ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w17 ಜನವರಿ ಪು. 12-16
  • ಇಚ್ಛಾಸ್ವಾತಂತ್ರ್ಯ ಎಂಬ ಅದ್ಭುತ ವರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇಚ್ಛಾಸ್ವಾತಂತ್ರ್ಯ ಎಂಬ ಅದ್ಭುತ ವರ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೆಹೋವ ಮತ್ತು ಯೇಸುವಿನಿಂದ ನಾವೇನು ಕಲಿಯುತ್ತೇವೆ?
  • ಇಚ್ಛಾಸ್ವಾತಂತ್ರ್ಯದ ಉಪಯೋಗ ಮತ್ತು ದುರುಪಯೋಗ
  • ಇಚ್ಛಾಸ್ವಾತಂತ್ರ್ಯವನ್ನು ದುರುಪಯೋಗಿಸಬೇಡಿ
  • ಬೇರೆಯವರಿಗೂ ಇಚ್ಛಾಸ್ವಾತಂತ್ರ್ಯ ಇದೆ
  • ನಿಜ ಸ್ವಾತಂತ್ರ್ಯ ಸಿಗುವ ವಿಧ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಒಂದು ಸ್ವತಂತ್ರ ಜನಾಂಗ ಆದರೆ ಲೆಕ್ಕತೆರಬೇಕಾದವರು
    ಕಾವಲಿನಬುರುಜು—1992
  • ನಿಜ ಸ್ವಾತಂತ್ರ್ಯದ ದೇವರಾದ ಯೆಹೋವನ ಸೇವೆ ಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಇಚ್ಛಾ ಸ್ವಾತಂತ್ರ್ಯದ ಅದ್ಭುತಕರ ವರದಾನ
    ಎಚ್ಚರ!—1991
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
w17 ಜನವರಿ ಪು. 12-16
ಅಬ್ರಹಾಮ, ಸಾರ ತಮ್ಮ ಜನರ ಜೊತೆ ಊರ್‌ ಪಟ್ಟಣವನ್ನು ಬಿಟ್ಟು ಹೋಗುತ್ತಿರುವುದು

ಇಚ್ಛಾಸ್ವಾತಂತ್ರ್ಯ ಎಂಬ ಅದ್ಭುತ ವರ

“ಎಲ್ಲಿ ಯೆಹೋವನ ಆತ್ಮವಿದೆಯೋ ಅಲ್ಲಿ ಸ್ವಾತಂತ್ರ್ಯವಿದೆ.”—2 ಕೊರಿಂ. 3:17.

ಗೀತೆಗಳು: 62, 65

ನಿಮ್ಮ ಉತ್ತರವೇನು?

  • ಇಚ್ಛಾಸ್ವಾತಂತ್ರ್ಯ ಅಂದರೆ ಏನು?

  • ಯೆಹೋವನ ಮೇಲೆ ನಮಗೆ ಎಷ್ಟು ಪ್ರೀತಿ ಇದೆ ಎಂಬುದನ್ನು ಹೇಗೆ ತೋರಿಸಬಹುದು?

  • ಬೇರೆಯವರು ತೆಗೆದುಕೊಳ್ಳುವ ನಿರ್ಣಯಗಳನ್ನು ನಾವು ಗೌರವಿಸುತ್ತೇವೆ ಎಂದು ಹೇಗೆ ತೋರಿಸಬಹುದು?

1, 2. (ಎ) ಇಚ್ಛಾಸ್ವಾತಂತ್ರ್ಯದ ಬಗ್ಗೆ ಜನರ ಅಭಿಪ್ರಾಯ ಏನು? (ಬಿ) ಇಚ್ಛಾಸ್ವಾತಂತ್ರ್ಯದ ಬಗ್ಗೆ ಬೈಬಲ್‌ ಏನು ಹೇಳುತ್ತದೆ? (ಸಿ) ನಾವು ಯಾವ ಪ್ರಶ್ನೆಗಳನ್ನು ಪರಿಗಣಿಸಲಿದ್ದೇವೆ?

ಒಂದು ವೈಯಕ್ತಿಕ ತೀರ್ಮಾನ ತೆಗೆದುಕೊಳ್ಳಲಿಕ್ಕಿದ್ದಾಗ ಒಬ್ಬ ಸ್ತ್ರೀ ತನ್ನ ಸ್ನೇಹಿತನಿಗೆ ಹೇಳಿದ್ದು: “ನನಗೆ ಯೋಚಿಸಿ ತೀರ್ಮಾನ ತೊಗೊಳ್ಲಿಕ್ಕೆಲ್ಲ ಆಗಲ್ಲ. ಏನ್‌ ಮಾಡ್ಬೇಕಂತ ಹೇಳು, ಮಾಡ್ತೇನೆ” ಅಂದಳು. ಸೃಷ್ಟಿಕರ್ತನು ನಮಗೆ ಇಚ್ಛಾಸ್ವಾತಂತ್ರ್ಯ ಎಂಬ ಅದ್ಭುತ ವರವನ್ನು ಕೊಟ್ಟಿದ್ದಾನೆ. ಆದರೆ ಈ ಸ್ತ್ರೀಗೆ ಅದನ್ನು ಉಪಯೋಗಿಸುವುದು ಕಷ್ಟ ಅನಿಸಿತು. ನಿಮ್ಮ ಬಗ್ಗೆ ಏನು? ನೀವು ಸ್ವತಃ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೀರಾ ಅಥವಾ ಬೇರೆಯವರು ಹೇಳಿದ ಹಾಗೆ ಮಾಡುತ್ತೀರಾ? ದೇವರು ಕೊಟ್ಟಿರುವ ಇಚ್ಛಾಸ್ವಾತಂತ್ರ್ಯದ ಬಗ್ಗೆ ನಿಮಗೆ ಏನನಿಸುತ್ತದೆ?

2 ಈ ಇಚ್ಛಾಸ್ವಾತಂತ್ರ್ಯ ಅಂದರೆ ಏನು ಅಂತ ಕೇಳಿದರೆ ಒಬ್ಬೊಬ್ಬರೂ ಒಂದೊಂದು ಹೇಳುತ್ತಾರೆ. ಕೆಲವರು ಇಚ್ಛಾಸ್ವಾತಂತ್ರ್ಯ ಅನ್ನೋದು ಇಲ್ವೇ ಇಲ್ಲ, ಯಾಕೆಂದರೆ ದೇವರು ಎಲ್ಲವನ್ನೂ ನಮ್ಮ ಹಣೆಯಲ್ಲಿ ಯಾವಾಗ್ಲೋ ಬರೆದಾಯ್ತು ಅನ್ನುತ್ತಾರೆ. ಬೇರೆಯವರು ಸಂಪೂರ್ಣ ಸ್ವಾತಂತ್ರ್ಯ ಇಲ್ಲದೆ ಇಚ್ಛಾಸ್ವಾತಂತ್ರ್ಯ ಹೇಗೆ ಸಿಗುತ್ತೆ ಅಂತಾರೆ. ಆದರೆ ನಮ್ಮ ಬುದ್ಧಿಶಕ್ತಿಯನ್ನು ಉಪಯೋಗಿಸಿ ವೈಯಕ್ತಿಕ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸ್ವಾತಂತ್ರ್ಯವನ್ನು ದೇವರು ನಮಗೆ ಕೊಟ್ಟಿದ್ದಾನೆ ಎಂದು ಬೈಬಲ್‌ ಹೇಳುತ್ತದೆ. (ಯೆಹೋಶುವ 24:15 ಓದಿ.) ಬೈಬಲಿನಲ್ಲಿ ನಮಗೆ ಈ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ: ನಮ್ಮ ಇಚ್ಛಾಸ್ವಾತಂತ್ರ್ಯಕ್ಕೆ ಮಿತಿ ಇದೆಯಾ? ಈ ವರವನ್ನು ನಾವು ಹೇಗೆ ಉಪಯೋಗಿಸಬೇಕು? ನಾವು ತೆಗೆದುಕೊಳ್ಳುವ ತೀರ್ಮಾನಗಳು ನಾವು ಯೆಹೋವನನ್ನು ಎಷ್ಟು ಪ್ರೀತಿಸುತ್ತೇವೆ ಎಂಬುದನ್ನು ಹೇಗೆ ತೋರಿಸುತ್ತದೆ? ಬೇರೆಯವರು ತೆಗೆದುಕೊಳ್ಳುವ ತೀರ್ಮಾನಗಳನ್ನು ನಾವು ಗೌರವಿಸುತ್ತೇವೆ ಎಂದು ಹೇಗೆ ತೋರಿಸಬಹುದು?

ಯೆಹೋವ ಮತ್ತು ಯೇಸುವಿನಿಂದ ನಾವೇನು ಕಲಿಯುತ್ತೇವೆ?

3. ತನಗಿರುವ ಸಂಪೂರ್ಣ ಸ್ವಾತಂತ್ರ್ಯವನ್ನು ಯೆಹೋವನು ಹೇಗೆ ಉಪಯೋಗಿಸುತ್ತಾನೆ?

3 ಯೆಹೋವನಿಗೆ ಸಂಪೂರ್ಣ ಸ್ವಾತಂತ್ರ್ಯ ಇದೆ. ಆತನು ಈ ಸ್ವಾತಂತ್ರ್ಯವನ್ನು ಹೇಗೆ ಉಪಯೋಗಿಸುತ್ತಾನೆ ಎಂಬುದನ್ನು ನೋಡಿ ನಾವು ಪಾಠ ಕಲಿಯಬಹುದು. ಯೆಹೋವನು ಆ ಕಾಲದ ಇಸ್ರಾಯೇಲ್ಯರನ್ನು ತನ್ನ ಸ್ವಂತ ಜನರಾಗಿ, ಸ್ವತ್ತಾಗಿ ಆರಿಸಿಕೊಂಡನು. (ಧರ್ಮೋ. 7:6-8) ಅವರನ್ನು ಆರಿಸಿಕೊಳ್ಳುವುದರ ಹಿಂದೆ ಒಂದು ಕಾರಣ ಇತ್ತು. ತನ್ನ ಸ್ನೇಹಿತನಾದ ಅಬ್ರಹಾಮನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಕ್ಕೋಸ್ಕರ ಈ ತೀರ್ಮಾನ ತೆಗೆದುಕೊಂಡನು. (ಆದಿ. 22:15-18) ಯೆಹೋವನು ತನಗಿರುವ ಸ್ವಾತಂತ್ರ್ಯವನ್ನು ಯಾವಾಗಲೂ ಪ್ರೀತಿಯಿಂದ ನ್ಯಾಯದಿಂದ ಉಪಯೋಗಿಸುತ್ತಾನೆ. ಈ ಇಸ್ರಾಯೇಲ್ಯರು ಆತನ ಮಾತು ಕೇಳದೆ ಹೋದಾಗ ಆತನು ಹೇಗೆ ನಡೆದುಕೊಂಡನು ಅನ್ನುವ ವಿಷಯದಲ್ಲಿ ಇದು ಗೊತ್ತಾಗುತ್ತದೆ. ತಪ್ಪು ಮಾಡಿದವರು ಕ್ಷಮಿಸಿಬಿಡಪ್ಪಾ ಎಂದು ಕೇಳಿಕೊಂಡಾಗ ಮನಮರುಗಿ ಅವರಿಗೆ ಪ್ರೀತಿ ದಯೆ ತೋರಿಸಿದನು. “ನಾನು ನನ್ನ ಜನರ ಭ್ರಷ್ಟತ್ವವನ್ನು ಪರಿಹರಿಸಿ ಅವರನ್ನು ಮನಃಪೂರ್ವಕವಾಗಿ ಪ್ರೀತಿಸುವೆನು” ಎಂದನು. (ಹೋಶೇ. 14:4) ಯೆಹೋವನು ತನಗಿರುವ ಸ್ವಾತಂತ್ರ್ಯವನ್ನು ಬೇರೆಯವರಿಗೆ ಒಳ್ಳೇದು ಮಾಡಲು ಉಪಯೋಗಿಸುತ್ತಾನೆ. ನಾವೂ ಅದನ್ನೇ ಮಾಡಬೇಕು.

4, 5. (ಎ) ದೇವರಿಂದ ಇಚ್ಛಾಸ್ವಾತಂತ್ರ್ಯವನ್ನು ಪಡೆದುಕೊಂಡ ಮೊದಲ ವ್ಯಕ್ತಿ ಯಾರು? (ಬಿ) ಅವನು ಈ ಸ್ವಾತಂತ್ರ್ಯವನ್ನು ಹೇಗೆ ಉಪಯೋಗಿಸಿದನು? (ಸಿ) ನಾವು ಯಾವ ಪ್ರಶ್ನೆ ಕೇಳಿಕೊಳ್ಳಬೇಕು?

4 ಯೆಹೋವನು ದೇವದೂತರಿಗೆ ಮತ್ತು ಮಾನವರಿಗೆ ಸಹ ಈ ಇಚ್ಛಾಸ್ವಾತಂತ್ರ್ಯವನ್ನು ಕೊಟ್ಟನು. ಇಚ್ಛಾಸ್ವಾತಂತ್ರ್ಯವನ್ನು ಪಡೆದುಕೊಂಡ ಮೊದಲ ವ್ಯಕ್ತಿ ಯೇಸು. ದೇವರ ಸ್ವರೂಪದಲ್ಲಿ ಸೃಷ್ಟಿಮಾಡಲ್ಪಟ್ಟದ್ದರಿಂದ ಅವನಿಗೆ ಇಚ್ಛಾಸ್ವಾತಂತ್ರ್ಯ ಇತ್ತು. (ಕೊಲೊ. 1:15) ಯೇಸು ಈ ಸ್ವಾತಂತ್ರ್ಯವನ್ನು ಹೇಗೆ ಉಪಯೋಗಿಸಿದನು? ಭೂಮಿಗೆ ಬರುವುದಕ್ಕೆ ಮುಂಚೆಯೇ ತಾನು ದೇವರಿಗೆ ನಿಷ್ಠಾವಂತನಾಗಿರಲು ಬಯಸುತ್ತೇನೆ ಎಂದು ತೋರಿಸಿದನು. ಸೈತಾನ ಎಬ್ಬಿಸಿದ ದಂಗೆಯಲ್ಲಿ ಅವನು ಸೇರಲಿಲ್ಲ. ಭೂಮಿಗೆ ಬಂದಾಗ ಸಹ ಸೈತಾನನ ಕುತಂತ್ರಗಳಿಗೆ ಬಲಿಯಾಗಲಿಲ್ಲ. (ಮತ್ತಾ. 4:10) ನಂತರ ಅವನು ಸಾಯುವ ಮುಂಚಿನ ರಾತ್ರಿ ತನ್ನ ತಂದೆಗೆ ಪ್ರಾರ್ಥನೆ ಮಾಡಿ ಆತನ ಚಿತ್ತವನ್ನೇ ಮಾಡಲು ಬಯಸುತ್ತೇನೆ ಎಂದು ತಿಳಿಸಿದ. “ತಂದೆಯೇ, ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು. ಆದರೂ ನನ್ನ ಚಿತ್ತವಲ್ಲ ನಿನ್ನ ಚಿತ್ತವು ನೆರವೇರಲಿ” ಎಂದು ಹೇಳಿದನು. (ಲೂಕ 22:42) ಯೇಸುವಿನಂತೆ ನಾವು ನಮ್ಮ ಇಚ್ಛಾಸ್ವಾತಂತ್ರ್ಯವನ್ನು ಯೆಹೋವನಿಗೆ ಮಹಿಮೆ ತರುವ ರೀತಿಯಲ್ಲಿ ಮತ್ತು ಆತನ ಚಿತ್ತವನ್ನು ನೆರವೇರಿಸುವುದಕ್ಕಾಗಿ ಉಪಯೋಗಿಸಲು ಸಾಧ್ಯನಾ?

5 ಹೌದು ಸಾಧ್ಯ. ಯೇಸುವಿನಂತೆ ನಮ್ಮನ್ನು ಸಹ ಯೆಹೋವನು ಆತನ ಸ್ವರೂಪದಲ್ಲಿ ಸೃಷ್ಟಿಸಿದ್ದಾನೆ. (ಆದಿ. 1:26) ಆದರೆ ಯೆಹೋವನಿಗಿರುವ ತರ ಸಂಪೂರ್ಣ ಸ್ವಾತಂತ್ರ್ಯ ನಮಗಿಲ್ಲ. ನಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸುವ ವಿಷಯದಲ್ಲಿ ಯೆಹೋವನು ಕೆಲವು ಮಿತಿಗಳನ್ನು ಇಟ್ಟಿದ್ದಾನೆಂದು ಬೈಬಲ್‌ ಹೇಳುತ್ತದೆ. ನಾವು ಈ ಮಿತಿಗಳನ್ನು ಮೀರಬಾರೆಂದು ಯೆಹೋವನು ಅಪೇಕ್ಷಿಸುತ್ತಾನೆ. ಉದಾಹರಣೆಗೆ, ಕುಟುಂಬದಲ್ಲಿ ಹೆಂಡತಿ ಗಂಡನಿಗೆ ಅಧೀನಳಾಗಿರಬೇಕು, ಮಕ್ಕಳು ಹೆತ್ತವರಿಗೆ ವಿಧೇಯರಾಗಿರಬೇಕು. (ಎಫೆ. 5:22; 6:1) ನಾವು ಇಚ್ಛಾಸ್ವಾತಂತ್ರ್ಯವನ್ನು ಉಪಯೋಗಿಸುವ ವಿಧದ ಮೇಲೆ ಈ ಮಿತಿಗಳು ಯಾವ ಪ್ರಭಾವ ಬೀರುತ್ತವೆ? ನಾವು ಈ ಪ್ರಶ್ನೆಗೆ ಉತ್ತರ ತಿಳಿದುಕೊಂಡು ಅದರಂತೆ ನಡೆದರೆ ನಮಗೆ ತುಂಬ ಆಶೀರ್ವಾದಗಳು ಸಿಗುತ್ತವೆ.

ಇಚ್ಛಾಸ್ವಾತಂತ್ರ್ಯದ ಉಪಯೋಗ ಮತ್ತು ದುರುಪಯೋಗ

6. ನಮ್ಮ ಸ್ವಾತಂತ್ರ್ಯಕ್ಕೆ ಕೆಲವು ಇತಿಮಿತಿಗಳು ಇರುವುದು ಒಳ್ಳೇದೇ ಎಂದು ತೋರಿಸುವ ಒಂದು ಉದಾಹರಣೆ ಕೊಡಿ.

6 ಇಚ್ಛಾಸ್ವಾತಂತ್ರ್ಯಕ್ಕೆ ಮಿತಿ ಇದ್ದರೆ ಅದನ್ನು ನಿಜವಾದ ಸ್ವಾತಂತ್ರ್ಯ ಎಂದು ಹೇಳಲು ಸಾಧ್ಯನಾ? ಸಾಧ್ಯ. ಹೇಗೆ? ಹೇಗೆಂದರೆ ಮಿತಿಗಳು ನಮ್ಮನ್ನು ಅಪಾಯದಿಂದ ಕಾಪಾಡುತ್ತವೆ. ನೆನಸಿ, ನೀವು ನಿಮ್ಮ ಗಾಡಿಯಲ್ಲಿ ಬೇರೆ ಊರಿಗೆ ಹೋಗಿ ಬರುವ ಯೋಜನೆ ಮಾಡ್ತೀರಿ. ಆದರೆ ನೀವು ಹೋಗಲಿಕ್ಕಿರುವ ರಸ್ತೆಯಲ್ಲಿ ಯಾವುದೇ ಸಂಚಾರ ನಿಯಮಗಳು ಇಲ್ಲದಿದ್ದರೆ . . . ಯಾರು ಬೇಕಾದರೂ ಹೇಗೆ ಬೇಕಾದರೂ ಎಷ್ಟು ವೇಗದಲ್ಲಿ ಬೇಕಾದರೂ ರಸ್ತೆಯ ಯಾವುದೇ ಕಡೆಯಲ್ಲಿ ಗಾಡಿ ಓಡಿಸಬಹುದು ಅಂತಿದ್ದರೆ . . . ಅಂಥ ರಸ್ತೆಯಲ್ಲಿ ಹೋಗುವ ಯೋಚನೆನೇ ಭಯಂಕರವಾಗಿದೆ ಅಲ್ವಾ? ನಿಜವಾದ ಸ್ವಾತಂತ್ರ್ಯವನ್ನು ಎಲ್ಲರೂ ಆನಂದಿಸಬೇಕಾದರೆ ಅದಕ್ಕೆ ಕೆಲವು ಮಿತಿಗಳು ಬೇಕು. ಈಗ ನಾವು ಬೈಬಲಿನಿಂದ ಕೆಲವು ಉದಾಹರಣೆಗಳನ್ನು ನೋಡೋಣ. ಈ ಉದಾಹರಣೆಗಳಿಂದ ಯೆಹೋವನು ಇಟ್ಟಿರುವ ಮಿತಿಗಳು ನಮ್ಮ ಒಳ್ಳೇದಕ್ಕಾಗಿಯೇ ಇದೆ ಎಂದು ತಿಳಿದುಕೊಳ್ಳುತ್ತೇವೆ.

7. (ಎ) ಆದಾಮ ಮತ್ತು ಪ್ರಾಣಿಗಳ ಮಧ್ಯೆ ಯಾವ ವ್ಯತ್ಯಾಸ ಇತ್ತು? (ಬಿ) ಆದಾಮನು ತನ್ನ ಇಚ್ಛಾಸ್ವಾತಂತ್ರ್ಯವನ್ನು ಬಳಸಿದ ಒಂದು ವಿಧ ಯಾವುದು?

7 ಯೆಹೋವನು ಮೊದಲ ಮಾನವನಾದ ಆದಾಮನನ್ನು ಸೃಷ್ಟಿಮಾಡಿದಾಗ ದೇವದೂತರಿಗೆ ಕೊಟ್ಟಿದ್ದ ಇಚ್ಛಾಸ್ವಾತಂತ್ರ್ಯವನ್ನು ಆದಾಮನಿಗೂ ಕೊಟ್ಟನು. ಆದರೆ ಪ್ರಾಣಿಗಳಿಗೆ ಇಚ್ಛಾಸ್ವಾತಂತ್ರ್ಯ ಅನ್ನುವುದು ಇಲ್ಲ. ಅವು ಹುಟ್ಟರಿವಿನ ಪ್ರಕಾರ ವಿಷಯಗಳನ್ನು ಮಾಡುತ್ತವೆ. ಆದಾಮನು ತನಗೆ ಕೊಡಲಾದ ಇಚ್ಛಾಸ್ವಾತಂತ್ರ್ಯವನ್ನು ಹೇಗೆ ಬಳಸಿದನು? ದೇವರು ಪ್ರಾಣಿಗಳನ್ನು ಆದಾಮನಿಗಿಂತ ಮುಂಚೆಯೇ ಸೃಷ್ಟಿಮಾಡಿದ್ದರೂ ಅವುಗಳಿಗೆ ಹೆಸರಿಡುವ ಸುಯೋಗವನ್ನು ಆದಾಮನಿಗೆ ಕೊಟ್ಟನು. ಆದಾಮನು “ಇವುಗಳಿಗೆ . . . ಏನೇನು ಹೆಸರಿಡುವನು ನೋಡೋಣ ಎಂದು ಅವನ ಬಳಿಗೆ ಬರಮಾಡಿದನು.” ಆದಾಮ ಒಂದೊಂದೇ ಪ್ರಾಣಿಯನ್ನು ಗಮನಿಸಿ ಅದಕ್ಕೆ ಸೂಕ್ತವಾದ ಹೆಸರಿಟ್ಟನು. ‘ಆ ಹೆಸರು ಚೆನ್ನಾಗಿಲ್ಲ, ಈ ಹೆಸರು ಚೆನ್ನಾಗಿಲ್ಲ’ ಎಂದು ದೇವರು ಆಮೇಲೆ ಹೆಸರುಗಳನ್ನು ಬದಲಾಯಿಸಲಿಲ್ಲ. ಆದಾಮನು “ಒಂದೊಂದು ಪ್ರಾಣಿಗೆ ಯಾವ ಯಾವ ಹೆಸರಿಟ್ಟನೋ ಅದೇ ಹೆಸರಾಯಿತು.”—ಆದಿ. 2:19.

8. (ಎ) ಆದಾಮ ಹೇಗೆ ತನ್ನ ಇಚ್ಛಾಸ್ವಾತಂತ್ರ್ಯವನ್ನು ದುರುಪಯೋಗಿಸಿದನು? (ಬಿ) ಅದರ ಪರಿಣಾಮ ಏನಾಯಿತು?

8 ಯೆಹೋವನು ಆದಾಮ ಮತ್ತು ಅವನ ಪತ್ನಿಗೆ ಭೂಮಿಯನ್ನು ಒಂದು ಸುಂದರ ತೋಟವಾಗಿ ಮಾಡುವ ಸುಯೋಗವನ್ನು ಕೊಟ್ಟನು. “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ” ಅಂದನು. (ಆದಿ. 1:28) ಆದರೆ ಆದಾಮ ದೇವರು ಮಾಡಬಾರದೆಂದು ಹೇಳಿದ್ದ ವಿಷಯವನ್ನು ಮಾಡಿಬಿಟ್ಟ. ದೇವರು ತಿನ್ನಬಾರದೆಂದು ಹೇಳಿದ್ದ ಹಣ್ಣನ್ನು ತಿಂದುಬಿಟ್ಟ. ಹೀಗೆ ದೇವರು ಹಾಕಿದ್ದ ಗೆರೆಯನ್ನು ಅವನು ದಾಟಿದ. ತನಗೆ ಕೊಡಲಾದ ಇಚ್ಛಾಸ್ವಾತಂತ್ರ್ಯವನ್ನು ಆದಾಮ ದುರುಪಯೋಗಿಸಿದ್ದರಿಂದ ಮಾನವರು ಸಾವಿರಾರು ವರ್ಷಗಳಿಂದ ಕಷ್ಟಪಡುತ್ತಿದ್ದಾರೆ. (ರೋಮ. 5:12) ಆದಾಮನು ಮಾಡಿದ ಮೂರ್ಖ ಕೆಲಸವನ್ನು ನಾವು ಮಾಡದಿರೋಣ. ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಆನಂದಿಸುವಾಗ ದೇವರಿಟ್ಟಿರುವ ಎಲ್ಲೆಗಳನ್ನು ದಾಟದಿರೋಣ.

9. (ಎ) ಯೆಹೋವನು ತನ್ನ ಜನರಾದ ಇಸ್ರಾಯೇಲ್ಯರಿಗೆ ಯಾವ ಸುಯೋಗ ಕೊಟ್ಟನು? (ಬಿ) ಅದಕ್ಕೆ ಇಸ್ರಾಯೇಲ್ಯರ ಪ್ರತಿಕ್ರಿಯೆ ಏನಾಗಿತ್ತು?

9 ಆದಾಮ ಮತ್ತು ಹವ್ವ ಮಾಡಿದ ತಪ್ಪಿನಿಂದ ನಮ್ಮೆಲ್ಲರಿಗೂ ಪಾಪ ಮತ್ತು ಮರಣ ಬಂತು. ಆದರೆ ದೇವರು ನಮ್ಮಿಂದ ಇಚ್ಛಾಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಿಲ್ಲ. ಇಸ್ರಾಯೇಲ್ಯರೊಂದಿಗೆ ದೇವರು ನಡೆದುಕೊಂಡ ರೀತಿಯಿಂದ ಇದು ಗೊತ್ತಾಗುತ್ತದೆ. ಯೆಹೋವನು ಅವರಿಗೆ ತನ್ನ ವಿಶೇಷ ಆಸ್ತಿಯಾಗುವ ಸುಯೋಗ ಕೊಟ್ಟನು. (ವಿಮೋ. 19:3-6) ಇಸ್ರಾಯೇಲ್ಯರು ಈ ಸುಯೋಗವನ್ನು ಸ್ವೀಕರಿಸಿದರು, ದೇವರಿಟ್ಟ ಎಲ್ಲೆಗಳನ್ನೂ ದಾಟುವುದಿಲ್ಲ ಎಂದರು. “ಯೆಹೋವನು ಹೇಳಿದಂತೆಯೇ ಮಾಡುವೆವು” ಎಂದು ತಲೆ ಆಡಿಸಿದರು. (ವಿಮೋ. 19:8) ಆದರೆ ಅವರು ಕೊಟ್ಟ ಮಾತು ಅಷ್ಟಕ್ಕಷ್ಟೆ. ಅವರಿಂದ ನಾವು ಒಂದು ಪಾಠ ಕಲಿಯುತ್ತೇವೆ. ನಾವು ನಮ್ಮ ಇಚ್ಛಾಸ್ವಾತಂತ್ರ್ಯವನ್ನು ದುರುಪಯೋಗಿಸಬಾರದು. ಯೆಹೋವನಿಗೆ ಹತ್ತಿರವಾಗಿದ್ದು ಆತನ ನಿಮಯಗಳನ್ನು ಪಾಲಿಸಬೇಕು.—1 ಕೊರಿಂ. 10:11.

10. ಅಪರಿಪೂರ್ಣ ಮಾನವರು ಸಹ ತಮ್ಮ ಇಚ್ಛಾಸ್ವಾತಂತ್ರ್ಯವನ್ನು ದೇವರಿಗೆ ಮಹಿಮೆ ತರುವ ರೀತಿಯಲ್ಲಿ ಉಪಯೋಗಿಸಬಹುದು ಎಂದು ಯಾರ ಉದಾಹರಣೆಗಳು ತೋರಿಸುತ್ತವೆ? (ಲೇಖನದ ಆರಂಭದ ಚಿತ್ರ ನೋಡಿ.)

10 ಇಬ್ರಿಯ 11⁠ನೇ ಅಧ್ಯಾಯದಲ್ಲಿ ನಾವು 16 ನಂಬಿಗಸ್ತ ಸ್ತ್ರೀಪುರುಷರ ಬಗ್ಗೆ ಓದುತ್ತೇವೆ. ಇವರು ಯಾರೂ ಯೆಹೋವ ಹಾಕಿದ ಗೆರೆಯನ್ನು ದಾಟಲಿಲ್ಲ. ಇದರಿಂದ ಅವರಿಗೆ ಅನೇಕ ಆಶೀರ್ವಾದಗಳು ಸಿಕ್ಕಿದವು ಮತ್ತು ಸುಂದರ ಭವಿಷ್ಯದ ನಿರೀಕ್ಷೆ ಸಿಕ್ಕಿತು. ನೋಹನಿಗೆ ತುಂಬ ನಂಬಿಕೆ ಇತ್ತು. ದೇವರು ಹೇಳಿದಂತೆ ಅವನು ಒಂದು ನಾವೆಯನ್ನು ಕಟ್ಟಿದ. ಇದರಿಂದ ಅವನ ಇಡೀ ಕುಟುಂಬದ ಜೀವ ಉಳಿಯಿತು. ಹೀಗೆ ಮಾನವಕುಲ ಭೂಮಿಯಿಂದ ನಾಶವಾಗಲಿಲ್ಲ. (ಇಬ್ರಿ. 11:7) ಅಬ್ರಹಾಮ ಮತ್ತು ಸಾರ ಸಹ ದೇವರಿಗೆ ಸಂತೋಷದಿಂದ ವಿಧೇಯತೆ ತೋರಿಸಿದರು. ದೇವರು ಅವರಿಗೆ ಕೊಡುತ್ತೇನೆಂದು ಹೇಳಿದ್ದ ದೂರ ದೇಶಕ್ಕೆ ಹೋದರು. ಅವರು ನೆನಸಿದ್ದರೆ ಸ್ವಂತ ಊರಿಗೆ ‘ಹಿಂದಿರುಗಲು ಅವಕಾಶವಿತ್ತು.’ ಆದರೆ ಅವರು ದೇವರು ಕೊಟ್ಟಿದ್ದ ವಾಗ್ದಾನದ ಮೇಲೆ ಮನಸ್ಸಿಟ್ಟಿದ್ದರು. “ಅವರು ಹೆಚ್ಚು ಉತ್ತಮವಾದ ಸ್ಥಳವನ್ನು” ಹೊಂದಲು ಬಯಸಿದರು ಎಂದು ಬೈಬಲ್‌ ಹೇಳುತ್ತದೆ. (ಇಬ್ರಿ. 11:8, 13, 15, 16) ಮೋಶೆಗೆ ಐಗುಪ್ತದಲ್ಲಿದ್ದ ಐಷಾರಾಮಿ ಬದುಕು ಇಷ್ಟವಾಗಲಿಲ್ಲ. “ಅವನು ಪಾಪದ ತಾತ್ಕಾಲಿಕ ಸುಖಾನುಭವಕ್ಕಿಂತ ದೇವರ ಜನರೊಂದಿಗೆ ದುರುಪಚಾರವನ್ನು ಅನುಭವಿಸುವ ಆಯ್ಕೆಯನ್ನು ಮಾಡಿದನು.” (ಇಬ್ರಿ. 11:24-26) ನಾವು ಈ ನಂಬಿಗಸ್ತ ಸ್ತ್ರೀಪುರುಷರ ಒಳ್ಳೇ ಮಾದರಿಯನ್ನು ಅನುಕರಿಸೋಣ. ನಮಗೆ ಸಿಕ್ಕಿರುವ ಇಚ್ಛಾಸ್ವಾತಂತ್ರ್ಯವನ್ನು ಒಳ್ಳೇ ನಿರ್ಣಯಗಳನ್ನು ಮಾಡಲು, ದೇವರ ಚಿತ್ತವನ್ನು ಮಾಡಲು ಉಪಯೋಗಿಸೋಣ.

11. (ಎ) ನಮ್ಮ ಇಚ್ಛಾಸ್ವಾತಂತ್ರ್ಯವನ್ನು ಉಪಯೋಗಿಸುವ ಅತ್ಯುತ್ತಮ ವಿಧ ಯಾವುದು? (ಬಿ) ನಿಮ್ಮ ಇಚ್ಛಾಸ್ವಾತಂತ್ರ್ಯವನ್ನು ಒಳ್ಳೇ ರೀತಿಯಲ್ಲಿ ಉಪಯೋಗಿಸುವಂತೆ ನಿಮ್ಮನ್ನು ಯಾವುದು ಪ್ರಚೋದಿಸುತ್ತದೆ?

11 ನಾವಾಗಿ ತೀರ್ಮಾನ ಮಾಡುವ ಬದಲು ನಾವೇನು ಮಾಡಬೇಕೆಂದು ಬೇರೊಬ್ಬರು ಹೇಳಿಬಿಟ್ಟರೆ ಸುಲಭ ಅಂತ ನಮಗನಿಸಬಹುದು. ಆದರೆ ಹೀಗೆ ಮಾಡಿದರೆ ನಮ್ಮ ಇಚ್ಛಾಸ್ವಾತಂತ್ರ್ಯವನ್ನು ಉಪಯೋಗಿಸಿ ನಾವು ಮಾಡಬಹುದಾದ ಒಂದು ಅತ್ಯುತ್ತಮ ವಿಷಯ ನಮ್ಮ ಕೈತಪ್ಪಿ ಹೋಗುತ್ತದೆ. ಅದರ ಬಗ್ಗೆ ಧರ್ಮೋಪದೇಶಕಾಂಡ 30:19, 20⁠ರಲ್ಲಿ ತಿಳಿಸಲಾದೆ. (ಓದಿ.) ದೇವರು ಇಸ್ರಾಯೇಲ್ಯರ ಮುಂದೆ ಇಟ್ಟ ಆಯ್ಕೆಯ ಬಗ್ಗೆ 19⁠ನೇ ವಚನದಲ್ಲಿ ನಾವು ಓದುತ್ತೇವೆ. ಅವರು ಆತನನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ತೋರಿಸುವ ಒಂದು ಅವಕಾಶ ಅವರ ಮುಂದಿತ್ತು ಎಂದು 20⁠ನೇ ವಚನ ತಿಳಿಸುತ್ತದೆ. ನಾವು ಸಹ ಯೆಹೋವನ ಆರಾಧಕರಾಗುವ ಆಯ್ಕೆ ಮಾಡಬಹುದು. ನಾವು ನಮ್ಮ ಇಚ್ಛಾಸ್ವಾತಂತ್ರ್ಯವನ್ನು ಯೆಹೋವನಿಗೆ ಮಹಿಮೆ ತರುವ ವಿಧದಲ್ಲಿ ಉಪಯೋಗಿಸುವ ಅವಕಾಶ ನಮ್ಮ ಮುಂದೆಯೂ ಇದೆ. ನಾವು ಸರಿಯಾದ ಆಯ್ಕೆಯನ್ನು ಮಾಡುವ ಮೂಲಕ ಯೆಹೋವನನ್ನು ಎಷ್ಟು ಪ್ರೀತಿಸುತ್ತೇವೆ ಎಂದು ತೋರಿಸೋಣ.

ಇಚ್ಛಾಸ್ವಾತಂತ್ರ್ಯವನ್ನು ದುರುಪಯೋಗಿಸಬೇಡಿ

12. ನಮಗೆ ಸಿಕ್ಕಿರುವ ಇಚ್ಛಾಸ್ವಾತಂತ್ರ್ಯ ಎಂಬ ಉಡುಗೊರೆಯನ್ನು ನಾವು ಏನು ಮಾಡಬಾರದು?

12 ನೀವು ನಿಮ್ಮ ಸ್ನೇಹಿತನಿಗೆ ಬೆಲೆಬಾಳುವ ಒಂದು ಉಡುಗೊರೆ ಕೊಟ್ಟಿರಿ ಎಂದು ನೆನಸಿ. ಅವನು ಅದನ್ನು ಕಸದ ಬುಟ್ಟಿಗೆ ಎಸೆದುಬಿಟ್ಟ ಅಥವಾ ಅದರಿಂದ ಬೇರೆಯವರಿಗೆ ಹಾನಿ ಮಾಡಿದ ಅಂತ ಗೊತ್ತಾದರೆ ನಿಮಗೆ ಹೇಗನಿಸುತ್ತದೆ? ಖಂಡಿತ ಬೇಜಾರು ಆಗುತ್ತದೆ ಅಲ್ವಾ? ಯೆಹೋವನು ನಮಗೆ ಇಚ್ಛಾಸ್ವಾತಂತ್ರ್ಯ ಅನ್ನುವ ಉಡುಗೊರೆ ಕೊಟ್ಟಿದ್ದಾನೆ. ಜನ ಇದನ್ನು ದುರುಪಯೋಗಿಸುವಾಗ ಅಥವಾ ಅದರಿಂದ ಬೇರೆಯವರಿಗೆ ಹಾನಿ ಮಾಡುವಾಗ ಯೆಹೋವನಿಗೆ ಸಹ ನೋವಾಗುತ್ತದೆ. “ಕಡೇ ದಿವಸಗಳಲ್ಲಿ” ಜನರು ‘ಕೃತಜ್ಞತೆಯಿಲ್ಲದವರು’ ಆಗಿರುತ್ತಾರೆ ಎಂದು ಬೈಬಲ್‌ ಹೇಳುತ್ತದೆ. (2 ತಿಮೊ. 3:1, 2) ದೇವರು ನಮಗೆ ಕೊಟ್ಟಿರುವ ಈ ಅಮೂಲ್ಯ ಉಡುಗೊರೆಗೆ ನಾವು ಕೃತಜ್ಞರು ಎಂದು ಹೇಗೆ ತೋರಿಸೋಣ? ಈ ವರವನ್ನು ದುರುಪಯೋಗಿಸದೆ ಇರುವುದು ಹೇಗೆ?

13. ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ನಾವು ಹೇಗೆ ಉಪಯೋಗಿಸಬಾರದು?

13 ಯಾರನ್ನು ಸ್ನೇಹಿತರಾಗಿ ಆರಿಸಿಕೊಳ್ಳಬೇಕು, ಯಾವ ರೀತಿಯ ಬಟ್ಟೆ ಹಾಕಬೇಕು, ಯಾವ ಮನೋರಂಜನೆ ಆರಿಸಿಕೊಳ್ಳಬೇಕು ಅನ್ನುವುದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನಮ್ಮೆಲ್ಲರಿಗೂ ಇದೆ. ನಾವು ಈ ಸ್ವಾತಂತ್ರ್ಯವನ್ನು “ಕೆಟ್ಟತನವನ್ನು ಮರೆಮಾಚುವುದಕ್ಕೆ” ಉಪಯೋಗಿಸಬಾರದು. ಈ ಲೋಕದವರ ತರ ನಡಕೊಳ್ಳಬಾರದು. (1 ಪೇತ್ರ 2:16 ಓದಿ.) ನಾವು ನಮ್ಮ ಸ್ವಾತಂತ್ರ್ಯವನ್ನು ‘ಶಾರೀರಿಕ ಇಚ್ಛೆಯನ್ನು ಮಾಡಲು ಪ್ರಚೋದನೆಯಾಗಿ ಬಳಸುವ’ ಬದಲು “ದೇವರ ಮಹಿಮೆಗಾಗಿ” ಉಪಯೋಗಿಸೋಣ.—ಗಲಾ. 5:13; 1 ಕೊರಿಂ. 10:31.

14. ನಮ್ಮ ಇಚ್ಛಾಸ್ವಾತಂತ್ರ್ಯವನ್ನು ಉಪಯೋಗಿಸುವಾಗ ನಾವೇಕೆ ಯೆಹೋವನಲ್ಲಿ ಭರವಸೆ ಇಡಬೇಕು?

14 “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ” ಎಂದು ಯೆಹೋವನು ಹೇಳಿದ್ದಾನೆ. (ಯೆಶಾ. 48:17) ನಾವು ಯೆಹೋವನಲ್ಲಿ ಭರವಸೆ ಇಡಬೇಕು ಮತ್ತು ಆತನು ಹಾಕುವ ಗೆರೆಯನ್ನು ದಾಟಬಾರದು. ಆಗ ಜೀವನದಲ್ಲಿ ಒಳ್ಳೇ ನಿರ್ಣಯಗಳನ್ನು ಮಾಡುತ್ತೇವೆ. ಹೇಗೂ “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು” ನಮಗೆ ಗೊತ್ತು. “ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರ.” (ಯೆರೆ. 10:23) ಆದಾಮ ಮತ್ತು ಅಪನಂಬಿಗಸ್ತ ಇಸ್ರಾಯೇಲ್ಯರು ಯೆಹೋವನು ಹಾಕಿದ ಗೆರೆಯನ್ನು ದಾಟಿದರು. ತಮಗೇ ಎಲ್ಲಾ ಗೊತ್ತು ಅನ್ನುವ ತರ ನಡಕೊಂಡರು. ನಾವು ಅವರಂತೆ ಆಗದಿರೋಣ. ನಮಗೇ ಎಲ್ಲಾ ಗೊತ್ತು ಅಂತ ನೆನಸುವ ಬದಲು ‘ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸೆ’ ಇಡೋಣ.—ಜ್ಞಾನೋ. 3:5.

ಬೇರೆಯವರಿಗೂ ಇಚ್ಛಾಸ್ವಾತಂತ್ರ್ಯ ಇದೆ

15. ಗಲಾತ್ಯ 6:5⁠ರಲ್ಲಿರುವ ಮೂಲತತ್ವದಿಂದ ನಾವೇನು ಕಲಿಯುತ್ತೇವೆ?

15 ಬೇರೆಯವರಿಗೂ ತಮ್ಮದೇ ತೀರ್ಮಾನಗಳನ್ನು ತೆಗೆದುಕೊಳ್ಳುವ ಇಚ್ಛಾಸ್ವಾತಂತ್ರ್ಯ ಇದೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಒಬ್ಬೊಬ್ಬ ಕ್ರೈಸ್ತನೂ ತೆಗೆದುಕೊಳ್ಳುವ ನಿರ್ಣಯ ಬೇರೆ ಬೇರೆ ಆಗಿರುತ್ತದೆ. ಇದು ಅವರ ನಡತೆ ಮತ್ತು ಆರಾಧನೆಯ ಸಂಬಂಧದಲ್ಲಿ ತೆಗೆದುಕೊಳ್ಳುವ ನಿರ್ಣಯಗಳಿಗೂ ಅನ್ವಯಿಸುತ್ತದೆ. ಈ ಸಂಬಂಧವಾಗಿ ಗಲಾತ್ಯ 6:5 ಏನು ಹೇಳುತ್ತದೆ ಎಂದು ನಾವು ಮರೆಯಬಾರದು. (ಓದಿ.) ಒಬ್ಬೊಬ್ಬ ಕ್ರೈಸ್ತನೂ ತೆಗೆದುಕೊಳ್ಳುವ ನಿರ್ಣಯಕ್ಕೆ ಸ್ವತಃ ಅವನೇ ಲೆಕ್ಕ ಒಪ್ಪಿಸಬೇಕಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಆಗ ನಾವು ಬೇರೆಯವರ ವಿಷಯದಲ್ಲಿ ಅನಾವಶ್ಯಕವಾಗಿ ತಲೆ ಹಾಕುವುದಿಲ್ಲ.

 ಪಾರ್ಟಿಯಲ್ಲಿ ಒಬ್ಬ ಸಹೋದರ ತನಗೆ ವೈನ್‌ ಬೇಡ ಎನ್ನುತ್ತಿದ್ದಾರೆ

ನಮ್ಮ ಮನಸ್ಸಾಕ್ಷಿಗೆ ಸರಿ ಅನಿಸಿದ ವಿಷಯ ಬೇರೆಯವರಿಗೂ ಸರಿ ಅನಿಸಬೇಕೆಂದು ಒತ್ತಾಯ ಮಾಡದಿರೋಣ (ಪ್ಯಾರ 15 ನೋಡಿ)

16, 17. (ಎ) ಕೊರಿಂಥ ಸಭೆಯಲ್ಲಿ ಇಚ್ಛಾಸ್ವಾತಂತ್ರ್ಯದ ಉಪಯೋಗದ ವಿಷಯದಲ್ಲಿ ಯಾವ ಸಮಸ್ಯೆ ಎದ್ದಿತು? (ಬಿ) ಪೌಲ ಆ ಕ್ರೈಸ್ತರಿಗೆ ಯಾವ ಸಲಹೆ ಕೊಟ್ಟನು? (ಸಿ) ಇದರಿಂದ ನಮಗೇನು ಪಾಠ?

16 ನಾವು ನಮ್ಮ ಸಹೋದರರಿಗೆ ಇರುವ ಇಚ್ಛಾಸ್ವಾತಂತ್ರ್ಯವನ್ನು ಯಾಕೆ ಗೌರವಿಸಬೇಕು ಎಂದು ಅರ್ಥಮಾಡಿಕೊಳ್ಳಲು ಬೈಬಲಿನಿಂದ ಒಂದು ಉದಾಹರಣೆ ನೋಡೋಣ. ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ಮಾಂಸವನ್ನು ತಿನ್ನುವುದರ ಬಗ್ಗೆ ಕೊರಿಂಥ ಸಭೆಯಲ್ಲಿ ಒಂದು ವಿವಾದ ಎದ್ದಿತ್ತು. ಈ ಮಾಂಸವನ್ನು ಮೊದಲು ವಿಗ್ರಹಗಳಿಗೆ ಅರ್ಪಿಸಿರುವ ಸಾಧ್ಯತೆ ಇತ್ತು. ಕ್ರೈಸ್ತರಾಗುವುದಕ್ಕಿಂತ ಮುಂಚೆ ಇಂಥ ವಿಗ್ರಹಗಳನ್ನು ಆರಾಧಿಸುತ್ತಿದ್ದವರಿಗೆ ಈ ಮಾಂಸವನ್ನು ತಿನ್ನಬಾರದು ಎಂದನಿಸಿತು. ತಿಂದರೆ ಆ ವಿಗ್ರಹವನ್ನು ಪೂಜಿಸುವುದಕ್ಕೆ ಸಮ ಎಂದವರು ನೆನಸುತ್ತಿದ್ದರು. ಆದರೆ ಬೇರೆ ಕ್ರೈಸ್ತರಿಗೆ ಇದನ್ನು ತಿನ್ನುವುದರಲ್ಲಿ ತಪ್ಪೇನಿಲ್ಲ ಎಂದನಿಸಿತು. ‘ವಿಗ್ರಹ ಏನೂ ಅಲ್ಲವಾದ್ದರಿಂದ ತಿನ್ನೋದ್ರಲ್ಲಿ ತಪ್ಪಿಲ್ಲ’ ಎಂದು ಅವರ ಮನಸ್ಸಾಕ್ಷಿ ಹೇಳಿತು. (1 ಕೊರಿಂ. 8:4, 7) ಇದೊಂದು ಗಂಭೀರ ಸಮಸ್ಯೆ ಆಗಿತ್ತು. ಏಕೆಂದರೆ ಇದು ಸಭೆಯಲ್ಲಿ ಒಡಕು ಉಂಟುಮಾಡುವ ಸಾಧ್ಯತೆ ಇತ್ತು. ಈ ಸಮಸ್ಯೆಯನ್ನು ಪರಿಹರಿಸಲು ಪೌಲ ಯಾವ ಸಲಹೆ ಕೊಟ್ಟನು?

17 “ಆಹಾರವು ನಮ್ಮನ್ನು ದೇವರಿಗೆ ಮೆಚ್ಚುಗೆಯಾದವರನ್ನಾಗಿ ಮಾಡುವುದಿಲ್ಲ” ಎಂದು ಪೌಲ ಈ ಎರಡೂ ಗುಂಪಿನವರಿಗೆ ಮೊದಲು ಅರ್ಥಮಾಡಿಸಿದನು. (1 ಕೊರಿಂ. 8:8) ಇಂಥ ಮಾಂಸವನ್ನು ತಿನ್ನಬಹುದು ಎಂದು ತೀರ್ಮಾನ ಮಾಡಿದವರಿಗೆ ಪೌಲ ಹೇಳಿದ್ದು: “ನಿಮಗಿರುವ ಈ ಅಧಿಕಾರವು ಬಲಹೀನರಿಗೆ ಹೇಗಾದರೂ ಎಡವುಗಲ್ಲಾಗದಂತೆ ಎಚ್ಚರಿಕೆ ವಹಿಸುತ್ತಾ ಇರಿ.” (1 ಕೊರಿಂ. 8:9) ಯಾರಾದರೂ ಇಂಥ ಮಾಂಸವನ್ನು ತಿನ್ನುವ ತೀರ್ಮಾನ ಮಾಡಿದರೆ ಅವರನ್ನು ತೀರ್ಪುಮಾಡಬೇಡಿ ಎಂದು ಮಾಂಸವನ್ನು ತಿನ್ನಬಾರದೆಂದು ತೀರ್ಮಾನಿಸಿದ್ದ ಸೂಕ್ಷ್ಮ ಮನಸ್ಸಾಕ್ಷಿ ಇದ್ದ ವ್ಯಕ್ತಿಗಳಿಗೆ ಹೇಳಿದನು. (1 ಕೊರಿಂ. 10:25, 29, 30) ಹಾಗಾದರೆ ಆರಾಧನೆಗೆ ಸಂಬಂಧಪಟ್ಟ ಸನ್ನಿವೇಶಗಳು ಎದುರಾದಾಗ ಒಬ್ಬೊಬ್ಬ ಕ್ರೈಸ್ತನೂ ತನ್ನ ಸ್ವಂತ ತೀರ್ಮಾನ ತೆಗೆದುಕೊಳ್ಳಬೇಕು. ವೈಯಕ್ತಿಕ ವಿಷಯಗಳಲ್ಲೂ ಒಬ್ಬೊಬ್ಬ ಕ್ರೈಸ್ತನು ತನ್ನ ಸ್ವಂತ ತೀರ್ಮಾನ ತೆಗೆದುಕೊಳ್ಳುತ್ತಾನೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಇದು ಚಿಕ್ಕಪುಟ್ಟ ವಿಷಯಗಳಿಗೂ ಅನ್ವಯಿಸುತ್ತದೆ.—1 ಕೊರಿಂ. 10:32, 33.

18. ನಿಮಗೆ ಸಿಕ್ಕಿರುವ ಇಚ್ಛಾಸ್ವಾತಂತ್ರ್ಯ ಎಂಬ ಅದ್ಭುತ ವರವನ್ನು ನೀವು ಮಾನ್ಯಮಾಡುತ್ತೀರಿ ಎಂದು ಹೇಗೆ ತೋರಿಸುತ್ತೀರಿ?

18 ಯೆಹೋವನು ನಮಗೆ ಇಚ್ಛಾಸ್ವಾತಂತ್ರ್ಯ ಎಂಬ ಉಡುಗೊರೆ ಕೊಟ್ಟಿದ್ದಾನೆ. ಇದು ನಮಗೆ ನಿಜವಾದ ಸ್ವಾತಂತ್ರ್ಯ ಕೊಡುತ್ತದೆ. (2 ಕೊರಿಂ. 3:17) ಈ ಅದ್ಭುತ ವರವನ್ನು ನಾವು ತುಂಬ ಮಾನ್ಯಮಾಡುತ್ತೇವೆ. ಏಕೆಂದರೆ ಇದನ್ನು ಉಪಯೋಗಿಸುತ್ತಾ ನಾವು ತೆಗೆದುಕೊಳ್ಳುವ ನಿರ್ಣಯಗಳು ನಾವು ಯೆಹೋವನನ್ನು ಎಷ್ಟು ಪ್ರೀತಿಸುತ್ತೇವೆ ಎಂದು ತೋರಿಸುತ್ತದೆ. ಆದ್ದರಿಂದ ನಾವು ದೇವರಿಗೆ ಮಹಿಮೆ ತರುವ ನಿರ್ಣಯಗಳನ್ನು ಮಾಡುತ್ತಾ ಇರೋಣ. ಬೇರೆಯವರಿಗೂ ಈ ವರ ಸಿಕ್ಕಿರುವುದರಿಂದ ಅವರು ಸ್ವಂತ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಅರ್ಥಮಾಡಿಕೊಂಡು ನಡೆಯೋಣ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ