ ಜವಾಬ್ದಾರಿಗಳನ್ನು ನಿರ್ವಹಿಸುವುದರಲ್ಲಿ ನೆರವು ನೀಡಲಿಕ್ಕಾಗಿ, 1992ರಲ್ಲಿ ‘ಬೇರೆ ಕುರಿಗಳಲ್ಲಿ’ ಕೆಲವರಿಗೆ ಹೆಚ್ಚಿನ ಸೇವಾ ಜವಾಬ್ದಾರಿಗಳನ್ನು ವಹಿಸಿಕೊಡಲಾಯಿತು. ಇವರನ್ನು ಆಡಳಿತ ಮಂಡಲಿಯ ಕಮಿಟಿಗಳಿಗೆ ಸಹಾಯಕರನ್ನಾಗಿ ನೇಮಿಸಲಾಯಿತು.—ಯೋಹಾನ 10:16.
12. ಯೆಹೋವನು ಹೇಗೆ ಶಾಂತಿಯನ್ನು ನಮ್ಮ ಮೇಲ್ವಿಚಾರಕರನ್ನಾಗಿ ನೇಮಿಸಿದ್ದಾನೆ?
12 ಈ ಎಲ್ಲ ಹೊಂದಾಣಿಕೆಗಳ ಫಲಿತಾಂಶವೇನು? “ಸಮಾಧಾನವನ್ನು ನಿನಗೆ ಅಧಿಪತಿಯನ್ನಾಗಿ ಧರ್ಮವನ್ನು [ನೀತಿಯನ್ನು] ನಿನಗೆ ಅಧಿಕಾರಿಯನ್ನಾಗಿ ನೇಮಿಸುವೆನು” ಎಂದು ಯೆಹೋವನು ಹೇಳುತ್ತಾನೆ. (ಯೆಶಾಯ 60:17) ಇಂದು ಯೆಹೋವನ ಸೇವಕರ ನಡುವೆ “ಸಮಾಧಾನ” ಅಥವಾ ಶಾಂತಿ ಇದೆ, ಮತ್ತು “ನೀತಿಯ” ಕಡೆಗಿನ ಪ್ರೀತಿಯು ಅವರ ‘ಅಧಿಕಾರಿಯಾಗಿ’ ಪರಿಣಮಿಸಿದ್ದಾನೆ; ಇದು ಅವರು ದೇವರ ಸೇವೆಮಾಡುವಂತೆ ಪ್ರಚೋದಿಸುವ ಶಕ್ತಿಯಾಗಿದೆ. ರಾಜ್ಯ ಸಾರುವಿಕೆಯ ಮತ್ತು ಶಿಷ್ಯರನ್ನಾಗಿಮಾಡುವ ಕೆಲಸವನ್ನು ಮುಂದುವರಿಸಲು ಅವರು ಸುಸಂಘಟಿತರಾಗಿದ್ದಾರೆ.—ಮತ್ತಾಯ 24:14; 28:19, 20.
ಯೆಹೋವನು ಸಿದ್ಧಾಂತಗಳ ಬಗ್ಗೆಯೂ ಸ್ಪಷ್ಟವಾದ ಮಾಹಿತಿಯನ್ನು ನೀಡುತ್ತಾನೆ
13. ಕೆಲವು ಸಿದ್ಧಾಂತಗಳನ್ನು ಅರ್ಥಮಾಡಿಕೊಳ್ಳುವ ವಿಷಯದಲ್ಲಿ, 1920ರ ದಶಕದಲ್ಲಿ ಯೆಹೋವನು ತನ್ನ ಜನರ ಮಾರ್ಗವನ್ನು ಹೇಗೆ ಬೆಳಗಿಸಿದನು?
13 ಸಿದ್ಧಾಂತಗಳ ವಿಷಯದಲ್ಲಿಯೂ ಯೆಹೋವನು ತನ್ನ ಜನರ ಮಾರ್ಗವನ್ನು ಪ್ರಗತಿಪರವಾಗಿ ಬೆಳಗಿಸುತ್ತಿದ್ದಾನೆ. ಪ್ರಕಟನೆ 12:1-9 ಇದಕ್ಕೆ ಉದಾಹರಣೆಯನ್ನು ನೀಡುತ್ತದೆ. ಈ ವೃತ್ತಾಂತವು ಮೂರು ಸಾಂಕೇತಿಕ ಪಾತ್ರಧಾರಿಗಳ ಕುರಿತು ಮಾತಾಡುತ್ತದೆ—ಗರ್ಭಿಣಿಯಾಗಿದ್ದು ಮಗುವನ್ನು ಹೆರುವಂಥ ಒಬ್ಬ “ಸ್ತ್ರೀ,” ಒಂದು “ಘಟಸರ್ಪ” ಮತ್ತು ಒಂದು “ಗಂಡು ಮಗು.” ಇವರಲ್ಲಿ ಪ್ರತಿಯೊಬ್ಬರೂ ಯಾರನ್ನು ಪ್ರತಿನಿಧಿಸುತ್ತಾರೆಂಬುದು ನಿಮಗೆ ತಿಳಿದಿದೆಯೊ? 1925, ಮಾರ್ಚ್ 1ರ ಕಾವಲಿನಬುರುಜು ಪತ್ರಿಕೆಯಲ್ಲಿ (ಇಂಗ್ಲಿಷ್) ಕಂಡುಬಂದ “ಜನಾಂಗದ ಜನನ” ಎಂಬ ಶಿರೋನಾಮವುಳ್ಳ ಲೇಖನದಲ್ಲಿ ಇವರನ್ನು ಗುರುತಿಸಲಾಗಿತ್ತು. ಆ ಲೇಖನವು, ರಾಜ್ಯದ ಜನನದ ಕುರಿತಾದ ಪ್ರವಾದನೆಗಳ ಬಗ್ಗೆ ದೇವಜನರಿಗೆ ಹೆಚ್ಚು ಉತ್ತಮವಾದ ತಿಳಿವಳಿಕೆಯನ್ನು ನೀಡಿತು. ಈ ಒಳನೋಟವು, ಯೆಹೋವನ ಸಂಘಟನೆ ಮತ್ತು ಸೈತಾನನ ಸಂಘಟನೆ ಎಂಬ ಎರಡು ಭಿನ್ನ ಸಂಘಟನೆಗಳು ಅಸ್ತಿತ್ವದಲ್ಲಿವೆ ಎಂಬುದನ್ನು ಸ್ಪಷ್ಟಪಡಿಸಿತು. ತದನಂತರ 1927/28ರಲ್ಲಿ, ಕ್ರಿಸ್ಮಸ್ ಹಾಗೂ ಹುಟ್ಟುಹಬ್ಬದ ಆಚರಣೆಗಳು ಅಶಾಸ್ತ್ರೀಯವಾಗಿವೆ ಎಂಬುದನ್ನು ದೇವಜನರು ಮನಗಂಡರು ಮತ್ತು ಅವರು ಅವುಗಳನ್ನು ಆಚರಿಸುವುದನ್ನು ನಿಲ್ಲಿಸಿಬಿಟ್ಟರು.
14. ಯಾವ ಸೈದ್ಧಾಂತಿಕ ಸತ್ಯತೆಗಳು 1930ರ ದಶಕದಲ್ಲಿ ಸ್ಪಷ್ಟೀಕರಿಸಲ್ಪಟ್ಟವು?
14 ಇನ್ನೂ ಹೆಚ್ಚಿನ ಬೆಳಕು 1930ರ ದಶಕದಲ್ಲಿ ಮೂರು ಸೈದ್ಧಾಂತಿಕ ಸತ್ಯತೆಗಳ ಮೇಲೆ ಪ್ರಕಾಶಿಸಲ್ಪಟ್ಟಿತು. ಅನೇಕ ವರ್ಷಗಳ ವರೆಗೆ, ಪ್ರಕಟನೆ 7:9-17ರಲ್ಲಿ ಯಾರ ಕುರಿತು ತಿಳಿಸಲ್ಪಟ್ಟಿದೆಯೋ ಆ ಮಹಾ ಜನಸ್ತೋಮ ಅಥವಾ “ಮಹಾ ಸಮೂಹವು,” ಕ್ರಿಸ್ತನೊಂದಿಗೆ ರಾಜರಾಗಿಯೂ ಯಾಜಕರಾಗಿಯೂ ಆಳ್ವಿಕೆ ನಡಿಸುವಂಥ 1,44,000 ಮಂದಿಗಿಂತ ಭಿನ್ನವಾದದ್ದಾಗಿದೆ ಎಂಬುದು ಬೈಬಲ್ ವಿದ್ಯಾರ್ಥಿಗಳಿಗೆ ತಿಳಿದಿತ್ತು. (ಪ್ರಕಟನೆ 5:9, 10; 14:1-5) ಆದರೆ, ಈ ಮಹಾ ಜನಸ್ತೋಮದ ಗುರುತು ಮಾತ್ರ ಅಸ್ಪಷ್ಟವಾಗಿಯೇ ಉಳಿದಿತ್ತು. ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಿಂದಾಗಿ ಅಸ್ಪಷ್ಟವಾದ ವಸ್ತುಗಳು ಹೆಚ್ಚು ಸ್ಪಷ್ಟವಾಗಿ ಕಾಣುವಂತೆಯೇ, ಈ ಮಹಾ ಜನಸ್ತೋಮವು ಭೂಮಿಯ ಮೇಲೆ ಸದಾಕಾಲ ಜೀವಿಸುವ ಪ್ರತೀಕ್ಷೆಯೊಂದಿಗೆ “ಮಹಾ ಹಿಂಸೆಯನ್ನು” ಅಥವಾ ಮಹಾ ಸಂಕಟವನ್ನು ಪಾರಾಗುವವರಾಗಿದ್ದಾರೆ ಎಂದು 1935ರಲ್ಲಿ ಗ್ರಹಿಸಲಾಯಿತು. ತದನಂತರ ಇದೇ ವರ್ಷದಲ್ಲಿ ಇನ್ನೊಂದು ಸ್ಪಷ್ಟೀಕರಣವು ಬೆಳಕಿಗೆ ಬಂತು ಮತ್ತು ಇದು ಅನೇಕ ದೇಶಗಳಲ್ಲಿ ಯೆಹೋವನ ಸಾಕ್ಷಿಗಳ ನಡುವೆ ಇರುವ ಶಾಲಾ ವಯಸ್ಸಿನ ಮಕ್ಕಳ ಮೇಲೆ ಪ್ರಭಾವ ಬೀರಿತು. ಲೋಕದಾದ್ಯಂತ ದೇಶಪ್ರೇಮದ ಹುರುಪು ತೀವ್ರಗೊಳ್ಳುತ್ತಿದ್ದಾಗ, ಧ್ವಜವಂದನೆ ಮಾಡುವುದು ಕೇವಲ ಬಾಹ್ಯಾಚಾರವಾಗಿರುವುದಕ್ಕಿಂತಲೂ ಹೆಚ್ಚಿನ ಅರ್ಥವನ್ನು ಹೊಂದಿದೆ ಎಂಬುದನ್ನು ಸಾಕ್ಷಿಗಳು ಗ್ರಹಿಸಿದರು. ಮುಂದಿನ ವರ್ಷದಲ್ಲಿ, ಕ್ರಿಸ್ತನು ಶಿಲುಬೆಯ ಮೇಲೆ ಅಲ್ಲ ಬದಲಾಗಿ ಒಂದು ಕಂಭದ ಮೇಲೆ ಮರಣಪಟ್ಟನು ಎಂಬ ಇನ್ನೊಂದು ಸೈದ್ಧಾಂತಿಕ ಸತ್ಯವು ವಿವರಿಸಲ್ಪಟ್ಟಿತು.—ಅ. ಕೃತ್ಯಗಳು 10:39, 40.
15. ಯಾವಾಗ ಮತ್ತು ಹೇಗೆ ರಕ್ತದ ಪಾವಿತ್ರ್ಯವು ಒತ್ತಿಹೇಳಲ್ಪಟ್ಟಿತು?
15 ಗಾಯಗೊಂಡಿರುವ ಸೈನಿಕರಿಗೆ ರಕ್ತಪೂರಣದ ಚಿಕಿತ್ಸೆಯನ್ನು ನೀಡುವುದು ಸಾಮಾನ್ಯ ರೂಢಿಯಾಗಿದ್ದ ಎರಡನೇ ಲೋಕ ಯುದ್ಧದ ನಂತರದ ಕಾಲಾವಧಿಯಲ್ಲಿ, ರಕ್ತದ ಪಾವಿತ್ರ್ಯದ ಬಗ್ಗೆ ಹೆಚ್ಚಿನ ಬೆಳಕು ಬೀರಲ್ಪಟ್ಟಿತು. 1945, ಜುಲೈ 1ರ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯ ಸಂಚಿಕೆಯು, “ಯೆಹೋವನ ನೀತಿಯ ನೂತನ ಲೋಕದಲ್ಲಿ ನಿತ್ಯಜೀವವನ್ನು ಪಡೆಯಲು ಪ್ರಯತ್ನಿಸುವಂಥ ಆತನ ಆರಾಧಕರೆಲ್ಲರು, ರಕ್ತದ ಪಾವಿತ್ರ್ಯವನ್ನು ಗೌರವಿಸುವಂತೆ ಮತ್ತು ಈ ಅತ್ಯಾವಶ್ಯಕ ವಿಷಯದಲ್ಲಿ ದೇವರ ನೀತಿಯ ನಿಯಮಗಳಿಗೆ ಅನುಸಾರವಾಗಿ ನಡೆದುಕೊಳ್ಳುವಂತೆ” ಉತ್ತೇಜಿಸಿತು.
16. ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರವು ಯಾವಾಗ ಬಿಡುಗಡೆಮಾಡಲ್ಪಟ್ಟಿತು, ಮತ್ತು ಅದರ ಎರಡು ಗಮನಾರ್ಹ ವೈಶಿಷ್ಟ್ಯಗಳು ಯಾವುವು?
16 ಇಸವಿ 1946ರಲ್ಲಿ, ಅತ್ಯಾಧುನಿಕ ಪಾಂಡಿತ್ಯದ ಮಾರ್ಗದರ್ಶನದ ಮೇರೆಗೆ ಸಿದ್ಧಪಡಿಸಲಾಗುವ ಹಾಗೂ ಕ್ರೈಸ್ತಪ್ರಪಂಚದ ಸಂಪ್ರದಾಯಗಳ ಮೇಲಾಧಾರಿತವಾದ ಸಿದ್ಧಾಂತಗಳಿಂದ ಸ್ವಲ್ಪವೂ ಕಳಂಕಿತವಾಗಿರದಂಥ ಹೊಸ ಬೈಬಲ್ ಭಾಷಾಂತರದ ಆವಶ್ಯಕತೆಯು ಹೆಚ್ಚು ಸುವ್ಯಕ್ತವಾಯಿತು. 1947ರ ಡಿಸೆಂಬರ್ ತಿಂಗಳಿನಲ್ಲಿ ಇಂಥ ಒಂದು ಭಾಷಾಂತರದ ಕೆಲಸವು ಆರಂಭವಾಯಿತು. 1950ರಲ್ಲಿ, ಇಂಗ್ಲಿಷ್ ಭಾಷೆಯಲ್ಲಿ ಕ್ರೈಸ್ತ ಗ್ರೀಕ್ ಶಾಸ್ತ್ರಗಳ ನೂತನ ಲೋಕ ಭಾಷಾಂತರವು ಬಿಡುಗಡೆಮಾಡಲ್ಪಟ್ಟಿತು. 1953ರಿಂದ ಆರಂಭಿಸಿ, ಇಂಗ್ಲಿಷ್ ಭಾಷೆಯ ಹೀಬ್ರು ಶಾಸ್ತ್ರಗಳು ಪ್ರಗತಿಪರವಾಗಿ ಬಿಡುಗಡೆಮಾಡಲ್ಪಟ್ಟ ಐದು ಸಂಪುಟಗಳಲ್ಲಿ ಮುದ್ರಿಸಲ್ಪಟ್ಟವು. ಇದರ ಕೊನೆಯ ಸಂಪುಟವು 1960ರಲ್ಲಿ, ಅಂದರೆ ಈ ಭಾಷಾಂತರ ಕೆಲಸವು ಆರಂಭವಾಗಿ ಸುಮಾರು 12ಕ್ಕಿಂತ ಹೆಚ್ಚು ವರ್ಷಗಳ ಬಳಿಕ ಬಿಡುಗಡೆಮಾಡಲ್ಪಟ್ಟಿತು. 1961ರಲ್ಲಿ ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರವು (ಇಂಗ್ಲಿಷ್) ಸಂಪೂರ್ಣವಾಗಿ ಒಂದೇ ಸಂಪುಟದಲ್ಲಿ ಬಿಡುಗಡೆಮಾಡಲ್ಪಟ್ಟಿತು. ಇಂದು ಅನೇಕ ಭಾಷೆಗಳಲ್ಲಿ ಲಭ್ಯವಿರುವ ಈ ಭಾಷಾಂತರವು ಕೆಲವು ಗಮನಾರ್ಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಮೂಲ ಗ್ರಂಥಪಾಠಗಳಲ್ಲಿ ಯೆಹೋವನ ಹೆಸರು ಎಲ್ಲೆಲ್ಲ ಕಂಡುಬಂದಿದೆಯೋ ಅಲ್ಲೆಲ್ಲ ಈ ಹೆಸರನ್ನು ಒಳಗೂಡಿಸಿದೆ. ಅಷ್ಟುಮಾತ್ರವಲ್ಲ, ಮೂಲ ಬರಹಗಳನ್ನು ಇದು ಅಕ್ಷರಾರ್ಥವಾಗಿ ತರ್ಜುಮೆಮಾಡಿರುವುದು, ದೇವರ ವಾಕ್ಯದ ತಿಳಿವಳಿಕೆಯಲ್ಲಿ ಸತತವಾದ ಪ್ರಗತಿಗೆ ಆಧಾರವನ್ನು ಒದಗಿಸಿದೆ.
17. ಇಸವಿ 1962ರಲ್ಲಿ ಯಾವ ಹೆಚ್ಚಿನ ಬೆಳಕು ಪ್ರಕಾಶಿಸಲ್ಪಟ್ಟಿತು?
17 ರೋಮಾಪುರ 13:1ರಲ್ಲಿ ತಿಳಿಸಲ್ಪಟ್ಟಿರುವ ‘ಮೇಲಧಿಕಾರಿಗಳ’ ಕುರಿತಾದ ಸ್ಪಷ್ಟೀಕರಣ ಮತ್ತು ಅವರಿಗೆ ಕ್ರೈಸ್ತರು ಎಷ್ಟರ ಮಟ್ಟಿಗೆ ಅಧೀನರಾಗಿರಬೇಕು ಎಂಬ ವಿಷಯವು 1962ರಲ್ಲಿ ವಿವರಿಸಲ್ಪಟ್ಟಿತು. ರೋಮಾಪುರ 13ನೆಯ ಅಧ್ಯಾಯ ಮತ್ತು ತೀತ 3:1, 2 ಹಾಗೂ 1 ಪೇತ್ರ 2:13, 17ರಂಥ ಶಾಸ್ತ್ರೀಯ ವಚನಗಳ ಕುರಿತಾದ ಗಹನವಾದ ಅಧ್ಯಯನವು, ‘ಮೇಲಧಿಕಾರಿಗಳು’ ಎಂಬುದು ಯೆಹೋವ ದೇವರಿಗೆ ಮತ್ತು ಯೇಸು ಕ್ರಿಸ್ತನಿಗೆ ಅಲ್ಲ ಬದಲಾಗಿ ಮಾನವ ಸರಕಾರೀ ಅಧಿಕಾರಿಗಳಿಗೆ ಸೂಚಿತವಾಗಿದೆ ಎಂಬುದನ್ನು ಸ್ಪಷ್ಟಪಡಿಸಿತು.
18. ಯಾವ ಸತ್ಯತೆಗಳು 1980ರ ದಶಕದಲ್ಲಿ ಸ್ಪಷ್ಟೀಕರಿಸಲ್ಪಟ್ಟವು?
18 ತದನಂತರದ ವರ್ಷಗಳಲ್ಲಿ, ನೀತಿವಂತರ ಮಾರ್ಗವು ಇನ್ನಷ್ಟು ಪ್ರಕಾಶಮಾನವಾಗುತ್ತಾ ಮುಂದುವರಿಯಿತು. 1985ರಲ್ಲಿ, ‘ಜೀವಕ್ಕಾಗಿ’ ನೀತಿವಂತರೆಂದು ಮತ್ತು ದೇವರ ಸ್ನೇಹಿತರಾಗಿ ನೀತಿವಂತರೆಂದು ನಿರ್ಣಯವನ್ನು ಹೊಂದುವುದರ ಅರ್ಥವೇನು ಎಂಬುದರ ಮೇಲೆ ಹೆಚ್ಚಿನ ಬೆಳಕು ಬೀರಲ್ಪಟ್ಟಿತು. (ರೋಮಾಪುರ 5:18; ಯಾಕೋಬ 2:23) ಕ್ರೈಸ್ತ ಜೂಬಿಲಿಯ ಅರ್ಥವೇನು ಎಂಬುದು 1987ರಲ್ಲಿ ಸವಿಸ್ತಾರವಾಗಿ ವಿವರಿಸಲ್ಪಟ್ಟಿತು.
19. ಇತ್ತೀಚಿನ ವರ್ಷಗಳಲ್ಲಿ ಯೆಹೋವನು ತನ್ನ ಜನರಿಗೆ ಹೇಗೆ ಇನ್ನೂ ಹೆಚ್ಚು ಆಧ್ಯಾತ್ಮಿಕ ಬೆಳಕನ್ನು ಒದಗಿಸಿದ್ದಾನೆ?
19 ಇಸವಿ 1995ರಲ್ಲಿ, ‘ಆಡುಗಳಿಂದ ಕುರಿಗಳನ್ನು’ ಬೇರ್ಪಡಿಸುವ ವಿಷಯವು ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲ್ಪಟ್ಟಿತು. 1998ರಲ್ಲಿ, ಈಗಾಗಲೇ ನೆರವೇರಿಕೆಯನ್ನು ಪಡೆಯುತ್ತಿರುವ ಯೆಹೆಜ್ಕೇಲನ ಆಲಯದ ದರ್ಶನದ ಕುರಿತು ಸವಿಸ್ತಾರವಾದ ವಿವರಣೆಯು ನೀಡಲ್ಪಟ್ಟಿತು. 1999ರಲ್ಲಿ, ಯಾವಾಗ ಮತ್ತು ಹೇಗೆ ‘ಅಸಹ್ಯ ವಸ್ತುವು ಪವಿತ್ರ ಸ್ಥಾನದಲ್ಲಿ ನಿಂತುಕೊಳ್ಳುತ್ತದೆ’ ಎಂಬುದು ಸ್ಪಷ್ಟವಾಗಿ ತಿಳಿಸಲ್ಪಟ್ಟಿತು. (ಮತ್ತಾಯ 24:15, 16; 25:32) 2002ರಲ್ಲಿ, ದೇವರನ್ನು ‘ಆತ್ಮ ಮತ್ತು ಸತ್ಯದಿಂದ’ ಆರಾಧಿಸುವುದರ ಅರ್ಥವೇನು ಎಂಬ ವಿಷಯದಲ್ಲಿ ಹೆಚ್ಚಿನ ತಿಳಿವಳಿಕೆಯನ್ನು ಪಡೆದುಕೊಳ್ಳಲಾಯಿತು.—ಯೋಹಾನ 4:24.
20. ಇನ್ನಿತರ ಯಾವ ಕ್ಷೇತ್ರದಲ್ಲಿ ದೇವಜನರು ಹೊಂದಾಣಿಕೆಗಳನ್ನು ಮಾಡಿಕೊಂಡಿದ್ದಾರೆ?
20 ಸಂಘಟನಾತ್ಮಕ ಮತ್ತು ಸೈದ್ಧಾಂತಿಕ ಹೊಂದಾಣಿಕೆಗಳ ಜೊತೆಯಲ್ಲಿ, ಕ್ರೈಸ್ತ ನಡತೆಯ ವಿಷಯದಲ್ಲಿಯೂ ಹೊಂದಾಣಿಕೆಗಳು ಮಾಡಲ್ಪಟ್ಟಿವೆ. ಉದಾಹರಣೆಗೆ, 1973ರಲ್ಲಿ ತಂಬಾಕಿನ ಉಪಯೋಗವನ್ನು “ಶರೀರಾತ್ಮಗಳ ಕಲ್ಮಶ”ವಾಗಿ ಗ್ರಹಿಸಲಾಯಿತು ಮತ್ತು ಅದನ್ನು ಗಂಭೀರವಾದ ತಪ್ಪಾಗಿ ಪರಿಗಣಿಸಬೇಕಾಗಿತ್ತು. (2 ಕೊರಿಂಥ 7:1) ಒಂದು ದಶಕದ ಬಳಿಕ, 1983, ಜುಲೈ 15ರ ಕಾವಲಿನಬುರುಜು (ಇಂಗ್ಲಿಷ್) ಸಂಚಿಕೆಯು, ಕೋವಿಗಳ ಅಥವಾ ಬಂದೂಕುಗಳ ಉಪಯೋಗದ ವಿಷಯದಲ್ಲಿ ನಮ್ಮ ನಿಲುವು ಏನಾಗಿರಬೇಕು ಎಂಬುದನ್ನು ಸ್ಪಷ್ಟಪಡಿಸಿತು. ಇವು ನಮ್ಮ ಸಮಯದಲ್ಲಿ ಹೆಚ್ಚುತ್ತಾ ಬಂದಿರುವ ಬೆಳಕಿನ ಉದಾಹರಣೆಗಳಲ್ಲಿ ಕೇವಲ ಕೆಲವಾಗಿವೆ.
ಹೆಚ್ಚುತ್ತಿರುವ ಬೆಳಕಿನ ಮಾರ್ಗದಲ್ಲಿ ನಡೆಯುತ್ತಾ ಹೋಗಿ
21. ಯಾವ ಮನೋಭಾವವನ್ನು ಹೊಂದಿರುವುದು, ಹೆಚ್ಚುತ್ತಿರುವ ಬೆಳಕಿನ ಮಾರ್ಗದಲ್ಲಿ ನಡೆಯುತ್ತಾ ಹೋಗುವಂತೆ ನಮಗೆ ಸಹಾಯಮಾಡುವುದು?
21 ದೀರ್ಘಸಮಯದಿಂದ ಸೇವೆಸಲ್ಲಿಸುತ್ತಿರುವ ಒಬ್ಬ ಹಿರಿಯರು, “ಒಂದು ಪಂಥಾಹ್ವಾನವು ಎದುರಾಗುವಾಗ ಅದನ್ನು ಅಂಗೀಕರಿಸುವುದು ಮತ್ತು ಅದಕ್ಕೆ ಹೊಂದಿಕೊಳ್ಳುವುದು ಕಷ್ಟಕರವಾಗಿರಸಾಧ್ಯವಿದೆ” ಎಂದು ಒಪ್ಪಿಕೊಳ್ಳುತ್ತಾರೆ. ಅವರು ಒಬ್ಬ ರಾಜ್ಯ ಘೋಷಕರಾಗಿ ಕಳೆದಿರುವ 48 ವರ್ಷಗಳಾದ್ಯಂತ ಸ್ವತಃ ನೋಡಿರುವ ಅನೇಕ ಹೊಂದಾಣಿಕೆಗಳನ್ನು ಅಂಗೀಕರಿಸಲು ಯಾವುದು ಅವರಿಗೆ ಸಹಾಯಮಾಡಿದೆ? ಅವರು ಉತ್ತರಿಸುವುದು: “ಯೋಗ್ಯವಾದ ಮನೋಭಾವವನ್ನು ಹೊಂದಿರುವುದೇ ಇದಕ್ಕೆ ಕೀಲಿಕೈಯಾಗಿದೆ. ಒಂದು ಹೊಂದಾಣಿಕೆಯನ್ನು ಅಂಗೀಕರಿಸಲು ನಿರಾಕರಿಸುವುದು, ಸಂಘಟನೆಯು ಮುಂದೆ ಸಾಗುವಾಗ ನಾವು ಹಿಂದೆ ಉಳಿಯುವ ಅರ್ಥದಲ್ಲಿದೆ. ಯಾವುದೇ ಬದಲಾವಣೆಗಳನ್ನು ಅಂಗೀಕರಿಸುವುದು ತೀರ ಕಷ್ಟಕರವಾಗಿ ತೋರುವಂಥ ಸನ್ನಿವೇಶದಲ್ಲಿ ನಾನಿರುವಾಗ, ‘ಸ್ವಾಮೀ ನಿನ್ನನ್ನು ಬಿಟ್ಟು ಇನ್ನಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳುಂಟು’ ಎಂದು ಪೇತ್ರನು ಯೇಸುವಿಗೆ ಹೇಳಿದ ಮಾತುಗಳ ಕುರಿತು ನಾನು ಮನನಮಾಡುತ್ತೇನೆ. ತದನಂತರ, ‘ನಾನು ಇನ್ನಾರ ಬಳಿಗೆ ಹೋಗಲಿ—ಹೊರಗಿನ ಲೋಕದ ಅಂಧಕಾರಕ್ಕೊ?’ ಎಂದು ಸ್ವತಃ ಕೇಳಿಕೊಳ್ಳುತ್ತೇನೆ. ಇದು ದೇವರ ಸಂಘಟನೆಗೆ ಭದ್ರವಾಗಿ ಅಂಟಿಕೊಳ್ಳುವಂತೆ ನನಗೆ ಸಹಾಯಮಾಡುತ್ತದೆ.”—ಯೋಹಾನ 6:68.
22. ಬೆಳಕಿನಲ್ಲಿ ನಡೆಯುವ ಮೂಲಕ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳುತ್ತೇವೆ?
22 ನಮ್ಮ ಸುತ್ತಲಿರುವ ಲೋಕವು ನಿಶ್ಚಯವಾಗಿಯೂ ಕಾರ್ಗತ್ತಲಿನಲ್ಲಿದೆ. ಯೆಹೋವನು ತನ್ನ ಜನರ ಮೇಲೆ ಬೆಳಕನ್ನು ಪ್ರಕಾಶಿಸುತ್ತಾ ಮುಂದುವರಿದಂತೆ, ದೇವಜನರ ಮತ್ತು ಲೋಕದವರ ನಡುವೆ ಇರುವ ಅಂತರವು ಇನ್ನಷ್ಟು ಅಗಲವಾಗುತ್ತಾ ಹೋಗುತ್ತದೆ. ಈ ಬೆಳಕು ನಮಗಾಗಿ ಏನು ಮಾಡುತ್ತದೆ? ಕತ್ತಲೆಭರಿತವಾದ ಒಂದು ದಾರಿಯಲ್ಲಿರುವ ಆಳವಾದ ಗುಂಡಿಯ ಮೇಲೆ ಸ್ಪಾಟ್ಲೈಟನ್ನು ಬೀರುವುದು ಆ ಗುಂಡಿಯನ್ನು ಹೇಗೆ ತೆಗೆದುಹಾಕುವುದಿಲ್ಲವೋ ಅದೇ ರೀತಿಯಲ್ಲಿ ದೇವರ ವಾಕ್ಯದಿಂದ ಬರುವ ಬೆಳಕು ಪಾಶಗುಂಡಿಗಳನ್ನು ತೆಗೆದುಹಾಕುವುದಿಲ್ಲ. ಆದರೆ, ದೈವಿಕ ಬೆಳಕು ಆ ಪಾಶಗುಂಡಿಗಳಿಂದ ದೂರವಿರುವಂತೆ ಖಂಡಿತವಾಗಿಯೂ ನಮಗೆ ಸಹಾಯಮಾಡುತ್ತದೆ; ಇದರಿಂದ ನಾವು ಹೆಚ್ಚುತ್ತಿರುವ ಬೆಳಕಿನ ಮಾರ್ಗದಲ್ಲಿ ನಡೆಯುತ್ತಾ ಮುಂದುವರಿಯಲು ಸಾಧ್ಯವಾಗುತ್ತದೆ. ಆದುದರಿಂದ, ‘ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪದಂತಿರುವ’ ಯೆಹೋವನ ಪ್ರವಾದನ ವಾಕ್ಯಕ್ಕೆ ನಾವು ಯಾವಾಗಲೂ ಗಮನಕೊಡುತ್ತಾ ಇರೋಣ.—2 ಪೇತ್ರ 1:19.
ನಿಮಗೆ ನೆನಪಿದೆಯೆ?
• ಯೆಹೋವನು ತನ್ನ ಜನರಿಗೋಸ್ಕರ ಯಾವ ಸಂಘಟನಾತ್ಮಕ ಸುಧಾರಣೆಗಳನ್ನು ಕಾರ್ಯರೂಪಕ್ಕೆ ತಂದನು?
• ಹೆಚ್ಚಿನ ಬೆಳಕು ಸೈದ್ಧಾಂತಿಕವಾಗಿ ಯಾವ ಹೊಂದಾಣಿಕೆಗಳನ್ನು ಕಾರ್ಯರೂಪಕ್ಕೆ ತಂದಿದೆ?
• ಯಾವ ಸುಧಾರಣೆಗಳು ಕಾರ್ಯರೂಪಕ್ಕೆ ತರಲ್ಪಟ್ಟಿರುವುದನ್ನು ನೀವು ವ್ಯಕ್ತಿಗತವಾಗಿ ನೋಡಿದ್ದೀರಿ, ಮತ್ತು ಅವುಗಳನ್ನು ಅಂಗೀಕರಿಸಲು ಯಾವುದು ನಿಮಗೆ ಸಹಾಯಮಾಡಿದೆ?
• ನೀವು ಹೆಚ್ಚುತ್ತಾ ಬರುವ ಬೆಳಕಿನ ಮಾರ್ಗದಲ್ಲಿ ನಡೆಯುತ್ತಾ ಇರಲು ಬಯಸುವುದೇಕೆ?
[ಪುಟ 27ರಲ್ಲಿರುವ ಚಿತ್ರಗಳು]
1922ರಲ್ಲಿ ಒಹಾಯೋದ ಸೀಡರ್ ಪಾಯಿಂಟ್ನಲ್ಲಿ ನಡೆದ ಅಧಿವೇಶನವು, ದೇವರ ಕೆಲಸವನ್ನು ಮಾಡುವಂತೆ ಬೈಬಲ್ ವಿದ್ಯಾರ್ಥಿಗಳನ್ನು ಹುರಿದುಂಬಿಸಿತು
[ಪುಟ 29ರಲ್ಲಿರುವ ಚಿತ್ರ]
1950ರಲ್ಲಿ “ಕ್ರೈಸ್ತ ಗ್ರೀಕ್ ಶಾಸ್ತ್ರಗಳ ನೂತನ ಲೋಕ ಭಾಷಾಂತರ”ವು ಎನ್. ಏಚ್. ನಾರ್ರಿಂದ ಬಿಡುಗಡೆಮಾಡಲ್ಪಟ್ಟಿತು
[ಪುಟ 26ರಲ್ಲಿರುವ ಚಿತ್ರ ಕೃಪೆ]
© 2003 BiblePlaces.com