ಇಂದಿನ ಬದುಕಿಗೆ ಅಂದಿನ ಬುದ್ಧಿಮಾತು
ಉದಾರವಾಗಿ ಕ್ಷಮಿಸಿ
ಬೈಬಲ್ ತತ್ವ: ‘ಮತ್ತೊಬ್ಬನ ವಿರುದ್ಧ ದೂರುಹೊರಿಸಲು ಕಾರಣವಿದ್ದರೂ ಒಬ್ಬರನ್ನೊಬ್ಬರು ಸಹಿಸಿಕೊಂಡು . . . ಉದಾರವಾಗಿ ಕ್ಷಮಿಸುವವರಾಗಿರಿ. ಯೆಹೋವ ದೇವರು ನಿಮ್ಮನ್ನು ಉದಾರವಾಗಿ ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.’—ಕೊಲೊಸ್ಸೆ 3:13.
ಈ ಮಾತುಗಳ ಅರ್ಥವೇನು? ಬೈಬಲಿನಲ್ಲಿ ತಪ್ಪು ಮಾಡೋದನ್ನು ಸಾಲಕ್ಕೆ, ಕ್ಷಮಿಸೋದನ್ನು ಸಾಲ ಬಿಟ್ಟುಬಿಡುವುದಕ್ಕೆ ಹೋಲಿಸಲಾಗಿದೆ. (ಮತ್ತಾಯ 18:21-35) ಬೈಬಲಿನಲ್ಲಿರುವ “ಕ್ಷಮಿಸು” ಎಂಬ ಪದಕ್ಕೆ ಗ್ರೀಕ್ ಭಾಷೆಯಲ್ಲಿ “ಸಾಲವನ್ನು ಬಿಟ್ಟುಬಿಡುವುದು, ಅದನ್ನು ಮತ್ತೆ ಕೇಳದೆ ಇರುವುದು” ಎಂಬ ಅರ್ಥವಿದೆ. ಯಾರಾದರೂ ನಮಗೆ ನೋವು ಮಾಡಿದಾಗ ಅವರ ತಪ್ಪನ್ನು ಕ್ಷಮಿಸುವ ಮೂಲಕ ಆ ಸಾಲವನ್ನು ನಾವು ಬಿಟ್ಟುಬಿಡುತ್ತೇವೆ. ಆ ವಿಷಯವನ್ನು ಮತ್ತೆ ಮತ್ತೆ ಕೆದಕುವುದಿಲ್ಲ. ನಾವು ಕ್ಷಮಿಸುತ್ತೇವೆ ಅಂದ ಮಾತ್ರಕ್ಕೆ ಬೇರೆಯವರು ಮಾಡಿದ ತಪ್ಪು ಅಷ್ಟೇನೂ ದೊಡ್ಡದ್ದಲ್ಲ ಅಂತಾನೋ ಅಥವಾ ಅವರು ನಮಗೆ ಎಷ್ಟೇ ನೋವು ಮಾಡಿದರೂ ಅದನ್ನು ಸಹಿಸಿಕೊಳ್ಳುತ್ತೇವೆ ಅಂತಾನೋ ಅಲ್ಲ. ಬದಲಿಗೆ ಅವರ ಮೇಲೆ ಕೋಪ ಮಾಡಿಕೊಳ್ಳದೆ, ದ್ವೇಷ ಸಾಧಿಸದೆ, “ದೂರುಹೊರಿಸಲು ಕಾರಣವಿದ್ದರೂ” ಅದನ್ನು ಬಿಟ್ಟುಬಿಡುತ್ತೇವೆ.
ಹೀಗೆ ಮಾಡುವುದು ನಮ್ಮ ಕಾಲಕ್ಕೆ ಸೂಕ್ತನಾ? ಮನುಷ್ಯರೆಲ್ಲರೂ ಸಹಜವಾಗಿ ತಪ್ಪು ಮಾಡುತ್ತಾರೆ. ಆದ್ದರಿಂದ ಬೈಬಲ್ ನಮ್ಮೆಲ್ಲರನ್ನು ಪಾಪಿಗಳು ಎಂದು ಕರೆಯುತ್ತದೆ. (ರೋಮನ್ನರಿಗೆ 3:23) ಹಾಗಾಗಿ ನಾವು ಬೇರೆಯವರನ್ನು ಕ್ಷಮಿಸಿದರೆ ನಾವು ತಪ್ಪು ಮಾಡಿದಾಗ ಬೇರೆಯವರೂ ನಮ್ಮನ್ನು ಕ್ಷಮಿಸುತ್ತಾರೆ. ಅದಲ್ಲದೆ, ನಾವು ಬೇರೆಯವರ ತಪ್ಪುಗಳನ್ನು ಕ್ಷಮಿಸುವುದರಿಂದ ನಮಗೆ ತುಂಬಾ ಪ್ರಯೋಜನಗಳಿವೆ. ಅವು ಯಾವುವು? ಮುಂದೆ ನೋಡಿ.
ಒಂದುವೇಳೆ ನಾವು ಬೇರೆಯವರ ತಪ್ಪನ್ನು ಕ್ಷಮಿಸದೇ ಅದನ್ನು ಮನಸ್ಸಿನಲ್ಲೇ ಇಟ್ಟುಕೊಂಡಿದ್ದರೆ, ಮನಸ್ಸು ಭಾರವಾಗಿ ತುಂಬಾ ಬೇಸರವಾಗುತ್ತದೆ. ನಾವು ಹೀಗಿದ್ದರೆ ಸಂತೋಷವಾಗಿ ಇರಲು ಸಾಧ್ಯವಿಲ್ಲ, ಯಾವ ಕೆಲಸ ಮಾಡಲೂ ಮನಸ್ಸಿರುವುದಿಲ್ಲ. ಜೀವನವೇ ಸಾಕಾಗಿ ಹೋಗುತ್ತದೆ. ಅದರ ಬಗ್ಗೆಯೇ ಯೋಚನೆ ಮಾಡುತ್ತಾ ಇದ್ದರೆ ನಮ್ಮ ಆರೋಗ್ಯ ಹಾಳಾಗುತ್ತದೆ. ದಿ ಜರ್ನಲ್ ಆಫ್ ದಿ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಎಂಬ ಪುಸ್ತಕದಲ್ಲಿ ಡಾಕ್ಟರ್ ಯೋಯೀಚೀ ಚೀಡಾ ಮತ್ತು ಮನಶಾಸ್ತ್ರದ ಪ್ರೊಫೆಸರ್ ಆ್ಯಂಡ್ರ್ಯೂ ಸ್ಟೆಪ್ಟೋರವರು ತಿಳಿಸಿರುವ ಪ್ರಕಾರ, “ಕೋಪ ಮತ್ತು ದ್ವೇಷದಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುವ ಸಾಧ್ಯತೆ ಇದೆ.”
ಕ್ಷಮಿಸುವುದರಿಂದ ಅನೇಕ ಪ್ರಯೋಜನಗಳಿವೆ. ನಾವು ಉದಾರವಾಗಿ ಕ್ಷಮಿಸುವುದಾದರೆ ನಮ್ಮಲ್ಲಿ ಶಾಂತಿ-ಸಮಾಧಾನ ಇರುತ್ತದೆ. ಅಲ್ಲದೆ, ಇತರರೊಂದಿಗಿನ ನಮ್ಮ ಸಂಬಂಧ ಚೆನ್ನಾಗಿರುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಕ್ಷಮಿಸುವ ಮೂಲಕ ನಾವು ದೇವರನ್ನು ಅನುಕರಿಸುತ್ತೇವೆ. ಯಾಕೆಂದರೆ ದೇವರು ಕ್ಷಮಿಸುವುದರಲ್ಲಿ ಉದಾರಿ. ಆತನ ಮಕ್ಕಳಾದ ನಾವು ಕೂಡ ಆತನಂತೆ ಕ್ಷಮಿಸಬೇಕೆಂದು ಆತನು ಬಯಸುತ್ತಾನೆ.—ಮಾರ್ಕ 11:25; ಎಫೆಸ 4:32; 5:1. (w15-E 10/01)