ಒಂದು ಹೃತ್ಪೂರ್ವಕ ಪ್ರಾರ್ಥನೆಗೆ ಯೆಹೋವನ ಉತ್ತರ
“ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.”—ಕೀರ್ತ. 83:18.
1, 2. ಅನೇಕರಿಗೆ ಯಾವ ಅನುಭವವಾಗಿದೆ, ಮತ್ತು ಯಾವ ಪ್ರಶ್ನೆಗಳೇಳುತ್ತವೆ?
ಕೆಲವು ವರ್ಷಗಳ ಹಿಂದೆ ಒಬ್ಬಾಕೆ ಸ್ತ್ರೀಗೆ ತನ್ನ ವಠಾರದಲ್ಲಿ ಸಂಭವಿಸಿದ್ದ ದುರಂತವೊಂದರಿಂದ ಮನಕದಡಿತು. ರೋಮನ್ ಕ್ಯಾಥೊಲಿಕ್ ಕುಟುಂಬದಲ್ಲಿ ಹುಟ್ಟಿದ ಆಕೆ ಉಪಶಮನಕ್ಕಾಗಿ ಸ್ಥಳೀಯ ಪಾದ್ರಿಯ ಬಳಿ ಹೋದಳು. ಉಪಶಮನ ಕೊಡುವುದಂತೂ ಬಿಡಿ ಆತನು ಆಕೆಯೊಂದಿಗೆ ಮಾತಾಡಲೂ ಸಿದ್ಧನಿರಲಿಲ್ಲ. ಆದ್ದರಿಂದ ಆಕೆ ದೇವರನ್ನು ಬೇಡಿದ್ದು: “ನೀನಾರೆಂದು ನಾನರಿಯೆ ... ಆದರೆ ನೀನಿದ್ದಿ ಎಂದು ನನಗೆ ಗೊತ್ತು. ನಿನ್ನನ್ನರಿಯಲು ದಯವಿಟ್ಟು ನನಗೆ ಸಹಾಯ ಮಾಡು!” ಕೆಲ ದಿನಗಳ ಬಳಿಕ ಯೆಹೋವನ ಸಾಕ್ಷಿಗಳು ಆಕೆಯನ್ನು ಭೇಟಿಯಾಗಿ ಆಕೆ ಪಡೆಯಲಿಚ್ಛಿಸಿದ ಸಾಂತ್ವನವನ್ನೂ ಜ್ಞಾನವನ್ನೂ ನೀಡಿದರು. ಅವರು ಹೇಳಿಕೊಟ್ಟ ಅನೇಕ ವಿಷಯಗಳಲ್ಲಿ, ದೇವರ ಹೆಸರು ಯೆಹೋವ ಎಂಬುದು ಒಂದಾಗಿತ್ತು. ಅದನ್ನು ತಿಳಿದು ಆಕೆ ತುಂಬ ಪ್ರಭಾವಿತಳಾದಳು. ಆಕೆ ಹೇಳಿದ್ದು: “ನಾನು ಚಿಕ್ಕಂದಿನಿಂದ ತಿಳಿಯಲು ಹಂಬಲಿಸುತ್ತಿದ್ದ ದೇವರು ಈತನೇ!”
2 ಅನೇಕರಿಗೆ ಇದೇ ರೀತಿಯ ಅನುಭವವಾಗಿದೆ. ಹೆಚ್ಚಿನ ವೇಳೆ, ಬೈಬಲಿನಲ್ಲಿ ಕೀರ್ತನೆ 83:18ನ್ನು ತೆರೆದು ಓದಿದಾಗಲೇ ಅವರು ಮೊದಲ ಬಾರಿಗೆ ಯೆಹೋವನ ಹೆಸರನ್ನು ನೋಡಿರುತ್ತಾರೆ. ಆ ವಚನ ಹೀಗನ್ನುತ್ತದೆ: “ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.” ಆದರೆ ಈ 83ನೇ ಕೀರ್ತನೆಯನ್ನು ಏಕೆ ಬರೆಯಲಾಗಿತ್ತೆಂದು ನೀವು ಎಂದಾದರೂ ಯೋಚಿಸಿದ್ದೀರಾ? ಯೆಹೋವನೊಬ್ಬನೇ ಸತ್ಯ ದೇವರಾಗಿದ್ದಾನೆ ಎಂಬದನ್ನು ಎಲ್ಲರೂ ಅಂಗೀಕರಿಸಲು ಯಾವ ಘಟನೆಗಳು ಕಾರಣವಾಗಿರುವವು? ನಾವಿಂದು ಈ ಕೀರ್ತನೆಯಿಂದ ಏನು ಕಲಿಯಬಲ್ಲೆವು? ಈ ಪ್ರಶ್ನೆಗಳನ್ನು ನಾವು ಈ ಲೇಖನದಲ್ಲಿ ಪರಿಗಣಿಸುವೆವು.a
ಯೆಹೋವನ ಜನರ ವಿರುದ್ಧ ಪಿತೂರಿ
3, 4. ಕೀರ್ತನೆ 83ರ ರಚಕನು ಯಾರು, ಮತ್ತು ಯಾವ ಬೆದರಿಕೆಯ ಕುರಿತು ಅವನು ವರ್ಣಿಸುತ್ತಾನೆ?
3 ಕೀರ್ತನೆ 83ರ ಮೇಲ್ಬರಹ ತೋರಿಸುವಂತೆ ಅದು “ಆಸಾಫನ ಕೀರ್ತನೆ” ಆಗಿದೆ. ಈ ಕೀರ್ತನೆಯ ರಚಕನು ದಾವೀದನ ಆಳ್ವಿಕೆಯಲ್ಲಿ ಪ್ರಮುಖ ಸಂಗೀತಗಾರ, ಲೇವ್ಯನಾದ ಆಸಾಫನ ಮನೆತನದವನಾಗಿದ್ದಿರಬೇಕು. ಈ ಕೀರ್ತನೆಯಲ್ಲಿ, ಯೆಹೋವನು ತನ್ನ ಪರಮಾಧಿಕಾರವನ್ನು ಎತ್ತಿಹಿಡಿಯಲು ಮತ್ತು ತನ್ನ ಹೆಸರನ್ನು ಪ್ರಸಿದ್ಧಪಡಿಸಲು ಕ್ರಮಕೈಗೊಳ್ಳಬೇಕೆಂದು ಕೀರ್ತನೆಗಾರನು ಬೇಡಿಕೊಳ್ಳುತ್ತಾನೆ. ಈ ಕೀರ್ತನೆ ಸೊಲೊಮೋನನು ತೀರಿಕೊಂಡ ನಂತರ ಬರೆಯಲ್ಪಟ್ಟಿರಬೇಕು. ಇದನ್ನು ಹೇಗೆ ಹೇಳಸಾಧ್ಯವಿದೆ? ದಾವೀದ ಮತ್ತು ಸೊಲೊಮೋನನ ಆಳ್ವಿಕೆಯ ಸಮಯದಲ್ಲಿ ತೂರಿನ ಅರಸನು ಇಸ್ರಾಯೇಲ್ಯರೊಂದಿಗೆ ಸ್ನೇಹಮಯಿಯಾಗಿದ್ದನು. ಆದರೆ 83ನೇ ಕೀರ್ತನೆಯನ್ನು ರಚಿಸುವಷ್ಟರಲ್ಲಿ ತೂರಿನವರು ಇಸ್ರಾಯೇಲ್ಯರಿಗೆ ತಿರುಗಿಬಿದ್ದು ಅವರ ವೈರಿಗಳೊಂದಿಗೆ ಸೇರಿಕೊಂಡಿದ್ದರು.
4 ದೇವಜನರನ್ನು ನಾಶಮಾಡಲು ಪಿತೂರಿ ನಡೆಸುತ್ತಿದ್ದ ಹತ್ತು ಜನಾಂಗಗಳನ್ನು ಕೀರ್ತನೆಗಾರನು ಹೆಸರಿಸುತ್ತಾನೆ. ಆ ವೈರಿಗಳು ಇಸ್ರಾಯೇಲ್ಯರ ಆಸುಪಾಸಲ್ಲೇ ನೆಲೆಸಿದ್ದರು. ಅವರ ಹೆಸರುಗಳು ಹೀಗಿವೆ: ‘ಎದೋಮ್ಯರ ಮತ್ತು ಇಷ್ಮಾಯೇಲ್ಯರ ಪಾಳೆಯಗಳವರು, ಮೋವಾಬ್ಯರು, ಹಗ್ರೀಯರು, ಗೆಬಾಲ್ಯರು, ಅಮ್ಮೋನಿಯರು, ಅಮಾಲೇಕ್ಯರು, ಫಿಲಿಷ್ಟಿಯರು, ತೂರ್ ಸಂಸ್ಥಾನದವರು, ಅಶ್ಶೂರ್ಯರೂ ಕೂಡಿಕೊಂಡಿದ್ದಾರೆ.’ (ಕೀರ್ತ. 83:5, 6, 8) ಇಲ್ಲಿ ಕೀರ್ತನೆಗಾರನು ಯಾವ ಐತಿಹಾಸಿಕ ಘಟನೆಗೆ ಸೂಚಿಸುತ್ತಿದ್ದಾನೆ? ಯೆಹೋಷಾಫಾಟನ ಕಾಲದಲ್ಲಿ ಅಮ್ಮೋನ್, ಮೋವಾಬ್ ಮತ್ತು ಸೇಯೀರ್ ಪರ್ವತಪ್ರದೇಶದವರ ಒಕ್ಕೂಟವು ಇಸ್ರಾಯೇಲ್ಯರ ವಿರುದ್ಧವಾಗಿ ಬಂದ ಸಂದರ್ಭಕ್ಕೆ ಅವನು ಸೂಚಿಸುತ್ತಿದ್ದಿರಬೇಕೆಂಬುದು ಕೆಲವರ ಎಣಿಕೆ. (2 ಪೂರ್ವ. 20:1-26) ಇನ್ನೂ ಕೆಲವರು, ಇದು ಇಸ್ರಾಯೇಲ್ ಅದರ ಇತಿಹಾಸದಾದ್ಯಂತ ತನ್ನ ಸುತ್ತಲಿದ್ದ ಜನಾಂಗಗಳಿಂದ ಸತತವಾಗಿ ಎದುರಿಸಿದ ವಿರೋಧವನ್ನು ಸೂಚಿಸಿರಬೇಕು ಎಂದು ನೆನಸುತ್ತಾರೆ.
5. ಇಂದು ಕ್ರೈಸ್ತರು 83ನೇ ಕೀರ್ತನೆಯಿಂದ ಯಾವ ಪ್ರಯೋಜನಪಡೆಯಬಲ್ಲರು?
5 ವಿಷಯವು ಏನೇ ಆಗಿರಲಿ, ಯೆಹೋವ ದೇವರು ತನ್ನ ಜನಾಂಗವು ಅಪಾಯದಲ್ಲಿದ್ದಾಗ ತನ್ನ ಆತ್ಮದ ಮೂಲಕ ಈ ಕೀರ್ತನೆಯ ಬರವಣಿಗೆಯನ್ನು ಪ್ರೇರೇಪಿಸಿದನೆಂಬುದು ಸುವ್ಯಕ್ತ. ಈ ಕೀರ್ತನೆಯು ಇಂದು ಸಹ ದೇವರ ಸೇವಕರಿಗೆ ಉತ್ತೇಜನ ನೀಡುತ್ತದೆ. ಏಕೆಂದರೆ, ಇತಿಹಾಸದುದ್ದಕ್ಕೂ ಅವರನ್ನು ಸಂಪೂರ್ಣವಾಗಿ ನಾಶಮಾಡಿಬಿಡಲು ಪಣತೊಟ್ಟ ವಿರೋಧಿಗಳು ಮೇಲಿಂದ ಮೇಲೆ ದಾಳಿಮಾಡಿದ್ದಾರೆ. ಅಲ್ಲದೆ ಈ ಕೀರ್ತನೆಯು, ಸದ್ಯದಲ್ಲೇ ಮಾಗೋಗಿನ ಗೋಗನು ತನ್ನ ಪಡೆಗಳನ್ನು ಕೂಡಿಸಿ, ದೇವರನ್ನು ಆತ್ಮ ಹಾಗೂ ಸತ್ಯದಿಂದ ಆರಾಧಿಸುವ ಎಲ್ಲರನ್ನು ನಾಶಮಾಡುವ ಅಂತಿಮ ಪ್ರಯತ್ನ ಮಾಡುವಾಗ ನಮ್ಮೆಲ್ಲರನ್ನೂ ಬಲಪಡಿಸುವುದು.—ಯೆಹೆಜ್ಕೇಲ 38:2, 8, 9, 16 ಓದಿ.
ಪರಮಾಸಕ್ತಿಯ ಸಂಗತಿ
6, 7. (ಎ) 83ನೇ ಕೀರ್ತನೆಯ ಆರಂಭದ ಮಾತುಗಳಲ್ಲಿ ಕೀರ್ತನೆಗಾರನು ಯಾವುದಕ್ಕಾಗಿ ಪ್ರಾರ್ಥಿಸುತ್ತಾನೆ? (ಬಿ) ಕೀರ್ತನೆಗಾರನಿಗೆ ಪರಮಾಸಕ್ತಿಯ ಸಂಗತಿ ಯಾವುದಾಗಿತ್ತು?
6 ಕೀರ್ತನೆಗಾರನು ಪ್ರಾರ್ಥನೆಯಲ್ಲಿ ತನ್ನ ಅನಿಸಿಕೆಗಳನ್ನು ತೋಡಿಕೊಂಡದ್ದನ್ನು ಗಮನಿಸಿ: “ದೇವರೇ, ಸುಮ್ಮನಿರಬೇಡ; ನಿಶ್ಚಿಂತನಾಗಿ ಮೌನದಿಂದಿರಬೇಡ ಸ್ವಾಮೀ. ನೋಡು, ನಿನ್ನ ಶತ್ರುಗಳು ಘೋಷಿಸುತ್ತಾರೆ; ನಿನ್ನ ದ್ವೇಷಿಗಳು ತಲೆಯೆತ್ತಿದ್ದಾರೆ. ಅವರು ನಿನ್ನ ಪ್ರಜೆಗಳಿಗೆ ವಿರೋಧವಾಗಿ ಒಳಸಂಚು ಮಾಡಿ ನಿನ್ನ ಮರೆಹೊಕ್ಕವರನ್ನು ಕೆಡಿಸಬೇಕೆಂದು ಆಲೋಚಿಸಿ ... ಏಕಮನಸ್ಸಿನಿಂದ ಕೂಡಿ ನಿನಗೇ ವಿರೋಧವಾಗಿ ಒಳಸಂಚುಮಾಡುತ್ತಾರಲ್ಲಾ.”—ಕೀರ್ತ. 83:1-3, 7.
7 ಕೀರ್ತನೆಗಾರನಿಗೆ ಪರಮಾಸಕ್ತಿಯ ಸಂಗತಿ ಯಾವುದಾಗಿತ್ತು? ಇಸ್ರಾಯೇಲಿನ ಸುತ್ತಲೂ ವೈರಿಗಳಿದ್ದರಿಂದ ಅವನಿಗೆ ತನ್ನ ಹಾಗೂ ತನ್ನ ಕುಟುಂಬದ ಸುರಕ್ಷೆಯ ಕುರಿತು ಖಂಡಿತ ಚಿಂತೆಯಿದ್ದಿರಬೇಕು. ಹಾಗಿದ್ದರೂ ಅವನ ಪ್ರಾರ್ಥನೆಯ ಮುಖ್ಯ ವಿಷಯವು ಯೆಹೋವನ ಹೆಸರಿಗೆ ಬರುವ ಕಳಂಕ ಮತ್ತು ಯೆಹೋವನ ನಾಮಧಾರಿ ಜನಾಂಗದ ಮೇಲೆ ಬಂದ ಬೆದರಿಕೆಯಾಗಿತ್ತು. ಈ ಹಳೇ ಲೋಕದ ಕಠಿನವಾದ ಕಡೇ ದಿವಸಗಳನ್ನು ತಾಳಿಕೊಳ್ಳುತ್ತಿರುವಾಗ ನಾವೆಲ್ಲರೂ ಇಂಥದ್ದೇ ಸಮತೋಲನದ ದೃಷ್ಟಿಕೋನವನ್ನಿಡೋಣ.—ಮತ್ತಾಯ 6:9, 10 ಓದಿ.
8. ಜನಾಂಗಗಳು ಇಸ್ರಾಯೇಲಿನ ವಿರುದ್ಧ ಪಿತೂರಿ ನಡೆಸಿದ್ದು ಏಕೆ?
8 ಕೀರ್ತನೆಗಾರನು ಇಸ್ರಾಯೇಲ್ಯರ ವೈರಿಗಳು ಹೀಗನ್ನುವುದನ್ನು ದಾಖಲಿಸುತ್ತಾನೆ: “ಬನ್ನಿರಿ; ಅವರು ಜನಾಂಗವಾಗಿ ಉಳಿಯದಂತೆಯೂ ಇಸ್ರಾಯೇಲೆಂಬ ಹೆಸರು ಅಳಿದುಹೋಗುವಂತೆಯೂ ಅವರನ್ನು ಸಂಹರಿಸೋಣ ಅಂದುಕೊಳ್ಳುತ್ತಾರೆ.” (ಕೀರ್ತ. 83:4) ಆ ಜನಾಂಗಗಳಿಗೆ ದೇವರ ಸ್ವಕೀಯ ಜನರ ಮೇಲೆ ಎಷ್ಟು ದ್ವೇಷ! ಅವರು ಪಿತೂರಿ ನಡೆಸಲು ಮತ್ತೊಂದು ಕಾರಣವೂ ಇತ್ತು. ಅವರಿಗೆ ಇಸ್ರಾಯೇಲ್ಯರ ಜಮೀನಿನ ಮೇಲೆ ಕಣ್ಣಿತ್ತು. “ದೇವರು ಅವರಿಗೆ ಕೊಟ್ಟ ದೇಶವನ್ನು ಸ್ವಾಧೀನಮಾಡಿಕೊಳ್ಳುವಾ” ಎಂದು ಬಡಾಯಿಕೊಚ್ಚಿಕೊಂಡರು. (ಕೀರ್ತ. 83:12) ನಮ್ಮ ದಿನಗಳಲ್ಲೂ ಹೀಗೇನಾದರೂ ನಡೆದಿದೆಯೇ? ಹೌದು!
“ನಿನ್ನ ಪರಿಶುದ್ಧನಿವಾಸಸ್ಥಾನ”
9, 10. (ಎ) ಪ್ರಾಚೀನ ಸಮಯಗಳಲ್ಲಿ ದೇವರ ಪರಿಶುದ್ಧ ನಿವಾಸಸ್ಥಾನ ಯಾವುದಾಗಿತ್ತು? (ಬಿ) ಅಭಿಷಿಕ್ತ ಉಳಿಕೆಯವರು ಮತ್ತು “ಬೇರೆ ಕುರಿಗಳು” ಇಂದು ಯಾವ ಆಶೀರ್ವಾದಗಳನ್ನು ಆನಂದಿಸುತ್ತಾರೆ?
9 ಪ್ರಾಚೀನ ಸಮಯಗಳಲ್ಲಿ ವಾಗ್ದತ್ತ ದೇಶವನ್ನು ದೇವರ ಪರಿಶುದ್ಧ ನಿವಾಸಸ್ಥಾನವೆಂದು ಕರೆಯಲಾಗುತ್ತಿತ್ತು. ಐಗುಪ್ತದಿಂದ ಬಿಡುಗಡೆ ಹೊಂದಿದ ನಂತರ ಇಸ್ರಾಯೇಲ್ಯರು ಹಾಡಿದ ವಿಜಯಗೀತೆಯನ್ನು ನೆನಪಿಸಿ: “ನೀನು ಬಿಡುಗಡೆ ಮಾಡಿದ ಪ್ರಜೆಯನ್ನೋ ಪ್ರೀತಿಯಿಂದ ನಡಿಸಿಕೊಂಡು ನಿನ್ನ ಪರಿಶುದ್ಧನಿವಾಸಸ್ಥಾನದ ತನಕ ನಿನ್ನ ಶಕ್ತಿಯಿಂದ ಬರಮಾಡಿದಿ.” (ವಿಮೋ. 15:13) ತದನಂತರ, ಆ “ಪರಿಶುದ್ಧನಿವಾಸಸ್ಥಾನ”ದಲ್ಲಿ ದೇವಾಲಯ, ಯಾಜಕವರ್ಗ ಹಾಗೂ ರಾಜಧಾನಿಯಾದ ಯೆರೂಸಲೇಮ್ ಇತ್ತು ಮತ್ತು ಈ ಪಟ್ಟಣದಲ್ಲೇ ಯೆಹೋವನ ಸಿಂಹಾಸನದ ಮೇಲೆ ಕುಳಿತು ಆಳಿದ ದಾವೀದನ ವಂಶಾವಳಿಯ ರಾಜರುಗಳಿದ್ದರು. (1 ಪೂರ್ವ. 29:23) ಸೂಕ್ತವಾಗಿಯೇ ಯೇಸು, ಯೆರೂಸಲೇಮನ್ನು “ದೊಡ್ಡ ಅರಸನ ಪಟ್ಟಣ” ಎಂದು ಕರೆದನು.—ಮತ್ತಾ. 5:35.
10 ನಮ್ಮ ದಿನಗಳ ಬಗ್ಗೆ ಏನು? ‘ದೇವರ ಇಸ್ರಾಯೇಲ್’ ಎಂಬ ಹೊಸ ಜನಾಂಗವು ಸಾ.ಶ. 33ರಲ್ಲಿ ಹುಟ್ಟಿತ್ತು. (ಗಲಾ. 6:16) ಯೇಸು ಕ್ರಿಸ್ತನ ಅಭಿಷಿಕ್ತ ಸಹೋದರರಿಂದ ಕೂಡಿದ ಆ ಜನಾಂಗವು, ಮಾಂಸಿಕ ಇಸ್ರಾಯೇಲ್ಯರು ಕಟ್ಟಕಡೆಗೆ ಪೂರೈಸದೆ ಹೋದ ನಿಯೋಗವನ್ನು ಪೂರೈಸಿತು. ದೇವರ ನಾಮಕ್ಕೆ ಸಾಕ್ಷಿಗಳಾಗಿರುವುದೇ ಆ ನಿಯೋಗವಾಗಿತ್ತು. (ಯೆಶಾ. 43:10; 1 ಪೇತ್ರ 2:9) ಯೆಹೋವನು ಪ್ರಾಚೀನ ಇಸ್ರಾಯೇಲ್ಯರಿಗೆ ಮಾಡಿದ ವಾಗ್ದಾನವನ್ನೇ ಇವರಿಗೂ ಮಾಡುತ್ತಾ ಹೇಳಿದ್ದು: “ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.” (2 ಕೊರಿಂ. 6:16; ಯಾಜ. 26:12) 1919ರಲ್ಲಿ ಯೆಹೋವನು ‘ದೇವರ ಇಸ್ರಾಯೇಲ್ನ’ ಉಳಿಕೆಯವರನ್ನು ವಿಶೇಷ ಸಂಬಂಧದೊಳಗೆ ತಂದನು ಮತ್ತು ಆಗ ಅವರು ಒಂದು “ರಾಷ್ಟ್ರ” ಅಥವಾ ದೇಶವನ್ನು ಸ್ವಾಧೀನಪಡಿಸಿದರು. ಆ ದೇಶವು ಅವರ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಸೂಚಿಸುತ್ತದೆ. ಈ ಚಟುವಟಿಕೆಗಳಲ್ಲಿ ತಲ್ಲೀನರಾಗಿರುವುದರಿಂದ ಅವರು ಆಧ್ಯಾತ್ಮಿಕ ಪರದೈಸನ್ನು ಆನಂದಿಸಿದ್ದಾರೆ. (ಯೆಶಾ. 66:8) 1930ರ ದಶಕದಿಂದ ಲಕ್ಷಾಂತರ ಮಂದಿ “ಬೇರೆ ಕುರಿಗಳು” ಅವರನ್ನು ಸೇರಿಕೊಂಡಿದ್ದಾರೆ. (ಯೋಹಾ. 10:16) ಈ ಆಧುನಿಕ ದಿನದ ಕ್ರೈಸ್ತರ ಸಂತಸ ಮತ್ತು ಆಧ್ಯಾತ್ಮಿಕ ಸಮೃದ್ಧಿಯು ಯೆಹೋವನೊಬ್ಬನೇ ಯೋಗ್ಯ ಪರಮಾಧಿಕಾರಿ ಎಂಬದಕ್ಕೆ ಬಲವಾದ ಪುರಾವೆಯಾಗಿದೆ. (ಕೀರ್ತನೆ 91:1, 2 ಓದಿ.) ಇದು ಸೈತಾನನನ್ನು ಎಷ್ಟು ಕುಪಿತಗೊಳಿಸುತ್ತದೆ!
11. ಈಗಲೂ ದೇವರ ವೈರಿಗಳ ಗುರಿಯೇನಾಗಿದೆ?
11 ಅಂತ್ಯಕಾಲದಾದ್ಯಂತ ಸೈತಾನನು ಅಭಿಷಿಕ್ತ ಉಳಿಕೆಯವರನ್ನು ಮತ್ತು ಅವರ ಸಂಗಡಿಗರಾದ ಬೇರೆ ಕುರಿಗಳನ್ನು ವಿರೋಧಿಸಲು ತನ್ನ ಭೂ-ಕಾರ್ಯಕರ್ತರನ್ನು ಚಿತಾಯಿಸಿದ್ದಾನೆ. ಅದು ನಾಸೀ ಆಳ್ವಿಕೆಯಡಿ ಪಶ್ಚಿಮ ಯೂರೋಪ್ನಲ್ಲಿ ಮತ್ತು ಸೋವಿಯಟ್ ಒಕ್ಕೂಟದ ಕಮ್ಯುನಿಸ್ಟ್ ಸರ್ಕಾರದಡಿ ಪೂರ್ವ ಯೂರೋಪ್ನಲ್ಲಿ ಸಂಭವಿಸಿತು. ಅದು ಇನ್ನಿತರ ಅನೇಕ ದೇಶಗಳಲ್ಲೂ ಸಂಭವಿಸಿತು ಮತ್ತು ಪುನಃ ಆಗಲಿದೆ. ವಿಶೇಷವಾಗಿ ಮಾಗೋಗಿನ ಗೋಗನು ದೇವಜನರ ಮೇಲೆ ತನ್ನ ಅಂತಿಮ ಆಕ್ರಮಣವನ್ನು ಮಾಡುವಾಗ ಇದು ಆಗುವುದು. ಆ ಆಕ್ರಮಣದಲ್ಲಿ ವಿರೋಧಿಗಳು, ಹಿಂದೆ ವೈರಿಗಳು ಮಾಡಿದಂತೆ, ಯೆಹೋವನ ಜನರ ಆಸ್ತಿಪಾಸ್ತಿಗಳನ್ನು ದೋಚಿಕೊಳ್ಳಬಹುದು. ಆದರೆ ಸೈತಾನನ ಮುಖ್ಯ ಗುರಿ ನಮ್ಮ ಸಂಘಟನೆಯನ್ನು ಒಡೆದು ಹಾಕಿ ಯೆಹೋವನ ಸಾಕ್ಷಿಗಳನ್ನು ಯಾರೂ ನೆನಪಿಸಿಕೊಳ್ಳದಂತೆ ಮಾಡುವುದೇ ಆಗಿದೆ. ಈ ರೀತಿಯಲ್ಲಿ ಯೆಹೋವನ ಪರಮಾಧಿಕಾರವು ಧಿಕ್ಕರಿಸಲ್ಪಡುವಾಗ ಆತನು ಹೇಗೆ ಪ್ರತಿಕ್ರಿಯಿಸುವನು? ಪುನಃ ಒಮ್ಮೆ ಕೀರ್ತನೆಗಾರನ ಮಾತುಗಳನ್ನು ಪರಿಗಣಿಸಿ.
ಯೆಹೋವನ ವಿಜಯದ ಒಂದು ನಮೂನೆ
12-14. ಮೆಗಿದ್ದೋ ಪಟ್ಟಣದ ಸಮೀಪ ದೊರೆತ ಯಾವ ಎರಡು ಐತಿಹಾಸಿಕ ವಿಜಯಗಳ ಕುರಿತು ಕೀರ್ತನೆಗಾರನು ಬರೆಯುತ್ತಾನೆ?
12 ವೈರಿ ಜನಾಂಗಗಳ ಯೋಜನೆಗಳನ್ನು ಭಂಗಪಡಿಸುವ ಯೆಹೋವನ ಸಾಮರ್ಥ್ಯದಲ್ಲಿ ಕೀರ್ತನೆಗಾರನಿಗಿದ್ದ ಬಲವಾದ ನಂಬಿಕೆಯನ್ನು ಗಮನಿಸಿರಿ. ಅವನು, ಮೆಗಿದ್ದೋ ಎಂಬ ಕಣಿವೆ ಪ್ರದೇಶದಲ್ಲಿದ್ದ ಮೆಗಿದ್ದೋ ಪಟ್ಟಣದ ಸಮೀಪ ಇಸ್ರಾಯೇಲ್ಯರಿಗೆ ವೈರಿಗಳ ಮೇಲೆ ಸಿಕ್ಕಿದ ಎರಡು ಮುಖ್ಯ ವಿಜಯಗಳ ಕುರಿತು ಈ ಕೀರ್ತನೆಯಲ್ಲಿ ವಿವರಿಸುತ್ತಾನೆ. ಬೇಸಿಗೆಯಲ್ಲಿ ಕೀಷೋನ್ ನದಿಯ ನೀರು ಬತ್ತಿಹೋಗಿ ಅದರ ಅಂಕುಡೊಂಕಾದ ನದೀಮಾರ್ಗವು ಆ ಕಣಿವೆ ಪ್ರದೇಶದಲ್ಲಿ ಸ್ಪಷ್ಟವಾಗಿ ತೋರಿಬರುತ್ತದೆ. ಚಳಿಗಾಲದಲ್ಲಿ ಮಳೆಬಿದ್ದ ಮೇಲೆ ನದಿಯು ಉಕ್ಕಿ ಆ ಪ್ರದೇಶವು ಜಲಾವೃತಗೊಳ್ಳುತ್ತದೆ. ಪ್ರಾಯಶಃ ಅದೇ ಕಾರಣಕ್ಕೆ ಆ ನದಿಯನ್ನು “ಮೆಗಿದ್ದೋ ಪ್ರವಾಹ” ಎಂದೂ ಕರೆಯಲಾಗಿದೆ.—ನ್ಯಾಯ. 4:13; 5:19.
13 ಮೆಗಿದ್ದೋ ಕಣಿವೆಯಿಂದ ಸುಮಾರು 15 ಕಿ.ಮೀ. ಆಚೆಗೆ ಮೋರೆ ಗುಡ್ಡವಿದೆ. ಅಲ್ಲಿ, ನ್ಯಾಯಸ್ಥಾಪಕ ಗಿದ್ಯೋನನ ದಿನಗಳಲ್ಲಿ ಮಿದ್ಯಾನ್ಯರು, ಅಮಾಲೇಕ್ಯರು ಮತ್ತು ಮೂಡಣ ದೇಶದವರು ಯುದ್ಧಕ್ಕೆಂದು ದಂಡೆತ್ತಿ ಬಂದಿದ್ದರು. (ನ್ಯಾಯ. 7:1, 12) ಗಿದ್ಯೋನನ ಚಿಕ್ಕ ಸೈನ್ಯದಲ್ಲಿ ಕೊನೆಗೆ ಕೇವಲ 300 ಪುರುಷರು ಉಳಿದರೂ ಯೆಹೋವನ ಸಹಾಯದಿಂದ ಅದು ಆ ದೊಡ್ಡ ವೈರಿ ಪಡೆಯನ್ನು ಸೋಲಿಸಿತು. ಹೇಗೆ? ಅವರು ದೇವರ ನಿರ್ದೇಶನದ ಮೇರೆಗೆ ಉರಿಯುವ ಪಂಜುಗಳನ್ನು ಕೊಡಗಳಲ್ಲಿಟ್ಟುಕೊಂಡು ರಾತ್ರಿಕಾಲದಲ್ಲಿ ಶತ್ರುಗಳ ಪಾಳೆಯವನ್ನು ಮುತ್ತಿದರು. ಗಿದ್ಯೋನನು ಸೂಚನೆ ಕೊಟ್ಟಾಗ, ಆ ಪುರುಷರು ಕೈಯಲ್ಲಿದ್ದ ಕೊಡಗಳನ್ನು ಒಡೆದುಬಿಟ್ಟರು ಮತ್ತು ಆಗ ಒಮ್ಮೆಲೇ ಅವರ ಬಳಿಯಿದ್ದ ಉರಿಯುವ ಪಂಜುಗಳು ತೋರಿಬಂದವು. ಅದೇ ವೇಳೆ ಅವರು ತಮ್ಮ ಕೊಂಬುಗಳನ್ನು ಊದುತ್ತಾ “ಯೆಹೋವನ ಕತ್ತಿ, ಗಿದ್ಯೋನನ ಕತ್ತಿ” ಎಂದು ಕೂಗಿದರು. ಶತ್ರುಗಳು ಕಕ್ಕಾಬಿಕ್ಕಿಯಾಗಿ ಒಬ್ಬರನ್ನೊಬ್ಬರು ಹತಿಸಲಾರಂಭಿಸಿದರು. ಪಾರಾಗಿ ಉಳಿದವರು ಯೊರ್ದನ್ ಹೊಳೆಯ ಆಚೆಗೆ ಓಡಿಹೋದರು. ಅಷ್ಟರೊಳಗೆ ವೈರಿಗಳನ್ನು ಅಟ್ಟಿಸಿಕೊಂಡು ಹೋಗುವುದರಲ್ಲಿ ಹೆಚ್ಚಿನ ಇಸ್ರಾಯೇಲ್ಯರು ಸೇರಿದರು. ಒಟ್ಟಿನಲ್ಲಿ 1,20,000 ವೈರಿಸೈನಿಕರು ಹತರಾದರು.—ನ್ಯಾಯ. 7:19-25; 8:10.
14 ಮೋರೆ ಗುಡ್ಡದ ಸುಮಾರು 6 ಕಿ.ಮೀ. ದೂರದಲ್ಲಿ ಅಂದರೆ ಮೆಗಿದ್ದೋ ಕಣಿವೆ ಪ್ರದೇಶದಿಂದಾಚೆಗೆ ತಾಬೋರ್ ಬೆಟ್ಟವಿದೆ. ಹಿಂದೆ ಇದೇ ಸ್ಥಳದಲ್ಲಿ ನ್ಯಾಯಸ್ಥಾಪಕ ಬಾರಾಕನು ತನ್ನ 10,000 ಇಸ್ರಾಯೇಲ್ಯ ಸೈನಿಕರೊಂದಿಗೆ ಕೂಡಿಬಂದಿದ್ದನು. ಇವರು, ಹಾಚೋರಿನ ಕಾನಾನ್ಯ ರಾಜ ಯಾಬೀನನ ಮಿಲಿಟರಿ ಸೇನಾಧಿಪತಿ ಸಿಸೇರನ ನೇತೃತ್ವದಡಿಯಿದ್ದ ಸೈನ್ಯದೊಂದಿಗೆ ಹೋರಾಡಲಿದ್ದರು. ಈ ಕಾನಾನ್ಯ ಸೈನ್ಯದಲ್ಲಿ 900 ಯುದ್ಧ ರಥಗಳಿದ್ದು, ಪ್ರತಿಯೊಂದು ರಥದ ಗಾಲಿಗಳಿಗೆ ಕಬ್ಬಿಣದ ಕೋಲ್ಗತ್ತಿಗಳಿದ್ದವು. ಅಷ್ಟೊಂದು ಯುದ್ಧ ಸಲಕರಣೆಗಳನ್ನು ಹೊಂದಿರದ ಇಸ್ರಾಯೇಲ್ಯ ದಂಡುಗಳು ತಾಬೋರ್ ಬೆಟ್ಟದಲ್ಲಿ ಜಮಾಯಿಸಿದಾಗ ಸಿಸೇರನ ಸೈನ್ಯವನ್ನು ಕಣಿವೆಗೆ ಹೋಗುವಂತೆ ಸೆಳೆಯಲಾಯಿತು. ಆಗ, “ಯೆಹೋವನು ಸೀಸೆರನನ್ನೂ ಅವನ ಎಲ್ಲಾ ಸೈನ್ಯರಥಗಳನ್ನೂ ಬಾರಾಕನ ಮುಂದೆ ಗಲಿಬಿಲಿಪಡಿಸಿ”ದನು. ತಟ್ಟನೆ ಬಂದಿರಬಹುದಾದ ಭಾರೀ ಮಳೆಯಿಂದಾಗಿ ಕೀಷೋನ್ ನದಿಯು ಉಕ್ಕಿ ಹರಿದು ರಥಗಳ ಗಾಲಿಗಳು ಮಣ್ಣಿನಲ್ಲಿ ಹೂತುಹೋದವು. ಇಸ್ರಾಯೇಲ್ಯರು ಆ ಇಡೀ ಸೈನ್ಯವನ್ನು ಹತಿಸಿದರು.—ನ್ಯಾಯ. 4:13-16; 5:19-21.
15. (ಎ) ಯೆಹೋವನು ಏನು ಮಾಡಬೇಕೆಂದು ಕೀರ್ತನೆಗಾರನು ಬಿನ್ನಹಿಸುತ್ತಾನೆ? (ಬಿ) ದೇವರ ಅಂತಿಮ ಯುದ್ಧದ ಹೆಸರನ್ನು ಕೇಳಿದೊಡನೆ ನಮಗೇನು ನೆನಪಿಗೆ ಬರುತ್ತದೆ?
15 ಕೀರ್ತನೆಗಾರನು, ತನ್ನ ದಿನದಲ್ಲಿ ಇಸ್ರಾಯೇಲ್ಯರಿಗೆ ಬೆದರಿಕೆಯೊಡ್ಡುವ ಜನಾಂಗಗಳಿಗೂ ಹಾಗೆಯೇ ಮಾಡುವಂತೆ ಯೆಹೋವನಿಗೆ ಬೇಡಿಕೊಳ್ಳುತ್ತಾನೆ. ಅವನು ಹೀಗೆ ಬಿನ್ನಹಿಸಿದನು: “ನೀನು ಮಿದ್ಯಾನ್ಯರನ್ನು ಸಂಹರಿಸಿದಂತೆ ಇವರನ್ನೂ ಸಂಹರಿಸು. ಕೀಷೋನ್ಹಳ್ಳದ ಬಳಿಯಲ್ಲಿ ಸೀಸೆರ ಯಾಬೀನ್ ಎಂಬವರಿಗೆ ಮಾಡಿದಂತೆ ಇವರಿಗೂ ಮಾಡು. ಅವರು ಎಂದೋರಿನಲ್ಲಿ ವಧಿಸಲ್ಪಟ್ಟು ಹೊಲದ ಗೊಬ್ಬರವಾಗಿಹೋದರಲ್ಲಾ.” (ಕೀರ್ತ. 83:9, 10) ಗಮನಾರ್ಹ ಸಂಗತಿಯೇನೆಂದರೆ, ಸೈತಾನನ ಲೋಕದ ವಿರುದ್ಧ ದೇವರು ನಡೆಸುವ ಅಂತಿಮ ಯುದ್ಧವನ್ನು ಹರ್ಮಗೆದ್ದೋನ್ (ಅರ್ಥ: “ಮೆಗಿದ್ದೋ ಬೆಟ್ಟ”) ಅಥವಾ ಅರ್ಮಗೆದ್ದೋನ್ ಎಂದು ಕರೆಯಲಾಗಿದೆ. ಆ ಹೆಸರು, ಮೆಗಿದ್ದೋವಿನ ಬಳಿ ನಡೆದ ನಿರ್ಣಯಾತ್ಮಕ ಯುದ್ಧಗಳನ್ನು ನಮ್ಮ ನೆನಪಿಗೆ ತರುತ್ತದೆ. ಆ ಪುರಾತನ ಕಾಲದಲ್ಲಿ ಯೆಹೋವನಿಗೆ ಸಿಕ್ಕಿದ ಯುದ್ಧವಿಜಯಗಳು, ಅರ್ಮಗೆದ್ದೋನ್ ಯುದ್ಧದಲ್ಲೂ ವಿಜಯ ಯೆಹೋವನಿಗೇ ಸಿಗುವುದೆಂಬ ಖಂಡಿತ ಆಶ್ವಾಸನೆಯನ್ನು ನಮಗೆ ಕೊಡುತ್ತವೆ.—ಪ್ರಕ. 16:13-16.
ಯೆಹೋವನ ಪರಮಾಧಿಕಾರದ ನಿರ್ದೋಷೀಕರಣಕ್ಕಾಗಿ ಪ್ರಾರ್ಥಿಸಿ
16. ವಿರೋಧಿಗಳ ಮುಖಗಳು ಹೇಗೆ ‘ನಾಚಿಕೆಯಿಂದ ಕವಿದಿವೆ’?
16 ಈ “ಕಡೇ ದಿವಸಗಳ” ಆದ್ಯಂತ ತನ್ನ ಜನರನ್ನು ಅಳಿಸಿಹಾಕಲು ಮಾಡಲಾಗಿರುವ ಸಕಲ ಪ್ರಯತ್ನಗಳನ್ನು ಯೆಹೋವನು ನಿಷ್ಫಲಗೊಳಿಸಿದ್ದಾನೆ. (2 ತಿಮೊ. 3:1) ಇದರಿಂದಾಗಿ ವಿರೋಧಿಗಳು ಅಪಮಾನಕ್ಕೀಡಾಗಿದ್ದಾರೆ. ಇದನ್ನು ಕೀರ್ತನೆ 83:16 ಹೀಗೆ ಮುಂತಿಳಿಸಿತು: “ನಾಚಿಕೆಯು ಅವರ ಮುಖವನ್ನು ಕವಿಯಲಿ. ಯೆಹೋವನೇ, ಆಗ ಅವರು ನಿನ್ನ ಹೆಸರನ್ನು ಕೇಳಿಕೊಂಡು ಬಂದಾರು.” ಯೆಹೋವನ ಸಾಕ್ಷಿಗಳನ್ನು ಸುಮ್ಮನಾಗಿಸಲು ವಿರೋಧಿಗಳು ದೇಶ ದೇಶಗಳಲ್ಲಿ ಸಂಪೂರ್ಣವಾಗಿ ಸೋತುಹೋಗಿದ್ದಾರೆ. ಆ ದೇಶಗಳಲ್ಲಿ, ಒಬ್ಬನೇ ಸತ್ಯ ದೇವರ ಆರಾಧಕರಲ್ಲಿರುವ ಸ್ಥಿರಚಿತ್ತತೆ ಮತ್ತು ತಾಳ್ಮೆಯು ಅನೇಕ ಸಹೃದಯಿಗಳಿಗೆ ಒಂದು ಸಾಕ್ಷಿಯಾಗಿದ್ದು, ಅನೇಕರು ‘ಯೆಹೋವನ ಹೆಸರನ್ನು ಕೇಳಿಕೊಂಡು ಬಂದಿದ್ದಾರೆ.’ ಹಿಂದೆ ಯೆಹೋವನ ಸಾಕ್ಷಿಗಳು ತೀಕ್ಷ್ಣ ವಿರೋಧವನ್ನು ಎದುರಿಸಿದ ಹಲವಾರು ದೇಶಗಳಲ್ಲಿ ಇಂದು ಸಾವಿರಾರು, ಅಷ್ಟೇಕೆ ಲಕ್ಷಾಂತರ ಮಂದಿ ಯೆಹೋವನನ್ನು ಸಂತೋಷದಿಂದ ಸ್ತುತಿಸುತ್ತಿದ್ದಾರೆ. ಯೆಹೋವನಿಗೆ ಎಂಥ ಜಯ! ಆತನ ವೈರಿಗಳಿಗೆ ಇದೆಂಥ ಅವಮಾನ!—ಯೆರೆಮೀಯ 1:19 ಓದಿ.
17. ವಿರೋಧಿಗಳು ಯಾವ ವಿಷಮ ಪರಿಸ್ಥಿತಿಯನ್ನು ಎದುರಿಸಲಿದ್ದಾರೆ, ಮತ್ತು ಶೀಘ್ರದಲ್ಲೇ ನಾವು ಯಾವ ಮಾತುಗಳನ್ನು ನೆನಪಿಸಿಕೊಳ್ಳಲಿದ್ದೇವೆ?
17 ವಿರೋಧಿಗಳು ನಮ್ಮನ್ನು ಇನ್ನೂ ಹಿಂಸಿಸುವರು ಎಂಬುದು ನಮಗೆ ತಿಳಿದಿದೆ. ಆದರೂ ಸುವಾರ್ತೆ ಸಾರುವುದನ್ನು ಮುಂದುವರಿಸುವೆವು ಮತ್ತು ವಿರೋಧಿಗಳಿಗೂ ಸಾರುವೆವು. (ಮತ್ತಾ. 24:14, 21) ಇಂಥ ವೈರಿಗಳು ಪಶ್ಚಾತ್ತಾಪಪಟ್ಟು ರಕ್ಷಣೆ ಪಡೆಯಲು ಈಗ ತೆರೆದಿರುವ ಅವಕಾಶದ ಬಾಗಿಲು ಬೇಗನೆ ಮುಚ್ಚಲಿದೆ. ಮಾನವರ ರಕ್ಷಣೆಗಿಂತ ಯೆಹೋವನ ಹೆಸರಿನ ಪವಿತ್ರೀಕರಣವು ಹೆಚ್ಚು ಪ್ರಾಮುಖ್ಯ. (ಯೆಹೆಜ್ಕೇಲ 38:23 ಓದಿ.) ಮುಂತಿಳಿಸಲ್ಪಟ್ಟಂತೆ ಭೂಮಿಯ ಎಲ್ಲಾ ಜನಾಂಗಗಳು ದೇವಜನರನ್ನು ನಾಶಗೊಳಿಸಲು ಒಟ್ಟು ಸೇರುವಾಗ, ಕೀರ್ತನೆಗಾರನ ಪ್ರಾರ್ಥನೆಯ ಈ ಮಾತುಗಳನ್ನು ನಾವು ನೆನಪಿಸಿಕೊಳ್ಳುವೆವು: “ಅವರು ನಿರಂತರವೂ ಆಶಾಭಂಗದಿಂದ ಕಳವಳಗೊಳ್ಳಲಿ; ಅಪಮಾನದಿಂದ ನಾಶವಾಗಲಿ.”—ಕೀರ್ತ. 83:17.
18, 19. (ಎ) ಯೆಹೋವನ ಪರಮಾಧಿಕಾರವನ್ನು ಅಹಂಕಾರದಿಂದ ವಿರೋಧಿಸುವವರಿಗೆ ಏನು ಕಾದಿದೆ? (ಬಿ) ಮುಂದೆ ಆಗಲಿರುವ ಯೆಹೋವನ ಪರಮಾಧಿಕಾರದ ಅಂತಿಮ ನಿರ್ದೋಷೀಕರಣವು ನಿಮ್ಮನ್ನು ಈಗ ಹೇಗೆ ಪ್ರಭಾವಿಸಬೇಕು?
18 ಯೆಹೋವನ ಪರಮಾಧಿಕಾರವನ್ನು ಹಠದಿಂದ ವಿರೋಧಿಸುವವರಿಗೆ ಹೀನಾಯಕರ ಅಂತ್ಯ ಕಾದಿದೆ. ‘ಸುವಾರ್ತೆಗೆ ಒಳಪಡದವರು’ ಅರ್ಮಗೆದ್ದೋನಿನಲ್ಲಿ ಹತಿಸಲ್ಪಡುವರು ಮತ್ತು ಹೀಗೆ “ನಿತ್ಯನಾಶನವೆಂಬ ದಂಡನೆಯನ್ನು ಅನುಭವಿಸುವರು” ಎಂದು ದೇವರ ವಾಕ್ಯವು ತಿಳಿಸುತ್ತದೆ. (2 ಥೆಸ. 1:7-10) ಅಂಥವರ ನಾಶನ ಮತ್ತು ಯೆಹೋವನನ್ನು ಸತ್ಯದಿಂದ ಆರಾಧಿಸುವವರ ಪಾರಾಗುವಿಕೆಯು ಯೆಹೋವನೊಬ್ಬನೇ ಸತ್ಯ ದೇವರಾಗಿದ್ದಾನೆ ಎಂಬದಕ್ಕೆ ನಂಬಲರ್ಹ ಪುರಾವೆಯಾಗಿರುವುದು. ಹೊಸ ಲೋಕದಲ್ಲೂ ಈ ಮಹಾ ವಿಜಯ ಅವಿಸ್ಮರಣೀಯವಾಗಿರುವುದು. ‘ನೀತಿವಂತರೂ ಅನೀತಿವಂತರೂ ಪುನರುತ್ಥಾನವಾಗಿ’ ಬರುವಾಗ ಅವರು ಯೆಹೋವನ ಈ ಮಹಾನ್ ಕಾರ್ಯದ ಬಗ್ಗೆ ಕಲಿಯುವರು. (ಅ. ಕೃ. 24:15) ಹೊಸ ಲೋಕದಲ್ಲಿ ಅವರು, ಯೆಹೋವನ ಪರಮಾಧಿಕಾರದಡಿಯಲ್ಲಿ ಜೀವಿಸುವುದು ಎಷ್ಟು ವಿವೇಕಯುತ ಎಂಬದಕ್ಕೆ ನಂಬಲರ್ಹ ಪುರಾವೆಗಳನ್ನು ಕಣ್ಣಾರೆ ನೋಡುವರು. ಆದರೆ, ಯೆಹೋವನೊಬ್ಬನೇ ಸತ್ಯ ದೇವರಾಗಿದ್ದಾನೆಂದು ಕೂಡಲೇ ಗ್ರಹಿಸುವವರು ದೀನ ಜನರು ಮಾತ್ರ.
19 ನಮ್ಮ ಪ್ರೀತಿಪರ ಸ್ವರ್ಗೀಯ ತಂದೆ ತನ್ನ ನಂಬಿಗಸ್ತ ಆರಾಧಕರಿಗಾಗಿ ಎಂಥ ಅತ್ಯದ್ಭುತ ಭವಿಷ್ಯವನ್ನಿಟ್ಟಿದ್ದಾನೆ! “ಅವರು [ನಿನ್ನ ಶತ್ರುಗಳು] ನಿರಂತರವೂ ಆಶಾಭಂಗದಿಂದ ಕಳವಳಗೊಳ್ಳಲಿ; ಅಪಮಾನದಿಂದ ನಾಶವಾಗಲಿ. ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು” ಎಂದು ಕೀರ್ತನೆಗಾರನು ಯೆಹೋವನಿಗೆ ಮಾಡಿದ ಪ್ರಾರ್ಥನೆಗೆ ಅಂತಿಮ ಉತ್ತರ ಬೇಗ ದೊರೆಯಲಿ ಎಂದು ಯೆಹೋವನಿಗೆ ಬಿನ್ನಹಿಸಲು ನಿಮಗೆ ಮನಸ್ಸಾಗುವುದಿಲ್ಲವೇ?—ಕೀರ್ತ. 83:17, 18.
[ಪಾದಟಿಪ್ಪಣಿ]
a ಈ ಲೇಖನವನ್ನು ಪರಿಗಣಿಸುವ ಮುಂಚೆ, ನೀವು 83ನೇ ಕೀರ್ತನೆಯೊಂದಿಗೆ ಪರಿಚಿತರಾಗಿರಲು ಅದನ್ನು ಓದುವುದು ಒಳ್ಳೇದು.
ವಿವರಿಸಬಲ್ಲಿರೋ?
• 83ನೇ ಕೀರ್ತನೆಯನ್ನು ಬರೆಯಲಾದಾಗ ಇಸ್ರಾಯೇಲ್ಯರು ಯಾವ ಸನ್ನಿವೇಶದಲ್ಲಿದ್ದರು?
• 83ನೇ ಕೀರ್ತನೆಯನ್ನು ಬರೆದವನ ಪರಮಾಸಕ್ತಿಯ ಸಂಗತಿ ಏನಾಗಿತ್ತು?
• ಸೈತಾನನ ವೈರತ್ವದ ಗುರಿಹಲಗೆ ಇಂದು ಯಾರಾಗಿದ್ದಾರೆ?
• ಅಂತಿಮವಾಗಿ ಯೆಹೋವನು ಕೀರ್ತನೆ 83:18ರಲ್ಲಿರುವ ಪ್ರಾರ್ಥನೆಯನ್ನು ಹೇಗೆ ಉತ್ತರಿಸುವನು?
[ಪುಟ 15ರಲ್ಲಿರುವ ಭೂಪಟ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಪ್ರಾಚೀನ ಮೆಗಿದ್ದೋವಿನ ಸಮೀಪ ನಡೆದ ಯುದ್ಧಗಳು ನಮ್ಮ ಭವಿಷ್ಯಕ್ಕೆ ಹೇಗೆ ಸಂಬಂಧಿಸುತ್ತವೆ?
ಕೀಷೋನ್ ನದಿ
ಹರೋಷೆತ್
ಕರ್ಮೆಲ್ ಬೆಟ್ಟ
ಇಜ್ರೇಲ್ ಕಣಿವೆ
ಮೆಗಿದ್ದೋ
ತಾನಾಕ್
ಗಿಲ್ಬೋವ ಬೆಟ್ಟ
ಹರೋದಿನ ಬುಗ್ಗೆ
ಮೋರೆ
ಎಂದೋರ್
ತಾಬೋರ್ ಬೆಟ್ಟ
ಗಲಿಲಾಯ ಸಮುದ್ರ
ಯೊರ್ದನ್ ಹೊಳೆ
[ಪುಟ 12ರಲ್ಲಿರುವ ಚಿತ್ರ]
ಒಂದು ಹೃತ್ಪೂರ್ವಕ ಪ್ರಾರ್ಥನೆಯನ್ನು ರಚಿಸಲು ಕೀರ್ತನೆಗಾರನೊಬ್ಬನಿಗೆ ಯಾವುದು ಪ್ರಚೋದಿಸಿತು?