ಮುಖಪುಟ ಲೇಖನ | ಸಾವಿನ ನೋವಿಗೆ ಸಾಂತ್ವನದ ಮದ್ದು
ದುಃಖಪಡುವುದು ತಪ್ಪಾ?
ನಮ್ಮೆಲ್ಲರಿಗೂ ಕಾಯಿಲೆನೋ ಅಥವಾ ಯಾವುದಾದರೂ ಗಾಯಾನೋ ಆದಾಗ ತುಂಬಾ ನೋವಾಗುತ್ತೆ. ಆ ಕಾಯಿಲೆ ಅಥವಾ ಗಾಯ ವಾಸಿಯಾದ ಮೇಲೆ ನಮಗಿದ್ದ ನೋವು, ದುಃಖವನ್ನು ನಾವು ಮರೆತುಹೋಗುತ್ತೇವೆ. ಆದರೆ ನಮ್ಮ ಆಪ್ತರೊಬ್ಬರು ಸತ್ತಾಗ ನಮಗಾಗುತ್ತಲ್ಲಾ ಆ ದುಃಖ ಅಥವಾ ನೋವು ಅದು ಸ್ವಲ್ಪದಿನ ಇದ್ದು ವಾಸಿಯಾಗುವಂಥದ್ದಲ್ಲ. ಅದಕ್ಕಾಗಿಯೇ ಹೀಲಿಂಗ್ ಎ ಸ್ಪೌಸಸ್ ಗ್ರೀವಿಂಗ್ ಹಾರ್ಟ್ ಎಂಬ ಪುಸ್ತಕದಲ್ಲಿ ಡಾಕ್ಟರ್ ಆಲೆನ್ ವಾಲ್‌ಫೆಲ್ಟ್ “ಸಾವು ತರುವ ನೋವಿಗೆ ಕೊನೆಯೇ ಇಲ್ಲ” ಅಂತ ಹೇಳಿದ್ದಾರೆ. ಆದರೂ ಅವರು ಆ ಪುಸ್ತಕದಲ್ಲಿ ಹೇಳಿದ್ದು, “ಸಮಯ ಕಳೆದಂತೆ ಬೇರೆಯವರ ಸಹಾಯದಿಂದ ಆ ನೋವಿನ ಭಾರ ಕಡಿಮೆ ಆಗುತ್ತೆ.”
ಸಾವಿನ ನೋವು ಸಹಜ ಎಂದು ಬೈಬಲಿನ ಕೆಲವು ಉದಾಹರಣೆಗಳು ತಿಳಿಸುತ್ತವೆ. ಅಬ್ರಹಾಮ ತನ್ನ ಹೆಂಡತಿ ಸತ್ತಾಗ “ಆಕೆಯ ನಿಮಿತ್ತ ಗೋಳಾಡಿ ಕಣ್ಣೀರುಸುರಿಸಲು ಆರಂಭಿಸಿದನು.” ಇಲ್ಲಿ “ಆರಂಭಿಸಿದನು” ಅಂದಾಗ ತನ್ನ ಹೆಂಡತಿಯನ್ನು ಕಳೆದುಕೊಂಡ ನೋವು ಅವನಿಗೆ ತುಂಬ ಸಮಯದವರೆಗೆ ಇತ್ತು ಎಂದು ಗೊತ್ತಾಗುತ್ತದೆ.a ಮತ್ತೊಂದು ಉದಾಹರಣೆ ಯಾಕೋಬನದ್ದು. ತನ್ನ ಮಗನಾದ ಯೋಸೇಫನನ್ನು ಯಾವುದೋ ಕ್ರೂರ ಪ್ರಾಣಿ ತಿಂದಿರಬೇಕೆಂದು ಅವನು ನಂಬಿ “ಬಹುದಿನಗಳವರೆಗೂ” ದುಃಖಿಸಿದನು. ಕುಟುಂಬದವರು ಅವನಿಗೆ ಎಷ್ಟೇ ಸಮಾಧಾನ ಮಾಡಿದರೂ, ವರ್ಷಗಳು ಉರುಳಿದರೂ ಆತ ಶೋಕಿಸುತ್ತಲೇ ಇದ್ದನು.—ಆದಿಕಾಂಡ 23:2, ನೂತನ ಲೋಕ ಭಾಷಾಂತರ; 37:34, 35; 42:36; 45:28.
ತನ್ನ ಪ್ರೀತಿಯ ಹೆಂಡತಿ ಸಾರ ಸತ್ತಾಗ ಅಬ್ರಹಾಮ ತುಂಬಾ ದುಃಖಪಟ್ಟನು
ಇದು ಇಂದಿಗೂ ಸತ್ಯ. ನಮ್ಮ ಆಪ್ತರು ಸತ್ತಾಗ ನಮಗೆ ತುಂಬಾ ನೋವಾಗುತ್ತೆ. ಈ ಎರಡು ಉದಾಹರಣೆಗಳನ್ನು ನೋಡಿ.
“ಆ ದಿನನಾ ನಾನು ಇನ್ನೂ ಮರೆತಿಲ್ಲ. ಅದು ಜುಲೈ 9, 2008. ಪ್ರತಿದಿನದಂತೆ ನನ್ನ ಗಂಡ ರಾಬರ್ಟ್ ಬೆಳಿಗ್ಗೆ ತಿಂಡಿ ತಿಂದು ಕೆಲಸಕ್ಕೆ ಸಿದ್ಧರಾಗಿದ್ದರು. ಹೋಗೋ ಮುಂಚೆ ನನ್ನನ್ನ ಅಪ್ಪಿಕೊಂಡು ಮುತ್ತು ಕೊಟ್ಟು, ‘ಐ ಲವ್ ಯೂ’ ಅಂತ ಹೇಳಿ ಹೋದರು ಅಷ್ಟೇ. ಮನೆಗೆ ವಾಪಸ್ಸು ಬರಲೇ ಇಲ್ಲ. ಅವರು ತೀರಿ ಹೋಗಿ ಆರು ವರ್ಷ ಆದರೂ ಆ ನೋವು ಸ್ವಲ್ಪನೂ ಕಮ್ಮಿಯಾಗಿಲ್ಲ. ಮುಂದೆ ಯಾವತ್ತೂ ಕಮ್ಮಿಯಾಗೋದೂ ಇಲ್ಲ.”—ಗಾಲ್, 60 ವರ್ಷ.
“ನಾನು ನನ್ನ ಪ್ರೀತಿಯ ಹೆಂಡತಿಯನ್ನ ಕಳೆದುಕೊಂಡು 18 ವರ್ಷಗಳಾಗಿವೆ. ಆದರೆ ಆ ದುಃಖ ಮಾತ್ರ ಸ್ವಲ್ಪನೂ ಕಡಿಮೆ ಆಗಿಲ್ಲ. ಯಾವಾಗೆಲ್ಲಾ ನಾನು ಸುಂದರ ಪ್ರಕೃತಿಯ ದೃಶ್ಯಗಳನ್ನು ನೋಡುತ್ತೇನೋ ಆಗೆಲ್ಲಾ ಆಕೆ ನೆನಪಾಗುತ್ತಾಳೆ. ಅವಳು ನನ್ನ ಜೊತೆ ಇದ್ದಿದ್ದರೆ ಇದನ್ನೆಲ್ಲಾ ನೋಡಿ ಎಷ್ಟು ಖುಷಿ ಪಡುತ್ತಿದ್ದಳೋ ಅಂತ ಅನಿಸುತ್ತೆ.”—ಅಟಿಯೆನ್, 84 ವರ್ಷ.
ಈ ರೀತಿಯ ನೋವು, ಭಾವನೆಗಳು ಸಹಜ. ಪ್ರತಿಯೊಬ್ಬನು ತನ್ನ ದುಃಖ, ನೋವನ್ನು ಒಂದೊಂದು ರೀತಿಯಲ್ಲಿ ತೋರಿಸುತ್ತಾನೆ. ಅದರಲ್ಲಿ ತಪ್ಪು ಹುಡುಕುವುದು ಸರಿಯಲ್ಲ. ಅದೇ ಸಮಯದಲ್ಲಿ ನಾವು ನಮ್ಮ ದುಃಖವನ್ನ ಅತಿಯಾಗಿ ತೋರಿಸುತ್ತಿದ್ದೇವೆ ಅಂತ ಬೇಜಾರು ಪಡುವ ಅವಶ್ಯಕತೆಯೂ ಇಲ್ಲ. ಇಂಥ ದುಃಖದಿಂದ ನಾವು ಹೊರಗೆ ಬರುವುದಾದರೂ ಹೇಗೆ? ಮುಂದಿನ ಲೇಖನ ಓದಿ. (w16-E No. 3)
a ಅಬ್ರಹಾಮನ ಮಗನಾದ ಇಸಾಕ ಸಹ ತನ್ನ ತಾಯಿಯ ಅಗಲುವಿಕೆಯ ನೋವನ್ನು ಉಂಡನು. ತನ್ನ ತಾಯಿ ಸಾರ ಸತ್ತು ಮೂರು ವರ್ಷವಾದರೂ ಅವನ ದುಃಖ ಕಡಿಮೆಯಾಗಿರಲಿಲ್ಲ.—ಆದಿಕಾಂಡ 24:67.