ಸುವಾರ್ತೆಗೆ ಕೂಲಂಕಷ ಸಾಕ್ಷಿಕೊಡಲು ದೃಢಸಂಕಲ್ಪದಿಂದಿರಿ
“ಜನರಿಗೆ ಸಾರಿಹೇಳುವಂತೆ ಮತ್ತು ಕೂಲಂಕಷವಾದ ಸಾಕ್ಷಿಯನ್ನು ನೀಡುವಂತೆ ಅವನು ನಮಗೆ ಆಜ್ಞಾಪಿಸಿದನು.”—ಅ. ಕೃ. 10:42, NW.
1. ಕೊರ್ನೇಲ್ಯನೊಂದಿಗೆ ಮಾತಾಡುವಾಗ ಪೇತ್ರನು ಯಾವ ನಿಯೋಗವನ್ನು ಒತ್ತಿಹೇಳಿದನು?
ಇತಾಲ್ಯದ ಸೇನಾಧಿಪತಿಯೊಬ್ಬನು ಬಂಧು-ಮಿತ್ರರನ್ನು ತನ್ನ ಮನೆಯಲ್ಲಿ ಒಟ್ಟುಸೇರಿಸಿದನು. ಆ ಸಂದರ್ಭವು, ದೇವರು ಮನುಷ್ಯರೊಂದಿಗೆ ನಡೆಸುತ್ತಿದ್ದ ವ್ಯವಹಾರಗಳಲ್ಲಿ ಒಂದು ತಿರುಗುಬಿಂದುವಾಗಿ ಪರಿಣಮಿಸಿತು. ಆ ದೇವಭಕ್ತ ಪುರುಷನು ಕೊರ್ನೇಲ್ಯನಾಗಿದ್ದನು. “ಜನರಿಗೆ ಸಾರಿಹೇಳುವಂತೆ” ಮತ್ತು ಯೇಸುವಿನ ಕುರಿತು “ಕೂಲಂಕಷ ಸಾಕ್ಷಿಯನ್ನು ನೀಡುವಂತೆ” ಅಪೊಸ್ತಲರಿಗೆ ಆಜ್ಞಾಪಿಸಲಾಗಿದೆ ಎಂದು ಅಪೊಸ್ತಲ ಪೇತ್ರನು ಆ ಗುಂಪಿಗೆ ಹೇಳಿದನು. ಪೇತ್ರನು ಅಲ್ಲಿ ನೀಡಿದ ಸಾಕ್ಷಿಯಿಂದ ತುಂಬ ಒಳ್ಳೆಯ ಫಲಿತಾಂಶ ಸಿಕ್ಕಿತು. ಸುನ್ನತಿಯಾಗದ ಆ ಅನ್ಯರು ದೇವರ ಪವಿತ್ರಾತ್ಮವನ್ನು ಪಡೆದರು, ದೀಕ್ಷಾಸ್ನಾನ ಹೊಂದಿದರು ಮತ್ತು ಯೇಸುವಿನೊಂದಿಗೆ ಸ್ವರ್ಗದಲ್ಲಿ ಭಾವೀ ಅರಸರಾಗುವ ಪ್ರತೀಕ್ಷೆ ಪಡೆದರು. ಪೇತ್ರನು ಕೊಟ್ಟ ಕೂಲಂಕಷ ಸಾಕ್ಷಿಗೆ ಎಷ್ಟೊಂದು ಒಳ್ಳೆಯ ಪ್ರತಿಫಲ!—ಅ. ಕೃ. 10:22, 34-48, NW.
2. ಸಾಕ್ಷಿಕೊಡುವ ನೇಮಕ ಕೇವಲ 12 ಅಪೊಸ್ತಲರಿಗಲ್ಲ ಎಂದು ನಮಗೆ ಹೇಗೆ ತಿಳಿದಿದೆ?
2 ಆ ಘಟನೆಯು ನಡೆದದ್ದು ಸಾ.ಶ. 36ರಲ್ಲಿ. ಅದಕ್ಕಿಂತ ಸುಮಾರು ಎರಡು ವರ್ಷಗಳ ಹಿಂದೆ, ಕ್ರೈಸ್ತತ್ವದ ಕಡು ವಿರೋಧಿಯಾದ ತಾರ್ಸದ ಸೌಲನೆಂಬವನಿಗೆ ತನ್ನ ಬದುಕನ್ನೇ ಬದಲಾಯಿಸಿದ ಒಂದು ಅನುಭವವಾಯಿತು. ನಡೆದದ್ದೇನೆಂದರೆ, ಅವನು ದಮಸ್ಕಕ್ಕೆ ಹೋಗುತ್ತಿದ್ದಾಗ ದಾರಿಯಲ್ಲಿ ಯೇಸು ಅವನಿಗೆ ಪ್ರತ್ಯಕ್ಷನಾಗಿ, “ನೀನೆದ್ದು ಊರೊಳಕ್ಕೆ ಹೋಗು, ನೀನು ಮಾಡಬೇಕಾದದ್ದು ಅಲ್ಲಿ ನಿನಗೆ ತಿಳಿಸಲ್ಪಡುವದು” ಎಂದು ಹೇಳಿದನು. ಸೌಲನನ್ನು ಹುಡುಕುವಂತೆ ಯೇಸು ಶಿಷ್ಯನಾದ ಅನನೀಯನಿಗೆ ನಿರ್ದೇಶಿಸಿದ್ದು ಮಾತ್ರವಲ್ಲ ಈ ಸೌಲನು “ಅನ್ಯಜನರಿಗೂ ಅರಸುಗಳಿಗೂ ಇಸ್ರಾಯೇಲ್ಯರಿಗೂ” ಸಾಕ್ಷಿಕೊಡುವನೆಂದು ಅನನೀಯನಿಗೆ ಆಶ್ವಾಸನೆಯನ್ನೂ ಕೊಟ್ಟನು. (ಅ. ಕೃತ್ಯಗಳು 9:3-6, 13-20 ಓದಿ.) ಅನನೀಯನು ಸೌಲನನ್ನು ಭೇಟಿಯಾದಾಗ ಹೇಳಿದ್ದು: “ನಮ್ಮ ಪಿತೃಗಳ ದೇವರು . . . ನಿನ್ನನ್ನು ನೇಮಿಸಿದ್ದಾನೆ. ನೀನು ಕಂಡು ಕೇಳಿದ್ದರ ವಿಷಯದಲ್ಲಿ ಎಲ್ಲಾ ಮನುಷ್ಯರ ಮುಂದೆ ಆತನಿಗೆ ಸಾಕ್ಷಿಯಾಗಿರಬೇಕು.” (ಅ. ಕೃ. 22:12-16) ನಂತರ ಪೌಲನೆಂದು ಹೆಸರುವಾಸಿಯಾದ ಈ ಸೌಲನು, ಸಾಕ್ಷಿಕೊಡುವ ನೇಮಕವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದನು?
ನಿಶ್ಚಯವಾಗಿ ಅವನು ಕೂಲಂಕಷ ಸಾಕ್ಷಿಕೊಟ್ಟನು!
3. (ಎ) ಯಾವ ಘಟನೆಯ ಕುರಿತು ನಾವೀಗ ಚರ್ಚಿಸಲಿದ್ದೇವೆ? (ಬಿ) ಪೌಲನಿಂದ ಸುದ್ದಿ ಸಿಕ್ಕಿದೊಡನೆ ಎಫೆಸದ ಹಿರಿಯರು ಹೇಗೆ ಪ್ರತಿಕ್ರಿಯಿಸಿದರು, ಮತ್ತು ಈ ಮೂಲಕ ಅವರು ಯಾವ ಒಳ್ಳೆಯ ಮಾದರಿಯನ್ನಿಟ್ಟರು?
3 ಈ ಘಟನೆಯ ಬಳಿಕ ಪೌಲನು ಏನು ಮಾಡಿದನು ಎಂಬುದರ ಬಗ್ಗೆ ಎಲ್ಲವನ್ನು ಬಿಡಿಬಿಡಿಯಾಗಿ ಅಧ್ಯಯನ ಮಾಡುವುದು ತುಂಬ ಆಸಕ್ತಿಯದ್ದಾಗಿರುವುದು. ಆದರೆ ಈಗ ನಾವು, ಪೌಲನು ಸಾ.ಶ. 56ರಲ್ಲಿ ನೀಡಿದ ಭಾಷಣವೊಂದರ ಮೇಲೆ ನಮ್ಮ ಗಮನಹರಿಸೋಣ. ಅದು ಅಪೊಸ್ತಲರ ಕೃತ್ಯಗಳು 20ನೇ ಅಧ್ಯಾಯದಲ್ಲಿದೆ. ಪೌಲನು ಈ ಭಾಷಣವನ್ನು ತನ್ನ ಮೂರನೆಯ ಮಿಷನೆರಿ ಸಂಚಾರದ ಅಂತ್ಯದಷ್ಟಕ್ಕೆ ಸಾದರಪಡಿಸಿದನು. ಅವನು ಈಜಿಯನ್ ಸಮುದ್ರ ಮಾರ್ಗವಾಗಿ ಬರುತ್ತಿದ್ದಾಗ ಮಿಲೇತದ ಬಂದರಿನಲ್ಲಿ ಇಳಿದು ಎಫೆಸ ಸಭೆಯ ಹಿರಿಯರನ್ನು ಕರೆಕಳುಹಿಸಿದನು. ಅಲ್ಲಿಂದ ಎಫೆಸವು ಸುಮಾರು 50 ಕಿ.ಮೀ. ದೂರದಲ್ಲಿತ್ತು ಆದರೆ ರಸ್ತೆ ಅಂಕುಡೊಂಕಾಗಿದ್ದರಿಂದ ಪ್ರಯಾಣಕ್ಕೆ ಹೆಚ್ಚು ಸಮಯ ತಗಲುತ್ತಿತ್ತು. ಪೌಲನಿಂದ ಸುದ್ದಿಸಿಕ್ಕಿದೊಡನೆ ಎಫೆಸದ ಹಿರಿಯರಿಗೆ ಎಷ್ಟು ಆನಂದವಾಗಿದ್ದಿರಬೇಕು! (ಜ್ಞಾನೋಕ್ತಿ 10:28 ಹೋಲಿಸಿ.) ಆದರೆ ಉತ್ಸಾಹ ಮಾತ್ರ ಸಾಕಾಗಿರಲಿಲ್ಲ. ಮಿಲೇತಕ್ಕೆ ಹೋಗಲು ಅವರು ಏರ್ಪಾಡುಗಳನ್ನೂ ಮಾಡಬೇಕಿತ್ತು. ಅವರಲ್ಲಿ ಕೆಲವರು ಬಹುಶಃ ಕೆಲಸಕ್ಕೆ ರಜೆ ಹಾಕಿರಬೇಕು ಅಥವಾ ತಮ್ಮ ಅಂಗಡಿಗಳನ್ನು ಮುಚ್ಚಿ ಬಂದಿರಬೇಕು. ಇಂದು ಅನೇಕ ಕ್ರೈಸ್ತರು ಹಾಗೆಯೇ ಮಾಡಿ ವಾರ್ಷಿಕ ಜಿಲ್ಲಾ ಅಧಿವೇಶನದ ಒಂದು ಸೆಷನ್ ಸಹ ತಪ್ಪದಂತೆ ನೋಡಿಕೊಳ್ಳುತ್ತಾರೆ.
4. ಪೌಲನು ಕೆಲವು ವರ್ಷ ಕಾಲ ಎಫೆಸದಲ್ಲಿದ್ದಾಗ ಅವನಿಗೆ ಯಾವ ರೂಢಿಯಿತ್ತು?
4 ಹಿರಿಯರು ಬಂದು ತಲುಪಲು ಮೂರುನಾಲ್ಕು ದಿನಗಳು ಹಿಡಿದಿದ್ದಿರಬಹುದು. ಆ ನಡುವೆ ಪೌಲನು ಮಿಲೇತದಲ್ಲಿ ಏನು ಮಾಡಿದ್ದಿರಬೇಕೆಂದು ನೆನಸುತ್ತೀರಿ? ನೀವಾಗಿದ್ದರೆ ಏನು ಮಾಡುತ್ತಿದ್ದೀರಿ? (ಅ. ಕೃತ್ಯಗಳು 17:16, 17 ಹೋಲಿಸಿ.) ಆ ಹಿರಿಯರಿಗೆ ಪೌಲನು ಹೇಳಿದ ಮಾತುಗಳಿಂದ ಅವನೇನು ಮಾಡಿದನೆಂಬುದು ತಿಳಿದುಬರುತ್ತದೆ. ಪೌಲನು, ವರ್ಷಗಳಾದ್ಯಂತ ಮತ್ತು ಹಿಂದಿನ ಬಾರಿ ಎಫೆಸದಲ್ಲಿದ್ದಾಗಲೂ ಸಾರುವ ಕೆಲಸದ ವಿಷಯದಲ್ಲಿ ತನಗಿದ್ದ ರೂಢಿಯನ್ನು ಅವರಿಗೆ ವಿವರಿಸಿದನು. (ಅ. ಕೃತ್ಯಗಳು 20:18-21 ಓದಿ.) ‘ನಾನು ಆಸ್ಯಸೀಮೆಯಲ್ಲಿ ಕಾಲಿಟ್ಟ ಮೊದಲನೆಯ ದಿವಸದಿಂದ ಹಿಂತೆಗಿಯದೆ ಬೋಧಿಸಿದ್ದೇನೆ [“ಕೂಲಂಕಷವಾಗಿ ಸಾಕ್ಷಿನೀಡಿದ್ದೇನೆ,” NW]’ ಎಂಬ ಅವನ ಮಾತುಗಳನ್ನು ಯಾರೂ ಅಲ್ಲಗಳೆಯಲು ಅವಕಾಶವಿರಲಿಲ್ಲ. ಹೌದು, ಯೇಸು ತನಗೆ ನೀಡಿದ ನೇಮಕವನ್ನು ಪೂರೈಸಲು ಪೌಲನು ದೃಢಸಂಕಲ್ಪದಿಂದಿದ್ದನು. ಎಫೆಸದಲ್ಲಿ ಅವನದನ್ನು ಹೇಗೆ ಮಾಡಿದನು? ಒಂದು ವಿಧವು, ಯೆಹೂದ್ಯರಿಗೆ ಸಾಕ್ಷಿನೀಡುವ ಮೂಲಕವಾಗಿತ್ತು. ಎಲ್ಲಿ ತುಂಬ ಮಂದಿ ಯೆಹೂದ್ಯರನ್ನು ಕಂಡುಕೊಳ್ಳಸಾಧ್ಯವಿತ್ತೋ ಅಲ್ಲಿಗೆ ಅವನು ಹೋದನು. ಪೌಲನು ಸಾ.ಶ. 52-55ರ ಸುಮಾರಿಗೆ ಎಫೆಸದಲ್ಲಿದ್ದಾಗ, ಸಭಾಮಂದಿರದಲ್ಲಿ “ಜನರನ್ನು ಒಡಂಬಡಿಸುತ್ತಾ ಧೈರ್ಯದಿಂದ ಮಾತಾಡಿದನು” ಎಂದು ಲೂಕನು ವರದಿಸುತ್ತಾನೆ. ಆದರೆ ಯೆಹೂದ್ಯರು “ತಮ್ಮ ಮನಸ್ಸುಗಳನ್ನು ಕಠಿಣಮಾಡಿಕೊಂಡು ಒಡಂಬಡದೆ” ಹೋದಾಗ ಪೌಲನು ಸಾರುವುದನ್ನು ನಿಲ್ಲಿಸದೆ, ಪಟ್ಟಣದ ಇನ್ನೊಂದು ಭಾಗಕ್ಕೆ ಹೋಗಿ ಇತರರಿಗೆ ಸಾರುವುದನ್ನು ಮುಂದುವರಿಸಿದನು. ಹೀಗೆ ಅವನು ಆ ದೊಡ್ಡ ಪಟ್ಟಣದಲ್ಲಿರುವ ಯೆಹೂದ್ಯರಿಗೂ ಗ್ರೀಕರಿಗೂ ಸಾಕ್ಷಿನೀಡಿದನು.—ಅ. ಕೃ. 19:1, 8, 9.
5, 6. ಪೌಲನು ಮನೆಮನೆಯ ಸಾಕ್ಷಿಕಾರ್ಯದಲ್ಲಿ ಅವಿಶ್ವಾಸಿಗಳಿಗೆ ಸುವಾರ್ತೆ ಸಾರಿದನು ಎಂಬದನ್ನು ನಾವು ಹೇಗೆ ಖಂಡಿತವಾಗಿ ಹೇಳಬಲ್ಲೆವು?
5 ಆ ಪಟ್ಟಣದಲ್ಲಿ ಕ್ರೈಸ್ತರಾದ ಕೆಲವರು ಸಮಯಾನಂತರ ಹಿರಿಯರಾದರು. ಮಿಲೇತದಲ್ಲಿ ಪೌಲನು ಭೇಟಿಯಾದದ್ದು ಇವರನ್ನೇ. ಸಾರಲು ತಾನು ಬಳಸಿದ ವಿಧಾನದ ಬಗ್ಗೆ ಪೌಲನು ಅವರಿಗೆ ನೆನಪುಹುಟ್ಟಿಸಿದ್ದು: ‘ನಾನು ನಿಮಗೆ ಹಿತಕರವಾದದ್ದೆಲ್ಲವನ್ನು ಹೇಳುವದಕ್ಕೂ ಸಭೆಯಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಿಸುವದಕ್ಕೂ ಹಿಂತೆಗಿಯದೆ ಇದ್ದೆನು.’ ಇಲ್ಲಿ ಪೌಲನು ಸಭೆಯಲ್ಲಿದ್ದ ವಿಶ್ವಾಸಿಗಳಿಗೆ ಪರಿಪಾಲನೆಯ ಭೇಟಿ ಮಾಡುವುದಕ್ಕೆ ಸೂಚಿಸುತ್ತಿದ್ದನು ಎಂದು ನಮ್ಮೀ ದಿನಗಳಲ್ಲಿ ಕೆಲವರು ಹೇಳುತ್ತಾರೆ. ಆದರೆ ‘ಮನೆಮನೆಯಲ್ಲಿ ಉಪದೇಶಿಸುವುದಕ್ಕೆ’ ಎಂಬ ವಾಕ್ಸರಣಿಯು, ಮುಖ್ಯವಾಗಿ ಅವಿಶ್ವಾಸಿಗಳಿಗೆ ಸುವಾರ್ತೆ ಸಾರುವುದಕ್ಕೆ ಸೂಚಿಸುತ್ತದೆ ಎಂಬುದು ಸುಸ್ಪಷ್ಟ. ಅವನ ತದನಂತರದ ಮಾತುಗಳು ಇದನ್ನು ಪುಷ್ಟೀಕರಿಸುತ್ತವೆ. ಅವನಂದದ್ದು: “ಯೆಹೂದ್ಯರಿಗೂ ಗ್ರೀಕರಿಗೂ ದೇವರ ಕಡೆಗೆ ತಿರುಗಬೇಕೆಂತಲೂ ನಮ್ಮ ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡಬೇಕೆಂತಲೂ ಖಂಡಿತವಾಗಿ ಬೋಧಿಸುವವನಾಗಿದ್ದೆನು.” ಹೌದು, ಪಶ್ಚಾತ್ತಾಪಪಟ್ಟು ಯೇಸುವಿನಲ್ಲಿ ನಂಬಿಕೆಯನ್ನಿಡುವ ಅಗತ್ಯವಿದ್ದ ಅವಿಶ್ವಾಸಿಗಳಿಗೆ ಪೌಲನು ಸಾಕ್ಷಿಕೊಡುತ್ತಿದ್ದನು ಎಂಬುದು ಸ್ಪಷ್ಟ.—ಅ. ಕೃ. 20:20, 21.
6 ಕ್ರೈಸ್ತ ಗ್ರೀಕ್ ಶಾಸ್ತ್ರಗಳ ವಿಸ್ತೃತ ವಿಶ್ಲೇಷಣೆ ಮಾಡುತ್ತಾ ಒಬ್ಬ ವಿದ್ವಾಂಸನು ಅಪೊಸ್ತಲರ ಕೃತ್ಯಗಳು 20:20ರ ಬಗ್ಗೆ ಹೇಳಿದ್ದು: “ಪೌಲನು ಎಫೆಸದಲ್ಲಿ ಮೂರು ವರ್ಷವಿದ್ದನು. ಅವನು ಪ್ರತಿಯೊಂದು ಮನೆಗೆ ಭೇಟಿನೀಡಿದ್ದನು ಅಥವಾ ಕಡಿಮೆಪಕ್ಷ ಎಲ್ಲ ಜನರಿಗೆ ಸಾಕ್ಷಿನೀಡಿದ್ದನು (ವಚನ 26). ಮನೆಮನೆಯಲ್ಲೂ ಸಾರ್ವಜನಿಕ ಕೂಟಗಳಲ್ಲೂ ಸುವಾರ್ತೆಯ ಉಪದೇಶ ಮಾಡುವುದಕ್ಕೆ ಆಧಾರ ಈ ವಚನವಾಗಿದೆ.” ಈ ವಿದ್ವಾಂಸನು ಹೇಳಿದಂತೆ ಪೌಲನು ಅಕ್ಷರಶಃವಾಗಿ ಪ್ರತಿಯೊಂದು ಮನೆಗೆ ಹೋದನೋ ಇಲ್ಲವೋ ಎಂಬುದು ನಮಗೆ ಗೊತ್ತಿಲ್ಲ. ಆದರೆ ತಾನು ಮಾಡಿದ ಸಾಕ್ಷಿಕಾರ್ಯವನ್ನು ಮತ್ತು ಅದರ ಪರಿಣಾಮಗಳನ್ನು ಎಫೆಸದ ಹಿರಿಯರು ಸದಾ ನೆನಪಿನಲ್ಲಿಡಬೇಕು ಎಂಬುದನ್ನು ಪೌಲನು ಬಯಸಿದ್ದಂತೂ ಖಂಡಿತ. ಲೂಕನು ವರದಿಸಿದ್ದು: “ಆಸ್ಯಸೀಮೆಯಲ್ಲಿ ವಾಸವಾಗಿದ್ದ ಯೆಹೂದ್ಯರು ಗ್ರೀಕರೂ ಎಲ್ಲರೂ ಕರ್ತನ ವಾಕ್ಯವನ್ನು ಕೇಳಿದರು.” (ಅ. ಕೃ. 19:10) ಆದರೆ ಆಸ್ಯದಲ್ಲಿರುವ “ಎಲ್ಲರೂ” ಸುವಾರ್ತೆಯನ್ನು ಹೇಗೆ ಕೇಳಬಹುದಿತ್ತು, ಮತ್ತು ಇದು ನಮ್ಮ ಸಾಕ್ಷಿಕಾರ್ಯದ ಕುರಿತು ಏನನ್ನು ತಿಳಿಯಪಡಿಸುತ್ತದೆ?
7. ಪೌಲನ ಸಾಕ್ಷಿಕಾರ್ಯವು, ಅವನು ಸ್ವತಃ ಭೇಟಿಯಾಗದ ಜನರ ಮೇಲೂ ಹೇಗೆ ಪರಿಣಾಮ ಬೀರಿರಬೇಕು?
7 ಪೌಲನು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮನೆಮನೆಗೆ ಹೋಗಿ ಸಾರಿದ್ದರಿಂದ ಅನೇಕರಿಗೆ ಯೇಸುವಿನ ಸಂದೇಶ ಕೇಳಸಿಕ್ಕಿತು. ಅದನ್ನು ಆಲಿಸಿದವರೆಲ್ಲರೂ ಎಫಸದಲ್ಲೇ ಉಳಿದರೆಂದು ಎಣಿಸುತ್ತೀರೋ? ಕೆಲವರಾದರೂ ವ್ಯಾಪಾರ ಮಾಡಲು, ಸಂಬಂಧಿಕರ ಊರಿಗೆ ಹೋಗಿ ನೆಲೆಸಲು ಅಥವಾ ನಗರ ಜೀವನದ ಜಂಜಾಟಗಳಿಂದ ದೂರವಿರಲು ಖಂಡಿತ ಪಟ್ಟಣವನ್ನು ಬಿಟ್ಟು ಹೋಗಿದ್ದಿರಬೇಕು. ಇಂದು ಸಹ ಅನೇಕರು ಅಂಥ ಕಾರಣಗಳಿಗೆ ಬೇರೆ ಕಡೆಗೆ ಸ್ಥಳಾಂತರಿಸುತ್ತಾರೆ. ಪ್ರಾಯಶಃ ಅಂಥವರಲ್ಲಿ ನೀವೂ ಒಬ್ಬರಾಗಿದ್ದೀರಿ. ಅಲ್ಲದೆ, ಆ ಕಾಲದಲ್ಲಿ ಸಾಮಾಜಿಕ ಅಥವಾ ವಾಣಿಜ್ಯ ಕಾರಣಗಳಿಗಾಗಿ ಇತರ ಕಡೆಗಳಿಂದಲೂ ಜನರು ಎಫೆಸಕ್ಕೆ ಬರುತ್ತಿದ್ದರು. ಅಲ್ಲಿರುವಾಗ ಅವರು ಪೌಲನನ್ನು ಭೇಟಿಯಾಗಿದ್ದಿರಬೇಕು ಅಥವಾ ಅವನು ಸಾಕ್ಷಿನೀಡುವಾಗ ಕೇಳಿದ್ದಿರಬೇಕು. ಅವರು ತಮ್ಮ ಮನೆಗಳಿಗೆ ಹಿಂತೆರಳಿದಾಗ ಏನಾಗಿರಬಹುದು? ಸತ್ಯ ಸ್ವೀಕರಿಸಿದವರು ಅದರ ಕುರಿತು ಇತರರಿಗೆ ಸಾಕ್ಷಿಕೊಟ್ಟಿರಬೇಕು. ವಿಶ್ವಾಸಿಗಳಾಗದಿದ್ದವರು ಕೂಡ ತಾವು ಎಫೆಸದಲ್ಲಿರುವಾಗ ಕೇಳಿದ ಸಂಗತಿಗಳ ಕುರಿತು ಇತರರೊಂದಿಗೆ ಮಾತಾಡಿರಬಹುದು. ಹೀಗೆ ನೆಂಟರು, ನೆರೆಹೊರೆಯವರು ಅಥವಾ ಗಿರಾಕಿಗಳು ಸತ್ಯದ ಬಗ್ಗೆ ಕೇಳಿದರು ಮತ್ತು ಅಂಥವರಲ್ಲಿ ಕೆಲವರು ಅದನ್ನು ಸ್ವೀಕರಿಸಿರಬೇಕು. (ಮಾರ್ಕ 5:14 ಹೋಲಿಸಿ.) ಇದು, ನೀವು ಕೊಡುವ ಕೂಲಂಕಷ ಸಾಕ್ಷಿಯ ಪರಿಣಾಮದ ಬಗ್ಗೆ ಏನನ್ನು ಸೂಚಿಸುತ್ತದೆ?
8. ಆಸ್ಯಸೀಮೆಯಾದ್ಯಂತದ ಜನರಿಗೆ ಸತ್ಯದ ಕುರಿತು ಹೇಗೆ ಗೊತ್ತಾಗಿದ್ದಿರಬೇಕು?
8 ‘ಚಟುವಟಿಕೆಗೆ ನಡೆಸುವಂಥ ಮಹಾ ದ್ವಾರವು ತೆರೆದಿತ್ತು’ ಎಂಬದಾಗಿ ಪೌಲನು ತಾನು ಈ ಹಿಂದೆ ಎಫೆಸದಲ್ಲಿ ನಡೆಸಿದ ಶುಶ್ರೂಷೆಯ ಕುರಿತು ಬರೆದನು. (1 ಕೊರಿಂ. 16:8, 9, NW) ಅದು ಯಾವ ದ್ವಾರವಾಗಿತ್ತು ಮತ್ತು ಅದು ಅವನಿಗಾಗಿ ಹೇಗೆ ತೆರೆದಿತ್ತು? ಪೌಲನು ಎಫೆಸದಲ್ಲಿ ತನ್ನ ಶುಶ್ರೂಷೆಯನ್ನು ಮುಂದುವರಿಸಿದ್ದರಿಂದ ಸುವಾರ್ತೆ ಬೇರೆಡೆಗೂ ಹಬ್ಬಿತು. ಎಫೆಸದ ಹತ್ತಿರದಲ್ಲಿದ್ದ ಕೊಲೊಸ್ಸೆ, ಲವೊದಿಕೀಯ ಮತ್ತು ಹಿರಿಯಾಪೊಲಿ ಎಂಬ ಮೂರು ಪಟ್ಟಣಗಳನ್ನು ಪರಿಗಣಿಸಿ. ಪೌಲನು ಆ ಪಟ್ಟಣಗಳಿಗೆ ಹೋಗಿ ಸಾರಿರದಿದ್ದರೂ ಸುವಾರ್ತೆಯು ಅಲ್ಲಿಗೆ ತಲುಪಿತು. ಏಕೆಂದರೆ ಆ ಪ್ರದೇಶದಲ್ಲಿ ಎಪಫ್ರನೆಂಬ ಕ್ರೈಸ್ತನಿದ್ದನು. (ಕೊಲೊ. 2:1; 4:12, 13) ಇವನು ಕ್ರೈಸ್ತನಾದದ್ದು ಹೇಗೆ? ಸ್ವತಃ ಪೌಲನೇ ಅವನಿಗೆ ಎಫೆಸದಲ್ಲಿ ಸಾಕ್ಷಿನೀಡಿದ್ದಿರಬಹುದೋ? ಬೈಬಲ್ ಇದನ್ನು ನಿರ್ದಿಷ್ಟವಾಗಿ ಹೇಳುವುದಿಲ್ಲ. ಹಾಗಿದ್ದರೂ, ಸ್ವನಾಡಿನಲ್ಲಿ ಸತ್ಯದ ಕುರಿತು ಮಾತಾಡುವ ಮೂಲಕ ಎಪಫ್ರನು ಪೌಲನ ಪ್ರತಿನಿಧಿಯಂತೆ ಕೆಲಸಮಾಡಿದ್ದಿರಬೇಕು. (ಕೊಲೊ. 1:7) ಪೌಲನು ಎಫೆಸದಲ್ಲಿ ಸುವಾರ್ತೆ ಸಾರುತ್ತಿದ್ದ ಸಮಯದಲ್ಲಿ ಕ್ರೈಸ್ತ ಸಂದೇಶವು ಫಿಲದೆಲ್ಫಿಯ, ಸಾರ್ದಿಸ್ ಮತ್ತು ಥುವತೈರದಂಥ ಪಟ್ಟಣಗಳಿಗೂ ತಲಪಿದ್ದಿರಬೇಕು.
9. (ಎ) ಪೌಲನಿಗೆ ಯಾವ ಅಪೇಕ್ಷೆಯಿತ್ತು? (ಬಿ) ಇಸವಿ 2009ಕ್ಕಾಗಿರುವ ವರ್ಷವಚನ ಯಾವುದು?
9 ಹೀಗಿರುವುದರಿಂದ ಪೌಲನ ಹೇಳಿಕೆಯನ್ನು ಅಂಗೀಕರಿಸಲು ಎಫೆಸದ ಹಿರಿಯರಿಗೆ ಸಾಕಷ್ಟು ಕಾರಣಗಳಿದ್ದವು. ಅವನು ಹೀಗೆ ಹೇಳಿದ್ದನು: “ನಾನು ನನ್ನ ಪ್ರಾಣವನ್ನು ಯಾವುದೇ ರೀತಿಯಲ್ಲಿ ಅಮೂಲ್ಯವೆಂದು ಎಣಿಸುವುದಿಲ್ಲ; ನಾನು ನನ್ನ ಓಟವನ್ನೂ ದೇವರ ಅಪಾತ್ರ ದಯೆಯ ಸುವಾರ್ತೆಗೆ ಕೂಲಂಕಷ ಸಾಕ್ಷಿಯನ್ನು ಕೊಡುವಂತೆ ಕರ್ತನಾದ ಯೇಸುವಿನಿಂದ ನಾನು ಪಡೆದ ಶುಶ್ರೂಷೆಯನ್ನೂ ಪೂರ್ಣಗೊಳಿಸುವುದೇ ನನ್ನ ಅಪೇಕ್ಷೆ.” ಇದರಲ್ಲಿ ಇಸವಿ 2009ಕ್ಕಾಗಿರುವ, ‘ಸುವಾರ್ತೆಗೆ ಕೂಲಂಕಷ ಸಾಕ್ಷಿಯನ್ನು ಕೊಡಿರಿ’ ಎಂಬ ಸಕಾರಾತ್ಮಕ ಹಾಗೂ ಹುರಿದುಂಬಿಸುವ ವರ್ಷವಚನ ಅಡಕವಾಗಿದೆ.—ಅ. ಕೃ. 20:24, NW.
ಇಂದು ಕೂಲಂಕಷ ಸಾಕ್ಷಿಕೊಡುವುದು
10. ಇಂದು ನಾವು ಸಹ ಕೂಲಂಕಷ ಸಾಕ್ಷಿಕೊಡಬೇಕು ಎಂಬುದು ನಮಗೆ ಹೇಗೆ ಗೊತ್ತು?
10 ‘ಜನರಿಗೆ ಸಾರಿಹೇಳುವ ಮತ್ತು ಕೂಲಂಕಷ ಸಾಕ್ಷಿನೀಡುವ’ ಆಜ್ಞೆಯು ಅಪೊಸ್ತಲರಿಗಲ್ಲದೆ ಇತರರಿಗೂ ಅನ್ವಯವಾಗತೊಡಗಿತು. ಪುನರುತ್ಥಿತ ಯೇಸು, ಗಲಿಲಾಯದಲ್ಲಿ ನೆರೆದುಬಂದ ಸುಮಾರು 500 ಮಂದಿ ಶಿಷ್ಯರೊಂದಿಗೆ ಮಾತಾಡುತ್ತಾ ಅವರಿಗೆ, “ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ” ಎಂಬ ಆಜ್ಞೆ ಕೊಟ್ಟನು. “ನೋಡಿರಿ, ನಾನು ಯುಗದ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ” ಎಂಬ ಯೇಸುವಿನ ಮಾತುಗಳು ಆ ಆಜ್ಞೆಯು ಇಂದು ಕೂಡ ಎಲ್ಲ ಸತ್ಕ್ರೈಸ್ತರಿಗೆ ಅನ್ವಯಿಸುತ್ತದೆ ಎಂಬದನ್ನು ಸೂಚಿಸುತ್ತದೆ.—ಮತ್ತಾ. 28:19, 20.
11. ಯೆಹೋವನ ಸಾಕ್ಷಿಗಳು ಯಾವ ಪ್ರಾಮುಖ್ಯ ಕೆಲಸಕ್ಕಾಗಿ ಜ್ಞಾತರು?
11 ‘ಸುವಾರ್ತೆಗೆ ಕೂಲಂಕಷ ಸಾಕ್ಷಿಕೊಡಲು’ ಶ್ರಮಪಡುವ ಮೂಲಕ ಹುರುಪುಳ್ಳ ಕ್ರೈಸ್ತರು ಆ ಆಜ್ಞೆಗೆ ಈಗಲೂ ವಿಧೇಯತೆ ತೋರಿಸುತ್ತಾರೆ. ಇದನ್ನು ಮಾಡುವ ಒಂದು ವಿಧ, ಪೌಲನು ಎಫೆಸದ ಹಿರಿಯರಿಗೆ ತಿಳಿಸಿದಂತೆ ಮನೆಮನೆಗೆ ಹೋಗಿ ಸಾರುವುದಾಗಿದೆ. ಪರಿಣಾಮಕಾರಿ ಮಿಷನೆರಿ ಕೆಲಸದ ಕುರಿತ 2007ರ ಒಂದು ಪುಸ್ತಕದಲ್ಲಿ ಡೇವಿಡ್ ಜಿ. ಸ್ಟುಅರ್ಟ್ ಜೂನಿಯರ್ ಹೇಳಿದ್ದು: “ಯೆಹೋವನ ಸಾಕ್ಷಿಗಳು ಬಳಸುವಂಥ ಪ್ರಾಯೋಗಿಕ ವಿಧಾನ, ಅಂದರೆ ಪ್ರತಿಯೊಬ್ಬ ಸದ್ಯಸನು ಇತರರೊಂದಿಗೆ ತನ್ನ ನಂಬಿಕೆಗಳ ಕುರಿತು ಹೇಗೆ ಮಾತಾಡಬಹುದು ಎಂಬದನ್ನು ತಿಳಿಸಿಕೊಡುವ ವಿಧಾನವು, ಅಸ್ಪಷ್ಟ ಹಾಗೂ ತಾತ್ವಿಕವಾಗಿರುವ ವಿಧಾನಕ್ಕಿಂತ [ಚರ್ಚುಗಳಲ್ಲಿ ಕೊಡಲಾಗುವ ಪ್ರಸಂಗಗಳಿಗಿಂತ] ಎಷ್ಟೋ ಹೆಚ್ಚು ಪರಿಣಾಮಬೀರುತ್ತದೆ. ಯೆಹೋವನ ಸಾಕ್ಷಿಗಳಲ್ಲಿ ಅನೇಕರು ತಮ್ಮ ನಂಬಿಕೆಗಳ ಕುರಿತು ಇತರರೊಂದಿಗೆ ಮಾತಾಡಲು ಬಲು ಇಷ್ಟಪಡುತ್ತಾರೆ.” ಇದರ ಪರಿಣಾಮವೇನು? “1999ರಲ್ಲಿ ಪೂರ್ವ ಯುರೋಪಿನ ಎರಡು ರಾಜಧಾನಿಗಳಲ್ಲಿ ನಾನು ಸಮೀಕ್ಷೆ ನಡೆಸಿದಾಗ ಕೇವಲ 2-4 ಪ್ರತಿಶತದಷ್ಟು ಜನರು, ತಮ್ಮನ್ನು ಆಧುನಿಕ ಸಮಯದ ಸಂತರು ಇಲ್ಲವೆ ‘ಮೊಮನ್’ ಮಿಷನೆರಿಗಳು ಭೇಟಿನೀಡಿದ ಬಗ್ಗೆ ಹೇಳಿದರು. ಆದರೆ 70 ಪ್ರತಿಶತಕ್ಕಿಂತ ಹೆಚ್ಚು ಜನರು ಯೆಹೋವನ ಸಾಕ್ಷಿಗಳು ಹಲವಾರು ಸಲ ತಮ್ಮನ್ನು ವೈಯಕ್ತಿಕವಾಗಿ ಭೇಟಿಮಾಡಿದ್ದರೆಂದು ಹೇಳಿದರು.”
12. (ಎ) ನಮ್ಮ ಟೆರಿಟೊರಿಯಲ್ಲಿರುವ ಜನರ ಮನೆಬಾಗಿಲಿಗೆ ನಾವು “ಹಲವಾರು ಸಲ” ಹೋಗುವುದೇಕೆ? (ಬಿ) ನಮ್ಮ ಸಂದೇಶದ ಕಡೆಗೆ ಯಾರಾದರೊಬ್ಬರ ಮನೋಭಾವ ಬದಲಾದದ್ದನ್ನು ತೋರಿಸುವ ಅನುಭವ ತಿಳಿಸಬಲ್ಲಿರಾ?
12 ಯೆಹೋವನ ಸಾಕ್ಷಿಗಳ ಬಗ್ಗೆ ನಿಮ್ಮ ವಠಾರದ ಜನರು ಸಹ ಹೆಚ್ಚುಕಡಿಮೆ ಇದನ್ನೇ ಹೇಳಬಹುದು. ಅವರು ಹಾಗನ್ನಲು ನೀವೂ ಕಾರಣರಾಗಿದ್ದೀರಿ. ಏಕೆಂದರೆ ನೀವು ಕೂಡ ಅದೇ ಕೆಲಸದಲ್ಲಿ ಪಾಲ್ಗೊಂಡಿದ್ದೀರಿ. ಮನೆಮನೆಯ ಶುಶ್ರೂಷೆಯಲ್ಲಿ ನೀವು ಜನರನ್ನು “ವೈಯಕ್ತಿಕವಾಗಿ ಭೇಟಿಯಾಗುತ್ತಾ” ಗಂಡಸರು, ಹೆಂಗಸರು ಮತ್ತು ಯುವ ಜನರನ್ನು ಅವರ ಮನೆಗಳಲ್ಲಿ ಮಾತಾಡಿಸಿದ್ದೀರಿ. ನೀವು “ಹಲವಾರು ಸಲ” ಹೋದರೂ ಕೆಲವರು ಕಿವಿಗೊಟ್ಟಿರಲಿಕ್ಕಿಲ್ಲ. ಇತರರು, ನೀವು ಬೈಬಲ್ನ ಒಂದು ವಚನವನ್ನೋ ವಿಚಾರವನ್ನೋ ತಿಳಿಸಿದಾಗ ನಿಮಗೆ ಕಿವಿಗೊಟ್ಟಿರಬೇಕು. ಇನ್ನು ಕೆಲವರಿಗೆ ನೀವು ಒಳ್ಳೇ ಸಾಕ್ಷಿಕೊಡಶಕ್ತರಾಗಿದ್ದೀರಿ ಮತ್ತು ಅವರು ಪ್ರತಿಕ್ರಿಯೆ ತೋರಿಸಿದ್ದಾರೆ. ಇವೆಲ್ಲವೂ, “ಸುವಾರ್ತೆಗೆ ಕೂಲಂಕಷ ಸಾಕ್ಷಿನೀಡುವಾಗ” ಸಿಗಬಹುದಾದ ಪ್ರತಿಕ್ರಿಯೆಗಳಾಗಿವೆ. ಆದರೆ ನಿಮಗೆ ತಿಳಿದಿರುವಂತೆ “ಹಲವಾರು ಸಲ” ಹೋದರೂ ಆಸಕ್ತಿಯೇ ತೋರಿಸದವರು ತದನಂತರ ಬದಲಾದ ಎಷ್ಟೋ ಉದಾಹರಣೆಗಳಿವೆ. ಪ್ರಾಯಶಃ ಅವರಿಗೆ ಅಥವಾ ಅವರ ಆಪ್ತರಿಗೆ ಬಂದ ಕಷ್ಟಕಾರ್ಪಣ್ಯಗಳಿಂದಾಗಿ ಅವರ ಹೃದಮನ ಸತ್ಯದೆಡೆಗೆ ತೆರೆದಿತ್ತು. ಈಗ ಅವರು ನಮ್ಮ ಸಹೋದರ ಸಹೋದರಿಯರಾಗಿದ್ದಾರೆ. ಹಾಗಾಗಿ, ಇತ್ತೀಚೆಗೆ ನಿಮಗೆ ಕಿವಿಗೊಡುವವರು ಸಿಕ್ಕಿರದಿದ್ದರೂ ಹತಾಶರಾಗಬೇಡಿ. ಎಲ್ಲರು ಸತ್ಯಕ್ಕೆ ಬರುವರೆಂದು ನಾವು ನಿರೀಕ್ಷಿಸುವುದಿಲ್ಲ. ಆದರೂ ನಾವು ಶ್ರದ್ಧೆ ಹಾಗೂ ಹುರುಪಿನಿಂದ ಕೂಲಂಕಷ ಸಾಕ್ಷಿಯನ್ನು ಕೊಡುತ್ತಿರಬೇಕೆಂಬದನ್ನು ದೇವರು ನಮ್ಮಿಂದ ನಿರೀಕ್ಷಿಸುತ್ತಾನೆ.
ನಮಗೆ ತಿಳಿದುಬರದ ಫಲಿತಾಂಶಗಳು
13. ನಾವು ಕೊಡುವ ಸಾಕ್ಷಿಯು ನಮಗೆ ಗೊತ್ತಿರದ ರೀತಿಯಲ್ಲಿ ಹೇಗೆ ಫಲಿತಾಂಶಗಳನ್ನು ತರಬಲ್ಲದು?
13 ಪೌಲನ ಶುಶ್ರೂಷೆಯು, ಅವನು ಕ್ರೈಸ್ತರಾಗುವಂತೆ ನೇರವಾಗಿ ಸಹಾಯ ಮಾಡಿದವರ ಮೇಲೆ ಮಾತ್ರವಲ್ಲ ಇತರರ ಮೇಲೂ ಪರಿಣಾಮ ಬೀರಿತು. ನಮ್ಮ ವಿಷಯದಲ್ಲೂ ಇದು ನಿಜವಾಗಿರಬಲ್ಲದು. ಮನೆಮನೆಯ ಶುಶ್ರೂಷೆಯಲ್ಲಿ ಕ್ರಮವಾಗಿ ಭಾಗವಹಿಸಲು ಮತ್ತು ಆದಷ್ಟು ಜನರಿಗೆ ಸಾಕ್ಷಿಕೊಡಲು ನಾವು ಸಕಲ ಪ್ರಯತ್ನಮಾಡುತ್ತೇವೆ. ನಮ್ಮ ನೆರೆಯವರಿಗೆ, ಜೊತೆ ಕಾರ್ಮಿಕರಿಗೆ, ಶಾಲಾಪಾಠಿಗಳಿಗೆ ಮತ್ತು ನೆಂಟರಿಷ್ಟರಿಗೆ ಸುವಾರ್ತೆಯ ಕುರಿತು ತಿಳಿಸುತ್ತೇವೆ. ಇದರ ಎಲ್ಲ ಫಲಿತಾಂಶಗಳು ನಮಗೆ ತಿಳಿದಿರುತ್ತವೋ? ಕೆಲವು ವಿದ್ಯಮಾನಗಳಲ್ಲಿ ಒಳ್ಳೇ ಫಲಿತಾಂಶಗಳು ಕೂಡಲೇ ಸಿಗಬಲ್ಲವು. ಇನ್ನೂ ಕೆಲವರಲ್ಲಿ ಸತ್ಯದ ಬೀಜಗಳು ಸ್ವಲ್ಪ ಕಾಲದ ವರೆಗೆ ಸುಪ್ತವಾಗಿದ್ದು ಕ್ರಮೇಣ ಹೃದಯವೆಂಬ ಮಣ್ಣಿನಲ್ಲಿ ಬೇರುಬಿಟ್ಟು ಬೆಳೆಯಲಾರಂಭಿಸಬಹುದು. ಹೀಗಾಗದಿದ್ದರೂ ಕೆಲವೊಮ್ಮೆ, ನಾವು ಯಾರೊಂದಿಗೆ ಮಾತಾಡುತ್ತೇವೋ ಆ ಜನರು ನಾವು ಮಾತಾಡಿದ್ದರ ಬಗ್ಗೆ, ನಮ್ಮ ನಂಬಿಕೆಗಳ ಬಗ್ಗೆ ಮತ್ತು ನಮ್ಮ ನಡತೆಯ ಬಗ್ಗೆ ಇತರರೊಂದಿಗೆ ಹೇಳಿಕೊಂಡಾರು. ಹೌದು, ಅವರು ತಮಗೆ ತಿಳಿಯದೆ ನಾವು ಬಿತ್ತಿದ ಆ ಬೀಜಗಳು ಸೂಕ್ತವಾದ ಒಳ್ಳೇ ಮಣ್ಣಿಗೆ ಹೋಗಿ ಸೇರುವಂತೆ ಮಾಡುವರು.
14, 15. ಒಬ್ಬ ಸಹೋದರನು ಸಾಕ್ಷಿನೀಡಿದ್ದರಿಂದ ಯಾವ ಫಲಿತಾಂಶಗಳು ಲಭಿಸಿದವು?
14 ಯು.ಎಸ್.ಎ. ಫ್ಲೊರಿಡದಲ್ಲಿ ವಾಸಿಸುವ ರಾಯನ್a ಮತ್ತವನ ಪತ್ನಿ ಮ್ಯಾಂಡಿ ಎಂಬವರನ್ನು ಉದಾಹರಣೆಯಾಗಿ ಪರಿಗಣಿಸಿ. ರಾಯನ್ ತನ್ನ ಉದ್ಯೋಗದ ಸ್ಥಳದಲ್ಲಿ ಜೊತೆ ಕೆಲಸಗಾರನಿಗೆ ಅನೌಪಚಾರಿಕವಾಗಿ ಸಾಕ್ಷಿನೀಡಿದನು. ಹಿಂದೂ ವ್ಯಕ್ತಿಯಾಗಿದ್ದ ಅವನಿಗೆ ರಾಯನ್ನ ನೀಟಾದ ತೋರಿಕೆ ಮತ್ತು ಅವನು ಮಾತಾಡುತ್ತಿದ್ದ ರೀತಿ ತುಂಬ ಹಿಡಿಸಿತು. ಅವನೊಂದಿಗಿನ ಮಾತುಕತೆಗಳಲ್ಲಿ ರಾಯನ್ ಪುನರುತ್ಥಾನ ಮತ್ತು ಸತ್ತವರ ಸ್ಥಿತಿಯ ಕುರಿತು ಪ್ರಸ್ತಾಪಿಸುತ್ತಿದ್ದನು. ಜನವರಿ ತಿಂಗಳ ಒಂದು ಸಾಯಂಕಾಲ ಆ ವ್ಯಕ್ತಿಯು ತನ್ನ ಹೆಂಡತಿ ಜೆನಿಗೆ ಯೆಹೋವನ ಸಾಕ್ಷಿಗಳ ಬಗ್ಗೆ ಏನಾದರೂ ಗೊತ್ತೇ ಎಂದು ಕೇಳಿದನು. ಕ್ಯಾಥೊಲಿಕಳಾಗಿದ್ದ ಆಕೆಗೆ ಸಾಕ್ಷಿಗಳು “ಮನೆಮನೆಗೆ ಹೋಗಿ ಸಾರುತ್ತಾರೆ” ಎಂಬದಷ್ಟೇ ಗೊತ್ತಿತ್ತು. ಆದುದರಿಂದ ಆಕೆ ಇಂಟರ್ನೆಟ್ನಲ್ಲಿ “ಯೆಹೋವನ ಸಾಕ್ಷಿಗಳು” ಎಂದು ಹಾಕಿ ಹುಡುಕಿದಾಗ ಆಕೆಗೆ ನಮ್ಮ ವೆಬ್ಸೈಟ್ ವಿಳಾಸ (www.watchtower.org.) ದೊರಕಿತು. ಜೆನಿ ಆ ವೆಬ್ಸೈಟ್ನಲ್ಲಿರುವ ಮಾಹಿತಿಯನ್ನು ಅಂದರೆ ಬೈಬಲ್ ಮತ್ತು ಇತರ ಆಸಕ್ತಿಕರ ಲೇಖನಗಳನ್ನು ಕೆಲವು ತಿಂಗಳು ಓದಿದಳು.
15 ಕಾಲಾನಂತರ, ನರ್ಸ್ಗಳಾಗಿದ್ದ ಜೆನಿ ಮತ್ತು ಮ್ಯಾಂಡಿಗೆ ಪರಸ್ಪರ ಪರಿಚಯವಾಯಿತು. ಜೆನಿಗಿದ್ದ ಪ್ರಶ್ನೆಗಳನ್ನು ಮ್ಯಾಂಡಿ ಉತ್ತರಿಸಿದಳು. ಬಳಿಕ ಅವರೊಮ್ಮೆ, ಜೆನಿ ಹೇಳುವಂತೆ “ಆದಾಮನಿಂದ ಹಿಡಿದು ಅರ್ಮಗೆದ್ದೋನ್ ವರೆಗೂ” ಹಲವಾರು ವಿಷಯಗಳ ಚರ್ಚೆಮಾಡಿದರು. ಜೆನಿ ಬೈಬಲ್ ಅಧ್ಯಯನಕ್ಕಾಗಿ ಒಪ್ಪಿಕೊಂಡಳು. ಆಕೆ ರಾಜ್ಯ ಸಭಾಗೃಹಕ್ಕೂ ಬರಲಾರಂಭಿಸಿದಳು. ಅಕ್ಟೋಬರ್ ತಿಂಗಳಲ್ಲಿ ಅಸ್ನಾತ ಪ್ರಚಾರಕಳಾಗಿ ಫೆಬ್ರವರಿಯಲ್ಲಿ ದೀಕ್ಷಾಸ್ನಾನ ಪಡೆದುಕೊಂಡಳು. ಅವಳು ಬರೆಯುವದು: “ಈಗ ನನಗೆ ಸತ್ಯ ತಿಳಿದಿದೆ ಮತ್ತು ನನ್ನ ಬದುಕು ಹಸನಾಗಿದೆ.”
16. ಫ್ಲೊರಿಡದ ಸಹೋದರನ ಅನುಭವವು, ಕೂಲಂಕಷ ಸಾಕ್ಷಿಕೊಡಲು ನಾವು ಪಡುವ ಪ್ರಯಾಸದ ಬಗ್ಗೆ ಏನನ್ನು ಸೂಚಿಸುತ್ತದೆ?
16 ತಾನು ಒಬ್ಬನಿಗೆ ಕೊಟ್ಟ ಸಾಕ್ಷಿ ಯಾರೋ ಮೂರನೇ ವ್ಯಕ್ತಿಯನ್ನು ಸತ್ಯಕ್ಕೆ ತರುವುದೆಂದು ರಾಯನ್ ಕನಸಲ್ಲೂ ನೆನಸಿರಲಿಕ್ಕಿಲ್ಲ. ರಾಯನ್ಗೆ ತಾನು “ಕೂಲಂಕಷ ಸಾಕ್ಷಿ” ಕೊಡಲು ಪಟ್ಟುಹಿಡಿದಿದ್ದರ ಫಲಿತಾಂಶ ತಿಳಿದುಬಂದ ಹಾಗೆ ನಿಮಗೆ ನಿಮ್ಮ ಸಾರುವಿಕೆಯ ಫಲಿತಾಂಶ ಪ್ರತಿ ಸಲ ತಿಳಿಯಲಿಕ್ಕಿಲ್ಲ. ನೀವು ಸಹ ಮನೆಮನೆಗೆ ಹೋಗಿ ಅಥವಾ ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ ಇಲ್ಲವೇ ಅನೌಪಚಾರಿಕವಾಗಿ ಸಾಕ್ಷಿ ನೀಡುವಾಗ ನಿಮಗೆ ತಿಳಿಯದೇ ಬೇರೆ ಯಾರಿಗೋ ಸತ್ಯ ತಿಳಿದುಕೊಳ್ಳುವ ಅವಕಾಶ ಮಾಡಿಕೊಡುತ್ತೀರಿ. “ಆಸ್ಯಸೀಮೆಯಲ್ಲಿ” ದೊರೆತ ಎಲ್ಲ ಫಲಿತಾಂಶಗಳ ಬಗ್ಗೆ ಪೌಲನಿಗೆ ತಿಳಿದಿರದಂತೆ, ನೀವು ಕೂಲಂಕಷ ಸಾಕ್ಷಿಕೊಡುವ ಫಲಿತಾಂಶಗಳ ಕುರಿತು ನಿಮಗೂ ತಿಳಿಯಲಿಕ್ಕಿಲ್ಲ. (ಅ. ಕೃತ್ಯಗಳು 23:11; 28:23 ಓದಿb.) ಆದರೂ ಕೂಲಂಕಷವಾಗಿ ಸಾಕ್ಷಿಕೊಡುತ್ತಾ ಇರುವುದು ಎಷ್ಟು ಪ್ರಾಮುಖ್ಯ!
17. ಇಸವಿ 2009ರಲ್ಲಿ ನೀವು ಏನನ್ನು ಮಾಡಲು ದೃಢನಿಶ್ಚಿತರಾಗಿದ್ದೀರಿ?
17 ಇಸವಿ 2009ರಲ್ಲಿ, ಮನೆಯಿಂದ ಮನೆಗೆ ಮತ್ತು ಇನ್ನಿತರ ವಿಧಾನಗಳಲ್ಲಿ ಸಾಕ್ಷಿಕೊಡುವ ನಮ್ಮ ನೇಮಕವನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳೋಣ. ಈ ಮೂಲಕ ಅಪೊಸ್ತಲ ಪೌಲನ ಅನಿಸಿಕೆಗಳನ್ನು ನಾವು ಸಹ ವ್ಯಕ್ತಪಡಿಸಬಲ್ಲೆವು. ಅವನಂದದ್ದು: “ನಾನು ನನ್ನ ಪ್ರಾಣವನ್ನು ಯಾವುದೇ ರೀತಿಯಲ್ಲಿ ಅಮೂಲ್ಯವೆಂದು ಎಣಿಸುವುದಿಲ್ಲ; ನಾನು ನನ್ನ ಓಟವನ್ನೂ ದೇವರ ಅಪಾತ್ರ ದಯೆಯ ಸುವಾರ್ತೆಗೆ ಕೂಲಂಕಷ ಸಾಕ್ಷಿಯನ್ನು ಕೊಡುವಂತೆ ಕರ್ತನಾದ ಯೇಸುವಿನಿಂದ ನಾನು ಪಡೆದ ಶುಶ್ರೂಷೆಯನ್ನೂ ಪೂರ್ಣಗೊಳಿಸುವುದೇ ನನ್ನ ಅಪೇಕ್ಷೆ.”
[ಪಾದಟಿಪ್ಪಣಿಗಳು]
a ಕೆಲವು ಹೆಸರುಗಳನ್ನು ಬದಲಿಸಲಾಗಿದೆ.
b ಅ. ಕೃತ್ಯಗಳು 23:11 (NW): “ಆ ರಾತ್ರಿ ಕರ್ತನು ಪೌಲನ ಬಳಿಯಲ್ಲಿ ನಿಂತುಕೊಂಡು, ‘ಧೈರ್ಯದಿಂದಿರು! ನೀನು ಯೆರೂಸಲೇಮಿನಲ್ಲಿ ನನ್ನ ಕುರಿತು ಕೂಲಂಕಷವಾಗಿ ಸಾಕ್ಷಿಕೊಡುತ್ತಿರುವಂತೆಯೇ ರೋಮಿನಲ್ಲಿಯೂ ಸಾಕ್ಷಿಕೊಡಬೇಕು’ ಎಂದು ಹೇಳಿದನು.”
ಅ. ಕೃತ್ಯಗಳು 28:23 (NW): “ಅವರು ಅವನೊಂದಿಗೆ ಒಂದು ದಿವಸವನ್ನು ನಿಗದಿಪಡಿಸಿ ಬಹು ಸಂಖ್ಯೆಯಲ್ಲಿ ಅವನು ಉಳುಕೊಂಡಿದ್ದ ಸ್ಥಳಕ್ಕೆ ಬಂದರು. ಅವನು ಬೆಳಗಿನಿಂದ ಸಾಯಂಕಾಲದ ವರೆಗೆ ದೇವರ ರಾಜ್ಯದ ಕುರಿತು ಕೂಲಂಕಷವಾಗಿ ಸಾಕ್ಷಿನೀಡುವ ಮೂಲಕ ಮತ್ತು ಮೋಶೆಯ ಧರ್ಮಶಾಸ್ತ್ರವನ್ನೂ ಪ್ರವಾದಿಗಳ ಗ್ರಂಥಗಳನ್ನೂ ಉಪಯೋಗಿಸಿ ಯೇಸುವಿನ ಕುರಿತಾಗಿ ಅವರನ್ನು ಒಡಂಬಡಿಸುವ ಮೂಲಕ ವಿಷಯವನ್ನು ವಿವರಿಸಿ ಹೇಳಿದನು.”
ನಿಮ್ಮ ಉತ್ತರವೇನು?
• ಅಪೊಸ್ತಲರಾದ ಪೇತ್ರ, ಪೌಲ ಮತ್ತು ಇತರರು ಪ್ರಥಮ ಶತಮಾನದಲ್ಲಿ ಹೇಗೆ ಕೂಲಂಕಷ ಸಾಕ್ಷಿಕೊಟ್ಟರು?
• ನಾವು ಸಾಕ್ಷಿಕೊಟ್ಟದ್ದರ ಫಲಿತಾಂಶಗಳೆಲ್ಲವೂ ನಮಗೆ ತಿಳಿದುಬರಲಿಕ್ಕಿಲ್ಲ ಏಕೆ?
• 2009ರ ವರ್ಷವಚನ ಯಾವುದು, ಮತ್ತು ಅದು ಸೂಕ್ತವೆಂದು ನಿಮಗೇಕೆ ಅನಿಸುತ್ತದೆ?
[ಪುಟ 19ರಲ್ಲಿರುವ ಸಂಕ್ಷಿಪ್ತ ವಿವರಣೆ]
2009ರ ವರ್ಷವಚನ: ‘ಸುವಾರ್ತೆಗೆ ಕೂಲಂಕಷ ಸಾಕ್ಷಿಯನ್ನು ಕೊಡಿರಿ.’ —ಅ. ಕೃ. 20:24, NW.
[ಪುಟ 17ರಲ್ಲಿರುವ ಚಿತ್ರ]
ಮನೆಮನೆಗೆ ಹೋಗಿ ಸಾಕ್ಷಿಕೊಡುವ ಪೌಲನ ರೂಢಿಯ ಕುರಿತು ಎಫೆಸದ ಹಿರಿಯರಿಗೆ ಚೆನ್ನಾಗಿ ತಿಳಿದಿತ್ತು
[ಪುಟ 18ರಲ್ಲಿರುವ ಚಿತ್ರ]
ನೀವು ಕೂಲಂಕಷ ಸಾಕ್ಷಿಕೊಡುವುದರ ಪರಿಣಾಮಗಳು ಎಷ್ಟು ವ್ಯಾಪಕವಾಗಿರಬಲ್ಲವು?