ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w18 ಅಕ್ಟೋಬರ್‌ ಪು. 17-21
  • ಒಂದು ನಿರ್ಧಾರ ತಂದ ಅನೇಕ ಆಶೀರ್ವಾದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒಂದು ನಿರ್ಧಾರ ತಂದ ಅನೇಕ ಆಶೀರ್ವಾದ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸುವಾರ್ತೆ ಹಬ್ಬಲು ಮಾಡಿದ ಅಭಿಯಾನಗಳು
  • ಆಗಿನ ಅಧಿವೇಶನಗಳು
  • ನನ್ನ ಜೀವನದ ಗುರಿ—ಬೆತೆಲ್‌ ಸೇವೆ
  • ಅಧಿವೇಶನಕ್ಕೆ ಪ್ರಯಾಣ
  • ಜೀವನ ಸಂಗಾತಿ
  • ಅಭಿವೃದ್ಧಿ ತಂದ ಸಂತೋಷ
  • ಬೆತೆಲ್‌ ಸೇವೆ—ಹೆಚ್ಚು ಸ್ವಯಂಸೇವಕರ ಅಗತ್ಯವಿದೆ
    1995 ನಮ್ಮ ರಾಜ್ಯದ ಸೇವೆ
  • ಇದು ನಿಮ್ಮ ಜೀವನದ ಅತ್ಯುತ್ತಮ ವೃತ್ತಿಯಾಗಿರಸಾಧ್ಯವೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ನೀವು ನಿಮ್ಮನ್ನೇ ನೀಡಿಕೊಳ್ಳಲು ಸಾಧ್ಯವಿದೆಯೋ?
    2003 ನಮ್ಮ ರಾಜ್ಯದ ಸೇವೆ
  • ಸರ್ವರಿಗೂ ಸ್ವಾಗತ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
w18 ಅಕ್ಟೋಬರ್‌ ಪು. 17-21

ಜೀವನ ಕಥೆ

ಒಂದು ನಿರ್ಧಾರ ತಂದ ಅನೇಕ ಆಶೀರ್ವಾದ

ಚಾರ್ಲ್ಸ್‌ ಮಾಲಹನ್‌ ಹೇಳಿದಂತೆ

ಅದು 1939​ನೇ ಇಸವಿ. ಅಮೆರಿಕದ ನೈರುತ್ಯ ಭಾಗದಲ್ಲಿರುವ ಮಿಸೌರಿಯಲ್ಲಿನ ಜಾಪ್ಲಿನ್‌ ಎಂಬ ಚಿಕ್ಕ ಪಟ್ಟಣದಲ್ಲಿ ಸೇವೆ ಮಾಡಲು ನಾವು ಮಧ್ಯರಾತ್ರಿಯಲ್ಲಿ ಎದ್ದು ಒಂದು ಗಂಟೆ ಪ್ರಯಾಣ ಮಾಡಿದ್ವಿ. ನಮ್ಮ ಸೇವಾಕ್ಷೇತ್ರದಲ್ಲಿದ್ದ ಮನೆಗಳಿಗೆಲ್ಲ ಕರಪತ್ರಗಳನ್ನು ಬಾಗಿಲಡಿಯಲ್ಲಿ ತೂರಿಸುತ್ತಾ ಬಂದ್ವಿ. ಇದನ್ನು ಮುಗಿಸುವಷ್ಟರೊಳಗೆ ನಿಧಾನವಾಗಿ ಬೆಳಕು ಹರಿಯಿತು. ಸೇವೆ ಮುಗಿದ ಕೂಡಲೆ ಎದ್ವೋ ಬಿದ್ವೋ ಅಂತ ಕಾರು ಹತ್ತಿದ್ವಿ. ಎಲ್ಲರೂ ಒಂದು ಕಡೆ ಸೇರಬೇಕು ಅಂತ ತೀರ್ಮಾನ ಮಾಡಿದ್ದ ಜಾಗಕ್ಕೆ ಬಂದ್ವಿ. ಇನ್ನೂ ಬೇರೆ ಕಾರುಗಳಲ್ಲಿ ಬರಬೇಕಾಗಿದ್ದ ಸಹೋದರರಿಗೆ ಕಾದ್ವಿ. ನಾವು ಯಾಕೆ ಅಷ್ಟು ರಾತ್ರಿಯಲ್ಲಿ ಸೇವೆ ಮಾಡಲು ಹೋದ್ವಿ ಮತ್ತು ಯಾಕೆ ಅಷ್ಟು ಗಡಿಬಿಡಿಯಲ್ಲಿ ಸೇವಾಕ್ಷೇತ್ರದಿಂದ ಹೊರಗೆ ಬಂದ್ವಿ ಅಂತ ನಿಮಗೆ ಆಶ್ಚರ್ಯ ಆಗಬಹುದು. ಯಾಕೆಂದು ಆಮೇಲೆ ಹೇಳುತ್ತೇನೆ.

ಚಾರ್ಲ್ಸ್‌ ಮಾಲಹನ್‌ ಯುವಕರಾಗಿದ್ದಾಗ

ನನ್ನ ಹೆತ್ತವರು ಬೈಬಲ್‌ ವಿದ್ಯಾರ್ಥಿಗಳಾಗಿದ್ದರು. (ಯೆಹೋವನ ಸಾಕ್ಷಿಗಳು) ಅವರ ಹೆಸರು ಫ್ರೆಡ್‌ ಮತ್ತು ಎಡ್ನ ಮಾಲಹನ್‌. ನಾನು ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳಲು ಅವರು ಸಹಾಯ ಮಾಡಿದರು. ಅವರು ಆ ರೀತಿ ಬೆಳೆಸಿದ್ದಕ್ಕೆ ನಾನು ಕೃತಜ್ಞನು. 1934​ರಲ್ಲಿ ನಾನು ಹುಟ್ಟೋ 20 ವರ್ಷಗಳ ಮುಂಚೆನೇ ಅವರು ಬೈಬಲ್‌ ವಿದ್ಯಾರ್ಥಿಗಳಾಗಿದ್ದರು. ನಮ್ಮ ಕುಟುಂಬ ಇದ್ದದ್ದು ಆಗ್ನೇಯ ಕ್ಯಾನ್‌ಸಸ್‌ನ ಪಾರ್ಸನ್ಸ್‌ ಎಂಬ ಚಿಕ್ಕ ಪಟ್ಟಣದಲ್ಲಿ. ನಾವು ಹೋಗುತ್ತಿದ್ದ ಸಭೆಯಲ್ಲಿ ಹೆಚ್ಚಿನವರು ಅಭಿಷಿಕ್ತ ಕ್ರೈಸ್ತರಾಗಿದ್ದರು. ಕೂಟಗಳಿಗೆ ಹಾಜರಾಗುವುದು ಮತ್ತು ದೇವರ ವಾಕ್ಯದ ಸತ್ಯವನ್ನು ಬೇರೆಯವರಿಗೆ ಸಾರುವುದು ಅಂದರೆ ನಮ್ಮೆಲ್ಲರಿಗೂ ತುಂಬ ಇಷ್ಟ ಇತ್ತು. ಶನಿವಾರ ಮಧ್ಯಾಹ್ನ ಬೀದಿ ಸಾಕ್ಷಿಕಾರ್ಯ ಮಾಡುತ್ತಿದ್ವಿ. ಆಗೆಲ್ಲ ಸಾರ್ವಜನಿಕ ಸಾಕ್ಷಿಕಾರ್ಯವನ್ನು ಹೀಗೆ ಕರೆಯುತ್ತಿದ್ದರು. ಕೆಲವೊಮ್ಮೆ ಇದರಿಂದ ನಮಗೆ ಸುಸ್ತಾಗುತ್ತಿತ್ತು. ಆದರೆ ನಾವು ಸೇವೆ ಮುಗಿಸಿ ಬರುವಾಗ ಅಪ್ಪ ನಮಗೆ ಐಸ್‌ಕ್ರೀಮ್‌ ಕೊಡಿಸುತ್ತಿದ್ದರು. ಇದರಿಂದ ಸುಸ್ತೆಲ್ಲಾ ಕರಗಿಹೋಗುತ್ತಿತ್ತು.

ನಮ್ಮ ಪುಟ್ಟ ಸಭೆಗೆ ನೇಮಿಸಿದ್ದ ಸೇವಾಕ್ಷೇತ್ರ ತುಂಬ ದೊಡ್ಡದು. ಅದರಲ್ಲಿ ಅನೇಕ ಚಿಕ್ಕಚಿಕ್ಕ ಪಟ್ಟಣಗಳು ಮತ್ತು ಜಿಲ್ಲೆಗಳು ಇದ್ದವು. ಈ ಜಿಲ್ಲೆಗಳಲ್ಲಿ ತುಂಬ ಜನರಿಗೆ ಜಮೀನಿತ್ತು. ನಾವು ಆ ರೈತರ ಹತ್ತಿರ ಮಾತಾಡಿ ಸಾಹಿತ್ಯ ಕೊಟ್ಟಾಗ ಅವರು ತಾವು ಬೆಳೆದಿದ್ದ ತರಕಾರಿಗಳನ್ನು, ತಾಜಾ ಮೊಟ್ಟೆಗಳನ್ನು ಅಥವಾ ಕೋಳಿಗಳನ್ನು ಕೊಡುತ್ತಿದ್ದರು. ಅಪ್ಪ ಸಾಹಿತ್ಯಕ್ಕಾಗಿ ಮೊದಲೇ ದುಡ್ಡು ಕೊಡುತ್ತಿದ್ದರಿಂದ ರೈತರಿಂದ ಸಿಗುತ್ತಿದ್ದ ವಸ್ತುಗಳು ನಮ್ಮ ಊಟಕ್ಕೆ ಆಗುತ್ತಿತ್ತು.

ಸುವಾರ್ತೆ ಹಬ್ಬಲು ಮಾಡಿದ ಅಭಿಯಾನಗಳು

ಸುವಾರ್ತೆ ಸಾರಲು ಅಪ್ಪ-ಅಮ್ಮ ಒಂದು ಚಿಕ್ಕ ರೆಕಾರ್ಡ್‌ ಪ್ಲೇಯರನ್ನು (ಫೋನೋಗ್ರಾಫ್‌) ಖರೀದಿಸಿದರು. ನಾನು ತುಂಬ ಚಿಕ್ಕವನಾಗಿದ್ದರಿಂದ ಅದನ್ನು ಹೇಗೆ ಬಳಸಬೇಕು ಅಂತ ಗೊತ್ತಿರಲಿಲ್ಲ. ಆದರೆ ಅಪ್ಪ-ಅಮ್ಮ ಅವರ ಪುನರ್ಭೇಟಿಗಳಲ್ಲಿ ಮತ್ತು ಬೈಬಲ್‌ ಅಧ್ಯಯನಗಳಲ್ಲಿ ಸಹೋದರ ರದರ್‌ಫರ್ಡ್‌ರ ಭಾಷಣಗಳನ್ನು ಈ ಪ್ಲೇಯರಲ್ಲಿ ಹಾಕಲು ಸಹಾಯ ಮಾಡುತ್ತಿದ್ದೆ. ಆಗ ನನಗೆ ಖುಷಿಯಾಗುತ್ತಿತ್ತು.

ಚಾರ್ಲ್ಸ್‌ ಮಾಲಹನ್‌ ಪುಟ್ಟ ಬಾಲಕರಾಗಿದ್ದಾಗ ಸೌಂಡ್‌ ಕಾರ್‌ ಮುಂದೆ ತನ್ನ ತಂದೆ-ತಾಯಿ ಜೊತೆ ನಿಂತಿದ್ದಾರೆ

ನಮ್ಮ ಸೌಂಡ್‌ ಕಾರ್‌ ಮುಂದೆ, ಅಪ್ಪ-ಅಮ್ಮನ ಜೊತೆ

ಅಪ್ಪ 1936​ರ ನಮ್ಮ ಫೋರ್ಡ್‌ ಕಾರನ್ನು ಸೌಂಡ್‌ ಕಾರಾಗಿ ಬದಲಾಯಿಸಿದರು. ಅಂದರೆ ಕಾರಿನ ಮೇಲೆ ದೊಡ್ಡ ಧ್ವನಿವರ್ಧಕವನ್ನು ಅಳವಡಿಸಿದರು. ಇದರಿಂದ ರಾಜ್ಯದ ಸಂದೇಶ ಸಾರಲು ತುಂಬನೇ ಸಹಾಯವಾಯಿತು. ಸಾಮಾನ್ಯವಾಗಿ ಜನರ ಗಮನ ಸೆಳೆಯಲು ಮೊದಲಿಗೆ ಇದರಲ್ಲಿ ಸಂಗೀತವನ್ನು ಹಾಕುತ್ತಿದ್ದರು. ನಂತರ ರೆಕಾರ್ಡ್‌ ಆಗಿರುವ ಬೈಬಲ್‌ ಭಾಷಣವನ್ನು ಹಾಕುತ್ತಿದ್ದರು. ಅದು ಮುಗಿದ ಮೇಲೆ ಆಸಕ್ತ ಜನರಿಗೆ ಸಾಹಿತ್ಯ ಕೊಡ್ತಿದ್ವಿ.

ಕ್ಯಾನ್‌ಸಸ್‌ನಲ್ಲಿದ್ದ ಚೆರೀವೇಲ್‌ ಎಂಬ ಚಿಕ್ಕ ಪಟ್ಟಣಕ್ಕೆ ಹೋದಾಗ, ಆ ಊರಲ್ಲಿದ್ದ ಉದ್ಯಾನವನದ ಒಳಗಡೆ ನಮ್ಮ ಸೌಂಡ್‌ ಕಾರನ್ನು ತೆಗೆದುಕೊಂಡು ಹೋಗಲು ಪೊಲೀಸರು ಬಿಡಲಿಲ್ಲ. ಆ ಉದ್ಯಾನವನದಲ್ಲಿ ಭಾನುವಾರಗಳಂದು ಜನರು ವಿಶ್ರಾಂತಿ ಪಡೆಯಲು ಬರುತ್ತಿದ್ದರು. ಆದರೆ ನಾವು ನಮ್ಮ ಕಾರನ್ನು ಉದ್ಯಾನವನದ ಹೊರಗೆ ನಿಲ್ಲಿಸಲು ಪೊಲೀಸರು ಅನುಮತಿ ಕೊಟ್ಟರು. ಅವರ ಮಾತಿನಂತೆ ಅಪ್ಪ ಆ ಉದ್ಯಾನವನದ ಪಕ್ಕದಲ್ಲಿದ್ದ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿದರು. ಇಲ್ಲಿಂದಲೂ ಜನರು ಆರಾಮವಾಗಿ ಬೈಬಲ್‌ ಸಂದೇಶ ಕೇಳಿಸಿಕೊಳ್ಳಬಹುದಿತ್ತು. ಅಪ್ಪ ಮತ್ತು ನನ್ನ ಅಣ್ಣ ಜೆರೀ ಜೊತೆ ಸೇವೆ ಮಾಡಲು ನನಗೆ ತುಂಬ ಖುಷಿಯಾಗುತ್ತಿತ್ತು.

1940​ರ ಮುಂಚೆ ನಾವು ಮಿಂಚಿನ ವೇಗದ ಅಭಿಯಾನಗಳನ್ನು ಮಾಡುತ್ತಿದ್ವಿ. ಅಂದರೆ ತುಂಬ ವಿರೋಧ ಇದ್ದ ಕ್ಷೇತ್ರಗಳನ್ನು ಬೇಗಬೇಗ ಮುಗಿಸಿ ಮುಂದೆ ಹೋಗುತ್ತಿದ್ವಿ. ಬೆಳಗಾಗುವುದಕ್ಕೆ ಮುಂಚೆ ಎದ್ದು ಎಲ್ಲ ಮನೆಗಳಿಗೆ ಹೋಗಿ ಸದ್ದಿಲ್ಲದೆ ಕರಪತ್ರ ಅಥವಾ ಕಿರುಪುಸ್ತಕಗಳನ್ನು ಬಾಗಿಲ ಅಡಿಯಲ್ಲಿ ತುರುಕಿಸಿಬಿಟ್ಟು ಬರುತ್ತಿದ್ವಿ. ಆಮೇಲೆ ಊರಾಚೆ ಬಂದು ಯಾರಾದರೂ ಸಿಕ್ಕಿಹಾಕಿಕೊಂಡಿದ್ದಾರಾ, ಪೊಲೀಸರು ಬಂಧಿಸಿದ್ದಾರಾ ಎಂದು ನೋಡುತ್ತಿದ್ವಿ. ಮಿಸೌರಿಯ ಜಾಪ್ಲಿನ್‌ನಲ್ಲಿ ನಾವು ಸೇವೆ ಮಾಡಿದ್ದು ಇದೇ ರೀತಿ.

ಆ ವರ್ಷಗಳಲ್ಲಿ ನಾವು ಇನ್ನೊಂದು ವಿಧದ ಸಾಕ್ಷಿಕಾರ್ಯವನ್ನೂ ಮಾಡುತ್ತಿದ್ವಿ. ಅದನ್ನು ಮಾಹಿತಿ ಮೆರವಣಿಗೆ ಅಂತ ಕರೆಯುತ್ತಿದ್ವಿ. ರಾಜ್ಯದ ಸಂದೇಶವನ್ನು ಸಾರಲು ನಾವು ದೊಡ್ಡ ಫಲಕಗಳನ್ನು ನೇತುಹಾಕಿಕೊಂಡು ಪಟ್ಟಣದಲ್ಲಿ ಮೆರವಣಿಗೆ ಮಾಡಿಕೊಂಡು ಬರ್ತಿದ್ವಿ. ಅಂಥ ಒಂದು ಮೆರವಣಿಗೆ ನನಗಿನ್ನೂ ನೆನಪಿದೆ. “ಧರ್ಮವು ಒಂದು ಪಾಶ ಮತ್ತು ವಂಚನೆ” ಎಂಬ ವಾಕ್ಯವಿದ್ದ ಫಲಕವನ್ನು ಸಹೋದರ ಸಹೋದರಿಯರು ಹಾಕಿಕೊಂಡು ನಮ್ಮ ಮನೆಯಿಂದ ಹೊರಟು ಒಂದು ಮೈಲಿಯಷ್ಟು (1.6 ಕಿ.ಮೀ) ಮೆರವಣಿಗೆ ಮಾಡಿ ವಾಪಸ್‌ ಬಂದರು. ಸಂತೋಷದ ವಿಷಯ ಏನೆಂದರೆ ಆ ಮೆರವಣಿಗೆಯನ್ನು ಯಾರೂ ವಿರೋಧಿಸಲಿಲ್ಲ. ಬದಲಿಗೆ ಅನೇಕರು ಆಸಕ್ತಿಯಿಂದ ನೋಡುತ್ತಿದ್ದರು.

ಆಗಿನ ಅಧಿವೇಶನಗಳು

ನಾವು ಅಧಿವೇಶನಕ್ಕೆ ಹಾಜರಾಗಲು ಟೆಕ್ಸಸ್‌ಗೆ ಹೋಗುತ್ತಿದ್ವಿ. ಅಲ್ಲಿ ನಡೆಯುತ್ತಿದ್ದ ರೈಲ್ವೆ ಮಾರ್ಗದ ನಿರ್ಮಾಣ ಕೆಲಸವನ್ನು ಅಪ್ಪ ಮಾಡುತ್ತಿದ್ದರು. ಹಾಗಾಗಿ ಅಪ್ಪನ ಪಾಸ್‌ನಲ್ಲಿ ನಾವು ಫ್ರೀಯಾಗಿ ಪ್ರಯಾಣ ಮಾಡ್ತಿದ್ವಿ. ಅಧಿವೇಶನಕ್ಕೂ ಹಾಜರಾಗಿ, ನಮ್ಮ ಸಂಬಂಧಿಕರನ್ನೂ ಭೇಟಿ ಮಾಡಿಕೊಂಡು ಬರ್ತಿದ್ವಿ. ಟೆಕ್ಸಸ್‌ನ ಟೆಂಪಲ್‌ ಎಂಬಲ್ಲಿ ಅಮ್ಮನ ಅಣ್ಣ ಫ್ರೆಡ್‌ ವಿಸ್‌ಮರ್‌ ಮತ್ತು ಅವರ ಪತ್ನಿ ಯುಲಾಲೀ ಇದ್ದರು. 1900​ನೇ ಇಸವಿಯ ನಂತರ ಫ್ರೆಡ್‌ ಮಾಮ ಸತ್ಯ ಕಲಿತು ದೀಕ್ಷಾಸ್ನಾನ ತಗೊಂಡಿದ್ದರು. ಆಗ ಅವರಿನ್ನೂ ಯುವಕರಾಗಿದ್ದರು. ದೀಕ್ಷಾಸ್ನಾನ ತಗೊಂಡ ಮೇಲೆ ಅವರು ತಮ್ಮ ಒಡಹುಟ್ಟಿದವರಿಗೆ ತಾವು ಕಲಿತದ್ದನ್ನು ತಿಳಿಸಿದ್ದರು. ಅವರಲ್ಲಿ ನಮ್ಮ ಅಮ್ಮನೂ ಒಬ್ಬರು. ಮಧ್ಯ-ಟೆಕ್ಸಸ್‌ನಲ್ಲಿದ್ದ ಸಹೋದರರಿಗೆ ನಮ್ಮ ಮಾಮನ ಒಳ್ಳೇ ಪರಿಚಯವಿತ್ತು. ಯಾಕೆಂದರೆ ಒಂದು ಸಮಯದಲ್ಲಿ ಅವರು ಅಲ್ಲಿ ಝೋನ್‌ ಸರ್ವೆಂಟ್‌ ಆಗಿ (ಈಗ ಸಂಚರಣ ಮೇಲ್ವಿಚಾರಕ ಎಂದು ಕರೆಯಲಾಗುತ್ತದೆ) ಕೆಲಸ ಮಾಡಿದ್ದರು. ಎಲ್ಲರ ಹತ್ತಿರ ಪ್ರೀತಿಯಿಂದ, ಸಂತೋಷವಾಗಿ ಇರುತ್ತಿದ್ದರು. ಅವರ ಹತ್ತಿರ ಇರಕ್ಕೆ ಎಲ್ಲರಿಗೂ ಇಷ್ಟವಾಗುತ್ತಿತ್ತು. ಸತ್ಯಕ್ಕಾಗಿ ಅವರಲ್ಲಿ ತುಂಬ ಹುರುಪಿತ್ತು. ನಾನು ಯುವಕನಾಗಿದ್ದಾಗ ಅವರು ನನ್ನ ಮೇಲೆ ಒಳ್ಳೆಯ ಪ್ರಭಾವ ಬೀರಿದ್ದರು.

1941​ರಲ್ಲಿ ಮಿಸೌರಿಯ ಸೇಂಟ್‌ ಲೂಯಿಸ್‌ನಲ್ಲಿ ನಡೆದ ದೊಡ್ಡ ಅಧಿವೇಶನಕ್ಕೆ ನಾವು ರೈಲಿನಲ್ಲಿ ಹೋದ್ವಿ. ಸಭಾಂಗಣದಲ್ಲಿ ವೇದಿಕೆಯ ಹತ್ತಿರದಲ್ಲಿ ಮಕ್ಕಳಿಗಾಗಿ ಸೀಟುಗಳನ್ನು ಕಾದಿರಿಸಲಾಗಿತ್ತು. ಸಹೋದರ ರದರ್‌ಫರ್ಡ್‌ ಕೊಡಲಿದ್ದ “ರಾಜನ ಮಕ್ಕಳು” ಎಂಬ ಭಾಷಣವನ್ನು ಕೇಳಲು ಈ ಏರ್ಪಾಡು ಮಾಡಲಾಗಿತ್ತು. ಭಾಷಣದ ಕೊನೆಯಲ್ಲಿ ನಮ್ಮಲ್ಲಿ ಪ್ರತಿಯೊಬ್ಬರಿಗೆ ಮಕ್ಕಳು ಎಂಬ ಹೊಸ ಪುಸ್ತಕದ ಒಂದು ಪ್ರತಿಯನ್ನು ಸಹೋದರ ರದರ್‌ಫರ್ಡ್‌ ಮತ್ತು ಅವರ ಸಹಾಯಕರು ಕೊಟ್ಟಾಗ ನಮಗೆ ತುಂಬ ಆಶ್ಚರ್ಯವಾಯಿತು. ಈ ಆಧ್ಯಾತ್ಮಿಕ ಉಡುಗೊರೆ 15,000 ಮಕ್ಕಳಿಗೆ ಸಿಕ್ಕಿತು.

1943​ರ ಏಪ್ರಿಲ್‌ ತಿಂಗಳಿನಲ್ಲಿ ಕ್ಯಾನ್‌ಸಸ್‌ನ ಕಾಫೀವಿಲ್‌ ಎಂಬ ಸ್ಥಳದಲ್ಲಿ “ಕ್ರಿಯೆಗೈಯಲು ಕರೆ” ಎಂಬ ಸಮ್ಮೇಳನಕ್ಕೆ ಹಾಜರಾದ್ವಿ. ಕೂಡಿಬಂದವರು ಸ್ವಲ್ಪವೇ ಜನರಾದರೂ ತುಂಬ ಆನಂದಿಸಿದ್ವಿ. ಈ ಸಮ್ಮೇಳನದಲ್ಲಿ ಹೊಸ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಆರಂಭವಾಯಿತು. ಅಂದಿನಿಂದ ಈ ಶಾಲೆಯನ್ನು ಎಲ್ಲಾ ಸಭೆಗಳಲ್ಲಿ ನಡೆಸಲಾಯಿತು. ಈ ಶಾಲೆಯಲ್ಲಿ ಉಪಯೋಗಿಸಬೇಕಾದ 52 ಪಾಠಗಳಿದ್ದ ಕಿರುಪುಸ್ತಕವನ್ನೂ ಬಿಡುಗಡೆ ಮಾಡಲಾಯಿತು. ಆ ವರ್ಷದ ಕೊನೆಯಲ್ಲಿ ನಾನು ನನ್ನ ಮೊದಲ ವಿದ್ಯಾರ್ಥಿ ನೇಮಕವನ್ನು ಕೊಟ್ಟೆ. ಈ ಸಮ್ಮೇಳನ ನನಗೆ ವಿಶೇಷವಾಗಿರಲು ಇನ್ನೊಂದು ಕಾರಣವೂ ಇತ್ತು. ಹತ್ತಿರದ ಗದ್ದೆಯಲ್ಲಿದ್ದ ತಣ್ಣಗೆ ಕೊರೆಯುತ್ತಿದ್ದ ಒಂದು ಕೊಳದಲ್ಲಿ ನನಗೆ ದೀಕ್ಷಾಸ್ನಾನ ಆಯಿತು.

ನನ್ನ ಜೀವನದ ಗುರಿ—ಬೆತೆಲ್‌ ಸೇವೆ

1951​ರಲ್ಲಿ ನಾನು ಶಾಲೆ ವ್ಯಾಸಂಗ ಮುಗಿಸಿದೆ. ಮುಂದೆ ಏನು ಎಂದು ಕೆಲವು ತೀರ್ಮಾನಗಳನ್ನು ಮಾಡಬೇಕಿತ್ತು. ಬೆತೆಲ್‌ನಲ್ಲಿ ಸೇವೆ ಮಾಡಬೇಕೆಂಬ ಆಸೆ ನನಗಿತ್ತು. ಅಣ್ಣ ಜೆರೀ ಅಲ್ಲಿ ಸೇವೆ ಮಾಡಿದ್ದ. ನಾನು ಅರ್ಜಿ ಹಾಕಿದ ಕೂಡಲೆ ಅದನ್ನು ಬ್ರೂಕ್ಲಿನ್‌ನಲ್ಲಿರುವ ಕಚೇರಿಗೆ ಕಳುಹಿಸಲಾಯಿತು. ನಾನು ಬೆತೆಲ್‌ಗೆ ಹೋಗಬೇಕೆಂದು ತೀರ್ಮಾನಿಸಿದ್ದರಿಂದ ಆಧ್ಯಾತ್ಮಿಕವಾಗಿ ತುಂಬ ಪ್ರಯೋಜನ ಆಯಿತು. ಸ್ವಲ್ಪ ಸಮಯದಲ್ಲೇ ನನ್ನ ಅರ್ಜಿಯನ್ನು ಸ್ವೀಕರಿಸಿ 1952​ರ ಮಾರ್ಚ್‌ 10​ರಿಂದ ಬೆತೆಲ್‌ ಸೇವೆ ಆರಂಭಿಸುವಂತೆ ನನ್ನನ್ನು ಆಮಂತ್ರಿಸಲಾಯಿತು.

ನಾನು ಪ್ರಿಂಟರಿಯಲ್ಲಿ ಕೆಲಸ ಮಾಡಲು ಇಷ್ಟಪಟ್ಟೆ. ಯಾಕೆಂದರೆ ಪತ್ರಿಕೆಗಳನ್ನು ಮತ್ತು ಬೇರೆ ಸಾಹಿತ್ಯವನ್ನು ಮುದ್ರಿಸಿ ಕೊಡಬೇಕೆಂಬ ಆಸೆ ನನಗಿತ್ತು. ಆದರೆ ನನ್ನನ್ನು ಮೊದಲು ವೇಟರ್‌ ಆಗಿ ನೇಮಿಸಲಾಯಿತು, ಆಮೇಲೆ ಕಿಚನ್‌ನಲ್ಲಿ ಕೆಲಸ ಮಾಡಿದೆ. ಹೊಸ ಅನುಭವವಾಗಿತ್ತು. ತುಂಬ ಆನಂದಿಸಿದೆ. ನನಗೆ ಕೊನೆ ವರೆಗೂ ಪ್ರಿಂಟರಿಯಲ್ಲಿ ಕೆಲಸ ಮಾಡುವ ಸುಯೋಗ ಸಿಗಲಿಲ್ಲ. ಆದರೆ ಕಿಚನ್‌ನಲ್ಲಿ ಕೆಲಸ ಮಾಡಿದ್ದರಿಂದ ನನಗೆ ಪ್ರಯೋಜನವಾಯಿತು. ಅಲ್ಲಿ ಸ್ವಲ್ಪ ಭಿನ್ನವಾದ ಕೆಲಸದ ಶೆಡ್ಯೂಲ್‌ ಇತ್ತು. ಇದರಿಂದಾಗಿ ಹಗಲೊತ್ತಿನಲ್ಲಿ ವೈಯಕ್ತಿಕ ಅಧ್ಯಯನ ಮಾಡಲು ನನಗೆ ಸಮಯ ಸಿಕ್ಕಿತು. ದೊಡ್ಡದಾಗಿದ್ದ ಬೆತೆಲ್‌ ಲೈಬ್ರರಿ ತುಂಬ ಉಪಯೋಗಕ್ಕೆ ಬಂತು. ಇದರಿಂದ ನಾನು ಆಧ್ಯಾತ್ಮಿಕವಾಗಿ ಬೆಳೆಯಲು ಸಹಾಯವಾಯಿತು ಮತ್ತು ನನ್ನ ನಂಬಿಕೆ ಬಲವಾಯಿತು. ನನ್ನ ಕೈಲಾಗುವಷ್ಟು ದಿನ ಬೆತೆಲ್‌ ಸೇವೆ ಮಾಡಬೇಕೆಂಬ ದೃಢಸಂಕಲ್ಪವೂ ಬಂತು. ಜೆರೀ 1949​ರಲ್ಲಿ ಬೆತೆಲ್‌ ಬಿಟ್ಟು ಹೋಗಿದ್ದ ಮತ್ತು ಪಟ್ರಿಶಾನ ಮದುವೆಯಾಗಿದ್ದ. ಆದರೆ ಅವರು ಬ್ರೂಕ್ಲಿನ್‌ ಹತ್ತಿರದಲ್ಲೇ ಇದ್ದರು. ನಾನು ಬೆತೆಲಿಗೆ ಹೊಸದಾಗಿ ಸೇರಿದ್ದಾಗ ಅವರು ನನಗೆ ತುಂಬ ಸಹಾಯ ಮಾಡಿದರು, ಪ್ರೋತ್ಸಾಹ ಕೊಟ್ಟರು.

ನಾನು ಬೆತೆಲಿಗೆ ಬಂದ ಸ್ವಲ್ಪ ಸಮಯದಲ್ಲೇ, ಬೆತೆಲ್‌ ಭಾಷಣಗಾರರ ಪಟ್ಟಿಗೆ ಬೆತೆಲ್‌ನಲ್ಲಿ ಸೇವೆ ಮಾಡುತ್ತಿದ್ದ ಕೆಲವು ಸಹೋದರರನ್ನು ಸೇರಿಸಿದರು. ಈ ಪಟ್ಟಿಯಲ್ಲಿರುವ ಸಹೋದರರು ಬ್ರೂಕ್ಲಿನ್‌ನ ಸುತ್ತ 200 ಮೈಲಿ (322 ಕಿ.ಮೀ.) ವ್ಯಾಪ್ತಿಯಲ್ಲಿರುವ ಸಭೆಗಳಿಗೆ ಹೋಗಿ ಒಂದು ಸಾರ್ವಜನಿಕ ಭಾಷಣ ಕೊಟ್ಟು ಸಭೆಯವರೊಂದಿಗೆ ಸೇರಿ ಸೇವೆ ಮಾಡಿ ಬರಬೇಕಿತ್ತು. ನನಗೂ ಈ ಸುಯೋಗ ಸಿಕ್ಕಿತು. ತುಂಬ ಭಯಪಟ್ಟುಕೊಂಡು ನಾನು ನನ್ನ ಮೊದಲನೇ ಸಾರ್ವಜನಿಕ ಭಾಷಣ ಕೊಟ್ಟೆ. ಆಗೆಲ್ಲಾ ಇದು ಒಂದು ತಾಸು ಉದ್ದ ಇರುತ್ತಿತ್ತು. ನಾನು ಸಾಮಾನ್ಯವಾಗಿ ಸಭೆಗಳಿಗೆ ರೈಲಿನಲ್ಲಿ ಹೋಗುತ್ತಿದ್ದೆ. 1954​ರ ಚಳಿಗಾಲದಲ್ಲಿ ನಡೆದ ಒಂದು ಘಟನೆ ನನಗಿನ್ನೂ ನೆನಪಿದೆ. ನ್ಯೂಯಾರ್ಕ್‌ಗೆ ಹೊರಟಿದ್ದ ರೈಲನ್ನು ನಾನು ಹತ್ತಿದೆ. ಭಾನುವಾರ ಮಧ್ಯಾಹ್ನ ಹೊರಡುತ್ತಿದ್ದ ಆ ರೈಲಿನಲ್ಲಿ ಬಂದರೆ ಸಾಯಂಕಾಲ ಬೆತೆಲಿಗೆ ಬಂದು ಸೇರಬಹುದಿತ್ತು. ಆದರೆ ರಭಸವಾಗಿ ಬೀಸುತ್ತಿದ್ದ ಶೀತಲ ಗಾಳಿ ಮತ್ತು ಹಿಮದಿಂದ ಕೂಡಿದ ಚಂಡಮಾರುತ ಬಂದದ್ದರಿಂದ ರೈಲಿನ ಎಂಜಿನ್‌ಗಳು ಶಾರ್ಟ್‌ ಸರ್ಕ್ಯುಟ್‌ ಆಗಿ ನಿಂತುಹೋಯಿತು. ಕೊನೆಗೆ ಸೋಮವಾರ ಬೆಳಗ್ಗೆ 5 ಗಂಟೆಗೆ ರೈಲು ನ್ಯೂಯಾರ್ಕ್‌ಗೆ ಬಂದು ಮುಟ್ಟಿತು. ನಾನು ತಕ್ಷಣ ಮೆಟ್ರೋ ರೈಲನ್ನು ಹತ್ತಿ ಬ್ರೂಕ್ಲಿನ್‌ಗೆ ಬಂದು ಸೀದಾ ಕಿಚನ್‌ನಲ್ಲಿ ಕೆಲಸ ಮಾಡಲು ಹೋದೆ. ಸ್ವಲ್ಪ ತಡವಾಗಿತ್ತು. ರಾತ್ರಿಯಿಡೀ ರೈಲಿನಲ್ಲಿ ಕೂತು ತುಂಬ ಸುಸ್ತಾಗಿತ್ತು. ಆದರೆ ಈ ವಿಶೇಷ ವಾರಾಂತ್ಯಗಳಲ್ಲಿ ಸಹೋದರರ ಜೊತೆ ಸೇರಿ ಸೇವೆ ಮಾಡಿ ಹೊಸ ಸ್ನೇಹಿತರನ್ನು ಮಾಡಿಕೊಂಡ ಸವಿನೆನಪು ನಮ್ಮ ಸುಸ್ತನ್ನೆಲ್ಲಾ ಮರೆಸಿಬಿಡುತ್ತಿತ್ತು.

WBBR ಸ್ಟುಡಿಯೋದಿಂದ ಪ್ರಸಾರ ಮಾಡಲು ಚಾರ್ಲ್ಸ್‌ ಮಾಲಹನ್‌ ಒಂದು ಗುಂಪಿನ ಜೊತೆ ತಯಾರಾಗುತ್ತಿರುವುದು

WBBR ರೇಡಿಯೋ ಸ್ಟೇಷನ್‌ನಿಂದ ಪ್ರಸಾರ ಮಾಡಲು ತಯಾರಾಗುತ್ತಿರುವುದು

ನಾನು ಬೆತೆಲಿಗೆ ಸೇರಿದ ಹೊಸದರಲ್ಲಿ ಕೆಲವು ವರ್ಷ ನಮ್ಮ ರೇಡಿಯೋ ಸ್ಟೇಷನ್‌ನ (WBBR) ಪ್ರಸಾರದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ಆಗ ಸ್ಟುಡಿಯೋ 124 ಕೊಲಂಬಿಯ ಹೈಟ್ಸ್‌ ಕಟ್ಟಡದ ಎರಡನೇ ಮಹಡಿಯಲ್ಲಿತ್ತು. ಪ್ರತಿ ವಾರ ಪ್ರಸಾರವಾಗುತ್ತಿದ್ದ ಒಂದು ಬೈಬಲ್‌ ಅಧ್ಯಯನ ಕಾರ್ಯಕ್ರಮದಲ್ಲಿ ನನಗೊಂದು ಪಾತ್ರ ಕೊಟ್ಟಿದ್ದರು. ತುಂಬ ವರ್ಷಗಳಿಂದ ಬೆತೆಲ್‌ ಕುಟುಂಬದ ಸದಸ್ಯರಾಗಿದ್ದ ಸಹೋದರ ಎ. ಎಚ್‌. ಮ್ಯಾಕ್‌ಮಿಲನ್‌ ಈ ರೇಡಿಯೋ ಕಾರ್ಯಕ್ರಮಗಳಲ್ಲಿ ಯಾವಾಗಲೂ ಭಾಗವಹಿಸುತ್ತಿದ್ದರು. ಅವರನ್ನು ಎಲ್ಲರೂ ಪ್ರೀತಿಯಿಂದ ಸಹೋದರ ಮ್ಯಾಕ್‌ ಎಂದು ಕರೆಯುತ್ತಿದ್ದರು. ಬೆತೆಲಿಗೆ ಹೊಸದಾಗಿ ಸೇರಿದ್ದ ನಮ್ಮೆಲ್ಲರಿಗೆ ಅವರು ಒಳ್ಳೇ ಮಾದರಿಯಾಗಿದ್ದರು. ಯೆಹೋವನ ಸೇವೆಯಲ್ಲಿ ತುಂಬ ವರ್ಷ ಉಳಿಯುವುದು ಹೇಗೆ ಎಂದು ನಾವು ಅವರನ್ನು ನೋಡಿ ಕಲಿತ್ವಿ.

WBBR ಕರಪತ್ರ

WBBR ಬಗ್ಗೆ ಪ್ರಚಾರ ಮಾಡಲು ನಾವು ಹಂಚುತ್ತಿದ್ದ ಕರಪತ್ರ

1958​ರಲ್ಲಿ ನನ್ನ ನೇಮಕ ಬದಲಾಯಿತು. ಗಿಲ್ಯಡ್‌ ಶಾಲೆಗೆ ಸಂಬಂಧಿಸಿದ ಕೆಲಸವನ್ನು ಮಾಡುವಂತೆ ನನಗೆ ಹೇಳಲಾಯಿತು. ಗಿಲ್ಯಡ್‌ ಶಾಲೆ ಮುಗಿಸಿದ ಹುರುಪಿನ ಸಹೋದರ-ಸಹೋದರಿಯರಿಗೆ ಬೇಕಾದ ವೀಸಾಗಳನ್ನು ಮತ್ತು ಟಿಕೆಟನ್ನು ನಾನು ಏರ್ಪಾಡು ಮಾಡುತ್ತಿದ್ದೆ. ಆಗೆಲ್ಲಾ ವಿಮಾನದಲ್ಲಿ ಹೋಗುವುದು ತುಂಬ ದುಬಾರಿಯಾಗಿತ್ತು. ಆದ್ದರಿಂದ ಕೆಲವು ಮಿಷನರಿಗಳನ್ನು ಮಾತ್ರ ವಿಮಾನದಲ್ಲಿ ಕಳುಹಿಸುತ್ತಿದ್ವಿ. ಆಫ್ರಿಕ ಮತ್ತು ಏಷ್ಯಾಗೆ ನೇಮಿಸಲಾದವರು ಸರಕು ಸಾಗಿಸುತ್ತಿದ್ದ ಹಡಗುಗಳಲ್ಲಿ ಹೋಗುತ್ತಿದ್ದರು. ಆದರೆ ವಿಮಾನದ ಟಿಕೆಟ್‌ ದರ ಕಡಿಮೆಯಾದಾಗ ಹೆಚ್ಚಿನ ಮಿಷನರಿಗಳನ್ನು ವಿಮಾನದಲ್ಲೇ ಕಳುಹಿಸಲಾಯಿತು.

ಗಿಲ್ಯಡ್‌ ಪದವಿ ಪ್ರಮಾಣ ಪತ್ರಗಳನ್ನು ಚಾರ್ಲ್ಸ್‌ ಮಾಲಹನ್‌ ಜೋಡಿಸುತ್ತಿದ್ದಾರೆ

ಗಿಲ್ಯಡ್‌ ಪದವಿಪ್ರದಾನ ಸಮಾರಂಭಕ್ಕೆ ಮುಂಚೆ ಪ್ರಮಾಣ ಪತ್ರಗಳನ್ನು ಜೋಡಿಸುತ್ತಿರುವುದು

ಅಧಿವೇಶನಕ್ಕೆ ಪ್ರಯಾಣ

1960​ರಲ್ಲಿ ನನ್ನ ಕೆಲಸ ಹೆಚ್ಚಾಯಿತು. 1961​ರಲ್ಲಿ ನಡೆಯಲಿದ್ದ ಅಂತಾರಾಷ್ಟ್ರೀಯ ಅಧಿವೇಶನಗಳಿಗೆ ಅಮೆರಿಕದಿಂದ ಯೂರೋಪ್‌ಗೆ ಹೋಗಿ ಬರಲು ವಿಮಾನಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ವ್ಯವಸ್ಥೆ ಮಾಡಿದೆ. ನಾನು ನ್ಯೂಯಾರ್ಕ್‌ನಿಂದ ಜರ್ಮನಿಯಲ್ಲಿದ್ದ ಹ್ಯಾಂಬರ್ಗ್‌ಗೆ ಹೋಗುವ ವಿಮಾನದಲ್ಲಿ ಇಂಥ ಒಂದು ಅಧಿವೇಶನಕ್ಕೆ ಹೋದೆ. ಅಧಿವೇಶನ ಆದ ಮೇಲೆ ನಾನು ಮತ್ತು ಬೇರೆ ಮೂರು ಬೆತೆಲ್‌ ಸಹೋದರರು ಸೇರಿ ಒಂದು ಕಾರನ್ನು ಬಾಡಿಗೆಗೆ ತೆಗೆದುಕೊಂಡು ಜರ್ಮನಿಯಿಂದ ಇಟಲಿಗೆ ಬಂದು ರೋಮ್‌ನಲ್ಲಿದ್ದ ಶಾಖಾ ಕಚೇರಿಗೆ ಭೇಟಿ ನೀಡಿದ್ವಿ. ಅಲ್ಲಿಂದ ನಾವು ಪಿರನೀಸ್‌ ಪರ್ವತಶ್ರೇಣಿಯನ್ನು ದಾಟಿ ಫ್ರಾನ್ಸ್‌ಗೆ ಬಂದ್ವಿ. ನಂತರ ನಮ್ಮ ಕೆಲಸ ನಿಷೇಧಿಸಲ್ಪಟ್ಟಿದ್ದ ಸ್ಪೇನ್‌ಗೆ ಬಂದ್ವಿ. ಅಲ್ಲಿನ ಬಾರ್ಸಲೋನದಲ್ಲಿದ್ದ ನಮ್ಮ ಸಹೋದರರಿಗೆ ಸ್ವಲ್ಪ ಸಾಹಿತ್ಯವನ್ನು ಕೊಟ್ವಿ. ಅದನ್ನು ಉಡುಗೊರೆಗಳಂತೆ ಸುತ್ತಿ ತಗೊಂಡು ಹೋಗಿದ್ವಿ. ಇಲ್ಲಿದ್ದ ಸಹೋದರರನ್ನು ಭೇಟಿ ಮಾಡಲು ತುಂಬ ಖುಷಿಯಾಯಿತು. ಅಲ್ಲಿಂದ ಆ್ಯಮ್‌ಸ್ಟರ್‌ಡ್ಯಾಮ್‌ಗೆ ಬಂದು ನ್ಯೂಯಾರ್ಕ್‌ಗೆ ವಿಮಾನ ಹತ್ತಿದ್ವಿ.

ಒಂದು ವರ್ಷ ಆದ ಮೇಲೆ ನಾನು ಇನ್ನೊಂದು ಕೆಲಸವನ್ನೂ ಮಾಡಬೇಕಾಯಿತು. ಲೋಕದ ಬೇರೆಬೇರೆ ಕಡೆ ನಡೆಯಲಿದ್ದ ಅಂತಾರಾಷ್ಟ್ರೀಯ ಅಧಿವೇಶನಗಳಿಗೆ ಹೋಗಲು ಕೆಲವು ಪ್ರತಿನಿಧಿಗಳನ್ನು ಆರಿಸಲಾಯಿತು. ಅವರ ಪ್ರಯಾಣಕ್ಕೆ ಬೇಕಾದ ಏರ್ಪಾಡನ್ನು ನಾನು ಮಾಡಬೇಕಾಗಿತ್ತು. ಅವರು 1963​ರ “ನಿತ್ಯವಾದ ಸುವಾರ್ತೆ” ಎಂಬ ಸಮ್ಮೇಳನಕ್ಕೆ ಹಾಜರಾಗಲಿದ್ದರು. 583 ಪ್ರತಿನಿಧಿಗಳಿಗೆ ಬೇಕಾದ ಏರ್ಪಾಡುಗಳನ್ನು ಮಾಡಬೇಕಾಗಿತ್ತು. ಇವರೆಲ್ಲರೂ ಯೂರೋಪ್‌, ಏಷ್ಯ, ದಕ್ಷಿಣ ಪೆಸಿಫಿಕ್‌ನಲ್ಲಿ ನಡೆದ ಅಧಿವೇಶನಗಳನ್ನು ಮುಗಿಸಿಕೊಂಡು ಹವಾಯಿ ದೇಶದ ಹಾನಾಲೂಲೂ ಮತ್ತು ಕ್ಯಾಲಿಫೋರ್ನಿಯಾದ ಪ್ಯಾಸಡಿನಕ್ಕೆ ಪ್ರವಾಸ ಹೋದರು. ಈ ಪ್ರವಾಸದಲ್ಲಿ ಅವರು ಲೆಬನೋನ್‌ ಮತ್ತು ಜಾರ್ಡನ್‌ಗೂ ಹೋಗಿದ್ದರು. ಇಲ್ಲಿ ಅವರು ಬೈಬಲ್‌ ಇತಿಹಾಸದಲ್ಲಿ ಕಂಡುಬರುವ ದೇಶಗಳಿಗೆ ಸಂಬಂಧಪಟ್ಟ ವಿಶೇಷ ಶಿಕ್ಷಣಾ ಟೂರ್‌ಗಳಲ್ಲಿ ಭಾಗವಹಿಸಿದರು. ವಿಮಾನಗಳನ್ನು ಮತ್ತು ಹೋಟೇಲುಗಳನ್ನು ಕಾಯ್ದಿರಿಸುವುದರ ಜೊತೆಗೆ ಪ್ರವಾಸದಲ್ಲಿದ್ದವರು ಬೇರೆಬೇರೆ ದೇಶಗಳಿಗೆ ಹೋಗಬೇಕಾದ ವೀಸಾಗಳನ್ನೂ ಪಡೆಯಲು ನಮ್ಮ ಡಿಪಾರ್ಟ್‌ಮೆಂಟ್‌ನವರು ಏರ್ಪಾಡು ಮಾಡಿದರು.

ಜೀವನ ಸಂಗಾತಿ

1963​ರಲ್ಲಿ ಮರೆಯಲಾಗದ ಇನ್ನೊಂದು ವಿಷಯ ನಡೆಯಿತು. ಜೂನ್‌ 29​ರಂದು ನಾನು ಲೈಲ ರಾಜರ್ಸ್‌ ಎಂಬ ಸಹೋದರಿಯನ್ನು ಮದುವೆ ಮಾಡಿಕೊಂಡೆ. ಅವರು ಮಿಸೌರಿಯವರು. ಮೂರು ವರ್ಷಗಳ ಹಿಂದೆ ಅವರು ಬೆತೆಲ್‌ ಕುಟುಂಬವನ್ನು ಸೇರಿದ್ದರು. ನಮ್ಮ ಮದುವೆಯಾಗಿ ಒಂದು ವಾರ ಆದ ಮೇಲೆ ನಾನು ಮತ್ತು ಲೈಲ ಬೇರೆ-ಬೇರೆ ಕಡೆ ನಡೆಯಲಿದ್ದ ಅಧಿವೇಶನಗಳಿಗೆ ಹಾಜರಾಗಲು ವಿಶ್ವ-ಪ್ರವಾಸವನ್ನು ಮಾಡಿದ್ವಿ. ಗ್ರೀಸ್‌, ಈಜಿಪ್ಟ್‌ ಮತ್ತು ಲೆಬನೋನ್‌ಗೆ ಹೋಗಿದ್ವಿ. ನಾವು ಬೇರೂಟ್‌ನಿಂದ ಜಾರ್ಡನ್‌ನಲ್ಲಿರುವ ಚಿಕ್ಕ ವಿಮಾನ ನಿಲ್ದಾಣಕ್ಕೆ ಬರಬೇಕಿತ್ತು. ಜಾರ್ಡನ್‌ನಲ್ಲಿ ನಮ್ಮ ಕೆಲಸಕ್ಕೆ ನಿಷೇಧ ಇದ್ದದರಿಂದ ಅಲ್ಲಿಗೆ ಹೋಗಲು ಯೆಹೋವನ ಸಾಕ್ಷಿಗಳಿಗೆ ವೀಸಾ ಸಿಗಲ್ಲ ಎಂದು ನಮಗೆ ಹೇಳಲಾಯಿತು. ನಾವು ಅಲ್ಲಿಗೆ ಹೋದಾಗ ಏನಾಗುತ್ತೋ ಏನೋ ಎಂದು ಚಿಂತೆ ಆಯಿತು. ಆದರೆ ನಾವು ಬಂದಿಳಿದಾಗ ನಮಗೊಂದು ಆಶ್ಚರ್ಯ ಕಾದಿತ್ತು. ವಿಮಾನ ನಿಲ್ದಾಣದಲ್ಲಿದ್ದ ಕಟ್ಟಡದ ಮೇಲೆ “ಯೆಹೋವನ ಸಾಕ್ಷಿಗಳಿಗೆ ಸ್ವಾಗತ” ಎಂಬ ಬ್ಯಾನರನ್ನು ಒಂದು ಗುಂಪು ಹಿಡಿದು ನಿಂತಿರುವುದನ್ನು ನೋಡಿದಾಗ ಸಂತೋಷ ಆಯಿತು. ಬೈಬಲ್‌ ದೇಶಗಳನ್ನು ಕಣ್ಣಾರೆ ನೋಡುವ ಅನುಭವ ತುಂಬ ಚೆನ್ನಾಗಿತ್ತು. ಪ್ರಾಚೀನ ಕಾಲದ ಮೂಲಪಿತೃಗಳು ಜೀವಿಸಿದ ಸ್ಥಳಗಳನ್ನು, ಯೇಸು ಮತ್ತು ಆತನ ಅಪೊಸ್ತಲರು ಸಾರಿದ ಸ್ಥಳಗಳನ್ನು ಭೇಟಿ ಮಾಡಿದ್ವಿ. ಇಲ್ಲಿ ಸ್ಥಾಪಿಸಲಾದ ಕ್ರೈಸ್ತ ಧರ್ಮ ಭೂಮಿಯ ಕಟ್ಟಕಡೆಯ ವರೆಗೆ ಹಬ್ಬಿತು.—ಅ. ಕಾ. 13:47.

ಕಳೆದ 55 ವರ್ಷಗಳಿಂದ ನನಗೆ ಸಿಕ್ಕಿದ ಎಲ್ಲಾ ನೇಮಕಗಳಲ್ಲಿ ಲೈಲ ನಂಬಿಗಸ್ತಿಕೆಯಿಂದ ಸಹಕಾರ ಕೊಟ್ಟಿದ್ದಾರೆ. ಸ್ಪೇನ್‌ ಮತ್ತು ಪೋರ್ಚುಗಲ್‌ಗೆ ನಾವು ಅನೇಕ ಸಾರಿ ಭೇಟಿ ಕೊಟ್ವಿ. ಆಗ ನಮ್ಮ ಕೆಲಸ ಅಲ್ಲಿ ನಿಷೇಧವಾಗಿತ್ತು. ನಾವು ಅಲ್ಲಿರುವ ಸಹೋದರರನ್ನು ಪ್ರೋತ್ಸಾಹಿಸಿ ಅವರಿಗೆ ಸಾಹಿತ್ಯ ಮತ್ತು ಅಗತ್ಯವಿದ್ದ ವಸ್ತುಗಳನ್ನು ಕೊಟ್ಟು ಬರುತ್ತಿದ್ವಿ. ಸ್ಪೇನ್‌ನಲ್ಲಿ ಜೈಲಿನಲ್ಲಿದ್ದ ನಮ್ಮ ಕೆಲವು ಸಹೋದರರನ್ನೂ ನಾವು ಭೇಟಿ ಮಾಡಿದ್ವಿ. ಅವರನ್ನು ಕ್ಯಡೀಸ್‌ನಲ್ಲಿದ್ದ ಒಂದು ಹಳೇ ಸೇನಾ ಕೋಟೆಯಲ್ಲಿ ಕೂಡಿಹಾಕಲಾಗಿತ್ತು. ಅಲ್ಲಿದ್ದ ಸಹೋದರರಿಗೆ ಬೈಬಲಾಧಾರಿತ ಭಾಷಣ ಕೊಟ್ಟು ಪ್ರೋತ್ಸಾಹಿಸಲು ಸಾಧ್ಯವಾಯಿತು. ಇದರಿಂದ ನನಗೆ ತುಂಬ ಸಂತೋಷವಾಯಿತು.

1969​ರಲ್ಲಿ ಪಟ್ರಿಶಾ ಮತ್ತು ಜೆರೀ ಮಾಲಹನ್‌ ಜೊತೆ ಲೈಲ ಮತ್ತು ಚಾರ್ಲ್ಸ್‌ ಮಾಲಹನ್‌

1969​ರಲ್ಲಿ ನಡೆದ “ಭೂಮಿಯ ಮೇಲೆ ಶಾಂತಿ” ಅಧಿವೇಶನಕ್ಕೆ ಹೋಗುವಾಗ ಪಟ್ರಿಶಾ ಮತ್ತು ಜೆರೀ ಮಾಲಹನ್‌ ಜೊತೆ ನಾವಿಬ್ಬರು

1963​ರಿಂದ ಆಫ್ರಿಕ, ಆಸ್ಟ್ರೇಲಿಯ, ಮಧ್ಯ ಮತ್ತು ದಕ್ಷಿಣ ಅಮೆರಿಕ, ಯೂರೋಪ್‌, ಏಷ್ಯ, ಹವಾಯಿ, ನ್ಯೂಜಿಲೆಂಡ್‌ ಮತ್ತು ಪೋರ್ಟರಿಕೊದಲ್ಲಿ ನಡೆದ ಅಂತಾರಾಷ್ಟ್ರೀಯ ಅಧಿವೇಶನಗಳಿಗೆ ಪ್ರವಾಸಗಳನ್ನು ಏರ್ಪಾಡು ಮಾಡುವ ಸುಯೋಗ ನನಗೆ ಸಿಕ್ಕಿತು. ನಾನು ಮತ್ತು ಲೈಲ ಮರೆಯಲಾಗದ ಅನೇಕ ಅಧಿವೇಶನಗಳಿಗೆ ಹಾಜರಾಗಿದ್ದೇವೆ. ಇದರಲ್ಲಿ ಪೋಲೆಂಡ್‌ನ ವಾರ್ಸಾದಲ್ಲಿ 1989​ರಲ್ಲಿ ನಡೆದ ಅಧಿವೇಶನವೂ ಒಂದು. ಈ ದೊಡ್ಡ ಅಧಿವೇಶನಕ್ಕೆ ರಷ್ಯದಿಂದ ಅನೇಕ ಸಹೋದರ ಸಹೋದರಿಯರು ಬಂದರು. ಇದೇ ಅವರ ಮೊದಲನೇ ಅಧಿವೇಶನವಾಗಿತ್ತು. ತಮ್ಮ ನಂಬಿಕೆಗಾಗಿ ಸೋವಿಯತ್‌ ಸೆರೆಮನೆಗಳಲ್ಲಿ ತುಂಬ ವರ್ಷ ಕಳೆದಿದ್ದ ಅನೇಕರು ನಮಗೆ ಸಿಕ್ಕಿದರು.

ಲೋಕದ ಬೇರೆಬೇರೆ ಕಡೆಗಳಲ್ಲಿರುವ ಶಾಖಾ ಕಚೇರಿಗಳಿಗೆ ಹೋಗಿ ಬೆತೆಲ್‌ ಕುಟುಂಬದ ಸದಸ್ಯರನ್ನು ಮತ್ತು ಮಿಷನರಿಗಳನ್ನು ಪ್ರೋತ್ಸಾಹಿಸಿ ಬಲಪಡಿಸುವ ಸುಯೋಗ ನನಗೆ ಸಿಕ್ಕಿತು. ಇದನ್ನು ನಾನು ತುಂಬ ಆನಂದಿಸಿದೆ. ನಾವು ಕಳೆದ ಬಾರಿ ದಕ್ಷಿಣ ಕೊರಿಯ ಶಾಖೆಗೆ ಭೇಟಿ ಕೊಟ್ಟಾಗ ಸೂವಾನ್‌ನ ಸೆರೆಯಲ್ಲಿರುವ 50 ಸಹೋದರರನ್ನು ಭೇಟಿ ಮಾಡಲು ಸಾಧ್ಯವಾಯಿತು. ಆ ಎಲ್ಲ ಸಹೋದರರಿಗೆ ಸಕಾರಾತ್ಮಕ ಮನೋಭಾವ ಇತ್ತು. ಪುನಃ ಕ್ಷೇತ್ರ ಸೇವೆಯಲ್ಲಿ ಭಾಗವಹಿಸಲು ಎದುರುನೋಡುತ್ತಿದ್ದರು. ಅವರನ್ನು ಭೇಟಿ ಮಾಡಿ ನಮಗೆ ತುಂಬ ಪ್ರೋತ್ಸಾಹ ಸಿಕ್ಕಿತು.—ರೋಮ. 1:11, 12.

ಅಭಿವೃದ್ಧಿ ತಂದ ಸಂತೋಷ

ಈ ಎಲ್ಲಾ ವರ್ಷಗಳಲ್ಲಿ ಯೆಹೋವನು ತನ್ನ ಜನರನ್ನು ಹೇಗೆ ಆಶೀರ್ವದಿಸಿದ್ದಾನೆ ಎಂದು ನಾನು ನೋಡಕ್ಕಾಯಿತು. ನಾನು 1943​ರಲ್ಲಿ ದೀಕ್ಷಾಸ್ನಾನ ಪಡಕೊಂಡಾಗ ಲೋಕವ್ಯಾಪಕವಾಗಿ ಬರೀ 1 ಲಕ್ಷ ಪ್ರಚಾರಕರು ಇದ್ದರು. ಆದರೆ ಈಗ 80 ಲಕ್ಷಕ್ಕಿಂತ ಹೆಚ್ಚು ಮಂದಿ 240 ದೇಶಗಳಲ್ಲಿ ಯೆಹೋವನ ಸೇವೆ ಮಾಡುತ್ತಿದ್ದಾರೆ. ಇಷ್ಟೊಂದು ಅಭಿವೃದ್ಧಿಗೆ ಮುಖ್ಯವಾಗಿ ಗಿಲ್ಯಡ್‌ ಶಾಲೆಯಿಂದ ತರಬೇತಿ ಪಡೆದ ಮಿಷನರಿಗಳು ಮಾಡಿದ ಸೇವೆನೇ ಕಾರಣ. ಈ ಎಲ್ಲಾ ವರ್ಷಗಳಲ್ಲಿ ಇಂಥ ಅನೇಕ ಮಿಷನರಿಗಳ ಒಡನಾಟ ಇದ್ದದ್ದು ಮತ್ತು ಅವರು ತಮ್ಮ ವಿದೇಶಿ ನೇಮಕಗಳಿಗೆ ಹೋಗಿ ಮುಟ್ಟಲು ಸಹಾಯ ಮಾಡಿದ್ದು ನನಗೆ ತುಂಬ ಸಂತೋಷ ತಂದಿದೆ.

ನಾನು ಚಿಕ್ಕ ವಯಸ್ಸಿನಲ್ಲಿ ನನ್ನ ಸೇವೆಯನ್ನು ಹೆಚ್ಚಿಸಲು ತೀರ್ಮಾನ ಮಾಡಿ ಬೆತೆಲಿಗೆ ಬಂದದ್ದಕ್ಕೆ ತುಂಬ ಸಂತೋಷಪಡುತ್ತೇನೆ. ಯೆಹೋವನು ಹೆಜ್ಜೆಹೆಜ್ಜೆಗೂ ನನ್ನ ಜೊತೆ ಇದ್ದು ತುಂಬ ಆಶೀರ್ವದಿಸಿದ್ದಾನೆ. ಬೆತೆಲ್‌ ಸೇವೆ ಅಷ್ಟೇ ಅಲ್ಲ, ಎಷ್ಟೋ ವರ್ಷಗಳಿಂದ ನಾನು ಮತ್ತು ಲೈಲ ಬ್ರೂಕ್ಲಿನ್‌ನಲ್ಲಿರುವ ಸಭೆಗಳಲ್ಲಿರುವವರ ಜೊತೆ ಸೇರಿ ಸೇವೆ ಮಾಡಿ ಆನಂದಿಸಿದ್ದೇವೆ. ಎಷ್ಟೋ ಆಪ್ತ ಸ್ನೇಹಿತರನ್ನು ಮಾಡಿಕೊಂಡಿದ್ದೇವೆ.

ನಾನು ನನ್ನ ಬೆತೆಲ್‌ ಸೇವೆಯನ್ನು ಲೈಲ ಸಹಾಯದೊಂದಿಗೆ ಪ್ರತಿ ದಿನ ಮಾಡಿಕೊಂಡು ಹೋಗುತ್ತಿದ್ದೇನೆ. ನನಗೀಗ 84 ವರ್ಷ ದಾಟಿರುವುದಾದರೂ ತೃಪ್ತಿ ತರುವ ಕೆಲಸ ಇದೆ. ಶಾಖೆಗೆ ಬರುವ ಪತ್ರಗಳು ಯಾರಿಗೆ ಸಿಗಬೇಕೋ ಅವರಿಗೆ ಮುಟ್ಟಿಸುವ ಕೆಲಸ ನಂದು.

ಚಾರ್ಲ್ಸ್‌ ಮತ್ತು ಲೈಲ ಮಾಲಹನ್‌ ಇಂದು

ಇಂದು ಲೈಲ ಜೊತೆ

ಯೆಹೋವನ ಅದ್ಭುತವಾದ ಸಂಘಟನೆಯ ಭಾಗವಾಗಿರುವುದು ಎಂಥ ಸುಯೋಗ! ಯೆಹೋವನ ಆರಾಧಕರು ಮತ್ತು ಬೇರೆಯವರ ಮಧ್ಯೆ ಇರುವ ವ್ಯತ್ಯಾಸ ನೋಡುವಾಗ ನಮಗೆ ನಮ್ಮ ಸಂಘಟನೆನೇ ಬೆಸ್ಟ್‌ ಅನ್ಸುತ್ತೆ. “ಶಿಷ್ಟರಿಗೂ ದುಷ್ಟರಿಗೂ ದೇವರನ್ನು ಸೇವಿಸುವವರಿಗೂ ಸೇವಿಸದವರಿಗೂ ಇರುವ ತಾರತಮ್ಯವನ್ನು ಮತ್ತೆ ಕಾಣುವಿರಿ” ಎಂದು ಮಲಾಕಿಯ 3:18​ರಲ್ಲಿರುವ ಮಾತು ಈಗ ತುಂಬ ಸ್ಪಷ್ಟವಾಗಿ ಅರ್ಥವಾಗುತ್ತಿದೆ. ದಿನದಿಂದ ದಿನಕ್ಕೆ ಸೈತಾನನ ದುಷ್ಟ ಲೋಕ ಇನ್ನೂ ಹಾಳಾಗಿ ಹೋಗುತ್ತಿದೆ. ಲೋಕದಲ್ಲಿರುವ ಜನರಿಗೆ ಯಾವ ನಿರೀಕ್ಷೆಯೂ ಇಲ್ಲ, ಜೀವನದಲ್ಲಿ ಸಂತೋಷ ಅನ್ನುವುದೂ ಇಲ್ಲ. ಆದರೆ ಯೆಹೋವನನ್ನು ಪ್ರೀತಿಸಿ ಆತನ ಸೇವೆ ಮಾಡುತ್ತಿರುವವರು ಈ ಕಠಿನ ಕಾಲಗಳಲ್ಲೂ ಸಂತೋಷವಾಗಿದ್ದಾರೆ. ನಿಶ್ಚಿತವಾದ ನಿರೀಕ್ಷೆಯೂ ಇದೆ. ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ನೇಮಕ ಸಿಕ್ಕಿರುವುದು ನಮಗೊಂದು ದೊಡ್ಡ ಸುಯೋಗ! (ಮತ್ತಾ. 24:14) ತುಂಬ ಬೇಗ ದೇವರ ರಾಜ್ಯ ಈ ಹಳೇ ಲೋಕವನ್ನು ನಾಶಮಾಡಿ ಹೊಸ ಲೋಕವನ್ನು ತರುತ್ತದೆ. ಆ ದಿನವನ್ನು ನಾವು ನೋಡಬೇಕೆಂದು ತುಂಬ ಆಸೆಯಿಂದ ಕಾಯುತ್ತಿದ್ದೇವೆ. ಆಗ ನಮಗೆಲ್ಲರಿಗೂ ಒಳ್ಳೇ ಆರೋಗ್ಯ ಮತ್ತು ಸಾವಿಲ್ಲದ ಬದುಕು ಸಿಗುತ್ತದೆ. ದೇವರು ವಾಗ್ದಾನಮಾಡಿದ ಎಲ್ಲಾ ಆಶೀರ್ವಾದಗಳೂ ಸಿಗುತ್ತವೆ. ಆಗ ಭೂಮಿಯ ಮೇಲಿರುವ ಯೆಹೋವನ ನಂಬಿಗಸ್ತ ಸೇವಕರು ನಿತ್ಯಜೀವವನ್ನು ಆನಂದಿಸುವರು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ