ಯೆಹೋವ ದೇವರ ನಿಷ್ಠೆ ಹಾಗೂ ಕ್ಷಮಾಗುಣ
‘ಯೆಹೋವನೇ, ನೀನು ಒಳ್ಳೆಯವನೂ ಕ್ಷಮಿಸುವವನೂ ನಿನಗೆ ಮೊರೆಯಿಡುವವರೆಲ್ಲರಲ್ಲಿ ಕೃಪಾಪೂರ್ಣನೂ ಆಗಿದ್ದೀ.’ —ಕೀರ್ತ. 86:5.
1, 2. (1) ನಿಷ್ಠೆ ಮತ್ತು ಕ್ಷಮಿಸುವ ಗುಣವಿರುವ ಸ್ನೇಹಿತರನ್ನು ನಾವು ಏಕೆ ಗಣ್ಯಮಾಡುತ್ತೇವೆ? (2) ಯಾವ ಪ್ರಶ್ನೆಗಳಿಗೆ ನಾವು ಉತ್ತರ ಹುಡುಕಲಿದ್ದೇವೆ?
ನಿಜ ಸ್ನೇಹಿತ ಅಂದರೆ ಯಾರು? “ನನ್ನ ಪ್ರಕಾರ, ನಿಜ ಸ್ನೇಹಿತರು ಅಂದರೆ ಯಾವಾಗಲೂ ಸಹಾಯಮಾಡಲು ತಯಾರಿರುವವರು, ನನ್ನಿಂದ ತಪ್ಪಾದಾಗ ಕ್ಷಮಿಸುವವರು” ಎನ್ನುತ್ತಾರೆ ನಮ್ಮ ಸಹೋದರಿ ಆ್ಯಶ್ಲೀ. ನಿಷ್ಠಾವಂತ ಹಾಗೂ ಕ್ಷಮಿಸುವ ಮಿತ್ರರನ್ನು ನಾವೆಲ್ಲರೂ ಗಣ್ಯಮಾಡುತ್ತೇವೆ. ಇಂಥವರೊಂದಿಗೆ ಇರುವಾಗ ನಮಗೆ ನಿಜ ಪ್ರೀತಿ ಸಿಗುತ್ತೆ. ಸುರಕ್ಷಿತರು ಅನಿಸುತ್ತೆ.—ಜ್ಞಾನೋ. 17:17.
2 ಯೆಹೋವನು ನಮಗೆ ಅತ್ಯುತ್ತಮ ಸ್ನೇಹಿತ. ಏಕೆಂದರೆ ನಿಷ್ಠೆ ತೋರಿಸುವುದರಲ್ಲಿ ಕ್ಷಮಿಸುವುದರಲ್ಲಿ ಆತನಿಗೆ ಯಾರೂ ಸರಿಸಾಟಿಯಿಲ್ಲ. ಅದಕ್ಕೇ ಕೀರ್ತನೆಗಾರನು ಹೀಗೆ ಬರೆದಿದ್ದಾನೆ: “[ಯೆಹೋವನೇ,] ನೀನು ಒಳ್ಳೆಯವನೂ ಕ್ಷಮಿಸುವವನೂ ನಿನಗೆ ಮೊರೆಯಿಡುವವರೆಲ್ಲರಲ್ಲಿ ಕೃಪಾಪೂರ್ಣನೂ [ಅಥವಾ, ನಿಷ್ಠಾವಂತ ಪ್ರೀತಿಯುಳ್ಳವನೂ] ಆಗಿದ್ದೀ.” (ಕೀರ್ತ. 86:5) ನಿಷ್ಠಾವಂತರಾಗಿರಬೇಕು, ಕ್ಷಮಿಸುವವರಾಗಿರಬೇಕು ಅಂದರೇನು? ಈ ಮನಸ್ಪರ್ಶಿ ಗುಣಗಳನ್ನು ಯೆಹೋವನು ಹೇಗೆ ತೋರಿಸುತ್ತಾನೆ? ಆತನ ಮಾದರಿಯನ್ನು ನಾವು ಹೇಗೆ ಅನುಕರಿಸಬಹುದು? ಈ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವುದು ನಮ್ಮ ಅತ್ಯುತ್ತಮ ಸ್ನೇಹಿತನಾದ ಯೆಹೋವನ ಕಡೆಗೆ ಪ್ರೀತಿಯನ್ನು ಗಾಢಗೊಳಿಸಲು ನೆರವಾಗುತ್ತೆ. ಇತರರೊಟ್ಟಿಗಿನ ನಮ್ಮ ಸ್ನೇಹ ಸಂಬಂಧವನ್ನು ಬಲಪಡಿಸುತ್ತೆ.—1 ಯೋಹಾ. 4:7, 8.
ಯೆಹೋವನು ನಿಷ್ಠಾವಂತನು
3. ನಿಷ್ಠೆಯಿಂದಿರುವುದು ಎಂದರೇನು?
3 ನಿಷ್ಠೆ ಎಂಬ ಅದ್ಭುತ ಗುಣದಲ್ಲಿ ಭಕ್ತಿ, ನಂಬಿಗಸ್ತಿಕೆ ಮತ್ತು ಸಂಪೂರ್ಣ ಬೆಂಬಲ ಸೇರಿದೆ. ನಿಷ್ಠೆಯಿರುವ ವ್ಯಕ್ತಿ ಊಸರವಳ್ಳಿಯಂತೆ ಬಣ್ಣ ಬದಲಾಯಿಸಲ್ಲ. ಬದಲಿಗೆ ಒಬ್ಬ ವ್ಯಕ್ತಿಗೆ ಅಥವಾ ಒಂದು ವಿಷಯಕ್ಕೆ ಕಷ್ಟಕರ ಸನ್ನಿವೇಶದಲ್ಲೂ ಪ್ರೀತಿಯಿಂದ ಅಂಟಿಕೊಂಡಿರುತ್ತಾನೆ. ಹೌದು ‘ನಿಷ್ಠೆ’ ತೋರಿಸುವುದರಲ್ಲೇ ಮಹೋನ್ನತನಾಗಿರುವ ಯೆಹೋವನ ವಿಷಯದಲ್ಲಿ ಇದು ಸತ್ಯ.—ಪ್ರಕ. 16:5.
4, 5. (1) ಯೆಹೋವನು ನಿಷ್ಠೆಯನ್ನು ಹೇಗೆ ತೋರಿಸುತ್ತಾನೆ? (2) ಯೆಹೋವನು ನಿಷ್ಠೆಯಿಂದ ವ್ಯವಹರಿಸಿದ ಸನ್ನಿವೇಶಗಳನ್ನು ನೆನಪಿಸಿಕೊಳ್ಳುವುದರಿಂದ ನಮಗೆ ಬಲ ಹೇಗೆ ಸಿಗುತ್ತೆ?
4 ಯೆಹೋವನು ನಿಷ್ಠೆಯನ್ನು ಹೇಗೆ ತೋರಿಸುತ್ತಾನೆ? ಆತನು ತನ್ನ ಭಕ್ತರ ಕೈಯನ್ನು ಯಾವತ್ತೂ ಬಿಡಲ್ಲ. ಹಾಗಾಗಿಯೇ ದೇವಭಕ್ತನಾದ ರಾಜ ದಾವೀದ ಯೆಹೋವನಿಗೆ, “ನೀನು ನಿಷ್ಠೆಯುಳ್ಳವನಿಗೆ ನಿಷ್ಠಾವಂತನು” ಎಂದು ಹಾಡಿದನು. (2 ಸಮು. 22:26, 27, NW) ದಾವೀದನು ತೊಂದರೆಯಲ್ಲಿದ್ದಾಗ ಯೆಹೋವನು ನಿಷ್ಠೆಯಿಂದ ಅವನ ಪಕ್ಕದಲ್ಲೇ ಇದ್ದು ಮಾರ್ಗದರ್ಶಿಸಿ ಕಾಪಾಡಿದನು ಮತ್ತು ಬಿಡಿಸಿದನು. (2 ಸಮು. 22:1) ಯೆಹೋವನ ನಿಷ್ಠೆ ಕೇವಲ ಮಾತುಗಳದ್ದಾಗಿರಲಿಲ್ಲ ಎಂದು ದಾವೀದನಿಗೆ ಚೆನ್ನಾಗಿ ಗೊತ್ತಿತ್ತು. ಯೆಹೋವನು ಅವನಿಗೆ ಏಕೆ ನಿಷ್ಠೆ ತೋರಿಸಿದನು? ಏಕೆಂದರೆ ಸ್ವತಃ ದಾವೀದನೇ ‘ನಿಷ್ಠೆಯುಳ್ಳವನಾಗಿದ್ದನು.’ ಯೆಹೋವನು ತನ್ನ ಭಕ್ತರ ನಿಷ್ಠೆಯನ್ನು ಮೆಚ್ಚುತ್ತಾನೆ ಮತ್ತು ಅದಕ್ಕೆ ಪ್ರತಿಯಾಗಿ ಆತನೂ ನಿಷ್ಠೆ ತೋರಿಸುತ್ತಾನೆ.—ಜ್ಞಾನೋ. 2:6-8.
5 ಯೆಹೋವನು ನಿಷ್ಠೆ ತೋರಿಸಿದ್ದನ್ನು ನೆನಪಿಸಿಕೊಳ್ಳುವಾಗೆಲ್ಲ ನಮಗೆ ಬಲ ಸಿಗುತ್ತೆ. ನಂಬಿಗಸ್ತ ಸಹೋದರ ರೀಡ್ ಅನ್ನುವವರು ಹೇಳ್ತಾರೆ: “ದಾವೀದನು ಕಷ್ಟದಲ್ಲಿರುವಾಗ ಯೆಹೋವ ದೇವರು ಸಹಾಯಮಾಡಿದ ಕುರಿತು ಓದುವುದು ನನಗೆ ತುಂಬ ನೆರವಾಗುತ್ತೆ. ದಾವೀದನು ಬೇರೆ ಊರುಗಳಿಗೆ ಓಡಿ ಹೋಗುವಾಗ, ಗುಹೆಗಳಲ್ಲಿ ವಾಸಿಸುವಾಗ ಯೆಹೋವನು ಅವನನ್ನು ಕಾಪಾಡಿದನು. ಎಷ್ಟೇ ಕಠಿಣ ಪರಿಸ್ಥಿತಿಯಲ್ಲಿ ನಾನಿದ್ದರೂ ಯೆಹೋವನಿಗೆ ನಿಷ್ಠನಾಗಿದ್ದರೆ, ಆತನು ನನ್ನೊಟ್ಟಿಗೆ ಇದ್ದೇ ಇರುತ್ತಾನೆ ಅನ್ನೋ ಭರವಸೆಯನ್ನು ಇದು ನನ್ನಲ್ಲಿ ತುಂಬಿದೆ.” ನಮ್ಮ ಅನಿಸಿಕೆನೂ ಇದೇ ಅಲ್ವ!—ರೋಮ. 8:38, 39.
6. (1) ಯೆಹೋವನು ಇನ್ಯಾವ ವಿಧಗಳಲ್ಲಿ ನಿಷ್ಠೆ ತೋರಿಸುತ್ತಾನೆ? (2) ಅದರಿಂದ ಆತನ ಆರಾಧಕರಿಗೆ ಹೇಗೆ ಪ್ರಯೋಜನ ಸಿಗುತ್ತೆ?
6 ಯೆಹೋವನು ಇನ್ಯಾವ ವಿಧಗಳಲ್ಲಿ ನಿಷ್ಠೆ ತೋರಿಸುತ್ತಾನೆ? ಆತನು ತನ್ನ ಮಟ್ಟಗಳನ್ನು ಯಾವತ್ತೂ ತಪ್ಪಲ್ಲ. “ಯೆಹೋವನಾದ ನಾನು ಮಾರ್ಪಟ್ಟಿಲ್ಲ” ಎಂಬ ಆಶ್ವಾಸನೆ ಆತನು ಕೊಟ್ಟಿದ್ದಾನೆ. (ಮಲಾ. 3:6) ಆತನು ಸರಿ ಯಾವುದು ತಪ್ಪು ಯಾವುದು ಎಂದು ನಿರ್ಣಯಿಸಲು ಎಂದಿಗೂ ಬದಲಾಗದ ತನ್ನ ಪರಿಪೂರ್ಣ ಮಟ್ಟವನ್ನು ಅನುಸರಿಸುತ್ತಾನೆ. ಅಷ್ಟೇ ಅಲ್ಲ, ಆತನು ಮಾಡಿದ ವಾಗ್ದಾನಗಳನ್ನು ಎಂದಿಗೂ ಮರೆಯದಿರುವ ಮೂಲಕ ನಿಷ್ಠೆ ತೋರುತ್ತಾನೆ. ನಂಬಿಗಸ್ತನಾಗಿ ಅವುಗಳಿಗೆ ಅಂಟಿಕೊಂಡೇ ಇರುತ್ತಾನೆ. (ಯೆಶಾ. 55:11) ಆದ್ದರಿಂದಲೇ ಯೆಹೋವನ ನಿಷ್ಠೆ, ನಂಬಿಗಸ್ತ ಆರಾಧಕರೆಲ್ಲರಿಗೆ ಪ್ರಯೋಜನ ತರುತ್ತೆ. ಹೇಗೆ ಅಂತೀರಾ? ಯೆಹೋವನ ಮಟ್ಟಗಳಿಗೆ ಅಂಟಿಕೊಂಡಿರಲು ನಮ್ಮಿಂದ ಆಗುವುದೆಲ್ಲವನ್ನು ಮಾಡಿದರೆ ಆತನು ತಾನು ಮಾಡಿದ ವಾಗ್ದಾನಗಳನ್ನು ಪೂರೈಸುತ್ತಾನೆ ಅನ್ನೋ ಭರವಸೆ ನಮಗಿರುತ್ತೆ.—ಯೆಶಾ. 48:17, 18.
ಯೆಹೋವನ ನಿಷ್ಠೆಯನ್ನು ಅನುಕರಿಸಿ
7. ದೇವರಲ್ಲಿರುವ ನಿಷ್ಠೆಯನ್ನು ನಾವು ಅನುಕರಿಸಬಹುದಾದ ಒಂದು ವಿಧ ಯಾವುದು?
7 ಯೆಹೋವ ದೇವರ ನಿಷ್ಠೆಯನ್ನು ನಾವು ಹೇಗೆ ಅನುಕರಿಸೋದು? ಒಂದು ವಿಧ, ಕಷ್ಟಕರ ಸನ್ನಿವೇಶಗಳಲ್ಲಿ ಇರುವವರಿಗೆ ಸಹಾಯಮಾಡುವ ಮೂಲಕ. (ಜ್ಞಾನೋ. 3:27) ಉದಾಹರಣೆಗೆ, ಆರೋಗ್ಯ ಸರಿಯಿಲ್ಲದ ಕಾರಣವೋ ಕುಟುಂಬದಿಂದ ವಿರೋಧ ಅನುಭವಿಸುತ್ತಿರುವುದರಿಂದಲೋ ಅಥವಾ ವೈಯಕ್ತಿಕವಾಗಿ ಯಾವುದಾದರೂ ವೈಫಲ್ಯ ಅನುಭವಿಸಿಯೋ ನಿರುತ್ತೇಜನಗೊಂಡಿರುವ ಯಾರಾದರೂ ನಿಮಗೆ ಗೊತ್ತಾ? ಅಂಥವರನ್ನು ನೀವೇ ಮೊದಲ ಹೆಜ್ಜೆ ತಕ್ಕೊಂಡು ‘ಕರುಣೆಯ ಒಳ್ಳೆಯ ಮಾತುಗಳಿಂದ’ ಸಂತೈಸಬಾರದೇ? (ಜೆಕ. 1:13)a ಹೀಗೆ ಮಾಡುವ ಮೂಲಕ ನೀವು “ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ” ನಿಷ್ಠಾವಂತ ಸ್ನೇಹಿತ/ತೆ ಎಂದು ರುಜುಪಡಿಸುವಿರಿ.—ಜ್ಞಾನೋ. 18:24.
8. ಯೆಹೋವನ ನಿಷ್ಠೆಯನ್ನು ಅನುಕರಿಸುವುದು ಹೇಗೆ? ಉದಾಹರಣೆಗೆ, ವಿವಾಹ ಬಂಧದಲ್ಲಿ.
8 ನಮ್ಮ ಪ್ರೀತಿಪಾತ್ರರೊಂದಿಗೆ ನಿಷ್ಠೆಯಿಂದ ನಡೆದುಕೊಳ್ಳುವ ಮೂಲಕ ಯೆಹೋವನ ನಿಷ್ಠೆಯನ್ನು ಅನುಕರಿಸಬಹುದು. ಉದಾಹರಣೆಗೆ, ನೀವು ವಿವಾಹಿತರಾಗಿರುವಲ್ಲಿ ನಿಮ್ಮ ಬಾಳಸಂಗಾತಿಗೆ ಕೊನೆಯವರೆಗೂ ನಂಬಿಗಸ್ತರಾಗಿ ಉಳಿಯಬೇಕು. (ಜ್ಞಾನೋ. 5:15-18) ಹಾಗಾಗಿ ಅವರಿಂದ ನಿಮ್ಮನ್ನು ದೂರಮಾಡಬಲ್ಲ ಅಂದರೆ ಜಾರತ್ವಕ್ಕೆ ಎಡೆಮಾಡಿಕೊಡುವ ಯಾವುದೇ ಕ್ರಿಯೆಗಳಲ್ಲಿ ತೊಡಗಬಾರದು. (ಮತ್ತಾ. 5:28) ಹಾಗೆಯೇ ನಮ್ಮ ಜೊತೆವಿಶ್ವಾಸಿಗಳಿಗೆ ನಿಷ್ಠರಾಗಿರಬೇಕು. ಅಂದರೆ ಅವರ ಬಗ್ಗೆ ಕೆಟ್ಟದ್ದಾಗಿ ಮಾತಾಡುವುದಾಗಲಿ, ಗಾಳಿಸುದ್ದಿ ಹಬ್ಬಿಸುವುದಾಗಲಿ ಮಾಡಬಾರದು. ಅಂತಹ ಹಾನಿಕರ ಮಾತುಗಳಿಗೆ ಕಿವಿಗೊಡಲೂ ಬಾರದು.—ಜ್ಞಾನೋ. 12:18.
9, 10. (1) ಎಲ್ಲರಿಗಿಂತ ಮುಖ್ಯವಾಗಿ ಯಾರಿಗೆ ನಾವು ನಿಷ್ಠರಾಗಿ ಉಳಿಯಬೇಕು? (2) ಯೆಹೋವನ ಆಜ್ಞೆಗಳನ್ನು ಪಾಲಿಸುವುದು ಯಾವಾಗಲೂ ಸುಲಭವಾಗಿರಲ್ಲ ಏಕೆ?
9 ಎಲ್ಲಕ್ಕಿಂತ ಮಿಗಿಲಾಗಿ ಯೆಹೋವ ದೇವರಿಗೆ ನಾವು ನಿಷ್ಠೆ ತೋರಿಸಬೇಕು. ಅದು ಹೇಗೆ? ವಿಷಯಗಳನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೋ ಹಾಗೇ ವೀಕ್ಷಿಸುವ ಮೂಲಕ. ಆತನು ಪ್ರೀತಿಸುವುದನ್ನು ಪ್ರೀತಿಸಿ, ದ್ವೇಷಿಸುವುದನ್ನು ದ್ವೇಷಿಸುವ ಮೂಲಕ. ನಮ್ಮ ಕ್ರಿಯೆಗಳಲ್ಲಿ ಅದನ್ನು ತೋರಿಸುವ ಮೂಲಕ. (ಕೀರ್ತನೆ 97:10 ಓದಿ.) ಹೀಗೆ ನಮ್ಮ ಭಾವನೆ-ಆಲೋಚನೆಗಳನ್ನು ಯೆಹೋವನ ಭಾವನೆ-ಆಲೋಚನೆಗಳಿಗೆ ಹೊಂದಿಸುವುದಾದರೆ ಆತನ ಆಜ್ಞೆಗಳನ್ನು ಪಾಲಿಸಲು ಸುಲಭವಾಗುತ್ತೆ.—ಕೀರ್ತ. 119:104.
10 ಆದರೂ ಯೆಹೋವನ ಆಜ್ಞೆಯನ್ನು ಪಾಲಿಸುವುದು ಯಾವಾಗಲೂ ಸುಲಭವಾಗಿರಲ್ಲ. ನಿಷ್ಠರಾಗಿ ಉಳಿಯಲು ಪ್ರಯಾಸಪಡಬೇಕು. ಉದಾಹರಣೆಗೆ, ಕೆಲವು ಕ್ರೈಸ್ತರು ಮದುವೆಯಾಗಲು ಬಯಸುತ್ತಾರೆ. ಆದರೆ ಸಂಘಟನೆಯಲ್ಲಿ ಅವರಿಗೆ ಸರಿಹೊಂದುವ ಸಂಗಾತಿ ಇಲ್ಲಿವರೆಗೆ ಸಿಕ್ಕಿರಲಿಕ್ಕಿಲ್ಲ. (1 ಕೊರಿಂ. 7:39) ಒಬ್ಬ ಅವಿವಾಹಿತ ಸಹೋದರಿ ಕೆಲಸ ಮಾಡುವ ಸ್ಥಳದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬಹುದು. ಕೆಲವರು ಯಾವಾಗಲೂ, ತಮಗೆ ಒಳ್ಳೆಯವರೆಂದು ಅನಿಸಿದ ಹುಡುಗರ ಪರಿಚಯ ಮಾಡಿಸಬಹುದು. ಸಹೋದರಿಗೂ ಒಂಟಿಭಾವನೆ ಕಾಡುತ್ತಿರಬಹುದು. ಹಾಗಿದ್ದರೂ ಯೆಹೋವನಿಗೆ ಸಮಗ್ರತೆ ಕಾಪಾಡಿಕೊಳ್ಳಲು ಆಕೆ ದೃಢನಿರ್ಧಾರ ಮಾಡಿದ್ದಾರೆ. ನಿಷ್ಠೆಯ ಕುರಿತ ಇಂಥ ಅತ್ಯುತ್ತಮ ಉದಾಹರಣೆಗಳು ನಮ್ಮನ್ನು ಸಹ ನಿಷ್ಠೆಯಿಂದಿರುವಂತೆ ಹುರಿದುಂಬಿಸುತ್ತವಲ್ಲವೇ! ಎಷ್ಟೇ ಕಷ್ಟಗಳು ಬಂದರೂ ನಂಬಿಗಸ್ತರಾಗಿ ಉಳಿಯುವವರನ್ನು ಯೆಹೋವನು ಖಂಡಿತ ಆಶೀರ್ವದಿಸಿ ಪ್ರತಿಫಲ ಕೊಡುತ್ತಾನೆ.—ಇಬ್ರಿ. 11:6.
ಯೆಹೋವನು ಕ್ಷಮಿಸುವಾತ
11. ಕ್ಷಮಿಸುವುದರ ಅರ್ಥವೇನು?
11 ಯೆಹೋವನಿಗಿರುವ ಮನಮುಟ್ಟುವ ಅನೇಕ ಗುಣಗಳಲ್ಲಿ ಆತನ ಕ್ಷಮಾಗುಣವೂ ಒಂದು. ಕ್ಷಮಿಸುವುದು ಅಂದರೇನು? ತಪ್ಪಿತಸ್ಥನು ನಿಜವಾಗಿ ಪಶ್ಚಾತ್ತಾಪಪಡುವಲ್ಲಿ ಆ ತಪ್ಪನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಕ್ಷಮಿಸುವುದಾಗಿದೆ. ಹಾಗಂತ ಮಾಡಿದ್ದರಲ್ಲಿ ಏನೂ ತಪ್ಪಿರಲಿಲ್ಲ ಅಂತ ಅಥವಾ ಏನೂ ನಡೆದೇ ಇಲ್ಲ ಅನ್ನುವ ಹಾಗೆ ಕ್ಷಮಿಸಿರುವ ವ್ಯಕ್ತಿ ನಟಿಸಲ್ಲ. ಅದರ ಬದಲು, ನೋವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಬಿಟ್ಟುಬಿಡುತ್ತಾನೆ. ಬೈಬಲ್ ಹೇಳುತ್ತೆ ಯಥಾರ್ಥವಾಗಿ ಪಶ್ಚಾತ್ತಾಪಪಡುವವರನ್ನು ಯೆಹೋವನು ‘ಕ್ಷಮಿಸಲು ಸಿದ್ಧನು.’—ಕೀರ್ತ. 86:5.
12. (1) ಯೆಹೋವನು ಕ್ಷಮಾಗುಣವನ್ನು ಹೇಗೆ ತೋರಿಸುತ್ತಾನೆ? (2) ತಪ್ಪನ್ನು ‘ಅಳಿಸಿಹಾಕುವುದರ’ ಅರ್ಥವೇನು?
12 ಯೆಹೋವನು ಎಷ್ಟರಮಟ್ಟಿಗೆ ಕ್ಷಮಿಸುತ್ತಾನೆ? “ಮಹಾಕೃಪೆಯಿಂದ” ಕ್ಷಮಿಸುತ್ತಾನೆ. ಅದರರ್ಥ ಆತನು ತಪ್ಪನ್ನು ಸಂಪೂರ್ಣವಾಗಿ ಮತ್ತು ಸದಾಕಾಲಕ್ಕೂ ಕ್ಷಮಿಸುತ್ತಾನೆ. (ಯೆಶಾ. 55:7) ಯೆಹೋವನು ಸಂಪೂರ್ಣವಾಗಿ ಕ್ಷಮಿಸುತ್ತಾನೆ ಅಂತ ನಮಗೆ ಹೇಗೆ ಗೊತ್ತು? ಅಪೊಸ್ತಲರ ಕಾರ್ಯಗಳು 3:19ರಲ್ಲಿರುವ ವಾಗ್ದಾನ ಗಮನಿಸಿ. (ಓದಿ.) ಅಲ್ಲಿ ಅಪೊಸ್ತಲ ಪೇತ್ರನು ತನ್ನ ಕೇಳುಗರನ್ನು “ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿ”ಕೊಳ್ಳುವಂತೆ ಪ್ರೋತ್ಸಾಹಿಸುತ್ತಿದ್ದಾನೆ. ನಿಜ ಪಶ್ಚಾತ್ತಾಪಪಟ್ಟ ಒಬ್ಬ ತಪ್ಪಿತಸ್ಥ ತಾನು ಮಾಡಿದ ತಪ್ಪಿಗಾಗಿ ತುಂಬ ವಿಷಾದಿಸುತ್ತಾನೆ. ಆ ತಪ್ಪನ್ನು ಮತ್ತೆ ಮಾಡದಂತೆ ದೃಢತೀರ್ಮಾನ ಮಾಡುತ್ತಾನೆ. (2 ಕೊರಿಂ. 7:10, 11) ಮತ್ತು ನಿಜ ಪಶ್ಚಾತ್ತಾಪ, ತಪ್ಪಿತಸ್ಥನನ್ನು “ತಿರುಗಿ”ಕೊಳ್ಳುವಂತೆ ಮಾಡುತ್ತೆ. ಅಂದರೆ ತನ್ನ ಕೆಟ್ಟ ಕಾರ್ಯವನ್ನು ಬಿಟ್ಟು ದೇವರಿಗೆ ಮೆಚ್ಚುಗೆ ತರುವಂಥ ರೀತಿಯಲ್ಲಿ ನಡೆದುಕೊಳ್ಳುತ್ತಾನೆ. ಇಂಥ ನಿಜ ಪಶ್ಚಾತ್ತಾಪ ತೋರಿಸಿದ್ದಲ್ಲಿ ಪೇತ್ರನ ಕೇಳುಗರಿಗೆ ಯಾವ ಪ್ರಯೋಜನ ಸಿಗುತ್ತಿತ್ತು? ಪೇತ್ರನು ಹೇಳಿದ್ದಾನೆ, ಅವರ ತಪ್ಪುಗಳನ್ನು ‘ಅಳಿಸಿಹಾಕಲಾಗುತ್ತೆ’ ಅಂತ. ಹಾಗಾದರೆ ಯೆಹೋವನು ಕ್ಷಮಿಸುತ್ತಾನೆ ಮಾತ್ರವಲ್ಲ, ಆ ತಪ್ಪನ್ನು ಮರೆತುಬಿಡುತ್ತಾನೆ. ಹೀಗೆ ಆತನು ಸಂಪೂರ್ಣವಾಗಿ ಕ್ಷಮಿಸುತ್ತಾನೆ.—ಇಬ್ರಿ. 10:22; 1 ಯೋಹಾ. 1:7.
13. “ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ” ಎಂಬ ಮಾತುಗಳು ಯಾವ ಭರವಸೆಯನ್ನು ನಮ್ಮಲ್ಲಿ ಮೂಡಿಸುತ್ತೆ?
13 ಯೆಹೋವನು ಸದಾಕಾಲಕ್ಕೂ ಕ್ಷಮಿಸುತ್ತಾನೆ ಅಂತ ನಮಗೆ ಹೇಗೆ ಗೊತ್ತು? ಅಭಿಷಿಕ್ತ ಕ್ರೈಸ್ತರೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಯ ಕುರಿತಾದ ಯೆರೆಮೀಯನ ಪ್ರವಾದನೆಯನ್ನು ಗಮನಿಸಿ. ಆ ಒಡಂಬಡಿಕೆ, ವಿಮೋಚನಾ ಮೌಲ್ಯದ ಮೇಲೆ ನಂಬಿಕೆ ಇಡುವವರಿಗೆ ಕ್ಷಮೆ ಪಡೆಯುವ ಅವಕಾಶ ಒದಗಿಸಿತು. (ಯೆರೆಮೀಯ 31:34 ಓದಿ.) ಯೆಹೋವನು ಹೀಗೆ ಭರವಸೆ ತುಂಬುತ್ತಾನೆ: “ನಾನು ಅವರ ಅಪರಾಧವನ್ನು ಕ್ಷಮಿಸಿ ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ.” ಅಂದರೆ ಯೆಹೋವನು ಒಂದುಸಾರಿ ಕ್ಷಮಿಸಿದ ಮೇಲೆ ಅದನ್ನು ಬಿಟ್ಟುಬಿಡುತ್ತಾನೆ. ಭವಿಷ್ಯತ್ತಿನಲ್ಲಿ ನಮ್ಮ ತಪ್ಪುಗಳನ್ನು ಮತ್ತೆಮತ್ತೆ ನೆನಸುತ್ತಾ ಶಿಕ್ಷಿಸುವ ಅವಕಾಶಗಳಿಗಾಗಿ ಹುಡುಕಲ್ಲ. ನಮ್ಮ ತಪ್ಪುಗಳನ್ನು ಯೆಹೋವನು ಸದಾಕಾಲಕ್ಕೂ ಕ್ಷಮಿಸಿ ತನ್ನ ಬೆನ್ನ ಹಿಂದೆ ಹಾಕುತ್ತಾನೆ.—ರೋಮ. 4:7, 8.
14. ಯೆಹೋವನ ಕ್ಷಮಿಸುವ ಗುಣವನ್ನು ಧ್ಯಾನಿಸುವುದು ನಮಗೆ ಹೇಗೆ ಸಾಂತ್ವನ ತರುತ್ತೆ? ಉದಾಹರಣೆ ಕೊಡಿ.
14 ಯೆಹೋವನ ಕ್ಷಮಾಗುಣವನ್ನು ಧ್ಯಾನಿಸುವಾಗ ನಮಗೆ ಸಾಂತ್ವನ ಸಿಗುತ್ತೆ. ಈ ಉದಾಹರಣೆ ನೋಡಿ. ತುಂಬ ವರ್ಷಗಳ ಹಿಂದೆ ಒಬ್ಬ ಸಹೋದರಿಯನ್ನು ಬಹಿಷ್ಕಾರ ಮಾಡಲಾಗಿತ್ತು. ಅನೇಕ ವರ್ಷಗಳಾದ ನಂತರ ಅವರು ಸತ್ಯಕ್ಕೆ ತಿರುಗಿ ಬಂದರು. “ನನ್ನನ್ನು ಯೆಹೋವ ದೇವರು ಕ್ಷಮಿಸಿದ್ದಾನೆ ಅಂತ ನೆನಸಿದ್ದರೂ, ಬೇರೆಯವರಿಗೆ ಹಾಗೆ ಹೇಳುತ್ತಿದ್ದೆನಾದರೂ ಒಳಗೊಳಗೆ ನನ್ನಲ್ಲಿ ಆ ಭಾವನೆ ಇರಲಿಲ್ಲ. ಬೇರೆಯವರೆಲ್ಲ ಯೆಹೋವನಿಗೆ ಆಪ್ತರಾಗಿದ್ದಾರೆ ಆದರೆ ನಾನು ಮಾತ್ರ ಆತನಿಂದ ದೂರ ಇದ್ದೀನಿ, ಯೆಹೋವನು ನನಗೆ ನೈಜನಾಗಿಲ್ಲ ಅಂತ ಭಾಸವಾಗುತ್ತಿತ್ತು.” ಈ ಸಹೋದರಿ, ಬೈಬಲಿನಲ್ಲಿ ಯೆಹೋವನ ಕ್ಷಮಾಗುಣದ ಕುರಿತು ವಿವರಿಸುವ ಶಬ್ದಚಿತ್ರಗಳನ್ನು ಓದಿ ಮನನ ಮಾಡಿದರು. ಅವರಿಗೆ ಅದರಿಂದ ಮನಸ್ಸಿಗೆ ಸಾಂತ್ವನ ಸಿಕ್ಕಿತು. ಅವರು ಹೇಳ್ತಾರೆ, “ಯೆಹೋವನಿಗೆ ನನ್ನ ಮೇಲೆ ಇರುವ ಪ್ರೀತಿ ಮತ್ತು ಕೋಮಲಭಾವವನ್ನು ಹಿಂದೆಂದಿಗಿಂತಲೂ ಈಗ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀನಿ.” ಅವರ ಮನಮುಟ್ಟಿದ ವಿಷಯ ಯಾವುದು? ಅವರ ಮಾತಲ್ಲೇ ಕೇಳಿ: ‘ಯೆಹೋವನು ನಮ್ಮ ತಪ್ಪುಗಳನ್ನು ಕ್ಷಮಿಸಿದ ಮೇಲೂ ಆ ತಪ್ಪಿನ ಕಲೆ ಜೀವನಪರ್ಯಂತ ಮಾಸದೆ ಉಳಿಯುತ್ತೆ ಎಂದು ನೆನಸಬಾರದು.’b “ಯೆಹೋವನು ನನ್ನ ತಪ್ಪನ್ನು ಸಂಪೂರ್ಣವಾಗಿ ಕ್ಷಮಿಸಕ್ಕೆ ಸಾಧ್ಯವಿಲ್ಲ, ಅದೇ ದುಃಖದ ಭಾರದಲ್ಲಿ ಇಡೀ ಜೀವನ ಕಳೆಯಬೇಕು’ ಎಂದು ನಾನು ಭಾವಿಸಿದ್ದೆ. ನನ್ನ ಈ ಭಾವನೆಗಳನ್ನು ಸರಿಪಡಿಸಲು ಸಮಯ ಬೇಕೆನ್ನುವುದೇನೋ ನಿಜ. ಆದರೆ ನನಗೀಗ ಯೆಹೋವನಿಗೆ ಆಪ್ತಳಾಗಬಹುದು ಅಂತ ಅನಿಸುತ್ತಿದೆ. ಮತ್ತು ನನ್ನ ಮೇಲಿದ್ದ ಭಾರದ ಮೂಟೆಯನ್ನು ಎತ್ತಿ ದೂರ ಬಿಸಾಡಿದ ಹಾಗಿದೆ.” ಎಷ್ಟು ಉದಾರವಾಗಿ ಕ್ಷಮಿಸುವ ಮತ್ತು ಪ್ರೀತಿಪೂರ್ಣ ದೇವರು ಯೆಹೋವನಾಗಿದ್ದಾನೆ!—ಕೀರ್ತ. 103:9.
ಯೆಹೋವನ ಕ್ಷಮಾಗುಣ ಅನುಕರಿಸಿ
15. ಯೆಹೋವನ ಕ್ಷಮಾಗುಣವನ್ನು ಅನುಕರಿಸುವುದು ಹೇಗೆ?
15 ಇತರರು ಪಶ್ಚಾತ್ತಾಪಪಡುವಾಗೆಲ್ಲ ಉದಾರವಾಗಿ ಕ್ಷಮಿಸುವ ಮೂಲಕ ಯೆಹೋವನ ಕ್ಷಮಾಗುಣವನ್ನು ಅನುಕರಿಸಬಹುದು. (ಲೂಕ 17:3, 4 ಓದಿ.) ಯೆಹೋವನು ಒಮ್ಮೆ ತಪ್ಪನ್ನು ಕ್ಷಮಿಸಿದ ಮೇಲೆ ಮತ್ತೆ ಅದನ್ನು ಮನಸ್ಸಿಗೆ ತರುವುದಿಲ್ಲ ಎನ್ನುವುದನ್ನು ನೆನಪಿಡಿ. ನಾವು ಸಹ ಇತರರನ್ನು ಕ್ಷಮಿಸುವಾಗ ಅವರ ತಪ್ಪನ್ನು ಮರೆತುಬಿಡಬೇಕು. ಅಂದರೆ ಮುಂದೆಂದೂ ಅದರ ಬಗ್ಗೆ ಯೋಚಿಸುತ್ತಾ ಇರಬಾರದು, ಮಾತೂ ಎತ್ತಬಾರದು.
16. (1) ಕ್ಷಮಿಸುವುದರ ಅರ್ಥ ಏನು, ಏನಲ್ಲ? ವಿವರಿಸಿ. (2) ಯೆಹೋವನಿಂದ ಕ್ಷಮೆ ಪಡೆಯಬೇಕಾದರೆ ನಾವೇನು ಮಾಡಬೇಕು?
16 ನಾವು ಕ್ಷಮಿಸುವವರಾಗಿರಬೇಕು ಎನ್ನುವುದರ ಅರ್ಥ ಇತರರ ತಪ್ಪುಗಳನ್ನು ಸರಿಯೆಂದು ಒಪ್ಪಿಕೊಳ್ಳಬೇಕು ಅಂತಲ್ಲ. ಅಥವಾ ನಮ್ಮ ವಿರುದ್ಧ ಬೇಕುಬೇಕೆಂದೇ ತಪ್ಪು ಮಾಡುವಂತೆ ಬಿಟ್ಟುಕೊಡಬೇಕಂತಾನೂ ಅಲ್ಲ. ಬದಲಾಗಿ ಕ್ಷಮಿಸುವುದು ಅಂದರೆ ಮನಸ್ಸಿಗಾದ ನೋವನ್ನು ಮರೆತುಬಿಡುವುದು. ಅದೇ ಸಮಯದಲ್ಲಿ ಯೆಹೋವನಿಂದ ನಮಗೆ ಕ್ಷಮೆ ಸಿಗಬೇಕಾದರೆ, ಇತರರೊಂದಿಗೆ ವ್ಯವಹರಿಸುವಾಗ ನಾವೂ ಯೆಹೋವನಂತೆ ಕ್ಷಮಿಸಬೇಕು. (ಮತ್ತಾ. 6:14, 15) ನಾವು “ಧೂಳಿಯಾಗಿದ್ದೇವೆಂಬದನ್ನು” ಯೆಹೋವನು ನೆನಪಿನಲ್ಲಿಟ್ಟು ನಮ್ಮ ಕಡೆ ಅನುಕಂಪ ತೋರಿಸುತ್ತಾನೆ. (ಕೀರ್ತ. 103:14) ಅದೇ ರೀತಿ ನಾವು ಸಹ ಇತರರ ಕುಂದುಕೊರತೆಗಳನ್ನು ಸಹಿಸಿಕೊಂಡು ಮತ್ತು ಹೃದಯದಾಳದಿಂದ ಕ್ಷಮಿಸುವ ಮೂಲಕ ಅನುಕಂಪವನ್ನು ತೋರಿಸಬಹುದಲ್ಲವೇ!—ಎಫೆ. 4:32; ಕೊಲೊ. 3:13.
17. ಜೊತೆವಿಶ್ವಾಸಿಯೊಬ್ಬರು ನಮ್ಮ ಮನನೋಯಿಸಿರುವಲ್ಲಿ ಏನು ಮಾಡಬೇಕು?
17 ಕ್ಷಮಿಸುವುದು ಯಾವಾಗಲೂ ಅಷ್ಟು ಸುಲಭವಲ್ಲ. ಮೊದಲನೇ ಶತಮಾನದ ಕೆಲವು ಅಭಿಷಿಕ್ತರಲ್ಲಿ ಭಿನ್ನಾಭಿಪ್ರಾಯಗಳು ಎದ್ದಾಗ ಇದೇ ಸವಾಲನ್ನು ಅವರು ಎದುರಿಸಿದರು. (ಫಿಲಿ. 4:2) ಸಹೋದರ/ಸಹೋದರಿಯಿಂದ ನಾವು ಮನನೊಂದಿರುವುದಾದರೆ ಏನು ಮಾಡಬೇಕು? ಯೋಬನ ಬಗ್ಗೆ ಯೋಚಿಸಿ. ಅವನ ಸ್ನೇಹಿತರು ಎಂದು ಹೇಳಿಕೊಂಡ ಎಲೀಫಜ, ಬಿಲ್ದದ ಮತ್ತು ಚೋಫರ ಯೋಬನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುತ್ತಾ ಅವನನ್ನು ತುಂಬ ನೋಯಿಸಿದರು. (ಯೋಬ 10:1; 19:2) ಕೊನೆಗೆ ಆ ಸುಳ್ಳು ಸಾಂತ್ವನಗಾರರನ್ನು ಯೆಹೋವನು ಖಂಡಿಸಿದನು. ಯೋಬನ ಬಳಿ ಹೋಗಿ ತಮ್ಮ ತಪ್ಪುಗಳಿಗಾಗಿ ಹೋಮವನ್ನು ಅರ್ಪಿಸುವಂತೆ ಆಜ್ಞೆಕೊಟ್ಟನು. (ಯೋಬ 42:7-9) ಹಾಗಿದ್ದರೂ ಯೆಹೋವನು ಯೋಬನಿಗೂ ಒಂದು ಕೆಲಸ ಕೊಟ್ಟನು. ಏನದು? ತನ್ನ ಮೇಲೆ ತಪ್ಪು ಹೊರಿಸಿದವರ ಪರವಾಗಿ ಯೋಬನು ಪ್ರಾರ್ಥಿಸುವಂತೆ ಯೆಹೋವನು ಹೇಳಿದನು. ಆತನು ಹೇಳಿದಂತೆ ಯೋಬನು ಮಾಡಿದನು. ಯೋಬನ ಈ ಕ್ಷಮಾಗುಣವನ್ನು ಯೆಹೋವನು ಮೆಚ್ಚಿ ಆಶೀರ್ವದಿಸಿದನು. (ಯೋಬ 42:10, 12, 16, 17 ಓದಿ.) ಇದರಿಂದ ನಮಗೇನು ಪಾಠ? ನಮ್ಮ ವಿರುದ್ಧ ತಪ್ಪು ಮಾಡಿದವರಿಗಾಗಿ ಯಥಾರ್ಥ ಪ್ರಾರ್ಥನೆ ಮಾಡಬೇಕು. ಆಗ ನೋವನ್ನು ಮನಸ್ಸಿನಿಂದ ತೆಗೆದುಹಾಕಲು ಸುಲಭವಾಗುತ್ತೆ.
ಯೆಹೋವನ ಗುಣಗಳನ್ನು ಆಳವಾಗಿ ಗಣ್ಯಮಾಡಿ
18, 19. ಯೆಹೋವನ ಮನಮುಟ್ಟುವ ಗುಣಗಳ ಕಡೆಗೆ ನಾವು ಹೇಗೆ ಗಣ್ಯತೆಯನ್ನು ಗಾಢಗೊಳಿಸಬಲ್ಲೆವು?
18 ಯೆಹೋವನಿಗಿರುವ ಮನಮುಟ್ಟುವ ಅನೇಕ ಗುಣಗಳ ಕುರಿತು ಕಲಿಯಲು ಅವಕಾಶ ನಮಗೆ ಸಿಕ್ಕಿತು. ಕಲಿತ ಆ ವಿಷಯಗಳು ನಮ್ಮ ಮನಸ್ಪರ್ಶಿಸಿದವು. ಆತನ ಸ್ನೇಹಪರತೆ, ನಿಷ್ಪಕ್ಷಪಾತ, ಉದಾರತೆ, ನ್ಯಾಯಸಮ್ಮತತೆ, ನಿಷ್ಠೆ ಮತ್ತು ಕ್ಷಮಾಗುಣದ ಕುರಿತು ನಾವು ಕಲಿತೆವು. ಯೆಹೋವನ ಕುರಿತು ನಾವು ಕಲಿತದ್ದು ಕೇವಲ ಒಂದೆರಡು ಹನಿಗಳಷ್ಟೇ. ಇನ್ನೂ ಸಮುದ್ರದಷ್ಟು ವಿಷಯಗಳನ್ನು ಅನಂತ ಅನಂತಕ್ಕೂ ಕಲಿಯಲಿದ್ದೇವೆ. (ಪ್ರಸಂ. 3:11) ಅಪೊಸ್ತಲ ಪೌಲನ ಈ ಮಾತುಗಳು ನಮ್ಮ ಬಾಯಲ್ಲೂ ಇವೆ: “ಆಹಾ! ದೇವರ ಐಶ್ವರ್ಯವೂ ವಿವೇಕವೂ ಜ್ಞಾನವೂ ಎಷ್ಟೋ ಅಗಾಧ!” ಹಾಗೆಯೇ ನಾವು ಕಲಿತ ಆತನ ಆರು ಗುಣಗಳು ಮತ್ತು ಪ್ರೀತಿ ಸಹ!—ರೋಮ. 11:33.
19 ನಾವೆಲ್ಲರೂ ಯೆಹೋವನಿಗಿರುವ ಮನಮುಟ್ಟುವ ಗುಣಗಳ ಕಡೆಗೆ ಗಣ್ಯತೆಯನ್ನು ಗಾಢಗೊಳಿಸುತ್ತಿರೋಣ. ಅದಕ್ಕಾಗಿ ಅವುಗಳ ಪರಿಚಯ ಇನ್ನಷ್ಟು ಮಾಡಿಕೊಳ್ಳೋಣ. ಅವುಗಳ ಕುರಿತು ಮನನ ಮಾಡೋಣ. ನಮ್ಮ ಜೀವನದಲ್ಲೂ ಆ ಗುಣಗಳನ್ನು ತೋರಿಸೋಣ. (ಎಫೆ. 5:1) ಹಾಗೆ ಮಾಡುತ್ತಾ ಇರುವುದಾದರೆ ಕೀರ್ತನೆಗಾರನಂತೆ ನಾವೂ ಹೇಳುವೆವು: “ನನಗಾದರೋ ದೇವರ ಸಾನ್ನಿಧ್ಯವೇ [ದೇವರಿಗೆ ಆಪ್ತನಾಗುವುದೇ] ಭಾಗ್ಯವು.”—ಕೀರ್ತ. 73:28.
a ಈ ವಿಷಯದಲ್ಲಿ ಸಹಾಯಕಾರಿ ಸಲಹೆಗಳಿಗಾಗಿ 1995, ಜನವರಿ 15ರ ಕಾವಲಿನಬುರುಜುವಿನಲ್ಲಿರುವ “ಇತ್ತೀಚಿಗೆ ನೀವು ಯಾರನ್ನಾದರೂ ಉತ್ತೇಜಿಸಿದ್ದೀರೋ?” ಎಂಬ ಲೇಖನ ಹಾಗೂ 1995, ಏಪ್ರಿಲ್ 1ರ ಕಾವಲಿನಬುರುಜುವಿನಲ್ಲಿರುವ “ಪ್ರೀತಿಸಲು ಮತ್ತು ಸತ್ಕಾರ್ಯಗಳನ್ನು ಮಾಡಲು ಹುರಿದುಂಬಿಸುವುದು—ಹೇಗೆ?” ಎಂಬ ಲೇಖನ ನೋಡಿ.
b ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕದ 26ನೇ ಅಧ್ಯಾಯದ ಪ್ಯಾರ 10ನ್ನು ನೋಡಿ.