ಅಧ್ಯಯನ ಲೇಖನ 24
ದೇವರಿಗೆ ವಿರುದ್ಧವಾಗಿರುವ ಪ್ರತಿಯೊಂದು ಕುತರ್ಕವನ್ನು ತೆಗೆದುಹಾಕಿರಿ
“ದೇವರ ಜ್ಞಾನಕ್ಕೆ ವಿರುದ್ಧವಾಗಿ ಎಬ್ಬಿಸಲ್ಪಡುವ ಕುತರ್ಕಗಳನ್ನೂ ಪ್ರತಿಯೊಂದು ಉನ್ನತವಾದ ವಿಷಯವನ್ನೂ ನಾವು ಕೆಡವಿಹಾಕುವವರಾಗಿದ್ದೇವೆ.” —2 ಕೊರಿಂ. 10:5.
ಗೀತೆ 63 ಸದಾ ನಿಷ್ಠರು
ಕಿರುನೋಟa
1. ಅಪೊಸ್ತಲ ಪೌಲನು ಅಭಿಷಿಕ್ತ ಕ್ರೈಸ್ತರಿಗೆ ಯಾವ ಬಲವಾದ ಬುದ್ಧಿವಾದ ಕೊಟ್ಟನು?
‘ಈ ವಿಷಯಗಳ ವ್ಯವಸ್ಥೆಯ ಪ್ರಕಾರ ರೂಪಿಸಿಕೊಳ್ಳಲ್ಪಡುವುದನ್ನು ಬಿಟ್ಟುಬಿಡಿ’ ಎಂದು ಅಪೊಸ್ತಲ ಪೌಲ ಹೇಳಿದನು. (ರೋಮ. 12:2) ಪೌಲನು ಆ ಮಾತುಗಳನ್ನು ಮೊದಲನೇ ಶತಮಾನದಲ್ಲಿದ್ದ ಕ್ರೈಸ್ತರಿಗೆ ಬರೆದನು. ದೇವರಿಗೆ ಸಮರ್ಪಣೆ ಮಾಡಿಕೊಂಡಿದ್ದ ಮತ್ತು ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟಿದ್ದ ಸ್ತ್ರೀ-ಪುರುಷರಿಗೆ ಇಂಥ ಬಲವಾದ ಬುದ್ಧಿವಾದವನ್ನು ಯಾಕೆ ಕೊಟ್ಟನು?—ರೋಮ. 1:7.
2-3. (ಎ) ಸೈತಾನನು ಹೇಗೆ ನಮ್ಮನ್ನು ಯೆಹೋವನಿಂದ ದೂರ ಮಾಡಲು ಪ್ರಯತ್ನಿಸುತ್ತಾನೆ? (ಬಿ) ನಮ್ಮ ಮನಸ್ಸಲ್ಲಿ “ಬಲವಾಗಿ ಬೇರೂರಿರುವ” ವಿಷಯಗಳನ್ನು ನಾವು ಹೇಗೆ ತೆಗೆದುಹಾಕಬಹುದು?
2 ಪೌಲನು ಆ ಬುದ್ಧಿವಾದವನ್ನು ಯಾಕೆ ಕೊಟ್ಟನೆಂದರೆ, ಸೈತಾನನ ಲೋಕದಲ್ಲಿರುವ ಕುತರ್ಕಗಳು ಮತ್ತು ಕೆಟ್ಟ ವಿಚಾರಗಳು ಕೆಲವು ಕ್ರೈಸ್ತರ ಮೇಲೆ ಪ್ರಭಾವ ಬೀರಿತ್ತು. (ಎಫೆ. 4:17-19) ಇಂದು ನಮ್ಮ ಮೇಲೆ ಸಹ ಇದೇ ರೀತಿ ಪ್ರಭಾವ ಆಗಬಹುದು. ನಮ್ಮನ್ನು ಯೆಹೋವನಿಂದ ದೂರ ಮಾಡಲು ಪಣತೊಟ್ಟಿರುವ ಈ ಲೋಕದ ದೇವನು, ಅಂದರೆ ಸೈತಾನನು ಬೇರೆಬೇರೆ ರೀತಿಯ ಕುತಂತ್ರಗಳನ್ನು ಬಳಸುತ್ತಾನೆ. ಉದಾಹರಣೆಗೆ, ನಮ್ಮಲ್ಲಿ ಸ್ವಲ್ಪ ಅಹಂಭಾವ ಇದ್ದರೆ, ನಾವು ಪ್ರಖ್ಯಾತಿಯನ್ನು ಬಯಸಿದರೆ ಸೈತಾನ ಅದನ್ನು ಬಳಸಿಕೊಂಡು ನಮ್ಮನ್ನು ಯೆಹೋವನಿಂದ ದೂರಮಾಡಲು ಪ್ರಯತ್ನಿಸುತ್ತಾನೆ. ಅಥವಾ ನಾವು ಬೆಳೆದು ಬಂದ ರೀತಿ, ನಮ್ಮ ಸಂಸ್ಕೃತಿ ಮತ್ತು ನಾವು ಪಡೆದ ಶಿಕ್ಷಣದ ಕೆಲವು ಅಂಶಗಳನ್ನು ಸಹ ಬಳಸಿಕೊಂಡು ನಾವು ಅವನ ತರಾನೇ ಯೋಚನೆ ಮಾಡುವಂತೆ ಮಾಡಬಹುದು.
3 ನಮ್ಮ ಮನಸ್ಸಲ್ಲಿ “ಬಲವಾಗಿ ಬೇರೂರಿರುವ” ವಿಷಯಗಳನ್ನು ತೆಗೆದುಹಾಕಲು ಸಾಧ್ಯನಾ? (2 ಕೊರಿಂ. 10:4) ಪೌಲನು ಇದಕ್ಕೆ ಕೊಡುವ ಉತ್ತರ ಹೀಗಿದೆ: “ದೇವರ ಜ್ಞಾನಕ್ಕೆ ವಿರುದ್ಧವಾಗಿ ಎಬ್ಬಿಸಲ್ಪಡುವ ಕುತರ್ಕಗಳನ್ನೂ ಪ್ರತಿಯೊಂದು ಉನ್ನತವಾದ ವಿಷಯವನ್ನೂ ನಾವು ಕೆಡವಿಹಾಕುವವರಾಗಿದ್ದೇವೆ; ನಾವು ಪ್ರತಿಯೊಂದು ಯೋಚನೆಯನ್ನು ಸೆರೆಹಿಡಿದು ಅದನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಮಾಡುತ್ತೇವೆ.” (2 ಕೊರಿಂ. 10:5) ಹೌದು, ಯೆಹೋವನ ಸಹಾಯದಿಂದ ನಾವು ನಮ್ಮಲ್ಲಿರುವ ಕೆಟ್ಟ ಸ್ವಭಾವಗಳನ್ನು ಬಿಟ್ಟುಬಿಡಲು ಸಾಧ್ಯ. ವಿಷದಿಂದಾಗುವ ಪರಿಣಾಮವನ್ನು ಔಷಧಿ ತೆಗೆದುಹಾಕುವಂತೆ, ಸೈತಾನನ ಲೋಕದ ವಿಷಕಾರಿ ಪರಿಣಾಮಗಳನ್ನು ತೆಗೆದುಹಾಕಲು ದೇವರ ವಾಕ್ಯ ಸಹಾಯ ಮಾಡುತ್ತದೆ.
“ನಿಮ್ಮ ಮನಸ್ಸನ್ನು ಮಾರ್ಪಡಿಸಿ”
4. ನಮ್ಮಲ್ಲಿ ಎಷ್ಟೋ ಮಂದಿ ಸತ್ಯ ಕಲಿತಾಗ ಏನು ಮಾಡಿದ್ವಿ?
4 ನೀವು ಬೈಬಲಿಂದ ಸತ್ಯ ಕಲಿತು ಯೆಹೋವನ ಆರಾಧಕರಾಗುವ ತೀರ್ಮಾನ ಮಾಡಿದಾಗ ಏನೆಲ್ಲಾ ಬದಲಾವಣೆ ಮಾಡಿಕೊಂಡಿರಿ ಅಂತ ಜ್ಞಾಪಿಸಿಕೊಳ್ಳಿ. ನಮ್ಮಲ್ಲಿ ಎಷ್ಟೋ ಮಂದಿ ದೊಡ್ಡ ತಪ್ಪುಗಳನ್ನು ಮಾಡುತ್ತಾ ಇದ್ವಿ. (1 ಕೊರಿಂ. 6:9-11) ಆದರೆ ಯೆಹೋವನ ಸಹಾಯದಿಂದ ಅದನ್ನೆಲ್ಲಾ ಬಿಟ್ಟುಬಿಟ್ವಿ. ಇದಕ್ಕೆ ನಾವು ಯೆಹೋವನಿಗೆ ತುಂಬ ಆಭಾರಿ!
5. ನಾವು ಯಾವ ಎರಡು ವಿಷಯಗಳನ್ನು ಮಾಡಬೇಕೆಂದು ರೋಮನ್ನರಿಗೆ 12:2 ಹೇಳುತ್ತದೆ?
5 ದೀಕ್ಷಾಸ್ನಾನ ಪಡೆದ ಮೇಲೆ ಇನ್ನು ಯಾವ ಬದಲಾವಣೆನೂ ಮಾಡಬೇಕಾಗಿಲ್ಲ ಎಂದು ನಾವು ಅಂದುಕೊಳ್ಳಬಾರದು. ನಾವು ದೀಕ್ಷಾಸ್ನಾನ ಪಡೆಯುವ ಮುಂಚೆ ಮಾಡುತ್ತಿದ್ದ ಗಂಭೀರವಾದ ಪಾಪಗಳನ್ನು ಬಿಟ್ಟುಬಿಟ್ಟಿರಬಹುದು. ಆದರೂ ಅಂಥ ಪಾಪಗಳಿಗೆ ನಡೆಸುವ ವಿಷಯಗಳಿಂದ ದೂರ ಇರಬೇಕು. ಇಲ್ಲದಿದ್ದರೆ ಪುನಃ ಅಂಥ ತಪ್ಪುಗಳನ್ನು ಮಾಡಿಬಿಡುತ್ತೇವೆ. ಹಾಗಾದರೆ ನಾವೇನು ಮಾಡಬೇಕು? ಈ ಪ್ರಶ್ನೆಗೆ ಪೌಲನು ಕೊಡುವ ಉತ್ತರ ಹೀಗಿದೆ: “ಈ ವಿಷಯಗಳ ವ್ಯವಸ್ಥೆಯ ಪ್ರಕಾರ ರೂಪಿಸಿಕೊಳ್ಳಲ್ಪಡುವುದನ್ನು ಬಿಟ್ಟು, . . . ನಿಮ್ಮ ಮನಸ್ಸನ್ನು ಮಾರ್ಪಡಿಸಿ ನವೀಕರಿಸಿಕೊಳ್ಳಿರಿ.” (ರೋಮ. 12:2) ಅಂದರೆ ನಾವು ಎರಡು ವಿಷಯಗಳನ್ನು ಮಾಡಬೇಕು. ಒಂದು, ಈ ಲೋಕ ನಮ್ಮನ್ನು ‘ರೂಪಿಸಲು ಬಿಡಬಾರದು.’ ಎರಡು, ನಮ್ಮ ಮನಸ್ಸನ್ನು ಮಾರ್ಪಡಿಸಿಕೊಂಡು ‘ನವೀಕರಿಸಿಕೊಳ್ಳಬೇಕು.’
6. ಮತ್ತಾಯ 12:43-45 ರಲ್ಲಿರುವ ಯೇಸುವಿನ ಮಾತುಗಳಿಂದ ಏನು ಗೊತ್ತಾಗುತ್ತದೆ?
6 ನವೀಕರಿಸುವುದು ಅಂದರೆ ನಾವು ಹೊರಗೆ ಹೇಗೆ ಕಾಣುತ್ತೇವೋ ಬರೀ ಅದನ್ನು ಬದಲಾಯಿಸಿಕೊಳ್ಳುವುದಲ್ಲ. ನಾವು ಅಂತರಾಳದಿಂದ ಬದಲಾಗುವುದಕ್ಕೆ ಸೂಚಿಸಿ ಪೌಲನು ಮಾತಾಡಿದ್ದಾನೆ. (‘ನವೀಕರಿಸಲ್ಪಟ್ಟಿದ್ದೀರಾ ಅಥವಾ ವೇಷಹಾಕಿಕೊಂಡಿದ್ದೀರಾ?’ ಎಂಬ ಚೌಕ ನೋಡಿ.) ನಾವು ಸಂಪೂರ್ಣವಾಗಿ ಬದಲಾಗಬೇಕು. ಮನದಾಳದಲ್ಲಿರುವ ನಮ್ಮ ಯೋಚನೆ, ಭಾವನೆ, ಸ್ವಭಾವ ಬದಲಾಗಬೇಕು. ಹಾಗಾಗಿ ಪ್ರತಿಯೊಬ್ಬರು, ‘ನಾನು ಕ್ರೈಸ್ತನಾಗಿ ಜೀವಿಸಲು ಮಾಡುತ್ತಿರುವ ಬದಲಾವಣೆಗಳು ಬರೀ ಹೊರ ತೋರಿಕೆಗೆ ಮಾತ್ರನಾ ಅಥವಾ ನಾನು ಅಂತರಾಳದಿಂದ ಬದಲಾಗುತ್ತಿದ್ದೇನಾ?’ ಎಂದು ಯೋಚಿಸಬೇಕು. ಇದು ತುಂಬ ಮುಖ್ಯ. ಮತ್ತಾಯ 12:43-45 ರಲ್ಲಿರುವ ಯೇಸುವಿನ ಮಾತುಗಳಲ್ಲಿ ನಾವೇನು ಮಾಡಬೇಕೆಂದು ಗೊತ್ತಾಗುತ್ತದೆ. (ಓದಿ.) ಆ ವಚನಗಳಲ್ಲಿ ಒಂದು ಪ್ರಾಮುಖ್ಯ ವಿಷಯ ಇದೆ. ಅದೇನೆಂದರೆ, ನಾವು ತಪ್ಪು ಯೋಚನೆಗಳನ್ನು ಮನಸ್ಸಿಂದ ತೆಗೆದುಬಿಟ್ಟರೆ ಸಾಲದು, ದೇವರ ಯೋಚನೆಗಳನ್ನು ಮನಸ್ಸಲ್ಲಿ ತುಂಬಿಸಿಕೊಳ್ಳಬೇಕು.
“ನಿಮ್ಮ ಮನಸ್ಸನ್ನು ಪ್ರಚೋದಿಸುವಂಥ ಶಕ್ತಿಯಲ್ಲಿ ನವೀಕರಿಸಲ್ಪಡಬೇಕು”
7. ನಾವು ಅಂತರಾಳದಲ್ಲಿ ಏನಾಗಿದ್ದೇವೋ ಅದನ್ನು ಹೇಗೆ ಬದಲಾಯಿಸಬಹುದು?
7 ನಾವು ಅಂತರಾಳದಲ್ಲಿ ಏನಾಗಿದ್ದೇವೋ ಅದನ್ನು ಬದಲಾಯಿಸಲು ನಿಜಕ್ಕೂ ಸಾಧ್ಯನಾ? ಸಾಧ್ಯ ಎಂದು ದೇವರ ವಾಕ್ಯ ಹೇಳುತ್ತದೆ. “ನೀವು ನಿಮ್ಮ ಮನಸ್ಸನ್ನು ಪ್ರಚೋದಿಸುವಂಥ ಶಕ್ತಿಯಲ್ಲಿ ನವೀಕರಿಸಲ್ಪಡಬೇಕು ಮತ್ತು ದೇವರ ಚಿತ್ತಕ್ಕನುಸಾರ ಸತ್ಯಾನುಗುಣವಾದ ನೀತಿಯಲ್ಲಿಯೂ ನಿಷ್ಠೆಯಲ್ಲಿಯೂ ಸೃಷ್ಟಿಸಲ್ಪಟ್ಟ ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಬೇಕು” ಎಂದು ಹೇಳುತ್ತದೆ. (ಎಫೆ. 4:23, 24) ಹೌದು, ನಾವು ಒಳಗೆ ಏನಾಗಿದ್ದೇವೋ ಅದನ್ನು ಬದಲಾಯಿಸಲು ಖಂಡಿತ ಸಾಧ್ಯ. ಆದರೆ ಇದಷ್ಟು ಸುಲಭ ಅಲ್ಲ. ನಾವು ತಪ್ಪಾದ ಆಸೆಗಳನ್ನು ಅದುಮಿಟ್ಟುಕೊಂಡು ಕೆಟ್ಟ ವಿಷಯಗಳನ್ನು ಮಾಡದೇ ಇದ್ದರೆ ಮಾತ್ರ ಸಾಲದು. ನಾವು ನಮ್ಮ “ಮನಸ್ಸನ್ನು ಪ್ರಚೋದಿಸುವಂಥ ಶಕ್ತಿಯಲ್ಲಿ ನವೀಕರಿಸಲ್ಪಡಬೇಕು.” ಅಂದರೆ ನಮ್ಮ ಆಸೆ-ಆಕಾಂಕ್ಷೆಗಳನ್ನು, ಸ್ವಭಾವ-ಪ್ರವೃತ್ತಿಗಳನ್ನು ಬದಲಾಯಿಸಿಕೊಳ್ಳಬೇಕು. ಇದನ್ನು ನಾವು ಒಂದು ಸಾರಿ ಮಾಡಿದರೆ ಸಾಕಾಗಲ್ಲ, ಸದಾ ಮಾಡುತ್ತಾ ಇರಬೇಕು.
8-9. ನಾವು ಅಂತರಾಳದಲ್ಲಿ ಬದಲಾಗಬೇಕು ಎಂದು ಒಬ್ಬ ಸಹೋದರನ ಉದಾಹರಣೆಯಿಂದ ಹೇಗೆ ಗೊತ್ತಾಗುತ್ತದೆ?
8 ಹಿಂದೆ ಕೋಪಿಷ್ಠನಾಗಿದ್ದ ಒಬ್ಬ ಸಹೋದರನ ಉದಾಹರಣೆ ನೋಡೋಣ. ಅವನು ಕುಡಿಯುವುದನ್ನು ಮತ್ತು ಬೇರೆಯವರ ಜೊತೆ ಹೊಡೆದಾಡುವುದನ್ನು ಬಿಟ್ಟ ಮೇಲೆ ದೀಕ್ಷಾಸ್ನಾನ ಪಡಕೊಂಡ. ಇದು ಅವನಿದ್ದ ಚಿಕ್ಕ ಊರಲ್ಲಿ ಒಳ್ಳೇ ಸಾಕ್ಷಿಯಾಯಿತು. ಆದರೆ ಅವನು ದೀಕ್ಷಾಸ್ನಾನ ತಗೊಂಡು ಸ್ವಲ್ಪ ಸಮಯ ಆದ ಮೇಲೆ ಒಂದು ಪರೀಕ್ಷೆ ಎದುರಾಯಿತು. ಒಬ್ಬ ವ್ಯಕ್ತಿ ಕುಡಿದು ಅವನ ಮನೆ ಮುಂದೆ ಬಂದು ಜಗಳ ಮಾಡಲು ಕರೆದ. ನಮ್ಮ ಸಹೋದರ ಆರಂಭದಲ್ಲಿ ಹೋಗಲಿಲ್ಲ. ಆದರೆ ಕುಡಿದು ಬಂದ ವ್ಯಕ್ತಿ ಯೆಹೋವನ ಬಗ್ಗೆ ತಪ್ಪಾಗಿ ಮಾತಾಡಿದಾಗ ನಮ್ಮ ಸಹೋದರನಿಗೆ ರೇಗಿಹೋಯಿತು. ಹೊರಗೆ ಹೋಗಿ ಅವನನ್ನು ಚೆನ್ನಾಗಿ ಬಾರಿಸಿಬಿಟ್ಟ. ಆ ಸಹೋದರ ಯಾಕೆ ಹೀಗೆ ಮಾಡಿದ? ಬೈಬಲ್ ಅಧ್ಯಯನ ಮಾಡಿ ಅವನು ಜಗಳ ಮಾಡುವ ಸ್ವಭಾವವನ್ನು ನಿಯಂತ್ರಣದಲ್ಲಿ ಇಟ್ಟಿದ್ದರೂ ಅವನ ಮನಸ್ಸನ್ನು ಪ್ರಚೋದಿಸುವ ಶಕ್ತಿ ಅಂದರೆ ಅವನ ಸ್ವಭಾವ ಒಳಗಿಂದ ಬದಲಾಗಿರಲಿಲ್ಲ.
9 ಆದರೆ ಈ ಸಹೋದರ ಪ್ರಯತ್ನ ಬಿಡಲಿಲ್ಲ. (ಜ್ಞಾನೋ. 24:16) ಹಿರಿಯರ ಸಹಾಯದೊಂದಿಗೆ ಪ್ರಗತಿ ಮಾಡುವುದನ್ನು ಮುಂದುವರಿಸಿದ. ಕೆಲವು ವರ್ಷಗಳಾದ ಮೇಲೆ ಹಿರಿಯನಾಗಿ ನೇಮಿಸಲ್ಪಟ್ಟ. ಆಮೇಲೆ ಒಂದಿನ ಅವನಿಗೆ ಇದೇ ಸನ್ನಿವೇಶ ಮತ್ತೊಮ್ಮೆ ಎದುರಾಯಿತು. ರಾಜ್ಯ ಸಭಾಗೃಹದ ಹೊರಗೆ ಒಬ್ಬ ವ್ಯಕ್ತಿ ಕುಡಿದು ಬಂದು ಒಬ್ಬ ಹಿರಿಯನನ್ನು ಹೊಡೆಯಲು ಪ್ರಯತ್ನಿಸಿದ. ಆಗ ಈ ಸಹೋದರ ಏನು ಮಾಡಿದ? ಸಮಾಧಾನದಿಂದ, ದೀನತೆಯಿಂದ ಆ ವ್ಯಕ್ತಿಯ ಜೊತೆ ಮಾತಾಡಿದ. ಇದರಿಂದ ಕುಡಿದಿದ್ದ ಆ ವ್ಯಕ್ತಿ ಸುಮ್ಮನಾದ. ಮದ್ಯದ ಅಮಲಿನಲ್ಲಿ ಓಲಾಡುತ್ತಿದ್ದ ಆ ವ್ಯಕ್ತಿ ತನ್ನ ಮನೆಗೆ ಹೋಗಲು ನಮ್ಮ ಸಹೋದರ ಸಹಾಯ ಮಾಡಿದ. ಈ ಸಾರಿ ಹೀಗೆ ನಡಕೊಳ್ಳಲು ಕಾರಣವೇನು? ನಮ್ಮ ಸಹೋದರ ತನ್ನ ಮನಸ್ಸನ್ನು ಪ್ರಚೋದಿಸುವ ಶಕ್ತಿಯನ್ನು ಬದಲಾಯಿಸಿದ್ದನು. ಅವನು ಒಳಗಿಂದ ಸಾಧು ಸ್ವಭಾವ ಬೆಳೆಸಿಕೊಂಡು ದೀನ ವ್ಯಕ್ತಿಯಾಗಿದ್ದ. ಇದರಿಂದ ಯೆಹೋವನಿಗೆ ಮಹಿಮೆ ಸಿಕ್ಕಿತು.
10. ಅಂತರಾಳದಲ್ಲಿ ಬದಲಾಗಲು ನಾವೇನು ಮಾಡಬೇಕು?
10 ಇಂಥ ಬದಲಾವಣೆ ದಿನ ಬೆಳಗಾಗುವುದರ ಒಳಗೆ ಆಗುವುದಿಲ್ಲ ಅಥವಾ ತನ್ನಿಂದ ತಾನೇ ಆಗುವುದಿಲ್ಲ. ತುಂಬ ವರ್ಷ “ಶ್ರದ್ಧಾಪೂರ್ವಕ ಪ್ರಯತ್ನ” ಮಾಡಬೇಕಾಗುತ್ತದೆ. (2 ಪೇತ್ರ 1:5) ತುಂಬ ವರ್ಷಗಳಿಂದ ಸತ್ಯದಲ್ಲಿ ಇದ್ದುಬಿಟ್ಟರೆ ನಾವು ಬದಲಾಗಿಬಿಡುವುದಿಲ್ಲ. ಅಂತರಾಳದಲ್ಲಿ ಬದಲಾಗಲು ನಾವು ಶತಪ್ರಯತ್ನ ಮಾಡಬೇಕು. ಈ ಬದಲಾವಣೆಗಳನ್ನು ಮಾಡಲು ಕೆಲವು ಪ್ರಾಮುಖ್ಯ ವಿಷಯಗಳನ್ನು ಮಾಡಬೇಕು. ಏನು ಮಾಡಬೇಕು?
ನಮ್ಮ ಮನಸ್ಸನ್ನು ಪ್ರಚೋದಿಸುವ ಶಕ್ತಿಯನ್ನು ಬದಲಾಯಿಸುವುದು ಹೇಗೆ?
11. ನಮ್ಮ ಮನಸ್ಸನ್ನು ಪ್ರಚೋದಿಸುವ ಶಕ್ತಿಯನ್ನು ಬದಲಾಯಿಸಲು ಪ್ರಾರ್ಥನೆಯಿಂದ ಹೇಗೆ ಸಹಾಯ ಸಿಗುತ್ತದೆ?
11 ಪ್ರಾರ್ಥನೆ ತುಂಬ ಮುಖ್ಯವಾದ ಮೊದಲನೇ ವಿಷಯ. ನಾವು ಕೀರ್ತನೆಗಾರನಂತೆ ಪ್ರಾರ್ಥಿಸಬೇಕು. “ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನಪಡಿಸು” ಎಂದು ಅವನು ಪ್ರಾರ್ಥಿಸಿದನು. (ಕೀರ್ತ. 51:10) ನಮ್ಮ ಮನಸ್ಸನ್ನು ಪ್ರಚೋದಿಸುವ ಶಕ್ತಿಯನ್ನು ಬದಲಾಯಿಸುವ ಆವಶ್ಯಕತೆ ಇದೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಆಮೇಲೆ ಇದನ್ನು ಮಾಡಲು ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸಬೇಕು. ನಾವು ಬದಲಾವಣೆ ಮಾಡಿಕೊಳ್ಳಲು ಯೆಹೋವನು ನಿಜವಾಗಲೂ ಸಹಾಯ ಮಾಡುತ್ತಾನಾ? ಹೌದು. ಕಲ್ಲು ಹೃದಯದ ಇಸ್ರಾಯೇಲ್ಯರಿಗೆ ಏನು ಮಾಡುತ್ತೇನೆಂದು ಯೆಹೋವನು ಹೇಳಿದನೋ ಅದರಿಂದ ನಮಗೆ ಪ್ರೋತ್ಸಾಹ ಸಿಗುತ್ತದೆ. “ನಾನು ಅವರಿಗೆ ಒಂದೇ ಮನಸ್ಸನ್ನು ದಯಪಾಲಿಸಿ ನೂತನಸ್ವಭಾವವನ್ನು ಅವರಲ್ಲಿ ಹುಟ್ಟಿಸುವೆನು; . . . ಮೃದುವಾದ ಹೃದಯವನ್ನು ಅವರಿಗೆ ಅನುಗ್ರಹಿಸುವೆನು” ಅಂದರೆ ತನ್ನ ನಿರ್ದೇಶನಕ್ಕೆ ಕಿವಿಗೊಡುವ ಹೃದಯವನ್ನು ಕೊಡುವೆನು ಎಂದು ಆತನು ಹೇಳಿದನು. (ಯೆಹೆ. 11:19, 20) ಆ ಇಸ್ರಾಯೇಲ್ಯರು ಬದಲಾಗಲು ತಾನು ಸಹಾಯ ಮಾಡುತ್ತೇನೆ ಎಂದು ಯೆಹೋವನು ಹೇಳಿದನು. ಆತನು ನಮಗೂ ಇದೇ ಸಹಾಯ ಕೊಡುತ್ತಾನೆ.
12-13. (ಎ) ಕೀರ್ತನೆ 119:59 ರ ಪ್ರಕಾರ, ನಾವು ಯಾವುದರ ಬಗ್ಗೆ ಧ್ಯಾನಿಸಬೇಕು? (ಬಿ) ನಾವು ಯಾವ ವಿಷಯದಲ್ಲಿ ಪ್ರಗತಿ ಮಾಡಬೇಕೆಂದು ತಿಳಿಯಲು ಯಾವ ಪ್ರಶ್ನೆಗಳು ಸಹಾಯ ಮಾಡುತ್ತವೆ?
12 ನಾವು ಮಾಡಬೇಕಾದ ಎರಡನೇ ಮುಖ್ಯ ವಿಷಯ ಧ್ಯಾನ. ನಾವು ಪ್ರತಿ ದಿನ ಬೈಬಲನ್ನು ಓದಿದ ಮೇಲೆ ಧ್ಯಾನ ಮಾಡಲು ಅಥವಾ ಓದಿದ ವಿಷಯದ ಬಗ್ಗೆ ಆಳವಾಗಿ ಯೋಚಿಸಲು ಸಮಯ ತಗೋಬೇಕು. ಆಗ ನಾವು ನಮ್ಮಲ್ಲಿರುವ ಯಾವ ಭಾವನೆ, ಅನಿಸಿಕೆಗಳನ್ನು ಬದಲಾಯಿಸಬೇಕು ಎಂದು ಗೊತ್ತಾಗುತ್ತದೆ. (ಕೀರ್ತನೆ 119:59 ಓದಿ; ಇಬ್ರಿ. 4:12; ಯಾಕೋ. 1:25) ಈ ಲೋಕದ ಅನಿಸಿಕೆಗಳು, ಭಾವನೆಗಳು ನಮ್ಮ ಮೇಲೆ ಏನಾದರೂ ಪ್ರಭಾವ ಬೀರುತ್ತಾ ಇದೆಯಾ ಎಂದು ನೋಡಬೇಕು. ನಮ್ಮಲ್ಲಿರುವ ಬಲಹೀನತೆಗಳನ್ನು ಒಪ್ಪಿಕೊಂಡು ಅದನ್ನು ತೆಗೆದುಹಾಕಲು ಪೂರ್ತಿ ಪ್ರಯತ್ನ ಮಾಡಬೇಕು.
13 ಇದನ್ನು ಮಾಡಲು ಈ ಪ್ರಶ್ನೆಗಳು ಸಹಾಯ ಮಾಡುತ್ತವೆ: ‘ನನ್ನಲ್ಲಿ ಸ್ವಲ್ಪ ಅಸೂಯೆ ಅಥವಾ ಹೊಟ್ಟೆಕಿಚ್ಚು ಇದೆಯಾ?’ (1 ಪೇತ್ರ 2:1) ‘ನಾನು ಬೆಳೆದು ಬಂದ ರೀತಿ, ನಾನು ಪಡೆದಿರುವ ಶಿಕ್ಷಣ ಅಥವಾ ನನ್ನಲ್ಲಿರುವ ಶ್ರೀಮಂತಿಕೆ ನನ್ನಲ್ಲಿ ಅಹಂಕಾರ ಹುಟ್ಟುವಂತೆ ಮಾಡಿದೆಯಾ?’ (ಜ್ಞಾನೋ. 16:5) ‘ನನಗಿರುವ ಸ್ಥಾನಮಾನ ಬೇರೆಯವರಿಗೆ ಇಲ್ಲಾಂದ್ರೆ ನಾನು ಅವರನ್ನು ಕೀಳಾಗಿ ನೋಡುತ್ತೇನಾ ಅಥವಾ ಬೇರೊಂದು ಜಾತಿಗೆ, ಭಾಷೆಗೆ ಸೇರಿದ ಜನರನ್ನು ಕೀಳಾಗಿ ನೋಡುತ್ತೇನಾ?’ (ಯಾಕೋ. 2:2-4) ‘ಸೈತಾನನ ಲೋಕದಲ್ಲಿರುವ ವಿಷಯಗಳನ್ನು ಕಂಡರೆ ನನಗೆ ಆಸೆ ಆಗುತ್ತದಾ?’ (1 ಯೋಹಾ. 2:15-17) ‘ಅನೈತಿಕವಾದ ಮತ್ತು ಹಿಂಸಾತ್ಮಕವಾದ ಮನೋರಂಜನೆ ನನಗೆ ಇಷ್ಟ ಆಗುತ್ತದಾ?’ (ಕೀರ್ತ. 97:10; 101:3; ಆಮೋ. 5:15) ಈ ಪ್ರಶ್ನೆಗಳಿಗೆ ನೀವು ಕೊಡುವ ಉತ್ತರದಿಂದ ನೀವು ಯಾವ ವಿಷಯದಲ್ಲಿ ಪ್ರಗತಿ ಮಾಡಬೇಕೆಂದು ಗೊತ್ತಾಗುತ್ತದೆ. ಮನಸ್ಸಲ್ಲಿ “ಬಲವಾಗಿ ಬೇರೂರಿರುವ” ವಿಷಯಗಳನ್ನು ತೆಗೆದುಹಾಕುವ ಮೂಲಕ ನಾವು ನಮ್ಮ ಸ್ವರ್ಗೀಯ ತಂದೆಯ ಮನಸ್ಸನ್ನು ಸಂತೋಷಪಡಿಸುತ್ತೇವೆ.—ಕೀರ್ತ. 19:14.
14. ಒಳ್ಳೇ ಸ್ನೇಹಿತರನ್ನು ಆರಿಸಿಕೊಳ್ಳುವುದು ಯಾಕೆ ತುಂಬ ಮುಖ್ಯ?
14 ಒಳ್ಳೇ ಸ್ನೇಹಿತರನ್ನು ಆರಿಸಿಕೊಳ್ಳುವುದು ಮೂರನೇ ಪ್ರಾಮುಖ್ಯವಾದ ವಿಷಯ. ನಾವು ಒಪ್ಪಲಿ ಒಪ್ಪದೇ ಇರಲಿ, ನಮ್ಮ ಸ್ನೇಹಿತರು ನಮ್ಮ ಮೇಲೆ ತುಂಬ ಬಲವಾದ ಪ್ರಭಾವ ಬೀರುತ್ತಾರೆ ಅನ್ನುವುದು ನಿಜ. (ಜ್ಞಾನೋ. 13:20) ನಾವು ಕೆಲಸ ಮಾಡುವ ಜಾಗದಲ್ಲಿ ಅಥವಾ ನಾವು ಓದುತ್ತಿರುವ ಶಾಲೆಯಲ್ಲಿ, ನಮ್ಮ ಸುತ್ತಲಿರುವ ವ್ಯಕ್ತಿಗಳು ದೇವರಿಗೆ ಇಷ್ಟವಾದ ವಿಷಯಗಳ ಬಗ್ಗೆ ಯೋಚಿಸಲು ಸಹಾಯ ಮಾಡಲ್ಲ. ಆದರೆ ಕ್ರೈಸ್ತ ಸಭೆಯಲ್ಲಿ ನಮಗೆ ತುಂಬ ಒಳ್ಳೇ ಸ್ನೇಹಿತರು ಸಿಗುತ್ತಾರೆ. ಇಲ್ಲೇ ನಮಗೆ ‘ಪ್ರೀತಿಸಲು ಮತ್ತು ಸತ್ಕಾರ್ಯ ಮಾಡಲು’ ಬೇಕಾದ ಪ್ರೋತ್ಸಾಹ-ಪ್ರಚೋದನೆ ಸಿಗುತ್ತದೆ.—ಇಬ್ರಿ. 10:24, 25.
“ನಂಬಿಕೆಯಲ್ಲಿ ಸ್ಥಿರೀಕರಿಸಲ್ಪಡುತ್ತಾ” ಇರಿ
15-16. ಸೈತಾನ ನಮ್ಮ ಮನಸ್ಸನ್ನು ಬದಲಾಯಿಸಲು ಏನು ಮಾಡುತ್ತಾನೆ?
15 ನಾವು ನಮ್ಮ ಮನಸ್ಸನ್ನು ಬದಲಾಯಿಸಲು ಪ್ರಯತ್ನಿಸುವಾಗ ಸೈತಾನ ಸುಮ್ಮನೆ ಕೈಕಟ್ಟಿ ಕೂರಲ್ಲ. ದೇವರ ವಾಕ್ಯದಿಂದ ನಾವು ಕಲಿಯುತ್ತಿರುವ ವಿಷಯಗಳ ಬಗ್ಗೆ ಸಂದೇಹ ಎಬ್ಬಿಸಲು ಏನಾದರೊಂದು ಮಾಡುತ್ತಾನೇ ಇರುತ್ತಾನೆ.
16 ಸೈತಾನ ಏದೆನ್ ತೋಟದಲ್ಲಿ ಹವ್ವಳಿಗೆ ಕೇಳಿದ ಪ್ರಶ್ನೆ ನೆನಪಿದೆಯಾ? ಹಣ್ಣನ್ನು ತಿನ್ನುವುದರ ಬಗ್ಗೆ ಮಾತಾಡುತ್ತಾ, ‘ದೇವರು ಆ ರೀತಿ ನಿಜವಾಗಲೂ ಅಪ್ಪಣೆ ಕೊಟ್ಟಿದ್ದಾನಾ’ ಎಂದು ಕೇಳಿದ. (ಆದಿ. 3:1) ಅವನು ಅದೇ ಪ್ರಶ್ನೆಯನ್ನು ಇವತ್ತಿನ ತನಕ ಕೇಳುತ್ತಿದ್ದಾನೆ. ಸೈತಾನನ ಲೋಕದ ಭಾಗವಾಗಿರುವ ಕೆಲವರು ನಮಗೆ, ‘ಸಲಿಂಗಕಾಮಿಗಳ ಮದುವೆಯನ್ನು ದೇವರು ನಿಜವಾಗಲೂ ಒಪ್ಪಲ್ವಾ? ಕ್ರಿಸ್ಮಸ್ ಮತ್ತು ಹುಟ್ಟುಹಬ್ಬ ಮಾಡಬಾರದೆಂದು ದೇವರು ನಿಜವಾಗಲೂ ಹೇಳಿದ್ದಾನಾ? ರಕ್ತ ತಗೊಳ್ಳಬಾರದೆಂದು ದೇವರು ನಿಜವಾಗಲೂ ಹೇಳಿದ್ದಾನಾ? ಪ್ರೀತಿಯುಳ್ಳ ದೇವರು ಬಹಿಷ್ಕಾರ ಆಗಿರುವ ಪ್ರಿಯ ವ್ಯಕ್ತಿಗಳ ಜೊತೆ ಸಹವಾಸ ಮಾಡಬಾರದೆಂದು ನಿಜವಾಗಲೂ ಹೇಳಿದ್ದಾನಾ?’ ಎಂದು ಕೇಳುತ್ತಾರೆ.
17. (ಎ) ಕ್ರೈಸ್ತ ಬೋಧನೆಗಳ ಬಗ್ಗೆ ಪ್ರಶ್ನೆ ಬಂದರೆ ನಾವೇನು ಮಾಡಬೇಕು? (ಬಿ) ಆಗ ಏನಾಗುತ್ತದೆ ಎಂದು ಕೊಲೊಸ್ಸೆ 2:6, 7 ಹೇಳುತ್ತದೆ?
17 ನಮಗೆ ಕ್ರೈಸ್ತ ಬೋಧನೆಗಳ ಮೇಲೆ ಬಲವಾದ ನಂಬಿಕೆ ಇರಬೇಕು. ಇದರ ಬಗ್ಗೆ ನಮಗೇನಾದರೂ ಪ್ರಶ್ನೆ ಬಂದರೆ ಉತ್ತರ ಹುಡುಕಲು ಪ್ರಯತ್ನ ಮಾಡಬೇಕು. ಇಲ್ಲಾಂದ್ರೆ ಮನಸ್ಸಿನ ಸುತ್ತ ಸಂಶಯದ ಹುತ್ತ ಬೆಳಕೊಂಡುಬಿಡುತ್ತದೆ. ಇದು ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರಿ, ಕ್ರೈಸ್ತ ನಂಬಿಕೆಯನ್ನು ಹಾಳುಮಾಡಿಬಿಡುತ್ತದೆ. ಹಾಗಾದರೆ ನಾವೇನು ಮಾಡಬೇಕು? ನಾವು ನಮ್ಮ ಮನಸ್ಸನ್ನು ಮಾರ್ಪಡಿಸಿಕೊಂಡು ನವೀಕರಿಸಬೇಕೆಂದು ದೇವರ ವಾಕ್ಯ ಹೇಳುತ್ತದೆ. ಆಗ ನಾವು “ದೇವರ ಉತ್ತಮವಾದ, ಸ್ವೀಕೃತವಾದ ಮತ್ತು ಪರಿಪೂರ್ಣವಾದ ಚಿತ್ತ” ಏನೆಂದು ಪರಿಶೋಧಿಸಿ ತಿಳುಕೊಳ್ಳುತ್ತೇವೆ. (ರೋಮ. 12:2) ಇದಕ್ಕಾಗಿ ನಾವು ತಪ್ಪದೆ ಅಧ್ಯಯನ ಮಾಡಬೇಕು. ಆಗ ಬೈಬಲಿಂದ ಕಲಿತಿರುವ ವಿಷಯಗಳು ಸತ್ಯ ಎಂದು ಪರಿಶೋಧಿಸಿ ತಿಳುಕೊಳ್ಳಲು ಸಾಧ್ಯವಾಗುತ್ತದೆ. ಸರಿ ಮತ್ತು ತಪ್ಪಿನ ಬಗ್ಗೆ ಯೆಹೋವನಿಟ್ಟಿರುವ ಮಟ್ಟಗಳೇ ಸರಿ ಎಂದು ನಮಗೆ ದೃಢಭರವಸೆ ಬರುತ್ತದೆ. ಇದರಿಂದ ನಾವು “ನಂಬಿಕೆಯಲ್ಲಿ ಸ್ಥಿರೀಕರಿಸಲ್ಪಡುತ್ತಾ” ಇರುತ್ತೇವೆ. ಆಳವಾಗಿ ಬೇರುಬಿಟ್ಟಿರುವ ಮರದಂತೆ ಆಗುತ್ತೇವೆ.—ಕೊಲೊಸ್ಸೆ 2:6, 7 ಓದಿ.
18. ಸೈತಾನನ ಲೋಕದ ಕೆಟ್ಟ ಪ್ರಭಾವದಿಂದ ದೂರ ಇರಲು ನಮಗೆ ಯಾವುದು ಸಹಾಯ ಮಾಡುತ್ತದೆ?
18 ನಿಮ್ಮ ನಂಬಿಕೆಯನ್ನು ಬೇರೆಯವರು ಬಲಪಡಿಸಲು ಸಾಧ್ಯ ಇಲ್ಲ. ಆದ್ದರಿಂದ ನಿಮ್ಮ ಮನಸ್ಸನ್ನು ಪ್ರಚೋದಿಸುವ ಶಕ್ತಿಯನ್ನು ನವೀಕರಿಸಲು ಸದಾ ಪ್ರಯತ್ನ ಮಾಡುತ್ತಾ ಇರಿ. ಪ್ರಾರ್ಥನೆ ಮಾಡಿ, ಯೆಹೋವನ ಸಹಾಯಕ್ಕಾಗಿ ಬೇಡಿಕೊಳ್ಳಿ. ಧ್ಯಾನ ಮಾಡಿ, ನಿಮ್ಮ ಮನಸ್ಸಲ್ಲಿರುವ ಭಾವನೆಗಳು ಮತ್ತು ಆಸೆಗಳನ್ನು ಪರಿಶೀಲಿಸುತ್ತಾ ಇರಿ. ನಿಮ್ಮ ಮನಸ್ಸನ್ನು ಮಾರ್ಪಡಿಸಲು ಸಹಾಯ ಮಾಡುವ ಒಳ್ಳೇ ಸ್ನೇಹಿತರನ್ನು ಮಾಡಿಕೊಳ್ಳಿ. ಈ ಮೂರು ವಿಷಯಗಳನ್ನು ಮಾಡುವ ಮೂಲಕ ನೀವು ಸೈತಾನನ ಲೋಕದ ಕೆಟ್ಟ ಪ್ರಭಾವದಿಂದ ದೂರ ಇರುವಿರಿ. ‘ದೇವರ ಜ್ಞಾನಕ್ಕೆ ವಿರುದ್ಧವಾಗಿ ಎಬ್ಬಿಸಲ್ಪಡುವ ಕುತರ್ಕಗಳನ್ನೂ ಪ್ರತಿಯೊಂದು ಉನ್ನತವಾದ ವಿಷಯವನ್ನೂ ಕೆಡವಿಹಾಕುವಿರಿ.’—2 ಕೊರಿಂ. 10:5.
ಗೀತೆ 58 ಸಮರ್ಪಣೆಯ ಬಗ್ಗೆ ನನ್ನ ಪ್ರಾರ್ಥನೆ
a ನಾವು ಬೆಳೆದುಬಂದ ರೀತಿ, ಸಂಸ್ಕೃತಿ ಮತ್ತು ನಾವು ಪಡೆದಿರುವ ಶಿಕ್ಷಣ ಖಂಡಿತ ನಮ್ಮ ಯೋಚನೆಗಳ ಮೇಲೆ ಪ್ರಭಾವ ಬೀರುತ್ತದೆ. ಕೆಲವು ತಪ್ಪಾದ ಮನೋಭಾವಗಳು ನಮ್ಮ ವ್ಯಕ್ತಿತ್ವದ ಭಾಗವಾಗಿರಬಹುದು ಮತ್ತು ಅದನ್ನು ತೆಗೆದುಹಾಕಲು ನಾವು ತುಂಬ ಪ್ರಯಾಸಪಡುತ್ತಿರಬಹುದು. ನಮ್ಮಲ್ಲಿರುವ ಕೆಟ್ಟ ಸ್ವಭಾವಗಳನ್ನು ಹೇಗೆ ಬಿಟ್ಟುಬಿಡಬಹುದು ಎಂದು ಈ ಲೇಖನದಲ್ಲಿ ಕಲಿಯಲಿದ್ದೇವೆ.