ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w19 ಜೂನ್‌ ಪು. 14-19
  • ಒತ್ತಡದಲ್ಲಿ ಇರುವಾಗ ಯೆಹೋವನು ಕೊಡುವ ಸಹಾಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒತ್ತಡದಲ್ಲಿ ಇರುವಾಗ ಯೆಹೋವನು ಕೊಡುವ ಸಹಾಯ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ಎಲೀಯನು ನಮ್ಮಂಥ ಭಾವನೆಗಳಿದ್ದ ಮನುಷ್ಯ”
  • ಯೆಹೋವನು ನಮಗೆ ಹೇಗೆ ಸಹಾಯ ಮಾಡುತ್ತಾನೆ?
  • ಹನ್ನ, ದಾವೀದ ಮತ್ತು ಒಬ್ಬ ಕೀರ್ತನೆಗಾರ ಯೆಹೋವನ ಸಹಾಯ ಪಡಕೊಂಡರು
  • ಯೆಹೋವನನ್ನು ಆಶ್ರಯಿಸಿ, ಒತ್ತಡವನ್ನು ಯಶಸ್ವಿಕರವಾಗಿ ನಿಭಾಯಿಸಿ
  • ತನ್ನ ದೇವರಿಂದ ಸಾಂತ್ವನ ಪಡೆದಾತನು
    ಅವರ ನಂಬಿಕೆಯನ್ನು ಅನುಕರಿಸಿ
  • ತನ್ನ ದೇವರಿಂದ ಸಾಂತ್ವನ ಪಡೆದಾತನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ನಿನ್ನ ಜೊತೆ ಯಾರೂ ಇಲ್ಲ ಅಂತ ಭಯ ಆಗಿದೆಯಾ?
    ನಿಮ್ಮ ಮುದ್ದು ಮಕ್ಕಳಿಗೆ ಕಲಿಸಿರಿ
  • ನೀವು ಎಲೀಯನಂತೆ ನಂಬಿಗಸ್ತರಾಗಿರುವಿರೊ?
    ಕಾವಲಿನಬುರುಜು—1997
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
w19 ಜೂನ್‌ ಪು. 14-19

ಅಧ್ಯಯನ ಲೇಖನ 25

ಒತ್ತಡದಲ್ಲಿ ಇರುವಾಗ ಯೆಹೋವನು ಕೊಡುವ ಸಹಾಯ

“ನಾನು ತುಂಬ ಒತ್ತಡದಲ್ಲಿದ್ದೇನೆ.”—1 ಸಮು. 1:15, ನೂತನ ಲೋಕ ಭಾಷಾಂತರ.

ಗೀತೆ 91 ನನ್ನ ಪಿತ, ನನ್ನ ದೇವ ಮತ್ತು ಮಿತ್ರ

ಕಿರುನೋಟa

1. ಯೇಸುವಿನ ಎಚ್ಚರಿಕೆಗೆ ನಾವು ಯಾಕೆ ಗಮನ ಕೊಡಬೇಕು?

ಯೇಸು ಕ್ರಿಸ್ತನು ಕಡೇ ದಿನಗಳ ಬಗ್ಗೆ ಪ್ರವಾದನೆ ಹೇಳಿದಾಗ ಈ ಎಚ್ಚರಿಕೆ ಕೊಟ್ಟನು: ‘ನಿಮ್ಮ ಹೃದಯ ಜೀವನದ ಚಿಂತೆಗಳ ಭಾರದಿಂದ ಕುಗ್ಗಿಹೋಗದಂತೆ ನೋಡಿಕೊಳ್ಳಿ.’ (ಲೂಕ 21:34) ನಾವು ಈ ಎಚ್ಚರಿಕೆಗೆ ಗಮನಕೊಡಬೇಕು. ಯಾಕೆ? ಯಾಕೆಂದರೆ ಇಂದು ಒತ್ತಡ ಅನ್ನುವುದು ಯಾವ ಮನುಷ್ಯನನ್ನೂ ಬಿಟ್ಟಿಲ್ಲ. ನಾವೆಲ್ಲರೂ ಒಂದಲ್ಲ ಒಂದು ವಿಷಯದಿಂದ ಒತ್ತಡದಲ್ಲಿದ್ದೇವೆ.

2. ನಮ್ಮ ಸಹೋದರ-ಸಹೋದರಿಯರು ಎಂಥ ಒತ್ತಡಗಳನ್ನು ಎದುರಿಸುತ್ತಾರೆ?

2 ಕೆಲವೊಮ್ಮೆ ನಮಗೆ ಒಂದೇ ಸಮಯದಲ್ಲಿ ಅನೇಕ ಒತ್ತಡಗಳು ಬರಬಹುದು. ಮುಂದಿನ ಉದಾಹರಣೆಗಳನ್ನು ನೋಡಿ. ಸ್ನಾಯು ಮತ್ತು ನರಸಂಬಂಧಿತ ಕಾಯಿಲೆಯಿಂದ ನರಳುತ್ತಿರುವ ಜಾನ್‌b ಎಂಬ ಸಹೋದರನ ಹೆಂಡತಿ ಅವರನ್ನು ಬಿಟ್ಟುಹೋದಾಗ ಅವರಿಗೆ ದೊಡ್ಡ ಆಘಾತ ಆಯಿತು. ಅವರಿಬ್ಬರು 19 ವರ್ಷ ಒಟ್ಟಿಗೆ ಜೀವನ ಮಾಡಿದ್ದರು. ಆಮೇಲೆ ಅವರ ಇಬ್ಬರು ಹೆಣ್ಣುಮಕ್ಕಳು ಯೆಹೋವನನ್ನು ಆರಾಧಿಸುವುದನ್ನು ಬಿಟ್ಟುಬಿಟ್ಟರು. ಬಾಬ್‌ ಮತ್ತು ಲಿಂಡ ಎಂಬ ದಂಪತಿಗೆ ಬೇರೆ ಸಮಸ್ಯೆಗಳು ಎದುರಾಯಿತು. ಅವರಿಬ್ಬರು ತಮ್ಮ ಕೆಲಸ ಕಳಕೊಂಡರು ಮತ್ತು ಸಾಲ ಮಾಡಿ ತಗೊಂಡಿದ್ದ ಮನೆಯನ್ನೂ ಸಾಲ ತೀರಿಸಕ್ಕಾಗದೆ ಕಳಕೊಂಡರು. ಅಷ್ಟೇ ಅಲ್ಲ, ಲಿಂಡಗೆ ಹೃದಯ ಸಂಬಂಧಿತ ಗಂಭೀರ ಕಾಯಿಲೆ ಇದೆ, ಅದರಿಂದ ಅವರ ಜೀವನೂ ಹೋಗಬಹುದು ಎಂದು ಗೊತ್ತಾಯಿತು. ಜೊತೆಗೆ ಅವರ ರೋಗನಿರೋಧಕ ಶಕ್ತಿಯನ್ನೇ ಕುಂದಿಸುವಂಥ ಕಾಯಿಲೆಯೂ ಬಂತು.

3. ಫಿಲಿಪ್ಪಿ 4:6, 7 ಯೆಹೋವನ ಬಗ್ಗೆ ಏನು ಹೇಳುತ್ತದೆ?

3 ಒತ್ತಡ ಇದ್ದಾಗ ನಮಗೆ ಹೇಗನಿಸುತ್ತೆ ಅಂತ ನಮ್ಮನ್ನು ಸೃಷ್ಟಿಮಾಡಿರುವ, ನಮ್ಮನ್ನು ತುಂಬ ಪ್ರೀತಿ ಮಾಡುವ ತಂದೆಯಾದ ಯೆಹೋವನಿಗೆ ಚೆನ್ನಾಗಿ ಅರ್ಥ ಆಗುತ್ತದೆ. ಅಷ್ಟೇ ಅಲ್ಲ, ನಮಗಿರುವ ಸಮಸ್ಯೆಗಳನ್ನು ನಿಭಾಯಿಸುವುದಕ್ಕೆ ಬೇಕಾದ ಸಹಾಯ ಕೊಡಲು ಆತನು ಬಯಸುತ್ತಾನೆ. (ಫಿಲಿಪ್ಪಿ 4:6, 7 ಓದಿ.) ಬೈಬಲಿನಲ್ಲಿರುವ ಅನೇಕ ವೃತ್ತಾಂತಗಳು ಆತನ ಸೇವಕರು ತಮಗಿದ್ದ ಸಮಸ್ಯೆಗಳನ್ನು ಹೇಗೆ ನಿಭಾಯಿಸಿದರು ಎಂದು ತೋರಿಸುತ್ತವೆ. ಕಷ್ಟದ ಸನ್ನಿವೇಶಗಳನ್ನು ಎದುರಿಸಲು ಯೆಹೋವನು ಅವರಿಗೆ ಹೇಗೆ ಸಹಾಯ ಮಾಡಿದನು ಅಂತ ಕೂಡ ಅದರಲ್ಲಿ ಕೊಡಲಾಗಿದೆ. ಕೆಲವರ ಉದಾಹರಣೆಗಳನ್ನು ಈಗ ನೋಡೋಣ.

“ಎಲೀಯನು ನಮ್ಮಂಥ ಭಾವನೆಗಳಿದ್ದ ಮನುಷ್ಯ”

4. (ಎ) ಎಲೀಯನು ಯಾವ ಕಷ್ಟಗಳನ್ನು ಎದುರಿಸಿದನು? (ಬಿ) ಈ ಎಲ್ಲ ಕಷ್ಟಗಳಲ್ಲಿ ಎಲೀಯನು ಯೆಹೋವನನ್ನು ಹೇಗೆ ಆಶ್ರಯಿಸಿದನು?

4 ಎಲೀಯ ಕಷ್ಟದ ಸನ್ನಿವೇಶಗಳಲ್ಲಿ ಯೆಹೋವನ ಸೇವೆ ಮಾಡಿದ ಮತ್ತು ತುಂಬ ಗಂಭೀರ ಸಮಸ್ಯೆಗಳನ್ನು ಎದುರಿಸಿದ. ಅವನ ಸಮಯದಲ್ಲಿ ರಾಜ ಅಹಾಬ ಆಳುತ್ತಿದ್ದ. ಇಸ್ರಾಯೇಲಿನ ಅಪನಂಬಿಗಸ್ತ ರಾಜರ ಪಟ್ಟಿಯಲ್ಲಿ ಇವನೂ ಒಬ್ಬ. ಇವನು ದುಷ್ಟಳಾಗಿದ್ದ ಈಜೆಬೆಲಳನ್ನು ಮದುವೆಯಾಗಿದ್ದ. ಇವಳು ಬಾಳನ ಆರಾಧಕಳಾಗಿದ್ದಳು. ಇವರಿಬ್ಬರೂ ಸೇರಿ ಇಡೀ ದೇಶದಲ್ಲಿ ಬಾಳನ ಆರಾಧನೆಯನ್ನು ಹಬ್ಬಿಸಿದರು. ಯೆಹೋವನ ಅನೇಕ ಪ್ರವಾದಿಗಳನ್ನು ಕೊಲ್ಲಿಸಿದರು. ಆದರೆ ಎಲೀಯ ಯೆಹೋವನ ಸಹಾಯದಿಂದ ತಪ್ಪಿಸಿಕೊಂಡ. ಘೋರವಾದ ಬರಗಾಲ ಬಂದಾಗ ಯೆಹೋವನನ್ನು ಅವಲಂಬಿಸಿದ್ದರಿಂದ ತನ್ನ ಜೀವ ಉಳಿಸಿಕೊಂಡ. (1 ಅರ. 17:2-4, 14-16) ಅಷ್ಟೇ ಅಲ್ಲ, ಯೆಹೋವನ ಮೇಲೆ ಭರವಸೆ ಇಟ್ಟು ಬಾಳನ ಪ್ರವಾದಿಗಳಿಗೆ ಮತ್ತು ಆರಾಧಕರಿಗೆ ಸವಾಲು ಹಾಕಿದ. ಯೆಹೋವನನ್ನು ಆರಾಧಿಸಿ ಎಂದು ಇಸ್ರಾಯೇಲ್ಯರನ್ನು ಪ್ರೋತ್ಸಾಹಿಸಿದ. (1 ಅರ. 18:21-24, 36-38) ತಾನು ಒತ್ತಡದಲ್ಲಿದ್ದಾಗ ಯೆಹೋವನು ತನಗೆ ಸಹಾಯ ಮಾಡಿದ್ದಾನೆ, ತನ್ನನ್ನು ಕಾಪಾಡಿದ್ದಾನೆ ಅನ್ನುವುದು ಎಲೀಯನಿಗೆ ಚೆನ್ನಾಗಿ ಗೊತ್ತಿತ್ತು.

ಎಲೀಯನನ್ನು ಒಬ್ಬ ದೇವದೂತ ಬಲಪಡಿಸುತ್ತಿದ್ದಾನೆ

ಎಲೀಯನು ಪುನಃ ಬಲ ಪಡಕೊಳ್ಳಲು ಯೆಹೋವನು ದೇವದೂತನನ್ನು ಕಳುಹಿಸಿದನು (ಪ್ಯಾರ 5-6 ನೋಡಿ)c

5-6. (ಎ) 1 ಅರಸುಗಳು 19:1-4 ರ ಪ್ರಕಾರ ಎಲೀಯನಿಗೆ ಏನನಿಸಿತು? (ಬಿ) ಎಲೀಯನನ್ನು ಪ್ರೀತಿಸುತ್ತೇನೆ ಎಂದು ಯೆಹೋವನು ಹೇಗೆ ತೋರಿಸಿಕೊಟ್ಟನು?

5 ಒಂದನೇ ಅರಸುಗಳು 19:1-4 ಓದಿ. ಎಲೀಯನಿಗೆ ಯೆಹೋವನ ಬೆಂಬಲ ತನಗಿದೆ ಅಂತ ಗೊತ್ತಿದ್ದರೂ, ‘ಪ್ರಾಣ ತೆಗಿತೀನಿ’ ಎಂದು ರಾಣಿ ಈಜೆಬೆಲ ಅವನಿಗೆ ಬೆದರಿಕೆ ಹಾಕಿದಾಗ ಹೆದರಿಕೊಂಡು ಬಿಟ್ಟ. ಬೇರ್ಷೆಬಕ್ಕೆ ಓಡಿಹೋದ. ಅವನಿಗೆ ಎಷ್ಟು ನಿರುತ್ಸಾಹ ಆಯಿತೆಂದರೆ “ನನ್ನ ಪ್ರಾಣವನ್ನು ತೆಗೆದುಬಿಡು” ಅಂತ ಯೆಹೋವನನ್ನು ಕೇಳಿದ. ಯಾಕೆ ಆ ರೀತಿ ಅವನು ಯೋಚನೆ ಮಾಡಿದ? “ಎಲೀಯನು ನಮ್ಮಂಥ ಭಾವನೆಗಳಿದ್ದ ಮನುಷ್ಯನಾಗಿದ್ದ,” ಅಪರಿಪೂರ್ಣನಾಗಿದ್ದ. (ಯಾಕೋ. 5:17) ತುಂಬ ಒತ್ತಡದಲ್ಲಿದ್ದ, ದೈಹಿಕವಾಗಿಯೂ ಬಳಲಿಹೋಗಿದ್ದ. ಜನರೆಲ್ಲರೂ ಯೆಹೋವನನ್ನು ಆರಾಧಿಸಬೇಕೆಂದು ತಾನು ಮಾಡುತ್ತಿದ್ದ ಪ್ರಯತ್ನಗಳಿಂದ ಯಾವುದೇ ಪ್ರಯೋಜನ ಆಗಿಲ್ಲ, ತಾನೊಬ್ಬನೇ ಯೆಹೋವನನ್ನು ಆರಾಧಿಸುತ್ತಿರುವುದು ಅಂತ ಅವನು ಯೋಚಿಸಿರಬಹುದು. (1 ಅರ. 18:3, 4, 13; 19:10, 14) ‘ಅಷ್ಟು ನಂಬಿಕೆ ತೋರಿಸಿದಂಥ ವ್ಯಕ್ತಿ ಹೀಗ್ಯಾಕೆ ಯೋಚನೆ ಮಾಡಿದ?’ ಅಂತ ನಮಗೆ ಅನಿಸಬಹುದು. ಆದರೆ ಯೆಹೋವನು ಅವನ ಭಾವನೆಗಳನ್ನು ಅರ್ಥಮಾಡಿಕೊಂಡನು.

6 ಎಲೀಯನು ತನ್ನ ಭಾವನೆಗಳನ್ನು ಹೇಳಿಕೊಂಡಾಗ ಯೆಹೋವನು ಅವನನ್ನು ಬೈಯಲಿಲ್ಲ. ಬದಲಿಗೆ ಪುನಃ ಬಲ ಪಡಕೊಳ್ಳುವುದಕ್ಕೆ ಸಹಾಯ ಮಾಡಿದನು. (1 ಅರ. 19:5-7) ನಂತರ ಯೆಹೋವನು ತನ್ನ ಮಹಾ ಶಕ್ತಿಯನ್ನು ತೋರಿಸಿ ಎಲೀಯನು ಯೋಚನೆ ಮಾಡುತ್ತಿದ್ದ ರೀತಿಯನ್ನು ದಯೆಯಿಂದ ಸರಿಪಡಿಸಿದನು. ಬಾಳನನ್ನು ಆರಾಧಿಸದೆ ಇರುವ ಇನ್ನೂ 7,000 ಮಂದಿ ಇಸ್ರಾಯೇಲಿನಲ್ಲಿ ಇದ್ದಾರೆ ಎಂದು ಹೇಳಿದನು. (1 ಅರ. 19:11-18) ಈ ಉದಾಹರಣೆಗಳನ್ನು ಕೊಡುವ ಮೂಲಕ ತಾನು ಎಲೀಯನನ್ನು ಪ್ರೀತಿಸುತ್ತೇನೆ ಎಂದು ಯೆಹೋವನು ತೋರಿಸಿಕೊಟ್ಟನು.

ಯೆಹೋವನು ನಮಗೆ ಹೇಗೆ ಸಹಾಯ ಮಾಡುತ್ತಾನೆ?

7. ಯೆಹೋವನು ಎಲೀಯನಿಗೆ ಸಹಾಯ ಮಾಡಿದ ವಿಧದಿಂದ ನಮಗೆ ಯಾವ ಭರವಸೆ ಸಿಗುತ್ತದೆ?

7 ಒತ್ತಡದ ಸನ್ನಿವೇಶಗಳನ್ನು ನೀವು ಎದುರಿಸುತ್ತಿದ್ದೀರಾ? ಹಾಗಾದರೆ ಯೆಹೋವನು ಎಲೀಯನ ಭಾವನೆಗಳನ್ನು ಅರ್ಥಮಾಡಿಕೊಂಡನು ಅಂತ ಕೇಳಿ ಎಷ್ಟು ಸಮಾಧಾನ ಆಗುತ್ತೆ ಅಲ್ವಾ? ಭಾವನಾತ್ಮಕವಾಗಿ ನಾವು ಅನುಭವಿಸುವ ಹೆಣಗಾಟವೂ ಯೆಹೋವನಿಗೆ ಅರ್ಥ ಆಗುತ್ತೆ ಅಂತ ನಾವು ಭರವಸೆಯಿಂದ ಇರಬಹುದು. ಆತನಿಗೆ ನಮ್ಮ ಇತಿಮಿತಿಗಳು ಗೊತ್ತು, ನಮ್ಮ ಯೋಚನೆ ಮತ್ತು ಭಾವನೆಗಳು ಸಹ ಗೊತ್ತು. (ಕೀರ್ತ. 103:14; 139:3, 4) ನಾವು ಎಲೀಯನಂತೆ ಯೆಹೋವನನ್ನು ಆಶ್ರಯಿಸಿದರೆ ನಮಗೆ ಒತ್ತಡ ಕೊಡುವಂಥ ಸಮಸ್ಯೆಗಳನ್ನು ಎದುರಿಸಲು ಆತನು ಸಹಾಯ ಮಾಡುತ್ತಾನೆ.—ಕೀರ್ತ. 55:22.

8. ನೀವು ಒತ್ತಡದಲ್ಲಿ ಇರುವಾಗ ಯೆಹೋವನು ನಿಮಗೆ ಹೇಗೆ ಸಹಾಯ ಮಾಡುತ್ತಾನೆ?

8 ನಿಮ್ಮ ಪರಿಸ್ಥಿತಿ ಯಾವತ್ತಿಗೂ ಸರಿಹೋಗಲ್ಲ ಅಂತ ಒತ್ತಡದಲ್ಲಿದ್ದಾಗ ನಿಮಗೆ ಅನಿಸಬಹುದು, ನಿರುತ್ಸಾಹನೂ ಆಗಬಹುದು. ಆದರೆ ಯೆಹೋವನು ನಿಮಗಿರುವ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತಾನೆ ಅನ್ನುವುದನ್ನು ಮರೆಯಬೇಡಿ. ಆತನು ನಿಮಗೆ ಹೇಗೆ ಸಹಾಯ ಮಾಡುತ್ತಾನೆ? ನಿಮ್ಮ ಚಿಂತೆಗಳನ್ನು, ನಿಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳಿ ಅಂತ ಆತನು ನಿಮ್ಮನ್ನು ಕೇಳಿಕೊಳ್ಳುತ್ತಿದ್ದಾನೆ. ಸಹಾಯ ಬೇಕೆಂದು ನೀವು ಮಾಡುವ ಪ್ರಾರ್ಥನೆಗೆ ಆತನು ಉತ್ತರ ಕೊಡುತ್ತಾನೆ. (ಕೀರ್ತ. 5:3; 1 ಪೇತ್ರ 5:7) ಹಾಗಾಗಿ ನಿಮ್ಮ ಸಮಸ್ಯೆಗಳ ಬಗ್ಗೆ ಆಗಾಗ ಪ್ರಾರ್ಥನೆಯಲ್ಲಿ ಯೆಹೋವನಿಗೆ ಹೇಳುತ್ತಾ ಇರಿ. ಎಲೀಯನ ಹತ್ತಿರ ಮಾತಾಡಿದ ಹಾಗೆ ನಿಮ್ಮ ಹತ್ತಿರ ಆತನು ನೇರವಾಗಿ ಮಾತಾಡಲ್ಲ. ಆದರೆ ಆತನು ತನ್ನ ವಾಕ್ಯವಾದ ಬೈಬಲಿನ ಮೂಲಕ ಮತ್ತು ಸಂಘಟನೆಯ ಮೂಲಕ ನಿಮ್ಮ ಹತ್ತಿರ ಮಾತಾಡುತ್ತಾನೆ. ಬೈಬಲಿನಲ್ಲಿರುವ ವೃತ್ತಾಂತಗಳನ್ನು ಓದಿದರೆ ನಿಮಗೆ ಸಮಾಧಾನ ಆಗುತ್ತೆ ಮತ್ತು ನಿರೀಕ್ಷೆ ಸಿಗುತ್ತೆ. ನಿಮ್ಮ ಸಹೋದರ-ಸಹೋದರಿಯರೂ ನಿಮಗೆ ಪ್ರೋತ್ಸಾಹ ಕೊಡುತ್ತಾರೆ.—ರೋಮ. 15:4; ಇಬ್ರಿ. 10:24, 25.

9. ಒಬ್ಬ ಒಳ್ಳೇ ಸ್ನೇಹಿತ ಅಥವಾ ಸ್ನೇಹಿತೆ ನಮಗೆ ಹೇಗೆ ಸಹಾಯ ಮಾಡಬಹುದು?

9 ಎಲೀಯನಿಗಿದ್ದ ಜವಾಬ್ದಾರಿಗಳಲ್ಲಿ ಕೆಲವನ್ನು ಎಲೀಷನಿಗೆ ಒಪ್ಪಿಸಲು ಯೆಹೋವನು ಹೇಳಿದನು. ಹೀಗೆ ಯೆಹೋವನು ಎಲೀಯನಿಗೆ ಒಬ್ಬ ಒಳ್ಳೇ ಸ್ನೇಹಿತ ಸಿಗುವಂತೆ ಮಾಡಿದನು. ಎಲೀಯನಿಗೆ ನಿರುತ್ಸಾಹ ಆದಾಗೆಲ್ಲ ಅದರಿಂದ ಹೊರಬರಲು ಎಲೀಷನು ಖಂಡಿತ ಸಹಾಯ ಮಾಡಿರುತ್ತಾನೆ. ನಾವು ಸಹ ನಮ್ಮ ಭಾವನೆಗಳನ್ನು ಒಳ್ಳೇ ಸ್ನೇಹಿತ ಅಥವಾ ಸ್ನೇಹಿತೆಯ ಹತ್ತಿರ ಹೇಳಿಕೊಂಡರೆ ಅವರು ನಮ್ಮ ಕಷ್ಟಗಳನ್ನು ತಾಳಿಕೊಳ್ಳಲು ಸಹಾಯ ಮಾಡುತ್ತಾರೆ. (2 ಅರ. 2:2; ಜ್ಞಾನೋ. 17:17) ನಿಮ್ಮ ಸಮಸ್ಯೆಗಳ ಬಗ್ಗೆ, ನಿಮ್ಮ ಭಾವನೆಗಳ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳುವುದಕ್ಕೆ ಯಾರೂ ಇಲ್ಲ ಅಂತ ನಿಮಗನಿಸುತ್ತಾ? ನಿಮ್ಮನ್ನು ಉತ್ತೇಜಿಸುವಂಥ ಒಬ್ಬ ಪ್ರೌಢ ಕ್ರೈಸ್ತನ ಹತ್ತಿರ ಮಾತಾಡಲು ನಿಮಗೆ ಸಹಾಯ ಮಾಡುವಂತೆ ಯೆಹೋವನಿಗೆ ಪ್ರಾರ್ಥಿಸಿ.

10. (ಎ) ಎಲೀಯನ ಅನುಭವದಿಂದ ನಮಗೆ ಏನು ಗೊತ್ತಾಗುತ್ತದೆ? (ಬಿ) ಯೆಶಾಯ 40:28, 29 ರಿಂದ ನಮಗೆ ಯಾವ ಆಶ್ವಾಸನೆ ಸಿಗುತ್ತದೆ?

10 ಯೆಹೋವನು ಎಲೀಯನಿಗೆ ಒತ್ತಡವನ್ನು ಎದುರಿಸಲು ಮತ್ತು ಅನೇಕ ವರ್ಷಗಳು ನಂಬಿಗಸ್ತಿಕೆಯಿಂದ ಸೇವೆ ಮಾಡಲು ಸಹಾಯ ಮಾಡಿದನು. ಯೆಹೋವನು ನಮಗೂ ಸಹಾಯ ಮಾಡುತ್ತಾನೆ ಎಂದು ಎಲೀಯನ ಅನುಭವದಿಂದ ಗೊತ್ತಾಗುತ್ತದೆ. ಕೆಲವೊಮ್ಮೆ ನಮಗೆ ಎಷ್ಟು ಒತ್ತಡ ಇರುತ್ತದೆಂದರೆ ನಾವು ಶಾರೀರಿಕವಾಗಿ ಮತ್ತು ಭಾವನಾತ್ಮಕವಾಗಿ ತುಂಬ ಕುಗ್ಗಿಹೋಗುತ್ತೇವೆ. ಆದರೆ ನಾವು ಯೆಹೋವನನ್ನು ಆಶ್ರಯಿಸಿದರೆ ಆತನ ಆರಾಧನೆಯನ್ನು ಬಿಡದೆ ಮುಂದುವರಿಸಲು ಬೇಕಾದ ಶಕ್ತಿಯನ್ನು ನಮಗೆ ಕೊಡುತ್ತಾನೆ.—ಯೆಶಾಯ 40:28, 29 ಓದಿ.

ಹನ್ನ, ದಾವೀದ ಮತ್ತು ಒಬ್ಬ ಕೀರ್ತನೆಗಾರ ಯೆಹೋವನ ಸಹಾಯ ಪಡಕೊಂಡರು

11-13. ದೇವರ ಮೂರು ಪ್ರಾಚೀನ ಸೇವಕರ ಮೇಲೆ ಬಂದ ಒತ್ತಡಗಳು ಅವರ ಮೇಲೆ ಹೇಗೆ ಪ್ರಭಾವ ಬೀರಿದವು?

11 ಬೈಬಲಿನಲ್ಲಿರುವ ಬೇರೆ ವ್ಯಕ್ತಿಗಳೂ ತುಂಬ ಒತ್ತಡಗಳನ್ನು ಎದುರಿಸಿದರು. ಹನ್ನಳ ಉದಾಹರಣೆ ನೋಡಿ. ಅವಳಿಗೆ ಮಕ್ಕಳಿರಲಿಲ್ಲ ಮತ್ತು ಅವಳ ಸವತಿ ಯಾವಾಗಲೂ ಹಂಗಿಸುತ್ತಿದ್ದಳು. (1 ಸಮು. 1:2, 6) ಒಮ್ಮೆ ಹನ್ನಳಿಗೆ ಎಷ್ಟು ಒತ್ತಡ ಆಯಿತೆಂದರೆ ಅಳುವುದಕ್ಕೆ ಶುರುಮಾಡಿದಳು, ಊಟನೂ ಮಾಡಲಿಲ್ಲ.—1 ಸಮು. 1:7, 10.

12 ರಾಜ ದಾವೀದನ ಜೀವನದಲ್ಲೂ ಒತ್ತಡದ ಸನ್ನಿವೇಶಗಳು ಎದುರಾದವು. ಆತನಿಗೆ ಬಂದಂಥ ಸಮಸ್ಯೆಗಳ ಬಗ್ಗೆ ಯೋಚಿಸಿ. ಆತನು ಮಾಡಿದ್ದ ತಪ್ಪುಗಳಿಂದಾಗಿ ದೋಷಿ ಭಾವನೆ ತುಂಬ ಕಾಡುತ್ತಿತ್ತು. (ಕೀರ್ತ. 40:12) ಪ್ರೀತಿಯ ಮಗನಾದ ಅಬ್ಷಾಲೋಮ ದಾವೀದನ ವಿರುದ್ಧ ದಂಗೆ ಎದ್ದ, ಕೊನೆಗೆ ತನ್ನ ಜೀವಾನೇ ಕಳಕೊಂಡ. (2 ಸಮು. 15:13, 14; 18:33) ಅಷ್ಟೇ ಅಲ್ಲ, ದಾವೀದನ ಆಪ್ತಮಿತ್ರನೊಬ್ಬನು ಆತನ ಬೆನ್ನಿಗೆ ಚೂರಿಹಾಕುವ ಕೆಲಸ ಮಾಡಿದ. (2 ಸಮು. 16:23–17:2; ಕೀರ್ತ. 55:12-14) ದಾವೀದನು ಬರೆದ ಅನೇಕ ಕೀರ್ತನೆಗಳಲ್ಲಿ ಆತನಿಗಿದ್ದ ನಿರುತ್ಸಾಹ ಗೊತ್ತಾಗುತ್ತೆ. ಜೊತೆಗೆ ಯೆಹೋವನ ಮೇಲಿದ್ದ ದೃಢವಾದ ನಂಬಿಕೆಯೂ ಎದ್ದುಕಾಣುತ್ತೆ.—ಕೀರ್ತ. 38:5-10; 94:17-19.

ಬಹುಶಃ ಆಸಾಫನ ವಂಶಸ್ಥನಾಗಿರುವ ಕೀರ್ತನೆಗಾರನು ಕೀರ್ತನೆಗಳನ್ನು ಬರೆಯುತ್ತಾ ಬೇರೆ ಲೇವಿಯರೊಟ್ಟಿಗೆ ಹಾಡುತ್ತಾ ಆನಂದಿಸುತ್ತಿದ್ದಾನೆ

ಯೆಹೋವನ ಸೇವೆಯನ್ನು ಪುನಃ ಸಂತೋಷದಿಂದ ಮಾಡಲು ಕೀರ್ತನೆಗಾರನಿಗೆ ಯಾವುದು ಸಹಾಯ ಮಾಡಿತು? (ಪ್ಯಾರ 13-15 ನೋಡಿ)d

13 ಒಬ್ಬ ಕೀರ್ತನೆಗಾರನು ದುಷ್ಟಜನರ ಜೀವನರೀತಿಯನ್ನು ನೋಡಿ ಹೊಟ್ಟೆಕಿಚ್ಚು ಪಟ್ಟನು. ಅವನು ಲೇವಿಯನಾದ ಆಸಾಫನ ವಂಶಸ್ಥನಾಗಿರಬಹುದು ಮತ್ತು ದೇವರ ಆರಾಧನಾ ಸ್ಥಳದಲ್ಲಿ ಸೇವೆ ಮಾಡುತ್ತಿದ್ದನು. ಈ ಕೀರ್ತನೆಗಾರನು ಭಾವನಾತ್ಮಕವಾಗಿ ತುಂಬ ಒತ್ತಡ ಎದುರಿಸಿದನು. ಇದರಿಂದಾಗಿ ಅವನು ತನ್ನ ಸಂತೋಷ-ಸಂತೃಪ್ತಿ ಕಳಕೊಂಡನು. ತಾನು ಸೇವೆ ಮಾಡುತ್ತಿರುವುದಕ್ಕೆ ದೇವರು ತಕ್ಕ ಪ್ರತಿಫಲ ಕೊಡುತ್ತಿದ್ದಾನಾ ಎಂಬ ಸಂಶಯವೂ ಅವನಿಗೆ ಬಂತು.—ಕೀರ್ತ. 73:2-5, 7, 12-14, 16, 17, 21.

14-15. ಯೆಹೋವನ ಸಹಾಯ ಪಡಕೊಳ್ಳುವ ವಿಷಯದಲ್ಲಿ ಬೈಬಲಿನ ಮೂರು ಉದಾಹರಣೆಗಳಿಂದ ನಾವೇನು ಕಲಿಯಬಹುದು?

14 ಯೆಹೋವನ ಆರಾಧಕರಾಗಿದ್ದ ಈ ಮೂವರೂ ಸಹಾಯಕ್ಕಾಗಿ ಯೆಹೋವನನ್ನು ಆಶ್ರಯಿಸಿದರು. ತಮಗಿದ್ದ ಚಿಂತೆ-ಒತ್ತಡವನ್ನು ಪ್ರಾರ್ಥನೆಯ ಮೂಲಕ ಯೆಹೋವನಿಗೆ ಹೇಳಿಕೊಂಡರು. ಅವರಿಗೆ ಯಾಕೆ ಅಷ್ಟೊಂದು ಒತ್ತಡ ಆಗುತ್ತಿದೆ ಅನ್ನುವುದನ್ನು ಮುಕ್ತವಾಗಿ ಆತನ ಹತ್ತಿರ ಹೇಳಿಕೊಂಡರು ಮತ್ತು ಯೆಹೋವನ ಆರಾಧನೆ ನಡೆಯುತ್ತಿದ್ದ ಸ್ಥಳಕ್ಕೆ ಹೋಗುವುದನ್ನು ನಿಲ್ಲಿಸಲಿಲ್ಲ.—1 ಸಮು. 1:9, 10; ಕೀರ್ತ. 55:22; 73:17; 122:1.

15 ಯೆಹೋವನು ಈ ಮೂವರ ಹತ್ತಿರಾನೂ ದಯೆಯಿಂದ ನಡಕೊಂಡನು. ಹನ್ನಳಿಗೆ ಮನಶ್ಶಾಂತಿ ಸಿಕ್ಕಿತು. (1 ಸಮು. 1:18) ದಾವೀದನು “ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ” ಎಂದು ಬರೆದನು. (ಕೀರ್ತ. 34:19) ಕೀರ್ತನೆಗಾರನಿಗೆ ಯೆಹೋವನು ತನ್ನ ‘ಬಲಗೈ ಹಿಡಿದು,’ ಪ್ರೀತಿಯಿಂದ ಸಲಹೆ ಕೊಟ್ಟು ನಡೆಸುತ್ತಿದ್ದಾನೆ ಅಂತ ಅನಿಸಿತು. ಅವನು ‘ನನಗಾದರೋ ದೇವರ ಸಾನ್ನಿಧ್ಯವೇ ಭಾಗ್ಯ. ಕರ್ತನೇ, ಯೆಹೋವನೇ, ನಾನು ನಿನ್ನನ್ನು ಆಶ್ರಯಿಸಿಕೊಂಡಿದ್ದೇನೆ’ ಎಂದು ಹಾಡಿದನು. (ಕೀರ್ತ. 73:23, 24, 28) ಈ ಉದಾಹರಣೆಗಳಿಂದ ನಾವೇನು ಕಲಿಯಬಹುದು? ಕೆಲವೊಮ್ಮೆ ನಮಗೆ ತುಂಬ ಒತ್ತಡ ತರುವಂಥ ಸಮಸ್ಯೆಗಳು ಬರಬಹುದು. ಅಂಥ ಸಂದರ್ಭಗಳಲ್ಲಿ ಯೆಹೋವನು ಬೇರೆಯವರಿಗೆ ಹೇಗೆ ಸಹಾಯ ಮಾಡಿದ್ದಾನೆ ಅನ್ನುವುದನ್ನು ಮನಸ್ಸಿಗೆ ತಂದುಕೊಳ್ಳಬೇಕು, ಪ್ರಾರ್ಥನೆ ಮಾಡಬೇಕು ಮತ್ತು ಆತನು ಏನು ಹೇಳುತ್ತಾನೋ ಅದನ್ನು ಮಾಡಬೇಕು. ಆಗ ಒತ್ತಡವನ್ನು ನಿಭಾಯಿಸಲು ಬೇಕಾದ ಶಕ್ತಿ ಸಿಗುತ್ತದೆ.—ಕೀರ್ತ. 143:1, 4-8.

ಯೆಹೋವನನ್ನು ಆಶ್ರಯಿಸಿ, ಒತ್ತಡವನ್ನು ಯಶಸ್ವಿಕರವಾಗಿ ನಿಭಾಯಿಸಿ

ಒಬ್ಬ ಸಹೋದರಿ ಒಬ್ಬಳೇ ಇರುವಾಗ ಬೇಜಾರಲ್ಲಿದ್ದಾಳೆ, ಆದರೆ ವೀಲ್‌ಚೇರಲ್ಲಿ ಕೂತಿರುವ ಒಬ್ಬ ಅಜ್ಜಿಗೆ ಸಾರುವಾಗ ಬೇರೆಯವರ ಕಷ್ಟ ಅರ್ಥಮಾಡಿಕೊಳ್ಳಲು ಆ ಸಹೋದರಿಗೆ ಸಾಧ್ಯವಾಗುತ್ತಿದೆ

ಒಬ್ಬ ಸಹೋದರಿಗೆ ಯಾರ ಜೊತೆನೂ ಬೆರೆಯುವುದು ಬೇಡ ಅಂತ ಅನಿಸುತ್ತಿತ್ತು, ಆದರೆ ಅವಳು ಬೇರೆಯವರಿಗೆ ಸಹಾಯ ಮಾಡಲು ಮುಂದಾದಾಗ ಅವಳಿಗೇ ಸಹಾಯ ಆಯಿತು (ಪ್ಯಾರ 16-17 ನೋಡಿ)

16-17. (ಎ) ಯೆಹೋವನಿಂದ ಮತ್ತು ಆತನ ಆರಾಧಕರಿಂದ ನಾವು ಯಾಕೆ ದೂರ ಆಗಬಾರದು? (ಬಿ) ನಮಗೆ ಬೇಕಾದ ಬಲವನ್ನು ನಾವು ಪುನಃ ಹೇಗೆ ಪಡಕೊಳ್ಳಬಹುದು?

16 ಆ ಮೂವರ ಉದಾಹರಣೆಗಳಿಂದ ನಾವು ಇನ್ನೊಂದು ಪ್ರಾಮುಖ್ಯ ಪಾಠವನ್ನೂ ಕಲಿಯಬಹುದು. ನಾವು ಯೆಹೋವನಿಂದಾಗಲಿ, ಆತನ ಜನರಿಂದಾಗಲಿ ದೂರ ಹೋಗಬಾರದು. (ಜ್ಞಾನೋ. 18:1) ನ್ಯಾನ್ಸಿ ಎಂಬ ಸಹೋದರಿಯ ಉದಾಹರಣೆ ನೋಡಿ. ಅವಳ ಗಂಡ ಅವಳನ್ನು ಬಿಟ್ಟುಹೋದಾಗ ತುಂಬ ಒತ್ತಡವನ್ನು ಅನುಭವಿಸಿದಳು. ಅವಳು ಹೇಳುವುದು: “ಎಷ್ಟೋ ದಿನ ನನಗೆ ಯಾರನ್ನೂ ನೋಡಬೇಕು, ಮಾತಾಡಿಸಬೇಕು ಅಂತ ಅನಿಸಲೇ ಇಲ್ಲ. ಆದರೆ ನಾನು ಎಲ್ಲರಿಂದ ಎಷ್ಟು ದೂರ ಹೋಗುತ್ತಿದ್ದನೋ ನನ್ನ ದುಃಖನೂ ಅಷ್ಟೇ ಹೆಚ್ಚಾಗುತ್ತಾ ಹೋಯಿತು.” ಆದರೆ ಅವಳು ಹಾಗೇ ಇದ್ದುಬಿಡಲಿಲ್ಲ. ಯಾರು ಕಷ್ಟ ಅನುಭವಿಸುತ್ತಿದ್ದರೋ ಅವರಿಗೆ ಸಹಾಯ ಮಾಡುವುದಕ್ಕೆ ಮುಂದೆ ಬಂದಳು. “ನಾನು ಅವರು ಪಡುತ್ತಿದ್ದ ಕಷ್ಟಗಳನ್ನು ಕೇಳಿಸಿಕೊಂಡೆ. ಅವರ ಬಗ್ಗೆ, ಅವರ ಸಮಸ್ಯೆಗಳ ಬಗ್ಗೆ ಯೋಚಿಸಿದಾಗ ನನ್ನ ಸಮಸ್ಯೆ ದೊಡ್ಡದಲ್ಲ ಅಂತ ಅನಿಸಿತು” ಎಂದು ಅವಳು ಹೇಳುತ್ತಾಳೆ.

17 ನಾವು ಕೂಟಗಳಿಗೆ ಹಾಜರಾಗುವ ಮೂಲಕ ನಮಗೆ ಬೇಕಾದ ಬಲವನ್ನು ಪುನಃ ಪಡಕೊಳ್ಳಬಹುದು. ನಾವು ಕೂಟಗಳಿಗೆ ಹಾಜರಾದರೆ, ಯೆಹೋವನು ನಮ್ಮ ಸಹಾಯಕನಾಗಲು ಮತ್ತು ನಮಗೆ ಸಾಂತ್ವನ ಕೊಡಲು ಆತನಿಗೆ ಇನ್ನೊಂದು ಅವಕಾಶ ಕೊಟ್ಟಂತೆ ಆಗುತ್ತದೆ. (ಕೀರ್ತ. 86:17) ಯಾಕೆಂದರೆ ಅಲ್ಲಿ ಆತನು ತನ್ನ ಪವಿತ್ರಾತ್ಮ, ತನ್ನ ವಾಕ್ಯ ಮತ್ತು ತನ್ನ ಜನರ ಮೂಲಕ ನಮ್ಮನ್ನು ಬಲಪಡಿಸುತ್ತಾನೆ. ಕೂಟಗಳಲ್ಲಿ ನಮಗೆ “ಉತ್ತೇಜನವನ್ನು ಪರಸ್ಪರ ವಿನಿಮಯ” ಮಾಡಿಕೊಳ್ಳುವ ಅವಕಾಶ ಸಿಗುತ್ತದೆ. (ರೋಮ. 1:11, 12) ಸೋಫಿಯಾ ಎಂಬ ಸಹೋದರಿ ಹೇಳುವುದು: “ಯೆಹೋವನು ಮತ್ತು ನಮ್ಮ ಸಹೋದರ-ಸಹೋದರಿಯರು ನನಗೆ ಕಷ್ಟಗಳನ್ನು ಸಹಿಸಿಕೊಂಡು ಹೋಗಕ್ಕೆ ಸಹಾಯ ಮಾಡಿದ್ದಾರೆ. ನಮ್ಮ ಕೂಟಗಳಲ್ಲಂತೂ ನನಗೆ ತುಂಬಾನೇ ಸಹಾಯ ಸಿಕ್ಕಿದೆ. ನಾನು ಸೇವೆಗೆ ಹೆಚ್ಚು ಹೋದಷ್ಟು, ಸಭೆಯವರ ಜೊತೆ ಹೆಚ್ಚು ಬೆರೆತಷ್ಟು ನನಗೆ ಇರುವ ಚಿಂತೆ-ಒತ್ತಡ ನಿಭಾಯಿಸುವುದಕ್ಕೆ ಸಹಾಯ ಸಿಕ್ಕಿದೆ.”

18. ನಮಗೆ ನಿರುತ್ಸಾಹ ಆದಾಗ ಯೆಹೋವನು ಏನು ಕೊಡುತ್ತಾನೆ?

18 ನಮಗೆ ನಿರುತ್ಸಾಹ ಆದಾಗ, ಮುಂದಕ್ಕೆ ಯೆಹೋವನು ನಮ್ಮ ಚಿಂತೆ-ಒತ್ತಡಗಳನ್ನು ಶಾಶ್ವತವಾಗಿ ತೆಗೆದುಹಾಕುತ್ತಾನೆ ಅನ್ನುವುದನ್ನು ಮಾತ್ರ ಯೋಚನೆ ಮಾಡುತ್ತೇವೆ. ಆದರೆ ಈಗಲೂ ಆ ಒತ್ತಡಗಳನ್ನು ಎದುರಿಸಲು ನಮಗೆ ಸಹಾಯ ಮಾಡುತ್ತಾನೆ ಅನ್ನುವುದನ್ನೂ ಯೋಚನೆ ಮಾಡೋಣ. ಯಾಕೆಂದರೆ ಯೆಹೋವನು ನಮಗೆ ನಿರುತ್ಸಾಹ ಆದಾಗ, ನಿರೀಕ್ಷೆಯೆಲ್ಲ ಬತ್ತಿಹೋದಾಗ ಅದರಿಂದ ಹೊರಬರಬೇಕೆಂಬ ಆಸೆಯನ್ನು ಕೊಡುತ್ತಾನೆ, ಹೊರಬರಲು ಶಕ್ತಿಯನ್ನೂ ಕೊಡುತ್ತಾನೆ.—ಫಿಲಿ. 2:13.

19. ರೋಮನ್ನರಿಗೆ 8:37-39 ಯಾವ ಆಶ್ವಾಸನೆ ಕೊಡುತ್ತದೆ?

19 ರೋಮನ್ನರಿಗೆ 8:37-39 ಓದಿ. ದೇವರ ಪ್ರೀತಿಯಿಂದ ಯಾವುದೂ ನಮ್ಮನ್ನು ಅಗಲಿಸಲು ಸಾಧ್ಯವಿಲ್ಲ ಎಂದು ಅಪೊಸ್ತಲ ಪೌಲನು ಆಶ್ವಾಸನೆ ನೀಡಿದ್ದಾನೆ. ಒತ್ತಡಗಳನ್ನು ನಿಭಾಯಿಸಲು ಹೆಣಗಾಡುತ್ತಿರುವ ನಮ್ಮ ಸಹೋದರ-ಸಹೋದರಿಯರಿಗೆ ನಾವು ಹೇಗೆ ಸಹಾಯ ಮಾಡಬಹುದು? ನಮ್ಮ ಸಹೋದರ-ಸಹೋದರಿಯರು ಒತ್ತಡದಲ್ಲಿದ್ದಾಗ ಯೆಹೋವನಂತೆ ನಾವು ಅವರಿಗೆ ಹೇಗೆ ಅನುಕಂಪ ತೋರಿಸಬಹುದು ಮತ್ತು ಬೆಂಬಲ ಕೊಡಬಹುದು ಎಂದು ಮುಂದಿನ ಲೇಖನದಲ್ಲಿ ನೋಡೋಣ.

ನಿಮ್ಮ ಉತ್ತರವೇನು?

  • ಒತ್ತಡವನ್ನು ಎದುರಿಸಲು ಎಲೀಯನಿಗೆ ಯೆಹೋವನು ಸಹಾಯ ಮಾಡಿದ ವಿಧದಿಂದ ಏನು ಗೊತ್ತಾಗುತ್ತದೆ?

  • ಒತ್ತಡವನ್ನು ನಿಭಾಯಿಸುವ ವಿಷಯದಲ್ಲಿ ಬೈಬಲಲ್ಲಿರುವ ಮೂವರ ಉದಾಹರಣೆಗಳಿಂದ ನಾವೇನು ಕಲಿಯಬಹುದು?

  • ಒತ್ತಡವನ್ನು ನಿಭಾಯಿಸಲು ನಾವೇನು ಮಾಡಬೇಕು?

ಗೀತೆ 68 ವಿನಮ್ರನ ಪ್ರಾರ್ಥನೆ

a ನಮಗೆ ತುಂಬ ಒತ್ತಡ ಇದ್ದರೆ ಅಥವಾ ಅದು ತುಂಬ ಸಮಯದಿಂದ ಇದ್ದರೆ ಶಾರೀರಿಕವಾಗಿ ಮತ್ತು ಭಾವನಾತ್ಮಕವಾಗಿ ಕುಗ್ಗಿಹೋಗುತ್ತೇವೆ. ಇಂಥ ಸಮಯದಲ್ಲಿ ಯೆಹೋವನು ಹೇಗೆ ಸಹಾಯ ಮಾಡುತ್ತಾನೆ? ಎಲೀಯನು ಒತ್ತಡದಲ್ಲಿ ಇದ್ದಾಗ ಯೆಹೋವನು ಹೇಗೆ ಸಹಾಯ ಮಾಡಿದನು ಎಂದು ನೋಡೋಣ. ಬೈಬಲಲ್ಲಿರುವ ಬೇರೆ ಉದಾಹರಣೆಗಳಿಂದಲೂ, ನಾವು ಒತ್ತಡದಲ್ಲಿ ಇರುವಾಗ ಹೇಗೆ ಯೆಹೋವನ ಸಹಾಯ ಪಡಕೊಳ್ಳಬಹುದು ಎಂದು ತಿಳುಕೊಳ್ಳೋಣ.

b ಈ ಲೇಖನದಲ್ಲಿ ಹೆಸರುಗಳನ್ನು ಬದಲಾಯಿಸಲಾಗಿದೆ.

c ಚಿತ್ರ ವಿವರಣೆ: ನಿದ್ದೆ ಮಾಡುತ್ತಿರುವ ಎಲೀಯನನ್ನು ಯೆಹೋವನ ದೂತನು ಮೆಲ್ಲ ಎಬ್ಬಿಸಿ, ಅವನಿಗೆ ರೊಟ್ಟಿ ಮತ್ತು ನೀರನ್ನು ಕೊಡುತ್ತಿದ್ದಾನೆ.

d ಚಿತ್ರ ವಿವರಣೆ: ಬಹುಶಃ ಆಸಾಫನ ವಂಶಸ್ಥನಾಗಿರುವ ಕೀರ್ತನೆಗಾರನು ಕೀರ್ತನೆಗಳನ್ನು ಬರೆಯುತ್ತಾ ಬೇರೆ ಲೇವಿಯರೊಟ್ಟಿಗೆ ಹಾಡುತ್ತಾ ಆನಂದಿಸುತ್ತಿದ್ದಾನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ