ಯೆಹೋವನು ನಮಗೂ “ರಕ್ಷಕ”ನಾಗಿದ್ದಾನೆ
“ಯೆಹೋವನು ಸಹಾಯಕನಾಗಿ ಅವರನ್ನು . . . ರಕ್ಷಿಸುವನು.”—ಕೀರ್ತ. 37:40.
1, 2. ಯೆಹೋವನ ಕುರಿತ ಯಾವ ಮೂಲಭೂತ ಸತ್ಯವು ನಮಗೆ ಸಾಂತ್ವನ ಮತ್ತು ಬಲ ಕೊಡುತ್ತದೆ?
ಸೂರ್ಯನ ಬೆಳಕಿನಿಂದುಂಟಾಗುವ ನೆರಳು ಯಾವಾಗಲೂ ಇದ್ದಲ್ಲೇ ಇರುವುದಿಲ್ಲ. ಭೂಮಿಯು ಚಲಿಸಿದಂತೆ ಅದು ಸದಾ ಬದಲಾಗುತ್ತಾ ಇರುತ್ತದೆ. ಭೂಮಿ ಮತ್ತು ಸೂರ್ಯನ ಸೃಷ್ಟಿಕರ್ತನಾದರೋ ಎಂದೂ ಬದಲಾಗನು. (ಮಲಾ. 3:6) ಬೈಬಲ್ ತಿಳಿಸುವುದು: “ಬದಲಾಗುವ ನೆರಳಿನಂತೆ ಆತನು ಬದಲಾಗುವುದಿಲ್ಲ.” (ಯಾಕೋ. 1:17, NIBV) ಯೆಹೋವನ ಕುರಿತಾದ ಈ ಮೂಲಭೂತ ಸತ್ಯವು ವಿಶೇಷವಾಗಿ ನಾವು ಕಷ್ಟಗಳನ್ನು ಮತ್ತು ಸವಾಲುಗಳನ್ನು ಎದುರಿಸುತ್ತಿರುವಾಗ ಸಾಂತ್ವನ ಮತ್ತು ಬಲ ಕೊಡುತ್ತದೆ. ಏಕೆ?
2 ಯೆಹೋವನು ಬೈಬಲ್ ಸಮಯಗಳಲ್ಲಿ “ರಕ್ಷಕ”ನಾಗಿದ್ದನು ಎಂಬುದನ್ನು ನಾವು ಹಿಂದಿನ ಲೇಖನದಲ್ಲಿ ಪರಿಗಣಿಸಿದೆವು. (ಕೀರ್ತ. 70:5) ಆತನು ಎಂದೂ ಬದಲಾಗದವನೂ ಕೊಟ್ಟ ಮಾತಿಗೆ ತಪ್ಪದವನೂ ಆಗಿದ್ದಾನೆ. ಆದ್ದರಿಂದ, ಇಂದು ಸಹ ಆತನ ಆರಾಧಕರಿಗೆ ಆತನು ‘ಸಹಾಯಕನಾಗಿ ತಮ್ಮನ್ನು ರಕ್ಷಿಸುವನು’ ಎಂಬ ಭರವಸೆ ಇದೆ. (ಕೀರ್ತ. 37:40) ಆಧುನಿಕ ದಿನಗಳಲ್ಲಿ ಯೆಹೋವನು ತನ್ನ ಸೇವಕರನ್ನು ಹೇಗೆ ರಕ್ಷಿಸಿದ್ದಾನೆ? ವೈಯಕ್ತಿಕವಾಗಿ ನಮ್ಮನ್ನು ಆತನು ಹೇಗೆ ರಕ್ಷಿಸುವನು?
ವಿರೋಧಿಗಳಿಂದ ರಕ್ಷಣೆ
3. ಯೆಹೋವನ ಜನರು ಸುವಾರ್ತೆ ಸಾರುವುದನ್ನು ವಿರೋಧಿಗಳು ನಿಲ್ಲಿಸಲಾರರು ಎಂಬ ಖಾತ್ರಿ ನಮಗಿರಬಲ್ಲದು ಏಕೆ?
3 ಯೆಹೋವನಿಗೆ ಸಲ್ಲಬೇಕಾದ ಸಂಪೂರ್ಣ ಭಕ್ತಿಯನ್ನು ಕೊಡದಂತೆ ಸೈತಾನನು ಯೆಹೋವನ ಸಾಕ್ಷಿಗಳ ಮೇಲೆ ಎಷ್ಟು ವಿರೋಧ ತಂದರೂ ಅವನು ಸಫಲನಾಗಿಲ್ಲ. ದೇವರ ವಾಕ್ಯ ನಮಗೆ ಆಶ್ವಾಸನೆ ಕೊಡುವುದು: “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ.” (ಯೆಶಾ. 54:17) ದೇವರ ಸೇವಕರು ಸಾರುವುದನ್ನು ನಿಲ್ಲಿಸಬೇಕೆಂದು ವಿರೋಧಿಗಳು ಮಾಡಿರುವ ಪ್ರಯತ್ನಗಳು ಮಣ್ಣುಮುಕ್ಕಿವೆ. ಎರಡು ಉದಾಹರಣೆಗಳನ್ನು ಪರಿಗಣಿಸಿ.
4, 5. ಯೆಹೋವನ ಜನರು 1918ರಲ್ಲಿ ಯಾವ ವಿರೋಧ ಎದುರಿಸಿದರು, ಮತ್ತು ಫಲಿತಾಂಶವೇನಾಯಿತು?
4 ಇಸವಿ 1918ರಲ್ಲಿ ಯೆಹೋವನ ಜನರು ಪಾದ್ರಿವರ್ಗದಿಂದ ಚಿತಾಯಿಸಲ್ಪಟ್ಟ ಹಿಂಸೆಗೆ ತುತ್ತಾದರು. ಈ ಹಿಂಸೆಯ ಉದ್ದೇಶ ಸಾರುವ ಕೆಲಸವನ್ನು ನಿಲ್ಲಿಸುವುದಾಗಿತ್ತು. ಆ ಸಮಯದಲ್ಲಿ ಲೋಕವ್ಯಾಪಕ ಸಾರುವ ಕೆಲಸದ ಮೇಲ್ವಿಚಾರಣೆ ಮಾಡುತ್ತಿದ್ದ ಜೆ. ಎಫ್. ರದರ್ಫರ್ಡ್ ಮತ್ತು ಮುಖ್ಯಕಾರ್ಯಾಲಯದಲ್ಲಿದ್ದ ಇತರರ ದಸ್ತಗಿರಿಗಾಗಿ ಮೇ 7ರಂದು ಫೆಡರಲ್ ಕೋರ್ಟಿನಿಂದ ವಾರಂಟ್ಗಳನ್ನು ಹೊರಡಿಸಲಾಯಿತು. ಎರಡು ತಿಂಗಳೊಳಗೆ ಸಹೋದರ ರದರ್ಫರ್ಡ್ ಮತ್ತು ಅವರ ಸಂಗಡಿಗರ ಮೇಲೆ ಸುಳ್ಳಾರೋಪಗಳನ್ನು ಹೊರಿಸಿ ಅನ್ಯಾಯವಾಗಿ ಅವರನ್ನು ದೀರ್ಘಾವಧಿಯ ಸೆರೆಗೆ ಹಾಕಲಾಯಿತು. ವಿರೋಧಿಗಳು ನ್ಯಾಯಾಲಯಗಳ ಸಹಾಯದಿಂದ ಸಾರುವ ಕೆಲಸವನ್ನು ಪೂರ್ತಿ ನಿಲ್ಲಿಸಲು ಶಕ್ತರಾದರೋ? ಖಂಡಿತ ಇಲ್ಲ!
5 ಯೆಹೋವನು ಕೊಟ್ಟ ಈ ಮಾತನ್ನು ನೆನಪಿಸಿಕೊಳ್ಳಿ: “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು.” ಸನ್ನಿವೇಶ ಒಮ್ಮಿಂದೊಮ್ಮೆಲೇ ಬದಲಾಯಿತು. ಒಂಬತ್ತು ತಿಂಗಳ ಸೆರೆವಾಸದ ಬಳಿಕ 1919 ಮಾರ್ಚ್ 26ರಂದು ಸಹೋದರ ರದರ್ಫರ್ಡ್ ಮತ್ತು ಅವರ ಸಂಗಡಿಗರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ನಂತರದ ವರ್ಷ ಅಂದರೆ 1920 ಮೇ 5ರಂದು ಅವರ ಮೇಲೆ ಹೊರಿಸಲಾದ ಸುಳ್ಳಾರೋಪಗಳನ್ನು ರದ್ದುಗೊಳಿಸಲಾಯಿತು. ತಮಗೆ ಸಿಕ್ಕಿದ ಸ್ವಾತಂತ್ರ್ಯವನ್ನು ಈ ಸಹೋದರರು ರಾಜ್ಯ ಕೆಲಸವನ್ನು ಮುಂದುವರಿಸಲಿಕ್ಕಾಗಿ ಬಳಸಿಕೊಂಡರು. ಫಲಿತಾಂಶವೇನಾಯಿತು? ಅಂದಿನಿಂದ ಮಹತ್ತರ ಪ್ರಗತಿಯಾಗಿದೆ. ಇದೆಲ್ಲದರ ಕೀರ್ತಿ ‘ರಕ್ಷಕನಿಗೇ’ ಸಲ್ಲಬೇಕು.—1 ಕೊರಿಂ. 3:7.
6, 7. (ಎ) ಜರ್ಮನಿಯಲ್ಲಿದ್ದ ಯೆಹೋವನ ಸಾಕ್ಷಿಗಳನ್ನು ನಾಸಿ ಆಳ್ವಿಕೆಯಡಿ ಹೇಗೆ ದುರುಪಚರಿಸಲಾಯಿತು, ಮತ್ತು ಫಲಿತಾಂಶವೇನಾಗಿತ್ತು? (ಬಿ) ಯೆಹೋವನ ಸಾಕ್ಷಿಗಳ ಆಧುನಿಕ ದಿನಗಳ ಇತಿಹಾಸ ಏನನ್ನು ರುಜುಪಡಿಸುತ್ತದೆ?
6 ಈಗ ಎರಡನೇ ಉದಾಹರಣೆ ಪರಿಗಣಿಸಿ. 1934ರಲ್ಲಿ ಹಿಟ್ಲರನು, ಜರ್ಮನಿಯಲ್ಲಿದ್ದ ಯೆಹೋವನ ಸಾಕ್ಷಿಗಳ ಹೆಸರೇ ಇಲ್ಲದಂತೆ ಮಾಡುವೆನೆಂದು ಶಪಥಮಾಡಿದನು. ಅದು ಪೊಳ್ಳು ಬೆದರಿಕೆಯಾಗಿರಲಿಲ್ಲ. ಅನೇಕರನ್ನು ದಸ್ತಗಿರಿ ಮಾಡಲಾಯಿತು ಮತ್ತು ಬಂಧಿಸಲಾಯಿತು. ಸಾವಿರಾರು ಸಾಕ್ಷಿಗಳನ್ನು ಹಿಂಸಿಸಲಾಯಿತು, ನೂರಾರು ಮಂದಿಯನ್ನು ಸೆರೆಶಿಬಿರಗಳಲ್ಲಿ ಕೊಲ್ಲಲಾಯಿತು. ಸಾಕ್ಷಿಗಳನ್ನು ನಿರ್ನಾಮಮಾಡುವ ಪ್ರಯತ್ನದಲ್ಲಿ ಹಿಟ್ಲರನು ಯಶ ಕಂಡನೋ? ಜರ್ಮನಿಯಾದ್ಯಂತ ಸುವಾರ್ತೆ ಸಾರುವುದನ್ನು ನಿಲ್ಲಿಸಲು ಅವನು ಶಕ್ತನಾದನೋ? ಇಲ್ಲವೇ ಇಲ್ಲ! ಹಿಂಸೆಯ ಸಮಯದಲ್ಲಿ ನಮ್ಮ ಸಹೋದರರು ಸಾರುವ ಕೆಲಸವನ್ನು ಗುಟ್ಟಾಗಿ ಮುಂದುವರಿಸಿದರು. ನಾಸಿ ಆಳ್ವಿಕೆಯ ಪತನದ ನಂತರ ಸ್ವಾತಂತ್ರ್ಯ ಸಿಕ್ಕಿದಾಗಲಂತೂ ಸಾರುವ ಕೆಲಸವನ್ನು ಇನ್ನಷ್ಟು ಮುಂದುವರಿಸಿದರು. ಇಂದು ಜರ್ಮನಿಯಲ್ಲಿ 1,65,000ಕ್ಕೂ ಹೆಚ್ಚು ಮಂದಿ ರಾಜ್ಯ ಘೋಷಕರಿದ್ದಾರೆ. “ರಕ್ಷಕನು” ಪುನಃ ಒಮ್ಮೆ, “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು” ಎಂಬ ತನ್ನ ಮಾತನ್ನು ಉಳಿಸಿಕೊಂಡಿದ್ದಾನೆ.
7 ತನ್ನ ಜನರು ಒಂದು ಗುಂಪಾಗಿ ಅಳಿದು ಹೋಗುವಂತೆ ಯೆಹೋವನೆಂದಿಗೂ ಬಿಡನು ಎಂಬುದನ್ನು ಯೆಹೋವನ ಸಾಕ್ಷಿಗಳ ಆಧುನಿಕ ದಿನಗಳ ಇತಿಹಾಸ ಸ್ಪಷ್ಟಪಡಿಸುತ್ತದೆ. (ಕೀರ್ತ. 116:15) ಆದರೆ ವ್ಯಕ್ತಿಗತವಾಗಿ ಒಬ್ಬೊಬ್ಬರನ್ನು ಯೆಹೋವನು ಸಂರಕ್ಷಿಸುತ್ತಾನೋ? ಯೆಹೋವನು ತನ್ನ ಸೇವಕರನ್ನು ಹೇಗೆ ರಕ್ಷಿಸುತ್ತಾನೆ?
ಶಾರೀರಿಕ ಸಂರಕ್ಷಣೆಯ ಕುರಿತೇನು?
8, 9. (ಎ) ಶಾರೀರಿಕ ಸಂರಕ್ಷಣೆಯ ಖಾತ್ರಿ ಕೊಡಲಾಗಿಲ್ಲ ಎಂದು ನಮಗೆ ಹೇಗೆ ಗೊತ್ತು? (ಬಿ) ನಾವೇನನ್ನು ಒಪ್ಪಿಕೊಳ್ಳಲೇಬೇಕು?
8 ಯೆಹೋವನು ನಮ್ಮನ್ನು ಶಾರೀರಿಕವಾಗಿ ಸಂರಕ್ಷಿಸುವನೆಂಬ ಮಾತು ಕೊಟ್ಟಿಲ್ಲ. ಇದು ನಮ್ಮೆಲ್ಲರಿಗೂ ತಿಳಿದಿರುವ ಸಂಗತಿ. ನೆಬೂಕದ್ನೆಚ್ಚರನು ಮಾಡಿಸಿದ ಬಂಗಾರದ ಪ್ರತಿಮೆಗೆ ಅಡ್ಡಬೀಳಲು ನಿರಾಕರಿಸಿದ ಮೂವರು ನಂಬಿಗಸ್ತ ಇಬ್ರಿಯ ಯುವಕರು ತೆಗೆದುಕೊಂಡ ನಿಲುವನ್ನೇ ನಾವೂ ತೆಗೆದುಕೊಳ್ಳುತ್ತೇವೆ. ದೇವಭಯವುಳ್ಳ ಆ ಯುವಕರು, ದೈಹಿಕ ಹಾನಿಯಾಗದಂತೆ ಯೆಹೋವನು ತಮ್ಮನ್ನು ಅದ್ಭುತಕರವಾಗಿ ರಕ್ಷಿಸುವನೆಂದು ನಿರೀಕ್ಷಿಸಿರಲಿಲ್ಲ. (ದಾನಿಯೇಲ 3:17, 18 ಓದಿ.) ಹಾಗಿದ್ದರೂ ಧಗಧಗನೆ ಉರಿಯುವ ಆವಿಗೆಯಿಂದ ಯೆಹೋವನು ಅವರನ್ನು ರಕ್ಷಿಸಿದನು. (ದಾನಿ. 3:21-27) ಬೈಬಲ್ ಸಮಯಗಳಲ್ಲೂ ಅದ್ಭುತಕರವಾದ ಸಂರಕ್ಷಣೆ ಪ್ರತಿಯೊಂದು ಸಂದರ್ಭದಲ್ಲಿ ಸಿಗುತ್ತಿರಲಿಲ್ಲ. ಯೆಹೋವನ ಅನೇಕ ನಂಬಿಗಸ್ತ ಸಾಕ್ಷಿಗಳು ವಿರೋಧಿಗಳ ಕೈಯಲ್ಲಿ ಹತರಾಗಿದ್ದಾರೆ.—ಇಬ್ರಿ. 11:35-37.
9 ಇಂದಿನ ಕುರಿತೇನು? ‘ರಕ್ಷಕನಾದ’ ಯೆಹೋವನು ಪ್ರತಿಯೊಬ್ಬರನ್ನೂ ಗಂಡಾಂತರದಿಂದ ಖಂಡಿತ ತಪ್ಪಿಸಲು ಶಕ್ತನು. ನಿರ್ದಿಷ್ಟ ಸನ್ನಿವೇಶದಲ್ಲಿ ಯೆಹೋವನೇ ಮಧ್ಯೆ ಪ್ರವೇಶಿಸಿ ಸಹಾಯ ಮಾಡಿದ್ದಾನೆಂದು ನಾವು ಖಡಾಖಂಡಿತವಾಗಿ ಹೇಳಸಾಧ್ಯವೋ? ಇಲ್ಲ. ಉದಾಹರಣೆಗೆ ಒಬ್ಬ ವ್ಯಕ್ತಿ, ಒಂದು ಅಪಾಯಕರ ಸನ್ನಿವೇಶದಿಂದ ಯೆಹೋವನೇ ತನ್ನನ್ನು ರಕ್ಷಿಸಿದನೆಂದು ಹೇಳುತ್ತಿರಬಹುದು. ಅವನ ಅನಿಸಿಕೆಯನ್ನು ಇತರರು ಪ್ರಶ್ನಿಸುವುದು ದುರಹಂಕಾರವಾಗಿರುತ್ತದೆ. ಆದರೆ ಅದೇ ಸಮಯದಲ್ಲಿ, ನಾವು ತಳ್ಳಿಹಾಕಲಾರದ ವಾಸ್ತವಾಂಶವೇನೆಂದರೆ ನಾಸಿ ಆಳ್ವಿಕೆಯ ಸಮಯದಲ್ಲಾದಂತೆ ಅನೇಕ ನಂಬಿಗಸ್ತ ಕ್ರೈಸ್ತರು ಹಿಂಸೆಯ ಕಾರಣದಿಂದ ಮೃತಪಟ್ಟಿದ್ದಾರೆ. ಇನ್ನೂ ಕೆಲವರು ದುರಂತಗಳಿಂದ ಸಾವಿಗೀಡಾಗಿದ್ದಾರೆ. (ಪ್ರಸಂ. 9:11) ಹಾಗಾದರೆ ‘ಅಕಾಲಿಕ ಮರಣಕ್ಕೀಡಾದ ಇಂಥ ನಂಬಿಗಸ್ತ ಜನರಿಗೆ ಯೆಹೋವನು “ರಕ್ಷಕ”ನಾಗಿರಲಿಲ್ಲವೋ’ ಎಂಬ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುತ್ತಿರಬಹುದು. ಯೆಹೋವನ ಸಂಬಂಧದಲ್ಲಿ ಹೀಗೆ ಹೇಳಲು ಸಾಧ್ಯವೇ ಇಲ್ಲ!
10, 11. ಮರಣದ ಮುಂದೆ ಮಾನವನು ನಿಸ್ಸಹಾಯಕನೇಕೆ, ಆದರೆ ಈ ಬಗ್ಗೆ ಯೆಹೋವನು ಏನು ಮಾಡಶಕ್ತನು?
10 ಇದನ್ನು ಪರಿಗಣಿಸಿ: ಮರಣದ ಎದುರು ಮಾನವನು ನಿಸ್ಸಹಾಯಕ. ಏಕೆಂದರೆ ಮಾನವಕುಲದ ಸಾಮಾನ್ಯ ಸಮಾಧಿಯಾದ ‘ಪಾತಾಳದಿಂದ [ಹೀಬ್ರು, “ಷೀಯೋಲ್”] ತಪ್ಪಿಸಿಕೊಂಡು ಮರಣಹೊಂದದ ಮನುಷ್ಯನು’ ಒಬ್ಬನೂ ಇಲ್ಲ. (ಕೀರ್ತ. 89:48) ಯೆಹೋವನ ಕುರಿತೇನು? ಭೀಕರ ನಾಸಿ ಆಳ್ವಿಕೆಯಿಂದ ಬದುಕಿ ಉಳಿದ ಸಹೋದರಿಯೊಬ್ಬಳು ಸೆರೆಶಿಬಿರಗಳಲ್ಲಿ ತನ್ನ ಪ್ರಿಯ ವ್ಯಕ್ತಿಗಳನ್ನು ಮರಣದಲ್ಲಿ ಕಳೆದುಕೊಂಡಾಗ, ತನ್ನ ತಾಯಿ ಸಂತೈಸುತ್ತಾ ಹೇಳಿದ ಈ ಮಾತುಗಳನ್ನು ನೆನಸಿಕೊಳ್ಳುತ್ತಾಳೆ: “ಮರಣವು ಮಾನವಕುಲವನ್ನು ಶಾಶ್ವತವಾಗಿ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದಾದರೆ ಅದು ದೇವರಿಗಿಂತ ಶಕ್ತಿಶಾಲಿ ಎಂದಾಗುವುದಲ್ಲವೇ?” ಸರ್ವಶಕ್ತನೂ ಜೀವದ ಉಗಮನೂ ಆದ ಯೆಹೋವನಿಗೆ ಮರಣ ಖಂಡಿತ ಸರಿಸಾಟಿಯಲ್ಲ! (ಕೀರ್ತ. 36:9) ಪಾತಾಳದಲ್ಲಿರುವ (ಗ್ರೀಕ್, “ಹೇಡೀಸ್”) ಪ್ರತಿಯೊಬ್ಬರೂ ಯೆಹೋವನ ಸ್ಮರಣೆಯಲ್ಲಿದ್ದಾರೆ ಮತ್ತು ಆತನು ಪ್ರತಿಯೊಬ್ಬರನ್ನೂ ರಕ್ಷಿಸುವನು.—ಲೂಕ 20:37, 38; ಪ್ರಕ. 20:11-14.
11 ಅಷ್ಟರತನಕ ಯೆಹೋವನು ತನ್ನ ನಂಬಿಗಸ್ತ ಆರಾಧಕರ ಆರೈಕೆ ಮಾಡುತ್ತಿರುವನು. ಯಾವ ಮೂರು ವಿಧಗಳಲ್ಲಿ ಆತನು ನಮ್ಮ “ರಕ್ಷಕ”ನಾಗಿರುತ್ತಾನೆ ಎಂಬುದನ್ನು ನಾವೀಗ ಪರಿಗಣಿಸೋಣ.
ಆಧ್ಯಾತ್ಮಿಕವಾಗಿ ಸಂರಕ್ಷಿಸುತ್ತಾನೆ
12, 13. ಆಧ್ಯಾತ್ಮಿಕ ಸಂರಕ್ಷಣೆ ಬಹುಮೂಲ್ಯವೇಕೆ, ಮತ್ತು ಯೆಹೋವನು ನಮಗೆ ಅದನ್ನು ಹೇಗೆ ಒದಗಿಸುತ್ತಾನೆ?
12 ಬಹುಮುಖ್ಯವಾಗಿರುವ ಆಧ್ಯಾತ್ಮಿಕ ಸಂರಕ್ಷಣೆಯನ್ನು ಯೆಹೋವನು ನಮಗೆ ಒದಗಿಸುತ್ತಾನೆ. ಸದ್ಯದ ಜೀವನಕ್ಕಿಂತ ಹೆಚ್ಚು ಅಮೂಲ್ಯವಾದ ಒಂದು ವಿಷಯವಿದೆ ಎಂಬುದು ಸತ್ಕ್ರೈಸ್ತರಾದ ನಮಗೆ ತಿಳಿದಿದೆ. ಯೆಹೋವನೊಂದಿಗಿನ ವೈಯಕ್ತಿಕ ಸಂಬಂಧವೇ ನಮ್ಮ ಬೆಲೆಬಾಳುವ ಸ್ವಾಸ್ತ್ಯವಾಗಿದೆ. (ಕೀರ್ತ. 25:14; 63:3) ಆ ಸಂಬಂಧ ಇಲ್ಲದಿದ್ದಲ್ಲಿ ನಮ್ಮ ಸದ್ಯದ ಜೀವನಕ್ಕೆ ಯಾವುದೇ ಅರ್ಥವಿರುತ್ತಿರಲಿಲ್ಲ ಮತ್ತು ನಮ್ಮ ಭವಿಷ್ಯತ್ತು ಕರಾಳವಾಗಿರುತ್ತಿತ್ತು.
13 ಸಂತೋಷದ ಸಂಗತಿಯೇನೆಂದರೆ, ನಾವು ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಕಾಪಾಡಿಕೊಳ್ಳುವಂತೆ ಆತನು ಬೇಕಾದ ಎಲ್ಲಾ ಸಹಾಯ ನೀಡುತ್ತಾನೆ. ನಮ್ಮ ಸಹಾಯಕ್ಕಾಗಿ ಆತನ ವಾಕ್ಯ, ಪವಿತ್ರಾತ್ಮ ಮತ್ತು ಲೋಕವ್ಯಾಪಕ ಸಭೆ ಇದೆ. ಈ ಏರ್ಪಾಡುಗಳ ಪೂರ್ಣ ಪ್ರಯೋಜನವನ್ನು ನಾವು ಹೇಗೆ ಪಡೆಯಸಾಧ್ಯವಿದೆ? ಕ್ರಮವಾಗಿ ಮತ್ತು ಶ್ರದ್ಧೆಯಿಂದ ಆತನ ವಾಕ್ಯದ ಅಧ್ಯಯನ ಮಾಡುವ ಮೂಲಕ ನಾವು ನಮ್ಮ ನಂಬಿಕೆಯನ್ನು ಬಲಗೊಳಿಸಿ ನಿರೀಕ್ಷೆಯನ್ನು ಉಜ್ವಲವಾಗಿಡಬಲ್ಲೆವು. (ರೋಮಾ. 15:4) ಪವಿತ್ರಾತ್ಮಕ್ಕಾಗಿ ನಾವು ಯಥಾರ್ಥವಾಗಿ ಪ್ರಾರ್ಥಿಸುವಲ್ಲಿ, ಪ್ರಶ್ನಾರ್ಹ ನಡತೆಯಲ್ಲಿ ತೊಡಗುವಂತೆ ಬರುವ ಶೋಧನೆಯನ್ನು ಪ್ರತಿರೋಧಿಸಲು ಸಹಾಯ ಸಿಗುವುದು. (ಲೂಕ 11:13) ಬೈಬಲಾಧರಿತ ಪ್ರಕಾಶನಗಳಲ್ಲಿ, ಕೂಟಗಳಲ್ಲಿ, ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿ ಆಳು ವರ್ಗ ಕೊಡುವ ನಿರ್ದೇಶನಗಳನ್ನು ಪಾಲಿಸುವ ಮೂಲಕ “ಹೊತ್ತು ಹೊತ್ತಿಗೆ” ಬಡಿಸಲಾಗುವ ಆಧ್ಯಾತ್ಮಿಕ ‘ಆಹಾರದಿಂದ’ ಪೋಷಣೆ ಪಡೆಯುವೆವು. (ಮತ್ತಾ. 24:45) ಅಂಥ ಏರ್ಪಾಡುಗಳು ನಮ್ಮನ್ನು ಆಧ್ಯಾತ್ಮಿಕವಾಗಿ ಸಂರಕ್ಷಿಸುವವು ಮತ್ತು ದೇವರಿಗೆ ಆಪ್ತರಾಗಿರುವಂತೆ ಸಹಾಯ ಮಾಡುವವು.—ಯಾಕೋ. 4:8.
14. ಆಧ್ಯಾತ್ಮಿಕ ಸಂರಕ್ಷಣೆಯ ಉದಾಹರಣೆಯೊಂದನ್ನು ತಿಳಿಸಿ.
14 ಅಂಥ ಆಧ್ಯಾತ್ಮಿಕ ಸಂರಕ್ಷಣೆಯ ಒಂದು ಉದಾಹರಣೆಗಾಗಿ ಹಿಂದಿನ ಲೇಖನದ ಆರಂಭದಲ್ಲಿ ಉಲ್ಲೇಖಿಸಲಾದ ಹೆತ್ತವರನ್ನು ಸ್ವಲ್ಪ ಜ್ಞಾಪಿಸಿಕೊಳ್ಳಿ. ಅವರ ಮಗಳು ತೆರೆಸಾ ಕಾಣೆಯಾದ ಸ್ವಲ್ಪ ದಿನಗಳ ಬಳಿಕ, ಆಕೆಯ ಕೊಲೆಯಾಗಿದೆ ಎಂಬ ತಲ್ಲಣಗೊಳಿಸುವ ಸುದ್ದಿ ಅವರಿಗೆ ಸಿಕ್ಕಿತು.a ತಂದೆ ನೆನಪಿಸಿಕೊಳ್ಳುವುದು: “ಆಕೆಯನ್ನು ಕಾಪಾಡಬೇಕೆಂದು ನಾನು ಯೆಹೋವನಲ್ಲಿ ಬೇಡಿದ್ದೆ. ಆಕೆಯ ಕೊಲೆಯಾಗಿದೆ ಎಂದು ತಿಳಿದುಬಂದಾಗ ನನ್ನ ಮನಸ್ಸಿಗೆ ಬಂದ ಮೊದಲ ಯೋಚನೆ ಏನೆಂದರೆ, ‘ದೇವರು ನನ್ನ ಪ್ರಾರ್ಥನೆಗಳನ್ನು ಏಕೆ ಉತ್ತರಿಸಲಿಲ್ಲ?’ ಯೆಹೋವನು ತನ್ನ ಜನರಲ್ಲಿ ಪ್ರತಿಯೊಬ್ಬರನ್ನೂ ಅದ್ಭುತಕರವಾಗಿ ರಕ್ಷಿಸುವೆನೆಂಬ ಮಾತು ಕೊಟ್ಟಿಲ್ಲ ಎಂದು ನನಗೆ ಗೊತ್ತಿತ್ತು. ಹಾಗಾಗಿ ತಿಳುವಳಿಕೆಗಾಗಿ ಪ್ರಾರ್ಥಿಸುವುದನ್ನು ಮುಂದುವರಿಸಿದೆ. ಯೆಹೋವನು ಆಧ್ಯಾತ್ಮಿಕವಾಗಿ ತನ್ನ ಜನರನ್ನು ಸಂರಕ್ಷಿಸುತ್ತಾನೆ ಅಂದರೆ ಆತನೊಂದಿಗಿನ ನಮ್ಮ ಸಂಬಂಧವನ್ನು ಕಾಪಾಡಿಕೊಳ್ಳಲು ಸಹಾಯ ಕೊಡುತ್ತಾನೆಂದು ತಿಳಿದು ಸಾಂತ್ವನ ಪಡೆದುಕೊಂಡೆ. ಅಂಥ ಸಂರಕ್ಷಣೆ ಬಹುಮಹತ್ತ್ವದ್ದು ಏಕೆಂದರೆ ಅದು ಇಲ್ಲದಿದ್ದರೆ ನಮ್ಮ ನಿತ್ಯಜೀವದ ಪ್ರತೀಕ್ಷೆಯು ಬಾಧಿಸಲ್ಪಡುವುದು. ಆ ಅರ್ಥದಲ್ಲಿ ಯೆಹೋವನು ತೆರೆಸಾಳನ್ನು ರಕ್ಷಿಸಿದ್ದನು. ಆಕೆ ಮರಣಪರ್ಯಂತ ದೇವರನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಿದ್ದಳು. ಆಕೆಯ ಭವಿಷ್ಯತ್ತಿನ ಪ್ರತೀಕ್ಷೆ ದೇವರ ಪ್ರೀತಿಯ ಹಸ್ತದಲ್ಲಿದೆ ಎನ್ನುವುದನ್ನು ತಿಳಿಯುವುದು ನನಗೆ ನೆಮ್ಮದಿ ಕೊಟ್ಟಿದೆ.”
ಅಸ್ವಸ್ಥರಾಗಿರುವಾಗ ಉದ್ಧರಿಸುತ್ತಾನೆ
15. ತೀವ್ರವಾಗಿ ಅಸ್ವಸ್ಥರಾಗಿರುವಾಗ ಯೆಹೋವನು ಯಾವ ವಿಧಗಳಲ್ಲಿ ಸಹಾಯ ನೀಡುವನು?
15 ದಾವೀದನ ವಿಷಯದಲ್ಲಿ ಯೆಹೋವನು ಮಾಡಿದಂತೆ, ‘ಅಸ್ವಸ್ಥರಾಗಿ ಬಿದ್ದುಕೊಂಡಿರುವಾಗ’ ಆತನು ನಮ್ಮನ್ನೂ ಉದ್ಧರಿಸುವನು. (ಕೀರ್ತ. 41:3) ನಮ್ಮ ದಿನಗಳಲ್ಲಿ ಯೆಹೋವನು ಅದ್ಭುತಕರವಾಗಿ ನಮ್ಮನ್ನು ವಾಸಿಮಾಡಿ ರಕ್ಷಿಸದಿದ್ದರೂ ಸಹಾಯವಂತೂ ಖಂಡಿತ ಮಾಡುತ್ತಾನೆ. ಹೇಗೆ? ಆತನ ವಾಕ್ಯದಲ್ಲಿರುವ ಮೂಲತತ್ತ್ವಗಳು ಚಿಕಿತ್ಸೆ ಹಾಗೂ ಇತರ ವಿಷಯಗಳ ಬಗ್ಗೆ ವಿವೇಕಯುತ ನಿರ್ಣಯಗಳನ್ನು ಮಾಡಲು ನಮಗೆ ನೆರವು ನೀಡುತ್ತವೆ. (ಜ್ಞಾನೋ. 2:6) ನಮಗಿರುವ ಆರೋಗ್ಯ ಸಮಸ್ಯೆಯ ಕುರಿತು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಸಹಾಯಕರ ಮಾಹಿತಿ ಹಾಗೂ ಪ್ರಾಯೋಗಿಕ ಸಲಹೆಗಳು ಸಿಗಬಹುದು. ಅಲ್ಲದೇ, ನಮಗೆ ಏನೇ ಸಂಭವಿಸಲಿ ನಮ್ಮ ಸನ್ನಿವೇಶವನ್ನು ನಿಭಾಯಿಸಲು ಮತ್ತು ಸಮಗ್ರತೆ ಕಾಪಾಡಿಕೊಳ್ಳಲು ಬೇಕಾದ “ಬಲಾಧಿಕ್ಯ”ವನ್ನು ಯೆಹೋವನು ತನ್ನ ಆತ್ಮದ ಮೂಲಕ ದಯಪಾಲಿಸುವನು. (2 ಕೊರಿಂ. 4:7) ಅಂಥ ಸಹಾಯವು, ಅಸ್ವಸ್ಥತೆಯ ಕಾರಣ ಆಧ್ಯಾತ್ಮಿಕ ವಿಷಯಗಳ ಮೇಲಿನ ನಮ್ಮ ಗಮನ ಬೇರೆಡೆಗೆ ಸರಿಯದಂತೆ ತಡೆಯುತ್ತದೆ.
16. ಒಬ್ಬ ಸಹೋದರನು ಅಸ್ವಸ್ಥತೆಯನ್ನು ಹೇಗೆ ನಿಭಾಯಿಸುತ್ತಿದ್ದಾನೆ?
16 ಹಿಂದಿನ ಲೇಖನದ ಆರಂಭದಲ್ಲಿ ತಿಳಿಸಲಾದ ಯುವ ಸಹೋದರನನ್ನು ಪರಿಗಣಿಸಿ. 1998ರಲ್ಲಿ ಆತನಿಗೆ ಏಮೈಯಟ್ರೋಫಿಕ್ ಲ್ಯಾಟೆರಲ್ ಸ್ಕ್ಲಿರೋಸಿಸ್ (ಏಎಲ್ಎಸ್) ಎಂಬ ರೋಗವಿದೆಯೆಂದು ತಿಳಿದುಬಂತು. ಕೊನೆಗೆ ಇದು ಆತನನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿತು.b ಅವನು ತನ್ನ ಅಸ್ವಸ್ಥತೆಯನ್ನು ಹೇಗೆ ನಿಭಾಯಿಸಿದ್ದಾನೆ? ಅವನು ವಿವರಿಸುವುದು: “ಒಮ್ಮೊಮ್ಮೆ ನಾನೆಷ್ಟು ನೋವು ಮತ್ತು ಹತಾಶೆಯನ್ನು ಅನುಭವಿಸುತ್ತೇನೆಂದರೆ ನಾನು ಸತ್ತರೇ ಒಳ್ಳೇದೆಂದು ನನಗನಿಸುತ್ತದೆ. ಮನ ಕುಗ್ಗಿದಾಗೆಲ್ಲಾ ಯೆಹೋವನಲ್ಲಿ ಮೂರು ವಿಷಯಗಳಿಗಾಗಿ ಬೇಡಿಕೊಳ್ಳುತ್ತೇನೆ: ಪ್ರಶಾಂತ ಮನಸ್ಸು, ಸಹನೆ ಮತ್ತು ತಾಳ್ಮೆ. ಯೆಹೋವನು ನನ್ನ ಪ್ರಾರ್ಥನೆಗಳನ್ನು ಉತ್ತರಿಸಿದ ಅನುಭವ ನನಗಾಗಿದೆ. ಮನಸ್ಸು ಪ್ರಶಾಂತವಾಗಿರುವಾಗ, ನೂತನ ಲೋಕದಲ್ಲಿ ನಾನು ನಡೆಯಬಹುದು, ಸ್ವಾದಿಷ್ಟಕರ ಆಹಾರ ಸವಿಯಬಹುದು ಮತ್ತು ನನ್ನ ಕುಟುಂಬದ ಸದಸ್ಯರೊಟ್ಟಿಗೆ ಮಾತಾಡಬಹುದು ಎಂಬಂಥ ಸಾಂತ್ವನಕರ ವಿಚಾರಗಳ ಕುರಿತು ಯೋಚಿಸಲಾಗುತ್ತದೆ. ಅನಾನುಕೂಲತೆಗಳು ಹಾಗೂ ಸವಾಲುಗಳನ್ನು ನಿಭಾಯಿಸಲು ಸಹನೆ ಸಹಾಯ ಮಾಡುತ್ತದೆ. ತಾಳ್ಮೆಯು ನಾನು ನಂಬಿಗಸ್ತನಾಗಿರಲು ಮತ್ತು ಆಧ್ಯಾತ್ಮಿಕ ಸಮತೋಲನವನ್ನು ಕಾಪಾಡಿಕೊಳ್ಳಲು ನೆರವು ನೀಡುತ್ತದೆ. ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗಲೂ ಯೆಹೋವನು ನನ್ನನ್ನು ಉದ್ಧರಿಸುತ್ತಿರುವುದರಿಂದ ನನಗೂ ದಾವೀದನಿಗಾದ ಅನುಭವ ಆಗುತ್ತಿದೆ.”—ಯೆಶಾ. 35:5, 6.
ಭೌತಿಕವಾಗಿ ಪೋಷಿಸುತ್ತಾನೆ
17. ಯೆಹೋವನು ನಮಗಾಗಿ ಏನು ಮಾಡುವನೆಂದು ಮಾತುಕೊಟ್ಟಿದ್ದಾನೆ, ಮತ್ತು ಅದರರ್ಥವೇನು?
17 ಯೆಹೋವನು ಭೌತಿಕವಾಗಿ ನಮ್ಮನ್ನು ಪೋಷಿಸುವನೆಂದು ಮಾತುಕೊಟ್ಟಿದ್ದಾನೆ. (ಮತ್ತಾಯ 6:33, 34 ಮತ್ತು ಇಬ್ರಿಯ 13:5, 6 ಓದಿ.) ಇದರರ್ಥ ನಮ್ಮ ಭೌತಿಕ ಅವಶ್ಯಕತೆಗಳನ್ನು ಅದ್ಭುತಕರವಾಗಿ ಪೂರೈಸಲಾಗುವುದು ಅಥವಾ ನಾವು ದುಡಿಯಬೇಕಾಗಿಲ್ಲ ಎಂದಲ್ಲ. (2 ಥೆಸ. 3:10) ಬದಲಾಗಿ, ನಮ್ಮ ಜೀವನದಲ್ಲಿ ದೇವರ ರಾಜ್ಯವನ್ನು ಪ್ರಥಮವಾಗಿಡುವಲ್ಲಿ ಮತ್ತು ಹೊಟ್ಟೆಪಾಡಿಗಾಗಿ ದುಡಿಯುವಲ್ಲಿ ಯೆಹೋವನು ನಮ್ಮ ಅಗತ್ಯಗಳನ್ನು ಪೂರೈಸುವನು ಎಂಬ ಭರವಸೆಯಿಂದಿರಬಲ್ಲೆವು. (1 ಥೆಸ. 4:11, 12; 1 ತಿಮೊ. 5:8) ಬಹುಶಃ ಜೊತೆ ಆರಾಧಕನೊಬ್ಬನು ನಮ್ಮ ನೆರವಿಗೆ ಬರಬಹುದು ಇಲ್ಲವೇ ಉದ್ಯೋಗ ನೀಡಬಹುದು. ಹೀಗೆ ನಾವು ನಿರೀಕ್ಷಿಸಿರದ ರೀತಿಯಲ್ಲಿ ಯೆಹೋವನು ನಮ್ಮ ಅಗತ್ಯಗಳನ್ನು ಪೂರೈಸುವನು.
18. ಕೆಲವೊಮ್ಮೆ ನಮ್ಮ ಭೌತಿಕ ಅಗತ್ಯಗಳು ಪೂರೈಸಲ್ಪಡಬಹುದು ಎಂಬುದನ್ನು ತೋರಿಸುವ ಅನುಭವವೊಂದನ್ನು ತಿಳಿಸಿ.
18 ಹಿಂದಿನ ಲೇಖನದಲ್ಲಿ ತಿಳಿಸಲಾದ ಒಂಟಿ ತಾಯಿಯನ್ನು ಸ್ವಲ್ಪ ಜ್ಞಾಪಿಸಿಕೊಳ್ಳಿ. ಆಕೆ ತನ್ನ ಚಿಕ್ಕ ಮಗಳೊಂದಿಗೆ ಹೊಸ ಪ್ರದೇಶವೊಂದಕ್ಕೆ ಸ್ಥಳಾಂತರಿಸಿದಾಗ ಆಕೆಗೆ ಉದ್ಯೋಗವಿರಲಿಲ್ಲ. ಆಕೆ ವಿವರಿಸುವುದು: “ಬೆಳಿಗ್ಗೆಲ್ಲಾ ಸೇವೆಗೆ ಹೋಗಿ ಮಧ್ಯಾಹ್ನವಿಡೀ ಕೆಲಸಕ್ಕಾಗಿ ಹುಡುಕಾಡುತ್ತಿದ್ದೆ. ಒಮ್ಮೆ, ಹಾಲು ತರಲು ಕಿರಾಣಿ ಅಂಗಡಿಗೆ ಹೋದ ನೆನಪು ನನಗಿನ್ನೂ ಇದೆ. ಅಲ್ಲಿ ನಾನು ತರಕಾರಿಗಳನ್ನು ನೋಡುತ್ತಾ ನಿಂತೆ. ಅದರಲ್ಲಿ ಯಾವುದನ್ನೂ ಖರೀದಿಸುವಷ್ಟು ಹಣ ನನ್ನ ಬಳಿ ಇರಲಿಲ್ಲ. ಜೀವನದಲ್ಲಿ ಹಿಂದೆಂದೂ ನನಗೆ ಇಷ್ಟು ನಿರಾಶೆಯಾಗಿದ್ದಿಲ್ಲ. ಅಂಗಡಿಯಿಂದ ಮನೆಗೆ ಹಿಂತೆರಳಿದಾಗ ಹಿಂಬಾಗಿಲ ಬಳಿ ಎಲ್ಲಾ ತರದ ತರಕಾರಿಗಳಿದ್ದ ಚೀಲಗಳಿದ್ದವು. ಅದು, ಕೆಲವು ತಿಂಗಳುಗಳಿಗೆ ಸಾಕಾಗುವಷ್ಟಿತ್ತು. ನನಗೆ ಅಳು ತಡೆಯಲಾಗಲಿಲ್ಲ. ಅಳುತ್ತಾ ಯೆಹೋವನಿಗೆ ಧನ್ಯವಾದ ಹೇಳಿದೆ.” ಸಭೆಯ ಸಹೋದರನೊಬ್ಬನು ತನ್ನ ತೋಟದಲ್ಲಿ ಬೆಳೆಸಿದ ತರಕಾರಿಗಳನ್ನು ಅವರಿಗಾಗಿ ಇಟ್ಟುಹೋಗಿದ್ದನೆಂದು ಆ ಸಹೋದರಿಗೆ ನಂತರ ತಿಳಿಯಿತು. ಆಕೆ ಆ ಸಹೋದರನಿಗೆ ಹೀಗೆ ಪತ್ರ ಬರೆದಳು: “ಆವತ್ತು ನಾನು ನಿಮಗೆ ಬಹಳ ಆಭಾರಿಯಾಗಿದ್ದೇನಾದರೂ, ನಿಮ್ಮ ದಯೆಯನ್ನು ಉಪಯೋಗಿಸುತ್ತಾ ಯೆಹೋವನು ನನ್ನ ಮೇಲಿರುವ ಪ್ರೀತಿಯನ್ನು ನೆನಪುಹುಟ್ಟಿಸಿದ್ದಕ್ಕೆ ನಾನು ಆತನಿಗೂ ಧನ್ಯವಾದ ಹೇಳಿದೆ.”—ಜ್ಞಾನೋ. 19:17.
19. ಮಹಾಸಂಕಟದ ಸಮಯದಲ್ಲಿ ಯೆಹೋವನ ಸೇವಕರಿಗೆ ಯಾವ ಭರವಸೆಯಿರುವುದು, ಮತ್ತು ಈಗ ನಾವೇನು ಮಾಡಲು ದೃಢನಿಶ್ಚಯದಿಂದಿರಬೇಕು?
19 ಯೆಹೋವನು ಬೈಬಲ್ ಸಮಯಗಳಲ್ಲಿ ಮತ್ತು ನಮ್ಮ ದಿನಗಳಲ್ಲಿ ಏನನ್ನು ಮಾಡಿದ್ದಾನೋ ಅದು ಆತನು ನಮ್ಮ ಸಹಾಯಕನೆಂಬ ಭರವಸೆಯಿಡಲು ಖಂಡಿತವಾಗಿ ಕಾರಣಗಳನ್ನು ಕೊಡುತ್ತದೆ. ಬಲುಬೇಗನೆ ಸೈತಾನನ ಲೋಕಕ್ಕೆ ಬರುವ ಮಹಾಸಂಕಟದ ಸಮಯದಲ್ಲಿ ಹಿಂದೆಂದಿಗಿಂತ ಹೆಚ್ಚಾಗಿ ಯೆಹೋವನ ಸಹಾಯದ ಅಗತ್ಯ ನಮಗಿರುವುದು. ಯೆಹೋವನ ಸೇವಕರು ಪೂರ್ಣ ಭರವಸೆಯಿಂದ ಆತನೆಡೆಗೆ ನೋಡಬಲ್ಲರು. ಅವರ ಬಿಡುಗಡೆ ಹತ್ತಿರವಾಗಿರುವುದರಿಂದ ಅವರು ತಮ್ಮ ತಲೆಯೆತ್ತಿ ಸಂತೋಷಿಸುವರು. (ಲೂಕ 21:28) ಈ ನಡುವೆ ನಮ್ಮ ಮೇಲೆ ಯಾವುದೇ ಕಷ್ಟಗಳು ಬರಲಿ, ಎಂದೂ ಬದಲಾಗದ ನಮ್ಮ ದೇವರು ನಮ್ಮ ‘ರಕ್ಷಕನು’ ಎಂಬ ಪೂರ್ಣ ನಂಬಿಕೆಯೊಂದಿಗೆ ಯೆಹೋವನಲ್ಲಿ ಭರವಸೆಯಿಡಲು ದೃಢನಿಶ್ಚಯದಿಂದಿರೋಣ.
[ಪಾದಟಿಪ್ಪಣಿಗಳು]
a 2001, ಜುಲೈ 22ರ ಎಚ್ಚರ! (ಇಂಗ್ಲಿಷ್) ಪತ್ರಿಕೆಯ ಪುಟ 19-23ರಲ್ಲಿರುವ “ಹೇಳತೀರದ ಬೀಭತ್ಸ ದುರಂತವನ್ನು ನಿಭಾಯಿಸುವುದು” ಎಂಬ ಲೇಖನ ನೋಡಿ.
b 2006, ಜನವರಿ ತಿಂಗಳ ಎಚ್ಚರ! (ಇಂಗ್ಲಿಷ್) ಪತ್ರಿಕೆಯ ಪುಟ 25-29ರಲ್ಲಿರುವ “ಎಎಲ್ಎಸ್ ರೋಗದೊಂದಿಗಿನ ಹೋರಾಟದಲ್ಲಿ ನಂಬಿಕೆಯೇ ನನ್ನನ್ನು ಪೋಷಿಸಿದೆ” ಎಂಬ ಲೇಖನ ನೋಡಿ.
ನಿಮಗೆ ಜ್ಞಾಪಕವಿದೆಯೋ?
• ಅಕಾಲಿಕ ಮರಣಕ್ಕೀಡಾದವರನ್ನು ಯೆಹೋವನು ಯಾವ ಅರ್ಥದಲ್ಲಿ ರಕ್ಷಿಸಿರುತ್ತಾನೆ?
• ಆಧ್ಯಾತ್ಮಿಕ ಸಂರಕ್ಷಣೆ ಅತ್ಯಮೂಲ್ಯವೇಕೆ?
• ನಮ್ಮನ್ನು ಭೌತಿಕವಾಗಿ ಪೋಷಿಸುವನೆಂದು ಯೆಹೋವನು ಕೊಟ್ಟ ಮಾತಿನ ಅರ್ಥವೇನು?
[ಪುಟ 8ರಲ್ಲಿರುವ ಚಿತ್ರ]
1918ರಲ್ಲಿ ದಸ್ತಗಿರಿಯಾದ ಸಹೋದರ ರದರ್ಫರ್ಡ್ ಮತ್ತವರ ಸಂಗಡಿಗರನ್ನು ನಂತರ ಬಿಡುಗಡೆಗೊಳಿಸಿ ಅವರ ಮೇಲಿದ್ದ ಸುಳ್ಳಾರೋಪಗಳನ್ನು ರದ್ದುಗೊಳಿಸಲಾಯಿತು
[ಪುಟ 10ರಲ್ಲಿರುವ ಚಿತ್ರ]
ನಾವು ‘ಅಸ್ವಸ್ಥರಾಗಿ ಬಿದ್ದುಕೊಂಡಿರುವಾಗ’ ಯೆಹೋವನು ನಮ್ಮನ್ನು ಉದ್ಧರಿಸಬಲ್ಲನು