ನಿಮಗೆ ಹಾರ್ದಿಕ ಸ್ವಾಗತ
ನಿಮ್ಮ ನೆರೆಹೊರೆಯಲ್ಲಿರುವ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹವನ್ನು ನೀವು ಒಂದುವೇಳೆ ನೋಡಿರಬಹುದು. ಆದರೆ ಆ ಸಭಾಗೃಹದಲ್ಲಿ ಏನು ನಡೆಯುತ್ತಿದೆ ಎಂದು ನಿಮಗೆ ಗೊತ್ತಿರಲಿಕ್ಕಿಲ್ಲ. ಅವರ ಸಾಪ್ತಾಹಿಕ ಕೂಟಗಳಿಗೆ ಎಲ್ಲ ಜನರೂ ಹಾಜರಾಗಬಹುದೆಂದು ನಿಮಗೆ ಗೊತ್ತೋ? ಸಂದರ್ಶಿಸಲು ಬಯಸುವವರಿಗೆ ಹೃತ್ಪೂರ್ವಕ ಸ್ವಾಗತವಿದೆ.
ಆದರೂ ನಿಮಗೆ ಕೆಲವು ಪ್ರಶ್ನೆಗಳಿರಬಹುದು. ಯೆಹೋವನ ಸಾಕ್ಷಿಗಳು ಒಟ್ಟಾಗಿ ಕೂಡಿಬರುವುದೇಕೆ? ಅವರ ಕೂಟಗಳ ಕಾರ್ಯಕ್ರಮಗಳು ಯಾವುವು? ಯೆಹೋವನ ಸಾಕ್ಷಿಗಳಲ್ಲದ ಜನರು ಆ ಕೂಟಗಳ ಕುರಿತು ಏನನ್ನುತ್ತಾರೆ?
‘ಜನರೆಲ್ಲರನ್ನು ಕೂಡಿಸಬೇಕು’
ಪ್ರಾಚೀನ ಕಾಲದಿಂದ ಜನರು ದೇವರ ಕುರಿತಾಗಿ ಕಲಿಯಲು ಮತ್ತು ಆತನನ್ನು ಆರಾಧಿಸಲು ಒಟ್ಟಾಗಿ ಕೂಡಿಬಂದಿದ್ದಾರೆ. ಸುಮಾರು 3,500 ವರ್ಷಗಳ ಹಿಂದೆಯೇ ಇಸ್ರಾಯೇಲ್ಯರಿಗೆ ಈ ಆಜ್ಞೆ ಇತ್ತು: “ಜನರೆಲ್ಲರೂ ಈ ಧರ್ಮಶಾಸ್ತ್ರವನ್ನು ಕೇಳಿ ತಿಳಿದುಕೊಳ್ಳುವಂತೆ ಸ್ತ್ರೀಪುರುಷರನ್ನೂ ಮಕ್ಕಳನ್ನೂ ನಿಮ್ಮ ಊರುಗಳಲ್ಲಿರುವ ಅನ್ಯರನ್ನೂ ಕೂಡಿಸಬೇಕು. ಆಗ ಅವರು ತಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುಸರಿಸಿ ನಡೆಯುವರು.” (ಧರ್ಮೋಪದೇಶಕಾಂಡ 31:12) ಹೀಗೆ ಇಸ್ರಾಯೇಲ್ ದೇಶದಲ್ಲಿ ಆಬಾಲವೃದ್ಧರೆನ್ನದೆ ಎಲ್ಲರಿಗೂ ಯೆಹೋವ ದೇವರನ್ನು ಆರಾಧಿಸಲು ಮತ್ತು ಆತನಿಗೆ ವಿಧೇಯರಾಗಲು ಕಲಿಸಲಾಗುತ್ತಿತ್ತು.
ಶತಮಾನಗಳ ನಂತರ ಕ್ರೈಸ್ತ ಸಭೆಯು ರಚಿಸಲ್ಪಟ್ಟಾಗ ಕೂಟಗಳು ಸತ್ಯಾರಾಧನೆಯ ಪ್ರಧಾನ ಭಾಗವಾಗಿ ಮುಂದುವರಿದವು. ಅಪೊಸ್ತಲ ಪೌಲನು ಬರೆದದ್ದು: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವಂತೆಯೂ ಸತ್ಕಾರ್ಯಗಳನ್ನು ಮಾಡುವಂತೆಯೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ; ಸಭೆಯಾಗಿ ಕೂಡಿಬರುವುದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಾ ಇರೋಣ.” (ಇಬ್ರಿಯ 10:24, 25) ಕುಟುಂಬದ ಸದಸ್ಯರು ಒಟ್ಟಾಗಿ ಸಮಯ ಕಳೆಯುವಾಗ ಹೇಗೆ ಅವರ ಪ್ರೀತಿಯ ಬಂಧವು ಬಲಗೊಳ್ಳುತ್ತದೋ ಹಾಗೆ ದೇವರನ್ನು ಸೇವಿಸ ಬಯಸುವವರ ನಡುವಣ ಪ್ರೀತಿಯು ಅವರು ಆರಾಧನೆಗಾಗಿ ಕೂಡಿಬರುವಾಗ ಇನ್ನಷ್ಟು ಬಲಗೊಳ್ಳುತ್ತದೆ.
ಈ ಶಾಸ್ತ್ರೀಯ ಮಾದರಿಗನುಸಾರ ಯೆಹೋವನ ಸಾಕ್ಷಿಗಳು ವಾರಕ್ಕೆ ಎರಡಾವರ್ತಿ ತಮ್ಮ ರಾಜ್ಯ ಸಭಾಗೃಹದಲ್ಲಿ ಕೂಡಿಬರುತ್ತಾರೆ. ಅಲ್ಲಿ ನಡೆಯುವ ಕೂಟಗಳು ಹಾಜರಾದವರಿಗೆ ಬೈಬಲ್ ಮೂಲತತ್ತ್ವಗಳನ್ನು ಗಣ್ಯಮಾಡಲು, ಅರ್ಥಮಾಡಿಕೊಳ್ಳಲು ಮತ್ತು ಅನ್ವಯಿಸಲು ಸಹಾಯಮಾಡುತ್ತವೆ. ಈ ಕೂಟಗಳು ಲೋಕವ್ಯಾಪಕವಾಗಿ ಅನೇಕವೇಳೆ ಒಂದೇ ಆಗಿರುತ್ತವೆ. ಸಾಮಾನ್ಯವಾಗಿ ಪ್ರತಿ ಕೂಟಕ್ಕೆ ಅದರದ್ದೇ ಆದ ಆಧ್ಯಾತ್ಮಿಕ ಉದ್ದೇಶವಿದೆ. ಹಾಜರಾದವರು ಕೂಟಗಳ ಮುಂಚೆ ಮತ್ತು ನಂತರ ಭಕ್ತಿವರ್ಧಕ ಸಂಭಾಷಣೆಯ ಮೂಲಕ ‘ಪರಸ್ಪರ ಉತ್ತೇಜನದ ವಿನಿಮಯದಲ್ಲಿ’ ಆನಂದಿಸುತ್ತಾರೆ. (ರೋಮನ್ನರಿಗೆ 1:12) ಈ ಪ್ರತಿ ಕೂಟಗಳಲ್ಲೂ ಏನು ನಡೆಯುತ್ತದೆ?
ಬೈಬಲಾಧಾರಿತ ಭಾಷಣ
ಹೆಚ್ಚಿನ ಜನರು ಹಾಜರಾಗುವ ಮೊದಲಿನ ಕೂಟವೇ ಬೈಬಲಾಧಾರಿತ ಭಾಷಣ. ಇದು ಸಾರ್ವಜನಿಕರಿಗಾಗಿ ರಚಿಸಲ್ಪಟ್ಟಿದ್ದು, ಸಾಮಾನ್ಯವಾಗಿ ವಾರಾಂತ್ಯದಲ್ಲಿ ನಡೆಸಲ್ಪಡುತ್ತದೆ. ಯೇಸು ಕ್ರಿಸ್ತನು ಅನೇಕವೇಳೆ ಸಾರ್ವಜನಿಕ ಭಾಷಣಗಳನ್ನು ಕೊಟ್ಟನು. ಅವುಗಳಲ್ಲಿ ಪ್ರಖ್ಯಾತ ಪರ್ವತ ಪ್ರಸಂಗವು ಒಂದು. (ಮತ್ತಾಯ 5:1; 7:28, 29) ಅಪೊಸ್ತಲ ಪೌಲನು ಸಹ ಅಥೇನೆ ಪಟ್ಟಣದ ಜನರಿಗೆ ಭಾಷಣ ನೀಡಿದನು. (ಅ. ಕಾರ್ಯಗಳು 17:22-34) ಆ ಮಾದರಿಯನ್ನೇ ಅನುಸರಿಸುತ್ತಾ ಯೆಹೋವನ ಸಾಕ್ಷಿಗಳ ಕೂಟಗಳಲ್ಲೂ ವಿಶೇಷವಾಗಿ ಸಾರ್ವಜನಿಕರಿಗಾಗಿ ಒಂದು ಭಾಷಣವು ನೀಡಲ್ಪಡುತ್ತದೆ. ಸಾರ್ವಜನಿಕರಲ್ಲಿ ಕೆಲವರು ಪ್ರಥಮಬಾರಿ ಹಾಜರಾಗುವುದು ಈ ಕೂಟಕ್ಕೇ.
ಈ ಕೂಟವು ಯೆಹೋವನಿಗೆ ಸ್ತುತಿಗಳನ್ನು ಹಾಡಿರಿa ಎಂಬ ಗೀತ ಪುಸ್ತಕದ ಒಂದು ಗೀತೆಯೊಂದಿಗೆ ಆರಂಭಿಸುತ್ತದೆ. ಸಾಧ್ಯವಿರುವವರೆಲ್ಲರೂ ಎದ್ದುನಿಂತು ಆ ಗೀತೆ ಹಾಡುವಂತೆ ಆಮಂತ್ರಿಸಲಾಗುತ್ತದೆ. ಒಂದು ಚಿಕ್ಕ ಪ್ರಾರ್ಥನೆಯ ನಂತರ ನುರಿತ ವ್ಯಕ್ತಿಯು 30 ನಿಮಿಷದ ಒಂದು ಭಾಷಣಕೊಡುವನು. (“ಸಾರ್ವಜನಿಕರಿಗಾಗಿ ವ್ಯಾವಹಾರಿಕ ಭಾಷಣ ವಿಷಯಗಳು” ಚೌಕ ನೋಡಿ.) ಅವನ ಭಾಷಣವು ಪೂರಾ ಬೈಬಲಿನ ಮೇಲೆ ಆಧಾರಿಸಿರುತ್ತದೆ. ಆಗಿಂದಾಗ್ಗೆ ಸಂಬಂಧಿತ ಬೈಬಲ್ ವಚನಗಳನ್ನು ತೆರೆಯುವಂತೆ ಮತ್ತು ಓದುವಾಗ ಅದನ್ನು ಹಿಂಬಾಲಿಸುವಂತೆ ಭಾಷಣಕರ್ತನು ಸಭಿಕರನ್ನು ಆಮಂತ್ರಿಸುತ್ತಾನೆ. ಆದುದರಿಂದ ನೀವು ನಿಮ್ಮ ಸ್ವಂತ ಬೈಬಲನ್ನು ತರಬಹುದು ಅಥವಾ ಕೂಟಕ್ಕೆ ಮುಂಚೆ ಯೆಹೋವನ ಸಾಕ್ಷಿಗಳ ಬಳಿ ಒಂದು ಬೈಬಲನ್ನು ಕೇಳಿ ಪಡೆಯಬಹುದು.
ಕಾವಲಿನಬುರುಜು ಅಧ್ಯಯನ
ಯೆಹೋವನ ಸಾಕ್ಷಿಗಳ ಹೆಚ್ಚಿನ ಸಭೆಗಳಲ್ಲಿ ಬಹಿರಂಗ ಭಾಷಣದ ನಂತರ ಕಾವಲಿನಬುರುಜು ಅಧ್ಯಯನ ನಡೆಸಲ್ಪಡುತ್ತದೆ. ಇದು ಬೈಬಲಿನ ಒಂದು ವಿಷಯದ ಮೇಲೆ ಆಧಾರಿಸಿದ ಒಂದು ತಾಸಿನ ಪ್ರಶ್ನೋತ್ತರ ಚರ್ಚೆ. ಪೌಲನ ದಿನಗಳ ಬೆರೋಯ ಪಟ್ಟಣದ ಜನರ ಮಾದರಿಯನ್ನು ಅನುಸರಿಸುವಂತೆ ಈ ಕೂಟವು ಹಾಜರಾದವರನ್ನು ಉತ್ತೇಜಿಸುತ್ತದೆ. ಬೆರೋಯದವರು “ದೇವರ ವಾಕ್ಯವನ್ನು ಅತಿ ಸಿದ್ಧಮನಸ್ಸಿನಿಂದ ಸ್ವೀಕರಿಸಿ ಈ ವಿಷಯಗಳು ಸರಿಯೋ ಎಂದು ನೋಡಲಿಕ್ಕಾಗಿ ಪ್ರತಿದಿನವೂ ಶಾಸ್ತ್ರಗ್ರಂಥವನ್ನು ಜಾಗರೂಕತೆಯಿಂದ ಪರೀಕ್ಷಿಸುತ್ತಿದ್ದರು.”—ಅ. ಕಾರ್ಯಗಳು 17:11.
ಕಾವಲಿನಬುರುಜು ಅಧ್ಯಯನವು ಒಂದು ಗೀತೆಯೊಂದಿಗೆ ಆರಂಭಿಸುತ್ತದೆ. ಚರ್ಚಿಸಲ್ಪಡುವ ಮಾಹಿತಿಯು ಹಾಗೂ ಅಧ್ಯಯನ ನಿರ್ವಾಹಕನು ಕೇಳುವ ಪ್ರಶ್ನೆಗಳು ಈ ಪತ್ರಿಕೆಯ ಅಧ್ಯಯನ ಆವೃತ್ತಿಯಲ್ಲಿ ಕಂಡುಬರುತ್ತವೆ. ಈ ಪತ್ರಿಕೆಯನ್ನು ಯೆಹೋವನ ಸಾಕ್ಷಿಗಳಿಂದ ಪಡಕೊಳ್ಳಬಹುದು. ಅದರಲ್ಲಿ ಇತ್ತೀಚಿಗೆ ಪರಿಗಣಿಸಲಾದ ವಿಷಯಗಳು ಹೀಗಿವೆ. “ಹೆತ್ತವರೇ, ನಿಮ್ಮ ಮಕ್ಕಳಿಗೆ ಪ್ರೀತಿಯಿಂದ ತರಬೇತಿಕೊಡಿ,” “ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿರಿ,” “ದೇವರು ಏಕೆ ಎಲ್ಲ ಕಷ್ಟಸಂಕಟವನ್ನು ಬೇಗನೆ ಅಂತ್ಯಗೊಳಿಸುವನು?” ಈ ಕೂಟವು ಪ್ರಶ್ನೋತ್ತರ ಚರ್ಚೆಯಿಂದ ನಿರ್ವಹಿಸಲ್ಪಡುವುದಾದರೂ ಸಭಿಕರ ಪಾಲ್ಗೊಳ್ಳುವಿಕೆಯು ಸ್ವಇಷ್ಟದಿಂದಲೇ. ಉತ್ತರ ಹೇಳುವವರು ಸಾಮಾನ್ಯವಾಗಿ ಲೇಖನವನ್ನು ಮತ್ತು ಅದರಲ್ಲಿ ಕೊಟ್ಟಿರುವ ವಚನಗಳನ್ನು ಮುಂಚಿತವಾಗಿ ಓದಿ, ಮನನ ಮಾಡಿರುತ್ತಾರೆ. ಈ ಕೂಟವು ಗೀತೆ ಮತ್ತು ಪ್ರಾರ್ಥನೆಯಿಂದ ಮುಕ್ತಾಯವಾಗುತ್ತದೆ.—ಮತ್ತಾಯ 26:30; ಎಫೆಸ 5:19.
ಸಭಾ ಬೈಬಲ್ ಅಧ್ಯಯನ
ಪ್ರತಿವಾರ ಒಂದು ಸಂಜೆ ಯೆಹೋವನ ಸಾಕ್ಷಿಗಳು ಪುನಃ ರಾಜ್ಯ ಸಭಾಗೃಹದಲ್ಲಿ ಕೂಡಿಬರುತ್ತಾರೆ. ಅಂದು ಮೂರು ಭಾಗಗಳ ಕಾರ್ಯಕ್ರಮವು ಒಟ್ಟು 1 ತಾಸು 45 ನಿಮಿಷ ನಡೆಯುತ್ತದೆ. ಮೊದಲನೇ ಭಾಗವು 25 ನಿಮಿಷಗಳ ಸಭಾ ಬೈಬಲ್ ಅಧ್ಯಯನ. ಇದು ಹಾಜರಾಗುವವರಿಗೆ ಬೈಬಲಿನ ಉತ್ತಮ ಪರಿಚಯವನ್ನು ಕೊಟ್ಟು, ಹೀಗೆ ಅವರು ತಮ್ಮ ಯೋಚನೆ ಮತ್ತು ವರ್ತನೆಗಳನ್ನು ಸರಿಪಡಿಸುವಂತೆಯೂ ಕ್ರಿಸ್ತ ಶಿಷ್ಯರೋಪಾದಿ ಪ್ರಗತಿಯನ್ನು ಮಾಡುವಂತೆಯೂ ನೆರವಾಗುತ್ತದೆ. (2 ತಿಮೊಥೆಯ 3:16, 17) ಕಾವಲಿನಬುರುಜು ಅಧ್ಯಯನದಂತೆ ಈ ಕೂಟವು ಸಹ ಬೈಬಲಿನ ಒಂದು ವಿಷಯದ ಪ್ರಶ್ನೋತ್ತರ ಚರ್ಚೆಯಾಗಿದೆ. ಉತ್ತರ ಕೊಡುವವರು ಇಲ್ಲಿ ಕೂಡ ಸ್ವಇಷ್ಟದಿಂದ ಕೊಡುತ್ತಾರೆ. ಈ ಬೈಬಲ್ ಅಧ್ಯಯನವು ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟ ಒಂದು ಪುಸ್ತಕ ಅಥವಾ ಬ್ರೋಷರ್ ಮೇಲೆ ಆಧಾರಿಸಿದೆ.
ಈ ಕೂಟದಲ್ಲಿ ಬೈಬಲ್ ಆಧಾರಿತ ಸಾಹಿತ್ಯವು ಏಕೆ ಉಪಯೋಗಿಸಲ್ಪಡುತ್ತದೆ? ಹಿಂದೆ ಬೈಬಲಿನ ಕಾಲಗಳಲ್ಲಿ ದೇವರ ವಾಕ್ಯವನ್ನು ಬರೇ ಓದುವುದಷ್ಟೇ ಅಲ್ಲ, ವಿವರಿಸಲಾಗುತ್ತಿತ್ತು. “ಜನರು ಎದ್ದುನಿಂತನಂತರ ಅವರು ದೇವರ ಧರ್ಮಶಾಸ್ತ್ರವನ್ನು ಸ್ಪಷ್ಟವಾಗಿ ಓದುತ್ತಾ ಅದರ ತಾತ್ಪರ್ಯವನ್ನು ವಿವರಿಸಲು ಜನರು ಗ್ರಹಿಸಿದರು.” (ನೆಹೆಮೀಯ 8:8) ಇತ್ತೀಚಿನ ವರ್ಷಗಳಲ್ಲಿ ಯೆಶಾಯ, ದಾನಿಯೇಲ ಮತ್ತು ಪ್ರಕಟನೆ ಮುಂತಾದ ಬೈಬಲ್ ಪುಸ್ತಕಗಳನ್ನು ಚರ್ಚಿಸುವ ಪ್ರಕಾಶನಗಳು ಈ ಕೂಟಗಳಿಗೆ ಹಾಜರಾಗುವವರಿಗೆ ಬೈಬಲಿನ ಈ ಭಾಗಗಳನ್ನು ತಿಳುಕೊಳ್ಳಲು ಸಹಾಯ ನೀಡಿವೆ.
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ
ಸಭಾ ಬೈಬಲ್ ಅಧ್ಯಯನದ ನಂತರ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯು ನಡೆಸಲ್ಪಡುತ್ತದೆ. 30-ನಿಮಿಷಗಳ ಈ ಶಾಲೆಯು ‘ಬೋಧಿಸುವ ಕಲೆಯನ್ನು’ ವಿಕಸಿಸಲು ಕ್ರೈಸ್ತರಿಗೆ ಸಹಾಯವಾಗುವಂತೆ ರಚಿತವಾಗಿದೆ. (2 ತಿಮೊಥೆಯ 4:2) ಉದಾಹರಣೆಗೆ, ನಿಮ್ಮ ಮಕ್ಕಳು ಅಥವಾ ಮಿತ್ರರು ದೇವರ ಕುರಿತಾಗಲಿ ಬೈಬಲಿನ ಕುರಿತಾಗಲಿ ಯಾವುದಾದರೂ ಪ್ರಶ್ನೆಯನ್ನು ಕೇಳಿದ್ದಾರೋ? ಅದಕ್ಕೆ ನಿಮಗೆ ಉತ್ತರ ಕೊಡಲು ಕಷ್ಟವಾಗಿದೆಯೋ? ಈ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯು ಅಂಥ ಕಷ್ಟದ ಪ್ರಶ್ನೆಗಳಿಗೆ ಉತ್ತೇಜಕ ಹಾಗೂ ಬೈಬಲಾಧಾರಿತ ಉತ್ತರಗಳನ್ನು ಹೇಗೆ ಕೊಡುವುದೆಂದು ಕಲಿಸುತ್ತದೆ. ಹೀಗೆ ನಾವು ಪ್ರವಾದಿ ಯೆಶಾಯನು ಘೋಷಿಸಿದ ಈ ಮಾತುಗಳನ್ನು ಪ್ರತಿಧ್ವನಿಸಬಲ್ಲೆವು: “ಬಳಲಿಹೋದವರನ್ನು ಮಾತುಗಳಿಂದ ಸುಧಾರಿಸುವದಕ್ಕೆ ನಾನು ಬಲ್ಲವನಾಗುವಂತೆ ಕರ್ತನಾದ ಯೆಹೋವನು ಶಿಕ್ಷಿತರ ನಾಲಿಗೆಯನ್ನು ನನಗೆ ದಯಪಾಲಿಸಿದ್ದಾನೆ.”—ಯೆಶಾಯ 50:4.
ಈ ದೇವಪ್ರಭುತ್ವಾತ್ಮಕ ಶಾಲೆಯು ಬೈಬಲಿನ ಭಾಗವೊಂದರ ಮೇಲೆ ಆಧಾರಿತವಾದ ಭಾಷಣದಿಂದ ಆರಂಭವಾಗುತ್ತದೆ. ಹಾಜರಾಗುವವರು ಈ ಭಾಗವನ್ನು ಮುಂಚಿತವಾಗಿಯೇ ಓದಿ ಬರುವಂತೆ ಉತ್ತೇಜಿಸಲ್ಪಡುತ್ತಾರೆ. ಈ ಭಾಷಣವನ್ನು ಹಿಂಬಾಲಿಸಿ ಸಭಿಕರು ತಾವು ಓದಿದ ಭಾಗದಲ್ಲಿ ಉಪಯುಕ್ತವೆಂದು ಕಂಡುಕೊಂಡ ವಿಷಯದ ಮೇಲೆ ಚಿಕ್ಕ ಚಿಕ್ಕ ಉತ್ತರಗಳನ್ನು ಕೊಡುವಂತೆ ಅವರನ್ನು ಆಮಂತ್ರಿಸಲಾಗುತ್ತದೆ. ಈ ಚರ್ಚೆಯ ನಂತರ ಶಾಲೆಯಲ್ಲಿ ಭಾಗವಹಿಸಲು ಆರಿಸಲ್ಪಟ್ಟ ವಿದ್ಯಾರ್ಥಿಗಳು ತಮ್ಮ ತಮ್ಮ ನೇಮಿತ ಭಾಷಣಗಳನ್ನು ಪ್ರಸ್ತುತಪಡಿಸುವರು.
ವೇದಿಕೆಯಿಂದ ಬೈಬಲಿನ ಭಾಗವೊಂದನ್ನು ಓದುವಂತೆ ಅಥವಾ ಶಾಸ್ತ್ರೀಯ ವಿಷಯವೊಂದನ್ನು ಇನ್ನೊಬ್ಬ ವ್ಯಕ್ತಿಗೆ ಕಲಿಸುವುದು ಹೇಗೆಂದು ಪ್ರತ್ಯಕ್ಷಾಭಿನಯಿಸಿ ತೋರಿಸುವಂತೆ ವಿದ್ಯಾರ್ಥಿಗಳಿಗೆ ನೇಮಿಸಲಾಗುತ್ತದೆ. ಪ್ರತಿಯೊಬ್ಬರ ಭಾಷಣದ ಬಳಿಕ ಒಬ್ಬ ನುರಿತ ಸಲಹೆಗಾರನು ವಿದ್ಯಾರ್ಥಿಯು ತೋರಿಸಿದ ಒಳ್ಳೆ ಭಾಷಣಗುಣಗಳನ್ನು ಶ್ಲಾಘಿಸುತ್ತಾನೆ. ಅವನ ಆ ಹೇಳಿಕೆಗಳು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಎಂಬ ಪಠ್ಯ ಪುಸ್ತಕದ ಮೇಲೆ ಆಧಾರಿತವಾಗಿರುತ್ತವೆ. ಪ್ರಗತಿಮಾಡಬೇಕಾದ ಯಾವುದೇ ಸಲಹೆಗಳಿದ್ದರೆ ಅವನು ಕೂಟದ ನಂತರ ಅವರಿಗೆ ಖಾಸಗಿಯಾಗಿ ಕೊಡಬಹುದು.
ಕಾರ್ಯಕ್ರಮದ ಈ ಚಿಕ್ಕ ಚಿಕ್ಕ ಭಾಷಣ-ಭಾಗಗಳು ವಿದ್ಯಾರ್ಥಿಗೆ ಮಾತ್ರವಲ್ಲ ಹಾಜರಾಗುವ ಪ್ರತಿಯೊಬ್ಬರಿಗೆ ತಮ್ಮ ಓದುವ, ಮಾತಾಡುವ ಹಾಗೂ ಬೋಧಿಸುವ ಕಲೆಯನ್ನು ಪ್ರಗತಿಗೊಳಿಸುವಂತೆ ರಚಿಸಲಾಗಿವೆ. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ನಂತರ ಬೈಬಲ್ ವಚನದ ಮೇಲೆ ಆಧಾರಿತವಾದ ಒಂದು ಗೀತೆಯ ಮೂಲಕ ಸೇವಾ ಕೂಟ ಆರಂಭಗೊಳ್ಳುತ್ತದೆ.
ಸೇವಾ ಕೂಟ
ಕಾರ್ಯಕ್ರಮದ ಕೊನೆಯ ಭಾಗವೇ ಸೇವಾ ಕೂಟ. ಭಾಷಣಗಳು, ಪ್ರತ್ಯಕ್ಷಾಭಿನಯಗಳು, ಇಂಟರ್‌ವ್ಯೂಗಳು, ಸಭಿಕರ ಭಾಗವಹಿಸುವಿಕೆ ಇವುಗಳ ಮೂಲಕ ಹಾಜರಿರುವ ಎಲ್ಲರೂ ಬೈಬಲ್ ಸತ್ಯಗಳನ್ನು ಪರಿಣಾಮಕಾರಿಯಾಗಿ ಬೋಧಿಸಲು ಕಲಿಯುತ್ತಾರೆ. ಶಿಷ್ಯರನ್ನು ಸಾರಲು ಕಳುಹಿಸುವ ಮೊದಲು ಯೇಸು ಅವರನ್ನು ಒಟ್ಟುಗೂಡಿಸಿ ಅವರಿಗೆ ವಿವರವಾದ ಸೂಚನೆಗಳನ್ನು ಕೊಟ್ಟನು. (ಲೂಕ 10:1-16) ಆಗ ಅವರು ಸಾರುವ ಕೆಲಸದಲ್ಲಿ ಪೂರ್ಣ ಸನ್ನದ್ಧರಾಗಿ ಅನೇಕ ಆಸಕ್ತಿಕರ ಅನುಭವಗಳಲ್ಲಿ ಆನಂದಿಸಿದರು. ಬಳಿಕ ಅದನ್ನು ಯೇಸುವಿಗೆ ವರದಿಸುತ್ತಿದ್ದರು. (ಲೂಕ 10:17) ಶಿಷ್ಯರು ಅನುಭವಗಳನ್ನು ತಮ್ಮೊಳಗೂ ಪರಸ್ಪರ ಹಂಚಿಕೊಳ್ಳುತ್ತಿದ್ದರು.—ಅ. ಕಾರ್ಯಗಳು 4:23; 15:4.
ಸೇವಾ ಕೂಟದ ಈ 35 ನಿಮಿಷ ಕಾರ್ಯಕ್ರಮವು ನಮ್ಮ ರಾಜ್ಯ ಸೇವೆ ಎಂಬ ಪತ್ರದಲ್ಲಿ ತಿಳಿಸಲಾಗಿದೆ. ಅದರಲ್ಲಿ ಇತ್ತೀಚಿಗೆ ಪರಿಗಣಿಸಲಾದ ಮುಖ್ಯ ವಿಷಯಗಳು ಹೀಗಿವೆ: “ಕುಟುಂಬವಾಗಿ ಯೆಹೋವನನ್ನು ಆರಾಧಿಸುವುದು,” “ನಾವೇಕೆ ಪದೇ ಪದೇ ಹೋಗುತ್ತೇವೆ?,” “ನಿಮ್ಮ ಸಾರುವ ಕೆಲಸದಲ್ಲಿ ಕ್ರಿಸ್ತನನ್ನು ಅನುಕರಿಸಿರಿ.” ಕಾರ್ಯಕ್ರಮವು ಗೀತೆಯೊಂದಿಗೆ ಕೊನೆಗೊಳ್ಳುತ್ತದೆ ಮತ್ತು ಸಭಾ ಸದಸ್ಯನೊಬ್ಬನು ಮುಕ್ತಾಯದ ಪ್ರಾರ್ಥನೆಮಾಡಲು ನೇಮಿಸಲ್ಪಡುತ್ತಾನೆ.
ಸಂದರ್ಶಕರ ಹೇಳಿಕೆಗಳು
ಸಭೆಗಳಲ್ಲಿರುವವರು ಪ್ರತಿಯೊಬ್ಬನನ್ನು ಆದರಪೂರ್ವಕವಾಗಿ ಬರಮಾಡಿಕೊಳ್ಳುತ್ತಾರೆ. ಉದಾಹರಣೆಗೆ, ಆ್ಯಂಡ್ರೂ ಎಂಬವನು ಯೆಹೋವನ ಸಾಕ್ಷಿಗಳ ಬಗ್ಗೆ ಅನೇಕ ನಕಾರಾತ್ಮಕ ಟೀಕೆಗಳನ್ನು ಕೇಳಿದ್ದನು. ಆದರೆ ಅವನು ಮೊತ್ತಮೊದಲು ಕೂಟಕ್ಕೆ ಹಾಜರಾದಾಗ ತನಗೆ ದೊರೆತ ಸ್ವಾಗತದಿಂದ ಅಚ್ಚರಿಗೊಂಡನು. “ಅದೆಷ್ಟು ಉಲ್ಲಾಸಕರ ಕೂಟ. ಅಲ್ಲಿರುವ ಜನರು ಎಷ್ಟೊಂದು ಸ್ನೇಹಪರರು, ಅವರು ನನ್ನಲ್ಲಿ ತೋರಿಸಿದ ಆಸಕ್ತಿ ನನ್ನನ್ನು ಅಚ್ಚರಿಗೊಳಿಸಿತು” ಎನ್ನುತ್ತಾನೆ ಆ್ಯಂಡ್ರೂ. ಇದನ್ನು ಒಪ್ಪುತ್ತಾ ಕೆನಡದ ಯುವತಿ ಆ್ಯಶಲ್ ಹೇಳುವುದು: “ಕೂಟ ತುಂಬ ಸ್ವಾರಸ್ಯವಾಗಿತ್ತು! ಸುಲಭವಾಗಿ ಅರ್ಥವಾಗುತ್ತಿತ್ತು.”
ಬ್ರಸಿಲ್‌ನಲ್ಲಿ ವಾಸಿಸುವ ಸೂಸೀ ಎಂಬವನು ಅವನ ಸಮುದಾಯದಲ್ಲಿ ಜಗಳಕ್ಕೆ ಕುಖ್ಯಾತ. ಹಾಗಿದ್ದರೂ ಸ್ಥಳಿಕ ರಾಜ್ಯ ಸಭಾಗೃಹದ ಕೂಟಕ್ಕೆ ಹಾಜರಾಗಲು ಅವನಿಗೆ ಆಮಂತ್ರಣ ಸಿಕ್ಕಿತು. ಅವನನ್ನುವುದು: “ಅಲ್ಲಿದ್ದವರಿಗೆ ನಾನು ಎಂಥವನೆಂದು ಗೊತ್ತಿದ್ದರೂ ಅವರು ನನ್ನನ್ನು ನಗುನಗುತ್ತಾ ಸ್ವಾಗತಿಸಿದರು.” ಜಪಾನಿನ ಆಟ್ಸುಶೀ ಹೇಳುವುದು: “ಮೊದಲಾಗಿ ಯೆಹೋವನ ಸಾಕ್ಷಿಗಳ ಕೂಟಕ್ಕೆ ಹಾಜರಾದಾಗ ನನಗೆ ಮುಜುಗರವೆನಿಸಿತು. ಆದರೂ ಅವರು ಸಜ್ಜನರೆಂದು ನನಗೆ ತಿಳಿದುಬಂತು. ನನ್ನನ್ನು ನಿರಾಳವಾಗಿರುವಂತೆ ನೋಡಿಕೊಂಡರು.”
ನಿಮಗೆಲ್ಲರಿಗೆ ಸ್ವಾಗತ!
ಮೇಲಿನ ಹೇಳಿಕೆಗಳು ತೋರಿಸುವಂತೆ ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಹಾಜರಾಗುವುದು ನಿಜವಾಗಿಯೂ ಪ್ರತಿಫಲದಾಯಕ ಅನುಭವ. ದೇವರ ಕುರಿತಾಗಿ ನೀವು ಕಲಿಯುವಿರಿ. ಮಾತ್ರವಲ್ಲ ಅಲ್ಲಿ ಸಿಗುವ ಮಾಹಿತಿಯ ಮೂಲಕ ‘ವೃದ್ಧಿಮಾರ್ಗದಿಂದ’ ಪ್ರಯೋಜನ ಪಡೆಯುವಂತೆ ಯೆಹೋವ ದೇವರು ನಿಮಗೆ ಕಲಿಸುವನು.—ಯೆಶಾಯ 48:17.
ಯೆಹೋವನ ಸಾಕ್ಷಿಗಳ ಕೂಟಗಳು ಉಚಿತವಾಗಿವೆ. ಅಲ್ಲಿ ಹಣವೆತ್ತಲಾಗುವುದಿಲ್ಲ. ನಿಮ್ಮ ನೆರೆಹೊರೆಯಲ್ಲಿರುವ ರಾಜ್ಯ ಸಭಾಗೃಹದಲ್ಲಿ ಕೂಟಕ್ಕೆ ಹಾಜರಾಗಲು ನೀವು ಬಯಸುವಿರೋ? ನಿಮಗೆ ಹಾರ್ದಿಕ ಸ್ವಾಗತ. (w09 2/1)
[ಪಾದಟಿಪ್ಪಣಿ]
a ಈ ಲೇಖನದಲ್ಲಿ ಸೂಚಿಸಲಾದ ಎಲ್ಲ ಪ್ರಕಾಶನಗಳು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.
[ಪುಟ 19ರಲ್ಲಿರುವ ಚೌಕ]
ಸಾರ್ವಜನಿಕರಿಗಾಗಿ ವ್ಯಾವಹಾರಿಕ ಭಾಷಣ ವಿಷಯಗಳು
ಬೈಬಲ್ ಭಾಷಣಗಳು 170ಕ್ಕಿಂತಲೂ ಹೆಚ್ಚಿನ ಶಾಸ್ತ್ರಾಧಾರಿತ ಮುಖ್ಯವಿಷಯಗಳಿಂದ ಆರಿಸಲ್ಪಡುತ್ತವೆ. ಕೆಲವು ಹೀಗಿವೆ:
◼ ಮಾನವರ ಉತ್ಪತ್ತಿ ಹೇಗಾಯಿತು?—ಆ ಕುರಿತು ನಿಮ್ಮ ನಂಬಿಕೆಯು ಪ್ರಾಮುಖ್ಯವೋ?
◼ ಕಾಮ ಮತ್ತು ವಿವಾಹದ ಕುರಿತ ದೈವಿಕ ನೋಟ
◼ ಭೂಮಿಯನ್ನು ಹಾಳುಗೆಡಹುವುದು ದೈವಿಕ ದಂಡನೆಯನ್ನು ತರುತ್ತದೆ
◼ ಜೀವನದ ಚಿಂತೆಗಳನ್ನು ನಿಭಾಯಿಸುವುದು
◼ ಇರುವುದು ಈ ಜೀವಿತ ಮಾತ್ರವೋ?
[ಪುಟ 19ರಲ್ಲಿರುವ ಚಿತ್ರ]
ಬೈಬಲ್ ಭಾಷಣ
[ಪುಟ 19ರಲ್ಲಿರುವ ಚಿತ್ರ]
“ಕಾವಲಿನಬುರುಜು” ಅಧ್ಯಯನ
[ಪುಟ 20ರಲ್ಲಿರುವ ಚಿತ್ರಗಳು]
ಸಭಾ ಬೈಬಲ್ ಅಧ್ಯಯನ
[ಪುಟ 20ರಲ್ಲಿರುವ ಚಿತ್ರ]
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ
[ಪುಟ 21ರಲ್ಲಿರುವ ಚಿತ್ರ]
ಸೇವಾ ಕೂಟ