ನಮ್ಮ ಸಂದೇಶಕ್ಕೆ ಯಾರು ಕಿವಿಗೊಡುವರು?
1 ಮಾನವ ಇತಿಹಾಸದಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು, ಜನರು ಸಮಾಚಾರದಲ್ಲಿ ಮುಳುಗಿಸಲ್ಪಟ್ಟಿದ್ದಾರೆ. ಅದರಲ್ಲಿ ಹೆಚ್ಚಿನದು ಕ್ಷುಲ್ಲಕವಾದದ್ದು ಹಾಗೂ ದಾರಿತಪ್ಪಿಸುವಂತಹದ್ದೂ ಆಗಿದೆ. ಈ ಕಾರಣದಿಂದ ಅನೇಕರಿಗೆ ಅದುಮಿಹಾಕಲ್ಪಟ್ಟ ಅನಿಸಿಕೆ ಆಗುತ್ತದೆ. ಮತ್ತು ಇದು, ದೇವರ ರಾಜ್ಯದ ಕುರಿತಾದ ಸಂದೇಶವನ್ನು ಅವರು ಕೇಳುವಂತೆ ಮಾಡಲು ನಮಗೊಂದು ಪಂಥಾಹ್ವಾನವಾಗಿ ಪರಿಣಮಿಸುತ್ತದೆ. ದೇವರ ವಾಕ್ಯಕ್ಕೆ ತಾವು ಕಿವಿಗೊಡುವುದು, ತಮ್ಮ ಮೇಲೆ ಎಂತಹ ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲದು ಎಂಬುದನ್ನು ಅವರು ಗಣ್ಯಮಾಡುವುದಿಲ್ಲ.—ಲೂಕ 11:28.
2 ಲೋಕದ ಅನೇಕ ಭಾಗಗಳಲ್ಲಿ, ಸಾವಿರಾರು ಜನರು ಆ ಸಂದೇಶಕ್ಕೆ ಕಿವಿಗೊಡುತ್ತಾ, ಮನೆ ಬೈಬಲ್ ಅಭ್ಯಾಸಗಳ ನಮ್ಮ ನೀಡುವಿಕೆಯನ್ನು ಸ್ವೀಕರಿಸುತ್ತಿದ್ದಾರೆ ಎಂಬುದಕ್ಕೆ ನಾವು ಸಂತೋಷಿಸುತ್ತೇವೆ. ಹಾಗಿದ್ದರೂ, ಬೇರೆ ಕ್ಷೇತ್ರಗಳಲ್ಲಿ, ಪ್ರತಿಕ್ರಿಯೆಯು ಬಹಳ ಕಡಿಮೆಯಾಗಿದೆ. ಶುಶ್ರೂಷೆಯಲ್ಲಿ ನಾವು ಮಾಡುವ ಅನೇಕ ಭೇಟಿಗಳು ಸಕಾರಾತ್ಮಕ ಫಲಿತಾಂಶಗಳಿಲ್ಲದೆ ಇರುತ್ತವೆ. ಮತ್ತು ನಮ್ಮ ಸಂದೇಶಕ್ಕೆ ಯಾರು ಕಿವಿಗೊಡುವರು ಎಂದು ನಾವು ಕುತೂಹಲಪಡಬಹುದು.
3 ನಿರುತ್ಸಾಹಗೊಳ್ಳುವುದರ ವಿರುದ್ಧ ನಾವು ಎಚ್ಚರಿಕೆಯಿಂದಿರಬೇಕು. ಪೌಲನು ವಿವರಿಸಿದ್ದು: “ಕರ್ತನ [“ಯೆಹೋವನ,” NW] ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದೆಂದು ಬರೆದದೆ. ಆದರೆ . . . ಆತನ ಸುದ್ದಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ? ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ? . . . ಇದಕ್ಕೆ ಸರಿಯಾಗಿ ಶುಭದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟೋ ಅಂದವಾಗಿವೆ ಎಂದು ಬರೆದದೆ.” (ರೋಮಾ. 10:13-15) ನಾವು ರಾಜ್ಯದ ಬೀಜವನ್ನು ಪ್ರಯತ್ನಪೂರ್ವಕವಾಗಿ ಬಿತ್ತುವುದಾದರೆ, ಪ್ರಾಮಾಣಿಕ ಹೃದಯದ ಜನರಲ್ಲಿ ಅದು ಬೆಳೆಯುವಂತೆ ದೇವರು ಮಾಡುವನು.—1 ಕೊರಿಂ. 3:6.
4 ಕೀಲಿ ಕೈಯು ಕ್ರಮವಾದ ಪುನರ್ಭೇಟಿಗಳನ್ನು ಮಾಡುವುದೇ ಆಗಿದೆ: ಕೊಂಚವೇ ಜನರು ನಮ್ಮ ಸಂದೇಶಕ್ಕೆ ಕಿವಿಗೊಡುತ್ತಾರೆಂದು ತೋರುವ ಕ್ಷೇತ್ರಗಳಲ್ಲಿ, ನಾವು ಸಾಹಿತ್ಯವನ್ನು ನೀಡಲಿ, ನೀಡದಿರಲಿ, ಕಂಡುಕೊಳ್ಳುವ ಯಾವುದೇ ಆಸಕ್ತಿಯನ್ನು ಬೆಳೆಸುವುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಬೇಕು. ಏನನ್ನೂ ಸಾಧಿಸಸಾಧ್ಯವಿಲ್ಲವೆಂದು ಕೂಡಲೆ ಏಕೆ ತೀರ್ಮಾನಿಸಬೇಕು? ನಾವು ಬೀಜ ಬಿತ್ತುವಾಗ, ಅದು ಎಲ್ಲಿ ಸಫಲಗೊಳ್ಳುತ್ತದೆಂದು ನಮಗೆ ಗೊತ್ತಿಲ್ಲ. (ಪ್ರಸಂ. 11:6) ನಾವು ಹಿಂದಿರುಗಿ ಹೋಗುವಾಗ ಶಾಸ್ತ್ರವಚನಗಳಿಂದ ಏನನ್ನಾದರೂ ತಿಳಿಸಲು ತಯಾರಿಸಿ ಹೋಗುವುದಾದರೆ, ಅದು ಕೇವಲ ಸಂಕ್ಷಿಪ್ತವಾಗಿರುವುದಾದರೂ, ವ್ಯಕ್ತಿಯ ಹೃದಯವನ್ನು ತಲಪಲು ನಾವು ಸಮರ್ಥರಾಗಬಹುದು. ನಾವು ಒಂದು ಕಿರುಹೊತ್ತಗೆಯನ್ನು ಬಿಟ್ಟುಬರಬಹುದು ಅಥವಾ ಪ್ರಚಲಿತ ಪತ್ರಿಕೆಗಳನ್ನು ನೀಡಬಹುದು. ಕ್ರಮೇಣ, ನಾವು ಬೈಬಲಿನ ಒಂದು ಅಭ್ಯಾಸವನ್ನು ಪ್ರತ್ಯಕ್ಷಾಭಿನಯಿಸಲು ಸಾಧ್ಯವಾಗಬಹುದು. ಯೆಹೋವನು ನಮ್ಮ ಪ್ರಯತ್ನಗಳನ್ನು ಎಷ್ಟರಮಟ್ಟಿಗೆ ಆಶೀರ್ವದಿಸುತ್ತಾನೆ ಎಂದು ನೋಡಲು ನಾವು ಹಿತಾಶ್ಚರ್ಯಗೊಳ್ಳುವೆವು.—ಕೀರ್ತ. 126:5, 6.
5 ಸ್ವಲ್ಪ ಆಸಕ್ತಿಯನ್ನು ತೋರಿಸಿದ ಒಬ್ಬ ಸ್ತ್ರೀಯ ಬಳಿ ಒಂದು ಕಿರುಹೊತ್ತಗೆಯನ್ನು ಬಿಡಲಾಯಿತು. ಪುನಃ ಎರಡು ತಿಂಗಳುಗಳ ತನಕ ಅವಳು ಮನೆಯಲ್ಲಿ ಇರಲಿಲ್ಲ. ಅನಂತರ ಅವಳನ್ನು ಭೇಟಿಯಾದಾಗ ಅವಳು ತೀರಾ ಕಾರ್ಯಮಗ್ನಳಾಗಿದ್ದಳು. ಮತ್ತೆ ಅದೇ ಕಿರುಹೊತ್ತಗೆಯನ್ನು ಅವಳ ಬಳಿ ಬಿಡಲಾಯಿತು. ಮನೆಯಲ್ಲಿ ಅವಳನ್ನು ಕಂಡುಕೊಳ್ಳಲು ಪ್ರಚಾರಕಳ ಪಟ್ಟುಹಿಡಿದ ಪ್ರಯತ್ನಗಳ ಮೇಲಾಗಿಯೂ, ಅವಳನ್ನು ಕಂಡುಕೊಳ್ಳಲು ಮೂರು ತಿಂಗಳುಗಳು ಕಳೆದವು. ಆಗ ಅವಳು ಅಸ್ವಸ್ಥಳಾಗಿದ್ದಳು. ಆ ಸಹೋದರಿಯು ಪುನಃ ಮುಂದಿನ ವಾರ ಭೇಟಿಮಾಡಿದಳು ಮತ್ತು ಕಿರುಹೊತ್ತಗೆಯ ಕುರಿತಾಗಿ ಒಂದು ಸಂಕ್ಷಿಪ್ತವಾದ ಸಂಭಾಷಣೆಯು ನಡೆಯಿತು. ಮರುವಾರ ಸಹೋದರಿಯು ಹಿಂದಿರುಗಿದಾಗ, ಆ ಸ್ತ್ರೀಯು ರಾಜ್ಯ ಸಂದೇಶದಲ್ಲಿ ನಿಜವಾದ ಆಸಕ್ತಿಯನ್ನು ವ್ಯಕ್ತಪಡಿಸಿದಳು. ಅವಳ ಜೀವನದಲ್ಲಿನ ಬದಲಾದ ಪರಿಸ್ಥಿತಿಯು ಅವಳ ಆತ್ಮಿಕ ಅಗತ್ಯತೆಯ ಪ್ರಜ್ಞೆಯನ್ನು ಅವಳಲ್ಲಿ ಮೂಡಿಸಿತು. ಒಂದು ಬೈಬಲ್ ಅಭ್ಯಾಸವು ಆರಂಭಿಸಲ್ಪಟ್ಟಿತು. ಅಂದಿನಿಂದ ಅವಳು ಪ್ರತಿ ವಾರ ಉತ್ಸಾಹದಿಂದ ಅಭ್ಯಾಸಿಸಿದಳು.
6 ಹೂವುಗಳಾಗಲಿ, ತರಕಾರಿಗಳಾಗಲಿ, ಅಥವಾ ರಾಜ್ಯ ಸಂದೇಶದಲ್ಲಿನ ಆಸಕ್ತಿಯಾಗಲಿ, ಬೆಳೆಯುವಂತೆ ನಾವು ನೋಡಬೇಕಾದರೆ ಬೇಸಾಯದ ಅಗತ್ಯವಿದೆ. ಅದು ಸಮಯವನ್ನು, ಶ್ರಮವನ್ನು, ಕಾಳಜಿವಹಿಸುವ ಮನೋಭಾವವನ್ನು, ಹಾಗೂ ಪ್ರಯತ್ನವನ್ನು ಬಿಟ್ಟುಕೊಡಬಾರದೆಂಬ ಸ್ಥಿರತೆಯನ್ನು ಕೇಳಿಕೊಳ್ಳುತ್ತದೆ. ಕಳೆದ ವರುಷ, ಯಾರಲ್ಲಿ ರಾಜ್ಯದ ಬೀಜ ಬೇರೂರಿತ್ತೋ ಅಂತಹ ಮೂರು ಲಕ್ಷಕ್ಕಿಂತಲೂ ಹೆಚ್ಚು ಜನರು ದೀಕ್ಷಾಸ್ನಾನ ಪಡೆದುಕೊಂಡರು! ನಾವು ಸಾರುತ್ತಲೇ ಇದ್ದರೆ, ನಮ್ಮ ಸಂದೇಶಕ್ಕೆ ಕಿವಿಗೊಡುವ ಇನ್ನೂ ಅನೇಕರನ್ನು ನಾವು ನಿಶ್ಚಿತವಾಗಿ ಕಂಡುಕೊಳ್ಳುವೆವು.—ಗಲಾತ್ಯ 6:9ನ್ನು ಹೋಲಿಸಿರಿ.