ಅಧ್ಯಯನಗಳನ್ನು ಆರಂಭಿಸಲಿಕ್ಕಾಗಿ ನಮ್ಮಲ್ಲಿ ಒಂದು ಹೊಸ ಸಾಧನವಿದೆ!
1 ರಾಜೇಂದ್ರನ್ ಎಂಬ ವ್ಯಕ್ತಿಯು ಒಂದು ಚಿಕ್ಕ ಸಮುದಾಯದ ದೇವಸ್ಥಾನದಲ್ಲಿ ಸ್ಥಳಿಕ ಪೂಜಾರಿಯಾಗಿದ್ದನು. ಅವನು ಹಿಂದೂ ಸಂಸ್ಕಾರಗಳಲ್ಲಿ ಕ್ರಮವಾಗಿ ಪೂಜೆಯನ್ನು ಮಾಡುತ್ತಿದ್ದನು. ಪ್ರತಿವಾರ ಒಬ್ಬ ಯುವ ಸಹೋದರನು ಬೈಬಲ್ ಅಧ್ಯಯನಗಳನ್ನು ನಡಿಸಲಿಕ್ಕಾಗಿ ತನ್ನ ವಠಾರದಲ್ಲಿರುವ ಮನೆಗಳಿಗೆ ಭೇಟಿ ನೀಡುತ್ತಿರುವುದನ್ನು ಈ ಪೂಜಾರಿಯು ಗಮನಿಸಿದನು. ಈ ಕ್ರಮವಾದ ಭೇಟಿಗಳು ಅವನ ಕುತೂಹಲವನ್ನು ಕೆರಳಿಸಿದವು. ಸಮಯಾನಂತರ ಆ ಸಮುದಾಯದ ಸಮಾರಂಭವೊಂದರಲ್ಲಿ ಸಹೋದರರು ರಾಜೇಂದ್ರನ್ನನ್ನೇ ಭೇಟಿಯಾದರು. ಆ ಸಂದರ್ಭದಲ್ಲಿ ಅವರು ಅವನಿಗೆ ಬೈಬಲ್ ಅಧ್ಯಯನಮಾಡುವಂತೆ ಕೇಳಿಕೊಂಡರು. ಅವನು ಬೈಬಲಿನ ಕುರಿತು ತಿಳಿದುಕೊಳ್ಳಲು ತೀವ್ರಾಪೇಕ್ಷೆಯುಳ್ಳವನಾಗಿದ್ದನು. ಆದುದರಿಂದ ಅವನು ಕೃತಜ್ಞತಾಭರಿತನಾಗಿ ಅಭ್ಯಾಸಮಾಡಲು ಒಪ್ಪಿಕೊಂಡನು. ಈ ಅನುಭವವು ನಮಗೆ ಏನನ್ನು ತಿಳಿಸುತ್ತದೆ? ಒಂದು ಉಚಿತ ಬೈಬಲ್ ಅಧ್ಯಯನವನ್ನು ಯಾರು ಸ್ವೀಕರಿಸುವರೆಂದು ನಾವು ಮೊದಲೇ ಹೇಳಲು ಸಾಧ್ಯವಿಲ್ಲ.—ಪ್ರಸಂ. 11:6.
2 ಆಸಕ್ತರಾಗಿರುವ ಯಾರೊಂದಿಗಾದರೂ ಬೈಬಲನ್ನು ಅಧ್ಯಯನಮಾಡಲು ಸಿದ್ಧರಾಗಿದ್ದೇವೆ ಎಂಬುದನ್ನು ಜನರಿಗೆ ಹೇಳಲು ನೀವು ಎಂದಾದರೂ ಹಿಂಜರಿದಿದ್ದೀರೋ? ನಿಮ್ಮ ನೆರೆಹೊರೆಯಲ್ಲಿರುವ ಎಲ್ಲರಿಗೂ ನೀವು ಈ ಉಚಿತ ಸೇವೆಯನ್ನು ನೀಡುತ್ತೀರಿ ಎಂಬುದು ಗೊತ್ತಿದೆಯೋ? ಅವರಿಗೆ ಗೊತ್ತಿದೆ ಎಂಬುದನ್ನು ನಾವು ಹೇಗೆ ಖಚಿತಪಡಿಸಿಕೊಳ್ಳುವುದು? ಒಂದು ಹೊಸ ಸಾಧನವನ್ನು ಉಪಯೋಗಿಸುವ ಮೂಲಕವೇ! ಅದು ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಎಂಬ ಶೀರ್ಷಿಕೆಯುಳ್ಳ ಆರು ಪುಟಗಳ ಆಕರ್ಷಕ ಟ್ರ್ಯಾಕ್ಟೇ ಆಗಿದೆ. ಈ ಟ್ರ್ಯಾಕ್ಟ್ನ ಉಪಶೀರ್ಷಿಕೆಗಳನ್ನು ಒಂದೊಂದಾಗಿ ಪರಿಚಯಿಸಿಕೊಳ್ಳೋಣ.
3 “ಬೈಬಲನ್ನು ಏಕೆ ಓದಬೇಕು?” ಈ ಟ್ರ್ಯಾಕ್ಟ್ ಕೊಡುವ ಕಾರಣಗಳು ತುಂಬ ಆಕರ್ಷಣೀಯವಾಗಿವೆ. ಸಹಾಯಕ್ಕಾಗಿ ದೇವರನ್ನು ಪ್ರಾರ್ಥನೆಯಲ್ಲಿ ಹೇಗೆ ಸಮೀಪಿಸುವುದು ಮತ್ತು ನಿತ್ಯಜೀವದ ವರದಾನವನ್ನು ಹೇಗೆ ಪಡೆದುಕೊಳ್ಳುವುದು ಎಂಬುದನ್ನು ತೋರಿಸುತ್ತಾ, ಬೈಬಲಿನಲ್ಲಿ “ದೇವರು ಒದಗಿಸಿರುವ ಪ್ರೀತಿಯ ಉಪದೇಶವು ಇದೆ” ಎಂಬುದನ್ನು ಇದು ವಿವರಿಸುತ್ತದೆ. (1 ಥೆಸ. 2:13) ಬೈಬಲಿನ “ಜ್ಞಾನೋದಯವನ್ನು ಉಂಟುಮಾಡುವಂಥ ಸತ್ಯ”ಗಳಿಗೆ ಈ ಟ್ರ್ಯಾಕ್ಟ್ ಸೂಚಿಸುತ್ತದೆ. ಅವುಗಳಲ್ಲಿ ನಾವು ಸತ್ತ ನಂತರ ನಮಗೆ ಏನು ಸಂಭವಿಸುತ್ತದೆ ಮತ್ತು ಲೋಕದಲ್ಲಿ ಇಷ್ಟೊಂದು ತೊಂದರೆ ಏಕಿದೆ ಎಂಬ ವಿಷಯಗಳು ಕೆಲವಾಗಿವೆ. ಅದು “ಬೈಬಲಿನಲ್ಲಿರುವ ದೈವಿಕ ಮೂಲತತ್ತ್ವ”ಗಳನ್ನು, ಮತ್ತು ಅವುಗಳನ್ನು ಅನ್ವಯಿಸುವಾಗ ಅವು ಹೇಗೆ ಶಾರೀರಿಕ ಪ್ರಯೋಜನಗಳನ್ನು ತರುತ್ತವೆ ಮತ್ತು ಸಂತೋಷ, ನಿರೀಕ್ಷೆ, ಹಾಗೂ ಇನ್ನಿತರ ಅಪೇಕ್ಷಣೀಯವಾದ ಗುಣಗಳನ್ನು ಹೇಗೆ ಉತ್ತೇಜಿಸುತ್ತವೆ ಎಂಬುದನ್ನು ವರ್ಣಿಸುತ್ತದೆ. ಬೈಬಲನ್ನು ಓದಬೇಕಾಗಿರುವ ಮತ್ತೊಂದು ಕಾರಣವನ್ನು, ಅಂದರೆ ಮುಂದೇನು ಸಂಭವಿಸಲಿಕ್ಕಿದೆ ಎಂಬುದನ್ನು ತೋರಿಸುವ ಭವಿಷ್ಯತ್ತಿನ ಕುರಿತಾದ ಪ್ರವಾದನೆಗಳಿಗೆ ಅದು ಸೂಚಿಸುತ್ತದೆ.—ಪ್ರಕ. 21:3, 4.
4 “ಬೈಬಲನ್ನು ಅರ್ಥಮಾಡಿಕೊಳ್ಳಲು ಸಹಾಯ”: “ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳುವುದರಲ್ಲಿ ನಮ್ಮೆಲ್ಲರಿಗೂ ಸಹಾಯವು ಬೇಕಾಗಿದೆ,” ಎಂಬುದಾಗಿ ಟ್ರ್ಯಾಕ್ಟ್ ತಿಳಿಸುತ್ತದೆ. ನಂತರ ನಾವು ಬೈಬಲ್ ಅಧ್ಯಯನವನ್ನು ಮಾಡುವ ವಿಧಾನವನ್ನು ವಿವರಿಸುತ್ತದೆ: “ಸಾಮಾನ್ಯವಾಗಿ, ಬೈಬಲನ್ನು ಕ್ರಮಾನುಗತವಾಗಿ ಅಧ್ಯಯನಮಾಡುವುದು ಒಳ್ಳೇದು. ಅದಕ್ಕಾಗಿ ನೀವು ಮೂಲ ಬೋಧನೆಗಳಿಂದ ಆರಂಭಿಸಬಹುದು.” “ಬೈಬಲು ಪ್ರಮಾಣಗ್ರಂಥವಾಗಿದೆ” ಎಂಬುದನ್ನು ಸ್ಪಷ್ಟಪಡಿಸುವಾಗ, ವಿದ್ಯಾರ್ಥಿಯು “ವಿವಿಧ ವಿಷಯಗಳ ಕುರಿತಾದ ಬೈಬಲ್ ಉಲ್ಲೇಖಗಳನ್ನು ಅರ್ಥಮಾಡಿಕೊಳ್ಳಲು” ಅಪೇಕ್ಷಿಸು ಬ್ರೋಷರ್ ಸಹಾಯಕರವಾಗಿರುವುದು ಎಂಬುದನ್ನು ಟ್ರ್ಯಾಕ್ಟ್ ನಿರ್ದಿಷ್ಟವಾಗಿ ತಿಳಿಸುತ್ತದೆ. ಮುಂದಿನ ಉಪಶೀರ್ಷಿಕೆಯು ಆಸಕ್ತಿಯನ್ನು ಕೆರಳಿಸುವಂಥ ಒಂದು ಪ್ರಶ್ನೆಯನ್ನು ಎಬ್ಬಿಸುತ್ತದೆ.
5 “ಬೈಬಲನ್ನು ಅರ್ಥಮಾಡಿಕೊಳ್ಳಲು ಪ್ರತಿವಾರ ಸಮಯವನ್ನು ಕೊಡಲು ಸಿದ್ಧರಿದ್ದೀರೋ?” ವಿದ್ಯಾರ್ಥಿಗೆ ಅನುಕೂಲಕರವಾಗಿರುವಂಥ ಸಮಯ ಮತ್ತು ಸ್ಥಳದಲ್ಲಿ ಬೈಬಲ್ ಅಧ್ಯಯನವು ಏರ್ಪಡಿಸಲ್ಪಡಬಹುದು. ಇದನ್ನು ಅವರ ಮನೆಯ ಏಕಾಂತದಲ್ಲೇ ಮಾಡಬಹುದು ಅಥವಾ ಟೆಲಿಫೋನಿನ ಮೂಲಕವೂ ಮಾಡಬಹುದು ಎಂಬುದನ್ನು ಟ್ರ್ಯಾಕ್ಟ್ ವಿವರಿಸುತ್ತದೆ. ಈ ಚರ್ಚೆಯಲ್ಲಿ ಯಾರೆಲ್ಲ ಭಾಗವಹಿಸಬಹುದು? ಟ್ರ್ಯಾಕ್ಟ್ ಉತ್ತರಿಸುವುದು: “ನಿಮ್ಮ ಇಡೀ ಕುಟುಂಬವು ಭಾಗವಹಿಸಬಹುದು. ನೀವು ಆಮಂತ್ರಿಸಲು ಬಯಸುವಂಥ ಯಾರೇ ಸ್ನೇಹಿತರು ಸಹ ಭಾಗವಹಿಸಬಹುದು. ಅಥವಾ ನೀವು ಇಷ್ಟಪಡುವಲ್ಲಿ, ಚರ್ಚೆಯು ನಿಮ್ಮೊಂದಿಗೆ ಮಾತ್ರ ನಡೆಸಲ್ಪಡಬಹುದು.” ಎಷ್ಟು ಸಮಯಾವಧಿಗೆ ಒಬ್ಬನು ಅಧ್ಯಯನಮಾಡಬಹುದು? ಅದು ವಿವರಿಸುವುದು: “ಅನೇಕರು ಬೈಬಲಿನ ಅಧ್ಯಯನಮಾಡಲಿಕ್ಕಾಗಿ ಪ್ರತಿವಾರ ಒಂದು ತಾಸನ್ನು ಬದಿಗಿರಿಸುತ್ತಾರೆ. ನೀವು ಪ್ರತಿವಾರ ಹೆಚ್ಚಿನ ಸಮಯವನ್ನು ಕಳೆಯಲು ಶಕ್ತರಾಗಿರಲಿ ಅಥವಾ ಕೊಂಚವೇ ಸಮಯವನ್ನು ಕಳೆಯಲು ಶಕ್ತರಾಗಿರಲಿ, ನಿಮಗೆ ಸಹಾಯಮಾಡಲಿಕ್ಕಾಗಿ ಸಾಕ್ಷಿಗಳು ತಮ್ಮನ್ನೇ ನೀಡಿಕೊಳ್ಳುವರು.” ಇದೇ ಕೀಲಿ ಕೈ! ಪ್ರತಿಯೊಬ್ಬ ವಿದ್ಯಾರ್ಥಿಯ ಸನ್ನಿವೇಶಗಳಿಗೆ ತಕ್ಕಂತೆ ನಾವು ನಮ್ಮನ್ನೇ ಹೊಂದಿಸಿಕೊಳ್ಳಲು ಬಯಸುತ್ತೇವೆ.
6 “ಕಲಿತುಕೊಳ್ಳಲಿಕ್ಕಾಗಿ ನಿಮಗೆ ಒಂದು ಆಮಂತ್ರಣ”: ಟ್ರ್ಯಾಕ್ಟನ್ನು ಪಡೆದುಕೊಳ್ಳುವವನಿಗೆ ಒಂದು ಕೂಪನ್ ಒದಗಿಸಲ್ಪಟ್ಟಿದೆ. ಅದರ ಮೂಲಕ ಅವನು ಅಪೇಕ್ಷಿಸು ಬ್ರೋಷರನ್ನು ಅಥವಾ ಮನೆಯಲ್ಲಿಯೇ ಉಚಿತವಾಗಿ ಬೈಬಲನ್ನು ಅಧ್ಯಯನಮಾಡುವ ನಮ್ಮ ಕಾರ್ಯಕ್ರಮದ ಕುರಿತು ವಿವರಿಸುವಂತೆ ಒಂದು ಭೇಟಿಯನ್ನು ವಿನಂತಿಸಿಕೊಳ್ಳಬಹುದು. ಅಪೇಕ್ಷಿಸು ಬ್ರೋಷರಿನ ಮುಖಪುಟ ಪೂರ್ಣ ವರ್ಣರಂಜಿತವಾಗಿದೆ. ಹೆಚ್ಚಿನ ಸಹೃದಯಿ ಜನರು ನಮ್ಮ ಸಹಾಯವನ್ನು ಪಡೆಯಲು ಈ ಟ್ರ್ಯಾಕ್ಟ್ ಅವರನ್ನು ಏಕೆ ಉತ್ತೇಜಿಸುವುದು ಎಂಬುದು ನಿಮಗೆ ಈಗ ಅರ್ಥವಾಯಿತೋ? ಈಗ, ಈ ಹೊಸ ಸಾಧನದ ಅತ್ಯುತ್ತಮವಾದ ಉಪಯೋಗವನ್ನು ನಾವು ಹೇಗೆ ಮಾಡಬಲ್ಲೆವು?
7 ನೀವು ಈ ಟ್ರ್ಯಾಕ್ಟನ್ನು ಯಾರಿಗೆ ನೀಡಬಲ್ಲಿರಿ? ಈ ಟ್ರ್ಯಾಕ್ಟನ್ನು ಜನರಿಗೆ ವ್ಯಕ್ತಿಗತವಾಗಿ ಕೊಡಬಹುದು ಅಥವಾ ಯಾರೂ ಇಲ್ಲದಿರುವಂಥ ಮನೆಗಳಲ್ಲಿಯೂ ಬಿಟ್ಟುಬರಬಹುದು. ಅದನ್ನು ಮನೆಯಿಂದ ಮನೆಗೆ ವಿತರಿಸಬಹುದು, ಬೀದಿಯಲ್ಲಿ ಮತ್ತು ವ್ಯಾಪಾರದ ಸ್ಥಳಗಳಲ್ಲಿಯೂ ನೀಡಬಹುದು. ನಮ್ಮ ಸಾಹಿತ್ಯವನ್ನು ಜನರು ಸ್ವೀಕರಿಸಲಿ ಅಥವಾ ನಿರಾಕರಿಸಲಿ ಇದನ್ನು ಅವರಿಗೆ ನೀಡಿರಿ. ನೀಡಲ್ಪಡುವ ಪತ್ರಿಕೆಗಳೊಂದಿಗೆ ಅಥವಾ ಇತರ ಪ್ರಕಾಶನಗಳೊಂದಿಗೆ ಇದನ್ನು ಸೇರಿಸಿಕೊಡಿ. ನೀವು ಪತ್ರಗಳನ್ನು ಬರೆಯುವಾಗ ಇದನ್ನು ಅವುಗಳ ಜೊತೆ ಕಳುಹಿಸಿರಿ. ನೀವು ಟೆಲಿಫೋನಿನ ಮೂಲಕ ಸಂಪರ್ಕಮಾಡುವವರಿಗೆ, ಇದನ್ನು ಅಂಚೆಯ ಮೂಲಕ ಕಳುಹಿಸಿಕೊಡಲೋ ಎಂದು ಕೇಳಿರಿ. ನೀವು ಷಾಪಿಂಗ್ ಮಾಡುವಾಗ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉಪಯೋಗಿಸುವಾಗ, ಮತ್ತು ಅನೌಪಚಾರಿಕವಾಗಿ ಸಾಕ್ಷಿನೀಡುವಾಗ ವಿತರಿಸಲಿಕ್ಕಾಗಿ ನಿಮ್ಮ ಹತ್ತಿರ ಇದರ ಪ್ರತಿಗಳಿರಲಿ. ನಿಮ್ಮ ಮನೆಗೆ ಭೇಟಿನೀಡುವವರಿಗೆಲ್ಲಾ ಅದನ್ನು ಕೊಡಿರಿ. ಅದನ್ನು ನಿಮ್ಮ ಸಂಬಂಧಿಕರಿಗೆ, ನೆರೆಯವರಿಗೆ, ಸಹಕರ್ಮಿಗಳಿಗೆ, ಸಹಪಾಠಿಗಳಿಗೆ, ಮತ್ತು ಇತರ ಪರಿಚಯಸ್ಥರಿಗೆ ನೀಡಿರಿ. ಈ ಟ್ರ್ಯಾಕ್ಟ್ ನೀವು ಭೇಟಿಮಾಡುವ ಪ್ರತಿಯೊಬ್ಬರ ಕೈಸೇರುವಂತೆ ಪ್ರಯಾಸಪಡಿರಿ! ನಂತರ ಏನು?
8 ಕೂಡಲೇ ಪ್ರತಿಕ್ರಿಯಿಸುವಲ್ಲಿ: ಕೆಲವು ವ್ಯಕ್ತಿಗಳು ಒಂದು ಬೈಬಲ್ ಅಧ್ಯಯನವನ್ನು ಬಯಸುತ್ತೇವೆ ಎಂಬುದನ್ನು ಒಡನೆಯೇ ತಿಳಿಸಬಹುದು. ಆದುದರಿಂದ, ಕ್ಷೇತ್ರ ಸೇವಾ ಚಟುವಟಿಕೆಯಲ್ಲಿ ಯಾವಾಗೆಲ್ಲ ಪಾಲ್ಗೊಳ್ಳುತ್ತೀರೋ ಆಗೆಲ್ಲ ನಿಮ್ಮ ಬಳಿ ಅಪೇಕ್ಷಿಸು ಬ್ರೋಷರಿನ ಎರಡು ಪ್ರತಿಗಳಿವೆಯೋ ಎಂಬುದನ್ನು ಖಚಿತಪಡಿಸಿಕೊಳ್ಳಿ—ಒಂದು ವಿದ್ಯಾರ್ಥಿಗೆ, ಮತ್ತೊಂದು ನಿಮಗೆ. ಆ ವ್ಯಕ್ತಿಯು ಬಯಸುವುದಾದರೆ, ಅಧ್ಯಯನವನ್ನು ಆಗಿಂದಾಗಲೇ ಪ್ರಾರಂಭಿಸಿ. ಒಳಪುಟವನ್ನು ತೆರೆಯಿರಿ ಮತ್ತು “ಈ ಬ್ರೋಷರನ್ನು ಉಪಯೋಗಿಸುವ ವಿಧ” ಎಂಬ ಭಾಗವನ್ನು ಓದಿ. ನಂತರ ನೇರವಾಗಿ ಪಾಠ 1ಕ್ಕೆ ಹೋಗಿ, ಅಧ್ಯಯನವನ್ನು ಪ್ರತ್ಯಕ್ಷಾಭಿನಯಿಸಿರಿ. ಇದಕ್ಕಿಂತ ಸುಲಭವಾದ ನಿರೂಪಣೆಯು ಯಾವುದಿದ್ದೀತು?
9 ನಿಮ್ಮ ಕೇಳುಗನಿಗೆ ಇದರ ಕುರಿತು ಯೋಚಿಸಲು ಸಮಯ ಬೇಕಾಗಿರುವಲ್ಲಿ: ಹೆಚ್ಚು ಸಮಯ ಗತಿಸಿಹೋಗುವ ಮುನ್ನ, ಅವನನ್ನು ಪುನಃ ಸಂಪರ್ಕಿಸಲು ಪ್ರಯತ್ನಮಾಡಿ. ಹೀಗೆ ಮಾಡುವಾಗ, ನಿಮ್ಮ ಬಳಿ ಅಪೇಕ್ಷಿಸು ಬ್ರೋಷರ್ ಇದೆಯೋ ಎಂಬುದನ್ನು ಖಚಿತಪಡಿಸಿಕೊಳ್ಳಿ. ಒಳಪುಟದಲ್ಲಿರುವ ಪರಿವಿಡಿಯನ್ನು ಅವನಿಗೆ ತೋರಿಸಿರಿ. ಅವನಿಗೆ ಹೆಚ್ಚು ಆಸಕ್ತಿಕರವಾಗಿ ತೋರುವ ವಿಷಯವನ್ನು ಅವನು ಆರಿಸಿಕೊಳ್ಳಲಿ. ಆ ಪಾಠಕ್ಕೆ ತಿರುಗಿಸಿ, ಅವನು ಆರಿಸಿಕೊಂಡ ಪಾಠವನ್ನು ಚರ್ಚಿಸಲು ಆರಂಭಿಸಿ.
10 ಪತ್ರಿಕೆ ತೆಗೆದುಕೊಂಡವರನ್ನು ಪುನಃ ಸಂಪರ್ಕಿಸುವುದು: ನೀವು ಟ್ರ್ಯಾಕ್ಟನ್ನು ಒಂದು ಜೋಡಿ ಪತ್ರಿಕೆಗಳೊಂದಿಗೆ ಬಿಟ್ಟುಬಂದಿರುವುದಾದರೆ, ಈ ಪ್ರಸ್ತಾವದೊಂದಿಗೆ ತಿರುಗಿ ಹೋಗಬಹುದು: “ಹೋದ ಸಲ ನಿಮ್ಮನ್ನು ಭೇಟಿಯಾದಾಗ, ನಿಮ್ಮೊಂದಿಗೆ ಕಾವಲಿನಬುರುಜು ಪತ್ರಿಕೆಯ ಒಂದು ಪ್ರತಿಯನ್ನು ನಾನು ಬಿಟ್ಟುಹೋಗಿದ್ದೆ. ಈ ಪತ್ರಿಕೆಯ ಇಡೀ ಶೀರ್ಷಿಕೆಯು ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು ಎಂದಾಗಿದೆ ಎಂಬುದನ್ನು ನೀವು ಗಮನಿಸಿರಬಹುದು. ಆ ರಾಜ್ಯವು ಏನಾಗಿದೆ ಮತ್ತು ಅದು ನಿಮಗೂ ನಿಮ್ಮ ಕುಟುಂಬಕ್ಕೂ ಏನನ್ನು ಅರ್ಥೈಸುತ್ತದೆ ಎಂಬುದನ್ನು ಇಂದು ವಿವರಿಸಲು ನಾನು ಬಯಸುತ್ತೇನೆ.” ನಂತರ ಅಪೇಕ್ಷಿಸು ಬ್ರೋಷರನ್ನು ಪಾಠ 6ಕ್ಕೆ ತೆರೆಯಿರಿ. ಮೊದಲನೆಯ ಪ್ಯಾರಗ್ರಾಫ್ನೊಂದಿಗೆ ಆರಂಭಿಸುತ್ತಾ, ಮನೆಯವನು ಅನುಮತಿಸುವಷ್ಟು ಸಮಯ ವಿಷಯವನ್ನು ಓದಿ ಚರ್ಚಿಸಿರಿ. ತದನಂತರ, ಮತ್ತೊಂದು ದಿನ ತಿರುಗಿ ಬಂದು ಪಾಠವನ್ನು ಮುಗಿಸುವುದಕ್ಕಾಗಿ ಏರ್ಪಾಡುಗಳನ್ನು ಮಾಡಿರಿ.
11 ಟ್ರ್ಯಾಕ್ಟ್ಗಳು ಮುಗಿದುಹೋಗದಂತೆ ನೋಡಿಕೊಳ್ಳಿ: ಸೇವಾ ಮೇಲ್ವಿಚಾರಕನು ಮತ್ತು ಸಾಹಿತ್ಯವನ್ನು ನೋಡಿಕೊಳ್ಳುತ್ತಿರುವ ಸಹೋದರರು, ಬೈಬಲನ್ನು ತಿಳಿದುಕೊಳ್ಳಿರಿ ಟ್ರ್ಯಾಕ್ಟ್ನ ಬೇಕಾಗುವಷ್ಟು ಸರಬರಾಜು ಸಭೆಯಲ್ಲಿ ಯಾವಾಗಲೂ ಇರುವಂತೆ ನೋಡಿಕೊಳ್ಳಬಯಸುವರು. ಕೆಲವನ್ನು ನಿಮ್ಮ ಜೇಬು ಅಥವಾ ಪರ್ಸಿನಲ್ಲಿ, ನಿಮ್ಮ ಕಾರಿನಲ್ಲಿ, ನಿಮ್ಮ ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ, ನಿಮ್ಮ ಮನೆಯ ಪ್ರವೇಶದ್ವಾರದ ಹತ್ತಿರ—ಅವು ಕೈಗೆಟುಕುವಷ್ಟು ಸಮೀಪದಲ್ಲಿ ಎಲ್ಲಿಯಾದರೂ ಇಡಬಹುದು. ನೀವು ಬೈಬಲಿನ ಕುರಿತು ಸಂಭಾಷಿಸಲು ಸಾಧ್ಯವಿರುವ ಯಾರಾದರೂ ಸಿಕ್ಕುವಲ್ಲಿ ಅವರಿಗೆ ಕೊಡಲಿಕ್ಕಾಗಿ ನಿಮ್ಮ ಕ್ಷೇತ್ರ ಸೇವಾ ಬ್ಯಾಗ್ನಲ್ಲಿ ಕೆಲವನ್ನು ಖಂಡಿತವಾಗಿಯೂ ಕೊಂಡೊಯ್ಯಿರಿ.
1 2 ಯೆಹೋವನು ನಿಮ್ಮ ಪ್ರಯತ್ನಗಳನ್ನು ಆಶೀರ್ವದಿಸಲಿ: ಇನ್ನೊಬ್ಬರಿಗೆ ಬೈಬಲಿನ ಕುರಿತು ಬೋಧಿಸುವುದೇ ಎಲ್ಲ ಕ್ರೈಸ್ತರ ಒಂದು ಅಪೇಕ್ಷಿತ ಗುರಿಯಾಗಿದೆ. (ಮತ್ತಾ. 28:19, 20) ನೀವು ಸದ್ಯಕ್ಕೆ ಒಂದು ಬೈಬಲ್ ಅಧ್ಯಯನವನ್ನು ನಡೆಸುತ್ತಿದ್ದೀರೋ? ನಡೆಸುತ್ತಿರುವುದಾದರೆ, ನಿಮ್ಮ ಸಾಪ್ತಾಹಿಕ ಶೆಡ್ಯೂಲಿನಲ್ಲಿ ಇನ್ನೊಂದಕ್ಕಾಗಿ ಸಮಯವನ್ನು ಕಂಡುಕೊಳ್ಳಲು ಸಾಧ್ಯವಿದೆಯೋ? ಈಗ ನೀವು ಒಂದು ಅಧ್ಯಯನವನ್ನು ನಡೆಸುತ್ತಿಲ್ಲವಾದರೆ, ಅಧ್ಯಯನವನ್ನು ನಡೆಸಲು ಬಯಸುವಿರಿ ಎಂಬುದು ಖಂಡಿತ. ನೀವು ಅಧ್ಯಯನಮಾಡಲು ಸಾಧ್ಯವಾಗುವಂತೆ ಯಾರಾದರೊಬ್ಬರನ್ನು ಕಂಡುಕೊಳ್ಳಲು ನೀವು ಮಾಡುವ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸುವಂತೆ ಪ್ರಾರ್ಥಿಸಿರಿ. ನಂತರ ನಿಮ್ಮ ಪ್ರಾರ್ಥನೆಗಳಿಗನುಗುಣವಾಗಿ ಪ್ರಯತ್ನವನ್ನು ಮಾಡಿ.—1 ಯೋಹಾ. 5:14, 15.
13 ಅಧ್ಯಯನಗಳನ್ನು ಆರಂಭಿಸುವುದಕ್ಕಾಗಿ ನಮ್ಮಲ್ಲಿ ಒಂದು ಹೊಸ ಸಾಧನವಿದೆ! ಅದನ್ನು ಚೆನ್ನಾಗಿ ಪರಿಚಯಮಾಡಿಕೊಳ್ಳಿ. ಧಾರಾಳವಾಗಿ ವಿತರಿಸಿ. “ಒಳ್ಳೇದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ದಾನಧರ್ಮಗಳನ್ನು ಮಾಡುವವರೂ ಪರೋಪಕಾರಮಾಡುವವರೂ ಆಗಿದ್ದು,” ದೇವರ ವಾಕ್ಯದ ಕುರಿತು ನೀವು ಕಲಿತಿರುವಂಥ ವಿಷಯಗಳನ್ನು ಹಂಚಿಕೊಳ್ಳಲು ನಿಮ್ಮಿಂದಾದುದೆಲ್ಲವನ್ನೂ ಮಾಡಿರಿ.—1 ತಿಮೊ. 6:18.
[ಪುಟ 4 ರಲ್ಲಿರುವ ಚೌಕ]
ಟ್ರ್ಯಾಕ್ಟನ್ನು ವಿತರಿಸಬಹುದಾದ ಸಂದರ್ಭಗಳು
▪ ದೈನಂದಿನ ಸಂಭಾಷಣೆಗಳು
▪ ನಮ್ಮ ಸಾಹಿತ್ಯವನ್ನು ಯಾರಾದರೂ ಸ್ವೀಕರಿಸುವಾಗ
▪ ಮನೆಯಲ್ಲಿ ಯಾರೂ ಇಲ್ಲದಿರುವಾಗ
▪ ನಾವು ಪುನರ್ಭೇಟಿಗಳನ್ನು ಮಾಡುವಾಗ
▪ ಬೀದಿ ಸಾಕ್ಷಿಕಾರ್ಯದಲ್ಲಿ ನಾವು ಯಾರನ್ನಾದರೂ ಭೇಟಿಯಾದಾಗ
▪ ವ್ಯಾಪಾರ ಸ್ಥಳಗಳಲ್ಲಿ ನಾವು ಸಾಕ್ಷಿಕೊಡುವಾಗ
▪ ಅನೌಪಚಾರಿಕ ಸಾಕ್ಷಿಯನ್ನು ಕೊಡುತ್ತಿರುವಾಗ
▪ ಪತ್ರಗಳನ್ನು ಬರೆಯುವಾಗ
▪ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣಿಸುತ್ತಿರುವಾಗ
▪ ಯಾರಾದರೂ ನಮ್ಮ ಮನೆಗೆ ಭೇಟಿಯಿತ್ತಾಗ
▪ ಸಂಬಂಧಿಕರು, ನೆರೆಯವರು, ಸಹಕರ್ಮಿಗಳು, ಸಹಪಾಠಿಗಳು, ಮತ್ತು ಇತರ ಪರಿಚಯಸ್ಥರೊಂದಿಗೆ ಮಾತಾಡುವಾಗ