ಯೆಹೋವನ ಮರುಜ್ಞಾಪನಗಳು ನಮ್ಮನ್ನು ಆತ್ಮಿಕವಾಗಿ ಹುರಿದುಂಬಿಸುತ್ತಿವೆಯೊ?
1 “ನಿನ್ನ ಕಟ್ಟಳೆಗಳು [“ಮರುಜ್ಞಾಪನಗಳು”, NW] ನನ್ನ ಧ್ಯಾನ” ವಾಗಿವೆ ಎಂದು ಹೇಳುತ್ತಾ ಕೀರ್ತನೆಗಾರನು ಯೆಹೋವನನ್ನು ಕೊಂಡಾಡಿದನು. (ಕೀರ್ತ. 119:99) “ಮರುಜ್ಞಾಪನಗಳು” ಎಂಬ ಪದಕ್ಕಿರುವ ಹೀಬ್ರು ಪದವು, ಯೆಹೋವನ ನಿಯಮಗಳಲ್ಲಿ, ಆತನ ಆಜ್ಞೆಗಳಲ್ಲಿ, ಆತನ ವಿಧಿಗಳಲ್ಲಿ, ಆತನ ಕಟ್ಟಳೆಗಳಲ್ಲಿ, ಮತ್ತು ಆತನ ಕಾಯಿದೆಗಳಲ್ಲಿ ಹೇಳಿರುವಂತಹ ಸಂಗತಿಗಳನ್ನು ಆತನು ನಮ್ಮ ನೆನಪಿಗೆ ತರುತ್ತಾನೆ ಎಂಬ ವಿಚಾರವನ್ನು ತಿಳಿಯಪಡಿಸುತ್ತದೆ. ನಾವು ಪ್ರತಿಕ್ರಿಯಿಸುವುದಾದರೆ, ಅವು ನಮ್ಮನ್ನು ಆತ್ಮಿಕವಾಗಿ ಹುರಿದುಂಬಿಸುವುವು ಮತ್ತು ನಮ್ಮನ್ನು ಸಂತೋಷಪಡಿಸುವುವು.—ಕೀರ್ತ. 119:2.
2 ಯೆಹೋವನ ಜನರೋಪಾದಿ ನಾವು ಕ್ರಮವಾಗಿ ಬುದ್ಧಿವಾದ ಮತ್ತು ಸಲಹೆಯನ್ನು ಪಡೆಯುತ್ತೇವೆ. ಅದರಲ್ಲಿ ಹೆಚ್ಚಿನದನ್ನು ನಾವು ಈ ಮುಂಚೆ ಕೇಳಿದ್ದೇವೆ. ಈ ಪ್ರೋತ್ಸಾಹನೆಯನ್ನು ನಾವು ಗಣ್ಯಮಾಡುವುದಾದರೂ, ಮರೆತುಬಿಡುವ ಪ್ರವೃತ್ತಿ ನಮ್ಮಲ್ಲಿದೆ. (ಯಾಕೋ. 1:25) ಯೆಹೋವನು ತಾಳ್ಮೆಯಿಂದ ಪ್ರೀತಿಯ ಮರುಜ್ಞಾಪನಗಳನ್ನು ಒದಗಿಸುತ್ತಾನೆ. ‘ಕರ್ತನಾದ ರಕ್ಷಕನು ಕೊಟ್ಟ ಅಪ್ಪಣೆಯನ್ನೂ ನಾವು ಜ್ಞಾಪಕಮಾಡಿಕೊಳ್ಳಬೇಕೆಂದು ಜ್ಞಾಪಕಕೊಟ್ಟು ನಮ್ಮ ಸರಳ ಮನಸ್ಸನ್ನು ಪ್ರೇರಿಸುವ’ ಸಲುವಾಗಿ ಅಪೊಸ್ತಲ ಪೇತ್ರನು ಇವುಗಳಲ್ಲಿ ಕೆಲವು ಮರುಜ್ಞಾಪನಗಳನ್ನು ದಾಖಲೆಮಾಡಿದನು.—2 ಪೇತ್ರ 3:1, 2.
3 ಪದೇ ಪದೇ ನಾವು ವೈಯಕ್ತಿಕ ಅಧ್ಯಯನ ಮತ್ತು ಕೂಟದ ಹಾಜರಿಯ ಮಹತ್ವದ ಕುರಿತು ಮರುಜ್ಞಾಪಿಸಲ್ಪಡುತ್ತೇವೆ. ಈ ಚಟುವಟಿಕೆಗಳು ನಮ್ಮ ಆತ್ಮಿಕ ಕ್ಷೇಮಕ್ಕೆ ಬಹಳಷ್ಟು ಪ್ರಾಮುಖ್ಯವಾಗಿರುವುದರಿಂದ ಇದನ್ನು ಮಾಡಲಾಗುತ್ತದೆ.—1 ತಿಮೊ. 4:15; ಇಬ್ರಿ. 10:24, 25.
4 ಸಾರಬೇಕೆಂಬ ಕ್ರೈಸ್ತ ನಿಯೋಗವನ್ನು ನೆರವೇರಿಸುವುದು ಕೆಲವರಿಗೆ ಅತಿ ದೊಡ್ಡ ಸವಾಲಾಗಿದೆ. ಅದು ಪ್ರಯತ್ನ, ದೃಢಸಂಕಲ್ಪ, ಮತ್ತು ಪಟ್ಟುಹಿಡಿದಿರುವಿಕೆಯನ್ನು ಕೇಳಿಕೊಳ್ಳುತ್ತದೆ. ಅದು ನಮ್ಮಿಂದ ಹೆಚ್ಚಿನದನ್ನು ಕೇಳಿಕೊಂಡರೂ, “ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವದರಲ್ಲಿ ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು” ‘ದೃಢವಾಗಿ ನಿಲ್ಲಲು’ ನಮಗೆ ಸಹಾಯವು ನೀಡಲ್ಪಡುತ್ತದೆ.—ಎಫೆ. 6:14, 15.
5 ನಮ್ಮ ಸೇವೆಯು ಯೆಹೋವನ ಆವಶ್ಯಕತೆಗಳ ಕೇವಲ ಮಾನಸಿಕ ಅರಿವಿಗಿಂತ ಹೆಚ್ಚಿನ ವಿಷಯದಿಂದ ಪ್ರಚೋದಿಸಲ್ಪಡಬೇಕು. ‘ರಕ್ಷಣೆಗಾಗಿ ಬಹಿರಂಗ ಘೋಷಣೆಯನ್ನು’ ಮಾಡಲು ನಮಗೆ ಬೇಕಾದ ಪ್ರಚೋದನೆಯನ್ನು ಹೃದಯವು ಒದಗಿಸುತ್ತದೆಂದು ಅಪೊಸ್ತಲ ಪೌಲನು ನಮಗೆ ಜ್ಞಾಪಕ ಹುಟ್ಟಿಸುತ್ತಾನೆ. (ರೋಮಾ. 10:10) ನಮ್ಮಲ್ಲಿ ಬಲವಾದ ನಂಬಿಕೆ ಇರುವುದಾದರೆ ಮತ್ತು ನಮ್ಮ ಹೃದಯವು ಯೆಹೋವನ ಮರುಜ್ಞಾಪನಗಳ ಕಡೆಗೆ ಒಲಿಯುವುದಾದರೆ, ಆತನ ನಾಮಕ್ಕೆ ಸುತ್ತಿಯನ್ನು ಕೊಡುವುದರಲ್ಲಿ ಮಾತಾಡುವಂತೆ ನಾವು ಒತ್ತಾಯಿಸಲ್ಪಡುವೆವು.—ಕೀರ್ತ. 119:36; ಮತ್ತಾ. 12:34.
6 ಒಳ್ಳೆಯ ಕಾರ್ಯಗಳನ್ನು ಮಾಡುವುದರಲ್ಲಿ ನಾವು ಪ್ರಯಾಸಪಡುವಾಗ, ಇದು ನಮಗೆ ಆನಂದವನ್ನು ತರುವುದೆಂದು ನಾವು ಸರಿಯಾಗಿಯೆ ಅಪೇಕ್ಷಿಸುತ್ತೇವೆ. (ಪ್ರಸಂ. 2:10) ಪೌಲನು ಆನಂದವನ್ನು ಯೆಹೋವನ ಆತ್ಮದ ಒಂದು ಫಲವೆಂಬಂತೆ ಗುರುತಿಸುತ್ತಾನೆ, ಮತ್ತು ಅದನ್ನು ಪ್ರದರ್ಶಿಸುವುದರಲ್ಲಿ ನಾವು ತುಂಬಿ ತುಳುಕಲು ಪ್ರಯತ್ನಿಸಬೇಕು. (ಗಲಾ. 5:22) “ಪೂರ್ಣಾಸಕ್ತಿಯು,” ಆನಂದವನ್ನು ತರುವ ಒಂದು ಫಲಪ್ರದವಾದ ಶುಶ್ರೂಷೆಯಿಂದ ಬಹುಮಾನಿಸಲ್ಪಡುವುದೆಂದು ಪೇತ್ರನು ಕೂಡಿಸಿದನು.—2 ಪೇತ್ರ 1:5-8.
7 ನಾವೊಂದು ಸವಾಲನ್ನು ಎದುರಿಸುವಾಗ, ಅಪೊಸ್ತಲರ ದೃಢ ನಿಲುವನ್ನು ನಾವು ಜ್ಞಾಪಿಸಿಕೊಳ್ಳಬೇಕು. ಅವರು ಘೋಷಿಸಿದ್ದು: “ನಾವಂತೂ ಕಂಡು ಕೇಳಿದ್ದನ್ನು ಹೇಳದೆ ಇರಲಾರೆವು.” (ಅಕೃ. 4:20) ‘ಈ ಕಾರ್ಯಗಳಲ್ಲಿ ನಿರತರಾಗಿರುವ ಮೂಲಕ ನಮ್ಮನ್ನೂ ನಮ್ಮ ಉಪದೇಶ ಕೇಳುವವರನ್ನೂ ರಕ್ಷಿಸುವೆವು’ ಎಂಬುದನ್ನು ನಾವು ಜ್ಞಾಪಿಸಿಕೊಳ್ಳುವಾಗ, ನಾವು ಮುಂದುವರಿಯುವಂತೆ ಬಲಪಡಿಸಲ್ಪಡುತ್ತೇವೆ.—1 ತಿಮೊ. 4:16.
8 ಸತತವಾದ ಮರುಜ್ಞಾಪನಗಳು ಸಿಗುವ ಕಾರಣ ನಾವು ಸಿಡುಗುಟ್ಟುವುದಿಲ್ಲ ಅಥವಾ ಕೋಪಿಸಿಕೊಳ್ಳುವುದಿಲ್ಲ. ಬದಲಿಗೆ ಅವುಗಳ ಉತ್ಕೃಷ್ಟ ಮೌಲ್ಯವನ್ನು ನಾವು ಆಳವಾಗಿ ಗಣ್ಯಮಾಡುತ್ತೇವೆ. (ಕೀರ್ತ. 119:129) ಈ ಕಠಿನ ಸಮಯಗಳಲ್ಲಿ, ಆತ್ಮಿಕವಾಗಿ ನಮ್ಮನ್ನು ಹುರಿದುಂಬಿಸಲು ಮತ್ತು ಒಳ್ಳೆಯ ಕಾರ್ಯಗಳಲ್ಲಿ ಹುರುಪುಳ್ಳವರಾಗಿರುವಂತೆ ನಮ್ಮನ್ನು ಪ್ರಚೋದಿಸಲು, ಯೆಹೋವನು ನಮಗೆ ಮರುಜ್ಞಾಪನಗಳನ್ನು ಕಳುಹಿಸುತ್ತಾ ಇರುವುದಕ್ಕೆ ನಾವು ಕೃತಜ್ಞರು!—2 ಪೇತ್ರ 1:12, 13.