ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w17 ಅಕ್ಟೋಬರ್‌ ಪು. 3-6
  • ಯೆಹೋವನ ಮಾತಿನಂತೆ ನಡೆದರೆ ಆಶೀರ್ವಾದ ಖಂಡಿತ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಮಾತಿನಂತೆ ನಡೆದರೆ ಆಶೀರ್ವಾದ ಖಂಡಿತ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬಾಳ ಸಂಗಾತಿಯ ಭೇಟಿ
  • “ನಾವದನ್ನು ಮಾಡಲು ಸಿದ್ಧ”
  • ಮರಳಿ ಇಂಗ್ಲೆಂಡಿಗೆ, ನಂತರ ಸ್ಕಾಟ್‌ಲೆಂಡಿಗೆ
  • ಐರ್ಲೆಂಡಿನಲ್ಲಿ ಹೊಸ ನೇಮಕ
  • ಐರ್ಲೆಂಡಿನ ದೇವಪ್ರಭುತ್ವಾತ್ಮಕ ಇತಿಹಾಸದಲ್ಲಾದ ಮುಖ್ಯ ಬದಲಾವಣೆ
  • ದೊಡ್ಡ ಬದಲಾವಣೆ ತಂದ ನೇಮಕ
  • 1921—ನೂರು ವರ್ಷಗಳ ಹಿಂದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ನನ್ನ ಜೀವನವನ್ನು ಅರ್ಪಿಸಲು ಸಾಧ್ಯವಿರುವ ಕೆಲಸಗಳಲ್ಲಿ ಅತ್ಯುತ್ತಮವಾದದ್ದು
    ಕಾವಲಿನಬುರುಜು—1995
  • ಸುಳ್ಳಾಡ ಸಾಧ್ಯವಿಲ್ಲದ ದೇವರಿಂದ ಪೋಷಿಸಲ್ಪಟ್ಟದ್ದು
    ಕಾವಲಿನಬುರುಜು—1994
  • ಸಹೋದರ ಸಹೋದರಿಯರ ನಂಬಿಕೆನ ನಾನು ನೋಡ್ದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
w17 ಅಕ್ಟೋಬರ್‌ ಪು. 3-6

ಜೀವನ ಕಥೆ

ಯೆಹೋವನ ಮಾತಿನಂತೆ ನಡೆದರೆ ಆಶೀರ್ವಾದ ಖಂಡಿತ

ಆಲಿವ್‌ ಮ್ಯಾಥ್ಯೂ ಹೇಳಿದಂತೆ

ನನ್ನ ಅಣ್ಣ ಮತ್ತು ಅತ್ತಿಗೆಯ ಜೊತೆಯಲ್ಲಿ ಒಂದು ವಿಶೇಷ ನೇಮಕವನ್ನು ನನಗೂ ನನ್ನ ಗಂಡನಿಗೂ ಕೊಡಲಾಯಿತು. ತಕ್ಷಣವೇ “ನಾವದನ್ನು ಮಾಡಲು ಸಿದ್ಧ” ಎಂದೆವು. ನಾವು ಆ ನೇಮಕವನ್ನು ಯಾಕೆ ಸ್ವೀಕರಿಸಿದೆವು ಮತ್ತು ಯೆಹೋವನು ನಮ್ಮನ್ನು ಹೇಗೆ ಆಶೀರ್ವದಿಸಿದನು? ಇದನ್ನು ಹೇಳುವುದಕ್ಕೂ ಮುಂಚೆ ನನ್ನ ಹಿನ್ನೆಲೆಯನ್ನು ತಿಳಿಸುತ್ತೇನೆ.

ನಾನು 1923​ರಲ್ಲಿ ಇಂಗ್ಲೆಂಡಿನ ಯಾರ್ಕ್‌ಶರ್‌ ಎಂಬ ಪಟ್ಟಣದ ಹೆಮ್‌ಸ್‌ವರ್ತ್‌ನಲ್ಲಿ ಹುಟ್ಟಿದೆ. ನನ್ನ ಅಣ್ಣನ ಹೆಸರು ಬಾಬ್‌. ನನಗೆ 9 ವರ್ಷವಿದ್ದಾಗ ನನ್ನ ಅಪ್ಪನಿಗೆ ಕೆಲವು ಪುಸ್ತಕಗಳು ಸಿಕ್ಕಿದವು. ಸುಳ್ಳು ಧರ್ಮಗಳು ಜನರನ್ನು ಹೇಗೆ ಮೋಸ ಮಾಡುತ್ತಿವೆ ಎಂದು ಅವುಗಳಲ್ಲಿ ತಿಳಿಸಲಾಗಿತ್ತು. ಧಾರ್ಮಿಕ ಮುಖಂಡರು ಹೇಳೋದು ಒಂದು ಮಾಡೋದು ಇನ್ನೊಂದು ಆದ್ದರಿಂದ ನನ್ನ ಅಪ್ಪನಿಗೂ ಅವರು ಇಷ್ಟವಾಗುತ್ತಿರಲಿಲ್ಲ. ಹಾಗಾಗಿ, ಅಪ್ಪನಿಗೆ ಈ ಪುಸ್ತಕಗಳು ತುಂಬ ಇಷ್ಟವಾದವು. ಕೆಲವು ವರ್ಷಗಳ ನಂತರ, ಬಾಬ್‌ ಅಟ್‌ಕಿನ್‌ಸನ್‌ ಎಂಬ ಒಬ್ಬರು ನಮ್ಮ ಮನೆಗೆ ಬಂದು ಸಹೋದರ ರದರ್‌ಫರ್ಡ್‌ರ ಭಾಷಣಗಳ ರೆಕಾರ್ಡಿಂಗ್‌ಗಳನ್ನು ಕೇಳಿಸಿದರು. ಈ ಭಾಷಣಗಳನ್ನೂ ಮುಂಚೆ ಅಪ್ಪ ಓದಿದ್ದ ಪುಸ್ತಕಗಳನ್ನೂ ಒಂದೇ ಗುಂಪಿನವರು ಪ್ರಕಾಶಿಸಿದ್ದು ಎಂದು ನಮಗೆ ಗೊತ್ತಾಯಿತು. ಪ್ರತಿ ರಾತ್ರಿ ನಮ್ಮ ಮನೆಯಲ್ಲೇ ಊಟ ಮಾಡಿ ಬೈಬಲಿನ ಬಗ್ಗೆ ನಮಗಿರುವ ಪ್ರಶ್ನೆಗಳನ್ನು ಉತ್ತರಿಸುವಂತೆ ನನ್ನ ಹೆತ್ತವರು ಸಹೋದರ ಅಟ್‌ಕಿನ್‌ಸನ್‌ರಿಗೆ ಹೇಳಿದರು. ಆ ಸಹೋದರನು ನಮ್ಮನ್ನು ಕೂಟಗಳಿಗೆ ಆಮಂತ್ರಿಸಿದನು. ಅದು ಕೆಲವು ಮೈಲಿ ದೂರದಲ್ಲಿದ್ದ ಒಬ್ಬ ಸಹೋದರನ ಮನೆಯಲ್ಲಿ ನಡೆಯುತ್ತಿತ್ತು. ನಾವು ಕ್ರಮವಾಗಿ ಕೂಟಗಳಿಗೆ ಹೋಗಲು ಆರಂಭಿಸಿದೆವು. ಕ್ರಮೇಣ ಹೆಮ್‌ಸ್‌ವರ್ತ್‌ನಲ್ಲಿ ಒಂದು ಚಿಕ್ಕ ಸಭೆಯನ್ನು ಆರಂಭಿಸಲಾಯಿತು. ಝೋನ್‌ ಸರ್ವೆಂಟರು (ಈಗ ಸಂಚರಣ ಮೇಲ್ವಿಚಾರಕ ಎಂದು ಕರೆಯಲಾಗುತ್ತದೆ) ನಮ್ಮ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು ಮತ್ತು ಅಕ್ಕಪಕ್ಕದ ಸಭೆಯ ಪಯನೀಯರರು ಊಟಕ್ಕೆ ಬರುತ್ತಿದ್ದರು. ಈ ಸಹೋದರ ಸಹೋದರಿಯರು ನಮ್ಮ ಮೇಲೆ ಒಳ್ಳೆಯ ಪ್ರಭಾವ ಬೀರಿದರು.

ನಮ್ಮ ಕುಟುಂಬ ಪೀಠೋಪಕರಣಗಳ ವ್ಯಾಪಾರವನ್ನು ಆರಂಭಿಸಿತು. ಆದರೆ ನನ್ನ ಅಪ್ಪ, “ನೀನು ಪಯನೀಯರ್‌ ಸೇವೆ ಮಡಬೇಕೆಂದಿದ್ದರೆ ತುಂಬ ಸಂತೋಷ. ನಾವು ನಮ್ಮ ವ್ಯಾಪಾರವನ್ನು ನಿಲ್ಲಿಸಿಬಿಡೋಣ” ಅಂತ ನನ್ನ ಅಣ್ಣನಿಗೆ ಹೇಳಿದರು. ಅದಕ್ಕೆ ಅವನು ಒಪ್ಪಿ, 21​ನೇ ವಯಸ್ಸಿನಲ್ಲಿ ಪಯನೀಯರ್‌ ಸೇವೆ ಆರಂಭಿಸಿದನು. ಇದಾಗಿ ಎರಡು ವರ್ಷಗಳ ನಂತರ ಅಂದರೆ ನನಗೆ 16 ವರ್ಷವಾದಾಗ ನಾನೂ ಪಯನೀಯರ್‌ ಸೇವೆ ಆರಂಭಿಸಿದೆ. ವಾರದ ದಿನಗಳಲ್ಲಿ ಹೆಚ್ಚಾಗಿ ನಾನು ಒಬ್ಬಳೇ ಸೇವೆ ಮಾಡುತ್ತಿದ್ದೆ. ಆದರೆ ವಾರಾಂತ್ಯದಲ್ಲಿ ನಾನು ಬೇರೆಯವರ ಜೊತೆಯಲ್ಲಿ ಸೇವೆ ಮಾಡುತ್ತಿದ್ದೆ. ಸೇವೆ ಮಾಡಲು ನಾನು ಫೋನೋಗ್ರಾಫ್‌ ಮತ್ತು ಟೆಸ್ಟಿಮನಿ ಕಾರ್ಡನ್ನು ಉಪಯೋಗಿಸುತ್ತಿದ್ದೆ. ಅದು ಒಂದು ಚಿಕ್ಕ ಕಾರ್ಡಾಗಿದ್ದು, ಅದರಲ್ಲಿ ಚುಟುಕಾಗಿ ಬೈಬಲ್‌ ಸಂದೇಶವನ್ನು ಮುದ್ರಿಸಲಾಗಿತ್ತು. ಯೆಹೋವನ ಆಶೀರ್ವಾದದಿಂದ ನಾನು ಒಂದು ಬೈಬಲ್‌ ಅಧ್ಯಯನ ಆರಂಭಿಸಿದೆ ಮತ್ತು ಅವಳು ಒಳ್ಳೇ ಪ್ರಗತಿ ಮಾಡಿದಳು. ಕ್ರಮೇಣ, ಅವಳ ಕುಟುಂಬದ ಅನೇಕರು ಸತ್ಯಕ್ಕೆ ಬಂದರು. ಮುಂದಿನ ವರ್ಷ ನನ್ನನ್ನು ಮೇರಿ ಹೆನ್ಶೆಲ್‌ ಎಂಬವರ ಜೊತೆ ವಿಶೇಷ ಪಯನೀಯರ್‌ ಆಗಿ ಸೇವೆ ಮಾಡುವಂತೆ ನೇಮಿಸಲಾಯಿತು. ನಮ್ಮನ್ನು ಚೆಶೈರ್‌ನಲ್ಲಿರುವ, ಇಲ್ಲಿಯವರೆಗೆ ಯಾರಿಗೂ ನೇಮಿಸಲ್ಪಟ್ಟಿರದ ಟೆರಿಟೊರಿಯಲ್ಲಿ ಸಾರಲು ಕಳುಹಿಸಲಾಯಿತು.

ಎರಡನೇ ಲೋಕಯುದ್ಧ ನಡೆಯುತ್ತಿದ್ದಾಗ ಯುದ್ಧವನ್ನು ಬೆಂಬಲಿಸುವ ಕೆಲಸಗಳನ್ನು ಮಾಡುವಂತೆ ಸ್ತ್ರೀಯರಿಗೆ ಆದೇಶಿಸಲಾಯಿತು. ಧಾರ್ಮಿಕ ಸೇವೆ ಮಾಡುತ್ತಿರುವ ಇತರ ಧರ್ಮದವರಿಗೆ ಈ ಕೆಲಸದಿಂದ ವಿನಾಯಿತಿ ಕೊಟ್ಟಂತೆಯೇ ವಿಶೇಷ ಪಯನೀಯರ್‌ಗಳಾದ ನಮಗೂ ವಿನಾಯಿತಿ ಕೊಡಬಹುದೆಂದು ನೆನಸಿದೆವು. ಆದರೆ ನ್ಯಾಯಾಲಯ ಅದಕ್ಕೆ ಒಪ್ಪಲಿಲ್ಲ. ನನಗೆ 31 ದಿನಗಳ ಜೈಲು ಶಿಕ್ಷೆ ವಿಧಿಸಲಾಯಿತು. ಮುಂದಿನ ವರ್ಷ ಅಂದರೆ ನನಗೆ 19 ವರ್ಷವಾದಾಗ, ಯುದ್ಧವನ್ನು ಬೆಂಬಲಿಸಲು ಒಪ್ಪದಿದ್ದ ಕಾರಣ ಎರಡು ಸಲ ನ್ಯಾಯಾಲಯಕ್ಕೆ ಹೋಗಬೇಕಾಯಿತು. ಆದರೆ ಆ ಎರಡು ಸಲವೂ ನನಗೆ ಅಧಿಕಾರಿಗಳು ಶಿಕ್ಷೆ ವಿಧಿಸದೆ ಬಿಟ್ಟು ಬಿಟ್ಟರು. ಈ ಎಲ್ಲಾ ಸಮಯದಲ್ಲಿ, ಪವಿತ್ರಾತ್ಮ ನನಗೆ ಸಹಾಯ ಮಾಡುತ್ತಿತ್ತು ಮತ್ತು ಯೆಹೋವನು ನನ್ನನ್ನು ದೃಢಪಡಿಸಿ ಬಲಪಡಿಸುತ್ತಿದ್ದನು ಎಂದು ನನಗೆ ಗೊತ್ತಿತ್ತು.—ಯೆಶಾ. 41:10, 13.

ಬಾಳ ಸಂಗಾತಿಯ ಭೇಟಿ

ನಾನು ಆರ್ಥರ್‌ ಮ್ಯಾಥ್ಯೂಸ್‌ರನ್ನು 1946​ರಲ್ಲಿ ಭೇಟಿಯಾದೆ. ಅವರು ಯುದ್ಧಕ್ಕೆ ಹೋಗಲು ಒಪ್ಪದಿದ್ದ ಕಾರಣ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದರು. ಅವರು ಬಿಡುಗಡೆಯಾದ ತಕ್ಷಣವೇ ಹೆಮ್‌ಸ್‌ವರ್ತ್‌ನಲ್ಲಿ ವಿಶೇಷ ಪಯನೀಯರನಾಗಿದ್ದ ತನ್ನ ಅಣ್ಣ ಡೆನ್ನಿಸ್‌ರ ಜೊತೆ ಪಯನೀಯರ್‌ ಸೇವೆ ಆರಂಭಿಸಿದರು. ಅವರು ತಮ್ಮ ತಂದೆಯಿಂದ ಚಿಕ್ಕ ಪ್ರಾಯದಲ್ಲೇ ಯೆಹೋವನ ಬಗ್ಗೆ ಕಲಿತಿದ್ದರು ಮತ್ತು ಹದಿವಯಸ್ಸಿನಲ್ಲಿ ದೀಕ್ಷಾಸ್ನಾನ ಪಡೆದಿದ್ದರು. ಅವರು ಪಯನೀಯರ್‌ ಸೇವೆ ಆರಂಭಿಸಿದ ಸ್ವಲ್ಪದರಲ್ಲೇ ಡೆನ್ನಿಸ್‌ರಿಗೆ ಐರ್ಲೆಂಡಿನಲ್ಲಿ ಸೇವೆ ಮಾಡುವ ನೇಮಕ ಸಿಕ್ಕಿತು. ಹಾಗಾಗಿ, ಆರ್ಥರ್‌ ಒಂಟಿಯಾದರು. ನನ್ನ ಹೆತ್ತವರಿಗೆ ಆರ್ಥರ್‌ರವರ ಪರಿಶ್ರಮ ಮತ್ತು ನಡತೆ ತುಂಬ ಇಷ್ಟವಾಯಿತು. ಆದ್ದರಿಂದ ಅವರು ಆರ್ಥರ್‌ರನ್ನು ತಮ್ಮ ಮನೆಯಲ್ಲೇ ಇರಲು ಆಮಂತ್ರಿಸಿದರು. ನಾನು ಮನೆಗೆ ಬಂದಾಗೆಲ್ಲಾ ಊಟದ ನಂತರ ನಾನೂ ಆರ್ಥರ್‌ ಸೇರಿ ಪಾತ್ರೆಗಳನ್ನು ತೊಳೆಯುತ್ತಿದ್ದೆವು. ಕ್ರಮೇಣ, ನಾವು ಒಬ್ಬರಿಗೊಬ್ಬರು ಪತ್ರಗಳನ್ನು ಬರೆಯಲು ಪ್ರಾರಂಭಿಸಿದೆವು. 1948​ರಲ್ಲಿ ಆರ್ಥರ್‌ಗೆ ಮತ್ತೊಮ್ಮೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು. ನಂತರ 1949​ರ ಜನವರಿಯಲ್ಲಿ ನಾವು ಮದುವೆಯಾದೆವು. ಸಾಧ್ಯವಾದಷ್ಟು ಕಾಲ ಪೂರ್ಣ ಸಮಯದ ಸೇವೆ ಮಾಡುವುದೇ ನಮ್ಮ ಗುರಿಯಾಗಿತ್ತು. ಹಣ ಖರ್ಚು ಮಾಡುವ ವಿಷಯದಲ್ಲಿ ನಾವು ತುಂಬ ಜಾಗ್ರತೆ ವಹಿಸುತ್ತಿದ್ದೆವು. ರಜಾ ದಿನಗಳಲ್ಲಿ ನಾವು ಹಣ್ಣುಗಳ ಕೊಯ್ಲಿನ ಕೆಲಸ ಮಾಡಿ ಸ್ವಲ್ಪ ಹಣ ಒಟ್ಟುಮಾಡಿದೆವು. ಹೀಗೆ, ಯೆಹೋವನ ಆಶೀರ್ವಾದದಿಂದ ನಾವು ಪಯನೀಯರ್‌ ಸೇವೆಯನ್ನು ಮುಂದುವರಿಸಿದೆವು.

[ಪುಟ 3​ರಲ್ಲಿರುವ ಚಿತ್ರ]

1949​ರಲ್ಲಿ ಆರ್ಥರ್‌ ಮತ್ತು ಆಲಿವ್‌ ಮ್ಯಾಥ್ಯೂಸ್‌

ಒಂದು ವರ್ಷವಾಗಿ ಸ್ವಲ್ಪದರಲ್ಲೇ ನಮಗೆ ಉತ್ತರ ಐರ್ಲೆಂಡಿಗೆ ಹೋಗುವಂತೆ ಹೇಳಲಾಯಿತು. ಮೊದಲು ಅಲ್ಲಿನ ಆರ್‌ಮಾಗೆ ಮತ್ತು ನಂತರ ನ್ಯೂರಿ ಎಂಬ ಸ್ಥಳಕ್ಕೆ ಕಳುಹಿಸಿದರು. ಅಲ್ಲಿ ಹೆಚ್ಚಾಗಿ ಕ್ಯಾಥೊಲಿಕರೇ ಇದ್ದರು. ಆ ಜನರಲ್ಲಿ ಧಾರ್ಮಿಕ ಪೂರ್ವಾಗ್ರಹ ಬಲವಾಗಿತ್ತು. ಆದ್ದರಿಂದ ನಾವು ತುಂಬ ಜಾಗ್ರತೆ ಮತ್ತು ವಿವೇಚನೆಯಿಂದ ಜನರಿಗೆ ಸಾರಬೇಕಿತ್ತು. ನಮ್ಮ ಮನೆಯಿಂದ 16 ಕಿಲೋ ಮೀಟರ್‌ (10 ಮೈಲು) ದೂರದಲ್ಲಿದ್ದ ಒಬ್ಬ ಸಹೋದರನ ಮನೆಯಲ್ಲಿ ಕೂಟಗಳು ನಡೆಯುತ್ತಿದ್ದವು. ಅಲ್ಲಿ ಸುಮಾರು 8 ಜನರು ಹಾಜರಾಗುತ್ತಿದ್ದರು. ಕೆಲವೊಮ್ಮೆ ನಾವು ರಾತ್ರಿ ಅಲ್ಲೇ ಉಳಿದುಕೊಳ್ಳುತ್ತಿದ್ದೆವು. ಅಲ್ಲಿ ನಾವು ನೆಲದ ಮೇಲೆ ಮಲಗುತ್ತಿದ್ದೆವು. ಬೆಳಗ್ಗೆ ಅವರು ಕೊಡುತ್ತಿದ್ದ ರುಚಿಯಾದ ತಿಂಡಿ ತಿಂದು ಖುಷಿ ಪಡುತ್ತಿದ್ದೆವು. ಈ ಊರುಗಳಲ್ಲಿ ಈಗ ಅನೇಕ ಸಾಕ್ಷಿಗಳಿದ್ದಾರೆ ಎಂದು ತಿಳಿಯುವಾಗ ನಮಗೆ ತುಂಬ ಸಂತೋಷವಾಗುತ್ತದೆ.

“ನಾವದನ್ನು ಮಾಡಲು ಸಿದ್ಧ”

ನನ್ನ ಅಣ್ಣ ಮತ್ತು ಅತ್ತಿಗೆ ಲಾಟ್ಟಿ ಈಗಾಗಲೇ ಉತ್ತರ ಐರ್ಲೆಂಡಿನಲ್ಲಿ ವಿಶೇಷ ಪಯನೀಯರರಾಗಿ ಸೇವೆ ಮಾಡುತ್ತಿದ್ದರು. 1952​ರಲ್ಲಿ ಅವರು ಮತ್ತು ನಾವು ಒಟ್ಟು ನಾಲ್ಕು ಜನ ಬೆಲ್‌ಫಾಸ್ಟ್‌ನಲ್ಲಿ ಜಿಲ್ಲಾ ಅಧಿವೇಶನಕ್ಕೆ ಹಾಜರಾದೆವು. ಅಲ್ಲಿ ಒಬ್ಬ ದಯಾಭರಿತ ಸಹೋದರನು ನಮ್ಮನ್ನು ತಮ್ಮ ಮನೆಯಲ್ಲಿ ತಂಗುವಂತೆ ಕೇಳಿಕೊಂಡನು. ಅಲ್ಲಿ, ಇಂಗ್ಲೆಂಡಿನ ಬ್ರಾಂಚ್‌ ಸೇವಕರಾಗಿದ್ದ ಸಹೋದರ ಪ್ರಿಸ್‌ ಹ್ಯೂಝ್‌ ಸಹ ಉಳಿದುಕೊಂಡಿದ್ದರು. ಒಂದು ರಾತ್ರಿ ನಾವು ವಿಶೇಷವಾಗಿ ಐರ್ಲೆಂಡಿನ ಜನರಿಗಾಗಿ ಪ್ರಕಾಶಿಸಲಾದ ಗಾಡ್ಸ್‌ ವೇ ಈಸ್‌ ಲವ್‌ ಎಂಬ ಹೊಸ ಕಿರುಪುಸ್ತಕದ ಬಗ್ಗೆ ಮಾತಾಡುತ್ತಿದ್ದೆವು. ಐರಿಶ್‌ ಗಣರಾಜ್ಯದಲ್ಲಿ ಕ್ಯಾಥೊಲಿಕರಿಗೆ ಸಾರುವುದು ತುಂಬ ಕಷ್ಟ. ಅಲ್ಲಿನ ನಮ್ಮ ಸಹೋದರರ ಮೇಲೆ ಒತ್ತಡ ಹಾಕಿ ಮನೆಗಳನ್ನು ಬಿಟ್ಟು ಹೋಗುವಂತೆ ಮಾಡಲಾಗಿದೆ ಮತ್ತು ಸಹೋದರರ ಮೇಲೆ ಆಕ್ರಮಣ ಮಾಡುವಂತೆ ಕ್ರೈಸ್ತ ಗುರುಗಳು ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಸಹೋದರ ಪ್ರಿಸ್‌ ವಿವರಿಸಿದರು. ನಂತರ, “ಇಡೀ ದೇಶದಲ್ಲಿ ಈ ಕಿರುಪುಸ್ತಕವನ್ನು ವಿತರಿಸುವ ವಿಶೇಷ ಅಭಿಯಾನಕ್ಕಾಗಿ ನಮಗೆ ಕಾರು ಇರುವ ದಂಪತಿಗಳು ಬೇಕು” ಎಂದರು.a “ನಾವದನ್ನು ಮಾಡಲು ಸಿದ್ಧ” ಎಂದು ನಾವು ಹೇಳಿದ್ದು ಆಗಲೇ.

[ಪುಟ 4​ರಲ್ಲಿರುವ ಚಿತ್ರ]

ಮೋಟಾರು ಬೈಕ್‌ ಮತ್ತು ಸೈಡ್‌ಕಾರಿನಲ್ಲಿ ಜೊತೆ ಪಯನೀಯರರೊಂದಿಗೆ ಆರ್ಥರ್‌ ಮತ್ತು ಆಲಿವ್‌ ಮ್ಯಾಥ್ಯೂಸ್‌

ಡಬ್ಲಿನ್‌ನಲ್ಲಿ ಪಯನೀಯರರಿಗೆ ಉಳಿದುಕೊಳ್ಳಲು ಒಂದು ಮನೆ ಇತ್ತು. ಅದು, ತುಂಬ ವರ್ಷಗಳಿಂದ ನಂಬಿಗಸ್ತರಾಗಿ ಯೆಹೋವನ ಸೇವೆ ಮಾಡಿದ್ದ ಸಹೋದರಿ ಮಾ ರಟ್ಲಂಡ್‌ರವರದ್ದಾಗಿತ್ತು. ನಾವು ಕೂಡ ಸ್ವಲ್ಪ ಸಮಯ ಆ ಸಹೋದರಿಯ ಮನೆಯಲ್ಲಿ ತಂಗಿದ್ದೆವು. ನಮ್ಮಲ್ಲಿದ್ದ ಕೆಲವು ವಸ್ತುಗಳನ್ನು ಮಾರಿ ಒಂದು ಕಾರನ್ನು ಖರೀದಿಸಲು ನಾವು ನಾಲ್ವರೂ ಬಾಬ್‌ನ ಮೋಟಾರು ಬೈಕ್‌ ಮತ್ತು ಸೈಡ್‌ ಕಾರಿನಲ್ಲಿ ಹೊರಟೆವು. ಈಗಾಗಲೇ ಉಪಯೋಗಿಸಿದ್ದ ಹಾಗೂ ಸುಸ್ಥಿತಿಯಲ್ಲಿದ್ದ ಒಂದು ಕಾರು ನಮಗೆ ಸಿಕ್ಕಿತು. ನಮಗೆ ಯಾರಿಗೂ ಕಾರನ್ನು ಓಡಿಸಲು ಬರದ ಕಾರಣ ಅದನ್ನು ಮನೆಗೆ ತಲುಪಿಸಲು ಆ ಕಾರು ಮಾರಾಟಗಾರನಲ್ಲಿ ಕೇಳಿಕೊಂಡೆವು. ಆ ರಾತ್ರಿಯಿಡೀ ಆರ್ಥರ್‌ ತಮ್ಮ ಹಾಸಿಗೆಯಲ್ಲಿ ಕುಳಿತುಕೊಂಡು ಕಾರಿನ ಗೇರನ್ನು ಬದಲಾಯಿಸುವುದನ್ನು ಅಭ್ಯಾಸ ಮಾಡುತ್ತಿದ್ದರು. ಮರುದಿನ ಬೆಳಿಗ್ಗೆ ಆರ್ಥರ್‌ರವರು ಆ ಕಾರನ್ನು ಶೆಡ್‌ನಿಂದ ಹೊರತರಲು ಪ್ರಯತ್ನಿಸುತ್ತಿದ್ದಾಗ ಮಿಷೆನರಿಯಾಗಿದ್ದ ಮಿಲ್ಡ್ರಡ್‌ ವಿಲಟ್‌ರವರು (ಸಮಯಾನಂತರ ಅವರು ಜಾನ್‌ ಬಾರ್‌ರನ್ನು ಮದುವೆಯಾದರು) ಬಂದರು. ಅವರಿಗೆ ಕಾರನ್ನು ಚಲಾಯಿಸಲು ಗೊತ್ತಿತ್ತು. ಅವರು ನಮಗೆ ಕಾರನ್ನು ಚಲಾಯಿಸುವುದನ್ನು ಕಲಿಸಿದರು. ನಂತರ ನಾವು ಹೋಗಲು ಸಿದ್ಧರಾದೆವು.

[ಪುಟ 4​ರಲ್ಲಿರುವ ಚಿತ್ರ]

ಆರ್ಥರ್‌ ಮತ್ತು ಆಲಿವ್‌ ಮ್ಯಾಥ್ಯೂಸ್‌ ಅವರ ಕಾರು ಮತ್ತು ಮೋಟಾರು ಮನೆಯ ಹತ್ತಿರ

ನಾವು ವಾಸಿಸಲು ಒಂದು ಸ್ಥಳವನ್ನು ಹುಡುಕಬೇಕಿತ್ತು. ಸಹೋದರರು ನಮಗೆ ಮೋಟಾರು ಮನೆಯಲ್ಲಿ ವಾಸಿಸಬೇಡಿ, ಯಾಕೆಂದರೆ ವಿರೋಧಿಗಳು ಬಂದು ಅದಕ್ಕೆ ಬೆಂಕಿ ಹಚ್ಚುವ ಸಾಧ್ಯತೆ ಇದೆ ಎಂದರು. ಆದ್ದರಿಂದ ನಾವು ಮನೆಗಾಗಿ ಹುಡುಕಿದೆವು. ಆದರೆ ನಮಗೆ ಒಂದು ಮನೆ ಕೂಡ ಸಿಗಲಿಲ್ಲ. ಆ ರಾತ್ರಿ ನಾವು ನಾಲ್ವರೂ ಕಾರಲ್ಲೇ ಮಲಗಿದೆವು. ಮರುದಿನ ನಮಗೆ ಎರಡು ಮಂಚಗಳಿರುವ ಚಿಕ್ಕ ಮೋಟಾರು ಮನೆ ಸಿಕ್ಕಿತು. ಅದೇ ನಮ್ಮ ಮನೆಯಾಯಿತು. ಆಶ್ಚರ್ಯಕರವಾಗಿ, ನಮಗೆ ಸ್ನೇಹಪರರಾದ ರೈತರು ಅವರ ಜಮೀನನಲ್ಲಿ ಮೋಟಾರು ಕಾರನ್ನು ನಿಲ್ಲಿಸಲು ಅವಕಾಶ ನೀಡಿದ್ದರಿಂದ ಯಾವುದೇ ಸಮಸ್ಯೆಯಾಗಲಿಲ್ಲ. ನಮ್ಮ ಮೋಟಾರು ಮನೆಯಿಂದ 16​ರಿಂದ 24 ಕಿಲೋಮೀಟರ್‌ (10​ರಿಂದ 15 ಮೈಲು) ದೂರದಲ್ಲಿದ್ದ ಟೆರಿಟೊರಿಯಲ್ಲಿ ಸಾರುತ್ತಿದ್ದೆವು. ನಾವು ಬೇರೆ ಪ್ರದೇಶಕ್ಕೆ ಸ್ಥಳಾಂತರಿಸಿದ ನಂತರ ಮೊದಲು ಮೋಟಾರು ಮನೆಯನ್ನು ನಿಲ್ಲಿಸಿದ ಸ್ಥಳಕ್ಕೆ ಹೋಗಿ ಸುವಾರ್ತೆ ಸಾರುತ್ತಿದ್ದೆವು.

ಹೆಚ್ಚೇನೂ ವಿರೋಧವಿಲ್ಲದೆ ನಾವು ಐರಿಶ್‌ ಗಣರಾಜ್ಯದ ಆಗ್ನೇಯ ಭಾಗದಲ್ಲಿರುವ ಎಲ್ಲಾ ಮನೆಗಳನ್ನು ಸಂದರ್ಶಿಸಿದೆವು. ಒಟ್ಟು 20,000 ಕಿರುಪುಸ್ತಕಗಳನ್ನು ವಿತರಿಸಿದೆವು ಮತ್ತು ಆಸಕ್ತರ ಹೆಸರುಗಳನ್ನು ಇಂಗ್ಲೆಂಡಿನ ಬ್ರಾಂಚಿಗೆ ಕಳುಹಿಸಿದೆವು. ಐರ್ಲೆಂಡಿನ ಈ ಪ್ರದೇಶದಲ್ಲಿ ಈಗ ನೂರಾರು ಸಾಕ್ಷಿಗಳು ಇರುವುದನ್ನು ನೋಡುವುದು ಎಂಥ ಸುಯೋಗ!

ಮರಳಿ ಇಂಗ್ಲೆಂಡಿಗೆ, ನಂತರ ಸ್ಕಾಟ್‌ಲೆಂಡಿಗೆ

ಕೆಲವು ವರ್ಷಗಳ ನಂತರ, ನಮ್ಮನ್ನು ಪುನಃ ದಕ್ಷಿಣ ಲಂಡನ್‌ಗೆ ನೇಮಿಸಲಾಯಿತು. ಕೆಲವು ವಾರಗಳ ನಂತರ, ಇಂಗ್ಲೆಂಡಿನ ಶಾಖಾ ಕಛೇರಿಯ ಸಹೋದರರು ಆರ್ಥರ್‌ರಿಗೆ ಫೋನ್‌ ಮಾಡಿ ಮರುದಿನದಿಂದಲೇ ಸರ್ಕಿಟ್‌ ಕೆಲಸವನ್ನು ಶುರುಮಾಡುವಂತೆ ಹೇಳಿದರು. ನಾವು ಒಂದು ವಾರ ತರಬೇತಿ ಪಡೆದ ನಂತರ ಸ್ಕಾಟ್‌ಲೆಂಡಿನ ನಮ್ಮ ಸರ್ಕಿಟ್‌ಗೆ ಹೋದೆವು. ಹಾಗಾಗಿ ಆರ್ಥರ್‌ರವರಿಗೆ ಭಾಷಣಗಳನ್ನು ತಯಾರಿಸಲು ಹೆಚ್ಚು ಸಮಯ ಸಿಗಲಿಲ್ಲ. ಎಷ್ಟೇ ಕಷ್ಟವಿದ್ದರೂ ಅವರು ಯಾವಾಗಲೂ ಯೆಹೋವನ ಸೇವೆಯಲ್ಲಿ ಯಾವುದೇ ನೇಮಕವನ್ನು ಮಾಡಲು ತಯಾರಿದ್ದರು. ಅವರ ಈ ಮಾದರಿ ನನಗೆ ಬಹಳ ಪ್ರೋತ್ಸಾಹ ನೀಡಿತು. ನಾವು ಈ ಸರ್ಕಿಟ್‌ ಕೆಲಸದಲ್ಲಿ ನಿಜವಾಗಿಯೂ ಆನಂದಿಸಿದೆವು. ಕೆಲವು ವರ್ಷ ಯಾರಿಗೂ ನೇಮಿಸಿಲ್ಲದ ಟೆರಿಟೊರಿಯಲ್ಲಿ ಇದ್ದ ನಮಗೆ ಈಗ ಇಷ್ಟೊಂದು ಸಹೋದರ ಸಹೋದರಿಯರ ಮಧ್ಯೆ ಇರುವುದು ದೊಡ್ಡ ಆಶೀರ್ವಾದವಾಗಿತ್ತು.

1962​ರಲ್ಲಿ ಆರ್ಥರ್‌ರಿಗೆ ಗಿಲ್ಯಡ್‌ ಶಾಲೆಗೆ ಹಾಜರಾಗುವ ಆಮಂತ್ರಣ ಸಿಕ್ಕಿತು. ಅದು ಹತ್ತು ತಿಂಗಳ ತರಬೇತಿಯಾಗಿತ್ತು. ಆದರೆ ನನಗೆ ಆ ತರಬೇತಿಯ ಆಮಂತ್ರಣ ಸಿಗದಿದ್ದ ಕಾರಣ ನಾನು ಅವರ ಜೊತೆ ಹೋಗುವಂತಿರಲಿಲ್ಲ. ಹಾಗಾಗಿ ನಾವು ಒಂದು ಮುಖ್ಯ ನಿರ್ಧಾರವನ್ನು ಮಾಡಬೇಕಾಯಿತು. ಆರ್ಥರ್‌ ಆ ಆಮಂತ್ರಣವನ್ನು ಸ್ವೀಕರಿಸುವುದು ಸರಿ ಎಂದು ನಾವು ನಿರ್ಧರಿಸಿದೆವು. ನನಗ್ಯಾರೂ ಪಯನೀಯರ್‌ ಜೊತೆಗಾರರು ಇಲ್ಲದಿದ್ದ ಕಾರಣ ನನ್ನನ್ನು ಶಾಖಾ ಕಛೇರಿ ವಿಶೇಷ ಪಯನೀಯರ್‌ ಆಗಿ ಮರಳಿ ಹೆಮ್‌ಸ್‌ವರ್ತ್‌ಗೆ ಕಳುಹಿಸಿತು. ಒಂದು ವರ್ಷದ ನಂತರ ಆರ್ಥರ್‌ ಮರಳಿ ಬಂದಾಗ ಅವರನ್ನು ಜಿಲ್ಲಾ ಮೇಲ್ವಿಚಾರಕರನ್ನಾಗಿ ನೇಮಿಸಲಾಯಿತು. ನಮಗೆ ಕೊಡಲಾದ ಕ್ಷೇತ್ರದಲ್ಲಿ ಸ್ಕಾಟ್‌ಲೆಂಡ್‌, ಉತ್ತರ ಇಂಗ್ಲೆಂಡ್‌ ಮತ್ತು ಉತ್ತರ ಐರ್ಲೆಂಡ್‌ ಒಳಗೂಡಿತ್ತು.

ಐರ್ಲೆಂಡಿನಲ್ಲಿ ಹೊಸ ನೇಮಕ

1964​ರಲ್ಲಿ ಆರ್ಥರ್‌ರವರು ಐರಿಶ್‌ ಗಣರಾಜ್ಯದಲ್ಲಿ ಶಾಖಾ ಕಛೇರಿಯ ಸೇವಕರಾಗಿ ನೇಮಕಗೊಂಡರು. ಮೊದಮೊದಲು ನನಗೆ ಬೆತೆಲ್‌ಗೆ ಹೋಗಲು ಅಷ್ಟೊಂದು ಇಷ್ಟ ಇರಲಿಲ್ಲ. ಏಕೆಂದರೆ ನಾವು ಸಂಚರಣ ಕೆಲಸವನ್ನು ಬಹಳ ಆನಂದಿಸುತ್ತಿದ್ದೆವು. ಈಗ ಅದನ್ನು ನೆನಸಿದರೆ, ನನಗೆ ಬೆತೆಲ್‌ನಲ್ಲಿ ಸೇವೆ ಮಾಡುವ ಸುಯೋಗ ಸಿಕ್ಕಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ನಿಮಗೆ ಇಷ್ಟಇಲ್ಲದಿರುವ ನೇಮಕ ಸಿಕ್ಕಿದರೂ ಅದನ್ನು ಸ್ವೀಕರಿಸಿದರೆ ಯೆಹೋವನು ನಿಮ್ಮ ಕೆಲಸವನ್ನು ಯಾವಾಗಲೂ ಆಶೀರ್ವದಿಸುತ್ತಾನೆ. ಬೆತೆಲಿನಲ್ಲಿ ನಾನು ಆಫೀಸ್‌ ಕೆಲಸ, ಸಾಹಿತ್ಯಗಳನ್ನು ಪ್ಯಾಕ್‌ ಮಾಡುವುದು, ಅಡಿಗೆ ಕೆಲಸ ಮತ್ತು ಶುಚಿತ್ವ ಕೆಲಸಗಳನ್ನು ಮಾಡಿದೆ. ಸ್ವಲ್ಪ ಸಮಯ ಆರ್ಥರ್‌ ಜಿಲ್ಲಾ ಮೇಲ್ವಿಚಾರಕರಾಗಿ ಕೆಲಸ ಮಾಡಿದ್ದರಿಂದ ನಾವು ದೇಶದ ಎಲ್ಲಾ ಕಡೆ ಇದ್ದ ಸಹೋದರ ಸಹೋದರಿಯರನ್ನು ಭೇಟಿ ಮಾಡಲು ಸಾಧ್ಯವಾಯಿತು. ಇದರ ಜೊತೆಗೆ, ಐರ್ಲೆಂಡ್‌ನಲ್ಲಿ ನಮ್ಮ ಬೈಬಲ್‌ ವಿದ್ಯಾರ್ಥಿಗಳು ಸತ್ಯದಲ್ಲಿ ಪ್ರಗತಿಯಾಗುತ್ತಿರುವುದನ್ನೂ ಸಹೋದರ ಸಹೋದರಿಯರೊಂದಿಗೆ ಬಲವಾದ ಸಂಬಂಧ ಹೊಂದಿರುವುದನ್ನೂ ನೋಡುವುದು ದೊಡ್ಡ ಸುಯೋಗವಾಗಿದೆ.

ಐರ್ಲೆಂಡಿನ ದೇವಪ್ರಭುತ್ವಾತ್ಮಕ ಇತಿಹಾಸದಲ್ಲಾದ ಮುಖ್ಯ ಬದಲಾವಣೆ

ಐರ್ಲೆಂಡಿನ ಮೊದಲನೇ ಅಂತರ್‌ರಾಷ್ಟ್ರೀಯ ಅಧಿವೇಶನವು 1965​ರಲ್ಲಿ ಡಬ್ಲಿನ್‌ನಲ್ಲಿ ನಡೆಯಿತು.b ಅಲ್ಲಿ ತೀವ್ರ ವಿರೋಧವಿದ್ದರೂ ಅಧಿವೇಶನವು ಯಶಸ್ವಿಯಾಗಿ ನಡೆಯಿತು. ಒಟ್ಟು 3,948 ಮಂದಿ ಹಾಜರಾದರು. 65 ಜನರು ದೀಕ್ಷಾಸ್ನಾನ ಪಡೆದುಕೊಂಡರು. 3,500 ಅಂತರ್‌ರಾಷ್ಟ್ರೀಯ ಪ್ರತಿನಿಧಿಗಳು ಡಬ್ಲಿನ್‌ನಲ್ಲಿರುವ ಜನರ ಮನೆಯಲ್ಲಿ ಉಳಿದುಕೊಂಡಿದ್ದರು. ಇದಕ್ಕೆ ಅವಕಾಶ ಮಾಡಿಕೊಟ್ಟ ಪ್ರತಿಯೊಬ್ಬ ಮನೆಯವರಿಗೂ ಕೃತಜ್ಞತಾ ಪತ್ರ ಕೊಡಲಾಯಿತು. ಮನೆಯವರು ಸಹೋದರರ ಒಳ್ಳೇ ನಡತೆಯನ್ನು ನೋಡಿ ತುಂಬ ಮೆಚ್ಚಿಕೊಂಡರು. ಇದು ನಿಜವಾಗಿಯೂ ಐರ್ಲೆಂಡಿನಲ್ಲಾದ ಒಂದು ಉತ್ತಮ ಬದಲಾವಣೆಯಾಗಿತ್ತು.

[ಪುಟ 5​ರಲ್ಲಿರುವ ಚಿತ್ರ]

1965​ರಲ್ಲಿ ಆರ್ಥರ್‌ ಮ್ಯಾಥ್ಯೂಸ್‌ ನೇತನ್‌ ನಾರ್‌ರವರ ಜೊತೆ

[ಪುಟ 5​ರಲ್ಲಿರುವ ಚಿತ್ರ]

1983​ರಲ್ಲಿ “ಬೈಬಲ್‌ ಕಥೆಗಳ ನನ್ನ ಪುಸ್ತಕ” ಎಂಬ ಪುಸ್ತಕವನ್ನು ಗೇಲಿಕ್‌ನಲ್ಲಿ ಬಿಡುಗಡೆ ಮಾಡುತ್ತಿರುವ ಆರ್ಥರ್‌

1966​ರಲ್ಲಿ ಉತ್ತರ ಮತ್ತು ದಕ್ಷಿಣ ಐರ್ಲೆಂಡ್‌, ಡಬ್ಲಿನ್‌ ಶಾಖಾ ಕಛೇರಿಯ ಮಾರ್ಗದರ್ಶನದ ಕೆಳಗೆ ಒಂದಾಗಿ ಕೆಲಸ ಮಾಡುತ್ತಿದ್ದವು. ಇದು ರಾಜಕೀಯ ಮತ್ತು ಧಾರ್ಮಿಕ ಕಾರಣಗಳಿಗಾಗಿ ಜನರಲ್ಲಿ ವಿಭಜನೆ ಇದ್ದ ಐರ್ಲೆಂಡಿನ ಪರಿಸ್ಥಿತಿಗೆ ತದ್ವಿರುದ್ಧವಾಗಿತ್ತು. ಅನೇಕ ಕ್ಯಾಥೊಲಿಕರು ಸತ್ಯಕ್ಕೆ ಬರುವುದನ್ನೂ, ಮುಂಚೆ ಪ್ರೊಟೆಸ್ಟೆಂಟರಾಗಿದ್ದ ಸಹೋದರರ ಜೊತೆಯಲ್ಲಿ ಅವರು ಯೆಹೋವನ ಸೇವೆ ಮಾಡುವುದನ್ನೂ ನೋಡುವಾಗ ತುಂಬ ಸಂತೋಷವಾಗುತ್ತದೆ.

ದೊಡ್ಡ ಬದಲಾವಣೆ ತಂದ ನೇಮಕ

2011​ರಲ್ಲಿ ಬ್ರಿಟನ್‌ ಮತ್ತು ಐರ್ಲೆಂಡ್‌ ಶಾಖಾ ಕಛೇರಿಗಳು ಒಂದಾದಾಗ ನಮ್ಮ ಜೀವನ ಪೂರ್ತಿ ಬದಲಾಯಿತು ಮತ್ತು ನಾವು ಲಂಡನ್‌ ಬೆತೆಲಿಗೆ ನೇಮಕಗೊಂಡೆವು. ಆ ಸಮಯದಲ್ಲಿ ಆರ್ಥರ್‌ ಪಾರ್ಕಿನ್‌ಸನ್‌ ಕಾಯಿಲೆಯಿಂದ (ನಡುಕ ರೋಗ) ಬಳಲುತ್ತಿದ್ದರಿಂದ ನಾನು ಅವರ ಆರೋಗ್ಯದ ಬಗ್ಗೆ ಚಿಂತಿತಳಾಗಿದ್ದೆ. 2015​ರ ಮೇ 20​ರಂದು 66 ವರ್ಷ ನನ್ನ ಬಾಳಸಂಗಾತಿಯಾಗಿದ್ದ ಆರ್ಥರ್‌ ತೀರಿಕೊಂಡರು.

ಕಳೆದ ಕೆಲವು ವರ್ಷಗಳಲ್ಲಿ ನಾನು ಬಹಳ ದುಃಖ, ಖಿನ್ನತೆ ಮತ್ತು ನೋವನ್ನು ಅನುಭವಿಸಿದ್ದೇನೆ. ಮೊದಲಾದರೆ ಆರ್ಥರ್‌ ಯಾವಾಗಲೂ ನನ್ನ ಜೊತೆ ಇರುತ್ತಿದ್ದರು. ಈಗ ಅವರು ತುಂಬ ನೆನಪಾಗುತ್ತಾರೆ. ಇಂಥ ಸನ್ನಿವೇಶಗಳಲ್ಲಿ ಇರುವಾಗಲೇ ನಾವು ಯೆಹೋವನಿಗೆ ಹೆಚ್ಚು ಹತ್ತಿರ ಆಗುವುದು. ಇತರರು ಆರ್ಥರ್‌ರನ್ನು ಎಷ್ಟು ಪ್ರೀತಿಸುತ್ತಿದ್ದರು ಅಂತ ತಿಳಿಯುವಾಗ ನನಗೆ ಖುಷಿಯಾಗುತ್ತದೆ. ಐರ್ಲೆಂಡ್‌, ಇಂಗ್ಲೆಂಡ್‌ ಮತ್ತು ಅಮೆರಿಕದಿಂದ ಸಹೋದರ ಸಹೋದರಿಯರು ನನಗೆ ಪತ್ರ ಬರೆದಿದ್ದರು. ಈ ಪತ್ರಗಳು ಹಾಗೂ ಆರ್ಥರ್‌ರ ಅಣ್ಣ ಡೆನ್ನಿಸ್‌, ಅವರ ಪತ್ನಿ ಮೇವಿಸ್‌ ಮತ್ತು ನನ್ನ ಅಣ್ಣನ ಮಕ್ಕಳಾದ ರೂತ್‌ ಮತ್ತು ಜೂಡಿ ಅವರಿಂದ ಸಿಕ್ಕಿದ ಉತ್ತೇಜನ ನನಗೆ ಎಷ್ಟು ಸಹಾಯ ಮಾಡಿದೆ ಎಂದು ವರ್ಣಿಸಲು ಅಸಾಧ್ಯ!

ನನಗೆ ತುಂಬ ಪ್ರೋತ್ಸಾಹ ಕೊಟ್ಟ ವಚನ ಯೆಶಾಯ 30:18. ಅದು ಹೇಳುವುದು: “ಯೆಹೋವನು ನಿಮಗೆ ಕೃಪೆತೋರಿಸಬೇಕೆಂದು ಕಾದಿರುವನು; ನಿಮ್ಮನ್ನು ಕರುಣಿಸಬೇಕೆಂದು ಉನ್ನತೋನ್ನತನಾಗಿ ಕಾಣಿಸಿಕೊಳ್ಳುವನು; ಯೆಹೋವನು ನ್ಯಾಯಸ್ವರೂಪನಾದ ದೇವರು; ಆತನಿಗಾಗಿ ಕಾದಿರುವವರೆಲ್ಲರೂ ಧನ್ಯರು.” ಯೆಹೋವನು ನಮ್ಮೆಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡಲು ಮತ್ತು ನೂತನ ಲೋಕದಲ್ಲಿ ನಮಗೆ ರೋಮಾಂಚಕ ನೇಮಕವನ್ನು ಕೊಡಲು ತಾಳ್ಮೆಯಿಂದ ಕಾಯುತ್ತಿದ್ದಾನೆ ಎಂದು ತಿಳಿಯುವುದು ನನಗೆ ನಿಜವಾಗಿಯೂ ಸಾಂತ್ವನ ನೀಡಿದೆ.

ನಮ್ಮ ಜೀವನದ ಪುಟಗಳನ್ನು ಹಿಂದಕ್ಕೆ ತಿರುಗಿಸಿ ನೋಡುವಾಗ, ಯೆಹೋವನು ಐರ್ಲೆಂಡಿನ ಸಾರುವ ಕೆಲಸವನ್ನು ಹೇಗೆಲ್ಲಾ ಮಾರ್ಗದರ್ಶಿಸಿ ಆಶೀರ್ವದಿಸಿದ್ದಾನೆ ಎಂದು ಗೊತ್ತಾಗುತ್ತದೆ. ಈ ಕೆಲಸದಲ್ಲಿ ಸಹಾಯ ಮಾಡಿದ ಅನೇಕರಲ್ಲಿ ನಾನೂ ಒಬ್ಬಳು ಎಂದು ಯೋಚಿಸುವಾಗ ಹೆಮ್ಮೆ ಎನಿಸುತ್ತದೆ. ಯೆಹೋವನ ನುಡಿಯಂತೆ ನಡೆದರೆ ಆಶೀರ್ವಾದ ಖಂಡಿತ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

a 1988 ಯಿಯರ್‌ಬುಕ್‌ ಆಫ್‌ ಜೆಹೋವಸ್‌ ವಿಟ್ನೆಸಸ್‌, ಪುಟ 101-102​ನ್ನು ನೋಡಿ.

b 1988 ಯಿಯರ್‌ಬುಕ್‌, ಪುಟ 109-112​ನ್ನು ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ