ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w19 ಏಪ್ರಿಲ್‌ ಪು. 26-30
  • ‘ಬಹು ಬೆಲೆಯುಳ್ಳ ಮುತ್ತು’ ನಮಗೆ ಸಿಕ್ತು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ಬಹು ಬೆಲೆಯುಳ್ಳ ಮುತ್ತು’ ನಮಗೆ ಸಿಕ್ತು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಅನುರೂಪ ಮಾಹಿತಿ
  • ‘ದ್ವೀಪಸಮೂಹಗಳು ಹರ್ಷಿಸಲಿ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಯೆಹೋವನು ನನ್ನನ್ನು ಉತ್ತಮವಾಗಿ ಪರಾಮರಿಸಿದ್ದಾನೆ
    ಕಾವಲಿನಬುರುಜು—1992
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
w19 ಏಪ್ರಿಲ್‌ ಪು. 26-30
ವಿನ್ಸ್‌ಟನ್‌ ಮತ್ತು ಪ್ಯಾಮಲ ಪೇನ್‌ ತಮ್ಮ ಹದಿವಯಸ್ಸಿನಲ್ಲಿ ಸಮುದ್ರ ತೀರದ ಒಂದು ಬಂಡೆಯ ಮೇಲೆ ಕುಳಿತಿರುವುದು

ಜೀವನ ಕಥೆ

‘ಬಹು ಬೆಲೆಯುಳ್ಳ ಮುತ್ತು’ ನಮಗೆ ಸಿಕ್ತು

ವಿನ್ಸ್‌ಟನ್‌ ಮತ್ತು ಪ್ಯಾಮಲ ಪೇನ್‌ ಅವರು ಹೇಳಿದಂತೆ

ವಿನ್ಸ್‌ಟನ್‌ ಮತ್ತು ಪ್ಯಾಮಲ (ಪ್ಯಾಮ್‌) ಆಸ್ಟ್ರಲೇಷ್ಯಾದ ಶಾಖಾ ಕಚೇರಿಯಲ್ಲಿ ಕೆಲಸಮಾಡುತ್ತಿದ್ದಾರೆ. ಅವರು ಜೀವನದಲ್ಲಿ ತುಂಬ ಸಂತೋಷವಾಗಿ ಇದ್ದರೂ ಕೆಲವು ಕಷ್ಟಗಳನ್ನು ಎದುರಿಸಬೇಕಾಯಿತು. ಅವರು ಬೇರೆ ಬೇರೆ ಸಂಸ್ಕೃತಿಗೆ ಹೊಂದಿಕೊಳ್ಳಬೇಕಿತ್ತು. ಅವರ ಮಗು ಹೊಟ್ಟೆಯಲ್ಲೇ ತೀರಿಕೊಂಡಾಗ ತುಂಬ ನೋವು ಅನುಭವಿಸಿದರು. ಆದರೂ ಅವರಿಗೆ ದೇವರ ಮೇಲಿದ್ದ ಪ್ರೀತಿ, ಜನರ ಮೇಲಿದ್ದ ಪ್ರೀತಿ, ಸೇವೆಯಲ್ಲಿನ ಖುಷಿ ಕಡಿಮೆ ಆಗಲಿಲ್ಲ. ಈ ಸಂದರ್ಶನದಿಂದ ಅವರ ಜೀವನದ ಕೆಲವು ಸಿಹಿ-ಕಹಿ ಅನುಭವಗಳನ್ನು ತಿಳುಕೊಳ್ಳೋಣ.

ಬ್ರದರ್‌ ವಿನ್ಸ್‌ಟನ್‌, ನೀವು ಹೇಗೆ ದೇವರ ಬಗ್ಗೆ ತಿಳುಕೊಂಡ್ರಿ?

ನಾನು ಬೆಳೆದಿದ್ದು ಆಸ್ಟ್ರೇಲಿಯದ ಕ್ವೀನ್ಸ್‌ಲ್ಯಾಂಡ್‌ನಲ್ಲಿ. ನಮ್ಮ ಕುಟುಂಬಕ್ಕೆ ದೇವರ ಮೇಲೆ ಅಷ್ಟೇನು ನಂಬಿಕೆ ಇರಲಿಲ್ಲ. ಒಂದು ದೊಡ್ಡ ಜಮೀನಲ್ಲಿ ನಮ್ಮ ಮನೆ ಇತ್ತು. ನಮ್ಮ ಮನೆ ಊರಿಂದ ತುಂಬ ದೂರ ಇದ್ದದರಿಂದ ನಮ್ಮ ಕುಟುಂಬದವರನ್ನು ಬಿಟ್ಟು ಬೇರೆಯವರ ಜೊತೆ ಅಷ್ಟಾಗಿ ಬೆರೆಯಲು ಆಗುತ್ತಿರಲಿಲ್ಲ. ದೇವರ ಬಗ್ಗೆ ತಿಳುಕೊಳ್ಳಬೇಕು ಅಂತ ಅನಿಸಿದಾಗ ನಂಗೆ 12 ವರ್ಷ. ನಂಗೆ ನಿನ್ನ ಬಗ್ಗೆ ತಿಳ್ಕೊಳ್ಳೋ ಅವಕಾಶ ಕೊಡು ಅಂತ ದೇವರ ಹತ್ತಿರ ಪ್ರಾರ್ಥಿಸುತ್ತಿದ್ದೆ. ನಂತರ ವ್ಯವಸಾಯ ಬಿಟ್ಟು ದಕ್ಷಿಣ ಆಸ್ಟ್ರೇಲಿಯದಲ್ಲಿರುವ ಆ್ಯಡಲೇಡ್‌ಗೆ ಹೋಗಿ ಬೇರೆ ಕೆಲಸ ಮಾಡಲು ಆರಂಭಿಸಿದೆ. ಒಮ್ಮೆ ನಾನು ರಜೆಯಲ್ಲಿ ಸಿಡ್ನಿಗೆ ಹೋದಾಗ ನನಗೆ ಪ್ಯಾಮ್‌ನ ಪರಿಚಯ ಆಯಿತು. ನನಗಾಗ 21 ವರ್ಷ. ಅವಳು ನನಗೆ ಬ್ರಿಟಿಷ್‌-ಇಸ್ರೇಲ್‌ ಧಾರ್ಮಿಕ ಗುಂಪಿನ ಬಗ್ಗೆ ಹೇಳಿದಳು. ಕ್ರಿ. ಪೂ. 8​ನೇ ಶತಮಾನದಲ್ಲಿ ಬಂಧಿವಾಸಕ್ಕೆ ಹೋದ ಇಸ್ರಾಯೇಲಿನ ಉತ್ತರದ ಹತ್ತು ಕುಲಗಳಿಗೆ ತಾವು ಸೇರಿದವರು ಎಂದು ಆ ಗುಂಪಿನವರು ಹೇಳುತ್ತಿದ್ದರು. ನಾನು ಆ್ಯಡಲೇಡ್‌ಗೆ ವಾಪಸ್‌ ಬಂದಾಗ ನನ್ನ ಜೊತೆ ಕೆಲಸ ಮಾಡುತ್ತಿದ್ದವನ ಹತ್ತಿರ ಈ ವಿಷಯದ ಬಗ್ಗೆ ಹೇಳಿದೆ. ಅವನು ಯೆಹೋವನ ಸಾಕ್ಷಿಗಳ ಹತ್ತಿರ ಬೈಬಲ್‌ ಅಧ್ಯಯನ ಮಾಡುತ್ತಿದ್ದ. ಅವರ ನಂಬಿಕೆಗಳ ಬಗ್ಗೆ ತುಂಬ ವಿಷಯ ಹೇಳಿದ. ಆಗ ನನಗೆ ಚಿಕ್ಕವನಿದ್ದಾಗ ನಾನು ಮಾಡುತ್ತಿದ್ದ ಪ್ರಾರ್ಥನೆಗೆ ಉತ್ತರ ಸಿಕ್ಕಿತು ಅಂತ ಅನಿಸಿತು. ಯಾಕೆಂದರೆ ನಾನು ನನ್ನ ಸೃಷ್ಟಿಕರ್ತನ ಮತ್ತು ಆತನ ರಾಜ್ಯದ ಬಗ್ಗೆ ಕಲಿತೆ. ‘ಬಹು ಬೆಲೆಯುಳ್ಳ ಮುತ್ತು’ ನನಗೆ ಸಿಕ್ತು!—ಮತ್ತಾ. 13:45, 46.

ಸಿಸ್ಟರ್‌ ಪ್ಯಾಮಲ, ನೀವು ಸಹ ಚಿಕ್ಕ ವಯಸ್ಸಲೇ ಬೆಲೆಯುಳ್ಳ ಮುತ್ತನ್ನು ಹುಡುಕಲು ಶುರುಮಾಡಿದ್ರಿ. ಅದು ಹೇಗೆ ಸಿಕ್ಕಿತು ಅಂತ ಹೇಳ್ತೀರಾ?

ನಾನು ಬೆಳೆದಿದ್ದು ನ್ಯೂ ಸೌತ್‌ ವೇಲ್ಸ್‌ನಲ್ಲಿರುವ ಕಾಫ್ಸ್‌ ಹಾರ್ಬರ್‌ ಎಂಬ ಪಟ್ಟಣದಲ್ಲಿ. ನಮ್ಮ ಕುಟುಂಬದವರಿಗೆ ದೇವರ ಮೇಲೆ ತುಂಬ ಭಕ್ತಿ ಇತ್ತು. ನನ್ನ ಹೆತ್ತವರು ಮತ್ತು ಅಜ್ಜ-ಅಜ್ಜಿ ಬ್ರಿಟಿಷ್‌-ಇಸ್ರೇಲ್‌ ಗುಂಪಿನ ಬೋಧನೆಗಳನ್ನು ನಂಬುತ್ತಿದ್ದರು. ನನಗೆ, ನನ್ನ ಅಕ್ಕನಿಗೆ, ತಮ್ಮನಿಗೆ, ದೊಡ್ಡಮ್ಮ-ಚಿಕ್ಕಮ್ಮನ ಮಕ್ಕಳಿಗೆ ದೇವರು ಬ್ರಿಟಿಷ್‌ ವಂಶಸ್ಥರನ್ನು ಜಾಸ್ತಿ ಇಷ್ಟಪಡುತ್ತಾರೆ ಅಂತ ಚಿಕ್ಕಂದಿನಿಂದಲೇ ಹೇಳಿಕೊಟ್ಟಿದ್ದರು. ಆದರೆ ನಾನು ಅದನ್ನು ನಂಬುತ್ತಿರಲಿಲ್ಲ. ನಾನು ದೇವರಿಗೆ ಹತ್ತಿರ ಆಗಿದ್ದೀನಿ ಅಂತನೂ ಅನಿಸುತ್ತಿರಲಿಲ್ಲ. ನನಗೆ 14 ವರ್ಷ ಆದಾಗ ನಾನು ದೇವರ ಬಗ್ಗೆ ತಿಳುಕೊಳ್ಳಲು ಆ್ಯಂಗ್ಲಿಕನ್‌, ಬ್ಯಾಪ್ಟಿಸ್ಟ್‌, ಸೆವೆಂತ್‌ ಡೇ ಅಡ್ವೆಂಟಿಸ್ಟ್‌ನಂಥ ತುಂಬ ಚರ್ಚುಗಳಿಗೆ ಹೋದೆ. ಆದರೆ ಅಲ್ಲೆಲ್ಲೂ ನನಗೆ ದೇವರ ಬಗ್ಗೆ ತಿಳುಕೊಳ್ಳೋಕೆ ಆಗಲಿಲ್ಲ.

ಆಮೇಲೆ ನಮ್ಮ ಕುಟುಂಬ ಸಿಡ್ನಿಗೆ ಸ್ಥಳಾಂತರಿಸಿತು. ಅಲ್ಲಿ ರಜೆಗೆಂದು ಬಂದಿದ್ದ ವಿನ್ಸ್‌ಟನ್‌ ನನಗೆ ಸಿಕ್ಕಿದರು. ಅವರು ಈಗಾಗಲೇ ಹೇಳಿದಂತೆ, ನಾವಿಬ್ಬರೂ ಮಾಡುತ್ತಿದ್ದ ಧಾರ್ಮಿಕ ಚರ್ಚೆಗಳಿಂದಾಗಿ, ವಿನ್ಸ್‌ಟನ್‌ ಸಾಕ್ಷಿಗಳ ಜೊತೆ ಬೈಬಲ್‌ ಅಧ್ಯಯನ ಮಾಡಲು ಆರಂಭಿಸಿದರು. ಇದಾದ ಮೇಲೆ ಅವರು ನನಗೆ ಕಳುಹಿಸುತ್ತಿದ್ದ ಪತ್ರಗಳಲ್ಲಿ ವಚನಗಳೇ ಇರುತ್ತಿತ್ತು. ಮೊದಮೊದಲು ನನಗೆ ಅದು ಇಷ್ಟ ಆಗುತ್ತಿರಲಿಲ್ಲ, ಸಿಟ್ಟು ಕೂಡ ಬರುತ್ತಿತ್ತು. ಆದರೆ ಅವರು ದೇವರ ಸತ್ಯದ ಬಗ್ಗೆ ಬರೆಯುತ್ತಿದ್ದರು ಅಂತ ನಿಧಾನವಾಗಿ ಅರ್ಥ ಆಯಿತು.

ವಿನ್ಸ್‌ಟನ್‌ ಆ್ಯಡಲೇಡ್‌ನಲ್ಲಿ ಇದ್ದಿದರಿಂದ ನಾನು 1962​ರಲ್ಲಿ ಅಲ್ಲಿಗೆ ಹೋದೆ. ಅಲ್ಲಿ ಸಾಕ್ಷಿಗಳಾಗಿದ್ದ ದಂಪತಿಯ ಮನೆಯಲ್ಲಿ ನನಗೆ ಉಳುಕೊಳ್ಳಲು ವಿನ್ಸ್‌ಟನ್‌ ವ್ಯವಸ್ಥೆ ಮಾಡಿದ್ದರು. ಆ ದಂಪತಿಯ ಹೆಸರು ತಾಮಸ್‌ ಸ್ಲೋಮನ್‌ ಮತ್ತು ಜೇನಸ್‌. ಇವರು ಹಿಂದೆ ಪಾಪುವ ನ್ಯೂ ಗಿನಿಯಲ್ಲಿ ಮಿಷನರಿಗಳಾಗಿದ್ದರು. ಇಬ್ಬರೂ ನನ್ನೊಂದಿಗೆ ತುಂಬ ದಯೆಯಿಂದ ನಡಕೊಂಡರು. ನನಗೆ ಆಗಿನ್ನೂ 18 ವರ್ಷ. ಅವರು ನನಗೆ ಯೆಹೋವನ ಬಗ್ಗೆ ಇನ್ನೂ ಹೆಚ್ಚು ತಿಳುಕೊಳ್ಳಲು ಸಹಾಯಮಾಡಿದರು. ಇದರಿಂದಾಗಿ ನಾನು ಬೈಬಲ್‌ ಅಧ್ಯಯನ ತಗೊಳ್ಳಲು ಶುರುಮಾಡಿದೆ. ಇದೇ ಸತ್ಯ ಎಂದು ಮನವರಿಕೆ ಆಗಲು ನನಗೆ ಹೆಚ್ಚು ಸಮಯ ಹಿಡಿಯಲಿಲ್ಲ. ನಾನು ಮತ್ತು ವಿನ್ಸ್‌ಟನ್‌ ಮದುವೆಯಾದ ಕೂಡಲೇ ನಮ್ಮ ಜೀವನವನ್ನು ಯೆಹೋವನ ಸೇವೆಗಾಗಿ ಮುಡಿಪಾಗಿಟ್ವಿ. ಇದರಿಂದ ನಮಗೆ ತುಂಬ ಆಶೀರ್ವಾದ ಸಿಕ್ಕಿತು. ನಮಗೆ ಕೆಲವು ಪರೀಕ್ಷೆಗಳು ಎದುರಾದರೂ ನಮಗೆ ಸಿಕ್ಕಿದ್ದ ಮುತ್ತಿನ ಮೇಲೆ ನಮಗಿದ್ದ ಗಣ್ಯತೆ ಹೆಚ್ಚಾಯ್ತೇ ಹೊರತು ಕಮ್ಮಿ ಆಗಲಿಲ್ಲ.

ಬ್ರದರ್‌, ಯೆಹೋವನ ಸೇವೆ ಆರಂಭಿಸಿದ ಹೊಸದರಲ್ಲಿ ಹೇಗಿತ್ತು ಅಂತ ಹೇಳ್ತೀರಾ?

ಸಂಚರಣ ಕೆಲಸ ಮಾಡುವಾಗ ಪೇನ್‌ ದಂಪತಿ ಹೋದ ಸ್ಥಳಗಳನ್ನು ತೋರಿಸುತ್ತಿರುವ ನಕ್ಷೆ; ಕೆಲವು ದ್ವೀಪಗಳ ಅಂಚೆ ಚೀಟಿಗಳು; ಟುವಾಲುವಿನ ಫುನಾಫುಟಿಯಲ್ಲಿರುವ ದ್ವೀಪ

1. ಸಂಚರಣ ಕೆಲಸ ಮಾಡುವಾಗ ನಾವು ಹೋದ ಸ್ಥಳಗಳನ್ನು ತೋರಿಸುತ್ತಿರುವ ನಕ್ಷೆ

2. ಕೆಲವು ದ್ವೀಪಗಳ ಅಂಚೆ ಚೀಟಿಗಳು. ಕಿರಿಬಾಟಿ ಮತ್ತು ಟುವಾಲುವನ್ನು ಹಿಂದೆ ಗಿಲ್ಬರ್ಟ್‌ ಮತ್ತು ಎಲಿಸ್‌ ದ್ವೀಪಗಳು ಎಂದು ಕರೆಯಲಾಗುತ್ತಿತ್ತು

3. ಟುವಾಲು ದೇಶದ ಫುನಾಫುಟಿಯಲ್ಲಿರುವ ಸುಂದರವಾದ ಹವಳದ ದ್ವೀಪ. ಮಿಷನರಿಗಳನ್ನು ನೇಮಿಸುವ ಮುಂಚೆ ನಾವು ಭೇಟಿ ನೀಡಿದ್ದ ಹಲವು ದ್ವೀಪಗಳಲ್ಲಿ ಇದು ಒಂದು

ನಾನು ಮತ್ತು ಪ್ಯಾಮ್‌ ಮದುವೆಯಾದ ಸ್ವಲ್ಪದರಲ್ಲೇ ಯೆಹೋವನು ‘ಮಹಾ ದ್ವಾರಗಳನ್ನು’ ತೆರೆದು ಸೇವೆಯನ್ನು ಹೆಚ್ಚಿಸಲು ಅವಕಾಶ ಕೊಟ್ಟನು. (1 ಕೊರಿಂ. 16:9) ಮೊದಲ ದ್ವಾರಕ್ಕೆ ಹೋಗುವ ದಾರಿಯನ್ನು ಸಹೋದರ ಜ್ಯಾಕ್‌ ಪೋರ್ಟರ್‌ ನಮಗೆ ತೋರಿಸಿದರು. ಜ್ಯಾಕ್‌ ಅವರು ನಮ್ಮ ಪುಟ್ಟ ಸಭೆಗೆ ಸಂಚರಣ ಮೇಲ್ವಿಚಾರಕರಾಗಿ ಬಂದಿದ್ದರು. (ಈಗ ಅವರು ನನ್ನೊಂದಿಗೆ ಆಸ್ಟ್ರಲೇಷ್ಯಾದ ಶಾಖಾ ಸಮಿತಿಯ ಸದಸ್ಯರಾಗಿ ಸೇವೆಸಲ್ಲಿಸುತ್ತಿದ್ದಾರೆ.) ಜ್ಯಾಕ್‌ ಮತ್ತು ಅವರ ಹೆಂಡತಿ ರೋಸ್ಲಿನ್‌ ನಾವು ಪಯನೀಯರ್‌ ಸೇವೆ ಮಾಡುವ ಗುರಿ ಇಡಲು ಸಹಾಯ ಮಾಡಿದರು. ನಾವು ಪಯನೀಯರ್‌ ಸೇವೆಯಲ್ಲಿ 5 ವರ್ಷ ಆನಂದಿಸಿದೆವು. ನನಗೆ 29 ವರ್ಷ ಆದಾಗ, ನನ್ನನ್ನು ಮತ್ತು ಪ್ಯಾಮ್‌ ಅನ್ನು ದಕ್ಷಿಣ ಪೆಸಿಫಿಕ್‌ ದ್ವೀಪಗಳಲ್ಲಿ ಸಂಚರಣ ಕೆಲಸ ಮಾಡಲು ನೇಮಿಸಲಾಯಿತು. ಈಗ ಆ ದ್ವೀಪಗಳು ಫಿಜಿ ಶಾಖೆಗೆ ಸೇರುತ್ತವೆ. ಆ ದ್ವೀಪಗಳ ಹೆಸರು ಅಮೆರಿಕನ್‌ ಸಮೋವ, ಸಮೋವ, ಕಿರಿಬಾಟಿ, ನಾವುರು, ನೂವೆ, ಟೋಕೆಲಾ, ಟಾಂಗ, ಟುವಾಲು ಮತ್ತು ವನುವಾಟು.

ಆ ದಿನಗಳಲ್ಲಿ, ಕೆಲವು ದೂರದ ದ್ವೀಪಗಳಲ್ಲಿದ್ದ ಜನರು ಯೆಹೋವನ ಸಾಕ್ಷಿಗಳೆಂದರೆ ಅಪಾಯಕಾರಿ ಜನರು ಅಂತ ನೆನಸುತ್ತಿದ್ದರು. ಹಾಗಾಗಿ ನಾವೂ ಜಾಗರೂಕರಾಗಿ, ವಿವೇಚನೆಯಿಂದ ನಡಕೊಳ್ಳಬೇಕಿತ್ತು. (ಮತ್ತಾ. 10:16) ಅಲ್ಲಿನ ಸಭೆಗಳಲ್ಲಿ ಸ್ವಲ್ಪನೇ ಸಹೋದರ-ಸಹೋದರಿಯರು ಇರುತ್ತಿದ್ದರು. ಅವರ ಮನೆ ಕೂಡ ಚಿಕ್ಕ-ಚಿಕ್ಕದಿತ್ತು. ಹಾಗಾಗಿ ಆ ಊರಿನ ಜನರ ಹತ್ತಿರ ಉಳುಕೊಳ್ಳಲು ಸ್ಥಳ ಕೇಳುತ್ತಿದ್ವಿ. ಅವರು ನಮ್ಮೊಂದಿಗೆ ಯಾವಾಗಲೂ ತುಂಬ ದಯೆಯಿಂದ ನಡಕೊಳ್ಳುತ್ತಿದ್ದರು.

ಬ್ರದರ್‌, ನಿಮಗೆ ಭಾಷಾಂತರ ಕೆಲಸ ಅಂದರೆ ತುಂಬ ಇಷ್ಟ. ನಿಮಗೆ ಈ ಕೆಲಸದಲ್ಲಿ ಆಸಕ್ತಿ ಹೇಗೆ ಬಂತು?

ಸಮೋವದಲ್ಲಿ ವಿನ್ಸ್‌ಟನ್‌ ಪೇನ್‌ ಹಿರಿಯರಿಗಾಗಿರುವ ಶಾಲೆಯನ್ನು ನಡೆಸುತ್ತಿರುವುದು

ಸಮೋವದಲ್ಲಿ ಹಿರಿಯರಿಗಾಗಿರುವ ಶಾಲೆಯನ್ನು ನಡೆಸುತ್ತಿರುವುದು

ಟಾಂಗ ದ್ವೀಪದಲ್ಲಿ ನಾವು ಸೇವೆ ಆರಂಭಿಸಿದಾಗ ಟಾಂಗನ್‌ ಭಾಷೆಯಲ್ಲಿ ಕೆಲವೇ ಕೆಲವು ಕರಪತ್ರಗಳು ಮತ್ತು ಕಿರುಪುಸ್ತಕಗಳಿದ್ದವು. ಟಾಂಗನ್‌ ಒಂದು ಪಾಲಿನೇಷಿಯನ್‌ ಭಾಷೆ. ಸಹೋದರರು ಜನರೊಂದಿಗೆ ಬೈಬಲ್‌ ಅಧ್ಯಯನಗಳನ್ನು ಮಾಡಲು ಇಂಗ್ಲಿಷ್‌ ಭಾಷೆಯ ನಿತ್ಯಜೀವಕ್ಕೆ ನಡೆಸುವ ಸತ್ಯವು ಪುಸ್ತಕವನ್ನು ಉಪಯೋಗಿಸುತ್ತಿದ್ದರು. ಹಾಗಾಗಿ ಮೂರು ಸ್ಥಳೀಯ ಹಿರಿಯರ ಸಹಾಯದಿಂದ ಸತ್ಯ ಪುಸ್ತಕವನ್ನು ಟಾಂಗನ್‌ಗೆ ಭಾಷಾಂತರಿಸಿದ್ವಿ. ಇವರು ನಾಲ್ಕು ವಾರ ನಡೆದ ಹಿರಿಯರಿಗಾಗಿರುವ ಶಾಲೆಗೆ ಹಾಜರಾಗಿದ್ದರು. ಇವರಿಗೆ ಇಂಗ್ಲಿಷ್‌ ಭಾಷೆ ಅಷ್ಟು ಬರುತ್ತಿರಲಿಲ್ಲ. ಅವರು ಭಾಷಾಂತರಿಸಿ ಕೈಯಲ್ಲಿ ಬರೆದಿದ್ದನ್ನು ಪ್ಯಾಮ್‌ ಟೈಪ್‌ ಮಾಡಿಕೊಡುತ್ತಿದ್ದಳು. ಆಮೇಲೆ ಅದನ್ನು ಮುದ್ರಿಸಲು ಅಮೆರಿಕದ ಶಾಖೆಗೆ ಕಳುಹಿಸುತ್ತಿದ್ದೆವು. ಇಷ್ಟೆಲ್ಲಾ ಕೆಲಸ ಮುಗಿಯಲು ಎಂಟು ವಾರ ಹಿಡಿಯಿತು. ನಾವು ಅಷ್ಟೇನು ಚೆನ್ನಾಗಿ ಭಾಷಾಂತರಿಸದಿದ್ದರೂ, ಈ ಪುಸ್ತಕದಿಂದ ಟಾಂಗನ್‌ ಭಾಷೆ ಮಾತಾಡುವ ಎಷ್ಟೋ ಜನರಿಗೆ ಸತ್ಯ ಕಲಿಯಲು ಸಹಾಯವಾಯಿತು. ನಾನು ಮತ್ತು ಪ್ಯಾಮ್‌ ಭಾಷಾಂತರಗಾರರು ಅಲ್ಲದಿದ್ದರೂ ಈ ಅನುಭವದಿಂದ ನಮಗೆ ಭಾಷಾಂತರ ಕೆಲಸದಲ್ಲಿ ಆಸಕ್ತಿ ಹುಟ್ಟಿತು.

ಸಿಸ್ಟರ್‌, ಆಸ್ಟ್ರೇಲಿಯಕ್ಕೆ ಹೋಲಿಸುವಾಗ ದ್ವೀಪಗಳಲ್ಲಿನ ಜೀವನ ಹೇಗಿತ್ತು?

 ವಿನ್ಸ್‌ಟನ್‌ ಮತ್ತು ಪ್ಯಾಮಲ ಪೇನ್‌ ಒಂದು ಬಸ್‌ ಬಳಿ ನಿಂತಿದ್ದಾರೆ, ಸಂಚರಣ ಕೆಲಸ ಮಾಡುತ್ತಿದ್ದಾಗ ಅದೂ ಅವರ ಮನೆ ಆಗಿತ್ತು

ಸಂಚರಣ ಕೆಲಸ ಮಾಡುತ್ತಿದ್ದಾಗ ನಾವು ಉಳುಕೊಂಡಿದ್ದ ಒಂದು ಸ್ಥಳ

ತುಂಬಾನೇ ವ್ಯತ್ಯಾಸ ಇತ್ತು. ಸೊಳ್ಳೆ-ಇಲಿಗಳ ಕಾಟ, ಬಿಸಿಲಿನ ತಾಪ, ಸಹಿಸಕ್ಕಾಗದಷ್ಟು ಸೆಕೆ, ಕಾಯಿಲೆಗಳು, ಕೆಲವೊಮ್ಮೆ ಹೊಟ್ಟೆ ತುಂಬ ಊಟನೂ ಇರುತ್ತಿರಲಿಲ್ಲ. ಇಷ್ಟೆಲ್ಲಾ ಇದ್ದರೂ ದಿನದ ಕೊನೆಯಲ್ಲಿ ನಮ್ಮ ಫಾಲ್‌ನಿಂದ ಸಮುದ್ರವನ್ನು ನೋಡುವಾಗ ಹಾಯೆನಿಸುತ್ತಿತ್ತು. ಫಾಲ್‌ ಒಂದು ಸಮೋವನ್‌ ಭಾಷೆಯ ಪದ. ಪಾಲಿನೇಷಿಯನ್‌ ಜನರ ಮನೆಗಳನ್ನು ಹೀಗೆ ಕರೆಯುತ್ತಿದ್ದರು. ಈ ಮನೆಗಳಿಗೆ ಹುಲ್ಲಿನ ಚಾವಣಿ ಇರುತ್ತಿತ್ತು, ಗೋಡೆ ಇರುತ್ತಿರಲಿಲ್ಲ. ರಾತ್ರಿ ಚಂದ್ರನ ಬೆಳಕಿನಲ್ಲಿ ತೆಂಗಿನ ಮರಗಳು ಸ್ಪಷ್ಟವಾಗಿ ಕಾಣುತ್ತಿತ್ತು, ಚಂದ್ರನ ಬೆಳಕು ಸಮುದ್ರದ ಮೇಲೆ ಪ್ರತಿಫಲಿಸುತ್ತಿತ್ತು. ಇಂಥ ಸುಂದರ ರಾತ್ರಿಗಳಲ್ಲಿ ಧ್ಯಾನಿಸುತ್ತಾ, ಪ್ರಾರ್ಥಿಸುತ್ತಾ ನಮ್ಮ ಕಷ್ಟಗಳನ್ನು ಮರೆತು ಒಳ್ಳೇ ವಿಷಯಗಳ ಬಗ್ಗೆ ಯೋಚಿಸಲು ಸಾಧ್ಯವಾಗುತ್ತಿತ್ತು.

ಅಲ್ಲಿನ ಮಕ್ಕಳ ಜೊತೆ ಇರುವಾಗಂತೂ ತುಂಬ ಸಂತೋಷ ಆಗುತ್ತಿತ್ತು. ನಮ್ಮಂಥ ಬಿಳಿ ವಿದೇಶಿಯರನ್ನು ನೋಡಿದರೆ ಮಕ್ಕಳಿಗೆ ಅದೇನೋ ಕುತೂಹಲ. ಒಮ್ಮೆ ನೂವೆಗೆ ಹೋದಾಗ, ಅಲ್ಲಿದ್ದ ಒಬ್ಬ ಪುಟ್ಟ ಹುಡುಗ ವಿನ್ಸ್‌ಟನ್‌ ಕೈಮೇಲಿನ ರೋಮವನ್ನು ಸವರಿ, “ನಿಮ್ಮ ಕೈ ಮೇಲಿರುವ ಗರಿ ಚೆನ್ನಾಗಿದೆ” ಅಂತ ಹೇಳಿದ. ಆ ಪುಟ್ಟ ಹುಡುಗ ಅಷ್ಟು ರೋಮ ಇರುವ ಕೈಯನ್ನು ನೋಡೇ ಇರಲಿಲ್ಲ. ಹಾಗಾಗಿ ಅದನ್ನು ಹೇಗೆ ಹೇಳಬೇಕು ಅಂತಾನೂ ಅವನಿಗೆ ಗೊತ್ತಾಗಲಿಲ್ಲ.

ಅಲ್ಲಿನ ಜನರು ಬಡತನದಲ್ಲಿ ಬೇಯೋದನ್ನು ನೋಡುವಾಗ ನಮ್ಮ ಹೃದಯ ಹಿಂಡಿದಂತೆ ಆಗುತ್ತಿತ್ತು. ಅಲ್ಲಿನ ಸುತ್ತಮುತ್ತ ಪ್ರಕೃತಿ ತುಂಬಾ ಸುಂದರವಾಗಿತ್ತು, ಆದರೆ ಅಲ್ಲಿ ಆಸ್ಪತ್ರೆಯ ಸೌಕರ್ಯ ಇರಲಿಲ್ಲ. ಜೊತೆಗೆ ಕುಡಿಯುವ ನೀರಿನ ಅಭಾವ ಇತ್ತು. ಆದರೂ ಅಲ್ಲಿನ ಸಹೋದರರು ಈ ವಿಷಯಗಳಿಗಾಗಿ ತಲೆ ಕೆಡಿಸಿಕೊಳ್ಳುತ್ತಾ ಇರಲಿಲ್ಲ, ಈ ರೀತಿಯ ಜೀವನ ಅವರಿಗೆ ಮಾಮೂಲಾಗಿಬಿಟ್ಟಿತ್ತು. ಅವರ ಕುಟುಂಬದಲ್ಲಿ ಸಂತೋಷ-ನೆಮ್ಮದಿ ಇತ್ತು, ಆರಾಧನೆಗಾಗಿ ಒಂದು ಸ್ಥಳ ಇತ್ತು ಮತ್ತು ಯೆಹೋವನನ್ನು ಸ್ತುತಿಸುವ ಸುಯೋಗ ಸಹ ಇತ್ತು. ಹಾಗಾಗಿ ಅವರು ತೃಪ್ತರಾಗಿದ್ದರು. ಅವರ ಈ ಮಾದರಿಯಿಂದಾಗಿ, ನಮ್ಮ ಸೇವೆಗೆ ಗಮನ ಕೊಡಲು ಮತ್ತು ಜೀವನವನ್ನು ಸರಳವಾಗಿ ಇಟ್ಟುಕೊಳ್ಳಲು ಸಾಧ್ಯವಾಯಿತು.

ಸಿಸ್ಟರ್‌, ಕೆಲವೊಮ್ಮೆ ನೀವೇ ನೀರು ತರಬೇಕಾಗಿತ್ತು, ಅಡಿಗೆನೂ ಹೊಸ ವಿಧಾನದಲ್ಲಿ ಮಾಡಬೇಕಾಗಿತ್ತು. ಇದನ್ನೆಲ್ಲಾ ಹೇಗೆ ಮಾಡುತ್ತಿದ್ದಿರಿ?

ಟಾಂಗದಲ್ಲಿ ಪ್ಯಾಮಲ ಬಕೆಟ್‌ ಮತ್ತು ಟಬ್‌ನಲ್ಲಿ ಬಟ್ಟೆ ಒಗೆಯುತ್ತಿರುವುದು

ಟಾಂಗ ದ್ವೀಪದಲ್ಲಿ ಪ್ಯಾಮಲ ಬಟ್ಟೆ ಒಗೆಯುತ್ತಿರುವುದು

ಅದಕ್ಕೆ ನಾನು ನನ್ನ ಅಪ್ಪಂಗೆ ಥ್ಯಾಂಕ್ಸ್‌ ಹೇಳಬೇಕು. ಅವರು ನನಗೆ ತುಂಬಾ ವಿಷಯಗಳನ್ನು ಹೇಳಿಕೊಟ್ಟಿದ್ದರು. ಹೊರಗೆ ಒಲೆ ಹಾಕಿ ಸೌದೆಯಲ್ಲಿ ಅಡುಗೆ ಮಾಡೋದು ಹೇಗೆ, ಏನಿದೆಯೋ ಅದರಲ್ಲೇ ಜೀವನ ಮಾಡೋದು ಹೇಗೆ ಅಂತೆಲ್ಲಾ ಹೇಳಿಕೊಟ್ಟಿದ್ದರು. ಒಮ್ಮೆ ಕಿರಿಬಾಟಿಗೆ ಭೇಟಿಕೊಟ್ಟಾಗ ನಾವು ಒಂದು ಚಿಕ್ಕ ಮನೆಯಲ್ಲಿ ಉಳುಕೊಂಡ್ವಿ. ಅದಕ್ಕೆ ಹುಲ್ಲಿನ ಚಾವಣಿ, ಬಿದಿರಿನ ಗೋಡೆ ಇತ್ತು. ಸಮುದ್ರದಲ್ಲಿ ಸಿಗುತ್ತಿದ್ದ ಹವಳವನ್ನು ಕುಟ್ಟಿ ಜಲ್ಲಿ ಮಾಡಿ ನೆಲಕ್ಕೆ ಹಾಕಿದ್ದರು. ಅಡುಗೆ ಮಾಡಲು ನಾನು ನೆಲವನ್ನು ಅಗೆದು, ತೆಂಗಿನ ತೊಗಟೆಯನ್ನು ಹಾಕಿ ಬೆಂಕಿ ಹೊತ್ತಿಸುತ್ತಿದ್ದೆ. ನೀರು ತರಲು ಒಂದು ಬಾವಿಯ ಹತ್ತಿರ ಹೋಗಬೇಕಿತ್ತು. ಅಲ್ಲಿ ಹೆಂಗಸರು ಸಾಲುಸಾಲಾಗಿ ನಿಂತಿದ್ದರು. ನಾನೂ ಹೋಗಿ ಆ ಸಾಲಿನಲ್ಲಿ ನಿಂತೆ. ನೀರನ್ನು ಮೇಲಕ್ಕೆ ಎತ್ತಲು ಆರು ಅಡಿ ಉದ್ದದ ಕೋಲಿಗೆ ಹಗ್ಗ ಕಟ್ಟಿದ್ದರು, ಹಗ್ಗಕ್ಕೆ ಒಂದು ಕ್ಯಾನನ್ನು ಕಟ್ಟಿದ್ದರು. ಸಾಲಿನಲ್ಲಿದ್ದ ಹೆಂಗಸರು ಒಬ್ಬೊಬ್ಬರಾಗಿ ಆ ಕ್ಯಾನನ್ನು ಬಾವಿಗೆ ಹಾಕುತ್ತಿದ್ದರು. ಆಗ ಆ ಕ್ಯಾನ್‌ ಒಂದು ಕಡೆಗೆ ಮಗುಚಿಕೊಂಡು ನೀರು ತುಂಬಿಕೊಳ್ಳುತ್ತಿತ್ತು. ನನ್ನ ಸರದಿ ಬರುವವರೆಗೂ ಇದು ಸುಲಭ ಅಂತ ನನಗೆ ಅನಿಸಿತು. ಆದರೆ ನನ್ನ ಸರದಿ ಬಂದಾಗ ಕ್ಯಾನನ್ನು ಎಷ್ಟು ಸಲ ಬಾವಿಗೆ ಹಾಕಿದರೂ ಅದು ತೇಲುತ್ತಿತ್ತೇ ಹೊರತು ನೀರು ತುಂಬಿಕೊಳ್ಳಲಿಲ್ಲ. ನನ್ನ ಫಜೀತಿ ನೋಡಿ ಹೆಂಗಸರೆಲ್ಲಾ ನಗೋಕೆ ಶುರುಮಾಡಿದರು. ಅವರು ನಗೋದನ್ನು ನಿಲ್ಲಿಸಿದ ಮೇಲೆ, ಒಬ್ಬ ಹೆಂಗಸು ಬಂದು ನನಗೆ ಸಹಾಯಮಾಡಿದಳು. ಹೀಗೆ ಸ್ಥಳೀಯರು ನಮಗೆ ಯಾವಾಗಲೂ ದಯೆ ತೋರಿಸುತ್ತಿದ್ದರು, ತಮ್ಮ ಕೈಲಾದ ಸಹಾಯನೂ ಮಾಡುತ್ತಿದ್ದರು.

ದ್ವೀಪಗಳಲ್ಲಿ ಸೇವೆ ಮಾಡೋ ನೇಮಕಾನ ನೀವಿಬ್ಬರು ತುಂಬಾ ಇಷ್ಟಪಟ್ಟಿರಿ. ಅದರ ಸವಿ ನೆನಪುಗಳನ್ನು ನಮ್ಮೊಟ್ಟಿಗೆ ಹಂಚಿಕೊಳ್ಳುತ್ತೀರಾ?

ವಿನ್ಸ್‌ಟನ್‌: ಅಲ್ಲಿನ ಸಂಸ್ಕೃತಿಗೆ ಹೊಂದಿಕೊಳ್ಳಲು ನಮಗೆ ಸ್ವಲ್ಪ ಸಮಯ ಹಿಡೀತು. ಉದಾಹರಣೆಗೆ, ಅಲ್ಲಿನ ಸಹೋದರರು ನಮ್ಮನ್ನು ಊಟಕ್ಕೆ ಕರೆದಾಗ ಅವರು ಮಾಡಿರೋ ಅಡಿಗೆ ಎಲ್ಲಾ ನಮ್ಮ ಮುಂದೆ ತಂದು ಇಡುತ್ತಿದ್ದರು. ಮೊದಮೊದಲು ನಾವು ಅವರಿಗೆ ಊಟ ಉಳಿಸಬೇಕು ಅಂತ ಗೊತ್ತಿರಲಿಲ್ಲ. ನಾವೇ ಪೂರ್ತಿ ತಿಂದು ಖಾಲಿ ಮಾಡಿಬಿಡುತ್ತಿದ್ವಿ. ಆದರೆ ನಮಗೆ ಇದರ ಬಗ್ಗೆ ಗೊತ್ತಾದ ಮೇಲೆ ಅವರಿಗೂ ಊಟ ಉಳಿಸುತ್ತಿದ್ವಿ. ನಾವು ಇಷ್ಟೆಲ್ಲಾ ಎಡವಟ್ಟು ಮಾಡಿದರೂ ಸಹೋದರರು ನಮ್ಮನ್ನು ಅರ್ಥಮಾಡಿಕೊಳ್ಳುತ್ತಿದ್ದರು. ನಾವು ಆರು ತಿಂಗಳಿಗೊಮ್ಮೆ ಭೇಟಿ ಮಾಡಿದಾಗ ನಮ್ಮನ್ನು ಖುಷಿಯಿಂದ ಬರಮಾಡಿಕೊಳ್ಳುತ್ತಿದ್ದರು. ಯಾಕೆಂದರೆ ತಮ್ಮ ಸಭೆಯಲ್ಲಿದ್ದವರನ್ನು ಬಿಟ್ಟು ಅವರು ನೋಡಿದ್ದ ಬೇರೆ ಸಾಕ್ಷಿಗಳು ಅಂದರೆ ನಾವಿಬ್ಬರೇ.

ನೂವೆ ದ್ವೀಪದಲ್ಲಿ ವಿನ್ಸ್‌ಟನ್‌ ಒಂದು ಗುಂಪನ್ನು ಸೇವೆಗೆ ಕರೆದುಕೊಂಡು ಹೋಗುತ್ತಿದ್ದಾರೆ, ಅವರೆಲ್ಲ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾರೆ

ನೂವೆ ದ್ವೀಪದಲ್ಲಿ ಒಂದು ಗುಂಪನ್ನು ಸೇವೆಗೆ ಕರೆದುಕೊಂಡು ಹೋಗುತ್ತಿರುವುದು

ನಮ್ಮ ಭೇಟಿಯಿಂದಾಗಿ ಅಲ್ಲಿನ ಸ್ಥಳೀಯ ಜನರಿಗೆ ಒಳ್ಳೇ ಸಾಕ್ಷಿ ನೀಡಲು ಸಹ ಸಾಧ್ಯವಾಯಿತು. ಆ ಜನರು ಸಾಕ್ಷಿಗಳೆಂದರೆ ಅಲ್ಲಿದ್ದ ಸಹೋದರರೇ ಶುರುಮಾಡಿದ್ದ ಹೊಸ ಧರ್ಮ ಅಂತ ಅಂದುಕೊಂಡಿದ್ದರು. ಆದರೆ ಬೇರೆ ದೇಶದವರಾದ ನಾವು ಸಹೋದರರನ್ನು ಭೇಟಿ ಆದಾಗ, ಯೆಹೋವನ ಸಾಕ್ಷಿಗಳು ಬೇರೆ ಕಡೆನೂ ಇದ್ದಾರೆ ಅಂತ ಅಲ್ಲಿನ ಜನರು ತಿಳುಕೊಂಡರು ಮತ್ತು ನಾವು ತೋರಿಸಿದ ಪ್ರೀತಿ, ಕಾಳಜಿ ಅವರ ಮೇಲೆ ತುಂಬ ಪ್ರಭಾವ ಬೀರಿತು.

ಪ್ಯಾಮ್‌: ನನ್ನ ಮನಸ್ಸಲ್ಲಿ ಇನ್ನೂ ಹಚ್ಚಹಸುರಾಗಿ ಇರುವ ಒಂದು ಘಟನೆ ಕಿರಿಬಾಟಿಯಲ್ಲಿ ನಡೆಯಿತು. ಅಲ್ಲಿನ ಸಭೆಯಲ್ಲಿ ತುಂಬ ಕಡಿಮೆ ಸಹೋದರ-ಸಹೋದರಿಯರು ಇದ್ದರು. ಅಲ್ಲಿ ಒಬ್ಬರೇ ಒಬ್ಬ ಹಿರಿಯರು ಇದ್ದರು. ಅವರ ಹೆಸರು ಸಿನಕೈ ಮಟೆರ. ಅವರು ನಮ್ಮನ್ನು ತಮ್ಮ ಕೈಲಾದಷ್ಟು ಚೆನ್ನಾಗಿ ನೋಡಿಕೊಂಡರು. ಅವರು ಒಂದಿನ ಒಂದು ಬುಟ್ಟಿಯಲ್ಲಿ ಒಂದೇ ಒಂದು ಮೊಟ್ಟೆಯನ್ನು ತಂದು “ಇದನ್ನು ನಿಮಗೇ ಅಂತ ತಂದೆ” ಎಂದು ಹೇಳಿ ಕೊಟ್ಟು ಹೋದರು. ಆಗ ಕೋಳಿ ಮೊಟ್ಟೆ ತಿನ್ನಲು ಸಿಗುತ್ತಿದ್ದದ್ದು ತುಂಬಾನೇ ಅಪರೂಪ. ಅದೊಂದು ಸಣ್ಣ ಉಡುಗೊರೆ ಆದರೂ ಅದನ್ನು ನಾವು ಇವತ್ತಿಗೂ ಮರೆತಿಲ್ಲ.

ಸಿಸ್ಟರ್‌, ಕೆಲವು ವರ್ಷಗಳ ನಂತರ ನಿಮ್ಮ ಹೊಟ್ಟೇಲಿದ್ದ ಮಗು ತೀರಿಹೋಯಿತು. ಈ ನೋವಿನಿಂದ ಹೊರಗೆ ಬರಲು ನಿಮಗೆ ಯಾವುದು ಸಹಾಯಮಾಡಿತು?

1973​ರಲ್ಲಿ ನಾವು ದಕ್ಷಿಣ ಪೆಸಿಫಿಕ್‌ನಲ್ಲಿ ಇದ್ದಾಗ ನಾನು ಗರ್ಭಿಣಿ ಆದೆ. ಹಾಗಾಗಿ ನಾವು ಆಸ್ಟ್ರೇಲಿಯಕ್ಕೆ ವಾಪಸ್‌ ಬಂದ್ವಿ. ಆದರೆ ನಾಲ್ಕು ತಿಂಗಳಲ್ಲೇ ನಮ್ಮ ಮಗು ಹೊಟ್ಟೆಯಲ್ಲೇ ತೀರಿಹೋಯಿತು. ಇದರಿಂದ ವಿನ್ಸ್‌ಟನ್‌ಗೂ ತುಂಬ ದುಃಖ ಆಯಿತು. ಸಮಯ ಕಳೆದಂತೆ ಮಗುನ ಕಳಕೊಂಡ ದುಃಖ ಕಮ್ಮಿ ಆಯಿತು, ಆದರೆ ಪೂರ್ತಿ ಹೋಗಲಿಲ್ಲ. ಆದರೆ ಏಪ್ರಿಲ್‌ 15, 2009​ರ ಕಾವಲಿನಬುರುಜುವನ್ನು ಓದಿದಾಗ ನಮಗಿದ್ದ ಒಂಚೂರು ದುಃಖನೂ ಮಾಯವಾಯಿತು. ಅದರಲ್ಲಿದ್ದ “ವಾಚಕರಿಂದ ಪ್ರಶ್ನೆಗಳು” ಲೇಖನದಲ್ಲಿ ಹೀಗೆ ಒಂದು ಪ್ರಶ್ನೆ ಕೇಳಲಾಗಿತ್ತು: “ಗರ್ಭದಲ್ಲಿ ಸಾಯುವ ಶಿಶುವಿಗೆ ಪುನರುತ್ಥಾನವಾಗುವುದೋ?” ಈ ಲೇಖನದಿಂದ ಯೆಹೋವನು ಯಾವಾಗಲೂ ಸರಿಯಾದದ್ದನ್ನೇ ಮಾಡುತ್ತಾನೆಂಬ ನಮ್ಮ ನಂಬಿಕೆ ಬಲವಾಯಿತು. ‘ಪಿಶಾಚನ ಕೆಲಸಗಳನ್ನು ಭಂಗಗೊಳಿಸುವಂತೆ’ ಆತನ ಪುತ್ರನಿಗೆ ಪ್ರೀತಿಯಿಂದ ನಿರ್ದೇಶನ ಕೊಡುವ ಮೂಲಕ, ಈ ದುಷ್ಟ ವ್ಯವಸ್ಥೆಯಲ್ಲಿನ ಜೀವನವು ನಮಗೆ ಮಾಡಿರುವ ಅನೇಕಾನೇಕ ಗಾಯಗಳನ್ನು ಆತನು ಖಂಡಿತ ವಾಸಿಮಾಡುವನು ಎಂಬ ದೃಢಭರವಸೆ ನಮಗೆ ಬಂತು. (1 ಯೋಹಾ. 3:8) ಯೆಹೋವನ ಜನರಾಗಿ ನಮಗೆ ಸಿಕ್ಕಿರುವ ಅಮೂಲ್ಯ ಮುತ್ತನ್ನು ಇನ್ನಷ್ಟು ಹೆಚ್ಚು ಮಾನ್ಯ ಮಾಡಲು ಸಹ ಈ ಲೇಖನ ಸಹಾಯ ಮಾಡಿತು! ಒಂದು ವೇಳೆ ರಾಜ್ಯದ ನಿರೀಕ್ಷೆ ನಮಗೆ ಇರದಿದ್ದರೆ ನಮ್ಮ ಗತಿ ಏನಾಗುತ್ತಿತ್ತೋ ಗೊತ್ತಿಲ್ಲ.

ನಮ್ಮ ಮಗು ತೀರಿಕೊಂಡ ಮೇಲೆ ನಾವು ಮತ್ತೆ ಪೂರ್ಣ ಸಮಯದ ಸೇವೆಯನ್ನು ಆರಂಭಿಸಿದ್ವಿ. ಕೆಲವು ತಿಂಗಳು ಆಸ್ಟ್ರೇಲಿಯದ ಬೆತೆಲ್‌ನಲ್ಲಿ ಸೇವೆ ಮಾಡಿದ್ವಿ, ನಂತರ ಸಂಚರಣ ಕೆಲಸವನ್ನು ಪುನಃ ಶುರುಮಾಡಿದ್ವಿ. ನಾಲ್ಕು ವರ್ಷ ನ್ಯೂ ಸೌತ್‌ ವೇಲ್ಸ್‌ ಮತ್ತು ಸಿಡ್ನಿಯ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಮಾಡಿದ ಮೇಲೆ 1981​ರಲ್ಲಿ ನಮ್ಮನ್ನು ಆಸ್ಟ್ರೇಲಿಯದ ಬೆತೆಲ್‌ಗೆ ಆಮಂತ್ರಿಸಿದರು. ಈಗಲೂ ನಾವು ಇಲ್ಲೇ ಸೇವೆ ಮಾಡುತ್ತಿದ್ದೇವೆ.

ಬ್ರದರ್‌, ಆಸ್ಟ್ರಲೇಷ್ಯಾದ ಶಾಖಾ ಸಮಿತಿಯ ಸದಸ್ಯರಾಗಿ ಕೆಲಸ ಮಾಡಲು ದಕ್ಷಿಣ ಪೆಸಿಫಿಕ್‌ ದ್ವೀಪಗಳಲ್ಲಿನ ಅನುಭವದಿಂದ ಏನಾದರೂ ಸಹಾಯ ಆಯ್ತಾ?

ಹೌದು ತುಂಬಾ ವಿಧಗಳಲ್ಲಿ ಸಹಾಯ ಆಯಿತು. ಮೊದಲು, ಅಮೆರಿಕನ್‌ ಸಮೋವ ಮತ್ತು ಸಮೋವ ದ್ವೀಪಗಳು ಆಸ್ಟ್ರೇಲಿಯದ ಶಾಖೆಯ ಕೆಳಗಿತ್ತು. ನಂತರ ನ್ಯೂಜಿಲೆಂಡ್‌ ಶಾಖೆಯನ್ನು ಆಸ್ಟ್ರೇಲಿಯದ ಶಾಖೆಯೊಂದಿಗೆ ಸೇರಿಸಲಾಯಿತು. ಈಗ ಆಸ್ಟ್ರಲೇಷ್ಯಾ ಶಾಖೆಯ ಕೆಳಗೆ ಆಸ್ಟ್ರೇಲಿಯ, ಅಮೆರಿಕನ್‌ ಸಮೋವ ಮತ್ತು ಸಮೋವ, ಕುಕ್‌ ದ್ವೀಪಗಳು, ನ್ಯೂಜಿಲೆಂಡ್‌, ನೂವೆ, ಟೈಮರ್‌-ಲೆಸ್ಟಿ, ಟೋಕೆಲಾ, ಟಾಂಗ ಇದೆ. ಇವುಗಳಲ್ಲಿ ಕೆಲವು ದ್ವೀಪಗಳಿಗೆ ಶಾಖಾ ಪ್ರತಿನಿಧಿಯಾಗಿ ಭೇಟಿಮಾಡುವ ಸುಯೋಗ ನನಗೆ ಸಿಕ್ಕಿತು. ದ್ವೀಪಗಳಲ್ಲಿನ ನಂಬಿಗಸ್ತ ಸಹೋದರ-ಸಹೋದರಿಯರೊಂದಿಗೆ ನಾನು ಕೆಲಸ ಮಾಡಿದ ಅನುಭವಗಳು ಶಾಖಾ ಕಚೇರಿಯಲ್ಲಿ ಸೇವೆ ಮಾಡಲು ನನಗೆ ತುಂಬಾನೇ ಸಹಾಯ ಮಾಡಿತು.

ಆಸ್ಟ್ರಲೇಷ್ಯಾದ ಶಾಖೆಯಲ್ಲಿ ವಿನ್ಸ್‌ಟನ್‌ ಮತ್ತು ಪ್ಯಾಮಲ ಪೇನ್‌

ಆಸ್ಟ್ರಲೇಷ್ಯಾದ ಶಾಖೆಯಲ್ಲಿ ವಿನ್ಸ್‌ಟನ್‌ ಮತ್ತು ಪ್ಯಾಮಲ ಪೇನ್‌

ನನ್ನ ಮತ್ತು ಪ್ಯಾಮ್‌ನ ಅನುಭವ ನೋಡುವಾಗ ನಮ್ಮಿಬ್ಬರಿಗೂ ಅರ್ಥ ಆಗಿದ್ದು ಏನೆಂದರೆ, ದೊಡ್ಡವರಷ್ಟೇ ಅಲ್ಲ ಚಿಕ್ಕವರೂ ದೇವರ ಬಗ್ಗೆ ತಿಳುಕೊಳ್ಳಲು ಪ್ರಯತ್ನಿಸುತ್ತಾರೆ. ಅವರ ಕುಟುಂಬದವರು ಸತ್ಯ ಸ್ವೀಕರಿಸದಿದ್ದರೂ ಅವರು ‘ಬಹು ಬೆಲೆಯುಳ್ಳ ಮುತ್ತನ್ನು’ ಪಡಕೊಳ್ಳಲು ಬಯಸುತ್ತಾರೆ. (2 ಅರ. 5:2, 3; 2 ಪೂರ್ವ. 34:1-3) ಒಂದಂತೂ ನಿಜ, ಚಿಕ್ಕವರಾಗಲಿ ದೊಡ್ಡವರಾಗಲಿ ಎಲ್ಲರೂ ನಿತ್ಯಜೀವ ಪಡಕೊಳ್ಳಬೇಕೆಂದು ಯೆಹೋವನು ಬಯಸುತ್ತಾನೆ.

50 ವರ್ಷಗಳ ಹಿಂದೆ ನಾನು ಮತ್ತು ಪ್ಯಾಮ್‌ ದೇವರ ಬಗ್ಗೆ ತಿಳುಕೊಳ್ಳಲು ಮಾಡಿದ ಪ್ರಯತ್ನದಿಂದ ಮುಂದೆ ಏನಾಗುತ್ತದೆ ಎಂದು ನಮಗೆ ಗೊತ್ತಿರಲಿಲ್ಲ. ದೇವರ ರಾಜ್ಯದ ಸತ್ಯ ಬೆಲೆಕಟ್ಟಲಾಗದಂಥ ಒಂದು ಮುತ್ತು ಅನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ! ಈ ಬೆಲೆಬಾಳುವ ಮುತ್ತನ್ನು ಎಂದಿಗೂ ಕಳಕೊಳ್ಳದಿರಲು ಸರ್ವಪ್ರಯತ್ನ ಮಾಡಬೇಕೆಂದು ದೃಢನಿರ್ಧಾರ ಮಾಡಿದ್ದೇವೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ