ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w16 ಮಾರ್ಚ್‌ ಪು. 13-17
  • ನಮ್ಮ ಕ್ರೈಸ್ತ ಒಗ್ಗಟ್ಟನ್ನು ಬಲಪಡಿಸೋಣ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ಕ್ರೈಸ್ತ ಒಗ್ಗಟ್ಟನ್ನು ಬಲಪಡಿಸೋಣ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸಾರುವ ಕೆಲಸದಲ್ಲಿ ಸಹಕರಿಸಿ
  • ಸಭೆಯಲ್ಲಿ ಸಹಕರಿಸಿ
  • ಕುಟುಂಬದಲ್ಲಿ ಸಹಕರಿಸಿ
  • ‘ಯೆಹೋವನ ಪರ್ವತಕ್ಕೆ ಹೋಗೋಣ!’
  • ದೇವರನ್ನು ಮಹಿಮೆಪಡಿಸುವ ಕ್ರೈಸ್ತ ಏಕತೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಈ ಹಳೇ ಲೋಕದ ಅಂತ್ಯವನ್ನು ಜೊತೆಜೊತೆಯಾಗಿ ಎದುರಿಸೋಣ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಐಕ್ಯಭಾವದಿಂದ ಜೋಡಿಸಲ್ಪಟ್ಟವರಾಗಿರ್ರಿ
    2002 ನಮ್ಮ ರಾಜ್ಯದ ಸೇವೆ
  • ಯೆಹೋವನ ಕುಟುಂಬವು ಅಮೂಲ್ಯವಾದ ಐಕ್ಯವನ್ನು ಅನುಭವಿಸುತ್ತದೆ
    ಕಾವಲಿನಬುರುಜು—1996
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
w16 ಮಾರ್ಚ್‌ ಪು. 13-17
ಯೆಹೋವನ ಸಾಕ್ಷಿಗಳ ಸಭೆಯೊಂದರಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸಮಾಡುತ್ತಿದ್ದಾರೆ

ನಮ್ಮ ಕ್ರೈಸ್ತ ಒಗ್ಗಟ್ಟನ್ನು ಬಲಪಡಿಸೋಣ

“ಅವನಿಂದ ಇಡೀ ದೇಹವು . . . ಹೊಂದಿಕೆಯಿಂದ ಒಟ್ಟಿಗೆ ಜೋಡಿಸಲ್ಪಟ್ಟು ಸಹಕರಿಸುವಂತೆ ಮಾಡಲ್ಪಟ್ಟಿದೆ.”—ಎಫೆ. 4:16.

ಗೀತೆಗಳು: 53, 107

ನಿಮ್ಮ ಉತ್ತರವೇನು?

  • ಸಾರುವ ಕೆಲಸವನ್ನು ನಾವು ಹೇಗೆ ಒಗ್ಗಟ್ಟಿನಿಂದ ಮಾಡುತ್ತಿದ್ದೇವೆ?

  • ಸಭೆಯಲ್ಲಿ ಒಗ್ಗಟ್ಟು ಇರಲು ನಾವು ಏನೇನು ಮಾಡಬಹುದು?

  • ಗಂಡ ಹೆಂಡತಿ ಹೇಗೆ ಒಗ್ಗಟ್ಟಿನಿಂದ ಇರಬಹುದು?

1. ಆರಂಭದಿಂದಲೂ ದೇವರ ಕೆಲಸಗಳಲ್ಲಿದ್ದ ಒಂದು ವಿಶೇಷತೆ ಏನು?

ಯೆಹೋವ ಮತ್ತು ಯೇಸು ಸೃಷ್ಟಿಯ ಆರಂಭದಿಂದಲೂ ಒಗ್ಗಟ್ಟಿನಿಂದ ಇದ್ದಾರೆ. ಯೆಹೋವನು ಯೇಸುವನ್ನು ಬೇರೆ ಎಲ್ಲದ್ದಕ್ಕಿಂತ ಮೊದಲು ಸೃಷ್ಟಿಸಿದನು. ಯೇಸು “ಆತನ ಹತ್ತಿರ ಶಿಲ್ಪಿಯಾಗಿದ್ದುಕೊಂಡು” ಜೊತೆಯಲ್ಲೇ ಕೆಲಸಮಾಡಿದನು. (ಜ್ಞಾನೋ. 8:30) ಯೆಹೋವನ ಸೇವಕರು ಸಹ ತಮಗೆ ಕೊಡಲಾದ ಕೆಲಸ ಮಾಡುವಾಗ ಒಬ್ಬರು ಇನ್ನೊಬ್ಬರೊಂದಿಗೆ ಸಹಕರಿಸಿದರು. ಉದಾಹರಣೆಗೆ, ನೋಹ ಮತ್ತು ಅವನ ಕುಟುಂಬ ಜೊತೆಯಾಗಿ ನಾವೆಯನ್ನು ಕಟ್ಟಿದರು. ಅನಂತರ ಇಸ್ರಾಯೇಲ್ಯರು ದೇವದರ್ಶನದ ಗುಡಾರವನ್ನು ಕಟ್ಟುವಾಗ, ಅದನ್ನು ಬಿಡಿಬಿಡಿಯಾಗಿ ಬಿಚ್ಚುವಾಗ ಮತ್ತು ಬೇರೆ ಕಡೆಗಳಿಗೆ ಒಯ್ಯುವಾಗ ಜೊತೆಗೂಡಿ ಕೆಲಸಮಾಡಿದರು. ದೇವಾಲಯದಲ್ಲಿ ಯೆಹೋವನನ್ನು ಸ್ತುತಿಸಲು ಸುಮಧುರ ಗೀತೆಗಳನ್ನು ಒಟ್ಟಿಗೆ ಹಾಡಿದರು ಮತ್ತು ಸಂಗೀತ ವಾದ್ಯಗಳನ್ನು ಜೊತೆಯಾಗಿ ನುಡಿಸಿದರು. ಯೆಹೋವನ ಜನರು ಇವೆಲ್ಲವನ್ನೂ ಮಾಡಲು ಸಾಧ್ಯವಾದದ್ದು ಅವರ ಮಧ್ಯೆ ಇದ್ದ ಸಹಕಾರದಿಂದಲೇ.—ಆದಿ. 6:14-16, 22; ಅರ. 4:4-32; 1 ಪೂರ್ವ. 25:1-8.

2. (ಎ) ಆರಂಭದ ಕ್ರೈಸ್ತ ಸಭೆಯಲ್ಲಿ ಯಾವುದು ಪ್ರಮುಖವಾಗಿ ಎದ್ದುಕಾಣುತ್ತಿತ್ತು? (ಬಿ) ಯಾವ ಪ್ರಶ್ನೆಗಳ ಬಗ್ಗೆ ಚರ್ಚಿಸಲಿದ್ದೇವೆ?

2 ಒಂದನೇ ಶತಮಾನದ ಕ್ರೈಸ್ತರು ಸಹ ಒಬ್ಬರೊಂದಿಗೆ ಒಬ್ಬರು ಸಹಕರಿಸಿ ಕೆಲಸಮಾಡಿದರು. ಅಪೊಸ್ತಲ ಪೌಲ ಅವರನ್ನು ಒಂದು ದೇಹಕ್ಕೆ ಹೋಲಿಸಿದನು. ದೇಹದಲ್ಲಿ ಬೇರೆ ಬೇರೆ ಅಂಗಗಳಿದ್ದರೂ ಅವು ಒಟ್ಟಿಗೆ ಕೆಲಸ ಮಾಡುತ್ತವೆ. ಅದೇ ರೀತಿ ಆ ಕ್ರೈಸ್ತರಿಗೆ ವಿವಿಧ ಸಾಮರ್ಥ್ಯಗಳು, ನೇಮಕಗಳು ಇದ್ದರೂ ಅವರು ಒಗ್ಗಟ್ಟಿನಿಂದ ಕೆಲಸ ಮಾಡಿದರು ಮತ್ತು ತಮ್ಮ ನಾಯಕನಾದ ಯೇಸು ಕ್ರಿಸ್ತನನ್ನು ಅನುಕರಿಸಿದರೆಂದು ಪೌಲ ವಿವರಿಸಿದನು. (1 ಕೊರಿಂಥ 12:4-6, 12 ಓದಿ.) ಆದರೆ ಇಂದು ನಮ್ಮ ಕುರಿತೇನು? ನಾವು ಸಾರುವ ಕೆಲಸದಲ್ಲಿ, ಸಭೆಯಲ್ಲಿ, ಕುಟುಂಬದಲ್ಲಿ ಒಬ್ಬರು ಇನ್ನೊಬ್ಬರೊಂದಿಗೆ ಹೇಗೆ ಸಹಕರಿಸಿ ಕೆಲಸಮಾಡಬಹುದು?

ಸಾರುವ ಕೆಲಸದಲ್ಲಿ ಸಹಕರಿಸಿ

3. ಅಪೊಸ್ತಲ ಯೋಹಾನನು ಯಾವ ದರ್ಶನವನ್ನು ಕಂಡನು?

3 ಒಂದನೇ ಶತಮಾನದಲ್ಲಿ ಅಪೊಸ್ತಲ ಯೋಹಾನನು ಒಂದು ದರ್ಶನವನ್ನು ಕಂಡನು. ಅದರಲ್ಲಿ ಏಳು ದೇವದೂತರು ತುತೂರಿಗಳನ್ನು ಊದುತ್ತಿದ್ದರು. ಐದನೇ ದೇವದೂತನು ತುತೂರಿಯನ್ನು ಊದಿದಾಗ ಆಕಾಶದಿಂದ ಒಂದು ನಕ್ಷತ್ರವು ಭೂಮಿಗೆ ಬಿತ್ತು. ಆ ನಕ್ಷತ್ರವು ತನಗೆ ಕೊಡಲಾದ ಬೀಗದಕೈಯಿಂದ ಆಳವಾದ ಕತ್ತಲಿನ ಕೂಪದ ಬಾಗಿಲನ್ನು ತೆರೆಯಿತು. ಮೊದಲು ದಟ್ಟ ಹೊಗೆ ಹೊರಗೆ ಬಂತು. ನಂತರ ಆ ಹೊಗೆಯೊಳಗಿಂದ ಮಿಡತೆಗಳ ದಂಡು ಬಂತು. ಆ ಮಿಡತೆಗಳು ಮರಗಳನ್ನಾಗಲಿ ಸಸ್ಯಗಳನ್ನಾಗಲಿ ಕೆಡಿಸಲಿಲ್ಲ. ಬದಲಾಗಿ ‘ಹಣೆಗಳ ಮೇಲೆ ದೇವರ ಮುದ್ರೆಯಿಲ್ಲದ ಮನುಷ್ಯರ’ ಮೇಲೆರಗಿ ಕೇಡುಮಾಡಿದವು. (ಪ್ರಕ. 9:1-4) ಮಿಡತೆಗಳ ದಂಡು ಅಪಾರ ಹಾನಿಮಾಡಬಲ್ಲವೆಂದು ಯೋಹಾನನಿಗೆ ತಿಳಿದಿತ್ತು. ಏಕೆಂದರೆ ಮೋಶೆಯ ಕಾಲದಲ್ಲಿ ಅವು ಐಗುಪ್ತದಲ್ಲಿ ತುಂಬ ಹಾನಿ ಮಾಡಿದ್ದವು. (ವಿಮೋ. 10:12-15) ಯೋಹಾನನು ಕಂಡ ಆ ಮಿಡತೆಗಳು ಅಭಿಷಿಕ್ತ ಕ್ರೈಸ್ತರನ್ನು ಸೂಚಿಸುತ್ತವೆ. ಏಕೆಂದರೆ ಅವರು ಇಂದು ಸುಳ್ಳು ಧರ್ಮದ ವಿರುದ್ಧ ಪ್ರಬಲ ಸಂದೇಶವನ್ನು ಸಾರುತ್ತಿದ್ದಾರೆ. ಭೂಮಿಯ ಮೇಲೆ ಜೀವಿಸಲಿಕ್ಕಾಗಿ ಮುನ್ನೋಡುತ್ತಿರುವ ಇತರ ಲಕ್ಷಾಂತರ ಜನರು ಅಭಿಷಿಕ್ತರ ಜೊತೆಯಲ್ಲಿ ಸಾರುತ್ತಿದ್ದಾರೆ. ಈ ಎರಡೂ ಗುಂಪು ಒಗ್ಗಟ್ಟಿನಿಂದ ಸಾರುವ ಕೆಲಸವನ್ನು ಮಾಡುತ್ತಿದೆ. ಈ ಕೆಲಸದಿಂದಾಗಿ ಅನೇಕ ಜನರು ಸುಳ್ಳು ಧರ್ಮವನ್ನು ಬಿಟ್ಟುಬಂದು ಸೈತಾನನ ಹಿಡಿತದಿಂದ ಬಿಡುಗಡೆ ಪಡೆಯಲು ಸಹಾಯವಾಗಿದೆ.

4. (ಎ) ಇಂದು ನಮಗೆ ಯಾವ ಕೆಲಸ ಮಾಡಲಿಕ್ಕಿದೆ? (ಬಿ) ಯಾವಾಗ ಮಾತ್ರ ಈ ಕೆಲಸದಲ್ಲಿ ಯಶಸ್ಸು ಪಡೆಯುವೆವು?

4 ಅಂತ್ಯ ಬರುವುದಕ್ಕೆ ಮುಂಚೆ ಇಡೀ ಭೂಮಿಯ ಜನರಿಗೆ “ಸುವಾರ್ತೆ” ಸಾರುವ ನೇಮಕವು ನಮಗಿದೆ. ಇದು ಬಹು ದೊಡ್ಡ ಕೆಲಸ! (ಮತ್ತಾ. 24:14; 28:19, 20) ‘ಜೀವಜಲಕ್ಕಾಗಿ ಬಾಯಾರುತ್ತಿರುವ’ ಎಲ್ಲರನ್ನು ಆಮಂತ್ರಿಸಬೇಕು ಅಂದರೆ ಬೈಬಲ್‌ ಸತ್ಯವನ್ನು ಅರ್ಥಮಾಡಿಕೊಳ್ಳಲು ಬಯಸುವ ಎಲ್ಲರಿಗೆ ಅದನ್ನು ಕಲಿಸಬೇಕು. (ಪ್ರಕ. 22:17) ನಾವು “ಹೊಂದಿಕೆಯಿಂದ ಒಟ್ಟಿಗೆ ಜೋಡಿಸಲ್ಪಟ್ಟು” ಸಭೆಯಲ್ಲಿ ಒಬ್ಬರು ಇನ್ನೊಬ್ಬರೊಂದಿಗೆ ಸಹಕರಿಸಿದರೆ ಮಾತ್ರ ಈ ಕೆಲಸದಲ್ಲಿ ನಮಗೆ ಯಶಸ್ಸು ಸಿಗುವುದು.—ಎಫೆ. 4:16.

5, 6. ಸಾರುವ ಕೆಲಸವನ್ನು ನಾವು ಹೇಗೆ ಒಗ್ಗಟ್ಟಿನಿಂದ ಮಾಡುತ್ತಿದ್ದೇವೆ?

5 ಆದಷ್ಟು ಹೆಚ್ಚು ಜನರಿಗೆ ಸುವಾರ್ತೆ ತಿಳಿಸಬೇಕಾದರೆ ನಾವು ಸಾರುವ ಕೆಲಸವನ್ನು ವ್ಯವಸ್ಥಿತ ರೀತಿಯಲ್ಲಿ ಮಾಡಬೇಕು. ಇದನ್ನೇ ಮಾಡಲು ನಮ್ಮ ಸಭೆಯಲ್ಲಿ, ಉದಾಹರಣೆಗೆ ಕ್ಷೇತ್ರ ಸೇವಾ ಕೂಟಗಳಲ್ಲಿ ಸಿಗುವ ಸೂಚನೆಗಳು ಸಹಾಯಮಾಡುತ್ತವೆ. ನಾವು ಜಗತ್ತಿನಾದ್ಯಂತ ಜನರಿಗೆ ಸುವಾರ್ತೆ ಸಾರುತ್ತಾ ಅವರಿಗೆ ಬೈಬಲ್‌ ಸಾಹಿತ್ಯ ನೀಡುತ್ತೇವೆ. ಭೂಮಿಯ ಎಲ್ಲೆಡೆ ಈಗಾಗಲೇ ಲಕ್ಷಾಂತರ ಸಾಹಿತ್ಯವನ್ನು ನೀಡಿದ್ದೇವೆ. ಕೆಲವು ಸಲ ಸಾರುವ ವಿಶೇಷ ಅಭಿಯಾನಗಳಲ್ಲೂ ಭಾಗವಹಿಸುತ್ತೇವೆ. ಇದನ್ನು ಮಾಡುವಾಗ ಭೂಮಿಯಾದ್ಯಂತ ಇದೇ ಸಂದೇಶವನ್ನು ಸಾರುತ್ತಿರುವ ಲಕ್ಷಾಂತರ ಸಹೋದರರೊಂದಿಗೆ ಒಗ್ಗಟ್ಟಿನಿಂದ ಕೆಲಸಮಾಡುತ್ತೇವೆ. ಅಷ್ಟುಮಾತ್ರವಲ್ಲ ನಾವು ದೇವದೂತರೊಂದಿಗೂ ಕೆಲಸಮಾಡುತ್ತಿದ್ದೇವೆ! ಸುವಾರ್ತೆ ಸಾರಲು ಅವರು ನಮಗೆ ನೆರವಾಗುತ್ತಿದ್ದಾರೆ.—ಪ್ರಕ. 14:6.

6 ಭೂಮಿಯಾದ್ಯಂತ ನಡೆಯುತ್ತಿರುವ ನಮ್ಮ ಈ ಸಾರುವ ಕೆಲಸದ ಫಲಿತಾಂಶಗಳನ್ನು ಯಿಯರ್‌ ಬುಕ್‌ನಲ್ಲಿ ಓದುವುದು ನಮಗೆ ನಿಜಕ್ಕೂ ಚೈತನ್ಯ ತರುತ್ತದೆ. ಇಡೀ ಭೂಮಿಯಲ್ಲಿ ನಾವು ಜನರನ್ನು ನಮ್ಮ ಅಧಿವೇಶನಗಳಿಗೆ ಆಮಂತ್ರಿಸುವಾಗ ಸಹ ನಾವು ಹೇಗೆ ಒಗ್ಗಟ್ಟಾಗಿದ್ದೇವೆಂದು ಯೋಚಿಸಿ. ಅಧಿವೇಶನಗಳಲ್ಲಿ ನಮಗೆಲ್ಲರಿಗೆ ಸಿಗುವ ಮಾಹಿತಿ ಒಂದೇ ರೀತಿಯದ್ದು. ಯೆಹೋವನ ಸೇವೆಯನ್ನು ನಮ್ಮಿಂದ ಆದಷ್ಟು ಉತ್ತಮವಾಗಿ ಮಾಡುವಂತೆ ಭಾಷಣಗಳು, ನಾಟಕಗಳು ಮತ್ತು ಅಭಿನಯಗಳು ಉತ್ತೇಜಿಸುತ್ತವೆ. ಪ್ರತಿ ವರ್ಷ ಕ್ರಿಸ್ತನ ಮರಣದ ಸ್ಮರಣೆಗೆ ಹಾಜರಾಗುವಾಗಲೂ ಲೋಕದ ಎಲ್ಲೆಡೆಯಿರುವ ಸಹೋದರ ಸಹೋದರಿಯರೊಂದಿಗೆ ಐಕ್ಯವಾಗಿರುತ್ತೇವೆ. (1 ಕೊರಿಂ. 11:23-26) ಹೇಗೆ? ಆ ಸ್ಮರಣೆಗಾಗಿ ನಾವೆಲ್ಲರೂ ಇಡೀ ಲೋಕದಲ್ಲಿ ಒಂದೇ ತಾರೀಖಿನಂದು ಅಂದರೆ ನೈಸಾನ್‌ 14⁠ರಂದು ಸೂರ್ಯಾಸ್ತಮಾನದ ನಂತರ ಕೂಡಿಬರುತ್ತೇವೆ. ಹೀಗೆ, ಯೆಹೋವನು ನಮಗೋಸ್ಕರ ಮಾಡಿದ ತ್ಯಾಗಕ್ಕಾಗಿ ನಾವು ಕೃತಜ್ಞರೆಂದು ಮತ್ತು ಯೇಸುವಿನ ಆಜ್ಞೆಗೆ ವಿಧೇಯರೆಂದು ತೋರಿಸುತ್ತೇವೆ. ಈ ವಿಶೇಷ ಸಂದರ್ಭಕ್ಕೆ ಆದಷ್ಟು ಹೆಚ್ಚು ಜನರನ್ನು ಆಮಂತ್ರಿಸಲು ಅದಕ್ಕೆ ಮುಂಚಿನ ಕೆಲವು ವಾರಗಳಲ್ಲಿ ಒಟ್ಟಾಗಿ ಕೆಲಸಮಾಡುತ್ತೇವೆ.

7. ನಾವು ಒಗ್ಗಟ್ಟಿನಿಂದ ಸೇವೆ ಮಾಡುವುದರಿಂದ ಏನನ್ನು ಮಾಡಲು ಸಾಧ್ಯವಾಗುತ್ತಿದೆ?

7 ಒಂದು ಮಿಡತೆ ಒಂಟಿಯಾಗಿ ಹೆಚ್ಚು ಕೆಲಸ ಮಾಡಲು ಸಾಧ್ಯವಿಲ್ಲ. ಅದೇ ರೀತಿ ನಾವು ಒಬ್ಬರಾಗಿ ಭೂಮಿಯಲ್ಲಿರುವ ಎಲ್ಲ ಜನರಿಗೆ ಸಾರಲು ಸಾಧ್ಯವಿಲ್ಲ. ಆದರೆ ನಾವು ಒಗ್ಗಟ್ಟಿನಿಂದ ಸೇವೆ ಮಾಡುವುದರಿಂದ ಯೆಹೋವನ ಕುರಿತು ಲಕ್ಷಾಂತರ ಜನರಿಗೆ ತಿಳಿಸಲು ಮತ್ತು ಆತನಿಗೆ ಸ್ತುತಿಘನಮಾನ ಸಲ್ಲಿಸುವಂತೆ ಹಲವಾರು ಜನರಿಗೆ ನೆರವಾಗಲು ಸಾಧ್ಯವಾಗುತ್ತಿದೆ.

ಸಭೆಯಲ್ಲಿ ಸಹಕರಿಸಿ

8, 9. (ಎ) ಒಗ್ಗಟ್ಟಿನಿಂದ ಇರುವಂತೆ ಕಲಿಸಲು ಪೌಲನು ಯಾವ ಉದಾಹರಣೆ ಕೊಟ್ಟನು? (ಬಿ) ನಾವು ಸಭೆಯಲ್ಲಿ ಹೇಗೆ ಸಹಕಾರವನ್ನು ನೀಡಬಲ್ಲೆವು?

8 ಸಭೆಯು ಹೇಗೆ ಸಂಘಟಿತವಾಗಿದೆ ಎಂದು ಪೌಲನು ಎಫೆಸದವರಿಗೆ ವಿವರಿಸಿದನು. ಅಲ್ಲದೆ ಸಭೆಯಲ್ಲಿರುವ ಎಲ್ಲರೂ ‘ಎಲ್ಲ ವಿಷಯಗಳಲ್ಲಿ ಬೆಳೆಯುವ’ ಅಗತ್ಯವಿದೆಯೆಂದೂ ಹೇಳಿದನು. (ಎಫೆಸ 4:15, 16 ಓದಿ.) ಪ್ರತಿಯೊಬ್ಬ ಕ್ರೈಸ್ತನು ಸಭೆಯು ಒಗ್ಗಟ್ಟಿನಿಂದಿರಲು, ಸಭೆಯ ನಾಯಕನಾದ ಯೇಸುವನ್ನು ಅನುಕರಿಸಲು ಸಹಾಯ ಮಾಡಬಹುದು. ಇದನ್ನು ವಿವರಿಸಲಿಕ್ಕಾಗಿ ಪೌಲನು ಮನುಷ್ಯ ದೇಹದ ಉದಾಹರಣೆ ಕೊಟ್ಟನು. ದೇಹದ ಎಲ್ಲ ಅಂಗಗಳು “ಅಗತ್ಯವಿರುವುದನ್ನು ಒದಗಿಸುವಂಥ ಪ್ರತಿಯೊಂದು ಕೀಲಿನ ಮೂಲಕ” ಒಂದನ್ನೊಂದು ಸಹಕರಿಸುತ್ತವೆ. ಆದ್ದರಿಂದ ನಾವು ಚಿಕ್ಕವರಾಗಿರಲಿ ದೊಡ್ಡವರಾಗಿರಲಿ, ಆರೋಗ್ಯವಂತರಾಗಿರಲಿ ಇಲ್ಲದಿರಲಿ ಪ್ರತಿಯೊಬ್ಬರು ಏನು ಮಾಡಬೇಕು?

9 ಸಭೆಯಲ್ಲಿ ಮುಂದಾಳತ್ವ ವಹಿಸಲು ಯೇಸು ಹಿರಿಯರನ್ನು ನೇಮಿಸಿದ್ದಾನೆ. ಹಾಗಾಗಿ ನಾವು ಹಿರಿಯರನ್ನು ಗೌರವಿಸಿ ಅವರು ನೀಡುವ ಮಾರ್ಗದರ್ಶನವನ್ನು ಅನುಸರಿಸಬೇಕೆಂದು ಯೇಸು ಬಯಸುತ್ತಾನೆ. (ಇಬ್ರಿ. 13:7, 17) ಹೀಗೆ ಮಾಡುವುದು ಯಾವಾಗಲೂ ಸುಲಭವಲ್ಲ. ಆದರೆ ನಾವು ಯೆಹೋವನ ಸಹಾಯವನ್ನು ಪಡೆದುಕೊಳ್ಳಬಹುದು. ಹಿರಿಯರು ಕೊಡುವ ಯಾವುದೇ ಮಾರ್ಗದರ್ಶನ ಪಾಲಿಸಲು ಆತನು ತನ್ನ ಪವಿತ್ರಾತ್ಮದ ಮೂಲಕ ನಮಗೆ ಸಹಾಯ ಕೊಡುವನು. ಕೆಲವೊಮ್ಮೆ ಮಾರ್ಗದರ್ಶನ ಪಾಲಿಸಲು ನಮಗೆ ಮನಸ್ಸಿರಲಿಕ್ಕಿಲ್ಲ. ಆದರೆ ನಾವು ದೀನತೆ ತೋರಿಸಿ ಆ ಮಾರ್ಗದರ್ಶನ ಪಾಲಿಸುವುದರಿಂದ ಸಭೆಯ ಒಗ್ಗಟ್ಟಿಗೆ ಸಹಾಯಮಾಡುತ್ತೇವೆ. ಹೀಗೆ ಸಹಕರಿಸಿದರೆ ಒಬ್ಬರ ಮೇಲೆ ಒಬ್ಬರಿಗಿರುವ ಪ್ರೀತಿ ಸಹ ಹೆಚ್ಚುವುದು.

10. ಸಭೆಯು ಒಗ್ಗಟ್ಟಾಗಿರಲು ಸಹಾಯಕ ಸೇವಕರು ಹೇಗೆ ನೆರವು ನೀಡುತ್ತಾರೆ? (ಲೇಖನದ ಆರಂಭದ ಚಿತ್ರ ನೋಡಿ.)

10 ಸಭೆಯನ್ನು ಐಕ್ಯವಾಗಿರಿಸಲು ಸಹಾಯಕ ಸೇವಕರು ಕೂಡ ನೆರವಾಗುತ್ತಾರೆ. ಅವರು ಹಿರಿಯರಿಗೆ ಸಹಾಯ ಮಾಡಲು ಶ್ರಮಿಸುತ್ತಾರೆ. ಅವರ ಪರಿಶ್ರಮಕ್ಕಾಗಿ ಸಭೆಯಲ್ಲಿರುವ ನಾವು ಕೃತಜ್ಞರು. ಉದಾಹರಣೆಗೆ, ನಮ್ಮ ಸೇವೆಗೆ ಬೇಕಾದ ಸಾಹಿತ್ಯಗಳು ಇರುವಂತೆ ಸಹಾಯಕ ಸೇವಕರು ನೋಡಿಕೊಳ್ಳುತ್ತಾರೆ. ನಮ್ಮ ಕೂಟಗಳಿಗೆ ಬರುವವರನ್ನು ಸ್ವಾಗತಿಸುತ್ತಾರೆ. ರಾಜ್ಯ ಸಭಾಗೃಹವನ್ನು ರಿಪೇರಿ ಮಾಡಲು, ಶುಚಿಯಾಗಿಡಲು ಕಷ್ಟಪಟ್ಟು ಕೆಲಸಮಾಡುತ್ತಾರೆ. ನಾವು ಸಹಾಯಕ ಸೇವಕರೊಂದಿಗೆ ಸಹಕರಿಸುವಾಗ ಒಗ್ಗಟ್ಟಿನಿಂದ ಇದ್ದೇವೆ ಮತ್ತು ಯೆಹೋವನನ್ನು ವ್ಯವಸ್ಥಿತ ರೀತಿಯಲ್ಲಿ ಆರಾಧಿಸುತ್ತಿದ್ದೇವೆ ಎಂದು ತೋರಿಸುತ್ತೇವೆ.—ಅ. ಕಾರ್ಯಗಳು 6:3-6 ಹೋಲಿಸಿ.

11. ಸಭೆಯ ಒಗ್ಗಟ್ಟಿಗೆ ನೆರವಾಗಲು ಯೌವನಸ್ಥರು ಏನು ಮಾಡಬಹುದು?

11 ಕೆಲವು ಹಿರಿಯರು ಸಭೆಯಲ್ಲಿ ಅನೇಕ ವರ್ಷಗಳಿಂದ ಕಷ್ಟಪಟ್ಟು ಕೆಲಸಮಾಡುತ್ತಾ ಬಂದಿದ್ದಾರೆ. ಅವರಿಗೆ ಈಗ ವಯಸ್ಸಾಗುತ್ತಾ ಇದೆ. ಮುಂಚೆ ಮಾಡಿದಷ್ಟು ಹೆಚ್ಚು ಕೆಲಸ ಮಾಡಲು ಆಗಲಿಕ್ಕಿಲ್ಲ. ಆದ್ದರಿಂದ ಇವರಿಗೆ ಯುವ ಸಹೋದರರು ಸಹಾಯ ಮಾಡಬಹುದು. ಈ ಯುವ ಸಹೋದರರಿಗೆ ತರಬೇತಿ ಕೊಟ್ಟರೆ ಸಭೆಯಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಅರ್ಹರಾಗುವರು. ಸಹಾಯಕ ಸೇವಕರು ಕಷ್ಟಪಟ್ಟು ಕೆಲಸಮಾಡುವಾಗ ಮುಂದೆ ಹಿರಿಯರಾಗಿ ಸೇವೆಮಾಡಲು ಆಗುವುದು. (1 ತಿಮೊ. 3:1, 10) ಕೆಲವು ಯೌವನಸ್ಥ ಹಿರಿಯರು ಇನ್ನೂ ಹೆಚ್ಚು ಪ್ರಗತಿ ಮಾಡಿ ಈಗ ಸಂಚರಣ ಮೇಲ್ವಿಚಾರಕರಾಗಿ ಅನೇಕ ಸಭೆಗಳಿಗೆ ನೆರವು ನೀಡುತ್ತಿದ್ದಾರೆ. ಯೌವನಸ್ಥರು ಜೊತೆ ವಿಶ್ವಾಸಿಗಳಿಗೆ ಹೀಗೆ ನೆರವಾಗಲು ಮುಂದೆ ಬರುತ್ತಿರುವುದನ್ನು ನೋಡುವಾಗ ನಮಗೆ ತುಂಬ ಖುಷಿಯಾಗುತ್ತದೆ.—ಕೀರ್ತನೆ 110:3; ಪ್ರಸಂಗಿ 12:1 ಓದಿ.

ಕುಟುಂಬದಲ್ಲಿ ಸಹಕರಿಸಿ

12, 13. ಕುಟುಂಬದಲ್ಲಿ ಎಲ್ಲರ ಮಧ್ಯೆ ಸಹಕಾರ ಇರಲು ಯಾವುದು ಸಹಾಯಮಾಡುತ್ತದೆ?

12 ಕುಟುಂಬದವರ ಮಧ್ಯೆ ಸಹಕಾರ ಇರಲು ಏನು ಮಾಡಬೇಕು? ಪ್ರತಿ ವಾರ ನಡೆಸುವ ಕುಟುಂಬ ಆರಾಧನೆ ಇದಕ್ಕೆ ಸಹಾಯಕರ. ಯೆಹೋವನ ಕುರಿತು ಕಲಿಯಲು ಹೆತ್ತವರು, ಮಕ್ಕಳು ಒಟ್ಟುಗೂಡಿ ಸಮಯ ಕಳೆಯುವಾಗ ಅವರ ನಡುವೆ ಪ್ರೀತಿ ಬೆಳೆಯುತ್ತದೆ. ಸೇವೆಯಲ್ಲಿ ಹೇಗೆ ಮಾತಾಡಬೇಕೆಂದು ಕುಟುಂಬ ಆರಾಧನೆಯಲ್ಲಿ ಪ್ರ್ಯಾಕ್ಟಿಸ್‌ ಮಾಡುವಾಗ ಎಲ್ಲರೂ ಸೇವೆಗೆ ಚೆನ್ನಾಗಿ ತಯಾರಿರುತ್ತಾರೆ. ಮಾತ್ರವಲ್ಲ ಕುಟುಂಬ ಆರಾಧನೆಯಲ್ಲಿ ಒಬ್ಬೊಬ್ಬರೂ ಸತ್ಯದ ಬಗ್ಗೆ ಹೇಳುವ ಮನದಾಳದ ಮಾತುಗಳನ್ನು ಕೇಳಿಸಿಕೊಳ್ಳುವಾಗ ಮತ್ತು ಯೆಹೋವನನ್ನು ಪ್ರೀತಿಸಿ, ಆತನನ್ನು ಮೆಚ್ಚಿಸಲು ಬಯಸುವುದನ್ನು ನೋಡುವಾಗ ಕುಟುಂಬದವರ ನಡುವಿನ ಬಂಧವು ಇನ್ನಷ್ಟು ಗಟ್ಟಿಯಾಗುತ್ತದೆ.

13 ಗಂಡ ಹೆಂಡತಿ ಒಬ್ಬರೊಂದಿಗೊಬ್ಬರು ಹೇಗೆ ಸಹಕರಿಸಬಲ್ಲರು? (ಮತ್ತಾ. 19:6) ಅವರಿಬ್ಬರೂ ಯೆಹೋವನನ್ನು ಪ್ರೀತಿಸುವಾಗ, ಒಟ್ಟಾಗಿ ಆತನ ಸೇವೆಮಾಡುವಾಗ ಅವರ ಮಧ್ಯೆ ಸಂತೋಷ, ಒಗ್ಗಟ್ಟು ಇರುತ್ತದೆ. ಗಂಡ ಹೆಂಡತಿ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಅಬ್ರಹಾಮ ಸಾರ, ಇಸಾಕ ರೆಬೆಕ್ಕ, ಎಲ್ಕಾನ ಹನ್ನ ಒಬ್ಬರಿನ್ನೊಬ್ಬರ ಮೇಲೆ ಪ್ರೀತಿ ತೋರಿಸಿದಂತೆಯೇ ಇವರೂ ತೋರಿಸಬೇಕು. (ಆದಿ. 26:8; 1 ಸಮು. 1:5, 8; 1 ಪೇತ್ರ 3:5, 6) ಆಗ ಅವರು ಐಕ್ಯರಾಗಿರುವರು, ಯೆಹೋವನಿಗೆ ಇನ್ನೂ ಹತ್ತಿರವಾಗುವರು.—ಪ್ರಸಂಗಿ 4:12 ಓದಿ.

ವೃದ್ಧ ದಂಪತಿಯು JW ಪ್ರಸಾರವನ್ನು ಯುವ ದಂಪತಿಯ ಜೊತೆಯಲ್ಲಿ ನೋಡುತ್ತಿದ್ದಾರೆ

ಕುಟುಂಬ ಆರಾಧನೆಯು ದೊಡ್ಡವರನ್ನು, ಚಿಕ್ಕವರನ್ನು ಇನ್ನಷ್ಟು ಹತ್ತಿರ ತರುತ್ತದೆ (ಪ್ಯಾರ 12, 15 ನೋಡಿ)

14. ನಿಮ್ಮ ವಿವಾಹ ಸಂಗಾತಿ ಸತ್ಯದಲ್ಲಿ ಇಲ್ಲದಿದ್ದರೂ ಮದುವೆ ಬಂಧವನ್ನು ಬಲವಾಗಿರಿಸಲು ನೀವೇನು ಮಾಡಬಹುದು?

14 ಯೆಹೋವನ ಆರಾಧಕರಲ್ಲದ ಒಬ್ಬರನ್ನು ಮದುವೆಯಾಗಬಾರದೆಂದು ಬೈಬಲ್‌ ಸ್ಪಷ್ಟವಾಗಿ ತಿಳಿಸುತ್ತದೆ. (2 ಕೊರಿಂ. 6:14) ಆದರೆ ನಮ್ಮಲ್ಲಿ ಕೆಲವು ಸಹೋದರ ಸಹೋದರಿಯರ ವಿವಾಹ ಸಂಗಾತಿಗಳು ಯೆಹೋವನ ಸಾಕ್ಷಿಗಳಲ್ಲ. ಏಕೆಂದರೆ ಕೆಲವರು ಮದುವೆಯಾದ ನಂತರ ಸತ್ಯಕ್ಕೆ ಬಂದವರು. ಇನ್ನೂ ಕೆಲವರು ಯೆಹೋವನ ಸೇವಕರನ್ನು ಮದುವೆಯಾಗಿದ್ದರೂ ನಂತರ ಅವರ ಬಾಳಸಂಗಾತಿ ಸಭೆಯನ್ನು ಬಿಟ್ಟುಹೋಗಿರಬಹುದು. ಈ ಸನ್ನಿವೇಶಗಳಲ್ಲಿ ಕ್ರೈಸ್ತರು ಬೈಬಲಿನ ಸಲಹೆಗೆ ವಿಧೇಯರಾಗುವ ಮೂಲಕ ತಮ್ಮ ಮದುವೆ ಬಂಧವನ್ನು ಬಲವಾಗಿರಿಸಲು ಕೈಲಾದದ್ದೆಲ್ಲವನ್ನೂ ಮಾಡುತ್ತಾರೆ. ಇದು ಯಾವಾಗಲೂ ಸುಲಭವಲ್ಲ. ಉದಾಹರಣೆಗೆ, ಮೇರಿ ಮತ್ತವಳ ಗಂಡ ಡೇವಿಡ್‌ ಜೊತೆಯಾಗಿ ಯೆಹೋವನ ಸೇವೆ ಮಾಡುತ್ತಿದ್ದರು. ಕ್ರಮೇಣ ಡೇವಿಡ್‌ ಕೂಟಗಳಿಗೆ ಹೋಗುವುದನ್ನು ನಿಲ್ಲಿಸಿದರು. ಹಾಗಿದ್ದರೂ ಮೇರಿ ಒಳ್ಳೇ ಪತ್ನಿಯಾಗಿರಲು ಮತ್ತು ಕ್ರೈಸ್ತ ಗುಣಗಳನ್ನು ತೋರಿಸಲು ಪ್ರಯತ್ನಿಸಿದಳು. ತನ್ನ 6 ಮಂದಿ ಮಕ್ಕಳಿಗೆ ಯೆಹೋವನ ಕುರಿತು ಕಲಿಸಿದಳು. ಕೂಟಗಳಿಗೆ, ಅಧಿವೇಶನಗಳಿಗೆ ಹೋಗುತ್ತಾ ಇದ್ದಳು. ವರ್ಷಗಳ ನಂತರ ಮಕ್ಕಳೆಲ್ಲರೂ ಬೆಳೆದು ಬೇರೆಬೇರೆ ಹೋದಾಗ ಮೇರಿಗೆ ತುಂಬ ಕಷ್ಟವಾಯಿತಾದರೂ ಯೆಹೋವನ ಸೇವೆಯನ್ನು ಮುಂದುವರಿಸಿದಳು. ಡೇವಿಡ್‌ಗೆಂದೇ ಪತ್ರಿಕೆಗಳನ್ನು ಹೊರಗಿಡುತ್ತಿದ್ದಳು. ಡೇವಿಡ್‌ ಅದನ್ನು ಪುನಃ ಓದಲು ಶುರುಮಾಡಿದರು. ಸಮಯಾನಂತರ ಕೆಲವು ಕೂಟಗಳಿಗೂ ಬರತೊಡಗಿದರು. ಅವರ 6 ವರ್ಷದ ಮೊಮ್ಮಗ ಸಭಾಗೃಹದಲ್ಲಿ ಅವರಿಗಾಗಿ ಯಾವಾಗಲೂ ಒಂದು ಸೀಟು ಇಡುತ್ತಿದ್ದ. ಡೇವಿಡ್‌ ಕೂಟಕ್ಕೆ ಬರದಿದ್ದರೆ ಆ ಹುಡುಗನು “ಅಜ್ಜ, ನೀವ್‌ ಇವತ್ತು ಮೀಟಿಂಗ್‌ಗೆ ಬರಲೇ ಇಲ್ಲ? ನಾನು ನಿಮ್ಮನ್ನು ತುಂಬ ನೆನಸಿಕೊಂಡೆ” ಎಂದು ಹೇಳುತ್ತಿದ್ದ. ಡೇವಿಡ್‌ 25 ವರ್ಷಗಳ ನಂತರ ಯೆಹೋವನ ಬಳಿ ಮರಳಿ ಬಂದರು. ಈಗ ಅವರು ಪುನಃ ಪತ್ನಿಯ ಜೊತೆಯಲ್ಲಿ ಯೆಹೋವನ ಸೇವೆಯನ್ನು ಸಂತೋಷದಿಂದ ಮಾಡುತ್ತಿದ್ದಾರೆ.

15. ವೃದ್ಧ ದಂಪತಿಗಳು ಯುವ ದಂಪತಿಗಳಿಗೆ ಹೇಗೆ ನೆರವಾಗಬಲ್ಲರು?

15 ಸೈತಾನನು ಇಂದು ಕುಟುಂಬಗಳ ಮೇಲೆ ಆಕ್ರಮಣ ಮಾಡುತ್ತಿದ್ದಾನೆ. ಯೆಹೋವನ ಸೇವಕರಾಗಿರುವ ಗಂಡಹೆಂಡತಿ ಒಬ್ಬರಿಗೊಬ್ಬರು ಸಹಕಾರವನ್ನು ನೀಡಲು ಇದೊಂದು ಕಾರಣ. ನಿಮಗೆ ಮದುವೆಯಾಗಿ ಎಷ್ಟೇ ಸಮಯವಾಗಿರಲಿ, ನಿಮ್ಮ ಮದುವೆ ಬಂಧವನ್ನು ಬಲಪಡಿಸಲು ನಿಮ್ಮ ಸಂಗಾತಿಗೆ ಏನು ಹೇಳಬಹುದು ಅಥವಾ ಅವರಿಗಾಗಿ ಏನು ಮಾಡಬಹುದೆಂದು ಯೋಚಿಸಿ. ನೀವು ವೃದ್ಧ ದಂಪತಿಗಳಾಗಿರುವಲ್ಲಿ ಯುವ ದಂಪತಿಗಳಿಗೆ ಒಳ್ಳೇ ಮಾದರಿಯಾಗಿರಬಲ್ಲಿರಿ. ಯುವ ದಂಪತಿಗಳನ್ನು ನಿಮ್ಮ ಕುಟುಂಬ ಆರಾಧನೆಗೆ ಆಮಂತ್ರಿಸಬಹುದು. ಮದುವೆಯಾಗಿ ಎಷ್ಟೇ ವರ್ಷಗಳಾದರೂ ಒಬ್ಬರಿಗೊಬ್ಬರು ಪ್ರೀತಿ ತೋರಿಸಬೇಕು, ಒಗ್ಗಟ್ಟಿನಿಂದ ಇರಬೇಕು ಎನ್ನುವುದನ್ನು ಆ ಯುವ ದಂಪತಿಗಳು ಗಮನಿಸುವರು.—ತೀತ 2:3-7.

‘ಯೆಹೋವನ ಪರ್ವತಕ್ಕೆ ಹೋಗೋಣ!’

16, 17. ಒಗ್ಗಟ್ಟಿನಿಂದ ಇರುವ ದೇವಜನರು ಏನನ್ನು ಎದುರುನೋಡುತ್ತಿದ್ದಾರೆ?

16 ಇಸ್ರಾಯೇಲ್ಯರು ಹಬ್ಬಗಳನ್ನು ಆಚರಿಸಲು ಯೆರೂಸಲೇಮಿಗೆ ಹೋಗಲಿಕ್ಕಿದ್ದಾಗ ಒಬ್ಬರು ಇನ್ನೊಬ್ಬರೊಂದಿಗೆ ಸಹಕರಿಸುತ್ತಿದ್ದರು. ಪ್ರಯಾಣಕ್ಕೆ ಬೇಕಾದ ಎಲ್ಲವನ್ನೂ ಸಿದ್ಧಗೊಳಿಸುತ್ತಿದ್ದರು. ಒಟ್ಟಿಗೆ ಪ್ರಯಾಣಿಸುತ್ತಿದ್ದರು. ದಾರಿಯಲ್ಲಿ ಒಬ್ಬರಿಗೊಬ್ಬರು ಅಗತ್ಯವಿದ್ದ ಸಹಾಯ ಕೊಡುತ್ತಿದ್ದರು. ಆಲಯಕ್ಕೆ ಹೋದ ಮೇಲೆ ಒಟ್ಟಾಗಿ ಯೆಹೋವನನ್ನು ಸ್ತುತಿಸುತ್ತಿದ್ದರು, ಆರಾಧಿಸುತ್ತಿದ್ದರು. (ಲೂಕ 2:41-44) ನಾವಿಂದು ಹೊಸ ಲೋಕದ ಜೀವನಕ್ಕಾಗಿ ಸಿದ್ಧರಾಗುತ್ತಿರುವಾಗ ಒಗ್ಗಟ್ಟಿನಿಂದ ಇರಬೇಕು. ಸಹಕಾರ ನೀಡಲು ನಮ್ಮಿಂದಾಗುವ ಎಲ್ಲವನ್ನು ಮಾಡಬೇಕು. ಈ ವಿಷಯದಲ್ಲಿ ನೀವೇನಾದರೂ ಪ್ರಗತಿ ಮಾಡಬೇಕಾ?

17 ಇಂದು ಲೋಕದ ಜನರಿಗೆ ಅನೇಕ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯವಿದೆ. ಅದರ ಬಗ್ಗೆ ಕಿತ್ತಾಡುತ್ತಾರೆ. ಆದರೆ ನಾವು ಶಾಂತಿಯಿಂದಿರಲು ಮತ್ತು ಸತ್ಯವನ್ನು ಅರ್ಥಮಾಡಿಕೊಳ್ಳಲು ಯೆಹೋವನು ಸಹಾಯಮಾಡಿದ್ದಾನೆ. ಇದಕ್ಕಾಗಿ ನಾವು ತುಂಬ ಕೃತಜ್ಞರು. ಭೂಮಿಯಾದ್ಯಂತ ನಾವು ಆತನು ಮೆಚ್ಚುವ ರೀತಿಯಲ್ಲಿ ಆತನನ್ನು ಆರಾಧಿಸುತ್ತಿದ್ದೇವೆ. ವಿಶೇಷವಾಗಿ ಈ ಕಡೇ ದಿವಸಗಳಲ್ಲಿ ಆತನ ಜನರಾದ ನಾವು ಎಂದಿಗಿಂತ ಹೆಚ್ಚು ಒಗ್ಗಟ್ಟಿನಿಂದ ಇದ್ದೇವೆ. ಯೆಶಾಯ ಮತ್ತು ಮೀಕನು ಪ್ರವಾದಿಸಿದಂತೆ ನಾವು ಜೊತೆ ಜೊತೆಯಾಗಿ “ಯೆಹೋವನ ಪರ್ವತಕ್ಕೆ” ಹೋಗುತ್ತಿದ್ದೇವೆ. (ಯೆಶಾ. 2:2-4; ಮೀಕ 4:2-4 ಓದಿ.) ಭವಿಷ್ಯದಲ್ಲಿ ಭೂಮಿಯಲ್ಲಿ ಇರುವವರೆಲ್ಲರೂ ಯೆಹೋವನನ್ನು ಆರಾಧಿಸಲು “ಹೊಂದಿಕೆಯಿಂದ ಒಟ್ಟಿಗೆ ಜೋಡಿಸಲ್ಪಟ್ಟು” ಒಬ್ಬರಿಗೊಬ್ಬರು ಸಹಕರಿಸುವಾಗ ಎಲ್ಲರೂ ನಿಜಕ್ಕೂ ಸಂತೋಷದಿಂದ ಇರುವೆವು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ