ಅಧ್ಯಯನ ಲೇಖನ 23
ಹುಷಾರು! ‘ಯಾವನಾದರೂ ನಿಮ್ಮನ್ನು ಹಿಡುಕೊಂಡು ಹೋಗಬಹುದು’
‘ಎಚ್ಚರವಾಗಿರಿ! ಮನುಷ್ಯರ ಸಂಪ್ರದಾಯಕ್ಕೆ ಅನುಸಾರವಾಗಿರುವ ತತ್ತ್ವಜ್ಞಾನ ಮತ್ತು ನಿರರ್ಥಕವಾದ ಮೋಸಕರ ಮಾತುಗಳ ಮೂಲಕ ಯಾವನಾದರೂ ನಿಮ್ಮನ್ನು ತನ್ನ ಬೇಟೆಯೋಪಾದಿ ಹಿಡಿದುಕೊಂಡು ಹೋಗಬಹುದು.’ —ಕೊಲೊ. 2:8.
ಗೀತೆ 114 ದೇವರ ಸ್ವಂತ ಗ್ರಂಥ—ಒಂದು ನಿಧಿ
ಕಿರುನೋಟa
1. ಕೊಲೊಸ್ಸೆ 2:4, 8 ಹೇಳುವ ಪ್ರಕಾರ, ಸೈತಾನ ಹೇಗೆ ನಾವು ಯೋಚನೆ ಮಾಡುವ ರೀತಿಯನ್ನು ಬದಲಾಯಿಸಲು ಪ್ರಯತ್ನಿಸುತ್ತಾನೆ?
ಯೆಹೋವನಿಗೆ ಇಷ್ಟವಿಲ್ಲದ ವಿಷಯಗಳನ್ನು ನಾವು ಮಾಡಬೇಕೆಂದು ಸೈತಾನ ಬಯಸುತ್ತಾನೆ. ನಮ್ಮ ಕೈಯಿಂದ ಇದನ್ನು ಮಾಡಿಸಲು ನಾವು ಯೋಚನೆ ಮಾಡುವ ರೀತಿಯನ್ನು ಬದಲಾಯಿಸಲು ಅವನು ಪ್ರಯತ್ನಿಸುತ್ತಾನೆ. ಸ್ವಲ್ಪ-ಸ್ವಲ್ಪವಾಗಿ ನಾವು ಅವನ ತರಾನೇ ಯೋಚನೆ ಮಾಡುವಂತೆ ಮಾಡುತ್ತಾನೆ. ಅಷ್ಟೇ ಅಲ್ಲ, ನಮಗೆ ಇಷ್ಟವಾದ ವಿಷಯಗಳನ್ನೇ ಬಳಸಿ ದಾರಿತಪ್ಪಿಸುತ್ತಾನೆ. ಇದಕ್ಕಾಗಿ ತಪ್ಪನ್ನು ಸರಿ ಎಂದು ನಂಬಿಸಿಬಿಡುತ್ತಾನೆ, ಇಲ್ಲಾ ಅಂದರೆ ತಪ್ಪನ್ನು ಮಾಡುವಂತೆ ನಮ್ಮನ್ನು ಪುಸಲಾಯಿಸುತ್ತಾನೆ.—ಕೊಲೊಸ್ಸೆ 2:4, 8 ಓದಿ.
2-3. (ಎ) ಕೊಲೊಸ್ಸೆ 2:8 ರಲ್ಲಿರುವ ಎಚ್ಚರಿಕೆಗೆ ನಾವು ಯಾಕೆ ಗಮನ ಕೊಡಬೇಕು? (ಬಿ) ಈ ಲೇಖನದಲ್ಲಿ ನಾವು ಏನನ್ನು ಚರ್ಚಿಸಲಿದ್ದೇವೆ?
2 ಸೈತಾನ ನಮ್ಮನ್ನು ನಿಜವಾಗಲೂ ವಂಚಿಸುತ್ತಾನಾ? ಹೌದು, ಖಂಡಿತ. ಕೊಲೊಸ್ಸೆ 2:8 ರಲ್ಲಿರುವ ಎಚ್ಚರಿಕೆಯನ್ನು ಪೌಲನು ಸತ್ಯದಲ್ಲಿ ಇಲ್ಲದವರಿಗೆ ಬರೆಯಲಿಲ್ಲ. ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟಿದ್ದ ಕ್ರೈಸ್ತರಿಗೆ ಬರೆದನು. (ಕೊಲೊ. 1:2, 5) ಹಾಗಾದರೆ ಆಗಿನ ಕ್ರೈಸ್ತರನ್ನು ವಂಚಿಸಲು ಸೈತಾನ ಹೊಂಚುಹಾಕುತ್ತಿದ್ದನು ಎಂದು ಗೊತ್ತಾಗುತ್ತದೆ. (1 ಕೊರಿಂ. 10:12) ಈಗಂತೂ ಅವನ ಪೂರ್ತಿ ಗಮನ ನಮ್ಮ ಮೇಲೇನೇ ಇದೆ. ಯಾಕೆಂದರೆ ಈಗ ಅವನ ದರ್ಬಾರು ನಡೆಯುವುದು ಭೂಮಿಯ ಮೇಲಷ್ಟೇ. ದೇವರ ಆರಾಧಕರ ಜನ್ಮ ಜಾಲಾಡಿಸುವುದೇ ಅವನ ಏಕ ಗುರಿ. (ಪ್ರಕ. 12:9, 12, 17) ಇದು ಸಾಲದಂತೆ, ಇವತ್ತು ನಮ್ಮ ಸುತ್ತ ಬರೀ ದುಷ್ಟರೂ ವಂಚಕರೇ ತುಂಬಿಕೊಂಡಿದ್ದಾರೆ. ಅವರು “ಕೆಟ್ಟದ್ದರಿಂದ ತೀರ ಕೆಟ್ಟದ್ದಕ್ಕೆ” ಹೋಗುತ್ತಿದ್ದಾರೆ.—2 ತಿಮೊ. 3:1, 13.
3 ಈ ಲೇಖನದಲ್ಲಿ, ಸೈತಾನ ಹೇಗೆ “ನಿರರ್ಥಕವಾದ ಮೋಸಕರ” ವಿಷಯಗಳನ್ನು ಉಪಯೋಗಿಸಿ ನಾವು ಯೋಚನೆ ಮಾಡುವ ರೀತಿಯನ್ನು ಬದಲಾಯಿಸಲು ಪ್ರಯತ್ನಿಸುತ್ತಾನೆ ಅಂತ ನೋಡೋಣ. ಇದಕ್ಕಾಗಿ ಸೈತಾನ ಯಾವ ಮೂರು ‘ತಂತ್ರೋಪಾಯಗಳನ್ನು’ ಉಪಯೋಗಿಸುತ್ತಾನೆ ಅಂತ ತಿಳುಕೊಳ್ಳೋಣ. (ಎಫೆ. 6:11) ಮುಂದಿನ ಲೇಖನದಲ್ಲಿ, ಸೈತಾನನ ಪ್ರಭಾವಕ್ಕೆ ಒಳಗಾಗಿ ನಾವು ಅನುಭವಿಸುತ್ತಿರುವ ಕೆಟ್ಟ ಪರಿಣಾಮಗಳನ್ನು ಹೇಗೆ ನಿಭಾಯಿಸಬಹುದೆಂದು ನೋಡೋಣ. ಈಗ, ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಿದ ಮೇಲೆ ಅವರನ್ನು ಮೋಸ ಮಾಡಲು ಸೈತಾನ ಏನು ಮಾಡಿದ ಮತ್ತು ಅದರಿಂದ ನಾವೇನು ಕಲಿಯಬಹುದು ಎಂದು ಚರ್ಚಿಸೋಣ.
ವಿಗ್ರಹಾರಾಧನೆ ಮಾಡಲು ಪ್ರಚೋದನೆ
4-6. ಧರ್ಮೋಪದೇಶಕಾಂಡ 11:10-15 ಕ್ಕೆ ಅನುಸಾರ, ಇಸ್ರಾಯೇಲ್ಯರು ವಾಗ್ದತ್ತ ದೇಶಕ್ಕೆ ಹೋದ ಮೇಲೆ ವ್ಯವಸಾಯ ಮಾಡುವ ವಿಧದಲ್ಲಿ ಯಾವ ಬದಲಾವಣೆ ಮಾಡಬೇಕಿತ್ತು?
4 ಇಸ್ರಾಯೇಲ್ಯರು ವಿಗ್ರಹಾರಾಧನೆ ಮಾಡುವಂತೆ ಸೈತಾನ ತುಂಬ ಚಾಣಾಕ್ಷತೆಯಿಂದ ಪ್ರಚೋದಿಸಿದನು. ಹೇಗೆ? ಅವರಿಗೆ ಆಹಾರ ಬೇಕಿತ್ತು ಅಂತ ಅವನಿಗೆ ಗೊತ್ತಿತ್ತು. ಇದನ್ನೇ ಬಂಡವಾಳವಾಗಿ ಉಪಯೋಗಿಸಿಕೊಂಡು ಅವರನ್ನು ತಪ್ಪುದಾರಿಗೆ ಎಳೆದನು. ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಿದಾಗ ಅವರು ಕೃಷಿ ಮಾಡುವ ರೀತಿಯನ್ನು ಬದಲಾಯಿಸಬೇಕಿತ್ತು. ಅವರು ಐಗುಪ್ತದಲ್ಲಿ ಇದ್ದಾಗ ನೈಲ್ ನದಿಯಿಂದ ಸಿಗುತ್ತಿದ್ದ ನೀರನ್ನು ಉಪಯೋಗಿಸಿ ವ್ಯವಸಾಯ ಮಾಡುತ್ತಿದ್ದರು. ಆದರೆ ವಾಗ್ದತ್ತ ದೇಶದಲ್ಲಿ ವ್ಯವಸಾಯ ಮಾಡಲು ಒಂದು ದೊಡ್ಡ ನದಿಯಿಂದ ಬಂದ ನೀರನ್ನಲ್ಲ, ಮಳೆಯನ್ನು ಮತ್ತು ಇಬ್ಬನಿಯನ್ನು ಅವರು ಅವಲಂಬಿಸಬೇಕಾಗಿತ್ತು. (ಧರ್ಮೋಪದೇಶಕಾಂಡ 11:10-15 ಓದಿ; ಯೆಶಾ. 18:4, 5) ಹಾಗಾಗಿ ಅವರು ಹೊಸ ವಿಧಾನದಲ್ಲಿ ವ್ಯವಸಾಯ ಮಾಡಬೇಕಿತ್ತು. ಇದು ಸುಲಭ ಆಗಿರಲಿಲ್ಲ. ಯಾಕೆಂದರೆ ವ್ಯವಸಾಯ ಮಾಡುವ ಅನುಭವ ಇದ್ದ ಹೆಚ್ಚಿನ ಜನ ಅರಣ್ಯದಲ್ಲೇ ತೀರಿಹೋಗಿದ್ದರು.
ಇಸ್ರಾಯೇಲಿನಲ್ಲಿದ್ದ ರೈತರ ಮನಸ್ಸನ್ನು ಬದಲಾಯಿಸಲು ಸೈತಾನ ಏನು ಮಾಡಿದನು? (ಪ್ಯಾರ 4-6 ನೋಡಿ)b
5 ವಾಗ್ದತ್ತ ದೇಶದಲ್ಲಿ ಹೀಗೆ ಸನ್ನಿವೇಶ ಬದಲಾಗುತ್ತೆ ಅಂತ ಯೆಹೋವನು ತನ್ನ ಜನರಿಗೆ ವಿವರಿಸಿದ ನಂತರ ಈ ಎಚ್ಚರಿಕೆ ಕೊಟ್ಟನು: ‘ನೀವು ಎಚ್ಚರದಿಂದಿರಬೇಕು; ನೀವು ಭ್ರಾಂತಿಗೊಂಡು ಯೆಹೋವನು ಹೇಳಿದ ಮಾರ್ಗವನ್ನು ಬಿಟ್ಟು ಇತರ ದೇವರುಗಳನ್ನು ಅವಲಂಬಿಸಿ ಪೂಜಿಸಬಾರದು.’ (ಧರ್ಮೋ. 11:16, 17) ಮೇಲುಮೇಲಿಂದ ನೋಡುವಾಗ, ಈ ಎಚ್ಚರಿಕೆಗೂ ವ್ಯವಸಾಯಕ್ಕೂ ಯಾವ ಸಂಬಂಧನೂ ಇಲ್ಲ ಅಂತ ಅನಿಸಬಹುದು. ವ್ಯವಸಾಯದ ಬಗ್ಗೆ ಮಾತಾಡುವಾಗ ಯೆಹೋವನು ಸುಳ್ಳು ದೇವರುಗಳನ್ನು ಆರಾಧಿಸುವುದರ ಬಗ್ಗೆ ಯಾಕೆ ಎಚ್ಚರಿಕೆ ಕೊಟ್ಟನು?
6 ವ್ಯವಸಾಯ ಮಾಡುವ ಹೊಸ ವಿಧಾನಗಳನ್ನು ಕಲಿಯಲು ಇಸ್ರಾಯೇಲ್ಯರು ತಮ್ಮ ಸುತ್ತಲಿದ್ದ ವಿಧರ್ಮಿ ಜನರ ಹತ್ತಿರ ಹೋಗಬಹುದು ಅಂತ ಯೆಹೋವನಿಗೆ ಗೊತ್ತಿತ್ತು. ಆ ಜನರಿಗೆ ವ್ಯವಸಾಯದಲ್ಲಿ ಇಸ್ರಾಯೇಲ್ಯರಿಗಿಂತ ಹೆಚ್ಚು ಅನುಭವ ಇತ್ತು. ಇಸ್ರಾಯೇಲ್ಯರು ಅವರಿಂದ ಕೆಲವು ಒಳ್ಳೇ ವಿಧಾನಗಳನ್ನು ಕಲಿಯಬಹುದಿತ್ತು. ಆದರೆ ಇದರಲ್ಲಿ ಒಂದು ಅಪಾಯ ಇತ್ತು. ಕಾನಾನಿನ ರೈತರು ಬಾಳನ ಆರಾಧಕರಾಗಿದ್ದರು. ಬಾಳನೇ ಆಕಾಶದ ಒಡೆಯ ಮತ್ತು ಮಳೆರಾಯ ಅಂದುಕೊಂಡಿದ್ದರು. ತನ್ನ ಜನರು ಇಂಥ ವಿಷಯಗಳ ಹಿಂದೆ ಹೋಗುವುದು ಯೆಹೋವನಿಗೆ ಇಷ್ಟ ಇರಲಿಲ್ಲ. ಆದರೂ ಇಸ್ರಾಯೇಲ್ಯರು ಪದೇ ಪದೇ ಬಾಳನ ಆರಾಧನೆ ಮಾಡಿದರು. (ಅರ. 25:3, 5; ನ್ಯಾಯ. 2:13; 1 ಅರ. 18:18) ತಪ್ಪುದಾರಿಗೆ ಇಳಿದ ಇಸ್ರಾಯೇಲ್ಯರನ್ನು ಸೈತಾನ ಹೇಗೆ ತನ್ನ ಕೈಗೊಂಬೆ ಮಾಡಿಕೊಂಡ ಅಂತ ಈಗ ನೋಡೋಣ.
ಇಸ್ರಾಯೇಲ್ಯರನ್ನು ಹಿಡಿಯಲು ಸೈತಾನ ಬಳಸಿದ ಮೂರು ಗಾಳ
7. ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಿದಾಗ ಅವರ ನಂಬಿಕೆ ಹೇಗೆ ಪರೀಕ್ಷೆಗೆ ಒಳಗಾಯಿತು?
7 ಸೈತಾನ ಬಳಸಿದ ಮೊದಲನೇ ಗಾಳ – ಸಹಜವಾದ ಒಂದು ಆಸೆಯನ್ನು ಪೂರೈಸಿಕೊಳ್ಳುವ ತವಕ. ಇಸ್ರಾಯೇಲ್ಯರು ಮಳೆಯನ್ನು ನಂಬಿಕೊಂಡು ವ್ಯವಸಾಯ ಮಾಡಬೇಕಾಯಿತು. ವಾಗ್ದತ್ತ ದೇಶದಲ್ಲಿ ಪ್ರತಿ ವರ್ಷ ಏಪ್ರಿಲ್ ತಿಂಗಳ ಕೊನೆಯಿಂದ ಸೆಪ್ಟೆಂಬರ್ ತಿಂಗಳ ವರೆಗೆ ತುಂಬ ಕಮ್ಮಿ ಮಳೆ ಬೀಳುತ್ತಿತ್ತು. ಹೆಚ್ಚಾಗಿ ಅಕ್ಟೋಬರ್ ತಿಂಗಳಿಂದ ಆರಂಭವಾಗುವ ಮಳೆಯಿಂದಲೇ ಜನರು ಬೆಳೆ ಬೆಳೆದು ಜೀವನ ನಡೆಸುತ್ತಿದ್ದರು. ಮಳೆ-ಬೆಳೆ ಚೆನ್ನಾಗಿ ಆಗಬೇಕಾದರೆ ಅವರ ಸುತ್ತಲಿದ್ದ ದೇಶಗಳವರು ಮಾಡುತ್ತಿದ್ದ ಆಚರಣೆಗಳನ್ನು ಇಸ್ರಾಯೇಲ್ಯರೂ ಮಾಡಬೇಕೆಂದು ಸೈತಾನ ನಂಬಿಸಿದ. ಕೆಲವು ಸಂಪ್ರದಾಯಗಳನ್ನು ಮಾಡಿದರೆ ತಮ್ಮ ದೇವರುಗಳು ಸಮಯಕ್ಕೆ ಸರಿಯಾಗಿ ಮಳೆ ಬರುವ ಹಾಗೆ ಮಾಡುತ್ತಾರೆ ಅಂತ ಇಸ್ರಾಯೇಲ್ಯರ ನೆರೆಹೊರೆ ದೇಶದವರು ಅಂದುಕೊಂಡಿದ್ದರು. ಯೆಹೋವನಲ್ಲಿ ನಂಬಿಕೆ ಇಲ್ಲದ ಕೆಲವು ಇಸ್ರಾಯೇಲ್ಯರು ಈ ಸಂಪ್ರದಾಯಗಳನ್ನು ಮಾಡಿದರೆ ಮಾತ್ರ ಬರಗಾಲದಿಂದ ಮುಕ್ತಿ ಸಿಗುತ್ತದೆ ಎಂದು ನೆನಸಿದರು. ಹಾಗಾಗಿ ಅವರು ಸುಳ್ಳು ದೇವರಾದ ಬಾಳನನ್ನು ಮೆಚ್ಚಿಸಲು ವಿಧರ್ಮಿ ಪದ್ಧತಿಗಳನ್ನು ಆಚರಿಸಿದರು.
8. ಸೈತಾನ ಬಳಸಿದ ಎರಡನೇ ಗಾಳ ಯಾವುದು? ವಿವರಿಸಿ.
8 ಸೈತಾನ ಇಸ್ರಾಯೇಲ್ಯರನ್ನು ಹಿಡಿಯಲು ಬಳಸಿದ ಎರಡನೇ ಗಾಳ – ಅನೈತಿಕ ಆಸೆಗಳನ್ನು ತೀರಿಸಿಕೊಳ್ಳುವ ತವಕ. ವಿಧರ್ಮಿಗಳು ತಮ್ಮ ದೇವರುಗಳ ಆರಾಧನೆಯ ಭಾಗವಾಗಿ ತುಂಬ ಅಸಹ್ಯವಾದ ಅನೈತಿಕ ಕೃತ್ಯಗಳನ್ನು ಮಾಡುತ್ತಿದ್ದರು. ಇಂಥ ವಿಕೃತ ರೀತಿಯ ಆರಾಧನೆಯಲ್ಲಿ ದೇವದಾಸ, ದೇವದಾಸಿ ಪದ್ಧತಿಯೂ ಇತ್ತು. ಸಲಿಂಗಕಾಮ ಮತ್ತು ಬೇರೆ ರೀತಿಯ ಲೈಂಗಿಕ ಅನೈತಿಕತೆಯನ್ನು ಅನುಮತಿಸುವುದಷ್ಟೇ ಅಲ್ಲ, ಅವರಲ್ಲಿ ಮಾಮೂಲಿನೂ ಆಗಿಹೋಯಿತು. (ಧರ್ಮೋ. 23:17, 18; 1 ಅರ. 14:24) ಹೀಗೆಲ್ಲಾ ಮಾಡಿದರೆ ಅವರ ದೇವರುಗಳು ತಮ್ಮ ದೇಶದಲ್ಲಿ ಒಳ್ಳೇ ಬೆಳೆ ಕೊಡುತ್ತಾರೆ ಎಂದು ವಿಧರ್ಮಿಗಳು ನಂಬುತ್ತಿದ್ದರು. ಅನೇಕ ಇಸ್ರಾಯೇಲ್ಯರು ವಿಧರ್ಮಿಗಳ ಅನೈತಿಕ ಪದ್ಧತಿಗಳಿಗೆ ಆಕರ್ಷಿತರಾಗಿ ಸುಳ್ಳು ದೇವರುಗಳ ಆರಾಧನೆ ಮಾಡಿದರು. ಇದರಿಂದ ಸೈತಾನ ಹಾಕಿದ ಗಾಳಕ್ಕೆ ಸಿಕ್ಕಿಕೊಂಡರು.
9. ಹೋಶೇಯ 2:16, 17 ರಲ್ಲಿ ತಿಳಿಸಿರುವ ಪ್ರಕಾರ, ಸೈತಾನ ಯೆಹೋವನ ಗುರುತನ್ನು ಹೇಗೆ ಮರೆಮಾಡಲು ಪ್ರಯತ್ನಿಸಿದನು?
9 ಸೈತಾನ ಹಾಕಿದ ಮೂರನೇ ಗಾಳ – ಯೆಹೋವನ ಗುರುತನ್ನೇ ಮರೆಮಾಡುವ ಪ್ರಯತ್ನ. ಪ್ರವಾದಿ ಯೆರೆಮೀಯನ ದಿನಗಳಲ್ಲಿ, ಸುಳ್ಳು ಪ್ರವಾದಿಗಳು “ಬಾಳನನ್ನು ಸೇರಿ” ತನ್ನ ಜನರು ತನ್ನ ಹೆಸರನ್ನು ಮರೆಯುವಂತೆ ಮಾಡಿದ್ದಾರೆ ಎಂದು ಯೆಹೋವನು ಹೇಳಿದನು. (ಯೆರೆ. 23:26) ಸಮಯ ಹೋದ ಹಾಗೆ ಇಸ್ರಾಯೇಲ್ಯರು ಯೆಹೋವನ ಹೆಸರನ್ನು ಬಳಸುವುದನ್ನು ನಿಲ್ಲಿಸಿ, ಅದರ ಬದಲು ಬಾಳನ ಹೆಸರನ್ನು ಬಳಸಿದರು. (ಬಾಳ ಅಂದರೆ “ಯಜಮಾನ” “ಒಡೆಯ” ಎಂದರ್ಥ.) ಇದರಿಂದ ಇಸ್ರಾಯೇಲ್ಯರಿಗೆ ಯೆಹೋವ ಮತ್ತು ಬಾಳನ ಮಧ್ಯೆ ಇದ್ದ ವ್ಯತ್ಯಾಸ ಗೊತ್ತಾಗದೇ ಹೋಯಿತು. ಹೀಗೆ ಅವರು ಬಾಳನ ಆರಾಧನೆ, ಯೆಹೋವನ ಆರಾಧನೆ ಎರಡನ್ನೂ ಸೇರಿಸಿ ಒಂದು ಮಿಶ್ರಿತ ಆರಾಧನೆಯನ್ನು ಮಾಡಲು ಆರಂಭಿಸಿದರು.—ಹೋಶೇಯ 2:16, 17 ಓದಿ.
ಸೈತಾನ ಇಂದು ಬಳಸುತ್ತಿರುವ ಗಾಳ
10. ಇಂದು ಸೈತಾನ ಯಾವ ಗಾಳಗಳನ್ನು ಬಳಸುತ್ತಾನೆ?
10 ಸೈತಾನ ಇಂದು ಕೂಡ ಅದೇ ಗಾಳಗಳನ್ನು ಬಳಸುತ್ತಿದ್ದಾನೆ. ಸಹಜ ಆಸೆಗಳನ್ನು ಪೂರೈಸಿಕೊಳ್ಳುವ ತವಕವನ್ನು ಹೆಚ್ಚಿಸುತ್ತಾನೆ, ಲೈಂಗಿಕ ಅನೈತಿಕತೆಯನ್ನು ಮಾಡುವ ಆಸೆಯನ್ನು ಹುಟ್ಟಿಸುತ್ತಾನೆ ಮತ್ತು ಯೆಹೋವನ ಗುರುತನ್ನು ಮರೆಮಾಡಲು ಪ್ರಯತ್ನಿಸುತ್ತಾನೆ. ನಾವು ಮೊದಲು ಕೊನೆಯ ಗಾಳದ ಬಗ್ಗೆ ಮಾತಾಡೋಣ.
11. ಯೆಹೋವನ ಗುರುತನ್ನು ಸೈತಾನ ಹೇಗೆ ಮರೆಮಾಡಿದ್ದಾನೆ?
11 ಸೈತಾನ ಯೆಹೋವನ ಗುರುತನ್ನು ಮರೆಮಾಡುತ್ತಾನೆ. ಯೇಸುವಿನ ಅಪೊಸ್ತಲರು ತೀರಿಹೋದ ಮೇಲೆ ಕ್ರೈಸ್ತರೆಂದು ಹೇಳಿಕೊಂಡ ಕೆಲವರು ಸುಳ್ಳು ಬೋಧನೆಗಳನ್ನು ಹಬ್ಬಿಸಲು ಆರಂಭಿಸಿದರು. (ಅ. ಕಾ. 20:29, 30; 2 ಥೆಸ. 2:3) ಈ ಧರ್ಮಭ್ರಷ್ಟರು ಒಬ್ಬನೇ ಸತ್ಯ ದೇವರ ಗುರುತನ್ನು ಮರೆಮಾಡಿದರು. ಉದಾಹರಣೆಗೆ, ಅವರು ಬೈಬಲನ್ನು ಭಾಷಾಂತರ ಮಾಡಿದಾಗ ದೇವರ ಹೆಸರನ್ನು ತೆಗೆದು ಅದರ ಜಾಗದಲ್ಲಿ “ಕರ್ತ” ಎಂಬ ಬಿರುದನ್ನು ಸೇರಿಸಿದರು. ಇದರಿಂದ ಬೈಬಲನ್ನು ಓದುವ ಒಬ್ಬ ವ್ಯಕ್ತಿಗೆ ಯೆಹೋವನ ಹೆಸರನ್ನು ತಿಳುಕೊಳ್ಳಲು ಮತ್ತು ಆತನಿಗೂ ಬೇರೆ ದೇವರುಗಳಿಗೂ ಏನು ವ್ಯತ್ಯಾಸ ಎಂದು ಅರ್ಥಮಾಡಿಕೊಳ್ಳಲು ಕಷ್ಟ ಆಯಿತು. (1 ಕೊರಿಂ. 8:5) ಅವರು “ಕರ್ತ” ಎಂಬ ಪದವನ್ನು ಯೆಹೋವನಿಗೂ ಯೇಸುವಿಗೂ ಉಪಯೋಗಿಸಿದರು. ಇದರಿಂದ ಯೆಹೋವ ಮತ್ತು ಯೇಸು ಬೇರೆಬೇರೆ ವ್ಯಕ್ತಿಗಳು, ಅವರಿಗೆ ಬೇರೆಬೇರೆ ಸ್ಥಾನ ಇದೆ ಎಂದು ಅರ್ಥಮಾಡಿಕೊಳ್ಳಲು ಕಷ್ಟ ಆಯಿತು. (ಯೋಹಾ. 17:3) ಇದರಿಂದ ತ್ರಿಯೇಕ ಬೋಧನೆ ಹುಟ್ಟಿಕೊಂಡಿತು. ಇದು ದೇವರ ವಾಕ್ಯದಲ್ಲಿ ಇಲ್ಲದ ಬೋಧನೆ ಆಗಿದೆ. ಹೀಗೆ ಅನೇಕರ ಮನಸ್ಸಲ್ಲಿ ದೇವರು ಒಬ್ಬ ನಿಗೂಢ ವ್ಯಕ್ತಿಯಾಗಿಬಿಟ್ಟಿದ್ದಾನೆ. ದೇವರ ಬಗ್ಗೆ ತಿಳುಕೊಳ್ಳಲು ಸಾಧ್ಯ ಇಲ್ಲ ಎಂದು ಜನರು ನಂಬುತ್ತಾರೆ. ಇದು ಎಂಥ ಸುಳ್ಳು!—ಅ. ಕಾ. 17:27.
ಅನೈತಿಕ ಆಸೆಗಳನ್ನು ಹೆಚ್ಚಿಸಲು ಸೈತಾನ ಸುಳ್ಳು ಧರ್ಮವನ್ನು ಹೇಗೆ ಬಳಸಿದ್ದಾನೆ? (ಪ್ಯಾರ 12 ನೋಡಿ)c
12. (ಎ) ಸುಳ್ಳು ಧರ್ಮದ ಮೂಲಕ ಯಾವುದು ಹೆಚ್ಚಾಗಿದೆ? (ಬಿ) ಇದರ ಫಲಿತಾಂಶ ಏನಾಗಿದೆ ಎಂದು ರೋಮನ್ನರಿಗೆ 1:28-31 ವಿವರಿಸುತ್ತದೆ?
12 ಸೈತಾನ ಅನೈತಿಕ ಆಸೆಗಳನ್ನು ಪೂರೈಸಿಕೊಳ್ಳುವ ತವಕವನ್ನು ಹೆಚ್ಚಿಸುತ್ತಾನೆ. ಅವನು ಪುರಾತನ ಇಸ್ರಾಯೇಲಿನ ಕಾಲದಲ್ಲಿ, ಲೈಂಗಿಕ ಅನೈತಿಕತೆಯನ್ನು ಹೆಚ್ಚಿಸಲು ಸುಳ್ಳು ಧರ್ಮವನ್ನು ಬಳಸಿದನು. ಇಂದೂ ಅದನ್ನೇ ಮಾಡುತ್ತಾನೆ. ಸುಳ್ಳು ಧರ್ಮ ಅನೈತಿಕ ನಡತೆಯನ್ನು ಅನುಮತಿಸುವುದಷ್ಟೇ ಅಲ್ಲ, ಅದರಲ್ಲಿ ಏನು ತಪ್ಪಿಲ್ಲ ಅಂತ ಕೂಡ ಹೇಳುತ್ತದೆ. ಇದರಿಂದ ದೇವರ ಸೇವೆ ಮಾಡುತ್ತೇವೆಂದು ಹೇಳುವ ಎಷ್ಟೋ ಜನರು ಆತನ ನೈತಿಕ ಮಟ್ಟಗಳನ್ನು ಮೂಲೆಗುಂಪು ಮಾಡಿದ್ದಾರೆ. ಇದರ ಫಲಿತಾಂಶ ಏನಾಗಿದೆ ಎಂದು ಅಪೊಸ್ತಲ ಪೌಲನು ರೋಮನ್ನರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾನೆ. (ರೋಮನ್ನರಿಗೆ 1:28-31 ಓದಿ.) “ಅನಂಗೀಕೃತವಾದ” ವಿಷಯಗಳಲ್ಲಿ ಎಲ್ಲಾ ರೀತಿಯ ಲೈಂಗಿಕ ಅನೈತಿಕತೆ ಒಳಗೂಡಿದೆ, ಸಲಿಂಗಕಾಮ ಕೂಡ ಸೇರಿದೆ. (ರೋಮ. 1:24-27, 32; ಪ್ರಕ. 2:20) ಇದೆಲ್ಲಾ ತಪ್ಪು ಎಂದು ಬೈಬಲ್ ಸ್ಪಷ್ಟವಾಗಿ ಹೇಳುತ್ತದೆ. ನಾವು ಬೈಬಲ್ ಹೇಳುವ ಪ್ರಕಾರ ನಡೆಯುವುದು ತುಂಬ ಪ್ರಾಮುಖ್ಯ.
13. ಸೈತಾನ ಬಳಸುವ ಇನ್ನೊಂದು ಗಾಳ ಯಾವುದು?
13 ಸೈತಾನ ಸಹಜವಾದ ಆಸೆಗಳನ್ನು ಪೂರೈಸಿಕೊಳ್ಳುವ ತವಕವನ್ನು ಹೆಚ್ಚಿಸುತ್ತಾನೆ. ಕುಟುಂಬಕ್ಕೆ ಬೇಕಾದದ್ದನ್ನು ದುಡಿದು ತರಬೇಕೆಂಬ ಆಸೆ ಸಹಜ. (1 ತಿಮೊ. 5:8) ಇದಕ್ಕಾಗಿ ನಾವು ಓದಲು, ಬರೆಯಲು, ಲೆಕ್ಕ ಮಾಡಲು ಇನ್ನೂ ಅನೇಕ ವಿಷಯಗಳನ್ನು ಕಲಿಯಬೇಕಾಗುತ್ತದೆ. ಶಾಲೆಗೆ ಹೋಗಿ ಚೆನ್ನಾಗಿ ಓದುವ ಮೂಲಕ ನಾವು ಈ ಮೂಲಭೂತ ವಿಷಯಗಳನ್ನು ಕಲಿಯಲು ಆಗುತ್ತದೆ. ಆದರೆ ನಾವು ಜಾಗ್ರತೆ ವಹಿಸಬೇಕು. ಅನೇಕ ದೇಶಗಳಲ್ಲಿರುವ ಶಾಲೆಗಳು ಈ ವಿಷಯಗಳನ್ನು ಕಲಿಸುವುದಷ್ಟೇ ಅಲ್ಲ, ಲೋಕದ ಜ್ಞಾನವನ್ನೂ ಮಕ್ಕಳ ತಲೆಯಲ್ಲಿ ತುಂಬಲು ಪ್ರಯತ್ನಿಸುತ್ತವೆ. ‘ದೇವರು ನಿಜವಾಗಲೂ ಇದ್ದಾನಾ?’ ಎಂದು ಪ್ರಶ್ನಿಸುವಂತೆ ಮತ್ತು ಬೈಬಲನ್ನು ತಿರಸ್ಕರಿಸುವಂತೆ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಬುದ್ಧಿವಂತರು ಸೃಷ್ಟಿಯಲ್ಲಿ ಅಲ್ಲ, ವಿಕಾಸವಾದದಲ್ಲಿ ನಂಬಿಕೆ ಇಡುತ್ತಾರೆ ಎಂದು ಕಲಿಸಲಾಗುತ್ತದೆ. (ರೋಮ. 1:21-23) ಈ ಎಲ್ಲಾ ವಿಷಯಗಳು ‘ದೇವರ ವಿವೇಕಕ್ಕೆ’ ವಿರುದ್ಧವಾಗಿದೆ.—1 ಕೊರಿಂ. 1:19-21; 3:18-20.
14. ಈ ಲೋಕದ ಜ್ಞಾನ ಏನು ಮಾಡುತ್ತದೆ?
14 ಈ ಲೋಕದ ಜ್ಞಾನದಿಂದಾಗಿ ಜನರು ದೇವರ ನೀತಿಯುತ ಮಟ್ಟಗಳನ್ನು ತಿರಸ್ಕಾರ ಮಾಡಿಬಿಡುತ್ತಾರೆ. ಅದು ಪವಿತ್ರಾತ್ಮದ ಫಲವನ್ನು ಉತ್ಪಾದಿಸುವುದಿಲ್ಲ. ‘ಶರೀರಭಾವದ ಕಾರ್ಯಗಳನ್ನು’ ಹೆಚ್ಚಿಸುತ್ತದೆ. (ಗಲಾ. 5:19-23) ಜನರನ್ನು ಅಹಂಕಾರಿಗಳಾಗಿ ಮಾಡುತ್ತದೆ. ಇದರಿಂದ ಜನರು ‘ಸ್ವಪ್ರೇಮಿಗಳಾಗಿದ್ದಾರೆ.’ (2 ತಿಮೊ. 3:2-4) ಆದರೆ ತನ್ನ ಜನರು ದೀನರಾಗಿರಬೇಕೆಂದು ಯೆಹೋವನು ಬಯಸುತ್ತಾನೆ. (2 ಸಮು. 22:28) ಉನ್ನತ ಶಿಕ್ಷಣವನ್ನು ಪಡೆಯಲು ಹೋದ ಕೆಲವು ಕ್ರೈಸ್ತರು ದೇವರ ತರ ಅಲ್ಲ, ಈ ಲೋಕದ ತರ ಯೋಚಿಸಲು ಆರಂಭಿಸಿದ್ದಾರೆ. ಇದರ ಸಂಬಂಧವಾಗಿ ಒಂದು ಉದಾಹರಣೆ ನೋಡೋಣ.
ಈ ಲೋಕದ ಜ್ಞಾನ ನಮ್ಮ ಮೇಲೆ ಯಾವ ಪ್ರಭಾವ ಬೀರುತ್ತದೆ? (ಪ್ಯಾರ 14-16 ನೋಡಿ)d
15-16. ಒಬ್ಬ ಸಹೋದರಿಯ ಅನುಭವದಿಂದ ನೀವೇನು ಕಲಿತಿರಿ?
15 ಕಳೆದ 15 ವರ್ಷಗಳಿಂದ ಪೂರ್ಣ ಸಮಯದ ಸೇವೆ ಮಾಡುತ್ತಿರುವ ಒಬ್ಬ ಸಹೋದರಿ ಹೇಳುವುದು: “ಒಬ್ಬ ದೀಕ್ಷಾಸ್ನಾನ ಪಡೆದ ಸಾಕ್ಷಿಯಾಗಿ ನಾನು, ಉನ್ನತ ಶಿಕ್ಷಣ ಮಾಡುವುದರಲ್ಲಿ ಯಾವ ಅಪಾಯ ಇದೆ ಎಂದು ನಮ್ಮ ಪ್ರಕಾಶನಗಳಲ್ಲಿ ಓದಿದ್ದೆ ಮತ್ತು ಭಾಷಣಗಳಲ್ಲಿ ಕೇಳಿಸಿಕೊಂಡಿದ್ದೆ. ಆದರೆ ಅದನ್ನು ಗಂಭೀರವಾಗಿ ತಗೊಳ್ಳಲಿಲ್ಲ. ಆ ಸಲಹೆ ನನಗೆ ಅನ್ವಯಿಸಲ್ಲ ಅಂದುಕೊಂಡಿದ್ದೆ.” ಅವರಿಗೆ ಯಾವ ಸವಾಲುಗಳು ಎದುರಾಯಿತು? “ನನ್ನ ಸಮಯ, ಶಕ್ತಿ ಎಲ್ಲಾ ಓದಿನ ಕಡೆನೇ ಹೋಯಿತು. ಮೊದಲು ತರ ಯೆಹೋವನಿಗೆ ಪ್ರಾರ್ಥನೆ ಮಾಡಲು ಹೆಚ್ಚು ಸಮಯ ಸಿಗುತ್ತಿರಲಿಲ್ಲ. ಸೇವೆಯಲ್ಲಿ ಬೈಬಲ್ ವಿಷಯಗಳನ್ನು ಮಾತಾಡಿ ಆನಂದಿಸಲು ಸಮಯ ಇರುತ್ತಿರಲಿಲ್ಲ. ಕೂಟಗಳಿಗೆ ಚೆನ್ನಾಗಿ ತಯಾರಿ ಮಾಡಲು ಸಹ ಆಗುತ್ತಿರಲಿಲ್ಲ. ಉನ್ನತ ಶಿಕ್ಷಣಕ್ಕೆ ಗಮನ ಕೊಟ್ಟದ್ದರಿಂದ ಯೆಹೋವನ ಜೊತೆ ಇದ್ದ ನನ್ನ ಸಂಬಂಧಕ್ಕೆ ತೊಂದರೆ ಆಗುತ್ತಿದೆ ಎಂದು ಗೊತ್ತಾದಾಗ ನಾನು ತಕ್ಷಣ ಕ್ರಮ ತಗೊಂಡೆ. ಉನ್ನತ ಶಿಕ್ಷಣವನ್ನು ಬಿಟ್ಟುಬಿಟ್ಟೆ” ಎಂದವರು ಹೇಳುತ್ತಾರೆ.
16 ಉನ್ನತ ಶಿಕ್ಷಣದಿಂದ ಅವರ ಮನಸ್ಸಿನ ಮೇಲೆ ಯಾವ ಪ್ರಭಾವ ಆಯಿತು? ಅವರು ಹೇಳುವುದು: “ನಾನು ತಗೊಂಡ ಶಿಕ್ಷಣ ಬೇರೆಯವರನ್ನು ಕೀಳಾಗಿ ನೋಡುವಂತೆ ಕಲಿಸಿತು, ನನ್ನ ಸಹೋದರ-ಸಹೋದರಿಯರಲ್ಲಿ ತಪ್ಪು ಹುಡುಕುವಂತೆ ಮಾಡಿತು, ಅವರಿಂದ ಅತಿಯಾಗಿ ನಿರೀಕ್ಷಿಸುವಂತೆ ಮಾಡಿತು ಮತ್ತು ಅವರಿಂದ ದೂರ ಇರುವಂತೆ ಮಾಡಿತು ಅಂತ ಹೇಳಲು ನನಗೆ ನಾಚಿಕೆ ಆಗುತ್ತದೆ. ಈ ದುರ್ಗುಣಗಳನ್ನು ಬಿಡಲು ನನಗೆ ತುಂಬ ಸಮಯ ಹಿಡಿಯಿತು. ನಮ್ಮ ಸ್ವರ್ಗೀಯ ತಂದೆ ತನ್ನ ಸಂಘಟನೆಯ ಮೂಲಕ ನಮಗೆ ಕೊಡುವ ಎಚ್ಚರಿಕೆಗಳನ್ನು ತಿರಸ್ಕರಿಸಿದರೆ ಏನಾಗುತ್ತದೆ ಅಂತ ನಾನು ನನ್ನ ಸ್ವಂತ ಅನುಭವದಿಂದ ಕಲಿತೆ. ನನ್ನ ಬಗ್ಗೆ ನನಗಿಂತ ಚೆನ್ನಾಗಿ ಯೆಹೋವನಿಗೆ ಗೊತ್ತಿತ್ತು. ಹಾಗಾಗಿ ದೇವರು ಕೊಟ್ಟ ಸಲಹೆಯನ್ನು ನಾನು ಪಾಲಿಸಬೇಕಿತ್ತು. ಪಾಲಿಸಿದ್ದರೆ ಇಷ್ಟೆಲ್ಲಾ ಕಷ್ಟ ಪಡಬೇಕಾಗಿರಲಿಲ್ಲ.”
17. (ಎ) ನಾವು ಯಾವುದಕ್ಕೆ ಅವಕಾಶ ಕೊಡಲೇಬಾರದು? (ಬಿ) ಮುಂದಿನ ಲೇಖನದಲ್ಲಿ ನಾವು ಏನನ್ನು ಚರ್ಚಿಸಲಿದ್ದೇವೆ?
17 ಸೈತಾನನ ಲೋಕದ ‘ತತ್ತ್ವಜ್ಞಾನ ಮತ್ತು ನಿರರ್ಥಕವಾದ ಮೋಸಕರ ಮಾತುಗಳು’ ನಮ್ಮನ್ನು ಬೇಟೆಯಾಗಿ ಹಿಡುಕೊಂಡು ಹೋಗಲು ನಾವು ಅವಕಾಶ ಕೊಡಲೇಬಾರದು. ಸೈತಾನ ಹಾಕುವ ಗಾಳದಿಂದ ತಪ್ಪಿಸಿಕೊಳ್ಳಲು ಸರ್ವಪ್ರಯತ್ನ ಮಾಡಿ. (1 ಕೊರಿಂ. 3:18; 2 ಕೊರಿಂ. 2:11) ನೀವು ಯೆಹೋವನನ್ನು ಮರೆತುಬಿಡುವಂತೆ ಮಾಡಲು ಸೈತಾನ ಹಾಕುವ ಪ್ರಯತ್ನಗಳು ಮಣ್ಣುಮುಕ್ಕುವಂತೆ ಮಾಡಿ. ಯೆಹೋವನ ಉನ್ನತ ನೈತಿಕ ಮಟ್ಟಗಳಿಗೆ ಅನುಸಾರ ಯಾವಾಗಲೂ ಜೀವಿಸಿ. ಯೆಹೋವನು ಕೊಡುವ ಬುದ್ಧಿ-ಉಪದೇಶವನ್ನು ತಿರಸ್ಕರಿಸುವಂತೆ ಮಾಡಲು ಸೈತಾನ ಏನೇ ಮಾಡಿದರೂ ಅದಕ್ಕೆ ಜಾಗ ಕೊಡಬೇಡಿ. ಆದರೆ ಈ ಲೋಕದ ಯೋಚನಾ ರೀತಿ ಈಗಾಗಲೇ ನಿಮ್ಮ ಮೇಲೆ ಪ್ರಭಾವ ಬೀರಿದ್ದರೆ ಆಗೇನು ಮಾಡುತ್ತೀರಿ? “ಬಲವಾಗಿ ಬೇರೂರಿರುವ” ವಿಷಯಗಳನ್ನೂ ಕಿತ್ತುಹಾಕಲು ದೇವರ ವಾಕ್ಯ ಹೇಗೆ ಸಹಾಯ ಮಾಡುತ್ತದೆ ಎಂದು ಮುಂದಿನ ಲೇಖನದಲ್ಲಿ ನೋಡೋಣ.—2 ಕೊರಿಂ. 10:4, 5.
ಗೀತೆ 11 ಯೆಹೋವನ ಹೃದಯವನ್ನು ಸಂತೋಷಪಡಿಸುವುದು
a ಜನರನ್ನು ಮೋಸ ಮಾಡುವುದರಲ್ಲಿ ಸೈತಾನನು ಎತ್ತಿದ ಕೈ. ಎಷ್ಟೋ ಜನರು ತಾವು ಸ್ವತಂತ್ರರಾಗಿದ್ದೇವೆ ಅಂತ ಅಂದುಕೊಳ್ಳುತ್ತಾರೆ, ಆದರೆ ಅವರು ಸೈತಾನನ ಕೈಗೊಂಬೆಯಾಗಿದ್ದಾರೆ. ಜನರನ್ನು ಹಿಡಿಯಲು ಸೈತಾನನು ಬಳಸುವ ಬೇರೆಬೇರೆ ಕುತಂತ್ರಗಳ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.
b ಚಿತ್ರ ವಿವರಣೆ: ಕಾನಾನ್ಯರು ತಮ್ಮ ಸಹವಾಸ ಮಾಡುತ್ತಿದ್ದ ಇಸ್ರಾಯೇಲ್ಯರನ್ನು ಬಾಳನ ಆರಾಧನೆ ಮಾಡಲು ಮತ್ತು ಅನೈತಿಕತೆಯಲ್ಲಿ ಒಳಗೂಡಲು ಕರೆಯುತ್ತಿದ್ದಾರೆ.
c ಚಿತ್ರ ವಿವರಣೆ: ಚರ್ಚಿನ ಫಲಕದಲ್ಲಿರುವ ಬಣ್ಣಗಳು ಸಲಿಂಗಕಾಮವನ್ನು ಚರ್ಚ್ ಒಪ್ಪುತ್ತೆ ಎಂದು ಸೂಚಿಸುತ್ತಿವೆ.
d ಚಿತ್ರ ವಿವರಣೆ: ಒಬ್ಬ ಯುವ ಸಹೋದರಿ ಉನ್ನತ ಶಿಕ್ಷಣ ಮಾಡುತ್ತಿದ್ದಾಳೆ. ಮಾನವಕುಲದ ಎಲ್ಲಾ ಸಮಸ್ಯೆಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಹಾರ ನೀಡುತ್ತೆ ಅಂತ ಪ್ರೊಫೆಸರ್ ಹೇಳುತ್ತಿರುವ ಮಾತನ್ನು ಎಲ್ಲಾ ವಿದ್ಯಾರ್ಥಿಗಳು ಒಪ್ಪುತ್ತಿದ್ದಾರೆ, ಅವಳೂ ಒಪ್ಪುತ್ತಿದ್ದಾಳೆ. ಆಮೇಲೆ ಆ ಸಹೋದರಿ ಕೂಟದಲ್ಲಿ ಸಿಗುತ್ತಿರುವ ಮಾಹಿತಿಯಲ್ಲಿ ಆಸಕ್ತಿ ತೋರಿಸುತ್ತಿಲ್ಲ, ತಪ್ಪು ಹುಡುಕುತ್ತಿದ್ದಾಳೆ.