ನಮ್ಮ ಒಳಿತಿಗಾಗಿಯೇ ಯೆಹೋವನು ನಮ್ಮ ಮೇಲೆ ಕಣ್ಣಿಡುತ್ತಾನೆ
“ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ.”—2 ಪೂರ್ವ. 16:9.
1. ಯೆಹೋವನು ನಮ್ಮನ್ನು ಪರಿಶೋಧಿಸುವುದೇಕೆ?
ಯೆಹೋವನೊಬ್ಬ ಪರಿಪೂರ್ಣ ತಂದೆ. ಆತನು ನಮ್ಮ ಬಗ್ಗೆ ಎಷ್ಟರಮಟ್ಟಿಗೆ ತಿಳಿದುಕೊಂಡಿದ್ದಾನೆಂದರೆ ನಮ್ಮ ‘ಮನಸ್ಸಂಕಲ್ಪಗಳನ್ನೂ ಬಲ್ಲವನಾಗಿದ್ದಾನೆ.’ (1 ಪೂರ್ವ. 28:9) ಆದರೆ ತಪ್ಪು ಹುಡುಕಲಿಕ್ಕಾಗಿ ಆತನು ನಮ್ಮನ್ನು ಪರಿಶೋಧಿಸುವುದಿಲ್ಲ. (ಕೀರ್ತ. 11:4; 130:3) ಅದಕ್ಕೆ ಬದಲಾಗಿ ಆತನೊಂದಿಗಿನ ನಮ್ಮ ಸಂಬಂಧವನ್ನು ಹಾಳುಗೆಡಹುವ ಇಲ್ಲವೇ ಸದಾ ಜೀವಿಸುವ ನಮ್ಮ ಪ್ರತೀಕ್ಷೆಗೆ ಕುತ್ತುತರುವ ಯಾವುದೇ ವಿಷಯದಿಂದ ನಮ್ಮನ್ನು ಸಂರಕ್ಷಿಸುವುದೇ ಆತನ ಬಯಕೆಯಾಗಿದೆ.—ಕೀರ್ತ. 25:8-10, 12, 13.
2. ಯೆಹೋವನು ಯಾರ ಪರವಾಗಿ ತನ್ನ ಶಕ್ತಿಯನ್ನು ತೋರ್ಪಡಿಸುತ್ತಾನೆ?
2 ಯೆಹೋವನು ಸರ್ವಶಕ್ತನು ಮತ್ತು ಎಲ್ಲರನ್ನು ನೋಡುತ್ತಾನೆ. ಆದ್ದರಿಂದಲೇ ನಿಷ್ಠಾವಂತ ಜನರು ತನಗೆ ಮೊರೆಯಿಡುವಾಗ ಸಹಾಯಕೊಡಲು ಮತ್ತು ಸಂಕಷ್ಟಗಳಲ್ಲಿ ಅವರನ್ನು ಬೆಂಬಲಿಸಲು ಆತನು ಶಕ್ತನಾಗಿದ್ದಾನೆ. “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ” ಎನ್ನುತ್ತದೆ 2 ಪೂರ್ವಕಾಲವೃತ್ತಾಂತ 16:9. ಯಥಾರ್ಥಮನಸ್ಸಿನಿಂದ ತನ್ನನ್ನು ಸೇವಿಸುವವರ ಪರವಾಗಿ ಯೆಹೋವನು ತನ್ನ ಪ್ರತಾಪ ಅಥವಾ ಶಕ್ತಿಯನ್ನು ಬಳಸುತ್ತಾನೆಂಬುದನ್ನು ಗಮನಿಸಿರಿ. ಆದರೆ ವಂಚಕರ ಹಾಗೂ ಕಪಟಿಗಳ ಕಡೆಗೆ ಆತನೆಂದೂ ಪರಿಗಣನೆ ತೋರಿಸುವುದಿಲ್ಲ.—ಯೆಹೋ. 7:1, 2, 21, 25; ಜ್ಞಾನೋ. 1:23-33.
ದೇವರೊಂದಿಗೆ ನಡೆಯಿರಿ
3, 4. ‘ದೇವರೊಂದಿಗೆ ನಡೆಯುವುದು’ ಎಂದರೇನು, ಮತ್ತು ಇದನ್ನು ಅರ್ಥಮಾಡಿಕೊಳ್ಳಲು ಯಾವ ಬೈಬಲ್ ಉದಾಹರಣೆಗಳು ಸಹಾಯ ಮಾಡುತ್ತವೆ?
3 ಈ ವಿಶಾಲ ವಿಶ್ವದ ಸೃಷ್ಟಿಕರ್ತನು ಆಧ್ಯಾತ್ಮಿಕ ಅರ್ಥದಲ್ಲಿ ಮಾನವರಿಗೆ ತನ್ನೊಂದಿಗೆ ನಡೆಯುವಂತೆ ಅವಕಾಶಕೊಡುತ್ತಾನೆಂಬ ವಿಚಾರ ಅನೇಕರಿಗೆ ಊಹಿಸಲಸಾಧ್ಯವಾದ ಸಂಗತಿ. ಆದರೆ ಯೆಹೋವನಂತೂ ನಾವಾತನೊಂದಿಗೆ ನಡೆಯುವಂತೆ ಬಯಸುತ್ತಾನೆ. ಬೈಬಲ್ ಸಮಯಗಳಲ್ಲಿ ಹನೋಕ ಮತ್ತು ನೋಹರು ‘ದೇವರೊಂದಿಗೆ ಅನ್ಯೋನ್ಯವಾಗಿ ನಡೆದರು.’ (ಆದಿ. 5:24; 6:9) ಮೋಶೆಯು “ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.” (ಇಬ್ರಿ. 11:27) ರಾಜ ದಾವೀದನು ತನ್ನ ಸ್ವರ್ಗೀಯ ತಂದೆಯೊಂದಿಗೆ ದೀನನಾಗಿ ನಡೆದನು. ಅವನು ಹೇಳಿದ್ದು: “ಆತನು [ಯೆಹೋವನು] ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಎಂದಿಗೂ ಕದಲುವದಿಲ್ಲ.”—ಕೀರ್ತ. 16:8.
4 ಖಂಡಿತವಾಗಿಯೂ ನಾವು ಅಕ್ಷರಾರ್ಥಕ ರೀತಿಯಲ್ಲಿ ಯೆಹೋವನ ಕೈಹಿಡಿದುಕೊಂಡು ಆತನೊಂದಿಗೆ ನಡೆಯಲು ಸಾಧ್ಯವಿಲ್ಲ. ಆದರೆ ಸಾಂಕೇತಿಕಾರ್ಥದಲ್ಲಿ ಅದನ್ನು ಮಾಡಬಹುದು. ಹೇಗೆ? ಕೀರ್ತನೆಗಾರ ಆಸಾಫನು ಬರೆದದ್ದು: ‘ಸದಾ ನಿನ್ನ ಸನ್ನಿಧಿಯಲ್ಲಿಯೇ ಇದ್ದೇನೆ. ನೀನು ನನ್ನ ಬಲಗೈಯನ್ನು ಹಿಡಿದು ನಿನ್ನ ಚಿತ್ತವನ್ನು ತಿಳಿಯಪಡಿಸುವಿ.’ (ಕೀರ್ತ. 73:23, 24) ಸರಳವಾಗಿ ಹೇಳುವುದಾದರೆ, ಆತನ ಚಿತ್ತವನ್ನು ನಿಕಟವಾಗಿ ಅನುಸರಿಸುವಾಗ ಆತನೊಂದಿಗೆ ನಡೆಯುತ್ತೇವೆ. ಆ ಚಿತ್ತವನ್ನು ನಾವು ಪ್ರಧಾನವಾಗಿ ಯೆಹೋವನ ಲಿಖಿತ ವಾಕ್ಯದಲ್ಲಿ ಕಂಡುಕೊಳ್ಳುತ್ತೇವೆ ಮತ್ತು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗವು ಕೂಡ ತಿಳಿಯಪಡಿಸುತ್ತದೆ.—ಮತ್ತಾ. 24:45; 2 ತಿಮೊ. 3:16.
5. ಪ್ರೀತಿಪರ ತಂದೆಯೋಪಾದಿ ಯೆಹೋವನು ನಿಷ್ಠಾವಂತರನ್ನು ಹೇಗೆ ಗಮನಿಸುತ್ತಾನೆ, ಮತ್ತು ಆತನ ಬಗ್ಗೆ ನಮಗೆ ಹೇಗನಿಸಬೇಕು?
5 ತನ್ನೊಂದಿಗೆ ನಡೆಯುವವರನ್ನು ಯೆಹೋವನು ಮಾನ್ಯಮಾಡುತ್ತಾನೆ. ಆದ್ದರಿಂದಲೇ ಆತನು ಪ್ರೀತಿಪರ ತಂದೆಯಂತೆ ಅವರನ್ನು ಗಮನಿಸುತ್ತಾನೆ, ಪರಾಮರಿಸುತ್ತಾನೆ, ಸಂರಕ್ಷಿಸುತ್ತಾನೆ ಮತ್ತು ಬೋಧಿಸುತ್ತಾನೆ. ದೇವರು ಹೇಳುವುದು: “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು.” (ಕೀರ್ತ. 32:8) ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ಯೆಹೋವನ ವಿವೇಕಕ್ಕೆ ಕಿವಿಗೊಡುತ್ತಾ ಆತನ ಕೃಪಕಟಾಕ್ಷ ನನ್ನ ಮೇಲಿದೆ ಎಂಬುದನ್ನು ಗ್ರಹಿಸುತ್ತಾ ಆತನೊಂದಿಗೆ ಕೈಹಿಡಿದು ನಡೆಯುತ್ತಿರುವುದನ್ನು ನಾನು ಚಿತ್ರಿಸಿಕೊಳ್ಳುತ್ತೇನೋ? ನಾನಾತನ ಕಣ್ಣೆದುರು ಇದ್ದೇನೆಂಬ ಅರಿವು ನನ್ನ ಆಲೋಚನೆ, ಮಾತು ಮತ್ತು ಕೃತ್ಯಗಳನ್ನು ಪ್ರಭಾವಿಸುತ್ತದೋ? ನಾನು ತಪ್ಪು ಮಾಡಿರುವಾಗ, ಯೆಹೋವನನ್ನು ಭಾವಶೂನ್ಯ ನಿರ್ದಯಿ ದೇವರಂತಲ್ಲ ಬದಲಾಗಿ ಪಶ್ಚಾತ್ತಾಪಿಗಳು ತನ್ನೊಂದಿಗೆ ಆಪ್ತ ಸಂಬಂಧವನ್ನು ಪುನಃ ಬೆಸೆಯುವಂತೆ ಸಹಾಯ ಮಾಡುವ ಕರುಣಾಮಯಿ ತಂದೆಯಾಗಿ ಪರಿಗಣಿಸುತ್ತೇನೋ?’—ಕೀರ್ತ. 51:17.
6. ಯೆಹೋವನು ಯಾವ ರೀತಿಯಲ್ಲಿ ಮಾನವ ಹೆತ್ತವರಿಗಿಂತ ಸರ್ವೋತ್ಕೃಷ್ಟನಾಗಿದ್ದಾನೆ?
6 ಕೆಲವೊಮ್ಮೆ ನಾವು ತಪ್ಪು ಮಾರ್ಗ ಹಿಡಿಯುವ ಮುಂಚೆಯೇ ಯೆಹೋವನು ನಮ್ಮ ಸಹಾಯಕ್ಕೆ ಬರಬಹುದು. ಉದಾಹರಣೆಗೆ, ನಮ್ಮ ವಂಚಕ ಹೃದಯವು ಅಯೋಗ್ಯ ವಿಷಯಗಳನ್ನು ಆಶಿಸಲು ಆರಂಭಿಸಿರುವುದನ್ನು ಆತನು ಗಮನಿಸಬಹುದು. (ಯೆರೆ. 17:9) ಅಂಥ ಸಂದರ್ಭಗಳಲ್ಲಿ ಮಾನವ ಹೆತ್ತವರಿಗಿಂತ ಮೊದಲೇ ಯೆಹೋವನು ಕ್ರಿಯೆಗೈಯಬಲ್ಲನು. ಏಕೆಂದರೆ ನಮ್ಮ ಅಂತರಂಗವನ್ನು ನೋಡುವ ಮತ್ತು ನಮ್ಮ ಆಲೋಚನೆಗಳನ್ನು ಪರಿಶೋಧಿಸುವ ಸಾಮರ್ಥ್ಯ ಆತನ “ಕಣ್ಣು”ಗಳಿಗಿದೆ. (ಕೀರ್ತ. 11:4; 139:4; ಯೆರೆ. 17:10) ನಾವೀಗ ಯೆರೆಮೀಯನ ಕಾರ್ಯದರ್ಶಿಯೂ ಆಪ್ತ ಸ್ನೇಹಿತನೂ ಆಗಿದ್ದ ಬಾರೂಕನ ಜೀವನದ ಒಂದು ಸನ್ನಿವೇಶಕ್ಕೆ ದೇವರು ಪ್ರತಿಕ್ರಿಯಿಸಿದ ರೀತಿಯನ್ನು ಪರಿಗಣಿಸೋಣ.
ಯೆಹೋವನು ಬಾರೂಕನಿಗೆ ನಿಜವಾಗಿ ತಂದೆಯಂತಿದ್ದನು
7, 8. (ಎ) ಬಾರೂಕನು ಯಾರು, ಮತ್ತು ಯಾವ ಅಹಿತಕರ ಆಶೆಗಳು ಅವನ ಹೃದಯದಲ್ಲಿ ಬೆಳೆಯಲಾರಂಭಿಸಿದವು? (ಬಿ) ಯೆಹೋವನು ಬಾರೂಕನಿಗೆ ತಂದೆಯಂಥ ಕಳಕಳಿ ತೋರಿಸಿದ್ದು ಹೇಗೆ?
7 ಬಾರೂಕನು ವೃತ್ತಿಪರ ಬರಹಗಾರನಾಗಿದ್ದನು. ಇವನು, ಯೆರೆಮೀಯನೊಂದಿಗೆ ನಂಬಿಗಸ್ತನಾಗಿ ಸೇವೆಸಲ್ಲಿಸುತ್ತಾ ಯೆಹೂದಕ್ಕೆ ಯೆಹೋವನ ನ್ಯಾಯತೀರ್ಪುಗಳನ್ನು ಘೋಷಿಸುವ ಕಷ್ಟಕರ ನೇಮಕವನ್ನು ಪೂರೈಸಿದನು. (ಯೆರೆ. 1:18, 19) ಬಹುಶಃ ಪ್ರತಿಷ್ಠಿತ ಕುಟುಂಬದವನಾದ ಬಾರೂಕನು ಒಂದು ಸಂದರ್ಭದಲ್ಲಿ “ಮಹಾಪದವಿಯನ್ನು” ನಿರೀಕ್ಷಿಸಲಾರಂಭಿಸಿದನು. ಅವನು ಭೌತಿಕ ಸಮೃದ್ಧಿಗಾಗಿ ಆಶೆ ಅಥವಾ ಮಹತ್ತ್ವಾಕಾಂಕ್ಷೆಯನ್ನು ತನ್ನ ಹೃದಯದಲ್ಲೇ ಬೆಳೆಸಿಕೊಂಡಿರಬೇಕು. ವಿಷಯ ಏನೇ ಆಗಿರಲಿ, ಬಾರೂಕನ ಹೃದಯದಲ್ಲಿ ಈ ಸಂಚಕಾರಿ ಯೋಚನೆ ಬೆಳೆಯುತ್ತಿರುವುದನ್ನು ಯೆಹೋವನು ನೋಡಿದನು. ಯೆಹೋವನು ಒಡನೆಯೇ ಈ ವಿಚಾರವನ್ನು ಕೈಗೆತ್ತಿ ಯೆರೆಮೀಯನ ಮೂಲಕ ಬಾರೂಕನಿಗಂದದ್ದು: “ವ್ಯಥೆಪಡುತ್ತಿದ್ದ ನನ್ನನ್ನು ಯೆಹೋವನು ಹೆಚ್ಚೆಚ್ಚಾಗಿ ದುಃಖಪಡಿಸಿದ್ದಾನೆ; ನಾನು ನರಳಿ ನರಳಿ ದಣಿದಿದ್ದೇನೆ, ನನಗೆ ಯಾವ ವಿಶ್ರಾಂತಿಯೂ ದೊರಕದು ಎಂದು ಹೇಳಿದಿಯಲ್ಲಾ.” ನಂತರ ದೇವರು ಹೇಳಿದ್ದು: “ಮಹಾಪದವಿಯನ್ನು ನಿರೀಕ್ಷಿಸಿಕೊಳ್ಳುತ್ತೀಯೋ? ನಿರೀಕ್ಷಿಸ ಬೇಡ.”—ಯೆರೆ. 45:1-5.
8 ಯೆಹೋವನು ಬಾರೂಕನೊಂದಿಗೆ ದೃಢತೆಯಿಂದ ವ್ಯವಹರಿಸಿದನು. ಹಾಗಿದ್ದರೂ ಯೆಹೋವನು ಕೋಪ ಮಾಡಿಕೊಳ್ಳದೆ ತಂದೆಯಂತೆ ನಿಜವಾದ ಕಳಕಳಿ ಅಥವಾ ಚಿಂತೆ ತೋರಿಸಿದನು. ಬಾರೂಕನ ಆಶೆಗಳು ಸ್ವತಃ ಅವನಿಗೆ ಸಂಚಕಾರಿ ಆಗಿದ್ದಿರಬಹುದಾದರೂ ಅವನ ಹೃದಯದಲ್ಲಿ ಕೆಟ್ಟತನ ಇಲ್ಲವೇ ಕಪಟ ಇರಲಿಲ್ಲವೆಂಬುದನ್ನು ದೇವರು ನೋಡಿದನು. ಅಲ್ಲದೇ, ಯೆಹೂದ ಮತ್ತು ಯೆರೂಸಲೇಮಿನ ಅಂತ್ಯ ಹತ್ತಿರವಾಗಿದೆ ಎಂದು ಯೆಹೋವನಿಗೆ ತಿಳಿದಿದ್ದರಿಂದ ಈ ನಿರ್ಣಾಯಕ ಸಮಯದಲ್ಲಿ ಬಾರೂಕನು ತಪ್ಪು ಮಾಡಿ ಎಡವುದನ್ನು ಆತನು ಬಯಸಲಿಲ್ಲ. ಆದ್ದರಿಂದ ದೇವರು ತನ್ನ ಸೇವಕನನ್ನು ಮತ್ತೆ ವಾಸ್ತವಕ್ಕೆ ಕರೆತರುವ ಸಲುವಾಗಿ, “ನಾನು ನರಜನ್ಮದವರೆಲ್ಲರಿಗೂ ಕೇಡನ್ನುಂಟುಮಾಡುವೆನು” ಎಂದು ಮರುಜ್ಞಾಪಿಸಿದನು. ಒಂದುವೇಳೆ ಬಾರೂಕನು ವಿವೇಕಯುತವಾಗಿ ವರ್ತಿಸಿದಲ್ಲಿ ಬದುಕುಳಿಯುವನು ಎಂದೂ ಆತನು ಹೇಳಿದನು. (ಯೆರೆ 45:5) ಕಾರ್ಯತಃ ದೇವರು ಅವನಿಗೆ ಹೀಗಂದಿದ್ದನು: ‘ಬಾರೂಕನೇ, ವಾಸ್ತವದ ಕುರಿತು ಯೋಚಿಸು. ಪಾಪತುಂಬಿದ ಯೆಹೂದ ಮತ್ತು ಯೆರೂಸಲೇಮ್ಗೆ ಬೇಗನೆ ಏನಾಗಲಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೋ. ನಂಬಿಗಸ್ತನಾಗಿದ್ದು ಜೀವ ಉಳಿಸಿಕೋ! ನಾನು ನಿನ್ನನ್ನು ಸಂರಕ್ಷಿಸುವೆನು.’ ನಿಶ್ಚಯವಾಗಿ ಯೆಹೋವನ ಮಾತುಗಳು ಬಾರೂಕನ ಹೃದಯದ ಕದವನ್ನು ತಟ್ಟಿರಬೇಕು. ಆದ್ದರಿಂದಲೇ ಅವನು ತನ್ನ ಯೋಚನಾರೀತಿಯನ್ನು ಸರಿಪಡಿಸಿದನು. ಹೀಗೆ 17 ವರ್ಷಗಳ ಅನಂತರ ಸಂಭವಿಸಿದ ಯೆರೂಸಲೇಮಿನ ನಾಶನವನ್ನು ಪಾರಾದನು.
9. ಈ ಪ್ಯಾರಗ್ರಾಫ್ನಲ್ಲಿರುವ ಪ್ರಶ್ನೆಗಳನ್ನು ನೀವು ಹೇಗೆ ಉತ್ತರಿಸುವಿರಿ?
9 ಬಾರೂಕನ ಕುರಿತ ವೃತ್ತಾಂತವನ್ನು ಪರ್ಯಾಲೋಚಿಸುವಾಗ ಈ ಕೆಳಗಿನ ಪ್ರಶ್ನೆಗಳನ್ನೂ ಶಾಸ್ತ್ರವಚನಗಳನ್ನೂ ಪರಿಗಣಿಸಿ: ಯೆಹೋವನು ಬಾರೂಕನೊಂದಿಗೆ ವ್ಯವಹರಿಸಿದ ರೀತಿಯು ಆತನ ಬಗ್ಗೆ ಮತ್ತು ಆತನಿಗೆ ತನ್ನ ಸೇವಕರ ಕಡೆಗಿರುವ ಅನಿಸಿಕೆಗಳ ಬಗ್ಗೆ ಏನನ್ನು ತಿಳಿಯಪಡಿಸುತ್ತದೆ? (ಇಬ್ರಿಯ 12:9 ಓದಿ.) ನಾವು ಕಠಿನ ಕಾಲಗಳಲ್ಲಿ ಜೀವಿಸುತ್ತಿರುವುದರಿಂದ, ದೇವರು ಬಾರೂಕನಿಗೆ ಕೊಟ್ಟ ಸಲಹೆ ಮತ್ತು ಬಾರೂಕನ ಪ್ರತಿಕ್ರಿಯೆಯಿಂದ ನಾವೇನನ್ನು ಕಲಿಯಬಲ್ಲೆವು? (ಲೂಕ 21:34-36 ಓದಿ.) ಯೆರೆಮೀಯನನ್ನು ಅನುಕರಿಸುತ್ತಾ ಕ್ರೈಸ್ತ ಹಿರಿಯರು ಯೆಹೋವನಿಗೆ ತನ್ನ ಸೇವಕರ ಕಡೆಗಿರುವ ಕಳಕಳಿಯನ್ನು ಹೇಗೆ ತೋರಿಸಬಲ್ಲರು?—ಗಲಾತ್ಯ 6:1 ಓದಿ.
ಮಗನಲ್ಲಿ ತೋರಿಬಂದ ತಂದೆಯ ಪ್ರೀತಿ
10. ಕ್ರೈಸ್ತ ಸಭೆಯ ಶಿರಸ್ಸಾಗಿರುವ ಯೇಸು ತನ್ನ ಅಧಿಕಾರವನ್ನು ನಿರ್ವಹಿಸಲು ಹೇಗೆ ಸನ್ನದ್ಧನಾಗಿದ್ದಾನೆ?
10 ಕ್ರೈಸ್ತಪೂರ್ವ ಸಮಯಗಳಲ್ಲಿ ಯೆಹೋವನು ಪ್ರವಾದಿಗಳು ಮತ್ತು ಇತರ ನಂಬಿಗಸ್ತ ಸೇವಕರ ಮೂಲಕ ತನ್ನ ಜನರಿಗಾಗಿರುವ ಪ್ರೀತಿಯನ್ನು ತೋರ್ಪಡಿಸಿದನು. ಇಂದು ಸಭೆಯ ಶಿರಸ್ಸಾಗಿರುವ ಯೇಸು ಕ್ರಿಸ್ತನ ಮೂಲಕ ಈ ಪ್ರೀತಿ ತೋರಿಬರುತ್ತದೆ. (ಎಫೆ. 1:22, 23) ಪ್ರಕಟನೆ ಪುಸ್ತಕದಲ್ಲಿ ಯೇಸುವನ್ನು ಕುರಿಯಾಗಿ ಚಿತ್ರಿಸಲಾಗಿದೆ. ಆ ಕುರಿಗೆ “ಏಳು ಕಣ್ಣುಗಳೂ ಇದ್ದವು; ಅವು ಏನಂದರೆ ಭೂಮಿಯ ಮೇಲೆಲ್ಲಾ ಕಳುಹಿಸಲ್ಪಟ್ಟಿರುವ ದೇವರ ಏಳು ಆತ್ಮಗಳು.” (ಪ್ರಕ. 5:6) ಹೌದು, ದೇವರ ಪವಿತ್ರಾತ್ಮವನ್ನು ಪೂರ್ಣವಾಗಿ ಹೊಂದಿರುವ ಯೇಸುವಿನಲ್ಲಿ ಪರಿಪೂರ್ಣ ವಿವೇಚನಾಶಕ್ತಿಯಿದೆ. ನಾವು ಅಂತರಂಗದಲ್ಲಿ ಏನಾಗಿದ್ದೇವೋ ಅದು ಆತನಿಗೂ ಗೊತ್ತಿದೆ. ಆತನಿಂದ ಯಾವ ವಿಷಯವೂ ಮರೆಯಾಗಿರಲಾರದು.
11. ಕ್ರಿಸ್ತನು ಯಾವ ಪಾತ್ರ ವಹಿಸುವನು, ಮತ್ತು ನಮ್ಮ ಕಡೆಗಿನ ಆತನ ಮನೋಭಾವ ಹೇಗೆ ಆತನ ತಂದೆಯ ಮನೋಭಾವವನ್ನು ಹೋಲುತ್ತದೆ?
11 ಯೆಹೋವನಂತೆ ಯೇಸು ಕೂಡ ಸ್ವರ್ಗದಿಂದ ಪೊಲೀಸ್ನಂತೆ ನೋಡುತ್ತಿರುವುದಿಲ್ಲ. ಪ್ರೀತಿಭರಿತ ತಂದೆಯಂತೆ ಆತನು ನಮ್ಮನ್ನು ಪರಿಶೋಧಿಸುತ್ತಾನೆ. ಯೇಸುವಿಗಿರುವ “ನಿತ್ಯನಾದ ತಂದೆ” ಎಂಬ ಬಿರುದು ತಾನೇ, ಆತನಲ್ಲಿ ನಂಬಿಕೆಯಿಡುವವರಿಗೆ ನಿತ್ಯಜೀವವನ್ನು ದಯಪಾಲಿಸುವುದರಲ್ಲಿ ಆತನಿಗಿರುವ ಪಾತ್ರವನ್ನು ನಮಗೆ ನೆನಪುಹುಟ್ಟಿಸುತ್ತದೆ. (ಯೆಶಾ. 9:6) ಅದಕ್ಕಿಂತ ಹೆಚ್ಚಾಗಿ ಸಭೆಯ ಶಿರಸ್ಸಾಗಿರುವ ಯೇಸು ಅಗತ್ಯದಲ್ಲಿರುವವರಿಗೆ ಸಲಹೆ ಅಥವಾ ಸಾಂತ್ವನ ನೀಡಲು ಆಧ್ಯಾತ್ಮಿಕವಾಗಿ ಪ್ರೌಢರಾದ ಕ್ರೈಸ್ತರನ್ನು ಅದರಲ್ಲೂ ಹಿರಿಯರನ್ನು ಪ್ರೇರಿಸಬಲ್ಲನು.—1 ಥೆಸ. 5:14; 2 ತಿಮೊ. 4:1, 2.
12. (ಎ) ಏಷಿಯಾ ಮೈನರ್ನಲ್ಲಿದ್ದ ಏಳು ಸಭೆಗಳಿಗೆ ಸಂಬೋಧಿಸಲಾದ ಪತ್ರಗಳಿಂದ ಯೇಸುವಿನ ಬಗ್ಗೆ ಏನು ತಿಳಿದುಬರುತ್ತದೆ? (ಬಿ) ಹಿರಿಯರು ದೇವರ ಮಂದೆಯ ಕಡೆಗೆ ಕ್ರಿಸ್ತನ ಮನೋಭಾವ ಹೇಗೆ ತೋರಿಸುತ್ತಾರೆ?
12 ಮಂದೆಯ ಕಡೆಗೆ ಯೇಸುವಿಗಿರುವ ಗಾಢಾಸಕ್ತಿ, ಏಷಿಯಾ ಮೈನರ್ನಲ್ಲಿದ್ದ ಏಳು ಸಭೆಗಳ ಹಿರಿಯರಿಗೆ ಆತನು ಸಂಬೋಧಿಸಿದ ಪತ್ರಗಳಿಂದ ತಿಳಿದುಬರುತ್ತದೆ. (ಪ್ರಕ. 2:1–3:22) ಆ ಪತ್ರಗಳಲ್ಲಿ ಯೇಸು, ಪ್ರತಿ ಸಭೆಯಲ್ಲಿ ಏನು ನಡೆಯುತ್ತಿದೆ ಎಂಬುದು ತನಗೆ ತಿಳಿದಿದೆ ಮತ್ತು ತನ್ನ ಹಿಂಬಾಲಕರ ಕಡೆಗೆ ತನಗೆ ಕಳಕಳಿಯಿದೆ ಎಂಬುದನ್ನು ವ್ಯಕ್ತಪಡಿಸಿದನು. ಈ ಮಾತು ಇಂದು ಇನ್ನೂ ಹೆಚ್ಚು ಅನ್ವಯವಾಗುತ್ತದೆ ಏಕೆಂದರೆ ಪ್ರಕಟನೆಯ ಆ ದರ್ಶನವು “ಕರ್ತನ ದಿನದಲ್ಲಿ” ನೆರವೇರುತ್ತಿದೆ.a (ಪ್ರಕ. 1:10) ಹೆಚ್ಚಾಗಿ ಕ್ರಿಸ್ತನ ಪ್ರೀತಿ, ಸಭೆಗಳಲ್ಲಿ ಆಧ್ಯಾತ್ಮಿಕ ಕುರುಬರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯರ ಮೂಲಕ ವ್ಯಕ್ತವಾಗುತ್ತದೆ. ಸಭೆಯಲ್ಲಿರುವ ಇಂಥ “ಮನುಷ್ಯರಲ್ಲಿ ದಾನಗಳನ್ನು” ಪ್ರೇರೇಪಿಸಿ ಕ್ರಿಸ್ತನು ಅಗತ್ಯವಿರುವ ಸಾಂತ್ವನ, ಪ್ರೋತ್ಸಾಹ ಅಥವಾ ಸಲಹೆ ನೀಡಬಲ್ಲನು. (ಎಫೆ. 4:8, NW; ಅ. ಕೃ. 20:28; ಯೆಶಾಯ 32:1, 2 ಓದಿ.) ಅವರ ಪ್ರಯತ್ನಗಳನ್ನು, ಕ್ರಿಸ್ತನಿಗೆ ನಿಮ್ಮ ಮೇಲಿರುವ ವೈಯಕ್ತಿಕ ಆಸಕ್ತಿಯ ಅಭಿವ್ಯಕ್ತಿಯಾಗಿ ನೀವು ಕಾಣುತ್ತೀರೋ?
ಸರಿಯಾದ ಸಮಯದಲ್ಲಿ ಸಹಾಯ
13-15. ದೇವರು ನಮ್ಮ ಪ್ರಾರ್ಥನೆಗಳನ್ನು ಹೇಗೆ ಉತ್ತರಿಸಬಹುದು? ಉದಾಹರಣೆಗಳನ್ನು ಕೊಡಿ.
13 ನೀವೆಂದಾದರೂ ಸಹಾಯಕ್ಕಾಗಿ ಕಟ್ಟಾಸಕ್ತಿಯಿಂದ ಪ್ರಾರ್ಥಿಸಿದ್ದು, ಅದಕ್ಕುತ್ತರವಾಗಿ ಆಧ್ಯಾತ್ಮಿಕವಾಗಿ ಪ್ರೌಢನಾದ ಕ್ರೈಸ್ತನೊಬ್ಬನು ನಿಮ್ಮನ್ನು ಭೇಟಿಮಾಡಿ ಹುರಿದುಂಬಿಸಿದ್ದು ನಿಮಗೆ ನೆನಪಿದೆಯೋ? (ಯಾಕೋ. 5:14-16) ಅಥವಾ ಕ್ರೈಸ್ತ ಕೂಟದಲ್ಲಿನ ಒಂದು ಭಾಷಣ ಇಲ್ಲವೇ ನಮ್ಮ ಸಾಹಿತ್ಯದಲ್ಲಿ ಬಂದಿರುವ ಯಾವುದಾದರೊಂದು ನಿರ್ದಿಷ್ಟ ಮಾಹಿತಿಯ ಮೂಲಕ ನಿಮಗೆ ಬೇಕಾದ ಸಹಾಯ ಸಿಕ್ಕಿದೆಯೋ? ಈ ವಿಧಾನಗಳಲ್ಲಿ ಯೆಹೋವನು ಅನೇಕವೇಳೆ ಪ್ರಾರ್ಥನೆಗಳಿಗೆ ಉತ್ತರಿಸುತ್ತಾನೆ. ಉದಾಹರಣೆಗೆ, ಒಮ್ಮೆ ಸಭೆಯಲ್ಲಿ ಹಿರಿಯನೊಬ್ಬನು ಭಾಷಣಕೊಟ್ಟ ನಂತರ ಒಬ್ಬಾಕೆ ಸಹೋದರಿ ಆತನ ಬಳಿ ಹೋಗಿ ಭಾಷಣದಲ್ಲಿದ್ದ ಕೆಲವು ಶಾಸ್ತ್ರಾಧಾರಿತ ಅಂಶಗಳಿಗಾಗಿ ತುಂಬ ಗಣ್ಯತೆ ವ್ಯಕ್ತಪಡಿಸಿದಳು. ಆಕೆ ಕೆಲವು ವಾರಗಳ ಹಿಂದೆ ವಿಪರೀತ ಅನ್ಯಾಯಕ್ಕೆ ಗುರಿಯಾಗಿದ್ದಳಾದರೂ ತನ್ನ ಸಮಸ್ಯೆಯ ಕುರಿತು ಮಾತೆತ್ತದೆ ಆ ಭಾಷಣದಲ್ಲಿದ್ದ ಅಂಶಗಳು ಅವಳ ಸನ್ನಿವೇಶಕ್ಕೆ ಅನ್ವಯಿಸಿದ್ದವು ಮತ್ತು ಆಕೆಗೆ ಸಾಂತ್ವನ ಕೊಟ್ಟವು ಎಂದು ಆತನಿಗೆ ಹೇಳಿದಳು. ಆ ಕೂಟಕ್ಕೆ ಹಾಜರಾದದ್ದಕ್ಕಾಗಿ ಆಕೆ ಎಷ್ಟು ಹರ್ಷಿತಳಾಗಿದ್ದಿರಬೇಕು!
14 ಪ್ರಾರ್ಥನೆ ಮಾಡಿದ್ದರಿಂದ ಸಿಕ್ಕಿದ ಸಹಾಯದ ಕುರಿತು ತಿಳಿಯಲು ಈ ಕೆಳಗಿನ ಉದಾಹರಣೆ ಪರಿಗಣಿಸಿ. ಒಂದೇ ಸೆರೆಮನೆಯಲ್ಲಿದ್ದ ಮೂವರು, ಅಲ್ಲೇ ಬೈಬಲ್ ಸತ್ಯವನ್ನು ಕಲಿತು ಅಸ್ನಾತ ಪ್ರಚಾರಕರಾದರು. ಸೆರೆಮನೆಯಲ್ಲಿ ನಡೆದ ಒಂದು ಹಿಂಸಾಕೃತ್ಯದ ಕಾರಣ ಎಲ್ಲಾ ಸೆರೆವಾಸಿಗಳ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ಹೇರಲಾಯಿತು. ಇದನ್ನು ಧಿಕ್ಕರಿಸುತ್ತಾ ಸೆರೆವಾಸಿಗಳು ಮರುದಿನ ಬೆಳಗ್ಗಿನ ಉಪಹಾರದ ನಂತರ ತಮ್ಮ ತಟ್ಟೆಗಳನ್ನು ಹಿಂದೆಕೊಡದಿರಲು ನಿರ್ಣಯಿಸಿದರು. ಈ ಮೂರು ಮಂದಿ ಅಸ್ನಾತ ಪ್ರಚಾರಕರು ಉಭಯಸಂಕಟಕ್ಕೀಡಾದರು. ಒಂದುವೇಳೆ ಅವರು ಈ ಪ್ರತಿಭಟನೆಯಲ್ಲಿ ಸೇರಿದರೆ ರೋಮಾಪುರ 13:1ರಲ್ಲಿರುವ ಯೆಹೋವನ ಸಲಹೆಯನ್ನು ಉಲ್ಲಂಘಿಸಿದಂತಾಗುತ್ತಿತ್ತು. ಸೇರದೇ ಇದ್ದರೆ ಇತರ ಸೆರೆವಾಸಿಗಳ ಕೋಪಕ್ಕೆ ಗುರಿಯಾಗಬೇಕಾಗುತ್ತಿತ್ತು.
15 ಆ ಮೂವರಿಗೆ ಪರಸ್ಪರರೊಂದಿಗೆ ಮಾತಾಡಲು ಅವಕಾಶವಿರದಿದ್ದ ಕಾರಣ ವಿವೇಕಕ್ಕಾಗಿ ಪ್ರಾರ್ಥಿಸಿದರು. ಮರುದಿನ ಬೆಳಿಗ್ಗೆ ಅವರೆಲ್ಲರೂ ಸಮಸ್ಯೆಗೆ ಒಂದೇ ಪರಿಹಾರವನ್ನು ಯೋಚಿಸಿದ್ದರೆಂದು ತಿಳಿದುಬಂತು. ಅದೇನೆಂದರೆ, ಅವರು ಉಪಹಾರವನ್ನೇ ತೆಗೆದುಕೊಳ್ಳದಿರಲು ನಿರ್ಣಯಿಸಿದ್ದರು. ಸೆರೆಮನೆಯ ಕಾವಲುಗಾರರು ತಟ್ಟೆ ತೆಗೆದುಕೊಳ್ಳಲು ಬಂದಾಗ ಆ ಮೂವರ ಬಳಿ ತಟ್ಟೆಯೇ ಇರಲಿಲ್ಲ. ‘ಪ್ರಾರ್ಥನೆಯನ್ನು ಕೇಳುವವನು’ ಹತ್ತಿರದಲ್ಲೇ ಇದ್ದದ್ದಕ್ಕಾಗಿ ಅವರೆಷ್ಟು ಸಂತೋಷಪಟ್ಟರು!—ಕೀರ್ತ. 65:2.
ಭವಿಷ್ಯತ್ತನ್ನು ಭರವಸೆಯಿಂದ ಎದುರಿಸುವುದು
16. ಕುರಿಸದೃಶ್ಯ ಜನರ ಕಡೆಗೆ ಯೆಹೋವನ ಕಳಕಳಿಯನ್ನು ಸಾರುವ ಕೆಲಸವು ಹೇಗೆ ತೋರಿಸುತ್ತದೆ?
16 ಲೋಕವ್ಯಾಪಕ ಸಾರುವ ಕೆಲಸವು ಎಲ್ಲೆಡೆಯೂ ಜೀವಿಸುತ್ತಿರುವ ಯೋಗ್ಯ ಹೃದಯವುಳ್ಳವರ ಕಡೆಗೆ ಯೆಹೋವನಿಗಿರುವ ಕಳಕಳಿಯ ಇನ್ನೊಂದು ರುಜುವಾತು. (ಆದಿ. 18:25) ಯೆಹೋವನು ತನ್ನ ಸೇವಕರನ್ನು ಕುರಿಸದೃಶ್ಯ ಜನರ ಕಡೆಗೆ ನಡೆಸಬಲ್ಲನು. ಇದಕ್ಕಾಗಿ ಅನೇಕವೇಳೆ ದೇವದೂತರನ್ನು ಬಳಸುತ್ತಾನೆ. ಹೀಗೆ ಸುವಾರ್ತೆಯು ಇನ್ನೂ ತಲುಪಿರದ ಸ್ಥಳಗಳಲ್ಲಿಯೂ ಇರುವ ಕುರಿಸದೃಶ್ಯ ಜನರನ್ನು ಸಂಪರ್ಕಿಸಲಾಗುತ್ತದೆ. (ಪ್ರಕ. 14:6, 7) ಉದಾಹರಣೆಗೆ, ಪ್ರಥಮ ಶತಮಾನದ ಸೌವಾರ್ತಿಕ ಫಿಲಿಪ್ಪನು ಐಥಿಯೋಪ್ಯದ ಅಧಿಕಾರಿಯನ್ನು ಭೇಟಿಯಾಗಿ ಶಾಸ್ತ್ರವಚನಗಳನ್ನು ವಿವರಿಸುವಂತೆ ದೇವರು ತನ್ನ ದೂತನ ಮೂಲಕ ಮಾರ್ಗದರ್ಶಿಸಿದನು. ಫಲಿತಾಂಶವೇನಾಯಿತು? ಅವನು ಸುವಾರ್ತೆಯನ್ನು ಸ್ವೀಕರಿಸಿ ಯೇಸುವಿನ ದೀಕ್ಷಾಸ್ನಾನಿತ ಹಿಂಬಾಲಕನಾದನು.b—ಯೋಹಾ. 10:14; ಅ. ಕೃ. 8:26-39.
17. ಭವಿಷ್ಯತ್ತಿನ ಕುರಿತು ನಾವು ಅತಿಯಾಗಿ ಚಿಂತಿಸಬಾರದೇಕೆ?
17 ಈ ವಿಷಯಗಳ ವ್ಯವಸ್ಥೆಯು ಅಂತ್ಯದ ಕಡೆಗೆ ಮುನ್ನುಗ್ಗುತ್ತಿರುವಾಗ ಪ್ರವಾದಿಸಲಾದಂತೆ “ಪ್ರಸವವೇದನೆ” ಅಥವಾ ಕಷ್ಟಗಳು ಮುಂದುವರಿಯುವವು. (ಮತ್ತಾ 24:8) ಉದಾಹರಣೆಗೆ, ಭಾರೀ ಬೇಡಿಕೆ, ಪ್ರತಿಕೂಲ ಹವಾಮಾನ ಇಲ್ಲವೇ ಆರ್ಥಿಕ ಅಸ್ಥಿರತೆಯಿಂದಾಗಿ ಆಹಾರ ಸಾಮಗ್ರಿಗಳ ಬೆಲೆ ಒಮ್ಮಿಂದೊಮ್ಮೆಲೆ ಗಗನಕ್ಕೇರಬಹುದು. ಉದ್ಯೋಗ ಸಿಗುವುದು ಕಷ್ಟಕರವಾಗಬಹುದು ಮತ್ತು ಉದ್ಯೋಗಿಗಳಿಗೋ ಹೆಚ್ಚಿನ ತಾಸುಗಳ ತನಕ ದುಡಿಯುವ ಒತ್ತಡ ಬರಬಹುದು. ಏನೇ ಸಂಭವಿಸಿದರೂ ಆಧ್ಯಾತ್ಮಿಕ ಅಭಿರುಚಿಗಳನ್ನು ಪ್ರಥಮವಾಗಿಟ್ಟು ‘ಕಣ್ಣನ್ನು ನೆಟ್ಟಗೆ’ ಅಂದರೆ ಸರಳವಾಗಿಡುವವರು ಅತಿಯಾಗಿ ಚಿಂತಿಸಬೇಕಾಗಿಲ್ಲ. ದೇವರು ತಮ್ಮನ್ನು ಪ್ರೀತಿಸುತ್ತಾನೆ ಮತ್ತು ಪೋಷಿಸುತ್ತಾನೆ ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. (ಮತ್ತಾ. 6:22-34) ಉದಾಹರಣೆಗೆ ಸಾ.ಶ.ಪೂ. 607ರ ಯೆರೂಸಲೇಮಿನ ಪ್ರಕ್ಷುಬ್ಧ ಅಂತ್ಯದ ಸಮಯದಲ್ಲಿ ಯೆರೆಮೀಯನನ್ನು ಯೆಹೋವನು ಹೇಗೆ ಪೋಷಿಸಿದನು ಎಂಬುದನ್ನು ಪರಿಗಣಿಸೋಣ.
18. ಯೆರೂಸಲೇಮಿನ ಮುತ್ತಿಗೆಯ ಸಮಯದಲ್ಲಿ ಯೆಹೋವನು ಯೆರೆಮೀಯನ ಕಡೆಗಿದ್ದ ಪ್ರೀತಿಯನ್ನು ಹೇಗೆ ತೋರಿಸಿದನು?
18 ಯೆರೂಸಲೇಮಿನ ಮೇಲೆ ಬಾಬೆಲಿನವರ ಮುತ್ತಿಗೆಯ ಕೊನೆಯ ಭಾಗದಲ್ಲಿ ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ಸೆರೆವಾಸಿಯಾಗಿದ್ದನು. ಅವನು ಆಹಾರವನ್ನು ಹೇಗೆ ಪಡೆದನು? ಅವನು ಸ್ವತಂತ್ರನಾಗಿರುತ್ತಿದ್ದಲ್ಲಿ ಅದಕ್ಕಾಗಿ ಹುಡುಕಾಡಬಹುದಿತ್ತು. ಆದರೆ ಈಗ ಅವನು ತನ್ನ ಸುತ್ತಲಿದ್ದವರ ಮೇಲೇ ಅವಲಂಬಿಸಬೇಕಾಯಿತು ಮತ್ತು ಅವರಲ್ಲಿ ಹೆಚ್ಚಿನವರು ಅವನನ್ನು ದ್ವೇಷಿಸುತ್ತಿದ್ದರು. ಆದಾಗ್ಯೂ ಯೆರೆಮೀಯನು ಮನುಷ್ಯರಲ್ಲಿ ಭರವಸವಿಡುವ ಬದಲು ಯಾರು ತನ್ನನ್ನು ಪೋಷಿಸುವೆನೆಂದು ಮಾತುಕೊಟ್ಟಿದ್ದನೋ ಆ ದೇವರಲ್ಲಿ ಭರವಸೆಯಿಟ್ಟನು. ಯೆಹೋವನು ತನ್ನ ಮಾತಿಗನುಸಾರ ನಡೆದುಕೊಂಡನೋ? ನಿಶ್ಚಯವಾಗಿ! “ಪಟ್ಟಣದ ರೊಟ್ಟಿಯೆಲ್ಲಾ ತೀರುವ ತನಕ ... ದಿನವಹಿ ಒಂದೊಂದು ರೊಟ್ಟಿ” ಯೆರೆಮೀಯನಿಗೆ ಸಿಗುವಂತೆ ಆತನು ಏರ್ಪಾಡು ಮಾಡಿದನು. (ಯೆರೆ. 37:21) ಯೆರೆಮೀಯನಲ್ಲದೇ ಬಾರೂಕ, ಎಬೆದ್ಮೆಲೆಕ ಮತ್ತಿತರರು ಆ ಕ್ಷಾಮ, ಕಾಯಿಲೆ ಮತ್ತು ಮೃತ್ಯುವಿನಿಂದ ರಕ್ಷಿಸಲ್ಪಟ್ಟರು.—ಯೆರೆ. 38:1; 39:15-18.
19. ಭವಿಷ್ಯತ್ತನ್ನು ಎದುರಿಸುವಾಗ ನಮ್ಮ ದೃಢಸಂಕಲ್ಪ ಏನಾಗಿರಬೇಕು?
19 ಹೌದು, ಯೆಹೋವನು ‘ನೀತಿವಂತರನ್ನು ಕಟಾಕ್ಷಿಸುತ್ತಾನೆ ಮತ್ತು ಅವರ ವಿಜ್ಞಾಪನೆಗಳಿಗೆ ಕಿವಿಗೊಡುತ್ತಾನೆ.’ (1 ಪೇತ್ರ 3:12) ನಿಮ್ಮ ಸ್ವರ್ಗೀಯ ತಂದೆ ನಿಮ್ಮನ್ನು ಗಮನಿಸುತ್ತಿರುವುದಕ್ಕೆ ನೀವು ಸಂತೋಷಿಸುತ್ತೀರೋ? ನಿಮ್ಮ ಒಳಿತಿಗಾಗಿಯೇ ಆತನ ಕಣ್ಣುಗಳು ನಿಮ್ಮ ಮೇಲಿರುತ್ತವೆ ಎಂದು ತಿಳಿದು ನಿಮಗೆ ಸುಭದ್ರತೆಯ ಅನಿಸಿಕೆಯಾಗುವುದಿಲ್ಲವೇ? ಆದ್ದರಿಂದ ಭವಿಷ್ಯತ್ತಿನಲ್ಲಿ ಏನೇ ಸಂಭವಿಸಲಿ ದೇವರೊಂದಿಗೆ ನಡೆಯುತ್ತಾ ಇರುವ ಗಟ್ಟಿಮನಸ್ಸು ಮಾಡಿರಿ. ಯೆಹೋವನು ತಂದೆಯೋಪಾದಿ ತನ್ನೆಲ್ಲಾ ನಿಷ್ಠಾವಂತ ಸೇವಕರ ಮೇಲೆ ಯಾವಾಗಲೂ ನಿಗಾ ಇಡುವನು ಎಂಬ ನಿಶ್ಚಯ ನಮಗಿರಬಲ್ಲದು.—ಕೀರ್ತ. 32:8; ಯೆಶಾಯ 41:13 ಓದಿ.
[ಪಾದಟಿಪ್ಪಣಿಗಳು]
a ಈ ಪತ್ರಗಳು ಪ್ರಧಾನವಾಗಿ ಕ್ರಿಸ್ತನ ಅಭಿಷಿಕ್ತ ಹಿಂಬಾಲಕರಿಗೆ ಅನ್ವಯಿಸುವುದಾದರೂ ಅದರ ಮೂಲತತ್ತ್ವಗಳು ದೇವರ ಎಲ್ಲಾ ಸೇವಕರಿಗೆ ಅನ್ವಯಿಸುತ್ತವೆ.
b ಸ್ವರ್ಗೀಯ ಮಾರ್ಗದರ್ಶನದ ಇನ್ನೊಂದು ಉದಾಹರಣೆಯು ಅಪೊಸ್ತಲರ ಕೃತ್ಯಗಳು 16:6-10ರಲ್ಲಿ ಕಂಡುಬರುತ್ತದೆ. ಅಲ್ಲಿ ನಾವು, ಪೌಲ ಮತ್ತವನ ಸಂಗಡಿಗರು ಆಸ್ಯ ಮತ್ತು ಬಿಥೂನ್ಯದಲ್ಲಿ ಸಾರುವುದನ್ನು ‘ಪವಿತ್ರಾತ್ಮವು ತಡೆದದ್ದು’ ಮತ್ತು ಅದಕ್ಕೆ ಬದಲಾಗಿ ಅವರು ಮಕೆದೋನ್ಯದಲ್ಲಿ ಸಾರುವಂತೆ ಅಪ್ಪಣೆಕೊಡಲಾಗಿರುವುದರ ಕುರಿತು ಓದುತ್ತೇವೆ. ಮಕೆದೋನ್ಯದಲ್ಲಿ ಅನೇಕ ನಮ್ರ ವ್ಯಕ್ತಿಗಳು ಅವರ ಸಾರುವಿಕೆಗೆ ಪ್ರತಿಕ್ರಿಯಿಸಿದರು.
ವಿವರಿಸಬಲ್ಲಿರೋ?
• ನಾವು ‘ದೇವರೊಂದಿಗೆ ನಡೆಯುತ್ತಿದ್ದೇವೆ’ ಎಂದು ಹೇಗೆ ತೋರಿಸಬಲ್ಲೆವು?
• ಯೆಹೋವನು ಬಾರೂಕನ ಕಡೆಗೆ ತನ್ನ ಪ್ರೀತಿಯನ್ನು ಹೇಗೆ ತೋರಿಸಿದನು?
• ಯೇಸು ಕ್ರೈಸ್ತ ಸಭೆಯ ಶಿರಸ್ಸಾಗಿ ಯೆಹೋವನ ಗುಣಗಳನ್ನು ಹೇಗೆ ತೋರಿಸುತ್ತಾನೆ?
• ಈ ಕಠಿನ ಕಾಲಗಳಲ್ಲಿ ನಾವು ದೇವರಲ್ಲಿ ಭರವಸೆ ಇಟ್ಟಿದ್ದೇವೆಂಬುದನ್ನು ಹೇಗೆ ತೋರಿಸಬಲ್ಲೆವು?
[ಪುಟ 9ರಲ್ಲಿರುವ ಚಿತ್ರಗಳು]
ಯೆರೆಮೀಯನು ಬಾರೂಕನಿಗೆ ತೋರಿಸಿದಂತೆ ಇಂದು ಕ್ರೈಸ್ತ ಹಿರಿಯರು ಯೆಹೋವನ ಕಳಕಳಿಯನ್ನು ಪ್ರತಿಬಿಂಬಿಸುತ್ತಾರೆ
[ಪುಟ 10ರಲ್ಲಿರುವ ಚಿತ್ರ]
ಯೆಹೋವನು ನಮಗೆ ಸರಿಯಾದ ಸಮಯದಲ್ಲಿ ಹೇಗೆ ಸಹಾಯ ಒದಗಿಸಬಹುದು?