ದೇವರ ಸಮೀಪಕ್ಕೆ ಬನ್ನಿರಿ
‘ಸಕಲವಿಧವಾಗಿ ಸಂತೈಸುವ ದೇವರು’
ಕಷ್ಟ, ನಿರಾಶೆ, ಒಂಟಿತನ ಮುಂತಾದ ಅನೇಕ ವಿಷಯಗಳು ಜೀವನದಲ್ಲಿ ದುಃಖವನ್ನೂ ಕೆಲವೊಮ್ಮೆ ಹತಾಶೆಗಳನ್ನೂ ಉಂಟುಮಾಡುತ್ತವೆ. ಅಂಥ ಸಮಯದಲ್ಲಿ, ‘ಸಹಾಯಕ್ಕಾಗಿ ಎಲ್ಲಿ ಹೋಗಲಿ?’ ಎಂದು ನೀವು ಯೋಚಿಸಬಹುದು. 2 ಕೊರಿಂಥ 1:3, 4 ರಲ್ಲಿನ ಅಪೊಸ್ತಲ ಪೌಲನ ಮಾತುಗಳು ಎಂದೂ ತಪ್ಪದ ಸಾಂತ್ವನದ ಮೂಲನಾದ ಯೆಹೋವನ ಕುರಿತು ತಿಳಿಸುತ್ತದೆ.
ಮೂರನೆಯ ವಚನದಲ್ಲಿ, ದೇವರನ್ನು “ಕನಿಕರವುಳ್ಳ ತಂದೆ” ಎಂದು ಕರೆಯಲಾಗಿದೆ. ಅದರ ಅರ್ಥವೇನು? “ಕನಿಕರ” ಎಂಬುದಾಗಿ ಭಾಷಾಂತರವಾಗಿರುವ ಗ್ರೀಕ್ ಪದವು ಇತರರ ಕಷ್ಟಗಳ ಕುರಿತು ಸಹಾನುಭೂತಿ ತೋರಿಸುವುದನ್ನು ತಿಳಿಸುತ್ತದೆ.a ಈ ಪದವನ್ನು “ಮರುಕಪಡು” ಅಥವಾ “ತುಂಬಾ ಚಿಂತೆವಹಿಸು” ಎಂಬುದಾಗಿಯೂ ಹೇಳಬಹುದೆಂದು ಒಂದು ಬೈಬಲ್ ಪರಾಮರ್ಶೆಯ ಕೃತಿಯು ತಿಳಿಸುತ್ತದೆ. ದೇವರ ‘ಕೋಮಲ ಕನಿಕರವು’ ಆತನನ್ನು ಕ್ರಿಯೆಗೈಯುವಂತೆ ಪ್ರಚೋದಿಸುತ್ತದೆ. ದೇವರ ವ್ಯಕ್ತಿತ್ವದ ಈ ಒಂದು ಅಂಶವನ್ನು ತಿಳಿದುಕೊಳ್ಳುವುದು, ನಾವಾತನ ಸಮೀಪಕ್ಕೆ ಹೋಗಲು ಬಯಸುವಂತೆ ಮಾಡುತ್ತದೆ, ಅಲ್ಲವೇ?
ಪೌಲನು ಯೆಹೋವನನ್ನು ‘ಸಕಲವಿಧವಾಗಿ ಸಂತೈಸುವ ದೇವರು’ ಎಂಬುದಾಗಿಯೂ ತಿಳಿಸಿದ್ದಾನೆ. ಇಲ್ಲಿ ಪೌಲನು ಉಪಯೋಗಿಸಿದ ಪದದಲ್ಲಿ, “ತೊಂದರೆ ಅಥವಾ ದುಃಖದಲ್ಲಿರುವವರನ್ನು ಸಮಾಧಾನಗೊಳಿಸುವ ಅಥವಾ ಸಕ್ರಿಯವಾಗಿ ಸಹಾಯ ಅಥವಾ ಉತ್ತೇಜನ ನೀಡುವ ವಿಚಾರವು” ಸೇರಿರುತ್ತದೆಂದು ಹೇಳಲಾಗಿದೆ. ದಿ ಇಂಟರ್ಪ್ರಿಟರ್ಸ್ ಬೈಬಲ್ ತಿಳಿಸುವುದು: “ಕಷ್ಟದಲ್ಲಿರುವವನು ತನ್ನ ನೋವನ್ನು ತಾಳಿಕೊಳ್ಳುವಂತೆ ಧೈರ್ಯಕೊಡುವ ಮೂಲಕ ನಾವು ಅವನನ್ನು ಸಂತೈಸುತ್ತೇವೆ.”
‘ನೋವನ್ನು ತಾಳಿಕೊಳ್ಳಲು ದೇವರು ನಮಗೆ ಸಾಂತ್ವನವನ್ನೂ ಧೈರ್ಯವನ್ನೂ ಕೊಡುವುದು ಹೇಗೆ?’ ಎಂದು ನೀವು ಕೇಳಬಹುದು. ಆತನು ಮುಖ್ಯವಾಗಿ ತನ್ನ ವಾಕ್ಯವಾದ ಬೈಬಲ್ ಮೂಲಕ ಹಾಗೂ ಪ್ರಾರ್ಥನೆಯನ್ನು ಉತ್ತರಿಸುವ ಮೂಲಕ ಅದನ್ನು ಮಾಡುತ್ತಾನೆ. ದೇವರು ತನ್ನ ವಾಕ್ಯವನ್ನು ನಮಗೆ ಪ್ರೀತಿಯಿಂದ ಕೊಡುವುದೇಕೆಂದರೆ, ಅದನ್ನು ‘ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರಬೇಕೆಂದೇ’ ಎಂದು ಪೌಲನು ತಿಳಿಸುತ್ತಾನೆ. ಅದಲ್ಲದೆ, ಹೃತ್ಪೂರ್ವಕವಾದ ಪ್ರಾರ್ಥನೆಗಳ ಮೂಲಕ ನಾವು ‘ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯನ್ನು’ ಅನುಭವಿಸಬಲ್ಲೆವು.—ರೋಮಾಪುರ 15:4; ಫಿಲಿಪ್ಪಿ 4:7.
ಯೆಹೋವನು ತನ್ನ ಜನರನ್ನು ಎಷ್ಟರ ಮಟ್ಟಿಗೆ ಸಂತೈಸುತ್ತಾನೆ? “ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುತ್ತಾನೆ” ಎಂದು ಪೌಲನು ತಿಳಿಸುತ್ತಾನೆ. (2 ಕೊರಿಂಥ 1:4) ನಮಗೆ ಯಾವುದೇ ರೀತಿಯ ತೊಂದರೆ, ಬೇಗುದಿ ಅಥವಾ ಕಷ್ಟಗಳು ಬರುವುದಾದರೂ, ಅದನ್ನು ತಾಳಿಕೊಳ್ಳಲಿಕ್ಕಾಗಿ ಬೇಕಾದ ಧೈರ್ಯ ಮತ್ತು ಬಲವನ್ನು ದೇವರು ಒದಗಿಸಬಲ್ಲನು. ಇದು ನಮಗೆ ಭರವಸೆಯನ್ನು ಕೊಡುತ್ತದಲ್ಲವೇ?
ದೇವರು ನೀಡುವ ಸಾಂತ್ವನವು ಅದನ್ನು ಪಡೆದುಕೊಳ್ಳುವವರಿಗೆ ಮಾತ್ರ ಸೀಮಿತವಲ್ಲ. ಏಕೆಂದರೆ, ಪೌಲನು ಮುಂದುವರಿಸಿ ಹೇಳುವುದು: “ದೇವರಿಂದ ನಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಬಿದ್ದಿರುವವರನ್ನು ಸಂತೈಸುವದಕ್ಕೆ ಶಕ್ತರಾಗುತ್ತೇವೆ.” ಸಂಕಟಗಳಲ್ಲಿ ದೇವರು ನಮಗೆ ಕೊಡುವ ಸಾಂತ್ವನವು, ನಾವು ಇತರರಿಗೆ ಅನುಭೂತಿ ತೋರಿಸುವಂತೆ ಸಹಾಯಮಾಡುತ್ತದೆ ಮತ್ತು ಕೊರತೆಯಲ್ಲಿರುವವರಿಗೆ ನೆರವನ್ನು ನೀಡುವಂತೆ ಪ್ರಚೋದಿಸುತ್ತದೆ.
ಯೆಹೋವನು “ಸಕಲವಿಧವಾಗಿ ಸಂತೈಸುವ” ದೇವರಾಗಿದ್ದಾನೆ ಹೌದು. ಆದರೂ ಆತನು ನಮ್ಮ ಎಲ್ಲಾ ಸಮಸ್ಯೆಗಳನ್ನು ಅಥವಾ ನೋವನ್ನು ಇಲ್ಲದಂತೆ ಮಾಡಲೇಬೇಕೆಂದಿಲ್ಲ. ಆದರೆ ಸಾಂತ್ವನಕ್ಕಾಗಿ ನಾವು ಆತನೆಡೆಗೆ ನೋಡುವುದಾದರೆ, ನಮ್ಮ ಜೀವನದಲ್ಲಿ ಬರುವ ಯಾವುದೇ ದುಃಖ ಅಥವಾ ಕಷ್ಟಗಳನ್ನು ತಾಳಿಕೊಳ್ಳಲು ಆತನು ನಮ್ಮನ್ನು ಬಲಪಡಿಸುವನು ಎಂಬ ಭರವಸೆಯಿಡ ಸಾಧ್ಯವಿದೆ. ಅಂಥ ಸಹಾನುಭೂತಿಯುಳ್ಳ ದೇವರು ನಿಶ್ಚಯವಾಗಿ ನಮ್ಮ ಆರಾಧನೆ ಮತ್ತು ಸ್ತುತಿಗೆ ಯೋಗ್ಯನು. (w08 9/1)
[ಪಾದಟಿಪ್ಪಣಿ]
a ದೇವರನ್ನು “ಕನಿಕರವುಳ್ಳ ತಂದೆ” ಎಂದು ಕರೆಯಲಾಗಿದೆ. ಏಕೆಂದರೆ ಆತನು ಕೋಮಲ ಕನಿಕರದ ಮೂಲನಾಗಿದ್ದಾನೆ ಮತ್ತು ಅದು ಆತನ ವ್ಯಕ್ತಿತ್ವದ ಭಾಗವಾಗಿದೆ.