ಭವಿಷ್ಯವಾಣಿಗಳ ಅರ್ಥಬಿಡಿಸಲು ಯಾರಿಂದ ಸಾಧ್ಯ?
‘ಗಾರ್ಡಿಯನ್ ನಾಟ್’ ಎನ್ನುವುದು ಮಹಾ ಅಲೆಕ್ಸಾಂಡರ್ನ ಕಾಲದಲ್ಲಿ ಬಿಡಿಸಲಾಗದ ಒಂದು ಗಂಟಾಗಿತ್ತಂತೆ. ಆ ಗಂಟನ್ನು ಬಿಚ್ಚುವವ ಅತಿ ಬುದ್ಧಿವಂತನಾಗಿದ್ದು ಮುಂದೆ ಹೆಚ್ಚೆಚ್ಚು ರಾಜ್ಯಗಳನ್ನು ಗೆಲ್ಲುತ್ತಾ ಹೋಗುವನೆಂದು ಜನರು ನಂಬಿದ್ದರು.a ಅಲೆಕ್ಸಾಂಡರ್ ಆ ಗಂಟನ್ನು ತನ್ನ ಖಡ್ಗದ ಒಂದೇ ಏಟಿಗೆ ತುಂಡರಿಸಿದನೆಂದು ಪುರಾಣ ಹೇಳುತ್ತದೆ.
ಕಗ್ಗಂಟುಗಳನ್ನು ಬಿಚ್ಚುವ, ಒಗಟುಗಳನ್ನು ಬಿಡಿಸುವ, ಭವಿಷ್ಯವಾಣಿಗಳ ಅಥವಾ ಪ್ರವಾದನೆಗಳ ಅರ್ಥ ಹೇಳುವ, ಅಷ್ಟೇಕೆ ಭವಿಷ್ಯನುಡಿಯುವ ಪ್ರಯತ್ನ ಶತಮಾನಗಳಿಂದ ನಡೆದೇ ಇದೆ. ಎಷ್ಟೋ ಮಂದಿ ಬುದ್ಧಿವಂತರು ಈ ಸಾಹಸಕ್ಕೆ ಕೈಹಾಕಿದ್ದಾರೆ.
ಆದರೆ ಇದರಲ್ಲಿ ಕೈಸುಟ್ಟುಕೊಂಡವರೇ ಹೆಚ್ಚು. ಉದಾಹರಣೆಗೆ ಪ್ರಾಚೀನ ಬ್ಯಾಬಿಲೋನಿನ ರಾಜ ಬೇಲ್ಶಚ್ಚರನ ಅರಮನೆಯಲ್ಲಿ ನಡೆದ ಘಟನೆಯನ್ನು ತೆಗೆದುಕೊಳ್ಳಿ. ಅಲ್ಲಿ ಸಂಭ್ರಮದ ಔತಣ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಗೋಡೆಯ ಮೇಲೆ ಕೈಬರಹವೊಂದು ಕಾಣಿಸಿತು. ಆ ಬರಹದ ಅರ್ಥಬಿಡಿಸಲು ಅಲ್ಲಿನ ವಿದ್ವಾಂಸರು ವಿಫಲರಾದರು. ಆದರೆ “ಗುಂಜುಗಂಟು ಬಿಚ್ಚುವ” ತನ್ನ ಚಾತುರ್ಯಕ್ಕೆ ಪ್ರಸಿದ್ಧನಾದ ದಾನಿಯೇಲನೆಂಬ ವ್ಯಕ್ತಿ ರಾಜನ ಆಸ್ಥಾನದಲ್ಲಿದ್ದನು. ಯೆಹೋವ ದೇವರ ಭಕ್ತನಾಗಿದ್ದ ಆ ವೃದ್ಧ ಪ್ರವಾದಿ ಮಾತ್ರವೇ ಕೈಬರಹದ ಅರ್ಥಬಿಡಿಸಲು ಶಕ್ತನಾದನು. (ದಾನಿಯೇಲ 5:12) ಅದರಲ್ಲಿ ಬ್ಯಾಬಿಲೋನ್ ಸಾಮ್ರಾಜ್ಯದ ಅಧಃಪತನದ ಸಂದೇಶವಿತ್ತು. ಅದೇ ರಾತ್ರಿ ಆ ಭವಿಷ್ಯವಾಣಿ ಸತ್ಯವಾಯಿತು!—ದಾನಿಯೇಲ 5:1, 4-8, 25-30.
ಭವಿಷ್ಯವಾಣಿ ಅಂದರೇನು?
ಮುಂದೆ ನಡೆಯುವುದನ್ನು ಮೊದಲೇ ಹೇಳುವುದನ್ನು ಭವಿಷ್ಯವಾಣಿ ಅಥವಾ ಪ್ರವಾದನೆ ಎನ್ನುತ್ತಾರೆ. ಆದರೆ ನಿಜವಾದ ಪ್ರವಾದನೆ ದೇವರ ಪ್ರೇರಣೆಯಿಂದ ಬರೆಯಲಾದ ಅಥವಾ ಹೇಳಲಾದ ಒಂದು ಸಂದೇಶ. ಅದು ಆತನ ಉದ್ದೇಶವನ್ನು ಪ್ರಕಟಿಸುವಂಥದ್ದು. ಬೈಬಲಿನಲ್ಲಿ ಹಲವಾರು ಭವಿಷ್ಯವಾಣಿಗಳಿವೆ. ಕ್ರಿಸ್ತನು ಬರುವ ಮತ್ತು ಆತನನ್ನು ಗುರುತಿಸುವ ಬಗ್ಗೆ, ಈ ದುಷ್ಟ ವ್ಯವಸ್ಥೆಯ ಸಮಾಪ್ತಿಯ ಬಗ್ಗೆ, ದೇವರ ನ್ಯಾಯತೀರ್ಪಿನ ಸಂದೇಶಗಳ ಬಗ್ಗೆ ಇತ್ಯಾದಿ.—ಮತ್ತಾಯ 24:3; ದಾನಿಯೇಲ 9:25.
ಇಂದು ಕೂಡ ಬುದ್ಧಿಜೀವಿಗಳು ಅಂದರೆ ವಿಜ್ಞಾನ, ಅರ್ಥಶಾಸ್ತ್ರ, ಆರೋಗ್ಯ, ರಾಜಕೀಯ, ಪರಿಸರ, ಇನ್ನಿತರ ಕ್ಷೇತ್ರಗಳ ಪರಿಣತರು ಭವಿಷ್ಯನುಡಿಯಲು ಪ್ರಯತ್ನಿಸುತ್ತಾರೆ. ಅವರ ಇಂಥ ಹಲವು ಭವಿಷ್ಯವಾಣಿಗಳು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರಗೊಳ್ಳುತ್ತವೆ. ಜನರೂ ಅವುಗಳನ್ನು ಕಣ್ಮುಚ್ಚಿ ನಂಬುತ್ತಾರೆ. ಆದರೆ ಅವೆಲ್ಲ, ಪರಿಣತರು ತಮ್ಮ ಪಾಂಡಿತ್ಯದ ಮೇಲೆ ಆಧರಿಸಿ ಮಾಡಿದ ಊಹಾಪೋಹಗಳು, ವೈಯಕ್ತಿಕ ಅಭಿಪ್ರಾಯಗಳಷ್ಟೇ. ಅಲ್ಲದೆ ಇಂಥ ಅಭಿಪ್ರಾಯಗಳಿಗೆ ವಿರುದ್ಧವಾಗಿ ಇನ್ನೆಷ್ಟೋ ಅಭಿಪ್ರಾಯಗಳು, ಪ್ರತಿವಾದಗಳು ಹರಿದು ಬರುವುದುಂಟು. ಹಾಗಾಗಿ ಭವಿಷ್ಯನುಡಿಯುವುದು ರಗಳೆಗಳನ್ನು ಹುಟ್ಟುಹಾಕುತ್ತದೆ.
ನಿಜ ಭವಿಷ್ಯವಾಣಿಗಳ ಹಿಂದೆ ಯಾರಿದ್ದಾರೆ?
ನಿಜ ಭವಿಷ್ಯವಾಣಿಗಳನ್ನು ನುಡಿದು ಅವುಗಳ ಅರ್ಥಬಿಡಿಸ ಬಲ್ಲವರು ಯಾರು? “ಶಾಸ್ತ್ರಗ್ರಂಥದಲ್ಲಿರುವ ಯಾವ ಪ್ರವಾದನೆಯೂ ಯಾವುದೇ ಖಾಸಗಿ ಅರ್ಥವಿವರಣೆಯಿಂದ ಉಂಟಾಗುವುದಿಲ್ಲ” ಎಂದು ಬರೆದನು ಯೇಸುವಿನ ಶಿಷ್ಯ ಪೇತ್ರ. (2 ಪೇತ್ರ 1:20) “ಅರ್ಥವಿವರಣೆ” ಎಂಬ ಗ್ರೀಕ್ ಪದ ಹುಟ್ಟಿರುವುದು “ಸಡಿಲಿಸು ಅಥವಾ ಬಿಡಿಸು” ಎಂಬರ್ಥವಿರುವ ಕ್ರಿಯಾಪದದಿಂದ. ಹಾಗಾಗಿ ಪೇತ್ರನ ಮಾತುಗಳನ್ನು ಇನ್ನೊಂದು ಬೈಬಲ್ ಭಾಷಾಂತರ “ಶಾಸ್ತ್ರಗ್ರಂಥದಲ್ಲಿರುವ ಯಾವ ಪ್ರವಾದನೆಯನ್ನೂ ಯಾರೂ ಸ್ವಂತ ಸಾಮರ್ಥ್ಯದಿಂದ . . . ಬಿಡಿಸುವುದಿಲ್ಲ” ಎಂದು ತರ್ಜುಮೆಮಾಡಿದೆ.
ನಾವಿಕರು ಹಾಕುವ ಗಂಟನ್ನು ಗಮನಿಸಿದ್ದೀರಾ? ಅದು ಜಟಿಲವಾಗಿರುವುದರಿಂದ ಒಬ್ಬ ಸಾಮಾನ್ಯ ವ್ಯಕ್ತಿ ಅದನ್ನು ಬಿಚ್ಚಲು ಸಾಧ್ಯವಿಲ್ಲ. ಹಗ್ಗದ ಹುರಿಗಳು ಹೇಗೆ ಒಂದರ ಒಳಗೊಂದು ಹೋಗಿ ಗಂಟಾಗುತ್ತದೆಂದು ಅವನು ನೋಡುತ್ತಾನೆ ಆದರೆ ಅದನ್ನು ಬಿಡಿಸಲು ಅವನಿಂದಾಗುವುದಿಲ್ಲ. ಹಾಗೆಯೇ ಇಂದು ಜನರು ಕೂಡ ಸದ್ಯದ ಆಗುಹೋಗುಗಳನ್ನು ಗಮನಿಸಿ ಮುಂದೆ ಯಾವ ಜಟಿಲ ಸಮಸ್ಯೆಗಳು ಏಳಬಹುದೆಂದು ಊಹಿಸುತ್ತಾರೆ. ಹಾಗಿದ್ದರೂ ಇದೆಲ್ಲದರ ಪರಿಣಾಮ ಏನಾಗುತ್ತದೆಂದು ನಿಖರವಾಗಿ ಹೇಳಲಾರರು.
ಆದರೆ ದಾನಿಯೇಲನಂಥ ಪ್ರಾಚೀನ ಕಾಲದ ಪ್ರವಾದಿಗಳನ್ನು ನೋಡಿ. ಅವರು ತಮ್ಮ ಕಾಲದಲ್ಲಿ ನಡೆಯುತ್ತಿದ್ದ ವಿಷಯಗಳನ್ನೆಲ್ಲ ಅವಲೋಕಿಸಿ ನಂತರ ಭವಿಷ್ಯದಲ್ಲಿ ಹೀಗೆ ಹೀಗೆ ನಡೆಯುತ್ತದೆಂದು ಭವಿಷ್ಯವಾಣಿ ಹೇಳುತ್ತಿರಲಿಲ್ಲ. ಈ ರೀತಿಯಲ್ಲಿ ಊಹಾಪೋಹ, ಲೆಕ್ಕಾಚಾರ ಮಾಡಿ ಭವಿಷ್ಯ ನುಡಿದು ಘಟನೆಗಳೆಲ್ಲ ಹಾಗೇ ನಡೆಯುವಂತೆ ಅವರು ಯೋಜಿಸುತ್ತಿದ್ದಲ್ಲಿ ಆ ಭವಿಷ್ಯವಾಣಿಗಳು ಅವರ ಕಲ್ಪನೆಯ ಕೂಸಾಗುತ್ತಿತ್ತು. ಅದು ನರಮಾತ್ರದವರ ಭವಿಷ್ಯನುಡಿ ಆಗುತ್ತಿತ್ತು. ಆದರೆ ಪೇತ್ರನು ಹೇಳಿದಂತೆ “ಪ್ರವಾದನೆಯು ಎಂದೂ ಮನುಷ್ಯನ ಚಿತ್ತದಿಂದ ಉಂಟಾಗಲಿಲ್ಲ, ಬದಲಿಗೆ ಮನುಷ್ಯರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟು ದೇವರಿಂದ ಹೊಂದಿದ್ದನ್ನೇ ಮಾತಾಡಿದರು.”—2 ಪೇತ್ರ 1:21.
‘ಸ್ವಪ್ನಗಳ ಅರ್ಥ ದೇವರಿಂದ ದೊರಕುತ್ತದೆ’
ಸುಮಾರು 3,700 ವರ್ಷಗಳ ಹಿಂದೆ ಪ್ರಾಚೀನ ಈಜಿಪ್ಟ್ನಲ್ಲಿದ್ದ ಇಬ್ಬರು ಕೈದಿಗಳಿಗೆ ಗೂಡಾರ್ಥಗಳಿದ್ದ ಕನಸು ಬಿತ್ತು. ತಮ್ಮ ಕನಸುಗಳ ಅರ್ಥವನ್ನು ತಿಳಿದುಕೊಳ್ಳಲು ಆ ದೇಶದ ವಿದ್ವಾಂಸರನ್ನು ಸಂಪರ್ಕಿಸಲು ಅವರಿಗೆ ದಾರಿಯೇ ಇರಲಿಲ್ಲ. ಆದ್ದರಿಂದ ತಮ್ಮ ಜೊತೆಗಿದ್ದ ಯೋಸೇಫನೆಂಬ ಕೈದಿಯ ಮುಂದೆ ತಮ್ಮ ಸಂಕಟವನ್ನು ತೋಡಿಕೊಂಡರು. “ನಮಗೆ ಸ್ವಪ್ನಬಿತ್ತು; ಅದರ ಅರ್ಥವನ್ನು ಹೇಳುವವರು ಯಾರೂ ಇಲ್ಲ” ಎಂದು ಅಲವತ್ತುಕೊಂಡರು. ಆಗ ದೇವಭಕ್ತ ಯೋಸೇಫ “ಸ್ವಪ್ನಗಳ ಅರ್ಥವು ದೇವರಿಂದ ದೊರಕಬಹುದಲ್ಲವೇ” ಎನ್ನುತ್ತಾ ಅವರು ಕಂಡ ಕನಸುಗಳನ್ನು ತಿಳಿಸುವಂತೆ ಹೇಳಿದನು. (ಆದಿಕಾಂಡ 40:8) ಸ್ವಪ್ನಗಳ ಅರ್ಥ ಬಿಡಿಸಿಹೇಳಿದ ಯೋಸೇಫ ಶ್ರೇಯವನ್ನೆಲ್ಲ ದೇವರಿಗೇ ಕೊಟ್ಟನು. ಒಬ್ಬ ಕುಶಲ ನಾವಿಕನು ಹಾಕಿದ ಗಂಟನ್ನು ಹೇಗೆ ಅವನಿಂದ ಮಾತ್ರ ಬಿಚ್ಚಲು ಸಾಧ್ಯವೋ ಹಾಗೆಯೇ ಭವಿಷ್ಯವಾಣಿಗಳ ಅರ್ಥಬಿಡಿಸಿ ಹೇಳಲು ಯೆಹೋವ ದೇವರಿಗೆ ಮಾತ್ರ ಸಾಧ್ಯ, ಏಕೆಂದರೆ ಅವುಗಳ ಉಗಮನು ಆತನೇ ಅಲ್ಲವೆ? ಹಾಗಾಗಿ ಭವಿಷ್ಯವಾಣಿಗಳ ನಿಜಾರ್ಥವನ್ನು ನಾವೂ ಆತನಿಂದಲೇ ತಿಳಿದುಕೊಳ್ಳುವುದು ವಿವೇಕಯುತ.
ಯಾವೆಲ್ಲ ವಿಧಗಳಲ್ಲಿ ‘ಸ್ವಪ್ನಗಳ ಅರ್ಥ ದೇವರಿಂದ ದೊರಕುತ್ತದೆ?’ ಹಲವಾರು ವಿಧಗಳಿವೆ. ಬೈಬಲಿನಲ್ಲಿ ಕೆಲವು ಭವಿಷ್ಯವಾಣಿಗಳು ಮತ್ತು ಅವುಗಳ ನೆರವೇರಿಕೆ ಎರಡೂ ದಾಖಲಾಗಿವೆ. ಇದು ನಾವಿಕ ತಾನು ಹಾಕಿದ ಗಂಟನ್ನು ಬಿಡಿಸುವುದು ಹೇಗೆಂದು ಹೇಳಿಕೊಟ್ಟಂತೆ ಇದೆ. ಹಾಗಾಗಿ ಇಂಥ ಭವಿಷ್ಯವಾಣಿಗಳನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪ ಸುಲಭ.—ಆದಿಕಾಂಡ 18:14; 21:2.
ಇನ್ನು ಕೆಲವು ಭವಿಷ್ಯವಾಣಿಗಳನ್ನು ಅರ್ಥಮಾಡಿಕೊಳ್ಳಲು ಇಡೀ ವೃತ್ತಾಂತವನ್ನು ಓದಿ ಅಧ್ಯಯನ ಮಾಡಬೇಕು. ಉದಾಹರಣೆಗೆ ಪ್ರವಾದಿ ದಾನಿಯೇಲನು ಒಂದು ದರ್ಶನವನ್ನು ನೋಡಿದನು. ಅದರಲ್ಲಿ ‘ಕಣ್ಣುಗಳ ನಡುವೆ ವಿಶೇಷವಾದ ಒಂದು ಕೊಂಬಿದ್ದ’ ಹೋತವೊಂದು ‘ಎರಡು ಕೊಂಬಿನ ಒಂದು ಟಗರನ್ನು’ ಹೊಡೆದುರುಳಿಸುತ್ತದೆ. ಆ ವೃತ್ತಾಂತವನ್ನು ಮುಂದೆ ಓದುವಾಗ, ಹೋತ “ಗ್ರೀಕ್ ರಾಜ್ಯ”ವನ್ನು ಮತ್ತು ಎರಡು ಕೊಂಬಿನ ಟಗರು “ಮೇದ್ಯಯ ಮತ್ತು ಪಾರಸಿಯ ರಾಜ್ಯ”ವನ್ನು ಸೂಚಿಸುತ್ತದೆಂದು ತಿಳಿದುಬರುತ್ತದೆ. (ದಾನಿಯೇಲ 8:3-8, 20-22) ಈ ಭವಿಷ್ಯವಾಣಿಯಂತೆ 200ಕ್ಕೂ ಹೆಚ್ಚು ವರ್ಷಗಳ ನಂತರ, ಹೋತದ “ದೊಡ್ಡ ಕೊಂಬು” ಅಂದರೆ ಮಹಾ ಅಲೆಕ್ಸಾಂಡರ್ ಪರ್ಷಿಯವನ್ನು ಜಯಿಸಲಿಕ್ಕಾಗಿ ದಂಡಯಾತ್ರೆ ಹೊರಡುತ್ತಾನೆ. ಯೆರೂಸಲೇಮಿನ ಸುತ್ತಮುತ್ತ ತನ್ನ ಸೈನ್ಯ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಪ್ರವಾದನೆಯನ್ನು ಅವನಿಗೆ ತೋರಿಸಲಾಗಿತ್ತು ಮತ್ತು ಅದು ತನ್ನ ಬಗ್ಗೆಯೇ ಎಂದು ಅವನು ನಂಬಿದನೆಂದು ಯೆಹೂದಿ ಇತಿಹಾಸಕಾರ ಜೋಸೀಫಸ್ ಹೇಳುತ್ತಾನೆ.
ಇನ್ನೊಂದು ವಿಧದಲ್ಲೂ ‘ಸ್ವಪ್ನಗಳ ಅರ್ಥ ದೇವರಿಂದ ದೊರಕಬಲ್ಲದು.’ ಅದು ದೇವರ ಪವಿತ್ರಾತ್ಮದ ಸಹಾಯದಿಂದ. ದೇವಭಕ್ತನಾದ ಯೋಸೇಫ ತನ್ನೊಂದಿಗಿದ್ದ ಕೈದಿಗಳಿಗೆ ಬಿದ್ದ ಕನಸಿನ ಅರ್ಥವನ್ನು ತಿಳಿಸಲು ಸಾಧ್ಯವಾದದ್ದು ದೇವರ ಆ ಕಾರ್ಯಕಾರಿ ಶಕ್ತಿಯ ಸಹಾಯದಿಂದಲೇ. (ಆದಿಕಾಂಡ 41:38) ಇಂದು ಕೂಡ ದೇವಭಕ್ತರಿಗೆ ಕೆಲವೊಂದು ಪ್ರವಾದನೆಗಳ ಅರ್ಥ ತಿಳಿಯದಿದ್ದಾಗ ಪವಿತ್ರಾತ್ಮದ ಸಹಾಯ ಕೊಡುವಂತೆ ದೇವರನ್ನು ಪ್ರಾರ್ಥಿಸುತ್ತಾರೆ. ನಂತರ ದೇವರ ಆ ಪವಿತ್ರಾತ್ಮದ ಪ್ರೇರಣೆಯಿಂದಲೇ ಬರೆಯಲಾದ ಆತನ ವಾಕ್ಯವನ್ನು ಶ್ರದ್ಧೆಯಿಂದ ಅಧ್ಯಯನ ಮಾಡುತ್ತಾರೆ. ಇಂಥ ಕೆಲವು ಭವಿಷ್ಯವಾಣಿಗಳ ಅರ್ಥ ತಿಳಿಯಲು ನೆರವಾಗುವ ಬೈಬಲ್ ವಚನಗಳನ್ನು ಕಂಡುಕೊಳ್ಳಲು ದೇವರು ಸಹಾಯಮಾಡುತ್ತಾನೆ. ಇದರಿಂದ ಸ್ಪಷ್ಟವಾಗುವ ಸಂಗತಿ ಏನೆಂದರೆ ಯಾವ ಮನುಷ್ಯನೂ ತಾನಾಗಿಯೇ ಭವಿಷ್ಯವಾಣಿಗಳ ಅರ್ಥಬಿಡಿಸಿ ಹೇಳಲು ಶಕ್ತನಲ್ಲ. ಅದಕ್ಕಾಗಿ ದೇವರ ಪವಿತ್ರಾತ್ಮ ಮತ್ತು ಆತನ ವಾಕ್ಯದ ನೆರವು ಬೇಕೇ ಬೇಕು. ಬೈಬಲಿನಲ್ಲಿರುವ ಭವಿಷ್ಯವಾಣಿಗಳ ಅರ್ಥವಿವರಣೆ ಬೈಬಲಿನಿಂದಲೇ ಬರಬೇಕು, ಭವಿಷ್ಯನುಡಿಯುವ ಮನುಷ್ಯನ ಸ್ವಂತ ವಿವರಣೆ ಆಗಿರಬಾರದು.—ಅಪೊಸ್ತಲರ ಕಾರ್ಯಗಳು 15:12-21.
ಅಷ್ಟೇ ಅಲ್ಲದೆ ದೇವರ ನಿಜ ಭಕ್ತರು ಭವಿಷ್ಯವಾಣಿಗಳ ಅರ್ಥವನ್ನು ಯಾವಾಗ ತಿಳಿದುಕೊಳ್ಳಬೇಕೆಂಬದನ್ನು ನಿರ್ಣಯಿಸಿ ನಿರ್ದೇಶಿಸುವವನು ದೇವರೇ. ಕೆಲವೊಮ್ಮೆ ಭವಿಷ್ಯವಾಣಿಗಳು ನೆರವೇರುವ ಮೊದಲು ಅಥವಾ ನೆರವೇರುತ್ತಿರುವಾಗ ಅಥವಾ ನೆರವೇರಿದ ನಂತರವೇ ಅರ್ಥ ತಿಳಿಯುವುದಿದೆ. ಭವಿಷ್ಯವಾಣಿಗಳ ಉಗಮನು ದೇವರೇ ಆಗಿರುವುದರಿಂದ ಅವುಗಳ ಅರ್ಥವನ್ನು ಆತನೇ ತಕ್ಕ ಸಮಯದಲ್ಲಿ, ತಾನು ನಿರ್ಣಯಿಸಿದ ಸಮಯದಲ್ಲಿ ಬಯಲುಪಡಿಸುವನು.
ನಾವು ಹಿಂದೆ ಚರ್ಚಿಸಿದಂಥ ಯೋಸೇಫ ಹಾಗೂ ಇಬ್ಬರು ಕೈದಿಗಳ ವೃತ್ತಾಂತದಲ್ಲಿ ಯೋಸೇಫನು ಅವರ ಕನಸುಗಳ ಅರ್ಥವನ್ನು ಅವು ನಿಜವಾಗುವ ಮೂರು ದಿನಗಳ ಮುಂಚೆ ವಿವರಿಸಿದ್ದನು. (ಆದಿಕಾಂಡ 40:13, 19) ನಂತರ ಅವನು ಈಜಿಪ್ಟ್ನ ಫರೋಹನ ಕನಸುಗಳ ಅರ್ಥ ವಿವರಿಸುವಾಗ ಏಳು ಸುಭಿಕ್ಷ ವರುಷಗಳು ಇನ್ನೇನು ಆರಂಭವಾಗಲಿದ್ದವು. ಆ ಸುಭಿಕ್ಷ ವರುಷಗಳ ನಂತರ ಬರಲಿದ್ದ ಕ್ಷಾಮವನ್ನು ನಿಭಾಯಿಸಲು ಬೇಕಾದ ಏರ್ಪಾಡುಗಳನ್ನು ಮಾಡಿಕೊಳ್ಳಲಿ ಎನ್ನುವ ಉದ್ದೇಶದಿಂದಲೇ ದೇವರು ತನ್ನ ಪವಿತ್ರಾತ್ಮದ ನೆರವನ್ನು ನೀಡಿ ಫರೋಹನ ಕನಸುಗಳ ಅರ್ಥವನ್ನು ತಿಳಿಸಲು ಯೋಸೇಫನಿಗೆ ಸಹಾಯಮಾಡಿದನು.—ಆದಿಕಾಂಡ 41:29, 39, 40.
ದೇವಭಕ್ತರಿಗೆ ಇನ್ನು ಕೆಲವು ಭವಿಷ್ಯವಾಣಿಗಳ ಅರ್ಥ ತಿಳಿಯುವುದು ಅವುಗಳು ನೆರವೇರಿದ ಮೇಲೆಯೇ. ಯೇಸುವಿನ ಜೀವನದ ಹಲವಾರು ಘಟನೆಗಳ ಬಗ್ಗೆ ಆತ ಹುಟ್ಟುವ ಎಷ್ಟೋ ಶತಮಾನಗಳ ಮುಂಚೆ ಭವಿಷ್ಯ ನುಡಿಯಲಾಗಿತ್ತು. ಆದರೆ ಆತನ ಶಿಷ್ಯರು ಅದನ್ನು ಅರ್ಥಮಾಡಿಕೊಂಡದ್ದು ಯೇಸು ಮರಣಪಟ್ಟು ಪುನರುತ್ಥಾನಗೊಂಡ ಮೇಲೆ. (ಕೀರ್ತನೆ 22:18; 34:20; ಯೋಹಾನ 19:24, 36) ಇನ್ನು ಕೆಲವು ಭವಿಷ್ಯವಾಣಿಗಳ ಅರ್ಥ ತಿಳಿಯುವುದು “ತಿಳುವಳಿಕೆಯು ಹೆಚ್ಚುವ” ಸಮಯದಲ್ಲಿ ಅಂದರೆ ‘ಅಂತ್ಯಕಾಲದಲ್ಲಿ.’ ಅಲ್ಲಿಯ ತನಕ ಅವುಗಳಿಗೆ ಮುದ್ರೆಹಾಕಿ ಇಡಲಾಗುವುದೆಂದು ದಾನಿಯೇಲ 12:4 ತಿಳಿಸಿತು. ಅವುಗಳು ನೆರವೇರುತ್ತಿರುವ ಆ ಅಂತ್ಯಕಾಲದಲ್ಲೇ ನಾವೀಗ ಜೀವಿಸುತ್ತಿದ್ದೇವೆ.b
ಬೈಬಲ್ ಪ್ರವಾದನೆಗಳಿಗೂ ನಿಮಗೂ ಇರುವ ಸಂಬಂಧ
ಯೋಸೇಫ ಮತ್ತು ದಾನಿಯೇಲರು ತಮ್ಮ ದಿನಗಳಲ್ಲಿದ್ದ ರಾಜರ ಮುಂದೆ ನಿಂತು ರಾಜ್ಯ-ಸಾಮ್ರಾಜ್ಯಗಳನ್ನೇ ಬಾಧಿಸಲಿದ್ದ ಸಂದೇಶಗಳನ್ನು ಕೊಟ್ಟಿದ್ದರು. ಒಂದನೇ ಶತಮಾನದ ಕ್ರೈಸ್ತರು ಪ್ರವಾದನೆಗಳ ದೇವರಾದ ಯೆಹೋವನ ವಕ್ತಾರರಾಗಿ ಜನರ ಮುಂದೆ ನಿಂತು ಸಂದೇಶಗಳನ್ನು ರವಾನಿಸಿದ್ದರು. ಅವುಗಳನ್ನು ಕೇಳಿ ಸ್ಪಂದಿಸಿದ ಜನರು ಪ್ರಯೋಜನ ಪಡೆದರು.
ಇಂದು ಯೆಹೋವನ ಸಾಕ್ಷಿಗಳು ಸಹ ಒಂದು ಭವಿಷ್ಯಸೂಚಕ ಸಂದೇಶವನ್ನು ಅಂದರೆ ದೇವರ ರಾಜ್ಯದ ಸುವಾರ್ತೆಯನ್ನು ಜಗತ್ತಿನ ಎಲ್ಲೆಡೆ ಪ್ರಚುರಪಡಿಸುತ್ತಿದ್ದಾರೆ. ‘ಈ ದುಷ್ಟ ವ್ಯವಸ್ಥೆಯ ಸಮಾಪ್ತಿಯ’ ಕುರಿತ ಯೇಸುವಿನ ಭವಿಷ್ಯವಾಣಿ ನೆರವೇರುತ್ತಿದೆ ಎಂದವರು ಜನರಿಗೆ ಸಾರಿ ಹೇಳುತ್ತಿದ್ದಾರೆ. (ಮತ್ತಾಯ 24:3, 14) ಆ ಭವಿಷ್ಯವಾಣಿಯಲ್ಲಿ ಏನಿದೆ ಮತ್ತು ಅದಕ್ಕೂ ನಿಮಗೂ ಏನಾದರೂ ಸಂಬಂಧವಿರಬಹುದೇ ಎಂದು ತಿಳಿಯಲು ಇಷ್ಟಪಡುವಿರಾ? ಇಷ್ಟವಿದ್ದರೆ ಯೆಹೋವನ ಸಾಕ್ಷಿಗಳು ನಿಮಗೆ ಸಹಾಯ ಮಾಡುವರು. ತುಂಬ ಪ್ರಾಮುಖ್ಯವಾದ ಆ ಬೈಬಲ್ ಪ್ರವಾದನೆಯನ್ನು ಅರ್ಥಮಾಡಿಕೊಂಡು ಅದರಿಂದ ಪ್ರಯೋಜನ ಪಡೆಯಲು ಬೇಕಾದ ನೆರವನ್ನು ಅವರು ನಿಮಗೆ ಖಂಡಿತ ನೀಡುವರು. (w11-E 12/01)
[ಪಾದಟಿಪ್ಪಣಿಗಳು]
a ಗ್ರೀಕ್ ಪುರಾಣಕಥೆಗನುಸಾರ ಫ್ರಿಜಿಯಾ ದೇಶದ ರಾಜಧಾನಿ ಗಾರ್ಡಿಯಂನ ಸ್ಥಾಪಕ ಗಾರ್ಡಿಯಸ್. ಅವನು ತನ್ನ ರಥವನ್ನು ಕಂಬವೊಂದಕ್ಕೆ ಕಟ್ಟಿದನಂತೆ. ಆ ಕಗ್ಗಂಟನ್ನು ಬಿಡಿಸುವವನೇ ಏಷ್ಯಾವನ್ನು ಜಯಿಸಿ ಆಳುವನೆಂದು ನಂಬಲಾಗುತ್ತಿತ್ತು.
b ಮೇ 1, 2011ರ ಕಾವಲಿನಬುರುಜು ಪತ್ರಿಕೆಯಲ್ಲಿ ಪ್ರಕಟವಾದ “ಆರು ಬೈಬಲ್ ಪ್ರವಾದನೆಗಳ ನೆರವೇರಿಕೆಯನ್ನು ನೀವು ಕಣ್ಣಾರೆ ನೋಡುತ್ತಿದ್ದೀರಿ” (ಇಂಗ್ಲಿಷ್) ಎಂಬ ಮುಖಪುಟ ಲೇಖನಗಳನ್ನು ಓದಿ.
[ಪುಟ 12, 13ರಲ್ಲಿರುವ ಚಿತ್ರಗಳು]
ಯೋಸೇಫ ದಾನಿಯೇಲರು ಭವಿಷ್ಯವಾಣಿಗಳ ಅರ್ಥ ಬಿಡಿಸಿಹೇಳಿದಾಗೆಲ್ಲ ಅದರ ಶ್ರೇಯವನ್ನು ದೇವರಿಗೆ ಸಲ್ಲಿಸಿದರು