ನೀವು ಸಿದ್ಧರಾಗಿದ್ದೀರೆಂದು ತೋರಿಸಿಕೊಡಿರಿ
“ನಿಮ್ಮನ್ನು ಸಿದ್ಧರಾಗಿಟ್ಟುಕೊಳ್ಳಿರಿ, ಏಕೆಂದರೆ ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.”—ಮತ್ತಾ. 24:44.
1, 2. (ಎ) ಹುಲಿಯ ಆಕ್ರಮಣಕ್ಕೆ ಹೋಲುವ ಯಾವ ಘಟನೆಗಳನ್ನು ಬೈಬಲ್ ಮುಂತಿಳಿಸುತ್ತದೆ? (ಬಿ) ಕ್ರಿಸ್ತನು ನ್ಯಾಯತೀರ್ಪನ್ನು ಜಾರಿಗೊಳಿಸುವಾಗ ಪಾರಾಗಬೇಕಾದರೆ ನಾವೇನು ಮಾಡಬೇಕು?
ಸರ್ಕಸ್ನಲ್ಲಿ ಆಟ ಪ್ರದರ್ಶಿಸುವ ಪ್ರಖ್ಯಾತ ಆಟಗಾರನೊಬ್ಬ ಚೆನ್ನಾಗಿ ತರಬೇತುಗೊಳಿಸಿದ ಬಂಗಾಳದ ಹುಲಿಗಳನ್ನು ಆಟವಾಡಿಸುವ ಮೂಲಕ ಅನೇಕ ವರ್ಷಗಳ ವರೆಗೆ ಸಭಿಕರನ್ನು ರಂಜಿಸಿದನು. ಅವನು ಹೇಳಿದ್ದು: “ನೀವೊಂದು ಪ್ರಾಣಿಯ ಭರವಸೆ ಸಂಪಾದಿಸುವಲ್ಲಿ ಲೋಕದಲ್ಲೇ ಅತ್ಯುತ್ತಮ ಉಡುಗೊರೆ ಸಿಕ್ಕಿರುವ ಅನಿಸಿಕೆ ನಿಮಗಾಗುವುದು.” ಆದರೆ 2003, ಅಕ್ಟೋಬರ್ 3ರಂದು ಆ ಭರವಸೆ ಮಣ್ಣುಮುಕ್ಕಿತು. ಅಂದು ಏನು ಕಾರಣವೋ ಗೊತ್ತಿಲ್ಲ 172 ಕೆ.ಜಿ. ತೂಕವುಳ್ಳ ಅವನ ಬಿಳಿ ಹುಲಿಯೊಂದು ಅವನ ಮೇಲೆ ಹಾರಿ ಆಕ್ರಮಣಮಾಡಿತು. ಆ ಆಕ್ರಮಣವು ಅನಿರೀಕ್ಷಿತವಾಗಿತ್ತು, ತರಬೇತುಗಾರ ಸಿದ್ಧನಿರಲಿಲ್ಲ.
2 ಬೈಬಲಿನಲ್ಲಿಯೂ ಒಂದು ‘ಕಾಡುಮೃಗದ’ ಅನಿರೀಕ್ಷಿತ ಆಕ್ರಮಣದ ಕುರಿತು ತಿಳಿಸಲಾಗಿದೆ. (ಪ್ರಕಟನೆ 17:15-18 ಓದಿ.) ಈ “ಕಾಡುಮೃಗ” ಏನನ್ನು ಸೂಚಿಸುತ್ತದೆ? ಅದು ಯಾರ ಮೇಲೆ ಆಕ್ರಮಣ ಮಾಡುತ್ತದೆ? ಈ ಕಾಡುಮೃಗ ವಿಶ್ವ ಸಂಸ್ಥೆಯನ್ನು ಮತ್ತು ಲೋಕದ ಎಲ್ಲ ಸರಕಾರಗಳನ್ನು ಪ್ರತಿನಿಧಿಸುತ್ತದೆ. ಇದು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರುವ ಮಹಾ ಬಾಬೆಲಿನ ಮೇಲೆ ಆಕ್ರಮಣ ಮಾಡಿ ಹಿಂಸಾತ್ಮಕ ರೀತಿಯಲ್ಲಿ ಅದನ್ನು ನಾಶಗೊಳಿಸುವುದು. ಇದನ್ನು ನೋಡಿ ಅನೇಕರು ಆಶ್ಚರ್ಯಗೊಳ್ಳುವರು. ಏಕೆಂದರೆ ಕಾಡುಮೃಗ ಮತ್ತು ಮಹಾ ಬಾಬೆಲ್ ಸ್ನೇಹಿತರಂತೆ ಇವೆ. ಅವು ಸೈತಾನನ ಲೋಕದ ಭಾಗವಾಗಿವೆ. ಈ ಆಕ್ರಮಣ ಯಾವಾಗ ಸಂಭವಿಸುತ್ತದೆ? ಆ ದಿನವಾಗಲಿ ಗಳಿಗೆಯಾಗಲಿ ನಮಗೆ ಗೊತ್ತಿಲ್ಲ. (ಮತ್ತಾ. 24:36) ಆದರೆ ನಾವು ನಿರೀಕ್ಷಿಸದ ಗಳಿಗೆಯಲ್ಲಿ ಅದು ಸಂಭವಿಸಲಿದೆ ಹಾಗೂ ಆ ಆಕ್ರಮಣಕ್ಕೆ ಉಳಿದಿರುವ ಸಮಯ ಕೊಂಚವೇ ಎಂಬುದಂತೂ ನಮಗೆ ತಿಳಿದಿದೆ. (ಮತ್ತಾ. 24:44; 1 ಕೊರಿಂ. 7:29) ಹಾಗಾಗಿ ನಾವು ಆಧ್ಯಾತ್ಮಿಕವಾಗಿ ಸಿದ್ಧರಾಗಿರುವುದು ಅತ್ಯಗತ್ಯ. ನಾವು ಸಿದ್ಧರಿರುವಲ್ಲಿ ಮೃಗವು ಆಕ್ರಮಣ ಮಾಡುವಾಗ ಹಾಗೂ ಕ್ರಿಸ್ತನು ನ್ಯಾಯತೀರ್ಪನ್ನು ಜಾರಿಗೊಳಿಸಲು ಬರುವಾಗ ಕ್ರಿಸ್ತನು ನಮ್ಮನ್ನು ವಿಮೋಚಿಸುವನು. (ಲೂಕ 21:28) ದೇವರ ನಂಬಿಗಸ್ತ ಸೇವಕರು ಸಿದ್ಧರಾಗಿದ್ದ ಕಾರಣ ಆತನ ವಾಗ್ದಾನಗಳ ನೆರವೇರಿಕೆಯನ್ನು ಕಣ್ಣಾರೆಕಂಡರು. ಸಿದ್ಧರಾಗಿರುವ ವಿಷಯದಲ್ಲಿ ನಾವು ಅವರಿಂದ ಪಾಠಗಳನ್ನು ಕಲಿಯಬಹುದು. ನಾವು ಅವುಗಳನ್ನು ಹೃದಯಕ್ಕೆ ತೆಗೆದುಕೊಳ್ಳುವೆವೋ?
ನೋಹನಂತೆ ನೀವೂ ಸಿದ್ಧರಾಗಿರ್ರಿ
3. ನಂಬಿಗಸ್ತಿಕೆಯಿಂದ ದೇವರ ಸೇವೆಮಾಡಲು ನೋಹನಿಗೆ ಯಾವೆಲ್ಲ ಅಡ್ಡಿತಡೆಗಳು ಎದುರಾದವು?
3 ನೋಹನು ಜೀವಿಸಿದಂಥ ಸಮಯದಲ್ಲಿ ಭೂಮಿಯಾದ್ಯಂತ ಬೇಸರ ಹುಟ್ಟಿಸುವಂಥ ಪರಿಸ್ಥಿತಿ ಇತ್ತಾದರೂ ದೇವರ ವಾಗ್ದಾನಗಳ ನೆರವೇರಿಕೆಯನ್ನು ನೋಡಲು ಅವನು ಸಿದ್ಧನಿದ್ದನು. ನೋಹನು ಯಾವೆಲ್ಲ ಸವಾಲುಗಳನ್ನು ಎದುರಿಸಬೇಕಾಯಿತು ಎಂಬುದನ್ನು ಸ್ವಲ್ಪ ಊಹಿಸಿಕೊಳ್ಳಿ. ದಂಗೆಕೋರ ದೇವದೂತರು ಮನುಷ್ಯದೇಹವನ್ನು ಧರಿಸಿ ಭೂಮಿಯಲ್ಲಿದ್ದ ಸುಂದರ ಸ್ತ್ರೀಯರೊಂದಿಗೆ ಜೀವಿಸುತ್ತಿದ್ದರು! ಈ ಅಸ್ವಾಭಾವಿಕ ಸಂಬಂಧ ಅತಿಮಾನುಷ ಸಂತತಿಯನ್ನು ಹುಟ್ಟಿಸಿತು. ‘ಮಹಾಶರೀರಿಗಳಾಗಿದ್ದ’ ಅವರು ತಮಗಿದ್ದ ಅಸಾಮಾನ್ಯ ಬಲವನ್ನು ಬಳಸಿ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು. (ಆದಿ. 6:4) ಈ ಮಹಾಶರೀರಿಗಳ ಅಟ್ಟಹಾಸದಿಂದಾಗಿ ಅವರು ಹೋದಲ್ಲೆಲ್ಲಾ ಉದ್ಭವಿಸುತ್ತಿದ್ದ ಹಿಂಸಾಚಾರವನ್ನು ತುಸು ಯೋಚಿಸಿ ನೋಡಿ. ಇದರ ಪರಿಣಾಮವಾಗಿ ಕೆಟ್ಟತನ ಎಲ್ಲೆಡೆ ಹಬ್ಬಿತು. ಮನುಷ್ಯರ ಯೋಚನೆ, ನಡತೆ ಎಲ್ಲವೂ ಪೂರ್ತಿ ಕೆಟ್ಟುಹೋಯಿತು. ಹಾಗಾಗಿ ಪರಮಾಧಿಕಾರಿ ಕರ್ತನಾದ ಯೆಹೋವನು ಆ ದುಷ್ಟ ಜನರ ನಾಶನಕ್ಕೆ ಸಮಯವನ್ನು ನಿಗದಿಪಡಿಸಿದನು.—ಆದಿಕಾಂಡ 6:3, 5, 11, 12 ಓದಿ.a
4, 5. ಯಾವ ವಿಧಗಳಲ್ಲಿ ನಮ್ಮ ಕಾಲವು ನೋಹನ ದಿನಗಳಲ್ಲಿದ್ದ ಪರಿಸ್ಥಿತಿಯನ್ನು ಹೋಲುತ್ತದೆ?
4 ನಮ್ಮ ದಿನಗಳಲ್ಲೂ ನೋಹನ ದಿನಗಳಲ್ಲಿದ್ದ ಪರಿಸ್ಥಿತಿ ಇರುವುದೆಂದು ಯೇಸು ಮುಂತಿಳಿಸಿದ್ದನು. (ಮತ್ತಾ. 24:37) ಉದಾಹರಣೆಗೆ, ನಾವು ಸಹ ದುಷ್ಟಾತ್ಮಗಳ ಪ್ರಭಾವವನ್ನು ನೋಡುತ್ತಿದ್ದೇವೆ. (ಪ್ರಕ. 12:7-9, 12) ಈ ದುಷ್ಟ ದೇವದೂತರು ನೋಹನ ದಿನಗಳಲ್ಲಿ ಮನುಷ್ಯದೇಹವನ್ನು ತಾಳಿದ್ದರು. ಆದರೆ ಈಗ ಅವರು ಮನುಷ್ಯದೇಹವನ್ನು ತಾಳಸಾಧ್ಯವಿಲ್ಲ ನಿಜ. ಹಾಗಿದ್ದರೂ ಚಿಕ್ಕವರು ದೊಡ್ಡವರೆನ್ನದೆ ಅವರು ಎಲ್ಲರ ಮೇಲೆ ಹತೋಟಿ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ತೆರೆಮರೆಯಲ್ಲಿರುವ ಈ ದುಷ್ಟ ದೇವದೂತರು ತಮ್ಮಿಂದ ಭ್ರಷ್ಟರಾದ ಜನರು ನಡೆಸುವ ದುಷ್ಕೃತ್ಯಗಳನ್ನೂ ನೀಚ ಕೃತ್ಯಗಳನ್ನೂ ನೋಡಿ ಸಂತೋಷಪಡುತ್ತಾರೆ.—ಎಫೆ. 6:11, 12.
5 ದೇವರ ವಾಕ್ಯವು ಪಿಶಾಚನನ್ನು ‘ನರಹಂತಕನೆಂದು’ ವರ್ಣಿಸಿ ಅವನು ‘ಮರಣವನ್ನು ಉಂಟುಮಾಡಶಕ್ತನೆಂದು’ ತಿಳಿಸುತ್ತದೆ. (ಯೋಹಾ. 8:44; ಇಬ್ರಿ. 2:14) ಹಾಗಂತ ಇಷ್ಟ ಬಂದವರನ್ನೆಲ್ಲ ಕೊಲ್ಲಲು ಯೆಹೋವನು ಅವನನ್ನು ಬಿಡುವುದಿಲ್ಲ. ಆದರೆ ಈ ದುಷ್ಟ ಜೀವಿ ಮೋಸ ಹಾಗೂ ಭ್ರಷ್ಟತೆಯನ್ನು ಉತ್ತೇಜಿಸುತ್ತಾನೆ. ಜನರ ಹೃದಮನಗಳಲ್ಲಿ ಕೊಲೆಗಡುಕ ಮನೋಭಾವವನ್ನು ಹುಟ್ಟಿಸುತ್ತಾನೆ. ಉದಾಹರಣೆಗೆ, ಅಮೆರಿಕದಲ್ಲಿ ಹುಟ್ಟುವ ಪ್ರತಿ 142 ಮಕ್ಕಳಲ್ಲಿ 1 ಮಗು ಕೊಲೆಗೀಡಾಗುತ್ತಿದೆ. ನೋಹನ ದಿನದಲ್ಲಿ ಹಿಂಸಾಚಾರವನ್ನು ನೋಡಿ ಕ್ರಿಯೆಗೈದ ಯೆಹೋವನು ಇಂದು ನಡೆಯುತ್ತಿರುವ ಹಿಂಸಾಚಾರವನ್ನು ನೋಡನೆಂದು ನೀವೆಣಿಸುತ್ತೀರೋ? ಆತನು ಕ್ರಿಯೆಗೈಯದೆ ಇರುವನೋ?
6, 7. ನೋಹ ಮತ್ತವನ ಕುಟುಂಬದವರು ದೇವಭಯ ಹಾಗೂ ನಂಬಿಕೆಯನ್ನು ಹೇಗೆ ಪ್ರದರ್ಶಿಸಿದರು?
6 ಭೂಮಿಯ ಮೇಲೆ ಜಲಪ್ರಳಯವನ್ನು ತಂದು ಸಮಸ್ತವನ್ನು ನಾಶಮಾಡುವ ತನ್ನ ನಿರ್ಣಯದ ಬಗ್ಗೆ ದೇವರು ನೋಹನಿಗೆ ನಂತರ ತಿಳಿಸಿದನು. (ಆದಿ. 6:13, 17) ಯೆಹೋವನು ನೋಹನಿಗೆ ದೊಡ್ಡ ಪೆಟ್ಟಿಗೆಯಾಕಾರದ ನಾವೆಯೊಂದನ್ನು ಕಟ್ಟುವಂತೆ ಹೇಳಿದನು. ನೋಹ ಹಾಗೂ ಅವನ ಕುಟುಂಬದವರು ನಾವೆಯನ್ನು ಕಟ್ಟಲಾರಂಭಿಸಿದರು. ದೇವರಿಗೆ ವಿಧೇಯರಾಗಲು ಹಾಗೂ ಆತನ ನ್ಯಾಯತೀರ್ಪು ವಿಧಿಸಲ್ಪಟ್ಟಾಗ ಸಿದ್ಧರಾಗಿರಲು ಅವರಿಗೆ ಯಾವುದು ಸಹಾಯಮಾಡಿತು?
7 ದೇವಭಯ ಹಾಗೂ ಆಳವಾದ ನಂಬಿಕೆಯು ದೇವರು ಆಜ್ಞಾಪಿಸಿದಂತೆಯೇ ಮಾಡಲು ನೋಹ ಮತ್ತವನ ಕುಟುಂಬಕ್ಕೆ ಸಹಾಯಮಾಡಿತು. (ಆದಿ. 6:22; ಇಬ್ರಿ. 11:7) ಕುಟುಂಬದ ಶಿರಸ್ಸಾದ ನೋಹನು ಆಧ್ಯಾತ್ಮಿಕವಾಗಿ ಎಚ್ಚರವಾಗಿದ್ದನು ಮಾತ್ರವಲ್ಲ ಜನರ ಭ್ರಷ್ಟತೆಯಿಂದ ದೂರ ಉಳಿದನು. (ಆದಿ. 6:9) ಸುತ್ತಲೂ ಇದ್ದ ಜನರ ಹಿಂಸಾತ್ಮಕ ಮಾರ್ಗಗಳನ್ನು ಹಾಗೂ ದಂಗೆಕೋರ ಮನೋಭಾವವನ್ನು ಅನುಸರಿಸದಿರಲು ತನ್ನ ಕುಟುಂಬದವರು ಜಾಗ್ರತೆಯಿಂದಿರಬೇಕು ಎಂಬುದು ನೋಹನಿಗೆ ಚೆನ್ನಾಗಿ ಗೊತ್ತಿತ್ತು. ಅವರು ತಮ್ಮ ದೈನಂದಿನ ಕೆಲಸಕಾರ್ಯಗಳಲ್ಲೇ ಮುಳುಗಿಹೋಗಬಾರದಿತ್ತು. ದೇವರು ಅವರಿಗೆ ಒಂದು ಕೆಲಸವನ್ನು ಕೊಟ್ಟಿದ್ದನು. ಅದೇ ಅವರ ಜೀವನದ ಕೇಂದ್ರಬಿಂದುವಾಗಿರಬೇಕಿತ್ತು.—ಆದಿಕಾಂಡ 6:14, 18 ಓದಿ.
ನೋಹ ಮತ್ತವನ ಕುಟುಂಬದವರು ಸಿದ್ಧರಾಗಿದ್ದರು
8. ನೋಹನ ಕುಟುಂಬದವರಿಗೆ ದೇವಭಕ್ತಿಯಿತ್ತೆಂದು ಯಾವುದು ತೋರಿಸುತ್ತದೆ?
8 ಬೈಬಲ್ ವೃತ್ತಾಂತವು ಕುಟುಂಬದ ಶಿರಸ್ಸಾದ ನೋಹನ ಕಡೆಗೆ ಗಮನ ಕೇಂದ್ರೀಕರಿಸುತ್ತದಾದರೂ ನೋಹನ ಹೆಂಡತಿ, ಮಕ್ಕಳು ಹಾಗೂ ಸೊಸೆಯಂದಿರು ಸಹ ಯೆಹೋವನ ಆರಾಧಕರಾಗಿದ್ದರು. ಪ್ರವಾದಿಯಾದ ಯೆಹೆಜ್ಕೇಲನು ಇದನ್ನು ರುಜುಪಡಿಸಿದನು. ನೋಹನೇನಾದರೂ ತನ್ನ ಸಮಯದಲ್ಲಿ ಜೀವಿಸುತ್ತಿದ್ದಲ್ಲಿ ಅವನ ಮಕ್ಕಳು ತಂದೆಯ ಸದಾಚಾರದಿಂದ ರಕ್ಷಣೆಯನ್ನು ಹೊಂದಸಾಧ್ಯವಿರಲಿಲ್ಲ ಎಂದು ಯೆಹೆಜ್ಕೇಲನು ಹೇಳಿದನು. ಅವನ ಮಕ್ಕಳು ವಿಧೇಯರಾಗುವ ಅಥವಾ ಅವಿಧೇಯರಾಗುವ ನಿರ್ಣಯ ಮಾಡುವಷ್ಟು ದೊಡ್ಡವರಾಗಿದ್ದರು. ಹಾಗಾಗಿ ದೇವರ ಹಾಗೂ ಆತನ ಮಾರ್ಗಗಳ ಕಡೆಗೆ ತಮಗಿದ್ದ ಪ್ರೀತಿಯನ್ನು ಅವರು ವೈಯಕ್ತಿಕವಾಗಿ ರುಜುಪಡಿಸಿದ್ದರು. (ಯೆಹೆ. 14:19, 20) ನೋಹನ ಕುಟುಂಬದವರು ಅವನ ನಿರ್ದೇಶನಗಳನ್ನು ಪಾಲಿಸಿದರು, ಅವನ ನಂಬಿಕೆಯನ್ನು ಅನುಸರಿಸಿದರು ಹಾಗೂ ತಮ್ಮ ದೇವದತ್ತ ಕೆಲಸಕ್ಕೆ ಇತರರಿಂದ ಯಾವುದೇ ಅಡ್ಡಿಯಾಗದಂತೆ ನೋಡಿಕೊಂಡರು.
9. ನೋಹನಲ್ಲಿದ್ದ ನಂಬಿಕೆಯನ್ನು ಆಧುನಿಕ ಕಾಲದಲ್ಲಿ ಯಾರು ಪ್ರದರ್ಶಿಸುತ್ತಿದ್ದಾರೆ?
9 ಇಂದು ನಮ್ಮ ಲೋಕವ್ಯಾಪಕ ಸಹೋದರ ಬಳಗದಲ್ಲಿರುವ ಕುಟುಂಬದ ಶಿರಸ್ಸುಗಳು ಸಾಧ್ಯವಾದಷ್ಟು ಮಟ್ಟಿಗೆ ನೋಹನನ್ನು ಅನುಕರಿಸಲು ಪ್ರಯತ್ನಿಸುತ್ತಿರುವುದನ್ನು ನೋಡುವುದು ಎಷ್ಟೊಂದು ಉತ್ತೇಜನದಾಯಕ! ಕುಟುಂಬಕ್ಕೆ ಬರೇ ಆಹಾರ, ಬಟ್ಟೆ, ವಸತಿ ಹಾಗೂ ಶಿಕ್ಷಣ ಕೊಟ್ಟರಷ್ಟೇ ಸಾಲದು ಎಂಬದು ಅವರಿಗೆ ಗೊತ್ತಿದೆ. ಅವರು ತಮ್ಮ ಕುಟುಂಬದ ಆಧ್ಯಾತ್ಮಿಕ ಅಗತ್ಯಗಳನ್ನೂ ಪೂರೈಸುತ್ತಾರೆ. ಹೀಗೆ ಮಾಡುವ ಮೂಲಕ ದೇವರು ಬಲುಬೇಗನೆ ಮಾಡಲಿರುವ ವಿಷಯಗಳಿಗಾಗಿ ತಾವು ಸಿದ್ಧರಿದ್ದೇವೆಂದು ಅವರು ತೋರಿಸಿಕೊಡುತ್ತಾರೆ.
10, 11. (ಎ) ನಾವೆಯೊಳಗಿರುವಾಗ ನೋಹ ಮತ್ತವನ ಕುಟುಂಬದವರಿಗೆ ಹೇಗನಿಸಿರಬೇಕು? (ಬಿ) ನಾವು ಯಾವ ಪ್ರಶ್ನೆಯನ್ನು ಕೇಳಿಕೊಳ್ಳಬೇಕು?
10 ನೋಹ, ಅವನ ಹೆಂಡತಿ, ಮಕ್ಕಳು ಹಾಗೂ ಸೊಸೆಯಂದಿರು ನಾವೆ ಕಟ್ಟುವ ಕೆಲಸದಲ್ಲಿ ಸುಮಾರು 50 ವರ್ಷಗಳನ್ನು ಕಳೆದಿರಬಹುದು. ಅವರು ಎಷ್ಟೆಲ್ಲ ಕಷ್ಟಪಟ್ಟು ಕೆಲಸಮಾಡಬೇಕಿತ್ತು ಎಂಬುದನ್ನು ಯೋಚಿಸಿ ನೋಡಿ. ನೀರು ಒಳಬರದಂತೆ ನಾವೆಗೆ ಟಾರನ್ನು ಬಳಿದರು, ಆಹಾರವನ್ನು ಶೇಖರಿಸಿದರು ಮತ್ತು ಪ್ರಾಣಿಗಳನ್ನು ಒಳತಂದರು. ಹೀಗೆ ಅವರು ನಾವೆಯ ಒಳಗೂ ಹೊರಗೂ ನೂರಾರು ಸಲ ಒಡಾಡಿದ್ದಿರಬೇಕು. ಈ ಎಲ್ಲ ಕೆಲಸ ಮುಗಿದ ನಂತರ ಕ್ರಿ.ಪೂ. 2370ರ ಎರಡನೇ ತಿಂಗಳಿನ 17ನೇ ದಿನದಂದು ಪ್ರಳಯ ಬಂದೇಬಿಟ್ಟಿತು. ಆ ದಿನದ ದೃಶ್ಯವನ್ನು ಸ್ವಲ್ಪ ಚಿತ್ರಿಸಿಕೊಳ್ಳಿ. ಅಂದು ಅವರು ನಾವೆಯ ಒಳಹೊಕ್ಕರು. ಯೆಹೋವನು ನಾವೆಯ ಬಾಗಿಲನ್ನು ಮುಚ್ಚಿದನು, ಮಳೆಯು ಪ್ರಾರಂಭವಾಯಿತು. ಇದು ಸಾಮಾನ್ಯವಾಗಿ ಬರುವ ಜೋರಾದ ಮಳೆ ಅಲ್ಲ. ಅದೆಷ್ಟು ಧಾರಾಕಾರವಾಗಿ ಸುರಿಯಿತೆಂದರೆ ಆಕಾಶದಿಂದ ಸಮುದ್ರವೇ ಕೆಳಗೆ ಬಿದ್ದಂತಿತ್ತು. (ಆದಿ. 7:11, 16) ನಾವೆಯ ಹೊರಗಿದ್ದವರೆಲ್ಲ ಜೀವಕಳಕೊಂಡರು, ಆದರೆ ಒಳಗಿದ್ದವರು ರಕ್ಷಿಸಲ್ಪಟ್ಟರು. ನೋಹನ ಕುಟುಂಬದವರಿಗೆ ಹೇಗನಿಸಿರಬಹುದು? ಅವರು ದೇವರಿಗೆ ಅಂತರಾಳದಿಂದ ಕೃತಜ್ಞತೆ ಸಲ್ಲಿಸಿದ್ದಿರಲೇಬೇಕು. ಅಲ್ಲದೆ, ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡದ್ದಕ್ಕೆ ಹಾಗೂ ತಾವು ಸಿದ್ಧರಾಗಿದ್ದದ್ದಕ್ಕೆ ಬಹಳ ಸಂತೋಷಪಟ್ಟಿರಬೇಕು. (ಆದಿ. 6:9) ನೀವು ಅರ್ಮಗೆದೋನ್ನಿಂದ ಪಾರಾಗಿ ನಿಂತಿರುವ ದೃಶ್ಯವನ್ನು ಚಿತ್ರಿಸಿಕೊಳ್ಳಬಲ್ಲಿರೋ? ಆಗ ನಿಮ್ಮ ಹೃದಯವೂ ಅಂಥದ್ದೇ ರೀತಿಯ ಕೃತಜ್ಞತೆಯಿಂದ ತುಂಬಿತುಳುಕುವುದಲ್ಲವೇ?
11 ಈ ಸೈತಾನನ ಲೋಕಕ್ಕೆ ಅಂತ್ಯ ತರುವ ತನ್ನ ವಾಗ್ದಾನವನ್ನು ಪೂರೈಸುವುದರಿಂದ ಸರ್ವಶಕ್ತನನ್ನು ಯಾವುದೂ ತಡೆಯಲಾರದು. ಹೀಗೆ ಕೇಳಿಕೊಳ್ಳಿ: ‘ದೇವರು ತನ್ನೆಲ್ಲ ವಾಗ್ದಾನಗಳನ್ನು ಚಾಚೂತಪ್ಪದೆ ತಕ್ಕ ಸಮಯದಲ್ಲಿ ನೆರವೇರಿಸುವನು ಎಂಬ ಪೂರ್ಣ ಭರವಸೆ ನನಗಿದೆಯೋ?’ ಹಾಗಿರುವಲ್ಲಿ ಧಾವಿಸಿಬರುತ್ತಿರುವ ‘ಯೆಹೋವನ ದಿನವನ್ನು’ ಮನಸ್ಸಿನಲ್ಲಿ ನಿಕಟವಾಗಿಟ್ಟುಕೊಳ್ಳುವ ಮೂಲಕ ನೀವು ಸಿದ್ಧರಿದ್ದೀರೆಂದು ತೋರಿಸಿಕೊಡಿರಿ.—2 ಪೇತ್ರ 3:12.
ಮೋಶೆ ಎಚ್ಚರವಾಗಿದ್ದನು
12. ಮೋಶೆಯ ಆಧ್ಯಾತ್ಮಿಕ ನೋಟವನ್ನು ಯಾವುದು ಮಬ್ಬುಗೊಳಿಸಸಾಧ್ಯವಿತ್ತು?
12 ಈಗ ಇನ್ನೊಂದು ಉದಾಹರಣೆಯನ್ನು ಪರಿಗಣಿಸೋಣ. ಭೌತಿಕ ದೃಷ್ಟಿಕೋನದಲ್ಲಿ, ಮೋಶೆ ಈಜಿಪ್ಟ್ ದೇಶದಲ್ಲೇ ಅತ್ಯುನ್ನತ ಸ್ಥಾನದಲ್ಲಿದ್ದನು. ಫರೋಹನ ಮಗಳ ದತ್ತುಮಗನೋಪಾದಿಯಿದ್ದ ಅವನು ಗೌರವಯುತ ಸ್ಥಾನಮಾನ ಹೊಂದಿದ್ದನು, ಮೃಷ್ಟಾನ್ನ ಭೋಜನ ಸವಿಯುತ್ತಿದ್ದನು, ಶ್ರೇಷ್ಠ ಉಡುಪು ಧರಿಸುತ್ತಿದ್ದನು. ಅರಮನೆಯಲ್ಲಿ ಜೀವಿಸುತ್ತಿದ್ದ ಅವನಿಗೆ ಯಾವುದಕ್ಕೂ ಕೊರತೆಯಿರಲಿಲ್ಲ. ಉನ್ನತ ಶಿಕ್ಷಣವನ್ನು ಸಹ ಪಡೆದಿದ್ದನು. (ಅ. ಕಾರ್ಯಗಳು 7:20-22 ಓದಿ.) ವಾರಸುದಾರನೋಪಾದಿ ಅವನು ದೊಡ್ಡ ಮೊತ್ತದ ಆಸ್ತಿಯನ್ನು ಪಡೆಯಬಹುದಿತ್ತು.
13. ದೇವರ ವಾಗ್ದಾನಗಳ ಮೇಲೆ ಗಮನ ಕೇಂದ್ರೀಕರಿಸಲು ಮೋಶೆಗೆ ಹೇಗೆ ಸಾಧ್ಯವಾಯಿತು?
13 ಈಜಿಪ್ಟಿನವರು ವಿಗ್ರಹಗಳನ್ನು ಆರಾಧಿಸುತ್ತಿದ್ದರು. ಆದರೆ ಇದು ಮೂರ್ಖತನವೆಂದು ಮೋಶೆಗೆ ಗೊತ್ತಿತ್ತು. ಏಕೆಂದರೆ, ಯೆಹೋವನೇ ಸತ್ಯದೇವರೆಂದು ಚಿಕ್ಕಂದಿನಲ್ಲೇ ಅವನ ಹೆತ್ತವರು ಅವನಿಗೆ ಕಲಿಸಿದ್ದರು. (ವಿಮೋ. 32:8) ಈಜಿಪ್ಟ್ನ ಶಿಕ್ಷಣ ಪದ್ಧತಿ ಹಾಗೂ ಅರಮನೆಯಲ್ಲಿನ ರಾಜವೈಭವದಿಂದಾಗಿ ಮೋಶೆ ಸತ್ಯಾರಾಧನೆಯನ್ನು ತ್ಯಜಿಸಿಬಿಡಲಿಲ್ಲ. ದೇವರು ತನ್ನ ಪಿತೃಗಳಿಗೆ ಮಾಡಿದ್ದ ವಾಗ್ದಾನಗಳ ಬಗ್ಗೆ ಅವನು ಆಳವಾಗಿ ಧ್ಯಾನಿಸಿದ್ದಿರಬೇಕು. ದೈವಿಕ ಚಿತ್ತವನ್ನು ಮಾಡಲು ತಾನು ಸಿದ್ಧನಿದ್ದೇನೆಂದು ತೋರಿಸಿಕೊಡಲು ಅವನು ಬಯಸಿದನು. ಆದ್ದರಿಂದಲೇ, “ಅಬ್ರಹಾಮ ಇಸಾಕ ಯಾಕೋಬರ ದೇವರಾಗಿರುವ ಯೆಹೋವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ” ಎಂದು ಮೋಶೆ ಇಸ್ರಾಯೇಲ್ಯರಿಗೆ ಹೇಳಿದನು.—ವಿಮೋಚನಕಾಂಡ 3:15-17 ಓದಿ.
14. ಮೋಶೆಯ ನಂಬಿಕೆ ಹಾಗೂ ಧೈರ್ಯ ಹೇಗೆ ಪರೀಕ್ಷೆಗೊಳಗಾಯಿತು?
14 ಮೋಶೆಗೆ ಸತ್ಯದೇವರಾದ ಯೆಹೋವನು ಈಜಿಪ್ಟ್ನ ನಿರ್ಜೀವ ದೇವರುಗಳ ವಿಗ್ರಹಗಳಂತಿರದೆ ನೈಜ ವ್ಯಕ್ತಿಯಾಗಿದ್ದನು. ಅವನು “ಅದೃಶ್ಯನಾಗಿರುವಾತನನ್ನು” ನೋಡುವವನೋ ಎಂಬಂತೆ ಜೀವಿಸಿದನು. ದೇವಜನರು ಬಿಡುಗಡೆಗೊಳಿಸಲ್ಪಡುವರು ಎಂಬ ನಂಬಿಕೆ ಮೋಶೆಗಿತ್ತು. ಆದರೆ ಯಾವಾಗ ಎಂಬುದು ಮಾತ್ರ ಅವನಿಗೆ ಗೊತ್ತಿರಲಿಲ್ಲ. (ಇಬ್ರಿ. 11:24, 25, 27) ಒಮ್ಮೆ ದುರುಪಚಾರಕ್ಕೆ ಒಳಗಾಗಿದ್ದ ಇಸ್ರಾಯೇಲ್ಯ ದಾಸನನ್ನು ಮೋಶೆ ರಕ್ಷಿಸಿದನು. ಇಬ್ರಿಯರ ಬಿಡುಗಡೆಗಾಗಿ ಅವನು ತುಂಬ ಹಂಬಲಿಸುತ್ತಿದ್ದನು ಎಂಬುದು ಇದರಿಂದ ಗೊತ್ತಾಗುತ್ತದೆ. (ವಿಮೋ. 2:11, 12) ಆದರೆ ಬಿಡುಗಡೆಗೆ ಯೆಹೋವನು ನೇಮಿಸಿದ ಸಮಯ ಇನ್ನು ಬಂದಿರದ ಕಾರಣ ಮೋಶೆಯು ದೂರದ ದೇಶದಲ್ಲಿ ಅಲೆಮಾರಿಯಂತೆ ಜೀವಿಸಬೇಕಾಯಿತು. ಈಜಿಪ್ಟ್ನ ಅರಮನೆಯಲ್ಲಿನ ಐಷಾರಾಮದ ಜೀವನವನ್ನು ಬಿಟ್ಟು ಅರಣ್ಯದಲ್ಲಿ ಅಲೆಮಾರಿಯಂತೆ ಜೀವಿಸಲು ಮೋಶೆಗೆ ಖಂಡಿತ ಕಷ್ಟವಾಗಿರಬೇಕು. ಹಾಗಿದ್ದರೂ ಯೆಹೋವನು ಕೊಟ್ಟ ಪ್ರತಿಯೊಂದು ನಿರ್ದೇಶನಕ್ಕೆ ಎಚ್ಚರವಾಗಿದ್ದು ತಾನು ಸಿದ್ಧನಾಗಿದ್ದೇನೆಂಬುದನ್ನು ಅವನು ರುಜುಪಡಿಸಿದನು. ಹಾಗಾಗಿಯೇ ಅವನು ಮಿದ್ಯಾನ್ನಲ್ಲಿ 40 ವರ್ಷಗಳನ್ನು ಕಳೆದ ಬಳಿಕ ಇಸ್ರಾಯೇಲ್ಯರನ್ನು ಬಿಡುಗಡೆಗೊಳಿಸಲು ದೇವರು ಅವನನ್ನು ಉಪಯೋಗಿಸಿದನು. ಯೆಹೋವನ ನಿರ್ದೇಶನದ ಮೇರೆಗೆ ಮೋಶೆಯು ವಿಧೇಯತೆಯಿಂದ ಈಜಿಪ್ಟ್ಗೆ ಹಿಂದಿರುಗಿದನು. ದೈವಿಕ ನೇಮಕವನ್ನು ಪೂರೈಸುವ ಹಾಗೂ ದೇವರ ಕೆಲಸವನ್ನು ದೇವರು ಹೇಳಿದಂತೆಯೇ ಮಾಡುವ ಸಂದರ್ಭ ಮೋಶೆಗೆ ಈಗ ಒದಗಿಬಂತು. (ವಿಮೋ. 3:2, 7, 8, 10) “ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕನು” ಆಗಿದ್ದ ಮೋಶೆಗೆ ಈಗ ಈಜಿಪ್ಟ್ನಲ್ಲಿ ಫರೋಹನನ್ನು ಎದುರಿಸಲು ನಂಬಿಕೆ ಹಾಗೂ ಧೈರ್ಯದ ಅಗತ್ಯವಿತ್ತು. (ಅರ. 12:3) ಅವನು ಕೇವಲ ಒಂದು ಬಾರಿಯಲ್ಲ ಪದೇ ಪದೇ ಪ್ರತಿಯೊಂದು ಉಪದ್ರವ ಬಂದೆರಗುವಾಗೆಲ್ಲ ಫರೋಹನ ಮುಂದೆ ಹೋಗಬೇಕಿತ್ತು. ಅಷ್ಟೇ ಅಲ್ಲ ಒಂದು ಉಪದ್ರವದಿಂದ ಮತ್ತೊಂದು ಉಪದ್ರವ ಬರುವಷ್ಟರಲ್ಲಿ ಮತ್ತೆಷ್ಟು ಭಾರಿ ಫರೋಹನನ್ನು ಎದುರುಗೊಳ್ಳಲಿಕ್ಕಿದೆ ಎಂಬುದು ಸಹ ಅವನಿಗೆ ತಿಳಿದಿರಲಿಲ್ಲ.
15. ಅಡ್ಡಿತಡೆಗಳಿದ್ದರೂ ಯೆಹೋವನನ್ನು ಘನಪಡಿಸುವ ಸಂದರ್ಭಗಳಿಗಾಗಿ ಹುಡುಕುತ್ತಿರುವಂತೆ ಮೋಶೆಯನ್ನು ಯಾವುದು ಪ್ರಚೋದಿಸಿತು?
15 ಅನಂತರ 40ವರ್ಷ ಅಂದರೆ ಕ್ರಿ.ಪೂ. 1513ರಿಂದ ಹಿಡಿದು ಕ್ರಿ.ಪೂ. 1473ರ ವರೆಗೆ ಅವನು ಆಗಾಗ್ಗೆ ನಿರಾಶೆಯನ್ನು ಅನುಭವಿಸಿದನು. ಹಾಗಿದ್ದರೂ ಅವನು ಯೆಹೋವನನ್ನು ಘನಪಡಿಸಲು ಸಂದರ್ಭಗಳಿಗಾಗಿ ಹುಡುಕುತ್ತಿದ್ದನು ಮತ್ತು ಹಾಗೆ ಮಾಡುವಂತೆ ತನ್ನ ಜೊತೆ ಇಸ್ರಾಯೇಲ್ಯರನ್ನೂ ಪೂರ್ಣಹೃದಯದಿಂದ ಉತ್ತೇಜಿಸುತ್ತಿದ್ದನು. (ಧರ್ಮೋ. 31:1-8) ಏಕೆ? ಏಕೆಂದರೆ ಅವನು ತನ್ನ ಸ್ವಂತ ಹೆಸರಿಗಿಂತ ಹೆಚ್ಚಾಗಿ ಯೆಹೋವನ ನಾಮ ಹಾಗೂ ಪರಮಾಧಿಕಾರವನ್ನು ಪ್ರೀತಿಸಿದನು. (ವಿಮೋ. 32:10-13; ಅರ. 14:11-16) ನಾವು ಸಹ ನಿರಾಶೆ ಅಥವಾ ಅಡ್ಡಿತಡೆಗಳ ಹೊರತೂ ದೇವರ ಆಳ್ವಿಕೆಯನ್ನು ಬೆಂಬಲಿಸುವುದನ್ನು ಮುಂದುವರಿಸಬೇಕು. ಹೀಗೆ ಯೆಹೋವನು ವಿಷಯಗಳನ್ನು ಬೇರೆ ಯಾರಿಗಿಂತಲೂ ಹೆಚ್ಚು ವಿವೇಕಯುತವಾಗಿ, ನೀತಿಯುತವಾಗಿ ಹಾಗೂ ಉತ್ತಮವಾಗಿ ನಿರ್ವಹಿಸುತ್ತಾನೆ ಎಂಬ ಪೂರ್ಣ ಭರವಸೆಯುಳ್ಳವರಾಗಿರಬೇಕು. (ಯೆಶಾ. 55:8-11; ಯೆರೆ. 10:23) ಆ ಭರವಸೆ ನಿಮಗಿದೆಯೇ?
ಎಚ್ಚರವಾಗಿ ಇರಿ!
16, 17. ಮಾರ್ಕ 13:35-37 ನಮಗೆ ಮಹತ್ವಾರ್ಥವನ್ನು ಹೊಂದಿದೆಯೇಕೆ?
16 “ಆ ನೇಮಿತ ಸಮಯವು ಯಾವಾಗ ಎಂಬುದು ನಿಮಗೆ ತಿಳಿಯದ ಕಾರಣ ಅದಕ್ಕಾಗಿ ನೋಡುತ್ತಾ ಇರಿ, ಎಚ್ಚರವಾಗಿ ಇರಿ.” (ಮಾರ್ಕ 13:33) ಈ ದುಷ್ಟ ಲೋಕದ ಸಮಾಪ್ತಿಯನ್ನು ಗುರುತಿಸುವ ಸೂಚನೆಯನ್ನು ಕೊಡುವಾಗ ಯೇಸು ಆ ಎಚ್ಚರಿಕೆ ಕೊಟ್ಟನು. ಆ ಮಹತ್ವಪೂರ್ಣ ಪ್ರವಾದನೆ ಕುರಿತ ಯೇಸುವಿನ ಸಮಾಪ್ತಿ ಹೇಳಿಕೆಗಳನ್ನು ಮಾರ್ಕನು ಹೀಗೆ ವರದಿಸುತ್ತಾನೆ: “ಮನೆಯ ಯಜಮಾನನು ಸಂಜೆಯಲ್ಲಿಯೊ ಮಧ್ಯರಾತ್ರಿಯಲ್ಲಿಯೊ ಕೋಳಿ ಕೂಗುವಾಗಲೊ ಬೆಳಗಾಗುವಾಗಲೊ ಯಾವಾಗ ಬರುತ್ತಾನೆಂಬುದು ನಿಮಗೆ ತಿಳಿದಿಲ್ಲದ ಕಾರಣ ಸದಾ ಎಚ್ಚರವಾಗಿರಿ; ಇಲ್ಲವಾದರೆ ಅವನು ಫಕ್ಕನೆ ಬರುವಾಗ ನೀವು ನಿದ್ರಿಸುತ್ತಿರುವುದನ್ನು ಕಂಡಾನು. ನಾನು ನಿಮಗೆ ಹೇಳುವುದನ್ನು ಎಲ್ಲರಿಗೂ ಹೇಳುತ್ತೇನೆ, ಸದಾ ಎಚ್ಚರವಾಗಿರಿ.”—ಮಾರ್ಕ 13:35-37.
17 ಯೇಸುವಿನ ಎಚ್ಚರಿಕೆಯು ಆಲೋಚಿಸುವಂತೆ ನಮ್ಮನ್ನು ಪ್ರೇರಿಸುತ್ತದೆ! ಯೇಸು ಅಲ್ಲಿ ರಾತ್ರಿಯ ನಾಲ್ಕು ಜಾವಗಳಿಗೆ ಸೂಚಿಸಿದನು. ಕೊನೆಯ ಜಾವದಲ್ಲಿ ಎಚ್ಚರವಾಗಿರುವುದು ದೊಡ್ಡ ಸವಾಲಾಗಿತ್ತು. ಏಕೆಂದರೆ ಅದು ಬೆಳಗ್ಗೆ ಸುಮಾರು ಮೂರು ಗಂಟೆಯಿಂದ ಸೂರ್ಯ ಉದಯಿಸುವ ವರೆಗಿನ ಸಮಯವಾಗಿತ್ತು. ಯುದ್ಧ ಮಾಡುವವರು ಹೆಚ್ಚಾಗಿ ಈ ಸಮಯದಲ್ಲೇ ಶತ್ರುಗಳ ಮೇಲೆ ಆಕ್ರಮಣ ಮಾಡುತ್ತಾರೆ. ಏಕೆಂದರೆ ಅವರು ‘ನಿದ್ರಿಸಿರುವುದರಿಂದ’ ಅವರನ್ನು ಸುಲಭವಾಗಿ ಹಿಡಿಯಬಹುದು. ಅದೇರೀತಿಯಲ್ಲಿ ಆಧ್ಯಾತ್ಮಿಕ ಅರ್ಥದಲ್ಲಿ ಈ ಲೋಕವು ಗಾಢ ನಿದ್ರೆಮಾಡುತ್ತಿರುವಾಗ ನಾವಾದರೋ ಎಚ್ಚರವಾಗಿರಲು ಬಹಳ ಪ್ರಯಾಸಪಡಬೇಕಾಗುತ್ತದೆ. ಆದ್ದರಿಂದಲೇ ಮುಂತಿಳಿಸಲಾಗಿರುವ ಅಂತ್ಯ ಮತ್ತು ನಮ್ಮ ಬಿಡುಗಡೆಗಾಗಿ ನಾವು ‘ನೋಡುತ್ತಾ ಇರಬೇಕು’ ಹಾಗೂ ‘ಎಚ್ಚರವಾಗಿ ಇರಬೇಕು.’
18. ಯಾವ ಅತ್ಯಮೂಲ್ಯ ಸದವಕಾಶ ಯೆಹೋವನ ಸಾಕ್ಷಿಗಳಾದ ನಮ್ಮ ಮುಂದಿದೆ?
18 ಪ್ರಾರಂಭದಲ್ಲಿ ತಿಳಿಸಲಾದ ವ್ಯಕ್ತಿಯು ಬಂಗಾಳದ ಹುಲಿಯ ಆಕ್ರಮಣದಿಂದ ಪಾರಾದನು. ಆದರೆ ಸುಳ್ಳು ಧರ್ಮವಾಗಲಿ, ಉಳಿದ ದುಷ್ಟ ಲೋಕವಾಗಲಿ ಬರಲಿರುವ ಅಂತ್ಯದಿಂದ ಪಾರಾಗುವ ಸಾಧ್ಯತೆಯೇ ಇಲ್ಲವೆಂದು ಬೈಬಲ್ ಪ್ರವಾದನೆ ಸ್ಪಷ್ಟವಾಗಿ ತಿಳಿಸುತ್ತದೆ. (ಪ್ರಕ. 18:4-8) ಹಾಗಾದರೆ ಹಿರಿಕಿರಿಯರೆನ್ನದೆ ದೇವರ ಸೇವಕರೆಲ್ಲರೂ ನೋಹ ಮತ್ತವನ ಕುಟುಂಬದವರಂತೆ ಯೆಹೋವನ ದಿನಕ್ಕಾಗಿ ಸಿದ್ಧರಾಗಿರಲು ತಮ್ಮಿಂದಾದುದೆಲ್ಲವನ್ನೂ ಮಾಡುವುದನ್ನು ಗಂಭೀರವಾಗಿ ಪರಿಗಣಿಸೋಣ. ಸೃಷ್ಟಿಕರ್ತನ ಅವಹೇಳನ ಮಾಡಿ ಆತನನ್ನು ಅಗೌರವಿಸುವ ಸುಳ್ಳು ಧರ್ಮದ ಬೋಧಕರು, ಆಜ್ಞೇಯತಾವಾದಿಗಳು ಮತ್ತು ನಾಸ್ತಿಕರ ಮಧ್ಯೆ ನಾವು ಜೀವಿಸುತ್ತಿದ್ದೇವೆ. ನಾವು ಅವರ ಪ್ರಭಾವಕ್ಕೊಳಗಾಗಿ ಅಪಾಯದಲ್ಲಿ ಸಿಲುಕಿಕೊಳ್ಳಲು ಬಯಸುವುದಿಲ್ಲ. ಹಾಗಾದರೆ ನಾವೀಗಷ್ಟೇ ಪರಿಗಣಿಸಿದ ಉದಾಹರಣೆಗಳನ್ನು ಹೃದಯಕ್ಕೆ ತೆಗೆದುಕೊಳ್ಳೋಣ. ಯೆಹೋವನೇ ‘ದೇವಾಧಿದೇವನೂ, ಪರಮದೇವರೂ ಪರಾಕ್ರಮಿಯೂ ಭಯಂಕರನೂ’ ಎಂದು ತೋರಿಸಿಕೊಡಲಿಕ್ಕಾಗಿ ಮತ್ತು ಘನಪಡಿಸಲಿಕ್ಕಾಗಿ ಅವಕಾಶಗಳನ್ನು ಹುಡುಕಲು ಸದಾ ಎಚ್ಚರವಾಗಿರೋಣ.—ಧರ್ಮೋ. 10:17.
[ಪಾದಟಿಪ್ಪಣಿ]
a ಆದಿಕಾಂಡ 6:3ರಲ್ಲಿ ತಿಳಿಸಿರುವ ‘ನೂರ ಇಪ್ಪತ್ತು ವರುಷಗಳ’ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 2010, ಡಿಸೆಂಬರ್ 15ರ ಕಾವಲಿನಬುರುಜುವಿನ ಪುಟ 30 ನೋಡಿ.
ನಿಮಗೆ ಜ್ಞಾಪಕವಿದೆಯೊ?
• ನೋಹನು ತನ್ನ ಕುಟುಂಬದ ಆಧ್ಯಾತ್ಮಿಕ ಅಗತ್ಯಗಳಿಗೆ ಏಕೆ ಆದ್ಯತೆ ಕೊಡಬೇಕಿತ್ತು?
• ನಮ್ಮ ದಿನಗಳು ಹೇಗೆ ನೋಹನ ದಿನಗಳಂತೆಯೇ ಇವೆ?
• ನಿರಾಶೆಯ ಹೊರತೂ ಮೋಶೆಯು ಯೆಹೋವನ ವಾಗ್ದಾನಗಳ ಮೇಲೆ ಏಕೆ ದೃಷ್ಟಿ ನೆಟ್ಟಿದ್ದನು?
• ಯಾವ ಬೈಬಲ್ ಪ್ರವಾದನೆಗಳು ಆಧ್ಯಾತ್ಮಿಕವಾಗಿ ಎಚ್ಚರವಾಗಿರಲು ನಿಮ್ಮನ್ನು ಪ್ರೇರಿಸಿವೆ?
[ಪುಟ 25ರಲ್ಲಿರುವ ಚಿತ್ರ]
ನೋಹ ಮತ್ತವನ ಕುಟುಂಬದವರು ಯೆಹೋವನ ಕೆಲಸ ಮಾಡುವುದರ ಮೇಲೆ ಗಮನ ಕೇಂದ್ರೀಕರಿಸಿದರು
[ಪುಟ 26ರಲ್ಲಿರುವ ಚಿತ್ರ]
ದೇವರ ನಿಶ್ಚಿತ ವಾಗ್ದಾನಗಳು ಮೋಶೆಗೆ ಎಚ್ಚರವಾಗಿರಲು ಸಹಾಯಮಾಡಿದವು