“ನಾನು ಇನ್ನೂ ಕೇವಲ ಪಿಂಡವಾಗಿರುವಾಗ ನಿನ್ನ ಕಣ್ಣುಗಳು ನನ್ನನ್ನು ನೋಡಿದವು.”—ಕೀರ್ತನೆ 139:16
ದೇವರು ನಿಮ್ಮನ್ನು ಅರ್ಥಮಾಡಿಕೊಳ್ಳುತ್ತಾನಾ?
ಸೃಷ್ಟಿ ನಮಗೆ ಏನು ಕಲಿಸುತ್ತದೆ?
ಮಾನವ ಸಂಬಂಧಗಳಲ್ಲಿ ಅತ್ಯಾಪ್ತವಾದ ಒಂದು ಸಂಬಂಧ ತದ್ರೂಪಿ ಅವಳಿಗಳ ನಡುವಣ ಸಂಬಂಧ. ಅವರ ಮಧ್ಯೆ ವಿಶೇಷ ರೀತಿಯ ಹತ್ತಿರದ ಬಂಧ ಇರುತ್ತದೆ. ಅವಳಿಗಳ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದು, ಸ್ವತಃ ಅವಳಿ ಆಗಿರುವ ನ್ಯಾನ್ಸಿ ಸಿಗಲ್ ಪ್ರಕಾರ, ಕೆಲವು ಅವಳಿಗಳಂತೂ ವಿವರಣೆ ಕೊಡದೆ ಇದ್ದಾಗಲೂ ಒಬ್ಬರಿನ್ನೊಬ್ಬರ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಒಬ್ಬ ಮಹಿಳೆ ತನ್ನ ಮತ್ತು ತನ್ನ ಅವಳಿ ಸಹೋದರಿಯ ನಡುವಣ ಸಂಬಂಧವನ್ನು ಹೀಗೆ ವರ್ಣಿಸಿದರು: “ನಮಗಿಬ್ಬರಿಗೂ ಒಬ್ಬರಿಗೊಬ್ಬರ ಬಗ್ಗೆ ಪ್ರತಿಯೊಂದು ವಿಷಯವೂ ಗೊತ್ತು.”
ಅವಳಿಗಳಲ್ಲಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಈ ಅಪೂರ್ವ ಸ್ವಭಾವ ಇರಲು ಕಾರಣವೇನು? ಅವರು ಬೆಳೆದು ಬಂದ ವಾತಾವರಣ ಮತ್ತು ಹೆತ್ತವರು ಬೆಳೆಸಿದ ವಿಧ ಕಾರಣಗಳಾಗಿದ್ದರೂ, ತದ್ರೂಪಿ ಅವಳಿಗಳ ಒಂದೇ ರೀತಿಯ ವಂಶವಾಹಿ ರಚನೆ ಬಹುಮುಖ್ಯ ಪಾತ್ರ ವಹಿಸುತ್ತದೆಂದು ಅಧ್ಯಯನಗಳು ಸೂಚಿಸುತ್ತವೆ.
ಯೋಚಿಸಿ: ಈ ವಿಸ್ಮಯಕಾರಿ ವಂಶವಾಹಿಗಳ ಸೃಷ್ಟಿಕರ್ತನಿಗೆ ನಮ್ಮಲ್ಲಿ ಪ್ರತಿಯೊಬ್ಬರ ರಚನೆಯ ಬಗ್ಗೆ ಖಂಡಿತವಾಗಿಯೂ ಚೆನ್ನಾಗಿ ತಿಳಿದಿದೆ. ಕೀರ್ತನೆಗಾರನಾದ ದಾವೀದನು ಘೋಷಿಸಿದ್ದು: “ನನ್ನ ಅಂತರಿಂದ್ರಿಯಗಳನ್ನು ಉಂಟುಮಾಡಿದವನೂ ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನಲ್ಲವೋ? ನಾನು ಗುಪ್ತಸ್ಥಳದಲ್ಲಿ ಏರ್ಪಡುತ್ತಾ ಭೂಗರ್ಭದಲ್ಲಿ ರಚಿಸಲ್ಪಡುತ್ತಾ ಇದ್ದಾಗ ನನ್ನ ಅಸ್ಥಿಪಂಜರವು ನಿನಗೆ ಮರೆಯಾಗಿದ್ದಿಲ್ಲ. ನಾನು ಇನ್ನೂ ಕೇವಲ ಪಿಂಡವಾಗಿರುವಾಗ” ಅಥವಾ ಭ್ರೂಣವಾಗಿದ್ದಾಗ “ನಿನ್ನ ಕಣ್ಣುಗಳು ನನ್ನನ್ನು ನೋಡಿದವು.” (ಕೀರ್ತನೆ 139:13, 15, 16) ನಮ್ಮ ದೇಹದಲ್ಲಿ ಯಾವ ವಂಶವಾಹಿಗಳಿವೆ ಮತ್ತು ಜೀವನದ ಯಾವ ಅನುಭವಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸಿವೆ ಎಂದು ದೇವರೊಬ್ಬನಿಗೆ ಮಾತ್ರ ತಿಳಿದಿದೆ ಮತ್ತು ಅದನ್ನಾತನು ಪೂರ್ತಿಯಾಗಿ ಅರ್ಥಮಾಡಿಕೊಳ್ಳುತ್ತಾನೆ. ನಮ್ಮ ಬಗ್ಗೆ ಮತ್ತು ನಮ್ಮ ವಂಶವಾಹಿಗಳ ರಚನೆಯ ಬಗ್ಗೆ ಆತನಿಗಿರುವ ಈ ಅಪೂರ್ವವಾದ ಜ್ಞಾನ ಆತನು ನಮ್ಮನ್ನು ಚಿಕ್ಕಪುಟ್ಟ ವಿಷಯದಲ್ಲೂ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾನೆ ಎಂಬ ಭರವಸೆ ಕೊಡುತ್ತದೆ.
ದೇವರಿಗಿರುವ ತಿಳುವಳಿಕೆಯ ಬಗ್ಗೆ ಬೈಬಲ್ ಏನು ಕಲಿಸುತ್ತದೆ?
ದಾವೀದನು ಹೀಗೆ ಪ್ರಾರ್ಥಿಸಿದನು: “ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ತಿಳುಕೊಂಡಿದ್ದೀ; ನಾನು ಕೂತುಕೊಳ್ಳುವದೂ ಏಳುವದೂ ನಿನಗೆ ಗೊತ್ತದೆ; ದೂರದಿಂದಲೇ ನನ್ನ ಆಲೋಚನೆಗಳನ್ನು ಬಲ್ಲವನಾಗಿರುತ್ತೀ; ಯೆಹೋವನೇ, ನನ್ನ ನಾಲಿಗೆಯ ಮಾತುಗಳಲ್ಲಿ ನೀನು ಅರಿಯದೆ ಇರುವಂಥದು ಒಂದೂ ಇಲ್ಲ.” (ಕೀರ್ತನೆ 139:1, 2, 4) ಯೆಹೋವನಿಗೆ ನಮ್ಮ ಅಂತರಂಗದ ಭಾವನೆಗಳು ಮತ್ತು “ಎಲ್ಲಾ ಮನಸ್ಸಂಕಲ್ಪ”ಗಳೂ ತಿಳಿದಿವೆ. (1 ಪೂರ್ವಕಾಲವೃತ್ತಾಂತ 28:9; 1 ಸಮುವೇಲ 16:6, 7) ಈ ವಚನಗಳು ನಮಗೆ ದೇವರ ಬಗ್ಗೆ ಏನನ್ನು ತಿಳಿಸಿಕೊಡುತ್ತವೆ?
ನಮ್ಮೆಲ್ಲಾ ಯೋಚನೆಗಳನ್ನು, ಭಾವನೆಗಳನ್ನು ನಾವು ಪ್ರಾರ್ಥನೆಯಲ್ಲಿ ಹೇಳಲಿಕ್ಕಿಲ್ಲ. ಹಾಗಿದ್ದರೂ ನಮ್ಮ ಸೃಷ್ಟಿಕರ್ತನು ನಾವು ಏನು ಮಾಡುತ್ತೇವೆಂದು ಗಮನಿಸುತ್ತಾನೆ ಮಾತ್ರವಲ್ಲ ನಾವದನ್ನು ಯಾಕೆ ಮಾಡುತ್ತೇವೆಂದೂ ಅರ್ಥಮಾಡಿಕೊಳ್ಳುತ್ತಾನೆ. ನಮಗೆ ಕೆಲವು ಒಳ್ಳೇ ಕೆಲಸಗಳನ್ನು ಮಾಡಬೇಕೆಂಬ ಆಸೆ ಇದ್ದರೂ ಕೆಲವೊಮ್ಮೆ ನಮ್ಮ ಇತಿಮಿತಿಗಳಿಂದಾಗಿ ಮಾಡಲು ಸಾಧ್ಯವಾಗುವುದಿಲ್ಲ. ಆಗ ದೇವರು ನಮ್ಮ ಆ ಆಸೆಯನ್ನು ಅರ್ಥಮಾಡಿಕೊಳ್ಳುತ್ತಾನೆ. ನಮ್ಮ ಹೃದಯದಲ್ಲಿ ಪ್ರೀತಿಯೆಂಬ ಗುಣವನ್ನು ಇಟ್ಟವನೇ ಯೆಹೋವನು. ಹಾಗಾಗಿ ನಮ್ಮಲ್ಲಿರುವ ಪ್ರೀತಿಯಿಂದ ಕೂಡಿದ ಯೋಚನೆ, ಉದ್ದೇಶಗಳನ್ನು ಗಮನಿಸಲು ಮತ್ತು ಅರ್ಥಮಾಡಿಕೊಳ್ಳಲು ಆತನು ಸಿದ್ಧನಾಗಿದ್ದಾನೆ ಮಾತ್ರವಲ್ಲ ಉತ್ಸುಕನೂ ಆಗಿದ್ದಾನೆ.—1 ಯೋಹಾನ 4:7-10.
ದೇವರು ಎಲ್ಲವನ್ನು ಗಮನಿಸುತ್ತಾನೆ. ಬೇರೆಯವರಿಗೆ ನಮ್ಮ ಕಷ್ಟಗಳ ಬಗ್ಗೆ ಗೊತ್ತಿಲ್ಲದಿದ್ದಾಗಲೂ ಅವರದನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳಲು ಆಗದಿದ್ದಾಗಲೂ ದೇವರಿಗೆ ನಮ್ಮ ಕಷ್ಟಗಳ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ
ಬೈಬಲ್ ಕೊಡುವ ಆಶ್ವಾಸನೆ
“ಯೆಹೋವನ ಕಣ್ಣುಗಳು ನೀತಿವಂತರ ಮೇಲಿವೆ ಮತ್ತು ಆತನ ಕಿವಿಗಳು ಅವರ ಯಾಚನೆಯ ಕಡೆಗಿವೆ.”—1 ಪೇತ್ರ 3:12.
ದೇವರು ಹೀಗೆ ಮಾತುಕೊಡುತ್ತಾನೆ: “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು.”—ಕೀರ್ತನೆ 32:8.
ದೇವರು ತುಂಬ ಕನಿಕರವುಳ್ಳವನು
ದೇವರಿಗೆ ನಮ್ಮ ಸನ್ನಿವೇಶ, ಭಾವನೆಗಳು ಅರ್ಥವಾಗುತ್ತವೆಂದು ತಿಳಿದಿರುವುದು ನಮಗೆ ಬರುವ ಕಷ್ಟಗಳನ್ನು ಎದುರಿಸಲು ಸಹಾಯಮಾಡುತ್ತದಾ? ನೈಜೀರಿಯಾದ ಆ್ಯನಾ ಎಂಬವರಿಗೆ ಏನಾಯಿತೆಂದು ನೋಡಿ. ಅವರು ವಿವರಿಸಿದ್ದು: “ನನ್ನ ಪರಿಸ್ಥಿತಿ ಎಷ್ಟು ಹತಾಶೆಯದ್ದಾಗಿತ್ತೆಂದರೆ ನಾನು ಬದುಕಿದ್ದು ಏನು ಪ್ರಯೋಜನ ಅಂತ ಯೋಚಿಸುತ್ತಿದ್ದೆ. ವಿಧವೆಯಾಗಿದ್ದ ನಾನು ನನ್ನ ಮಗಳನ್ನು ನೋಡಿಕೊಳ್ಳುತ್ತಿದ್ದೆ. ಅವಳಿಗೆ ಹೈಡ್ರಸೆಫಲಸ್ (ಮಿದುಳಿನಲ್ಲಿ ನೀರು ತುಂಬಿರುವುದು) ಇದ್ದ ಕಾರಣ ಆಸ್ಪತ್ರೆಯಲ್ಲಿದ್ದಳು. ಆಗಲೇ ನನಗೆ ಸ್ತನದ ಕ್ಯಾನ್ಸರ್ ಇದೆಯೆಂದು ತಪಾಸಣೆಗಳಿಂದ ತಿಳಿದುಬಂತು. ಶಸ್ತ್ರಚಿಕಿತ್ಸೆ, ಕಿಮೊಥೆರಪಿ, ರೇಡಿಯೋಥೆರಪಿ ಇದಕ್ಕೆಲ್ಲ ಒಳಪಡಬೇಕಾಯಿತು. ಕಾಯಿಲೆಯಿಂದ ನನ್ನ ಮಗಳು ಆಸ್ಪತ್ರೆಯಲ್ಲಿದ್ದ ಸಮಯದಲ್ಲೇ ನಾನೂ ಆಸ್ಪತ್ರೆ ಸೇರಬೇಕಾಗಿ ಬಂದಾಗ ತುಂಬ, ತುಂಬ ಕಷ್ಟವಾಯಿತು.”
ಇದನ್ನೆಲ್ಲಾ ನಿಭಾಯಿಸಲು ಆ್ಯನಾಗೆ ಯಾವುದು ಸಹಾಯಮಾಡಿತು? “ನಾನು ಬೈಬಲಿನ ಕೆಲವೊಂದು ವಚನಗಳ ಕುರಿತು ಯೋಚಿಸುತ್ತಿದ್ದೆ, ಉದಾಹರಣೆಗೆ ಫಿಲಿಪ್ಪಿ 4:6, 7. ಅಲ್ಲಿ ‘ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನು, ಯೋಚನೆಗಳನ್ನು ಕಾಯುವದು’ ಎಂದು ಹೇಳಲಾಗಿದೆ. ಈ ವಚನ ನನ್ನ ಮನಸ್ಸಿಗೆ ಬಂದಾಗಲೆಲ್ಲ ನನಗೆ ಯೆಹೋವನ ಜೊತೆ ಒಂದು ಆಪ್ತ ವೈಯಕ್ತಿಕ ಬಂಧ ಇದೆಯೆಂದು ಅನಿಸುತ್ತಿತ್ತು. ನನಗಿಂತ ಚೆನ್ನಾಗಿ ಆತನು ನನ್ನನ್ನು ಅರ್ಥಮಾಡಿಕೊಳ್ಳುತ್ತಾನೆಂದು ನನಗೆ ನೆನಪಾಗುತ್ತಿತ್ತು. ಕ್ರೈಸ್ತ ಸಭೆಯಲ್ಲಿನ ನನ್ನ ಪ್ರೀತಿಯ ಆಧ್ಯಾತ್ಮಿಕ ಸಹೋದರ ಸಹೋದರಿಯರಿಂದಲೂ ನನಗೆ ತುಂಬ ಪ್ರೋತ್ಸಾಹ ಸಿಕ್ಕಿತು.
“ಈಗಲೂ ನನ್ನ ಆರೋಗ್ಯ ಪೂರ್ತಿ ಚೆನ್ನಾಗಿಲ್ಲದಿದ್ದರೂ ನನ್ನ ಮತ್ತು ನನ್ನ ಮಗಳ ಪರಿಸ್ಥಿತಿ ಸುಧಾರಿಸಿದೆ. ನಾವು ಕಷ್ಟಗಳನ್ನು ಎದುರಿಸುವಾಗ ನಕಾರಾತ್ಮಕವಾಗಿ ಯೋಚಿಸದೇ ಇರಲು ಕಲಿತಿದ್ದೇವೆ. ಯಾಕೆಂದರೆ ಯೆಹೋವನು ನಮ್ಮ ಜೊತೆ ಇದ್ದಾನೆ. ಯಾಕೋಬ 5:11 ನಮಗೆ ಈ ಆಶ್ವಾಸನೆ ಕೊಡುತ್ತದೆ: ‘ತಾಳಿಕೊಂಡಿರುವವರನ್ನು ನಾವು ಸಂತೋಷಿತರೆಂದು ಹೇಳುತ್ತೇವೆ. ನೀವು ಯೋಬನ ತಾಳ್ಮೆಯ ಕುರಿತು ಕೇಳಿಸಿಕೊಂಡಿದ್ದೀರಿ ಮತ್ತು ಯೆಹೋವನು ಅವನಿಗೆ ಕೊಟ್ಟಂಥ ಪ್ರತಿಫಲವನ್ನು ನೋಡಿ, ಯೆಹೋವನು ಕೋಮಲವಾದ ಮಮತೆಯುಳ್ಳವನೂ’ ಅಥವಾ ಕನಿಕರವುಳ್ಳವನೂ ‘ಕರುಣಾಳುವೂ ಆಗಿದ್ದಾನೆ ಎಂಬುದನ್ನು ತಿಳಿದಿದ್ದೀರಿ.’” ಯೆಹೋವನಿಗೆ ಯೋಬನ ಸನ್ನಿವೇಶ ತುಂಬ ಚೆನ್ನಾಗಿ ಅರ್ಥವಾಯಿತು. ಹಾಗೆಯೇ ಆತನು ನಾವು ಅನುಭವಿಸುವ ಯಾವುದೇ ಕಷ್ಟಗಳನ್ನು ಅರ್ಥಮಾಡಿಕೊಳ್ಳುತ್ತಾನೆಂಬ ಭರವಸೆಯಿಂದಿರಬಲ್ಲೆವು.