ನಮ್ಮ ಹರಕೆಯನ್ನು ದಿನೇದಿನೇ ಈಡೇರಿಸುವುದು
1 ಕೀರ್ತನೆಗಾರ ದಾವೀದನು ಯೆಹೋವನಿಗೆ, “ನಾನು ಪ್ರತಿದಿನವೂ ನನ್ನ ಹರಕೆಗಳನ್ನು ಸಲ್ಲಿಸುವವನಾಗಿ ನಿನ್ನ ನಾಮವನ್ನು ಸದಾ ಸ್ಮರಿಸಿ ಕೀರ್ತಿಸುತ್ತಿರುವೆನು,” ಎಂದು ಪ್ರಕಟಿಸುವಂತೆ ಪ್ರಚೋದಿತನಾದನು. (ಕೀರ್ತ. 61:8) ಒಂದು ಹರಕೆಯನ್ನು ಮಾಡುವುದು, ಪೂರ್ತಿ ಸ್ವಯಂಪ್ರೇರಿತವಾದೊಂದು ವಿಷಯವೆಂಬುದು ದಾವೀದನಿಗೆ ಗೊತ್ತಿತ್ತು. ಆದರೂ, ಒಂದು ಹರಕೆಯನ್ನು ಮಾಡುವಲ್ಲಿ ಅದನ್ನು ಈಡೇರಿಸುವ ಹಂಗು ತನಗಿದೆ ಎಂಬುದನ್ನೂ ಅವನು ಗಣ್ಯಮಾಡಿದನು. ಅಷ್ಟಾದರೂ, ತನ್ನ ಹರಕೆಗಳನ್ನು ದಿನೇದಿನೇ ಈಡೇರಿಸುವ ಸಂದರ್ಭಕ್ಕಾಗಿ ಅವನು ಯೆಹೋವನನ್ನು ಸ್ತುತಿಸಿದನು.
2 ನಾವು ಯೆಹೋವನಿಗೆ ನಮ್ಮ ಸಮರ್ಪಣೆಯನ್ನು ಮಾಡಿದಾಗ, ನಾವು ಆತನ ಚಿತ್ತವನ್ನು ಮಾಡಲು ಇಷ್ಟಪೂರ್ವಕವಾಗಿ ಹರಕೆಹೊತ್ತೆವು. ನಾವು ನಮ್ಮನ್ನು ನಿರಾಕರಿಸಿಕೊಂಡು, ಯೆಹೋವನನ್ನು ಸೇವಿಸುವುದನ್ನು ನಮ್ಮ ಜೀವನದ ಪ್ರಧಾನ ವೃತ್ತಿಯಾಗಿ ಮಾಡಿಕೊಂಡೆವು. (ಲೂಕ 9:23) ಆದಕಾರಣ, ನಾವು ಸಹ ದಿನೇದಿನೇ ನಮ್ಮ ಹರಕೆಯನ್ನು ತೆರಬೇಕು. (ಪ್ರಸಂ. 5:4-6) ನೀರಿನ ದೀಕ್ಷಾಸ್ನಾನದ ಸಮಯದಲ್ಲಿ ಮಾಡಿದ ನಮ್ಮ ಬಹಿರಂಗ ಪ್ರಕಟನೆಯು, ನಮ್ಮ ಇಡೀ ಜೀವನ ಮಾದರಿಯಲ್ಲಿ ಪ್ರತಿಬಿಂಬಿಸಲ್ಪಡಬೇಕು. ಏಕೆಂದರೆ, “ಬಾಯಿಂದ ಅರಿಕೆಮಾಡುವದರ ಮೂಲಕ ರಕ್ಷಣೆಯಾಗುತ್ತದೆ,” ಎಂಬುದು ನಮಗೆ ಗೊತ್ತಿದೆ. (ರೋಮಾ. 10:10) ಇದರಲ್ಲಿ ಸುವಾರ್ತೆಯ ಸಾರುವಿಕೆಯು ಸೇರಿರುತ್ತದೆ. (ಇಬ್ರಿ. 13:15) ವೈಯಕ್ತಿಕ ಸಂದರ್ಭಗಳಲ್ಲಿ ಬಹಳ ವೈವಿಧ್ಯಗಳಿವೆಯಾದರೂ, ನಾವೆಲ್ಲರೂ ದಿನೇದಿನೇ ಇತರರೊಂದಿಗೆ ಸುವಾರ್ತೆಯಲ್ಲಿ ಭಾಗಿಗಳಾಗುವುದರ ಪ್ರಮುಖತೆಯನ್ನು ಕೇಂದ್ರವಾಗಿ ಇಟ್ಟುಕೊಳ್ಳಬಲ್ಲೆವು.
3 ಪ್ರತಿದಿನ ಸಾರಲು ಸಂದರ್ಭಗಳನ್ನು ಮಾಡಿಕೊಳ್ಳಿರಿ: ಸುವಾರ್ತೆಯಲ್ಲಿ ಇನ್ನೊಬ್ಬರೊಂದಿಗೆ ಭಾಗಿಯಾಗುವುದು ಆನಂದಭರಿತವಾದ ಒಂದು ಅನುಭವ. ಇದನ್ನು ಪ್ರತಿದಿನ ಮಾಡಲು, ನಮ್ಮ ಪರಿಸ್ಥಿತಿಗಳು ಅನುಮತಿಸುವಾಗೆಲ್ಲ ನಾವು ಸಾರಲು ಸಂದರ್ಭಗಳನ್ನು ಮಾಡಿಕೊಳ್ಳಲೇಬೇಕು. ಉದ್ಯೋಗದಲ್ಲಿ ಅಥವಾ ಶಾಲೆಯಲ್ಲಿ ಮತ್ತು ನೆರೆಯವರಿಗೆ ಅಥವಾ ಅವರು ಪ್ರತಿದಿನ ಸಂಧಿಸುವ ಇತರರಿಗೆ ಅನೌಪಚಾರಿಕವಾಗಿ ಸಾಕ್ಷಿನೀಡಲು ಆರಂಭದ ಹೆಜ್ಜೆಯನ್ನು ತೆಗೆದುಕೊಂಡವರು ಅನೇಕ ಸಂತೋಷದ ಅನುಭವಗಳನ್ನು ಅನುಭವಿಸಿದ್ದಾರೆ. ಪತ್ರಗಳನ್ನು ಬರೆಯುವುದು ಇಲ್ಲವೆ ಟೆಲಿಫೋನನ್ನು ಬಳಸುವುದು ಸಹ ಇತರರಿಗೆ ಸಾಕ್ಷಿನೀಡುವ ಮಾಧ್ಯಮವಾಗಿರಸಾಧ್ಯವಿದೆ. ಈ ಎಲ್ಲ ಮಾಧ್ಯಮಗಳ ಪ್ರಯೋಜನವನ್ನು ಪಡೆದುಕೊಳ್ಳುವುದು, ಅಷ್ಟೇ ಅಲ್ಲದೆ, ಕ್ರಮವಾಗಿ ಮನೆಯಿಂದ ಮನೆಗೆ ಸಾಕ್ಷಿನೀಡಲು ಮತ್ತು ಪುನರ್ಭೇಟಿಗಳನ್ನು ಮಾಡಲು ಸಮಯವನ್ನು ಬದಿಗಿಡುವುದು, ಗೃಹ ಬೈಬಲ್ ಅಧ್ಯಯನವೊಂದನ್ನು ನಡೆಸುವುದರಿಂದ ಬರುವ ಆ ವಿಶೇಷ ಆನಂದಕ್ಕೆ ನಡೆಸಬಲ್ಲದು. ಹೌದು, ಪ್ರತಿದಿನ ಸಾರಲಿಕ್ಕಾಗಿರುವ ಸಂದರ್ಭಗಳನ್ನು ನಾವು ಸೃಷ್ಟಿಸಿಕೊಳ್ಳಶಕ್ತರಾಗುವುದು ಸಂಭವನೀಯ.
4 ಒಬ್ಬ ಸಹೋದರಿ ತನ್ನ ಕೆಲಸದ ವಿರಾಮದಲ್ಲಿ ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು ಪುಸ್ತಕವನ್ನು ಓದಲಾರಂಭಿಸಿದಳು. ತನ್ನೊಂದಿಗೆ ದಿನದ ವಚನವನ್ನು ಓದುವಂತೆ ಆಕೆ ಒಬ್ಬ ಸಹಕರ್ಮಿಯನ್ನು ಆಮಂತ್ರಿಸಿದಳು, ಮತ್ತು ಇದು ಬೇಗನೆ ಆ ಸ್ತ್ರೀಯೊಂದಿಗೆ ಒಂದು ಬೈಬಲ್ ಅಧ್ಯಯನಕ್ಕೆ ನಡೆಸಿತು. ಅವರು ಒಂದು ವಾರಕ್ಕೆ ಐದು ದಿನ, ಪ್ರತಿದಿನ ಅರ್ಧತಾಸು ಅಧ್ಯಯನಮಾಡಿದರು. ಇನ್ನೊಬ್ಬ ಸಹಕರ್ಮಿ ಅವರ ಪ್ರತಿದಿನದ ಅಧ್ಯಯನವನ್ನು ಗಮನಿಸಿದನು. ಕೊನೆಗೆ, ತಾನೊಬ್ಬ ನಿಷ್ಕ್ರಿಯ ಸಹೋದರನೆಂದು ಅವನು ತನ್ನನ್ನು ಗುರುತಿಸಿಕೊಂಡನು. ಆ ಸಹೋದರಿಯ ಹುರುಪಿನಿಂದ ಪ್ರಚೋದಿತನಾದ ಅವನು ಸಕ್ರಿಯನಾಗಿ ಪರಿಣಮಿಸಲು ಒಬ್ಬ ಹಿರಿಯನನ್ನು ಸಂಪರ್ಕಿಸಿದನು. ಈ ಸಹೋದರಿಯು, ದಿನೇದಿನೇ ತನ್ನ ಹರಕೆಯನ್ನು ಈಡೇರಿಸುವುದನ್ನು ಮುಂದುವರಿಸಿದ ಕಾರಣ, ಆಕೆ ಇನ್ನೆರಡು ಜೀವಗಳನ್ನು ಸಕಾರಾತ್ಮಕವಾಗಿ ಪ್ರಭಾವಿಸಿದಳು.
5 ಯೆಹೋವನು ನಮಗಾಗಿ ಮಾಡಿರುವ ಸಕಲ ಸುಸಂಗತಿಗಳಿಗಾಗಿ ಗಣ್ಯತೆಯಿಂದ ತುಂಬಿತುಳುಕುವ ಹೃದಯದಿಂದ ನಾವು ಪ್ರಚೋದಿತರಾಗುವಾಗ, ನಮ್ಮ ಸಮರ್ಪಣಾ ಹರಕೆಯನ್ನು ಪ್ರತಿದಿನ ನಮ್ಮಿಂದ ಸಾಧ್ಯವಾಗುವಷ್ಟು ಅತ್ಯುತ್ತಮವಾಗಿ ಈಡೇರಿಸುವುದು, ನಮಗೆ ಆನಂದವನ್ನೂ ತೃಪ್ತಿಯನ್ನೂ ತರುವುದು. ಕೀರ್ತನೆಗಾರನಂತೆ ನಾವು, “ಕರ್ತನೇ, [“ಯೆಹೋವನೇ,” NW] ನನ್ನ ದೇವರೇ, ಮನಃಪೂರ್ವಕವಾಗಿ ನಿನ್ನನ್ನು ಕೊಂಡಾಡುವೆನು; ಎಂದೆಂದಿಗೂ ನಿನ್ನ ನಾಮವನ್ನು ಘನಪಡಿಸುವೆನು” ಎಂದು ಪ್ರಕಟಿಸಬಲ್ಲೆವು.—ಕೀರ್ತ. 86:12.