‘ನಾನು ಮೊರೆಯಿಟ್ಟರೂ ಎಷ್ಟು ಕಾಲ ಕೇಳದೆ ಇರುವಿ?’
“ಈ ನೋವು ನನ್ನ ಜೀವಹಿಂಡುತ್ತಾ ಇದೆ. ನನಗೆ ಸಹಿಸಿಕೊಳ್ಳಲಿಕ್ಕೇ ಆಗ್ತಿಲ್ಲ” ಎನ್ನುತ್ತಾ ಅತ್ತಳು ಕ್ಯಾನ್ಸರ್ನಿಂದ ನರಳುತ್ತಿದ್ದ ಜೇನ್. ಕ್ಯಾನ್ಸರ್ ಅವಳ ದೇಹವಿಡೀ ಹರಡುತ್ತಿತ್ತು. ಮನೆಮಂದಿ, ಮಿತ್ರರಿಗೆಲ್ಲ ಅವಳ ಯಾತನೆ ನೋಡಲಾಗುತ್ತಿರಲಿಲ್ಲ. ಅವಳ ರೋಗ ವಾಸಿಮಾಡಲು ತಮ್ಮಿಂದ ಆಗುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತೆಂದು ಹಾರೈಸುತ್ತಿದ್ದರು! ಅವಳಿಗೆ ಸಹಾಯಮಾಡುವಂತೆ ದೇವರಿಗೆ ಮೊರೆಯಿಡುತ್ತಿದ್ದರು. ದೇವರು ಕೇಳಿದನೋ? ಆತನಿಗೆ ಕಿಂಚಿತ್ತಾದರೂ ಕಾಳಜಿಯಿತ್ತೋ?
ಮಾನವ ಕುಟುಂಬದ ಸ್ಥಿತಿಗತಿಯನ್ನು ದೇವರು ಬಲ್ಲನು. ಆದುದರಿಂದಲೇ ಆತನ ವಾಕ್ಯವಾದ ಬೈಬಲ್ ಹೇಳುವುದು: “ಇಡೀ ಸೃಷ್ಟಿಯು . . . ಒಟ್ಟಾಗಿ ನರಳುತ್ತಾ ನೋವನ್ನು ಅನುಭವಿಸುತ್ತಾ ಇದೆ.” (ರೋಮನ್ನರಿಗೆ 8:22) ಜೇನ್ಳಂತೆ ಕೋಟ್ಯಂತರ ಜನರು ಪ್ರತಿನಿತ್ಯವೂ ಶಾರೀರಿಕ, ಭಾವನಾತ್ಮಕ ಅಥವಾ ಮಾನಸಿಕ ನೋವಿನಿಂದ ಜರ್ಜರಿತರಾಗುತ್ತಿರುವುದು ದೇವರಿಗೆ ಗೊತ್ತುಂಟು. 80 ಕೋಟಿ ಜನರಿಗೆ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದಿರುವುದು, ಇನ್ನಿತರ ಲಕ್ಷಾಂತರ ಮಂದಿ ಗೃಹಹಿಂಸಾಚಾರದಿಂದ ನಲುಗುತ್ತಿರುವುದು, ಅನೇಕ ಹೆತ್ತವರು ತಮ್ಮ ಮಕ್ಕಳ ಭವಿಷ್ಯ ಮತ್ತು ಹಿತಕ್ಷೇಮದ ಬಗ್ಗೆ ಕಂಗಾಲಾಗಿರುವುದು ಎಲ್ಲವನ್ನೂ ದೇವರು ಗಮನಿಸುತ್ತಿದ್ದಾನೆ. ಆದರೆ ಇವೆಲ್ಲವನ್ನು ಪರಿಹರಿಸಲು ಆತನು ಏನಾದರೂ ಮಾಡುವನೋ? ನಮ್ಮ ಪ್ರೀತಿಪಾತ್ರರಿಗೆ ಸಹಾಯಮಾಡಲು ನಾವೇ ಬಯಸುವಾಗ, ತನ್ನ ಸೃಷ್ಟಿಯಾದ ಮಾನವ ಕುಟುಂಬಕ್ಕೆ ಸಹಾಯಮಾಡಲು ದೇವರು ಬಯಸದಿರುವನೇ?
ಈ ಪ್ರಶ್ನೆಗಳು ನಿಮ್ಮನ್ನು ಕಾಡಿವೆಯೋ? ನಿಮ್ಮಂತೆ ಅನೇಕರಿಗೆ ಈ ಪ್ರಶ್ನೆಗಳಿವೆ. 2,600ಕ್ಕಿಂತ ಹೆಚ್ಚು ವರ್ಷಗಳ ಹಿಂದೆ ದೇವರ ನಂಬಿಗಸ್ತ ಸೇವಕನಾದ ಹಬಕ್ಕೂಕ ಎಂಬವನಿಗೂ ಇಂಥ ಪ್ರಶ್ನೆಗಳಿದ್ದವು. ಅವನು ದೇವರನ್ನು ಕೇಳಿದ್ದು: “ಯೆಹೋವನೇ, ನಾನು ಮೊರೆಯಿಡುತ್ತಿದ್ದರೂ ನೀನು ಎಷ್ಟು ಕಾಲ ಕೇಳದೇ ಇರುವಿ? ಹಿಂಸೆ ಹಿಂಸೆ ಎಂದು ನಿನ್ನನ್ನು ಕೂಗಿಕೊಂಡರೂ ರಕ್ಷಿಸದೆ ಇರುವಿ. ಕೇಡನ್ನು ನನ್ನ ಕಣ್ಣಿಗೆ ಏಕೆ ಬೀಳಿಸುತ್ತಿದ್ದೀ? ಕಷ್ಟವನ್ನೇಕೆ ನನಗೆ ತೋರಿಸುತ್ತಿದ್ದೀ? ಹಿಂಸೆಬಾಧೆಗಳು ನನ್ನ ಕಣ್ಣೆದುರಿಗೆ ಇದ್ದೇ ಇವೆ; ಜಗಳವಾಗುತ್ತಿದೆ, ವ್ಯಾಜ್ಯವೇಳುತ್ತಿದೆ.” (ಹಬಕ್ಕೂಕ 1:2, 3) ಹೀಬ್ರು ಪ್ರವಾದಿಯಾದ ಹಬಕ್ಕೂಕನು ತನ್ನ ದಿನಗಳಲ್ಲಿ ನಡೆದ ತಿಳಿಗೇಡಿ ಹಿಂಸಾಚಾರ, ಆಕ್ರಮಣಗಳಿಗೆ ಪ್ರತ್ಯಕ್ಷಸಾಕ್ಷಿಯಾಗಿದ್ದನು. ಅಂತಹ ದುಷ್ಕೃತ್ಯಗಳು ಇಂದು ಕೂಡ ಸರ್ವೇಸಾಮಾನ್ಯ ಮತ್ತು ದಯಾಪರರ ಮನಕಲಕುತ್ತವೆ.
ಯೆಹೋವ ದೇವರು ಹಬಕ್ಕೂಕನ ಕಳವಳವನ್ನು ಕಡೆಗಣಿಸಿದನೋ? ಖಂಡಿತ ಇಲ್ಲ! ಹಬಕ್ಕೂಕನು ಮನನೊಂದು ಕೇಳಿದ ಯಥಾರ್ಥ ಪ್ರಶ್ನೆಗಳಿಗೆ ಆತನು ಕಿವಿಗೊಟ್ಟನು, ಅವನಿಗೆ ಸಾಂತ್ವನ ನೀಡಿದನು, ಉತ್ತೇಜಿಸಿದನು ಕೂಡ. ಕಷ್ಟಸಂಕಟವನ್ನು ಕೊನೆಗಾಣಿಸುವೆನೆಂದು ಮಾತುಕೊಟ್ಟು ಅವನ ನಂಬಿಕೆಯನ್ನು ಬಲಪಡಿಸಿದನು. ದೇವರ ವಾಕ್ಯದಲ್ಲಿರುವ ನಿರೀಕ್ಷೆಯ ಸಂದೇಶವು ಮೇಲೆ ತಿಳಿಸಲಾದ ಜೇನ್ ಮತ್ತು ಅವಳ ಕುಟುಂಬಕ್ಕೆ ಅಭಯ ನೀಡಿತು. ನಿಮಗೂ ನೀಡಬಲ್ಲದು. ಹಾಗಾದರೆ ದೇವರಿಗೆ ನಮ್ಮ ಬಗ್ಗೆ ಕಾಳಜಿಯಿದೆ ಎಂಬುದಕ್ಕೆ ಯಾವ ಆಧಾರವಿದೆ? ಕಷ್ಟನೋವುಗಳನ್ನು ಕೊನೆಗಾಣಿಸಲು ಆತನು ಏನು ಮಾಡುವನು? ಯಾವಾಗ ಮಾಡುವನು? ಈ ಪ್ರಶ್ನೆಗಳನ್ನು ಮುಂದಿನ ಲೇಖನಗಳು ಉತ್ತರಿಸುವವು. (w09-E 12/01)