ಪ್ರಗತಿಪರ ಮನೆ ಬೈಬಲ್ ಅಭ್ಯಾಸಗಳನ್ನು ನಡಿಸುವುದು
1 ಟಾನ್ಸೇನಿಯದ ಒಬ್ಬ ದಾದಿ, ಆರ್ಜೆಂಟೀನದ ಒಬ್ಬ ಯುವತಿ, ಮತ್ತು ಲ್ಯಾಟ್ವಿಯದ ಒಬ್ಬ ತಾಯಿ—ಈ ಮೂವರಲ್ಲಿ ಇರುವ ಸಾಮಾನ್ಯ ಸಂಗತಿಯೇನು? ಈ ಮೂವರಿಗೂ ಪ್ರತಿ ವಾರ ಜ್ಞಾನ ಪುಸ್ತಕದಲ್ಲಿ ಒಂದಕ್ಕಿಂತ ಹೆಚ್ಚು ಅಭ್ಯಾಸ ಅವಧಿಗಳನ್ನು ಹೊಂದಲು ಸಿದ್ಧಮನಸ್ಸಿದ್ದ ಕಾರಣದಿಂದ, ಅವರು ತಮ್ಮ ಮನೆ ಬೈಬಲ್ ಅಭ್ಯಾಸಗಳಲ್ಲಿ ಕ್ಷಿಪ್ರವಾದ ಪ್ರಗತಿಯನ್ನು ಮಾಡಿದರೆಂದು 1997ರ ವರ್ಷಪುಸ್ತಕವು (ಇಂಗ್ಲಿಷ್) (ಪು. 8, 46, ಮತ್ತು 56) ವರದಿಸುತ್ತದೆ. ಸಾಧ್ಯವಿರುವಾಗಲೆಲ್ಲಾ, ಪ್ರಚಾರಕರು ಪ್ರತಿಯೊಂದು ಅಭ್ಯಾಸ ಅವಧಿಯಲ್ಲಿ ಪುಸ್ತಕದ ಒಂದು ಅಧ್ಯಾಯವನ್ನು ಚರ್ಚಿಸಲು ಪ್ರಯತ್ನಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಆದಾಗಲೂ, ಹಾಗೆ ಮಾಡುವುದು ಕಷ್ಟಕರವೆಂದು ಕೆಲವರು ಕಂಡುಕೊಳ್ಳುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಪರಿಸ್ಥಿತಿಗಳು ಮತ್ತು ಸಾಮರ್ಥ್ಯದ ಮೇಲೆ ಹೆಚ್ಚಿನದ್ದು ಅವಲಂಬಿಸುವುದಾದರೂ, ಈ ಮುಂದಿನ ಸಲಹೆಗಳನ್ನು ಕಾರ್ಯರೂಪಕ್ಕೆ ಹಾಕುವ ಮೂಲಕ ಅನುಭವಿ ಶಿಕ್ಷಕರು ಯಶಸ್ಸನ್ನು ಕಂಡುಕೊಂಡಿದ್ದಾರೆ.
2 ಜೂನ್ 1996ರ ನಮ್ಮ ರಾಜ್ಯ ಸೇವೆಯ ಪುರವಣಿಯಲ್ಲಿ ಚರ್ಚಿಸಲ್ಪಟ್ಟಿದ್ದಂತೆ, ಅಭ್ಯಾಸಕ್ಕಾಗಿ ತಯಾರಿಸುವಂತೆ ನಿಮ್ಮ ವಿದ್ಯಾರ್ಥಿಗಳಿಗೆ ತರಬೇತು ನೀಡುವುದು ಆವಶ್ಯಕ. ಆರಂಭದಿಂದಲೇ, ಅದನ್ನು ಹೇಗೆ ಮಾಡುವುದೆಂಬುದನ್ನು ವಿವರಿಸುವುದು ಮತ್ತು ಮಾಡಿತೋರಿಸುವುದು ಒಳ್ಳೆಯದು. ಜ್ಞಾನ ಪುಸ್ತಕದ ನಿಮ್ಮ ವೈಯಕ್ತಿಕ ಅಭ್ಯಾಸದ ಪ್ರತಿಯನ್ನು ಅವರಿಗೆ ತೋರಿಸಿರಿ. ಮೊದಲನೆಯ ಪಾಠವನ್ನು ಜೊತೆಯಾಗಿ ತಯಾರಿಸಿರಿ. ಮುದ್ರಿತ ಪ್ರಶ್ನೆಯನ್ನು ನೇರವಾಗಿ ಉತ್ತರಿಸುವ ಮುಖ್ಯ ಶಬ್ದಗಳು ಅಥವಾ ವಾಕ್ಯರಚನೆಗಳನ್ನು ಕಂಡುಹಿಡಿಯಲು ಮತ್ತು ಅನಂತರ ಅವುಗಳನ್ನು ಅಡಿಗೆರೆ ಹಾಕಲು ಅಥವಾ ಗುರುತಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಿರಿ. ಕೆಲವು ಪ್ರಚಾರಕರು ತಮ್ಮ ವಿದ್ಯಾರ್ಥಿಗಳಿಗೆ ಒಂದು ಹೈಲೈಟಿಂಗ್ ಮಾರ್ಕರ್ ಅನ್ನು ಸಹ ಕೊಟ್ಟಿದ್ದಾರೆ. ಅವರು ಅಭ್ಯಾಸಕ್ಕಾಗಿ ತಯಾರಿಸಿದಂತೆ, ಎಲ್ಲಾ ವಚನಗಳನ್ನು ತೆರೆದುನೋಡುವಂತೆ ಅವರನ್ನು ಉತ್ತೇಜಿಸಿರಿ. ಹೀಗೆ ಮಾಡುವ ಮೂಲಕ, ನೀವು ಅವರಿಗೆ ಸಭಾ ಪುಸ್ತಕಭ್ಯಾಸ ಮತ್ತು ಕಾವಲಿನಬುರುಜು ಅಭ್ಯಾಸಕ್ಕಾಗಿ ಹಾಜರಾಗಲು ತಯಾರಿಸುವಂತೆಯೂ ತರಬೇತು ಮಾಡುತ್ತಿರುವಿರಿ.—ಲೂಕ 6:40.
3 ಒಬ್ಬ ಒಳ್ಳೆಯ ಶಿಕ್ಷಕನು, ವಿದ್ಯಾರ್ಥಿಯನ್ನು ಸಂಕೋಚವಿಲ್ಲದೆ ಮಾತಾಡುವಂತೆ ಪ್ರೇರಿಸುವನು ಮತ್ತು ಸ್ವತಃ ಹೆಚ್ಚು ಮಾತಾಡದಿರುವನು. ಅವನು ಚಿಕ್ಕ ಚಿಕ್ಕ ವಿಷಯಗಳ ಮೇಲೆ ಮಾತಾಡುತ್ತಾ ಮುಖ್ಯ ವಿಷಯದಿಂದ ಪಕ್ಕಕ್ಕೆ ಸರಿಯುವುದರಿಂದ ದೂರವಿರುತ್ತಾನೆ. ಹೊರಗಿನ ವಿಷಯವನ್ನು ಅವನು ವಿರಳವಾಗಿ ಒಳತರುವನು. ಬದಲಾಗಿ, ಅವನು ಪಾಠದ ಮುಖ್ಯ ವಿಷಯಗಳನ್ನು ಎತ್ತಿತಿಳಿಸುತ್ತಾನೆ. ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಅವರಿಗೆ ಸಹಾಯ ಮಾಡುವಂತೆ, ಕೆಲವರು ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಹಿತ್ಯವನ್ನು ಒದಗಿಸಿದ್ದಾರೆ. ಇನ್ನೂ ಹೆಚ್ಚಾಗಿ, ಆಸಕ್ತ ವ್ಯಕ್ತಿಗಳು ಹೆಚ್ಚಿನ ವಿವರವಾದ ಮಾಹಿತಿಯನ್ನು ಸಭಾ ಕೂಟಗಳಿಗೆ ಹಾಜರಾಗುವ ಮೂಲಕ ಪಡೆಯುವರು.
4 ಪಾಠದಲ್ಲಿರುವ ಎಲ್ಲಾ ಉಲ್ಲೇಖಿತ ವಚನಗಳನ್ನು ತೆರೆದುನೋಡುವ ಅಗತ್ಯವಿಲ್ಲದಿರಬಹುದು. ಕೆಲವು ಮುಖ್ಯ ಅಂಶಗಳನ್ನು ಪ್ಯಾರಗ್ರಾಫ್ನಲ್ಲಿ ಉದ್ಧರಣ ಚಿಹ್ನೆಗಳಲ್ಲಿ ಕೊಡಲ್ಪಟ್ಟಿರುವ ವಚನಗಳಿಂದಲೇ ವಿವರಿಸಬಹುದು. ಪುನರ್ವಿಮರ್ಶೆಯ ಸಮಯದಲ್ಲಿ, ಚರ್ಚಿಸಲ್ಪಟ್ಟ ಮುಖ್ಯ ವಚನಗಳನ್ನು ಎತ್ತಿಹೇಳಿರಿ ಮತ್ತು ಇವುಗಳನ್ನು ನೆನಪಿನಲ್ಲಿಡುವಂತೆ ವಿದ್ಯಾರ್ಥಿಯನ್ನು ಪ್ರೋತ್ಸಾಹಿಸಿರಿ.
5 ಪ್ರತಿಯೊಂದು ಅಭ್ಯಾಸ ಅವಧಿಯು ಎಷ್ಟು ದೀರ್ಘವಾಗಿರಬೇಕು?: ಅಭ್ಯಾಸವನ್ನು ಒಂದೇ ತಾಸಿಗೆ ಸೀಮಿತಗೊಳಿಸುವ ಅಗತ್ಯವಿಲ್ಲ. ಕೆಲವು ಮನೆಯವರಿಗೆ ಸಮಯ ಇರುತ್ತದೆ ಮತ್ತು ಹೆಚ್ಚು ದೀರ್ಘ ಸಮಯ ಅಭ್ಯಾಸಿಸಲು ಅಪೇಕ್ಷಿಸಬಹುದು. ಅಥವಾ ವಿದ್ಯಾರ್ಥಿಯು ವಾರದಲ್ಲಿ ಒಂದಕ್ಕಿಂತ ಹೆಚ್ಚು ಸಲ ಅಭ್ಯಾಸ ಮಾಡಲು ಅಪೇಕ್ಷಿಸಬಹುದು. ಹಾಗೆ ಮಾಡಲು ಸಾಧ್ಯವಿರುವವರಿಗೆ ಇದು ಉಪಯುಕ್ತವಾಗಿರುವುದು.
6 ಯೆಶಾಯ 60:8 ಚಿತ್ರಿಸುವಂತೆ, ಇಂದು ಯೆಹೋವನ ಸಾವಿರಾರು ಹೊಸ ಸ್ತುತಿಗಾರರು, ಆತನ ಜನರ ಸಭೆಗಳೊಳಗೆ “ಮೇಘದೋಪಾದಿಯಲ್ಲಿಯೂ ಗೂಡುಗಳಿಗೆ ತ್ವರೆಪಡುವ ಪಾರಿವಾಳಗಳಂತೆಯೂ ಹಾರಿ ಬರುತ್ತಿ”ದ್ದಾರೆ. ಕುರಿಸದೃಶ ಜನರ ಒಳಸೇರಿಸುವಿಕೆಯನ್ನು ಯೆಹೋವನು ತ್ವರೆಪಡಿಸುತ್ತಿರುವಂತೆ ಆತನೊಂದಿಗೆ ನಿಕಟವಾಗಿ ಕೆಲಸ ಮಾಡುವುದರಲ್ಲಿ ನಾವೆಲ್ಲರೂ ನಮ್ಮ ಪಾಲನ್ನು ಮಾಡೋಣ.—ಯೆಶಾ. 60:22.