ಅಧ್ಯಯನ ಲೇಖನ 28
ದೇವರ ಸರ್ಕಾರ ಆಳುತ್ತಿದೆ!
“ನಮ್ಮ ದೇವರು ಮತ್ತು ಆತನ ಕ್ರಿಸ್ತ ಈ ಲೋಕವನ್ನ ಆಳ್ತಿದ್ದಾರೆ.”—ಪ್ರಕ. 11:15.
ಗೀತೆ 136 ನಿನ್ನ ರಾಜ್ಯ ಬರಲಿ!
ಕಿರುನೋಟa
1. ನಾವು ಯಾವುದನ್ನ ಕಣ್ಮುಚ್ಚಿ ನಂಬಬಹುದು ಮತ್ತು ಯಾಕೆ?
ಸುತ್ತ-ಮುತ್ತ ಇರೋ ಲೋಕದ ಪರಿಸ್ಥಿತಿಯನ್ನ ನೋಡ್ತಾ ಇದ್ರೆ ನಮಗೆ ತುಂಬ ಬೇಜಾರಾಗುತ್ತೆ. ಈ ಪರಿಸ್ಥಿತಿ ಸುಧಾರಣೆ ಆಗುತ್ತೆ ಅನ್ನೋ ನಂಬಿಕೆನೇ ಹೋಗಿಬಿಟ್ಟಿದೆ. ಇವತ್ತು ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ ಇಲ್ಲ, ಜನರು ಚಿಕ್ಕಚಿಕ್ಕ ವಿಷಯಕ್ಕೂ ಕೋಪ ಮಾಡಿಕೊಂಡು ಕೊಲೆ ಮಾಡೋ ತನಕ ಹೋಗ್ತಿದ್ದಾರೆ, ಅಧಿಕಾರದಲ್ಲಿ ಇರೋರ ಮೇಲೆ ನಂಬಿಕೆ ಕಳಕೊಂಡಿದ್ದಾರೆ. ಆದ್ರೆ ಇನ್ನೊಂದು ಕಡೆ ಇದನ್ನೆಲ್ಲ ನೋಡ್ತಿದ್ರೆ ನಮಗೆ ಬೈಬಲ್ ಮೇಲಿರೋ ನಂಬಿಕೆ ಜಾಸ್ತಿಯಾಗ್ತಿದೆ. ಯಾಕಂದ್ರೆ “ಕೊನೇ ದಿನಗಳಲ್ಲಿ” ಜನರು ಹೇಗಿರುತ್ತಾರೆ ಅಂತ ಬೈಬಲ್ ಹೇಳಿತ್ತೋ ಅವರು ಈಗ ಹಾಗೇ ನಡೆದುಕೊಳ್ತಿದ್ದಾರೆ. (2 ತಿಮೊ. 3:1-5) ಇದ್ರಿಂದ ಯೇಸು ಸ್ವರ್ಗದಲ್ಲಿ ದೇವರ ಸರ್ಕಾರದ ರಾಜನಾಗಿದ್ದಾನೆ ಮತ್ತು ತನ್ನ ಆಳ್ವಿಕೆಯನ್ನ ಶುರುಮಾಡಿದ್ದಾನೆ ಅಂತ ಕಣ್ಮುಚ್ಚಿಕೊಂಡು ನಂಬಬಹುದು. ಯಾಕಂದ್ರೆ ಇದಕ್ಕೆ ಆಧಾರಗಳು ನಮ್ಮ ಕಣ್ಮುಂದೆನೇ ಇದೆ. ದೇವರ ಆಳ್ವಿಕೆ ಬಗ್ಗೆ ಬೈಬಲ್‌ನಲ್ಲಿ ಹೇಳಿರೋ ಎಷ್ಟೋ ಭವಿಷ್ಯವಾಣಿಗಳಲ್ಲಿ ಇದು ಬರೀ ಒಂದಷ್ಟೇ. ಆದ್ರೆ ನಮ್ಮ ಕಾಲದಲ್ಲಿ ಈಗಾಗಲೇ ಎಷ್ಟೋ ಭವಿಷ್ಯವಾಣಿಗಳು ನಿಜ ಆಗಿವೆ. ಅದನ್ನ ಈಗ ಚರ್ಚಿಸೋಣ ಮತ್ತು ನಮ್ಮ ನಂಬಿಕೆಯನ್ನ ಗಟ್ಟಿಮಾಡಿಕೊಳ್ಳೋಣ.
ಚಿತ್ರದ ತುಣುಕುಗಳನ್ನ ಸೇರಿಸಿದರೆ ಹೇಗೆ ಪೂರ್ತಿ ಚಿತ್ರ ಸಿಗುತ್ತೋ ಹಾಗೇ ದಾನಿಯೇಲ ಮತ್ತು ಪ್ರಕಟನೆ ಪುಸ್ತಕದಲ್ಲಿರೋ ಭವಿಷ್ಯವಾಣಿಗಳನ್ನ ಸೇರಿಸಿದಾಗ ನಮ್ಮ ಕಾಲದಲ್ಲಿ ಯಾವ ಭವಿಷ್ಯವಾಣಿ ನೆರವೇರುತ್ತಿದೆ ಅಂತ ಗೊತ್ತಾಗುತ್ತೆ (ಪ್ಯಾರ 2 ನೋಡಿ)
2. ಈ ಲೇಖನದಲ್ಲಿ ನಾವೇನನ್ನು ಚರ್ಚಿಸುತ್ತೀವಿ ಮತ್ತು ಯಾಕೆ? (ಮುಖಪುಟ ಚಿತ್ರ ನೋಡಿ.)
2 ಈ ಲೇಖನದಲ್ಲಿ ನಾವು ಕೆಲವು ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳೋಣ. (1) ಸ್ವರ್ಗದಲ್ಲಿ ದೇವರ ಸರ್ಕಾರ ಯಾವಾಗ ಸ್ಥಾಪನೆ ಆಯ್ತು? (2) ಯೇಸು ಸ್ವರ್ಗದಲ್ಲಿ ರಾಜನಾಗಿ ಆಳ್ತಿದ್ದಾನೆ ಅಂತ ಹೇಗೆ ತಿಳಿದುಕೊಳ್ಳಬಹುದು? (3) ದೇವರ ವೈರಿಗಳು ಹೇಗೆ ನಾಶ ಆಗ್ತಾರೆ? ಈ ಪ್ರಶ್ನೆಗಳಿಗೆ ಬೈಬಲ್‌ನಲ್ಲಿರೋ ಭವಿಷ್ಯವಾಣಿಗಳಲ್ಲಿ ಉತ್ತರ ಇದೆ. ಅವನ್ನ ಈಗ ಚರ್ಚಿಸೋಣ. ಈ ಭವಿಷ್ಯವಾಣಿಗಳು ಒಂದು ಚಿತ್ರದ ತುಣುಕುಗಳಿದ್ದ ಹಾಗೆ. ಈ ತುಣುಕುಗಳನ್ನ ಒಟ್ಟಿಗೆ ಸೇರಿಸಿದಾಗ ನಮ್ಮ ಕಾಲದಲ್ಲಿ ಯಾವ ಭವಿಷ್ಯವಾಣಿ ನೆರವೇರುತ್ತಾ ಇದೆ ಅಂತ ನಮಗೆ ಗೊತ್ತಾಗುತ್ತೆ.
ದೇವರ ಆಳ್ವಿಕೆ ಯಾವಾಗ ಶುರು ಆಯ್ತು?
3. ದೇವರ ಸರ್ಕಾರದ ರಾಜನ ಬಗ್ಗೆ ದಾನಿಯೇಲ 7:13, 14ರಲ್ಲಿ ಏನು ಹೇಳಿತ್ತು?
3 ದಾನಿಯೇಲ 7:13, 14ರಲ್ಲಿ ಯೇಸು ದೇವರ ಸರ್ಕಾರದ ರಾಜನಾಗಿರುತ್ತಾನೆ, ಅವನಷ್ಟು ಚೆನ್ನಾಗಿ ಯಾರೂ ಆಳೋಕೆ ಆಗಲ್ಲ ಅಂತ ಹೇಳಿತ್ತು. ಎಲ್ಲಾ ದೇಶಗಳಿಂದ ಜನರು ಸಂತೋಷವಾಗಿ “ಅವನ ಸೇವೆ ಮಾಡೋಕೆ” ಬರ್ತಾರೆ, ಆತನ ಆಳ್ವಿಕೆಗೆ ಕೊನೆನೇ ಇರಲ್ಲ ಅಂತನೂ ಹೇಳಿತ್ತು. ಅಷ್ಟೇ ಅಲ್ಲ, ಯೇಸು ಏಳು ಕಾಲಗಳ ಕೊನೆಯಲ್ಲಿ ರಾಜನಾಗಿ ಬರ್ತಾನೆ ಅಂತ ದಾನಿಯೇಲ ಪುಸ್ತಕದಲ್ಲಿರೋ ಇನ್ನೊಂದು ಭವಿಷ್ಯವಾಣಿ ಹೇಳಿತ್ತು. ಆದ್ರೆ ಇದು ಯಾವಾಗ ನಡಿತು? ಯೇಸು ಯಾವಾಗ ರಾಜ ಆದನು?
4. ಯೇಸು ಯಾವಾಗ ರಾಜ ಆದ ಅಂತ ದಾನಿಯೇಲ 4:10-17 ಹೇಳುತ್ತೆ? ವಿವರಿಸಿ. (ಪಾದಟಿಪ್ಪಣಿಯನ್ನೂ ನೋಡಿ.)
4 ದಾನಿಯೇಲ 4:10-17 ಓದಿ. “ಏಳು ಕಾಲಗಳು” ಅಂದ್ರೆ 2,520 ವರ್ಷಗಳು. ಇದು ಯಾವಾಗ ಶುರು ಆಯ್ತು? ಕ್ರಿಸ್ತಪೂರ್ವ 607ರಲ್ಲಿ ಬಾಬೆಲ್‌ನವರು ಯೆರೂಸಲೇಮ್‌ನ ವಶಮಾಡಿಕೊಂಡಾಗ ಶುರುವಾಯ್ತು. ಆಗ ಯೆಹೋವ ನೇಮಿಸಿದ್ದ ರಾಜರ ಆಳ್ವಿಕೆ ನಿಂತುಹೋಯ್ತು. ಅವಾಗಿಂದ ಹಿಡಿದು 2,520 ವರ್ಷಗಳ ತನಕ ಯೆಹೋವನಿಂದ ನೇಮಿಸಲ್ಪಟ್ಟ ಯಾವ ರಾಜರೂ ಆಳುತ್ತಿರಲಿಲ್ಲ. ಆದ್ರೆ ಕ್ರಿಸ್ತಶಕ 1914ರಲ್ಲಿ ಯೆಹೋವ ದೇವರು “ಆಳೋ ಹಕ್ಕಿರೋ” ಯೇಸುನ ತನ್ನ ಸರ್ಕಾರಕ್ಕೆ ರಾಜನಾಗಿ ನೇಮಿಸಿದಾಗ ಈ ಏಳು ಕಾಲಗಳು ಕೊನೆ ಆಯ್ತು.b—ಯೆಹೆ. 21:25-27.
5. ‘ಏಳು ಕಾಲಗಳ’ ಭವಿಷ್ಯವಾಣಿಯಿಂದ ನಮಗೇನು ಪ್ರಯೋಜನ?
5 ಈ ಭವಿಷ್ಯವಾಣಿಯಿಂದ ನಮಗೇನು ಪ್ರಯೋಜನ? ಯೆಹೋವ ತಾನು ಕೊಟ್ಟ ಮಾತನ್ನ ಸರಿಯಾದ ಸಮಯದಲ್ಲಿ ನಿಜ ಮಾಡ್ತಾನೆ ಅಂತ ಈ ‘ಏಳು ಕಾಲಗಳ’ ಭವಿಷ್ಯವಾಣಿಯಿಂದ ಗೊತ್ತಾಗುತ್ತೆ. ತನ್ನ ಆಳ್ವಿಕೆ ಯಾವಾಗ ಶುರುವಾಗಬೇಕು ಅಂತ ಯೆಹೋವ ನಿರ್ಧಾರ ಮಾಡಿದ್ದನೋ ಆ ಸಮಯದಲ್ಲೇ ಅದು ಶುರು ಆಯ್ತು. ಅಂದಮೇಲೆ ಯೆಹೋವ ಹೇಳಿರೋ ಬೇರೆ ಭವಿಷ್ಯವಾಣಿಗಳೂ ಸರಿಯಾದ ಸಮಯಕ್ಕೆ ನಡೆದೇ ನಡಿಯುತ್ತೆ. ಯೆಹೋವನ ದಿನ ಬಂದೇ ಬರುತ್ತೆ ಅದು “ತಡವಾಗಲ್ಲ!”—ಹಬ. 2:3.
ಯೇಸು ದೇವರ ಸರ್ಕಾರದ ರಾಜನಾಗಿದ್ದಾನೆ ಅನ್ನೋಕೆ ಆಧಾರ ಏನು?
6. (ಎ) ಯೇಸು ಸ್ವರ್ಗದಲ್ಲಿ ರಾಜನಾಗಿದ್ದಾನೆ ಅನ್ನೋದಕ್ಕೆ ಭೂಮಿಯಲ್ಲಿ ನಡಿತಿರೋ ಘಟನೆಗಳು ಹೇಗೆ ಆಧಾರ ಕೊಡುತ್ತೆ? (ಬಿ) ಪ್ರಕಟನೆ 6:2-8ರಲ್ಲಿರೋ ಭವಿಷ್ಯವಾಣಿ ಇನ್ನೂ ಯಾವ ಆಧಾರಗಳನ್ನ ಕೊಡುತ್ತೆ?
6 ಯೇಸು ತೀರಿಹೋಗೋಕೆ ಮುಂಚೆ ತನ್ನ ಶಿಷ್ಯರಿಗೆ ಸ್ವರ್ಗದಲ್ಲಿ ಆತನು ರಾಜನಾದಾಗ ಭೂಮಿಯಲ್ಲಿ ಏನೆಲ್ಲಾ ನಡಿಯುತ್ತೆ ಅಂತ ಹೇಳಿದನು. ಆಗ ಶಿಷ್ಯರು ಆತನಿಗೆ ನೀನು ಮತ್ತೆ ಬರೋ ಕಾಲಕ್ಕೆ “ಸೂಚನೆ” ಏನು ಅಂತ ಕೇಳಿದ್ರು. ಅದಕ್ಕೆ ಆತನು, ಭೂಮಿಯಲ್ಲಿ ಯುದ್ಧಗಳು ನಡಿಯುತ್ತೆ, ಬರಗಾಲ ಬರುತ್ತೆ, ಭೂಕಂಪಗಳಾಗುತ್ತೆ ಅಂತ ಹೇಳಿದನು. ಅಷ್ಟೇ ಅಲ್ಲ, “ಒಂದಾದ ಮೇಲೆ ಒಂದು ಜಾಗದಲ್ಲಿ” ಅಂಟುರೋಗಗಳು ಬರುತ್ತೆ ಅಂತನೂ ಹೇಳಿದ್ದನು. ಈಗಿರೋ ಕೊರೋನ ಕಾಯಿಲೆನೇ ಇದಕ್ಕೆ ಒಂದು ಉದಾಹರಣೆ. (ಮತ್ತಾ. 24:3, 7; ಲೂಕ 21:7, 10, 11) ಯೇಸು ಸತ್ತು ಸ್ವರ್ಗಕ್ಕೆ ಹೋಗಿ 60ಕ್ಕೂ ಹೆಚ್ಚು ವರ್ಷಗಳಾದ ಮೇಲೆ ಅಪೊಸ್ತಲ ಯೋಹಾನನಿಗೆ ತಾನು ಹೇಳಿದ ವಿಷಯಗಳು ಭೂಮಿಯಲ್ಲಿ ನಡಿಯುತ್ತೆ ಅಂತ ಇನ್ನೂ ಒಂದು ಸಲ ಹೇಳಿದನು. (ಪ್ರಕಟನೆ 6:2-8 ಓದಿ.) ಆತನು ಸ್ವರ್ಗದಲ್ಲಿ 1914ರಲ್ಲಿ ರಾಜ ಆದಾಗಿಂದ ಹಿಡಿದು ಇಲ್ಲಿ ತನಕ ಆತನು ಹೇಳಿದ ಹಾಗೆ ಈ ಭೂಮಿಯಲ್ಲಿ ನಡೆದಿದೆ.
7. ಯೇಸು ಸ್ವರ್ಗದಲ್ಲಿ ರಾಜ ಆದಾಗ ಭೂಮಿಗೆ ಯಾಕೆ ಕಷ್ಟ ಬಂತು?
7 ಯೇಸು ಸ್ವರ್ಗದಲ್ಲಿ ರಾಜನಾದ ತಕ್ಷಣ ಭೂಮಿ ಮೇಲೆ ಪರಿಸ್ಥಿತಿ ಯಾಕೆ ಹದಗೆಟ್ಟು ಹೋಯ್ತು? ಪ್ರಕಟನೆ 6:2ರಲ್ಲಿ ಅದಕ್ಕೆ ಉತ್ತರ ಇದೆ. ತಾನು ರಾಜನಾದ ತಕ್ಷಣ ಸೈತಾನ ಮತ್ತು ಅವನ ದೂತರ ವಿರುದ್ಧ ಯೇಸು ಯುದ್ಧ ಮಾಡಿದನು. ಆ ಯುದ್ಧದಲ್ಲಿ ಸೈತಾನ ಮತ್ತು ಅವನ ಕಡೆಯವರು ಸೋತುಹೋದ್ರು. ಆಮೇಲೆ ಪ್ರಕಟನೆ 12ನೇ ಅಧ್ಯಾಯದಲ್ಲಿ ಹೇಳೋ ತರ ಅವರನ್ನ ಭೂಮಿಗೆ ತಳ್ಳಲಾಯ್ತು. ಆಗ ಸೈತಾನನ ಕೋಪ ನೆತ್ತಿಗೇರಿತು, ಅದಕ್ಕೆ ಭೂಮಿ ಮೇಲಿರೋ ಜನರ ಮೇಲೆ ಅವನು ಕೋಪ ತೋರಿಸೋಕೆ ಶುರುಮಾಡಿದ. ಇದ್ರಿಂದ ‘ಭೂಮಿಗೆ ತುಂಬ ಕಷ್ಟ ಬಂತು.’—ಪ್ರಕ. 12:7-12.
ಕೆಟ್ಟ ಸುದ್ದಿಯನ್ನ ಕೇಳಿಸಿಕೊಂಡಾಗ ನಮಗೆ ಖುಷಿಯಾಗಲ್ಲ ನಿಜ, ಆದ್ರೆ ಬೈಬಲ್ ಭವಿಷ್ಯವಾಣಿಗಳು ನೆರವೇರುತ್ತಿರೋದನ್ನ ನೋಡುವಾಗ ದೇವರ ಸರ್ಕಾರ ಸ್ವರ್ಗದಲ್ಲಿ ಆಳುತ್ತಿದೆ ಅಂತ ಗ್ಯಾರಂಟಿಯಾಗುತ್ತೆ (ಪ್ಯಾರ 8 ನೋಡಿ)
8. ದೇವರ ಸರ್ಕಾರದ ಬಗ್ಗೆ ಇರೋ ಭವಿಷ್ಯವಾಣಿಗಳು ನಮ್ಮ ಕಣ್ಮುಂದೆ ನೆರವೇರುತ್ತಿರೋದನ್ನ ನೋಡ್ತಾ ಇದ್ರೆ ನಮಗೆ ಹೇಗನಿಸುತ್ತೆ?
8 ಈ ಭವಿಷ್ಯವಾಣಿಯಿಂದ ನಮಗೇನು ಪ್ರಯೋಜನ? ಲೋಕದಲ್ಲಿ ನಡಿತಿರೋ ಘಟನೆಗಳನ್ನ, ಜನರಲ್ಲಿರೋ ಮನೋಭಾವ ಮತ್ತು ಅವರಲ್ಲಿರೋ ಕೆಟ್ಟತನವನ್ನ ನೋಡ್ತಾ ಇದ್ರೆ ಸ್ವರ್ಗದಲ್ಲಿ ಯೇಸು ರಾಜನಾಗಿದ್ದಾನೆ ಅಂತ ಗೊತ್ತಾಗುತ್ತೆ. ಜನರು ಸ್ವಾರ್ಥಿಗಳಾಗಿ ನಡೆದುಕೊಂಡಾಗ ನಾವು ಬೇಜಾರು ಮಾಡಿಕೊಳ್ಳೋ ಬದಲು ಭವಿಷ್ಯವಾಣಿಯಲ್ಲಿ ಹೇಳಿರೋ ಮಾತುಗಳು ನೆರವೇರುತ್ತಾ ಇದೆ, ದೇವರ ಆಳ್ವಿಕೆ ಶುರುವಾಗಿದೆ ಅನ್ನೋದನ್ನ ನಾವು ಮನಸ್ಸಲ್ಲಿ ಇಟ್ಟುಕೊಳ್ಳಬೇಕು. (ಕೀರ್ತ. 37:1) ಅಷ್ಟೇ ಅಲ್ಲ, ಹರ್ಮಗೆದೋನ್ ಹತ್ರ ಆಗ್ತಾ ಇದ್ದ ಹಾಗೆ ಕೆಟ್ಟತನ ಇನ್ನೂ ಜಾಸ್ತಿಯಾಗುತ್ತೆ. (ಮಾರ್ಕ 13:8; 2 ತಿಮೊ. 3:13) ಇದೆಲ್ಲ ಯಾಕೆ ನಡಿತಾ ಇದೆ ಅಂತ ಮುಂಚೆನೇ ಯೆಹೋವ ದೇವರು ನಮಗೆ ತಿಳಿಸಿಕೊಟ್ಟಿದ್ದಕ್ಕೆ ನಾವು ಆತನಿಗೆ ಎಷ್ಟು ಥ್ಯಾಂಕ್ಸ್ ಹೇಳಬೇಕಲ್ವಾ!
ದೇವರ ವೈರಿಗಳು ನಾಶ ಆಗ್ತಾರೆ ಅನ್ನೋದಕ್ಕೆ ಆಧಾರಗಳೇನು?
9. (ಎ) ಕೊನೇ ಲೋಕಶಕ್ತಿ ಬಗ್ಗೆ ದಾನಿಯೇಲ 2:28, 31-35 ಏನು ಹೇಳಿತ್ತು? (ಬಿ) ಅದು ಯಾವಾಗ ಅಸ್ತಿತ್ವಕ್ಕೆ ಬಂತು?
9 ದಾನಿಯೇಲ 2:28, 31-35 ಓದಿ. ಈ ವಚನಗಳಲ್ಲಿ ಹೇಳಿರೋ ಭವಿಷ್ಯವಾಣಿ ಇವತ್ತು ನೆರವೇರುತ್ತಿದೆ. ಕ್ರಿಸ್ತನ ಆಳ್ವಿಕೆ ಶುರುವಾದ ಮೇಲೆ “ಕಡೇ ದಿನಗಳಲ್ಲಿ” ಏನಾಗುತ್ತೆ ಅನ್ನೋದನ್ನ ನೆಬೂಕದ್ನೆಚ್ಚರ ಕನಸಲ್ಲಿ ನೋಡಿದ. ಅವನು ಕನಸಲ್ಲಿ ಕಂಡ ಆ ಮೂರ್ತಿಯ ‘ಕಬ್ಬಿಣ ಮತ್ತು ಜೇಡಿಮಣ್ಣಿನ ಪಾದ’ ಕೊನೇ ಲೋಕಶಕ್ತಿಯಾದ ಆ್ಯಂಗ್ಲೋ-ಅಮೆರಿಕನ ಸೂಚಿಸುತ್ತೆ. ಈ ಲೋಕಶಕ್ತಿನೂ ಯೇಸುವಿನ ವೈರಿಯಾಗಿದೆ ಮತ್ತು ಇದು ಈಗ ಭೂಮಿಯನ್ನ ಆಳ್ತಿದೆ. ಇದು ಒಂದನೇ ಮಹಾಯುದ್ಧದ ಸಮಯದಲ್ಲಿ ಬ್ರಿಟನ್ ಮತ್ತು ಅಮೆರಿಕ ಎರಡೂ ಸೇರಿ ಮೈತ್ರಿ ಸರ್ಕಾರನ ರಚಿಸಿದಾಗ ಅಸ್ತಿತ್ವಕ್ಕೆ ಬಂತು. ಈ ಮುಂಚೆ ಇದ್ದ ಲೋಕಶಕ್ತಿಗಳಿಗಿಂತ ಇದು ಎರಡು ರೀತಿಯಲ್ಲಿ ಭಿನ್ನವಾಗಿರುತ್ತೆ ಅಂತ ನೆಬೂಕದ್ನೆಚ್ಚರ ಕನಸಲ್ಲಿ ಕಂಡ ಆ ಮೂರ್ತಿಯಿಂದ ಗೊತ್ತಾಗುತ್ತೆ. ಅದೇನು?
10. (ಎ) ದಾನಿಯೇಲ ತನ್ನ ಭವಿಷ್ಯವಾಣಿಯಲ್ಲಿ ಆ್ಯಂಗ್ಲೋ-ಅಮೆರಿಕನ್ ಲೋಕಶಕ್ತಿ ಹೇಗಿರುತ್ತೆ ಅಂತ ಹೇಳಿದ್ದ? (ಬಿ) ನಾವು ಯಾವ ಅಪಾಯದಿಂದ ದೂರ ಇರಬೇಕು? (“ಜೇಡಿಮಣ್ಣಿಂದ ಎಚ್ಚರವಾಗಿರಿ!” ಅನ್ನೋ ಚೌಕ ನೋಡಿ.)
10 ಮೊದಲನೇದಾಗಿ, ಬೇರೆ ಲೋಕಶಕ್ತಿಗಳ ತರ ಈ ಆ್ಯಂಗ್ಲೋ-ಅಮೆರಿಕನ್ ಲೋಕಶಕ್ತಿಯನ್ನ ಚಿನ್ನ ಅಥವಾ ಬೆಳ್ಳಿಯಂಥ ಗಟ್ಟಿ ಲೋಹಗಳಿಂದ ಮಾಡಲಾಗಿಲ್ಲ. ಕಬ್ಬಿಣ ಮತ್ತು ಜೇಡಿಮಣ್ಣಿನ ಮಿಶ್ರಣದಿಂದ ಮಾಡಲಾಗಿದೆ. ಈ ಜೇಡಿಮಣ್ಣು “ಮಾನವ ಸಂತತಿ” ಅಥವಾ ಸಾಮಾನ್ಯ ಜನ್ರನ್ನ ಸೂಚಿಸುತ್ತೆ. (ದಾನಿ. 2:43, ಪಾದಟಿಪ್ಪಣಿ) ಇವತ್ತು ಜನರು ಚುನಾವಣೆಯಲ್ಲಿ ಬೇರೆಬೇರೆ ಪಕ್ಷಗಳಿಗೆ ಮತ ಚಲಾಯಿಸುತ್ತಿದ್ದಾರೆ. ಮಾನವ ಹಕ್ಕುಗಳಿಗಾಗಿ ಪ್ರತಿಭಟಿಸುತ್ತಿದ್ದಾರೆ ಮತ್ತು ಕಾರ್ಮಿಕರು ಮುಷ್ಕರಗಳನ್ನ ಮಾಡ್ತಿದ್ದಾರೆ. ಇದ್ರಿಂದ ಈ ಲೋಕಶಕ್ತಿಗೆ ತಾನು ಅಂದುಕೊಂಡಿದ್ದನ್ನ ಸಾಧಿಸೋಕೆ ಆಗ್ತಿಲ್ಲ. ಇದು ಒಂದರ್ಥದಲ್ಲಿ ಈ ಲೋಕಶಕ್ತಿಯನ್ನ ದುರ್ಬಲ ಮಾಡ್ತಿದೆ.
11. ಆ್ಯಂಗ್ಲೋ-ಅಮೆರಿಕನ್ ಲೋಕಶಕ್ತಿ ಆಳ್ತಾ ಇರೋದ್ರಿಂದ ನಾವು ಕೊನೇ ದಿನಗಳಲ್ಲಿ ಜೀವಿಸ್ತಿದ್ದೀವಿ ಅಂತ ಹೇಗೆ ಹೇಳಬಹುದು?
11 ಎರಡನೇದಾಗಿ, ಬೈಬಲ್‌ನಲ್ಲಿ ಈ ಆ್ಯಂಗ್ಲೋ-ಅಮೆರಿಕನ್ ಲೋಕಶಕ್ತಿಯನ್ನ ಪಾದಕ್ಕೆ ಹೋಲಿಸಿರೋದ್ರಿಂದ ಇದೇ ಕೊನೇ ಲೋಕಶಕ್ತಿಯಾಗಿದೆ. ಇದಾದಮೇಲೆ ಬೇರೆ ಯಾವ ಸರ್ಕಾರನೂ ಬರಲ್ಲ. ಆದಷ್ಟು ಬೇಗ ಯೆಹೋವ ದೇವರು ಹರ್ಮಗೆದೋನ್ ಯುದ್ಧದಲ್ಲಿ ಎಲ್ಲಾ ಮಾನವ ಸರ್ಕಾರಗಳನ್ನ ನಾಶಮಾಡಿ ತನ್ನ ಸರ್ಕಾರವನ್ನ ಸ್ಥಾಪಿಸ್ತಾನೆ.c—ಪ್ರಕ. 16:13, 14, 16; 19:19, 20.
12. ದಾನಿಯೇಲನ ಭವಿಷ್ಯವಾಣಿ ಇನ್ನೂ ಯಾವ ಆಧಾರಗಳನ್ನ ಕೊಡುತ್ತೆ ಮತ್ತು ಇದ್ರಿಂದ ನಮಗೆ ಹೇಗೆ ನೆಮ್ಮದಿ, ನಿರೀಕ್ಷೆ ಸಿಗುತ್ತೆ?
12 ಈ ಭವಿಷ್ಯವಾಣಿಯಿಂದ ನಮಗೇನು ಪ್ರಯೋಜನ? ನಾವು ಕೊನೇ ದಿನಗಳಲ್ಲಿ ಜೀವಿಸ್ತಾ ಇದ್ದೀವಿ ಅನ್ನೋಕೆ ದಾನಿಯೇಲ ಪುಸ್ತಕ ಇನ್ನೂ ಕೆಲವು ಆಧಾರಗಳನ್ನ ಕೊಡುತ್ತೆ. ಬಾಬೆಲ್‌ನ ನಂತರ 4 ಲೋಕಶಕ್ತಿಗಳು ದೇವಜನರ ಮೇಲೆ ಅಧಿಕಾರ ಚಲಾಯಿಸುತ್ತೆ ಅಂತ ಸುಮಾರು 2,500ಕ್ಕೂ ಹೆಚ್ಚು ವರ್ಷಗಳ ಹಿಂದೆನೇ ದಾನಿಯೇಲ ಹೇಳಿದ್ದ. ಅಷ್ಟೇ ಅಲ್ಲ, ಆ್ಯಂಗ್ಲೋ-ಅಮೆರಿಕ ಕೊನೇ ಲೋಕಶಕ್ತಿಯಾಗಿರುತ್ತೆ ಅಂತನೂ ಹೇಳಿದ್ದ. ಹಾಗಾದ್ರೆ ಯೆಹೋವ ದೇವರು ಆದಷ್ಟು ಬೇಗ ಎಲ್ಲಾ ಮಾನವ ಸರ್ಕಾರಗಳನ್ನ ನಾಶಮಾಡಿ ತನ್ನ ಸರ್ಕಾರವನ್ನ ಇಡೀ ಭೂಮಿ ಮೇಲೆ ಸ್ಥಾಪಿಸ್ತಾನೆ ಅಂತ ಇದ್ರಿಂದ ಗೊತ್ತಾಗುತ್ತೆ. ಇದನ್ನ ತಿಳಿದುಕೊಂಡಾಗ ಎಷ್ಟು ನೆಮ್ಮದಿ ಅನಿಸುತ್ತೆ ಅಲ್ವಾ!—ದಾನಿ. 2:44.
13. (ಎ) ಪ್ರಕಟನೆ 17:9-12ರಲ್ಲಿ ಹೇಳಿರೋ “ಎಂಟನೇ ರಾಜ” ಮತ್ತು ‘ಹತ್ತು ರಾಜರು’ ಯಾರನ್ನ ಸೂಚಿಸುತ್ತೆ? (ಬಿ) ಈ ಭವಿಷ್ಯವಾಣಿ ಹೇಗೆ ನೆರವೇರಿತು?
13 ಪ್ರಕಟನೆ 17:9-12 ಓದಿ. ಒಂದನೇ ಮಹಾಯುದ್ಧ ಆದಮೇಲೆ ಕೊನೇ ದಿನಗಳ ಬಗ್ಗೆ ಬೈಬಲ್‌ನಲ್ಲಿರೋ ಇನ್ನೊಂದು ಭವಿಷ್ಯವಾಣಿ ನೆರವೇರೋಕೆ ಶುರು ಆಯ್ತು. ಅದೇನಂದ್ರೆ ಲೋಕದಲ್ಲಿ ಶಾಂತಿ ತರೋಕಂತ ಎಲ್ಲಾ ಸರ್ಕಾರಗಳು ಸೇರಿಕೊಂಡು ಜನವರಿ 1920ರಲ್ಲಿ ರಾಷ್ಟ್ರಸಂಘವನ್ನ ಸ್ಥಾಪಿಸಿದವು. ಆಮೇಲೆ 1945ರ ಅಕ್ಟೋಬರ್ ತಿಂಗಳಲ್ಲಿ ಇದರ ಸ್ಥಾನಕ್ಕೆ ವಿಶ್ವಸಂಸ್ಥೆ ಬಂತು. ಇದನ್ನ ಬೈಬಲ್ “ಎಂಟನೇ ರಾಜ” ಅಂತ ಕರೆಯುತ್ತೆ. ಆದ್ರೆ ಇದು ಒಂದು ಲೋಕಶಕ್ತಿಯಲ್ಲ. ಇದನ್ನ ಬೆಂಬಲಿಸೋ ರಾಜಕೀಯ ಶಕ್ತಿಗಳು ಇದಕ್ಕೆ ಅಧಿಕಾರ ಕೊಡುತ್ತೆ. ಈ ರಾಜಕೀಯ ಶಕ್ತಿಗಳನ್ನ ಬೈಬಲ್‌ನಲ್ಲಿ ಸಾಂಕೇತಿಕವಾಗಿ ‘ಹತ್ತು ರಾಜರು’ ಅಂತ ಹೇಳಲಾಗಿದೆ.
14-15. (ಎ) ಪ್ರಕಟನೆ 17:3-5ರಲ್ಲಿ “ಮಹಾ ಬಾಬೆಲ್” ಬಗ್ಗೆ ಏನು ಹೇಳಿದೆ? (ಬಿ) ಸುಳ್ಳುಧರ್ಮವನ್ನ ಬೆಂಬಲಿಸುತ್ತಿದ್ದ ಜನರು ಈಗ ಏನು ಮಾಡ್ತಿದ್ದಾರೆ?
14 ಪ್ರಕಟನೆ 17:3-5 ಓದಿ. ದೇವರು ಅಪೊಸ್ತಲ ಯೋಹಾನನಿಗೆ ಒಂದು ದರ್ಶನ ತೋರಿಸಿದನು. ಆ ದರ್ಶನದಲ್ಲಿ ಯೋಹಾನ ಒಬ್ಬ ವೇಶ್ಯೆಯನ್ನ ಅಂದ್ರೆ ‘ಮಹಾ ಬಾಬೆಲ್‌ನ’ ನೋಡಿದ. ಆ ವೇಶ್ಯೆ ಸುಳ್ಳುಧರ್ಮದ ಲೋಕ ಸಾಮ್ರಾಜ್ಯವನ್ನು ಸೂಚಿಸುತ್ತಾಳೆ. ಈ ದರ್ಶನ ಹೇಗೆ ನೆರವೇರಿತು? ಸುಳ್ಳುಧರ್ಮ ರಾಜಕೀಯ ಶಕ್ತಿಗಳ ಜೊತೆ ಸೇರಿಕೊಂಡು ಅವರು ಮಾಡೋ ಕೆಲಸಗಳಿಗೆಲ್ಲಾ ಬೆಂಬಲ ಕೊಡುತ್ತಿದೆ. ಆದ್ರೆ ಆದಷ್ಟು ಬೇಗ ಈ ರಾಜಕೀಯ ನಾಯಕರ ತಲೆಗೆ ಯೆಹೋವ ದೇವರು “ತನ್ನ ಯೋಚ್ನೆಯನ್ನ” ಹಾಕ್ತಾನೆ. ಆಗ ಈ ರಾಜಕೀಯ ನಾಯಕರು ಅಂದ್ರೆ ‘ಹತ್ತು ರಾಜರು’ ಸುಳ್ಳುಧರ್ಮದ ಮೇಲೆ ಆಕ್ರಮಣ ಮಾಡಿ ಅದನ್ನ ಪೂರ್ತಿಯಾಗಿ ನಾಶ ಮಾಡ್ತಾರೆ.—ಪ್ರಕ. 17:1, 2, 16, 17.
15 ಮಹಾ ಬಾಬೆಲ್ ಬೇಗ ನಾಶ ಆಗುತ್ತೆ ಅಂತ ನಾವು ಯಾಕೆ ಹೇಳಬಹುದು? ಇದಕ್ಕೆ ಉತ್ತರ ತಿಳಿದುಕೊಳ್ಳೋಕೆ ಹಿಂದೆ ಇದ್ದ ಬಾಬೆಲ್ ನಗರವನ್ನ ಜ್ಞಾಪಿಸಿಕೊಳ್ಳೋಣ. ಅದರ ಸುತ್ತ ಯೂಫ್ರೆಟಿಸ್ ನದಿಯ ನೀರು ಹರಿಯುತ್ತಾ ಇದ್ದಿದ್ರಿಂದ ಅದು ಸುರಕ್ಷಿತವಾಗಿತ್ತು. ಈಗ ಮಹಾ ಬಾಬೆಲನ್ನ ಬೆಂಬಲಿಸುತ್ತಿರೋ ಜನರು ಆ ‘ನೀರಿನ’ ತರ ಇದ್ದಾರೆ ಅಂತ ಪ್ರಕಟಣೆ ಪುಸ್ತಕದಲ್ಲಿ ಹೇಳಿದೆ. (ಪ್ರಕ. 17:15) ಆದ್ರೆ ಆದಷ್ಟು ಬೇಗ ಈ ನೀರು ‘ಒಣಗಿ ಹೋಗುತ್ತೆ’ ಅಂದ್ರೆ ಮಹಾ ಬಾಬೆಲ್‌ಗೆ ಬೆಂಬಲ ಕೊಡ್ತಿರೋ ಜನರು ಕಮ್ಮಿ ಆಗ್ತಾರೆ ಅಂತ ಹೇಳಿದೆ. (ಪ್ರಕ. 16:12) ಈ ಭವಿಷ್ಯವಾಣಿಯಲ್ಲಿ ಹೇಳಿದ ತರಾನೇ ಈಗ ನಡೀತಾ ಇದೆ. ತುಂಬ ಜನರು ಧರ್ಮಗಳ ಮೇಲೆ ತಮಗಿದ್ದ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಅವರಿಗಿರೋ ಸಮಸ್ಯೆಗಳಿಗೆ ಬೇರೆ ಕಡೆ ಪರಿಹಾರ ಹುಡುಕುತ್ತಿದ್ದಾರೆ.
16. ವಿಶ್ವಸಂಸ್ಥೆ ಯಾವಾಗ ಹುಟ್ಟಿಕೊಳ್ತು ಮತ್ತು ಮಹಾ ಬಾಬೆಲ್ ಯಾವಾಗ ನಾಶ ಆಗುತ್ತೆ ಅನ್ನೋ ಭವಿಷ್ಯವಾಣಿಗಳ ಬಗ್ಗೆ ತಿಳಿದುಕೊಂಡಿದ್ರಿಂದ ನಮಗೇನು ಪ್ರಯೋಜನ?
16 ಈ ಭವಿಷ್ಯವಾಣಿಯಿಂದ ನಮಗೇನು ಪ್ರಯೋಜನ? ವಿಶ್ವಸಂಸ್ಥೆ ಹುಟ್ಟಿಕೊಂಡಿದ್ದು, ಸುಳ್ಳುಧರ್ಮಕ್ಕೆ ಜನರ ಬೆಂಬಲ ಕಡಿಮೆ ಆಗುತ್ತಿರೋದು ನಾವು ಕೊನೇ ದಿನಗಳಲ್ಲಿ ಜೀವಿಸುತ್ತಿದ್ದೀವಿ ಅನ್ನೋಕೆ ಹೆಚ್ಚಿನ ಆಧಾರಗಳನ್ನ ಕೊಡುತ್ತೆ. ಮಹಾ ಬಾಬೆಲ್‌ನ ಬೆಂಬಲಿಸುತ್ತಿರೋ ಸಾಂಕೇತಿಕ ನೀರು ಒಣಗಿ ಹೋಗುತ್ತಿದ್ದರೂ ಅದು ಕೊನೆಗೆ ನಾಶ ಆಗೋದು ಇದರಿಂದ ಅಲ್ಲ, ಅದನ್ನ ನಾಶ ಮಾಡೋಕೆ ಯೆಹೋವ ದೇವರು “ಹತ್ತು ರಾಜರನ್ನ” ಉಪಯೋಗಿಸ್ತಾನೆ. ಅಂದ್ರೆ ವಿಶ್ವ ಸಂಸ್ಥೆಗೆ ಬೆಂಬಲ ಕೊಡ್ತಿರೋ ರಾಜಕೀಯ ಶಕ್ತಿಗಳ ಅಥವಾ ಲೋಕದ ರಾಜಕೀಯ ನಾಯಕರ ತಲೆಯಲ್ಲಿ “ತನ್ನ ಯೋಚ್ನೆಯನ್ನ” ಹಾಕ್ತಾನೆ. ಅವರು ಸುಳ್ಳುಧರ್ಮವನ್ನ ಪೂರ್ತಿಯಾಗಿ ನಾಶ ಮಾಡಿಬಿಡುತ್ತಾರೆ. ಈ ನಾಶನ ಇಡೀ ಜಗತ್ತನ್ನೇ ಬೆಚ್ಚಿಬೀಳಿಸುತ್ತೆ.d (ಪ್ರಕ. 18:8-10) ಆದ್ರೆ ದೇವಜನರಿಗೆ ತುಂಬ ಸಂತೋಷ ಆಗುತ್ತೆ. ಅವರು ಸಂತೋಷ ಪಡೋಕೆ 2 ಕಾರಣಗಳಿವೆ. ಒಂದು, ಯೆಹೋವ ದೇವರು ದ್ವೇಷಿಸೋ ಸುಳ್ಳುಧರ್ಮ ಇನ್ನಿರಲ್ಲ. ಎರಡು, ಈ ಕೆಟ್ಟ ಲೋಕದಿಂದ ನಮಗೆ ಬಿಡುಗಡೆ ಸಿಗುತ್ತೆ.—ಲೂಕ 21:28.
ಯೆಹೋವ ತನ್ನ ಜನರ ಕೈಬಿಡಲ್ಲ
17-18. (ಎ) ನಾವು ನಮ್ಮ ನಂಬಿಕೆಯನ್ನ ಹೇಗೆ ಜಾಸ್ತಿ ಮಾಡಿಕೊಳ್ಳಬಹುದು? (ಬಿ) ನಾವು ಮುಂದಿನ ಲೇಖನದಲ್ಲಿ ಏನನ್ನ ಚರ್ಚಿಸುತ್ತೀವಿ?
17 ನಮ್ಮ ಕಾಲದಲ್ಲಿ ನೆರವೇರುತ್ತಿರೋ ಎಷ್ಟೋ ಭವಿಷ್ಯವಾಣಿಗಳ ಬಗ್ಗೆ ನಾವು ತಿಳಿದುಕೊಂಡ್ವಿ. ಇದ್ರಿಂದ ದಾನಿಯೇಲ ಪುಸ್ತಕದಲ್ಲಿ ಹೇಳಿದ್ದ ಹಾಗೆ “ನಿಜವಾದ ಜ್ಞಾನ ತುಂಬಿ ತುಳುಕುತ್ತೆ” ಅನ್ನೋ ಮಾತು ಎಷ್ಟು ಸತ್ಯ ಆಯ್ತು ಅಲ್ವಾ? (ದಾನಿ. 12:4, 9, 10) ಇದೆಲ್ಲಾ ಚಾಚೂತಪ್ಪದೆ ನೆರವೇರುತ್ತಿರೋದನ್ನ ನೋಡುವಾಗ ಯೆಹೋವನ ಮೇಲೆ ಮತ್ತು ಬೈಬಲ್ ಮೇಲೆ ನಮಗಿರೋ ನಂಬಿಕೆ ಇನ್ನೂ ಜಾಸ್ತಿಯಾಗುತ್ತೆ. (ಯೆಶಾ. 46:10; 55:11) ಹಾಗಾಗಿ ಬೈಬಲ್‌ನ ಚೆನ್ನಾಗಿ ಓದಿ ಅರ್ಥಮಾಡಿಕೊಳ್ಳೋಕೆ ಪ್ರಯತ್ನ ಮಾಡೋಣ. ಅಷ್ಟೇ ಅಲ್ಲ, ಬೇರೆಯವರಿಗೂ ಈ ವಿಷಯಗಳನ್ನ ಕಲಿಸೋಣ. ಇದ್ರಿಂದ ಅವರಿಗೆ ಯೆಹೋವನ ಸ್ನೇಹಿತರಾಗೋಕೆ ಸಹಾಯ ಮಾಡ್ತೀವಿ. ಯಾರೆಲ್ಲ ಯೆಹೋವನ ಮೇಲೆ ನಂಬಿಕೆ ಇಡ್ತಾರೋ ಅವರನ್ನ ಆತನು ಕಾಪಾಡ್ತಾನೆ ಮತ್ತು “ಕೊನೆ ಆಗದ ಶಾಂತಿ” ಕೊಡ್ತಾನೆ.—ಯೆಶಾ. 26:3.
18 ಕೊನೇ ದಿನಗಳಲ್ಲಿ ಕ್ರೈಸ್ತ ಸಭೆಗಳ ಬಗ್ಗೆ ಹೇಳಿರೋ ಭವಿಷ್ಯವಾಣಿಗಳನ್ನ ನಾವು ಮುಂದಿನ ಲೇಖನದಲ್ಲಿ ನೋಡ್ತೀವಿ. ಈ ಭವಿಷ್ಯವಾಣಿಗಳು ನಾವು ಕೊನೆ ದಿನಗಳಲ್ಲಿ ಜೀವಿಸ್ತಾ ಇದ್ದೀವಿ ಅನ್ನೋದಕ್ಕೆ ಇನ್ನೂ ಹೆಚ್ಚಿನ ಪುರಾವೆಗಳನ್ನ ಕೊಡುತ್ತೆ. ಅದರ ಜೊತೆಗೆ ಯೇಸು ಒಬ್ಬ ರಾಜನಾಗಿ ತನ್ನ ಹಿಂಬಾಲಕರನ್ನ ಹೇಗೆಲ್ಲಾ ಮುನ್ನಡೆಸುತ್ತಿದ್ದಾನೆ ಅನ್ನೋ ವಿಷಯನೂ ತಿಳಿದುಕೊಳ್ತೀವಿ.
ಗೀತೆ 17 ಸಾಕ್ಷಿಗಳೇ, ಮುನ್ನಡೆಯಿರಿ!
a ಮಾನವ ಇತಿಹಾಸದಲ್ಲೇ ಅತೀ ರೋಮಾಂಚಕ ಸಮಯದಲ್ಲಿ ನಾವು ಜೀವಿಸುತ್ತಿದ್ದೀವಿ! ಸ್ವರ್ಗದಲ್ಲಿ ದೇವರ ಆಳ್ವಿಕೆ ಶುರುವಾದಾಗ ಭೂಮಿಯಲ್ಲಿ ಏನೆಲ್ಲಾ ನಡಿಯುತ್ತೆ ಅಂತ ಬೈಬಲ್ ಮುಂಚೆನೇ ಹೇಳಿತ್ತೋ ಅದೆಲ್ಲ ಈಗ ನಮ್ಮ ಕಣ್ಮುಂದೆನೇ ನಡೀತಿದೆ. ಈ ಭವಿಷ್ಯವಾಣಿಗಳನ್ನ ಓದುವಾಗ ಯೆಹೋವನ ಮೇಲಿರೋ ನಮ್ಮ ನಂಬಿಕೆ ಇನ್ನೂ ಜಾಸ್ತಿಯಾಗುತ್ತೆ. ಅಷ್ಟೇ ಅಲ್ಲ, ಈಗ ಮತ್ತು ಮುಂದೆ ಈ ಭೂಮಿಯಲ್ಲಿ ನಡಿಯೋ ಘಟನೆಗಳನ್ನ ನೋಡಿ ನಾವು ಹೆದರದೆ ಯೆಹೋವನ ಮೇಲೆ ಭರವಸೆ ಇಡೋಕೆ ಸಹಾಯ ಮಾಡುತ್ತೆ.
b ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ 32ನೇ ಪಾಠದ 4ನೇ ಉಪಶೀರ್ಷಿಕೆ ನೋಡಿ ಮತ್ತು jw.orgನಲ್ಲಿ 1914ರಲ್ಲಿ ದೇವರ ಆಳ್ವಿಕೆಯ ಆರಂಭ ಅನ್ನೋ ವಿಡಿಯೋ ನೋಡಿ.
c ದಾನಿಯೇಲನ ಭವಿಷ್ಯವಾಣಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಜೂನ್ 15, 2012ರ ಕಾವಲಿನಬುರುಜುವಿನ ಪುಟ 14-19 ನೋಡಿ.
d ಮುಂದೆ ಏನಾಗುತ್ತೆ ಅನ್ನೋದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಜುಲೈ 15, 2013ರ ಕಾವಲಿನಬುರುಜುವಿನ “ಈ ಸಂಗತಿಗಳು ಯಾವಾಗ ಸಂಭವಿಸುವವು?” ಮತ್ತು “ನೋಡಿರಿ, ನಾನು ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ” ಅನ್ನೋ ಲೇಖನಗಳನ್ನ ನೋಡಿ.