ಅಸಾಧ್ಯ! ಯಾರಿಗೆ?
ಇಸವಿ 1912ರಲ್ಲಿ ಯಾನ ಹೊರಟಿದ್ದ ಟೈಟಾನಿಕ್ ವಿಶ್ವದ ಪ್ರತಿಷ್ಠಿತ ಹಾಗೂ ವೈಭವೋಪೇತ ಹಡಗು. ಅದರ ರಚನಾ ವೈಭವ, ಗುಣಲಕ್ಷಣ ಆಗಿನ ಕಾಲಕ್ಕೆ ಅತ್ಯಾಧುನಿಕ. “ಮುಳುಗಲು ಅಸಾಧ್ಯ” ಎಂದು ನಂಬಲಾದ ನೌಕೆ. ಆದರೆ ಏನು ಸಂಭವಿಸಿತೋ ಅದು ಇತಿಹಾಸದ ಪುಟದಲ್ಲಿ ವ್ಯಥೆಯ ಕಥೆಯಾಗಿ ಉಳಿದಿದೆ. ಮೊದಲ ಪಯಣದಲ್ಲೇ ಅದು ಉತ್ತರ ಅಟ್ಲಾಂಟಿಕ್ ಮಧ್ಯದಲ್ಲಿ ದೊಡ್ಡದೊಂದು ನೀರ್ಗಲ್ಲಿಗೆ ಡಿಕ್ಕಿ ಹೊಡೆದು ಸುಮಾರು 1,500 ಮಂದಿಯೊಂದಿಗೆ ಜಲಸಮಾಧಿಯಾಯಿತು. ಮುಳುಗಲು ಅಸಾಧ್ಯ ಎಂದು ಎಣಿಸಲಾದ ಹಡಗು ಕೆಲವೇ ತಾಸುಗಳಲ್ಲಿ ಸಾಗರತಳ ಸೇರಿತು.
“ಅಸಾಧ್ಯ” ಪದಕ್ಕೆ ನಾನಾ ಬಳಕೆ. ಕೆಲವೊಂದು ಸಂಗತಿ ನಮ್ಮ ಶಕ್ತಿ, ಸಾಮರ್ಥ್ಯ, ಗ್ರಹಿಕೆಗೆ ಮೀರಿದ್ದು ಅಂತ ತಿಳಿಸಲು ಅಸಾಧ್ಯ ಎಂಬ ಪದ ಬಳಸುತ್ತೇವೆ. ಕೆಲವು ವರ್ಷಗಳ ಹಿಂದೆ ಅಸಾಧ್ಯ ಎಂದೆಣಿಸಿದ ಸಂಗತಿ ಇಂದಿನ ಸಾಧನೆಗಳಾಗಿವೆ. ಆ ಸಮಯದಲ್ಲಿ ಅದು ಮಾನವನ ಸಾಮರ್ಥ್ಯ, ಗ್ರಹಿಕೆಗೆ ಮೀರಿದ್ದು. ಉದಾ: ಚಂದ್ರ ಲೋಕಕ್ಕೆ ಹೋಗುವುದು, ಮಂಗಳ ಗ್ರಹಕ್ಕೆ ಉಪಗ್ರಹವನ್ನು ಕಳುಹಿಸಿ ಅದನ್ನು ಭೂಮಿಯಿಂದಲೇ ನಿಯಂತ್ರಿಸುವುದು, ಮಾನವನ ಆನುವಂಶಿಕ ರಚನಾ ವ್ಯವಸ್ಥೆಯನ್ನು ತಿಳಿಯುವುದು, ಲೋಕದ ಇನ್ನೊಂದು ಭಾಗದಲ್ಲಿ ಏನು ಸಂಭವಿಸುತ್ತಿದೆ ಎಂಬದನ್ನು ವಾರ್ತಾಮಾಧ್ಯಮದ ಮೂಲಕ ಕ್ಷಣಾರ್ಧದಲ್ಲೇ ತಿಳುಕೊಳ್ಳುವುದು. . . ಇವೆಲ್ಲ 50 ವರ್ಷಗಳ ಹಿಂದೆ ಅಸಾಧ್ಯ ಸಂಗತಿ. ಆದರೆ ಈಗ ಸಾಧಿಸಲಾದ ನಿಜತ್ವ. ಅಮೆರಿಕದ ಪ್ರಧಾನಿ ರೋನಲ್ಡ್ ರೀಗನ್ ವೈಜ್ಞಾನಿಕ ಕ್ಷೇತ್ರದಲ್ಲಿನ ಹೆಸರಾಂತ ವ್ಯಕ್ತಿಗಳ ಒಂದು ಗುಂಪಿನೊಂದಿಗೆ ಮಾತಾಡುತ್ತಾ ಹೀಗೆ ಹೇಳಿದರು: “ತಂತ್ರಜ್ಞಾನ ಉತ್ತುಂಗಕ್ಕೇರಿರುವ ಈ ಸಮಯದಲ್ಲಿ ನೀವು ನಿನ್ನೆಯ ಅಸಾಧ್ಯವನ್ನು ಇಂದಿನ ಸರ್ವಸಾಮಾನ್ಯ ಸಂಗತಿಯಾಗಿ ಮಾಡಿದ್ದೀರಿ.”
ಬೆರಗುಗೊಳಿಸುವಂಥ ಅನೇಕ ಆವಿಷ್ಕಾರಗಳು ಇಂದು ನಡೆಯುತ್ತಿವೆ. ಪ್ರಾಧ್ಯಾಪಕರಾದ ಜಾನ್ ಬ್ರೋಬೆಕ್ ಹೇಳುವುದು: “ವಿಜ್ಞಾನಿಯೊಬ್ಬ ಇಂದು ಯಾವುದೇ ವಿಷ್ಯವನ್ನು ‘ಇದು ಖಂಡಿತ ಅಸಾಧ್ಯ’ ಎಂದು ಹೇಳಲಾರ. ಯಾಕೆಂದರೆ ಇಂದು ಅವನಿಗೆ ಅಸಾಧ್ಯವಾದದ್ದು ಮುಂದೊಂದು ದಿನ ಮತ್ತೊಬ್ಬರಿಗೆ ಸಾಧ್ಯವಾಗಬಹುದು. ಯಾವುದೇ ಸಂಗತಿಯನ್ನು ‘ಅಸಾಧ್ಯ’ ಎಂದು ಹೇಳಿದರೆ ಅದಕ್ಕೆ ಕಾರಣ ಸದ್ಯಕ್ಕೆ ನಮಗಿರುವ ಸೀಮಿತ ಜ್ಞಾನವೇ.” ಆದರೆ ಒಂದು ಸಂಗತಿ ಮಾತ್ರ ನಮಗೆ ಅಸಾಧ್ಯವಾಗಿ ಕಾಣುತ್ತಿದೆ. ಅದೇನೆಂದರೆ, “ಜೀವವಿಜ್ಞಾನ, ಭೌತವಿಜ್ಞಾನದಲ್ಲಿ ನಾವು ನೋಡುವಂತೆ ಪ್ರತಿಯೊಂದು ಕ್ರಿಯೆಯ ಹಿಂದೆ ಒಂದು ಶಕ್ತಿಯಿರುತ್ತದೆ. ಆ ಶಕ್ತಿಯ ಮೂಲ ಯಾವುದೆಂದು ನಮಗೆ ಇನ್ನೂ ತಿಳಿದಿಲ್ಲ. ಆದರೆ ನಮ್ಮ ಬೈಬಲ್ ಅದನ್ನು ದೇವರ ಶಕ್ತಿ ಎಂದು ತಿಳಿಸುತ್ತದೆ” ಎಂದು ಮುಂದುವರಿಸಿ ಹೇಳುತ್ತಾರೆ ಜಾನ್ ಬ್ರೋಬೆಕ್.
ದೇವರಿಗೆ ಎಲ್ಲವೂ ಸಾಧ್ಯ
ಪ್ರಾಧ್ಯಾಪಕರಾದ ಬ್ರೋಬೆಕ್ ಈ ಮಾತನ್ನು ತಿಳಿಸುವ ಎಷ್ಟೋ ಮುಂಚೆ ನಜರೇತಿನ ಯೇಸು (ಜೀವಿಸಿರುವವರಲ್ಲೇ ಅತ್ಯಂತ ಮಹಾನ್ ಪುರುಷ) ಹೀಗೆ ಹೇಳಿದ್ದನು: “ಮನುಷ್ಯರಿಗೆ ಅಸಾಧ್ಯವಾಗಿರುವ ವಿಷಯಗಳು ದೇವರಿಗೆ ಸಾಧ್ಯ.” (ಲೂಕ 18:27) ದೇವರ ಶಕ್ತಿಯಾದ ಪವಿತ್ರಾತ್ಮ ವಿಶ್ವದಲ್ಲೇ ಅತ್ಯಂತ ಪ್ರಬಲವಾದ ಶಕ್ತಿ. ಅದನ್ನು ಯಾವುದೇ ವೈಜ್ಞಾನಿಕ ಆವಿಷ್ಕಾರದೊಂದಿಗೆ ಹೋಲಿಸಲಸಾಧ್ಯ. ನಮ್ಮ ಶಕ್ತಿಗೆ ಅಸಾಧ್ಯವಾದದ್ದು ದೇವರ ಪವಿತ್ರಾತ್ಮಕ್ಕೆ ಸಾಧ್ಯ.
ಮಾನವರಾದ ನಮಗೆ ಕೆಲವೊಂದು ಸನ್ನಿವೇಶ ನಿಭಾಯಿಸಲು ಅಸಾಧ್ಯ ಎಂದು ತೋರಬಹುದು. ಉದಾ: ಪ್ರಿಯರೊಬ್ಬರು ತೀರಿಹೋದಾಗ ಇಲ್ಲವೆ ಕುಟುಂಬದಲ್ಲಿ ಅಪಸ್ವರ ಎದ್ದಾಗ ಕಾಲ ಕೆಳಗಿನ ನೆಲ ಕುಸಿದಂತಾಗಬಹುದು. ‘ಮುಂದೇನು?’ ಎಂಬ ದುಃಖತಪ್ತ ಪ್ರಶ್ನೆ ಮನವನ್ನು ಕಾಡಬಹುದು. ನಿಸ್ಸಹಾಯಕ, ಹತಾಶ ಭಾವ ಮನದಲ್ಲಿ ಹೊಯ್ದಾಡಬಹುದು. ಆಗೇನು?
ಸರ್ವಶಕ್ತ ದೇವರಲ್ಲಿ ನಂಬಿಕೆಯಿಡಿ. ಆತನಿಗೆ ಇಷ್ಟವಾದದ್ದನ್ನು ಮಾಡುತ್ತಾ ಆತನ ಪವಿತ್ರಾತ್ಮ ಶಕ್ತಿಗಾಗಿ ಬೇಡಿ. ಆಗ ಬೆಟ್ಟದಂಥ ಸಮಸ್ಯೆಯನ್ನೂ ಜಯಿಸಬಲ್ಲಿರಿ. ಯೇಸು ಅನ್ನುವುದು, “ನಿಮಗೆ ನಿಜವಾಗಿ ಹೇಳುತ್ತೇನೆ, ಯಾವನಾದರೂ ಈ ಬೆಟ್ಟಕ್ಕೆ ‘ಎತ್ತಲ್ಪಟ್ಟು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಹೇಳಿ ತನ್ನ ಹೃದಯದಲ್ಲಿ ಸಂಶಯಪಡದೆ ತಾನು ಹೇಳಿದ್ದು ಆಗುವುದೆಂದು ನಂಬುವುದಾದರೆ ಅವನು ಹೇಳಿದಂತೆಯೇ ಆಗುವುದು.” (ಮಾರ್ಕ 11:23) ದೇವರ ವಾಕ್ಯವಾದ ಬೈಬಲ್ ಮತ್ತು ಆತನ ಪವಿತ್ರಾತ್ಮ ಶಕ್ತಿ ನಮ್ಮ ಬದುಕನ್ನು ರೂಪಿಸುವಂತೆ ಬಿಟ್ಟುಕೊಟ್ಟರೆ ‘ಅಸಾಧ್ಯ’ ಎಂಬುದು ಒಂದೂ ಇಲ್ಲ.
38 ವರ್ಷ ವೈವಾಹಿಕ ಜೀವನ ನಡೆಸಿದ ಒಬ್ಬ ವ್ಯಕ್ತಿಯ ಅನುಭವ ನೋಡಿ. ಪತ್ನಿ ಕ್ಯಾನ್ಸರ್‌ನಿಂದ ತೀರಿಕೊಂಡಾಗ ಅವನು ಜರ್ಜರಿತನಾದ. ಅವಳಿಲ್ಲದ ಬದುಕು. . .ಅಸಾಧ್ಯ. ಸಾಯುವುದೇ ಲೇಸು. ಕಾರ್ಗತ್ತಲ ಕಣಿವೆಯಲ್ಲಿ ನಡೆಯುವಂತೆ ಭಾಸವಾಯಿತು ಅವನಿಗೆ. ಕಣ್ಣೀರಿಟ್ಟು ಪ್ರಾರ್ಥಿಸಿದ. ದಿನಂಪ್ರತಿ ಬೈಬಲ್ ಓದಿದ. ಪವಿತ್ರಾತ್ಮಕ್ಕಾಗಿ ಪಟ್ಟುಹಿಡಿದು ಕೇಳಿದ. ಫಲಿತಾಂಶ? ಜೀವಿಸಲು ಅಸಾಧ್ಯ ಎಂದೆಣಿಸಿದ ಅವನು ಬಾಳ ನೌಕೆಯನ್ನು ಸಾಗಿಸಶಕ್ತನಾದ.
ಇನ್ನೊಂದು ಉದಾಹರಣೆ ಪರಿಗಣಿಸಿ. ಒಂದು ದಂಪತಿಯ ವಿವಾಹ ಒಡೆಯುವ ಹಂತದಲ್ಲಿತ್ತು. ಗಂಡ ಹಿಂಸಾತ್ಮಕ ಸ್ವಭಾವದವನಾಗಿದ್ದ. ಅನೇಕ ಕೆಟ್ಟ ಹವ್ಯಾಸಗಳೂ ಇದ್ದವು. ಪತ್ನಿಗೆ ಬದುಕೇ ಬೇಡವೆನಿಸಿತು. ಆತ್ಮಹತ್ಯೆಗೆ ಯತ್ನಿಸಿದಳು. ಕೆಲ ಸಮಯದ ನಂತರ ಗಂಡನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಕಲಿಯಲು ಆರಂಭಿಸಿದ. ಕಲಿಯುತ್ತಾ ಹೋದಂತೆ ಕೆಟ್ಟ ಹವ್ಯಾಸಗಳನ್ನು ತ್ಯಜಿಸಿದ. ಹಿಂಸಾತ್ಮಕ ಗುಣವನ್ನು ಬಿಟ್ಟುಬಿಟ್ಟ. ಯಾವ ಬದಲಾವಣೆ “ಅಸಾಧ್ಯ” ಎಂದು ಅವನ ಪತ್ನಿಗೆ ಅನಿಸಿತ್ತೋ ಅದೀಗ ಸಾಧ್ಯವಾಯಿತು.
ಒಬ್ಬ ಮಾದಕ ವ್ಯಸನಿಯ ಕಥೆ ಹೀಗಿದೆ. ಅವನು ಅನೈತಿಕ ಜೀವನ ನಡೆಸುತ್ತಿದ್ದ. ಅವನ ಬದುಕು “ಸಮಸ್ಯೆಯ ಕೂಪ”ವಾಗಿತ್ತು. “ಜನರ ಮಧ್ಯೆ ನನ್ಗೆ ಮರ್ಯಾದಿನೇ ಇರ್ಲಿಲ್ಲ” ಅನ್ನುತ್ತಾನೆ ಅವನು. ಸಮಸ್ಯೆಯಲ್ಲಿ ಮುಳುಗಿದ್ದ ಅವನು ದೇವರಿಗೆ ಹೃದಯಾಳದಿಂದ ಬಿನ್ನಹಿಸಿದ: “ಕರ್ತನೇ, ನೀನಿದ್ದೀ ಅಂಥ ನನ್ಗೆ ಗೊತ್ತು. ದಯಮಾಡಿ ಸಹಾಯ ಮಾಡು.” ಪ್ರಾರ್ಥನೆಗೆ ಉತ್ತರವಾಗಿ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಕಲಿಯುವ ಸಂದರ್ಭ ಸಿಕ್ಕಿತು. ಕಲಿಯುತ್ತಾ ಕಲಿಯುತ್ತಾ ನಂಬಲಸಾಧ್ಯ ಬದಲಾವಣೆ ಮಾಡಿದ. ಅವನನ್ನುವುದು: “ಕೆಲವೊಮ್ಮೆ ಖಿನ್ನನಾಗಿ ಬಿಡ್ತೇನೆ. ಆಗ ಅಂಥ ಭಾವನೆಗಳನ್ನು ಹೊಡೆದೊಡಿಸಲು ದೇವರ ವಾಕ್ಯ ಸಹಾಯ ನೀಡುತ್ತೆ. ನಿದ್ರೆ ಬಾರದಿರುವ ರಾತ್ರಿಗಳಲ್ಲಿ ವಚನಗಳನ್ನು ಬಾಯಿಪಾಠ ಮಾಡ್ತೇನೆ. ಅವು ಮನಸ್ಸನ್ನು ಶುದ್ಧವಾಗಿಡಲು ಸಹಾಯ ನೀಡುತ್ತವೆ.” ಈಗ ಈತ ವಿವಾಹಿತನಾಗಿ ಸಂತೋಷದ ಬದುಕನ್ನು ಸಾಗಿಸುತ್ತಿದ್ದಾನೆ. ಇತರರಿಗೆ ದೇವರ ವಾಕ್ಯದಿಂದ ಸಹಾಯ ನೀಡುವುದರಲ್ಲಿ ತನ್ನ ಪತ್ನಿಯೊಂದಿಗೆ ಬ್ಯುಸಿಯಾಗಿದ್ದಾನೆ. ತನ್ನ ಪರಿಸ್ಥಿತಿಯನ್ನು ಬದಲಾಯಿಸಲು ಅಸಾಧ್ಯ ಎಂದು ಆರಂಭದಲ್ಲಿ ಎಣಿಸಿದ್ರೂ ಅದು ಸಾಧ್ಯವಾಯಿತು.
ದೇವರ ವಾಕ್ಯಕ್ಕೂ ಪವಿತ್ರಾತ್ಮಕ್ಕೂ ಇರುವ ಪ್ರಬಲ ಶಕ್ತಿಯನ್ನು ಈ ಎಲ್ಲ ಅನುಭವಗಳು ತೋರಿಸುತ್ತವೆ. ನಮ್ಮ ಬದುಕಲ್ಲಿ ಅಸಾಧ್ಯ ಎಂದೆಣಿಸಿದ ವಿಷ್ಯವನ್ನು ಅದು ಸಾಧ್ಯಗೊಳಿಸಬಲ್ಲದು. “ಅದು ನಿಜ, ಆದರೆ ಅದಕ್ಕೆ ಬಲವಾದ ನಂಬಿಕೆ ಬೇಕು” ಎಂದು ನೀವನ್ನಬಹುದು. ಹೌದು “ನಂಬಿಕೆಯಿಲ್ಲದೆ [ದೇವರನ್ನು] ಮೆಚ್ಚಿಸುವುದು ಅಸಾಧ್ಯ” ಎನ್ನುತ್ತದೆ ಬೈಬಲ್ ಸಹ. (ಇಬ್ರಿಯ 11:6) ಆದರೆ ಇದನ್ನು ಯೋಚಿಸಿ: ನಿಮಗೊಬ್ಬ ಆಪ್ತ ಗೆಳೆಯ ಇದ್ದಾನೆ. ಅವನೊಬ್ಬ ಬ್ಯಾಂಕ್ ಮ್ಯಾನೇಜರ್ ಇಲ್ಲವೆ ಅಧಿಕಾರದಲ್ಲಿರುವ ವ್ಯಕ್ತಿ ಎಂದಿಟ್ಟುಕೊಳ್ಳಿ. ಅವನು ನಿಮ್ಗೆ, ‘ಯಾವುದಕ್ಕೂ ಚಿಂತಮಾಡ್ಬೇಡ. ನಾನಿದ್ದೇನೆ. ಏನೇ ಕಷ್ಟ ಬಂದ್ರೂ ನನ್ಗೆ ಹೇಳು’ ಅಂತಾನೆ. ಅದನ್ನು ಕೇಳಿ ನಿಮ್ಗೆ ಸಖತ್ ಖುಶಿ ಅನಿಸುತ್ತೆ ನಿಜ. ಆದರೆ ಆತ ಮಾತಿಗೆ ತಪ್ಪಿದರೆ? ಈ ಕಾಲದಲ್ಲಿ ಯಾರನ್ನೂ ನಂಬಲಾಗುವುದಿಲ್ಲ. ಅಥವಾ ನಿಮ್ಮ ಗೆಳೆಯನ ಸನ್ನಿವೇಶ ಬದಲಾದರೆ? ಅವನಿಗೆ ಮನಸ್ಸಿದ್ರೂ ಸಹಾಯ ಮಾಡುವ ಪರಿಸ್ಥಿತಿಯಲ್ಲಿ ಅವನಿರುವುದಿಲ್ಲ. ಇಲ್ಲವೆ ಒಂದುವೇಳೆ ಅವನು ತೀರಿಹೋದರೆ? ಎಲ್ಲ ಸದುದ್ದೇಶ, ಸಾಮರ್ಥ್ಯ ತಟ್ಟನೆ ನಿಂತುಹೋಗುತ್ತೆ. ಆದರೆ ಇವ್ಯಾವುದೂ ದೇವರ ವಿಷ್ಯದಲ್ಲಿ ಸಂಭವಿಸುವುದಿಲ್ಲ. ಆದ್ದರಿಂದಲೇ ಬೈಬಲ್ ಭರವಸೆ ನೀಡುವುದು: “ದೇವರಿಗೆ ಯಾವುದೂ ಅಸಾಧ್ಯವಲ್ಲ.”—ಲೂಕ 1:37, ದಿ ಜೆರೂಸಲೇಮ್ ಬೈಬಲ್.
“ನೀನು ಇದನ್ನು ನಂಬುತ್ತೀಯೊ?”
ದೇವರಿಗೆ ಯಾವುದೂ ಅಸಾಧ್ಯವಲ್ಲ ಎಂಬ ಮಾತಿನ ಸತ್ಯತೆಯನ್ನು ತೋರಿಸುವ ಅನೇಕ ಘಟನೆಗಳು ಬೈಬಲಿನಲ್ಲಿ ದಾಖಲಾಗಿವೆ. ಕೆಲವನ್ನು ಪರಿಗಣಿಸೋಣ.
ಸಾರ 90ರ ಮುಪ್ಪಿನಲ್ಲಿದ್ದಳು. ಆಗ ದೇವರು ಆಕೆಗೆ, ‘ನೀನು ಗರ್ಭಿಣಿಯಾಗಿ ಮಗನನ್ನು ಹಡೆಯುವಿ’ ಅಂದನು. ಅದನ್ನು ಕೇಳಿ ಸಾರಳು ನಕ್ಕಳು. ಆದರೆ ದೇವರು ನುಡಿದಂತೆಯೇ ನಡೆಯಿತು. ಆಕೆಗೆ ಮಗ ಹುಟ್ಟಿದ. ಇಂದಿರುವ ಇಸ್ರೇಲ್ ಜನರಿಗೆ ಆತನೇ ಮೂಲಪಿತ. ಇನ್ನೊಂದು ಘಟನೆ ಯೋನನದ್ದು. ಅವನನ್ನು ಒಂದು ದೊಡ್ಡ ಮೀನು ನುಂಗಿತ್ತು. ಮೂರು ದಿನ ಹಗಲಿರುಳು ಆ ಮೀನಿನ ಹೊಟ್ಟೆಯೊಳಗೆ ಇದ್ದ. ಬಳಿಕ ಸುರಕ್ಷಿತವಾಗಿ ಹೊರಬಂದು ತನ್ನ ಸ್ವಂತ ಕಥೆಯನ್ನು ಬರೆದ. ವೈದ್ಯನಾದ ಲೂಕ ಬರೆದ ಘಟನೆ ನೋಡಿ. ಮೇಲಂತಸ್ತಿನ ಕಿಟಕಿಯಿಂದ ಬಿದ್ದು ಪ್ರಾಣ ಕಳಕೊಂಡ ಯೂತಿಖನೆಂಬ ಯೌವನಸ್ಥನನ್ನು ಪುನಃ ಜೀವಂತಗೊಳಿಸಿದ ಘಟನೆ ಅದು. ಇವೆಲ್ಲ ಕಟ್ಟು ಕಥೆಗಳಲ್ಲ. ಪ್ರತಿಯೊಂದು ಘಟನೆಯನ್ನು ಜಾಗ್ರತೆಯಿಂದ ಪರೀಕ್ಷಿಸಿದರೆ ಅವು ನಿಜವೆಂದು ನಿಮಗೇ ತಿಳಿಯುತ್ತದೆ.—ಆದಿಕಾಂಡ 18:10-14; 21:1, 2; ಯೋನ 1:17; 2:1, 10; ಅಪೊಸ್ತಲರ ಕಾರ್ಯಗಳು 20:9-12.
ಯೇಸು ತನ್ನ ಶಿಷ್ಯರಲ್ಲಿ ಒಬ್ಬಳಾದ ಮಾರ್ಥಳಿಗೆ ಈ ಆಶ್ಚರ್ಯಕರ ಮಾತನ್ನು ಹೇಳಿದ: “ಬದುಕಿದ್ದು ನನ್ನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ಎಂದಿಗೂ ಸಾಯುವುದೇ ಇಲ್ಲ.” ಅಸಾಧ್ಯವೆಂದು ಕಾಣುವ ಈ ಹೇಳಿಕೆಯ ಬಳಿಕ ಯೋಚನಾ ಪ್ರೇರಕ ಪ್ರಶ್ನೆಯನ್ನು ಆತ ಕೇಳಿದ: “ನೀನು ಇದನ್ನು ನಂಬುತ್ತೀಯೊ?” ಇಂದು ನಾವೂ ಈ ಪ್ರಶ್ನೆಯನ್ನು ಕೇಳಿಕೊಳ್ಳಬೇಕು.—ಯೋಹಾನ 11:26.
ಭೂಮಿಯ ಮೇಲೆ ಸಾವೇ ಇಲ್ಲದೆ ಬದುಕುವುದಾ???
ವೈಜ್ಞಾನಿಕ ಅಧ್ಯಯನದ ವಿಷ್ಯದಲ್ಲಿ ಒಬ್ಬ ಬರಹಗಾರ ತನ್ನ ಅನಿಸಿಕೆಯನ್ನು ಹೀಗೆ ವ್ಯಕ್ತಪಡಿಸಿದ್ದಾನೆ: “ಸಾಯದೆ ಸದಾ ಬದುಕುವುದು ದೂರದ ಮಾತಲ್ಲ. ಮನುಷ್ಯನ ಸರಾಸರಿ ಆಯಸ್ಸು ಹೆಚ್ಚಾಗಬಹುದು. ಒಂದುವೇಳೆ ಕೊನೆಯೇ ಇಲ್ಲದೆ ಬದುಕುವ ಕಾಲವೂ ಬೇಗನೆ ಬರಬಹುದು.” ಜೀವಕೋಶಗಳು ಸಾಯುತ್ತಾ ಸಾಯುತ್ತಾ ಕಡಿಮೆಯಾಗಿ ಮುಂದೊಂದು ದಿನ ಮನುಷ್ಯ ಇಲ್ಲವಾಗುತ್ತಾನೆ. ಇದೇಕೆ ಹೀಗೆ? ಸುಗಮವಾಗಿ ಚಲಿಸುತ್ತಿದ್ದ ಜೀವ ಅಸ್ತವ್ಯಸ್ತಗೊಂಡು ಕೊನೆಗೆ ನಿಂತೇ ಹೋಗುವುದೇಕೆ? ಮನುಷ್ಯನ ವೃದ್ಧಾಪ್ಯಕ್ಕೆ ಜೀವಕೋಶಗಳ ಸಾವು ತಾನೇ ಕಾರಣವಲ್ಲ. ನಮಗರಿಯದ ಕಾರಣವೇನೋ ಇರಬೇಕು. ಆದರೆ ಅದೇನು? ಇವೆಲ್ಲವು ನಿಗೂಢವಾಗಿಯೇ ಇವೆ ಎಂದು ದಿ ನ್ಯೂ ಎನ್‌ಸೈಕ್ಲೋಪೀಡಿಯಾ ಬ್ರಿಟ್ಯಾನಿಕ ತಿಳಿಸುತ್ತದೆ.
ಆದರೆ ಸಾವೇ ಇಲ್ಲದ ಬದುಕು ಖಂಡಿತ ಸಾಧ್ಯ ಎನ್ನುವುದಕ್ಕೆ ಬೈಬಲ್ ಬಲವಾದ ಕಾರಣ ನೀಡುತ್ತದೆ. ನಮ್ಮ ಸೃಷ್ಟಿಕರ್ತ, ಜೀವದ ಉಗಮನಾದ ಯೆಹೋವ ದೇವರು “ಮರಣವನ್ನು ಶಾಶ್ವತವಾಗಿ ನಿರ್ನಾಮ” ಮಾಡುವೆನೆಂದು ಮಾತು ಕೊಟ್ಟಿದ್ದಾನೆ. (ಕೀರ್ತನೆ 36:9; ಯೆಶಾಯ 25:8) ನೀವಿದನ್ನು ನಂಬುತ್ತೀರಾ? ಈ ಮಾತು ಕೊಟ್ಟವನು ಯೆಹೋವ ದೇವರು. ಆತನಿಗೆ ಸುಳ್ಳಾಡುವುದು ಅಸಾಧ್ಯ.—ತೀತ 1:2. (w12-E 06/01)
[ಪುಟ 11ರಲ್ಲಿರುವ ಚಿತ್ರ]
NASA photo
[ಪುಟ 11ರಲ್ಲಿರುವ ಚಿತ್ರ]
“ನಿನ್ನೆಯ ಅಸಾಧ್ಯ ಇಂದಿನ ಸರ್ವಸಾಮಾನ್ಯ ಸಂಗತಿ [ಆಗಿದೆ].”
—ರೋನಲ್ಡ್ ರೀಗನ್
[ಪುಟ 12ರಲ್ಲಿರುವ ಚಿತ್ರ]
ಬದುಕುವುದು ಅಸಾಧ್ಯ ಎಂದನಿಸಿದಾಗ ಯಾರಲ್ಲಿ ಸಹಾಯ ಕೋರುವಿರಿ?