ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w16 ಏಪ್ರಿಲ್‌ ಪು. 23-26
  • ಸನ್ಯಾಸಿನಿಯರು ಕ್ರೈಸ್ತ ಸಹೋದರಿಯರಾದರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸನ್ಯಾಸಿನಿಯರು ಕ್ರೈಸ್ತ ಸಹೋದರಿಯರಾದರು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ನಿಷಿದ್ಧ” ಪುಸ್ತಕದಿಂದ ನುಚ್ಚುನೂರಾದ ಸಂಬಂಧ
  • ಬೈಬಲಿನಿಂದ ಬೆಸೆಯಿತು ಬಾಂಧವ್ಯ
  • ಬದುಕನ್ನೇ ಬದಲಾಯಿಸಿತು ಬೈಬಲ್‌
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಬೈಬಲ್‌ ಸತ್ಯವು ಬೊಲಿವಿಯದ ಒಬ್ಬಾಕೆ ಕ್ರೈಸ್ತ ಸಂನ್ಯಾಸಿನಿ (Nun) ಯನ್ನು ಬಿಡುಗಡೆಮಾಡಿತು
    ಕಾವಲಿನಬುರುಜು—1992
  • ಬದುಕು ಬದಲಾದ ವಿಧ
    2011ರ ಇಂಗ್ಲಿಷ್‌ ಕಾವಲಿನಬುರುಜುವಿನ ಲೇಖನ
  • ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
w16 ಏಪ್ರಿಲ್‌ ಪು. 23-26
ಫರ್ನಾಂಡಿಸ್‌ ಸಹೋದರಿಯರು. ಅವರಲ್ಲಿ ಇಬ್ಬರು ಕ್ಯಾಥೊಲಿಕ್‌ ಸನ್ಯಾಸಿನಿಯರ ಉಡುಪಿನಲ್ಲಿದ್ದಾರೆ. ಒಬ್ಬರು ಹೊಸ ಶಿಷ್ಯೆಯಾಗಿರುವುದರಿಂದ ತಲೆಗೆ ಬಿಳಿ ಮುಸುಕನ್ನು ಹಾಕಿಕೊಂಡಿದ್ದಾಳೆ

ಜೀವನ ಕಥೆ

ಸನ್ಯಾಸಿನಿಯರು ಕ್ರೈಸ್ತ ಸಹೋದರಿಯರಾದರು

ಫೆಲಿಸಾ ಮತ್ತು ಅರಾಸೆಲಿ ಫರ್ನಾಂಡಿಸ್‌ ಹೇಳಿದಂತೆ

“ಸಾಕು ನಿಲ್ಲಿಸು ನಿನ್ನ ಮಾತು. ನಿನ್ನ ಧರ್ಮದ ಬಗ್ಗೆ ಏನೂ ಹೇಳಬೇಡ, ತಲೆ ಚಿಟ್‌ ಹಿಡಿಯುತ್ತಿದೆ. ಇದರ ಬಗ್ಗೆ ಮಾತಾಡುವುದರಿಂದ ನನಗೆ ನಿನ್ನ ಕಂಡರೂ ಇಷ್ಟ ಇಲ್ಲ” ಅಂತ ನನ್ನ ತಂಗಿ ಅರಾಸೆಲಿ ಕಿರುಚಿ ಹೇಳಿದ್ದಳು. ನನಗೀಗ 91 ವರ್ಷವಾದರೂ ಅವತ್ತು ಅವಳು ಹೇಳಿದ ಮಾತಿಂದ ನನಗಾದ ನೋವು ಇವತ್ತಿಗೂ ನೆನಪಿದೆ. “ಆದಿಗಿಂತ ಅಂತ್ಯವು ಲೇಸು” ಎಂದು ಪ್ರಸಂಗಿ 7:8 ಹೇಳುತ್ತದೆ. ಆ ಮಾತು ನನ್ನ ಜೀವನದಲ್ಲಿ ನೂರಕ್ಕೆ ನೂರು ಸತ್ಯವಾಗಿದೆ.—ಫೆಲಿಸಾ.

ಫೆಲಿಸಾ: ನಮ್ಮದು ದೇವರಲ್ಲಿ ತುಂಬ ಭಯ-ಭಕ್ತಿ ಇರೋ ಕುಟುಂಬ. ನನ್ನ ಸಂಬಂಧಿಕರಲ್ಲಿ ಸುಮಾರು 13 ಜನ ಪಾದ್ರಿಗಳಾಗಿ, ಕ್ಯಾಥೋಲಿಕ್‌ ಸಂಸ್ಥೆಗಳಲ್ಲಿ ಸದಸ್ಯರಾಗಿ ಕೆಲಸ ಮಾಡ್ತಿದ್ದರು. ಪೋಪ್‌ ಜಾನ್‌ ಪೌಲ್‌ IIರವರು ನನ್ನ ಸೋದರ ಮಾವನನ್ನು ಸಂತ ಅಂತ ಪ್ರಕಟಿಸಿದ್ದರು. ಪಾದ್ರಿಯಾಗಿದ್ದ ಅವರು ಕ್ಯಾಥೋಲಿಕ್‌ ಸ್ಕೂಲ್‌ನಲ್ಲಿ ಕೆಲಸ ಮಾಡ್ತಿದ್ದರು. ನಮ್ಮದು ತುಂಬ ಬಡ ಕುಟುಂಬ. ನನ್ನ ಅಪ್ಪ ಕಮ್ಮಾರ, ಅಮ್ಮ ಗದ್ದೆ ಕೆಲಸ ಮಾಡ್ತಿದ್ದರು. ಎಂಟು ಮಕ್ಕಳಲ್ಲಿ ನಾನೇ ಮೊದಲನೆಯವಳು.

ನಾನು 12 ವರ್ಷದವಳಾಗಿದ್ದಾಗ ಸ್ಪ್ಯಾನಿಷ್‌ ಆಂತರಿಕ ಯುದ್ಧ ಆರಂಭವಾಯಿತು. ಈ ಸಮಯದಲ್ಲಿ ಅಪ್ಪ ಸ್ವಾತಂತ್ರ್ಯದ ಬಗ್ಗೆ ಮಾತಾಡ್ತಾ ಇದ್ದದ್ದು, ನಿರಂಕುಶ ಸರ್ಕಾರಕ್ಕೆ ಇಷ್ಟವಾಗದೆ ಇದ್ದದರಿಂದ ಅವರನ್ನು ಜೈಲಿಗೆ ಹಾಕಿದರು. ಇಡೀ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಅಮ್ಮನ ಮೇಲೆ ಬಂತು. ಆದ್ದರಿಂದ, ಅಮ್ಮನ ಸ್ನೇಹಿತೆಯೊಬ್ಬಳು ನನ್ನ ಮೂರು ತಂಗಿಯರಾದ ಅರಾಸೆಲಿ, ಲಾರಿ ಮತ್ತು ರಮೋನಿಯರನ್ನು ಸ್ಪೇನ್‌ನ ಬಿಲ್ಬಾವೋ ನಗರದಲ್ಲಿರುವ ಕಾನ್ವೆಂಟಿಗೆ ಕಳುಹಿಸಿದರೆ ಒಳ್ಳೇದು, ಆಗ ಅವರಿಗಾದರೂ ಹೊಟ್ಟೆಗೆ ಹಿಟ್ಟು ಸಿಗುತ್ತೆ ಅಂತ ಸಲಹೆ ಕೊಟ್ಟರು.

ಅರಾಸೆಲಿ: ಕಾನ್ವೆಂಟಿಗೆ ಹೋದಾಗ ನನಗೆ 14, ನನ್ನ ತಂಗಿಯರಿಬ್ಬರಿಗೆ 12 ಮತ್ತು 10 ವರ್ಷ ಆಗಿತ್ತು. ಈ ವಯಸ್ಸಿನಲ್ಲಿ ಕುಟುಂಬದಿಂದ ದೂರ ಇರೋದು ಅಂದರೆ ತುಂಬ ಕಷ್ಟದ ವಿಷಯ. ಬಿಲ್ಬಾವೋನಲ್ಲಿ ನಾವು ಶುಚಿ ಮಾಡುವ ಕೆಲಸ ಮಾಡ್ತಿದ್ದೆವು. ಎರಡು ವರ್ಷಗಳ ನಂತರ ಜರಗೋಸಾದಲ್ಲಿರುವ ವಯಸ್ಸಾದವರನ್ನು ನೋಡಿಕೊಳ್ಳುವ ದೊಡ್ಡ ಕಾನ್ವೆಂಟಿಗೆ ನಮ್ಮೆಲ್ಲರನ್ನೂ ವರ್ಗಾಯಿಸಿದರು. ನಾವು ಅಲ್ಲಿ ಅಡುಗೆ ಮನೆಯನ್ನು ಶುಚಿ ಮಾಡ್ತಿದ್ವಿ. ಇಲ್ಲಿ ಬೆನ್ನು ಮುರಿದು ಹೋಗುವಷ್ಟು ಕೆಲಸ ಇರುತ್ತಿತ್ತು.

ಫೆಲಿಸಾ: ತಂಗಿಯರು ಇದ್ದ ಜರಗೋಸಾದಲ್ಲಿನ ಕಾನ್ವೆಂಟಿಗೆ ಹೋಗುವಂತೆ ಅಮ್ಮ ಮತ್ತು ಮಾವ ನನಗೆ ಹೇಳಿದರು. ಇದರಿಂದ ನನ್ನ ಹಿಂದೆ ಬಿದ್ದಿದ್ದ ಒಬ್ಬ ಹುಡುಗನ ಕಾಟ ತಪ್ಪುತ್ತೆ ಅನ್ನೋದು ಅವರ ಯೋಚನೆ. ದೇವರು, ಧರ್ಮ ಅಂದರೆ ನನಗೆ ಮೊದಲಿಂದಲೂ ಇಷ್ಟ. ಆದಕಾರಣ ಸ್ವಲ್ಪ ದಿನ ಕಾನ್ವೆಂಟಿನಲ್ಲಿರೋಣ ಅಂತ ಅಲ್ಲಿಗೆ ಹೋದೆ. ಪ್ರತಿದಿನ ನಾನು ಮಾಸ್‌ಗೆ ಹೋಗುತ್ತಿದ್ದೆ. ನನ್ನ ಅಮ್ಮನ ಕಡೆಯವರಲ್ಲಿ ಒಬ್ಬರು ಆಫ್ರಿಕಾದಲ್ಲಿ ಮಿಷನರಿಯಾಗಿದ್ದರು, ನಾನೂ ಅವರ ಥರ ಆಗ್ಬೇಕು ಅಂತ ಇದ್ದೆ.

ಸ್ಪೇನಿನ ಜರಗೋಸಾದಲ್ಲಿರುವ ಕಾನ್ವೆಂಟ್‌ ಮತ್ತು ನಕರ್‌ ಕೊಲುಂಗಾ ಭಾಷಾಂತರದ ಬೈಬಲ್‌

ಸ್ಪೇನ್‌ನ ಜರಗೋಸಾದಲ್ಲಿದ್ದ ಕಾನ್ವೆಂಟ್‌ (ಎಡಬದಿ) ನಕರ್‌-ಕೊಲುಂಗಾ ಭಾಷಾಂತರದ ಬೈಬಲ್‌ (ಬಲಬದಿ)

ಆದರೆ ಈ ರೀತಿ ಬೇರೆ ಕಡೆ ಹೋಗಿ ದೇವರ ಸೇವೆ ಮಾಡಬೇಕೆಂಬ ನನ್ನ ಆಸೆಯನ್ನು ಯಾವ ಕ್ರೈಸ್ತ ಸನ್ಯಾಸಿನಿಯರೂ (ನನ್‌) ಬೆಂಬಲಿಸಲಿಲ್ಲ. ಈ ಕಾನ್ವೆಂಟ್‌ ನನಗೆ ಜೈಲ್‌ ಥರ ಇತ್ತು! ಆದ್ದರಿಂದ ಒಂದು ವರ್ಷ ಆದ ಮೇಲೆ ಪಾದ್ರಿಯಾಗಿದ್ದ ನನ್ನ ಅಂಕಲ್‌ನ ನೋಡಿಕೊಳ್ಳೋಣ ಅಂತ ವಾಪಸ್‌ ಮನೆಗೆ ಬಂದೆ. ಮನೆ ಕೆಲಸ ತುಂಬಾ ಇದ್ರೂ ಸಂಜೆ ಪ್ರಾರ್ಥನೆ (ರೋಸರಿ) ಮಾಡೋದನ್ನು ಮಾತ್ರ ತಪ್ಪಿಸ್ತಿರಲಿಲ್ಲ. ಚರ್ಚ್‌ನಲ್ಲಿ ಹೂಗಳನ್ನು ಜೋಡಿಸುವುದು, ಕನ್ಯೆಯ ಮತ್ತು ಸಂತರ ವಿಗ್ರಹಗಳನ್ನು ಅಲಂಕರಿಸುವುದು ಅಂದ್ರೆ ನನಗೆ ತುಂಬ ಇಷ್ಟ.

ಅರಾಸೆಲಿ: ಕಾನ್ವೆಂಟಿನಲ್ಲಿ ನಮ್ಮ ಜೀವನ ಪೂರ್ತಿ ಬದಲಾಯಿತು. ಆರಂಭದ ಪ್ರತಿಜ್ಞೆಯ ನಂತರ ಅಲ್ಲಿದ್ದ ಸನ್ಯಾಸಿನಿಯರು ನಮ್ಮೆಲ್ಲರನ್ನು ಬೇರೆ ಬೇರೆ ಕಡೆ ಕಳುಹಿಸಬೇಕೆಂದು ನಿರ್ಧರಿಸಿದರು. ರಮೋನಿ ಜರಗೋಸಾದಲ್ಲೇ ಉಳಿದಳು, ತಂಗಿ ಲಾರಿಯನ್ನು ವೆಲೆನ್ಸಿಯಾಗೆ ಮತ್ತು ನನ್ನನ್ನು ಮ್ಯಾಡ್ರಿಡ್‌ಗೆ ಕಳುಹಿಸಿದರು. ಇಲ್ಲಿ ನಾನು ಎರಡನೇ ಬಾರಿ ಪ್ರಮಾಣ ಸ್ವೀಕರಿಸಿದೆ. ಮ್ಯಾಡ್ರಿಡ್‌ನಲ್ಲಿದ್ದ ಕಾನ್ವೆಂಟಿನಲ್ಲಿ ವಿದ್ಯಾರ್ಥಿಗಳಿಗೆ, ವಯಸ್ಸಾದವರಿಗೆ ಮತ್ತು ಅತಿಥಿಗಳಿಗೆ ವಸತಿ ಗೃಹಗಳಿದ್ದವು. ಆದ್ದರಿಂದ ಅಲ್ಲಿ ಬೆಟ್ಟದಷ್ಟು ಕೆಲಸ ಇತ್ತು! ನಾನು ಕಾನ್ವೆಂಟಿನ ಚಿಕಿತ್ಸಾಲಯದಲ್ಲಿ (ಇನ್‌ಫರ್ಮರಿ) ಕೆಲಸ ಮಾಡ್ತಿದ್ದೆ.

ಸನ್ಯಾಸಿನಿಯಾದ್ರೆ ಜೀವನ ಚೆನ್ನಾಗಿರುತ್ತೆ, ಬೈಬಲ್‌ನ ಚೆನ್ನಾಗಿ ಓದಿ ಅರ್ಥಮಾಡಿಕೊಳ್ಳಬಹುದು ಅಂತ ಅಂದುಕೊಂಡಿದ್ದೆ. ಆದರೆ ನನ್ನ ಲೆಕ್ಕಾಚಾರ ಎಲ್ಲ ತಲೆಕೆಳಗಾಯಿತು. ಇಲ್ಲಿ ದೇವರ ಬಗ್ಗೆಯಾಗಲಿ ಯೇಸು ಬಗ್ಗೆಯಾಗಲಿ ಯಾರೂ ಮಾತಾಡ್ತಾನೇ ಇರಲಿಲ್ಲ. ಇನ್ನು ಬೈಬಲ್‌ ಉಪಯೋಗಿಸುವುದಂತೂ ದೂರದ ಮಾತು! ಇಲ್ಲಿ ನಾನು ಮಾಡಿದ್ದು ಇಷ್ಟೆ: ಅಲ್ಪಸ್ವಲ್ಪ ಲ್ಯಾಟಿನ್‌ ಕಲಿತಿದ್ದು, ಕೆಲವು ಸಂತರ ಜೀವನ ಕಥೆ ಓದಿದ್ದು, ಮತ್ತೆ ಮರಿಯಳನ್ನು ಪೂಜಿಸಿದ್ದು. ಇದನ್ನು ಬಿಟ್ಟರೆ ಮಾಡ್ತಿದ್ದೆಲ್ಲಾ ಬರೀ ಕೆಲಸ.

ಇದೆಲ್ಲದರಿಂದ ನಾನು ಬೇಸತ್ತು ಹೋದೆ. ಆದ್ದರಿಂದ ಸನ್ಯಾಸಿನಿಯರ ಮುಖ್ಯಸ್ಥೆಯ ಹತ್ತಿರ, ‘ನನ್ನ ಕುಟುಂಬ ಕಷ್ಟದಲ್ಲಿ ಒದ್ದಾಡುತ್ತಾ ಇದ್ದರೂ ನಾನು ಇಲ್ಲಿ ಕಷ್ಟಪಟ್ಟು ಕೆಲಸ ಮಾಡಿ ಬೇರೆಯವರ ಜೇಬು ತುಂಬಿಸುತ್ತಿದ್ದೀನಿ. ಇದು ಯಾವ ನ್ಯಾಯ! ಆದ್ದರಿಂದ ನಾನು ಮನೆಗೆ ಹೋಗ್ತೀನಿ’ ಅಂತ ಹೇಳಿದೆ. ಅವರು ನನ್ನನ್ನು ಒಂದು ರೂಮಲ್ಲಿ ಕೂಡಿ ಹಾಕಿದರು. ಹೀಗೆ ಮಾಡಿದರೆ ನನ್ನ ಮನಸ್ಸು ಬದಲಾಗುತ್ತೆ ಅಂತ ಅಂದುಕೊಂಡರು.

ಮೂರು ಸಲ ನನ್ನನ್ನು ಬಿಡುಗಡೆ ಮಾಡಿ, ನನ್ನ ನಿರ್ಧಾರವನ್ನು ಬದಲಾಯಿಸಿಕೊಂಡಿದ್ದೀನಾ ಅಂತ ಪರೀಕ್ಷಿಸಿದರು. ನಾನು ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡದೆ ಇದ್ದದರಿಂದ ಒಂದು ಪತ್ರದಲ್ಲಿ “ದೇವರ ಕೆಲಸ ಮಾಡೋದಕ್ಕಿಂತ ಸೈತಾನನ ಕೆಲಸ ಮಾಡೋದೇ ವಾಸಿ ಅಂತ ನಾನು ಕಾನ್ವೆಂಟ್‌ ಬಿಡುತ್ತಿದ್ದೇನೆ” ಅಂತ ಬರೆದುಕೊಟ್ಟು ಹೋಗು ಅಂತ ಹೇಳಿದ್ರು. ಹೊರಗೆ ಹೋಗಲು ಮನಸ್ಸು ಹಾತೊರೆಯುತ್ತಿದ್ದರೂ ಆ ರೀತಿ ಬರೆಯಲು ಮಾತ್ರ ನನಗೆ ಮನಸ್ಸಿರಲಿಲ್ಲ. ಕೊನೆಗೆ, ಒಬ್ಬ ಪಾದ್ರಿಯ ಹತ್ತಿರ ನಡೆದದ್ದೆಲ್ಲವನ್ನೂ ಹೇಳಿದೆ. ಆಗ ಅವರು ಈ ಹಿಂದೆ ನಾನಿದ್ದ ಜರಗೋಸಾದ ಕಾನ್ವೆಂಟಿಗೆ ಮತ್ತೆ ನನ್ನನ್ನು ವರ್ಗಾಯಿಸಲು ಏರ್ಪಾಡು ಮಾಡಿದರು. ಕೆಲವು ತಿಂಗಳು ಅಲ್ಲಿ ಕೆಲಸ ಮಾಡಿದ ನಂತರ ಮನೆಗೆ ಹೋಗಲು ಅನುಮತಿ ನೀಡಿದರು. ಸ್ವಲ್ಪದರಲ್ಲೇ ನನ್ನ ತಂಗಿಯರೂ ಕಾನ್ವೆಂಟ್‌ ಬಿಟ್ಟು ವಾಪಸ್‌ ಬಂದರು.

“ನಿಷಿದ್ಧ” ಪುಸ್ತಕದಿಂದ ನುಚ್ಚುನೂರಾದ ಸಂಬಂಧ

ಫೆಲಿಸಾ ಅಂದು ಮತ್ತು ಇಂದು

ಫೆಲಿಸಾ

ಫೆಲಿಸಾ: ಸ್ವಲ್ಪ ಸಮಯದ ನಂತರ, ನಾನು ಮದುವೆಯಾಗಿ ಕ್ಯಾಂಟಾಬ್ರಿಯಾ ಎಂಬಲ್ಲಿಗೆ ಹೋದೆ. ಅಲ್ಲೂ ಕ್ರಮವಾಗಿ ಮಾಸ್‌ಗೆ ಹೋಗುತ್ತಿದ್ದೆ. ಒಂದು ಭಾನುವಾರ ಒಬ್ಬ ಪಾದ್ರಿ ವೇದಿಕೆಯಿಂದ ಒಂದು ಪ್ರಕಟಣೆ ಮಾಡಿದರು. ಆ ಪ್ರಕಟಣೆಯಲ್ಲಿ ಪಾದ್ರಿ ಕೋಪದಿಂದ ಕಿರುಚುತ್ತಾ, “ಈ ಪುಸ್ತಕನಾ ನೋಡಿ! ಯಾರಾದರೂ ಈ ಪುಸ್ತಕನ ಕೊಟ್ಟರೆ ಅದನ್ನು ನನಗೆ ಕೊಟ್ಟು ಬಿಡಿ, ಇಲ್ಲ ಅಂದ್ರೆ ನೀವೇ ಅದನ್ನು ಬಿಸಾಡಿಬಿಡಿ” ಅಂತ ನಿತ್ಯಜೀವಕ್ಕೆ ನಡೆಸುವ ಸತ್ಯ ಎಂಬ ಪುಸ್ತಕದ ಬಗ್ಗೆ ಹೇಳಿದರು.

ನನ್ನ ಹತ್ತಿರ ಆ ಪುಸ್ತಕ ಇರಲಿಲ್ಲ, ಆದರೆ ಆ ಪ್ರಕಟಣೆ ಕೇಳಿದ ಮೇಲೆ ಆ ಪುಸ್ತಕವನ್ನು ತಕ್ಷಣ ಓದಬೇಕನಿಸಿತು. ಕೆಲವು ದಿನಗಳ ನಂತರ ಇಬ್ಬರು ಸಾಕ್ಷಿಗಳು ನಮ್ಮ ಮನೆಗೆ ಬಂದು ಚರ್ಚಲ್ಲಿ ನಿಷೇಧಿಸಲಾಗಿದ್ದ ಅದೇ ಪುಸ್ತಕವನ್ನು ಕೊಟ್ಟರು. ಅವತ್ತು ರಾತ್ರಿನೇ ನಾನು ಆ ಪುಸ್ತಕ ಓದಿದೆ. ನಂತರ ಆ ಸಾಕ್ಷಿಗಳ ಹತ್ತಿರ ಬೈಬಲ್‌ ಅಧ್ಯಯನಕ್ಕೆ ಒಪ್ಪಿದೆ.

ನಿತ್ಯಜೀವಕ್ಕೆ ನಡೆಸುವ ಸತ್ಯ—ಸ್ಪ್ಯಾನಿಷ್‌

“ನಿಷಿದ್ಧ” ಪುಸ್ತಕ

ಸತ್ಯ ನನ್ನನ್ನು ಸ್ಪರ್ಶಿಸಿತು. ಈ ಹಿಂದೆ ನನಗಿದ್ದ ಧಾರ್ಮಿಕ ಭಕ್ತಿ, ಈಗ ಯೆಹೋವನ ಮೇಲೆ ಪ್ರೀತಿ ಮತ್ತು ಸುವಾರ್ತೆಯ ಕಡೆಗೆ ಹುರುಪಾಗಿ ಪರಿವರ್ತನೆ ಆಗಿದೆ. 1973⁠ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡೆ. ನನ್ನ ಕುಟುಂಬಕ್ಕೆ ಸತ್ಯದ ಬಗ್ಗೆ ಹೇಳಲು ನನಗೆ ಕೆಲವೇ ಅವಕಾಶಗಳು ಸಿಕ್ಕಿದರೂ ನಾನು ನನ್ನಿಂದಾದ ಎಲ್ಲಾ ಪ್ರಯತ್ನ ಹಾಕಿದೆ. ಆರಂಭದಲ್ಲಿ ಹೇಳಿದಂತೆ ನನ್ನ ನಂಬಿಕೆಗಳನ್ನು ಅವರು ತುಂಬ ವಿರೋಧಿಸಿದರು. ಹೀಗೆ ವಿರೋಧಿಸಿದವರಲ್ಲಿ ನನ್ನ ತಂಗಿ ಅರಾಸೆಲಿನೇ ಹೆಚ್ಚು.

ಅರಾಸೆಲಿ: ಕಾನ್ವೆಂಟಿನಲ್ಲಿ ನನಗಾದ ಕಹಿ ಅನುಭವ ಇನ್ನೂ ಮಾಸಿ ಹೋಗಿರಲಿಲ್ಲ. ಆದರೂ ಭಾನುವಾರಗಳಂದು ಮಾಸ್‌ಗೆ ಹೋಗೋದನ್ನ, ಪ್ರತಿದಿನ ಪ್ರಾರ್ಥನೆ ಮಾಡೋದನ್ನು ಮಾತ್ರ ನಿಲ್ಲಿಸಿರಲಿಲ್ಲ. ಬೈಬಲನ್ನು ಕಲಿಯಬೇಕು ಅನ್ನುವ ಬಯಕೆ ಜೀವಂತವಾಗಿತ್ತು. ಸಹಾಯಕ್ಕಾಗಿ ದೇವರ ಹತ್ತಿರ ಪ್ರಾರ್ಥನೆ ಮಾಡಿದೆ. ಆದರೆ ನನ್ನ ಅಕ್ಕ ಫೆಲಿಸಾ ತನ್ನ ನಂಬಿಕೆಗಳ ಬಗ್ಗೆ ನನಗೆ ಹೇಳಿದಾಗ ಅವಳು ಮತಾಂಧಳಾಗಿದ್ದಾಳೆ ಅಂತ ಅನಿಸಿತು. ಆದ್ದರಿಂದ ನಾನು ಆಕೆಯನ್ನು ತುಂಬ ವಿರೋಧಿಸಿದೆ.

ಅರಾಸೆಲಿ ಅಂದು ಮತ್ತು ಇಂದು

ಅರಾಸೆಲಿ

ಕೆಲವು ವರ್ಷಗಳ ನಂತರ ಕೆಲಸಕ್ಕಾಗಿ ಮ್ಯಾಡ್ರಿಡ್‌ ನಗರಕ್ಕೆ ಹೋದೆ. ಅಲ್ಲೇ ಮದುವೆನೂ ಆಯಿತು. ಮುಂದೆ ಇನ್ನೂ ಹತ್ತು ಹಲವು ಸಂಶಯಗಳು ಹುಟ್ಟಿಕೊಂಡವು. ಕ್ರಮವಾಗಿ ಮಾಸ್‌ಗೆ ಹೋಗುತ್ತಿದ್ದವರು ಸಹ ಕೇಳುತ್ತಿದ್ದ ವಿಷಯಗಳ ಪ್ರಕಾರ ನಡೆಯುತ್ತಿರಲಿಲ್ಲ. ಆದ್ದರಿಂದ ಚರ್ಚ್‌ಗೆ ಹೋಗೋದನ್ನು ನಿಲ್ಲಿಸಿದೆ. ಸಂತರು, ಪಾಪ ನಿವೇದನೆ ಮತ್ತು ನರಕಾಗ್ನಿಯನ್ನೆಲ್ಲಾ ನಂಬುವುದನ್ನು ಬಿಟ್ಟುಬಿಟ್ಟೆ. ಮನೆಯಲ್ಲಿದ್ದ ವಿಗ್ರಹಗಳನ್ನೆಲ್ಲಾ ಬಿಸಾಡಿಬಿಟ್ಟೆ. ನಾನು ಮಾಡುತ್ತಿರೋದು ಸರೀನಾ ತಪ್ಪಾ ಅಂತ ನನಗೇನೂ ಗೊತ್ತಿರಲಿಲ್ಲ. ಬೇಸರದಲ್ಲಿದ್ದ ನಾನು “ನಿನ್ನ ಬಗ್ಗೆ ತಿಳಿದುಕೊಳ್ಳಬೇಕು, ದಯವಿಟ್ಟು ನನಗೆ ಸಹಾಯ ಮಾಡು” ಅಂತ ದೇವರಿಗೆ ಪ್ರಾರ್ಥಿಸುತ್ತಿದ್ದೆ. ಈ ಹಿಂದೆ ಯೆಹೋವನ ಸಾಕ್ಷಿಗಳು ಎಷ್ಟೋ ಬಾರಿ ನನ್ನ ಮನೆ ಬಾಗಿಲನ್ನು ತಟ್ಟಿದ್ದರು. ಆದರೆ ನಾನು ಯಾವತ್ತೂ ಬಾಗಿಲು ತೆರೆದಿರಲಿಲ್ಲ. ನನಗೆ ಧರ್ಮಗಳ ಮೇಲೆ ನಂಬಿಕೆನೇ ಹೋಗಿಬಿಟ್ಟಿತ್ತು.

1980⁠ರ ಆರಂಭದಲ್ಲಿ ನನ್ನ ತಂಗಿ ಲಾರಿ ಫ್ರಾನ್ಸ್‌ನಲ್ಲಿ ಮತ್ತು ರಮೋನಿ ಸ್ಪೇನ್‌ನಲ್ಲಿ ಯೆಹೋವನ ಸಾಕ್ಷಿಗಳೊಟ್ಟಿಗೆ ಬೈಬಲ್‌ ಅಧ್ಯಯನ ಆರಂಭಿಸಿದ್ದರು. ನನ್ನ ಅಕ್ಕ ಫೆಲಿಸಾಳ ತರಹಾನೇ ಇವರು ಕೂಡ ಮೋಸ ಹೋಗುತ್ತಿದ್ದಾರೆ ಅಂತ ಅಂದುಕೊಂಡಿದ್ದೆ. ತದನಂತರ ನನ್ನ ಮನೆಯ ಪಕ್ಕದಲ್ಲಿದ್ದ ಏಂಜಲೀನ್ಸ್‌ ಎಂಬವರ ಪರಿಚಯ ಆಯಿತು. ಆಕೆ ನನ್ನ ಆಪ್ತ ಗೆಳತಿಯಾದಳು, ಆಕೆ ಕೂಡ ಒಬ್ಬ ಯೆಹೋವನ ಸಾಕ್ಷಿ. ಏಂಜಲೀನ್ಸ್‌ ಮತ್ತು ಆಕೆಯ ಪತಿ ಆಗಾಗ ನನಗೆ ಬೈಬಲ್‌ ಅಧ್ಯಯನ ಸ್ವೀಕರಿಸುವಂತೆ ಉತ್ತೇಜಿಸುತ್ತಿದ್ದರು. ನನಗಿದ್ದ ಸಂಶಯಗಳ ಹಿಂದೆ ಆಧ್ಯಾತ್ಮಿಕ ಹಸಿವಿದೆ ಅಂತ ನನಗೆ ಮನವರಿಕೆ ಮಾಡಿಸಿದರು. ಕೊನೆಗೂ ನಾನು ಅವರಿಗೆ, “ಸರಿ, ನೀವು ಹೇಳಿದಂತೆ ನಾನು ಬೈಬಲ್‌ ಅಧ್ಯಯನ ಮಾಡ್ತೀನಿ. ನನ್ನ ಹತ್ತಿರ ಇರೋ ಬೈಬಲಿಂದನೇ ಅಧ್ಯಯನ ಮಾಡಿದರೆ ಮಾತ್ರ” ಎಂದು ಹೇಳಿದೆ. ಆಗ ನನ್ನ ಹತ್ತಿರ ನಕರ್‌-ಕೊಲುಂಗಾ ಭಾಷಾಂತರದ ಬೈಬಲ್‌ ಇತ್ತು.

ಬೈಬಲಿನಿಂದ ಬೆಸೆಯಿತು ಬಾಂಧವ್ಯ

ಫೆಲಿಸಾ: 1973⁠ರಲ್ಲಿ ಸ್ಪೇನ್‌ ದೇಶದ ಕ್ಯಾಂಟಾಬ್ರಿಯಾ ರಾಜ್ಯದ ಸಂಟಾಂಡರ್‌ನಲ್ಲಿ ಕೇವಲ 70 ಸಾಕ್ಷಿಗಳು ಮಾತ್ರ ಇದ್ದರು. ಆ ವರ್ಷದಲ್ಲೇ ನಾನು ದೀಕ್ಷಾಸ್ನಾನ ಪಡೆದೆ. ಸುವಾರ್ತೆಯ ಬಗ್ಗೆಯೇ ತಿಳಿಯದ ಎಷ್ಟೋ ದೊಡ್ಡ ಕ್ಷೇತ್ರ ನಮಗಿತ್ತು. ಆ ದೊಡ್ಡ ಕ್ಷೇತ್ರವನ್ನು ಆವರಿಸಲು ಬಸ್ಸಿನಲ್ಲಿ, ಕಾರಿನಲ್ಲೆಲ್ಲಾ ಪ್ರಯಾಣ ಮಾಡಿದೆವು. ಈ ಕ್ಷೇತ್ರದಲ್ಲಿ ಸುವಾರ್ತೆ ಸಾರಲು ನಾವು ಒಂದಾದ ನಂತರ ಒಂದರಂತೆ ಎಲ್ಲ ಹಳ್ಳಿಗಳನ್ನೂ ಆವರಿಸಿದೆವು.

ಕೆಲವು ವರ್ಷಗಳಲ್ಲೇ ನಾನು ಅನೇಕ ಬೈಬಲ್‌ ಅಧ್ಯಯನಗಳನ್ನು ನಡೆಸಿದೆ. ನನ್ನ 11 ಬೈಬಲ್‌ ವಿದ್ಯಾರ್ಥಿಗಳು ದೀಕ್ಷಾಸ್ನಾನ ಪಡೆದಿದ್ದಾರೆ. ಅವರಲ್ಲಿ ಹೆಚ್ಚಿನವರು ಕ್ಯಾಥೋಲಿಕರಾಗಿದ್ದರು. ನಾನು ಈ ಹಿಂದೆ ನನ್ನ ನಂಬಿಕೆಗಳಿಗೆ ಗಾಢವಾಗಿ ಅಂಟಿಕೊಂಡಿದ್ದರಿಂದ ನನ್ನ ವಿದ್ಯಾರ್ಥಿಗಳ ಮನಸ್ಸು ಅರ್ಥವಾಯಿತು. ನಾನು ಅವರನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅವರೊಂದಿಗೆ ತಾಳ್ಮೆಯಿಂದ ಇರಬೇಕೆಂದು ತಿಳಿದುಕೊಂಡೆ. ಅವರು ತಮ್ಮ ನಂಬಿಕೆಗಳನ್ನು ಬಿಡಲು, ಬೈಬಲ್‌ ಸತ್ಯ ಹಾಗೂ ಪವಿತ್ರಾತ್ಮ ಅವರ ಹೃದಯಗಳನ್ನು ಪ್ರಭಾವಿಸಲು ಸಮಯ ಹಿಡಿಯುತ್ತದೆ ಎಂದು ನನಗೆ ಗೊತ್ತಾಯಿತು. (ಇಬ್ರಿ. 4:12) ನನ್ನ ಗಂಡ ಬ್ಯೆನ್‌ ವೆನೀಡೋ ಒಬ್ಬ ಪೊಲೀಸ್‌ ಆಗಿದ್ದರು. 1979⁠ರಲ್ಲಿ ಅವರು ದೀಕ್ಷಾಸ್ನಾನ ಪಡೆದರು. ನನ್ನ ತಾಯಿ ಬೈಬಲ್‌ ಅಧ್ಯಯನ ಆರಂಭಿಸಿದ್ದರು. ಆದರೆ, ಸ್ವಲ್ಪದರಲ್ಲೇ ತೀರಿಕೊಂಡರು.

ಅರಾಸೆಲಿ: ಬೈಬಲ್‌ ಅಧ್ಯಯನ ಮಾಡಿದ ಆರಂಭದಲ್ಲಿ ನನಗೆ ಬಹಳ ಪ್ರಶ್ನೆಗಳು, ಅನುಮಾನಗಳಿದ್ದವು. ಆದರೆ ಆ ಅನುಮಾನಗಳು ಕೆಲವೇ ವಾರಗಳಲ್ಲಿ ದೂರವಾದವು. ಸಾಕ್ಷಿಗಳಲ್ಲಿ ನನಗೆ ಇಷ್ಟ ಆಗೋ ವಿಷಯ ಏನೆಂದರೆ ಅವರು ಏನು ಹೇಳ್ತಾರೋ ಹಾಗೇ ಮಾಡುತ್ತಾರೆ. ಮೊದಲು ಸಂಶಯಗಳೇ ಇದ್ದ ನನ್ನಲ್ಲಿ ಈಗ ನಂಬಿಕೆ ಮನೆ ಮಾಡಿದೆ. ನನ್ನ ಜೀವನದಲ್ಲಿ ಸಂತೋಷ ಇದೆ. ನನ್ನ ಕೆಲವು ನೆರೆಹೊರೆಯವರು “ಅರಾಸೆಲಿ, ನೀನು ಮಾಡಿರುವ ಆಯ್ಕೆ ಸರಿಯಾಗಿದೆ, ಅದನ್ನೇ ಮುಂದುವರಿಸು” ಎಂದು ಹೇಳಿದರು.

ನಾನು ಮಾಡ್ತಿದ್ದ ಪ್ರಾರ್ಥನೆ ನನಗೆ ಇನ್ನೂ ನೆನಪಿದೆ, “ಯೆಹೋವ, ನಿನ್ನ ಬಗ್ಗೆ ಮತ್ತು ಬೈಬಲಿನ ಜ್ಞಾನ ತಿಳಿದುಕೊಳ್ಳಲು ನೀನು ಎಷ್ಟೊಂದು ಅವಕಾಶಗಳನ್ನು ಕೊಟ್ಟೆ, ಅದಕ್ಕೆ ನಾನು ಯಾವಾಗಲೂ ಕೃತಜ್ಞಳು.” ಅಕ್ಕ ಫೆಲಿಸಾಗೆ ನಾನು ಮನನೋಯುವಂತೆ ಮಾತಾಡಿದ್ದಕ್ಕಾಗಿ ಕ್ಷಮೆಯಾಚಿಸಿದೆ. ಈ ಮುಂಚೆ ಮಾತೆತ್ತಿದರೆ ನಮ್ಮ ಮಧ್ಯೆ ಜಗಳಗಳಾಗುತ್ತಿದ್ದವು, ಆದರೆ ಈಗ ಆಧ್ಯಾತ್ಮಿಕ ಚರ್ಚೆಗಳಾಗುತ್ತಿವೆ. ನಾನು 1989⁠ರಲ್ಲಿ ಅಂದರೆ ನನ್ನ 61⁠ನೇ ವಯಸ್ಸಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡೆ.

ಫೆಲಿಸಾ: ನಾನೊಬ್ಬ ವಿಧವೆ, ನನಗೀಗ 91 ವರ್ಷ. ಈ ಹಿಂದೆ ಇದ್ದಷ್ಟು ಶಕ್ತಿ ನನಗೀಗ ಇಲ್ಲ. ಆದರೆ ಪ್ರತಿದಿನ ಬೈಬಲ್‌ ಓದುತ್ತೇನೆ, ಸಾಧ್ಯವಾದಾಗೆಲ್ಲ ಕೂಟಗಳಿಗೆ ಹೋಗುತ್ತೇನೆ. ನನ್ನ ಕೈಲಾದಷ್ಟು ಸುವಾರ್ತೆ ಸಾರುತ್ತಾ ಸಂತೋಷವಾಗಿದ್ದೇನೆ.

ಅರಾಸೆಲಿ: ಒಂದು ಕಾಲದಲ್ಲಿ ಸನ್ಯಾಸಿನಿ ಆಗಿದ್ದ ನನಗೆ ಬೇರೆ ಸನ್ಯಾಸಿನಿಯರಿಗೆ, ಪಾದ್ರಿಗಳಿಗೆ ಸಾಕ್ಷಿ ಕೊಡಲು ತುಂಬ ಇಷ್ಟ. ಅಂಥವರಿಗೆ ನಾನು ಬಹಳಷ್ಟು ಸಾಹಿತ್ಯ ಕೊಟ್ಟಿದ್ದೇನೆ ಮತ್ತು ಕೆಲವು ರೋಚಕ ಸಂಭಾಷಣೆಗಳನ್ನೂ ಆನಂದಿಸಿದ್ದೇನೆ. ಒಮ್ಮೆ ನಾನು ಒಬ್ಬ ಪಾದ್ರಿಗೆ ಸಾಕ್ಷಿ ಕೊಟ್ಟಿದ್ದು ನನಗಿನ್ನೂ ನೆನಪಿದೆ. ಅವರನ್ನು ಕೆಲವು ಬಾರಿ ಪುನರ್ಭೇಟಿ ಮಾಡಿದ ನಂತರ ಆ ವ್ಯಕ್ತಿ, “ಅರಾಸೆಲಿ, ನೀವು ಹೇಳೋದನ್ನು ನಾನು ಪೂರ್ತಿ ಒಪ್ಪುತ್ತೇನೆ. ಆದರೆ ನನ್ನ ಈ ಇಳಿವಯಸ್ಸಿನಲ್ಲಿ ಇಲ್ಲಿಂದ ಇನ್ನೆಲ್ಲಿಗೆ ಹೋಗಲಿ? ಸಂಬಂಧಿಕರು, ಚರ್ಚಿನವರು ನನ್ನ ಬಗ್ಗೆ ಏನು ಅಂದುಕೊಳ್ಳುತ್ತಾರೆ?” ಅಂತ ಅಂದರು. ಅದಕ್ಕೆ ನಾನು “ದೇವರು ನಿಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ ಅಂತಾನೂ ಒಮ್ಮೆ ಯೋಚಿಸಿ” ಅಂತ ಹೇಳಿದೆ. ಅವರು ಅದಕ್ಕೆ ಸುಮ್ಮನೆ ತಲೆಯಾಡಿಸಿದರು. ಸತ್ಯ ತಿಳಿದುಕೊಂಡು, ಅದನ್ನು ಸ್ವೀಕರಿಸುವಷ್ಟು ಧೈರ್ಯ ಅವರಿಗಿರಲಿಲ್ಲ.

ನನ್ನ ಜೀವನದಲ್ಲಿ ನಾನೆಂದೂ ಮರೆಯಲಾಗದ ಕ್ಷಣ ಒಂದಿದೆ. ಅದು ನನ್ನ ಗಂಡ ನನ್ನ ಜೊತೆ ಕೂಟಗಳಿಗೆ ಬರುತ್ತೇನೆಂದು ಹೇಳಿದ್ದು! ಅಂದಿನಿಂದ ಅವರು ಒಂದೇ ಒಂದು ಕೂಟವನ್ನೂ ತಪ್ಪಿಸಲಿಲ್ಲ. ಅವರಿಗಾಗಲೇ 80ಕ್ಕೂ ಹೆಚ್ಚು ವಯಸ್ಸಾಗಿತ್ತು. ಅವರು ಬೈಬಲ್‌ ಅಧ್ಯಯನ ಪಡೆದು ಅಸ್ನಾತ ಪ್ರಚಾರಕರಾದರು. ನಾವಿಬ್ಬರೂ ಜೊತೆಯಾಗಿ ಸೇವೆ ಮಾಡಿದ ಕ್ಷಣಗಳು ನನ್ನ ನೆನಪಲ್ಲಿ ಹಚ್ಚಹಸಿರಾಗಿಯೇ ಇವೆ. ಅವರು ದೀಕ್ಷಾಸ್ನಾನ ಪಡೆಯುವುದಕ್ಕೆ ಕೇವಲ ಎರಡು ತಿಂಗಳ ಮುಂಚೆ ತೀರಿಕೊಂಡರು.

ಫೆಲಿಸಾ: ನನ್ನ ಮೂವರು ತಂಗಿಯರು ಆರಂಭದಲ್ಲಿ ವಿರೋಧಿಸಿದರೂ ನಂತರ ಸತ್ಯ ಕಲಿತದ್ದು ನನಗೆ ಹೇಳಲಾಗದ ಸಂತೋಷ ತಂದಿದೆ. ಯೆಹೋವನ ಬಗ್ಗೆ, ಆತನ ವಾಕ್ಯದ ಬಗ್ಗೆ ಮಾತಾಡಿದ್ದು, ನಾವೆಲ್ಲರೂ ಜೊತೆಯಾಗಿ ಸಮಯ ಕಳೆದಿದ್ದು ಅವಿಸ್ಮರಣೀಯ! ಕೊನೆಗೂ ನುಚ್ಚುನೂರಾಗಿದ್ದ ನಮ್ಮ ಸಂಬಂಧ, ಬೈಬಲಿನಿಂದಾಗಿ ಮತ್ತೆ ಬೆಸೆಯಿತು. ನಾವೀಗ ರಕ್ತ ಸಂಬಂಧಿಗಳು ಮಾತ್ರವೇ ಅಲ್ಲ ಕ್ರೈಸ್ತ ಸಂಬಂಧಿಗಳಾಗಿದ್ದೇವೆ.a

a ಅರಾಸೆಲಿಗೆ ಈಗ 87 ವರ್ಷ, ಫೆಲಿಸಾಗೆ 91 ಮತ್ತು ರಮೋನಿಗೆ 83 ವರ್ಷ. ಅವರೆಲ್ಲ ಇವತ್ತಿನವರೆಗೂ ಯೆಹೋವನಿಗೆ ನಂಬಿಗಸ್ತಿಕೆಯಿಂದ ಸೇವೆ ಮಾಡುತ್ತಿದ್ದಾರೆ. ಲಾರಿ 1990⁠ರಲ್ಲಿ ತೀರಿಹೋದರು, ಅವರು ಮರಣದ ತನಕ ಯೆಹೋವನಿಗೆ ನಂಬಿಗಸ್ತರಾಗಿದ್ದರು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ