ನಾವು ಅದನ್ನು ಹಿಂದೆ ಕೇಳಿಸಿಕೊಂಡಿರಲಿಲ್ಲವೋ?
1 ಹೌದು ಕೇಳಿಸಿಕೊಂಡಿದ್ದೇವೆ! ತನ್ನ ಜನರ ಪ್ರಯೋಜನಕ್ಕಾಗಿ ಯೆಹೋವನು ತನ್ನ ವಾಕ್ಯದಲ್ಲಿ ಅನೇಕ ವಿಷಯಗಳನ್ನು ಪುನರಾವರ್ತಿಸಿದ್ದಾನೆ. ಯೇಸು ತನ್ನ ಬೋಧನೆಗಳಲ್ಲಿ ರಾಜ್ಯದ ಕುರಿತ ಹಲವಾರು ಅಂಶಗಳನ್ನು ಅನೇಕಬಾರಿ ಪುನರಾವರ್ತಿಸಿದನು. ಅವನ ಅಪೊಸ್ತಲರು, ಸತ್ಯದಲ್ಲಿ ದೃಢವಾಗಿ ಬೇರೂರಿದ್ದವರೊಂದಿಗೆ ಆತ್ಮಿಕ ವಿಷಯಗಳನ್ನು ಎಡೆಬಿಡದೆ ಪುನರ್ವಿಮರ್ಶಿಸಿದರು.—ರೋಮಾ. 15:15; 2 ಪೇತ್ರ 1:12, 13; 3:1, 2.
2 ನಮ್ಮ ಸಮಯದಲ್ಲಿ ಯೆಹೋವನ ಸಂಸ್ಥೆಯು, ಸಭಾ ಕೂಟಗಳಲ್ಲಿ ಪ್ರಾಮುಖ್ಯ ವಿಷಯಗಳನ್ನು ಪುನಃ ಪುನಃ ವಿಮರ್ಶಿಸುವ ಏರ್ಪಾಡನ್ನು ಮಾಡಿದೆ. ಕೆಲವು ಪ್ರಕಾಶನಗಳನ್ನು ಪದೇ ಪದೇ ಅಭ್ಯಾಸಮಾಡಲಾಗುತ್ತದೆ. ಹೌದು, ಹಿಂದೆ ಕೇಳಿಸಿಕೊಂಡಂಥ ವಿಷಯಗಳನ್ನು ಪುನಃ ಕೇಳಿಸಿಕೊಳ್ಳುವುದು ಪ್ರಾಮುಖ್ಯವಾಗಿದೆ.
3 ಪುನರಾವರ್ತನೆಯು ಬಹುಮುಖ್ಯ ಅಗತ್ಯವನ್ನು ಪೂರೈಸುತ್ತದೆ: ಯೆಹೋವನ ಮರುಜ್ಞಾಪನಗಳು ನಮ್ಮ ತಿಳುವಳಿಕೆಯನ್ನು ಹೆಚ್ಚಿಸುತ್ತವೆ, ನಮ್ಮ ದೃಷ್ಟಿಕೋನವನ್ನು ವಿಶಾಲಗೊಳಿಸುತ್ತವೆ ಹಾಗೂ ನಾವು ಆತ್ಮಿಕವಾಗಿ ದೃಢಚಿತ್ತರಾಗಿ ಉಳಿಯುವ ನಮ್ಮ ತೀರ್ಮಾನವನ್ನು ಬಲಪಡಿಸುತ್ತವೆ. (ಕೀರ್ತ. 119:129) ದೇವರ ಮಟ್ಟಗಳು ಮತ್ತು ತತ್ವಗಳನ್ನು ಪುನರ್ವಿಮರ್ಶಿಸುವುದು, ಕನ್ನಡಿಯಲ್ಲಿ ನಮ್ಮನ್ನು ನೋಡಿಕೊಳ್ಳುವಂತಿರುತ್ತದೆ. ನಮ್ಮನ್ನು ಸೂಕ್ಷ್ಮವಾಗಿ ಪರಿಶೀಲಿಸಿಕೊಳ್ಳುವಂತೆ ಹಾಗೂ ‘ವಾಕ್ಯವನ್ನು ಕೇಳಿ ಮರೆತುಹೋಗುವವರಾಗಿರುವ’ ಪ್ರವೃತ್ತಿಯ ವಿರುದ್ಧ ಹೋರಾಡುವಂತೆ ಅದು ಸಹಾಯಮಾಡುತ್ತದೆ.—ಯಾಕೋ. 1:22-25.
4 ಸತ್ಯದ ಕುರಿತಾಗಿ ಸ್ವತಃ ಮರುಜ್ಞಾಪಿಸಿಕೊಳ್ಳದಿದ್ದರೆ, ನಮ್ಮ ಹೃದಯವನ್ನು ಬೇರೆ ವಿಷಯಗಳು ಪ್ರಭಾವಿಸಸಾಧ್ಯವಿದೆ. ಸೈತಾನನ ಲೋಕದ ಭ್ರಷ್ಟಗೊಳಿಸುವ ಪ್ರಭಾವಗಳನ್ನು ಎದುರಿಸಲು ಸಾಧ್ಯವಾಗುವಂತೆ ದೇವರ ಮರುಜ್ಞಾಪನಗಳು, ನಮ್ಮನ್ನು ಬಲಪಡಿಸುತ್ತವೆ. (ಕೀರ್ತ. 119:2, 3, 99, 133; ಫಿಲಿ. 3:1) ದೇವರ ಉದ್ದೇಶಗಳ ನೆರವೇರಿಕೆಯ ಕುರಿತು ನಾವು ಪಡೆದುಕೊಳ್ಳುವ ಕ್ರಮವಾದ ಮರುಜ್ಞಾಪನಗಳು, “ಜಾಗರೂಕರಾಗಿ” ಇರುವಂತೆ ನಮ್ಮನ್ನು ಪ್ರಚೋದಿಸುತ್ತವೆ. (ಮಾರ್ಕ 13:32-37) ಶಾಸ್ತ್ರೀಯ ಸತ್ಯಗಳ ಪುನರಾವರ್ತನೆಯು ನಿತ್ಯಜೀವಕ್ಕೆ ನಡೆಸುವ ಮಾರ್ಗದಲ್ಲಿ ಉಳಿಯುವಂತೆ ನಮಗೆ ಸಹಾಯಮಾಡುತ್ತದೆ.—ಕೀರ್ತ. 119:144.
5 ವೈಯಕ್ತಿಕವಾಗಿ ಹೇಗೆ ಪ್ರಯೋಜನ ಪಡೆದುಕೊಳ್ಳುವುದು? ನಾವು ‘ನಮ್ಮ ಮನಸ್ಸನ್ನು ದೇವರ ಕಟ್ಟಳೆಗಳಿಗೆ ತಿರುಗಿಸ’ಬೇಕು. (ಕೀರ್ತ. 119:36) ಸಭಾಕೂಟದಲ್ಲಿ ಪರಿಚಿತ ವಿಷಯವು ಪರಿಗಣಿಸಲ್ಪಡಬೇಕಾದಾಗ, ನಾವು ಮುನ್ತಯಾರಿಯನ್ನು ಮಾಡಬೇಕು, ಉಲ್ಲೇಖಿಸಲ್ಪಟ್ಟಿರುವ ವಚನಗಳನ್ನು ತೆರೆದು ನೋಡಿ, ಮಾಹಿತಿಯನ್ನು ನಾವು ಹೇಗೆ ಅನ್ವಯಿಸಬಹುದೆಂಬುದರ ಕುರಿತು ಯೋಚಿಸಿ. ದೇವಪ್ರಭುತ್ವ ಶುಶ್ರೂಷಾ ಶಾಲೆಯ ಲಿಖಿತ ಪುನರ್ವಿಮರ್ಶೆಗಾಗಿ ತಯಾರಿಸುವ ಅಗತ್ಯವಿಲ್ಲವೆಂದು ನೆನಸುತ್ತ ಅದನ್ನು ಹಾಗೇ ಬಿಟ್ಟುಬಿಡದಿರೋಣ. (ಲೂಕ 8:18) ಅನೇಕವೇಳೆ ಕೂಟಗಳಲ್ಲಿ ಸತ್ಯದ ಮೂಲ ವಿಷಯಗಳನ್ನು ಪದೇ ಪದೇ ಹೇಳಲಾಗುತ್ತದೆಂದು ನೆನಸುತ್ತ ನಾವು ಎಂದೂ ಕಿವಿಗೊಡದವರಾಗದಿರೋಣ.—ಇಬ್ರಿ. 5:11.
6 ಕೀರ್ತನೆಗಾರನಿಗಿದ್ದ ಮನೋಭಾವವು ನಮಗೂ ಇರುವಂತಾಗಲಿ: “ಸರ್ವಸಂಪತ್ತಿನಲ್ಲಿ ಹೇಗೋ ಹಾಗೆಯೇ ನಿನ್ನ ಕಟ್ಟಳೆಯ [“ಮರುಜ್ಞಾಪನಗಳ,” NW] ಮಾರ್ಗದಲ್ಲಿ ಆನಂದಿಸುತ್ತೇನೆ.” (ಕೀರ್ತ. 119:14) ಹೌದು, ಇಂಥ ಅಮೂಲ್ಯವಾದ ವಿಷಯಗಳನ್ನು ನಾವು ಹಿಂದೆಯೂ ಕೇಳಿಸಿಕೊಂಡಿದ್ದೇವೆ ಹಾಗೂ ಮುಂದೆಯೂ ಮತ್ತೆ ಕೇಳಿಸಿಕೊಳ್ಳುವ ಸಾಧ್ಯತೆಯಿದೆ. ಏಕೆ? ಏಕೆಂದರೆ ನಾವು ಅವುಗಳನ್ನು ಕೇಳಿಸಿಕೊಳ್ಳುವ ಅಗತ್ಯವಿದೆಯೆಂದು ಯೆಹೋವನಿಗೆ ಗೊತ್ತಿದೆ!