ಯಾರು ನಮ್ಮ ಪ್ರಾರ್ಥನೆಯನ್ನು ಕೇಳುವಾತ?
ಪ್ರಾರ್ಥನೆಯನ್ನು ಕೇಳುವಾತನೊಬ್ಬ ಇರುವುದಾದರೆ ಖಂಡಿತ ಆತ ಸೃಷ್ಟಿಕರ್ತನೇ ಆಗಿರಬೇಕು. ಏಕೆಂದರೆ ಮಾನವ ಮಿದುಳಿನ ರಚಕನಾದ ಆತನಲ್ಲದೆ ಇನ್ಯಾರು ನಮ್ಮ ಮನಸ್ಸನ್ನು ಓದಬಲ್ಲರು? ಪ್ರಾರ್ಥನೆಗಳನ್ನು ಕೇಳಿ ಮನುಷ್ಯರಿಗೆ ಬೇಕಾದ ನೆರವನ್ನು ಆತನಲ್ಲದೆ ಇನ್ಯಾರು ನೀಡಬಲ್ಲರು? ‘ಇದೆಲ್ಲ ಸರಿ ಆದರೆ ನಿಜವಾಗಿಯೂ ಒಬ್ಬ ಸೃಷ್ಟಿಕರ್ತ ಇದ್ದಾನಾ?’ ಎಂಬ ಪ್ರಶ್ನೆ ನಿಮಗೆ ಬರಬಹುದು.
ಸೃಷ್ಟಿಕರ್ತ ಇದ್ದಾನೆ ಎಂದು ನಂಬಬೇಕಾದರೆ ಆಧುನಿಕ ವಿಜ್ಞಾನ ನೀಡುವ ಪುರಾವೆಯನ್ನು ಅಲ್ಲಗಳೆಯಬೇಕು ಎಂದು ಅನೇಕರು ನೆನಸುತ್ತಾರೆ. ಅವರ ಪ್ರಕಾರ ಆಧುನಿಕ ವಿಜ್ಞಾನ ಕಲಿಸುವ ವಿಷಯಕ್ಕೂ ದೇವರಿದ್ದಾನೆ ಎಂದು ನಂಬುವುದಕ್ಕೂ ಯಾವುದೇ ಹೊಂದಾಣಿಕೆ ಇಲ್ಲ. ಆದರೆ ಇದು ನಿಜವಲ್ಲ. ಈ ಸಮೀಕ್ಷೆಯನ್ನು ಗಮನಿಸಿ:
◼ ಅಮೆರಿಕದ 21 ಹೆಸರಾಂತ ವಿಶ್ವವಿದ್ಯಾನಿಲಯಗಳ 1,646 ವಿಜ್ಞಾನ ಪ್ರೊಫೆಸರರೊಂದಿಗೆ ಇತ್ತೀಚೆಗೆ ಸಮೀಕ್ಷೆ ನಡೆಸಲಾಯಿತು. ಅವರಲ್ಲಿ ಸುಮಾರು 550 ಮಂದಿ ಮಾತ್ರ ‘ನಾನು ದೇವರನ್ನು ನಂಬುವುದಿಲ್ಲ’ ಎಂಬ ಮಾತನ್ನು ಹೇಳಿದರು.
ವಾಸ್ತವವೇನೆಂದರೆ ವಿಜ್ಞಾನಿಗಳಲ್ಲಿ ಅನೇಕರು ದೇವರಿದ್ದಾನೆಂದು ನಂಬುತ್ತಾರೆ.
ಸೃಷ್ಟಿಕರ್ತ ಇದ್ದಾನೆಂಬ ಪುರಾವೆ
ಪ್ರಾರ್ಥನೆಯನ್ನು ಕೇಳುವ ದೇವರು ಇದ್ದಾನೆಂದು ಯಾವುದೇ ಪುರಾವೆಯಿಲ್ಲದೆ ನಾವು ನಂಬಬೇಕಾ? ಇಲ್ಲ. ನಂಬಿಕೆ ಇಡಲು ಯಾವುದೇ ಪುರಾವೆ ಬೇಕಾಗಿಲ್ಲ ಎಂಬ ಅಭಿಪ್ರಾಯ ತಪ್ಪಾಗಿದೆ. ನಿಜವಾದ ನಂಬಿಕೆಗೆ ಪ್ರತ್ಯಕ್ಷ ಸಾಕ್ಷ್ಯ ಇರುತ್ತದೆ ಎಂದು ಬೈಬಲ್ ಹೇಳುತ್ತದೆ. (ಇಬ್ರಿಯ 11:1) ಉದಾಹರಣೆಗೆ, ಗಾಳಿ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆದರೆ ಗಾಳಿ ಇದೆ ಎನ್ನುವುದಕ್ಕೆ ಗಿಡಮರ ಎಲೆಗಳು ಅಲ್ಲಾಡುವುದು ಒಂದು ಪ್ರತ್ಯಕ್ಷ ಸಾಕ್ಷ್ಯ. ಹಾಗೆಯೇ ಪ್ರಾರ್ಥನೆಯನ್ನು ಕೇಳುವಾತ ನಮ್ಮ ಕಣ್ಣಿಗೆ ಕಾಣದಿದ್ದರೂ ಆತನಿದ್ದಾನೆ ಎಂಬದಕ್ಕೆ ಸಾಕ್ಷ್ಯ-ಪುರಾವೆಗಳಿವೆ.
ದೇವರಿದ್ದಾನೆಂದು ತೋರಿಸುವ ಪ್ರತ್ಯಕ್ಷ ಪುರಾವೆ ಎಲ್ಲಿದೆ? ನಿಮ್ಮ ಸುತ್ತಲು ಕಣ್ಣಾಡಿಸಿ. ಬೈಬಲ್ ಹೇಳುವುದು, “ಪ್ರತಿಯೊಂದು ಮನೆಯು ಯಾರೋ ಒಬ್ಬನಿಂದ ಕಟ್ಟಲ್ಪಟ್ಟಿದೆ, ಆದರೆ ಎಲ್ಲವನ್ನೂ ಕಟ್ಟಿದಾತನು ದೇವರೇ.” (ಇಬ್ರಿಯ 3:4) ಈ ಮಾತು ನಿಮಗೆ ತರ್ಕಬದ್ಧ ಅನಿಸುವುದಿಲ್ಲವಾ? ವಿಶ್ವದ ವಿನ್ಯಾಸ, ಜೀವದ ಉಗಮ, ಭೂಮಿಯಲ್ಲೇ ಅತಿ ಜಟಿಲವಾದ ಮಾನವ ಮಿದುಳಿನ ರಚನೆ ಬಗ್ಗೆ ಯೋಚಿಸುವಾಗ ಮಾನವನಿಗಿಂತ ಶ್ರೇಷ್ಠನಾದ ಯಾರೋ ಇರಲೇಬೇಕೆಂದು ನಿಮಗನಿಸುವುದಿಲ್ಲವೇ?
ಪ್ರಕೃತಿ ನೋಡಿ ದೇವರ ಬಗ್ಗೆ ತಕ್ಕಮಟ್ಟಿಗೆ ಕಲಿಯಬಹುದು ನಿಜ. ಆದರೆ ಅದು ನಮಗೆ ಎಲ್ಲವನ್ನು ಕಲಿಸಲಾರದು. ಉದಾ: ಮನೆ ಒಳಗೆ ಬಾಗಿಲು ಮುಚ್ಚಿ ಕುಳಿತಿರುವ ನಮಗೆ ಹೊರಗೆ ಯಾರೋ ಬರುತ್ತಿರುವ ಸಪ್ಪಳ ಕೇಳುತ್ತಿದೆ. ಆದರೆ ಅದು ಯಾರೆಂದು ತಿಳಿಯಬೇಕಾದರೆ ಬಾಗಿಲು ತೆರೆದು ನೋಡಬೇಕು. ಅಂತೆಯೇ ಪ್ರಕೃತಿಯನ್ನು ನೋಡುವಾಗ ಸೃಷ್ಟಿಕರ್ತ ಇದ್ದಾನೆಂದು ತಿಳಿಯುತ್ತದೆ. ಆದರೆ ಆತನಾರೆಂದು ತಿಳಿಯಲು ನಾವೇನೊ ಮಾಡಬೇಕು. ಏನದು?
ಬೈಬಲ್ ದೇವರ ಕುರಿತಾದ ಜ್ಞಾನಲೋಕಕ್ಕೆ ಒಂದು ಬಾಗಿಲಿನಂತಿದೆ. ಆ ಬಾಗಿಲನ್ನು ತೆರೆದು ಅದರೊಳಗಿರುವ ಭವಿಷ್ಯನುಡಿಗಳನ್ನೂ ಅವುಗಳ ನೆರವೇರಿಕೆಯನ್ನೂ ನೋಡುವಾಗ ದೇವರು ನಿಜವಾಗಿಯೂ ಇದ್ದಾನೆ ಎಂಬ ಪುರಾವೆಯನ್ನು ಕಾಣುವಿರಿ. ಅಷ್ಟೇ ಅಲ್ಲ, ಪ್ರಾರ್ಥನೆಯನ್ನು ಕೇಳುವ ಈ ದೇವರು ಜನರೊಂದಿಗೆ ವ್ಯವಹರಿಸಿದ ರೀತಿಯನ್ನು ಬೈಬಲಿನಲ್ಲಿ ಓದುವಾಗ ಆತನ ಗುಣಗಳ ಬಗ್ಗೆ ಕಲಿಯುವಿರಿ.
ಪ್ರಾರ್ಥನೆಯನ್ನು ಕೇಳುವಾತನ ಪರಿಚಯ
ನಮ್ಮ ಪ್ರಾರ್ಥನೆಯನ್ನು ಕೇಳಿ ಅರ್ಥಮಾಡಿಕೊಳ್ಳಬೇಕಾದರೆ ಒಬ್ಬ ವ್ಯಕ್ತಿಯಿಂದ ಮಾತ್ರ ಸಾಧ್ಯ ಶಕ್ತಿಯಿಂದಲ್ಲ. “ಪ್ರಾರ್ಥನೆಯನ್ನು ಕೇಳುವವನೇ, ನರರೆಲ್ಲರು ನಿನ್ನ ಬಳಿಗೆ ಬರುವರು” ಎನ್ನುತ್ತದೆ ಬೈಬಲ್. (ಕೀರ್ತನೆ 65:2) ಬೈಬಲ್ ಪ್ರಕಾರ ಪ್ರಾರ್ಥನೆಯನ್ನು ಕೇಳುವ ದೇವರು ಒಬ್ಬ ವ್ಯಕ್ತಿ, ಶಕ್ತಿಯಲ್ಲ. ನಾವಾತನ ಬಗ್ಗೆ ತಿಳುಕೊಳ್ಳಬಹುದೆಂದೂ ಅದು ಕಲಿಸುತ್ತದೆ. ನಂಬಿಕೆಯಿಂದ ಪ್ರಾರ್ಥಿಸುವಾಗ ಆತನು ಕೇಳುತ್ತಾನೆ. ಆತನಿಗೆ ಹೆಸರೂ ಇದೆ. ಬೈಬಲ್ ಹೇಳುವುದು: “ಯೆಹೋವನು ದುಷ್ಟರಿಗೆ ದೂರ, ಶಿಷ್ಟರ ಬಿನ್ನಹಕ್ಕೆ ಹತ್ತಿರ.”—ಜ್ಞಾನೋಕ್ತಿ 15:29.
ಯೆಹೋವನಿಗೆ ಭಾವನೆಗಳಿವೆ. ಆತನು ‘ಪ್ರೀತಿಯ ದೇವರು’ ಮತ್ತು ‘ಸಂತೋಷದ ದೇವರು.’ (2 ಕೊರಿಂಥ 13:11; 1 ತಿಮೊಥೆಯ 1:11) ಹಿಂದೊಮ್ಮೆ ಭೂಮಿಯಲ್ಲಿ ಕೆಟ್ಟತನ ರಾರಾಜಿಸುತ್ತಿದ್ದಾಗ ಆತನು “ಹೃದಯದಲ್ಲಿ ನೊಂದುಕೊಂಡನು” ಎನ್ನುತ್ತದೆ ಬೈಬಲ್. (ಆದಿಕಾಂಡ 6:5, 6) ಜನರನ್ನು ಪರೀಕ್ಷಿಸಲಿಕ್ಕಾಗಿ ದೇವರು ಕಷ್ಟಗಳನ್ನು ಕೊಡುತ್ತಾನೆ ಎನ್ನುವುದು ಸುಳ್ಳು. ಬೈಬಲ್ ಅನ್ನುವುದು: “ದೇವರು ಕೆಟ್ಟದ್ದನ್ನು [ಮಾಡುವನೆಂಬ] ಯೋಚನೆ . . . ದೂರವಾಗಿರಲಿ!” (ಯೋಬ 34:10) ಆದರೆ ನೀವು ಕೇಳಬಹುದು, ‘ಸೃಷ್ಟಿಕರ್ತನಿಗೆ ಅಪಾರ ಶಕ್ತಿಯಿದ್ದರೂ ಕಷ್ಟಕಾರ್ಪಣ್ಯ ಮುಂದುವರಿಯುವಂತೆ ಏಕೆ ಬಿಟ್ಟಿದ್ದಾನೆ?’
ಹೇಗೆ ಜೀವಿಸಬೇಕು ಎಂದು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ದೇವರು ಮನುಷ್ಯರಿಗೆ ನೀಡಿದ್ದಾನೆ. ಹೀಗೆ ಅವರನ್ನು ಗೌರವಿಸಿದ್ದಾನೆ. ಈ ಸ್ವಾತಂತ್ರ್ಯ ಎಷ್ಟು ಹಿರಿದಾದದ್ದಲ್ಲವೇ? ದುಃಖದ ಸಂಗತಿಯೇನೆಂದರೆ ಅನೇಕರು ಈ ಸ್ವಾತಂತ್ರ್ಯವನ್ನು ದುರುಪಯೋಗಿಸುತ್ತಾರೆ. ಹೀಗೆ ತಮಗೂ ಇತರರಿಗೂ ಕಷ್ಟವನ್ನು ತಂದೊಡ್ಡುತ್ತಾರೆ. ಈಗ ಪ್ರಶ್ನೆ ಏನೆಂದರೆ, ದೇವರು ಮಾನವನ ಈ ಸ್ವಾತಂತ್ರ್ಯವನ್ನು ಕಸಿದುಕೊಳ್ಳದೇ ಕಷ್ಟಕಾರ್ಪಣ್ಯವನ್ನು ಹೇಗೆ ತೆಗೆದುಹಾಕುವನು? ಉತ್ತರ ಮುಂದಿನ ಲೇಖನದಲ್ಲಿ ನೋಡೋಣ. (w12-E 07/01)
[ಪುಟ 5ರಲ್ಲಿರುವ ಚಿತ್ರ]
ನಿಮ್ಮ ಸಂಶಯಕ್ಕೆ ಧರ್ಮ ಕಾರಣವೇ?
ಪ್ರಾರ್ಥನೆಯನ್ನು ಕೇಳುವ ದೇವರು ಇದ್ದಾನಾ ಎಂಬ ಸಂಶಯ ಅನೇಕರಲ್ಲಿ ಮೂಡಲು ಧರ್ಮವೇ ಕಾರಣ ಎಂಬುದು ವಿಷಾದನೀಯ. ಯುದ್ಧ, ಭಯೋತ್ಪಾದನೆಯಲ್ಲಿ ಧರ್ಮಗಳು ಒಳಗೂಡಿವೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವವರ ವಿರುದ್ಧ ಚಕಾರವೆತ್ತದೆ ಸುಮ್ಮನಿದ್ದುಬಿಡುತ್ತವೆ. ಇದರಿಂದಾಗಿ ಧಾರ್ಮಿಕ ಜನರು ಸಹ ತಮಗೆ ದೇವರಲ್ಲಿ ನಂಬಿಕೆ ಇಲ್ಲ ಎಂದು ಹೇಳುವಂತಾಗಿದೆ.
ಹೆಚ್ಚಿನ ಕೆಟ್ಟದ್ದಕ್ಕೆ ಧರ್ಮವೇ ಕಾರಣವಾಗಿರುವುದೇಕೆ? ಕಾರಣವಿಷ್ಟೇ: ಧರ್ಮದ ಹೆಸರಿನಲ್ಲಿ ಕೆಟ್ಟ ಜನರು ಕುಕೃತ್ಯಗಳನ್ನು ನಡೆಸುತ್ತಾರೆ. ದೇವರಿಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡಲು ಕ್ರೈಸ್ತ ಧರ್ಮದ ದುರ್ಬಳಕೆಯಾಗುವ ಸಮಯ ಬರಲಿದೆ ಎಂದು ಬೈಬಲ್ ಮುಂತಿಳಿಸಿತ್ತು. “ನಿಮ್ಮೊಳಗಿಂದಲೇ ಕೆಲವರು ಎದ್ದು ವಕ್ರವಾದ ವಿಷಯಗಳನ್ನು ಮಾತಾಡಿ ಶಿಷ್ಯರನ್ನು ತಮ್ಮ ಹಿಂದೆ ಎಳೆದುಕೊಳ್ಳುವರು” ಎಂದು ಯೇಸುವಿನ ಶಿಷ್ಯ ಪೌಲ ಕ್ರೈಸ್ತ ಮೇಲ್ವಿಚಾರಕರಿಗೆ ಹೇಳಿದನು.—ಅಪೊಸ್ತಲರ ಕಾರ್ಯಗಳು 20:29, 30.
ಸುಳ್ಳು ಧರ್ಮವನ್ನು ದೇವರು ಹೇಸುತ್ತಾನೆ. ‘ಭೂಮಿಯ ಮೇಲೆ ವಧಿಸಲ್ಪಟ್ಟವರೆಲ್ಲರ ರಕ್ತಕ್ಕೆ’ ಸುಳ್ಳು ಧರ್ಮ ಹೊಣೆ ಎಂದು ದೇವರ ವಾಕ್ಯವಾದ ಬೈಬಲ್ ತಿಳಿಸುತ್ತದೆ. (ಪ್ರಕಟನೆ 18:24) ಏಕೆಂದರೆ ಜನರು ಪ್ರೀತಿರಹಿತವಾದ ಕೆಟ್ಟ ಕೆಲಸಗಳನ್ನು ಮಾಡಲು ಸುಳ್ಳು ಧರ್ಮವೇ ಕಾರಣ. ಅದು ಜನರಿಗೆ ಪ್ರೀತಿಯ ಸಾಕಾರಮೂರ್ತಿಯಾಗಿರುವ ಸತ್ಯ ದೇವರ ಬಗ್ಗೆ ಕಲಿಸಿಲ್ಲ. ಹಾಗಾಗಿ ದೇವರ ದೃಷ್ಟಿಯಲ್ಲಿ ಸುಳ್ಳು ಧರ್ಮ ರಕ್ತಾಪರಾಧಿ ಆಗಿದೆ.—1 ಯೋಹಾನ 4:8.
ಧರ್ಮದಿಂದ ದಬ್ಬಾಳಿಕೆಗೊಳಗಾದ ಜನರನ್ನು ನೋಡಿ ದೇವರ ಮನಮರುಗುತ್ತದೆ. ಮಾನವಕುಲದ ಕಡೆಗಿರುವ ಪ್ರೀತಿಯ ಕಾರಣ ದೇವರು ಬೇಗನೆ ಯೇಸುವಿನ ಮೂಲಕ ಎಲ್ಲ ಧಾರ್ಮಿಕ ಕಪಟಿಗಳಿಗೆ ನ್ಯಾಯ ತೀರಿಸುವನು. ಯೇಸು ಅಂದದ್ದು: “ಆ ದಿನದಲ್ಲಿ ಅನೇಕರು ನನಗೆ, ‘ಕರ್ತನೇ, ಕರ್ತನೇ, ನಾವು ನಿನ್ನ ಹೆಸರಿನಲ್ಲಿ ಪ್ರವಾದಿಸಲಿಲ್ಲವೇ?’ . . . ಎಂದು ಹೇಳುವರು. ಆದರೂ ಆಗ ನಾನು ಅವರಿಗೆ, ನನಗೆ ನಿಮ್ಮ ಪರಿಚಯವೇ ಇಲ್ಲ! ಅನ್ಯಾಯದ ಕೆಲಸಗಾರರೇ, ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು.”—ಮತ್ತಾಯ 7:22, 23.