ಪ್ರಾರ್ಥನೆಯನ್ನು ಕೇಳುವಾತನಿಗೆ ಆಪ್ತರಾಗಿ
ದೇವರಲ್ಲಿ ನಂಬಿಕೆ ಇಡುವ ಹೆಚ್ಚಿನವರಿಗೆ ತಾವ್ಯಾಕೆ ದೇವರನ್ನು ನಂಬುತ್ತೇವೆ ಎಂಬುದಕ್ಕೆ ಕಾರಣ ಗೊತ್ತಿರುವುದಿಲ್ಲ. ಧರ್ಮದ ಹೆಸರಲ್ಲಿ ಯಾಕಿಷ್ಟು ಕೆಟ್ಟದ್ದಾಗುತ್ತಿದೆ? ದೇವರು ಕಷ್ಟಗಳನ್ನು ಯಾಕೆ ತೆಗೆದುಹಾಕುವುದಿಲ್ಲ? ಎಂಬೆಲ್ಲ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವೂ ಇಲ್ಲ. ಅವರಿಂದ ಮಾಡಲಿಕ್ಕಾಗುವುದು ಪ್ರಾರ್ಥನೆ ಮಾತ್ರ. ಅದೂ ತಾವು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದ ದೇವರಿಗೆ.
ಆದರೆ ನೀವು ಇದಕ್ಕಿಂತ ಹೆಚ್ಚನ್ನು ಮಾಡಬಲ್ಲಿರಿ, ದೇವರಿಗೆ ಆಪ್ತರಾಗಬಲ್ಲಿರಿ. ದೇವರ ಬಗ್ಗೆ ನೀವು ಹೆಚ್ಚೆಚ್ಚು ತಿಳಿದುಕೊಂಡಂತೆ ಆತನಲ್ಲಿ ನಿಮ್ಮ ನಂಬಿಕೆ ಬಲವಾಗುತ್ತದೆ. ಆತನನ್ನು ಪ್ರೀತಿಸಿ, ಗೌರವಿಸಲು ಸಾಧ್ಯವಾಗುತ್ತದೆ. ನಿಜವಾದ ನಂಬಿಕೆಯು ಸಾಕ್ಷ್ಯಗಳ ಮೇಲಾಧರಿತವಾಗಿದೆ. (ಇಬ್ರಿಯ 11:1) ದೇವರ ಬಗ್ಗೆ ಸತ್ಯವನ್ನು ಕಲಿತುಕೊಂಡಾಗ ಆತನ ಒಳ್ಳೇ ಪರಿಚಯ ನಿಮಗಾಗುವುದು. ಒಬ್ಬ ಸ್ನೇಹಿತನೊಂದಿಗೆ ಮಾತಾಡುವಂತೆ ನೀವಾತನ ಬಳಿ ಮಾತಾಡಬಲ್ಲಿರಿ. ದೇವರು ನಿಜವಾಗಿಯೂ ಇದ್ದಾನಾ ಎಂಬ ಅನುಮಾನದಿಂದ ಪ್ರಾರ್ಥಿಸುತ್ತಿದ್ದ ಕೆಲವರ ಅನುಭವಗಳನ್ನು ಪರಿಗಣಿಸಿ.
◼ ಆರಂಭದ ಲೇಖನದಲ್ಲಿ ತಿಳಿಸಲಾಗಿರುವ ಪೆಟ್ರಿಶಾ. “ಒಂದಿನ ನಾವೆಲ್ಲ ಸ್ನೇಹಿತರು (ಹತ್ತು ಮಂದಿ) ಒಟ್ಟಾಗಿ ಕೂತಿದ್ದೆವು. ಎಲ್ಲರು ಧರ್ಮದ ಬಗ್ಗೆ ಚರ್ಚಿಸಲು ಆರಂಭಿಸಿದರು. ನನಗದನ್ನು ಕೇಳಲು ಇಷ್ಟವಿಲ್ಲದ ಕಾರಣ ಅವರು ಆ ಚರ್ಚೆಯನ್ನು ನಿಲ್ಲಿಸಲಿ ಎಂದು ನೆನಸಿ ನಾನವರಿಗೆ, ‘ಒಂದಿನ ಇದೇ ರೀತಿ ನಾಸ್ತಿಕರಾಗಿರುವ ನನ್ನ ತಂದೆಗೂ ಯೆಹೋವನ ಸಾಕ್ಷಿಗಳಿಗೂ ಧರ್ಮದ ಬಗ್ಗೆ ಚರ್ಚೆ ನಡಿತು. ಅದನ್ನು ಕೇಳಲು ಇಷ್ಟವಿಲ್ಲದೆ ನಾನು ಮನೆಯಿಂದಲೇ ಆಚೆ ಬಂದು ಬಿಟ್ಟೆ’ ಅಂದೆ. ಆದರೆ ನನ್ನ ಸ್ನೇಹಿತರಲ್ಲೊಬ್ಬ, ‘ಯೆಹೋವನ ಸಾಕ್ಷಿಗಳು ಹೇಳುವ ವಿಷ್ಯದಲ್ಲಿ ಏನೋ ತಿರುಳಿದೆ ಅಂತ ನನಗನಿಸುತ್ತೆ’ ಅಂದ.
“‘ನಾವ್ಯಾಕೆ ಅವರ ಕೂಟಗಳಿಗೆ ಹೋಗಿ ನೋಡಬಾರದು?’ ಎಂದಳು ಇನ್ನೊಬ್ಬಳು. ಹಾಗೆಯೇ ಮಾಡಿದೆವು. ಕೂಟಕ್ಕೆ ಹೋದೆವು. ಅಲ್ಲಿ ಯೆಹೋವನ ಸಾಕ್ಷಿಗಳು ನಮ್ಮೊಂದಿಗೆ ಸ್ನೇಹದಿಂದ ವರ್ತಿಸಿದರು. ಹಾಗಾಗಿ ನಮಗೆ ಅವರ ಬಗ್ಗೆ ಸರಿಯಾಗಿ ತಿಳಿಯದಿದ್ರೂ, ನಮ್ಮಲ್ಲಿ ಕೆಲವರು ಕೂಟಗಳಿಗೆ ಹೋಗೋದನ್ನು ಮುಂದುವರಿಸಿದ್ವಿ.
“ಆದರೆ ಒಂದು ಭಾನುವಾರ ನಾನು ಕೇಳಿದ ಭಾಷಣ ನನ್ನ ಬದುಕನ್ನೇ ಬದಲಾಯಿಸಿ ಬಿಟ್ಟಿತು. ಜನರು ಕಷ್ಟಗಳನ್ನು ಅನುಭವಿಸಲು ಕಾರಣವೇನು ಎಂದು ಭಾಷಣಗಾರ ವಿವರಿಸಿದರು. ದೇವರು ಮನುಷ್ಯನನ್ನು ಸೃಷ್ಟಿಸಿದಾಗ ಯಾವುದೇ ಕುಂದುಕೊರತೆಯಿಲ್ಲದೆ ಸೃಷ್ಟಿಸಿದ್ದನು. ಆದರೆ ಒಬ್ಬ ಮನುಷ್ಯನಿಂದ ಪಾಪ, ಮರಣ ಬಂತು. ಆಮೇಲೆ ಅದು ಇಡೀ ಮಾನವಕುಲಕ್ಕೆ ಹರಡಿತು ಎಂಬೆಲ್ಲ ವಿಚಾರವನ್ನು ಅವರು ವಿವರಿಸಿದರು. ಈ ಹಿಂದೆ ಇದೆಲ್ಲ ನನಗೆ ತಿಳಿದೇ ಇರಲಿಲ್ಲ. ಪ್ರಥಮ ಮನುಷ್ಯನು ಕಳೆದುಕೊಂಡ ಸ್ಥಿತಿಗೆ ಮನುಷ್ಯರನ್ನು ಪುನಃ ತರಲು ಯೇಸು ಸಾಯುವ ಅಗತ್ಯವಿತ್ತು ಎಂಬದನ್ನೂ ಆ ಭಾಷಣಗಾರ ತಿಳಿಸಿದರು.a (ರೋಮನ್ನರಿಗೆ 5:12, 18, 19) ಆಗ ನನಗೆ ಎಲ್ಲ ವಿಷ್ಯ ಅರ್ಥವಾಗ್ತಾ ಬಂತು. ‘ನಮ್ಮ ಬಗ್ಗೆ ಚಿಂತಿಸುವ ಒಬ್ಬ ದೇವರಿದ್ದಾನೆ’ ಎಂದು ತಿಳಿತು. ಬೈಬಲ್ ಅಧ್ಯಯನ ಮುಂದುವರಿಸಿದೆ. ನನ್ನ ಬದುಕಲ್ಲಿ ಮೊತ್ತ ಮೊದಲ ಬಾರಿಗೆ ನನ್ನ ಪ್ರಾರ್ಥನೆಗೆ ಅರ್ಥ ಬಂತು. ದೇವರು ಪ್ರಾರ್ಥನೆಯನ್ನು ಕೇಳುವ ನೈಜ ವ್ಯಕ್ತಿ ಎಂಬ ಮನತೃಪ್ತಿಯಿಂದ ಪ್ರಾರ್ಥಿಸಿದೆ.”
◼ ಆರಂಭದ ಲೇಖನದಲ್ಲಿ ತಿಳಿಸಲಾಗಿರುವ ಆ್ಯಲನ್. “ಒಂದಿನ ಯೆಹೋವನ ಸಾಕ್ಷಿಗಳು ನಮ್ಮನೆಗೆ ಬಂದ್ರು. ಭೂಮಿ ಮೇಲೆ ಮರಣವಿಲ್ಲದೆ ಜೀವಿಸುವ ಕಾಲ ಬರುತ್ತೆ ಎಂದು ಅವರು ಹೇಳಿದಾಗ ನನ್ನ ಪತ್ನಿಗೆ ತುಂಬ ಹಿಡಿಸ್ತು. ಅವಳು ಅವರನ್ನು ಮನೆಯೊಳಗೆ ಕರೆದಳು. ನನಗದು ಇಷ್ಟವಾಗಲಿಲ್ಲ, ತುಂಬ ಸಿಟ್ಟುಬಂತು. ನಾನವಳನ್ನು ಅಡುಗೆ ಮನೆಗೆ ಕರೆದು ‘ಯಾರು ಏನೇ ಹೇಳಿದ್ರು ಮೂರ್ಖಳಂತೆ ನಂಬೋದಲ್ಲ’ ಎಂದೆ.
“‘ಸರಿ ಹಾಗಾದ್ರೆ ನೀವೇ ಅವರ ಹತ್ರ ಮಾತಾಡಿ. ಅವರು ಹೇಳುವುದು ತಪ್ಪೆಂದು ರುಜುಮಾಡಿ’ ಅಂದಳು.
“ಆದರೆ ನನ್ನಿಂದ ಏನನ್ನೂ ರುಜುಮಾಡಲು ಆಗಲಿಲ್ಲ. ಅವರು ಸೌಮ್ಯಭಾವದಿಂದ ಒಂದು ಪುಸ್ತಕವನ್ನು ನನಗೆ ಕೊಟ್ಟು ಹೋದರು. ಆ ಪುಸ್ತಕದಲ್ಲಿ ‘ಜೀವ ಹೇಗೆ ಬಂತು—ಸೃಷ್ಟಿಯಿಂದನಾ ಅಥವಾ ವಿಕಾಸವಾಗಿಯಾ’ ಎಂಬ ವಿಷ್ಯವಿತ್ತು. ಅದು ಬಹಳ ತರ್ಕಬದ್ಧವಾಗಿತ್ತು, ರುಜುವಾತಿನಿಂದ ಕೂಡಿತ್ತು. ದೇವರ ಬಗ್ಗೆ ಹೆಚ್ಚನ್ನು ತಿಳಿಯಬೇಕೆಂದು ನಿರ್ಣಯಿಸಿದೆ. ಸಾಕ್ಷಿಗಳೊಂದಿಗೆ ಬೈಬಲ್ ಕಲಿಯಲಾರಂಭಿಸಿದೆ. ಬೇರೆಲ್ಲ ಧರ್ಮದ ಬಗ್ಗೆ ಇಷ್ಟರ ವರೆಗೆ ನಾನು ಏನು ನೆನಸಿದ್ದೆನೋ ಅದಕ್ಕಿಂತ ಬೈಬಲ್ ಕಲಿಸುವ ವಿಷ್ಯ ಭಿನ್ನವಾಗಿದೆ ಎಂದು ತಿಳಿದೆ. ಯೆಹೋವನ ಬಗ್ಗೆ ಕಲಿತಂತೆ ನಾನಾತನಿಗೆ ಮನಬಿಚ್ಚಿ ಪ್ರಾರ್ಥಿಸಲು ತೊಡಗಿದೆ. ನನ್ನಲ್ಲಿ ಕೆಲವೊಂದು ಕೆಟ್ಟ ಗುಣಗಳಿದ್ದವು. ಅದನ್ನು ಬಿಡಲು ಸಹಾಯಕ್ಕಾಗಿಯೂ ಪ್ರಾರ್ಥಿಸಿದೆ. ಯೆಹೋವನು ನನ್ನ ಪ್ರಾರ್ಥನೆಯನ್ನು ಲಾಲಿಸಿದ.”
◼ ಇಂಗ್ಲೆಂಡಿನಲ್ಲಿ ವಾಸಿಸುವ ಆ್ಯಂಡ್ರು. “ನನಗೆ ನನ್ನದೇ ಆದ ಅಭಿಪ್ರಾಯವಿತ್ತು. ವಿಜ್ಞಾನದಲ್ಲಿ ತುಂಬ ಆಸಕ್ತಿ. ವಿಕಾಸವಾದ ಸರಿಯೆಂದು ಜನರು ಹೇಳುತ್ತಿದ್ದ ಕಾರಣ ಅದನ್ನು ನಂಬುತ್ತಿದ್ದೆ. ಸುತ್ತಲು ನಡೆಯುವ ಕೆಟ್ಟ ಸಂಗತಿಯಿಂದಾಗಿ ದೇವರಲ್ಲಿ ನಂಬಿಕೆ ಕಳಕೊಂಡಿದ್ದೆ.
“ಕೆಲವೊಮ್ಮೆ ನನಗೆ ಹೀಗನಿಸುತ್ತಿತ್ತು: ‘ದೇವರೂಂತ ಒಬ್ಬ ಇದ್ರೆ ನನಗೊಂದು ವಿಷ್ಯ ತಿಳಿಲೇಬೇಕು. ಆತ ನಮ್ಮನ್ನೇಕೆ ಸೃಷ್ಟಿಮಾಡಿದ? ಯಾಕಿಷ್ಟು ಪಾತಕ, ಯುದ್ಧಗಳಿವೆ?’ ಕಷ್ಟದಲ್ಲಿದ್ದಾಗ ಪ್ರಾರ್ಥನೆ ಏನೋ ಮಾಡ್ತಿದ್ದೆ, ಆದರೆ ಯಾರಿಗೆ ಅಂತ ನನಗೇ ತಿಳಿದಿರಲಿಲ್ಲ.
“ಒಂದಿನ ಯಾರೋ ಒಬ್ಬರು ಈ ಲೋಕವು ಪಾರಾಗಿ ಉಳಿಯುವುದೋ?b ಎಂಬ ಕರಪತ್ರವನ್ನು ನನ್ನ ಪತ್ನಿಗೆ ಕೊಟ್ರು. ಅದೇ ಪ್ರಶ್ನೆ ಎಷ್ಟೋ ಬಾರಿ ನನ್ನ ಮನಸ್ಸಿಗೂ ಬಂದಿತ್ತು. ಆ ಕರಪತ್ರ ಓದಿದ ಬಳಿಕ, ‘ಬೈಬಲಿನಲ್ಲಿ ನನ್ನ ಪ್ರಶ್ನೆಗಳಿಗೆ ಉತ್ತರ ಇದೆಯಾ?’ ಎಂದು ಯೋಚಿಸ ತೊಡಗಿದೆ. ನಂತರ ಒಮ್ಮೆ ನಾನು ರಜೆಯಲ್ಲಿದ್ದಾಗ ಒಬ್ಬರು ನನಗೆ ಬೈಬಲ್—ದೇವರ ವಾಕ್ಯವೋ ಮನುಷ್ಯನದ್ದೋ? ಎಂಬ ಪುಸ್ತಕ ನೀಡಿದ್ರು. ಅದನ್ನು ಓದಿದಾಗ ಬೈಬಲಿಗೂ ವಿಜ್ಞಾನಕ್ಕೂ ಎಷ್ಟೊಂದು ಹೊಂದಾಣಿಕೆಯಿದೆ ಅಂತ ನನಗೆ ಗೊತ್ತಾಯ್ತು. ಬೈಬಲಿನ ಬಗ್ಗೆ ಹೆಚ್ಚನ್ನು ಕಲಿಬೇಕೆಂದು ತೀರ್ಮಾನಿಸಿದೆ. ಯೆಹೋವನ ಸಾಕ್ಷಿಗಳಲ್ಲೊಬ್ಬರು ನನಗೆ ಬೈಬಲನ್ನು ಕಲಿಸುವುದಾಗಿ ಹೇಳಿದಾಗ ಒಪ್ಪಿಕೊಂಡೆ. ಯೆಹೋವನ ಉದ್ದೇಶವನ್ನು ಅರ್ಥಮಾಡಿಕೊಂಡಂತೆ, ನನಗಾತ ನೈಜ ವ್ಯಕ್ತಿಯಾದ. ಮನಬಿಚ್ಚಿ ಆತನೊಂದಿಗೆ ಮಾತಾಡಲಾರಂಭಿಸಿದೆ.”
◼ ಲಂಡನಿನಲ್ಲಿ ಪ್ರಾಟೆಸ್ಟೆಂಟ್ ಧರ್ಮದಲ್ಲಿ ಬೆಳೆದ ಜೇನ್. “ಧರ್ಮದ ಹೆಸರಲ್ಲಿ ನಡೆಯುವ ಅನಾಚಾರವನ್ನು, ಸುತ್ತಲು ಕಷ್ಟಕಾರ್ಪಣ್ಯಗಳೇ ತಾಂಡವವಾಡುತ್ತಿರುವುದನ್ನು ನೋಡಿ ನಾನು ಧರ್ಮವನ್ನೇ ಬಿಟ್ಟುಬಿಟ್ಟೆ. ನಾನು ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿ ಹಣ ಸಂಪಾದಿಸಲು ಗಾಯಕಿಯಾಗಿಯೂ ಗಿಟಾರ್ ನುಡಿಸುವವಳಾಗಿಯೂ ಕೆಲಸಮಾಡಿದೆ. ಆ ಸಮಯದಲ್ಲೇ ಪ್ಯಾಟ್ನ ಪರಿಚಯವಾಯ್ತು. ಅವನು ಕ್ಯಾತೊಲಿಕ್ ಧರ್ಮದಲ್ಲಿ ಬೆಳೆದಿದ್ದರೂ ನನ್ನಂತೆಯೇ ಧರ್ಮದಲ್ಲಿ ನಂಬಿಕೆ ಕಳಕೊಂಡಿದ್ದ.
“ಯಾರೂ ಉಪಯೋಗಿಸದೆ ಹಾಗೇ ಬಿಟ್ಟಿದ್ದ ಒಂದು ಮನೆಯಲ್ಲಿ ನಾವಿಬ್ಬರು ವಾಸಿಸತೊಡಗಿದೆವು. ನಮ್ಮೊಂದಿಗೆ ಇತರರೂ ಸೇರಿಕೊಂಡ್ರು. ಅವರೂ ನಮ್ಮ ಹಾಗೆ ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿದವರು. ಅವರಿಗೆ ಪೌರಸ್ತ್ಯ ದೇಶಗಳ ಧರ್ಮಗಳಲ್ಲಿ ಆಸಕ್ತಿಯಿತ್ತು. ನಾವೆಲ್ಲರು ಮಧ್ಯ ರಾತ್ರಿಯ ವರೆಗೆ ಕುಳಿತು ಜೀವಿತದ ಅರ್ಥವೇನು ಎಂಬೆಲ್ಲ ವಿಷ್ಯವನ್ನು ಆಳವಾಗಿ ಚರ್ಚಿಸುತ್ತಿದ್ದೆವು. ನನಗೂ ಪ್ಯಾಟ್ಗೂ ದೇವರಲ್ಲಿ ನಂಬಿಕೆ ಇರ್ಲಿಲ್ಲ. ಆದರೂ ಸೃಷ್ಟಿಯ ಹಿಂದೆ ಯಾವುದೋ ಒಂದು ‘ಶಕ್ತಿ’ ಇರಲೇಬೇಕೆಂದು ಅನಿಸುತ್ತಿತ್ತು.
“ನಾವು ಕೆಲಸ ಹುಡುಕುತ್ತಾ ಉತ್ತರ ಇಂಗ್ಲೆಂಡಿಗೆ ಹೋದೆವು. ಅಲ್ಲಿ ನಮಗೊಬ್ಬ ಮಗ ಹುಟ್ಟಿದ. ಒಂದು ರಾತ್ರಿ ಅವನಿಗೆ ತುಂಬಾ ಹುಷಾರು ತಪ್ಪಿತು. ದೇವರಲ್ಲಿ ನಂಬಿಕೆಯಿಲ್ಲ ಎನ್ನುತ್ತಿದ್ದ ನಾನು ನನಗೇ ಅರಿವಿಲ್ಲದೆ ಆ ರಾತ್ರಿ ದೇವರಲ್ಲಿ ಪ್ರಾರ್ಥಿಸಿದೆ. ಸ್ವಲ್ಪ ದಿನಗಳಲ್ಲಿ ನನ್ನ ಮತ್ತು ಪ್ಯಾಟ್ನ ಸಂಬಂಧಕ್ಕೆ ಬಿರುಕು ಬಿತ್ತು. ನಾನು ಮಗುವನ್ನು ಕರೆದುಕೊಂಡು ಮನೆಬಿಟ್ಟು ಹೋದೆ. ಆಗಲೂ ಪ್ರಾರ್ಥಿಸಿದೆ. ಒಂದುವೇಳೆ ಯಾರಾದರು ಇದ್ದರೆ ನನ್ನ ಪ್ರಾರ್ಥನೆಯನ್ನು ಕೇಳಲಿ ಎಂದು ಹಂಬಲಿಸಿದೆ. ಪ್ಯಾಟ್ ಸಹ ಅದನ್ನೇ ಮಾಡಿದ್ದರು ಅಂತ ಆಮೇಲೆ ಗೊತ್ತಾಯಿತು.
“ನಾನು ಮನೆಬಿಟ್ಟು ಹೋದ ಅದೇ ದಿನ ಇಬ್ಬರು ಯೆಹೋವನ ಸಾಕ್ಷಿಗಳು ಪ್ಯಾಟ್ನ ಮನೆಗೆ ಬಂದರು. ಬೈಬಲಿನಿಂದ ಅನೇಕ ಬುದ್ಧಿಮಾತುಗಳನ್ನು ಹೇಳಿದರು. ಕೂಡಲೆ ಪ್ಯಾಟ್ ನನಗೆ ಫೋನ್ ಮಾಡಿ ‘ಸಾಕ್ಷಿಗಳೊಂದಿಗೆ ಬೈಬಲ್ ಕಲಿಯೋಣ. ನಿನಗೆ ಒಪ್ಪಿಗೆ ಇದಿಯಾ?’ ಎಂದು ಕೇಳಿದರು. ನಾನೂ ಒಪ್ಪಿದೆ. ದೇವರನ್ನು ಮೆಚ್ಚಿಸಬೇಕಾದರೆ ನಮ್ಮ ವಿವಾಹವನ್ನು ಕಾನೂನುಬದ್ಧವಾಗಿ ರಿಜಿಸ್ಟರ್ ಮಾಡಬೇಕು ಎಂಬ ಅರಿವು ನಮಗಾಯಿತು. ಇದು ಅಷ್ಟು ಸುಲಭವಾಗಿರಲಿಲ್ಲ ಏಕೆಂದರೆ ಈಗಾಗಲೇ ನಮ್ಮ ಸಂಬಂಧದಲ್ಲಿ ಬಿರುಕು ಕಾಣಿಸಿತ್ತು.
“ಬೈಬಲ್ ಕಲಿಯುತ್ತಾ ಹೋದಂತೆ ಅದರಲ್ಲಿರುವ ಭವಿಷ್ಯವಾಣಿಗಳು, ದೇವರು ಕಷ್ಟಗಳನ್ನು ಬಿಟ್ಟಿರಲು ಕಾರಣ, ದೇವರ ರಾಜ್ಯ ಎಂದರೇನು ಈ ಎಲ್ಲ ವಿಷ್ಯವನ್ನು ತಿಳಿಬೇಕೆಂಬ ಆಸೆ ಹುಟ್ಟಿತು. ದೇವರು ನಮ್ಮ ಬಗ್ಗೆ ಚಿಂತಿಸುತ್ತಾನೆ, ಆತನಿಗೆ ಇಷ್ಟವಾದದ್ದನ್ನೇ ನಾವು ಮಾಡಬೇಕು ಎನ್ನುವುದನ್ನು ಕ್ರಮೇಣ ಕಲಿತುಕೊಂಡೆವು. ಕಾನೂನುಬದ್ಧವಾಗಿ ವಿವಾಹವಾದೆವು. ನಮ್ಮ ಮೂವರು ಮಕ್ಕಳನ್ನು ಚೆನ್ನಾಗಿ ಬೆಳೆಸಲು ದೇವರ ವಾಕ್ಯದಲ್ಲಿರುವ ವಿವೇಕ ಸಹಾಯಮಾಡಿತು. ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಕಿವಿಗೊಡುತ್ತಾನೆಂಬ ಭರವಸೆ ಈಗ ನಮಗೆ ದೃಢವಾಗಿದೆ.”
ಸಾಕ್ಷ್ಯವನ್ನು ಸ್ವತಃ ನೀವೇ ಪರೀಕ್ಷಿಸಿ
ಲಕ್ಷಾಂತರ ಜನರಂತೆ ಮೇಲೆ ತಿಳಿಸಿದ ಜನರು ಸಹ ಸುಳ್ಳು ಧರ್ಮದಿಂದ ಮೋಸ ಹೋಗಲಿಲ್ಲ. ದೇವರು ಏಕೆ ಕಷ್ಟಗಳನ್ನು ಅನುಮತಿಸಿದ್ದಾನೆ ಎಂಬದನ್ನು ಅವರು ತಿಳಿದುಕೊಂಡ್ರು. ಆದರೆ ಎಲ್ಲರ ವಿಷ್ಯದಲ್ಲಿ ಸಮಾನವಾಗಿದ್ದ ಒಂದು ಸಂಗತಿಯನ್ನು ಗಮನಿಸಿದ್ರಾ? ಅವರೆಲ್ಲರು ಬೈಬಲನ್ನು ಚೆನ್ನಾಗಿ ಅರ್ಥಮಾಡಿಕೊಂಡಾಗ ಮಾತ್ರ ಯೆಹೋವ ದೇವರು ಪ್ರಾರ್ಥನೆಯನ್ನು ಕೇಳುತ್ತಾನೆ ಎಂಬ ಭರವಸೆ ಅವರಲ್ಲಿ ಮೂಡಿತು.
ದೇವರು ಇದ್ದಾನೆ ಎಂಬದಕ್ಕೆ ನೀವು ಪುರಾವೆಯನ್ನು ಪರೀಕ್ಷಿಸಲು ಬಯಸುತ್ತೀರಾ? ಯೆಹೋವನ ಬಗ್ಗೆ ಸತ್ಯವನ್ನು ಕಲಿಯಲು, “ಪ್ರಾರ್ಥನೆಯನ್ನು ಕೇಳುವ” ಆತನಿಗೆ ಆಪ್ತರಾಗಲು ಯೆಹೋವನ ಸಾಕ್ಷಿಗಳು ನಿಮಗೆ ಸಹಾಯ ನೀಡಲು ಸಿದ್ಧರಿದ್ದಾರೆ.—ಕೀರ್ತನೆ 65:2. (w12-E 07/01)
[ಪಾದಟಿಪ್ಪಣಿಗಳು]
a ಯೇಸುವಿನ ಮರಣ ನಮಗೆ ಏಕೆ ಪ್ರಾಮುಖ್ಯ ಎಂದು ತಿಳಿಯಲು ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 5 ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.
b ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.
[ಪುಟ 10ರಲ್ಲಿರುವ ಚಿತ್ರ]
“ಯೆಹೋವನ ಉದ್ದೇಶವನ್ನು ಅರ್ಥಮಾಡಿಕೊಂಡಂತೆ, ನನಗಾತ ನೈಜ ವ್ಯಕ್ತಿಯಾದ. ಮನಬಿಚ್ಚಿ ಆತನೊಂದಿಗೆ ಮಾತಾಡಲಾರಂಭಿಸಿದೆ.”
[ಪುಟ 9ರಲ್ಲಿರುವ ಚಿತ್ರ]
ನಿಜವಾದ ನಂಬಿಕೆ ಪುರಾವೆಗಳಿಂದ ಕೂಡಿದ್ದಾಗಿದೆ. ಅದು ದೇವರ ಬಗ್ಗೆ ಸತ್ಯವನ್ನು ಕಲಿಯಬೇಕೆಂಬ ಇಚ್ಛೆಯಾಗಿದೆ.