ಯೆರೆಮೀಯನಂತೆ ಧೈರ್ಯದಿಂದಿರಿ
“ಯೆಹೋವನನ್ನು ನಿರೀಕ್ಷಿಸಿಕೊಂಡಿರು; ದೃಢವಾಗಿರು; ನಿನ್ನ ಹೃದಯವು ಧೈರ್ಯದಿಂದಿರಲಿ; ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು.”—ಕೀರ್ತನೆ 27:14.
1. ಯೆಹೋವನ ಸಾಕ್ಷಿಗಳು ಯಾವ ಸಂಪದ್ಭರಿತ ಆಶೀರ್ವಾದದಲ್ಲಿ ಆನಂದಿಸುತ್ತಿದ್ದಾರೆ?
ಯೆಹೋವನ ಸಾಕ್ಷಿಗಳು ಒಂದು ಆಧ್ಯಾತ್ಮಿಕ ಪರದೈಸಿನಲ್ಲಿ ವಾಸಿಸುತ್ತಾರೆ. (ಯೆಶಾಯ 11:6-9) ಅವರು, ಈ ಕ್ಲೇಶಭರಿತ ಜಗತ್ತಿನ ಮಧ್ಯೆ ಯೆಹೋವ ದೇವರೊಂದಿಗೂ ಪರಸ್ಪರರೊಂದಿಗೂ ಶಾಂತಿಯಿಂದಿರುವ ತಮ್ಮ ಜೊತೆ ಕ್ರೈಸ್ತರೊಂದಿಗೆ ಒಂದು ಅದ್ವಿತೀಯವಾದ ಆಧ್ಯಾತ್ಮಿಕ ಪರಿಸರದಲ್ಲಿ ಆನಂದಿಸುತ್ತಿದ್ದಾರೆ. (ಕೀರ್ತನೆ 29:11; ಯೆಶಾಯ 54:13) ಅಷ್ಟೇ ಅಲ್ಲ, ಅವರ ಆಧ್ಯಾತ್ಮಿಕ ಪರದೈಸ್ ಬೆಳೆಯುತ್ತಾ ಇದೆ. ‘ದೇವರ ಚಿತ್ತವನ್ನು ಮನಃಪೂರ್ವಕವಾಗಿ ನಡೆಸು’ವವರೆಲ್ಲರೂ ಅದರ ವಿಸ್ತಾರ್ಯಕ್ಕೆ ನೆರವುನೀಡುತ್ತಾರೆ. (ಎಫೆಸ 6:6) ಹೇಗೆ? ಬೈಬಲ್ ಮೂಲಸೂತ್ರಗಳಿಗನುಸಾರ ತಾವೇ ಜೀವಿಸುವ ಮೂಲಕ ಮತ್ತು ಇದನ್ನೇ ಮಾಡುವಂತೆ ಇತರರಿಗೆ ಕಲಿಸುವುದರ ಮೂಲಕವೇ. ಹೀಗೆ, ಇತರರು ಸಹ ಆ ಪರದೈಸಿನ ಹೇರಳವಾದ ಆಶೀರ್ವಾದಗಳಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಿಸಲಾಗುತ್ತದೆ.—ಮತ್ತಾಯ 28:19, 20; ಯೋಹಾನ 15:8.
2, 3. ಸತ್ಯ ಕ್ರೈಸ್ತರಿಗೆ ಯಾವುದನ್ನು ತಾಳಿಕೊಳ್ಳಬೇಕಾಗುತ್ತದೆ?
2 ಆದರೆ, ನಾವು ಒಂದು ಆಧ್ಯಾತ್ಮಿಕ ಪರದೈಸಿನಲ್ಲಿ ಜೀವಿಸುತ್ತಿರುವುದರಿಂದ ನಾವು ಯಾವುದೇ ಕಷ್ಟಗಳನ್ನು ಅನುಭವಿಸಬೇಕಾಗಿಲ್ಲ ಎಂಬುದನ್ನು ಇದು ಅರ್ಥೈಸುವುದಿಲ್ಲ. ಏಕೆಂದರೆ ನಾವು ಇನ್ನೂ ಅಪರಿಪೂರ್ಣರಾಗಿದ್ದೇವೆ ಮತ್ತು ರೋಗ, ವಾರ್ಧಕ್ಯ ಹಾಗೂ ಅಂತಿಮವಾಗಿ ಮರಣದಂಥ ಶೂಲೆಗಳನ್ನು ಅನುಭವಿಸುತ್ತೇವೆ. ಅದಲ್ಲದೆ, “ಕಡೇ ದಿವಸಗಳ” ಕುರಿತಾದ ಪ್ರವಾದನೆಗಳ ನೆರವೇರಿಕೆಯನ್ನು ನಾವೀಗ ಪ್ರತ್ಯಕ್ಷವಾಗಿ ನೋಡುತ್ತಿದ್ದೇವೆ. (2 ತಿಮೊಥೆಯ 3:1) ಯುದ್ಧ, ಪಾತಕ, ರೋಗರುಜಿನ, ಕ್ಷಾಮ, ಮತ್ತಿತರ ಕಷ್ಟದೆಸೆಗಳು ಸಕಲ ಮಾನವಕುಲವನ್ನು ಬಾಧಿಸುತ್ತಿರುವಾಗ ಯೆಹೋವನ ಸಾಕ್ಷಿಗಳು ಇವುಗಳಿಂದ ಯಾವುದೇ ವಿನಾಯಿತಿ ಹೊಂದಿರುವುದಿಲ್ಲ.—ಮಾರ್ಕ 13:3-10; ಲೂಕ 21:10, 11.
3 ಇವೆಲ್ಲ ಸಂಗತಿಗಳಲ್ಲದೆ, ನಮ್ಮ ಆಧ್ಯಾತ್ಮಿಕ ಪರದೈಸಿನ ಸುರಕ್ಷೆಯಿದ್ದರೂ, ಅದರ ಭಾಗವಾಗಿರದೇ ಇರುವವರಿಂದ ನಾವು ತೀಕ್ಷ್ಣ ವಿರೋಧವನ್ನು ಈಗಲೂ ಎದುರಿಸುತ್ತೇವೆಂದು ನಮಗೆ ಚೆನ್ನಾಗಿ ತಿಳಿದದೆ. ಯೇಸು ತನ್ನ ಹಿಂಬಾಲಕರನ್ನು ಎಚ್ಚರಿಸಿದ್ದು: “ನೀವು ಲೋಕದ ಕಡೆಯವರಲ್ಲದೆ ಇರುವದರಿಂದಲೂ ನಾನು ನಿಮ್ಮನ್ನು ಲೋಕದೊಳಗಿಂದ ಆರಿಸಿ ತೆಗೆದುಕೊಂಡಿರುವದರಿಂದಲೂ ಲೋಕವು ನಿಮ್ಮ ಮೇಲೆ ದ್ವೇಷಮಾಡುತ್ತದೆ. ದಣಿಗಿಂತ ಆಳು ದೊಡ್ಡವನಲ್ಲವೆಂಬದಾಗಿ ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಕ ಮಾಡಿಕೊಳ್ಳಿರಿ. ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು.” (ಯೋಹಾನ 15:18-21) ಸಂಗತಿಗಳು ಇಂದೇನೂ ಭಿನ್ನವಾಗಿಲ್ಲ. ಹೆಚ್ಚಿನ ಜನರು ಈಗಲೂ ನಮ್ಮ ಆರಾಧನಾ ವಿಧವನ್ನು ಅರ್ಥಮಾಡಿಕೊಳ್ಳುವುದೂ ಇಲ್ಲ, ಅದನ್ನು ಮಾನ್ಯಮಾಡುವುದೂ ಇಲ್ಲ. ಕೆಲವರು ನಮ್ಮನ್ನು ಟೀಕಿಸುತ್ತಾರೆ, ಅಪಹಾಸ್ಯಮಾಡುತ್ತಾರೆ, ಅಥವಾ ಯೇಸು ಎಚ್ಚರಿಸಿದಂತೆ ನಮ್ಮನ್ನು ಹಗೆಮಾಡುವುದೂ ಉಂಟು. (ಮತ್ತಾಯ 10:22) ಅನೇಕವೇಳೆ ವಾರ್ತಾಮಾಧ್ಯಮಗಳ ಮುಖಾಂತರ ನಮ್ಮ ಬಗ್ಗೆ ತಪ್ಪು ಮಾಹಿತಿ ಹಾಗೂ ದ್ವೇಷಪೂರಿತ ಸುದ್ದಿಯನ್ನು ಹಬ್ಬಿಸುವ ಮೂಲಕ ನಮಗೆ ಹಾನಿಮಾಡುವ ಪ್ರಯತ್ನಗಳನ್ನು ಮಾಡಲಾಗುತ್ತದೆ. (ಕೀರ್ತನೆ 109:1-3) ಹೌದು, ನಾವೆಲ್ಲರೂ ಕಠಿನ ಸನ್ನಿವೇಶಗಳನ್ನು ಎದುರಿಸುತ್ತೇವೆ ಮತ್ತು ಇದರಿಂದಾಗಿ ನಮ್ಮಲ್ಲಿ ಕೆಲವರು ನಿರುತ್ಸಾಹಗೊಳ್ಳಲಾರಂಭಿಸಬಹುದು. ನಾವು ಹೇಗೆ ತಾಳಿಕೊಳ್ಳಬಲ್ಲೆವು?
4. ತಾಳಿಕೊಳ್ಳಲು ಬೇಕಾಗುವ ಸಹಾಯಕ್ಕಾಗಿ ನಾವೆತ್ತ ನೋಡುತ್ತೇವೆ?
4 ಯೆಹೋವನು ನಮಗೆ ಸಹಾಯಮಾಡುವನು. ಕೀರ್ತನೆಗಾರನು ದೇವಪ್ರೇರಣೆಯಿಂದ ಬರೆದುದು: “ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ.” (ಕೀರ್ತನೆ 34:19; 1 ಕೊರಿಂಥ 10:13) ನಾವು ಯೆಹೋವನಲ್ಲಿ ನಮ್ಮ ಪೂರ್ಣ ಭರವಸೆಯನ್ನು ಇಟ್ಟಾಗ, ಕಷ್ಟವು ಯಾವುದೇ ಆಗಿರಲಿ, ಆತನು ನಮಗೆ ತಾಳಿಕೊಳ್ಳಲು ಬಲವನ್ನು ಕೊಡುತ್ತಾನೆಂಬುದಕ್ಕೆ ನಮ್ಮಲ್ಲಿ ಅನೇಕರು ಸಾಕ್ಷ್ಯಕೊಡಬಲ್ಲೆವು. ಆತನಿಗಾಗಿರುವ ನಮ್ಮ ಪ್ರೀತಿ ಮತ್ತು ನಮ್ಮ ಮುಂದೆ ಇಡಲ್ಪಟ್ಟಿರುವ ಸಂತೋಷವು ನಾವು ನಿರುತ್ಸಾಹ ಮತ್ತು ಭಯದ ವಿರುದ್ಧ ಹೋರಾಡುವಂತೆ ನಮಗೆ ಸಹಾಯ ನೀಡುತ್ತದೆ. (ಇಬ್ರಿಯ 12:2) ಹೀಗಿರುವುದರಿಂದ, ಕಷ್ಟಗಳ ಮಧ್ಯೆಯೂ ನಾವು ಸ್ಥಿರವಾಗಿ ನಿಲ್ಲುತ್ತ ಮುಂದುವರಿಯುತ್ತೇವೆ.
ದೇವರ ವಾಕ್ಯವು ಯೆರೆಮೀಯನನ್ನು ಬಲಪಡಿಸಿತು
5, 6. (ಎ) ತಾಳಿಕೊಳ್ಳಶಕ್ತರಾಗಿದ್ದ ಸತ್ಯಾರಾಧಕರ ಯಾವ ಮಾದರಿಗಳು ನಮಗಿವೆ? (ಬಿ) ಪ್ರವಾದಿಯಾಗಲು ಕರೆಕೊಡಲ್ಪಟ್ಟಾಗ ಯೆರೆಮೀಯನು ಹೇಗೆ ಪ್ರತಿಕ್ರಿಯಿಸಿದನು?
5 ಇತಿಹಾಸದಾದ್ಯಂತ, ಯೆಹೋವನ ನಂಬಿಗಸ್ತ ಸೇವಕರು ಕಷ್ಟಕರ ಸನ್ನಿವೇಶಗಳ ಹೊರತೂ ಸಂತೋಷವನ್ನು ಅನುಭವಿಸಿದ್ದಾರೆ. ಕೆಲವರು, ಯೆಹೋವನು ಅಪನಂಬಿಗಸ್ತರ ಮೇಲೆ ಕೋಪವನ್ನು ವ್ಯಕ್ತಪಡಿಸಿದ ತೀರ್ಪಿನ ಸಮಯಗಳಲ್ಲಿ ಜೀವಿಸಿದರು. ಇಂತಹ ನಂಬಿಗಸ್ತ ಆರಾಧಕರಲ್ಲಿ ಯೆರೆಮೀಯನು, ಅವನ ಸಮಕಾಲೀನರಲ್ಲಿ ಕೆಲವರು ಹಾಗೂ ಪ್ರಥಮ ಶತಮಾನದ ಕ್ರೈಸ್ತರು ಸೇರಿದ್ದರು. ಆ ಐತಿಹಾಸಿಕ ಮಾದರಿಗಳು ನಮ್ಮ ಪ್ರೋತ್ಸಾಹನೆಗಾಗಿ ಬೈಬಲಿನಲ್ಲಿ ದಾಖಲಿಸಲ್ಪಟ್ಟಿವೆ ಮತ್ತು ನಾವು ಅವುಗಳನ್ನು ಅಧ್ಯಯನ ಮಾಡುವುದರಿಂದ ಬಹಳಷ್ಟನ್ನು ಕಲಿತುಕೊಳ್ಳಬಲ್ಲೆವು. (ರೋಮಾಪುರ 15:4) ಉದಾಹರಣೆಗೆ, ಯೆರೆಮೀಯನನ್ನು ಪರಿಗಣಿಸಿರಿ.
6 ಯೆರೆಮೀಯನನ್ನು ಚಿಕ್ಕ ಪ್ರಾಯದಲ್ಲಿಯೇ ಯೆಹೂದದಲ್ಲಿ ಒಬ್ಬ ಪ್ರವಾದಿಯಾಗಿ ಸೇವೆಮಾಡುವಂತೆ ಕರೆಕೊಡಲಾಯಿತು. ಇದೊಂದು ಸುಲಭವಾದ ಸೇವಾನೇಮಕವಾಗಿರಲಿಲ್ಲ. ಆಗ ಅನೇಕರು ಸುಳ್ಳು ದೇವತೆಗಳನ್ನು ಆರಾಧಿಸುತ್ತಿದ್ದರು. ಯೆರೆಮೀಯನು ತನ್ನ ಸೇವೆಯನ್ನು ಆರಂಭಿಸಿದಾಗ ರಾಜನಾಗಿ ಆಳುತ್ತಿದ್ದ ಯೊಷೀಯನು ನಂಬಿಗಸ್ತನಾಗಿದ್ದರೂ, ಅವನ ಬೆನ್ನಿಗೆ ಬಂದ ಸಕಲ ಅರಸರೂ ಅಪನಂಬಿಗಸ್ತರಾಗಿದ್ದರು, ಮತ್ತು ಜನರಿಗೆ ಬೋಧಿಸಲು ಜವಾಬ್ದಾರರಾಗಿದ್ದ ಪ್ರವಾದಿಗಳು ಮತ್ತು ಯಾಜಕರಲ್ಲಿ ಹೆಚ್ಚಿನವರು ಸತ್ಯದ ಪಕ್ಷದಲ್ಲಿರಲಿಲ್ಲ. (ಯೆರೆಮೀಯ 1:1, 2; 6:13; 23:11) ಹೀಗಿರುವಾಗ, ಯೆರೆಮೀಯನನ್ನು ಒಬ್ಬ ಪ್ರವಾದಿಯಾಗಿ ಸೇವೆಸಲ್ಲಿಸುವಂತೆ ಯೆಹೋವನು ಕರೆಕೊಟ್ಟಾಗ ಅವನಿಗೆ ಹೇಗನಿಸಿತು? ಅವನು ತುಂಬ ಹೆದರಿದನು! (ಯೆರೆಮೀಯ 1:8, 17) ಯೆರೆಮೀಯನು ತನ್ನ ಆರಂಭದ ಪ್ರತಿಕ್ರಿಯೆಯನ್ನು ಹೀಗೆ ನೆನಪಿಸಿಕೊಂಡನು: “ನಾನು—ಅಯ್ಯೋ, ಕರ್ತನಾದ ಯೆಹೋವನೇ, ನಾನು ಮಾತು ಬಲ್ಲವನಲ್ಲ, ಬಾಲಕನು ಎಂದು ಬಿನ್ನವಿಸಿದೆನು.”—ಯೆರೆಮೀಯ 1:6.
7. ಯೆರೆಮೀಯನಿಗೆ ತನ್ನ ಸೇವಾಕ್ಷೇತ್ರದಲ್ಲಿ ಯಾವ ಪ್ರತಿಕ್ರಿಯೆ ದೊರಕಿತು, ಮತ್ತು ಅವನು ಹೇಗೆ ಪ್ರತಿವರ್ತಿಸಿದನು?
7 ಯೆರೆಮೀಯನ ಸೇವಾಕ್ಷೇತ್ರದಲ್ಲಿ ಹೆಚ್ಚಿನವರು ಅವನಿಗೆ ಕಿವಿಗೊಡಲಿಲ್ಲ ಮತ್ತು ಅನೇಕವೇಳೆ ಅವನು ತೀಕ್ಷ್ಣ ವಿರೋಧವನ್ನು ಎದುರಿಸಿದನು. ಒಂದು ಸಂದರ್ಭದಲ್ಲಿ, ಯಾಜಕನಾಗಿದ್ದ ಪಷ್ಹೂರನೆಂಬವನು ಅವನನ್ನು ಹೊಡೆಯಿಸಿ ಕೋಳಕ್ಕೆ ಹಾಕಿಸಿದನು. ಆಗ ತನಗೆ ಹೇಗನಿಸಿತೆಂಬುದನ್ನು ಯೆರೆಮೀಯನು ವರದಿಸಿದನು: ‘ನಾನು ಯೆಹೋವನ ವಿಷಯವನ್ನು ಪ್ರಕಟಿಸೆನು, ಆತನ ಹೆಸರಿನಲ್ಲಿ ಇನ್ನು ಮಾತಾಡೆನು ಎಂದುಕೊಂಡೆ.’ ಪ್ರಾಯಶಃ ನಿಮಗೂ ಕೆಲವೊಮ್ಮೆ ಹಾಗೆಯೇ, ಪ್ರಯತ್ನವನ್ನು ಬಿಟ್ಟುಬಿಡುವ ಹಾಗೆ ಅನಿಸಿದ್ದಿರಬಹುದು. ಆದರೆ ಯೆರೆಮೀಯನಿಗೆ ಪಟ್ಟುಹಿಡಿಯುವಂತೆ ಯಾವುದು ಸಹಾಯಮಾಡಿತೆಂಬುದನ್ನು ಗಮನಿಸಿರಿ. ಅವನಂದದ್ದು: “ಉರಿಯುವ ಬೆಂಕಿಯು [ದೇವರ ಮಾತು, ಅಥವಾ ಸಂದೇಶ] ನನ್ನ ಎಲುಬುಗಳಲ್ಲಿ ಅಡಕವಾಗಿದೆಯೋ ಎಂಬಂತೆ ನನ್ನ ಹೃದಯದಲ್ಲಿ ಸಂಕಟವಾಗುತ್ತದೆ; ತಡೆದು ತಡೆದು ಆಯಾಸಗೊಂಡಿದ್ದೇನೆ, ಸಹಿಸಲಾರೆ.” (ಯೆರೆಮೀಯ 20:9) ದೇವರ ಮಾತುಗಳು ನಿಮ್ಮ ಮೇಲೂ ಅದೇ ರೀತಿಯ ಪ್ರಭಾವವನ್ನು ಬೀರುತ್ತವೊ?
ಯೆರೆಮೀಯನ ಸಂಗಡಿಗರು
8, 9. (ಎ) ಪ್ರವಾದಿ ಊರೀಯನು ಯಾವ ಬಲಹೀನತೆಯನ್ನು ಪ್ರದರ್ಶಿಸಿದನು, ಇದರಿಂದಾದ ಪರಿಣಾಮವೇನು? (ಬಿ) ಬಾರೂಕನು ನಿರುತ್ಸಾಹಗೊಂಡದ್ದೇಕೆ, ಮತ್ತು ಅವನಿಗೆ ಹೇಗೆ ಸಹಾಯ ದೊರಕಿತು?
8 ತನ್ನ ಪ್ರವಾದನಾತ್ಮಕ ಸೇವೆಯಲ್ಲಿ ಯೆರೆಮೀಯನೊಬ್ಬನೇ ಇರಲಿಲ್ಲ. ಅವನಿಗೆ ಸಂಗಡಿಗರಿದ್ದರು ಮತ್ತು ಇದು ಅವನನ್ನು ಉತ್ತೇಜಿಸಿರಬೇಕು. ಹಾಗಿದ್ದರೂ ಕೆಲವೊಮ್ಮೆ, ಅವನ ಸಂಗಡಿಗರು ವಿವೇಕದಿಂದ ವರ್ತಿಸಲಿಲ್ಲ. ಉದಾಹರಣೆಗೆ, ಊರೀಯ ಹೆಸರಿನ ಒಬ್ಬ ಜೊತೆ ಪ್ರವಾದಿಯು, “ಯೆರೆಮೀಯನು ನುಡಿದಂತೆಯೇ” ಯೆರೂಸಲೇಮ್ ಮತ್ತು ಯೆಹೂದದ ವಿರುದ್ಧ ಎಚ್ಚರಿಕೆಗಳನ್ನು ಕೊಡುವುದರಲ್ಲಿ ಮಗ್ನನಾಗಿದ್ದನು. ಆದರೆ ಅರಸ ಯೆಹೋಯಾಕೀಮನು ಊರೀಯನಿಗೆ ಮರಣದಂಡನೆ ವಿಧಿಸಿದಾಗ, ಅವನು ಭಯದಿಂದ ಐಗುಪ್ತಕ್ಕೆ ಓಡಿಹೋದನು. ಆ ಪಲಾಯನವಾದರೊ ಅವನನ್ನು ರಕ್ಷಿಸಲಿಲ್ಲ. ಏಕೆಂದರೆ ಅರಸನ ಜನರು ಅವನನ್ನು ಬೆನ್ನಟ್ಟಿ ಹಿಡಿದು, ಯೆರೂಸಲೇಮಿಗೆ ಕರತಂದು ಕೊಂದರು. ಇದು ಯೆರೆಮೀಯನನ್ನು ಎಷ್ಟು ತಲ್ಲಣಗೊಳಿಸಿದ್ದಿರಬೇಕು!—ಯೆರೆಮೀಯ 26:20-23.
9 ಯೆರೆಮೀಯನ ಇನ್ನೊಬ್ಬ ಸಂಗಡಿಗನು ಬಾರೂಕನಾಗಿದ್ದನು. ಬಾರೂಕನು ಯೆರೆಮೀಯನಿಗೆ ಉತ್ತಮ ಸಹಾಯಕನಾಗಿದ್ದರೂ ಒಂದು ಸಂದರ್ಭದಲ್ಲಿ ಅವನೂ ತನ್ನ ಆಧ್ಯಾತ್ಮಿಕ ದೃಷ್ಟಿಕೋನವನ್ನು ಕಳೆದುಕೊಂಡನು. ಅವನು ಹೀಗೆ ಗೊಣಗತೊಡಗಿದನು: “ನನ್ನ ಗತಿಯನ್ನು ಏನು ಹೇಳಲಿ! ವ್ಯಥೆಪಡುತ್ತಿದ್ದ ನನ್ನನ್ನು ಯೆಹೋವನು ಹೆಚ್ಚೆಚ್ಚಾಗಿ ದುಃಖಪಡಿಸಿದ್ದಾನೆ; ನಾನು ನರಳಿ ನರಳಿ ದಣಿದಿದ್ದೇನೆ, ನನಗೆ ಯಾವ ವಿಶ್ರಾಂತಿಯೂ ದೊರಕದು.” ಬಾರೂಕನು ನಿರುತ್ಸಾಹಗೊಂಡು, ಆಧ್ಯಾತ್ಮಿಕ ವಿಷಯಗಳಿಗಾಗಿ ಮಾನ್ಯತೆಯನ್ನು ಕಳಕೊಳ್ಳಲಾರಂಭಿಸಿದನು. ಆದರೂ, ಯೆಹೋವನು ದಯೆಯಿಂದ ಬಾರೂಕನಿಗೆ ವಿವೇಕಪೂರ್ಣ ಬುದ್ಧಿವಾದವನ್ನು ಕೊಟ್ಟಾಗ, ಅವನು ತನ್ನನ್ನು ತಿದ್ದಿಕೊಂಡನು. ಆಗ ಅವನಿಗೆ, ಯೆರೂಸಲೇಮಿನ ನಾಶನವನ್ನು ಅವನು ಪಾರಾಗುವನೆಂಬ ಆಶ್ವಾಸನೆಯು ದೊರೆಯಿತು. (ಯೆರೆಮೀಯ 45:1-5) ಬಾರೂಕನು ತನ್ನ ಆಧ್ಯಾತ್ಮಿಕ ಸಮತೋಲನವನ್ನು ಮರಳಿ ಪಡೆದಾಗ ಯೆರೆಮೀಯನಿಗೆ ಎಷ್ಟೊಂದು ಪ್ರೋತ್ಸಾಹ ದೊರಕಿದ್ದಿರಬೇಕು!
ಯೆಹೋವನು ತನ್ನ ಪ್ರವಾದಿಯನ್ನು ಬೆಂಬಲಿಸಿದನು
10. ಯೆಹೋವನು ಯೆರೆಮೀಯನಿಗೆ ಬೆಂಬಲ ನೀಡುವ ಯಾವ ವಚನಗಳನ್ನು ಕೊಟ್ಟನು?
10 ಅತಿ ಪ್ರಾಮುಖ್ಯ ವಿಷಯವೇನಂದರೆ, ಯೆಹೋವನು ಯೆರೆಮೀಯನನ್ನು ಕೈಬಿಡಲಿಲ್ಲ. ತನ್ನ ಪ್ರವಾದಿಗೆ ಹೇಗನಿಸುತ್ತಿರಬೇಕೆಂಬುದನ್ನು ಅರಿತವನಾಗಿ ಆತನು ಅವನಿಗೆ ಬೇಕಾಗಿದ್ದ ಶಕ್ತಿಯನ್ನೂ ಬೆಂಬಲವನ್ನೂ ಕೊಟ್ಟನು. ಉದಾಹರಣೆಗೆ, ಯೆರೆಮೀಯನು ತನ್ನ ಶುಶ್ರೂಷೆಯ ಆರಂಭದಲ್ಲಿ ತನ್ನ ಯೋಗ್ಯತೆಯನ್ನು ಸಂಶಯಿಸಿ ಮಾತಾಡಿದಾಗ, ಯೆಹೋವನು ಅವನಿಗಂದದ್ದು: “ಅವರಿಗೆ ಅಂಜಬೇಡ; ನಿನ್ನನ್ನುದ್ಧರಿಸಲು ನಾನೇ ನಿನ್ನೊಂದಿಗಿರುವೆನು, ಇದು ಯೆಹೋವನಾದ ನನ್ನ ಮಾತು.” ಬಳಿಕ, ತನ್ನ ಪ್ರವಾದಿಗೆ ಅವನ ನೇಮಕದ ಮಾಹಿತಿಯನ್ನು ಕೊಟ್ಟ ಮೇಲೆ ಯೆಹೋವನು ಹೇಳಿದ್ದು: “ಅವರು ನಿನಗೆ ವಿರುದ್ಧವಾಗಿ ಯುದ್ಧಮಾಡುವರು, ಆದರೆ ನಿನ್ನನ್ನು ಸೋಲಿಸಲಾಗುವದಿಲ್ಲ; ನಿನ್ನನ್ನುದ್ಧರಿಸಲು ನಾನೇ ನಿನ್ನೊಂದಿಗಿರುವೆನು, ಇದು ಯೆಹೋವನಾದ ನನ್ನ ಮಾತು.” (ಯೆರೆಮೀಯ 1:8, 19) ಎಷ್ಟು ಸಾಂತ್ವನದಾಯಕ ಮಾತುಗಳು! ಮತ್ತು ಯೆಹೋವನು ತನ್ನ ವಚನದಂತೆಯೇ ನಡೆದನು.
11. ಯೆರೆಮೀಯನನ್ನು ಬೆಂಬಲಿಸುವ ತನ್ನ ವಚನವನ್ನು ಯೆಹೋವನು ನೆರವೇರಿಸಿದನೆಂಬುದು ನಮಗೆ ಹೇಗೆ ಗೊತ್ತು?
11 ಆ ಕಾರಣದಿಂದಲೇ, ಕೋಳಕ್ಕೆ ಬಿಗಿಯಲ್ಪಟ್ಟು ಜನರ ಮುಂದೆ ಪರಿಹಾಸ್ಯಕ್ಕೊಳಗಾದ ಬಳಿಕ ಯೆರೆಮೀಯನು ಭರವಸೆಯಿಂದ ಹೇಳಿದ್ದು: “ಯೆಹೋವನಾದರೋ ಭಯಂಕರಶೂರನಾಗಿ ನನ್ನ ಸಂಗಡ ಇದ್ದಾನೆ. ಆದದರಿಂದ ನನ್ನ ಹಿಂಸಕರು ಗೆಲ್ಲದೆ ಮುಗ್ಗರಿಸುವರು; . . . ದೊಡ್ಡ ನಾಚಿಕೆಗೆ ಈಡಾಗುವರು.” (ಯೆರೆಮೀಯ 20:11) ಮುಂದಿನ ವರುಷಗಳಲ್ಲಿ, ಯೆರೆಮೀಯನನ್ನು ಕೊಲ್ಲಲಿಕ್ಕಾಗಿ ಪ್ರಯತ್ನಗಳು ಮಾಡಲ್ಪಟ್ಟಾಗಲೂ ಯೆಹೋವನು ಅವನೊಂದಿಗೆ ಮುಂದುವರಿದನು. ಮತ್ತು ಬಾರೂಕನಂತೆ, ಯೆರೆಮೀಯನು ಯೆರೂಸಲೇಮಿನ ನಾಶನವನ್ನು ಒಬ್ಬ ಸ್ವತಂತ್ರ ವ್ಯಕ್ತಿಯಾಗಿ ಪಾರಾದನು. ಆದರೆ ಅವನ ಹಿಂಸಕರೂ ಅವನ ಎಚ್ಚರಿಕೆಗಳನ್ನು ಅಲಕ್ಷಿಸಿದವರೂ ಒಂದೇ ನಾಶವಾದರು ಇಲ್ಲವೆ ಬಂದಿಗಳಾಗಿ ಬಾಬೆಲಿಗೆ ಎಳೆದೊಯ್ಯಲ್ಪಟ್ಟರು.
12. ನಿರುತ್ಸಾಹಗೊಳ್ಳಲು ಕಾರಣಗಳಿರುತ್ತವಾದರೂ, ನಾವು ಯಾವುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?
12 ಯೆರೆಮೀಯನಂತೆಯೇ, ಇಂದು ಕೂಡ ಅನೇಕ ಮಂದಿ ಯೆಹೋವನ ಸಾಕ್ಷಿಗಳು ಕಷ್ಟಬಾಧೆಗಳನ್ನು ತಾಳಿಕೊಳ್ಳುತ್ತಾರೆ. ಈ ಮುಂಚೆ ತಿಳಿಸಲ್ಪಟ್ಟಿರುವಂತೆ, ಅವುಗಳಲ್ಲಿ ಕೆಲವು ನಮ್ಮ ಸ್ವಂತ ಅಪರಿಪೂರ್ಣತೆಗಳಿಂದಲೂ, ಇನ್ನೂ ಕೆಲವು ಲೋಕದ ಅಸ್ತವ್ಯಸ್ತ ಸ್ಥಿತಿಯಿಂದಲೂ ಮತ್ತು ಕೆಲವು ನಮ್ಮ ಕೆಲಸವನ್ನು ವಿರೋಧಿಸುವವರಿಂದಲೂ ಬರುತ್ತವೆ. ಇಂತಹ ಕಷ್ಟಬಾಧೆಗಳು ನಮ್ಮನ್ನು ನಿರುತ್ಸಾಹಗೊಳಿಸಬಲ್ಲವು. ಯೆರೆಮೀಯನಂತೆ ನಾವೂ, ನಮ್ಮ ಸೇವೆಯನ್ನು ಮುಂದುವರಿಸಬಲ್ಲೆವೊ ಏನೋ ಎಂದು ಯೋಚಿಸಲಾರಂಭಿಸುವ ಹಂತವನ್ನು ತಲಪಬಹುದು. ನಾವು ಆಗಿಂದಾಗ್ಗೆ ನಿರುತ್ಸಾಹಿಗಳಾಗುವೆವು ಎಂಬುದು ನಿರೀಕ್ಷಿಸತಕ್ಕ ಸಂಗತಿ ನಿಜ. ನಿರುತ್ಸಾಹವು ಯೆಹೋವನ ಕಡೆಗೆ ನಮಗಿರುವ ಪ್ರೀತಿಯ ಅಗಾಧತೆಯನ್ನು ಪರೀಕ್ಷಿಸುತ್ತದೆ. ಆದಕಾರಣ ನಿರುತ್ಸಾಹವು ನಾವು ಊರೀಯನಂತೆ ಯೆಹೋವನ ಸೇವೆಯಿಂದ ಹಿಮ್ಮೆಟ್ಟುವಂತೆ ಮಾಡದಿರಲು ದೃಢನಿಶ್ಚಯದಿಂದಿರೋಣ. ಬದಲಿಗೆ, ನಾವು ಯೆರೆಮೀಯನನ್ನು ಅನುಕರಿಸಿ, ಯೆಹೋವನ ಬೆಂಬಲದ ಕುರಿತು ಭರವಸೆಯಿಂದಿರೋಣ.
ನಿರುತ್ಸಾಹದ ವಿರುದ್ಧ ಹೋರಾಡುವ ವಿಧ
13. ಯೆರೆಮೀಯ ಮತ್ತು ದಾವೀದನ ಮಾದರಿಗಳನ್ನು ನಾವು ಹೇಗೆ ಅನುಸರಿಸಬಲ್ಲೆವು?
13 ಯೆರೆಮೀಯನು ಯೆಹೋವ ದೇವರೊಂದಿಗೆ ಕ್ರಮವಾಗಿ ಸಂವಾದಮಾಡುತ್ತ, ತನ್ನ ಅಂತರಾಳದ ಅನಿಸಿಕೆಗಳನ್ನು ಹೇಳುತ್ತ, ಬಲಕ್ಕಾಗಿ ಬೇಡುತ್ತ ಇದ್ದನು. ಅದು ನಮಗೆ ಅನುಸರಿಸಲು ಉತ್ತಮವಾದ ಮಾದರಿಯಾಗಿದೆ. ಪುರಾತನ ಕಾಲದ ದಾವೀದನು, ಬಲದ ಅದೇ ಮೂಲದೆಡೆಗೆ ನೋಡುತ್ತ ಬರೆದುದು: “ಯೆಹೋವನೇ, ನನ್ನ ಮಾತುಗಳಿಗೆ ಕಿವಿಗೊಡು; ನನ್ನ ಧ್ಯಾನವನ್ನು ಲಕ್ಷ್ಯಕ್ಕೆ ತಂದುಕೋ. ನನ್ನ ಅರಸೇ, ನನ್ನ ದೇವರೇ, ನಿನ್ನನ್ನೇ ಪ್ರಾರ್ಥಿಸುವೆನು; ನನ್ನ ಮೊರೆಯನ್ನು ಆಲೈಸು.” (ಕೀರ್ತನೆ 5:1, 2) ದಾವೀದನ ಜೀವನದ ಕುರಿತ ಪ್ರೇರಿತ ವೃತ್ತಾಂತವು, ಸಹಾಯಕ್ಕಾಗಿ ದಾವೀದನು ಮಾಡಿದ ಪ್ರಾರ್ಥನೆಗಳಿಗೆ ಯೆಹೋವನು ಪದೇಪದೇ ಪ್ರತಿಕ್ರಿಯಿಸಿದನೆಂದು ತೋರಿಸುತ್ತದೆ. (ಕೀರ್ತನೆ 18:1, 2; 21:1-5) ಅದೇ ರೀತಿಯಲ್ಲಿ, ಒತ್ತಡಗಳು ತೀರ ಭಾರವಾಗಿರುವಾಗ ಅಥವಾ ನಮ್ಮ ಸಮಸ್ಯೆಗಳು ದುಸ್ತರವಾಗಿರುವಂತೆ ಕಾಣುವಾಗ, ಪ್ರಾರ್ಥನೆಯಲ್ಲಿ ಯೆಹೋವನ ಕಡೆಗೆ ತಿರುಗಿ ನಮ್ಮ ಹೃದಯಗಳನ್ನು ಆತನಿಗೆ ಬಿಚ್ಚಿ ಬೇಡುವುದು ಬಹಳಷ್ಟು ಸಾಂತ್ವನದಾಯಕ. (ಫಿಲಿಪ್ಪಿ 4:6, 7; 1 ಥೆಸಲೋನಿಕ 5:16-18) ಯೆಹೋವನು ನಮಗೆ ಕಿವಿಗೊಡಲು ನಿರಾಕರಿಸುವುದಿಲ್ಲ. ಬದಲಿಗೆ, ‘ಆತನು ನಮಗೋಸ್ಕರ ಚಿಂತಿಸುತ್ತಾನೆ’ ಎಂದು ಆಶ್ವಾಸನೆ ನೀಡುತ್ತಾನೆ. (1 ಪೇತ್ರ 5:6, 7) ಆದರೆ, ಯೆಹೋವನಿಗೆ ಪ್ರಾರ್ಥಿಸಿದ ಬಳಿಕ ಆತನ ಮಾತುಗಳಿಗೆ ಕಿವಿಗೊಡದಿರುವುದು ನ್ಯಾಯಸಮ್ಮತವಾಗಿರುವುದಿಲ್ಲ, ಅಲ್ಲವೇ?
14. ಯೆಹೋವನ ಮಾತುಗಳು ಯೆರೆಮೀಯನ ಮೇಲೆ ಯಾವ ಪರಿಣಾಮವನ್ನು ಬೀರಿದವು?
14 ಯೆಹೋವನು ನಮ್ಮೊಂದಿಗೆ ಹೇಗೆ ಮಾತನಾಡುತ್ತಾನೆ? ಪುನಃ ಯೆರೆಮೀಯನನ್ನು ಪರಿಗಣಿಸಿರಿ. ಯೆರೆಮೀಯನು ಒಬ್ಬ ಪ್ರವಾದಿಯಾಗಿದ್ದುದರಿಂದ, ಯೆಹೋವನು ಅವನೊಂದಿಗೆ ನೇರವಾಗಿ ಸಂವಾದಮಾಡಿದನು. ತನ್ನ ಹೃದಯದ ಮೇಲೆ ದೇವರ ಮಾತುಗಳಿಂದಾದ ಪರಿಣಾಮವನ್ನು ಯೆರೆಮೀಯನು ಹೀಗೆ ವರ್ಣಿಸುತ್ತಾನೆ: “ನನಗೆ ದೊರೆತ ನಿನ್ನ ಮಾತುಗಳನ್ನು ಆಹಾರಮಾಡಿಕೊಂಡೆನು, ನಿನ್ನ ನುಡಿಗಳು ನನಗೆ ಹರ್ಷವೂ ಹೃದಯಾನಂದವೂ ಆದವು; ಸೇನಾಧೀಶ್ವರನಾದ ದೇವರೇ, ಯೆಹೋವನೇ, ನಾನು ನಿನ್ನ ಹೆಸರಿನವನಲ್ಲವೆ!” (ಯೆರೆಮೀಯ 15:16) ಹೌದು, ದೇವರ ಹೆಸರಿನವನು ಎಂಬುದಾಗಿ ಕರೆಯಲ್ಪಟ್ಟದ್ದಕ್ಕಾಗಿ ಯೆರೆಮೀಯನು ಉಲ್ಲಾಸಿಸಿದನು, ಮತ್ತು ದೇವರ ಮಾತುಗಳು ಆ ಪ್ರವಾದಿಗೆ ಅಮೂಲ್ಯವಾಗಿದ್ದವು. ಆದ್ದರಿಂದಲೇ, ಅಪೊಸ್ತಲ ಪೌಲನಂತೆ ಯೆರೆಮೀಯನು ತನ್ನ ವಶಕ್ಕೆ ಕೊಡಲ್ಪಟ್ಟ ಸಂದೇಶವನ್ನು ಪ್ರಕಟಿಸಲು ಉತ್ಸುಕನಾಗಿದ್ದನು.—ರೋಮಾಪುರ 1:15, 16.
15. ಯೆಹೋವನ ಮಾತುಗಳನ್ನು ನಾವು ಹೇಗೆ ನಮ್ಮ ಹೃದಯದಲ್ಲಿ ನಾಟಿಸಬಲ್ಲೆವು, ಮತ್ತು ಯಾವ ವಿಚಾರಗಳು ನಾವು ಮೌನಿಗಳಾಗಿರದಿರಲು ದೃಢನಿಶ್ಚಯದಿಂದಿರುವಂತೆ ಮಾಡುವವು?
15 ಯೆಹೋವನು ಇಂದು ಯಾರೊಂದಿಗೂ ನೇರವಾಗಿ ಮಾತನಾಡುವುದಿಲ್ಲ. ಆದರೂ, ಯೆಹೋವನ ಮಾತುಗಳು ಬೈಬಲಿನ ಪುಟಗಳಲ್ಲಿ ನಮಗೆ ಲಭ್ಯವಿವೆ. ಈ ಕಾರಣದಿಂದ, ನಾವು ಬೈಬಲಿನ ಅಧ್ಯಯನವನ್ನು ಶ್ರದ್ಧಾಪೂರ್ವಕವಾಗಿ ಮಾಡಿ, ಕಲಿತ ವಿಷಯಗಳನ್ನು ಆಳವಾಗಿ ಧ್ಯಾನ ಮಾಡುವಲ್ಲಿ, ದೇವರ ಮಾತುಗಳು ನಮ್ಮ ಹೃದಯಕ್ಕೂ ‘ಹರ್ಷಕರವೂ ಆನಂದಕರವೂ’ ಆಗಿ ಪರಿಣಮಿಸುವವು. ಮತ್ತು ಆ ಮಾತುಗಳನ್ನು ನಾವು ಇತರರಿಗೆ ಹಂಚಲು ಹೋಗುವಾಗ ಯೆಹೋವನ ನಾಮವನ್ನು ಹೊತ್ತಿರುವುದಕ್ಕಾಗಿ ನಾವು ಪುಳಕಿತರಾಗಬಲ್ಲೆವು. ಇಂದು ಈ ಜಗತ್ತಿನಲ್ಲಿ ಬೇರೆ ಯಾರೂ ಯೆಹೋವನ ನಾಮವನ್ನು ಪ್ರಕಟಿಸುವುದಿಲ್ಲವೆಂಬ ನಿಜತ್ವವನ್ನು ನಾವೆಂದೂ ಮರೆಯದಿರೋಣ. ದೇವರ ಸ್ಥಾಪಿತ ರಾಜ್ಯದ ಸುವಾರ್ತೆಯನ್ನು ಸಾರಿ, ಯೇಸುವಿನ ಶಿಷ್ಯರಾಗುವಂತೆ ದೀನರಿಗೆ ಬೋಧಿಸುವವರು ಆತನ ಸಾಕ್ಷಿಗಳೇ ಹೊರತು ಇನ್ನಾರೂ ಇಲ್ಲ. (ಮತ್ತಾಯ 28:19, 20) ನಾವೆಷ್ಟು ಧನ್ಯರಾಗಿದ್ದೇವೆ! ಯೆಹೋವನು ನಮ್ಮ ವಶಕ್ಕೆ ಪ್ರೀತಿಯಿಂದ ಒಪ್ಪಿಸಿರುವ ಈ ಮಹಾ ಸುಯೋಗವನ್ನು ಪರಿಗಣಿಸುವಾಗ, ನಾವು ಹೇಗೆ ತಾನೇ ಮೌನಿಗಳಾಗಿರಸಾಧ್ಯವಿದೆ?
ನಮ್ಮ ಸಹವಾಸಗಳ ಕುರಿತು ಎಚ್ಚರಿಕೆಯಿಂದಿರೋಣ
16, 17. ಸಹವಾಸಗಳ ವಿಷಯದಲ್ಲಿ ಯೆರೆಮೀಯನ ದೃಷ್ಟಿಕೋನವೇನಾಗಿತ್ತು, ಮತ್ತು ನಾವು ಅವನನ್ನು ಹೇಗೆ ಅನುಕರಿಸಬಲ್ಲೆವು?
16 ತಾನು ಧೈರ್ಯಶಾಲಿಯಾಗಿರುವಂತೆ ಸಹಾಯಮಾಡಿದ ಇನ್ನೊಂದು ವಿಷಯವನ್ನೂ ಯೆರೆಮೀಯನು ವರದಿ ಮಾಡುತ್ತಾನೆ. ಅವನಂದದ್ದು: “ನಾನು ವಿನೋದಗಾರರ ಕೂಟದಲ್ಲಿ ಕೂತುಕೊಳ್ಳಲಿಲ್ಲ, ಉಲ್ಲಾಸಪಡಲೂ ಇಲ್ಲ; ನೀನು ನನ್ನ ಮೇಲೆ ಕೈಯಿಟ್ಟಿದ್ದರಿಂದ ಒಂಟಿಗನಾಗಿ ಕೂತೆನು; ನನ್ನನ್ನು ರೋಷದಿಂದ ತುಂಬಿಸಿದ್ದಿಯಷ್ಟೆ.” (ಯೆರೆಮೀಯ 15:17) ಕೆಟ್ಟ ಒಡನಾಡಿಗಳಿಂದ ಭ್ರಷ್ಟಗೊಳ್ಳುವ ಬದಲು ಯೆರೆಮೀಯನು ಒಂಟಿಗನಾಗಿರಲು ಇಷ್ಟಪಟ್ಟನು. ಇಂದು ನಾವು ಸಹ ವಿಷಯಗಳನ್ನು ಅದೇ ದೃಷ್ಟಿಯಿಂದ ನೋಡುತ್ತೇವೆ. “ದುಸ್ಸಹವಾಸವು ಸದಾಚಾರವನ್ನು,” ಅನೇಕ ವರ್ಷಗಳಿಂದ ನಮಗಿದ್ದ ಸದಾಚಾರಗಳನ್ನೂ “ಕೆಡಿಸುತ್ತದೆ” ಎಂಬ ಅಪೊಸ್ತಲ ಪೌಲನ ಎಚ್ಚರಿಕೆಯನ್ನು ನಾವೆಂದಿಗೂ ಮರೆಯುವುದಿಲ್ಲ.—1 ಕೊರಿಂಥ 15:33.
17 ಲೋಕದ ಆತ್ಮವು ನಮ್ಮ ಯೋಚನೆಯನ್ನು ಮಲಿನಗೊಳಿಸುವಂತೆ ದುಸ್ಸಹವಾಸಗಳು ಎಡೆಮಾಡಿಕೊಡಬಲ್ಲವು. (1 ಕೊರಿಂಥ 2:12; ಎಫೆಸ 2:2; ಯಾಕೋಬ 4:4) ಆದುದರಿಂದ, ಅಂತಹ ಹಾನಿಕರವಾದ ಸಹವಾಸಗಳಾವುವು ಎಂದು ನಾವು ಗುರುತಿಸುವಂತೆ ಮತ್ತು ಹೀಗೆ ಅವನ್ನು ಸಂಪೂರ್ಣವಾಗಿ ದೂರವಿಡುವಂತೆ ನಾವು ನಮ್ಮ ವಿವೇಚನಾಶಕ್ತಿಗಳನ್ನು ತರಬೇತುಗೊಳಿಸೋಣ. (ಇಬ್ರಿಯ 5:14) ಒಂದುವೇಳೆ ಪೌಲನು ಇಂದು ಭೂಮಿಯ ಮೇಲೆ ಜೀವಿಸಿರುತ್ತಿದ್ದರೆ, ಅನೈತಿಕವಾದ ಅಥವಾ ಹಿಂಸಾತ್ಮಕವಾದ ಚಲನಚಿತ್ರಗಳನ್ನು ಅಥವಾ ಹಿಂಸಾತ್ಮಾಕ ಕ್ರೀಡೆಗಳನ್ನು ನೋಡುತ್ತಿರುವ ಒಬ್ಬ ಕ್ರೈಸ್ತನಿಗೆ ಅವನು ಏನನ್ನುತ್ತಿದ್ದನೆಂದು ನೀವು ನೆನಸುತ್ತೀರಿ? ಇಂಟರ್‌ನೆಟ್‌ನಲ್ಲಿ ತೀರ ಅಪರಿಚಿತರೊಂದಿಗೆ ಮೈತ್ರಿಯನ್ನು ಬೆಳೆಸುವ ಸಹೋದರನಿಗೆ ಅವನು ಯಾವ ಸಲಹೆ ಕೊಡುತ್ತಿದ್ದನು? ವಿಡಿಯೊ ಆಟಗಳನ್ನು ಆಡುವುದರಲ್ಲೊ, ಟೆಲಿವಿಷನನ್ನು ನೋಡುವುದರಲ್ಲೊ ಗಂಟಾನುಗಟ್ಟಲೆ ಸಮಯವನ್ನು ಕಳೆದರೂ ಉತ್ತಮವಾದ ವೈಯಕ್ತಿಕ ಅಧ್ಯಯನ ರೂಢಿಗಳಿಲ್ಲದಿರುವ ಕ್ರೈಸ್ತನೊಬ್ಬನ ವಿಷಯದಲ್ಲಿ ಅವನು ಏನು ಭಾವಿಸುತ್ತಿದ್ದನು?—2 ಕೊರಿಂಥ 6:14ಬಿ; ಎಫೆಸ 5:3-5, 15, 16.
ಆಧ್ಯಾತ್ಮಿಕ ಪರದೈಸಿನಲ್ಲಿ ಮುಂದುವರಿಯಿರಿ
18. ನಾವು ಆಧ್ಯಾತ್ಮಿಕವಾಗಿ ಬಲಶಾಲಿಗಳಾಗಿ ಉಳಿಯಲು ನಮಗೆ ಯಾವುದು ಸಹಾಯಮಾಡುವುದು?
18 ನಮ್ಮ ಆಧ್ಯಾತ್ಮಿಕ ಪರದೈಸ್ ನಮಗೆ ನಿಕ್ಷೇಪದಂತಿದೆ. ಇಂದು ಈ ಲೋಕದಲ್ಲಿ ಅದನ್ನು ಸ್ವಲ್ಪವಾದರೂ ಹೋಲುವ ಇನ್ನಾವುದೂ ಇಲ್ಲ. ಅದರಲ್ಲಿರುವ ಕ್ರೈಸ್ತರು ಒಬ್ಬರಿಗೊಬ್ಬರು ತೋರಿಸುವ ಪ್ರೀತಿ, ಪರಿಗಣನೆ, ಮತ್ತು ದಯೆಯ ವಿಷಯದಲ್ಲಿ ಅವಿಶ್ವಾಸಿಗಳೂ ಪ್ರಶಂಸೆಯ ಮಾತುಗಳನ್ನಾಡುತ್ತಾರೆ. (ಎಫೆಸ 4:31, 32) ಆದರೂ, ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ನಾವು ನಿರುತ್ಸಾಹದ ವಿರುದ್ಧ ಹೋರಾಡುವುದು ಆವಶ್ಯಕ. ಸುಸಹವಾಸ, ಪ್ರಾರ್ಥನೆ, ಮತ್ತು ಉತ್ತಮ ಅಧ್ಯಯನ ರೂಢಿಗಳು ನಾವು ಆಧ್ಯಾತ್ಮಿಕವಾಗಿ ಬಲಶಾಲಿಗಳಾಗಿ ಉಳಿಯಲು ನಮಗೆ ಸಹಾಯಮಾಡಬಲ್ಲವು. ಯೆಹೋವನಲ್ಲಿ ಪೂರ್ಣ ಭರವಸೆಯುಳ್ಳವರಾಗಿ ಯಾವುದೇ ಪರೀಕ್ಷೆಯನ್ನು ಎದುರಿಸಲು ಅವು ನಮ್ಮನ್ನು ಬಲಪಡಿಸುವವು.—2 ಕೊರಿಂಥ 4:7, 8.
19, 20. (ಎ) ನಾವು ತಾಳಿಕೊಳ್ಳುವಂತೆ ಯಾವುದು ಸಹಾಯಮಾಡುವುದು? (ಬಿ) ಮುಂದಿನ ಲೇಖನವನ್ನು ಯಾರಿಗೆ ಸಂಬೋಧಿಸಲಾಗಿದೆ, ಮತ್ತು ಅದು ಯಾರಿಗೆ ಸಹ ಆಸಕ್ತಿಕರವಾಗಿರುತ್ತದೆ?
19 ನಮ್ಮ ಬೈಬಲ್ ಸಂದೇಶವನ್ನು ದ್ವೇಷಿಸುವವರು ನಮ್ಮಲ್ಲಿ ಭಯಹುಟ್ಟಿಸಿ, ನಂಬಿಕೆಯ ವಿಷಯದಲ್ಲಿ ರಾಜಿಮಾಡಿಕೊಳ್ಳುವಂತೆ ಮಾಡಲು ನಾವೆಂದಿಗೂ ಅನುಮತಿಸಬಾರದು. ಯೆರೆಮೀಯನನ್ನು ಹಿಂಸಿಸಿದ ವೈರಿಗಳಂತೆಯೇ, ನಮ್ಮ ವಿರುದ್ಧ ಹೋರಾಡುವವರು ಸಹ ದೇವರ ವಿರುದ್ಧವಾಗಿ ಹೋರಾಡುತ್ತಿದ್ದಾರೆ. ಅವರು ಜಯಹೊಂದರು. ನಮ್ಮ ವಿರೋಧಿಗಳಿಗಿಂತಲೂ ಎಷ್ಟೋ ಹೆಚ್ಚು ಬಲಾಢ್ಯನಾಗಿರುವ ಯೆಹೋವನು ನಮಗನ್ನುವುದು: “ಯೆಹೋವನನ್ನು ನಿರೀಕ್ಷಿಸಿಕೊಂಡಿರು; ದೃಢವಾಗಿರು; ನಿನ್ನ ಹೃದಯವು ಧೈರ್ಯದಿಂದಿರಲಿ; ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು.” (ಕೀರ್ತನೆ 27:14) ನಮ್ಮ ಹೃದಯದಲ್ಲಿ ಯೆಹೋವನಲ್ಲಿನ ನಿರೀಕ್ಷೆಯು ಆಳವಾಗಿ ಬೇರೂರಲ್ಪಟ್ಟವರಾಗಿ ಒಳ್ಳೆಯದನ್ನು ಮಾಡಲು ನಾವೆಂದಿಗೂ ಬಿಟ್ಟುಬಿಡದಿರಲು ದೃಢಸಂಕಲ್ಪವುಳ್ಳವರಾಗಿರೋಣ. ನಾವು ದಣಿದು ಬಳಲದಿದ್ದರೆ, ಯೆರೆಮೀಯ ಮತ್ತು ಬಾರೂಕರಂತೆ ಫಲವನ್ನು ಕೊಯ್ಯುವೆವೆಂಬ ಭರವಸೆಯುಳ್ಳವರಾಗಿರೋಣ.—ಗಲಾತ್ಯ 6:9.
20 ಅನೇಕ ಕ್ರೈಸ್ತರಿಗಾದರೊ, ನಿರುತ್ಸಾಹದೊಂದಿಗೆ ಹೆಣಗಾಡುವುದು ನಿರಂತರ ಹೋರಾಟವಾಗಿರುತ್ತದೆ. ಯುವಜನರಿಗಾದರೊ ವಿಶೇಷ ಸವಾಲುಗಳು ಎದ್ದು ನಿಲ್ಲುತ್ತವೆ. ಆದರೆ ಅವರಿಗೆ ಉತ್ತಮ ಸದವಕಾಶಗಳೂ ಇವೆ. ಮುಂದಿನ ಲೇಖನವನ್ನು ನಮ್ಮ ನಡುವೆಯಿರುವ ಯುವಜನರಿಗೆ ನೇರವಾಗಿ ಸಂಬೋಧಿಸಲಾಗಿದೆ. ಅಷ್ಟುಮಾತ್ರವಲ್ಲ, ಯಾರು ತಮ್ಮ ನುಡಿ, ಮಾದರಿ, ಮತ್ತು ನೇರವಾದ ಬೆಂಬಲದ ಮೂಲಕ ಸಭೆಯಲ್ಲಿರುವ ಯುವಜನರಿಗೆ ಸಹಾಯಮಾಡುವ ಸ್ಥಾನದಲ್ಲಿದ್ದಾರೊ ಆ ಹೆತ್ತವರಿಗೂ ಸಭೆಯಲ್ಲಿರುವ ಎಲ್ಲಾ ಸಮರ್ಪಿತ ವಯಸ್ಕರಿಗೂ ಅದು ಆಸಕ್ತಿಕರವಾಗಿರುವುದು.
ಹೇಗೆ ಉತ್ತರಿಸುವಿರಿ?
• ನಾವು ನಿರುತ್ಸಾಹಕರವಾದ ಪರಿಸ್ಥಿತಿಗಳನ್ನು ಏಕೆ ನಿರೀಕ್ಷಿಸಬಲ್ಲೆವು, ಮತ್ತು ಸಹಾಯಕ್ಕಾಗಿ ನಾವು ಯಾರ ಕಡೆಗೆ ನೋಡಬೇಕು?
• ಕಷ್ಟಕರವಾದ ಸೇವಾನೇಮಕವಿದ್ದರೂ ಯೆರೆಮೀಯನು ನಿರುತ್ಸಾಹವನ್ನು ಹೇಗೆ ಜಯಿಸಿದನು?
• ಕಷ್ಟಗಳ ಮಧ್ಯೆಯೂ ನಮ್ಮ ಹೃದಯಗಳನ್ನು ಯಾವುದು ‘ಹರ್ಷಿಸಿ ಸಂತೋಷಪಡುವಂತೆ’ ಮಾಡುವುದು?
[ಪುಟ 9ರಲ್ಲಿರುವ ಚಿತ್ರ]
ತಾನು ಪ್ರವಾದಿಯಾಗಲು ತೀರ ಎಳೆಯನೂ ಅನನುಭವಿಯೂ ಆಗಿದ್ದೇನೆಂದು ಯೆರೆಮೀಯನು ಭಾವಿಸಿದನು
[ಪುಟ 10ರಲ್ಲಿರುವ ಚಿತ್ರ]
ಯೆರೆಮೀಯನು ಹಿಂಸೆಗೊಳಗಾಗುತ್ತಿದ್ದ ಸಮಯದಲ್ಲಿಯೂ ಯೆಹೋವನು “ಭಯಂಕರಶೂರನಾಗಿ” ತನ್ನೊಂದಿಗಿದ್ದನೆಂದು ತಿಳಿದಿದ್ದನು