ತಾಯ್ತನದಲ್ಲಿ ತೃಪ್ತಿಯನ್ನು ಕಂಡುಕೊಳ್ಳಿರಿ
ಜಗತ್ತಿನಾದ್ಯಂತ ಇಂದು ಬಹುತೇಕ ಸ್ತ್ರೀಯರು ಮನೆಯ ಹೊರಗೆ ದುಡಿಯುತ್ತಾರೆ. ಔದ್ಯೋಗೀಕೃತ ರಾಷ್ಟ್ರಗಳಲ್ಲಂತೂ ಹೆಚ್ಚುಕಡಿಮೆ ಪುರುಷರಷ್ಟೇ ಸಂಖ್ಯೆಯ ಸ್ತ್ರೀಯರು ಉದ್ಯೋಗಸ್ಥರಾಗಿದ್ದಾರೆ. ಪ್ರಗತಿಶೀಲ ದೇಶಗಳಲ್ಲಿ ಮಹಿಳೆಯರು ತಮ್ಮ ಕುಟುಂಬಕ್ಕಾಗಿ ಹೊಲಗದ್ದೆಗಳಲ್ಲಿ ಗಂಟೆಗಟ್ಟಲೆ ದುಡಿಯುತ್ತಾರೆ.
ಲೆಕ್ಕವಿಲ್ಲದಷ್ಟು ವನಿತೆಯರು, ಒಂದೆಡೆ ತಮ್ಮ ಅಗತ್ಯಕ್ಕಾಗಿ ಕೆಲಸಮಾಡಿ ಹಣ ಸಂಪಾದಿಸುವ ಮತ್ತೊಂದೆಡೆ ತಮ್ಮ ಸಂಸಾರವನ್ನು ನೋಡಿಕೊಳ್ಳುವ ಅಡಕತ್ತರಿಯಲ್ಲಿ ಸಿಕ್ಕಿಕೊಂಡಿದ್ದಾರೆ. ಇಂಥ ಸ್ತ್ರೀಯರು ಊಟ, ಬಟ್ಟೆ, ವಸತಿಗೆ ಹಣ ಒದಗಿಸಬೇಕಾಗುತ್ತದೆ ಮಾತ್ರವಲ್ಲ ಅಡುಗೆಮಾಡಿ, ಬಟ್ಟೆ ಒಗೆದು, ಮನೆಶುಚಿಯಾಗಿಡುವ ಕೆಲಸವನ್ನೂ ಮಾಡಬೇಕಾಗುತ್ತದೆ.
ಇವೆಲ್ಲದರೊಂದಿಗೆ ಕ್ರೈಸ್ತ ತಾಯಂದಿರು ತಮ್ಮ ಮಕ್ಕಳಲ್ಲಿ ಆಧ್ಯಾತ್ಮಿಕ ಮೌಲ್ಯಗಳನ್ನು ಬೇರೂರಿಸಲು ಸಹ ಪ್ರಯಾಸಪಡುತ್ತಾರೆ. ಇಬ್ಬರು ಚಿಕ್ಕ ಹೆಣ್ಣುಮಕ್ಕಳಿರುವ ಕ್ರಿಸ್ಟೀನಾ ಎಂಬ ತಾಯಿಯೊಬ್ಬಳು ಒಪ್ಪಿಕೊಳ್ಳುವುದು: “ನಿಜ ಹೇಳಬೇಕಾದರೆ, ಹೊರಗಿನ ಕೆಲಸ ಮತ್ತು ಕುಟುಂಬ ಜವಾಬ್ದಾರಿಗಳನ್ನು ಸರಿದೂಗಿಸಿಕೊಂಡು ಹೋಗುವುದು ತುಂಬ ಕಷ್ಟ. ಅದರಲ್ಲೂ ಚಿಕ್ಕ ಮಕ್ಕಳಿದ್ದರಂತೂ ನಮ್ಮ ಪಾಡು ಅಷ್ಟೇ. ಮಕ್ಕಳ ಲಾಲನೆ-ಪಾಲನೆಗೆ ಸಂಪೂರ್ಣ ಗಮನಕೊಡಲು ಆಗುವುದೇ ಇಲ್ಲ.”
ಹೀಗೆ ಹೊರಗೆ ದುಡಿಯುವಂತೆ ಯಾವುದು ತಾಯಂದಿರ ಮೇಲೆ ಒತ್ತಡ ಹೇರುತ್ತದೆ? ಅವರು ಯಾವ ಸವಾಲುಗಳನ್ನು ಎದುರಿಸುತ್ತಾರೆ? ತಾಯ್ತನದಲ್ಲಿ ತೃಪ್ತಿಯನ್ನು ಕಂಡುಕೊಳ್ಳಲು ತಾಯೊಬ್ಬಳು ಉದ್ಯೋಗ ಮಾಡಬೇಕೆಂಬುದು ಅನಿವಾರ್ಯವೋ?
ತಾಯಂದಿರು ಉದ್ಯೋಗಸ್ಥರಾಗಿರಲು ಕಾರಣ?
ಅನೇಕ ತಾಯಂದಿರಿಗೆ ದಿನವಿಡೀ ದುಡಿಯುವುದು ಅಂದರೆ ಪೂರ್ಣಕಾಲಿಕ ನೌಕರಿ ಅನಿವಾರ್ಯವಾಗಿದೆ. ಕೆಲವರಿಗೆ ಮನೆಯ ಖರ್ಚುವೆಚ್ಚಗಳ ಹೊರೆಗೆ ಹೆಗಲುಕೊಡಲು ಗಂಡಂದಿರು ಇರುವುದಿಲ್ಲ. ಇತರ ದಂಪತಿಗಳು, ಕೇವಲ ಒಬ್ಬರ ಸಂಬಳದಿಂದ ಕುಟುಂಬದ ಮೂಲಭೂತ ಆವಶ್ಯಕತೆಗಳನ್ನು ಪೂರೈಸುವುದು ಕಷ್ಟವೆಂದು ಕಂಡುಕೊಂಡಿದ್ದಾರೆ.
ಆದರೆ ಎಲ್ಲ ತಾಯಂದಿರು ಹಣಕಾಸಿನ ತೊಂದರೆಯಿಂದಾಗಿಯೇ ಕೆಲಸಕ್ಕೆ ಹೊಗುತ್ತಿಲ್ಲವೆಂಬುದು ನಿಜ. ಗಮನಾರ್ಹ ಸಂಖ್ಯೆಯಷ್ಟು ಸ್ತ್ರೀಯರು ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬರಲಿಚ್ಛಿಸದ ಕಾರಣಕ್ಕಾಗಿ ಕೆಲಸಕ್ಕೆ ಹೋಗುತ್ತಾರೆ. ಕೆಲವರು ಇಷ್ಟ ಬಂದ ಹಾಗೆ ಹಣ ಖರ್ಚುಮಾಡಲಿಕ್ಕಾಗಿಯೋ ಸುಖ-ಸವಲತ್ತುಗಳನ್ನು ಪಡೆಯಲಿಕ್ಕಾಗಿಯೋ ಕೆಲಸಮಾಡಬಹುದು. ಇನ್ನೂ ಅನೇಕರು ನುರಿತವರಾಗಿದ್ದು ದುಡಿಮೆಯನ್ನು ಇಷ್ಟಪಟ್ಟು ಉದ್ಯೋಗಸ್ಥರಾಗಿದ್ದಾರೆ.
ಸಮವಯಸ್ಕರ ಒತ್ತಡವೂ ಇನ್ನೊಂದು ಕಾರಣವಾಗಿರಬಹುದು. ಉದ್ಯೋಗಸ್ಥ ತಾಯಂದಿರು ಒತ್ತಡ ಮತ್ತು ದಣಿವಿನೊಂದಿಗೆ ಸದಾ ಹೋರಾಡುತ್ತಾರೆಂದು ಅನೇಕ ಜನರು ಒಪ್ಪುತ್ತಾರೆ ನಿಜ. ಹಾಗಿದ್ದರೂ ಕೆಲಸಕ್ಕೆ ಹೋಗದೆ ಮನೆಯಲ್ಲಿರುವ ಸ್ತ್ರೀಯರು ಅನೇಕವೇಳೆ ಅಪಾರ್ಥಕ್ಕೆ ಒಳಗಾಗುವುದಲ್ಲದೆ ಅಣಕ ನುಡಿಗಳಿಗೂ ಗುರಿಯಾಗುತ್ತಾರೆ. ಒಬ್ಬಾಕೆ ಸ್ತ್ರೀ ಹೇಳಿದ್ದು: “‘ನಾನೊಬ್ಬಳು ಗೃಹಿಣಿ’ ಎಂದು ಇತರರಿಗೆ ಹೇಳುವುದು ಅಷ್ಟೇನೂ ಸುಲಭವಲ್ಲ. ಕೆಲವರು ತಮ್ಮ ಮಾತು ಅಥವಾ ಮುಖಚರ್ಯೆಯಿಂದ ನೀನು ಬದುಕನ್ನು ಸುಮ್ಮನೆ ಹಾಳುಮಾಡುತ್ತಿದ್ದೀ ಎಂದು ಸೂಚಿಸುತ್ತಾರೆ.” ಎರಡು ವರ್ಷದ ಮಗಳಿರುವ ರೆಬೆಕಾ ಹೇಳುವುದು: “ಹೆಣ್ಣು ಮನೆಯ ಕಣ್ಣಾಗಿದ್ದು ಮಕ್ಕಳನ್ನು ಸಾಕಿ-ಸಲಹಬೇಕೆಂಬ ಧೋರಣೆ ನಮ್ಮ ಸಮಾಜದ್ದಾಗಿದ್ದರೂ, ನೌಕರಿ ಮಾಡದಿರುವ ಹೆಂಗಸರಿಗೆ ಅದು ಬೆಲೆಕೊಡುವುದಿಲ್ಲವೆಂಬುದು ನನ್ನ ಅಭಿಪ್ರಾಯ.”
ಕಲ್ಪನೆ ಮತ್ತು ವಾಸ್ತವಿಕತೆ
ಲೋಕದ ಕೆಲವು ಭಾಗಗಳಲ್ಲಿ, ತಾನು ಬಯಸಿದ ವೃತ್ತಿಯಲ್ಲಿ ಯಶಸ್ಸಿನ ಶಿಖರವೇರುವ ಸ್ತ್ರೀಯೇ ‘ಆದರ್ಶ ಮಹಿಳೆ’ ಎಂದು ಮಾಧ್ಯಮಗಳು ವರ್ಣಿಸುತ್ತವೆ. ಹೌದು, ಕೈತುಂಬ ಸಂಬಳ, ಚೊಕ್ಕದಾಗಿ ಸಿಂಗರಿಸಿಕೊಳ್ಳುವ ಆತ್ಮಸ್ಥೈರ್ಯವುಳ್ಳ ಸ್ತ್ರೀ ಅವಳಾಗಿದ್ದಾಳೆ. ಅಲ್ಲದೆ, ಮನೆ ಬಾಗಿಲಿಗೆ ಕಾಲಿಟ್ಟೊಡನೆ ತನ್ನ ಮಕ್ಕಳ ತಂಟೆತಕರಾರುಗಳನ್ನು ಬಗೆಹರಿಸಿ, ತನ್ನ ಗಂಡನ ತಪ್ಪುಗಳನ್ನು ತಿದ್ದಿ, ಸಂಸಾರದ ತಾಪತ್ರಯಗಳನ್ನು ನಿರ್ವಹಿಸುವ ತಾಕತ್ತು ಅಂಥ ಹೆಣ್ಣಿಗಿರುತ್ತದೆಂದು ಮಾಧ್ಯಮಗಳು ಚಿತ್ರಿಸುತ್ತವೆ. ಆದರೆ ಇಂಥ ಕಲ್ಪನೆಗೆ ಹೊಂದಿಕೆಯಲ್ಲಿ ಜೀವಿಸುವವರು ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ.
ಸ್ತ್ರೀಯರಿಗೆ ಸಿಗುವ ಅನೇಕ ಕೆಲಸಗಳು ಬೇಸರಹಿಡಿಸಿ ಬಳಲಿಸುವಂಥದ್ದಾಗಿವೆ. ಸಂಬಳವೂ ಕಡಿಮೆ. ಮಾತ್ರವಲ್ಲ, ಅಂಥ ಕೆಲಸದಲ್ಲಿ ತಮ್ಮಲ್ಲಿರುವ ಕೌಶಲವನ್ನು ಪೂರ್ಣವಾಗಿ ಉಪಯೋಗಿಸಲು ಅವಕಾಶವಿಲ್ಲವೆಂದು ಉದ್ಯೋಗಸ್ಥ ತಾಯಂದಿರು ಕಂಡುಕೊಳ್ಳಬಹುದು. ಇದು ಅವರನ್ನು ಇನ್ನಷ್ಟೂ ವ್ಯಥೆಗೀಡುಮಾಡುತ್ತದೆ. ಸಾಮಾಜಿಕ ಮನೋವಿಜ್ಞಾನ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ಸ್ತ್ರೀಯು, ಪುರುಷನಿಗೆ ಸಮಾನಳೆನ್ನುವಷ್ಟು ಪ್ರಗತಿಯಾಗಿದ್ದರೂ ಒಳ್ಳೇ ವೇತನ ಮತ್ತು ಉಚ್ಚ ಮಟ್ಟದ ಹುದ್ದೆಗಳನ್ನು ಪುರುಷರೇ ಗಿಟ್ಟಿಸಿಕೊಳ್ಳುತ್ತಾರೆ. ಇದರಿಂದ, ಉದ್ಯೋಗದಿಂದಲೇ ತನ್ನ ಸ್ವಾಭಿಮಾನವನ್ನು ಅಳೆಯುವ ಹೆಣ್ಣು ಗಮನಾರ್ಹವಾಗಿ ಪ್ರತಿಕೂಲ ಸ್ಥಿತಿಯಲ್ಲಿದ್ದಾಳೆ.” ಸ್ಪೇನ್ನ ಎಲ್ ಪಾಯೀಸ್ ಎಂಬ ವಾರ್ತಾಪತ್ರಿಕೆ ತಿಳಿಸಿದ್ದು: “ಒತ್ತಡಕ್ಕೆ ಸಂಬಂಧಿಸಿದ ಕಳವಳಗಳು ಪುರುಷರಿಗಿಂತ ಸ್ತ್ರೀಯರಿಗೇ ಮೂರು ಪಟ್ಟು ಜಾಸ್ತಿ. ಏಕೆಂದರೆ ಅವರಲ್ಲಿ ಹೆಚ್ಚಿನವರು ಆಫೀಸು, ಮನೆ ಎಂದು ‘ಎರಡು ಷಿಫ್ಟ್’ನಲ್ಲಿ ದುಡಿಯುತ್ತಾರೆ.”
ಗಂಡನು ಹೇಗೆ ನೆರವಾಗಬಲ್ಲನು?
ಕ್ರೈಸ್ತ ತಾಯಿಯೊಬ್ಬಳು ಕೆಲಸಕ್ಕೆ ಹೋಗಬೇಕೋ ಬಾರದೋ ಎಂಬುದು ವೈಯಕ್ತಿಕ ನಿರ್ಧಾರವಾಗಿದೆ. ಆದರೆ, ಅಂಥ ನಿರ್ಣಯವನ್ನು ವಿವಾಹಿತ ಹೆಣ್ಣು ಮತ್ತು ಅವಳ ಗಂಡ ಒಟ್ಟಿಗೆ ಚರ್ಚಿಸಿ, ಎಲ್ಲ ವಾಸ್ತವಾಂಶಗಳನ್ನು ಸರಿದೂಗಿ ನೋಡಿದ ಬಳಿಕವೇ ತೆಗೆದುಕೊಳ್ಳಬೇಕು.—ಜ್ಞಾನೋಕ್ತಿ 14:15.
ಒಂದುವೇಳೆ ಕುಟುಂಬದ ಖರ್ಚುವೆಚ್ಚಗಳನ್ನು ಭರಿಸಲು ಇಬ್ಬರೂ ದುಡಿಯಲೇಬೇಕಾಗಿದೆ ಎಂಬ ನಿರ್ಣಯಕ್ಕೆ ದಂಪತಿಗಳು ಬರುವಲ್ಲಿ ಆಗೇನು? ಅಂಥ ಸಂದರ್ಭದಲ್ಲಿ ವಿವೇಕಿಯಾದ ಗಂಡನೊಬ್ಬನು ಬೈಬಲಿನ ಈ ಸಲಹೆಗೆ ವಿಶೇಷ ಗಮನಕೊಡುವನು: “ಪುರುಷರೇ, . . . ನೀವು ನಿಮ್ಮ ಪತ್ನಿಯರನ್ನು ಅರ್ಥಮಾಡಿಕೊಂಡು ಅವರೊಂದಿಗೆ ಬಾಳಬೇಕು. ನೀವು ನಿಮ್ಮ ಪತ್ನಿಯರಿಗೆ ಗೌರವ ತೋರಬೇಕು. ಅವರು ನಿಮಗಿಂತ ದುರ್ಬಲರು. ಆದರೆ ದೇವರು ನಿಮಗೆ ಕೊಡುವ ಆಶೀರ್ವಾದವನ್ನೇ ಅಂದರೆ ನಿಜಜೀವವನ್ನು ನೀಡುವ ಕೃಪೆಯನ್ನೇ ನಿಮ್ಮ ಪತ್ನಿಯರಿಗೂ ಕೊಡುವನು.” (1 ಪೇತ್ರ 3:7, ಪರಿಶುದ್ಧ ಬೈಬಲ್a) ಗಂಡನೊಬ್ಬನು ತನ್ನ ಹೆಂಡತಿಯ ಶಾರೀರಿಕ ಮತ್ತು ಭಾವನಾತ್ಮಕ ಇತಿಮಿತಿಗಳನ್ನು ಗಣನೆಗೆ ತೆಗೆದುಕೊಳ್ಳುವ ಮೂಲಕ ಅವಳಿಗೆ ಗೌರವ ತೋರಿಸುತ್ತಾನೆ. ಸಾಧ್ಯವಿರುವಾಗೆಲ್ಲ ಅವನು ಮನೆಕೆಲಸದಲ್ಲಿ ತನ್ನ ಪತ್ನಿಗೆ ಸಹಾಯಮಾಡುವನು. ಯೇಸುವಿನಂತೆ ಅವನು ದೀನತೆಯಿಂದ ಮನೆಕೆಲಸಗಳನ್ನು ಮಾಡಲು ಸಿದ್ಧನಿರುವನು. ಅದು ತನಗೆ ಅವಮಾನಕರವೆಂದು ಅವನು ನೆನಸುವುದಿಲ್ಲ. (ಯೋಹಾನ 13:12-15) ಇದಕ್ಕೆ ಬದಲಾಗಿ, ಆ ಕೆಲಸಗಳು ತನ್ನ ಶ್ರಮಶೀಲ ಪತ್ನಿಯ ಮೇಲೆ ತನಗಿರುವ ಪ್ರೀತಿಯನ್ನು ತೋರಿಸುವ ಸದವಕಾಶಗಳಾಗಿವೆಯೆಂದು ಕಾಣುವನು. ಅವಳು ಖಂಡಿತ ಅಂಥ ಸಹಾಯವನ್ನು ತುಂಬ ಮಾನ್ಯಮಾಡುವಳು.—ಎಫೆಸ 5:25, 28-30.
ಗಂಡ-ಹೆಂಡತಿ ಇಬ್ಬರೂ ದುಡಿಯುವುದು ಅನಿವಾರ್ಯವಾದರೆ ಮನೆಯಲ್ಲಿ ಸಹಕಾರ ಅತ್ಯಗತ್ಯ ಎಂಬುದು ನಿಸ್ಸಂಶಯ. ಈ ನಿಜಾಂಶವನ್ನು ಸ್ಪೇನ್ನ ಎಬಿಸಿ ವಾರ್ತಾಪತ್ರಿಕೆಯ ಒಂದು ವರದಿ ಒತ್ತಿಹೇಳಿತು. ಕೌಟುಂಬಿಕ ವಿಚಾರಗಳ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಕುರಿತು ಹೇಳಿಕೆ ನೀಡಿದ ಆ ಲೇಖನವು ಸ್ಪೇನ್ನಲ್ಲಿ ವಿಚ್ಛೇದದ ಪ್ರಮಾಣವು ಏರುತ್ತಿರುವ ಬಗ್ಗೆ ದೂರಿತು. ವಿಚ್ಛೇದಕ್ಕೆ ಕಾರಣ, “ಧಾರ್ಮಿಕ ಮತ್ತು ನೈತಿಕ ಮಟ್ಟಗಳ ಕುಸಿತ” ಮಾತ್ರವಲ್ಲ ಇನ್ನೆರಡು ವಿಷಯಗಳಿವೆಯೆಂದೂ ಅದು ತಿಳಿಸಿತು. ಅವು “ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯ ಪ್ರವೇಶ ಮತ್ತು ಮನೆಗೆಲಸದಲ್ಲಿ ಪುರುಷರು ನೆರವು ನೀಡದಿರುವುದೇ” ಆಗಿವೆ.
ಕ್ರೈಸ್ತ ತಾಯಿಯೊಬ್ಬಳ ಪ್ರಾಮುಖ್ಯ ಪಾತ್ರ
ಮಕ್ಕಳನ್ನು ತರಬೇತುಗೊಳಿಸುವ ಪ್ರಧಾನ ಜವಾಬ್ದಾರಿಯನ್ನು ಯೆಹೋವನು ತಂದೆಯಂದಿರಿಗೆ ವಹಿಸಿರುವುದಾದರೂ ಅದರಲ್ಲಿ ತಮಗೂ ಪ್ರಾಮುಖ್ಯ ಪಾತ್ರವಿದೆಯೆಂದು ಕ್ರೈಸ್ತ ತಾಯಂದಿರು ಅರಿತಿದ್ದಾರೆ. ವಿಶೇಷವಾಗಿ ಮಕ್ಕಳ ಶೈಶವಾವಸ್ಥೆಯಲ್ಲಿ ತಮ್ಮ ಪಾತ್ರ ಪ್ರಾಮುಖ್ಯವೆಂದು ಅವರಿಗೆ ಗೊತ್ತಿದೆ. (ಜ್ಞಾನೋಕ್ತಿ 1:8; ಎಫೆಸ 6:4) ಯೆಹೋವನು ತನ್ನ ಧರ್ಮಶಾಸ್ತ್ರವನ್ನು ಮಕ್ಕಳಿಗೆ ಪದೇ ಪದೇ ಬೋಧಿಸುವಂತೆ ಇಸ್ರಾಯೇಲ್ಯರಿಗೆ ಹೇಳಿದಾಗ ತಂದೆತಾಯಿ ಇಬ್ಬರನ್ನೂ ಸಂಬೋಧಿಸಿದನು. ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯ ಸಮಯದಲ್ಲಂತೂ ಈ ಕಲಿಕೆಯ ವಿಧಾನಕ್ಕೆ ಸಮಯ ಮತ್ತು ತಾಳ್ಮೆ ಅಗತ್ಯವೆಂದು ಆತನಿಗೆ ತಿಳಿದಿತ್ತು. ಆದಕಾರಣವೇ ಮಕ್ಕಳು ಮನೆಯಲ್ಲಿರುವಾಗ, ದಾರಿಯಲ್ಲಿ ನಡೆಯುವಾಗ, ಮಲಗುವಾಗ, ಏಳುವಾಗ ಅವರಿಗೆ ತರಬೇತಿ ನೀಡುತ್ತಿರಬೇಕೆಂದು ದೇವರು ಹೆತ್ತವರಿಗೆ ಹೇಳಿದನು.—ಧರ್ಮೋಪದೇಶಕಾಂಡ 6:4-7.
ತಾಯಿಯ ಈ ಪ್ರಾಮುಖ್ಯವಾದ ಗೌರವಾನ್ವಿತ ಪಾತ್ರಕ್ಕೆ ದೇವರ ವಾಕ್ಯವು ಒತ್ತುನೀಡುತ್ತಾ ಮಕ್ಕಳಿಗೆ ಹೀಗೆ ಆಜ್ಞಾಪಿಸುತ್ತದೆ: “ತಾಯಿಯ ಉಪದೇಶವನ್ನು ಬಿಡಬೇಡ.” (ಜ್ಞಾನೋಕ್ತಿ 6:20) “ಉಪದೇಶ” ಎಂದು ಭಾಷಾಂತರಿಸಲ್ಪಟ್ಟಿರುವ ಪದದ ಮೂಲಭಾಷೆಯ ಅಕ್ಷರಾರ್ಥವು “ನಿಯಮ” ಎಂದಾಗಿದೆ. ಪತ್ನಿಯೊಬ್ಬಳು ತನ್ನ ಮಕ್ಕಳಿಗೆ ಯಾವುದೇ ಕಟ್ಟುಪಾಡಿನಂಥ ನಿಯಮಗಳನ್ನು ಹಾಕುವ ಮೊದಲು ಗಂಡನ ಅಭಿಪ್ರಾಯವನ್ನು ನಿಶ್ಚಯವಾಗಿ ಕೇಳುವಳು. ಹಾಗಿದ್ದರೂ ಆ ವಚನವು ತೋರಿಸುವಂತೆ ನಿಯಮಗಳನ್ನು ಹಾಕಲು ತಾಯಂದಿರಿಗೆ ಹಕ್ಕಿದೆ. ದೇವಭಕ್ತೆ ತಾಯಿಯು ಕಲಿಸುವ ಆಧ್ಯಾತ್ಮಿಕ ಮತ್ತು ನೈತಿಕ ನಿಯಮಗಳನ್ನು ಹೃದಯಕ್ಕೆ ತೆಗೆದುಕೊಳ್ಳುವ ಮಕ್ಕಳು ಮಹತ್ತರವಾಗಿ ಪ್ರಯೋಜನಹೊಂದುವರು. (ಜ್ಞಾನೋಕ್ತಿ 6:21, 22) ಇಬ್ಬರು ಚಿಕ್ಕ ಗಂಡು ಮಕ್ಕಳಿರುವ ಟೇರೇಸಾ ತಾನು ಉದ್ಯೋಗಕ್ಕೆ ಹೋಗದಿರುವ ಕಾರಣವನ್ನು ವಿವರಿಸುತ್ತಾಳೆ. ಅವಳು ಹೇಳಿದ್ದು: “ದೇವರ ಸೇವೆಮಾಡುವಂಥ ರೀತಿಯಲ್ಲಿ ನನ್ನ ಮಕ್ಕಳನ್ನು ಬೆಳೆಸುವುದೇ ನನ್ನ ಅತಿ ಪ್ರಾಮುಖ್ಯ ಕೆಲಸವಾಗಿದೆ. ನಾನಿದನ್ನು ಆದಷ್ಟು ಉತ್ತಮ ರೀತಿಯಲ್ಲಿ ಮಾಡಲಿಚ್ಛಿಸುತ್ತೇನೆ.”
ಭಿನ್ನ ಪರಿಣಾಮ ಬೀರಿದ ತಾಯಂದಿರು
ಇಸ್ರಾಯೇಲ್ಯರ ಅರಸ ಲೆಮೂವೇಲನು ತನ್ನ ತಾಯಿಯ ಶ್ರದ್ಧಾಪೂರ್ವಕ ಪ್ರಯತ್ನದಿಂದ ನಿಶ್ಚಯವಾಗಿಯೂ ಲಾಭಪಡಕೊಂಡನು. ಆಕೆ “ಉಪದೇಶಿಸಿದ ದೈವೋಕ್ತಿಯು” ದೇವಪ್ರೇರಿತ ವಾಕ್ಯದ ಭಾಗವಾಗಿದೆ. (ಜ್ಞಾನೋಕ್ತಿ 31:1; 2 ತಿಮೊಥೆಯ 3:16) ಗುಣವತಿಯಾದ ಸತಿಯ ಕುರಿತ ಆಕೆಯ ವರ್ಣನೆಯು, ಗಂಡುಮಕ್ಕಳು ತಮ್ಮ ಬಾಳಸಂಗಾತಿಯನ್ನು ವಿವೇಕದಿಂದ ಆರಿಸುವಂತೆ ಇಂದಿಗೂ ಸಹಾಯಮಾಡುತ್ತದೆ. ಅನೈತಿಕತೆ ಮತ್ತು ಕುಡಿಕತನದ ಕುರಿತು ಆಕೆ ನೀಡಿರುವ ಎಚ್ಚರಿಕೆಗಳು, ಪ್ರಥಮವಾಗಿ ದಾಖಲಿಸಲ್ಪಟ್ಟಾಗ ಇದ್ದಷ್ಟೇ ಇವತ್ತಿಗೂ ಯಥೋಚಿತವಾಗಿವೆ.—ಜ್ಞಾನೋಕ್ತಿ 31:3-5, 10-31.
ಪ್ರಥಮ ಶತಮಾನದಲ್ಲಿ, ಯೂನೀಕೆ ಎಂಬ ತಾಯಿಯೊಬ್ಬಳು ತನ್ನ ಮಗನಾದ ತಿಮೊಥೆಯನಿಗೆ ಸಮರ್ಥ ರೀತಿಯಲ್ಲಿ ಬೋಧಿಸಿದ್ದನ್ನು ಅಪೊಸ್ತಲ ಪೌಲನು ಹೊಗಳಿದನು. ಯೂನೀಕೆಯ ಗಂಡ ಅವಿಶ್ವಾಸಿಯಾಗಿದ್ದು ಪ್ರಾಯಶಃ ಗ್ರೀಕ್ ದೇವರುಗಳನ್ನು ಆರಾಧಿಸುತ್ತಿದ್ದದರಿಂದ, ತಿಮೊಥೆಯನು ‘ಪರಿಶುದ್ಧ ಗ್ರಂಥವನ್ನು’ ದೃಢವಾಗಿ ನಂಬುವಂತೆ ಅವಳು ಕಲಿಸಬೇಕಿತ್ತು. ಯೂನೀಕೆ, ಶಾಸ್ತ್ರಗ್ರಂಥಗಳ ಕುರಿತು ತಿಮೊಥೆಯನಿಗೆ ಯಾವಾಗದಿಂದ ಕಲಿಸಲು ಆರಂಭಿಸಿದಳು? ಪ್ರೇರಿತ ದಾಖಲೆಯು ತಿಳಿಸುವಂತೆ “ಚಿಕ್ಕಂದಿನಿಂದ.” ಅಂದರೆ, ತಿಮೊಥೆಯನು ಇನ್ನೂ ಶಿಶುವಾಗಿರುವಾಗಲೇ. (2 ತಿಮೊಥೆಯ 1:5; 3:14, 15) ಹೌದು ಅವಳ ನಂಬಿಕೆ, ಆದರ್ಶ ಮತ್ತು ಬೋಧನೆಗಳು ತಿಮೊಥೆಯನನ್ನು ಮುಂದೆ ಸಲ್ಲಿಸಲಿದ್ದ ಮಿಷನೆರಿ ಸೇವೆಗಾಗಿ ಸನ್ನದ್ಧಗೊಳಿಸಿತು ಎಂಬುದು ಸುಸ್ಪಷ್ಟ.—ಫಿಲಿಪ್ಪಿ 2:19-22.
ದೇವರ ನಿಷ್ಠಾವಂತ ಸೇವಕರನ್ನು ಅಥಿತಿಸತ್ಕಾರಕ್ಕಾಗಿ ಆಮಂತ್ರಿಸುವ ಮೂಲಕ ತಮ್ಮ ಮಕ್ಕಳು ಅನುಕರಣೀಯ ವ್ಯಕ್ತಿಗಳೊಂದಿಗೆ ಒಡನಾಟ ಮಾಡುವಂತೆ ಅನುವುಮಾಡಿಕೊಟ್ಟ ತಾಯಂದಿರ ಬಗ್ಗೆ ಸಹ ಬೈಬಲ್ ತಿಳಿಸುತ್ತದೆ. ಉದಾಹರಣೆಗೆ, ಶೂನೇಮ್ಯ ಸ್ತ್ರೀಯೊಬ್ಬಳ ಮನೆ ಬಾಗಿಲು ಪ್ರವಾದಿ ಎಲೀಷನಿಗಾಗಿ ಸದಾ ತೆರೆದಿತ್ತು. ತದನಂತರ ಅವಳ ಮಗನು ಸತ್ತಾಗ ಎಲೀಷನು ಅವನನ್ನು ಎಬ್ಬಿಸಿದನು. (2 ಅರಸುಗಳು 4:8-10, 32-37) ಬೈಬಲ್ ಲೇಖಕ ಮಾರ್ಕನ ತಾಯಿಯಾದ ಮರಿಯಳನ್ನು ಸಹ ತೆಗೆದುಕೊಳ್ಳಿ. ಆದಿ ಶಿಷ್ಯರು ಆರಾಧನೆಗಾಗಿ ಯೆರೂಸಲೇಮಿನಲ್ಲಿನ ತನ್ನ ಮನೆಯಲ್ಲಿ ಕೂಡಿಬರುವಂತೆ ಅವಳು ಅವಕಾಶ ಮಾಡಿಕೊಟ್ಟಿದ್ದಳೆಂಬುದು ವ್ಯಕ್ತವಾಗುತ್ತದೆ. (ಅ. ಕೃತ್ಯಗಳು 12:12) ಮಾರ್ಕನು, ತನ್ನ ಮನೆಗೆ ಯಾವಾಗಲೂ ಬರುತ್ತಿದ್ದ ಅಪೊಸ್ತಲರ ಮತ್ತು ಇತರ ಕ್ರೈಸ್ತರ ಸಾಹಚರ್ಯದಿಂದ ನಿಶ್ಚಯವಾಗಿಯೂ ಪ್ರಯೋಜನ ಪಡೆದನು.
ಯೆಹೋವನ ಮೂಲತತ್ತ್ವಗಳನ್ನು ತಮ್ಮ ಮಕ್ಕಳಲ್ಲಿ ಬೇರೂರಿಸುವ ನಂಬಿಗಸ್ತ ಸ್ತ್ರೀಯರ ಪರಿಶ್ರಮವನ್ನು ಆತನು ಖಂಡಿತವಾಗಿಯೂ ತುಂಬ ಮಾನ್ಯಮಾಡುತ್ತಾನೆ. ಮನೆಯಲ್ಲಿ ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸಲು ಅವರು ಪಡುವ ಪ್ರಯಾಸ ಮತ್ತು ನಿಷ್ಠೆಗಾಗಿ ಆತನು ಅವರನ್ನು ತುಂಬ ಪ್ರೀತಿಸುತ್ತಾನೆ.—ಜ್ಞಾನೋಕ್ತಿ 14:1.
ಅತ್ಯಂತ ತೃಪ್ತಿ ತರುವ ಆಯ್ಕೆ
ಬೈಬಲಿನ ಈ ಉದಾಹರಣೆಗಳು ತೋರಿಸುವಂತೆ ಕುಟುಂಬದ ಶಾರೀರಿಕ, ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಅಗತ್ಯಗಳನ್ನು ಉತ್ತಮ ರೀತಿಯಲ್ಲಿ ಪೂರೈಸುವುದರಿಂದ ಸಿಗುವ ಪ್ರತಿಫಲಕ್ಕೆ ಎಣೆಯಿಲ್ಲ. ಆದರೆ ಅದು ಸುಲಭದ ಕೆಲಸವಲ್ಲ. ಅನೇಕವೇಳೆ, ಒಬ್ಬ ತಾಯಿಗೆ ಉನ್ನತ ದರ್ಜೆಯ ಯಾವುದೇ ಹುದ್ದೆಗಿಂತ ಮನೆಯಲ್ಲಿರುವ ಕೆಲಸ ಹೆಚ್ಚು ಕಷ್ಟಕರವಾಗಿ ತೋರಬಹುದು.
ತಾಯಿಯೊಬ್ಬಳು ಆಕೆಯ ಗಂಡನ ಸಲಹೆ ಕೇಳಿದ ಬಳಿಕ ತನ್ನ ಉದ್ಯೋಗವನ್ನು ಬಿಡುವ ಅಥವಾ ಪಾರ್ಟ್-ಟೈಮ್ ಕೆಲಸ ಮಾಡುವ ಆಯ್ಕೆಯನ್ನು ಮಾಡುವಲ್ಲಿ ಕುಟುಂಬವು ಸರಳ ಜೀವನವನ್ನು ನಡೆಸಬೇಕಾಗಿ ಬರಬಹುದು. ಅದರೊಟ್ಟಿಗೆ, ಅವಳ ಈ ಆಯ್ಕೆಯನ್ನು ಅರ್ಥಮಾಡಿಕೊಳ್ಳದವರಿಂದ ಅವಳು ನಗೆಗೀಡಾಗಬಹುದು. ಆದರೆ ಪ್ರತಿಫಲವಾದರೋ ಅವಳು ಮಾಡಿದ ತ್ಯಾಗಕ್ಕಿಂತ ಎಷ್ಟೋ ಮಿಗಿಲಾಗಿರುತ್ತದೆ. ಮೂರು ಮಕ್ಕಳಿರುವ ಪಾಕೀ ಎಂಬವಳು ಪಾರ್ಟ್-ಟೈಮ್ ಕೆಲಸಮಾಡುತ್ತಾಳೆ. ಅವಳು ಹೇಳುವುದು: “ಮಕ್ಕಳು ಶಾಲೆಯಿಂದ ಹಿಂದಿರುಗುವಾಗ ಮನೆಯಲ್ಲಿದ್ದು ಅವರನ್ನು ಬರಮಾಡಿಕೊಳ್ಳಲು ಮತ್ತು ಅವರೊಂದಿಗೆ ಮಾತಾಡಲು ನಾನು ಇಷ್ಟಪಡುತ್ತೇನೆ.” ಇದು ಅವಳ ಮಕ್ಕಳಿಗೆ ಹೇಗೆ ಪ್ರಯೋಜನವಾಗುತ್ತದೆ? ಅವಳು ಹೇಳುವುದು: “ಹೋಮ್ವರ್ಕ್ಗಳನ್ನು ಮಾಡಲು ನಾನು ಮಕ್ಕಳಿಗೆ ಸಹಾಯಮಾಡುತ್ತೇನೆ. ಅಲ್ಲದೆ, ಸಮಸ್ಯೆಯೇಳುವಲ್ಲಿ ನಾನದನ್ನು ಕೂಡಲೇ ಬಗೆಹರಿಸುತ್ತೇನೆ. ಪ್ರತಿದಿನ ನಾವು ಒಟ್ಟಿಗೆ ಕಳೆಯುವ ಸಮಯವು ಮುಕ್ತಸಂಭಾಷಣೆಗೆ ಸುಲಭವಾಗಿ ದಾರಿಯನ್ನು ತೆರೆದಿಡುತ್ತದೆ. ಮಕ್ಕಳೊಂದಿಗಿರುವ ಸಮಯವು ನನಗೆ ಅಮೂಲ್ಯ ಗಳಿಗೆಯಾಗಿದೆ. ಅದಕ್ಕಾಗಿಯೇ ನಾನು ನನ್ನ ಪೂರ್ಣ-ಸಮಯದ ಉದ್ಯೋಗವನ್ನು ನಿರಾಕರಿಸಿದೆ.”
ಅನೇಕ ಕ್ರೈಸ್ತ ತಾಯಂದಿರು, ತಾವು ಉದ್ಯೋಗವನ್ನು ಬಿಡುವಲ್ಲಿ ಅಥವಾ ಪಾರ್ಟ್-ಟೈಮ್ ಕೆಲಸವನ್ನು ಮಾಡುವಲ್ಲಿ ಕುಟುಂಬದಲ್ಲಿ ಎಲ್ಲರೂ ಪ್ರಯೋಜನ ಪಡೆಯುತ್ತಾರೆಂದು ಕಂಡುಕೊಂಡಿದ್ದಾರೆ. ಆರಂಭದಲ್ಲಿ ತಿಳಿಸಲಾದ ಕ್ರಿಸ್ಟೀನಾ ವಿವರಿಸುವುದು: “ನಾನು ಉದ್ಯೋಗವನ್ನು ಬಿಟ್ಟ ಮೇಲೆಯೇ ನಮ್ಮ ಕುಟುಂಬದಲ್ಲಿನ ಸಮಸ್ಯೆಗಳು ಕಡಿಮೆಯಾದವು. ಮಕ್ಕಳೊಂದಿಗೆ ಮಾತಾಡಲು ಮತ್ತು ನನ್ನ ಯಜಮಾನರಿಗೆ ಅನೇಕ ಪ್ರಾಯೋಗಿಕ ವಿಧಗಳಲ್ಲಿ ಸಹಾಯಮಾಡಲು ನನಗೆ ಸಮಯ ಸಿಕ್ಕಿತು. ನನ್ನ ಹೆಣ್ಣುಮಕ್ಕಳಿಗೆ ಕಲಿಸುವುದರಲ್ಲಿ ಮತ್ತು ಅವರು ಕಲಿತು ಪ್ರಗತಿ ಹೊಂದುವುದನ್ನು ನೋಡುವುದರಲ್ಲಿ ನಾನು ಸಂತಸವನ್ನು ಪಡೆಯಲಾರಂಭಿಸಿದೆ.” ಒಂದು ಅಮೂಲ್ಯ ಗಳಿಗೆ ಕ್ರಿಸ್ಟೀನಾಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅವಳು ಜ್ಞಾಪಿಸಿಕೊಳ್ಳುವುದು: “ನನ್ನ ದೊಡ್ಡ ಮಗಳು ಮೊದಮೊದಲು ನಡೆಯಲು ಕಲಿತದ್ದು ಮಕ್ಕಳ ಆರೈಕೆ ಕೇಂದ್ರದಲ್ಲಿ. ಆದರೆ ಚಿಕ್ಕವಳಿಗೆ ನಾನೇ ಕೈಹಿಡಿದು ನಡೆಯಲು ಕಲಿಸಿದೆ. ಮೊದಮೊದಲು ಅವಳು ತನ್ನ ಪುಟ್ಟ ಕಾಲನ್ನೆತ್ತಿ ಮೆಲ್ಲನೆ ಇಟ್ಟಳು. ಮತ್ತೊಂದು ಹೆಜ್ಜೆಯಿಡುವಾಗ ಆಯತಪ್ಪಿ ನನ್ನ ತೆಕ್ಕೆಯಲ್ಲಿ ಬಿದ್ದುಬಿಟ್ಟಳು. ಆ ಕ್ಷಣ ನನ್ನಲ್ಲಿ ಪುಳಕಗೊಂಡ ಸಂತೃಪ್ತ ಭಾವನೆ ಅಷ್ಟಿಷ್ಟಲ್ಲ!”
ಪರಿಗಣಿಸಬೇಕಾದ ಇನ್ನೊಂದು ಸಂಗತಿಯೆಂದರೆ, ತಾಯಿ ತನ್ನ ಉದ್ಯೋಗವನ್ನು ಬಿಟ್ಟುಬಿಡುವಲ್ಲಿ ಅಥವಾ ಪಾರ್ಟ್-ಟೈಮ್ ಕೆಲಸವನ್ನು ಮಾಡುವಲ್ಲಿ ಖರ್ಚುವೆಚ್ಚ ಮೊದಲಿಗಿಂತಲೂ ಕಡಿಮೆಯೇ ಆಗಬಹುದು. ಕ್ರಿಸ್ಟೀನಾ ವಿವರಿಸುವುದು: “ನನ್ನ ಸಂಬಳದಲ್ಲಿ ಹೆಚ್ಚು ಹಣವನ್ನು ಮಕ್ಕಳ ಆರೈಕೆ ಕೇಂದ್ರಕ್ಕೆ ಮತ್ತು ವಾಹನಕ್ಕೆ ಕಟ್ಟುತ್ತಿದ್ದೆ. ನಮ್ಮ ಸನ್ನಿವೇಶವನ್ನು ಜಾಗ್ರತೆಯಿಂದ ಪರಿಶೀಲಿಸಿದಾಗ ನಾನು ಕೆಲಸಮಾಡಿ ಹೆಚ್ಚು ಹಣವೇನೂ ಉಳಿಯುತ್ತಿಲ್ಲವೆಂದು ನಾವು ತಿಳಿದುಕೊಂಡೆವು.”
ಕೆಲವು ದಂಪತಿಗಳು ತಮ್ಮ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ, ಪತ್ನಿಯರು ಮನೆಯಲ್ಲೇ ಇದ್ದು ಕುಟುಂಬವನ್ನು ನೋಡಿಕೊಳ್ಳುವುದರಿಂದ ಸಿಗುವ ಪ್ರಯೋಜನದ ಮುಂದೆ ಕೆಲಸ ಬಿಟ್ಟಾಗ ಆದ ನಷ್ಟ ಏನೂ ಅಲ್ಲ ಎಂದು ಕಂಡುಕೊಂಡಿದ್ದಾರೆ. ಕ್ರಿಸ್ಟೀನಾಳ ಗಂಡ ಪೌಲ್ ಹೇಳುವುದು: “ನನ್ನ ಹೆಂಡತಿ ಮನೆಯಲ್ಲೇ ಇದ್ದು ಇಬ್ಬರು ಎಳೆಯ ಮಕ್ಕಳನ್ನು ನೋಡಿಕೊಳ್ಳುತ್ತಿರುವುದರಿಂದ ನನಗೆ ಬಹಳ ಸಂತೋಷ. ಅವಳು ಕೆಲಸಕ್ಕೆ ಹೋಗುತ್ತಿದ್ದಾಗ ನಮ್ಮಿಬ್ಬರಿಗೂ ತುಂಬ ಒತ್ತಡ ಇತ್ತು.” ಈ ನಿರ್ಣಯ ಅವರ ಇಬ್ಬರು ಹೆಣ್ಣುಮಕ್ಕಳ ಮೇಲೆ ಬೀರಿದ ಪರಿಣಾಮವೇನು? “ಮಕ್ಕಳಿಗೆ ಹೆಚ್ಚು ಸುರಕ್ಷಿತ ಭಾವವಿದೆ ಮಾತ್ರವಲ್ಲ ಈ ಎಳೆಪ್ರಾಯದಲ್ಲಿ ಅವರು ಕೆಟ್ಟ ಪ್ರಭಾವದಿಂದ ಬಹಳಷ್ಟು ಮಟ್ಟಿಗೆ ಸಂರಕ್ಷಿಸಲ್ಪಟ್ಟಿದ್ದಾರೆ” ಎಂದು ಹೇಳುತ್ತಾರೆ ಪೌಲ್. ತಮ್ಮ ಹೆಣ್ಣು ಮಕ್ಕಳೊಂದಿಗೆ ಸಾಧ್ಯವಾದಷ್ಟು ಹೆಚ್ಚು ಸಮಯವನ್ನು ಕಳೆಯುವುದು ಅತಿ ಪ್ರಾಮುಖ್ಯವೆಂದು ಈ ದಂಪತಿಗಳು ನೆನಸುವುದೇಕೆ? ಪೌಲ್ ಉತ್ತರಿಸುವುದು: “ಹೆತ್ತವರಾದ ನಾವು ನಮ್ಮ ಮಕ್ಕಳ ಹೃದಮನಗಳ ಮೇಲೆ ಪ್ರಭಾವ ಬೀರದಿದ್ದರೆ ಆ ಕೆಲಸವನ್ನು ಬೇರೊಬ್ಬರು ಮಾಡುವರೆಂದು ನನಗೆ ಖಚಿತವಾಗಿ ತಿಳಿದಿದೆ.”
ಹೌದು, ದಂಪತಿಗಳೆಲ್ಲರೂ ತಮ್ಮ ತಮ್ಮ ಸನ್ನಿವೇಶವನ್ನು ಪರಿಶೀಲಿಸಿ ನೋಡಬೇಕು. ಮತ್ತು ಬೇರೊಬ್ಬರು ಮಾಡುವ ನಿರ್ಣಯವನ್ನು ಯಾರೂ ಟೀಕಿಸಬಾರದು. (ರೋಮಾಪುರ 14:4; 1 ಥೆಸಲೊನೀಕ 4:11) ಹಾಗಿದ್ದರೂ, ತಾಯಿಯೊಬ್ಬಳು ಪೂರ್ಣ ಸಮಯದ ಉದ್ಯೋಗವನ್ನು ಮಾಡದಿರುವಾಗ ಕುಟುಂಬ ಅನುಭವಿಸುವ ಅನೇಕಾನೇಕ ಪ್ರಯೋಜನಗಳನ್ನು ಪರಿಗಣಿಸುವುದು ಯೋಗ್ಯವಾಗಿದೆ. ಈ ಮೊದಲು ತಿಳಿಸಲಾದ ಟೇರೇಸಾ ತನ್ನ ಭಾವನೆಗಳ ಸಾರಾಂಶವನ್ನು ಹೀಗೆ ಹೇಳುತ್ತಾಳೆ: “ನಮ್ಮ ಮಕ್ಕಳ ಲಾಲನೆ-ಪೋಷಣೆ ಮತ್ತು ಅವರಿಗೆ ಬೋಧಿಸುವುದಕ್ಕೆ ಸಾಧ್ಯವಾದಷ್ಟು ಹೆಚ್ಚು ಸಮಯ ಕೊಡುವುದರಿಂದ ಸಿಗುವ ಸಂತೃಪ್ತಿ ಬೇರೆ ಯಾವುದರಿಂದಲೂ ಸಿಗುವುದಿಲ್ಲ.”—ಕೀರ್ತನೆ 127:3. (w08 2/1)
[ಪಾದಟಿಪ್ಪಣಿ]
a Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
[ಪುಟ 21ರಲ್ಲಿರುವ ಚಿತ್ರ]
ಕ್ರೈಸ್ತ ತಾಯಂದಿರು ತಮ್ಮ ಮಕ್ಕಳನ್ನು ತರಬೇತಿಗೊಳಿಸುವ ಅತಿ ಪ್ರಾಮುಖ್ಯ ಕೆಲಸವನ್ನು ಮಾಡುತ್ತಾರೆ