“ದೇವರಿಗೆ ಎಲ್ಲವು ಸಾಧ್ಯ”
1 ಕ್ರೈಸ್ತ ಸಭೆಯ ಮುಖ್ಯ ಕೆಲಸವು ಲೋಕದಾದ್ಯಂತ ರಾಜ್ಯದ ಸಂದೇಶವನ್ನು ಸಾರುವುದೇ ಆಗಿದೆ. (ಮತ್ತಾ. 24:14) ಇದೊಂದು ಮಹತ್ತರವಾದ ಕೆಲಸವಾಗಿದೆ. ನಮ್ಮನ್ನು ಗಮನಿಸುತ್ತಿರುವ ಅನೇಕರಿಗೆ, ಈ ಕೆಲಸಕ್ಕಾಗಿ ನಮ್ಮ ಬಳಿಯಿರುವುದಕ್ಕಿಂತಲೂ ಹೆಚ್ಚಾದ ಸಂಪನ್ಮೂಲಗಳ ಅಗತ್ಯವಿರುವಂತೆ ಅನಿಸುತ್ತದೆ. ಇನ್ನೂ ಇತರರಿಗೆ, ಈ ನೇಮಕವನ್ನು ಪೂರೈಸುವುದು ತಾವು ಯೋಚಿಸಿನೋಡಲೂ ಸಾಧ್ಯವಾಗದ ವಿಷಯವಾಗಿದೆ. ಏಕೆಂದರೆ, ನಾವು ಕುಚೋದ್ಯ, ವಿರೋಧ ಹಾಗೂ ಹಿಂಸೆಗೆ ಒಳಪಟ್ಟಿರುವುದನ್ನು ಅವರು ನೋಡುತ್ತಾರೆ. (ಮತ್ತಾ. 24:9; 2 ತಿಮೊ. 3:12) ಈ ಕೆಲಸವನ್ನು ಮಾಡಿಮುಗಿಸಲು ಸಾಧ್ಯವೇ ಇಲ್ಲವೆಂದು ಸಂದೇಹವಾದಿಗಳು ದೃಢವಾಗಿ ನಂಬುತ್ತಾರೆ. ಹಾಗಿದ್ದರೂ, “ದೇವರಿಗೆ ಎಲ್ಲವು ಸಾಧ್ಯ” ಎಂದು ಯೇಸು ಹೇಳಿದನು.—ಮತ್ತಾ. 19:26.
2 ಅನುಕರಿಸಲು ಯೋಗ್ಯವಾದ ಸಕಾರಾತ್ಮಕ ಉದಾಹರಣೆಗಳು: ಯೇಸು ಇಡೀ ಲೋಕಕ್ಕೆ ವಿರುದ್ಧವಾಗಿ ತನ್ನ ಶುಶ್ರೂಷೆಯನ್ನು ಒಬ್ಬಂಟಿಗನಾಗಿ ಪ್ರಾರಂಭಿಸಿದನು. ಅವನು ಯಶಸ್ವಿಯನ್ನು ಪಡೆಯದಂತೆ, ಅವನ ವಿರೋಧಿಗಳು ಅವನನ್ನು ಊಹಿಸಸಾಧ್ಯವಿರುವ ಪ್ರತಿಯೊಂದು ರೀತಿಯ ಅವಮಾನಕ್ಕೆ ಗುರಿಮಾಡಿ, ಕೊನೆಗೆ ವೇದನಾಮಯ ಮರಣಕ್ಕೆ ಅವನನ್ನು ಒಳಪಡಿಸಿದರು. ಆದರೂ, ಕೊನೆಯಲ್ಲಿ ಯೇಸು ಭರವಸೆಯಿಂದ ಘೋಷಿಸಿದ್ದು: “ನಾನು ಲೋಕವನ್ನು ಜಯಿಸಿದ್ದೇನೆ.” (ಯೋಹಾ. 16:33) ನಿಜವಾಗಿಯೂ ಇದು ಆಶ್ಚರ್ಯಕರವಾದ ಸಾಧನೆಯಾಗಿತ್ತು!
3 ಕ್ರೈಸ್ತ ಶುಶ್ರೂಷೆಯಲ್ಲಿ ಯೇಸುವಿನ ಶಿಷ್ಯರು ಸಹ ಅದೇ ರೀತಿಯ ಧೈರ್ಯದಿಂದ ಕೂಡಿದ ಮನೋಭಾವವನ್ನು ಮತ್ತು ಹುರುಪನ್ನು ತೋರಿಸಿದರು. ಅನೇಕರು ಕೊರಡೆಯ ಏಟುಗಳನ್ನು ತಿಂದರು, ಹೊಡೆಯಲ್ಪಟ್ಟರು, ಸೆರೆಗೆ ಹಾಕಲ್ಪಟ್ಟರು, ಅಷ್ಟೇ ಅಲ್ಲ ಮರಣಕ್ಕೂ ಗುರಿಪಡಿಸಲ್ಪಟ್ಟರು. ಆದರೂ, ಅವರು “ಆ ಹೆಸರಿನ ನಿಮಿತ್ತವಾಗಿ ಅವಮಾನಪಡುವದಕ್ಕೆ ಯೋಗ್ಯರೆನಿಸಿಕೊಂಡೆವೆಂದು ಸಂತೋಷಿ”ಸಿದರು. (ಅ. ಕೃ. 5:41) ಅವರು ಎದುರಿಸಬೇಕಾದ ಈ ಎಲ್ಲ ಪ್ರತಿಕೂಲ ಪರಿಸ್ಥಿತಿಗಳ ಮಧ್ಯೆಯೂ, ‘ಭೂಲೋಕದ ಕಟ್ಟಕಡೆಯ ವರೆಗೂ’ ಸುವಾರ್ತೆಯನ್ನು ಸಾರುವಂಥ ಅಸಾಧ್ಯವೆಂದು ತೋರಿದ ಕೆಲಸವನ್ನು ಸಾಧಿಸಿದರು.—ಅ. ಕೃ. 1:8; ಕೊಲೊ. 1:23.
4 ನಮ್ಮ ದಿನದಲ್ಲಿ ಯಶಸ್ವಿಯಾಗುವ ವಿಧ: ಜಯಿಸಲು ಅಸಾಧ್ಯವಾಗಿ ತೋರುವ ಪ್ರತಿಕೂಲ ಪರಿಸ್ಥಿತಿಗಳ ಮಧ್ಯೆ ರಾಜ್ಯದ ಕುರಿತು ಸಾರುವ ಕೆಲಸವನ್ನು ನಾವೂ ಹುರುಪಿನಿಂದ ಸ್ವೀಕರಿಸಿದ್ದೇವೆ. ನಿಷೇಧಗಳು, ಹಿಂಸೆ, ಸೆರೆವಾಸ ಹಾಗೂ ನಮ್ಮ ಕೆಲಸವನ್ನು ನಿಲ್ಲಿಸಲು ಮಾಡಲ್ಪಡುವ ಇನ್ನಿತರ ಹಿಂಸಾತ್ಮಕ ಪ್ರಯತ್ನಗಳ ಮಧ್ಯೆಯೂ ನಾವು ಯಶಸ್ಸನ್ನು ಕಾಣುತ್ತಿದ್ದೇವೆ. ಇದು ಹೇಗೆ ಸಾಧ್ಯ? “ಪರಾಕ್ರಮದಿಂದಲ್ಲ, ಬಲದಿಂದಲ್ಲ, ನನ್ನ ಆತ್ಮದಿಂದಲೇ ಎಂಬುದು ಸೇನಾಧೀಶ್ವರ ಯೆಹೋವನ ನುಡಿ.” (ಜೆಕ. 4:6) ನಮ್ಮನ್ನು ಬೆಂಬಲಿಸಲು ಯೆಹೋವನಿರುವುದರಿಂದ ನಮ್ಮ ಕೆಲಸವನ್ನು ಯಾವುದೂ ನಿಲ್ಲಿಸಸಾಧ್ಯವಿಲ್ಲ!—ರೋಮಾ. 8:31.
5 ನಾವು ಸಾರುವಾಗ, ಗಾಬರಿಗೊಳ್ಳಲು, ಭಯಪಡಲು ಇಲ್ಲವೇ ನಾವು ಅರ್ಹರಲ್ಲವೆಂದು ನೆನಸಲು ನಮಗೆ ಯಾವ ಕಾರಣವೂ ಇಲ್ಲ. (2 ಕೊರಿಂ. 2:16, 17) ಏಕೆಂದರೆ, ರಾಜ್ಯದ ಕುರಿತ ಸುವಾರ್ತೆಯನ್ನು ಹಬ್ಬಿಸುವುದರಲ್ಲಿ ಮುನ್ನುಗ್ಗಲು ನಮಗೆ ಬಲವಾದ ಕಾರಣಗಳಿವೆ. ಯೆಹೋವನ ಸಹಾಯದಿಂದ “ಅಸಾಧ್ಯವಾದ”ದ್ದನ್ನು ನಾವು ಖಂಡಿತವಾಗಿಯೂ ಸಾಧಿಸುವೆವು!—ಲೂಕ 18:27.