1997ರ “ದೇವರ ವಾಕ್ಯದಲ್ಲಿ ನಂಬಿಕೆ” ಜಿಲ್ಲಾ ಅಧಿವೇಶನ
1 “ನಿನ್ನ ಆಲಯದ ಅಂಗಳಗಳಲ್ಲಿ ಕಳೆದ ಒಂದು ದಿನವು ಬೇರೆ ಸಹಸ್ರದಿನಗಳಿಗಿಂತ ಉತ್ತಮವಾಗಿದೆ.” (ಕೀರ್ತ. 84:10) ಕೀರ್ತನೆಗಾರನು ಯೆಹೋವನ ಆಲಯದಲ್ಲಿ ಆರಾಧಿಸಿದಾಗ, ಅವನು ಸರ್ವಶಕ್ತ ದೇವರ ಉಪಸ್ಥಿತಿಯನ್ನು ಗ್ರಹಿಸಸಾಧ್ಯವಿತ್ತು. ಜನಾಂಗವು ವಾರ್ಷಿಕ ಉತ್ಸವಗಳಿಗಾಗಿ ಜೊತೆಸೇರಿದಾಗ ಮತ್ತು ಯೆರೂಸಲೇಮಿನಲ್ಲಿ ನಿಜ ಆರಾಧಕರು ಮಿತಿಮೀರಿದ ಸಂಖ್ಯೆಯಲ್ಲಿರುತ್ತಿದ್ದಾಗ, ಇಸ್ರಾಯೇಲ್ಯರು ಆಲಯದ ಅಂಗಣದಲ್ಲಿ ಜೊತೆಸೇರಿದಂತೆ ಹಿತಕರವಾದ ಸಾಹಚರ್ಯವನ್ನು ಕಂಡುಕೊಳ್ಳುತ್ತಿದ್ದರು. ಯೆಹೋವನು ತನ್ನ ಆಶೀರ್ವಾದ ಮತ್ತು ಅನುಗ್ರಹವನ್ನು ದಯಪಾಲಿಸುತ್ತಿದ್ದ, ಭೂಮಿಯ ಮೇಲಿನ ಏಕಮಾತ್ರ ಜನಾಂಗದೋಪಾದಿ ತಮ್ಮ ರಾಷ್ಟ್ರೀಯ ಐಕ್ಯದ ಕುರಿತಾಗಿ ಅವರಿಗೆ ಜ್ಞಾಪಕ ಹುಟ್ಟಿಸಲಾಗುತ್ತಿತ್ತು. ಪ್ರತಿ ವರ್ಷ, ನಮ್ಮ ಸಾವಿರಾರು ಸಹೋದರ ಸಹೋದರಿಯರೊಂದಿಗೆ ಐಕ್ಯಭಾವ ಮತ್ತು ಆನಂದದ ತದ್ರೀತಿಯ ಅನಿಸಿಕೆಗಳಲ್ಲಿ ಪಾಲಿಗರಾಗುವ ಅವಕಾಶ ನಮಗಿದೆ. ನಮ್ಮ ಸಮಯದಲ್ಲಿ, ವಾರ್ಷಿಕ ಜಿಲ್ಲಾ ಅಧಿವೇಶನಗಳು, ಯೆಹೋವನು ತನ್ನ ಜನರನ್ನು ಉಪದೇಶ ಮತ್ತು ಸಾಹಚರ್ಯಕ್ಕಾಗಿ ಒಟ್ಟುಸೇರಿಸುವ ಆತನ ವಿಧಗಳಲ್ಲಿ ಒಂದಾಗಿವೆ.
2 ಉತ್ಸವಗಳ ಸಮಯದಲ್ಲಿ, ಯೆರೂಸಲೇಮಿನಲ್ಲಿ ಮತ್ತು ಅದರ ಸುತ್ತಮುತ್ತಲೂ ವಾಸಿಸುತ್ತಿದ್ದ ದೊಡ್ಡ ಸಂಖ್ಯೆಯ ಯೆಹೋವನ ಜನರ ಪರಾಮರಿಕೆ ಮಾಡಲಿಕ್ಕಾಗಿ ವ್ಯವಸ್ಥಾಪನೆಯ ಅಗತ್ಯವಿತ್ತು. ವ್ಯವಸ್ಥೆ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುವುದು, ಬಹುಶಃ ವಸತಿ ಸೌಕರ್ಯಗಳು, ಕೂಟದ ಸಮಯಗಳು ಮತ್ತು ಇತರ ಏರ್ಪಾಡುಗಳ ಕುರಿತಾಗಿ ಸೂಚನೆಗಳನ್ನು ಕೊಡುವುದನ್ನು ಅವಶ್ಯಪಡಿಸಿತು. ಈ ವಿಷಯಗಳು ತಮ್ಮ ಸತ್ಯಾರಾಧನೆಗೆ ಸಂಬಂಧಿಸಿದ್ದರಿಂದ, ಇಸ್ರಾಯೇಲ್ಯರು ಈ ಉಪದೇಶಗಳನ್ನು ಆನಂದದಿಂದ ಅನುಸರಿಸುತ್ತಿದ್ದರು.—ಕೀರ್ತ. 42:4; 122:1.
3 ‘ಎಲ್ಲ ಶಾಸ್ತ್ರವಚನವು ದೇವರಿಂದ ಪ್ರೇರಿತ’ವಾದದ್ದೆಂದು, ಅಪೊಸ್ತಲ ಪೌಲನು ತಿಮೊಥೆಯನಿಗೆ ಜ್ಞಾಪಕ ಹುಟ್ಟಿಸಿದನು. (2 ತಿಮೊ. 3:16) ದೇವರ ವಾಕ್ಯವು ಪ್ರೇರಿತವಾಗಿರುವುದರಿಂದ, ಅದರಲ್ಲಿ ನಂಬಿಕೆಯನ್ನಿಡಲು ನಮಗೆ ಪ್ರತಿಯೊಂದು ಕಾರಣವಿದೆ. ಈ ವರ್ಷದ ಜಿಲ್ಲಾ ಅಧಿವೇಶನದ ಮುಖ್ಯ ವಿಷಯವು, “ದೇವರ ವಾಕ್ಯದಲ್ಲಿ ನಂಬಿಕೆ” ಎಂದಾಗಿದೆ. ಆ ಕಾರ್ಯಕ್ರಮವು, ನಾವು ಸತ್ಯವನ್ನು ಅನೇಕ ವರ್ಷಗಳಿಂದ ತಿಳಿದಿರಲಿ ಇಲ್ಲವೇ ತೀರ ಇತ್ತೀಚೆಗೆ ಯೆಹೋವನ ಸಂಸ್ಥೆಯ ಸಂಪರ್ಕಕ್ಕೆ ಬಂದಿರಲಿ, ಬೈಬಲಿನಲ್ಲಿನ ನಮ್ಮ ನಂಬಿಕೆಯನ್ನು ಬಲಪಡಿಸುವುದು. ನಾವೆಲ್ಲರೂ ಇಡೀ ಕಾರ್ಯಕ್ರಮಕ್ಕೆ ಹಾಜರಿರುವಂತೆ ಏರ್ಪಡಿಸಬೇಕು. ಹೊಸದಾಗಿ ಆಸಕ್ತರಾದ ಜನರು, ವಿಶೇಷವಾಗಿ ನಾವು ಯಾರೊಂದಿಗೆ ಬೈಬಲನ್ನು ಅಭ್ಯಾಸಿಸುತ್ತೇವೊ ಅವರು, ನಮ್ಮೊಂದಿಗೆ ಹಾಜರಾಗುವುದಾದರೆ ಅದು ಎಷ್ಟು ಭಕ್ತಿವೃದ್ಧಿಮಾಡುವಂತಹದ್ದಾಗಿರುವುದು!
4 ಈಗಾಗಲೇ ನೂರಾರು ಸಹೋದರರು, ಅಧಿವೇಶನದ ಇಲಾಖೆಗಳನ್ನು ವ್ಯವಸ್ಥಾಪಿಸುವುದರಲ್ಲಿ ಅನೇಕ ತಾಸುಗಳನ್ನು ಕಳೆದಿದ್ದಾರೆ. ಈ ಸಹೋದರರು, ಒಂದು ಅಧಿವೇಶನವನ್ನು ನಡಿಸುವುದರೊಂದಿಗೆ ಸಂಬಂಧಿಸಿರುವ ಅನೇಕ ವಿವರಗಳನ್ನು ಸಂಯೋಜಿಸಲು, ಸೊಸೈಟಿಯ ಅಧಿವೇಶನ ಇಲಾಖೆಯೊಂದಿಗೆ ನಿಕಟವಾಗಿ ಕೆಲಸಮಾಡುತ್ತಾರೆ. ನಮ್ಮ ವಾರ್ಷಿಕ ಜಿಲ್ಲಾ ಅಧಿವೇಶನಗಳಿಗಾಗಿ ವಿನಿಯೋಗಿಸಲ್ಪಡುವ ಪ್ರಚಂಡವಾದ ಸಮಯ, ಪರಿಶ್ರಮ, ಮತ್ತು ವೆಚ್ಚದ ಮೊತ್ತವನ್ನು ನಾವು ವೈಯಕ್ತಿಕವಾಗಿ ನೋಡದಿರಬಹುದು, ಆದರೆ ಈ ನಂಬಿಗಸ್ತ ಸಹೋದರರಲ್ಲಿ ಪ್ರತಿಯೊಬ್ಬರ ಸ್ವತ್ಯಾಗದ ಆತ್ಮವನ್ನು ನಾವೆಲ್ಲರೂ ನಿಶ್ಚಯವಾಗಿಯೂ ಗಣ್ಯಮಾಡುತ್ತೇವೆ, ಅಲ್ಲವೆ?
5 ನಮ್ಮ 1997ರ “ದೇವರ ವಾಕ್ಯದಲ್ಲಿ ನಂಬಿಕೆ” ಜಿಲ್ಲಾ ಅಧಿವೇಶನಕ್ಕಾಗಿ ತಯಾರಿಗಳು ಮುಂದುವರಿದಂತೆ, ನಿಮ್ಮ ದಯಾಪರ ಗಮನ ಮತ್ತು ಗಂಭೀರ ಪರಿಗಣನೆಯನ್ನು ಅವಶ್ಯಪಡಿಸುವ ಕೆಲವು ಅಂಶಗಳು ನಮ್ಮಲ್ಲಿವೆ. ನಿಮ್ಮ ಸಹಕಾರವು, ನಿಮ್ಮ ಪರವಾಗಿ ಮಾಡಲ್ಪಟ್ಟಿರುವ ಎಲ್ಲಾ ಏರ್ಪಾಡುಗಳಿಗಾಗಿ ನಿಮ್ಮ ವೈಯಕ್ತಿಕ ಗಣ್ಯತೆಯನ್ನು ತೋರಿಸುವುದು. ಈ ವಿಷಯಗಳಲ್ಲಿ ಕೆಲವೊಂದು ಈ ಮುಂಚೆ ಚರ್ಚಿಸಲ್ಪಟ್ಟಿವೆಯಾದರೂ, ನಮ್ಮ ಅಧಿವೇಶನದ ಏರ್ಪಾಡುಗಳನ್ನು ಬೆಂಬಲಿಸುವುದರಲ್ಲಿ ಯೆಹೋವನ ಮುಂದೆ ನಮಗಿರುವ ಜವಾಬ್ದಾರಿಯನ್ನು ನಾವು ಸ್ಪಷ್ಟವಾಗಿ ನೋಡುವುದು ನಮ್ಮಲ್ಲಿ ಪ್ರತಿಯೊಬ್ಬರಿಗೆ ಪ್ರಾಮುಖ್ಯವಾಗಿದೆ.
6 ಮೂರು ದಿನದ ಅಧಿವೇಶನ: ಈ ವರ್ಷ ನಮ್ಮ ಪ್ರಯೋಜನಕ್ಕಾಗಿ ಮೂರು ದಿನದ ಒಂದು ಜಿಲ್ಲಾ ಅಧಿವೇಶನವು ಏರ್ಪಡಿಸಲ್ಪಟ್ಟಿದೆ; ಕಾರ್ಯಕ್ರಮವು ಪ್ರತಿ ದಿನ ಬೆಳಗ್ಗೆ 9:30ಕ್ಕೆ ಆರಂಭವಾಗುವುದು. ಜೂನ್ 8, 1997ರ ಅವೇಕ್! ಪತ್ರಿಕೆಯು, ಭಾರತದಲ್ಲಿ ಜರುಗಲಿರುವ 18 ಅಧಿವೇಶನಗಳನ್ನು ಮತ್ತು ಅವುಗಳಲ್ಲಿ ಪ್ರತಿಯೊಂದು ಯಾವ ಭಾಷೆಗಳಲ್ಲಿ ನಡಿಸಲ್ಪಡುವುದೆಂಬುದನ್ನು ಪಟ್ಟಿಮಾಡುತ್ತದೆ. ನೀವು ಯಾವ ಅಧಿವೇಶನಕ್ಕೆ ಹಾಜರಾಗುವಿರಿ ಎಂಬುದು ನಿಮಗೆ ಇಷ್ಟರೊಳಗೆ ತಿಳಿದಿರಬೇಕು ಮತ್ತು ಎಲ್ಲ ಮೂರು ದಿನಗಳ ಕಾರ್ಯಕ್ರಮಕ್ಕೆ ಹಾಜರಾಗಲು ನೀವು ನಿಶ್ಚಿತ ಯೋಜನೆಗಳನ್ನು ಮಾಡಿರಬೇಕು. ಬೇಕಾಗಿರುವ ರಜೆಗಾಗಿ ನೀವು ನಿಮ್ಮ ಧಣಿಯನ್ನು ಕೇಳಿದ್ದೀರೊ? ನಿಮಗೆ ಶಾಲಾ ವಯಸ್ಸಿನ ಮಕ್ಕಳಿದ್ದು, ನಿಮ್ಮ ಅಧಿವೇಶನವು ಆ ಶಾಲಾ ಅವಧಿಯಲ್ಲಿರುವುದಾದರೆ, ನಿಮ್ಮ ಮಕ್ಕಳು ತಮ್ಮ ಧಾರ್ಮಿಕ ತರಬೇತಿಯ ಈ ಪ್ರಾಮುಖ್ಯ ಭಾಗಕ್ಕೋಸ್ಕರ ನಿರ್ದಿಷ್ಟ ದಿನಗಳಂದು ಗೈರುಹಾಜರಿರುವರೆಂದು ನೀವು ಅವರ ಶಿಕ್ಷಕರಿಗೆ ದಯಾಭಾವದಿಂದ ತಿಳಿಸಿದ್ದೀರೊ?—ಧರ್ಮೋ. 31:12.
7 ಗಮನವನ್ನು ಕೊಡುವ ಮೂಲಕ ಒಳ್ಳೇದನ್ನು ಮಾಡಿರಿ: ಅಪೊಸ್ತಲ ಪೇತ್ರನು ಪ್ರಥಮ ಶತಮಾನದ ಕ್ರೈಸ್ತರಿಗೆ ಜ್ಞಾಪಿಸಿದ್ದೇನೆಂದರೆ, ಕತ್ತಲೆಯ ಸ್ಥಳದಲ್ಲಿ ಪ್ರಕಾಶಿಸುವ ದೀಪವೊಂದಕ್ಕೆ ಗಮನಕೊಡುವಂತೆ, ಅವರು ಪ್ರವಾದನಾ ವಾಕ್ಯಕ್ಕೆ ಗಮನಕೊಡುವುದರಿಂದ ಒಳ್ಳೇದನ್ನು ಮಾಡುವರು. (2 ಪೇತ್ರ 1:19) ನಮ್ಮ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಸೈತಾನನ ನಿಯಂತ್ರಣದ ಕೆಳಗಿರುವ ಈ ಹಳೇ ಲೋಕದಲ್ಲಿ ಜೀವಿಸುವುದು, ಒಂದು ಕತ್ತಲೆಯ ಸ್ಥಳದಲ್ಲಿ ಜೀವಿಸುವಂತಿದೆ. ಆತ್ಮಿಕ ಅಂಧಕಾರದಿಂದ ಹೊರಗೆ ಕರೆಯಲ್ಪಟ್ಟಿರುವುದಕ್ಕೆ ನಾವು ಆಭಾರಿಗಳಾಗಿದ್ದೇವೆ. (ಕೊಲೊ. 1:13; 1 ಪೇತ್ರ 2:9; 1 ಯೋಹಾ. 5:19) ಬೆಳಕಿನಲ್ಲಿ ಉಳಿಯಲಿಕ್ಕಾಗಿ, ಯೆಹೋವನ ಪ್ರೇರಿತ ವಾಕ್ಯಕ್ಕೆ ಗಮನವನ್ನು ಕೊಡುವ ಮೂಲಕ ನಾವು ನಮ್ಮ ನಂಬಿಕೆಯನ್ನು ಬಲವಾಗಿಡುವ ಅಗತ್ಯವಿದೆ. ಈ ವರ್ಷದ ನಮ್ಮ ಜಿಲ್ಲಾ ಅಧಿವೇಶನವು ನಮಗೆ ಅದನ್ನೇ ಮಾಡುವಂತೆ ಉತ್ತೇಜಿಸುವುದು.
8 ಕಾರ್ಯಕ್ರಮದ ಮೇಲೆ ನಾವು ಮನಸ್ಸನ್ನು ಕೇಂದ್ರೀಕರಿಸಬೇಕಾದರೆ, ನಮ್ಮ ವತಿಯಿಂದ ಪ್ರಯತ್ನವು ಅವಶ್ಯವಾಗಿರಬಹುದು, ಆದರೆ ಹಾಗೆ ಮಾಡುವುದಕ್ಕಾಗಿ ನಾವು ನಿಶ್ಚಯವಾಗಿಯೂ ಆಶೀರ್ವದಿಸಲ್ಪಡುವೆವು. ಕಾರ್ಯಕ್ರಮಾವಧಿಗಳ ಸಮಯದಲ್ಲಿ ನಾವು ಎಚ್ಚರವಾಗಿರುವಂತೆ, ಅಧಿವೇಶನದ ನಿವೇಶನಕ್ಕೆ ಚೆನ್ನಾಗಿ ವಿಶ್ರಮಿಸಿದವರಾಗಿ ಬರಲು ಪ್ರಯತ್ನಿಸಬೇಕು. ಕಾರ್ಯಕ್ರಮವು ಆರಂಭವಾಗುವ ಮುಂಚೆ ನಿಮ್ಮ ಆಸನದಲ್ಲಿ ಕುಳಿತಿರಲಿಕ್ಕಾಗಿ, ಪ್ರತಿ ದಿನ ಅಧಿವೇಶನದ ನಿವೇಶನಕ್ಕೆ ಬರಲು ಸಾಕಷ್ಟು ಸಮಯವನ್ನು ಅನುಮತಿಸಿರಿ. ಅನಂತರ, ಪ್ರತಿ ದಿನದ ಕಾರ್ಯಕ್ರಮದ ಆರಂಭದಲ್ಲಿ, ಆರಂಭದ ಗೀತ ಮತ್ತು ಪ್ರಾರ್ಥನೆಯಲ್ಲಿ ಜೊತೆಗೂಡಿರಿ. ವಯಸ್ಕರು ಮಾದರಿಯನ್ನು ಇಡಬೇಕು, ಮತ್ತು ಹೆತ್ತವರು ತಮ್ಮ ಮಕ್ಕಳನ್ನು ತರಬೇತುಗೊಳಿಸಬೇಕು.—ಎಫೆ. 6:4.
9 ದಿನದ ಕಾರ್ಯಕ್ರಮವು ಆರಂಭಗೊಳ್ಳುವ ಮುಂಚೆ, ನಾವು ಭಾಗಗಳ ಶೀರ್ಷಿಕೆಗಳನ್ನು ನೋಡುವುದಾದರೆ, ಆ ಕಾರ್ಯಕ್ರಮಾವಧಿಯಲ್ಲಿ ಯಾವ ಅಂಶಗಳು ಸಾದರಪಡಿಸಲ್ಪಡಬಹುದೆಂಬುದನ್ನು ನಾವು ನಿರೀಕ್ಷಿಸಲು ಪ್ರಯತ್ನಿಸಸಾಧ್ಯವಿದೆ. ಇದು, ವಿಷಯವು ಸಾದರಪಡಿಸಲ್ಪಡುವಾಗ ಅದರಲ್ಲಿನ ನಮ್ಮ ಆಸಕ್ತಿಯನ್ನು ವರ್ಧಿಸುವುದು. ನಾವು ದೇವರಲ್ಲಿ ಮತ್ತು ಆತನನ್ನು ಶ್ರದ್ಧಾಪೂರ್ವಕವಾಗಿ ಹುಡುಕುವವರಿಗೆ ಪ್ರತಿಫಲವನ್ನು ಕೊಡುವ ಆತನ ಖಚಿತವಾದ ವಾಗ್ದಾನದಲ್ಲಿ ನಂಬಿಕೆಯಿಡುವುದರ ಕಾರಣವನ್ನು ಇತರರಿಗೆ ವ್ಯಕ್ತಪಡಿಸಲು, ನಮಗೆ ಸಹಾಯ ಮಾಡುವ ಅಂಶಗಳಿಗಾಗಿ ನಾವು ಗಮನಕೊಡಬಹುದು. (ಇಬ್ರಿ. 11:1, 6) ಕಾರ್ಯಕ್ರಮದ ಮುಖ್ಯ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ನಮಗೆ ಸಹಾಯ ಮಾಡಲಿಕ್ಕಾಗಿ ನಾವು ಸಂಕ್ಷಿಪ್ತ ಟಿಪ್ಪಣಿಗಳನ್ನು ಬರೆಯಬೇಕೆಂದು ಶಿಫಾರಸ್ಸು ಮಾಡಲಾಗಿದೆ. ನಾವು ತೀರ ಹೆಚ್ಚು ಟಿಪ್ಪಣಿಗಳನ್ನು ಬರೆಯುವುದಾದರೆ, ನಾವು ಬರೆಯುವುದರಲ್ಲಿ ತೀರ ಕಾರ್ಯಮಗ್ನರಿರುವುದರಿಂದ, ಕೆಲವು ಮುಖ್ಯ ಅಂಶಗಳನ್ನು ತಪ್ಪಬಹುದು.
10 ಕಳೆದ ವರ್ಷ ಪುನಃ ಒಮ್ಮೆ ಅನೇಕ ವಯಸ್ಕರು ಮತ್ತು ಯುವ ಜನರು, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ನಮ್ಮ ಪ್ರಯೋಜನಕ್ಕಾಗಿ ಒದಗಿಸಿದ್ದ ವಿಷಯಕ್ಕೆ ಕಿವಿಗೊಡುವ ಬದಲಿಗೆ, ಕಟ್ಟಡದ ಹೊರದಾರಿಗಳಲ್ಲಿ ಗೊತ್ತುಗುರಿಯಿಲ್ಲದೆ ಓಡಾಡುತ್ತಿರುವುದನ್ನು, ಹೊರಗೆ ತಿರುಗಾಡುತ್ತಿರುವುದನ್ನು, ಮತ್ತು ಕಾರ್ಯಕ್ರಮವು ನಡೆಯುತ್ತಿರುವಾಗ ಇತರರೊಂದಿಗೆ ಹರಟೆಹೊಡೆಯುತ್ತಿರುವುದನ್ನು ಗಮನಿಸಲಾಯಿತು. ಯೇಸು ನಮಗೆ ಸರಿಯಾದ ಸಮಯದಲ್ಲಿ ಆತ್ಮಿಕ ಆಹಾರವನ್ನು ಕೊಡುವನೆಂದು ವಾಗ್ದಾನಿಸಿದ್ದಾನೆ. (ಮತ್ತಾ. 24:45-47) ಆದುದರಿಂದ, ಆ ಆಹಾರದಿಂದ ಪ್ರಯೋಜನವನ್ನು ಪಡೆಯಲಿಕ್ಕಾಗಿ ನಾವು ಉಪಸ್ಥಿತರಿರಬೇಕು ಮತ್ತು ಗಣ್ಯತೆಯ ಕೊರತೆಯನ್ನು ತೋರಿಸಬಾರದು. (2 ಕೊರಿಂ. 6:1) ಕೆಲವು ಮಕ್ಕಳಿಗೆ ಚಡಪಡಿಕೆಯು ಆರಂಭವಾಗುವಾಗ, ಎದ್ದು ಸುತ್ತಲೂ ನಡೆದಾಡಲಿಕ್ಕಾಗಿ ಒಂದು ನೆವನವಾಗಿ ಅವರು ಅನೇಕಸಲ ಪಾಯಿಖಾನೆಗೆ ಹೋಗಲು ಕೇಳಿಕೊಳ್ಳುತ್ತಾರೆಂದೂ ತೋರುತ್ತದೆ. ಮನೆಯಲ್ಲಿ ಕೊಡಲ್ಪಡುವ ಯೋಗ್ಯವಾದ ತರಬೇತಿಯು, ಸಾಮಾನ್ಯವಾಗಿ ಅಡಿಗಡಿಗೆ ಪಾಯಿಖಾನೆಗೆ ಹೋಗುವುದನ್ನು ಅನಾವಶ್ಯಕವನ್ನಾಗಿ ಮಾಡುವುದು. ಕೆಲವೊಮ್ಮೆ, ಪ್ರಾಯಸ್ಥರಾದ ಯುವ ಜನರು, ಪ್ರತ್ಯೇಕ ಸ್ಥಳಗಳಲ್ಲಿ ಒಟ್ಟಿಗೆ ಕುಳಿತುಕೊಂಡು, ಮಾತಾಡುತ್ತಾ, ಪಿಸುಗುಟ್ಟುತ್ತಾ, ಮತ್ತು ಒಬ್ಬರಿಗೊಬ್ಬರು ಚೀಟಿಗಳನ್ನು ದಾಟಿಸುತ್ತಾ ಇರುತ್ತಾರೆ. ಇಂದು ಅನೇಕ ಒತ್ತಡಗಳನ್ನು ಎದುರಿಸುತ್ತಿರುವ ನಮ್ಮ ಯುವ ಜನರು, ಕಾರ್ಯಕ್ರಮದ ಸಮಯದಲ್ಲಿ ಇತರ ಸಂಗತಿಗಳನ್ನು ಮಾಡದೆ, ಸಾದರಪಡಿಸಲ್ಪಡುತ್ತಿರುವ ವಿಷಯದ ಮೇಲೆ ಗಮನವನ್ನು ಕೇಂದ್ರೀಕರಿಸುವ ಅಗತ್ಯವಿದೆ. ಬೈಬಲ್ ಮೂಲತತ್ವಗಳೊಂದಿಗೆ ಹೊಂದಿಕೆಯಲ್ಲಿರದ ಯೌವನಭರಿತ ಬಯಕೆಗಳು ದೂರವಿರಿಸಲ್ಪಡಬೇಕು. (2 ತಿಮೊಥೆಯ 2:22ನ್ನು ಹೋಲಿಸಿರಿ.) ಎಲ್ಲರ—ವಯಸ್ಕರ ಮತ್ತು ಯುವ ಜನರ—ಗಮನಕೊಡುವಿಕೆಯು, ಯೆಹೋವನನ್ನು ಸನ್ಮಾನಿಸಿ, ಆತನನ್ನು ಹರ್ಷಿಸುವಂತೆ ಮಾಡುವುದು.
11 ಅಟೆಂಡೆಂಟರಲ್ಲಿ ಒಬ್ಬನು, ಈ ವಿಷಯಗಳ ಕುರಿತು ಸಲಹೆಯನ್ನು ಕೊಡಬೇಕಾಗುವಲ್ಲಿ, ಅದು ಯೆಹೋವನಿಂದ ಕೊಡಲ್ಪಡುವ ಒಂದು ಪ್ರೀತಿಪರ ಒದಗಿಸುವಿಕೆಯಾಗಿ ಸ್ವೀಕರಿಸಲ್ಪಡಬೇಕು. (ಗಲಾ. 6:1) ಅಧಿವೇಶನಕ್ಕೆ ಹಾಜರಾಗಲು ನಾವು ಮಾಡುವ ಪ್ರಯತ್ನದ ಕಾರಣವು, ‘ಕೇಳುವುದು ಮತ್ತು ಕಲಿಯುವುದು’ ಆಗಿದೆಯೆಂಬುದನ್ನು ನಾವು ಎಲ್ಲರೂ ಜ್ಞಾಪಕದಲ್ಲಿಡುವ ಅಗತ್ಯವಿದೆ. (ಧರ್ಮೋ. 31:12) ಅಲ್ಲದೆ, ಒಬ್ಬ “ಜ್ಞಾನಿಯು . . . ಕೇಳಿ ಹೆಚ್ಚಾದ ಪಾಂಡಿತ್ಯವನ್ನು ಹೊಂದುವನು.” (ಜ್ಞಾನೋ. 1:5) ನೀವು ಅಧಿವೇಶನಕ್ಕೆ ಹಾಜರಾಗುವ ಮೊದಲು ಉಳಿದಿರುವ ಸಮಯದಲ್ಲಿ, ಕಾರ್ಯಕ್ರಮದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕೋಸ್ಕರ, ಸಭಾಂಗಣದಲ್ಲಿ ಜೊತೆಯಾಗಿ ಕುಳಿತುಕೊಳ್ಳುವ, ಕಾರ್ಯಕ್ರಮದ ಸಮಯದಲ್ಲಿ ಆಸನದಲ್ಲಿ ಕುಳಿತುಕೊಂಡಿರುವ, ಮತ್ತು ಚುರುಕಾಗಿ ಗಮನವನ್ನು ಕೊಡುವವರಾಗಿರುವ ಅಗತ್ಯವನ್ನು ಒಂದು ಕುಟುಂಬದೋಪಾದಿ ಚರ್ಚಿಸಿರಿ.
12 ಯೆಹೋವನು ಮೆಚ್ಚುವಂತಹ ಅಲಂಕಾರ: ಇಡೀ ಲೋಕವು ನೋಡುವಂತೆ, ಯೆಹೋವನ ಜನರು ಪ್ರದರ್ಶನಕ್ಕಿಡಲ್ಪಟ್ಟಿದ್ದಾರೆ. (1 ಕೊರಿಂ. 4:9) ನಾವು ಸಾಮಾನ್ಯವಾಗಿ ನಮ್ಮ ಉತ್ತಮ ಮಟ್ಟದ ಉಡುಪು ಮತ್ತು ಕೇಶಶೈಲಿಗಾಗಿ ಪ್ರಸಿದ್ಧರಾಗಿದ್ದೇವೆ. ಅನೇಕರು ಕ್ರೈಸ್ತ ಸಭೆಯೊಂದಿಗೆ ಸಹವಾಸಿಸಲು ಆರಂಭಿಸಿದಾಗ ಅವರು ಹೇಗೆ ತೋರುತ್ತಿದ್ದರೊ ಅದಕ್ಕೆ ಹೋಲಿಸುವಾಗ, 1 ತಿಮೊಥೆಯ 2:9, 10 ಮತ್ತು 1 ಪೇತ್ರ 3:3, 4ರಲ್ಲಿ ಕಂಡುಕೊಳ್ಳಲ್ಪಡುವ ಶಾಸ್ತ್ರೀಯ ಮೂಲತತ್ವಗಳನ್ನು ಅನ್ವಯಿಸುವುದು, ಅವರ ತೋರಿಕೆಯಲ್ಲಿ ದೊಡ್ಡ ಬದಲಾವಣೆಗಳನ್ನು ತಂದಿದೆ. ನಾವು ಲೋಕದಲ್ಲಿ ನೋಡುವ ಉಡುಪು ಮತ್ತು ಕೇಶಶೈಲಿಯ ಒಂದೇ ಸಮನೆ ಹದಗೆಡುತ್ತಿರುವ ಮಟ್ಟಗಳಿಗೆ ಇದು ತೀರ ಭಿನ್ನವಾಗಿದೆ. ವಿಲಕ್ಷಣವಾದ ಬಟ್ಟೆಬರೆಯನ್ನು ಧರಿಸುತ್ತಾ, ಕೇಶಶೈಲಿಗಳಲ್ಲಿ ಲೌಕಿಕ ಗೀಳುಗಳನ್ನು ಪ್ರವರ್ಧಿಸುತ್ತಾ, ಅಥವಾ ಅಸಭ್ಯವಾಗಿ ಬಟ್ಟೆ ಧರಿಸುತ್ತಾ—ನಮ್ಮ ತೋರಿಕೆಯಲ್ಲಿ ನಾವು ಲೋಕದವರಂತಾಗದಿರಲಿಕ್ಕಾಗಿ ಎಚ್ಚರದಿಂದಿರಲು ಬಯಸುತ್ತೇವೆ. ನಮ್ಮ ಆದರ್ಶಪ್ರಾಯ ಉಡುಪು ಮತ್ತು ಕೇಶಶೈಲಿಯು, ಕ್ರೈಸ್ತರು ತಮ್ಮನ್ನು ಹೇಗೆ ಅಲಂಕರಿಸಿಕೊಳ್ಳಬೇಕೆಂಬುದನ್ನು, ಅಧಿವೇಶನಕ್ಕೆ ಹಾಜರಾಗುವ ಹೊಸಬರು ನೋಡುವಂತೆ ಸಹಾಯ ಮಾಡಬೇಕು.
13 ಕಳೆದ ವರ್ಷದ ಅಧಿವೇಶನಗಳ ಪರಿಣಾಮವಾಗಿ ನೀಡಲ್ಪಟ್ಟ ಸಾಮಾನ್ಯ ಅಭಿಪ್ರಾಯವು ತುಂಬ ಪ್ರಸನ್ನಕರವಾಗಿದ್ದರೂ, ಲೌಕಿಕ ಉಡುಪು ಮತ್ತು ಕೇಶಶೈಲಿಯು—ವಿಶೇಷವಾಗಿ ವಿರಾಮದ ಸಮಯದಲ್ಲಿ—ನಮ್ಮ ಸಹೋದರ ಸಹೋದರಿಯರಲ್ಲಿ ಕೆಲವರ ಸಮಸ್ಯೆಯಾಗಿ ಮುಂದುವರಿದಿದೆ. ಅಧಿವೇಶನಕ್ಕೆ ಹಾಜರಾಗಲಿಕ್ಕಾಗಿ ನಮ್ಮ ಯೋಜನೆಗಳನ್ನು ಮಾಡುತ್ತಿರುವಾಗ, ನಾವು ನಮ್ಮ ಉಡುಪು ಮತ್ತು ಕೇಶಶೈಲಿಯ ವಿಷಯದಲ್ಲಿ ನಮ್ಮನ್ನೇ ವಿಶ್ಲೇಷಿಸಿಕೊಳ್ಳಬೇಕು. ಹೆತ್ತವರೇ, ನಿಮ್ಮ ಎಳೆಯ ಮಕ್ಕಳು ಮತ್ತು ಹದಿವಯಸ್ಕರು ಏನನ್ನು ಧರಿಸಲಿದ್ದಾರೊ ಅದನ್ನು ವಿವೇಕಯುತವಾಗಿ ಗಮನಿಸಿರಿ. ಲೌಕಿಕ ಶೈಲಿಗಳು ಮತ್ತು ಗೀಳುಗಳು ನಮ್ಮ ಕ್ರೈಸ್ತ ತೋರಿಕೆಯ ಮೇಲೆ ಒಂದು ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿರಿ.
14 ಉತ್ತಮ ನಡತೆಯನ್ನು ಕಾಪಾಡಿಕೊಳ್ಳಿರಿ: ಉತ್ತಮ ನಡತೆಯು ನಿಜ ಕ್ರೈಸ್ತರ ಒಂದು ಗುರುತಾಗಿದೆ. (1 ಪೇತ್ರ 2:12) ನಾವು ಎಲ್ಲಿಯೇ ಇರಲಿ—ಅಧಿವೇಶನದಲ್ಲಿ, ರೆಸ್ಟೊರಂಟ್ಗಳಲ್ಲಿ, ಮತ್ತು ಹೋಟೆಲ್ಗಳಲ್ಲಿ, ಹಾಗೂ ಪ್ರಯಾಣಿಸುತ್ತಿರುವಾಗಲೂ—ನಮ್ಮ ನಡವಳಿಕೆಯು ಒಂದು ಉತ್ತಮ ಸಾಕ್ಷಿಯನ್ನು ಕೊಡಸಾಧ್ಯವಿದೆ ಮತ್ತು ದೇವರಲ್ಲಿ ಹಾಗೂ ಆತನ ವಾಕ್ಯದಲ್ಲಿನ ನಂಬಿಕೆಯು, ಜನರಿಗಾಗಿ ಏನು ಮಾಡಸಾಧ್ಯವಿದೆಯೆಂಬುದನ್ನು ನೋಡುವಂತೆ ಇತರರಿಗೆ ಸಹಾಯ ಮಾಡಸಾಧ್ಯವಿದೆ. ಇದು ಕೆಲವರಿಗೆ ಯೆಹೋವನನ್ನು ತಿಳಿಯುವಂತೆ ಪ್ರಚೋದಿಸಬಹುದು. (1 ಪೇತ್ರ 3:1, 2ನ್ನು ಹೋಲಿಸಿರಿ.) ನಮ್ಮ ನಡತೆಯ ಮೂಲಕ ದೇವರನ್ನು ಮಹಿಮೆಪಡಿಸುವ ಸುಯೋಗ ನಮಗಿದೆ. ಒಂದು ಹೋಟೆಲಿನ ಮ್ಯಾನೇಜ್ಮೆಂಟ್ ಹೇಳಿದ್ದೇನೆಂದರೆ, ನಮ್ಮ ಪ್ರತಿನಿಧಿಗಳು “ತಾವು ಸತ್ಕರಿಸುವ ಗುಂಪುಗಳಲ್ಲಿ ಅತಿ ಸೌಮ್ಯವಾದ ಮತ್ತು ಅತ್ಯುತ್ತಮವಾಗಿ ವರ್ತಿಸಿದ ಗುಂಪಾಗಿದ್ದಾರೆ.” ಅವರು ಕೂಡಿಸಿದ್ದು: “ಭವಿಷ್ಯತ್ತಿನಲ್ಲಿ ನೀವು ಪುನಃ ಬರುವುದು ಒಂದು ಸುಯೋಗವಾಗಿರುವುದು.” ಇನ್ನೊಂದು ಸ್ಥಳದಲ್ಲಿನ ಒಬ್ಬ ಪ್ರವಾಸೋದ್ಯಮದ ಅಧಿಕಾರಿಯು ಬರೆದುದು: “ಪ್ರತಿ ವರ್ಷ, ವಾಚ್ಟವರ್ ಸೊಸೈಟಿಯ ಅಧಿವೇಶನವನ್ನು ನಮ್ಮ ಇಡೀ ಸಮುದಾಯವು ಕಾತುರದಿಂದ ಎದುರುನೋಡುತ್ತದೆ. ತಮ್ಮನ್ನು ಅತ್ಯಂತ ವಿನಯ ಮತ್ತು ಗೌರವದಿಂದ ನಡೆಸಿಕೊಳ್ಳುತ್ತಾ, ನಿಮ್ಮ ಸದಸ್ಯರು ನಿಜವಾಗಿಯೂ ಹರ್ಷಗೊಳಿಸುವವರು ಆಗಿದ್ದಾರೆ. ನಮ್ಮ ವ್ಯಾಪಾರಿಗಳು ಇದನ್ನು ಅಂಗೀಕರಿಸುತ್ತಾರೆ ಮತ್ತು ಪ್ರತಿ ವರ್ಷ ತಮ್ಮ ಅತಿಥಿಗಳ ‘ಕುಟುಂಬದ’ ಹಿಂದಿರುಗುವಿಕೆಯನ್ನು ಅಮೂಲ್ಯವೆಂದೆಣಿಸುತ್ತಾರೆ.” ಇವುಗಳಂತಹ ವರದಿಗಳನ್ನು ಓದುವುದು ಆಹ್ಲಾದಕರವಾಗಿದೆ, ಅಲ್ಲವೇ? ಆದಾಗಲೂ, ಯೆಹೋವನ ಜನರ ಒಳ್ಳೆಯ ಹೆಸರನ್ನು ಕಾಪಾಡಿಕೊಳ್ಳಲಿಕ್ಕಾಗಿ ನಾವು ಜಾಗರೂಕರಾಗಿ ಉಳಿಯುವ ಅಗತ್ಯವಿದೆ.
15 ಇತರ ಅತಿಥಿಗಳ ನೆಮ್ಮದಿಗೆಡಿಸುತ್ತಾ, ಹೋಟೆಲುಗಳ ಸುತ್ತ ಯಾರ ಮೇಲ್ವಿಚಾರಣೆಯಿಲ್ಲದೆ ಓಡಲು ಅನುಮತಿಸದೆ, ನಮ್ಮ ಮಕ್ಕಳನ್ನು ನಿಯಂತ್ರಿಸುವುದರ ಕುರಿತಾಗಿ ಅನೇಕ ಮರುಜ್ಞಾಪನಗಳು ಕೊಡಲ್ಪಟ್ಟಿವೆ. ನಮ್ಮ ಮಕ್ಕಳಲ್ಲಿ ಕೆಲವರು, ಮೇಲ್ವಿಚಾರಣೆಯಿಲ್ಲದವರಾಗಿದ್ದು, ಮೊಗಸಾಲೆಗಳಲ್ಲಿ ಮತ್ತು ಹೋಟೆಲುಗಳ ಸಾರ್ವಜನಿಕ ಕ್ಷೇತ್ರಗಳಲ್ಲಿ ಓಡಾಡುತ್ತಿರುವುದನ್ನು ಕಾಣಲಾಗಿದೆ ಎಂಬ ವರದಿಗಳನ್ನು ಸೊಸೈಟಿಯು ಪ್ರತಿ ವರ್ಷ ಪಡೆಯುತ್ತದೆ. ತನ್ನ ಹೋಟೆಲಿನಲ್ಲಿ ಒಂದು ರಾತ್ರಿ ತಂಗಿದ ಮ್ಯಾನೇಜರನೊಬ್ಬನು, ರಾತ್ರಿ 11:00 ಘಂಟೆಯ ಅನಂತರ, ಇತರ ಸಾಕ್ಷಿಗಳಿಗಾಗಿ ಹುಡುಕುತ್ತಾ ಪ್ರತಿಯೊಂದು ಕೋಣೆಯ ಬಾಗಿಲನ್ನು ತಟ್ಟುತ್ತಿದ್ದ ನಮ್ಮ ಮಕ್ಕಳ ಗುಂಪುಗಳಿಂದ ಎರಡು ಸಲ ಎಬ್ಬಿಸಲ್ಪಟ್ಟನು. ಅಧಿವೇಶನಗಳು, ಸಂದರ್ಶಿಸಲು ಮತ್ತು ನಮ್ಮ ಸಹೋದರತ್ವದೊಂದಿಗೆ ಸಹವಾಸಿಸಲು ಅವಕಾಶವನ್ನು ಒದಗಿಸುತ್ತವಾದರೂ, ತಮ್ಮ ಮಕ್ಕಳಿಗೆ ಎಲ್ಲ ಸಮಯಗಳಲ್ಲಿ ಮೇಲ್ವಿಚಾರಣೆಯನ್ನು ನೀಡುವುದು ತಮ್ಮ ಹಂಗಾಗಿದೆಯೆಂಬುದನ್ನು ಹೆತ್ತವರು ಆಗಲೂ ಮನಸ್ಸಿನಲ್ಲಿಡತಕ್ಕದ್ದು. ಯೆಹೋವನು ಪ್ರತಿಯೊಬ್ಬ ಹೆತ್ತವರ ಮೇಲೆ ಹೊರಿಸುವ ಒಂದು ಜವಾಬ್ದಾರಿ ಇದಾಗಿದೆ. (ಜ್ಞಾನೋ. 1:8; ಎಫೆ. 6:4) ಮಕ್ಕಳ ಮೇಲ್ವಿಚಾರಣೆಯಿಲ್ಲದ ಕೃತ್ಯಗಳು, ಯೆಹೋವನ ಇತರ ಸಾಕ್ಷಿಗಳು ತುಂಬ ಪ್ರಯಾಸಪಟ್ಟು ಕಟ್ಟಿರುವ ಒಳ್ಳೆಯ ಹೆಸರನ್ನು ಕೆಡಿಸಸಾಧ್ಯವಿದೆ.—ಜ್ಞಾನೋ. 29:15.
16 ನೀವು ಹೋಟೆಲೊಂದರಲ್ಲಿ ತಂಗುವುದಾದರೆ, ಅಡಿಗೆ ಮಾಡಲಿಕ್ಕಾಗಿ ಒಂದು ಅಡಿಗೆಕೋಣೆಯೊಂದಿಗೆ ಅವು ಸಜ್ಜಾಗಿಲ್ಲದಿರುವುದಾದರೆ, ಹೋಟೆಲ್ ಕೋಣೆಗಳಲ್ಲಿ ಯಾವುದೇ ಅಡಿಗೆಯು ಮಾಡಲ್ಪಡಬಾರದೆಂಬುದನ್ನು ನೆನಪಿನಲ್ಲಿಡಿ. ನೀವು ಒಂದು ವೈಯಕ್ತಿಕ ಸೇವಾಸೌಕರ್ಯವನ್ನು ಪಡೆಯುವಾಗ, ಬಕ್ಷೀಸು ನೀಡುವುದು ಉಚಿತವಾಗಿದೆಯೆಂಬುದನ್ನು ಮನಸ್ಸಿನಲ್ಲಿಡಿರಿ. ಯಾಕಂದರೆ ವಿಶೇಷವಾಗಿ ಪರಿಚಾರಕ ಪರಿಚಾರಿಕೆಯರು, ಶುಚಿಮಾಡುವವರು ಮತ್ತು ಹೆಣ್ಣಾಳುಗಳಂತಹ ಸಾರ್ವಜನಿಕ ಸೇವಕರು, ಜೀವನವನ್ನು ನಡೆಸಲು ಹೆಚ್ಚಿನ ಮಟ್ಟಿಗೆ ಬಕ್ಷೀಸುಗಳ ಮೇಲೆ ಅವಲಂಬಿಸಿರುತ್ತಾರೆ. ಯೆಹೋವನ ಸಾಕ್ಷಿಗಳೋಪಾದಿ, ಈ ವಿಷಯದಲ್ಲಿಯೂ ನಾವು ಸಭ್ಯಾಚಾರಗಳನ್ನು ತೋರಿಸಬಯಸುತ್ತೇವೆ.—1986, ಜೂನ್ 22ರ ಅವೇಕ್! ಪತ್ರಿಕೆಯ, 24-7ನೆಯ ಪುಟಗಳನ್ನು ನೋಡಿರಿ.
17 ಅಧಿವೇಶನದ ಖರ್ಚುಗಳನ್ನು ತುಂಬಿಸುವುದು: ಅಧಿವೇಶನಗಳಿಗೆ ಹಾಜರಾಗುವ ಸಂಬಂಧದಲ್ಲಿ ನಮ್ಮಲ್ಲಿ ಎಲ್ಲರಿಗೆ ಖರ್ಚುಗಳಿರುತ್ತವೆ. ನಾವು ಪರಿಗಣಿಸಬೇಕಾದ ಇನ್ನೊಂದು ಖರ್ಚು ಇದೆ. ಅಧಿವೇಶನಗಳಿಗಾಗಿ ಉಪಯೋಗಿಸಲ್ಪಡುವ ಸೌಕರ್ಯಗಳು ದುಬಾರಿಯಾಗಿರುತ್ತವೆ. ನೋಡಿಕೊಳ್ಳಬೇಕಾದ ಇತರ ಖರ್ಚುಗಳೂ ಇರುತ್ತವೆ. ಅಧಿವೇಶನಗಳಲ್ಲಿ ನಮ್ಮ ಉದಾರಭಾವದ ಸ್ವಇಚ್ಛೆಯ ಕಾಣಿಕೆಗಳು, ಮಹತ್ತರವಾಗಿ ಗಣ್ಯಮಾಡಲ್ಪಡುತ್ತವೆ.—ಅ. ಕೃ. 20:35; 2 ಕೊರಿಂ. 9:7, 11, 13.
18 ಆಸನವ್ಯವಸ್ಥೆ: ಅನೇಕ ವರ್ಷಗಳಿಂದ ಕೊಡಲ್ಪಟ್ಟಿರುವ ನಿರ್ದೇಶನಗಳ ಅನ್ವಯವು ಮುಂದುವರಿಯುವುದು, ಅಂದರೆ, ನಿಮ್ಮ ಅತಿ ಸಮೀಪದ ಕುಟುಂಬ ಸದಸ್ಯರಿಗೆ ಮತ್ತು ನಿಮ್ಮ ಗುಂಪಿನಲ್ಲಿ ಪ್ರಯಾಣಿಸುತ್ತಿರಬಹುದಾದವರಿಗೆ ಮಾತ್ರ ಆಸನಗಳನ್ನು ಕಾದಿರಿಸಬಹುದು. ಹೆಚ್ಚೆಚ್ಚು ಮಂದಿ ಇತ್ತೀಚಿನ ವರ್ಷಗಳಲ್ಲಿ ಈ ನಿರ್ದೇಶನಗಳಿಗೆ ಅನುಗುಣವಾಗಿ ನಡೆಯುವುದನ್ನು ನೋಡುವುದು ಹಿತಕರವಾಗಿದೆ, ಮತ್ತು ಇದು ಅಧಿವೇಶನಗಳಲ್ಲಿ ಪ್ರದರ್ಶಿಸಲ್ಪಡುವ ಪ್ರೀತಿಯ ವಾತಾವರಣವನ್ನು ಹೆಚ್ಚಿಸಿದೆ. ಹೆಚ್ಚಿನ ನಿವೇಶನಗಳಲ್ಲಿ ಕೆಲವು ಆಸನಗಳು ಇತರ ಆಸನಗಳಿಗಿಂತ ಹೆಚ್ಚು ಸುಗಮ್ಯವಾಗಿರುತ್ತವೆ. ದಯವಿಟ್ಟು ಪರಿಗಣನೆಯನ್ನು ತೋರಿಸಿರಿ, ಮತ್ತು ಯಾರ ಆವಶ್ಯಕತೆಗಳು ಹೆಚ್ಚು ಅನುಕೂಲಕರವಾದ ಆಸನಗಳನ್ನು ಅವಶ್ಯಪಡಿಸುತ್ತವೊ ಅವರಿಗಾಗಿ ಅಂತಹ ಆಸನಗಳನ್ನು ಬಿಟ್ಟುಕೊಡಿರಿ.
19 ಕ್ಯಾಮರಾಗಳು, ವಿಡಿಯೊ ಕ್ಯಾಮರಾಗಳು, ಮತ್ತು ಆಡಿಯೊ ಕ್ಯಾಸೆಟ್ ರೆಕಾರ್ಡರ್ಗಳು: ಕ್ಯಾಮರಾಗಳು ಮತ್ತು ರೆಕಾರ್ಡುಮಾಡುವ ಸಲಕರಣೆಯು ಅಧಿವೇಶನಗಳಲ್ಲಿ ಉಪಯೋಗಿಸಲ್ಪಡಬಹುದು. ಆದಾಗಲೂ, ಅವುಗಳ ನಮ್ಮ ಬಳಕೆಯು ಹಾಜರಿರುವ ಇತರರಿಗೆ ಅಪಕರ್ಷಿಸುವಂತಹದ್ದಾಗಿರಬಾರದು. ಕಾರ್ಯಕ್ರಮಾವಧಿಗಳ ಸಮಯದಲ್ಲಿ ನಾವು ಛಾಯಾಚಿತ್ರಗಳನ್ನು ತೆಗೆಯುತ್ತಾ ಸುತ್ತಾಡಬಾರದು, ಯಾಕಂದರೆ ಕಾರ್ಯಕ್ರಮದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಲು ಪ್ರಯತ್ನಿಸುತ್ತಿರುವವರಿಗೆ ಅದು ತೊಂದರೆಯನ್ನುಂಟುಮಾಡುವುದು. ಯಾವುದೇ ರೀತಿಯ ರೆಕಾರ್ಡಿಂಗ್ ಉಪಕರಣಗಳನ್ನು ಇಲೆಕ್ಟ್ರಿಕಲ್ ಅಥವಾ ಧ್ವನಿ ಸೌಕರ್ಯಗಳಿಗೆ ಜೋಡಿಸಬಾರದು, ಅಥವಾ ಸಲಕರಣೆಯು ಪಡಸಾಲೆಗಳು, ನಡೆಯುವ ದಾರಿಗಳು ಅಥವಾ ಇತರರ ವೀಕ್ಷಣವನ್ನು ಅಡ್ಡಗಟ್ಟಬಾರದು.
20 ಪ್ರಥಮ ಚಿಕಿತ್ಸೆ: ಪ್ರಥಮ ಚಿಕಿತ್ಸೆ ಇಲಾಖೆಯು, ಕೇವಲ ತುರ್ತುಪರಿಸ್ಥಿತಿಗಳಿಗಾಗಿರುತ್ತದೆ. ಅದು ದೀರ್ಘಕಾಲದಿಂದ ಅಸ್ವಸ್ಥರಾಗಿರುವವರ ಕಾಳಜಿ ವಹಿಸಲು ಶಕ್ತವಾಗಿರುವುದಿಲ್ಲ. ಆದುದರಿಂದ ನೀವು ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯ ಅಗತ್ಯಗಳನ್ನು ಮುಂಚಿತವಾಗಿಯೇ ಪರಿಗಣಿಸಬೇಕು. ದಯವಿಟ್ಟು ನಿಮ್ಮ ಸ್ವಂತ ಆ್ಯಸ್ಪಿರಿನ್, ಪಚನಕಾರಿ ಸಹಾಯಕಗಳು, ಬ್ಯಾಂಡೇಜುಗಳು, ಸೇಫ್ಟಿ ಪಿನ್ಗಳು, ಮತ್ತು ತದ್ರೀತಿಯ ಐಟಮ್ಗಳನ್ನು ತನ್ನಿರಿ, ಯಾಕಂದರೆ ಅಂತಹ ವಸ್ತುಗಳು ಅಧಿವೇಶನದಲ್ಲಿ ಲಭ್ಯವಿರುವುದಿಲ್ಲ. ತೀಕ್ಷ್ಣವಾದ ಹೊಡೆತಗಳು, ಇನ್ಸುಲಿನ್ ಶಾಕ್, ಹೃದಯದ ತೊಂದರೆಗಳೇ ಮುಂತಾದವುಗಳು ಇವೆಯೆಂದು ತಿಳಿದಿರುವ ಯಾರಾದರೂ, ತಮ್ಮ ಅಗತ್ಯಗಳನ್ನು ಸಾಧ್ಯವಿರುವಷ್ಟರ ಮಟ್ಟಿಗೆ ನಿರೀಕ್ಷಿಸಬೇಕು. ಅವರು ಅವಶ್ಯವಾದ ಔಷಧವನ್ನು ಹೊಂದಿರಬೇಕು, ಮತ್ತು ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಕುಟುಂಬ ಅಥವಾ ಸಭೆಯ ಸದಸ್ಯನೊಬ್ಬನು ಬೇಕಾದ ಯಾವುದೇ ನೆರವನ್ನು ಒದಗಿಸಲಿಕ್ಕಾಗಿ, ಎಲ್ಲಾ ಸಮಯಗಳಲ್ಲಿ ಅವರೊಂದಿಗೆ ಉಪಸ್ಥಿತರಿರಬೇಕು. ಅಸ್ಥಿಗತ ಆರೋಗ್ಯ ಸಮಸ್ಯೆಗಳಿದ್ದ ವ್ಯಕ್ತಿಗಳು ಒಂಟಿಗರಾಗಿ ಬಿಡಲ್ಪಟ್ಟು ಅಸ್ವಸ್ಥರಾದಾಗ, ಅಧಿವೇಶನಗಳಲ್ಲಿ ಸಮಸ್ಯೆಗಳು ಎದ್ದಿವೆ. ವಿಶೇಷ ಆರೋಗ್ಯ ಅಗತ್ಯಗಳಿರುವ ಕೆಲವರಿಗೆ, ತಮಗೆ ನೆರವು ನೀಡಸಾಧ್ಯವಿರುವ ಕುಟುಂಬ ಸದಸ್ಯರು ಇಲ್ಲದಿದ್ದಲ್ಲಿ, ಅವರ ಸಭಾ ಹಿರಿಯರಿಗೆ ಪರಿಸ್ಥಿತಿಯ ಕುರಿತಾಗಿ ತಿಳಿಸುವ ಅಗತ್ಯವಿದೆ ಮತ್ತು ಅವರು ಸಹಾಯ ಮಾಡಲು ಬೇಕಾದಂತಹ ಏರ್ಪಾಡುಗಳನ್ನು ಮಾಡುವರು.
21 ಅಧಿವೇಶನದಲ್ಲಿ ಆಹಾರ: ಅಧಿವೇಶನಗಳಲ್ಲಿ ಕೇವಲ ಲಘು ಉಪಾಹಾರಗಳಿದ್ದು, ಯಾವುದೇ ಆಹಾರ ಸೇವೆಯು ಇಲ್ಲದಿರುವುದು, ಇನ್ನೂ ಹೆಚ್ಚಿನವರು ಎಲ್ಲಾ ಕಾರ್ಯಕ್ರಮಾವಧಿಗಳ ಸಮಯದಲ್ಲಿ ಆತ್ಮಿಕ ಆಹಾರದ ಮೇಲೆ ಗಮನವನ್ನು ಕೇಂದ್ರೀಕರಿಸಲು ಹೆಚ್ಚು ಸ್ವತಂತ್ರರಾಗಿರುವುದರಲ್ಲಿ ಪರಿಣಮಿಸಿದೆ. ಈ ಏರ್ಪಾಡು ಆರಂಭಿಸಲ್ಪಟ್ಟಂದಿನಿಂದ, ಈ ಸರಳೀಕರಣಕ್ಕೆ ಗಣ್ಯತೆಯ ಹಲವಾರು ಅಭಿವ್ಯಕ್ತಿಗಳನ್ನು ಪಡೆಯಲಾಗಿದೆ. ಯಾರಿಗೆ ಇದರ ಅಗತ್ಯವೆನಿಸುತ್ತದೊ ಅವರು, ಮಧ್ಯಾಹ್ನದ ವಿರಾಮದ ಅವಧಿಗಾಗಿ, ಜುಲೈ 1995ರ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿ ಸೂಚಿಸಲ್ಪಟ್ಟಿರುವ ತಮ್ಮ ಸ್ವಂತ ವ್ಯಾವಹಾರಿಕ, ಪೌಷ್ಟಿಕ ಆಹಾರದ ಐಟಮ್ಗಳನ್ನು ತರಲು ಯೋಜಿಸಬೇಕು. ಯಾವುದೇ ಗಾಜಿನ ಕಂಟೇನರ್ಗಳು ಮತ್ತು ಮದ್ಯಪಾನೀಯಗಳು ಅಧಿವೇಶನದ ಸೌಕರ್ಯದೊಳಗೆ ತರಲ್ಪಡಬಾರದು. ಟಿಫಿನ್ಗಳು ಮತ್ತು ನೀರಿನ ಪಾತ್ರೆಗಳು ನಿಮ್ಮ ಆಸನದ ಕೆಳಗೆ ಸೇರುವಷ್ಟು ಚಿಕ್ಕವುಗಳಾಗಿರಬೇಕು. ಸಭಿಕರಲ್ಲಿ ಕೆಲವರು, ಕಾರ್ಯಕ್ರಮದ ಸಮಯದಲ್ಲಿ ತಿಂದು ಕುಡಿಯುತ್ತಿರುವುದನ್ನು ಗಮನಿಸಲಾಗಿದೆ. ಇದನ್ನು ಮಾಡುವುದು ಅಗೌರವಪೂರ್ಣವಾಗಿದೆ. ಅಧಿವೇಶನ ಸೌಕರ್ಯದೊಳಗೆ ಆಹಾರವನ್ನು ಮಾರುವವರು ಇರುವಾಗ, ಅಥವಾ ಹೊರಗೆ ಮಾರುವವರು ಇರುವಾಗ, ಕೆಲವು ಸಹೋದರರು ಕಾರ್ಯಕ್ರಮದ ಸಮಯದಲ್ಲಿ ಅವರಿಂದ ಖರೀದಿಸುತ್ತಿರುವುದನ್ನು ಗಮನಿಸಲಾಗಿದೆ. ಅಂತಹ ಒಂದು ಅಭ್ಯಾಸವು ಅನುಚಿತವಾಗಿದೆ. ನಾವು ನಮ್ಮ ಆತ್ಮಿಕ ಔತಣವನ್ನು ಮತ್ತು ನಮ್ಮ ಅಲ್ಪಾವಧಿಯ ಮಧ್ಯಾಹ್ನದ ವಿರಾಮದ ಸಮಯಗಳಲ್ಲಿನ ಸಾಹಚರ್ಯದ, ಪ್ರಶಾಂತ, ಶಾಂತಿಪೂರ್ಣ ವಾತಾವರಣವನ್ನು ನಿಜವಾಗಿಯೂ ಗಣ್ಯಮಾಡುತ್ತೇವೆ. ಈ ಏರ್ಪಾಡಿನ ಉದ್ದೇಶಕ್ಕೆ ಅನುಗುಣವಾಗಿ, ಆ ಸಮಯವನ್ನು ನಿಮ್ಮ ಸಹೋದರ ಸಹೋದರಿಯರ ಸಾಹಚರ್ಯದಲ್ಲಿ ಆನಂದಿಸಲಿಕ್ಕಾಗಿ ಉಪಯೋಗಿಸಿರಿ.
22 “ದೇವರ ವಾಕ್ಯದಲ್ಲಿ ನಂಬಿಕೆ” ಜಿಲ್ಲಾ ಅಧಿವೇಶನಗಳು ಬೇಗನೆ ಆರಂಭವಾಗಲಿರುವುದರಿಂದ ನಾವೆಷ್ಟು ಸಂತೋಷಿತರಾಗಿದ್ದೇವೆ! ಇಡೀ ಕಾರ್ಯಕ್ರಮಕ್ಕೆ ಹಾಜರಾಗಲು ನಮ್ಮ ತಯಾರಿಗಳು ಮಾಡಲ್ಪಟ್ಟಿವೆಯೆಂಬುದನ್ನು ನಾವೆಲ್ಲರೂ ಖಚಿತಪಡಿಸಿಕೊಳ್ಳಲು ಬಯಸುತ್ತೇವೆ. ಹೀಗೆ ನಾವು, ಯೆಹೋವನು ತನ್ನ ಸಂಸ್ಥೆಯ ಮೂಲಕ ನಮಗಾಗಿ ತಯಾರಿಸಿರುವ ಉತ್ತಮ ಆತ್ಮಿಕ ಭೋಜನದಲ್ಲಿ ಪೂರ್ಣವಾಗಿ ಆನಂದಿಸಸಾಧ್ಯವಿದೆ. ಆ ವಿಧದಲ್ಲಿ ನಾವು ಮುಂದಿನ ದಿವಸಗಳಲ್ಲಿ “ಸಕಲಸತ್ಕಾರ್ಯಕ್ಕೆ ಸನ್ನದ್ಧ”ರಾಗುವೆವು.—2 ತಿಮೊ. 3:17.
[ಪುಟ 6ರಲ್ಲಿರುವಚೌಕ]
ಜಿಲ್ಲಾ ಅಧಿವೇಶನದ ಮರುಜ್ಞಾಪನಗಳು
ದೀಕ್ಷಾಸ್ನಾನ: ಶನಿವಾರ ಬೆಳಗ್ಗೆ ಕಾರ್ಯಕ್ರಮವು ಆರಂಭವಾಗುವ ಮುಂಚೆ, ದೀಕ್ಷಾಸ್ನಾನದ ಅಭ್ಯರ್ಥಿಗಳು ನಿರ್ದಿಷ್ಟವಾಗಿ ನಮೂದಿಸಲ್ಪಟ್ಟ ವಿಭಾಗದಲ್ಲಿ ಕುಳಿತುಕೊಂಡಿರತಕ್ಕದ್ದು. ದೀಕ್ಷಾಸ್ನಾನ ಪಡೆದುಕೊಳ್ಳಲು ಯೋಜಿಸುವ ಪ್ರತಿಯೊಬ್ಬರು ಸಭ್ಯವಾದ ಒಂದು ಸ್ನಾನದ ಉಡುಪು ಮತ್ತು ಒಂದು ಟವಲು ತರತಕ್ಕದ್ದು. ದೀಕ್ಷಾಸ್ನಾನದ ಅಭ್ಯರ್ಥಿಗಳೊಂದಿಗೆ ನಮ್ಮ ಶುಶ್ರೂಷೆ ಪುಸ್ತಕದಿಂದ ಪ್ರಶ್ನೆಗಳನ್ನು ಪುನರ್ವಿಮರ್ಶಿಸುವ ಸಭಾ ಹಿರಿಯರು, ಪ್ರತಿಯೊಬ್ಬನು ಈ ಅಂಶಗಳನ್ನು ತಿಳಿಯುತ್ತಾನೆಂಬುದನ್ನು ಖಚಿತಪಡಿಸಿಕೊಳ್ಳಬೇಕು. ಭಾಷಣಕರ್ತನಿಂದ ದೀಕ್ಷಾಸ್ನಾನದ ಭಾಷಣ ಮತ್ತು ಪ್ರಾರ್ಥನೆಯ ಬಳಿಕ, ಕಾರ್ಯಕ್ರಮಾವಧಿಯ ಅಧ್ಯಕ್ಷನು ಹಾಡಿಗಾಗಿ ಕರೆ ನೀಡುವನು. ಕೊನೆಯ ಚರಣದ ತರುವಾಯ, ಅಟೆಂಡೆಂಟ್ಗಳು ಅಭ್ಯರ್ಥಿಗಳನ್ನು ದೀಕ್ಷಾಸ್ನಾನ ಪಡೆಯುವ ಸ್ಥಳಕ್ಕೆ ನಡೆಸುವರು. ಒಬ್ಬನ ಸಮರ್ಪಣೆಯ ಚಿಹ್ನೆಯಾಗಿರುವ ದೀಕ್ಷಾಸ್ನಾನವು, ಯೆಹೋವನ ಮತ್ತು ಆ ವ್ಯಕ್ತಿಯ ನಡುವಿನ ಒಂದು ಆಪ್ತವಾದ ಮತ್ತು ವೈಯಕ್ತಿಕವಾದ ವಿಷಯವಾಗಿದೆ. ಹೀಗಿರುವುದರಿಂದ ಅಭ್ಯರ್ಥಿಗಳು ದೀಕ್ಷಾಸ್ನಾನ ಪಡೆಯುವಾಗ, ಒಬ್ಬರನ್ನೊಬ್ಬರು ಅಪ್ಪಿಕೊಳ್ಳುವುದು ಅಥವಾ ಕೈಗಳನ್ನು ಹಿಡಿದುಕೊಳ್ಳುವುದು ಅನುಚಿತವಾಗಿದೆ.
ಬ್ಯಾಡ್ಜ್ ಕಾರ್ಡ್ಗಳು: ಅಧಿವೇಶನ ನಗರದಲ್ಲಿ ಮತ್ತು ಅಧಿವೇಶನದ ಸ್ಥಳಕ್ಕೆ ಹೋಗುವಾಗ ಮತ್ತು ಹಿಂದಿರುಗಿ ಪ್ರಯಾಣಿಸುವಾಗ, 1997ರ ಬ್ಯಾಡ್ಜ್ ಕಾರ್ಡನ್ನು ದಯವಿಟ್ಟು ಎಲ್ಲ ಸಮಯದಲ್ಲಿ ಧರಿಸಿರಿ. ಇದು ಅನೇಕವೇಳೆ ನಮಗೆ, ಪ್ರಯಾಣಮಾಡುತ್ತಿರುವಾಗ ಒಂದು ಉತ್ತಮ ಸಾಕ್ಷಿಯನ್ನು ನೀಡಲು ಅವಕಾಶಗಳನ್ನು ಸೃಷ್ಟಿಸುತ್ತದೆ. ಬ್ಯಾಡ್ಜ್ ಕಾರ್ಡುಗಳು ಮತ್ತು ಹೋಲ್ಡರುಗಳು ಅಧಿವೇಶನದಲ್ಲಿ ಲಭ್ಯವಿರುವುದಿಲ್ಲವಾದ ಕಾರಣ, ಅವುಗಳನ್ನು ನಿಮ್ಮ ಸಭೆಯ ಮುಖಾಂತರ ಪಡೆಯತಕ್ಕದ್ದು. ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿ ಕಾರ್ಡುಗಳನ್ನು ಕೇಳಲಿಕ್ಕಾಗಿ, ಅಧಿವೇಶನಕ್ಕೆ ಇನ್ನೇನು ಕೆಲವೇ ದಿನಗಳಿರುವ ತನಕ ಕಾಯಬೇಡಿರಿ. ನಿಮ್ಮ ಪ್ರಸ್ತುತ ಮೆಡಿಕಲ್ ಡಿರೆಕ್ಟಿವ್/ರಿಲೀಸ್ ಕಾರ್ಡನ್ನು ಕೊಂಡೊಯ್ಯಲು ನೆನಪಿಡಿರಿ.
ರೂಮಿಂಗ್: ಈ ಸಂಬಂಧದಲ್ಲಿ ಒಂದು ಸಮಸ್ಯೆಯನ್ನು ನೀವು ಅನುಭವಿಸುವುದಾದರೆ, ಆ ವಿಷಯವನ್ನು ಅಧಿವೇಶನದ ರೂಮಿಂಗ್ ಇಲಾಖೆಯವರು ಕೂಡಲೇ ಪರಿಹರಿಸುವುದರಲ್ಲಿ ನಿಮಗೆ ಸಹಾಯ ಮಾಡಲುಸಾಧ್ಯವಾಗುವಂತೆ, ನೀವು ಇನ್ನೂ ಅಧಿವೇಶನದಲ್ಲಿ ಇರುವಾಗಲೇ, ಅವರ ಗಮನಕ್ಕೆ ತರಲು ದಯವಿಟ್ಟು ಹಿಂಜರಿಯದಿರಿ. ರೂಮ್ ವಿನಂತಿ ಫಾರ್ಮ್ಗಳು ತಡವಿಲ್ಲದೆ ಸೂಕ್ತವಾದ ಅಧಿವೇಶನ ವಿಳಾಸಕ್ಕೆ ಸರಿಯಾಗಿ ಕಳುಹಿಸಲ್ಪಟ್ಟಿವೆಯೆಂಬ ವಿಷಯದಲ್ಲಿ ಸಭಾ ಸೆಕ್ರಿಟರಿಗಳು ಖಚಿತರಾಗಿರಬೇಕು. ವಸತಿ ಸೌಕರ್ಯವನ್ನು ನೀವು ರದ್ದುಮಾಡಬೇಕಾಗಿದ್ದಲ್ಲಿ, ಕೋಣೆಯನ್ನು ಪುನಃ ನೇಮಿಸಸಾಧ್ಯವಾಗುವಂತೆ ಕೂಡಲೇ ಅಧಿವೇಶನದ ರೂಮಿಂಗ್ ಇಲಾಖೆಗೆ ನೀವು ತಿಳಿಯಪಡಿಸಬೇಕು.
ಸ್ವಯಂ ಸೇವೆ: ಅಧಿವೇಶನದ ಇಲಾಖೆಗಳಲ್ಲೊಂದರಲ್ಲಿ ನೆರವು ನೀಡಲಿಕ್ಕಾಗಿ ಸ್ವಲ್ಪ ಸಮಯವನ್ನು ನೀವು ಬದಿಗಿರಿಸಬಲ್ಲಿರೊ? ಕೇವಲ ಕೆಲವೊಂದು ತಾಸುಗಳ ಮಟ್ಟಿಗಾದರೂ, ನಮ್ಮ ಸಹೋದರರ ಸೇವೆ ಮಾಡುವುದು ತುಂಬ ಸಹಾಯಕಾರಿಯಾಗಿರಸಾಧ್ಯವಿದೆ ಮತ್ತು ವೈಯಕ್ತಿಕ ಸಂತೃಪ್ತಿಯನ್ನು ತರುತ್ತದೆ. ನೀವು ಸಹಾಯ ಮಾಡಬಲ್ಲಿರಾದರೆ, ಅಧಿವೇಶನದ ಸ್ವಯಂ ಸೇವಕರ ಇಲಾಖೆಗೆ ದಯವಿಟ್ಟು ವರದಿಮಾಡಿರಿ. 16 ವರ್ಷ ಪ್ರಾಯಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಹ, ಹೆತ್ತವರೊಬ್ಬರ ಅಥವಾ ಇತರ ಜವಾಬ್ದಾರ ವಯಸ್ಕನ ಮಾರ್ಗದರ್ಶನದ ಕೆಳಗೆ ಕೆಲಸಮಾಡುವ ಮೂಲಕ ಉತ್ತಮ ನೆರವನ್ನು ನೀಡಬಲ್ಲರು.
ಎಚ್ಚರಿಕೆಯ ಮಾತುಗಳು: ಅನಗತ್ಯವಾದ ತೊಂದರೆಯಿಂದ ದೂರವಿರಲು, ಸಂಭಾವ್ಯ ಸಮಸ್ಯೆಗಳ ಕುರಿತಾಗಿ ಎಚ್ಚರವಾಗಿರಿ. ಅನೇಕವೇಳೆ ಕಳ್ಳರು ಮತ್ತು ಇತರ ನೀತಿನಿಷ್ಠೆಗಳಿಲ್ಲದ ವ್ಯಕ್ತಿಗಳು, ತಮ್ಮ ಮನೆ ಪರಿಸರದಿಂದ ದೂರವಿರುವ ಜನರನ್ನು ಸುಲಿಗೆ ಮಾಡುತ್ತಾರೆ. ಕಳ್ಳರು ಮತ್ತು ಜೇಬುಗಳ್ಳರು ದೊಡ್ಡ ಒಟ್ಟುಗೂಡುವಿಕೆಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ. ನಿಮ್ಮ ಆಸನಗಳ ಮೇಲೆ ಯಾವುದೇ ಬೆಲೆಬಾಳುವ ವಸ್ತುಗಳನ್ನು ಬಿಡುವುದು ವಿವೇಕವುಳ್ಳದ್ದಾಗಿರುವುದಿಲ್ಲ. ನಿಮ್ಮ ಸುತ್ತಲಿರುವ ಪ್ರತಿಯೊಬ್ಬನೂ ಒಬ್ಬ ಕ್ರೈಸ್ತನಾಗಿದ್ದಾನೆಂದು ನೀವು ಖಚಿತರಾಗಿರಸಾಧ್ಯವಿಲ್ಲ. ಯಾವುದೇ ದುಷ್ಪ್ರೇರಣೆಗೆ ಯಾಕೆ ಅವಕಾಶ ಕೊಡಬೇಕು? ಮಕ್ಕಳನ್ನು ಆಕರ್ಷಿಸಲಿಕ್ಕಾಗಿ ಹೊರಗಿನ ಕೆಲವು ವ್ಯಕ್ತಿಗಳಿಂದ ಮಾಡಲ್ಪಟ್ಟ ಪ್ರಯತ್ನಗಳ ಕುರಿತು ವರದಿಗಳು ಬಂದಿವೆ. ಎಲ್ಲ ಸಮಯಗಳಲ್ಲಿ ನಿಮ್ಮ ಮಕ್ಕಳ ಮೇಲೆ ದೃಷ್ಟಿಯಿಡಿರಿ.
ಕೆಲವು ಹೋಟೆಲುಗಳಲ್ಲಿ ಲಭ್ಯವಿರುವ ಟೆಲಿವಿಷನ್ ಮತ್ತು ವಿಡಿಯೊ ಸೌಕರ್ಯಗಳು, ತುಚ್ಛವಾದ, ಲಂಪಟವರ್ಣನೆಯ ಕಾರ್ಯಕ್ರಮಗಳನ್ನು ಪ್ರದರ್ಶಿಸುತ್ತವೆ. ಈ ಪಾಶದ ಕುರಿತಾಗಿ ಎಚ್ಚರಿಕೆಯಿಂದಿರಿ, ಮತ್ತು ಕೋಣೆಯಲ್ಲಿ ಮೇಲ್ವಿಚಾರಣೆಯಿಲ್ಲದೆ ಟಿವಿಯನ್ನು ಉಪಯೋಗಿಸುವಂತೆ ಮಕ್ಕಳನ್ನು ಅನುಮತಿಸಬೇಡಿ.
ಅಧಿವೇಶನದ ಯಾವುದೇ ವಿಷಯಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳಲಿಕ್ಕಾಗಿ, ಅಧಿವೇಶನದ ಸಭಾಂಗಣದ ನಿರ್ವಾಹಕ ಮಂಡಲಿಗೆ ದಯವಿಟ್ಟು ಫೋನ್ ಮಾಡಬೇಡಿ ಅಥವಾ ಬರೆಯಬೇಡಿ. ಮಾಹಿತಿಯು ಹಿರಿಯರಿಂದ ದೊರಕದಿರುವುದಾದರೆ, ದಯವಿಟ್ಟು ಜುಲೈ 1997ರ ನಮ್ಮ ರಾಜ್ಯದ ಸೇವೆಯಲ್ಲಿ ಕಂಡುಬರುವ, ನಿರ್ದಿಷ್ಟ ಅಧಿವೇಶನವೊಂದರ ವಿಳಾಸಕ್ಕೆ ನೀವು ಬರೆಯಬಹುದು.