ಯೆಹೋವನ ಪರಮಾಧಿಕಾರಕ್ಕೇ ನಮ್ಮ ಸಂಪೂರ್ಣ ಬೆಂಬಲ!
“ಯೆಹೋವನೇ, ನಮ್ಮ ದೇವರೇ, ನೀನು ಮಹಿಮೆ, ಗೌರವ ಮತ್ತು ಶಕ್ತಿಯನ್ನು ಪಡೆಯಲು ಯೋಗ್ಯನಾಗಿದ್ದೀ; ಏಕೆಂದರೆ ಎಲ್ಲವನ್ನೂ ನೀನೇ ಸೃಷ್ಟಿಸಿದಿ.”—ಪ್ರಕ. 4:11.
1, 2. ನಮಗೆ ಯಾವ ವಿಷಯ ಸ್ಪಷ್ಟವಾಗಿ ಅರ್ಥವಾಗಬೇಕು? (ಲೇಖನದ ಆರಂಭದ ಚಿತ್ರ ನೋಡಿ.)
ಹಿಂದಿನ ಲೇಖನದಲ್ಲಿ ನಾವು ಚರ್ಚಿಸಿದಂತೆ, ಮಾನವರನ್ನು ಆಳುವ ಹಕ್ಕು ಯೆಹೋವನಿಗಿಲ್ಲ ಎಂದು ಪಿಶಾಚನು ಹೇಳುತ್ತಾನೆ. ಯೆಹೋವನು ಆಳುವ ವಿಧ ಸರಿಯಿಲ್ಲ, ಮಾನವರು ತಮ್ಮ ಮೇಲೆ ತಾವೇ ಆಳ್ವಿಕೆ ಮಾಡಿದರೆ ಒಳ್ಳೇದು ಎನ್ನುತ್ತಾನೆ ಅವನು. ಸೈತಾನನು ಹೇಳುವುದು ಸರಿನಾ? ಒಂದುವೇಳೆ ಮಾನವರು ತಮ್ಮ ಮೇಲೆ ತಾವೇ ಆಳ್ವಿಕೆ ನಡೆಸುತ್ತಾ ಸದಾಕಾಲ ಜೀವಿಸುವ ಅವಕಾಶವಿರುತ್ತಿದ್ದರೆ ಹೇಗಿರಬಹುದು? ದೇವರ ಆಳ್ವಿಕೆ ಇಲ್ಲದೆ ಅವರು ಸಂತೋಷವಾಗಿ ಇರುತ್ತಾರಾ? ನೀವು ದೇವರಿಂದ ಸ್ವತಂತ್ರರಾಗಿ ಶಾಶ್ವತವಾಗಿ ಜೀವಿಸಲು ಸಾಧ್ಯವಿರುತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದು ನಿಮಗೂ ಅನಿಸುತ್ತದಾ?
2 ಈ ಪ್ರಶ್ನೆಗಳು ಬೇರೆಯವರು ನಿಮಗೋಸ್ಕರ ಉತ್ತರ ಕೊಡಲಿಕ್ಕಾಗುವಂಥ ಪ್ರಶ್ನೆಗಳಲ್ಲ. ನೀವೇ ಗಾಢವಾಗಿ ಯೋಚಿಸಬೇಕಾದ ಪ್ರಶ್ನೆಗಳು. ಹೀಗೆ ಯೋಚಿಸಿದಾಗ ಯೆಹೋವನು ಆಳುವ ವಿಧವೇ ಅತ್ಯುತ್ತಮ ಮತ್ತು ಆತನು ನಮ್ಮ ಸಂಪೂರ್ಣ ಬೆಂಬಲ ಪಡೆಯಲು ಯೋಗ್ಯನು ಎಂದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಬೈಬಲಿನಲ್ಲಿರುವ ವಿಷಯಗಳನ್ನು ಓದುವಾಗ ಈ ಮಾತು ಸತ್ಯ ಎಂದು ಗೊತ್ತಾಗುತ್ತದೆ. ಇಡೀ ವಿಶ್ವವನ್ನು ಆಳಲು ಯೆಹೋವನಿಗಿರುವ ಹಕ್ಕಿನ ಬಗ್ಗೆ ಬೈಬಲ್ ಏನು ಹೇಳುತ್ತದೆಂದು ನೋಡೋಣ.
ಯೆಹೋವನಿಗೆ ಆಳುವ ಹಕ್ಕಿದೆ
3. ಪರಮಾಧಿಕಾರಿಯಾಗಿರುವ ಹಕ್ಕು ಯೆಹೋವನಿಗೆ ಇದೆ ಎಂದು ಹೇಗೆ ಹೇಳಬಹುದು?
3 ಈ ಇಡೀ ವಿಶ್ವದಲ್ಲಿ ಯೆಹೋವನೊಬ್ಬನೇ ಏಕಮಾತ್ರ ಪರಮಾಧಿಕಾರಿ. ಏಕೆಂದರೆ ಆತನೇ ಸರ್ವಶಕ್ತ ದೇವರು, ಸೃಷ್ಟಿಕರ್ತ. (1 ಪೂರ್ವ. 29:11; ಅ. ಕಾ. 4:24) ಕ್ರಿಸ್ತನ ಜೊತೆ ಸ್ವರ್ಗದಿಂದ ಆಳಲಿರುವ 1,44,000 ಅರಸರು ಒಂದು ದರ್ಶನದಲ್ಲಿ ಹೀಗೆ ಹೇಳುವುದನ್ನು ತೋರಿಸಲಾಗಿದೆ: “ಯೆಹೋವನೇ, ನಮ್ಮ ದೇವರೇ, ನೀನು ಮಹಿಮೆ, ಗೌರವ ಮತ್ತು ಶಕ್ತಿಯನ್ನು ಪಡೆಯಲು ಯೋಗ್ಯನಾಗಿದ್ದೀ; ಏಕೆಂದರೆ ಎಲ್ಲವನ್ನೂ ನೀನೇ ಸೃಷ್ಟಿಸಿದಿ ಮತ್ತು ನಿನ್ನ ಚಿತ್ತದಿಂದಲೇ ಅವು ಅಸ್ತಿತ್ವಕ್ಕೆ ಬಂದವು ಹಾಗೂ ಸೃಷ್ಟಿಸಲ್ಪಟ್ಟವು.” (ಪ್ರಕ. 4:11) ಯೆಹೋವನು ಎಲ್ಲವನ್ನೂ ಸೃಷ್ಟಿಮಾಡಿದ್ದಾನೆ. ಆದ್ದರಿಂದ ಭೂಮಿ ಮತ್ತು ಸ್ವರ್ಗದಲ್ಲಿರುವ ಎಲ್ಲರನ್ನು ಆಳುವ ಹಕ್ಕು ಆತನಿಗೆ ಖಂಡಿತ ಇದೆ.
4. ದೇವರ ಪರಮಾಧಿಕಾರದ ವಿರುದ್ಧ ದಂಗೆ ಏಳುವುದು ಇಚ್ಛಾಸ್ವಾತಂತ್ರ್ಯದ ದುರುಪಯೋಗ ಆಗಿದೆ ಯಾಕೆ?
4 ಸೈತಾನ ಯಾವುದನ್ನೂ ಸೃಷ್ಟಿಮಾಡಿಲ್ಲ. ಆದ್ದರಿಂದ ವಿಶ್ವವನ್ನು ಆಳುವ ಹಕ್ಕು ಅವನಿಗಿಲ್ಲ. ಹಾಗಾಗಿ ಯೆಹೋವನ ಪರಮಾಧಿಕಾರದ ವಿರುದ್ಧ ಸೈತಾನ ಮತ್ತು ಮೊದಲ ಮಾನವ ದಂಪತಿ ದಂಗೆ ಎದ್ದದ್ದು ಅವರ ಅಹಂಕಾರವನ್ನು ತೋರಿಸುತ್ತದೆ. (ಯೆರೆ. 10:23) ಅವರಿಗೆ ಇಚ್ಛಾಸ್ವಾತಂತ್ರ್ಯ ಇದ್ದದರಿಂದ ಯೆಹೋವನ ಆಳ್ವಿಕೆಯನ್ನು ತಿರಸ್ಕರಿಸುವ ಹಕ್ಕು ಅವರಿಗಿತ್ತಾ? ಇಲ್ಲ. ಇಚ್ಛಾಸ್ವಾತಂತ್ರ್ಯ ಒಬ್ಬ ವ್ಯಕ್ತಿಗೆ ಆಯ್ಕೆಗಳನ್ನು ಮಾಡುವ, ತೀರ್ಮಾನಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಕೊಡುತ್ತದೆ ವಿನಾ ಸೃಷ್ಟಿಕರ್ತನ ವಿರುದ್ಧ ದಂಗೆ ಏಳುವ ಹಕ್ಕನ್ನು ಕೊಡುವುದಿಲ್ಲ. ಆದ್ದರಿಂದ ದೇವರ ವಿರುದ್ಧ ದಂಗೆ ಏಳುವುದು ಇಚ್ಛಾಸ್ವಾತಂತ್ರ್ಯದ ದುರುಪಯೋಗ ಆಗಿದೆ. ಮಾನವರಾಗಿ ನಮಗೆ ಯೆಹೋವನ ಆಳ್ವಿಕೆ ಮತ್ತು ಮಾರ್ಗದರ್ಶನ ಬೇಕೇ ಬೇಕು.
5. ಯೆಹೋವನ ತೀರ್ಪು ಯಾವಾಗಲೂ ನ್ಯಾಯವಾಗಿರುತ್ತದೆ ಯಾಕೆ?
5 ಯೆಹೋವನಿಗೆ ಆಳುವ ಹಕ್ಕಿದೆ ಎನ್ನಲು ಇನ್ನೊಂದು ಕಾರಣ ನೋಡಿ. ಆತನು ತುಂಬ ನ್ಯಾಯದಿಂದ ಅಧಿಕಾರ ನಡೆಸುತ್ತಾನೆ. ಆತನು ತನ್ನ ಬಗ್ಗೆ ಹೀಗೆ ಹೇಳಿದ್ದಾನೆ: ‘ನಾನು ಲೋಕದಲ್ಲಿ ಪ್ರೀತಿನೀತಿನ್ಯಾಯಗಳನ್ನು ತೋರ್ಪಡಿಸುವ ಯೆಹೋವನಾಗಿರುವೆನು. ಪ್ರೀತಿನೀತಿನ್ಯಾಯಗಳೇ ನನಗೆ ಆನಂದ.’ (ಯೆರೆ. 9:24) ಯಾವುದು ನ್ಯಾಯ ಎಂದು ನಿರ್ಧರಿಸಲು ಯೆಹೋವನಿಗೆ ಮಾನವ ನಿಯಮಗಳ ಆವಶ್ಯಕತೆ ಇಲ್ಲ. ನ್ಯಾಯದ ಮಟ್ಟವನ್ನು ಆತನೇ ಇಡುತ್ತಾನೆ. ತನ್ನ ಈ ಪರಿಪೂರ್ಣ ನ್ಯಾಯವನ್ನು ಆಧರಿಸಿ ಆತನು ಮಾನವರಿಗೆ ನಿಯಮಗಳನ್ನು ಕೊಟ್ಟಿದ್ದಾನೆ. “ನೀತಿನ್ಯಾಯಗಳು ನಿನ್ನ ಸಿಂಹಾಸನದ ಅಸ್ತಿವಾರವು” ಎಂದು ಕೀರ್ತನೆಗಾರ ಹೇಳಿದ್ದಾನೆ. ಯೆಹೋವನ ಪ್ರತಿಯೊಂದು ನಿಯಮ, ತತ್ವ ಮತ್ತು ತೀರ್ಪು ನ್ಯಾಯವಾಗಿರುತ್ತದೆ. (ಕೀರ್ತ. 89:14; 119:128) ಯೆಹೋವನು ನ್ಯಾಯವಾಗಿ ಆಳ್ವಿಕೆ ಮಾಡುವುದಿಲ್ಲ ಎಂದು ಸೈತಾನನು ಹೇಳುತ್ತಾನೆ. ಹೀಗೆ ವಾದಿಸುವ ಅವನಿಂದ ಈ ಲೋಕಕ್ಕೆ ಎಲ್ಲಿ ನ್ಯಾಯ ತರಲಿಕ್ಕಾಗಿದೆ?
6. ಯೆಹೋವನಿಗೆ ಆಳುವ ಹಕ್ಕಿದೆ ಎಂದು ಹೇಳಲು ಒಂದು ಕಾರಣವೇನು?
6 ಯೆಹೋವನಿಗೆ ಆಳುವ ಹಕ್ಕು ಇದೆ ಎನ್ನಲು ಮತ್ತೊಂದು ಕಾರಣ ಏನೆಂದರೆ, ಈ ವಿಶ್ವವನ್ನು ಹೇಗೆ ನೋಡಿಕೊಳ್ಳಬೇಕೆಂಬ ಜ್ಞಾನ ವಿವೇಕ ಆತನಿಗಿದೆ. ಉದಾಹರಣೆಗೆ, ಆತನು ತನ್ನ ಮಗನಿಗೆ ರೋಗಗಳನ್ನು ವಾಸಿಮಾಡಲು ಕೊಟ್ಟ ಸಾಮರ್ಥ್ಯದ ಬಗ್ಗೆ ಯೋಚಿಸಿ. ಬೇರೆ ಯಾವ ವೈದ್ಯನಿಂದಲೂ ವಾಸಿಮಾಡಲಿಕ್ಕಾಗದ ರೋಗಗಳನ್ನು ಯೇಸು ವಾಸಿಮಾಡಿದನು. (ಮತ್ತಾ. 4:23, 24; ಮಾರ್ಕ 5:25-29) ಇದು ನಮಗೆ ಚಮತ್ಕಾರ, ಅದ್ಭುತ ಅಂತ ಅನಿಸಿದರೂ ಯೆಹೋವನಿಗೆ ಇದು ಚಮತ್ಕಾರವಲ್ಲ. ನಮ್ಮ ದೇಹ ಹೇಗೆ ಕೆಲಸಮಾಡುತ್ತದೆ ಎಂದು ಆತನಿಗೆ ತಿಳಿದಿರುವುದರಿಂದ ಅದಕ್ಕಾಗುವ ಯಾವುದೇ ಹಾನಿಯನ್ನು ಸರಿಮಾಡಲು ಆತನಿಗೆ ಗೊತ್ತು. ಸತ್ತವರನ್ನೂ ಜೀವಂತ ಎಬ್ಬಿಸಬಲ್ಲನು, ನೈಸರ್ಗಿಕ ವಿಪತ್ತುಗಳನ್ನೂ ತಡೆಯಬಲ್ಲನು.
7. ಸೈತಾನನ ಲೋಕದ ವಿವೇಕಕ್ಕಿಂತ ಯೆಹೋವನ ವಿವೇಕ ಶ್ರೇಷ್ಠವೇಕೆ?
7 ಸೈತಾನನ ಲೋಕ ತಲೆಕೆಳಗೆ ನಿಂತರೂ ಶಾಂತಿಯನ್ನು ತರಲು ಸಾಧ್ಯವಿಲ್ಲ. ಒಂದೇ ದೇಶದೊಳಗೇ ಆಗಲಿ, ಬೇರೆಬೇರೆ ದೇಶಗಳ ಮಧ್ಯೆ ಆಗಲಿ ಶಾಂತಿಯನ್ನು ತರಲು ಆಗುತ್ತಿಲ್ಲ. ಇಡೀ ಲೋಕಕ್ಕೆ ಶಾಂತಿ ತರಲು ಬೇಕಾದ ವಿವೇಕ ಯೆಹೋವನಲ್ಲಿ ಮಾತ್ರ ಇದೆ. (ಯೆಶಾ. 2:3, 4; 54:13) ಆತನಲ್ಲಿರುವ ಜ್ಞಾನ ವಿವೇಕದ ಬಗ್ಗೆ ಕಲಿಯುವಾಗ ನಮಗೂ ಅಪೊಸ್ತಲ ಪೌಲನಂತೆ ಹೇಳಬೇಕೆಂದು ಅನಿಸುತ್ತದೆ. “ಆಹಾ! ದೇವರ ಐಶ್ವರ್ಯವೂ ವಿವೇಕವೂ ಜ್ಞಾನವೂ ಎಷ್ಟೋ ಅಗಾಧ! ಆತನ ನ್ಯಾಯತೀರ್ಪುಗಳು ಎಷ್ಟೋ ಅಗಮ್ಯ ಮತ್ತು ಆತನ ಮಾರ್ಗಗಳನ್ನು ಕಂಡುಹಿಡಿಯುವುದು ಎಷ್ಟೋ ಅಸಾಧ್ಯ!”—ರೋಮ. 11:33.
ಯೆಹೋವನ ಆಳ್ವಿಕೆಯೇ ಅತ್ಯುತ್ತಮ
8. ಯೆಹೋವನು ಆಳುವ ವಿಧದ ಬಗ್ಗೆ ನಿಮಗೆ ಹೇಗನಿಸುತ್ತದೆ?
8 ಯೆಹೋವನಿಗೆ ಆಳುವ ಹಕ್ಕಿದೆ ಎನ್ನುವುದಕ್ಕೆ ಬೈಬಲ್ ಕೊಡುವ ಸ್ಪಷ್ಟ ಕಾರಣಗಳನ್ನು ಮೇಲೆ ನೋಡಿದೆವು. ಯೆಹೋವನೇ ಅತ್ಯುತ್ತಮ ಅರಸ ಎನ್ನುವುದಕ್ಕೂ ಬೈಬಲ್ ಅನೇಕ ಕಾರಣಗಳನ್ನು ಕೊಡುತ್ತದೆ. ಅದರಲ್ಲಿ ಒಂದು ಏನೆಂದರೆ, ಆತನು ಪ್ರೀತಿಯಿಂದ ಆಳುತ್ತಾನೆ. ಯೆಹೋವನಲ್ಲಿರುವ ‘ಕನಿಕರ ದಯೆ ದೀರ್ಘಶಾಂತಿ ಪ್ರೀತಿ ನಂಬಿಕೆಯ’ ಬಗ್ಗೆ ಯೋಚಿಸುವಾಗ ಆತನಿಗೆ ಹತ್ತಿರವಾಗುತ್ತೇವೆ. (ವಿಮೋ. 34:6) ದೇವರು ನಮ್ಮನ್ನು ಗೌರವದಿಂದ ನಡೆಸುತ್ತಾನೆ. ನಾವು ನಮ್ಮನ್ನು ನೋಡಿಕೊಳ್ಳುವುದಕ್ಕಿಂತ ಆತನು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ. ಯೆಹೋವನು ತನ್ನ ಸೇವಕರಿಗೆ ಒಳ್ಳೇ ವಿಷಯಗಳು ಸಿಗದ ಹಾಗೆ ಮಾಡುತ್ತಾನೆ ಎಂದು ಸೈತಾನ ಹೇಳುತ್ತಾನೆ. ಆದರೆ ಇದು ಮಹಾ ಸುಳ್ಳು. ನಮಗೆ ನಿತ್ಯಜೀವ ಸಿಗಬೇಕೆಂದು ಯೆಹೋವನು ತನ್ನ ಮುದ್ದು ಮಗನನ್ನೇ ಕೊಟ್ಟನಲ್ಲವೇ?—ಕೀರ್ತನೆ 84:11; ರೋಮನ್ನರಿಗೆ 8:32 ಓದಿ.
9. ಯೆಹೋವನಿಗೆ ನಮ್ಮಲ್ಲಿ ಒಬ್ಬೊಬ್ಬರ ಬಗ್ಗೆಯೂ ಕಾಳಜಿ ಇದೆ ಎಂದು ನಮಗೆ ಹೇಗೆ ಗೊತ್ತು?
9 ಯೆಹೋವನು ತನ್ನ ಜನರನ್ನು ಒಂದು ಗುಂಪಾಗಿ ಪ್ರೀತಿಸುತ್ತಾನೆ ಮಾತ್ರವಲ್ಲ ಆ ಗುಂಪಿನಲ್ಲಿರುವ ಒಬ್ಬೊಬ್ಬರ ವಿಷಯದಲ್ಲೂ ತುಂಬ ಕಾಳಜಿ ವಹಿಸುತ್ತಾನೆ. ಪುರಾತನ ಕಾಲದಲ್ಲಿ ಏನಾಯಿತೆಂದು ನೋಡಿ. ಸುಮಾರು 300 ವರ್ಷ ಕಾಲ ಯೆಹೋವನು ತನ್ನ ಜನರಾದ ಇಸ್ರಾಯೇಲ್ಯರನ್ನು ಮಾರ್ಗದರ್ಶಿಸಲು ಮತ್ತು ವೈರಿಗಳಿಂದ ಬಿಡಿಸಲು ನ್ಯಾಯಸ್ಥಾಪಕರನ್ನು ಉಪಯೋಗಿಸಿದನು. ಈ ಕಾಲದಲ್ಲಿ ಯೆಹೋವನು ಒಬ್ಬೊಬ್ಬ ವ್ಯಕ್ತಿಯ ಮೇಲೆ ಸಹ ಗಮನ ಇಟ್ಟಿದ್ದನು. ಇಂಥ ವ್ಯಕ್ತಿಗಳಲ್ಲಿ ಒಬ್ಬಳು ರೂತಳು. ಇವಳು ಇಸ್ರಾಯೇಲ್ ಜನಾಂಗಕ್ಕೆ ಸೇರಿದವಳಾಗಿರಲಿಲ್ಲ. ಯೆಹೋವನ ಆರಾಧಕಳಾಗಲು ಎಷ್ಟೋ ವಿಷಯಗಳನ್ನು ಬಿಟ್ಟುಬಂದಿದ್ದಳು. ಯೆಹೋವನು ಅವಳಿಗೆ ಒಬ್ಬ ಗಂಡ ಮತ್ತು ಮಗನನ್ನು ಕೊಟ್ಟು ಆಶೀರ್ವದಿಸಿದನು. ಅಷ್ಟೇ ಅಲ್ಲ ಅವಳು ಮೆಸ್ಸೀಯನ ಪೂರ್ವಜಳೂ ಆದಳು. ರೂತಳ ಜೀವನ ಕಥೆಯಿರುವ ಪುಸ್ತಕ ಬೈಬಲಿನ ಭಾಗವಾಗುವಂತೆ ದೇವರು ಮಾಡಿದ್ದಾನೆ. ಆ ಪುಸ್ತಕ ಅವಳ ಹೆಸರಲ್ಲೇ ಇದೆ. ರೂತಳು ಪುನರುತ್ಥಾನವಾಗಿ ಬರುವಾಗ ಈ ಎಲ್ಲಾ ವಿಷಯಗಳನ್ನು ಕೇಳಿಸಿಕೊಂಡು ತುಂಬ ಸಂತೋಷಪಡುವಳು ಅಲ್ಲವೇ?—ರೂತ. 4:13; ಮತ್ತಾ. 1:5, 16.
10. ಯೆಹೋವನ ಆಳ್ವಿಕೆ ಕಠೋರವಾಗಿಲ್ಲ ಎಂದು ಹೇಗೆ ಹೇಳಬಹುದು?
10 ಯೆಹೋವನ ಆಳ್ವಿಕೆ ಕಠೋರವಾಗಿಲ್ಲ. ತನ್ನ ಜನರಿಗೆ ಸ್ವಾತಂತ್ರ್ಯ ಕೊಟ್ಟಿದ್ದಾನೆ. ಇದರಿಂದ ಅವರು ಸಂತೋಷವಾಗಿದ್ದಾರೆ. (2 ಕೊರಿಂ. 3:17) ದಾವೀದನು ಯೆಹೋವನ ಬಗ್ಗೆ ಹೀಗಂದಿದ್ದಾನೆ: “ಆತನ ಸಾನ್ನಿಧ್ಯದಲ್ಲಿ ಮಾನಮಹಿಮೆಗಳೂ ಆತನ ಪವಿತ್ರಾಲಯದಲ್ಲಿ ಬಲಸಂತೋಷಗಳೂ ಇರುತ್ತವೆ.” (1 ಪೂರ್ವ. 16:7, 27) ಕೀರ್ತನೆಗಾರನಾದ ಏತಾನ ಹೀಗೆ ಬರೆದಿದ್ದಾನೆ: “ಉತ್ಸಾಹಧ್ವನಿಯನ್ನು ಕೇಳಿದ ಜನರು ಧನ್ಯರು; ಯೆಹೋವನೇ, ಅವರು ನಿನ್ನ ಮುಖಪ್ರಕಾಶದಲ್ಲಿ ಸಂಚರಿಸುತ್ತಾರೆ. ಯಾವಾಗಲೂ ನಿನ್ನ ನಾಮದಲ್ಲಿ ಆನಂದಿಸುತ್ತಾರೆ; ನಿನ್ನ ನೀತಿಯಿಂದ ಏಳಿಗೆಹೊಂದುತ್ತಾರೆ.”—ಕೀರ್ತ. 89:15, 16.
11. ಯೆಹೋವನ ಪರಮಾಧಿಕಾರವೇ ಅತ್ಯುತ್ತಮ ಎಂದು ನಮಗೆ ಸಂಪೂರ್ಣ ಮನವರಿಕೆ ಆಗಬೇಕಾದರೆ ನಾವೇನು ಮಾಡಬೇಕು?
11 ಯೆಹೋವನ ಆಳ್ವಿಕೆಯೇ ಅತ್ಯುತ್ತಮ ಎಂದು ನಮಗೆ ಸಂಪೂರ್ಣ ಮನವರಿಕೆ ಆಗಬೇಕಾದರೆ ನಾವು ಯೆಹೋವನ ಒಳ್ಳೇತನದ ಬಗ್ಗೆ ಆಗಾಗ ಧ್ಯಾನಿಸುತ್ತಾ ಇರಬೇಕು. ಆಗ ನಮಗೆ ಕೀರ್ತನೆಗಾರನಂತೆ ಅನಿಸುತ್ತದೆ: “ನಿನ್ನ ಆಲಯದ ಅಂಗಳಗಳಲ್ಲಿ ಕಳೆದ ಒಂದು ದಿನವು ಬೇರೆ ಸಹಸ್ರದಿನಗಳಿಗಿಂತ ಉತ್ತಮವಾಗಿದೆ.” (ಕೀರ್ತ. 84:10) ಯೆಹೋವನು ನಮ್ಮನ್ನು ರೂಪಿಸಿ ರಚಿಸಿರುವುದರಿಂದ ನಾವು ಸಂತೋಷವಾಗಿರಲು ಏನು ಬೇಕೆಂದು ಆತನಿಗೆ ಚೆನ್ನಾಗಿ ಗೊತ್ತು. ನಮಗೆ ಬೇಕಾಗಿರುವುದಕ್ಕಿಂತ ಹೆಚ್ಚಿನದ್ದನ್ನು ಉದಾರವಾಗಿ ಕೊಡುತ್ತಾನೆ. ಆತನು ನಮಗೆ ಏನಾದರೂ ಮಾಡಲು ಹೇಳಿದರೆ ಅದು ನಮ್ಮ ಒಳ್ಳೇದಕ್ಕೇ. ಯೆಹೋವನಿಗೆ ವಿಧೇಯತೆ ತೋರಿಸಲು ನಾವು ತ್ಯಾಗಗಳನ್ನು ಮಾಡಬೇಕಾಗಿ ಬಂದರೂ ಯಾವಾಗಲೂ ಸಂತೋಷವಾಗಿರುತ್ತೇವೆ.—ಯೆಶಾಯ 48:17 ಓದಿ.
12. ಯೆಹೋವನ ಪರಮಾಧಿಕಾರವನ್ನು ಬೆಂಬಲಿಸಲು ನಮಗಿರುವ ಮುಖ್ಯ ಕಾರಣ ಯಾವುದು?
12 ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆಯ ನಂತರ ಕೆಲವರು ಯೆಹೋವನ ಪರಮಾಧಿಕಾರದ ವಿರುದ್ಧ ದಂಗೆ ಏಳುವರು ಎಂದು ಬೈಬಲ್ ಹೇಳುತ್ತದೆ. (ಪ್ರಕ. 20:7, 8) ಅವರು ಯಾಕೆ ದಂಗೆ ಏಳಬಹುದು? ಜನರು ಬರೀ ತಮ್ಮ ಸ್ವಾರ್ಥ ನೋಡಿಕೊಳ್ಳುವಂತೆ ಮಾಡಲು ಪಿಶಾಚನು ಪ್ರಯತ್ನಿಸುವನು. ಅವನು ಯಾವಾಗಲೂ ಇದನ್ನೇ ಮಾಡುತ್ತಾ ಬಂದಿದ್ದಾನಲ್ವಾ? ಯೆಹೋವನಿಗೆ ವಿಧೇಯತೆ ತೋರಿಸದೆಯೇ ಅನಂತಕಾಲ ಜೀವಿಸಲು ಸಾಧ್ಯ ಎಂದು ಜನರನ್ನು ನಂಬಿಸಲು ಪ್ರಯತ್ನಿಸುವನು. ಆದರೆ ಸೈತಾನನ ಆ ಮಾತು ಯಾವತ್ತೂ ಸತ್ಯವಾಗಿರಲು ಸಾಧ್ಯವೇ ಇಲ್ಲ. ‘ನಾನು ಅಂಥ ಸುಳ್ಳನ್ನು ನಂಬುವೆನಾ?’ ಎಂದು ನಾವು ನಮ್ಮನ್ನೇ ಕೇಳಿಕೊಳ್ಳಬೇಕು. ನಮಗೆ ಯೆಹೋವನ ಮೇಲೆ ಪ್ರೀತಿ ಇರುವುದಾದರೆ ಮತ್ತು ಆತನು ಒಳ್ಳೆಯವನು, ಇಡೀ ವಿಶ್ವವನ್ನು ಆಳುವ ಹಕ್ಕು ಆತನಿಗಿದೆ ಎಂದು ಮನವರಿಕೆಯಾಗಿದ್ದರೆ ಸೈತಾನನ ಆ ಸುಳ್ಳು ನಮಗೆ ಅಸಹ್ಯವೆನಿಸುವುದು. ಪ್ರೀತಿಯಿಂದ ಆಳುವಂಥ ಯೆಹೋವನ ಪರಮಾಧಿಕಾರದ ಕೆಳಗೆ ಮಾತ್ರ ನಾವು ಜೀವಿಸಲು ಇಷ್ಟಪಡುವೆವು.
ದೇವರ ಪರಮಾಧಿಕಾರವನ್ನು ನಿಷ್ಠೆಯಿಂದ ಬೆಂಬಲಿಸಿ
13. ನಾವು ದೇವರ ಪರಮಾಧಿಕಾರವನ್ನು ಹೇಗೆ ಬೆಂಬಲಿಸಬಹುದು?
13 ನಾವೀಗಾಗಲೇ ನೋಡಿದಂತೆ, ಯೆಹೋವನಿಗೆ ಆಳುವ ಹಕ್ಕಿದೆ ಮತ್ತು ಆತನು ಆಳುವ ವಿಧವೇ ಅತ್ಯುತ್ತಮ. ಆತನ ಪರಮಾಧಿಕಾರಕ್ಕೆ ನಾವು ಸಂಪೂರ್ಣ ಬೆಂಬಲ ಕೊಡಬೇಕು. ಹೇಗೆ? ಯೆಹೋವನಿಗೆ ನಿಷ್ಠೆ ತೋರಿಸುವ ಮತ್ತು ಆತನನ್ನು ಅನುಕರಿಸುವ ಮೂಲಕ. ಯೆಹೋವನು ಯಾವ ರೀತಿ ನಡಕೊಳ್ಳುತ್ತಾನೊ ಅದೇ ರೀತಿಯಲ್ಲಿ ನಡಕೊಳ್ಳಲು ನಮ್ಮಿಂದಾದ ಎಲ್ಲ ಪ್ರಯತ್ನ ಮಾಡುವಾಗ ನಾವು ಆತನು ಆಳುವ ವಿಧವನ್ನು ಇಷ್ಟಪಡುತ್ತೇವೆ ಮತ್ತು ಬೆಂಬಲಿಸುತ್ತೇವೆ ಎಂದು ತೋರಿಸಿಕೊಡುತ್ತೇವೆ.—ಎಫೆಸ 5:1, 2 ಓದಿ.
14. ಹಿರಿಯರು ಮತ್ತು ಕುಟುಂಬದ ತಲೆಗಳು ಹೇಗೆ ಯೆಹೋವನನ್ನು ಅನುಕರಿಸಬಹುದು?
14 ಯೆಹೋವನು ತನ್ನ ಅಧಿಕಾರವನ್ನು ಯಾವಾಗಲೂ ಪ್ರೀತಿಯಿಂದ ಬಳಸುತ್ತಾನೆಂದು ಬೈಬಲಿನಿಂದ ಕಲಿಯುತ್ತೇವೆ. ಆತನ ಪರಮಾಧಿಕಾರವನ್ನು ಪ್ರೀತಿಸುವ ಕುಟುಂಬದ ತಲೆಗಳು ಮತ್ತು ಹಿರಿಯರು ಆತನನ್ನು ಅನುಕರಿಸುತ್ತಾರೆ. ಅವರು ಕಠೋರವಾಗಿ ನಡಕೊಳ್ಳುವುದಿಲ್ಲ, ಎಲ್ಲವೂ ತಾನು ಹೇಳಿದಂತೆ ನಡೆಯಬೇಕೆಂದು ಅಧಿಕಾರ ಚಲಾಯಿಸುವುದಿಲ್ಲ. ಅಪೊಸ್ತಲ ಪೌಲನು ದೇವರನ್ನು ಮತ್ತು ಆತನ ಮಗನನ್ನು ಅನುಕರಿಸಲು ತುಂಬ ಪ್ರಯತ್ನ ಹಾಕಿದನು. (1 ಕೊರಿಂ. 11:1) ಅವನು ಬೇರೆಯವರಿಗೆ ಮುಜುಗರ ಉಂಟುಮಾಡಲಿಲ್ಲ. ಸರಿಯಾದದ್ದನ್ನು ಮಾಡಲು ಒತ್ತಾಯಿಸದೆ ದಯೆಯಿಂದ ಉತ್ತೇಜಿಸಿದನು. (ರೋಮ. 12:1; ಎಫೆ. 4:1; ಫಿಲೆ. 8-10) ಇದು ಯೆಹೋವನು ನಡಕೊಳ್ಳುವ ರೀತಿ ಆಗಿದೆ. ನಾವು ಸಹ ಬೇರೆಯವರೊಂದಿಗೆ ಪ್ರೀತಿಯಿಂದ ನಡಕೊಳ್ಳುವಾಗ ಯೆಹೋವನ ಪರಮಾಧಿಕಾರವನ್ನು ಬೆಂಬಲಿಸುತ್ತೇವೆ.
15. ಯೆಹೋವನ ಆಳ್ವಿಕೆಯನ್ನು ಬೆಂಬಲಿಸುತ್ತೇವೆ ಎಂದು ಹೇಗೆ ತೋರಿಸಬಹುದು?
15 ಯೆಹೋವನು ಯಾರಿಗೆ ಅಧಿಕಾರ ಕೊಟ್ಟಿದ್ದಾನೋ ಅವರನ್ನು ಗೌರವಿಸುವ ಮೂಲಕ ಮತ್ತು ಅವರೊಂದಿಗೆ ಸಹಕರಿಸುವ ಮೂಲಕ ನಾವು ಯೆಹೋವನ ಆಳ್ವಿಕೆಯನ್ನು ಬೆಂಬಲಿಸುತ್ತೇವೆ. ಇಂಥವರು ಒಂದು ತೀರ್ಮಾನ ತೆಗೆದುಕೊಂಡಾಗ ಅದನ್ನು ಯಾಕೆ ತೆಗೆದುಕೊಂಡರು ಎಂದು ನಮಗೆ ಪೂರ್ತಿ ಅರ್ಥವಾಗದಿದ್ದರೂ ಅಥವಾ ಇಷ್ಟವಾಗದಿದ್ದರೂ ನಾವು ಅವರೊಂದಿಗೆ ಸಹಕರಿಸುತ್ತೇವೆ. ಲೋಕದ ಜನರ ಮನೋಭಾವ ಹೀಗಿರುವುದಿಲ್ಲ. ಆದರೆ ಯೆಹೋವನ ಆಳ್ವಿಕೆಯನ್ನು ಸ್ವೀಕರಿಸಿರುವ ನಾವು ಸಹಕಾರ ನೀಡುತ್ತೇವೆ. (ಎಫೆ. 5:22, 23; 6:1-3; ಇಬ್ರಿ. 13:17) ಇದರಿಂದ ನಾವು ಸಂತೋಷವಾಗಿರುತ್ತೇವೆ. ಏಕೆಂದರೆ ದೇವರು ಎಲ್ಲವನ್ನೂ ನಮ್ಮ ಒಳ್ಳೇದಕ್ಕೇ ಮಾಡುತ್ತಾನೆ.
16. ದೇವರ ಪರಮಾಧಿಕಾರವನ್ನು ಬೆಂಬಲಿಸುತ್ತೇವೆಂದು ನಾವು ತೆಗೆದುಕೊಳ್ಳುವ ತೀರ್ಮಾನಗಳು ಹೇಗೆ ತೋರಿಸುತ್ತವೆ?
16 ನಾವು ತೆಗೆದುಕೊಳ್ಳುವ ತೀರ್ಮಾನಗಳಿಂದಲೂ ದೇವರ ಪರಮಾಧಿಕಾರವನ್ನು ಬೆಂಬಲಿಸುತ್ತೇವೆ ಎಂದು ತೋರಿಸಬಹುದು. ನಮ್ಮ ಜೀವನದಲ್ಲಿ ಎದುರಾಗುವ ಪ್ರತಿಯೊಂದು ಸನ್ನಿವೇಶದಲ್ಲಿ ಏನು ಮಾಡಬೇಕೆಂಬುದಕ್ಕೆ ಯೆಹೋವನು ನಿರ್ದಿಷ್ಟ ನಿಯಮಗಳನ್ನು ಕೊಟ್ಟಿಲ್ಲ. ಅದರ ಬದಲಿಗೆ, ತನ್ನ ದೃಷ್ಟಿಕೋನವೇನೆಂದು ಹೇಳುತ್ತಾನೆ. ಇದರಿಂದ ನಾವೇನು ಮಾಡಬೇಕೆಂದು ಗೊತ್ತಾಗುತ್ತದೆ. ಉದಾಹರಣೆಗೆ, ಕ್ರೈಸ್ತರು ಯಾವ ಬಟ್ಟೆ ಹಾಕಬೇಕು, ಹಾಕಬಾರದು ಎಂದು ಯೆಹೋವನು ಒಂದು ಪಟ್ಟಿಯನ್ನು ಕೊಟ್ಟಿಲ್ಲ. ಬದಲಿಗೆ ಆತನ ಸಾಕ್ಷಿಗಳಾದ ನಾವು ಹಾಕುವ ಬಟ್ಟೆ ಸಭ್ಯವಾಗಿರಬೇಕು, ಮರ್ಯಾದೆಗೆ ತಕ್ಕದಾಗಿರಬೇಕು ಎಂದು ಹೇಳುತ್ತಾನೆ. (1 ತಿಮೊ. 2:9, 10) ನಾವು ತೆಗೆದುಕೊಳ್ಳುವ ತೀರ್ಮಾನಗಳು ಬೇರೆಯವರ ಮೇಲೆ ಬೀರುವ ಪರಿಣಾಮದ ಬಗ್ಗೆ ಯೋಚಿಸಬೇಕೆಂದು ಹೇಳುತ್ತಾನೆ. (1 ಕೊರಿಂ. 10:31-33) ಯೆಹೋವನ ದೃಷ್ಟಿಕೋನಕ್ಕನುಸಾರ ನಾವು ತೀರ್ಮಾನಗಳನ್ನು ತೆಗೆದುಕೊಂಡರೆ, ನಮಗೆ ಆತನು ಆಳುವ ವಿಧ ಇಷ್ಟ ಮತ್ತು ಅದನ್ನು ಬೆಂಬಲಿಸುತ್ತೇವೆಂದು ತೋರಿಸುತ್ತೇವೆ.
ನೀವು ತೆಗೆದುಕೊಳ್ಳುವ ತೀರ್ಮಾನಗಳಲ್ಲಿ ಮತ್ತು ವಿವಾಹ ಜೀವನದಲ್ಲಿ ಯೆಹೋವನ ಪರಮಾಧಿಕಾರವನ್ನು ಬೆಂಬಲಿಸಿ (ಪ್ಯಾರ 16-18 ನೋಡಿ)
17, 18. ದಂಪತಿಗಳು ಯೆಹೋವನ ಪರಮಾಧಿಕಾರವನ್ನು ಬೆಂಬಲಿಸುತ್ತಾರೆಂದು ಹೇಗೆ ತೋರಿಸಬಹುದು?
17 ವಿವಾಹಿತ ಕ್ರೈಸ್ತರು ಯೆಹೋವನ ಪರಮಾಧಿಕಾರವನ್ನು ಬೆಂಬಲಿಸುವ ಒಂದು ವಿಧವನ್ನು ನೋಡೋಣ. ಒಂದು ದಂಪತಿಯ ವಿವಾಹ ಜೀವನ ಅವರು ನೆನಸಿದ್ದಂತೆ ಇರಲಿಕ್ಕಿಲ್ಲ. ಗಂಭೀರವಾದ ಸಮಸ್ಯೆಗಳೂ ಇರಬಹುದು. ಇಂಥ ಸನ್ನಿವೇಶದಲ್ಲಿರುವ ದಂಪತಿಗಳು, ಯೆಹೋವನು ಪುರಾತನ ಇಸ್ರಾಯೇಲಿನೊಂದಿಗೆ ನಡೆದುಕೊಂಡ ರೀತಿಯ ಬಗ್ಗೆ ಯೋಚಿಸುವುದರಿಂದ ಸಹಾಯವಾಗಬಹುದು. ತನ್ನ ಜನರಿಗೆ ತಾನು ಗಂಡನಂತಿದ್ದೇನೆ ಎಂದು ಯೆಹೋವನು ಹೇಳಿದ್ದಾನೆ. (ಯೆಶಾ. 54:5; 62:4) ಇಸ್ರಾಯೇಲ್ ಜನಾಂಗ ಅನೇಕ ಸಲ ಆತನ ಮನಸ್ಸಿಗೆ ನೋವಾಗುವ ತರ ನಡಕೊಂಡಿತು. ಇದು ತುಂಬ ಸಮಸ್ಯೆಗಳಿಂದ ಕೂಡಿದ ವಿವಾಹ ಸಂಬಂಧದಂತೆ ಇತ್ತು. ಆದರೆ ಯೆಹೋವನು ಇಸ್ರಾಯೇಲ್ ಜನಾಂಗವನ್ನು ಕೂಡಲೆ ಬಿಟ್ಟುಬಿಡಲಿಲ್ಲ. ಪುನಃ ಪುನಃ ಕ್ಷಮಿಸಿದನು, ಕೊಟ್ಟ ವಾಗ್ದಾನಗಳನ್ನು ನೆರವೇರಿಸಿದನು.—ಕೀರ್ತನೆ 106:43-45 ಓದಿ.
18 ಯೆಹೋವನನ್ನು ಪ್ರೀತಿಸುವ ವಿವಾಹಿತ ಕ್ರೈಸ್ತರು ಆತನನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ತಮ್ಮ ಮದುವೆ ಜೀವನದಲ್ಲಿ ಸಮಸ್ಯೆಗಳಿದ್ದರೂ ಬೈಬಲ್ ಕೊಡುವ ಕಾರಣವನ್ನು ಬಿಟ್ಟು ಬೇರೆ ಕಾರಣಕ್ಕಾಗಿ ಸಂಬಂಧವನ್ನು ಕಡಿದುಹಾಕುವುದಿಲ್ಲ. ಯೆಹೋವನು ವಿವಾಹದ ಪ್ರತಿಜ್ಞೆಗಳನ್ನು ಗಂಭೀರವಾಗಿ ಎಣಿಸುತ್ತಾನೆ ಮತ್ತು ಗಂಡಹೆಂಡತಿ “ಒಂದೇ ಶರೀರವಾಗಿ” ಇರಬೇಕೆಂದು ಬಯಸುತ್ತಾನೆ ಅಂತ ಅವರಿಗೆ ಗೊತ್ತು. ಸಂಗಾತಿ ಲೈಂಗಿಕ ಅನೈತಿಕತೆಯಲ್ಲಿ ತೊಡಗಿದರೆ ಮಾತ್ರ ಇನ್ನೊಬ್ಬ ಸಂಗಾತಿ ವಿಚ್ಛೇದನ ಕೊಟ್ಟು ಬೇರೆ ಮದುವೆ ಮಾಡಿಕೊಳ್ಳಬಹುದು ಎಂದು ಬೈಬಲ್ ಹೇಳುತ್ತದೆ. (ಮತ್ತಾ. 19:5, 6, 9) ಕ್ರೈಸ್ತರು ತಮ್ಮ ವಿವಾಹ ಯಶಸ್ವಿಯಾಗಲು ತಮ್ಮಿಂದಾದ ಎಲ್ಲ ಪ್ರಯತ್ನ ಮಾಡುವಾಗ ಯೆಹೋವನ ಪರಮಾಧಿಕಾರವನ್ನು ಬೆಂಬಲಿಸುತ್ತಾರೆ.
19. ನಮ್ಮಿಂದ ತಪ್ಪಾದಾಗ ಏನು ಮಾಡಬೇಕು?
19 ನಾವೆಲ್ಲರೂ ಅಪರಿಪೂರ್ಣರು, ಕೆಲವೊಮ್ಮೆ ಯೆಹೋವನ ಮನಸ್ಸಿಗೆ ನೋವಾಗುವ ರೀತಿಯಲ್ಲಿ ನಡಕೊಳ್ಳುತ್ತೇವೆ. ಯೆಹೋವನಿಗೆ ಇದು ಗೊತ್ತಿರುವುದರಿಂದಲೇ ಕ್ರಿಸ್ತನ ವಿಮೋಚನಾ ಮೌಲ್ಯವನ್ನು ಕೊಟ್ಟಿದ್ದಾನೆ. ಆದ್ದರಿಂದ ನಾವು ತಪ್ಪು ಮಾಡಿದಾಗ ನಮ್ಮನ್ನು ಕ್ಷಮಿಸುವಂತೆ ಯೆಹೋವನಲ್ಲಿ ಕೇಳಿಕೊಳ್ಳಬೇಕು. (1 ಯೋಹಾ. 2:1, 2) ಮಾಡಿದ ತಪ್ಪಿನ ಬಗ್ಗೆಯೇ ಯೋಚಿಸುತ್ತಾ ಕೊರಗುವ ಬದಲು ಅದರಿಂದ ಪಾಠ ಕಲಿಯಲು ಪ್ರಯತ್ನಿಸಬೇಕು. ನಾವು ಯೆಹೋವನಿಗೆ ಹತ್ತಿರವಾಗಿರಲು ಬಯಸುವುದರಿಂದ ಆತನು ಖಂಡಿತ ನಮ್ಮ ತಪ್ಪುಗಳನ್ನು ಕ್ಷಮಿಸಿ, ಚೇತರಿಸಿಕೊಳ್ಳಲು ಸಹಾಯಮಾಡುತ್ತಾನೆ. ಆಗ ನಾವು ನಂಬಿಗಸ್ತಿಕೆಯಿಂದ ಆತನ ಸೇವೆ ಮಾಡುತ್ತಾ ಇರಲು ಸಾಧ್ಯವಾಗುತ್ತದೆ.—ಕೀರ್ತ. 103:3.
20. ನಾವು ಯಾಕೆ ಈಗಲೇ ಯೆಹೋವನ ಪರಮಾಧಿಕಾರವನ್ನು ಬೆಂಬಲಿಸಬೇಕು?
20 ಹೊಸ ಲೋಕದಲ್ಲಿ ನಾವೆಲ್ಲರೂ ಯೆಹೋವನ ಆಳ್ವಿಕೆ ಕೆಳಗಿರುತ್ತೇವೆ. ಆಗ ಆತನ ನೀತಿಯುತ ಮಾರ್ಗಗಳ ಬಗ್ಗೆ ಕಲಿಯಲಿದ್ದೇವೆ. (ಯೆಶಾ. 11:9) ಆದರೆ ಈಗಲೂ ನಾವು ಯೆಹೋವನ ದೃಷ್ಟಿಕೋನದ ಬಗ್ಗೆ ಮತ್ತು ನಾವು ಹೇಗೆ ನಡಕೊಳ್ಳುವಂತೆ ಆತನು ಬಯಸುತ್ತಾನೆ ಎಂಬುದರ ಬಗ್ಗೆ ಹೆಚ್ಚನ್ನು ಕಲಿಯಬಲ್ಲೆವು. ದೇವರ ಪರಮಾಧಿಕಾರದ ವಿವಾದಾಂಶ ಬೇಗನೆ ಇತ್ಯರ್ಥಗೊಳ್ಳಲಿದೆ, ಅದರ ಬಗ್ಗೆ ಇನ್ಯಾರೂ ಎಂದೂ ಪ್ರಶ್ನೆ ಮಾಡುವುದಿಲ್ಲ. ಆದ್ದರಿಂದ ನಾವು ಈಗಲೇ ಯೆಹೋವನ ಪರಮಾಧಿಕಾರವನ್ನು ಬೆಂಬಲಿಸಲಿಕ್ಕಾಗಿ ಆತನಿಗೆ ವಿಧೇಯತೆ ತೋರಿಸೋಣ, ಆತನ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡೋಣ ಮತ್ತು ನಾವೇನೆಲ್ಲ ಮಾಡುತ್ತೇವೊ ಅದರಲ್ಲೆಲ್ಲ ಆತನನ್ನು ಅನುಕರಿಸಲು ನಮ್ಮಿಂದಾದ ಎಲ್ಲ ಪ್ರಯತ್ನ ಮಾಡೋಣ!