ವಾಚಕರಿಂದ ಪ್ರಶ್ನೆಗಳು
ಇಸ್ರಾಯೇಲ್ಯರು ತಪ್ಪಿತಸ್ಥರನ್ನು ಕಂಬದ ಮೇಲೆ ತೂಗುಹಾಕಿ ಕೊಲ್ಲುತ್ತಿದ್ದರಾ?
ರೋಮನ್ನರು ತಪ್ಪಿತಸ್ಥನನ್ನು ಮರಕ್ಕೆ ಬಿಗಿದು ಕಟ್ಟುತ್ತಿದ್ದರು ಅಥವಾ ಮೊಳೆಗಳಿಂದ ಜಡಿಯುತ್ತಿದ್ದರು. ಹೀಗೆ ಅವನು ಕೆಲವು ದಿನಗಳ ವರೆಗೆ ಹಸಿವು-ಬಾಯಾರಿಕೆಯಿಂದ, ನೋವಿನಿಂದ, ವಿಪರೀತ ಬಿಸಿಲು ಅಥವಾ ಚಳಿಯಿಂದ ಬಳಲಿ ಸತ್ತುಹೋಗುತ್ತಿದ್ದನು. ಇಂಥ ಮರಣವನ್ನು ರೋಮನ್ನರು ತುಂಬ ಕೀಳಾಗಿ ನೋಡುತ್ತಿದ್ದರು.
ಇಸ್ರಾಯೇಲ್ಯರ ಬಗ್ಗೆ ಏನು? ಅವರೂ ತಪ್ಪಿತಸ್ಥರನ್ನು ಮರಕ್ಕೆ ಜಡಿದು ಸಾಯಿಸುತ್ತಿದ್ದರಾ? ಮೋಶೆಯ ಧರ್ಮಶಾಸ್ತ್ರದಲ್ಲಿ ಈ ಆಜ್ಞೆಯಿತ್ತು: “ಅಪರಾಧಮಾಡಿದವನು ಮರಣಶಿಕ್ಷೆಯನ್ನು ಹೊಂದಿದ ಮೇಲೆ ನೀವು ಅವನ ಶವವನ್ನು ಮರಕ್ಕೆ ತೂಗಹಾಕಿದರೆ ಅದು ರಾತ್ರಿಯಲ್ಲಿಯೂ ಮರದ ಮೇಲೆ ಇರಬಾರದು; ಅದೇ ದಿನದಲ್ಲಿ ಅದನ್ನು ನೆಲದಲ್ಲಿ ಹೂಣಬೇಕು.” (ಧರ್ಮೋ. 21:22, 23) ಹಾಗಾದರೆ ಪ್ರಾಚೀನ ಇಸ್ರಾಯೇಲ್ಯರ ಕಾಲದಲ್ಲಿ, ಮರಣದಂಡನೆ ಪಡೆದ ವ್ಯಕ್ತಿಯನ್ನು ಮೊದಲು ಸಾಯಿಸಿ ನಂತರ ಮರದ ದಿಮ್ಮಿಗೆ ಅಥವಾ ಕಂಬಕ್ಕೆ ಜಡಿಯುತ್ತಿದ್ದರು.
ಇದರ ಸಂಬಂಧವಾಗಿ ಯಾಜಕಕಾಂಡ 20:2 ಹೇಳುವುದು: “ಇಸ್ರಾಯೇಲ್ಯರಲ್ಲಾಗಲಿ ಅವರ ನಡುವೆ ಇಳುಕೊಂಡಿರುವ ಪರದೇಶದವರಲ್ಲಾಗಲಿ ಯಾವನಾದರೂ ತನ್ನ ಮಕ್ಕಳಲ್ಲಿ ಯಾರನ್ನಾದರೂ ಮೋಲೆಕನಿಗೆ ಕೊಟ್ಟರೆ ಅವನಿಗೆ ಮರಣಶಿಕ್ಷೆಯಾಗಬೇಕು; ದೇಶದ ಜನರು ಅವನನ್ನು ಕಲ್ಲೆಸೆದು ಕೊಲ್ಲಬೇಕು.” ಅಷ್ಟೆ ಅಲ್ಲದೆ ಯಾರು “ಸತ್ತವರಲ್ಲಿ ವಿಚಾರಿಸುವವರೂ ಬೇತಾಳಿಕರೂ” ಆಗಿರುತ್ತಾರೋ ಅವರಿಗೆ ಸಹ ಶಿಕ್ಷೆ ವಿಧಿಸಲಾಗುತ್ತಿತ್ತು. ಹೇಗೆ? ‘ಅವರನ್ನು ಕಲ್ಲೆಸೆದು ಕೊಲ್ಲಲಾಗುತಿತ್ತು.’—ಯಾಜ. 20:27.
ಧರ್ಮೋಪದೇಶಕಾಂಡ 22:23, 24 ಹೀಗೆ ಹೇಳುತ್ತದೆ: “ಒಬ್ಬನಿಗೆ ನಿಶ್ಚಿತಳಾದ ಹೆಣ್ಣನ್ನು ಯಾವನಾದರೂ ಊರೊಳಗೆ ಮರುಳುಗೊಳಿಸಿ ಸಂಗಮಿಸಿದರೆ ನೀವು ಅವರಿಬ್ಬರನ್ನೂ ಊರುಬಾಗಲಿನ ಹೊರಕ್ಕೆ ತರಿಸಿ ಕಲ್ಲೆಸೆದು ಕೊಲ್ಲಬೇಕು. ಒಬ್ಬನಿಗೆ ನಿಶ್ಚಿತಳಾದ ಸ್ತ್ರೀಯನ್ನು ಕೆಡಿಸಿದ್ದರಿಂದ ಆ ಪುರುಷನಿಗೂ ಊರಲ್ಲಿದ್ದು ಕೂಗಿಕೊಳ್ಳದೆಹೋದದರಿಂದ ಆ ಸ್ತ್ರೀಗೂ ಮರಣಶಿಕ್ಷೆಯಾಗಬೇಕು. ಹೀಗೆ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.” ಇದರಿಂದ ನಮಗೇನು ಗೊತ್ತಾಗುತ್ತದೆಂದರೆ ಆರಂಭದ ಇಸ್ರಾಯೇಲ್ಯರಲ್ಲಿ ಯಾರಾದರೂ ಘೋರ ತಪ್ಪನ್ನು ಮಾಡಿದರೆ ಅವರನ್ನು ಶಿಕ್ಷಿಸುವ ಮುಖ್ಯ ವಿಧ ಕಲ್ಲೆಸೆದು ಕೊಲ್ಲುವುದಾಗಿತ್ತು.a
ಪ್ರಾಚೀನ ಇಸ್ರಾಯೇಲ್ಯರ ಕಾಲದಲ್ಲಿ, ಮರಣದಂಡನೆ ಪಡೆದ ವ್ಯಕ್ತಿಯನ್ನು ಮೊದಲು ಸಾಯಿಸಿ ನಂತರ ಮರದ ದಿಮ್ಮಿಗೆ ಅಥವಾ ಕಂಬಕ್ಕೆ ಜಡಿಯುತ್ತಿದ್ದರು
“ಮರಕ್ಕೆ ತೂಗಹಾಕಲ್ಪಟ್ಟವನು ದೇವರ ಶಾಪವನ್ನು ಹೊಂದಿದವ”ನೆಂದು ಧರ್ಮೋಪದೇಶಕಾಂಡ 21:23 ಹೇಳುತ್ತೆ. ಹಾಗಾದರೆ “ದೇವರ ಶಾಪ”ಕ್ಕೆ ಗುರಿಯಾದ ಒಬ್ಬ ದುಷ್ಕರ್ಮಿಯ ಹೆಣವನ್ನು ಎಲ್ಲರೂ ನೋಡುವಂತೆ ಮರಕ್ಕೆ ಅಥವಾ ಕಂಬಕ್ಕೆ ತೂಗುಹಾಕುವುದು ಇಸ್ರಾಯೇಲ್ಯರ ಮೇಲೆ ಪ್ರಭಾವ ಬೀರಿರಬೇಕು. ಹೀಗೆ, ತಪ್ಪು ಮಾಡಿದವನನ್ನು ಮರಕ್ಕೆ ನೇತಾಡಿಸುವುದು ಇತರರಿಗೆ ಒಂದು ಎಚ್ಚರಿಕೆಯಾಗಿ ಇರುತ್ತಿತ್ತು.
a ಧರ್ಮಶಾಸ್ತ್ರಕ್ಕನುಸಾರ ದುಷ್ಕರ್ಮಿಗಳನ್ನು ಮೊದಲು ಸಾಯಿಸಿ ನಂತರ ಕಂಬದ ಮೇಲೆ ತೂಗುಹಾಕುತ್ತಿದ್ದರು ಎನ್ನುವದನ್ನು ಅನೇಕ ವಿದ್ವಾಂಸರು ಒಪ್ಪುತ್ತಾರೆ. ಆದರೆ ಒಂದನೇ ಶತಮಾನದಷ್ಟಕ್ಕೆ ಕೆಲವು ದುಷ್ಕರ್ಮಿಗಳನ್ನು ಯೆಹೂದಿಗಳು ಕಂಬದ ಮೇಲೆ ಜೀವಂತವಾಗಿ ತೂಗುಹಾಕಿ ಸಾಯಲು ಬಿಡುತ್ತಿದ್ದರು ಎನ್ನುವುದಕ್ಕೆ ಪುರಾವೆ ಇದೆ.