2 ದೇವರ ನಿಷ್ಕೃಷ್ಟ ಜ್ಞಾನ ಪಡೆಯಿರಿ
“ಒಬ್ಬನೇ ಸತ್ಯ ದೇವರಾಗಿರುವ ನಿನ್ನ . . . ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ.”—ಯೋಹಾನ 17:3.
ಕೆಲವರ ಆಕ್ಷೇಪಗಳು: ದೇವರು-ದಿಂಡರು ಎಂಬದೆಲ್ಲ ಬರೇ ಭ್ರಮೆ ಎಂದು ಕೆಲವರನ್ನುತ್ತಾರೆ. ಆತನು ನಿರಾಕಾರನಾದ ಮಹಾನ್ ಶಕ್ತಿಯೆಂದು ಇನ್ನು ಕೆಲವರ ಹೇಳಿಕೆ. ದೇವರಿದ್ದಾನೆಂದು ನಂಬುವ ಇತರರಾದರೋ ಆತನು ಯಾರು ಮತ್ತು ಆತನ ಗುಣಗಳೇನು ಎಂಬದರ ಕುರಿತು ಭಿನ್ನಭಿನ್ನ ಬೋಧನೆಗಳನ್ನು ಕಲಿಸುತ್ತಾರೆ.
ನಿವಾರಣೆ: ದೇವರ ಕುರಿತ ಜ್ಞಾನವನ್ನು ಪಡೆಯುವ ಒಂದು ವಿಧಾನವು ಆತನು ಸೃಷ್ಟಿ ಮಾಡಿರುವ ವಸ್ತುಗಳನ್ನು ಗಮನಿಸುವ ಮೂಲಕವೇ. ಯೇಸುವಿನ ಶಿಷ್ಯ ಅಪೊಸ್ತಲ ಪೌಲನು ಹೇಳಿದ್ದು: “[ದೇವರ] ಅದೃಶ್ಯ ಗುಣಗಳು ಲೋಕವು ಸೃಷ್ಟಿಯಾದಂದಿನಿಂದ ಸ್ಪಷ್ಟವಾಗಿ ಕಂಡುಬರುತ್ತವೆ. ಏಕೆಂದರೆ ಸೃಷ್ಟಿಮಾಡಲ್ಪಟ್ಟವುಗಳಿಂದ ಆತನ ಅನಂತ ಶಕ್ತಿ ಮತ್ತು ದೇವತ್ವವನ್ನು ಸಹ ಗ್ರಹಿಸಲಾಗುತ್ತದೆ.” (ರೋಮನ್ನರಿಗೆ 1:20) ಪ್ರಕೃತಿಯನ್ನು ಜಾಗರೂಕತೆಯಿಂದ ಅವಲೋಕಿಸುವ ಮೂಲಕ ನಮ್ಮ ನಿರ್ಮಾಣಿಕನ ವಿವೇಕ ಮತ್ತು ಶಕ್ತಿಯ ಬಗ್ಗೆ ನಾವು ಹೆಚ್ಚನ್ನು ಕಲಿಯಬಲ್ಲೆವು.—ಕೀರ್ತನೆ 104:24; ಯೆಶಾಯ 40:26.
ಆದರೂ ದೇವರ ವ್ಯಕ್ತಿತ್ವದ ಕುರಿತು ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲು ಪ್ರತಿಯೊಬ್ಬನು ದೇವರ ವಾಕ್ಯವಾದ ಬೈಬಲನ್ನು ಓದಿ ಅದನ್ನು ತಾನಾಗಿಯೇ ಪರೀಕ್ಷಿಸುವ ಅಗತ್ಯವಿದೆ. ದೇವರ ವ್ಯಕ್ತಿತ್ವದ ಕುರಿತು ನಿಮ್ಮ ಆಲೋಚನೆಯನ್ನು ಬೇರೆಯವರು ರೂಪಿಸುವಂತೆ ಬಿಡಬೇಡಿ. ಬದಲಾಗಿ ಬೈಬಲಿನ ಈ ಸಲಹೆಯನ್ನು ಪಾಲಿಸಿ: “ಈ ವಿಷಯಗಳ ವ್ಯವಸ್ಥೆಯ ಪ್ರಕಾರ ರೂಪಿಸಿಕೊಳ್ಳಲ್ಪಡುವುದನ್ನು ಬಿಟ್ಟು, ದೇವರ ಉತ್ತಮವಾದ, ಸ್ವೀಕೃತವಾದ ಮತ್ತು ಪರಿಪೂರ್ಣವಾದ ಚಿತ್ತವು ಯಾವುದೆಂದು ಪರಿಶೋಧಿಸಿ ತಿಳಿದುಕೊಳ್ಳುವಂತೆ ನಿಮ್ಮ ಮನಸ್ಸನ್ನು ಮಾರ್ಪಡಿಸಿ ನವೀಕರಿಸಿಕೊಳ್ಳಿರಿ.” (ರೋಮನ್ನರಿಗೆ 12:2) ಉದಾಹರಣೆಗೆ, ದೇವರ ಕುರಿತು ಬೈಬಲ್ ತಿಳಿಯಪಡಿಸುವ ಕೆಳಗಿನ ವಾಸ್ತವಾಂಶಗಳನ್ನು ಗಮನಿಸಿ.
ದೇವರಿಗೆ ಒಂದು ವೈಯಕ್ತಿಕ ಹೆಸರಿದೆ. ದೇವರ ವೈಯಕ್ತಿಕ ಹೆಸರು ಮೂಲತಃ ಇಡೀ ಬೈಬಲ್ನಲ್ಲಿ ಸಾವಿರಾರು ಬಾರಿ ಇತ್ತು. ಅನೇಕ ಭಾಷಾಂತರಗಳು ಕೀರ್ತನೆ 83:18ರಲ್ಲಿ ಆ ಹೆಸರನ್ನು ಸೇರಿಸಿವೆ. ಅದನ್ನುವುದು: “ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.”
ಯೆಹೋವನು ಭಾವಪೂರ್ಣನಾದ ದೇವರು. ಮನುಷ್ಯರ ಕ್ರಿಯೆಗಳು ಆತನಿಗೆ ಸಂತೋಷ ಇಲ್ಲವೆ ದುಃಖವನ್ನು ಉಂಟುಮಾಡಬಲ್ಲವು. ಈಜಿಪ್ಟ್ನಲ್ಲಿ ಗುಲಾಮರಾಗಿದ್ದ ಇಸ್ರಾಯೇಲ್ ಜನರನ್ನು ದೇವರು ಬಿಡುಗಡೆ ಮಾಡಿದ ನಂತರ ಅವರು ಕೆಲವೊಮ್ಮೆ ಆತನ ಸುಜ್ಞಾನದ ಮಾತುಗಳನ್ನು ತಿರಸ್ಕರಿಸಿದರು. ಅವರ ಅವಿಧೇಯ ಮಾರ್ಗವು ಆತನನ್ನು ‘ನೋಯಿಸಿತು.’ ಅವರು ತಮ್ಮ ಕೃತ್ಯಗಳಿಂದ “ಇಸ್ರಾಯೇಲ್ಯರ ಸದಮಲಸ್ವಾಮಿಯನ್ನು ಕರಕರೆಗೊಳಿಸಿದರು.”—ಕೀರ್ತನೆ 78:40, 41.
ಯೆಹೋವನಿಗೆ ನಮ್ಮಲ್ಲಿ ಪ್ರತಿಯೊಬ್ಬರ ಮೇಲೂ ಕಳಕಳಿಯಿದೆ. ಯೇಸು ತನ್ನ ಶಿಷ್ಯರೊಂದಿಗೆ ಮಾತಾಡುತ್ತಿದ್ದಾಗ ಅಂದದ್ದು: “ಸಣ್ಣ ಮೌಲ್ಯವಿರುವ ಒಂದು ಕಾಸಿಗೆ ಎರಡು ಗುಬ್ಬಿಗಳು ಮಾರಲ್ಪಡುವುದಿಲ್ಲವೇ? ಹಾಗಿದ್ದರೂ ನಿಮ್ಮ ತಂದೆಗೆ ತಿಳಿಯದೆ ಅವುಗಳಲ್ಲಿ ಒಂದೂ ನೆಲಕ್ಕೆ ಬೀಳುವುದಿಲ್ಲ. ನಿಮ್ಮ ತಲೆಯ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಆದುದರಿಂದ ಭಯಪಡಬೇಡಿರಿ; ನೀವು ಅನೇಕ ಗುಬ್ಬಿಗಳಿಗಿಂತ ಹೆಚ್ಚು ಬೆಲೆಯುಳ್ಳವರು.”—ಮತ್ತಾಯ 10:29-31.
ದೇವರು ಒಂದು ಕುಲ ಅಥವಾ ಸಂಸ್ಕೃತಿಯನ್ನು ಇನ್ನೊಂದಕ್ಕಿಂತ ಶ್ರೇಷ್ಠವೆಂದು ಎಣಿಸುವುದಿಲ್ಲ. ಅಪೊಸ್ತಲ ಪೌಲನು ಅಥೇನ್ಸ್ ಪಟ್ಟಣದ ಗ್ರೀಕ್ ಜನರಿಗೆ ಹೇಳಿದ್ದು: “[ದೇವರು] ಒಬ್ಬ ಮನುಷ್ಯನಿಂದಲೇ ಪ್ರತಿಯೊಂದು ಮಾನವ ಜನಾಂಗವನ್ನು ನಿರ್ಮಿಸಿ ಅವರು ಭೂಮಿಯಾದ್ಯಂತ ವಾಸಿಸುವಂತೆ ಮಾಡಿದನು.” ಅವನು ಮತ್ತೂ ಹೇಳಿದ್ದು: “[ದೇವರು] ನಮ್ಮಲ್ಲಿ ಪ್ರತಿಯೊಬ್ಬನಿಗೂ ಬಹಳ ದೂರವಾಗಿರುವುದಿಲ್ಲ.” (ಅ. ಕಾರ್ಯಗಳು 17:26, 27) ಯೇಸುವಿನ ಶಿಷ್ಯ ಅಪೊಸ್ತಲ ಪೇತ್ರನು ಅಂದದ್ದು: “ದೇವರು ಪಕ್ಷಪಾತಿಯಲ್ಲ . . . ಆದರೆ ಯಾವ ಜನಾಂಗದಲ್ಲೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವನು ಆತನಿಗೆ ಸ್ವೀಕಾರಾರ್ಹನಾಗಿದ್ದಾನೆ.”—ಅ. ಕಾರ್ಯಗಳು 10:34, 35.
ಪ್ರಯೋಜನಗಳು: ಕೆಲವರಿಗೆ “ದೇವರ ವಿಷಯದಲ್ಲಿ ಹುರುಪಿದೆ . . . ಆದರೆ ಅವರ ಹುರುಪು ನಿಷ್ಕೃಷ್ಟ ಜ್ಞಾನಕ್ಕನುಸಾರವಾದುದಲ್ಲ.” (ರೋಮನ್ನರಿಗೆ 10:2) ಬೈಬಲ್ ದೇವರ ಕುರಿತು ನಿಜವಾಗಿ ಏನನ್ನು ಕಲಿಸುತ್ತದೆಂದು ನಿಮಗೆ ತಿಳಿದಿರುವುದಾದರೆ, ನೀವು ಮೋಸ ಹೋಗದೆ ಇರುವಿರಿ ಮತ್ತು “ದೇವರ ಸಮೀಪಕ್ಕೆ ಬರಲು” ಶಕ್ತರಾಗುವಿರಿ.—ಯಾಕೋಬ 4:8. (w09 5/1)
ಹೆಚ್ಚಿನ ಮಾಹಿತಿಗಾಗಿ, ಬೈಬಲ್ ನಿಜವಾಗಿ ಏನನ್ನು ಬೋಧಿಸುತ್ತದೆ? a ಪುಸ್ತಕದ “ದೇವರ ಕುರಿತಾದ ಸತ್ಯ” ಎಂಬ 1ನೇ ಅಧ್ಯಾಯ ನೋಡಿ.
[ಪಾದಟಿಪ್ಪಣಿ]
a ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ
[ಪುಟ 6ರಲ್ಲಿರುವ ಚಿತ್ರವಿವರಣೆ]
ದೇವರ ಜ್ಞಾನವನ್ನು ಪಡೆಯುವ ಒಂದು ವಿಧವು ಆತನ ಸೃಷ್ಟಿಯನ್ನು ಗಮನಿಸುವ ಮೂಲಕವೇ