ನೀವು “ಯಾಜಕರಾಜ್ಯ” ಆಗುವಿರಿ
‘ನೀವು ನನಗೆ ಯಾಜಕರಾಜ್ಯವೂ ಪರಿಶುದ್ಧಜನವೂ ಆಗುವಿರಿ.’ —ವಿಮೋ. 19:6.
1, 2. ಸ್ತ್ರೀಯ ಸಂತತಿಗೆ ಏಕೆ ಸಂರಕ್ಷಣೆ ಬೇಕಿತ್ತು?
ಬೈಬಲಿನಲ್ಲಿ ದಾಖಲಾದ ಮೊತ್ತಮೊದಲ ಪ್ರವಾದನೆಯು ದೇವರು ಏದೆನ್ ತೋಟದಲ್ಲಿ ಮಾಡಿದ ವಾಗ್ದಾನವಾಗಿದೆ. ಯೆಹೋವನ ಉದ್ದೇಶವು ಪೂರ್ತಿಯಾಗಿ ಹೇಗೆ ನೆರವೇರಲಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಾದರೆ ನಾವು ಆ ಪ್ರವಾದನೆಯನ್ನು ತಿಳಿಯುವುದು ಬಹಳ ಪ್ರಾಮುಖ್ಯ. ಅದು ಹೀಗಿದೆ: “ನಿನಗೂ [ಅಂದರೆ ಸೈತಾನನಿಗೂ] ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು.” ಈ ವೈರತ್ವ ಅಥವಾ ಹಗೆತನ ಎಷ್ಟು ತೀಕ್ಷ್ಣವಾಗಿರಲಿತ್ತು? “ಈಕೆಯ ಸಂತಾನವು ನಿನ್ನ [ಅಂದರೆ ಸೈತಾನನ] ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ” ಎಂದು ಯೆಹೋವನೇ ಹೇಳಿದ್ದನು. (ಆದಿ. 3:15) ಇದರರ್ಥ ಸೈತಾನ ಮತ್ತು ಸ್ತ್ರೀಯ ಮಧ್ಯೆ ತುಂಬ ದ್ವೇಷವಿರಲಿತ್ತು. ಎಷ್ಟೆಂದರೆ ಸೈತಾನನು ಸ್ತ್ರೀಯ ಸಂತತಿಯನ್ನು ನಾಶಮಾಡಲು ಸರ್ವಪ್ರಯತ್ನ ಮಾಡಲಿದ್ದನು.
2 ಹಾಗಾಗಿ ದೇವಜನರ ಕುರಿತು ಕೀರ್ತನೆಗಾರನು ಪ್ರಾರ್ಥನೆಯಲ್ಲಿ ಹೀಗಂದನು: “ನೋಡು, ನಿನ್ನ ಶತ್ರುಗಳು ಘೋಷಿಸುತ್ತಾರೆ; ನಿನ್ನ ದ್ವೇಷಿಗಳು ತಲೆಯೆತ್ತಿದ್ದಾರೆ. ಅವರು ನಿನ್ನ ಪ್ರಜೆಗಳಿಗೆ ವಿರೋಧವಾಗಿ ಒಳಸಂಚು ಮಾಡಿ ನಿನ್ನ ಮರೆಹೊಕ್ಕವರನ್ನು ಕೆಡಿಸಬೇಕೆಂದು ಆಲೋಚಿಸಿ— ಬನ್ನಿರಿ; ಅವರು ಜನಾಂಗವಾಗಿ ಉಳಿಯದಂತೆ . . . ಅವರನ್ನು ಸಂಹರಿಸೋಣ ಅಂದುಕೊಳ್ಳುತ್ತಾರೆ.” (ಕೀರ್ತ. 83:2-4) ಸ್ತ್ರೀಯ ಸಂತತಿಯು ಯಾವ ವಂಶದಲ್ಲಿ ಬರಲಿದ್ದನೋ ಆ ವಂಶವನ್ನು ನಾಶಮಾಡಲು ಮತ್ತು ಅಶುದ್ಧಗೊಳಿಸಲು ಸೈತಾನನು ಪಣತೊಟ್ಟನು. ಹಾಗಾಗಿ ಸ್ತ್ರೀಯ ಸಂತತಿಗೆ ಸಂರಕ್ಷಣೆ ಬೇಕಿತ್ತು. ಈ ಸಂರಕ್ಷಣೆ ಕೊಡಲು ಮತ್ತು ಮೆಸ್ಸೀಯನ ರಾಜ್ಯ ಖಂಡಿತ ಜಯಸಾಧಿಸುತ್ತದೆ ಎಂಬ ಖಾತ್ರಿಕೊಡಲು ಯೆಹೋವನು ಇನ್ನೂ ಕೆಲವು ಒಡಂಬಡಿಕೆಯನ್ನು ಮಾಡಿದನು.
ಸ್ತ್ರೀಯ ಸಂತತಿಯನ್ನು ಸಂರಕ್ಷಿಸುವ ಒಡಂಬಡಿಕೆ
3, 4. (ಎ) ಧರ್ಮಶಾಸ್ತ್ರದ ಒಡಂಬಡಿಕೆಯು ಯಾವಾಗ ಜಾರಿಗೆ ಬಂತು? (ಬಿ) ಇಸ್ರಾಯೇಲ್ ಜನಾಂಗವು ಏನು ಮಾಡಲು ಒಪ್ಪಿಕೊಂಡಿತು? (ಸಿ) ದೇವರು ಇಸ್ರಾಯೇಲ್ಯರಿಗೆ ಆಜ್ಞೆಗಳನ್ನು ಏಕೆ ಕೊಟ್ಟನು?
3 ಅಬ್ರಹಾಮ, ಇಸಾಕ, ಯಾಕೋಬರ ವಂಶ ಬೆಳೆದು ಲಕ್ಷಾಂತರ ಮಂದಿಯಾದಾಗ ಯೆಹೋವನು ಅವರನ್ನು ಒಂದು ಜನಾಂಗವಾಗಿ ಮಾಡಿದನು. ಅದುವೇ ಪ್ರಾಚೀನ ಇಸ್ರಾಯೇಲ್ ಜನಾಂಗ. ಯೆಹೋವನು ಮೋಶೆಯ ಮೂಲಕ ಅವರಿಗೆ ನಿಮಯಗಳನ್ನು ಕೊಟ್ಟನು. ಅವೆಲ್ಲವುಗಳಿಗೆ ವಿಧೇಯರಾಗುತ್ತೇವೆಂದು ಅವರೂ ಒಪ್ಪಿಕೊಂಡರು. ಹೀಗೆ ಯೆಹೋವನು ಆ ಜನಾಂಗದೊಂದಿಗೆ ಒಂದು ವಿಶೇಷ ಒಡಂಬಡಿಕೆಯನ್ನು ಮಾಡಿದನು. ಬೈಬಲ್ ಹೀಗನ್ನುತ್ತದೆ: ಮೋಶೆ “ನಿಬಂಧನ ಗ್ರಂಥವನ್ನು ತೆಗೆದುಕೊಂಡು ಜನರಿಗೆ ಕೇಳಿಸುವಂತೆ ಓದಿದನು. ಅವರು ಕೇಳಿ—ಯೆಹೋವನ ಆಜ್ಞೆಗಳನ್ನೆಲ್ಲಾ ನಾವು ಅನುಸರಿಸಿ ವಿಧೇಯರಾಗಿರುವೆವು ಅಂದರು. ಆಗ ಮೋಶೆ [ಯಜ್ಞವಾಗಿ ಅರ್ಪಿಸಿದ್ದ ಹೋರಿಗಳ] ರಕ್ತವನ್ನು ತೆಗೆದುಕೊಂಡು ಜನರ ಮೇಲೆ ಚಿಮಿಕಿಸಿ—ಇಗೋ, ಈ ಗ್ರಂಥದಲ್ಲಿ ಹೇಳಿರುವ ಎಲ್ಲಾ ಆಜ್ಞೆಗಳ ಪ್ರಕಾರ ಯೆಹೋವನು ನಿಮ್ಮ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಸ್ಥಿರಪಡಿಸುವ ರಕ್ತವು ಇದೇ ಅಂದನು.”—ವಿಮೋ. 24:3-8.
4 ಯೆಹೋವನು ಮಾಡಿದ ಈ ಒಡಂಬಡಿಕೆಗೆ ಧರ್ಮಶಾಸ್ತ್ರದ ಒಡಂಬಡಿಕೆ ಎಂದು ಹೆಸರು. ಇದು ಕ್ರಿ.ಪೂ. 1513ರಲ್ಲಿ ಜಾರಿಗೆ ಬಂತು. ಈ ಒಡಂಬಡಿಕೆಯ ಮೂಲಕ ಯೆಹೋವನು ಪ್ರಾಚೀನ ಇಸ್ರಾಯೇಲ್ಯರನ್ನು ತನ್ನ ಜನರನ್ನಾಗಿ ಆರಿಸಿಕೊಂಡನು. ಮಾತ್ರವಲ್ಲ ಆತನು ಅವರ ನ್ಯಾಯಾಧಿಪತಿಯೂ ನಿಯಮದಾತನೂ ರಾಜನೂ ಆದನು. (ಯೆಶಾ. 33:22) ದೇವರ ನೀತಿಯ ಮಟ್ಟಗಳನ್ನು ಅನುಸರಿಸಿದರೆ ಅಥವಾ ಅನುಸರಿಸದೆ ಹೋದರೆ ಏನಾಗುತ್ತದೆ ಎಂಬುದು ನಮಗೆ ಇಸ್ರಾಯೇಲ್ಯರ ಇತಿಹಾಸದಿಂದ ಚೆನ್ನಾಗಿ ತಿಳಿಯುತ್ತದೆ. ಧರ್ಮಶಾಸ್ತ್ರದಲ್ಲಿ ಅನೇಕ ನಿಯಮಗಳಿದ್ದವು. ಅವುಗಳಲ್ಲಿ, ಇಸ್ರಾಯೇಲ್ಯರು ಬೇರೆ ಧರ್ಮದವರನ್ನು ಮದುವೆಯಾಗಬಾರದು, ಬೇರೆ ಯಾವ ದೇವರುಗಳನ್ನೂ ಪೂಜಿಸಬಾರದು ಎಂಬ ಆಜ್ಞೆಗಳು ಇದ್ದವು. ಅಬ್ರಹಾಮನ ಸಂತತಿಯು ಅಶುದ್ಧವಾಗಬಾರದು ಎಂಬ ಉದ್ದೇಶದಿಂದ ಆ ಆಜ್ಞೆಗಳನ್ನು ದೇವರು ಕೊಟ್ಟನು.—ವಿಮೋ. 20:4-6; 34:12-16.
5. (ಎ) ಧರ್ಮಶಾಸ್ತ್ರದ ಒಡಂಬಡಿಕೆಯಿಂದ ಇಸ್ರಾಯೇಲ್ಯರಿಗೆ ಯಾವ ಸದವಕಾಶ ಸಿಕ್ಕಿತ್ತು? (ಬಿ) ದೇವರು ಇಸ್ರಾಯೇಲ್ಯರನ್ನು ಏಕೆ ತಿರಸ್ಕರಿಸಿದನು?
5 ಧರ್ಮಶಾಸ್ತ್ರದ ಒಡಂಬಡಿಕೆಯಲ್ಲಿ ಯಾಜಕಸೇವೆಯ ಏರ್ಪಾಡು ಸಹ ಇತ್ತು. ಆಗ ಇದ್ದ ಯಾಜಕರು ಭವಿಷ್ಯದಲ್ಲಿ ಯಾಜಕರಾಗಿ ಸೇವೆಸಲ್ಲಿಸಲಿದ್ದ ಇನ್ನೊಂದು ಗುಂಪನ್ನು ಸೂಚಿಸುತ್ತಿದ್ದರು. ಮುಂದೆ ಯಾಜಕರಾಗಿಯೂ ರಾಜರಾಗಿಯೂ ಸೇವೆಸಲ್ಲಿಸಲಿದ್ದ ಈ ಇನ್ನೊಂದು ಗುಂಪಿನಿಂದ ಮಾನವರು ಇನ್ನೂ ಉತ್ತಮ ವಿಧದಲ್ಲಿ ಪ್ರಯೋಜನ ಪಡೆಯಲಿದ್ದರು. (ಇಬ್ರಿ. 7:11; 10:1) ನಿಜವೇನೆಂದರೆ ಧರ್ಮಶಾಸ್ತ್ರದ ಒಡಂಬಡಿಕೆಯು ಇಸ್ರಾಯೇಲ್ ಜನಾಂಗಕ್ಕೆ ‘ಯಾಜಕರಾಜ್ಯವಾಗಿ’ ಸೇವೆಸಲ್ಲಿಸುವ ಸದವಕಾಶವನ್ನು ಕೊಟ್ಟಿತು. ಈ ಸುಯೋಗವನ್ನು ಪಡೆಯಲು ಇಸ್ರಾಯೇಲ್ಯರು ಯೆಹೋವನ ನಿಯಮಗಳಿಗೆ ಅನುಸಾರ ನಡೆಯಬೇಕಿತ್ತು. (ವಿಮೋಚನಕಾಂಡ 19:5, 6 ಓದಿ.) ಆದರೆ ಅವರು ಹಾಗೆ ನಡೆಯಲಿಲ್ಲ. ಅಬ್ರಹಾಮನ ಸಂತತಿಯ ಪ್ರಧಾನ ಭಾಗವಾದ ಮೆಸ್ಸೀಯನನ್ನು ಅಂದರೆ ಯೇಸುವನ್ನು ಅವರು ತಿರಸ್ಕರಿಸಿದರು. ಆದ್ದರಿಂದ ದೇವರು ಅವರನ್ನು ತಿರಸ್ಕರಿಸಿಬಿಟ್ಟನು.
ಇಸ್ರಾಯೇಲ್ಯರು ಅವಿಧೇಯರಾದರೂ ಧರ್ಮಶಾಸ್ತ್ರದ ಒಡಂಬಡಿಕೆಯ ಉದ್ದೇಶವು ನೆರವೇರಿತು (ಪ್ಯಾರ 3-6 ನೋಡಿ)
6. ಧರ್ಮಶಾಸ್ತ್ರದ ಉದ್ದೇಶ ಏನಾಗಿತ್ತು?
6 ಇಸ್ರಾಯೇಲ್ಯರು ದೇವರಿಗೆ ನಂಬಿಗಸ್ತರಾಗಿ ಉಳಿಯದಿದ್ದ ಕಾರಣ ಯಾಜಕರಾಜ್ಯವಾಗುವ ಅವಕಾಶವು ಅವರ ಕೈತಪ್ಪಿ ಹೋಯಿತು. ಹಾಗಾದರೆ ಧರ್ಮಶಾಸ್ತ್ರದ ಉದ್ದೇಶ ನೆರವೇರಲಿಲ್ಲವಾ? ಹಾಗಲ್ಲ. ಏಕೆಂದರೆ ಧರ್ಮಶಾಸ್ತ್ರವು ಸ್ತ್ರೀಯ ಸಂತತಿಯನ್ನು ಅಶುದ್ಧಗೊಳ್ಳದಂತೆ ಸಂರಕ್ಷಿಸಿತು ಮತ್ತು ಮೆಸ್ಸೀಯನನ್ನು ಗುರುತಿಸಲು ಜನರಿಗೆ ಸಹಾಯ ಮಾಡಿತು. ಕ್ರಿಸ್ತನು ಭೂಮಿಗೆ ಬಂದು ಜನರು ಅವನನ್ನು ಗುರುತಿಸಿದ ಮೇಲೆ ಧರ್ಮಶಾಸ್ತ್ರದ ಉದ್ದೇಶ ನೆರವೇರಿತು. ಆದ್ದರಿಂದಲೇ “ಕ್ರಿಸ್ತನು ಧರ್ಮಶಾಸ್ತ್ರವನ್ನು ಕೊನೆಗಾಣಿಸಿದ್ದಾನೆ” ಎಂದು ಬೈಬಲ್ ಹೇಳುತ್ತದೆ. (ರೋಮ. 10:4) ಪ್ರಶ್ನೆಯೇನೆಂದರೆ, ಯಾಜಕರಾಜ್ಯವಾಗಿ ಸೇವೆಸಲ್ಲಿಸುವ ಸುಯೋಗ ಬೇರೆ ಯಾರಿಗೆ ಸಿಗಲಿತ್ತು? ಒಂದು ಹೊಸ ಜನಾಂಗಕ್ಕೆ ಸಿಗಲಿತ್ತು. ಆ ಜನಾಂಗವನ್ನು ರಚಿಸಲಿಕ್ಕಾಗಿ ಯೆಹೋವನು ಇನ್ನೊಂದು ಒಪ್ಪಂದವನ್ನು ಮಾಡಿದನು.
ಹೊಸ ಜನಾಂಗದ ರಚನೆ
7. ಯೆಹೋವನು ಯೆರೆಮೀಯನ ಮೂಲಕ ಏನನ್ನು ಮುಂತಿಳಿಸಿದನು?
7 ಧರ್ಮಶಾಸ್ತ್ರದ ಒಡಂಬಡಿಕೆ ರದ್ದಾಗುವುದಕ್ಕೆ ಎಷ್ಟೋ ವರ್ಷಗಳ ಮುಂಚೆಯೇ ಯೆಹೋವನು ತಾನು ಇಸ್ರಾಯೇಲ್ ಜನಾಂಗದೊಂದಿಗೆ “ಹೊಸದಾಗಿರುವ ಒಂದು ಒಡಂಬಡಿಕೆಯನ್ನು” ಮಾಡಿಕೊಳ್ಳುವೆನೆಂದು ಪ್ರವಾದಿ ಯೆರೆಮೀಯನ ಮೂಲಕ ಮುಂತಿಳಿಸಿದನು. (ಯೆರೆಮೀಯ 31:31-33 ಓದಿ.) ಈ ಹೊಸ ಒಡಂಬಡಿಕೆಯು ಧರ್ಮಶಾಸ್ತ್ರದ ಒಡಂಬಡಿಕೆಗಿಂತ ಭಿನ್ನವಾಗಿರಲಿತ್ತು. ಏಕೆಂದರೆ ಧರ್ಮಶಾಸ್ತ್ರದ ಒಡಂಬಡಿಕೆಯಲ್ಲಿ ಪಾಪಕ್ಷಮಾಪಣೆಗಾಗಿ ಪ್ರಾಣಿಗಳ ಯಜ್ಞವನ್ನು ಅರ್ಪಿಸಬೇಕಿತ್ತು. ಆದರೆ ಹೊಸ ಒಡಂಬಡಿಕೆಯಲ್ಲಿ ಅದರ ಅಗತ್ಯವಿರಲಿಲ್ಲ. ಏಕೆ?
8, 9. (ಎ) ಯೇಸು ತನ್ನ ರಕ್ತವನ್ನು ಸುರಿಸಿದ್ದರಿಂದ ಯಾವೆಲ್ಲ ಪ್ರಯೋಜನಗಳಿವೆ? (ಬಿ) ಹೊಸ ಒಡಂಬಡಿಕೆಯ ಭಾಗವಾಗಿರುವವರಿಗೆ ಯಾವ ಸದವಕಾಶ ಸಿಕ್ಕಿತು? (ಶೀರ್ಷಿಕೆಯ ಮೇಲಿರುವ ಚಿತ್ರ ನೋಡಿ.)
8 ನೂರಾರು ವರ್ಷಗಳ ನಂತರ ಅಂದರೆ ಇಸವಿ 33ರ ನೈಸಾನ್ 14ರಂದು ಯೇಸು ಹೊಸ ಆಚರಣೆಯೊಂದನ್ನು ಶುರುಮಾಡಿದನು. ಅದೇ ಕರ್ತನ ಸಂಧ್ಯಾ ಭೋಜನ. ಅವನು ತನ್ನ 11 ಮಂದಿ ನಂಬಿಗಸ್ತ ಅಪೊಸ್ತಲರಿಗೆ ದ್ರಾಕ್ಷಾಮದ್ಯವಿದ್ದ ಪಾತ್ರೆಯನ್ನು ತೋರಿಸಿ ಹೀಗಂದನು: “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡಲಿರುವ ನನ್ನ ರಕ್ತದ ಆಧಾರದ ಮೇಲೆ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ.” (ಲೂಕ 22:20) ಮತ್ತಾಯನು ಯೇಸುವಿನ ಈ ಮಾತುಗಳನ್ನು ಹೀಗೆ ದಾಖಲಿಸಿದ್ದಾನೆ: “ಇದು ಪಾಪಗಳ ಕ್ಷಮಾಪಣೆಗಾಗಿ ಅನೇಕರಿಗೋಸ್ಕರ ಸುರಿಸಲ್ಪಡಲಿರುವ ನನ್ನ ‘ಒಡಂಬಡಿಕೆಯ ರಕ್ತವನ್ನು’ ಸೂಚಿಸುತ್ತದೆ.”—ಮತ್ತಾ. 26:27, 28.
9 ಯೇಸುವಿನ ರಕ್ತದ ಆಧಾರದ ಮೇಲೆ ಹೊಸ ಒಡಂಬಡಿಕೆ ಸ್ಥಾಪಿತವಾಯಿತು. ಅವನು ತನ್ನ ರಕ್ತವನ್ನು ಸುರಿಸಿದ್ದು ಒಂದೇ ಸಲವಾದರೂ ಅದು ಎಲ್ಲರ ಪಾಪಗಳನ್ನು ಶಾಶ್ವತವಾಗಿ ಕ್ಷಮಿಸಲು ಸಾಧ್ಯಮಾಡಿತು. ಈ ಹೊಸ ಒಡಂಬಡಿಕೆಯಲ್ಲಿ ಯೇಸು ಕೂಡ ಸೇರಿದ್ದಾನಾ? ಇಲ್ಲ. ಯಾಕೆಂದರೆ ಯೇಸು ಪರಿಪೂರ್ಣ ವ್ಯಕ್ತಿಯಾಗಿರುವುದರಿಂದ ಅವನಿಗೆ ಕ್ಷಮಾಪಣೆಯ ಅಗತ್ಯವಿಲ್ಲ. ಆದರೆ ಅವನು ಅರ್ಪಿಸಿದ ಜೀವದ ಮೌಲ್ಯದ ಆಧಾರದಲ್ಲಿ ಮಾನವರು ಶಾಶ್ವತ ಪ್ರಯೋಜನ ಪಡೆಯುವಂತೆ ಯೆಹೋವನು ಮಾಡುತ್ತಾನೆ. ಅಷ್ಟೇಅಲ್ಲದೆ ನಂಬಿಗಸ್ತ ಮಾನವರನ್ನು ತನ್ನ ಪವಿತ್ರಾತ್ಮದಿಂದ ಅಭಿಷೇಕಿಸುವ ಮೂಲಕ “ಪುತ್ರರಾಗಿ” ದತ್ತು ತೆಗೆದುಕೊಳ್ಳುತ್ತಾನೆ. (ರೋಮನ್ನರಿಗೆ 8:14-17 ಓದಿ.) ಹೀಗೆ ಯೆಹೋವನು ಯೇಸುವನ್ನು ವೀಕ್ಷಿಸುವ ರೀತಿಯಲ್ಲೇ ಇವರನ್ನು ಸಹ ತನ್ನ ಮಕ್ಕಳಾಗಿ, ಪಾಪರಹಿತರಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ. ಈ ಅಭಿಷಿಕ್ತರು ‘ಕ್ರಿಸ್ತನೊಂದಿಗೆ ಜೊತೆ ಬಾಧ್ಯರು’ ಆಗುತ್ತಾರೆ. “ಯಾಜಕರಾಜ್ಯ” ಆಗುವ ಸದವಕಾಶವನ್ನು ಇಸ್ರಾಯೇಲ್ಯ ಜನಾಂಗ ಕಳೆದುಕೊಂಡಿತು. ಆದರೆ ಅಭಿಷಿಕ್ತರು ಅದನ್ನು ಪಡೆದುಕೊಳ್ಳುವರು. ಅಪೊಸ್ತಲ ಪೇತ್ರನು ಅವರಿಗೆ ಹೀಗೆ ಹೇಳಿದನು: “ನಿಮ್ಮನ್ನು ಕತ್ತಲೆಯೊಳಗಿಂದ ತನ್ನ ಆಶ್ಚರ್ಯಕರವಾದ ಬೆಳಕಿಗೆ ಕರೆದಾತನ ‘ಗುಣಲಕ್ಷಣಗಳನ್ನು ಎಲ್ಲ ಕಡೆಗಳಲ್ಲೂ ಪ್ರಕಟಿಸುವುದಕ್ಕಾಗಿ ಆರಿಸಿಕೊಳ್ಳಲ್ಪಟ್ಟಿರುವ ಕುಲವೂ ರಾಜವಂಶಸ್ಥರಾದ ಯಾಜಕರೂ ಪವಿತ್ರ ಜನಾಂಗವೂ ವಿಶೇಷ ಒಡೆತನಕ್ಕಾಗಿರುವ ಜನರೂ’ ಆಗಿದ್ದೀರಿ.” (1 ಪೇತ್ರ 2:9) ಇದರಿಂದ ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ ಏನೆಂದರೆ ಹೊಸ ಒಡಂಬಡಿಕೆಯು ಯೇಸುವಿನ ಶಿಷ್ಯರನ್ನು ಅಬ್ರಹಾಮನ ಸಂತತಿಯ ಭಾಗವಾಗುವಂತೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿತು.
ಹೊಸ ಒಡಂಬಡಿಕೆ ಜಾರಿಗೆ ಬಂತು
10. (ಎ) ಹೊಸ ಒಡಂಬಡಿಕೆ ಯಾವಾಗ ಜಾರಿಗೆ ಬಂತು? (ಬಿ) ಅಷ್ಟರವರೆಗೆ ಅದು ಯಾಕೆ ಜಾರಿಗೆ ಬಂದಿರಲಿಲ್ಲ?
10 ಸಂಧ್ಯಾ ಭೋಜನವನ್ನು ಯೇಸು ಶುರುಮಾಡಿದಾಗಲೇ ಹೊಸ ಒಡಂಬಡಿಕೆ ಜಾರಿಗೆ ಬರಲಿಲ್ಲ. ಏಕೆಂದರೆ ಹೊಸ ಒಡಂಬಡಿಕೆ ಜಾರಿಗೆ ಬರಬೇಕಾದರೆ ಯೇಸು ಸ್ವರ್ಗಕ್ಕೆ ಹಿಂತಿರುಗಿ ತನ್ನ ಜೀವದ ಮೌಲ್ಯವನ್ನು ಯೆಹೋವನಿಗೆ ಅರ್ಪಿಸಬೇಕಿತ್ತು. ಅದೂ ಅಲ್ಲದೆ ಅವನೊಂದಿಗೆ ‘ಜೊತೆ ಬಾಧ್ಯರಾಗಲಿದ್ದವರು’ ಪವಿತ್ರಾತ್ಮದಿಂದ ಅಭಿಷಿಕ್ತರಾಗಬೇಕಿತ್ತು. ಹಾಗಾದರೆ ಹೊಸ ಒಡಂಬಡಿಕೆ ಜಾರಿಗೆ ಬಂದದ್ದು ಯಾವಾಗ? ಇಸವಿ 33ರ ಪಂಚಾಶತ್ತಮ ದಿನದಂದು ಯೇಸುವಿನ ಶಿಷ್ಯರು ಪವಿತ್ರಾತ್ಮದಿಂದ ಅಭಿಷಿಕ್ತರಾದಾಗ.
11. (ಎ) ಹೊಸ ಒಡಂಬಡಿಕೆಯಿಂದ ಯೆಹೂದ್ಯರಿಗೂ ಅನ್ಯಜನರಿಗೂ ಯಾವ ಸಮಾನ ಅವಕಾಶ ಸಿಕ್ಕಿತು? (ಬಿ) ಆ ಅವಕಾಶ ಅವರಿಗೆ ಸಿಕ್ಕಿದ್ದು ಹೇಗೆ? (ಸಿ) ಹೊಸ ಒಡಂಬಡಿಕೆಯಲ್ಲಿರುವವರ ಸಂಖ್ಯೆ ಎಷ್ಟು?
11 ಹೊಸ ಒಡಂಬಡಿಕೆ ಕುರಿತು ಯೆಹೋವನು ಯೆರೆಮೀಯನ ಮೂಲಕ ಮುಂತಿಳಿಸಿದ ವಿಷಯದಿಂದ ಧರ್ಮಶಾಸ್ತ್ರದ ಒಡಂಬಡಿಕೆಯ ಅಗತ್ಯ ಇಲ್ಲದೆ ಹೋಗಲಿದೆ ಎಂದು ತಿಳಿದುಬಂತು. ಹೊಸ ಒಡಂಬಡಿಕೆ ಜಾರಿಗೆ ಬಂದ ಬಳಿಕ ಧರ್ಮಶಾಸ್ತ್ರದ ಒಡಂಬಡಿಕೆ ರದ್ದಾಯಿತು. (ಇಬ್ರಿ. 8:13) ಈ ಹೊಸ ಒಡಂಬಡಿಕೆಯಿಂದಾಗಿ ದೇವರ ರಾಜ್ಯದ ರಾಜರಾಗಿ ಆಳಲು ಯೆಹೂದ್ಯರಿಗೂ ಸುನ್ನತಿಯಾಗದ ಅನ್ಯ ಜನಾಂಗದವರಿಗೂ ಸಮಾನ ಅವಕಾಶ ಸಿಕ್ಕಿತು. ಏಕೆಂದರೆ ಅವರ “ಸುನ್ನತಿಯು ಲಿಖಿತ ನಿಯಮಾವಳಿಗೆ ಅನುಸಾರವಾಗಿರದೆ ಪವಿತ್ರಾತ್ಮದ ಮೂಲಕವಾದ ಹೃದಯದ ಸುನ್ನತಿಯಾಗಿದೆ.” (ರೋಮ. 2:29) ದೇವರು ತನ್ನ ನಿಯಮಗಳನ್ನು ಅವರ ಮನಸ್ಸಿನಲ್ಲಿ ಹಾಗೂ ಹೃದಯದಲ್ಲಿ ಹಾಕಿದನು. (ಇಬ್ರಿ. 8:10) ಈ ಹೊಸ ಒಡಂಬಡಿಕೆಯಲ್ಲಿ 1,44,000 ಮಂದಿ ಅಭಿಷಿಕ್ತರು ಇದ್ದಾರೆ. ಈ ಹೊಸ ಜನಾಂಗಕ್ಕೆ ‘ದೇವರ ಇಸ್ರಾಯೇಲ್’ ಅಥವಾ ಆಧ್ಯಾತ್ಮಿಕ ಇಸ್ರಾಯೇಲ್ ಎಂದು ಹೆಸರು.—ಗಲಾ. 6:16; ಪ್ರಕ. 14:1, 4.
12. ಧರ್ಮಶಾಸ್ತ್ರದ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆಯ ಮಧ್ಯೆ ಯಾವ ಸಮಾನತೆಗಳಿವೆ?
12 ಧರ್ಮಶಾಸ್ತ್ರದ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆಯ ಮಧ್ಯೆ ಯಾವ ಸಮಾನತೆಯಿದೆ? ಧರ್ಮಶಾಸ್ತ್ರದ ಒಡಂಬಡಿಕೆಯನ್ನು ಯೆಹೋವನು ಇಸ್ರಾಯೇಲ್ ಜನಾಂಗದೊಂದಿಗೆ ಮಾಡಿದನು. ಹೊಸ ಒಡಂಬಡಿಕೆಯನ್ನು ಯೆಹೋವನು ಆಧ್ಯಾತ್ಮಿಕ ಇಸ್ರಾಯೇಲ್ಯರೊಂದಿಗೆ ಮಾಡಿದನು. ಧರ್ಮಶಾಸ್ತ್ರದ ಒಡಂಬಡಿಕೆಗೆ ಮೋಶೆ ಮಧ್ಯಸ್ಥನಾಗಿದ್ದನು. ಹೊಸ ಒಡಂಬಡಿಕೆಗೆ ಯೇಸು ಮಧ್ಯಸ್ಥನು. ಧರ್ಮಶಾಸ್ತ್ರದ ಒಡಂಬಡಿಕೆಯು ಪ್ರಾಣಿಗಳ ರಕ್ತದ ಆಧಾರದ ಮೇಲೆ ಜಾರಿಗೆ ಬಂತು. ಹೊಸ ಒಡಂಬಡಿಕೆಯು ಯೇಸು ಯಜ್ಞವಾಗಿ ಅರ್ಪಿಸಿದ ರಕ್ತದ ಆಧಾರದ ಮೇಲೆ ಜಾರಿಗೆ ಬಂತು. ಧರ್ಮಶಾಸ್ತ್ರದ ಒಡಂಬಡಿಕೆಯಡಿಯಲ್ಲಿ ಮೋಶೆಯು ಇಸ್ರಾಯೇಲ್ ಜನಾಂಗದ ನಾಯಕನಾಗಿದ್ದನು. ಹೊಸ ಒಡಂಬಡಿಕೆಯಲ್ಲಿರುವವರಿಗೆ ಸಭೆಯ ಶಿರಸ್ಸಾದ ಯೇಸು ನಾಯಕನಾಗಿದ್ದಾನೆ.—ಎಫೆ. 1:22.
13, 14. (ಎ) ಹೊಸ ಒಡಂಬಡಿಕೆಯು ದೇವರ ರಾಜ್ಯಕ್ಕೆ ಹೇಗೆ ಸಂಬಂಧಿಸಿದೆ? (ಬಿ) ಆಧ್ಯಾತ್ಮಿಕ ಇಸ್ರಾಯೇಲ್ ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳಬೇಕಾದರೆ ಏನು ಅಗತ್ಯವಿತ್ತು?
13 ಹೊಸ ಒಡಂಬಡಿಕೆಯು ದೇವರ ರಾಜ್ಯಕ್ಕೆ ಹೇಗೆ ಸಂಬಂಧಿಸಿದೆ? ಈ ಒಡಂಬಡಿಕೆಯಿಂದಾಗಿ ಸ್ವರ್ಗದಲ್ಲಿ ರಾಜರಾಗಿಯೂ ಯಾಜಕರಾಗಿಯೂ ಸೇವೆಸಲ್ಲಿಸುವ ಒಂದು ಪವಿತ್ರ ಜನಾಂಗವನ್ನು ಪಡೆಯಲು ಸಾಧ್ಯವಾಗಿದೆ. ಈ ಪವಿತ್ರ ಜನರು ಅಬ್ರಹಾಮನ ‘ಸಂತತಿಯ’ ಭಾಗವಾಗಿದ್ದಾರೆ. (ಗಲಾ. 3:29) ಹೀಗೆ ಅಬ್ರಹಾಮನೊಂದಿಗೆ ದೇವರು ಮಾಡಿದ ಒಡಂಬಡಿಕೆಯು ಖಂಡಿತ ನೆರವೇರುತ್ತದೆ ಎಂದು ಹೊಸ ಒಡಂಬಡಿಕೆ ದೃಢಪಡಿಸುತ್ತದೆ.
14 ಆಧ್ಯಾತ್ಮಿಕ ಇಸ್ರಾಯೇಲನ್ನು ರಚಿಸಲು ಮತ್ತು ಅವರು ಕ್ರಿಸ್ತನೊಂದಿಗೆ ಜೊತೆ ಬಾಧ್ಯಸ್ಥರಾಗಿ ಆಳಲು ಹೊಸ ಒಡಂಬಡಿಕೆಯು ಅವಕಾಶ ಮಾಡಿಕೊಟ್ಟಿತು. ಆದರೆ ಅಭಿಷಿಕ್ತರು ಯಾಜಕರಾಗಿ ಮತ್ತು ರಾಜರಾಗಿ ಯೇಸುವಿನೊಂದಿಗೆ ಸ್ವರ್ಗದಲ್ಲಿ ಆಳಬೇಕಾದರೆ ಇನ್ನೊಂದು ಒಪ್ಪಂದದ ಅಗತ್ಯವಿತ್ತು.
ಕ್ರಿಸ್ತನೊಂದಿಗೆ ಆಳುವ ಅವಕಾಶ ಕೊಡುವ ಒಡಂಬಡಿಕೆ
15. ಯೇಸು ತನ್ನ ನಂಬಿಗಸ್ತ ಅಪೊಸ್ತಲರೊಂದಿಗೆ ಯಾವ ಒಡಂಬಡಿಕೆಯನ್ನು ಮಾಡಿದನು?
15 ಯೇಸು ಸಂಧ್ಯಾ ಭೋಜನವನ್ನು ಶುರುಮಾಡಿದ ಬಳಿಕ ತನ್ನ ನಂಬಿಗಸ್ತ ಅಪೊಸ್ತಲರೊಂದಿಗೆ ಒಂದು ಒಡಂಬಡಿಕೆ ಮಾಡಿಕೊಂಡನು. ಅದಕ್ಕೆ ರಾಜ್ಯದ ಒಡಂಬಡಿಕೆ ಎಂದು ಹೆಸರು. (ಲೂಕ 22:28-30 ಓದಿ.) ಬೇರೆಲ್ಲ ಒಡಂಬಡಿಕೆಗಳನ್ನು ಯೆಹೋವನು ಮಾಡಿದ್ದನು. ಆದರೆ ರಾಜ್ಯದ ಒಡಂಬಡಿಕೆಯನ್ನು ಯೇಸು ಅಭಿಷಿಕ್ತ ಕ್ರೈಸ್ತರೊಂದಿಗೆ ಮಾಡಿದನು. ಯೆಹೋವನು ಇದರಲ್ಲಿ ಒಳಗೂಡಿಲ್ಲ. ಹಾಗಾದರೆ ಯೇಸು ಅಪೊಸ್ತಲರಿಗೆ, “ನನ್ನ ತಂದೆಯು ನನ್ನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿರುವಂತೆ” ಎಂದು ಹೇಳಿದಾಗ ಯಾವ ಒಡಂಬಡಿಕೆಯ ಕುರಿತು ಮಾತಾಡುತ್ತಿದ್ದನು? ಯೇಸು ‘ಮೆಲ್ಕಿಜೆದೇಕನ ರೀತಿಗನುಸಾರ ಸದಾಕಾಲಕ್ಕೂ ಯಾಜಕನಾಗಿರಲು’ ಯೆಹೋವನು ಅವನೊಂದಿಗೆ ಮಾಡಿದ ಒಡಂಬಡಿಕೆಗೆ ಸೂಚಿಸಿರಬೇಕು.—ಇಬ್ರಿ. 5:5, 6.
16. ರಾಜ್ಯದ ಒಡಂಬಡಿಕೆಯಿಂದಾಗಿ ಏನು ಸಾಧ್ಯವಾಯಿತು?
16 ಯೇಸುವಿನ ಕಷ್ಟದ ಸಮಯಗಳಲ್ಲಿ 11 ಮಂದಿ ನಂಬಿಗಸ್ತ ಅಪೊಸ್ತಲರು ಅವನೊಂದಿಗೆ ಇದ್ದರು. ಆದುದರಿಂದ ಯೇಸು ಅವರೊಂದಿಗೆ ರಾಜ್ಯದ ಒಡಂಬಡಿಕೆ ಮಾಡಿದನು. ಇದು ಆ ಅಪೊಸ್ತಲರು ಸ್ವರ್ಗದಲ್ಲಿ ಯೇಸುವಿನೊಂದಿಗೆ ರಾಜರಾಗಿ ಆಳುವರು ಮತ್ತು ಯಾಜಕರಾಗಿ ಸೇವೆಸಲ್ಲಿಸುವರು ಎಂದು ದೃಢೀಕರಿಸಿತು. ಆದರೆ ಈ 11 ಮಂದಿ ಮಾತ್ರ ರಾಜ್ಯದ ಒಡಂಬಡಿಕೆಯಲ್ಲಿ ಒಳಗೂಡಿದ್ದಾರಾ? ಇಲ್ಲ. ಯೇಸು ಅಪೊಸ್ತಲ ಯೋಹಾನನಿಗೆ ಒಂದು ದರ್ಶನದಲ್ಲಿ ಕಾಣಿಸಿಕೊಂಡು ಹೀಗಂದನು: “ನಾನು ಜಯಹೊಂದಿ ನನ್ನ ತಂದೆಯೊಂದಿಗೆ ಆತನ ಸಿಂಹಾಸನದಲ್ಲಿ ಕುಳಿತುಕೊಂಡಂತೆಯೇ ಜಯಿಸುವವನಿಗೆ ನನ್ನ ಸಿಂಹಾಸನದಲ್ಲಿ ನನ್ನೊಂದಿಗೆ ಕುಳಿತುಕೊಳ್ಳುವಂತೆ ಅನುಗ್ರಹಿಸುವೆನು.” (ಪ್ರಕ. 3:21) ಇದರಿಂದ ರಾಜ್ಯದ ಒಡಂಬಡಿಕೆಯಲ್ಲಿ 1,44,000 ಅಭಿಷಿಕ್ತ ಕ್ರೈಸ್ತರೆಲ್ಲರು ಇದ್ದಾರೆನ್ನುವುದು ಸ್ಪಷ್ಟವಾಗುತ್ತದೆ. (ಪ್ರಕ. 5:9,10;7:4) ರಾಜ್ಯದ ಒಡಂಬಡಿಕೆಯಿಂದಾಗಿ ಈ ಅಭಿಷಿಕ್ತ ಕ್ರೈಸ್ತರಿಗೆ ಯೇಸುವಿನೊಂದಿಗೆ ಸ್ವರ್ಗದಲ್ಲಿ ಆಳುವ ಸದವಕಾಶ ದೊರೆಯಿತು. ರಾಜನನ್ನು ವಿವಾಹವಾಗಲಿರುವ ವಧುವಿಗೆ ಇವರನ್ನು ಹೋಲಿಸಬಹುದು. ಮದುವೆಯಾದ ನಂತರ ಆ ವಧುವಿಗೆ ಹೇಗೆ ರಾಜನ ಜೊತೆ ಆಳುವ ಅಧಿಕಾರ ಇರುತ್ತದೋ ಹಾಗೆಯೇ ಅಭಿಷಿಕ್ತ ಕ್ರೈಸ್ತರಿಗೂ ರಾಜನಾದ ಕ್ರಿಸ್ತನೊಂದಿಗೆ ಆಳುವ ಅಧಿಕಾರ ಇರುತ್ತದೆ. ಹಾಗಾಗಿಯೇ ಬೈಬಲ್ ಅಭಿಷಿಕ್ತರನ್ನು ಕ್ರಿಸ್ತನ “ವಧು” ಮತ್ತು ಕ್ರಿಸ್ತನೊಂದಿಗೆ ವಿವಾಹ ನಿಶ್ಚಯವಾಗಿರುವ “ಶುದ್ಧ ಕನ್ಯೆ” ಆಗಿದ್ದಾರೆ ಎಂದು ಹೇಳುತ್ತದೆ.—ಪ್ರಕ. 19:7, 8; 21:9; 2 ಕೊರಿಂ. 11:2.
ದೇವರ ರಾಜ್ಯದ ಮೇಲೆ ಪೂರ್ಣ ನಂಬಿಕೆ ನಿಮಗಿರಲಿ
17, 18. (ಎ) ದೇವರ ರಾಜ್ಯಕ್ಕೆ ಸಂಬಂಧಿಸಿರುವ ಆರು ಒಡಂಬಡಿಕೆಗಳನ್ನು ತಿಳಿಸಿರಿ. (ಬಿ) ದೇವರ ರಾಜ್ಯದ ಮೇಲೆ ನಾವೇಕೆ ಪೂರ್ಣ ನಂಬಿಕೆ ಇಡಸಾಧ್ಯ?
17 ನಾವು ಈ ಎರಡು ಲೇಖನಗಳಲ್ಲಿ ಕಲಿತ ಎಲ್ಲ ಒಡಂಬಡಿಕೆಗಳು ದೇವರ ರಾಜ್ಯಕ್ಕೆ ಸಂಬಂಧಿಸಿದ ಅನೇಕ ಪ್ರಾಮುಖ್ಯ ಅಂಶಗಳನ್ನು ನಮಗೆ ಸ್ಪಷ್ಟಪಡಿಸಿದವು. (“ದೇವರು ತನ್ನ ಉದ್ದೇಶವನ್ನು ನೆರವೇರಿಸುವ ವಿಧ” ಎಂಬ ಶೀರ್ಷಿಕೆಯ ಚಾರ್ಟ್ ನೋಡಿ.) ದೇವರ ರಾಜ್ಯ ಖಂಡಿತ ಜಯಸಾಧಿಸುತ್ತದೆ ಎನ್ನುವುದಕ್ಕೆ ಆ ಒಡಂಬಡಿಕೆಗಳು ಅಥವಾ ಕರಾರುಗಳು ದೃಢ ಆಧಾರವನ್ನು ಕೊಟ್ಟವು. ಆದುದರಿಂದ ಭೂಮಿ ಮತ್ತು ಮನುಷ್ಯರನ್ನು ಸೃಷ್ಟಿಸಿದ್ದರ ಉದ್ದೇಶವನ್ನು ದೇವರು ಮೆಸ್ಸೀಯ ರಾಜ್ಯದ ಮೂಲಕ ನೆರವೇರಿಸುವನು ಎಂದು ನಾವು ದೃಢ ಭರವಸೆಯಿಂದ ಇರಸಾಧ್ಯವಿದೆ.—ಪ್ರಕ. 11:15.
ಯೆಹೋವನು ಭೂಮಿಯನ್ನು ಸೃಷ್ಟಿಸಿದ್ದರ ಉದ್ದೇಶವನ್ನು ಮೆಸ್ಸೀಯ ರಾಜ್ಯದ ಮೂಲಕ ನೆರವೇರಿಸುವನು (ಪ್ಯಾರ 15-18 ನೋಡಿ)
18 ಮಾನವರೆಲ್ಲರ ಸಮಸ್ಯೆಗಳನ್ನು ಪರಿಹರಿಸಲು ದೇವರ ರಾಜ್ಯದಿಂದ ಮಾತ್ರ ಸಾಧ್ಯ ಮತ್ತು ಅದು ನಮಗೆಲ್ಲರಿಗೆ ಸದಾಕಾಲಕ್ಕೂ ಪ್ರಯೋಜನವನ್ನು ತರಲಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದುದರಿಂದ ದೇವರ ರಾಜ್ಯದ ಕುರಿತು ಇತರರಿಗೆ ಹುರುಪಿನಿಂದ ತಿಳಿಸೋಣ.—ಮತ್ತಾ. 24:14.