ಭೂಮಿಯ ಮೇಲೆ ನಿತ್ಯಜೀವ—ಪುನಃ ಬೆಳಕಿಗೆ ಬಂದ ನಿರೀಕ್ಷೆ
“ದಾನಿಯೇಲನೇ, ನೀನು ಈ ಮಾತುಗಳನ್ನು ಮುಚ್ಚಿಡು, . . . ಅಂತ್ಯಕಾಲದ ವರೆಗೆ ಮರೆಯಾಗಿರಲಿ; ಬಹು ಜನರು ಅತ್ತಿತ್ತ ತಿರುಗುವರು, ತಿಳುವಳಿಕೆಯು ಹೆಚ್ಚುವದು.”—ದಾನಿ. 12:4.
1, 2. ಈ ಲೇಖನದಲ್ಲಿ ಯಾವ ಪ್ರಶ್ನೆಗಳನ್ನು ಪರಿಗಣಿಸಲಾಗುವುದು?
ಪರದೈಸ್ ಭೂಮಿಯ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆಗಿರುವ ಶಾಸ್ತ್ರಾಧಾರವನ್ನು ಇಂದು ಲಕ್ಷಾಂತರ ಮಂದಿ ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದಾರೆ. (ಪ್ರಕ. 7:9, 17) ಕೆಲವೊಂದು ವರ್ಷಗಳ ತನಕ ಜೀವಿಸಿ ನಂತರ ಸಾಯಲಿಕ್ಕಲ್ಲ ಬದಲಾಗಿ ಸದಾಕಾಲ ಜೀವಿಸಲು ಮನುಷ್ಯನನ್ನು ಸೃಷ್ಟಿಸಲಾಯಿತು ಎಂಬುದನ್ನು ಮಾನವ ಇತಿಹಾಸದ ಆರಂಭದಲ್ಲೇ ದೇವರು ಪ್ರಕಟಪಡಿಸಿದನು.—ಆದಿ. 1:26-28.
2 ಆದಾಮನು ಕಳೆದುಕೊಂಡ ಪರಿಪೂರ್ಣತೆಯನ್ನು ಮಾನವಕುಲ ಪುನಃ ಪಡೆಯಲಿದೆ ಎಂಬುದು ಇಸ್ರಾಯೇಲ್ಯರ ನಿರೀಕ್ಷೆಯ ಭಾಗವಾಗಿತ್ತು. ಪರದೈಸ್ ಭೂಮಿಯ ಮೇಲೆ ಮಾನವಕುಲಕ್ಕೆ ನಿತ್ಯಜೀವ ಸಿಗುವಂತೆ ದೇವರು ಹೇಗೆ ಸಾಧ್ಯಗೊಳಿಸುತ್ತಾನೆ ಎಂಬುದನ್ನು ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳು ವಿವರಿಸುತ್ತವೆ. ಹಾಗಿರುವಾಗ ಇದನ್ನು ಪುನಃ ಬೆಳಕಿಗೆ ಬಂದ ನಿರೀಕ್ಷೆಯೆಂದು ಏಕೆ ಹೇಳುತ್ತೇವೆ? ಅದನ್ನು ಹೇಗೆ ಬೆಳಕಿಗೆ ತರಲಾಯಿತು ಮತ್ತು ಹೇಗೆ ಲಕ್ಷಾಂತರ ಮಂದಿಗೆ ಪ್ರಕಟಿಸಲಾಯಿತು?
ಮರೆಮಾಡಲ್ಪಟ್ಟ ನಿರೀಕ್ಷೆ
3. ಭೂಮಿಯ ಮೇಲೆ ನಿತ್ಯಜೀವದ ಕುರಿತ ಮಾನವಕುಲದ ನಿರೀಕ್ಷೆ ಮರೆಮಾಡಲ್ಪಟ್ಟಿರುವುದು ಆಶ್ಚರ್ಯಕರವಲ್ಲವೇಕೆ?
3 ಸುಳ್ಳು ಪ್ರವಾದಿಗಳು ತನ್ನ ಬೋಧನೆಗಳನ್ನು ಭ್ರಷ್ಟಗೊಳಿಸಿ ಹೆಚ್ಚಿನವರನ್ನು ತಪ್ಪುದಾರಿಗೆಳೆಯುವರೆಂದು ಯೇಸು ಮುಂತಿಳಿಸಿದ್ದನು. (ಮತ್ತಾ. 24:11) ಅಪೊಸ್ತಲ ಪೇತ್ರನು, “ನಿಮ್ಮಲ್ಲಿಯೂ ಸುಳ್ಳು ಬೋಧಕರು ಏಳುವರು” ಎಂದು ಕ್ರೈಸ್ತರನ್ನು ಎಚ್ಚರಿಸಿದನು. (2 ಪೇತ್ರ 2:1) ಅಪೊಸ್ತಲ ಪೌಲನು, “ಜನರು ಸ್ವಸ್ಥಬೋಧನೆಯನ್ನು ಸಹಿಸಿಕೊಳ್ಳದಿರುವಂಥ ಸಮಯಾವಧಿಯು ಬರುತ್ತದೆ; ಆ ಸಮಯದಲ್ಲಿ ಜನರು ತಮ್ಮ ಸ್ವಂತ ಇಚ್ಛೆಗಳಿಗನುಸಾರ ತಮ್ಮ ಕಿವಿಗಳನ್ನು ಪುಳಕಗೊಳಿಸುವ ವಿಷಯಗಳನ್ನು ಕೇಳಿಸಿಕೊಳ್ಳಲು ತಮಗಾಗಿ ಬೋಧಕರನ್ನು ಕೂಡಿಸಿಕೊಳ್ಳುವರು” ಎಂದು ಹೇಳಿದನು. (2 ತಿಮೊ. 4:3, 4) ಸೈತಾನನು ಜನರನ್ನು ತಪ್ಪುದಾರಿಗೆಳೆಯುತ್ತಿದ್ದಾನೆ ಮತ್ತು ಅವನು ಮಾನವನಿಗಾಗಿರುವ ಹಾಗೂ ಭೂಮಿಗಾಗಿರುವ ದೇವರ ಉದ್ದೇಶದ ಕುರಿತ ಹೃದಯಸ್ಪರ್ಶಿ ಸತ್ಯವನ್ನು ಮರೆಮಾಡಲು ಧರ್ಮಭ್ರಷ್ಟ ಕ್ರೈಸ್ತತ್ವವನ್ನು ಬಳಸಿದ್ದಾನೆ.—2 ಕೊರಿಂಥ 4:3, 4 ಓದಿ.
4. ಮಾನವಕುಲದ ಯಾವ ನಿರೀಕ್ಷೆಯನ್ನು ಧರ್ಮಭ್ರಷ್ಟ ಧಾರ್ಮಿಕ ಮುಖಂಡರು ತಿರಸ್ಕರಿಸಿದ್ದಾರೆ?
4 ದೇವರ ರಾಜ್ಯವು ಸ್ವರ್ಗದಲ್ಲಿರುವ ಒಂದು ಸರಕಾರವಾಗಿದ್ದು ಎಲ್ಲಾ ಮಾನವ ಆಳ್ವಿಕೆಗಳನ್ನು ಭಂಗಪಡಿಸಿ ನಿರ್ನಾಮಮಾಡುವುದೆಂದು ಶಾಸ್ತ್ರವಚನಗಳು ವಿವರಿಸುತ್ತವೆ. (ದಾನಿ. 2:44) ಕ್ರಿಸ್ತನ ಸಾವಿರ ವರ್ಷದಾಳಿಕೆಯಲ್ಲಿ ಸೈತಾನನನ್ನು ಅಗಾಧ ಸ್ಥಳದಲ್ಲಿ ನಿರ್ಬಂಧಿಸಲಾಗುವುದು, ಮೃತರ ಪುನರುತ್ಥಾನವಾಗುವುದು ಮತ್ತು ಮಾನವಕುಲವನ್ನು ಭೂಮಿಯ ಮೇಲೆ ಪರಿಪೂರ್ಣತೆಗೇರಿಸಲಾಗುವುದು. (ಪ್ರಕ. 20:1-3, 6, 12; 21:1-4) ಆದರೆ ಕ್ರೈಸ್ತಪ್ರಪಂಚದ ಧರ್ಮಭ್ರಷ್ಟ ಧಾರ್ಮಿಕ ಮುಖಂಡರು ಇತರ ಬೋಧನೆಗಳನ್ನು ಕಲಿಸುತ್ತಿದ್ದಾರೆ. ಉದಾಹರಣೆಗೆ, ಮೂರನೆಯ ಶತಮಾನದ ಚರ್ಚ್ ಬರಹಗಾರನಾಗಿದ್ದ ಅಲೆಕ್ಸಾಂಡ್ರಿಯದ ಆರಿಜನ್ ಎಂಬವನು, ಸಹಸ್ರವರ್ಷದಾಳಿಕೆಯು ಭೌಮಿಕ ಆಶೀರ್ವಾದಗಳನ್ನು ತರುವುದೆಂದು ನಂಬುತ್ತಿದ್ದ ಜನರನ್ನು ಖಂಡಿಸುತ್ತಿದ್ದನು. ಕ್ಯಾಥೊಲಿಕ್ ದೇವತಾಶಾಸ್ತ್ರಜ್ಞನಾದ ಹಿಪ್ಪೋದ ಅಗಸ್ಟಿನ್ಗೂ (ಸಾ.ಶ. 354-430) “ಸಹಸ್ರವರ್ಷದಾಳಿಕೆಯಿಲ್ಲ ಎಂಬ ನಂಬಿಕೆಯಿತ್ತು” ಎಂಬದಾಗಿ ಕ್ಯಾಥೊಲಿಕ್ ಎನ್ಸೈಕ್ಲಪೀಡಿಯ ಹೇಳುತ್ತದೆ.a
5, 6. ಆರಿಜನ್ ಮತ್ತು ಅಗಸ್ಟಿನ್ ಸಹಸ್ರವರ್ಷದಾಳಿಕೆಯ ಬೋಧನೆಯನ್ನು ವಿರೋಧಿಸಿದ್ದೇಕೆ?
5 ಆರಿಜನ್ ಮತ್ತು ಅಗಸ್ಟಿನ್ ಸಹಸ್ರವರ್ಷದಾಳಿಕೆಯ ಬೋಧನೆಯನ್ನು ವಿರೋಧಿಸಿದ್ದೇಕೆ? ಆರಿಜನ್ ಗ್ರೀಕ್ ಸಂಪ್ರದಾಯದಿಂದ ಅಮರ ಆತ್ಮದ ಬೋಧನೆಯನ್ನು ಸ್ವೀಕರಿಸಿದ್ದನು. ಆತ್ಮದ ಕುರಿತ ಪ್ಲೇಟೋನ ವಿಚಾರಧಾರೆಗಳಿಂದ ತುಂಬ ಪ್ರಭಾವಿತನಾಗಿದ್ದ ಅವನು “ಅಮರ ಆತ್ಮ ಮತ್ತು ಅದರ ಅಂತ್ಯಪರಿಣಾಮದ ಕುರಿತ ಪ್ಲೇಟೋನ ಬೋಧನೆಯನ್ನು ಕ್ರೈಸ್ತ ಬೋಧನೆಗಳೊಳಗೆ ಸೇರಿಸಿದನು” ಎಂದು ದೇವತಾಶಾಸ್ತ್ರಜ್ಞರಾದ ವರ್ನರ್ ಯೆಗ ತಿಳಿಸುತ್ತಾರೆ. ಆದ್ದರಿಂದಲೇ ಸಹಸ್ರವರ್ಷದಾಳಿಕೆಯ ಆಶೀರ್ವಾದಗಳು ಭೂಮಿಯಲ್ಲಲ್ಲ ಬದಲಾಗಿ ಸ್ವರ್ಗದಲ್ಲಿ ಸಿಗುವವೆಂದು ಆರಿಜನ್ ಕಲಿಸಿದನು.
6 ಅಗಸ್ಟಿನ್ ತನ್ನ 33ರ ಪ್ರಾಯದಲ್ಲಿ “ಕ್ರೈಸ್ತ ಧರ್ಮಕ್ಕೆ” ಮತಾಂತರಗೊಳ್ಳುವ ಮೊದಲು, ನವಪ್ಲೇಟೋವಾದದ (ಸಾ.ಶ. 3ನೇ ಶತಮಾನದಲ್ಲಿ ಪ್ಲೋಟೈನಸ್ ಎಂಬವನು ಪ್ಲೇಟೋನ ತತ್ತ್ವಜ್ಞಾನವನ್ನಾಧರಿಸಿ ವಿಕಸಿಸಿದ ಸಿದ್ಧಾಂತ) ಅನುಯಾಯಿಯಾಗಿದ್ದನು. ಮತಾಂತರಗೊಂಡ ನಂತರವೂ ನವಪ್ಲೇಟೋವಾದವು ಅವನ ಯೋಚನೆಗಳನ್ನು ಪ್ರಭಾವಿಸುತ್ತಿತ್ತು. ಅಗಸ್ಟಿನ್ ಬಗ್ಗೆ ದ ನ್ಯೂ ಎನ್ಸೈಕ್ಲಪೀಡಿಯ ಬ್ರಿಟ್ಯಾನಿಕ ಹೇಳುವುದು: “ಅವನು ಹೊಸ ಒಡಂಬಡಿಕೆಯ ಧರ್ಮವನ್ನು ಗ್ರೀಕ್ ತತ್ವಜ್ಞಾನದ ಪ್ಲೇಟೋವಾದದೊಂದಿಗೆ ಪೂರ್ತಿಯಾಗಿ ಬೆರೆಸಿದನು.” ಪ್ರಕಟನೆ 20ನೇ ಅಧ್ಯಾಯದಲ್ಲಿ ಚಿತ್ರಿಸಲಾಗಿರುವ ಸಾವಿರ ವರ್ಷದಾಳಿಕೆಯು “ಒಂದು ಸಾಂಕೇತಿಕ ನಿರೂಪಣೆಯಾಗಿದೆ” ಎಂದು ಅಗಸ್ಟಿನ್ ವಿವರಿಸಿರುವುದಾಗಿ ದ ಕ್ಯಾಥೊಲಿಕ್ ಎನ್ಸೈಕ್ಲಪೀಡಿಯ ತಿಳಿಸುತ್ತದೆ. ಅದು ಕೂಡಿಸಿ ಹೇಳುವುದು: “ಈ ವಿವರಣೆಯನ್ನು . . . ತರುವಾಯ ಬಂದಂಥ ಪಾಶ್ಚಾತ್ಯ ದೇವತಾಶಾಸ್ತ್ರಜ್ಞರು ತಮ್ಮದಾಗಿಸಿಕೊಂಡರು. ಅಂದಿನಿಂದ, ಭೂಮಿಯ ಮೇಲಿನ ಸಹಸ್ರವರ್ಷದಾಳಿಕೆಯ ಕುರಿತು ಆರಂಭದಲ್ಲಿದ್ದ ನಂಬಿಕೆಗೆ ಯಾವ ಬೆಂಬಲವೂ ಸಿಗಲಿಲ್ಲ.”
7. ಭೂಮಿಯ ಮೇಲಿನ ನಿತ್ಯಜೀವದ ಕುರಿತ ಮಾನವನ ನಿರೀಕ್ಷೆಯನ್ನು ಯಾವ ಸುಳ್ಳು ನಂಬಿಕೆಯು ಹಾಳುಗೆಡವಿದೆ, ಮತ್ತು ಹೇಗೆ?
7 ಮಾನವ ದೇಹದಲ್ಲಿ ಅಮರ ಆತ್ಮ ವಾಸಿಸುತ್ತದೆ ಎಂಬ ನಂಬಿಕೆಯು ಪ್ರಾಚೀನ ಬಾಬೆಲ್ನಲ್ಲಿ ಚಾಲ್ತಿಯಲ್ಲಿದ್ದು, ತದನಂತರ ಲೋಕದಾದ್ಯಂತ ಹರಡಿತು. ಈ ನಂಬಿಕೆಯೇ ಭೂಮಿಯ ಮೇಲಿನ ನಿತ್ಯಜೀವದ ಕುರಿತ ಮಾನವಕುಲದ ನಿರೀಕ್ಷೆಯನ್ನು ಹಾಳುಗೆಡವಿತು. ಕ್ರೈಸ್ತಪ್ರಪಂಚವು ಆ ಸಿದ್ಧಾಂತವನ್ನು ತನ್ನದಾಗಿಸಿಕೊಂಡಾಗ, ದೇವತಾಶಾಸ್ತ್ರಜ್ಞರು ಸ್ವರ್ಗೀಯ ನಿರೀಕ್ಷೆಯನ್ನು ವಿವರಿಸುವ ವಚನಗಳನ್ನು ತಿರುಚಿ ಒಳ್ಳೇ ಮನುಷ್ಯರೆಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆಂದು ಕಲಿಸಿದರು. ಈ ಸಿದ್ಧಾಂತಕ್ಕನುಸಾರ, ಭೂಮಿಯ ಮೇಲಿನ ಮಾನವ ಜೀವನವು ನಶ್ವರವಾಗಿದ್ದು, ಮಾನವನು ಸ್ವರ್ಗೀಯ ಜೀವನಕ್ಕೆ ಯೋಗ್ಯನೋ ಇಲ್ಲವೋ ಎಂಬುದನ್ನು ಪರೀಕ್ಷಿಸಲಿಕ್ಕಾಗಿದೆ ಅಷ್ಟೇ. ಇಂಥದ್ದೇ ಸನ್ನಿವೇಶ, ಭೂಮಿಯ ಮೇಲಿನ ನಿತ್ಯಜೀವದ ಕುರಿತ ಆರಂಭದ ಯೆಹೂದ್ಯರ ನಿರೀಕ್ಷೆಗೂ ಎದುರಾಯಿತು. ಯೆಹೂದ್ಯರು ಕ್ರಮೇಣ ಆತ್ಮದ ಅಮರತ್ವದ ಕುರಿತಾದ ಗ್ರೀಕರ ಅಭಿಪ್ರಾಯವನ್ನು ತಮ್ಮದಾಗಿಸುತ್ತಾ ಹೋದಂತೆ ಭೂಮಿಯ ಮೇಲಿನ ಜೀವನದ ಕುರಿತ ಅವರ ಮೂಲ ನಿರೀಕ್ಷೆಯು ಮಾಸಿಹೋಯಿತು. ಮಾನವನ ಬಗ್ಗೆ ಬೈಬಲ್ ಏನನ್ನುತ್ತದೊ ಅದಕ್ಕೆ ಹೋಲಿಸುವಾಗ ಇದೆಷ್ಟು ಭಿನ್ನವಾಗಿದೆ! ಮಾನವನು ಭೌತಿಕ ಜೀವಿಯಾಗಿದ್ದಾನೇ ಹೊರತು ಆತ್ಮಜೀವಿಯಲ್ಲ. ಯೆಹೋವನು ಪ್ರಥಮ ಮಾನವನಿಗೆ, “ನೀನು ಮಣ್ಣೇ” ಎಂದು ಹೇಳಿದನು. (ಆದಿ. 3:19) ಮಾನವನ ನಿತ್ಯಬೀಡು ಸ್ವರ್ಗವಲ್ಲ ಬದಲಾಗಿ ಭೂಮಿಯಾಗಿದೆ.—ಕೀರ್ತನೆ 104:5; 115:16 ಓದಿ.
ಕತ್ತಲಲ್ಲಿ ಪ್ರಕಾಶಿಸಿದ ಸತ್ಯ
8. ಮಾನವನ ನಿರೀಕ್ಷೆಯ ಕುರಿತು 1600ರ ದಶಕದ ಕೆಲವು ವಿದ್ವಾಂಸರು ಏನಂದರು?
8 ಕ್ರೈಸ್ತರೆಂದು ಹೇಳಿಕೊಳ್ಳುವ ಹೆಚ್ಚಿನ ಧರ್ಮಗಳು ಭೂಮಿಯ ಮೇಲಿನ ನಿತ್ಯಜೀವದ ನಿರೀಕ್ಷೆಯ ಕುರಿತು ಬೋಧಿಸದಿದ್ದರೂ ಸತ್ಯವನ್ನು ಮರೆಮಾಚುವುದರಲ್ಲಿ ಸೈತಾನನು ಸದಾ ಯಶಸ್ಸು ಕಾಣಲಿಲ್ಲ. ವರ್ಷಗಳಾದ್ಯಂತ, ಬೈಬಲನ್ನು ಜಾಗರೂಕತೆಯಿಂದ ಓದುತ್ತಿದ್ದ ಕೆಲವರು ದೇವರು ಹೇಗೆ ಮಾನವಕುಲವನ್ನು ಪರಿಪೂರ್ಣತೆಗೇರಿಸಲಿದ್ದಾನೆ ಎಂಬುದರ ಕುರಿತ ಕೆಲವೊಂದು ಅಂಶಗಳನ್ನು ಗ್ರಹಿಸಿದಾಗ ಸತ್ಯದ ಪ್ರಕಾಶವನ್ನು ನೋಡಿದರು. (ಕೀರ್ತ. 97:11; ಮತ್ತಾ. 7:13, 14; 13:37-39) ಹದಿನೇಳನೇ ಶತಮಾನದಷ್ಟಕ್ಕೆ ಬೈಬಲ್ ಭಾಷಾಂತರ ಹಾಗೂ ಮುದ್ರಣದಿಂದಾಗಿ ಪವಿತ್ರ ಶಾಸ್ತ್ರವಚನಗಳು ಹೆಚ್ಚು ವ್ಯಾಪಕವಾಗಿ ಲಭ್ಯವಾದವು. 1651ರಲ್ಲಿ ಒಬ್ಬ ವಿದ್ವಾಂಸನು ಬರೆದದ್ದೇನೆಂದರೆ, ಆದಾಮನಿಂದಾಗಿ ಮನುಷ್ಯರು “ಪರದೈಸನ್ನು ಮತ್ತು ಭೂಮಿಯ ಮೇಲಿನ ನಿತ್ಯಜೀವವನ್ನು ಕಳೆದುಕೊಂಡರು.” ಆದ್ದರಿಂದ ಕ್ರಿಸ್ತನ ಮೂಲಕ “ಎಲ್ಲ ಮಾನವರು ಭೂಮಿಯ ಮೇಲೆಯೇ ಜೀವಿಸುವಂತೆ ಮಾಡಲಾಗುವುದು; ಇಲ್ಲವಾದಲ್ಲಿ ಹೋಲಿಕೆಗಳು ಸರಿಹೊಂದವು.” (1 ಕೊರಿಂಥ 15:21, 22 ಓದಿ.) ಹೆಸರಾಂತ ಆಂಗ್ಲ ಕವಿ ಜಾನ್ ಮಿಲ್ಟನ್ (1608-1674), ಕಳೆದುಹೋದ ಪರದೈಸ್ ಮತ್ತು ಅದರ ಮುಂದುವರಿದ ಭಾಗವಾದ ಮರಳಿಪಡೆದ ಪರದೈಸ್ ಎಂಬ ಕೃತಿಗಳಲ್ಲಿ, ನಂಬಿಗಸ್ತ ಜನರು ಭೂಪರದೈಸಿನಲ್ಲಿ ಪಡೆಯಲಿರುವ ಪ್ರತಿಫಲದ ಕುರಿತು ಬರೆದನು. ಮಿಲ್ಟನ್ ತನ್ನ ಜೀವನದ ಹೆಚ್ಚಿನ ಸಮಯವನ್ನು ಬೈಬಲ್ ಅಧ್ಯಯನಕ್ಕೆ ಮುಡಿಪಾಗಿಟ್ಟರೂ, ಕ್ರಿಸ್ತನ ಸಾನ್ನಿಧ್ಯದ ತನಕ ಶಾಸ್ತ್ರಾಧಾರಿತ ಸತ್ಯ ಪೂರ್ತಿಯಾಗಿ ಅರ್ಥವಾಗದು ಎಂಬುದು ಅವನಿಗೆ ತಿಳಿದಿತ್ತು.
9, 10. (ಎ) ಮಾನವಕುಲದ ನಿರೀಕ್ಷೆಯ ಕುರಿತು ಐಸಾಕ್ ನ್ಯೂಟನ್ ಏನನ್ನು ಬರೆದಿದ್ದಾರೆ? (ಬಿ) ಕ್ರಿಸ್ತನ ಸಾನ್ನಿಧ್ಯಕ್ಕೆ ಇನ್ನೂ ಅನೇಕ ಶತಮಾನಗಳಿವೆಯೆಂದು ನ್ಯೂಟನ್ ಭಾವಿಸಿದ್ದೇಕೆ?
9 ಪ್ರಸಿದ್ಧ ಗಣಿತಜ್ಞರಾದ ಸರ್ ಐಸಾಕ್ ನ್ಯೂಟನ್ರಿಗೂ (1642-1727) ಬೈಬಲ್ನಲ್ಲಿ ಗಾಢಾಸಕ್ತಿಯಿತ್ತು. ಪವಿತ್ರ ಜನರು ಸ್ವರ್ಗೀಯ ಜೀವನಕ್ಕೆ ಎಬ್ಬಿಸಲ್ಪಡುವರು ಮತ್ತು ಕ್ರಿಸ್ತನೊಂದಿಗೆ ಅದೃಶ್ಯವಾಗಿ ಆಳ್ವಿಕೆ ನಡೆಸುವರು ಎಂಬುದನ್ನು ಅವರು ಗ್ರಹಿಸಿದ್ದರು. (ಪ್ರಕ. 5:9, 10) ರಾಜ್ಯದ ಪ್ರಜೆಗಳ ಕುರಿತು ಅವರು ಬರೆದದ್ದು: “ನ್ಯಾಯತೀರ್ಪಿನ ದಿನದ ನಂತರವೂ ಮನುಷ್ಯರು ಭೂಮಿಯ ಮೇಲೆಯೇ ಜೀವಿಸುವರು; ಕೇವಲ 1,000 ವರ್ಷವಲ್ಲ ಬದಲಾಗಿ ಸದಾಕಾಲ ಜೀವಿಸುವರು.”
10 ಕ್ರಿಸ್ತನ ಸಾನ್ನಿಧ್ಯತೆಗೆ ಇನ್ನೂ ಅನೇಕ ಶತಮಾನಗಳಿವೆ ಎಂದು ನ್ಯೂಟನ್ ಭಾವಿಸಿದ್ದರು. ಇತಿಹಾಸಕಾರ ಸ್ಟೀವನ್ ಸ್ನೋಬೆಲೆನ್ ಹೇಳಿದ್ದು: “ನ್ಯೂಟನ್ ತಮ್ಮ ಸುತ್ತಲೂ ಇದ್ದ ತ್ರಯೈಕ್ಯದ ಧರ್ಮಭ್ರಷ್ಟತೆಯನ್ನು ನೋಡಿ ತುಂಬ ನಿರಾಶರಾಗಿದ್ದರು. ದೇವರ ರಾಜ್ಯವು ಬಹುದೂರದ ಭವಿಷ್ಯತ್ತಿನಲ್ಲಿ ಬರಲಿದೆಯೆಂದು ನ್ಯೂಟನ್ ಭಾವಿಸಲು ಇದು ಒಂದು ಕಾರಣ.” ಸುವಾರ್ತೆಯು ಆಗಲೂ ಮರೆಯಲ್ಲಿತ್ತು. ಕ್ರೈಸ್ತರೆಂದು ಹೇಳಿಕೊಳ್ಳುವ ಯಾವುದೇ ಗುಂಪು ಅದನ್ನು ಸಾರುತ್ತಿರಲಿಲ್ಲ ಎಂಬುದನ್ನು ನ್ಯೂಟನ್ ಗಮನಿಸಿದರು. ಅವರು ಬರೆದದ್ದು: “ದಾನಿಯೇಲ ಮತ್ತು ಪ್ರಕಟನೆ ಪುಸ್ತಕದಲ್ಲಿ ದಾಖಲಾಗಿರುವ ಯೋಹಾನನ ಪ್ರವಾದನೆಗಳನ್ನು ಅಂತ್ಯಕಾಲದ ತನಕ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.” ನ್ಯೂಟನ್ ವಿವರಿಸಿದ್ದು: “ದಾನಿಯೇಲನು ಹೇಳಿದಂತೆ, ‘ಬಹು ಜನರು ಅತ್ತಿತ್ತ ತಿರುಗುವರು, ತಿಳುವಳಿಕೆಯು ಹೆಚ್ಚುವದು.’ ಏಕೆಂದರೆ ಮಹಾ ಸಂಕಟ ಹಾಗೂ ಲೋಕದ ಅಂತ್ಯದ ಮುಂಚೆ ಸುವಾರ್ತೆಯು ಎಲ್ಲಾ ಜನಾಂಗಗಳಿಗೆ ಸಾರಲ್ಪಡಬೇಕು. ಆ ಅಂತ್ಯವು ಬರುವ ಮುಂಚೆ ಸುವಾರ್ತೆ ಸಾರಲ್ಪಡದಿದ್ದರೆ, ತಾಳೆಯ ಗರಿಗಳನ್ನು ಹಿಡಿದುಕೊಂಡಿದ್ದು ಮಹಾ ಸಂಕಟವನ್ನು ಪಾರಾಗಿಬರುವ ಸಮೂಹದಲ್ಲಿ ಎಲ್ಲ ದೇಶಗಳ ಅಗಣಿತ ಸಂಖ್ಯೆಯ ಜನರು ಸೇರಿರಲು ಸಾಧ್ಯವಿಲ್ಲ.”—ದಾನಿ. 12:4; ಮತ್ತಾ. 24:14; ಪ್ರಕ. 7:9, 10.
11. ನ್ಯೂಟನ್ ಮತ್ತು ಮಿಲ್ಟನ್ರ ಸಮಯಗಳಲ್ಲೂ ಹೆಚ್ಚಿನ ಜನರಿಗೆ ಮಾನವಕುಲದ ನಿರೀಕ್ಷೆಯು ಅಸ್ಪಷ್ಟವಾಗಿ ಉಳಿಯಿತೇಕೆ?
11 ನ್ಯೂಟನ್ ಮತ್ತು ಮಿಲ್ಟನ್ರ ಸಮಯಗಳಲ್ಲಿ ಚರ್ಚಿನ ಅಧಿಕೃತ ಬೋಧನೆಗಳ ವಿರುದ್ಧ ದನಿಯೆತ್ತುವುದು ಅಪಾಯಕಾರಿಯಾಗಿತ್ತು. ಆದ್ದರಿಂದಲೇ, ಅವರ ಬೈಬಲ್ ಸಂಶೋಧನೆಯ ಕುರಿತ ಬರಹಗಳಲ್ಲಿ ಹೆಚ್ಚಿನವು ಅವರ ಮರಣಾನಂತರವೇ ಪ್ರಕಟಿಸಲ್ಪಟ್ಟವು. ಆತ್ಮದ ಅಮರತ್ವದ ಬೋಧನೆಯನ್ನು ತೆಗೆದುಹಾಕಲು 16ನೇ ಶತಮಾನದ ‘ಸುಧಾರಣಾ ಚಳುವಳಿ’ ಸಹ ಸೋತಿತು. ಆದುದರಿಂದ ಪ್ರಚಲಿತ ಪ್ರಾಟೆಸ್ಟಂಟ್ ಚರ್ಚುಗಳು ಕೂಡ, ಸಹಸ್ರವರ್ಷದಾಳಿಕೆಯು ಮುಂದೆ ಬರುವಂಥದ್ದಲ್ಲ ಬದಲಾಗಿ ಈಗಾಗಲೇ ಮುಗಿದುಹೋದ ಅಧ್ಯಾಯವಾಗಿದೆ ಎಂಬ ಅಗಸ್ಟಿನ್ನ ವಿಚಾರವನ್ನು ಬೋಧಿಸುವುದನ್ನು ಮುಂದುವರಿಸಿದವು. ಆದರೆ, ಅಂತ್ಯದ ಸಮಯದಲ್ಲಿ ತಿಳುವಳಿಕೆಯು ಹೆಚ್ಚಾಯಿತೋ?
“ತಿಳುವಳಿಕೆಯು ಹೆಚ್ಚುವದು”
12. ನಿಜ ತಿಳುವಳಿಕೆಯು ಯಾವಾಗ ಹೆಚ್ಚಾಗಲಿತ್ತು?
12 “ಅಂತ್ಯಕಾಲ”ದಲ್ಲಾಗುವ ಒಂದು ಉತ್ತಮ ಬೆಳವಣಿಗೆಯ ಬಗ್ಗೆ ದಾನಿಯೇಲನು ಪ್ರವಾದಿಸಿದನು. (ದಾನಿಯೇಲ 12:3, 4, 9, 10 ಓದಿ.) ಯೇಸು ಹೇಳಿದ್ದು: “ಆ ಸಮಯದಲ್ಲಿ ನೀತಿವಂತರು . . . ಸೂರ್ಯನಷ್ಟು ಪ್ರಕಾಶಮಾನವಾಗಿ ಹೊಳೆಯುವರು.” (ಮತ್ತಾ. 13:43) ಅಂತ್ಯಕಾಲದಲ್ಲಿ ನಿಜ ತಿಳುವಳಿಕೆಯು ಹೇಗೆ ಹೆಚ್ಚಾಗಿದೆ? ಅಂತ್ಯಕಾಲ ಪ್ರಾರಂಭವಾದ 1914ರ ಮುಂಚಿನ ದಶಕಗಳಲ್ಲಾದ ಕೆಲವು ಐತಿಹಾಸಿಕ ಬೆಳವಣಿಗೆಗಳನ್ನು ಪರಿಗಣಿಸಿ.
13. ಪರಿಪೂರ್ಣತೆಯನ್ನು ಪುನಃ ಪಡೆದುಕೊಳ್ಳುವುದರ ಕುರಿತ ವಿಷಯವನ್ನು ಪರಿಶೀಲಿಸಿದ ನಂತರ ಚಾರ್ಲ್ಸ್ ಟೇಸ್ ರಸಲ್ರು ಏನು ಬರೆದರು?
13 ಹತ್ತೊಂಬತ್ತನೇ ಶತಮಾನದ ಕೊನೆಯ ದಶಕಗಳಲ್ಲಿ ಪ್ರಾಮಾಣಿಕ ಮನಸ್ಸಿನ ಹಲವಾರು ವ್ಯಕ್ತಿಗಳು “ಸ್ವಸ್ಥಕರವಾದ ಮಾತುಗಳ ನಮೂನೆಯನ್ನು” ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. (2 ತಿಮೊ. 1:13) ಅಂಥವರಲ್ಲಿ, ಚಾರ್ಲ್ಸ್ ಟೇಸ್ ರಸಲ್ ಒಬ್ಬರು. 1870ರಲ್ಲಿ ಅವರು ಹಾಗೂ ಸತ್ಯವನ್ನು ಹುಡುಕುತ್ತಿದ್ದ ಇನ್ನಿತರರು ಒಟ್ಟುಸೇರಿ ಬೈಬಲ್ ಅಧ್ಯಯನಕ್ಕಾಗಿ ಒಂದು ತರಗತಿಯನ್ನು ಆರಂಭಿಸಿದರು. ಆದಾಮನಿಗಿದ್ದ ಪರಿಪೂರ್ಣತೆಯನ್ನು ಮಾನವಕುಲವು ಪುನಃ ಪಡೆದುಕೊಳ್ಳುವುದರ ಕುರಿತ ವಿಷಯವನ್ನು 1872ರಲ್ಲಿ ಅವರೆಲ್ಲರೂ ಪರಿಶೀಲಿಸಿದರು. ತದನಂತರ ರಸಲ್ರು ಬರೆದದ್ದು: “ಅಲ್ಲಿಯ ವರೆಗೆ ನಾವು, ಈಗ ಪರೀಕ್ಷೆಗೊಳಗಾಗುತ್ತಿರುವ ಚರ್ಚ್ನ (ಅಭಿಷಿಕ್ತ ಕ್ರೈಸ್ತರ ಸಭೆ) ಮತ್ತು ಮಾನವಕುಲದಲ್ಲಿ ಉಳಿದ ನಂಬಿಗಸ್ತ ಜನರ ಪ್ರತಿಫಲದ ನಡುವೆಯಿರುವ ದೊಡ್ಡ ವ್ಯತ್ಯಾಸವನ್ನು ಸ್ಪಷ್ಟವಾಗಿ ಗ್ರಹಿಸಿರಲಿಲ್ಲ.” ಮಾನವಕುಲದ ಉಳಿದ ನಂಬಿಗಸ್ತ ಜನರಿಗೆ ಸಿಗುವ ಪ್ರತಿಫಲವು, “ಅವರ ಮೂಲಪಿತನೂ ಶಿರಸ್ಸೂ ಆದ ಆದಾಮನು ಏದೆನಿನಲ್ಲಿ ಆನಂದಿಸಿದ ಮಾನವ ಪರಿಪೂರ್ಣತೆಯನ್ನು ಪುನಃ ಪಡೆಯುವುದೇ” ಆಗಿದೆ. ತನ್ನ ಬೈಬಲ್ ಅಧ್ಯಯನದಲ್ಲಿ ಇತರರೂ ಸಹಾಯ ಮಾಡಿದರೆಂದು ರಸಲ್ ಒಪ್ಪಿಕೊಂಡರು. ಅವರು ಯಾರಾಗಿದ್ದರು?
14. (ಎ) ಅಪೊಸ್ತಲರ ಕಾರ್ಯಗಳು 3:21ನ್ನು ಹೆನ್ರಿ ಡನ್ ಹೇಗೆ ಅರ್ಥಮಾಡಿಕೊಂಡಿದ್ದರು? (ಬಿ) ಭೂಮಿಯ ಮೇಲೆ ಯಾರು ಶಾಶ್ವತವಾಗಿ ವಾಸಿಸುವರೆಂದು ಡನ್ ಹೇಳಿದರು?
14 ಹೆನ್ರಿ ಡನ್ ಅವರಲ್ಲೊಬ್ಬರು. “ದೇವರು ಪುರಾತನ ಕಾಲದ ತನ್ನ ಪವಿತ್ರ ಪ್ರವಾದಿಗಳ ಬಾಯಿಂದ ಹೇಳಿಸಿದ ಎಲ್ಲ ವಿಷಯಗಳ ಪುನಸ್ಸ್ಥಾಪನೆಯ” ಕುರಿತು ಅವರು ಬರೆದಿದ್ದರು. (ಅ. ಕಾ. 3:21) ಈ ಪುನಸ್ಸ್ಥಾಪನೆಯಲ್ಲಿ, ಕ್ರಿಸ್ತನ ಸಾವಿರ ವರ್ಷದಾಳಿಕೆಯ ಸಮಯದಲ್ಲಿ ಭೂಮಿಯ ಮೇಲೆ ಮಾನವಕುಲವನ್ನು ಪರಿಪೂರ್ಣತೆಗೆ ಏರಿಸುವುದು ಸೇರಿದೆ ಎಂಬುದು ಡನ್ರವರಿಗೆ ತಿಳಿದಿತ್ತು. ಅನೇಕರನ್ನು ತಬ್ಬಿಬ್ಬುಗೊಳಿಸಿದ, ‘ಭೂಮಿಯ ಮೇಲೆ ಯಾರು ಶಾಶ್ವತವಾಗಿ ಜೀವಿಸುವರು?’ ಎಂಬ ಪ್ರಶ್ನೆಯನ್ನೂ ಡನ್ ಪರಿಶೀಲಿಸಿದರು. ಲಕ್ಷಾಂತರ ಮಂದಿಯ ಪುನರುತ್ಥಾನವಾಗುವುದು ಮತ್ತು ಅವರಿಗೆ ಸತ್ಯವನ್ನು ಕಲಿಸಿ, ಕ್ರಿಸ್ತನಲ್ಲಿ ನಂಬಿಕೆಯನ್ನು ಪ್ರದರ್ಶಿಸಲು ಅವಕಾಶ ಕೊಡಲಾಗುವುದೆಂದು ಡನ್ ವಿವರಿಸಿದರು.
15. ಪುನರುತ್ಥಾನದ ಕುರಿತು ಜಾರ್ಜ್ ಸ್ಟೋರ್ಸ್ ಏನನ್ನು ಗ್ರಹಿಸಿದರು?
15 ಜಾರ್ಜ್ ಸ್ಟೋರ್ಸ್ ಎಂಬವರು ಸಹ 1870ರಲ್ಲಿ, ಅನೀತಿವಂತರನ್ನು ಪುರುತ್ಥಾನಗೊಳಿಸಲಾಗುವುದು ಮತ್ತು ಅವರಿಗೆ ನಿತ್ಯಜೀವವನ್ನು ಪಡೆಯುವ ಒಂದು ಅವಕಾಶ ಸಿಗುವುದೆಂಬ ತೀರ್ಮಾನಕ್ಕೆ ಬಂದರು. ಪುನರುತ್ಥಾನಗೊಂಡವನೊಬ್ಬನು ತನಗೆ ಸಿಗುವ ಈ ಅವಕಾಶವನ್ನು ಬಳಸಿಕೊಳ್ಳದಿರುವಲ್ಲಿ ಆ “‘ಪಾಪಿಷ್ಠನಿಗೆ ನೂರು ವರುಷ’ ಆಗಿದ್ದರೂ ಮರಣಹೊಂದುವನು” ಎಂಬುದನ್ನೂ ಅವರು ಶಾಸ್ತ್ರವಚನಗಳಿಂದ ಗ್ರಹಿಸಿದರು. (ಯೆಶಾ. 65:20) ಸ್ಟೋರ್ಸ್ರವರು ನ್ಯೂ ಯಾರ್ಕ್ನ ಬ್ರೂಕ್ಲಿನ್ನಲ್ಲಿ ವಾಸಿಸುತ್ತಿದ್ದರು ಹಾಗೂ ಬೈಬಲ್ ಎಗ್ಸಾಮಿನರ್ ಎಂಬ ಪತ್ರಿಕೆಯ ಸಂಪಾದಕರಾಗಿದ್ದರು.
16. ಬೈಬಲ್ ವಿದ್ಯಾರ್ಥಿಗಳನ್ನು ಕ್ರೈಸ್ತಪ್ರಪಂಚದ ಜನರಿಂದ ಯಾವುದು ಬೇರ್ಪಡಿಸಿತು?
16 ಸುವಾರ್ತೆಯನ್ನು ವ್ಯಾಪಕವಾಗಿ ಸಾರುವ ಸಮಯ ಬಂದಿದೆ ಎಂಬುದನ್ನು ರಸಲ್ರವರು ಬೈಬಲ್ನಿಂದ ಗ್ರಹಿಸಿದರು. ಆದಕಾರಣ 1879ರಲ್ಲಿ ಅವರು ಝಯನ್ಸ್ ವಾಚ್ ಟವರ್ ಆ್ಯಂಡ್ ಹೆರಾಲ್ಡ್ ಆಫ್ ಕ್ರೈಸ್ಟ್ಸ್ ಪ್ರೆಸೆನ್ಸ್ ಎಂಬ ಪತ್ರಿಕೆಯನ್ನು ಪ್ರಕಟಿಸಲಾರಂಭಿಸಿದರು. ಇಂದು ಈ ಪತ್ರಿಕೆಯನ್ನೇ, ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು ಎಂದು ಕರೆಯಲಾಗುತ್ತಿದೆ. ಈ ಹಿಂದೆ ಮಾನವಕುಲದ ನಿರೀಕ್ಷೆಯನ್ನು ಅರ್ಥಮಾಡಿಕೊಂಡವರು ತೀರ ಕೊಂಚ ಮಂದಿ ಮಾತ್ರ. ಆದರೆ ಈ ಪತ್ರಿಕೆಯನ್ನು ಪ್ರಕಟಿಸಲಾರಂಭಿಸಿದ ಬಳಿಕ ಅನೇಕ ದೇಶಗಳಲ್ಲಿದ್ದ ಬೈಬಲ್ ವಿದ್ಯಾರ್ಥಿಗಳ ಗುಂಪುಗಳು ಕಾವಲಿನಬುರುಜು ಪತ್ರಿಕೆಯನ್ನು ಪಡೆದು ಅಧ್ಯಯನ ಮಾಡಲಾರಂಭಿಸಿದರು. ಕೇವಲ ಕೆಲವೇ ಮಂದಿ ಸ್ವರ್ಗಕ್ಕೆ ಹೋಗುವರು ಆದರೆ ಲಕ್ಷಾಂತರ ಮಂದಿ ಭೂಮಿಯ ಮೇಲೆ ಪರಿಪೂರ್ಣ ಮಾನವ ಜೀವನವನ್ನು ಅನುಭವಿಸುವರು ಎಂಬ ನಂಬಿಕೆ ಆ ಬೈಬಲ್ ವಿದ್ಯಾರ್ಥಿಗಳನ್ನು ಕ್ರೈಸ್ತಪ್ರಪಂಚದ ಜನರಿಂದ ಬೇರ್ಪಡಿಸಿತು.
17. ನಿಜ ಜ್ಞಾನವು ಹೇಗೆ ಹೆಚ್ಚಿತು?
17 ಮುಂತಿಳಿಸಲಾದ ‘ಅಂತ್ಯಕಾಲವು’ 1914ರಲ್ಲಿ ಪ್ರಾರಂಭವಾಯಿತು. ಮಾನವಕುಲದ ನಿರೀಕ್ಷೆಯ ಕುರಿತ ನಿಜ ತಿಳುವಳಿಕೆ ಅಥವಾ ಜ್ಞಾನ ಹೆಚ್ಚಿತೋ? (ದಾನಿ. 12:4) 1913ರಷ್ಟಕ್ಕೆ ರಸಲ್ರ ಪ್ರಸಂಗಗಳು ಸುಮಾರು 2,000 ವಾರ್ತಾಪತ್ರಿಕೆಗಳಲ್ಲಿ ಮುದ್ರಿತವಾಗುತ್ತಿದ್ದವು ಹಾಗೂ ಅವುಗಳ ಓದುಗರ ಒಟ್ಟು ಸಂಖ್ಯೆ 1,50,00,000 ಆಗಿತ್ತು. 1914ರ ಅಂತ್ಯದಷ್ಟಕ್ಕೆ ಮೂರು ಖಂಡಗಳಲ್ಲಿ ಸುಮಾರು 90,00,000ಕ್ಕಿಂತ ಹೆಚ್ಚು ಜನರು “ಫೋಟೋ-ಡ್ರಾಮಾ ಆಫ್ ಕ್ರಿಯೇಷನ್” ಅನ್ನು ವೀಕ್ಷಿಸಿದರು. ಇದು, ಕ್ರಿಸ್ತನ ಸಾವಿರವರ್ಷದಾಳಿಕೆಯನ್ನು ವಿವರಿಸಿದ ಚಲಿಸುವ ಚಿತ್ರಗಳು ಹಾಗೂ ಚಿತ್ರಫಲಕಗಳಿದ್ದ ಒಂದು ಕಾರ್ಯಕ್ರಮವಾಗಿತ್ತು. 1918ರಿಂದ 1925ರ ವರೆಗೆ ಯೆಹೋವನ ಸೇವಕರು ಪ್ರಪಂಚದಾದ್ಯಂತ 30ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ, ಭೂಮಿಯ ಮೇಲಿನ ನಿತ್ಯಜೀವದ ನಿರೀಕ್ಷೆ ಕುರಿತು ವಿವರಿಸಿದ, “ಈಗ ಜೀವಿಸುತ್ತಿರುವ ಲಕ್ಷಾಂತರ ಜನರು ಎಂದಿಗೂ ಸಾಯುವುದಿಲ್ಲ” ಎಂಬ ಭಾಷಣವನ್ನು ಸಾದರಪಡಿಸಿದರು. ಭೂಮಿಯ ಮೇಲೆ ಸದಾಕಾಲ ಬಾಳಲು ನಿರೀಕ್ಷಿಸುತ್ತಿರುವ ಎಲ್ಲರೂ ದೀಕ್ಷಾಸ್ನಾನ ಪಡೆಯಲೇಬೇಕು ಎಂಬದನ್ನು 1934ರಷ್ಟಕ್ಕೆ ಯೆಹೋವನ ಸಾಕ್ಷಿಗಳೆಲ್ಲರೂ ಅರಿತರು. ಈ ನಿರೀಕ್ಷೆಯ ಕುರಿತ ತಿಳುವಳಿಕೆಯು ಅವರಲ್ಲಿ ರಾಜ್ಯದ ಸುವಾರ್ತೆಯನ್ನು ಸಾರುವ ಹೊಸ ಹುರುಪನ್ನು ತುಂಬಿಸಿತು. ಭೂಮಿಯ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆಗಾಗಿ ಇಂದು ಲಕ್ಷಾಂತರ ಮಂದಿ ಯೆಹೋವನಿಗೆ ಆಭಾರಿಗಳಾಗಿದ್ದಾರೆ.
“ಮಹಿಮಾಭರಿತ ಸ್ವಾತಂತ್ರ್ಯ” ಮುಂದಿದೆ!
18, 19. ಯೆಶಾಯ 65:21-25ರಲ್ಲಿ ಎಂಥ ಗುಣಮಟ್ಟದ ಜೀವನವನ್ನು ಮುಂತಿಳಿಸಲಾಗಿದೆ?
18 ಭೂಮಿಯ ಮೇಲೆ ದೇವಜನರು ಆನಂದಿಸಲಿಕ್ಕಿರುವ ಜೀವನದ ಬಗ್ಗೆ ಬರೆಯಲು ಪ್ರವಾದಿಯಾದ ಯೆಶಾಯನನ್ನು ಪ್ರೇರಿಸಲಾಯಿತು. (ಯೆಶಾಯ 65:21-25 ಓದಿ.) ಸುಮಾರು 2,700 ವರ್ಷಗಳ ಹಿಂದೆ ಯೆಶಾಯನು ಆ ಮಾತುಗಳನ್ನು ಬರೆದಾಗ ಇದ್ದಂಥ ಮರಗಳಲ್ಲಿ ಕೆಲವು ಇಂದು ಸಹ ಜೀವಂತವಾಗಿವೆ. ನೀವು ಗಟ್ಟಿಮುಟ್ಟಾಗಿ ಮತ್ತು ಆರೋಗ್ಯವಂತರಾಗಿ ಅಷ್ಟು ವರ್ಷ ಬಾಳುವುದನ್ನು ಕಲ್ಪಿಸಿಕೊಳ್ಳಬಲ್ಲಿರೋ?
19 ಆಗ ಜೀವನವು, ತಾಯಿಯ ಮಡಿಲಿನಿಂದ ಮಣ್ಣು ಸೇರುವ ವರೆಗಿನ ಅಲ್ಪಾಯುಷ್ಯವಾಗಿರದೆ, ಕಟ್ಟಲು, ನೆಡಲು ಮತ್ತು ಕಲಿಯಲು ಅಂತ್ಯವಿಲ್ಲದಷ್ಟು ಅವಕಾಶಗಳನ್ನು ನಿಮ್ಮ ಮುಂದಿಡುವುದು. ನೀವು ಬೆಸೆಯಬಲ್ಲ ಗೆಳೆತನಗಳ ಕುರಿತೂ ಯೋಚಿಸಿ! ಈ ಪ್ರೀತಿಭರಿತ ಸಂಬಂಧಗಳು ನಿರಂತರ ಬೆಳೆಯುತ್ತಿರುವವು. ಆಗ ಭೂಮಿಯಲ್ಲಿ ‘ದೇವರ ಮಕ್ಕಳು’ ಎಂಥ “ಮಹಿಮಾಭರಿತ ಸ್ವಾತಂತ್ರ್ಯವನ್ನು” ಅನುಭವಿಸುವರು!—ರೋಮ. 8:21.
[ಪಾದಟಿಪ್ಪಣಿ]
a ದೇವರ ರಾಜ್ಯದ ಸಹಸ್ರವರ್ಷದಾಳಿಕೆಯ ಆರಂಭ ಭವಿಷ್ಯದಲ್ಲಿ ಅಲ್ಲ ಬದಲಾಗಿ ಚರ್ಚ್ನ ಸ್ಥಾಪನೆಯಾದಾಗಲೇ ಆಯಿತು ಎಂಬುದು ಅಗಸ್ಟಿನ್ನ ವಾದವಾಗಿತ್ತು.
ನೀವು ವಿವರಿಸಬಲ್ಲಿರೋ?
• ಭೂಮಿಯ ಮೇಲೆ ನಿತ್ಯಜೀವದ ಕುರಿತ ಮಾನವಕುಲದ ನಿರೀಕ್ಷೆ ಹೇಗೆ ಮರೆಯಾಯಿತು?
• ಹದಿನೇಳನೇ ಶತಮಾನದಲ್ಲಿ ಕೆಲವು ಬೈಬಲ್ ಓದುಗರು ಯಾವ ತಿಳುವಳಿಕೆ ಪಡೆದರು?
• ಇಸವಿ 1914 ಸಮೀಪಿಸಿದಂತೆ, ಮಾನವಕುಲದ ನಿಜ ನಿರೀಕ್ಷೆ ಹೇಗೆ ಹೆಚ್ಚು ಸ್ಪಷ್ಟವಾಯಿತು?
• ಭೂನಿರೀಕ್ಷೆಯ ಕುರಿತ ಜ್ಞಾನವು ಹೇಗೆ ಹೆಚ್ಚಾಗಿದೆ?
[ಪುಟ 13ರಲ್ಲಿರುವ ಚಿತ್ರಗಳು]
ಕವಿ ಜಾನ್ ಮಿಲ್ಟನ್ (ಎಡಕ್ಕೆ) ಮತ್ತು ಗಣಿತಜ್ಞರಾದ ಐಸಾಕ್ ನ್ಯೂಟನ್ರಿಗೆ (ಬಲಕ್ಕೆ) ಭೂಮಿಯ ಮೇಲಿನ ನಿತ್ಯಜೀವದ ನಿರೀಕ್ಷೆಯ ಕುರಿತು ತಿಳಿದಿತ್ತು
[ಪುಟ 15ರಲ್ಲಿರುವ ಚಿತ್ರಗಳು]
ಮಾನವಕುಲಕ್ಕಿರುವ ನಿಜ ನಿರೀಕ್ಷೆಯನ್ನು ಜಗತ್ತಿನಾದ್ಯಂತ ತಿಳಿಯಪಡಿಸುವ ಸಮಯ ಬಂದಿದೆಯೆಂದು ಆದಿ ಬೈಬಲ್ ವಿದ್ಯಾರ್ಥಿಗಳು ಶಾಸ್ತ್ರವಚನಗಳಿಂದ ಗ್ರಹಿಸಿದರು