ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w10 7/1 ಪು. 4-5
  • ದೇವರ ಕಾಳಜಿಗೆ ಪುರಾವೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ಕಾಳಜಿಗೆ ಪುರಾವೆ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದೇವರ ಪ್ರೀತಿಗೆ ಸಾಕ್ಷಿಕೊಡುವ ಸೃಷ್ಟಿ
  • ದೇವರ ಪ್ರೀತಿಯ ಆಶ್ವಾಸನೆ ಕೊಡುವ ಬೈಬಲ್‌
  • ದೇವರು ಯಾರು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ‘ದೇವರು ಮೊದಲು ನಮ್ಮನ್ನು ಪ್ರೀತಿಸಿದನು’
    ಯೆಹೋವನ ಸಮೀಪಕ್ಕೆ ಬನ್ನಿರಿ
  • ಬೈಬಲ್‌ ಏನು ಹೇಳುತ್ತದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2017
  • ಯೆಹೋವನು ಯಾವೆಲ್ಲ ವಿಧಗಳಲ್ಲಿ ನಮ್ಮನ್ನು ಪ್ರೀತಿಸುತ್ತಾನೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
w10 7/1 ಪು. 4-5

ದೇವರ ಕಾಳಜಿಗೆ ಪುರಾವೆ

‘ದೇವರಿಗೆ ನಮ್ಮ ಮೇಲೆ ನಿಜವಾಗಿಯೂ ಪ್ರೀತಿ ಇದ್ದರೆ ಇಷ್ಟೆಲ್ಲಾ ಕಷ್ಟಸಂಕಟಗಳು ಏಕಿವೆ?’ ಎಂಬುದು ಸಹಸ್ರಾರು ವರ್ಷಗಳಿಂದ ಜನರನ್ನು ಕಾಡುತ್ತಿರುವ ಒಂದು ಪ್ರಾಮುಖ್ಯ ಪ್ರಶ್ನೆ. ನಮ್ಮ ಪ್ರಿಯರಿಗೆ ಯಾವ ಕಷ್ಟವೂ ಬರಬಾರದೆಂದು ನಾವು ಆಶಿಸುತ್ತೇವೆ, ಒಂದುವೇಳೆ ಕಷ್ಟ ಬಂದರೂ ಕೂಡಲೆ ಸಹಾಯಹಸ್ತ ಚಾಚುತ್ತೇವಲ್ಲಾ? ಹೀಗಿರುವಾಗ ಲೋಕದಲ್ಲಿ ತುಂಬಿತುಳುಕುತ್ತಿರುವ ಕಷ್ಟಸಂಕಟಗಳನ್ನು ನೋಡಿಯೂ ದೇವರು ಏಕೆ ಸುಮ್ಮನಿದ್ದಾನೆ, ಆತನಿಗೆ ನಮ್ಮ ಬಗ್ಗೆ ಕಾಳಜಿಯೇ ಇಲ್ಲವೇನೋ ಎಂದು ಅನೇಕರು ನೆನಸುತ್ತಾರೆ. ಆದುದರಿಂದ ನಾವು ಮೊದಲು, ದೇವರಿಗೆ ನಮ್ಮ ಮೇಲೆ ನಿಜವಾಗಿಯೂ ಪ್ರೀತಿ-ಕಾಳಜಿ ಇದೆ ಎಂಬುದಕ್ಕಿರುವ ಪುರಾವೆಯನ್ನು ಪರಿಗಣಿಸುವುದು ಪ್ರಾಮುಖ್ಯ.

ದೇವರ ಪ್ರೀತಿಗೆ ಸಾಕ್ಷಿಕೊಡುವ ಸೃಷ್ಟಿ

“ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ಉಂಟುಮಾಡಿದಾತನು” ಯೆಹೋವ ದೇವರೇ. (ಅ. ಕಾರ್ಯಗಳು 4:24) ಆತನ ಸೃಷ್ಟಿಯ ಕುರಿತು ಧ್ಯಾನಿಸುವಾಗ ನಮ್ಮ ಬಗ್ಗೆ ಆತನಿಗೆ ಕಾಳಜಿಯಿದೆ ಎಂಬುದು ಖಚಿತವಾಗುತ್ತದೆ. ಉದಾಹರಣೆಗೆ ನಿಮಗೆ ಮುದನೀಡುವ ವಿಷಯಗಳ ಬಗ್ಗೆ ಯೋಚಿಸಿ. ಸ್ವಾದಿಷ್ಟ ಆಹಾರ ನಿಮಗಿಷ್ಟವೋ? ನಮ್ಮ ಜೀವಪೋಷಣೆಗೆ ಯೆಹೋವನು ಒಂದೇ ಬಗೆಯ ಆಹಾರ ಕೊಡಬಹುದಿತ್ತು. ಆದರೆ ಹಾಗೆ ಮಾಡದೆ ನಾವು ಸವಿದು ಆನಂದಿಸಲು ಎಣೆಯಿಲ್ಲದಷ್ಟು ಬಗೆಬಗೆಯ ಆಹಾರಗಳನ್ನು ಕೊಟ್ಟಿದ್ದಾನೆ. ಮಾತ್ರವಲ್ಲ, ನಮ್ಮ ಬದುಕು ಸಂತೋಷಕರವೂ ಸ್ವಾರಸ್ಯಕರವೂ ಆಗಿರುವಂತೆ ಈ ಭೂಮಿಯನ್ನು ವೈವಿಧ್ಯಮಯ ಮರಗಿಡಗಳು, ಪುಷ್ಪಗಳು, ನಯನಮನೋಹರ ಪ್ರದೇಶಗಳಿಂದ ಸಿಂಗರಿಸಿದ್ದಾನೆ.

ಈಗ ನಮ್ಮನ್ನು ತಕ್ಕೊಳ್ಳಿ. ನಮಗಿರುವ ಹಾಸ್ಯಪ್ರಜ್ಞೆ, ಸಂಗೀತ ಆನಂದಿಸುವ ಮತ್ತು ಸೌಂದರ್ಯ ಆಸ್ವಾದಿಸುವ ಸಾಮರ್ಥ್ಯ ಇವೆಲ್ಲ ಜೀವಪೋಷಣೆಗೆ ಅಗತ್ಯವಿಲ್ಲ. ಆದರೆ ದೇವರು ಕೊಟ್ಟ ಈ ವರಗಳು ನಮ್ಮ ಬದುಕಿಗೆ ರಂಗು ತರುತ್ತವೆ. ಇತರರೊಂದಿಗಿನ ನಮ್ಮ ಸಂಬಂಧಗಳ ಕುರಿತೂ ಯೋಚಿಸಿ. ಒಳ್ಳೇ ಸ್ನೇಹಿತರ ಸಾಹಚರ್ಯ ಅಥವಾ ಪ್ರಿಯರ ಬೆಚ್ಚಗಿನ ಅಪ್ಪುಗೆ ಯಾರಿಗೆ ತಾನೇ ಬೇಡ? ಪ್ರೀತಿಸುವ ಈ ಸಾಮರ್ಥ್ಯ ಸಹ ಪ್ರೀತಿಯ ದೇವರು ಕೊಟ್ಟ ವರ! ಹೀಗಿರುವುದರಿಂದ ಪ್ರೀತಿಸುವ ಸಾಮರ್ಥ್ಯವನ್ನು ಮಾನವರಿಗೆ ಕೊಟ್ಟ ದೇವರಿಗೆ ಪ್ರೀತಿಯ ಗುಣವಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ದೇವರ ಪ್ರೀತಿಯ ಆಶ್ವಾಸನೆ ಕೊಡುವ ಬೈಬಲ್‌

ದೇವರು ಪ್ರೀತಿಯಾಗಿದ್ದಾನೆ ಎನ್ನುತ್ತದೆ ಬೈಬಲ್‌. (1 ಯೋಹಾನ 4:8) ದೇವರ ಪ್ರೀತಿ ಸೃಷ್ಟಿಯಲ್ಲಿ ಮಾತ್ರವಲ್ಲ ಆತನ ವಾಕ್ಯವಾದ ಬೈಬಲಿನಲ್ಲೂ ಸುವ್ಯಕ್ತ. ಉದಾಹರಣೆಗೆ ಅದರಲ್ಲಿ ಆತನು ನಮ್ಮ ಒಳ್ಳೇ ಆರೋಗ್ಯಕ್ಕೆ ನೆರವಾಗುವ ಸಲಹೆಗಳನ್ನು ಕೊಟ್ಟಿದ್ದಾನೆ. ಎಲ್ಲದರಲ್ಲೂ ಮಿತಭಾವ ಕಾಪಾಡಿಕೊಳ್ಳುವಂತೆ ಮತ್ತು ಕುಡಿಕತನ, ಹೊಟ್ಟೆಬಾಕತನವನ್ನು ತೊರೆಯುವಂತೆ ಹೇಳಿದ್ದಾನೆ.—1 ಕೊರಿಂಥ 6:9, 10.

ಇತರರೊಂದಿಗೆ ಒಳ್ಳೇ ಸಂಬಂಧ ಕಾಪಾಡಿಕೊಳ್ಳಲೂ ಬೇಕಾದ ವಿವೇಕಯುತ ಸಲಹೆಗಳು ಬೈಬಲಿನಲ್ಲಿವೆ. ಉದಾಹರಣೆಗೆ ಪರಸ್ಪರ ಪ್ರೀತಿ ತೋರಿಸುವಂತೆ ಮತ್ತು ಇತರರನ್ನು ಗೌರವ, ಘನತೆ, ದಯೆಯಿಂದ ಉಪಚರಿಸುವಂತೆ ಅದು ಉತ್ತೇಜಿಸುತ್ತದೆ. (ಮತ್ತಾಯ 7:12) ಕಷ್ಟನೋವನ್ನು ತಂದೊಡ್ಡುವ ಅತ್ಯಾಶೆ, ಹರಟೆಮಾತು, ಹೊಟ್ಟೆಕಿಚ್ಚು, ವ್ಯಭಿಚಾರ, ಕೊಲೆ ಇತ್ಯಾದಿ ಚಾಳಿಗಳನ್ನೂ ಕೆಟ್ಟ ಮನೋಭಾವಗಳನ್ನೂ ಅದು ಖಂಡಿಸುತ್ತದೆ. ಬೈಬಲಿನಲ್ಲಿರುವ ಅತ್ಯುತ್ತಮ ಸಲಹೆಯನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಲ್ಲಿ ಲೋಕದಾದ್ಯಂತ ಕಷ್ಟನೋವುಗಳು ಖಂಡಿತವಾಗಿ ಎಷ್ಟೋ ಕಡಿಮೆಯಾಗಿರುತ್ತಿದ್ದವು.

ಎಲ್ಲಕ್ಕಿಂತಲೂ ಹೆಚ್ಚಾಗಿ ದೇವರು ತನ್ನ ಪ್ರೀತಿಯನ್ನು ತೋರಿಸಿದ್ದು ಮಾನವಕುಲವನ್ನು ಪಾಪಮರಣದಿಂದ ವಿಮೋಚಿಸಲು ತನ್ನ ಮಗನಾದ ಯೇಸುವನ್ನು ವಿಮೋಚನಾ ಯಜ್ಞವಾಗಿ ಕೊಡುವ ಮೂಲಕವೇ. ಯೋಹಾನ 3:16 ಹೀಗನ್ನುತ್ತದೆ: “ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.” ಹೀಗೆ, ಮರಣ ಮತ್ತು ಎಲ್ಲ ರೀತಿಯ ಕಷ್ಟಸಂಕಟಕ್ಕೆ ಪೂರ್ಣವಿರಾಮ ಹಾಕಲು ಯೆಹೋವನು ಈಗಾಗಲೇ ಏರ್ಪಾಡು ಮಾಡಿದ್ದಾನೆ.—1 ಯೋಹಾನ 3:8.

ಹೌದು, ನಮ್ಮ ಮೇಲೆ ಯೆಹೋವ ದೇವರಿಗಿರುವ ಪ್ರೀತಿಗೆ ಹೇರಳ ಪುರಾವೆ ಇದೆ. ನಾವು ಕಷ್ಟಪಡುವುದನ್ನು ನೋಡಲು ಆತನಿಗೆ ಇಷ್ಟವಿಲ್ಲ ಎಂಬುದು ಇದರಿಂದ ಸ್ಪಷ್ಟ. ಈಗಿರುವ ಕಷ್ಟನೋವುಗಳನ್ನು ಕೊನೆಗಾಣಿಸಲು ಆತನು ಖಂಡಿತ ಕ್ರಮಕೈಗೊಳ್ಳುವನು. ಆತನು ಹೇಗೆ ಕ್ರಮಕೈಗೊಳ್ಳುವನೆಂದು ಊಹಿಸುವ ಅಗತ್ಯವಿಲ್ಲ ಏಕೆಂದರೆ ಬೈಬಲ್‌ ಅದನ್ನು ಸ್ಪಷ್ಟವಾಗಿ ತಿಳಿಸುತ್ತದೆ. (w09-E 12/01)

[ಪುಟ 4ರಲ್ಲಿರುವ ಚಿತ್ರ]

ಪ್ರೀತಿಸುವ ಸಾಮರ್ಥ್ಯ ಪ್ರೀತಿಯ ದೇವರು ಕೊಟ್ಟ ವರ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ